ತಾರಾನಾಥ ಬಲ್ಯಾಯ ವರ್ಕಾಡಿ

ಯಕ್ಷಗಾನ ರಂಗದ ಯುವ ಕಲಾವಿದನಾಗಿ ಎಳವೆಯಲ್ಲೇ ಪ್ರಸಂಗ ರಚನೆಗೂ ಕೈಯಿಕ್ಕಿದ ಪ್ರತಿಭಾಂತರಲ್ಲಿ ತಾರಾನಾಥ ಬಲ್ಯಾಯ ಪ್ರಮುಖರು. ಧರ್ಮಸ್ಥಳ ಮೇಳದಲ್ಲಿ ವೇಷಧಾರಿಯಾಗಿರುವ ಇವರು ಅಲ್ಲಿಯ ಯಕ್ಷಗಾನ ಕೇಂದ್ರದಲ್ಲಿ ನೃತ್ಯ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ‘ಪುರಾಣ ಬಾಲರು’ ಎಂಬ ಪೌರಾಣಿಕ ಕಥೆಗಳ ಗುಚ್ಛ ಇತ್ತೀಚೆಗೆ ಪ್ರಕಟಗೊಂಡಿದೆ.

ಅವರು ಬರೆದಿರುವ ತುಳು ಪ್ರಸಂಗಗಳು : ೧. ಪರಕೆದ ಪಿಂಗಾರ ೨. ದೇವೆರೆಗ್ ಅರ್ಪಣೆ ೩. ಪೂಜೆದ ತುಳಸಿ ೪. ಬೈದ್ಯೆರೆ ಲೀಲೆ ೫. ಜಾಗೆದ ಪಂಜುರ್ಲಿ ೬. ಬೊಳ್ಳಿ ದಾರಗೆ ೭. ಮಸಣದ ತುಳಸಿ

‘ಪರಕೆದೆ ಪಿಂಗಾರ’ ಪ್ರಸಂಗವನ್ನು ಅರುವ ಮೇಳದವರು ೧೭೫ ಬಾರಿ ಪ್ರದರ್ಶಿಸಿ ಹೆಚ್ಚಿನ ಪ್ರಚಾರ ನೀಡಿದರು. ಕುತ್ಯಾರುಬೀಡಿನ ನಾಸ್ತಿಕ ಅರಸು ರವಿರಾಜ ಹೆಗ್ಗಡೆ ಹಿರಿಯರು ಹೇಳಿದ ಹರಕೆಯನ್ನು ಪೂರೈಸದೆ ಚಾಮುಂಡಿ ದೈವದ ಕ್ರೋಧಕ್ಕೆ ಒಳಗಾಗಿ, ಅದರಿಂದ ಒದಗುವ ಅನರ್ತ ಪರಂಪರೆ, ಹರಕೆಯ ಹಿಂಗಾರ ಸಮರ್ಪಿಸಿದಲ್ಲಿಗೆ ಸುಖಾಂತಗೊಳ್ಳುವುದು ಈ ಪ್ರಸಂಗದ ತಿರುಳು.

ಇದರಲ್ಲಿ ರಾಣಿ ಸಂಪಿಗೆ ಹಾವು ಕಚ್ಚಿದ ಸಾಯುವ ಸಂದರ್ಭದಲ್ಲಿನ ಒಂದು ಪದ್ಯದಲ್ಲಿ ‘ರುದ್ರ’ ಶಬ್ದ ಹಲವು ಬಾರಿ ಬಳಕೆಯಾದ ಕೌಶಲ್ಯ ಹೀಗಿದೆ –

ಭಾಮಿನಿ

ರುದ್ರನಾಯಕಿಯಾಳ್ ರುದ್ರನ |
ರುದ್ರನಾಟಕೊಡ್ದಾನಿ ಬತ್ತಳ್ |
ರುದ್ರಭೂಮಿಮಡೆ ತನ್ನ ಕರ್ಲ್‌ದ ಕೊಡಿನ್ ನೆನೆತೊಂದು ||
ರುದ್ರ ರಾತ್ರೆಡ್ ರಾಣಿ ಜಿತ್ತ್‌ದ್
ರುದ್ರ ನಿದ್ರೆಡ್ ಇಪ್ಪುನಗಲಾ |
ರುದ್ರ ಸರ್ಪೆಲ ಬತ್ತ್‌ದಾಳೆನ ಜೂವೊಗೆತ್ತ್‌೦ಡ್ || ೧ ||

ಚಂದನೆಂಬ ಬಡ ಹುಡುಗ ರಾಜಗುರುವಿನಲ್ಲಿ ವಿದ್ಯಾಕಾಂಕ್ಷಿಯಾಗಿ ಹೋಗುವ ಸಂದರ್ಭದಲ್ಲಿ ಅವರ ಮಾತುಕತೆಯ ನಡುವೆ ಮಹಾಭಾರತದ ‘ಏಕಲವ್ಯ’ ಪ್ರಕರಣವನ್ನು ಎತ್ತಿಕೊಂಡಿರುವುದು ಈ ಪ್ರಸಂಗದ ಇನ್ನೊಂದು ಕೌಶಲ.

ಶಂಕರಾಭರಣ – ಏಕತಾಳ
ಹೀನ ಕುಲೊಟು ಪುಟ್ಟಿನಂಚಿ |
ಆಣ್ ಈಯ ನಿಕ್ಕ್ ವಿದ್ಯೆ |
ಯಾನ್ ಕಲ್ಪಾವುಜಿ ಮದಿಪು | ಕೇನ್ ಎನ್ನಲ || ೧ ||
ವಿದ್ಯೆಯಾಂಡ್ ಏಕಲವ್ಯ
ಗಿದ್ದಿಯಾಂಡ್ ನೆಸರ್ ಪುತ್ರ | ಗ್ವಿದ್ಯೆಲೋಕೊಡು || ೨ ||

‘ಪೂಜೆದ ತುಳಸಿ’ ಪ್ರಸಂಗದಲ್ಲಿ ಮಾನವನ ಸಹನೆ ಮತ್ತು ಅಸಹನೆಗಳ ಸಂಘರ್ಷದ ಕತೆಯಿದೆ. ಮಾಧವಿ ಎಂಬ ಸ್ವಾರ್ಥಿ ಹೆಣ್ಣು ತನ್ನ ಅಕ್ಕ ತುಳಸಿಯ ಪ್ರೇಮಿಯನ್ನು ಬಯಸಿ, ಅವನು ದಕ್ಕದೇ ಹೋದಾಗ ಅಕ್ಕನಿಗೆ ಬಗೆ ಬಗೆಯ ಕಷ್ಟ ಕೊಡುತ್ತಾಳೆ. ಆದರೆ ತುಳಸಿ ತಂಗಿಗೆ ಬೇಕಾಗಿ ತನ್ನ ಪ್ರೇಮವನ್ನು ತ್ಯಾಗ ಮಾಡಲು ಸಿದ್ಧಳಾಗುತ್ತಾಳೆ. ಕಡಿಮೆ ಪಾತ್ರಗಳಲ್ಲಿ ಮನೋಜ್ಞವಾಗಿ ಸಾಗುವ ಪ್ರಸಂಗವಿದು.

‘ಬೈದ್ಯೆರೆ’ ಲೀಲೆ’ – ಕೋಟಿ ಚೆನ್ನಯರು ಪ್ರಾಣ ತ್ಯಜಿಸಿದ ಬಳಿಕ ಅವರ ಮಾಯಾ ಮಹಿಮೆಯನ್ನು ತೋರುವ ಪ್ರಸಂಗ. ಅಳಿದ ಬೈದರ್ಕಗಳು ನಾಗಬ್ರಹ್ಮರ ಸನ್ನಿಧಿಯಲ್ಲಿ ಅಭಯ ಪಡೆದು ಮತ್ತೊಮ್ಮೆ ಭೂಮಿಗೆ ಬರುತ್ತಾರೆ ಎಂಬ ಒಂದು ಪಾಡ್ದನ ಕಥೆಯನ್ನು ಆಧರಿಸಿ ಇದನ್ನು ಬರೆಯಲಾಗಿದೆ. ಇದಕ್ಕೆ ಪೌರಾಣಿಕ ಹಿನ್ನೆಲೆಯನ್ನು ಜೋಡಿಸುವುದಕ್ಕಾಗಿ ಬ್ರಹ್ಮ – ನಾರದ, ನಾರದ – ಯಮ ಸಂವಾದಗಳನ್ನು ಅಳವಡಿಸಿಕೊಂಡಿದೆ. ಕಲಾವಿದರ ಅರ್ಥಗಾರಿಕೆಯ ಪ್ರಾವೀಣ್ಯ ತೋರಿಸಲು ಈ ಭಾಗದಲ್ಲಿ ವಿಫುಲ ಅವಕಾಶವಿದೆ. ಪ್ರಸಂಗದ ಉತ್ತರಾರ್ಧದಲ್ಲಿ ‘ಮಾಯಂದಾಳ್’ ದೈವದ ಕತೆಯಿದೆ. ಕೊನೆಗೆ ಮೂಲ್ಕಿಯಲ್ಲಿ ಗರಡಿ ಕಟ್ಟುವ ವಿಚಾರದಲ್ಲಿ ಕೋಟಿ – ಚೆನ್ನಯರು ಹಾಗೂ ಕಾಂತಬಾರೆ – ಬೂದಬಾರೆಯರಿಗೆ ನಡೆಯುವ ಕಾಳಗ, ಅಲ್ಲಿ ದೇವಿ ಪ್ರತ್ಯಕ್ಷವಾಗಿ ಅಭಯ ನೀಡುವ ಭಾಗಗಳನ್ನು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗದಿಂದ ಆಯ್ದು ಅದೇ ಪದ್ಯಗಳನ್ನು ತುಳುವಿಗೆ ರೂಪಾಂತರಿಸಲಾಗಿದೆ.

‘ದೇವೆರೆಗ್ ಅರ್ಪಣೆ’ ತುಳು ಪೌರಾಣಿಕ ಪ್ರಸಂಗ. ಮಹಾಭಾರತದ ಕರ್ಣನ ಆದ್ಯಂತ ಚರಿತ್ರೆ. ಇದು ‘ಮಹಾರಥಿ ಕರ್ಣ’ದ ತುಳು ಅನುವಾದ ಎನ್ನಬಹುದು. ಆದರೆ ತಾರಾನಾಥ ಬಲ್ಯಾಯರು ಪುರಾಣ ಕತೆಯನ್ನು ಹೊಸ ಶೈಲಿಯಲ್ಲಿ ದೃಶ್ಯರೂಪಕವನ್ನಾಗಿಸಿ ಪ್ರದರ್ಶಿಸಲು ಪ್ರಯತ್ನಿಸಿರುವುದು ಮೆಚ್ಚಬೇಕಾದ ಅಂಶ. ದುಯೋಧನನಿಂದ ರಣವೀಳ್ಯ ಪಡೆದು ಹೊರಟು ನಿಂತ ಶ್ರೀಕೃಷ್ಣ, ಕರ್ಣನನ್ನು ಕಣ್ಸನ್ನೆ ಮಾಡಿ ಕರೆಯುವಲ್ಲಿಂದ ಪ್ರಸಂಗ ಆರಂಭವಾಗುವುದು.

ಭೈರವಿ – ಝಂಪೆ

ಕೃಷ್ಣ    :           ಸೂರಿಯನ ಮಗೆ ಬಲಯ |
ಬಲಯೆನ್ನ ತೇರ್ ನೀ ಯೇರ್ ನಿನ್ನಡ ಮಸ್ತ್ |
ಪಾತೆರಿಯರುಂಡು || ೧ ||

ಕರ್ಣ      :           ಮುರಮಾರಿ ಯದುಕುಲೊತ |
ದೊರೆಯೀರ್ ಯೆಂಕುಂಡು |
ಗುರುಸಾಪೊ ಬೋಯಿಮಗೆ |
ಬರೊಡೆಂಚಯಾನ್ || ೨ ||

ಹೀಗೆ ಕೃಷ್ಣನು ಕರ್ಣನನ್ನು ಕರೆದು ಮಾತನಾಡುವಲ್ಲಿಂದ ಕತೆ ಹಿಂದಕ್ಕೆ ಓಡುತ್ತದೆ. ಕರ್ಣನ ಜನ್ಮರಹಸ್ಯವನ್ನು ತಿಳಿಸುವುದಕ್ಕೆ ಇಲ್ಲಿ ‘ಫ್ಲಾಶ್ ಬ್ಯಾಕ್’ ತಂತ್ರ ಅಳವಡಿಸಿರುವುದು ಸೊಗಸಾಗಿದೆ.

ದೂರ್ವಾಸ ಮಹರ್ಷಿಯಿಂದ ಮಂತ್ರ ಪ್ರಧಾನ, ಕುಂತಿ ಶಿಶುವನ್ನು ಗಂಗೆಯಲ್ಲಿ ತ್ಯಜಿಸುವುದು, ಅದನ್ನು ಅಥಿರಥ – ರಾಧೆಯರು ತಂದು ಸಾಕುವುದು – ಇವೆಲ್ಲಾ ರಂಗದಲ್ಲಿ ಕಾಣಿಸಿಕೊಂಡ ಬಳಿಕ ಮೊದಲಿನದೇ ದೃಶ್ಯ! ಜನ್ಮ ರಹಸ್ಯ ತಿಳಿದ ಕರ್ಣನ ದಯನೀಯ ಸ್ಥಿತಿ. ಕರ್ಣಭೇದನ; ಕಡೆಗೆ ಕರ್ಣಾರ್ಜುನರ ಕಾಳಗದೊಂದಿಗೆ ಕರ್ಣನ ಅಂತ್ಯ.

ಕಥಾರಂಭದಲ್ಲಿ ಬರುವ ಸ್ವಂತದ ರಚನೆಯ ಒಂದು ಭಾಮಿನಿ ಪದ್ಯ ಹೀಗಿದೆ –

ನಂಜಿಕಂಟೆಲ್‌ದಾಯ ಮಗೆ | ಮುಗೊ |
ಟೊಂಜಿದಾಡೆಲ ನೇಲ್ಯ ಯೆಚ್ಚದ |
ಬಂಜಿದಾಯನ್ ಸುರುಟು ಬೊಕ್ಕವರ್ಕಾಡಿ ಸುಬ್ಬನ್‌ಲ ||
ಕಂಜಪೀಠನ ರಾಣಿನ್‌ಲ ಮನ |
ದಿಂಜ ಸುಗಿತ್‌ದ್ ಧರ್ಮತಳೊದ |
ಮಂಜುನಾಥನ ದಯೆಟ್ ಪನ್ಪಿನ ಕಥೆನ್ ಕೇಣ್‌ಲೆಯೆ || ೧ ||

ಈ ಪ್ರಸಂಗದ ಹೆಚ್ಚಿನ ಪದ್ಯಗಳು ಕನ್ನಡದ ನೇರ ಅನುವಾದವಾಗಿವೆ.

ಉದಾ :

ಇತ್ತಲು ಕರ್ಣಾಜುನರಿಗೆ | ಹತ್ತಿತ್ತು ಕಾಳಗ |
ಈ ಪದ್ಯದ ಅನುವಾದ ನೋಡಬಹುದು.

ಕಂದ

ಪತ್ತ್‌೦ಡ್ ಕರ್ಣಾರ್ಜುನೆರೆಗ್ |
ಕಸ್ತ್ ಕಾಳಗ ಭೂಮಿ ಬಾಯಿ ಬುಡ್‌೦ಡಪಗಿಂಚ ||
ಮಸ್ತ್ ಪಾತೆರ್ಯೆರಿರುವೆರ್ ಗತ್ತ್‌ಡೆನೆ ಸುರುಮಲ್ತ್
ದುರ್ಜನೆಯೆಂದೆ ಕರ್ನಾಗ್ || ೧ ||

ಏಕತಾಳ

ಪಗರಿನ್ ಬುಡ್ಪಿನ ಬಿಸಯೊ | ಬೋ |
ಯ್ಮಗ ಕೇಪಲ ಆವೊ || ಅಗಪುಲಯಿಲ್ಲಡೆ ಬೀರ |
ತಯಿ | ನಗ ಕಾಪುವೆರವು ಯೇರಾ || ೧ ||

ಲಾಗಿಯಡಯ್ಯೋ ಯೇರ್ | ನಿನ |
ಭಾಗೊಡು ರಚ್ಚಣೆದಾರ್ ||
ಆ ಗುರುವೊಗು ತೋಜವೆಯ | ಬಲ |
ಬೇಗೊಡು ತಡಿಪೆರೆ ಯೀಯ || ೨ ||

ತಾರಾನಾಥ ಬಲ್ಯಾಯರು ‘ದೇವಶಿಲ್ಪಿ ವಿಶ್ವಕರ್ಮ’ ಮುಂತಾದ ಕೆಲವು ಕನ್ನಡ ಪ್ರಸಂಗಗಳನ್ನೂ ಬರೆದಿದ್ದಾರೆ. ಕಾಲ್ಪನಿಕ ಹಾಗೂ ಪುರಾಣಾಧಾರಿತ ಪ್ರಸಂಗ ರಚನೆಯಲ್ಲಿ ಅವರ ಸಾಧನೆ ಶ್ಲಾಘನೀಯ.

ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ

ತೆಂಕು ಮತ್ತು ಬಡಗು ತಿಟ್ಟಿನ ಮೇಳಗಳಲ್ಲಿ ವೇಷಧಾರಿಯಾಗಿದ್ದು ತಾಳಮದ್ದಳೆ ಕೂಟಗಳಲ್ಲಿ ನುರಿತ ಅರ್ಥಧಾರಿಯೂ ಆಗಿರುವ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ಪ್ರಸಂಗ ರಚನೆಯಲ್ಲೂ ಸಿದ್ಧಹಸ್ತರು. ಮೇಳದ ಒಟ್ಟು ವ್ಯವಸ್ಥೆ, ಕಲಾವಿದರ ಸಾಮರ್ಥ್ಯ ಮತ್ತು ಪ್ರೇಕ್ಷಕರ ಅಭಿರುಚಿಗೆ ಒಗ್ಗಿಕೊಳ್ಳುವ ದೃಷ್ಟಿಯಿಂದ ಅವರು ಬರೆದಿರುವ ಪ್ರಸಂಗಗಳು – ಕುಜುಂಬ ಕಾಜವ ಮತ್ತು ಬೊಳ್ಳಿ ದಂಡಿಗೆ. ‘ಗುರುಕಾನಿಗೆ’ ಅಥವಾ ‘ಪಾಂಚಜನ್ಯ’ ಎಂಬ ಪೌರಾಣಿಕ ಪ್ರಸಂಗವನ್ನೂ ತುಳುವಿನಲ್ಲಿ ಅವರು ಬರೆದಿದ್ದಾರೆ. ವಿಷಮ ಸಮರಂಗ, ಸಂಕರ್ಷಮ, ಕನ್ಯಾಂತರಂಗ ಇತ್ಯಾದಿ ಅವರ ಕನ್ನಡ ಪ್ರಸಂಗಗಳು.

‘ಕುಜುಂಬ ಕಾಜವ’ ಪ್ರಸಂಗದಲ್ಲಿ ಹೀನ ಕುಲದಲ್ಲಿ ಬಡವನಾಗಿ ಹುಟ್ಟಿ ಬೆಳೆದ ‘ಮಾಯಿಲ’ನೆಂಬ ಸ್ವಾಮಿನಿಷ್ಠ ಸೇವಕನ ಕತೆಯಿದೆ. ಸೋದರಮಾವನ ಮಗಳನ್ನು ತನಗೆ ಕೊಡದೆ, ಬೇರೊಬ್ಬನಿಗೆ ಮದುವೆ ಮಾಡಿಸಿದ ಕಾರಣಕ್ಕೆ ಕೋಪಿಸಿಕೊಂಡು, ತನ್ನ ಮಾವ ಹಾಗೂ ಆ ಹುಡುಗಿಯನ್ನು ಮದುವೆಯಾದ ಅರಸು ಮಗನ ವಿರುದ್ಧ ಹಗೆ ಸಾಧಿಸುವ ಕಾಂಜವನ ದುಷ್ಕೃತ್ಯವೂ ಇದರಲ್ಲಿದೆ. ‘ವಾಲಿ ಸುಗ್ರೀವರ ಕಾಳಗ’ ಪ್ರಸಂಗದ ಪೌರಾಣಿಕ ತುಣುಕೊಂದನ್ನು ನಡುವೆ ಸೇರಿಸಿರುವುದು ಪ್ರಸಂಗಕರ್ತರಿಗೆ ಸಾಂಪ್ರದಾಯಿಕ ಯಕ್ಷಗಾನದ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ.

‘ಬೊಳ್ಳಿದಂಡಿಗೆ’ ಪ್ರಸಂಗದ ಪದ್ಯಗಳು ಕನ್ನಡದಲ್ಲಿದ್ದು, ಅದನ್ನು ಮೇಳದವರು ತುಳುವಿನಲ್ಲಿ ಆಡುತ್ತಿದ್ದರು. ಇಲ್ಲಿ ಸಾತ್ವಿಕ ಸ್ವಭಾವದ ರಾಜಕುಮಾರನೊಬ್ಬ ತಮ್ಮನ ರಾಜ್ಯ ಮೋಹಕ್ಕೆ ಬಲಿಯಾಗಿ ಸರ್ವಸ್ವವನ್ನೂ ಅವನಿಗೊಪ್ಪಿಸಿ ದೇಶಾಂತರ ತೆರಳುತ್ತಾನೆ. ಆತನ ಪತ್ನಿ ಹೇಮಾಂಬಿಕೆ ಅನುಭವಿಸುವ ಕಷ್ಟಕೋಟಲೆಗಳು. ಸಹೋದರನಿಗೆ ಹೆಣ್ಣು ಕೊಟ್ಟ ವೈಶ್ಯ ಧನಪಾಲ ಶೆಟ್ಟಿಯ ಹಣದ ದಾಹ, ಕ್ಷುಲ್ಲಕ ಕಾರಣಕ್ಕಾಗಿ ಸೇಡು ತೀರಿಸಲು ಹೋಗಿ ಅಪಾಯದಲ್ಲಿ ಸಿಲುಕುವ ಶತ್ರುವರ್ಮ – ಹೀಗೆ ವಿಭಿನ್ನ ಪಾತ್ರಗಳ ವಿಚಿತ್ರ ಘಟನೆಗಳನ್ನು ಒಟ್ಟು ಮಾಡಿ ಹೆಣೆದ ಒಂದು ಸಾಮಾಜಿಕ ಕತೆಗೆ ಯಕ್ಷಗಾನದ ಮೆರುಗು ನೀಡುವ ಪ್ರಯತ್ನ ಈ ಪ್ರಸಂಗದಲ್ಲಿದೆ.

‘ಗುರುಕಾನಿಗೆ’ ಅಥವಾ ‘ಪಾಂಚಜನ್ಯೊ’ ಪ್ರಸಂಗದ ಕತೆ ಪೌರಾಣಿಕ. ಇದು ಈ ಮೊದಲೇ ಕನ್ನಡದಲ್ಲಿ ಚಾಲ್ತಿಯಿರುವ ಪ್ರಸಂಗ, ವಿಶ್ವನಾಥ ಶೆಟ್ಟರು ಇದನ್ನು ತುಳುವಿನಲ್ಲಿ ಬರೆದಿದ್ದಾರೆ. ಶ್ರೀಕೃಷ್ಣ ಬಲರಾಮರು ತಮ್ಮ ಗುರು ಸಾಂದೀಪನಿಯ ಮಗನನ್ನು ಪಂಚಜನನೆಂಬ ರಾಕ್ಷಸನು ಕೊಂದಾಗ, ಅವರನ್ನು ವಧಿಸಿ ಯಮಧರ್ಮವನ್ನು ಸೋಲಿಸಿ ಆ ಗುರುಪುತ್ರನಿಗೆ ಪುನರ್ಜನ್ಮ ನೀಡಿ ಗುರುವಿಗೆ ದಕ್ಷಿಣೆ ರೂಪದಲ್ಲಿ ಒಪ್ಪಿಸುವುದು ಇದರ ಕಥಾವಸ್ತು. ಸಾಂದೀಪನಿಯು ಕೃಷ್ಣನನ್ನು ಪ್ರಶಂಸಿಸುವ ಒಂದು ಪದ್ಯ ಹೀಗಿದೆ –

ಭಾಮಿನಿ

ಹಿರಿತನೊಡು ಈ ಬ್ರಹ್ಮ ನಮ್ಮೆಗೆ |
ಸಿರಿಟ್ ಸಿರಿದೇವಿಗ್ ಕಂಡನಿ |
ಕರುಂಬು ಬಿರುವೆನೆ ನಿನ್ನ ಮಗೆ ನನ ಗುರುತನೊಟು ತೂಂಡ ||
ಗುರುಲ ಈ ಬೆಮ್ಮೆರೆನ ಸೃಷ್ಟಿಗ್ |
ಗರುವ ಪಡೆವಯೆ ನಿಕ್ಕ್ ಗುರುಪಂದ್ |
ಪುರಪು ಕೇಂಡೆನೆ ಯಾವು ಇಜ್ಜಿಯ ಗುರುವ ಋಣ ನಿಕ್ಕ್ || ೧ ||

ಇಲ್ಲಿ ‘ಹಿರಿಯತನದಲಿ ನೋಡೆಸರಸಿಜೋದ್ಭವ ಪಿತನು….’ ಎಂಬ ದಾಸರ ಪದದ ಛಾಯೆಯಿದೆ. ಯಮಧರ್ಮನು ಗುರುಪುತ್ರನ ಆತ್ಮವನ್ನು ಒಪ್ಪಿಸುವ ಪದ್ಯ –

ಭಾಮಿನಿ

ಮರಿತ ಪಜೆಟೇ ಜೈದಿದೇವೆರೆ |
ತೆರಿಜಿ ಸತ್ಯೊನು ಮಾಪು ಮಾಲ್ಪುಲೆ
ಒರಿತ್ ಕಾಪುಲೆ ಧರ್ಮನಿರೆಪಾಲೆ ಜಯತು ಜಯ ಪಂದ್ ||
ಕರಿದ್ ಪೋಯಿನ ಬಾಲೆದಾತ್ಮೊನು |
ಕೊರಿಯೆ ಶ್ರೀಗೋಪಾಲ ಕೃಷ್ಣಗ್ |
ಗುರುಕು ಕಾನಿಗೆ ಸಂದಯೆ ಲೋಕ ಗುರು ಕೃಷ್ಣೆ || ೧ ||

ವಿಶ್ವನಾಥ ಶೆಟ್ಟರ ತುಳು ಪ್ರಸಂಗಗಳು ಮಿತ ಸಂಖ್ಯೆಯವು. ಅವರ ಕನ್ನಡ ಪ್ರಸಂಗಗಳು ಗುಣಮಟ್ಟದಲ್ಲಿ ಮೇಲೆ ನಿಲ್ಲುತ್ತವೆ. ಪುರಾಣದ ಬೇರೆ ಬೇರೆ ಘಟನೆಗಳನ್ನು ಆಯ್ದು ಬರೆದ ಅವರ ಹಲವು ಪ್ರಸಂಗಗಳನ್ನು ತೆಂಕು ಮತ್ತು ಬಡಗು ತಿಟ್ಟಿನ ವಿವಿಧ ಮೇಳಗಳು ಪ್ರದರ್ಶಿಸುತ್ತಿವೆ. ‘ಕನ್ಯಾತರಂಗ’ ಹೊಸನಗರ ಮೇಳದವರ ಮೂಲಕ ಬಹು ಜನಪ್ರಿಯಗೊಂಡಿದೆ.

ಇತರ ಪ್ರಸಂಗಕರ್ತರು

ಇತ್ತೀಚಿನ ತುಳು ಪ್ರಸಂಗಕರ್ತರಲ್ಲಿ ತುಳುಭಾಷೆಯ ಸೊಗಸು, ಸಾಹಿತ್ಯದ ಸತ್ವ, ಪ್ರಸಂಗ ಮಾಹಿತಿ ಮತ್ತು ರಂಗತಂತ್ರ – ಇವು ನಾಲ್ಕೂ ಇದ್ದು ಪ್ರಸಂಗರಚನೆ ಮಾಡಿದವರು ವಿರಳ. ಹಾಗಾಗಿ ಅವು ಒಂದೆರಡು ವರ್ಷಗಳಿಂದ ಹೆಚ್ಚು ಬಾಳಿಕೆ ಬರಲಿಲ್ಲ. ಅಮೃತ ಸೋಮೇಶ್ವರರ ಕೋಟಿ ಚೆನ್ನಯ, ಪುತ್ತೂರ್ದ ಮುತ್ತು, ಎನ್.ನಾರಾಯಣ ಶೆಟ್ಟಿ ಶಿಮಂತೂರು ಅವರ ಸೊರ್ಕುದ ಸಿರಿಗಿಂಡೆ, ಬಿರ್ದ್‌ದ ಬೈರವೆರ್ (ಬಿ. ರಾಮ ಕಿರೋಡಿಯನ್ ಅವರ ನಾಟಕ ಆಧಾರಿತ) ಮತ್ತು ಕೃಷ್ಣ ದೇವರಾಯ – ಇವು ಉತ್ತಮ ತುಳು ಪ್ರಸಂಗಗಳ ಸಾಲಿಗೆ ಸೇರುತ್ತವೆ. ಸೀತಾನದಿ ಗಣಪಯ್ಯ ಶೆಟ್ಟರ ಪಂಜುರ್ಲಿ ಪ್ರತಾಪ, ಕೋಡ್ದಬ್ಬು ತನ್ನಿಮಾನಿಗ, ಸೊನ್ನೆ, ಸೈರಗೆ, ಜಾಲಕೊರತಿ – ಇತ್ಯಾದಿ ಜಾನಪದ ಮೌಲ್ಯದ ಕೃತಿಗಳು. ತಲೆಂಗಲ ರಾಮಕೃಷ್ಣ ಭಟ್ಟರ ‘ಚೆನ್ನೆದ ಮಣೆ’, ಮಂದಾರ ಕೇಶವ ಭಟ್ಟರ ‘ಸತ್ಯವತಿ ಶಪಥ’, ದಿನಕರ ಎಸ್‌.ಪಚ್ಚನಾಡಿಯವರ ‘ಮಾನಾದಿಗೆದ ಮಣೆ’, ಕೆಲಿಂಜ ಸೀತಾರಾಮ ಆಳ್ವರ ‘ರಾವಣ ಮೋಕ್ಷೊ’, ‘ಏಕನಿಕರ್ಣೆ’ (ಮೂಲಕಾವ್ಯ ಮಂದಾರ ಕೇಶವ ಭಟ್) – ಇವು ತುಳುವಿನಲ್ಲಿ ಉಲ್ಲೇಖಿಸಬಹುದಾದ ಕೆಲವು ಗಮನಾರ್ಹ ಪ್ರಸಂಗಗಳು.

ಗುರುವಪ್ಪ ಬಾಯಾರು ಬರೆದ ಗಟ್ಟದ ಗರುಡೆ, ಕೀರ್ತಿ ಚಂದ್ರಿಕೆ ಮತ್ತು ವಜ್ರಕೋಗಿಲೆ ಪ್ರಸಂಗಗಳು ಸಿನಿಮಾ ಮಾದರಿಯ ಕತೆಗಳಾದರೂ ಹೆಸರಿನ ಬಲದಿಂದ ಹೆಚ್ಚು ಪ್ರಯೋಗಗೊಂಡಿವೆ. ದಿ | ಬೆಳ್ಮಣ್ ಶೇಖರ ಶೆಟ್ಟರ ‘ಮಾಮಿಪದ್ದಕ್ಕೆ’ ಭರ್ಜರಿ ಪ್ರಚಾರ ಪಡೆದ ತುಳು ಪ್ರಸಂಗ, ಕುಳಾಯಿ ಮಾಧವ ಭಂಡಾರಿ (ದಾಳಿಂಬ ದಾರಗೆ, ಅಬ್ಬರದ ಬಬ್ಬರ್ಯೆ, ಮುಂಡೋವುದ ಪುಂಡದೆ), ಮಧೂಕುಮಾರ್ ನಿಸರ್ಗ (ನಾಡ ಕೇದಗೆ, ಕೋಟಿ ಚೆನ್ನಯೆ, ಕರ್ಣಾರ್ಜುನ ಕಾಳಗೊ), ಅಗರಿ ರಘುರಾಮ ಭಾಗವತ (ನಾಗ ಕೊರಗೆ), ಬಿ.ನಾರಾಯಣ ನಾಯಕ್ ಸಚ್ಚರಿಪೇಟೆ (ಸಾದ್ವಿ, ಸುಗುಣೆ, ಶ್ರೀಂತ್ರಿದ ಚಂಚಲೆ), ಸಂಜಯಕುಮಾರ್ (ಗೆಜ್ಜೆಪೂಜೆ), ಸರಪಾಡಿ ಅಶೋಕ ಶೆಟ್ಟಿ (ಸರಪಾಡಿದ ಸರ್ಪೆ), ದೇವದಾಸ ಈಶ್ವರಮಂಗಲ (ಮಲ್ಲಿಗೆ – ಸಂಪಿಗೆ), ಪುತ್ತೂರು ನಾರಾಯಣ ಹೆಗ್ಡೆ, ಎಂ.ಅಂಬು ಶೆಟ್ಟಿ, ಬೆಳ್ಮಣ್ ಹರಿದಾಸ ಉಡುಪ, ರವಿಕುಮಾರ್ ಸುರತ್ಕಲ್, ಬಸವರಾಜ ಶೆಟ್ಟಿಗಾರ್, ಹರೀಶ್ ಶೆಟ್ಟಿ ಸೂಡ, ಪೊಳಲಿ ಕೇಶವ ಶೆಟ್ಟಿ, ಅಜಲ, ಅರುವ ನಾರಾಯಣ ಶೆಟ್ಟಿ, ಪಿ.ಕೆ.ಮಹಮ್ಮದ್ ಆರ್ಲಪದವು, ಪ್ರದೀಪ ಶೆಟ್ಟಿ ಕೋಡು – ಹೀಗೆ ಬಹಳಷ್ಟು ಲೇಖಕರು ತುಳು ಪ್ರಸಂಗಕರ್ತರ ಸಾಲಿಗೆ ಸೇರುತ್ತಾರೆ.

ಪುರಾಣ ಪ್ರಸಂಗಗಳ ರೂಪಾಂತರ ಅಥವಾ ಜಾನಪದ ಕತೆಗಳನ್ನು ಆಧರಿಸಿದ ಪ್ರಸಂಗಗಳ ಹೊರತಾಗಿ ರಚನೆಯಾದ ಹೆಚ್ಚಿನ ತುಳು ಪ್ರಸಂಗಗಳಲ್ಲಿ ಕತೆಯ ಸೂತ್ರ ಬಹಳ ದುರ್ಬಲವಾಗಿರುತ್ತದೆ. ಅವುಗಳಲ್ಲಿ ವಿಶೇಷ ಸಂದೇಶವೂ ಇರುವುದಿಲ್ಲ. ಚಂದಮಾಮಾದಲ್ಲಿ ಬರುವ ರೋಚಕ ಕತೆಗಳ ಮಾದರಿಯಲ್ಲಿ ಬರೆದ ಕೆಲವು ಪ್ರಸಂಗಗಳಲ್ಲಿ ಕೇವಲ ಪ್ರದರ್ಶನದ ತೆವಲು ಕಂಡು ಬರುವುದಲ್ಲದೆ, ಅದು ಭವಿಷ್ಯಕ್ಕೆ ಸಂಗ್ರಾಹ್ಯವಾಗಿ ಉಳಿಯಬೇಕೆಂಬ ಮಹತ್ವಾಕಾಂಕ್ಷೆ ಇದ್ದಂತಿಲ್ಲ. ಕೆಲವು ಉದಯೋನ್ಮುಖ ಪ್ರಸಂಗಕರ್ತರು ತಾವೆಷ್ಟು ಬರೆದಿದ್ದೇವೆ ಎಂದು ಲೆಕ್ಕ ಹಾಕುವರಲ್ಲದೆ, ಹೇಗೆ ಬರೆದಿದ್ದೇವೆ ಎಂಬ ಗಂಭೀರ ಚಿಂತನೆ ಮಾಡುವುದಿಲ್ಲ.

ಈಚೆಗೆ ತುಳು ಪ್ರಸಂಗಗಳು ಇನ್ನೊಂದು ವಿಶೇಷವೆಂದರೆ ಪ್ರಸಂಗ ರಚಿಸುವುದು ಒಬ್ಬರಾದರೆ, ಅದಕ್ಕೆ ಕಥೆ ಒದಗಿಸುವಾತ ಇನ್ನೊಬ್ಬ. ಡಿ. ಮನೋಹರ್ ಕುಮಾರ್, ವಿಶ್ವನಾಥ ಭಂಡಾರಿ ಮೂಡಬಿದ್ರೆ, ಕುಡ್ಪು ನಾರಾಯಣ ಬಂಗೇರ, ಪಾರ್ವತಿ ಪಿ. ಮೂಡುಶೆಡ್ಡೆ, ದಯಾಮಣಿ ಶೆಟ್ಟಿ, ಕಾವೂರು ಕೇಶವ, ದಿ | ನಾರಾಯಣ ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ – ಹೀಗೆ ಕೆಲವರು ತುಳು ಯಕ್ಷಗಾನದ ಕಥಾಸಂಗ್ರಹಕರ ಪಟ್ಟಿಗೆ ಸೇರುತ್ತಾರೆ. ಎಂ.ಕೆ. ರಮೇಶಾಚಾರ್ಯ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಮಧುಕುಮಾರ್ ನಿಸರ್ಗ ಮೊದಲಾದವರು ಪದ್ಯಗಳನ್ನು ರಚಿಸಿಕೊಡುತ್ತಾರೆ.

ಸಾಮಾಜಿಕ ಜಾಗೃತಿ ಹಾಗೂ ಜನಶಿಕ್ಷಣ ನೀಡುವುದಕ್ಕಾಗಿ ಯಕ್ಷಗಾನ ಮಾಧ್ಯಮವನ್ನು ಬಳಸಿಕೊಳ್ಳುವ ಒಂದು ಸ್ತುತ್ಯ ಪ್ರಯತ್ನ ಈಗ ನಡೆಯುತ್ತಿದೆ. ಇದರಿಂದ ಜನಸಾಮಾನ್ಯರೂ ಕೆಲವು ಸಮಾಜಬಾಹಿರ ಶಕ್ತಿಗಳಿಂದ ಎಚ್ಚೆತ್ತುಕೊಳ್ಳಲು ಸಾಧ್ಯವಾಗಿದೆ. ಹಾಗೆಯೇ ಸಮಾಜದ ಅಭಿವೃದ್ಧಿಗೆ ಪೂರಕವಾದ ವಿಚಾರಗಳನ್ನೂ ತಿಳಿಯುವಂತಾಗಿದೆ. ಕೃಷಿ, ಸಾಕ್ಷರತೆ ಇತ್ಯಾದಿಗಳ ಕುರಿತಾಗಿ ಅಮೃತ ಸೋಮೇಶ್ವರ, ಹೊಸ್ತೋಟ ಮಂಜುನಾಥ ಭಾಗವತ, ಚಂದ್ರಶೇಖರ ದಾಮ್ಲೆ, ಗುರುಲಿಂಗಯ್ಯ ಬಲ್ಲಾಳ್ ಮೊದಲಾದವರು ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಜನಜಾಗೃತಿ ಮೂಡಿಸಿದ್ದಾರೆ. ಶತಮಾನದ ಭಯಾನಕ ರೋಗ ಏಡ್ಸ್ ಬಗೆಗೆ ಎಚ್ಚರಿಕೆ ಮೂಡಿಸುವುದಕ್ಕಾಗಿ ಭಾಸ್ಕರ ರೈ ಕುಕ್ಕುವಳ್ಳಿ ಬರೆದ ‘ಘೋರ ಮಾರಕ’ ಕಾಲ್ಪನಿಕ ಕತೆಗೆ ಅಮೃತ ಸೋಮೇಶ್ವರ ಪದ್ಯ ರಚಿಸಿದ್ದು ಅದು ದೇಶದ ವಿವಿಧೆಡೆ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದೆ. ಯಕ್ಷಗಾನದ ಎಲ್ಲಾ ಬಗೆಯ ಸಾಂಪ್ರದಾಯಿಕ ವೇಷಗಳಿಗೆ ಅವಕಾಶ ಕಲ್ಪಿಸಿರುವ ‘ಘೋರಮಾರಕ’ ತುಳುಭಾಷೆಯಲ್ಲೂ ಪ್ರದರ್ಶನಗೊಂಡಿದೆ. ಇದೇ ಏಡ್ಸ್ ರೋಗವನ್ನು ವಸ್ತುವಾಗಿರಿಸಿ ಕೆ.ಎಸ್. ಮಂಜುನಾಥರು ‘ಮಹಾಮಾರಿ ರಾಜಯಕ್ಷ’ ಮತ್ತು ದಿವಾಕರ ಹೆಗ್ಡೆಯವರು ‘ಶೀಲ ಸಂಕ್ರಾಂತಿ’ ಪ್ರಸಂಗಗಳನ್ನು ಬರೆದಿದ್ದಾರೆ. ‘ಇಳೆಯಣ್ಣನ ಕಥೆ’ ಎಂಬ ಪ್ರಸಂಗವೂ ಚಾಲ್ತಿಯಲ್ಲಿದೆ.

ಯಕ್ಷಗಾನದ ಪರಂಪರೆಯ ಬಗ್ಗೆ ಮಾತನಾಡುವವರಿಗೆ ತುಳು ಯಕ್ಷಗಾನವೆಂದರೆ ಅಷ್ಟಕ್ಕಷ್ಟೆ, ವಿಮರ್ಶಕರಿಗೂ ಈಗಿನ ತುಳು ಪ್ರಸಂಗಗಳ ಬಗೆಗೆ ಉತ್ತಮ ಅಭಿಪ್ರಾಯವಿಲ್ಲ. ಇದಕ್ಕೆ ಕಾರಣ ಇಲ್ಲದಿಲ್ಲ. ಮೇಳಗಳ ಸಂಖ್ಯೆ ಹೆಚ್ಚಿದಂತೆ, ಒಂದರ ಮೇಲೊಂದರಂತೆ ತುಳು ಪ್ರಸಂಗಗಳೂ ರಚಿಸಲ್ಪಡುತ್ತಿವೆ. ಹೆಚ್ಚಿನ ಕತೆಗಳಿಗೆ ತಲೆ ಬುಡ, ತಾಳ – ಮೇಳ, ನಿರ್ದಿಷ್ಟ ನೋಟ ಇರುವುದಿಲ್ಲ. ಕೆಲವು ಪ್ರಸಂಗಗಳಲ್ಲಿ ಕತೆಯ ಶಿಲ್ಪ ತೀರಾ ಸಡಿಲವಾಗಿರುತ್ತದೆ. ಇವುಗಳಲ್ಲಿ ತುಳುನಾಡಿನ ನೈಜ ಸಂಸ್ಕೃತಿಯ ಚಿತ್ರಣವೂ ಕಡಿಮೆಯೇ. ಮೌಲ್ಯ ಕಲ್ಪನೆಯ ಅಭಾವ, ಅಗ್ಗದ ಅಶ್ಲೀಲ ಹಾಸ್ಯ, ಅಸಂಬದ್ಧ ಸನ್ನಿವೇಶ, ವರ್ಗ – ಜಾತಿಗಳ ಸಂಘರ್ಷ, ಸಿನಿಮೀಯ ಓಟ – ಇತ್ಯಾದಿಗಳು ಹುಲುಸಾಗಿ ಕಾಣಸಿಗುತ್ತವೆ.

ತುಳು ಜನಪದ ಸಾಹಿತ್ಯದಲ್ಲಿ ಇನ್ನೂ ಅದೆಷ್ಟೊ ಸತ್ವಯುತ ಕತೆಗಳಿವೆ. ಅವುಗಳನ್ನು ಆರಿಸಿ ಉತ್ತಮ ಪ್ರಸಂಗವನ್ನಾಗಿಸಿ ತುಳುನಾಡಿನ ಮೂಲ ಸಂಸ್ಕೃತಿಯನ್ನು ಹೆಚ್ಚು ಪ್ರಸಂಗವನ್ನಾಗಿ ತುಳುನಾಡಿನ ಮೂಲ ಸಂಸ್ಕೃತಿಯನ್ನು ಹೆಚ್ಚು ಪ್ರಭಾವಶಾಲಿಯಾಗಿ ಯಕ್ಷಗಾನದ ಮೂಲಕ ಪ್ರಚುರಪಡಿಸಲು ಅವಕಾಶವಿದೆ. ಪೌರಾಣಿಕ ಕತೆಗಳನ್ನೂ ತುಳುಭಾಷೆಯಲ್ಲಿ ಆಡಬಹುದಾಗಿದೆ. ಯಾವ ಕ್ಷೇತ್ರದಲ್ಲಾಗಲಿ ಸತ್ವಯುತವಾದುದಕ್ಕೆ ಮಾತ್ರ ಉತ್ತಮ ಭವಿಷ್ಯವಿದೆ ಎನ್ನಬಹುದು. ಯಕ್ಷಗಾನ ಪ್ರದರ್ಶನಗಳ ಗುಣಮಟ್ಟ ಅಧೋಗತಿಗಿಳಿದರೆ ಜನರೇ ಅದನ್ನು ದೂರ ಮಾಡುವರೆಂಬುದನ್ನು ಮರೆಯಲಾಗದು.

ತುಳು ಪ್ರಸಂಗಗಳ ರಂಗಪ್ರಯೋಗ

ಯಕ್ಷಗಾನದ ಯಾವುದೇ ನೂತನ ಪ್ರಸಂಗ ರಂಗಸ್ಥಳದಲ್ಲಿ ಪ್ರಯೋಗಗೊಂಡಾಗ ಕೆಲವು ಸನ್ನಿವೇಶಗಳು ಪ್ರಸಂಗಕರ್ತರ ಊಹನೆಗೂ ಮೀರಿದ ಚಿತ್ರಣ ನೀಡುವುದಿದೆ. ಅಂತೆಯೇ ಕೆಲವು ಬಾರಿ ಅವನ ಉದ್ದೇಶಕ್ಕೆ ವಿರುದ್ಧವಾಗಿ ತುಂಬಾ ಕಳಪೆಯಾಗುವುದೂ ಇದೆ. ಕೆಲವೆಡೆ ಕಲಾವಿದರು ತೀರಾ. ಕೆಳಮಟ್ಟದ ಸಂಭಾಷಣೆಯಲ್ಲಿ ತೊಡಗುತ್ತಾರೆ. ತುಳು ಆಟಗಳಲ್ಲಿ ಮಾತುಗಾರಿಕೆ ಕಡಿವಾಣವೆಂಬುದಿಲ್ಲ. ಮೇಳದಲ್ಲಿ ಒಬ್ಬ ಅತಿ ಬುದ್ಧಿವಂತನೆಂದು ಪರಿಗಣಿಸಲ್ಪಟ್ಟರೆ, ಆತ ತನ್ನ ಇಚ್ಛಾನುಸಾರ ದೃಶ್ಯ ಬದಲಾವಣೆ ಮಾಡಿ, ಬೇಕಾದ ಸನ್ನಿವೇಶಗಳನ್ನು ಕೈಬಿಟ್ಟು ಬೇರೆ ಕೆಲವು ಮಸಾಲೆಗಳನ್ನು ಸೇರಿಸಿ ‘ಈಗ ಚೆನ್ನಾಯ್ತು’ ಎಂದು ಬೆನ್ನು ತೊಟ್ಟಿಕೊಳ್ಳುವ ಪ್ರವೃತ್ತಿ ಕಂಡುಬರುತ್ತದೆ. ಒಂದೇ ತೆರನಾದ ಕತೆ, ಒಂದೇ ರೀತಿಯ ದೃಶ್ಯಜೋಡಣೆ, ಅಶ್ಲೀಲ ಸನ್ನಿವೇಶಗಳು, ಜಾತಿನಿಂದನೆ, ಕುಡಿತ, ವೇಶ್ಯಾವಾಟಿಕೆ, ಅಗ್ಗದ ಹಾಸ್ಯ, ಸಿನಿಮಾ ಮಾದರಿಯ ಘಟನೆಗಳು, ಕ್ರೌರ್ಯ, ಅತಿರೇಕದ ವರ್ತನೆ, ಅತಿರಂಜಿತ ಅಂಶಗಳಿಂದ ಹೆಚ್ಚಿನ ತುಳು ಪ್ರಸಂಗಗಳು ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟಿನಿಂದ ದೂರ ಉಳಿಯುತ್ತವೆ.

ಈಗ ತುಳುನಾಡಿನ ಹೆಚ್ಚಿನ ಮೇಳಗಳು ತುಳು ಪ್ರಸಂಗಗಳನ್ನೇ ಆಡುತ್ತವೆ. ಬಡಗಿನವರೂ ಈ ಭಾಗಕ್ಕೆ ಬಂದಾಗ ತುಳುವಿನಲ್ಲೇ ಆಡುತ್ತಿದ್ದರೇನೋ! ಆದರೆ ಅವರಲ್ಲಿ ಬಹುಮಂದಿ ಕಲಾವಿದರಿಗೆ ತುಳುಭಾಷೆ ಬಾರದು. ಅವರು ಆಡುವ ಕಾಲ್ಪನಿಕ ಕತೆಗಳ ಕೆಲವು ಪ್ರಸಂಗಗಳನ್ನು ನೋಡಿದರೆ, ಇಲ್ಲಿನ ತುಳು ಪ್ರಸಂಗಗಳನ್ನು ಮೀರುವಂತಹ ಕೆಲವು ಅಗ್ಗದ, ಅತಿರಂಜಿತ ದೃಶ್ಯಗಳು ಅಲ್ಲಿಯೂ ಕಂಡುಬರುತ್ತವೆ. ಕರ್ನಾಟಕ, ಕುಂಡಾವ್ರು, ಕದ್ರಿ, ಸುರತ್ಕಲ್, ಪುತ್ತೂರು, ಅರುವ, ಕುಂಬಳೆ, ಸುಬ್ರಹ್ಮಣ್ಯ, ಬಪ್ಪನಾಡು, ಬೆಳ್ಮಣ್, ಪೇಜಾವರ, ಸಸಿಹಿತ್ಲು, ಚೀರುಂಬ ಭಗವತಿ, ಅಡ್ಯಾರ್, ತಳಕಲ, ಕುಂಟಾರು – ಇತ್ಯಾದಿ ಮೇಳಗಳು ಹೆಚ್ಚಾಗಿ ಆಡಿದ್ದು ತುಳು ಪ್ರಸಂಗಗಳನ್ನೇ. ಗಲ್ಲಾಪೆಟ್ಟಿಗೆ ಹಾಗೂ ಜನಾಕರ್ಷಣೆಯ ದೃಷ್ಟಿಯಿಂದ ಇವು ಯಶಸ್ಸು ಕಂಡಿವೆ. ಆದರೆ ಕೆಲವು ಪ್ರಬುದ್ಧ ಕಲಾವಿದರನ್ನು ಬಿಟ್ಟರೆ, ಉಳಿದವರು ಪ್ರೌಢ ಮಟ್ಟದ ತುಳುಭಾಷೆಯನ್ನು ಬಳಸದೆ, ಹಾದಿ – ಬೀದಿಯ ವ್ಯಾವಹಾರಿಕ ಭಾಷೆಯನ್ನು ರಂಗಸ್ಥಳಕ್ಕೆ ತಂದು ಭಾಷೆ ಹಾಗೂ ಯಕ್ಷಗಾನ ಎರಡನ್ನೂ ಕುಲಗೆಡಿಸುವ ಮಟ್ಟಕ್ಕೆ ಹೋದುದು ಇಲ್ಲಿನ ಪ್ರಧಾನ ದೋಷ. ಭಾಷೆ ಯಾವುದೇ ಇರಲಿ ಅದು ಕಲಾಮಾಧ್ಯಮದಲ್ಲಿ ಉಪಯೋಗಿಸಲ್ಪಟ್ಟಾಗ ಜನರನ್ನು ಬಹುಬೇಗ ಮುಟ್ಟುತ್ತದೆ. ಆದ್ದರಿಂದ ಅದನ್ನು ಪರಿಣಾಮಕಾರಿಯಾಗಿ ಬಳಸುವುದು ಕಲಾವಿದರ ಹೊಣೆ. ಕನ್ನಡ ಅಥವಾ ತುಳುಭಾಷೆ ಯಕ್ಷಗಾನದ ಮಾಧ್ಯಮಕ್ಕೆ ಬಂದಾಗ ತುಸು ಮೇಲ್ಮಟ್ಟದಲ್ಲಿ ಪ್ರಯೋಗವಾಗಬೇಕಿದೆ.

ತುಳು ಭಾಷೆಯ ಬಗ್ಗೆ ಕೆಲವರಲ್ಲಿ ಅನಾದರದ ಭಾವನೆ ಇದೆ. ಆದರೆ ಅವರು ಎಣಿಸಿದಷ್ಟು ಅಪ್ರಬುದ್ಧ ಭಾಷೆ ಇದಲ್ಲ. ಭಾಷಾವಿಜ್ಞಾನ ದೃಷ್ಟಿಯಿಂದ ಚೆನ್ನಾಗಿ ವಿಕಾಸ ಹೊಂದಿದ, ಯಾವ ವಿಷಯವನ್ನೇ ಆಗಲಿ ಮನಸ್ಸಿಗೆ ಮುಟ್ಟುವಂತೆ ಹೇಳುವ ಸಂವಹನ ಸಾಮರ್ಥ್ಯವಿರುವ ಸೊಗಸಾದ ಭಾಷೆ ತುಳು. ಅದರ ಪದಸಂಪತ್ತು, ನಾದಸಂಪತ್ತು ಹಾಗೂ ಅಭಿವ್ಯಕ್ತಿ ಕ್ರಮ ವಿಶೇಷವಾದುದು. ತುಳುಭಾಷೆಗೆ ಕನ್ನಡ, ಸಂಸ್ಕೃತ ಶಬ್ದಗಳನ್ನು ಬೆರೆಸುವ ಬಗ್ಗೆ ಕೆಲವರಲ್ಲಿ ಆಕ್ಷೇಪವಿದೆ. ಈ ಮಡಿವಂತಿಕೆಗೆ ಅರ್ಥವಿಲ್ಲ. ಕನ್ನಡಕ್ಕೆ ಸಂಸ್ಕೃತ ಬೆರೆಸಿ ಮಾತಾಡುವುದು, ಬರೆಯುವುದು ಚೆನ್ನಾದರೆ ತುಳುವಿಗೆ ಯಾಕೆ ಈ ಆಕ್ಷೇಪ? ಯಾವುದೇ ಭಾಷೆ ಬೆಳವಣಿಗೆ ಹೊಂದಬೇಕಾದರೆ ಸಮಯೋಚಿತ ರೀತಿಯಲ್ಲಿ ಬೇರೆ ಭಾಷೆಗಳ ಶಬ್ದ ಹಾಗೂ ವಿಷಯವನ್ನು ಸ್ವೀಕಾರ ಮಾಡಬೇಕಾಗುತ್ತದೆ.

ಕರಾವಳಿ ಪ್ರದೇಶದಲ್ಲಿ ಯಕ್ಷಗಾನ ಬಯಲಾಟಗಳು ಪ್ರದರ್ಶನ ಗೊಳ್ಳುತ್ತಿದ್ದ ಆರಂಭದ ದಿನಗಳಿಂದಲೇ ಒಂದಲ್ಲ ಒಂದು ರೀತಿಯಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿ ಅವುಗಳೊಂದಿಗೆ ಹಾಸುಹೊಕ್ಕಾಗಿ ಬಂದಿದೆ. ಪುರಾಣ ಪ್ರಸಂಗಗಳಲ್ಲಿ ಬರುವ ಹಾಸ್ಯಗಾರನಿಗೆ ತುಳುಭಾಷೆಯಲ್ಲಿ ಮಾತನಾಡುವ ಸ್ವಾತಂತ್ರ್ಯವಿತ್ತು ರಕ್ಕಸನೊಬ್ಬ ದೇವಲೋಕವನ್ನು ಸ್ವಾಧೀನಪಡಿಸಿಕೊಂಡು, ಅಲ್ಲಿಯ ದೂತನೊಂದಿಗೆ ತನ್ನ ಅಧಿಪತ್ಯವನ್ನು ಡಂಗುರ ಸಾರಲು ಆದೇಶಿಸಿದಾಗ ಆ ದೇವದೂತ ‘ದಾಯೆಗಪ್ಪಾ ಇಂಚಿ ಮಾರಾಜೆ…’ ಎಂದು ವ್ಯಂಗ್ಯವಾಗಿ ಹಾಡುವುದು, ‘ಕಂಸವಧೆ’ಯ ರಜಕ – ‘ಅರಸ’ ಪದದ ‘ರ’ ಅಕ್ಷರಕ್ಕೆ ಗೆದ್ದಲು ಹಿಡಿದು. ‘ಗ’ ಆಗಿ ಅದರಿಂದ ‘ಅಗಸ’ ಪದ ವ್ಯುತ್ಪತ್ತಿಯಾದುದನ್ನು ತುಳುವಿನಲ್ಲಿ ಸ್ವಾರಸ್ಯವಾಗಿ ವಿವರಿಸುವುದು, ಪಾರಿಜಾತವನವನ್ನು ಹೊಕ್ಕ ಶ್ರೀಕೃಷ್ಣ – ಸತ್ಯಭಾಮೆಯರನ್ನು ಅಲ್ಲಿಯ ವನಪಾಲಕ ‘ಕರಿಯ – ಬೊಳ್ಳೆಚ್ಚಿ’ ಎಂದು ಸಂಬೋಧಿಸಿ ಮಾತಾಡುವುದು, ಕುದರೆ ದೂತ ವಿವಿಧ ಭಾಷೆಗಳನ್ನು ಬಳಸುವುದು – ಇತ್ಯಾದಿ ಹಾಸ್ಯದ ಸನ್ನಿವೇಶಗಳನ್ನು ಎದುರಿನ ಸಾಲಿನ ಪ್ರೇಕ್ಷಕರು ಆಸ್ವಾದಿಸುವ ಬಗೆಯೇ ಬೇರೆ.

ಯಕ್ಷಗಾನ ರಂಗದಲ್ಲಿ ‘ಕ್ಷೇತ್ರ ಮಹಾತ್ಮೆ’ಗಳ ಪ್ರವೇಶವಾದ ಮೇಲೆ, ಅಂತಹ ಪ್ರಸಂಗಗಳಲ್ಲಿ ಪೂರ್ವಾರ್ಧ ಪೌರಾಣಿಕ ಕತೆಗಳನ್ನು ಒಳಗೊಂಡರೆ, ಉತ್ತರಾರ್ಧ ಐತಿಹಾಸಿಕ, ಜಾನಪದ ಅಥವಾ ಸಾಮಾಜಿಕ ಕತೆಗಳಾಗಿರುತ್ತಿದ್ದವು. ಇಲ್ಲಿ ತುಳುನಾಡಿನ ತುಂಡರಸುಗಳೋ, ದೈವಗಳೋ, ಬೇರೆ ಬೇರೆ ಮತ ಧರ್ಮ ವೃತ್ತಿಗಳಿಗೆ ಸೇರಿದ ಪಾತ್ರಗಳೋ ಇರುತ್ತವೆ. ಕಲಾವಿದರು ಅಂತಹ ಪಾತ್ರಗಳನ್ನು ಧರಿಸಿ ತುಳುಭಾಷೆಯಲ್ಲೇ ಸಂಭಾಷಣೆ ನಡೆಸುವರು. ಪ್ರಾಯಶಃ ಒಂದು ಉದಾಹರಣೆ ಕೊಡುವುದಾದರೆ ದಿ | ಸೀತಾನದಿ ಗಣಪಯ್ಯ ಶೆಟ್ಟರು ಬರೆದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ (ಅಗರಿಯವರ ಪ್ರತಿಯೂ ಇದೆ) ಪ್ರಸಂಗದಲ್ಲಿ ಮಹಾವಿಷ್ಣು ದಾರಿಕಾಸುರನನ್ನು ವಧಿಸಿ ಸಪ್ತಮಾತೃಕೆಯರನ್ನು ಸೃಷ್ಟಿಸುವಲ್ಲಿ ವರೇಗೆ ಪುರಾಣದ ಕತೆಯಿದ್ದು, ಆ ಮೇಲಿನ ಸನ್ನಿವೇಶಗಳಲ್ಲಿ ಬರುವ ಗುಳಿಗ, ಪಂಜುರ್ಲಿ, ತೋಟದಣ್ಣ, ಬಪ್ಪಬ್ಯಾರಿ, ಕೋಟಿ – ಚೆನ್ನಯ್ಯ, ಕಾಂತಬಾರೆ – ಬೂದಬಾರೆ, ಅಗೋಳಿ ಮಂಜಣ್ಣ ಮುಂತಾದ ಪಾತ್ರಗಳು ತುಳುವಿನಲ್ಲೇ ಮಾತಾಡುವುದು ರೂಢಿಯಾಗಿವೆ. ಶೇಣಿ ಗೋಪಾಲಕೃಷ್ಣ ಭಟ್ಟರ ‘ಬಪ್ಪಬ್ಯಾರಿ’ ಮತ್ತು ವಿಟ್ಲ ಗೋಪಾಲಕೃಷ್ಣ ಜೋಶಿಯವರ ‘ಉಸ್ಮಾನ್’ ಪಾತ್ರಗಳು ತುಳು ಮಲೆಯಾಲ ಮಿಶ್ರಿತ ಭಾಷೆಯಲ್ಲಿ ಸಂಭಾಷಿಸುತ್ತಿದ್ದುದು ಇಂದಿಗೂ ದಂತಕತೆಯಾಗಿ ಉಳಿದಿದೆ. ಇವುಗಳನ್ನೆಲ್ಲ ಗಮನಿಸುವಾಗ ಆಧುನಿಕ ತುಳು ಪ್ರಸಂಗಗಳಿಗೆ ಇಂತಹ ‘ಕ್ಷೇತ್ರ ಮಹಾತ್ಮೆ’ಗಳೇ ಪ್ರೇರಣೆ ನೀಡಿವೆ ಎಂದು ತರ್ಕಿಸಬಹುದಾಗಿದೆ. ಅಮೃತ ಸೋಮೇಶ್ವರರ ‘ಅಮರಶಿಲ್ಪಿ’ ಪ್ರಸಂಗದ ಉತ್ತರಾರ್ಧದ ಶಂಭು ಕಲ್ಕುಡ – ವೀರ ಕಲ್ಕುಡ ಭಾಗ ತುಳು ಭಾಷೆಯಲ್ಲಿ ಪ್ರಯೋಗವಾಗುತ್ತಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು.

ಬೋಳಾರ ನಾರಾಯಣ ಶೆಟ್ಟರು, ನಾರಂಪಾಡಿ ಸುಬ್ಬಯ್ಯ ಶೆಟ್ಟರು, ಈರ್ವರು ಸಾಮಗರು, ಆಳಿಕೆ ರಾಮಯ್ಯ ರೈ, ಮಾಧವ ಶೆಟ್ಟರು, ಗುಂಪೆ ರಾಮಯ್ಯ ರೈ, ಮಂಕುಡೆ ಸಂಜೀವ ಶೆಟ್ಟಿ – ಇಂತಹ ಕಲಾವಿದರು ತುಳು ಅರ್ಥಗಾರಿಕೆಗೆ ಕೊಟ್ಟ ಒಪ್ಪ ಓರಣ – ರೂಪ ವಿಲಾಸ, ಅಲಂಕಾರ ವಿಶಿಷ್ಟವಾದುದು. ಇವರ ಬಾಯಿಂದ ಅಗ್ಗದ ಮಾತುಗಳಾಗಲೀ, ಅಶಲ್ಲೀಲ ವಾಕ್ಯಗಳಾಗಲೀ ಎಂದೂ ಬಂದಿರದು. ತುಳು ಭಾಷೆಯಲ್ಲೂ ಅತ್ಯುತ್ತಮ ಸಾಹಿತ್ಯ ಬಳಸಿ, ರುಚಿ – ಶುದ್ಧಿಯ ಮಾತುಗಳನ್ನಾಡಿ ಮಹಾವಿದ್ವಾಂಸರೂ ತಲೆದೂಗುವಂತೆ ಮಾಡಬಹುದೆಂಬುದನ್ನು ಮಲ್ಪೆ ರಾಮದಾಸ ಸಾಮಗರಂತಹ ವಾಗ್ಮಿಗಳು ತೋರಿಸಿದ್ದಾರೆ. ಕಲೆಗೆ ಭಾಷಾಬಂಧನ ಇಲ್ಲವೆಂಬುದನ್ನು ಇಂತಹ ಕಲಾವಿದರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ತುಳು ಯಕ್ಷಗಾನ ರಂಗದಲ್ಲಿ ದುಡಿಯುತ್ತಿರುವ ಯುವ ಕಲಾವಿದರು ಈ ವಿಚಾರವನ್ನು ಜ್ಞಾಪಕದಲ್ಲಿಡಬೇಕಾಗಿದೆ.

ತುಳು ಪ್ರಸಂಗದ ಹಾಡುಗಳನ್ನು ಕನ್ನಡದಷ್ಟೇ ಸಲೀಸಾಗಿ, ತನ್ಮಯತೆಯಿಂದ ಹಾಡುಲು ಸಾಧ್ಯವಿದೆ. ದಾಮೋದರ ಮಂಡೆಚ್ಚರಂತಹ ಅನುಭವೀ ಭಾಗವತರು ಇದನ್ನು ಸಾಬೀತುಗೊಳಿಸಿದ್ದಾರೆ. ದಿನೇಶ ಅಮ್ಮಣ್ಣಾಯರಂಥವರು ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಪ್ರಸಂಗಸಾಹಿತ್ಯವನ್ನು ತಿಳಿದು, ಛಂದಸ್ಸಿನ ಜ್ಞಾನವಿದ್ದು ರಚಿಸಲ್ಪಟ್ಟ ಪ್ರಸಂಗಗಳನ್ನು ರಂಗದಲ್ಲಿ ಪ್ರಯೋಗಿಸುವಾಗ ಭಾಗವತರಿಗೆ ಹೆಚ್ಚಿನ ಶ್ರಮವಿರುವುದಿಲ್ಲ. ಅವುಗಳನ್ನು ಸುಲಲಿತವಾಗಿ ಹಾಡಬಹುದಾಗುತ್ತದೆ. ಅಲ್ಲವಾದರೆ ಪದ್ಯಗಳನ್ನು ಹಾಡಲು ಅನುಕೂಲವಾಗುವಂತೆ ತಿದ್ದಿ – ತೀಡಿ ಸರಿಯಾದ ರಾಗ – ತಾಳ ಹಾಕುವ ಹೊಣೆಗಾರಿಕೆ ಭಾಗವತರಿಗಿರುತ್ತದೆ. ಆರಂಭದ ಪ್ರಯೋಗಗಳಲ್ಲಿ ಈ ಅಧ್ವಾನಗಳನ್ನು ಅವರು ಅನುಭವಿಸಲೇಬೇಕಾಗುತ್ತದೆ. ಹಾಡುಗಾರಿಕೆ ಎಂದಾಗ ಅಲ್ಲಿ ಅನುಕರಣ ಶೈಲಿ, ಅಗ್ಗದ ಜನಪ್ರಿಯತೆಗಾಗಿ ತುಡಿತ, ಸ್ವರವೇ ಬಂಡವಾಳವಾಗುವಿಕೆ, ತನಗೆ ತೋಚಿದ ಧಾಟಿ, ನಿರಾಸಕ್ತಿ, ಉದಾಸೀನ ಭಾವ… ಇತ್ಯಾದಿ ಇರಬಾರದು. ಶ್ರದ್ಧೆ ಮತ್ತು ಸಾಧನೆ ಬೇಕು. ಪದಗಳ ವಿರಳವಾದಷ್ಟು ಅಭಿನಯಕ್ಕೆ, ದೃಶ್ಯ ವಿಸ್ತಾರಕ್ಕೆ ಅವಕಾಶ ಹೆಚ್ಚು. ಆದರೆ ಸುಗಮ ಸಂಗೀತದಂತೆ ಅಥವಾ ಸಿನಿಮಾ ಹಾಡುಗಳ ಧಾಟಿಯಲ್ಲಿ ಬೇರೊಬ್ಬರ ಅನುಕರಣೆಯಲ್ಲಿ ಕೆಲವು ಭಾಗವತರುಗಳು, ಭಾಗವತಿಕೆಯನ್ನೇ ಕುಲಗೆಡಿಸುವುದುನ್ನು ಕಾಣುತ್ತೇವೆ. ತುಳು ಯಕ್ಷಗಾನವೆಂದಾಗ, ಸಾಂಪ್ರದಾಯಿಕತೆಯನ್ನು ನಿರ್ಲಕ್ಷಿಸಿ, ತಮಗೆ ತೋಚಿದಂತೆ ಹಾಡುವುದು ತಪ್ಪು.

ಯಕ್ಷಗಾನದ ಸಂಪ್ರದಾಯಬದ್ಧ ನೃತ್ಯ ಹಾಗೂ ಹೆಜ್ಜೆಗಾರಿಕೆಯನ್ನು ತುಳು ಪ್ರಸಂಗಗಳಿಗೂ ಅಳವಡಿಸಬಹುದಾಗಿದೆ. ಆದರೆ ‘ಎಷ್ಟಾದರೂ ತುಳು ತಾನೆ?’ ಎಂಬ ಉಪೇಕ್ಷಾಭಾವದಿಂದ ಕೆಲವು ಕಲಾವಿದರು ಹರಕೆ ಸಂದಾಯ ಮಾಡುತ್ತಾರೆ. ಸಮರ್ಪಕವಾದ ಕುಣಿತ ಗೊತಿಲ್ಲದವರೂ ಇಲ್ಲಿ ದೊಡ್ಡ ವೇಷಧಾರಿಗಳಾಗುತ್ತಾರೆ. ನಾಟ್ಯ ತಿಳಿದವರು ಉದಾಸೀನ ಮಾಡುತ್ತಾರೆ. ಇದರಿಂದ ಈಗಿನ ತುಳು ಯಕ್ಷಗಾನ ಕ್ರಮೇಣ ಆಟದ ಸ್ವರೂಪವನ್ನು ಕಳೆದುಕೊಂಡು ನಾಟಕವಾಡುವ ಅಪಾಯವಿದೆ. ತುಳು ರಂಗದಲ್ಲಿ ಈಗಲೂ ನಿರಂತರ ಅಧ್ಯಯನ ಕೊರತೆಯಿದೆ. ಬಾಯಿಪಾಠ ಸಾಹಿತ್ಯವಿದೆ. ಇದನ್ನು ಗಮನಿಸಿದರೆ ತುಳು ಯಕ್ಷಗಾನವನ್ನು ಅಗ್ಗ ಮಾಡಿ ಟೀಕಿಸುವವರಿಗೆ ಇಂಬು ಸಿಕ್ಕಂತಾಗುತ್ತದೆ. ನಮ್ಮ ಕಲಾವಿದರು ಇನ್ನಾದರೂ ಕಣ್ತೆರೆದು ಈ ದೋಷಗಳನ್ನು ತಿದ್ದಿ ಸರಿದಾರಿಯಲ್ಲಿ ನಡೆಯಲು ಪ್ರಯತ್ನಿಸಬೇಕು.

ತುಳು ಯಕ್ಷಗಾನದ ವೇಷವಿಧಾನದಲ್ಲಿಯೂ ಕಲಾಪ್ರಜ್ಞೆಯಿಲ್ಲದ ಸ್ವಚ್ಛಂದತೆ ಕಂಡುಬರುತ್ತದೆ. ಹಾಗೆಂದು ಕನ್ನಡ ಪೌರಾಣಿಕ ಪ್ರಸಂಗದ ವೇಷಭೂಷಣಗಳು ಇಲ್ಲಿಯೂ ಇರಬೇಕೆಂದು ಅರ್ಥವಲ್ಲ. ಅಮೃತ ಸೋಮೇಶ್ವರ ಅವರು ಅಭಿಪ್ರಾಯಪಡುವಂತೆ ತುಳು ಯಕ್ಷಗಾನವನ್ನು ಒಂದು ಪ್ರತ್ಯೇಕ ತಿಟ್ಟೆಂದು (ತುಳುತಿಟ್ಟು) ಪರಿಗಣಿಸಿಲ್ಲಿ ಅದರ ವೇಷಭೂಷಣ, ಬಣ್ಣಗಾರಿಕೆ ಇತ್ಯಾದಿ ಬೇರೆಯೇ ರೀತಿಯಲ್ಲಿ ರೂಪುಗೊಂಡರೆ ತಪ್ಪಿಲ್ಲ. ಉದಾಹರಣೆಗೆ ‘ಕೋಟಿ ಚೆನ್ನಯರು’ ಪರಂಪರೆಯ ರಾಜಕಿರೀಟ ಧರಿಸುವುದು ಸರಿಯೆನಿಸುವುದಿಲ್ಲ. ಭೂತಾರಾಧನೆ, ಶಿಲ್ಪ ಇತ್ಯಾದಿ ಇತರ ಮಾಧ್ಯಮಗಳ ಆಧಾರದಲ್ಲಿ ಪ್ರತ್ಯೇಕ ವೇಷಕಲ್ಪನೆ ಮಾಡಬಹುದಾಗಿದೆ. ಆದರೆ ವೇಷಗಾರಿಕೆಯಲ್ಲಿ ಒಂದು ಶಿಸ್ತಿರಬೇಕು. ಒಬ್ಬ ಕಲಾವಿದ ಅವನಿಗೆ ತೋಚಿದಂತೆ ವೇಷ ತೊಟ್ಟುಕೊಳ್ಳಬಾರದು. ಪೌರಾಣಿಕ ಪ್ರದರ್ಶನಗಳಲ್ಲಿರುವಂತೆ ಇಂತಹ ವೇಷಕ್ಕೆ ಇಂತಹದ್ದೇ ವರ್ಣ, ನಾಮ, ಸುಳಿ, ಮುಂಡಾಸು, ಉಡುಗೆ – ತೊಡಿಗೆ, ಆಯುಧ… ಇತ್ಯಾದಿ ಲೆಕ್ಕಾಚಾರವಿರಬೇಕು. ಒಬ್ಬ ಮಾಡಿದ ಪಾತ್ರವನ್ನು ಬೇರೊಂದು ಸಂದರ್ಭದಲ್ಲಿ ಇನ್ನೋರ್ವ ನಿರ್ವಹಿಸಿದಾಗ ವೇಷಭೂಷಣದಲ್ಲಿ ಬದಲಾವಣೆ ಆಗದಂತೆ ಎಚ್ಚರ ವಹಿಸಬೇಕು.

ರಂಗಸ್ಥಳದ ವ್ಯವಸ್ಥೆಯಲ್ಲೂ ಗಮನಿಸಬೇಕಾದ ಬಹಳ ಅಂಶಗಳಿವೆ. ಆದಷ್ಟು ಯಕ್ಷಗಾನೀಯವಾದ ಸ್ಪರ್ಶ ಅದರಲ್ಲಿರಬೇಕು. ನಾಟಕದ ವೇದಿಕೆ ಯಕ್ಷಗಾನಕ್ಕಲ್ಲ. ಒಂದೆಡೆ ‘ಸೀನ್ ಸೀನೆರಿ’ ಬೇಕೆಂಬ ಅಭಿಪ್ರಾಯವೂ ಕೇಳಿ ಬರುತ್ತದೆ. ಆದರೆ ಯಕ್ಷಗಾನದ ಮೂಲ ಕಲ್ಪನೆಗೆ ಈ ವ್ಯವಸ್ಥೆ ಅಡ್ಡಿಯಾದೀತು. ಕಲಾವಿದನ ಅಭಿನಯ ಸಾಮರ್ಥ್ಯ ಹಾಗೂ ಹಿಮ್ಮೇಳ – ಮುಮ್ಮೇಳಗಳ ಹೊಂದಾಣಿಕೆಗೆ ತಡೆಯಾದೀತು. ಇದರಿಂದ ಯಕ್ಷಗಾನ ನಾಟಕವಾಗಿ ರೂಪಾಂತರ ಹೊಂದು ಅಪಾಯವಿದೆ. ಯಕ್ಷಗಾನ ಯಾವಾಗಲೂ ಬಯಲಾಟದ ರಂಗಸ್ಥಳದಲ್ಲೇ ಸೊಗಸೆನಿಸುವುದು. ಹಿಂದೆ ದೀವಟಿಗೆ ಬೆಳಕಿನಲ್ಲೇ ಆಟ ನೋಡಬೇಕಾಗಿತ್ತು. ಆಗಿನ ಯಕ್ಷಲೋಕದ ಚಿತ್ರಣ ಅದ್ಭುತ. ಆದರೆ ಈಗ ವಿದ್ಯುದ್ದೀಪಗಳ ಬೆಳಕಿನಲ್ಲಿ ಟೆಂಟಿನೊಳಗೆ ಆರಾಮವಾಗಿ ಕುಳಿತು ನೋಡಬಹುದಾಗಿದೆ. ಇದಕ್ಕೆ ಅನುಕೂಲವಾಗುವಂತೆ ರಂಗಸ್ಥಳವನ್ನು ಸ್ವಲ್ಪ ಏರಿಸಿ ಸಜ್ಜುಗೊಳಿಸುವುದನ್ನು ಸೌಕರ್ಯದೃಷ್ಟಿಯಿಂದ ಒಪ್ಪಬಹುದೇನೋ. ಆದರೆ ಪರಿಷ್ಕಾರದ ಹೆಸರಿನಿಂದ ಅದನ್ನು ಇನ್ನಷ್ಟೂ ವಿರೂಪಗೊಳಿಸುವುದು ಸಮಂಜಸವಿಲ್ಲ.

ಕೆಲವೊಂದು ಬದಲಾವಣೆ ಹಾಗೂ ಸುಧಾರಣೆಗಳನ್ನು ತಂದ ಕಾರಣದಿಂದ ಈಚೆಗೆ ಯಕ್ಷಗಾನ ವಿಶಾಲವಾದ ಪ್ರೇಕ್ಷಕವರ್ಗವನ್ನು ಪಡೆಯಲು ಸಾಧ್ಯವಾಗಿದೆ. ಕಾಲಕ್ಕನುಗುಣವಾಗಿ ಸುಧಾರಣೆ ಮಾಡದೇ ಹೋದರೆ ಒಂದು ರಂಗಕಲೆ ಯಾವ ರೀತಿ ಮೂಲೆಗುಂಪಾಗುವುದೆಂಬುದಕ್ಕೆ ತಮಿಳುನಾಡಿನ ‘ತೆರುಕೂತ್ತು’ ಎಂಬ ಯಕ್ಷಗಾನದ ಸೋದರಕಲೆಯ ಇಂದಿನ ದುರ್ಬಲ ಸ್ಥಿತಿಯೇ ಸಾಕ್ಷಿ. ಅದೇ ರೀತಿ ಗಟ್ಟದಾಚೆಯ ಮೂಡಲಪಾಯ ಯಕ್ಷಗಾನವೂ ಅಳಿವಿನ ಅಂಚಿನಲ್ಲಿದೆ. ಕೇರಳದ ‘ಕಥಕ್ಕಳಿ’ ವಿಶ್ವಪ್ರಸಿದ್ಧ ಕಲೆಯಾದರೂ ಸಂಪ್ರದಾಯದ ಬಿಗಿತದಿಂದಾಗಿಲ್ಲ. ಯಕ್ಷಗಾನ ಮೇಳಗಷ್ಟು ಸಂಖ್ಯೆಯಲ್ಲಿ ಕಥಕ್ಕಳಿ ಮೇಳಗಳು ಅಲ್ಲಿಲ್ಲ. ಯಕ್ಷಗಾನ ವಾಣಿಜ್ಯೀಕರಣವಾದಂತೆ ಕಥಕ್ಕಳಿ ಆಗಿಲ್ಲ. ಆದರೂ ಇತ್ತೀಚೆಗೆ ಕಥಕ್ಕಳಿಯಲ್ಲೂ ಚಾರಿತ್ರಿಕ, ಸಾಮಾಜಿಕ ಪ್ರಯೋಗಗಳು ನಡೆಯುತ್ತಿವೆಯೆಂಬುದು ತಿಳಿದುಬಂದಿದೆ.

ತುಳು ಯಕ್ಷಗಾನದಿಂದ ತುಳುಭಾಷೆಗೆ ಅಪಾರ ಲಾಭ ಆಗಿದೆ. ಹಾಗೆಯೇ ತುಳುಭಾಷೆಯಿಂದ ಯಕ್ಷಗಾನದ ಹಲವು ಸಾಧ್ಯತೆಗಳು ತೆರೆದುಕೊಂಡಿವೆ. ತುಳು ಪ್ರಸಂಗದ ಪ್ರೇಕ್ಷಕರು ಕನ್ನಡ ಆಟಗಳಿಗಿಂತ ತುಳು ಆಟಗಳಲ್ಲಿ ವಿಶೇಷವಾಗಿ ತಾದಾತ್ಮ್ಯ ಹೊಂದುತ್ತಾರೆ. ಗಾಢವಾಗಿ ಕತೆಯನ್ನು ಅನುಭವಿಸುತ್ತಾರೆ. ನಗುತ್ತಾರೆ, ಆನಂದಿಸುತ್ತಾರೆ, ಕಣ್ಣೀರು ಮಿಡಿಯುತ್ತಾರೆ. ಈ ದೃಷ್ಟಿಯಿಂದ ತುಳು ಯಕ್ಷಗಾನ ಜನರ ಹತ್ತಿರ ಬಂದಿದೆ. ಅವುಗಳಿಂದಾಗಿ ತುಳುನಾಡಿನ ಚರಿತ್ರೆ, ಸಂಸ್ಕೃತಿ, ಸಂಪ್ರದಾಯದ ಎಷ್ಟೋ ವಿಚಾರಗಳನ್ನು ಪರಿಣಾಮಕಾರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ತುಳು ನಾಟಕಗಳಿಗಿಂತಲೂ ಹೆಚ್ಚಾಗಿ ಈ ಮಹತ್ವದ ಕೆಲಸವನ್ನು ತುಳು ಯಕ್ಷಗಾನ ಮಾಡಿದೆ. ತುಳುಭಾಷೆಯ ಅಂದ – ಚಂದ, ಆಯ – ಆಕಾರ, ಧ್ವನಿವೈವಿಧ್ಯ, ಸಂವಹನ ಸಾಮರ್ಥ್ಯ ತುಳು ಯಕ್ಷಗಾನದಿಂದಾಗಿ ವಿಸ್ತಾರಗೊಂಡಿದೆ.

ತುಳು ಯಕ್ಷಗಾನ ಇನ್ನೂ ಹಸುಗೂಸು. ಅದರ ಭವಿಷ್ಯವನ್ನು ನಿರ್ಧರಿಸುವ ಹೊಣೆಗಾರಿಕೆ ಯಕ್ಷಗಾನಕ್ಕಾಗಿ ದುಡಿಯುವ ವ್ಯಕ್ತಿಗಳು, ಸಂಶೋಧಕರು ಹಾಗೂ ಕಲಾವಿದರ ಕೈಯಲ್ಲಿದೆ. ಅದರ ಒಳಿತು – ಕೆಡುಕುಗಳು ನಮ್ಮ ಕಣ್ಣ ಮುಂದಿವೆ. ದೋಷಗಳನ್ನು ನಿವಾರಿಸಿ ಸೂಕ್ತ ಪರಿಷ್ಕಾರದೊಂದಿಗೆ, ಉತ್ತಮ ಪ್ರಯೋಗಗಳನ್ನು ಮಾಡಿದರೆ ತುಳು ಯಕ್ಷಗಾನ ಪರಂಪರೆ ಇನ್ನಷ್ಟೂ ಭದ್ರವಾದೀತು. ಅತಿರೇಕದ ವ್ಯಾಪಾರೀ ಬುದ್ಧಿ ಸಹಜ ಅಭಿರುಚಿಯನ್ನು ಕೆಡಿಸುತ್ತದೆ. ಮೇಳದ ವ್ಯವಸ್ಥಾಪಕರು, ಕಲಾವಿದರು, ಪ್ರಸಂಗಕರ್ತರು ಹಾಗೂ ಜನಸಾಮಾನ್ಯರು ಹೀಗೆ ಎಲ್ಲರೂ ಒಟ್ಟು ಸೇರಿ ಯಕ್ಷಗಾನದ ಗುಣ – ದೋಷಗಳ ಬಗೆಗೆ ಆಲೋಚಿಸುವ ಒಂದು ದೊಡ್ಡ ಸಂಘಟನೆಯನ್ನು ಹುಟ್ಟು ಹಾಕುವುದು, ಈ ಸಂಧಿಕಾಲದಲ್ಲಿ ತುಂಬ ಅವಶ್ಯವಾಗಿ ಕಂಡುಬರುತ್ತದೆ. ಅದಕ್ಕೆ ಸರಕಾರದ ಮಾನ್ಯತೆಯೂ ದೊರೆಯಬೇಕು. ಈ ಸತ್ವಯುತವಾದ ಕಲೆ ಹಾಗೂ ಅದಕ್ಕಾಗಿ ದುಡಿಯುವ ಕಲಾವಿದರ ಭವಿಷ್ಯಕ್ಕೊಂದು ಭದ್ರ ನೆಲೆ ಒದಗಿಸುವ ಮಹತ್ಕಾರ್ಯವನ್ನು ಇಂತಹ ಸಂಘಟನೆಗಳು ಮಾಡಬೇಕಾಗಿದೆ.