೧. ತುಳು ಪಂಚವಟಿ

ತುಳುನಾಡು ಯಕ್ಷಗಾನ ಕಲೆಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಕಲೆ ತನ್ನದೇ ಕಲೆಯೆಂಬಷ್ಟು ಪ್ರೀತಿಯಿಂದ, ಅಭಿಮಾನದಿಂದ, ಸಂತೋಷದಿಂದ ಅದನ್ನು ಉಳಿಸಿ ಬೆಳೆಸಿದೆ. ಯಕ್ಷಗಾನಕ್ಕೂ, ತುಳುನಾಡಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಜನರೆಲ್ಲರ ಸಾಂಸ್ಕೃತಿಕ ಸಂಪನ್ನತೆಗೆ, ಸಾಹಿತ್ಯಾಸಕ್ತಿಗೆ, ವೈಚಾರಿಕ ನೆಲೆಗೆ ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಗೂ ಈ ಕಲೆ ಮಹತ್ವದ ದೇಣಿಗೆಯನ್ನು ನೀಡಿದೆ. ಹಲವು ಜನ ತುಳುವರು ಈ ಕಲೆಯ ಎಲ್ಲಾ ಆಯಾಮಗಳಲ್ಲೂ ಸಿದ್ಧಿ, ಶುದ್ಧಿಯನ್ನು ಪಡೆದು ತಮ್ಮ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿದ್ದಾರೆ. ಹಿಮ್ಮೇಳ, ಮುಮ್ಮೇಳಗಳಲ್ಲಿ ಅವರ ಪ್ರತಿಭೆ ಹೊರಹೊಮ್ಮಿದೆ. ಯಕ್ಷಕಲಾರಂಗದಲ್ಲಿ ಈಗಲೂ ತುಳುನಾಡಿನ, ತುಳು ಮಾತೃಭಾಷೆಯ ಅನೇಕ ಕಲಾವಿದರು, ಯಕ್ಷಗಾನ ಪ್ರಸಂಗಕರ್ತರು ಕವಿಗಳು ನಮ್ಮೊಂದಿಗಿದ್ದಾರೆ. ಹೀಗಿದ್ದೂ ಬದುಕಿನ ಉತ್ಕರ್ಷಕ್ಕೆ ವರದಾನವಾದ ಈ ಕಲೆಯನ್ನು ಆಸ್ವಾದಿಸುವಲ್ಲಿ ತುಳುವರಿಗೆ ‘ಕನ್ನಡ’ ಭಾಷೆಯ ತೊಡಕು ಎಂದೂ ಕಾಣಿಸಿಕೊಂಡದ್ದಿಲ್ಲ. ನಿರಕ್ಷರಗಿಗಳಿಂದ ಹಿಡಿದು ಪಂಡಿತರವರೆಗೆ, ಆಬಾಲ ವೃದ್ಧರಾಗಿ, ಬಡವ ಶ್ರೀಮಂತರೆನ್ನದೆ, ತುಳುವರೆಲ್ಲರೂ ಪೂರ್ಣರೂಪದಲ್ಲಿ ‘ಕಲೆಯ’ ರಸಾಸ್ವಾದನೆಯನ್ನು ಇದ್ದ ಸ್ವರೂಪದಲ್ಲೆ ಮಾಡಲು ಶಕ್ತರಾದುದರಿಂದಲೆ ಅವರಿಗೆ ‘ಆಡುಭಾಷೆ’ಯಲ್ಲಿ ಯಕ್ಷಗಾನ ಪ್ರದರ್ಶನ ಬೇಕೆಂಬ ತೀವ್ರತರವಾದ ಹಂಬಲ ಹುಟ್ಟಿಕೊಂಡದ್ದಿಲ್ಲವೆನ್ನಬೇಕು. ಆದ್ದರಿಂದಾಗಿಯೆ, ಸುಮಾರು ಹದಿನೈದನೆಯ ಶತಮಾನಕ್ಕಿಂತ ಹಿಂದಿನ ಚಾರಿತ್ರಿಕ ಹಿನ್ನೆಲೆಯಿರುವ ಯಕ್ಷಗಾನ ಪ್ರಸಂಗ ಸಾಹಿತ್ಯ, ತುಳು ಭಾಷೆಯಲ್ಲಿ ಮೂಡಿ ಬರಲು ಬಹಳಷ್ಟು ಸಮಯ ಹಿಡಿಯಿತು. ಮಡಿವಂತ ತುಳುವರಿಗೆ ತಮ್ಮ ಭಾಷೆ ಯಕ್ಷಗಾನದ ಪ್ರದರ್ಶನಕ್ಕೆ ಹೇಳಿಸಿದ ಭಾಷೆಯಲ್ಲವೆಂಬ ಕೀಳರಿಮೆಯೂ ಇತ್ತು. ರಾಜಾಶ್ರಯದಿಂದ ವಂಚಿತವಾದ ಜನರ ಈ ಭಾಷೆ ಸಾಮಾನ್ಯ ಜನರ ನಿರಭಿಮಾನಕ್ಕೂ ತುತ್ತಾಗಿ ತತ್ತರಿಸಿತು.

ಈವರೆಗೆ ಲಭ್ಯವಾದ ತುಳು ಪ್ರಾಚೀನ ಪ್ರಸಂಗ ಪಠ್ಯಗಳಲ್ಲಿ ತುಳುವಿನ ಮೊದಲನೆಯ ಪ್ರಕಟಿತ ಪ್ರಸಂಗವೆಂಬ ಹೆಗ್ಗಳಿಕೆಗೆ ಪಾತ್ರವಾದುದು ಸಂಕಯ್ಯ ಭಾಗವತ ವಿರಚಿತ ‘ಪಂಚವಟಿ ರಾಮಾಯಣೊ ವಾಲಿ, ಸುಗ್ರೀವರ ಕಾಳಗೊ’ ಎಂಬ ಪ್ರಸಂಗ ಕೃತಿ. ಈ ಕೃತಿ ಕ್ರಿ.ಶ. ೧೮೮೭ರಲ್ಲಿ ಪ್ರಕಟಗೊಂಡಿತು. ಪ್ರಸಂಗ ಸಾಹಿತ್ಯದ ಆಚಾರ್ಯ ಪುರುಷನೆಂಬ ಖ್ಯಾತಿಗೆ ಪಾತ್ರನಾದ ಕುಂಬಳೆ ಸುಬ್ಬನು ಬರೆದ ಶ್ರೀ ಮದ್ರಾಮಾಯಾಣದ ಕಥೆ ‘ಪಂಚವಟಿ- ವಾಲಿಸಂಹಾರ’ ಪ್ರಸಂಗ ಕೃತಿಯನ್ನು ಅದೇ ರೂಪದಲ್ಲಿ ತುಳುವಿಗಿಳಿಸಿದ ಕೀರ್ತಿ, ತನ್ನ ಕಾಲದ ಪ್ರಸಿದ್ಧ ಭಾಗವತನೆಂದು ಹೆಸರು ಪಡೆದ ಸಂಕಯ್ಯ ಭಾಗವತರಿಗೆ ಸಲ್ಲುತ್ತದೆ. ಮೂಲದ ಛಂದಸ್ಸು, ತಾಳ ಲಯಗಳ ದಾಟಿಯಲ್ಲೆ ಅನುವಾದ ಕೃತಿ ಸಾಗಿದೆ. ಆದರೆ ಪ್ರತಿಭಾವಂತನಾದ ಕವಿ ಕೆಲವು ಕಡೆ ಸ್ವಂತ ಪದ್ಯ ರಚನೆಯಿಂದ ಕಾವ್ಯಕ್ಕೆ ವಿಶೇಷತೆಯನ್ನು ಕೊಟ್ಟಿದ್ದಾರೆ. ಕೆಲವು ಸಂದರ್ಭಗಳಲ್ಲಿ ಮೂಲದ ಪದ್ಯಗಳನ್ನು ಕಡಿತಗೊಳಿಸಿದ್ದೂ ಕಂಡುಬರುತ್ತದೆ. ತುಳು ಭಾಷಾ ನುಡಿಗಟ್ಟುಗಳು ಅಲ್ಲಲ್ಲಿ ಮಿಂಚುತ್ತಿದ್ದು ಭಾಷೆಗೆ ಹೊಸ ಮೆರಗನ್ನು ಕೊಟ್ಟಿದೆ. ಒಟ್ಟಿನಲ್ಲಿ ತುಳುವರು ಈ ಕೃತಿಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

ಕೃತಿಕಾರ ಸಂಕಯ್ಯ ಭಾಗವತರು ಕಲಾವಿದರ ವಂಶಕ್ಕೆ ಸೇರಿದವರು. ಬಡತನದಿಂದಾಗಿ ಹೆಚ್ಚು ವಿದ್ಯಾಭ್ಯಾಸ ಪಡೆದವರಾಗಿರಲಿಲ್ಲ. ಅವರ ಅಣ್ಣ ಈಶ್ವರ ಭಟ್ಟರು ಆ ಕಾಲದ ಹೆಸರಾಂತ ಹಾಸ್ಯಗಾರರಾಗಿದದರಂತೆ. ಸಂಕಯ್ಯ ಭಾಗವತರ ಪೂರ್ಣ ಹೆಸರು ‘ಶಂಕರ ನಾರಾಯಣ’. ಆ ಕಾಲದ ಉತ್ಕೃಷ್ಟ ಮಟ್ಟದ ಭಾಗವತರಾಗಿದ್ದು ಅವರು ಹಾಡುತ್ತಿದ್ದ ವೀರ, ರೌದ್ರ ರಸದ ಏರು ಪದಗಳು ಆರು ಮೈಲು ದೂರಕ್ಕೂ ಕೇಳಿಸುತ್ತಿದ್ದುವಂತೆ. ಅವರ ವಿದ್ವತ್ತಿಗೂ, ಕಲಾವಂತಿಕೆಗೂ ಮನಸೋತ ಆಗಿನ ತುಳುವ ಅರಸನಾದ ವಿಟ್ಲದ ಬಲ್ಲಾರಸರನು ಸಂಕಯ್ಯ ಭಾಗವತರನ್ನು ತನ್ನ ಆಸ್ಥಾನ ಕವಿಯಂತೆ ಸನ್ಮಾನಿಸಿರುವುದಾಗಿ ತಿಳಿದುಬರುತ್ತದೆ. ಬಲ್ಲಾಳರಸನ ಅರಮನೆಯ ಹೆಂಗಸರಿಗಾಗಿ ಸಂಕಯ್ಯ ಭಾಗವತರು ಈ ಕೃತಿಯನ್ನು ತುಳುವಿನಲ್ಲಿ ರಚಿಸಿದರಂತೆ, ಇದಲ್ಲದೆ ಕನ್ನಡದಲ್ಲೂ ಅವರು ‘ಕೃಷ್ಣಾರ್ಜುನ ಕಾಳಗ’ ಮತ್ತು ‘ವರಾಹ ಚರಿತ್ರೆ’ ಎಂಬೆರಡು ಪ್ರಸಂಗ ಕೃತಿಗಳನ್ನು ಬರೆದಿದ್ದರು. ಆದರೆ ಈ ತುಳು ಕೃತಿ ಸಂಕಯ್ಯ ಭಾಗವತರಿಗೆ ವಿಶೇಷ ಕೀರ್ತಿಯನ್ನು ತಂದು ಕೊಟ್ಟಿತು. ತುಳುನಾಡಿನ ಜನಪ್ರಿಯ ಕೃತಿಯಾಯಿತು. ಅವರ ಪ್ರತಿಭಾ ಪ್ರದರ್ಶನಕ್ಕೆ ಒಂದು ಒರೆಗಲ್ಲಾಯಿತು. ರಾಜಾಶ್ರಯದ ಕೊರತೆಯಿಂದ ಬಳಲಿದ ತುಳು ಭಾಷೆಯ ಮೊದಲ ಪ್ರಸಂಗ ಕೃತಿ ರಾಣೀವಾಸದ ವನಿತೆಯರ ಒಲವಿಂದ ಹೊರಬಂದುದೊಂದು ಸಂತಸದ ಸಂಗತಿ. ಈ ಕಥೆ, ಮೂಲದ ಪ್ರಸಂಗ ಕಥೆಯಂತೆ ಕೇವಲ ವಾಲಿ ಸಂಹಾರ ಮತ್ತು ಸುಗ್ರೀವ ಪಟ್ಟಾಭಿಷೇಕದ ವರೆಗೆ ಸೀಮಿತವಾಗದೆ, ಮುಂದೆ ಸಂಕ್ಷಿಪ್ತ ರಾಮಾಯಣದ ಕಥೆಯನ್ನೊಳಗೊಂಡಿದೆ (ರಾಮರಾಜ್ಯದವರೆಗೆ).

ಕವಿ ತನ್ನ ಪರಿಚಯ ಹಾಗೂ ಕಾಲಮಾನದ ಕುರಿತು ದಾಖಲಿಸಿದ ಪದ್ಯಗಳು ಈ ಕೆಳಗಿನಂತಿವೆ.

‘ಏರ್ ತುಳುಟೀ ವಾಲಿ ಸುಗ್ರೀವ ಕತೆ ಮಾಳ್ತ್|
ನಾರ್ ಪಂಡ್‌೦ಟ್‌ಇಟ್ಟಿಲ ಸೀಮೆತುಳಯಿ ಬಾ|
ಯಾರ ಪೆರ್ವಡಿ ಕೃಷ್ಣ ಭಟ್ರೆ ಮಗೆ ಸಂಕಯ್ಯ ಭಾಗೋತೆ ಪನ್ಪಿ ಬಿರಣೆ
ಊರು ಕಾತೊಣ್ಪಿ ದೇವೆರ್ ಪಂಚಲಿಂಗೆ ಪಣ್|
ಪ್ನಾರ್ ಪಣ್ಪಯಿ ಲೆಕ್ಕೊನೇ ಮಾಳ್ತೆ ಈ ಪದೊನು|
ಊರುಟೇರಾಂಟ್ಲ ತಪ್ಪುತ್ತುಂಟ ತಿದ್ದೊಣೊಡು ನೆರಿಯರಾವಂದೆನ್ನನ್|(ತುಳು)

ಅದರ ಕನ್ನಡ ರೂಪ ಈ ಕೆಳಗಿನಂತಿದೆ :

‘ಯಾರು ತುಳುವಿನಲಿ ಈ ವಾಲಿ ಸುಗ್ರೀವ ಕಥೆ
ಗಾರರೆನೆ ವಿಟ್ಟಲದ ಸೀಮೆಯೊಳು ಗ್ರಾಮ ಬಾ
ಯಾರ ಪೆರ್ವಡಿ ಕೃಷ್ಣ ಭಟ್ರ ಮಗ ಸಂಕಯ್ಯ ಭಾಗವತನೆಂಬವನು
ಊರು ಕಾಯುವ ದೇವ ಪಂಚ ಲಿಂಗೇಶ ನುಡಿ
ಗಾರ ಹೇಳಿಸಿದ ತೆರ ಪದ ಕಟ್ಟಿ ಬರೆದಿರುವೆ
ಊರೊಳೋದಿದವರಿದರ ತಪ್ಪುಗಳ ತಿದ್ದುವುದು ನಿಂದಿಸಲು ಬಾರದೆನ್ನ
ಕಾವ್ಯವನ್ನು ಬರೆದು ಮುಗಿಸಿದ ಕಾಲದ ಕುರಿತು-
‘ಕಾಲೊತ್ಕೆನಂಗೊನೋದುನಗ ಕಲಿಯುಗ ವರ್ಸೊ |
ನಾಲ್ ಸಾರತ್ತೊರ್ಬೊನೂತ್ತ ಎಣ್ಪತ್ತೊಂರ್ಬೊ |
ಕಾಲೊತಾ ಸರ್ವಜಿತು ಸಂವಸ್ಸರದ ಬೇಸ್ಯ ಪುಣ್ಯಮೆದ ಪೂವೆದಾನಿ
ವಾಲಿ ಸುಗ್ರೀವ ಕಥೆ ತುಳುಟು ಮಾಳ್ತ್‌ತ್ ಮುಗಿಂ|
ಡಾಲಸ್ಯೊ ಬುಡ್ತಿಂದೆನೋದು ಕೆಣ್ಣಾಕಳೆನ್
ಪಾಲಿಪೆರ್ ಭಗವಂತೆ ಸತ್ಯನೇ ಸರಿಯೆಂದ್ ನಂಬೊನೊಡು
ಸರ್ವಜನೊಲಾ

ಅದರ ಕನ್ನಡ ರೂಪ ಹೀಗಿದೆ :

‘ಕಾಲದೈದಂಗಗಳನೋದೆ ಕಲಿಯುಗ ಜಗದಿ
ಕಾಲಿಟ್ಟು ನಾಲ್ಕೊಂಬತ್ತು ಎಂಬತ್ತೊಂಬತ್ತ ನೀ
ಸಾಲಾಗಿ ಬರೆದರಾ ಸರ್ವಜಿತು ವತ್ಸರದ ವೈಶಾಖ ಹದಿನಾಲ್ಕಕೆ
ವಾಲಿ ಸುಗ್ರೀವ ತುಳುಕಥೆ ಬರೆದೆ ಭಕ್ತಿಯಿಂ
ದಾಲಿಸುವರಾಲಸ್ಯ ತೊರೆದವರ ಭಗವಂತ
ಪಾಲಿಸುವನೆಂಬೊಂದು ಸತ್ಯವನು ನಂಬುವುದು ಸರಿಯೆಂದು ಸರ್ವಜನರು

ಕ್ರಿ. ಶ. ೬-೫-೧೮೮೭ರಂದು ಶುಕ್ರವಾರ ದಿನ ಈ ಪ್ರಸಂಗವನ್ನು ಬರೆದು ಮುಗಿಸಿದರೆಂದು ಮೇಲಿನ ಪದ್ಯದಿಂದ ತಿಳಿದುಬರುತ್ತದೆ. ೧೯೨೯ರಲ್ಲಿ ಈ ಕೃತಿ ಮೂರನೆಯ ಮುದ್ರಣವನ್ನು ಕಂಡಿತು. ೧೯೬೮ರಲ್ಲಿ ಮತ್ತೆ ಟಿ. ಕೇಶವ ಭಟ್ಟರ ಸಂಪಾದಕತ್ವದಲ್ಲಿ ಪ್ರಕಟವಾಯಿತು. ಟಿ. ಕೇಶವ ಭಟ್ಟರು ಈ ಕೆಳಗಿನ ನಾಲ್ಕು ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಕೃತಿಯನ್ನು ಸಂಶೋಧಿಸಿದರು.

೧.ವಿಟ್ಲದ ಅರಮನೆಯಲ್ಲಿದ್ದ ಒಲೆಗರಿಯಲ್ಲಿ ಬರೆದಿದ್ದ ಹಸ್ತಪ್ರತಿ

೨.೧೯೨೯ರಲ್ಲಿ ವಿಟ್ಲದ ಅಣ್ಣಪ್ಪ ನಾಯ್ಕರು ಪ್ರಕಟಪಡಿಸಿದ ಮೂರನೆಯ ಮುದ್ರಣದ ಪ್ರತಿ.

೩.ಅಷ್ಟಿಷ್ಟಡು ಹೆಚ್ಚು ಕಡಿಮೆಯಿಂದ ಕೂಡಿದ್ದು ಅಚ್ಚಿನ ಪ್ರತಿಯನ್ನೇ ಅವಲಂಬಿಸಿದಂತಿದ್ದ ಹಸ್ತಪ್ರತಿ.

೪.ಪಾರ್ತಿಸುಬ್ಬನ ಕನ್ನಡ ಪಂಚವಟಿ – ವಾಲಿ ಸುಗ್ರೀವರ ಕಾಳಗದ ಅಚ್ಚಿನ ಪ್ರತಿ.

ಪ್ರತಿಕಾರರಿಂದ ಮತ್ತು ಮುದ್ರಕರಿಂದ ಈ ವರೆಗೆ ಹಾಯ್ದುಬಂದ ತಪ್ಪುಗಳನ್ನು ಪರಿಶೀಲಿಸಿ, ತಿದ್ದಿ ಛಂದಸ್ಸಿಗೂ, ತಾಳಕ್ಕೂ ಅನುಗುಣವಾಗಿ ಗ್ರಂಥಪಾಠವನ್ನು ಇಲ್ಲಿ ಆರಿಸಿಕೊಳ್ಳಲಾಗಿದೆ. ಈ ಆವೃತ್ತಿಗೆ ಹಿರಿಯ ಕವಿ ಕಯ್ಯಾರ ಕಿಞ್ಞಣ್ಣರೈವರು ‘ಮೊದಲ ಮಾತು’ ಬರೆದಿದ್ದಾರೆ. ಸಂಕಯ್ಯ ಭಾಗವತರ ಕಾವ್ಯ ಸಿದ್ಧಿಯ ಜೊತೆಗೆ, ಅವರು ಕೃಷಿ ಕಾಯಕದಲ್ಲೂ ತೊಡಗಿದ್ದರೆಂಬ ಉಲ್ಲೇಖ ಇಲ್ಲಿದೆ. ‘ಈ ಉತ್ತಮ ಕಲಾ ಕುಸುಮವನ್ನರಳಿಸಿದ ಸಂಕಯ್ಯ ಭಾಗವತರಿಗೆ ತುಳುನಾಡಿನ ಸಮಸ್ತ ಜನರೂ ಋಣಿಗಳು’ ಎಂಬುದಾಗಿ ಅವರು ಬರೆದಿದ್ದಾರೆ. ಸಂಕಯ್ಯ ಭಾಗವತರ ವಂಶಸ್ಥರಾದ ಜತ್ತಿ ಕೃಷ್ಣ ಭಟ್ಟ ಎಂಬವರು ಈ ಕೃತಿಯನ್ನು ಪ್ರಕಟಪಡಿಸಿದ್ದಾರೆ. ಕನ್ನಡ ಪಂಚವಟಿಯಲ್ಲಿ ೨೫೫ ಪದ್ಯಗಳಿದ್ದರೆ ತುಳು ಪಂಚವಟಿಯಲ್ಲಿ ೩೬೧ ಪದ್ಯಗಳಿವೆ. ಇಲ್ಲಿಯ ತುಳುಭಾಷೆ ವಿಟ್ಲ ಸೀಮೆಯ ಬ್ರಾಹ್ಮಣೇತರರದೆಂದು ಟಿ. ಕೇಶವ ಭಟ್ಟರು ಅಭಿಪ್ರಾಯಪಡುತ್ತಾರೆ. (ಬಹುತೇಕ ಇಲ್ಲಿ ಬ್ರಾಹ್ಮಣ ತುಳು ಭಾಷಾ ಪ್ರಯೋಗವನ್ನೆ ಕಾಣಬಹುದಾಗಿದೆ).

ತನಗಾದ ಅವಮಾನದಿಂದ ವ್ಯಗ್ರಳೂ, ಉಗ್ರಳೂ ಆದ ಶೂರ್ಪನಖಿ ತನ್ನ ಅಳಲಿನ ಅತಿರೇಕತೆಯಿಂದ ಅಣ್ಣನನ್ನು ರೊಚ್ಚಿಗೆಬ್ಬಿಸಲು ಲಂಕಾಪುರ ಪ್ರವೇಶ ಮಾಡುವ ಸಂದರ್ಭ ತಲೆಗೆ ಹೊಡೆದುಕೊಂಡು, ಕೆದರಿದ ಕೂದಲುಳ್ಳವಳಾಗಿ ರಾವಣನ ಸನಿಹ ಬರುತ್ತಾಳೆ. ಅದನ್ನು ತುಳುಭಾಷೆಯಲ್ಲಿ ‘ಬೂರೊಂದು ತರೆತರೆ ನೋತೊಂದು|ನೆಲೊ|ಮೂರಿಪೋಪಿ ಲೆಕ್ಕೋ ಬುಳ್ತೊಂದು’ ಎಂದು ಕವಿ ವರ್ಣಿಸುತ್ತಾರೆ(‘ಬೀಳುತ್ತ ತಲೆ ತಲೆ ಹೊಡೆಯುತ್ತ |ನೆಲ|ಮೂರಿ ಬರುವಂತೆ ಅಳಲುತ್ತ’) ನೆಲಮೂರಿ ಹೋಗುವುದು ಅಂದರೆ, ಮಣ್ಣಿನ ವಾಸನೆ ಹೊಡೆಯುವುದು. ಮನುಷ್ಯನ ಕೊನೆಗಾಲಕ್ಕೆ ಮಾತ್ರ ಮಣ್ಣಿನ ವಾಸನೆ ಮೂಗಿಗೆ ಬಡಿಯುತ್ತದೆ. ರಾಕ್ಷಸ ಕುಲದ ಅಂತ್ಯಕ್ಕೆ ಈ ಶೂರ್ಪನಖಿ ಈ ರೀತಿ ಲಂಕೆಗೆ ದೂರನ್ನು ತಂದಳೆಂದು

[ತಾಣು ಮರಣಾಂತಿಕವಾಗಿ ರೋದಿಸುತ್ತಾ] ಬಂದಳೆಂದು ಕವಿ ಸಾಂಕೇತಿಕವಾಗಿ ತಿಳಿಸುತ್ತಾರೆ. ಮುಂದೆ ರಾವಣ ತನ್ನ ತಂಗಿಯ ದುರವಸ್ತೆಯನ್ನು ಕಂಡು ಅವಳನ್ನು ನುಡಿಸುವ ಸಾಲುಗಳು ಈ ರೀತಿ ಇವೆ (ಇವು ಮೂಲದಲ್ಲಿ ಇಲ್ಲ).

‘ಏರ್ಕೊಯ್‌ನಿ ಪಣ್ಳಾ|ಮಿರೆಮೂಂಕು ಕೆಬಿಮಾಂತ|ಏರ್ ಕೊಯ್‌ನೆ ಪಣ್ಳಾ’ (ಪಲ್ಲೊ) ‘ಏರ್ ಕೊಯಿನಿ ಮೂಜಿ ಊರುತಾಕ್‌ಳ್ ಮಾಂತ|ತಾರ್ ನಡಪುವೆರೆಂಕ್|ಭಾರಿ ಮಲ್ಲಾಯೇನ್’ ಏರ್ ಕೊಯ್‌ನೆ (ಅನುಪಲ್ಲೊ)

ಬೊಮ್ಮೆ ಕೊಯ್‌ತಿನೆನೊ|ಅತ್ತಾಂಡಾಯ|ಅಮ್ಮೆ ಕೊಯ್‌ತಿ ನೆನೋ|ಚಮೋನ್‌ಸುತ್ನಾರ್|ನಮ್ಮ ಇಲ್ಲಾಳುಳ್ಳೆ |ರೆರ್ಮುನಿಯೆರ್ ನಿನ್ನೊ|ಕರ್ಮೊ ಇಂಚಾಂಡತ್ತೊ||

ಮೂಂಕು ಕೊಯ್ತ್ ನಿನ್ನ|ಮೂಂಕುಗು ಪತ್ತಾವೆ|
ಸಂಕಟೊ ಬುಡುತ್ ವಾ|ಪೊಂರ್ಕು ಕೊಯ್‌ನೆನಿಪಣ್ಳಾ||ಏರ್ ||

ಮೇಲಿನ ಪದ್ಯಗಳು ಕನ್ನಡ ಪಂಚವಟಿಯಲ್ಲಿ ಇಲ್ಲ. ಅದರ ಅನುವಾದ ಹೀಗಿದೆ.

‘ಯಾರು ಕೊಯ್ದರು ಹೇಳು|ಮೊಲೆ ಮೂಗು ಕಿವಿಯೆಲ್ಲ |ಯಾರು ಕೊಯ್ದರು ಹೇಳು|
ಯಾರು ಕೊಯ್ದರು ಹೇಳು|ಮೂರು ಲೋಕದಿ ಎನ್ನ|ಮೀರಿ ಬದುಕುವರಿಲ್ಲ|
ಭೂರಿ ವಿಕ್ರಮಿ ನಾನು|ಯಾರು ಕೊಯ್ದರು ಹೇಳು||
ಬೊಮ್ಮ ಕೊಯಿದನೇನೋ|ಅಲ್ಲ ದಡವನ|ಅಮ್ಮ ಕೊಯ್ದನೇನೊ|
ಚಮಾಂಬರನೇ|ನಮ್ಮ ಮನೆಯೊಳಿರ್ದ|ರಾರ್ಮುನಿದರು ನಿನ್ನ|
ಕರ್ಮಾಂದಿತಾಯ್ತಲ್ಲ ||ಯಾರು ಕೊಯ್ದರು||
ಮೂಗನು ಕೊಯ್ದು ನಿನ್ನ|ಮೂಗಿಗೆ ಹಚ್ಚುವೆ|ಬೇಗುದಿ ಬಿಟ್ಟು ಆ |
ಗೂಗೆ ಯಾರೆಂದು ಹೇಳು|ಯಾರು ಕೊಯ್ದರು||

ಈ ಪದ್ಯಗಳು ಒಂದು ರೀತಿಯಲ್ಲಿ ರಾಮಾಯಣದ ಭವಿಷ್ಯವನ್ನೇ ನಿರ್ಧರಿಸಿ ಹೇಳುವಂತಿವೆ. ‘ಎಲೆ ಶೂರ್ಪನಖಿ, ನಿನ್ನ ಅಣ್ಣನಾದ ನಾಣು ವಿಶ್ವ ವಿಜಯಿ ರಾವಣ. ಮೂರು ಲೋಕಗಳಲ್ಲಿ, ನನ್ನಲ್ಲಿ ಹೋರಾಡಿ ಗೆಲ್ಲುವ ಸುಭಟರು ಯಾರೂ ಇಲ್ಲ, ಚರ್ಮಾಂಬರಧರನಾದ ಶಿವನೇ ಇಷ್ಟಾರ್ಥಗಳನ್ನು ಈಡೇರಿಸುವವನಾಗಿ ನಮ್ಮರಮನೆಯಲ್ಲಿ ಬಿದ್ದುಕೊಂಡಿದ್ದಾನೆ. ಹೀಗಿರುವಾಗ ಬ್ರಹ್ಮನಿಗೂ ನಮ್ಮನ್ನು ಎದುರು ಹಾಕಿಕೊಳ್ಳುವ ಧೈರ್ಯ ಇರಲಾರದು. ಒಂದು ವೇಳೆ ಅವನ ಅಪ್ಪನಾದ ಶ್ರೀಮನ್ನಾರಾಯಣನೇ ಇಂತಹ ಕೆಲಸಕ್ಕೆ ಕೈ ಮಾಡಿದನೇ?’ (ಇಲ್ಲಿ ನಾರಾಯಣನ ಅವತಾರವಾದ ಶ್ರೀರಾಮನ ಆಜ್ಞೆಯಂತೆ ಈ ಕೆಲಸ ನಡೆದಿದೆ ಎಂಬುದು ಗಮನಾರ್ಹ). ‘ತಂಗಿಯಾದ ನಿನ್ನ ಕುಕರ್ಮದಿಂದಲೇ ನಿನಗೀ ಶಾಸ್ತಿಯಾಯಿತು’ (ಇದು ಸಮಸ್ತ ದಾನವ ಕುಲಕ್ಕೂ ಕೇಡು ತರಬಹುದು). ‘ಸಾಮಾನ್ಯನೊಬ್ಬ ನಿನ್ನ ಮೂಗನ್ನು ಕೊಯ್ದವನಾದರೆ ಅವನ ಮೂಗನ್ನೇ ಕತ್ತರಿಸಿ ತಂದು ನಿನ್ನ ಮೂಗಿಗೆ ಅಂಟಿಸುತ್ತೇನೆ. ಮೂಗಿಗೆ ಹೋದ ಮಾನವನ್ನು, ನಿನ್ನ ಪ್ರತಿಷ್ಠೆಯನ್ನು ಮರಳಿ ಪಡೆಯಲು ಯತ್ತಿಸುತ್ತೇನೆ’ ಎನ್ನುತ್ತಾನೆ ರಾವಣ.

ಸೋದರಿಯ ಮಾನಭಂಗದ ಸೇಡನ್ನು ತೀರಿಸುವುದಕ್ಕಾಗಿ ಸೀತೆಯನ್ನು ತರುತ್ತೇನೆಂದು ಹೇಳುವ ರಾವಣನಿಗೆ ಮಂಡೋದರಿ ಹೇಳುವ ಎಚ್ಚರಿಕೆಯ ಮಾತು ಅರ್ಥಪೂರ್ಣವಾಗಿದೆ. ‘ಊರ್ಯಾಯ ಪೊಣ್ಜೊವು ತಂಕ್|ಸೇರೊಡೆಂದ್ ನೆನೆತ್ನಾಯೆ ಬಂ|ಗಾರ್ ಪತ್ತ್‌ಟ್ಲ ಮಜಿಯಾವು.’

(ಇನ್ನೊಬ್ಬನ ಹೆಂಡತಿ ತನಗೆ ಸಿಗಬೇಕೆಂದು ನೆನೆಯುವವ ಬಂಗಾರ ಹಿಡಿದರೂ ಅದು ಇದ್ದಿಲಾಗುತ್ತದೆ)

ಸನ್ಯಾಸಿ ವೇಷ ಧರಿಸಿ ಸೀತೆಯ ಪರ್ಣಕುಟೀರದ ಸನಿಹ ಬಂದ ರಾವಣ… ಏನುಣಾಂತೆ ಎ|ಲ್ಲಾಂಜಿಗ್ ದಿನ ಮೂಜ್ಯಾಪುಂಡು (ನಾನು ಉಣ್ಣದೆ ನಾಡದಿಗೆ ದಿನ ಮೂರಾಗುತ್ತದೆ) ಎನ್ನುತ್ತಾನೆ. ಆಗ ಸೀತೆ ‘ಇರ್ಳುಣಾಂತ್ಲಾಯಟ ಬೊಳ್ಪುಗು ತಞ್ಞಣೋ ಕೊರೊಡೆಂದ್ ಕೇಂಡಿಗಾದ್ಯಾಂಡ್’ ಎನ್ನುತ್ತಾಳೆ.

(ರಾತ್ರಿ ಉಣ್ಣದವನಲ್ಲಿ ಅಂದರೆ ಅನ್ನ ಬೇಯಿಸದವನಲ್ಲಿ ಬೆಳಿಗ್ಗೆ ತಂಗಳನ್ನ ಬೇಡಿದ ಹಾಗಾಯಿತು) ಇಂತಹ ಮಾತುಗಳು ಕಾವ್ಯಕ್ಕೆ ಮೆರುಗು ನೀಡುತ್ತವೆ. ಸನ್ಯಾಸಿ ವೇಷದ ರಾವಣ ತನ್ನ ಪರಿಚಯ ಹೇಳಿಕೊಳ್ಳುವ ರೀತಿ ವಿಶಿಷ್ಟವಾಗಿದೆ.

‘….ಊರ್ಮಾಂತ ಎನ್ನ ಕೈ ಪುಂಡಿತುಳಾಯುಂಡು|
ಬೊಮ್ಮಗೆನ್ನಮ್ಮೆ ಪುಳ್ಳಿ|ಐಡ್ತೇನ್ ಪಿಳ್ಳೀ|
ಕಾಸಿನ್ ತೂತ್‌ನಾಯೇ |ಪೊರ್ವೊಟು ಕೈ|ಲಾಸೊಗು ಪೋತ್‌ನಾಯೆ
ಈ ಸರ್ತಿ ಲಂಕಾ ಪಟ್ಟೊಗು ಪೋವೊಡೆಂದುಳ್ಳೆ
ಮೋಸ ಮಲ್ಪರೆ ಬಲ್ಯತ್ತೋ|ಇರ್ಳಾಂಡತ್ತೊ||

ಅದರ ಕನ್ನಡ ಅನುವಾದ ಹೀಗಿದೆ :

‘…..ಊರೆಲ್ಲ ನನ್ನ ಕೈ ಮುಷ್ಟಿಯೊಳಗುಂಟು
ಬೊಮ್ಮಗೆನ್ನಪ್ಪ ಮೊಮ್ಮಗ |ನಾನವನ ಮಗನು
ಕಾಶಿಯ ಕಂಡವ |ಪೂರ್ವದಿ ಕೈ |ಲಾಸಕ್ಕು ಹೋಗಿದ್ದೆ
ಮೋಸ ಮಾಡಲು ಬಾರದು |ರಾತ್ರಿಯಾಯಿತು||

‘ತ್ರಿಲೋಕ ವಿಜಯಿಯಾದ ರಾವಣನ ಮುಷ್ಠಿಯಲ್ಲಿ ಊರೆಲ್ಲ ಅಡಗಿದೆ. ಅವನು ಬ್ರಹ್ಮನ ಮೊಮ್ಮಗನಾದ ಕಶ್ಯಪನ ಮಗನೂ ಹೌದು.ಕಾಶಿಗೂ ಹೋಗಿದ್ದ. ಕೈಲಾಸಕ್ಕೂ ಹೋಗಿದ್ದ. ಮುಂದೆ ಸೀತೆಯನ್ನು ಲಂಕಾಪಟ್ಟಣಕ್ಕೊಯ್ಯಬೇಕೆಂಬ ಉದ್ದೇಶದಿಂದಲೇ ಬಂದವನು. ಅವನ ಈ ಸಂಕಲ್ಪಕ್ಕೆ ಮೋಸವಾಗಬಾರದು. ಅಥವಾ ಬೇಡಲು ಬಂದ ಸನ್ಯಾಸಿಗೆ ಭಿಕ್ಷೆ ನೀಡದೆ ಮೋಸಮಾಡಬಾರದು’. ಹೀಗೆ ಯಕ್ಷಗಾನದ ಮಾತಿನ ಚಮತ್ಕಾರಕ್ಕೆ ಪೂರಕವಾಗುವ ಹಾಗೆ ದ್ವಂದಾರ್ಥದಿಂದ ರಚಿಸಿದ ಪದ್ಯಗಳು ಕವಿ ಪ್ರತಿಭೆಯ ಪ್ರತೀಕವಾಗಿವೆ. ರಾವಣ ತನ್ನ ಬಗ್ಗೆ ಸತ್ಯವನ್ನೇ ಹೇಳುತ್ತಾನೆ!

ರಾವಣನು ಸೀತೆಯನ್ನು ಆಕಾಶಮಾರ್ಗದಿಂದ ಕೊಂಡೊಯ್ಯುವ ಸಮಯದಲ್ಲಿ ಆಕೆ ತನ್ನ ಆಭರಣಗಳನ್ನು ಒಂದೊಂದಾಗಿ ತೆಗೆದು ಭೂಮಿಗೆ ಬಿಸಾಡುತ್ತಾಳೆ. ಆ ಆಭರಣಗಳ ಗಂಟನ್ನು ಸುಗ್ರೀವನು ರಾಮನಿಗೆ ನೀಡುತ್ತಾನೆ. ಅದನ್ನು ನೋಡಿದ ರಾಮಚಂದ್ರ ಒಂದೊಂದೆ ಆಭರಣಗಳನ್ನು ಹೆಸರಿಸಿ ನೋಡಿ ನೆನಪಿಡುವ ಸಂದರ್ಭ ಹೃದಯಸ್ಪರ್ಶಿ. ಕವಿ ತುಳುನಾಡಿನಲ್ಲಿ ಪ್ರಚಲಿತವಿರುವ ಆಭರಣಗಳ ಪಟ್ಟೆಯನ್ನೇ ಇಲ್ಲಿ ಕೊಡುತ್ತಾರೆ :

‘ಬುಡೆತಿ ತರನ್ ನೈಯ್ತ್ ಪಾಡ್ಪಿ|ಜಿಡೆಗೊಂಡೇತ್ ಪೊರುಳು
ಬುಡಂದೆ ಮುಂದಲ ಬೊಟ್ಟುನುಲಾ ಕಡ್‌ತಡಕ್ಕ್ ತಾಳ್||
ರಾಕುಟೀಗ್ ದೀಡಿ ಕಲ್ಲ್|ಮೂಕುತಿತಾ ಪರಳ್
ಆಕೆಬಿಕ್ಲೆ ಕೊಪ್ಪು ಬುಗುಡಿ |ಪಾಕೊ ಬಿಲೆತ್ತ ನಗೊಕ್ಳು||
ಬಾಲ್ಸರೋಲೆ ಕುಚ್ಚಿಕಾಯಿ |ತಾಳಿ ಬಂದಿ ಮಲಕ್
ತಾಲಿಕಂಟಿ ಸುತ್ತು ಎರ್ಕಿ |ಮಾಲೆಗೆಜ್ಜೆ ಟಿಕ್ಕೀ
ಕಟ್ಟಕಾಜಿ ದೋರೆ ಚಳಕೆ |ಗಟ್ಟಿದುಂದು ಕಾಜೀ
ಪಟ್ಟಿ ಸೊಂಟೊಡುಪ್ಪ ಡಾಬು |ಪಟ್ಟ ಸರಪೊಳಿಂದ್’

ಜಿಡೆಗೊಂಡೆ, ಮುಂದಲೆ ಬೊಟ್ಟು (ರಾಕುಟಿಗ್ ಇಟ್ಟ ಕಲ್ಲು?) ಮೂಕುತಿಯ ಹರಳು, ಕಿವಿಗೆ ಕೊಪ್ಪು, ಬುಗುಡಿ, ಬಾಲ್ಸರೋಲೆ, ಕುಚ್ಚಿಕಾಯಿ, ತಾಳಿಬಂದಿ, ಮಲಕ್ ತಾಲಿಕಂಟಿ, ಗೆಜ್ಜೆಟಿಕ್ಕಿ, ಕಟ್ಟಕಾಜಿ, ದೋರೆಚಳಕೆ ದುಂಡು ಕಾಜಿ (ದುಂಡು ಬಳೆ) ಸೊಂಟದ ಪಟ್ಟಿ, ಡಾಬು, ಸರಪಳಿ ಹೀಗೆ ತುಳುನಾಡಿನ ಜನ ಹಿಂದಿನ ಕಾಲದಲ್ಲಿ ಧರಿಸುತ್ತಿದ್ದ ಒಡವೆಗಳ ಪಟ್ಟಿ ಇಲ್ಲಿದೆ.

ವಾಲಿ ಸುಗ್ರೀವರ ಕಾಳಗವನ್ನು ವರ್ಣಿಸುವ ಪದ್ಯಗಳು ಸಾರವತ್ತಾಗಿವೆ. ಸ್ವಂತಿಕೆಯನ್ನು ಬಿಂಬಿಸುತ್ತವೆ. ಮರೆಯಲ್ಲಿ ನಿಂತು ಬಾಣಪ್ರಯೋಗ ಮಾಡಿ ಪ್ರಾಣಾಘಾತ ನೀಡಿದ ರಾಮನನ್ನು ಬಹುವಾಗಿ ನಿಂದಿಸುವ ವಾಲಿಯ ಮಾತುಗಳನ್ನು ಕುಂಬಳೆ ಪಾರ್ತಿಸುಬ್ಬನು ಈ ರೀತಿ ಹಾಡಿದ್ದಾನೆ.

‘ಜಾಣನಹುದಹುದೋ|ಸಂಗರಕತಿ |ತ್ರಾಣನಹುದಹುದೋ||
ಕ್ಷೋಣಿಯೊಳ್ ನಿನ|ಗೆಣೆಗಾಣೆ ಪರಾಕ್ರಮಿ |ಜಾಣನಹುದಹುದೋ||…

ತುಳುವಿಗಿಳಿಸದೆ ಸಂಕಯ್ಯ ಭಾಗವತರು ಹಾಗೆಯೇ ಬಿಟ್ಟು ಬಿಟ್ಟಿದ್ದಾರೆ. ಅದರ ಬದಲಾಗಿ ತೊರವೆ ರಾಮಾಯಣದಲ್ಲಿ ವಾಲಿ ರಾಮನನ್ನು ನಿಂದಿಸುವ ಹದಿನಾಲ್ಕು ಭಾಮಿನಿ ಷಟ್ಟದಿಗಳನ್ನು ಹನ್ನೆರಡಕ್ಕೆ ಇಳಿಸಿ ತನ್ನ ಕಾವ್ಯದಲ್ಲಿ ಸೇರಿಸಿಕೊಂಡರು. ಮುಂದೆ ಕನ್ನಡ ಪಂಚವಟಿ ಪ್ರಸಂಗದಲ್ಲೂ ಈ ಪದ್ಯಗಳನ್ನು ಯಥಾವತ್ತಾಗಿ ಸೇರಿಸಿಕೊಂಡರಂತೆ. ಸಂಕಯ್ಯ ಭಾಗವತರ ತುಳು ರೂಪಾಂತರ ಬಹಳ ಚೆನ್ನಾಗಿ ಮೂಡಿಬಂದಿದೆ. ಒಂದೆರಡು ಉದಾಹರಣೆಗಳನ್ನು ಇಲ್ಲಿ ಕೊಡಬಹುದು.

‘ನೀನೆ ದಶರಥನೆಂಬ ನೃಪತಿಯ
ಸೂನು ಸಾಮ್ರಾಜ್ಯಕ್ಕೆ ಸಲ್ಲದೆ
ಕಾನನವ ಹೊಕ್ಕಬಲೆಯನು ಹೋಗಾಡಿದತಿಬಲನು
ಹೀನ ವೃತ್ತಿಯ ಬಗೆಗೆ ಸಲ್ಲದ
ಮಾನನಿಧಿ ನೀನಹುದು ಮನದನು
ಮಾನವೀಪರಿತೋರುತಿದೆ ಅದು ನಿನಗೆ ಸರಿಯೆಂದ|
(ತೊರವೆ ರಾಮಾಯಣ)

ಈಯೊ ದಶರಥರಾಯ ಮಗೆಮ-
ಲ್ಲಾಯೆ ರಾಜ್ಯಾಳಿಯರೆ ಸಲ್ಲಾಂ-
ತ್ನಾಯೊ ಕಾಡ್‌ಗ್‌ಬತ್ತ್ ಬುಡೆತಿನ್ ಕಳೆ ಯೊಣ್‌ತಿ ಧೀರೇ
ನ್ಯಾಯೊ ಅತ್ತಾ ತೆಣ್ಮೆ ತಾತ|
ನ್ಯಾಯ ಮಳ್ಪಾಯತ್ತೊ ಇಂಚೀ
ಮಾಯಗಾರೀ ಒಳ್ತು ಈಡೆಗೆ ಬತ್ತ ಪಣ್ ಪಣ್‌ಗೆ
(ತುಳು ಪಂಚವಟಿ)

ಧರೆಯೊಳಗೆ ಮೃಗಮಾಂಸ ಭೋಜನ
ಕರಸುಗಳುಮನ ಮಾಡುವುದು ದು
ಶ್ಚರಿತವಲ್ಲದು ಶಾಸ್ತ್ರದಲಿ ನಿಜಧರ್ಮ ಮಾರ್ಗದಲಿ
ಪರಿಕಿಸಲು ಕೋಡಗದ ಮಾಂಸವು
ನರಪತಿಗಳಿಗೆ ಯೋಗ್ಯವೇ ಹೇ
ಳರಸ ಹಿರಿದಹ ಹೇಸಿಕೆಯ ಕೈಕೊಂಡೆ ನೀನೆಂದ|
(ತೊರವೆ ರಾಮಾಯಣ)

ಈ ಪದ್ಯದ ಸಾರಾಂಶವನ್ನು ತುಳುವಿನ ಅರ್ಧ ಭಾಮಿನಿಗೆ ಇಳಿಸಲಾಗಿದೆ.

‘ಮಾಸ ತಿನ್ಯಾರರಸುಗುಳೆಗವು
ಹೇಸಿಗೆತ್ತೋ ಮಂಗಮಾಸೊಡು
ಆಸೆ ಮಾಳ್ತ್‌ದ್ ತಿಂದ್ರೊಡೆಂದೇ ಮನಸ್ ಮಾಳ್ತ್ರಿಯನೇ
(ತುಳು ಪಂಚವಟಿ)

ಹಗೆತನವನೆಣಿಸುವರೆ ರಘುಪೀ
ಳಿಗೆಯ ರಾಯರ ಕೊಂದು ದಿಲ್ಲಾ
ಮಗುಳವರ ಸತಿಯರಿಗೆ ತಪ್ಪಿದುದಿಲ್ಲ ಜಗವರಿಯೆ
ಮೃಗಕುಲೇಂದ್ರ ದ್ವೀಪಿ ಹಯ ರದ
ನಿಗಳಿರಲು ಬಲಿಗಾಡ ನಿಕ್ಕಿದ
ಬಗೆಯ ನಾಣ್ಣುಡಿ ತಪ್ಪದೀಗಲು ನನ್ನೊಳಾಯ್ತೆಂದ
(ತೊರವೆ ರಾಮಾಯಣ)

ಪಗೆಟ್ ಬಾಣೊನು ಬುಡಿಯ ಪಣೆಯರೆ
ರಘು ಕುಲೊತ ಅರಸುಗಳಗೇ ನೊರಿ
ಯಗ್‌ಲ ಮುನಿತಿದ್ಯಾಕ್ಳೆ ಬುಡೆತ್ಯಡಿಕುಳ್‌ಗ್‌ತತ್ತ್‌ಜ್ಜೀ
ಮೃಗತರಸು ಪಿಲಿಯಾನೆ ಬಲಿಕು
ಪ್ನಗಲ ಏಡ್‌ನೆ ಕೊರ್ಪಿ ಗಾದೆತ
ಬಗೆತ ಬದ್‌ಕ್‌ಗ್‌ಮಾಳ್ತನೇ ಹಾ ಯೆಂದ್ ತೆಳಿತೊಂಡೆ||
(ತುಳು ಪಂಚವಟಿ)

ವಾಲಿಯ ಮರಣದಿಂದ ದುಃಖತಪ್ತಳಾಗಿ ಅವನ ಕಳೇವರದ ಮೇಲೆ ಹೊರಳಾಡಿ ಅಳುವ ತಾರೆಯನ್ನು ರಾಮನು ಸಮಾಧಾನ ಪಡಿಸುತ್ತಾನೆ.

‘ಅಳುವುದೇತಕೆ ನೀತಾರೆ|ನಿನ್ನಯ ಮನದೊಳು ಧೈರ್ಯ ತಾಳು ನೀರೆ’

ಎಂದು ಪಾರ್ತಿಸುಬ್ಬ ಹಾಡಿದ್ದರೆ, ತುಳು ಪಂಚವಟಿಯಲ್ಲಿ ಆ ಮಾತುಗಳನ್ನು ತೌಳವ ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಸ್ತರಿಸಲಾಗಿದೆ.

‘ಬುಳ್ಪಿನೆ ದಾಯೆ ತಾರೇ|ಪೊಕ್ಕಡೆ ದುಕ್ಕೊ|ಮಲ್ಪಾಡ….. ಯೇರೇ|
… ಕರ್ಮೊ ಪಣ್‌ಪಿ ಬಳ್ಳ್‌ಟ್‌|ಕಟ್ಟ್‌ತೆರಾ|ಬ್ರಹ್ಮ ದೇವೆರ್ ಪೂರ್ವೊಟು||

ಕರ್ಮೊಗು ತಕ್ಕನೆ|ಆಪುಂಡು ಪೋಪುಂಡು |ಕರ್ಮೊ ಮಿರ್ನಾಯೆ ಇದ್ದಿ|ಅಂದೆನೆ ಬುದ್ಧೀ||
ನೋತುದು ಕೆರಿಯರ್೦ದ್ |ಬುಕ್ಕೊರಿ ಮೈ ಬಾತ್‌ದ್‌ಸೈತ್ತೆ ಎಂದ್||
ಸೀತೊಟೆ ಪೋಯೆಂದ್|ಬೂತೊನೆ ಕೆಡೆಂದ್
ಪಾತೆರ ಪಣ್ಪುನಾವು ಪೊಕ್ಕಡೆತ್ತವು||
ಕೆರಿಯರೆ ಬಲ್ಯೊರಿಯನ್ |ಸೈನಾಗನೆ|ಕೆರ್ಪೂನೆ ಪಿಂದೊಣೈನ್
ಕೆರಿಯೇರ್ ಎನ್ನ |ಕಂಡಾನ್ಯನೆಂದ್‌ತ್ ತಾರೆ|ಕರಗೋಡ್ಡಿ ಋಣ ತೀರಂಡ್||ಗಾಳ್ಯಡೆಂಗ್೦ಡ್||

ಮೇಲಿನ ಪದ್ಯಗಳ ಕನ್ನಡ ರೂಪಾಂತರ ಹೀಗಿದೆ. (ಕನ್ನಡ ರೂಪಾಂತರ ಈ ಲೇಖಕನದು)

‘ಅಳುವುದೇತಕೆ ತಾರೆ|ಸುಮ್ಮನೆ ದುಃಖ|ಪಡಬೇಡವೊ….
….. ಕರ್ಮವೆಂಬ ಹಗ್ಗದಿ |ಕಟ್ಟಿರುವ |ಬ್ರಹ್ಮದೇವರು ಜೀವಿಗಳ|ಕರ್ಮಕ್ಕೆ ತಕ್ಕಂತೆ ಬ್ರಹ್ಮಾಂಡ ನಡೆವುದು |ಕರ್ಮವ ಮೀರರು ಪೆದ್ದೀ|ಅಂತೆಯೇ ಬುದ್ಧಿ||

ಘಾತಿಸಿ ಕೊಂದನೆಂದು|ಇನ್ನೊಬ್ಬ ಮೈ ಬಾತು ಸತ್ತನೆಂದು|
ಶೀತದಿ ಕಡೆಕಾಲ |ಭೂತವೆ ಹೊಡೆಯಿತೆಂದು|
ಮಾತನಾಡುವುದೆಲ್ಲ ಬೊಗಳೆ|
ಕೊಲ್ಲಲು ಸಾಧ್ಯವೆ|ಒಬ್ಬ ತಾ|ನಿಲ್ಲವಾಗ್ವುದು ಕೊನೆಗೆ|
ಮಲ್ಲ ನಿನ್ನಿನಿಯನ |ಕೊಂದುದಿಲ್ಲ|ಎಲ್ಲ ಋಣತೀರಲು|
ಸೊಲ್ಲುಸಿರಡಗಿತು||

ತುಳುನಾಡಿನ ಸಾಮಾನ್ಯ ಜನರು ಒಬ್ಬನ ಸುಖದುಃಖಗಳನ್ನು ಇನ್ನೊಬ್ಬನಲ್ಲಿ ಹೇಳಿಕೊಳ್ಳುವಾಗ, ಒಬ್ಬನ ಪ್ರೀತಿ ಪಾತ್ರನಾದವನು ಸಾವಿಗೀಡಾದಾಗ ಅವನಿಗೆ ಸಮಾಧಾನ ಹೇಳುವಾಗ ಈ ರೀತಿಯ ಸಂಭಾಷಣೆ ಮಾಡುವುದು ಸ್ವಾಭಾವಿಕವಾಗಿದೆ. ಭೂತದ ಉಪದ್ರವದಿಂದ ಮನುಷ್ಯನೊಬ್ಬ ಅಸುನೀಗಬಹುದುದೆಂಬ ತಿಳುವಳಿಕೆಯು ತುಳುನಾಡಿನ ಸಾಮಾನ್ಯ ಜನರಲ್ಲಿದೆ. ಈ ಮಾತುಗಳನ್ನು ಇಲ್ಲಿ ಕವಿ ಸಮಯೋಚಿತವಾಗಿ ಬಳಸಿದ್ದಾರೆ.

ಈ ಕೃತಿಯಲ್ಲಿ ಬಳಸಲ್ಪಟ್ಟ ತುಳು ಭಾಷೆಯ ಕುರಿತಾಗಿ ಉಲ್ಲೇಖಿಸುತ್ತಾ |೨.೧೯೬೮ರಲ್ಲಿ ಪ್ರಕಟವಾದ ಆವೃತ್ತಿಯ ಮುನ್ನುಡಿ) ಟಿ. ಕೇಶವ ಭಟ್ಟರು ಈ ಭಾಷೆ ವಿಟ್ಲ ಸೀಮೆಯ ಬ್ರಾಹ್ಮಣೇತರರದ್ದು ಎಂದು ಗುರುತಿಸಿದ್ದಾರೆ. ಆದರೆ ಇಲ್ಲಿ ಬರುವ ಶಬ್ದಗಳನ್ನು ಮತ್ತು ಪ್ರಯೋಗ ವಿಧಾನಗಳನ್ನು ಕಂಡರೆ, ಇದು ತುಳುನಾಡಿನ ಮಧ್ಯಭಾಗದಲ್ಲಿ (ಮುಲ್ಕಿ ಸೀಮೆಯಲ್ಲಿ) ಆಡುವ ಬ್ರಾಹ್ಮಣ ತುಳುವಿಗೆ ತೀರಾ ಹತ್ತಿರದಲ್ಲಿದೆ. ಸಾಮಾನ್ಯ ತುಳುವರು ಪ್ರಯೋಗಿಸುವ ‘ಲ’ಕಾರಗಳು ಇಲ್ಲಿ ‘ಳ’ ಕಾರಗಳಾಗಿಯೂ ‘ನ’ ಕಾರ‘ಣ’ಕಾರವಾಗಿಯೂ ‘ಡ’ಕಾರ ‘ಟ’ ಕಾರವಾಗಿಯೂ ಪ್ರಯೋಗಿಸಲ್ಪಟ್ಟಿದೆ (ಇಲ್ಲಿ ಪ್ರಾದೇಶಿಕ ಭಿನ್ನತೆಗಳೂ ಸ್ವಲ್ಪ ಮಟ್ಟಿಗೆ ಸೇರಿಕೊಂಡಿವೆ).

ಉದಾಹರಣೆಗೆ ‘ಮುನಿ ಪನ್ಲೆಯೇ ಎಂಕಾಳಮ್ಮೆ ಸಿದ್ಯಮ್ಯೆರಾ|’ ಎಂಬುದು ‘ಮುನಿ ಪನ್ಲೆಯೇ ಎಂಕಲಮ್ಮ ತಿದ್ಯಮ್ಮೆರಾ’ ಎಂದು ತುಳುನಾಡಿನ ಕೆಲವು ಕಡೆಗಳಲ್ಲಿ ಪ್ರಯೋಗವಾಗಬಹುದು. ಅಲ್ಲದೆ ‘ಪೊರ್ಲುಟು’ ಎಂಬುದು ‘ಪೊರ್ಲುಡು’ ಎಂದಾಗಿಯೂ ‘ಮಾಂತ’ ಎಂಬುದು ‘ಮಾತ’ ‘ಪೂಜಿತ್’ ಎಂಬುದು ‘ಪೂಜಿದ್’ ‘ಅಡಕ್ಕನು’ ಎಂಬುದು ‘ದಕ್ಕುನು’ ಎಂಬ ಹಾಗೆಯೂ ಪ್ರಯೋಗವಾಗಬಹುದು. ಇಂತಹ ಪ್ರಯೋಗಗಳು ಈ ಕೃತಿಯಲ್ಲಿ ಧಾರಾಳವಾಗಿವೆ.

‘ಕೊಂಡು ಬಾರದೆ’ ಎಂಬ ಕನ್ನಡದ ಶಬ್ದ ತುಳುವಿಗೆ ಇಳಿಯುವಾಗ ‘ಕೊಂಡು ಬರಂದೆ’ ‘ಕೊಂಡು ಬರಂತೆ’ ಕೊಂಡು ಬರಾಂದೆ ಕೊಂಡು ಬರಾಂತೆ ಕೊಂಡರಂದೆ, ಕೊಂಡರಂತೆ, ಕೊಂಡ್ರಾಂತೆ – ಹೀಗೆಲ್ಲಾ ಪ್ರಾದೇಶಿಕ ಹಾಗೂ ಆಯಾ ಜನಾಂಗದ ಉಚ್ಚಾರಣಾ ಕ್ರಮಕ್ಕನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಯೋಗವಾಗಬಹುದು (ಪುಟ – ೧೦೧ ತುಳುವಿನ ವಿಶಿಷ್ಟ ಸ್ವರಾಕ್ಷರಗಳು ‘ಕನ್ನಡದ ಅನರ್ಘ್ಯ ಛಂದೋರತ್ನಗಳು’ ಎನ್.ನಾರಾಯಣ ಶೆಟ್ಟಿ). ಇನ್ನು ಅರ್ಧ ಸ್ವರಾಕ್ಷರ ಮತ್ತು ವ್ಯಂಜನಾಕ್ಷರಗಳ ಪ್ರಯೋಗ ತುಳುವಿಗೆ ವಿಶಿಷ್ಟವಾಗಿದೆ. ಪೂರ್ಣ ಪ್ರಮಾಣದಲ್ಲಿ ಶಿಷ್ಟರೂಪದ ಚೌಕಟ್ಟನ್ನು ಹೊಂದದ ಒಂದು ಭಾಷಾ ಪ್ರಯೋಗದ ಕುರಿತು ಹೀಗೆಯೇ ಇರಬೇಕು ಎಂದು ಅಪ್ಪಣೆ ಕೊಡಿಸುವ ಹಾಗಿಲ್ಲ. ಅದಕ್ಕೆ ನಾವು ರೂಢಿಯ ಪ್ರಯೋಗಗಳನ್ನೇ ಅವಲಂಬಿಸಬೇಕಾಗುತ್ತದೆ. ಈ ಕೃತಿ ತುಳುವಿಗೆ ಒದಗಿ ಬಂದ ಒಂದು ಪ್ರಬುದ್ಧ ಕೃತಿ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಹಲವು ಸಲ ಮುದ್ರಣಗೊಂಡರೂ ಈಗ ಅದರ ಪ್ರತಿಗಳು ಅಲಭ್ಯವಾಗಿರುವುದೇ ಇದಕ್ಕೆ ಸಾಕ್ಷಿ. ಭಾಷೆಯಲ್ಲಿ ಪ್ರಾದೇಶಿಕ ಬದಲಾವಣೆ (ಪ್ರಯೋಗದಲ್ಲಿ) ಇದ್ದರೂ ಎಲ್ಲಾ ತುಳುವರೂ ಈ ಕೃತಿಯನ್ನು ಪ್ರೀತಿಯಿಂದ ಎತ್ತಿಕೊಂಡಿದ್ದಾರೆ. ಇದರ ಕುರಿತು ಪ್ರಶಂಸೆಯ ಮಾತನ್ನು ಆಡುತ್ತಿರುತ್ತಾರೆ. ಆದರೆ ಈ ಕೃತಿಯ ಮುಖೇನ ಮುಂದಿನ ಕವಿಗಳಿಗೆ ತುಳುವಿನಲ್ಲಿ ಪ್ರಸಂಗ ರಚನೆ ಮಾಡಲು ಪ್ರೋತ್ಸಾಹ ಏಕೆ ದೊರೆಯಲಿಲ್ಲವೆಂಬುದು ಪ್ರಶ್ನೆಯಾಗಿಯೆ ಉಳಿಯುತ್ತದೆ. ತುಳುವರ ಭಾಷಾ ‘ನಿರಭಿಮಾನ’ ಮತ್ತೊಮ್ಮೆ ವಿಜೃಂಭಿಸಿತೇ ಎಂದೂ ಆಶ್ಚರ್ಯವೆನಿಸುತ್ತದೆ. ಏಕೆಂದರೆ ಎರಡನೆಯ ತುಳು ಪ್ರಕಟಿತ ಪ್ರಸಂಗ ಕೃತಿ ‘ತುಳು ಕಿಟ್ಣ ರಾಜಿ ಪರ್ಸಂಗೊ’ ಎಂಬುದು ೧೯೨೯ರಲ್ಲಿ ಅಂದರೆ, ಈ ಕೃತಿ ಪ್ರಕಟವಾದ ೪೨ ವರ್ಷಗಳ ಅನಂತರ ಪ್ರಕಟಗೊಂಡಿತು.

ದೇರಂಬಳ ತ್ಯಾಂಪಣ್ಣ ಶೆಟ್ಟಿ ಎಂಬವರು ಕೂಡಾ ‘ಪಂಚವಟಿ’ಯ ಪ್ರಸಂಗವನ್ನು ತರ್ಜುಮೆ ಮಾಡಿರುವುದಾಗಿ ತಿಳಿದು ಬರುತ್ತದೆ. ಸಂಕಯ್ಯ ಭಾಗವತರಿಗೆ ಅವರು ಗುರುಭಾವನೆಯಿಂದ ನಮನಗಳನ್ನು ಸಲ್ಲಿಸಿ ತನ್ನ ಕೃತಿಯನ್ನು ಬರೆದಿದ್ದಾರೆ. ತ್ಯಾಂಪಣ್ಣ ಶೆಟ್ಟರ ಭಾಷಾಂತರ ಕುಶಲತೆ ಚೆನ್ನಾಗಿದ್ದು ಕೃತಿ ತುಳುವಿನ ಇನ್ನೊಂದು ಉತ್ತಮ ಕೃತಿ ಎನ್ನಲಡ್ಡಿಯಿಲ್ಲ. ಆದರೆ ಸಂಕಯ್ಯ ಭಾಗವತರು ಯಾವ ಕಥಾಭಾಗವನ್ನು ಆರಿಸಿ, ತುಳುವಿಗಿಳಿಸಿದ್ದರೋ ಅದನ್ನೇ ತಾನು ಇನ್ನೊಮ್ಮೆ ಬರೆಯುವ ಉತ್ಸಾಹ ಶೆಟ್ಟರಿಗೆ ಏಕೆ ಬಂದಿತೋ ತಿಳಿಯದು. ಅದಕ್ಕಿಂತ ಇನ್ನಾವುದಾದರೂ ಹೊಸ ಪ್ರಸಂಗವನ್ನು ಬರೆಯುವುದಾಗಲಿ, ಅನುವಾದಿಸುವುದಾಗಲಿ ಮಾಡಿದ್ದರೆ ತುಳುವಿಗೆ ಇನ್ನೊಂದು ಪ್ರಸಂಗ ಕೃತಿ ಲಭ್ಯವಾಗುತ್ತಿತ್ತು. ಈ ಕೃತಿ ೧೯೩೮ರಲ್ಲಿ ಪ್ರಕಟವಾಗಿತ್ತು.

೨. ತುಳು ಕಿಟ್ಣ ರಾಜಿ ಪರ್ಸಂಗೊ

ತುಳು ಭಾಷಾ ಪುನುರುಜ್ಜೀವನದ ಎರಡನೆಯ ಕಾಲಘಟ್ಟವೆಂದು ಕರೆಯಲ್ಪಡುವ, ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದ ತುಳು ಚಳುವಳಿ (ಇಪ್ಪತ್ತನೆ ಶತಮಾನದ ಆದಿಭಾಗ) ತುಳು ಭಾಷೆ. ಮಾತನಾಡುವವರಲ್ಲಿ ಒಂದು ರೀತಿಯ ಭಾಷಾಭಿಮಾನದ ಪ್ರಚೋದನೆ ನೀಡುವುದಲ್ಲಿ ಸಫಲವಾಯಿತು. ತುಳು ಒಂದು ಪ್ರಬುದ್ಧ ಭಾಷೆ. ಅದರಲ್ಲಿ ಸಮರ್ಥ ಸಾಹಿತ್ಯ ನಿರ್ಮಾಣ ಸಾಧ್ಯ ಎಂಬುದಕ್ಕೆ ಉದಾಹರಣೆಗಳಾಗಿ ಅನೇಕ ಕೃತಿಗಳು ಪ್ರಕಟಗೊಂಡವು. ಪೊಳಲಿ ಶೀನಪ್ಪ ಹೆಗ್ಡೆ, ಎನ್.ಎಸ್.ಕಿಲ್ಲೆ ಮುಂತಾದವರು ತುಳು ಸಾಹಿತ್ಯ ಕೃತಿಗಳನ್ನು ಹೊರತಂದರು. ಪಣಿಯಾಡಿಯವರು ‘ತುಳು ಸಾಹಿತ್ಯ ಮಾಲೆ’ ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಹಲವು ಕೃತಿಗಳು ಬೆಳಕು ಕಂಡವು. ‘ತುಳು ಸಾಹಿತ್ಯ ಮಾಲೆ’ ಪ್ರಕಟಣದ ಒಂದು ಉತ್ತಮ ಕೃತಿಯಾಗಿ ಬಡಕಬೈಲು ಪರಮೇಶ್ವರಯ್ಯರಿಂದ ಅನುವಾದಿಸಲ್ಪಟ್ಟ ‘ತುಳು ಕಿಟ್ಲರಾಜಿ ಪರ್ಸಂಗೊ’ ಹೊರಗೆ ಬಂದಿತು. ಈ ಪ್ರಸಂಗದ ವಿಶೇಷತೆಯೆಂದರೆ ಕ್ರಿ.ಶ. ೧೭೫ರಿಂದ ೧೮೫ರೊಳಗೆ ಜೀವಿಸಿದ್ದಿರಬೇಕೆಂದು ಊಹಿಸಲಾದ ‘ದೇವಿದಾಸ’ನೆಂಬ ಕವಿಯಿಂದ ವಿರಚಿಸಲ್ಪಟ್ಟ ಅತ್ಯಂತ ಜನಪ್ರಿಯ ಕನ್ನಡ ಪ್ರಸಂಗ ಖೃತಿ ‘ಕೃಷ್ಣ ಸಂಧಾನ’ವನ್ನು ಅದೇ ರೀತಿ ಅದೇ ಛಂದಸ್ಸು ತಾಳಗಳನ್ನುನಸರಿಸಿ ಅನುವಾದ ಮಾಡಿದುದು. ಮೂಲದ ಪ್ರತಿಯೊಂದು ಶಬ್ದಕ್ಕೂ ಸಮಾನಾರ್ಥಕ ತುಳು ಶಬ್ದಗಳನ್ನು ಬಳಸುವಲ್ಲಿ ಕವಿ ಕೃತಕೃತ್ಯರಾಗಿದ್ದಾರೆ. ಈ ಕೃತಿ ೧೯೭೯ರಲ್ಲಿ ಪ್ರಕಟವಾಯಿತು. ಕವಿಯ ಪರಿಚಯ ಮತ್ತು ಕಾಲವನ್ನು ಹೇಳುವಲ್ಲಿ ಸಂಕಯ್ಯ ಭಾಗವತರ ರೀತಿಯನ್ನೇ ಬಡಕಬೈಲು ಪರಮೇಶ್ವರಯ್ಯನವರು ಅನುಸರಿಸಿದ್ದಾರೆ. ಪದ್ಯಗಳು ಈ ರೀತಿಯಿದೆ :

ಏರ್ ತುಳುಟೀ ಕಿಟ್ಣರಾಜಿ ಪರ್ಸಂಗ ಬರೆ
ನಾರ್ ತುಳುನಾಡ ಚೌಟೆರೆ ಸೀಮೆ ಪುರಲ ಬರಿ
ತೇರ ಪುಂಚಮೆದ ಕಿಟ್ಟಪ್ಪಯರೆ ಬಡಕಯಿಲ್‌ಡಿತ್ತಿ ಮಗೆ ಸಂಕಪ್ಪೆಯೇ
ಅರೆ ಮಾದಿಮಾಳ್ ಬಂಗೆರೆ ಸೀಮೆಡಿತ್ತಿ ನೆ
ತ್ತೇರ್ ಕೆದು ಪೊಳ್ಳೇರೆ ಮಗಳ್ ಕಾಸಪ್ಪೆ ಮೊಕು
ಳೀರುವೆರೆ ಪಿರಿತಿದಾ ಬಾಲೆ ಕಬಿಪರ್ಮೆಸರಯ್ಯೆನ್ಪಿ ಪುದರ್ದಾಯೆ (ತುಳು)

ಅದರ ಕನ್ನಡ ರೂಪ ಈ ರೀತಿಯಿದೆ

(ಕನ್ನಡ ರೂಪಾಂತರ – ಈ ಲೇಖಕನಿಂದ)

ಯಾರು ತುಳುವಿನಲ್ಲಿ ಈ ಕೃಷ್ಣ ಸಂಧಾನ ಕಥೆ
ಗಾರರೆನೆ ತುಳುನಾಡ ವರ ಚೌಟ ಸೀಮೆಯಲಿ
ಊರು ಪೊಳಲಿ ಬಳಿ ಪುಂದಮೆಯ ಕಿಟ್ಟಪ್ಪ ಸುತ ಸಂಕಪ್ಪ ಬಡಕಬೈಲು
ನಾರಿಯಾತಗೆ ಬಂಗಸೀಮೆಯೊಳು ಇರುವ ನೇ-
ತ್ತೇರ ಕೆರೆ ಪೊಳ್ಳರ ಮಗಳು ಕಾಸಮ್ಮ ಇವ
ರೀರುವರ ಪ್ರಿಯಗುವರ ಕವಿಯು ಪರಮೇಶ್ವರನೆಂಬ ಪೆಸರು

ಕೃತಿ ಬರೆದು ಮುಗಿಸಿದ ದಿನಾಂಕವನ್ನು ಈ ರೀತಿ ತಿಳಿಸುತ್ತಾರೆ

‘ಐನ್ ಮೈನೋದುನಗ ನಡಪು ಕಲ್ಜಿಗೆ ತೊರ್ಸ
ಐನ್ ಸಾರದ ಮುಪ್ಪ ಇಬವ ಸಂವಸ್ಸರೊಡು
ಐನನೇ ರುತು ಪುಯಿಂತೆಲ್ ತಿಂಗೊಳುಡು ಪದಿನೈನ್ ಪೋಪಿನ ದಿನೊಟು
ಐನಂಬುದಾಯ ಕೊಡೆ ಬಾರೊಡೇ ಬರೆದ್ ಮುಗಿ ನೈನ್……

ಅದರ ಕನ್ನಡ ರೂಪಾಂತರ ಈ ರೀತಿಯಿದೆ

ಪಂಚಾಂಗವನ್ನೋದೆ ನಡೆಯುವೀ ಕಲಿಯುಗದಿ
ಪಂಚಾಸಾಸಿರ ಮೂರದಶ ವಿಭವ ವತ್ಸರದ
ಪಂಚ ಋತು ಪುಷ್ಯ ಮಾಸದೊಳು ಲೆಕ್ಕಕ್ಕೆ ಹದಿನೈದು ಸಲುವ ದಿನದಿ
ಪಂಚಶರ ಕೊಡೆ ವಾರದಂದು ಬರೆದಿರ್ಪೆ ……

ದಿನಾಂಕ ೨೮-೦೧-೧೯೨೬ರಂದು ಸೋಮವಾರ (ವಿಭವ ಸಂವತ್ಸರ) ಈ ಕೃತಿಯನ್ನು ಬರೆದು ಮುಗಿಸಿದುದಾಗಿಯೂ, ದಿನಾಂಕ ೨೨-೦೬-೧೯೨೯ (ಶುಕ್ಲ ಸಂವತ್ಸರ)ದಂದು ಅಚ್ಚು ಹಾಕಿಸಿದುದಾಗಿಯೂ ತಿಳಿದುಬರುತ್ತದೆ (ಹಳೆಯ ಪಂಚಾಂಗದ ಆಧಾರದಿಂದ ದಿನಾಂಕ ತಿಳಿಸಿದವರು ಜಾನಪದ ವಿದ್ವಾಂಸ ಕಟೀಲು ಪು. ಶ್ರೀನಿವಾಸ ಭಟ್ಟರು). ಉತ್ಕಟ ತುಳು ಭಾಷಾಭಿಮಾನಿಯಾದ ಈ ಕವಿ ಕನ್ನಡದ ಅತ್ಯಂತ ಜನಪ್ರಿಯ ಮತ್ತು ಹಲವಾರು ಕಡೆ ಯಕ್ಷಗಾನ ತಾಳಮದ್ದಳೆಗೆ ಒಪ್ಪುವ ಪ್ರಸಂಗವಾದ ‘ಕೃಷ್ಣ ಸಂಧಾನ’ವನ್ನು ತುಳುವಿಗೆ ಪರಿವರ್ತಿಸಲು ಯೋಜಿಸಿದರು. ಅದರ ನಾಲ್ಕು ಹಸ್ತ ಪ್ರತಿಗಳನ್ನು ಹಾಗೂ ನಾಲ್ಕು ಬೇರೆ ಬೇರೆ ಪ್ರಕಟಿತ ಪುಸ್ತಕಗಳನ್ನು ಸಂಗ್ರಹಿಸಿ ಒಂದಕ್ಕೆ ಇನ್ನೊಂದನ್ನು ತಾಳೆ ಹಾಕಿ ನೋಡಿದಾಗ ಹಲವಾರು ಬದಲಾವಣೆಗಳು (ಒಂದರಿಂದ ಇನ್ನೊಂದಕ್ಕೆ) ಕಂಡುಬಂದುವು. ಕಡೆಗೆ ಅರ್ಕುಳ ಸುಬ್ರಾಯಾಚಾರ್ಯರು ಆರಿಸಿ ಅರ್ಥ ಬರೆದ ಪ್ರತಿಯನ್ನೇ ಇವರು ಕೂಡಾ ಆಯ್ದುಕೊಂಡರು. ಭಾಷಾಂತರದ ಕೆಲಸ ಆಗುತ್ತಿರುವಾಗಲೇ ಕೆಲವು ಸಭೆ ಸಮಾರಂಭಗಳಲ್ಲಿ ಅವರು ತಾನು ತುಳುವಿಗಿಳಿಸಿದ ಪದ್ಯಗಳನ್ನು ಹಾಡಿ ಜನರಿಂದ ಭೇಷ್ ಎನಿಸಿಕೊಂಡರಂತೆ. ಈ ಪ್ರಸಂಗದಲ್ಲಿ ಕವಿ ಎಲ್ಲಿಯೂ ಕಥಾಭಾಗದಲ್ಲಿ ತನ್ನ ಸ್ವಂತ ಪದ್ಯರಚನೆಯನ್ನು ಸೇರಿಸುವುದಾಗಲೀ, ಮೂಲದಲ್ಲಿ ಇದ್ದುದನ್ನು ಕಡಿತ ಮಾಡುವುದಾಗಲಿ, ಮಾಡಲಿಲ್ಲ, ಪೀಠಿಕೆ ಮತ್ತು ಕಡೆನುಡಿ ಪೀಠಿಕೆಗಳಲ್ಲಿ ಮಾತ್ರ ಮೂರು, ಮೂರು ವಾರ್ಧಿಕ ಷಟ್ಪದಿಗಳನ್ನು ಸ್ವಂತ ರಚನೆಯಾಗಿ ಸೇರಿಸಿಕೊಂಡಿದ್ದಾರೆ. ಪೀಠಿಕೆಯಲ್ಲಿ ದೇವರ ಸ್ತುತಿಯಿದ್ದರೆ ಅಂತ್ಯದ ಪೀಠಿಕೆಯಲ್ಲಿ (ಕಡೆನುಡಿ ಪೀಟಿಗೆ) ‘ಕವಿಯ ಪರಿಚಯ ಮತ್ತು ಕಾಲದ ಕುರಿತಾದ ಮಾಹಿತಿ ಇದೆ. ಈ ಕಾವ್ಯವನ್ನು ಪುರಾಲು ಶ್ರೀ ರಾಜರಾಜೇಶ್ವರಿ (ಪರಮೇಶ್ವರಿ) ದೇವಿ ಹೇಳಿಸಿದ ತೆರ ಹೇಳಿದೆನೆಂಬ ಭಕ್ತಿಭಾವ ವಿನೀತತೆಯನ್ನು ಕವಿ ಪ್ರದರ್ಶಿಸಿದ್ದಾರೆ. ಕೃತಿಯ ಪ್ರಾರಂಭದಲ್ಲಿ ದೇವೀದಾಸನು ಈ ರೀತಿ ಹೇಳಿಕೊಂಡಿದ್ದಾನೆ.

ಭಾರತದ ಕಥೆಯೊಳುದ್ಯೋಗ ಪರ್ವದಲ್ಲಿ
ಶ್ರೀ ರಮಣ ಕುರುವರನ ಬಳಿಗೆ ನಲವಿನಲಿ
ಸಂಧಾನಕೆಂದೆನುತ ಬಂದ ಚರಿತವನೂ
ಚಂದದಿಂ ಯಕ್ಷಗಾನದಲ್ಲಿ ರಚಿಸುವೆನೊ
ಶ್ರುತಿ ಶಾಸ್ತ್ರ ಪೌರಾಣ ಸಕಲವಿದ್ಯೆಗಳೂ
ಸ್ಥಿತಿಯರಿತು ಪೇಳ್ವನಲ್ಲೀ ಕವಿತ್ವಗಳಾ
ಒಡೆಯ ವೆಂಕಟರಮಣ ನುಡಿಸಿದಂದದಲೀ
ದೃಢದಿಂದಲೊರೆವೆನೀ ಕೃತಿಯ ಭಕ್ತಿಯಲಿ
ವರಪ್ರಾಜ್ಞರಾಲಿಸುತ ವಿಷಮವಿರಲಿದನೂ
ಪರಿಹರಿಸಿ ಕೊಂಡಾಡಿ ಪುಣ್ಯ ಚರಿತೆಯನೂ
ಎಂಬ ಪದಗಳನ್ನು ಯಥಾವತ್ತಾಗಿ ತುಳುವಿಗೆ ಇಳಿಸಿದ್ದಾರೆ. ಅದು ಚೆನ್ನಾಗಿ ಮೂಡಿ ಬಂದಿದೆ.

ಭಾರತದ ಕತೆಟ್ ಉದ್ದೆಗ ಪರುವ ದಿಡೆಟ್‌ೕ
ಕೌರವವಡೆ ಸಿರಿ ಲಚುಮಿ ಮದಿಮಾಯೆ ಕುಸಿಟ್ೕ
ರಾಜಿಗ್‌೦ದ್‌ದ್‌ಬತ್ತ್‌ದಿತ್ತಿ ಕತೆಕುಳೆನ್
ತೋಜಿಲೆಕ ಯಚ್ಚಗಾನೊಡು ಪನ್ಪೆ ಯೇನ್ೕ
ಬೀರ ಷಾಡ್ದನ ಮಾತ ಸಾತ್ರ ಬಿದ್ಯೊಲೆನ್
ಸಾರ ಪಿಂದ್‌ದ್‌ಪಣ್ಪೆನತ್ತ್ ಕಬಿತೊಳೆನ್ೕ
ಸಾಮಿಯೆಂಗ್‌ಟ್ರಮ್‌ಣೆ ಪನ್ಪಾಯಿಲೆಕ್ಕ
ಸಾಮಿಂದ್ ಕೈ ಮುಗಿದ್ ಪಣ್ಪೆನೇನ್ ಬೊಕ್ಕಾ
ಬುದ್ಯಂತೆರಿಂದೇಟ್ ತಪ್ಪು ಯಿತ್ತ್‌೦ಡಾ
ತಿದ್ದೊಂದು ಮೆರೆಪಾಲೆ ಪುಣ್ಯ ಕತೆಕೇಂಡಾ

ಕನ್ನಡದಲ್ಲಿ ‘ಶ್ರುತಿ ಶಾಸ್ತ್ರ ಪೌರಾಣ ಸಕಲ ವಿದ್ಯೆಗಳೂ’ ಎಂದಿದ್ದುದನ್ನು ತುಳು ಕವಿ ‘ಬೀರ ಪಾಡ್ದನ ಮಾತ್ರ ಸಾತ್ರ ಬಿದ್ಯೊಲೆನ್’ ಎಂದು ತುಳುನಾಡಿಗೆ ವಿಶಿಷ್ಟವಾದ ಬೀರ-ಬೀರರ ಹಾಡು – ಪಾಡ್ದನ ಮುಂತಾದವುಗಳು ನನಗೆ ತಿಳಿಯವು ಎಂದು ಸಾಂದರ್ಭಿಕವಾಗಿ ಅನುವಾದಿಸಿದ್ದಾರೆ. ಅನುವಾದವು ಮೂಲಕ್ಕೆ ಸರಿ ಮಿಗಿಲಾಗಿದೆ ಎಂಬುದಕ್ಕೆ ಕೆಳಗಿನ ಒಂದು ಉದಾಹರಣೆಯನ್ನು ಪರಿಶೀಲಿಸೋಣ. ಶ್ರೀ ಕೃಷ್ಣನ ರಥ ಗಜಪುರದ ಹಾದಿಯಲ್ಲಿ ಬರುತ್ತಾ ಇರುವಾಗ ಹಾದಿಯಲ್ಲಿ ಬೆಳೆದು ನಿಂತ ತೋಟದ ವರ್ಣನೆ ಹೀಗಿದೆ :

‘ಬಗೆ ಬಗೆಯ ವೃಕ್ಷ ಸಂತತಿಗಳಿಂ ಲತೆಗಳಿಂ
ಚಿಗುರೆಲೆಯ ಚೂತಕ ದಾಳಿಂಬದಿಂ ರಂಭದಿಂ
ಮಘಮಘಿಪ ವರ ಸುಮಾವಳಿಗಳಿಂ ಫಲಗಳಿಂ ಕವಿದ ಶುಕ ಪಿಕಗಳಿಂದಾ
ಸೊಗಸಿನಿಂ ಪಾಡುತಿಹ ಸ್ವರಗಳಿಂ ಹರಿಗಳಿಂ
ಸುಗುಣತರವಾದ ಸುಸ್ಥಳಗಳಿಂ ಜಲಗಳಿಂ
ಮುಗುಳಬ್ಜ ಕೆರಗುವಮಿಳಿಂದಮಂ ಚಂದಮಂ ಕಂಡ ರತ್ಯಾನಂದದೀ
(ಕನ್ನಡ ಕೃಷ್ಣ ಸಂಧಾನ)

ಬಗೆ ಬಗೆತ ಬೂರು ಮರದ್ಯೆಕುಳೆಡ್ ಕೈಕುಳೆಡ್
ತೆಗ್‌ಳ್‌ದಿರೆ ಕುಕ್ಕು ಪೆಜತಾರೆಳೆಡ್ ಬಾರೆಳೆಡ್
ಮುಗುರು ಪೂ ಕಮ್ಮೆನದ ಕಾಯಿ ಪೆಲಕಾಯಿ ಪಲತನ್ಪಿ ಗಿಳಿ ಕೋಗಿಲೆಗುಳು
ಲೆಗಿ ಲೆಗಿತ್ ಪಾಡು ಸರ ಕೋಕೆಲೆಡ್ ತೋಕೊಲೆಡ್
ಬಿಗುಬಿಗುತ ಜಾಗಲೆನ ತಾರುಲೆಡ್ ನೀರ್ಲೆಡ್
ಮುಗುರು ತಮರೆಗ್ ಬೂರು ತುಂಬಿಲೆನ್ ದಂಬುಲೆನ ಪೊರ್ಲು ನಾಕುಳು ಸೂಯೆರ್s
(ತುಳು ಕಿಟ್ಲರಾಜಿ)

ಹೀಗೆ ತುಳುವಿನಲ್ಲಿ ಕೂಡಾ ಕನ್ನಡಕ್ಕೆ ಸಂವಾದಿಯಾಗಿ, ಪ್ರಾಸ ಅನುಪ್ರಾಸ, ಶಬ್ದಾಲಂಕಾರಗಳನ್ನು ಬಳಸಿ ಸಾಹಿತ್ಯವನ್ನು ಶ್ರೀಮಂತಗೊಳಿಸಬಹುದಾದ ಅನೇಕ ಉದಾಹರಣೆಗಳು ಈ ಕಾವ್ಯದಲ್ಲಿ ಸಿಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ದಕ್ಷಿಣ ಕನ್ನಡದ ಸಾಮಾನ್ಯ ಜನರು ಆಡುಭಾಷೆಯಲ್ಲಿ ಬರೆದ ಗ್ರಂಥ ಒಂದು ರೀತಿಯ ಜನಪರ ಕಾಳಜಿಯ ಕಾವ್ಯವಾಗಿ ಸಾಮಾನ್ಯ ಜನರ ಹತ್ತಿರ ಬಂದು ನಿಲ್ಲುತ್ತದೆ. ಸಂವಹನ ಕ್ರಿಯೆ ನೇರವಾಗಿ ಅನಾವರಣಗೊಳ್ಳುತ್ತದೆ. ರೂಢಿಯ ನೂರಾರು ಆಡುನುಡಿಗಳು ಕಾವ್ಯ ಸೌಂದರ್ಯವನ್ನು ಹೆಚ್ಚಿಸಿವೆ. ರಾಜ್ಯವನ್ನು ‘ಬೆನ್ನಿ’ ಎಂದು ಭಾಷಾಂತರಿಸಿದ್ದು ಒಂದು ರೀತಿಯಲ್ಲಿ ‘ಬೆನ್ನಿಗೂ’ ಜನರಿಗೂ ಹತ್ತಿರದ (ವ್ಯಕ್ತಿಗತ ಮತ್ತು ಕೌಟುಂಬಿಕ ನೆಲೆಯಲ್ಲಿ ‘ಎನ್ನ ಬೆನ್ನಿ, ಎಂಕಲ್ನ ಬೆನ್ನಿ) ಸಂಬಂಧವಿದ್ದರೂ, ಒಂದು ರಾಜ್ಯವನ್ನು ‘ಬೆನ್ನಿ’ – ‘ಕುಟುಂಬದ ಆಸ್ತಿ’ ಎಂಬ ಅರ್ಥದಲ್ಲಿ ಸೀಮಿತಗೊಳಿಸಲು ಬರುವುದಿಲ್ಲ. ‘ಬೆನ್ನಿ ಮೂಜಿ ಮುಟ್ಟು ಮಲ್ತಿ |ನಿನ್ನ ಕುಸೆಲ್ ಮಾತಗೊಲ್ಲ|ಪೊಣ್ಣುಲೆಡ ತೋಜಾಲ’ (ತುಳು)

ಕ್ಷೋಣಿಯನ್ನು ತ್ರಿಪಾದ ಗೈದ |ಜಾಣತನವನೆಲ್ಲಿ ಗೋಪ|ರಾಣಿಯಲಿ ತೋರು|(ಕನ್ನಡ)

‘ಪೆತ್ತ ಕೆರಿನಾ ದೋಸ ಬೆನ್ನಿದ |ಸುತ್ತ ಬಲಿಗೆತ್ತೊಂದು ತಿಕ್ಕಿನ |ತೀರ್ತ. ಮೀದವು ಪೋಪುನಿಂದವು, ಕೇಣ್ದ್ ಬಲರಾಮೆ|(ತುಳು)

‘ಸುರಭಿ ಹತ ಪಾತಕವು ಭೂಮಿಯ |ಚರಿಸಿ ಬಹುತೀರ್ಥಗಳ ಸ್ನಾನವ ವಿರಚಿಸಲು ಪರಿಣಾಮ ಹೊಂದುವುದೆನಲು ಹಲಧರನೂ’ (ಕನ್ನಡ) ಹೀಗೆ ‘ಬೆನ್ನಿ’ ಎಂಬ ತುಳು ಶಬ್ದ ಅಷ್ಟು ಸಮರ್ಪಕವೆನಿಸುವುದಿಲ್ಲ. ಇನ್ನು ಭಾಷಾಂತರದ ಹುಮ್ಮಸ್ಸಿನಲ್ಲಿ ಕವಿ ಕೆಳಗಿನ ಕನ್ನಡ ಪದಗಳಿಗೆ ತುಳುವಿನಲ್ಲಿ ಬಳಸಿದ ಪರ್ಯಾಯ ಪದಗಳು ಹೀಗಿವೆ.

ಅಚ್ಛುತ ನರ್ಗಂದಿದೇವೆರ್, ಮಾಜಂದಿನಯೆಇತ್ಯಾದಿ
ಭಾಸುರವದನ     ಕಲಕಲಮೆಂಚುಮೋನೆದ
ದಯಾದಿ          ಪಾಲ್ಗ್ಬೋಡಾದ
ನಳಿನಾಂಬಕ       ಪೂಕಳೆಕಣ್ಣಾಯೆ
ವನಜಾಕ್ಷ          ನೀರ್ತುಳಯಿಪುಟ್ಟಿಕಣ್ಣಾರ್
ಗರುಡವಾಹನ    ಗಿಡಿಮಿತಾರ್ನಾರ್
ಕಾಂಚನಪೀಠಕೇರಿಸಿದ      ಸಿಂಗದಣೆಗೇರಿಸಾಯೆ
ಅನಿಮಿಷರುನಗುವರು      ಮಿತ್ತೂರುತೆಳಿಪರ್
ಕ್ಷೋಣಿಭಾರಕರ   ಬೆನ್ನಿದುನ್ನದ
ಕಲ್ಮಶ್ಬಿಡ       ಕಳಂಕ್ಮದತುಪ್ಪಯೆ
ನಗಧರ  ಗಟ್ಟಲಕ್ಕಪತ್ನಾಯೆ
ಕಪಟನಾಟಕಿ      ಸುಳ್ಳುವಗೊಬ್ಬುದಾಯೆ

ಹೀಗೆ ಭಾಷಾಂತರದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಯಥಾವತ್ತಾಗಿ ಅಷ್ಟೇ ನಿಖಿರವಾಗಿ ಅರ್ಥ ಕೊಡುವ ಪದಗಳನ್ನು ಅಥವಾ ಪದಗುಚ್ಛಗಳನ್ನು ಆರಿಸುವುದು ಬಹಳ ಕಷ್ಟವೆಂಬುದು ತಿಳಿದುಬರುತ್ತದೆ. ಮೂಲಕ್ಕಿಂತಲೂ ಹೆಚ್ಚು ಅರ್ಥಪೂರ್ಣವಾದ ಕೆಲವು ಶಬ್ದಗಳು, ಉದಾಹರಣೆಗೆ ‘ಹರಿ ಹಂಚಾದಿರೆಂಬುದ’ ‘ಪೂಪಗರಿದಾಯಮ್ಮೆ’ ‘ನುಡಿಗೆ ಪ್ರತಿಕೃತಿಯಲ್ಲ’ ಎಂಬುದಕ್ಕೆ ‘ಪಾತೆರೊಗು ಪಗ್‌ರಿದ್ದಿ’ ಎಂಬ ಶಬ್ದಗಳ ಬಳಕೆ ತುಳುವಿನ ಸಹಜ ಸೌಂದರ್ಯವನ್ನು ಬಿಂಬಿಸುತ್ತವೆ.

ಒಟ್ಟಿನಲ್ಲಿ ತುಳುವಿಗೆ ಒದಗಿ ಬಂದ ಎರಡನೆಯ ಅತ್ಯುತ್ತಮ ಪ್ರಸಂಗ ಕೃತಿಯಾಗಿ ಇದು ಜನಮನ ಸೂರೆಗೊಂಡಿದೆ. ಇತ್ತೀಚೆಗೆ ಹಲವು ಕಡೆ ಈ ಪ್ರಸಂಗ ಪಠ್ಯದ ನಡೆಯಲ್ಲಿ ತುಳು ‘ಕಿಟ್ಣರಾಜಿ ಪ್ರಸಂಗ’ ತಾಳಮದ್ದಳೆ ನಡೆದಿದೆ, ನಡೆಯುತ್ತಿದೆ.

‘ಖರದೂಷಣೆರೆ ವಧೆ’ ಎಂಬೊಂದು ಪ್ರಸಂಗವನ್ನು ‘ಎಂಕಪ್ಪನವರ’ ಮಗ ‘ಕೃಷ್ಣ’ ಎಂಬ ಬ್ರಾಹ್ಮಣ ಕವಿಯೊಬ್ಬರು ಬರೆದಿದ್ದು ಅದು ಪ್ರಕಟಗೊಂಡಿಲ್ಲ. ‘ಅಂಗದ ಸಂಧಾನ’ ಪ್ರಸಂಗವನ್ನು ‘ಅಂಗದ ರಾಜಿ ಪರ್ಸಂಗ’ ಎಂದು ೧೯೫೪ರಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ರು ಬರೆದಿದ್ದರು. ಕಿನ್ನಿ ಮಜಲು ಈಶ್ವರ ಭಟ್ರು ‘ತುಳುಸೇತುಭಂದೋ’, ನಡುವ ಲಚ್ಚಿಲ್ ಸೀತಾರಾಮ ಆಳ್ವರು ‘ರಾವಣಮೋಕ್ಷೋ’ ಎಂಬ ಪೌರಾಣಿಕ ಪ್ರಸಂಗವನ್ನು [ಇವು ಇತ್ತೀಚಿನ ಪ್ರಸಂಗ ಕೃತಿಗಳು] ಅನಂತರಾಮ ಬಂಗಾಡಿಯವರು ‘ಸ್ವಾಮಿಭಕ್ತೆ ಅತಿಕಾಯ’ ಎಂಬ ಪ್ರಸಂಗವನ್ನು ಬರೆದಿದ್ದಾರೆ. ‘ಕೃಷ್ಣ ಪಾರಿಜಾತೊ’ ಎಂಬ ಪ್ರಸಂಗವನ್ನು ಎನ್.ನಾರಾಯಣ ಶೆಟ್ಟರು ಬರೆದಿದ್ದಾರೆ.