ಯಕ್ಷಗಾನ ದೇಶವಿದೇಶಗಳಲ್ಲಿ ಖ್ಯಾತಿವೆತ್ತ ಒಂದು ರಂಗಕಲೆ, ಜಾಗತಿಕ ರಂಗಭೂಮಿಯಲ್ಲೇ ಇದಕ್ಕೊಂದು ವಿಶಿಷ್ಟ ಸ್ಥಾನವಿದೆ. ಈ ಕಲೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಗಮನಿಸಿದರೆ, ಇದರ ಹಿಂದೆ ನಾಲ್ಕೈದು ಶತಮಾನಗಳ ಇತಿಹಾಸ ಗೋಚರಿಸುತ್ತದೆ. ಇಂದು ಪ್ರಾದೇಶಿಕ ಎಲ್ಲೆಯನ್ನು ದಾಟಿ ಯಕ್ಷಗಾನದ ಚೆಂಡೆ-ಮದ್ದಳೆಗಳ ಮೊರೆತ ಕಡಲಾಚೆಗೂ ಕೇಳುತ್ತಿದೆಯಾದರೂ, ಅದರ ಮೂಲದ ವ್ಯವಸಾಯ ನಡೆದಿರುವುದು ‘ತುಳುನಾಡು’ ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕರಾವಳಿ ಕರ್ನಾಟಕದ ಗಡಿ ಪ್ರದೇಶವೆನಿಸಿದ ಕಾಸರಗೋಡಿನಿಂದ ಕಾರವಾರದವರೆಗೆ ಯಕ್ಷಗಾನ ಮಣ್ಣಿನ ಕಲೆಯಾಗಿ ಬೆಳೆದು ಇಂದು ಹೆಮ್ಮರವಾಗಿ ಚಾಚಿ ಕೊಂಡಿದೆ. ಇದಕ್ಕೆ ಕಾರಣ ಈ ರಂಗದಲ್ಲಾದ ಕಲೋಚಿತವಾದ ಸುಧಾರಣೆ ಹಾಗೂ ಕಾಲೋಚಿತವಾದ ಪರಿಷ್ಕಾರಗಳು.

ಯಕ್ಷಗಾನವನ್ನು ‘ಜಾನಪದ ಕಲೆ’ ಎಂದು ಕರೆಯಲಾಗಿದೆ. ಆದರೆ ಈ ಬಗ್ಗೆ ವಿದ್ವಾಂಸರಲ್ಲಿ ಸಹಮತವಿಲ್ಲ. ಏಕೆಂದರೆ ಇದರಲ್ಲಿ ಒಂದು ಶಾಸ್ತ್ರೀಯ ಕಲೆಗಿರಬೇಕಾದ ಕೆಲವು ಲಕ್ಷಣಗಳಿವೆ. ಪ್ರಸಂಗ ಪಠ್ಯ, ಹಾಡು, ನೃತ್ಯ, ಪ್ರಸಾಧನ, ಸಂಭಾಷಣೆ ಇತ್ಯಾದಿಗಳೆಲ್ಲ ಶಾಸ್ತ್ರೀಯ ಚೌಕಟ್ಟಿನೊಳಗೆ ಯಕ್ಷಗಾನ ಕಲಾ ಪ್ರಪಂಚದಲ್ಲಿ ಮಿಳಿತಗೊಂಡಿವೆ. ಹಾಗೆಯೇ ಜಾಣಪದೀಯ ಅಂದ-ಚಂದಗಳೂ ಇದರಲ್ಲಿವೆ. ಬಯಲು ರಂಗಮಂದಿರ, ಇರುಳಿನ ಪ್ರದರ್ಶನ, ಹಾಗೆಯೇ ಜಾನಪದೀಯ ಅಂದ ಚಂದಗಳೂ ಇದರಲ್ಲಿವೆ. ಬಯಲು ರಂಗಮಂದಿರ, ಇರುಳಿನ ಪ್ರದರ್ಶನ, ದೀವಟಿಗೆ ಬೆಳಕು, ಜನಪದ ವಾದ್ಯಗಳ ಬಳಕೆ, ಸಾಂಪ್ರದಾಯಿಕ ವೇಷಭೂಷಣಗಳು, ಅನಕ್ಷರ ಕುಕ್ಷಿಗಳ ಪಾಲ್ಗೊಳ್ಳುವಿಕೆ – ಇತ್ಯಾದಿಗಳೆಲ್ಲ ಜನಪದ ರಂಗಭೂಮಿಗೆ ಹತ್ತಿರವಾದ ಲಕ್ಷಣಗಳು. ಆದ್ದರಿಂದ ಯಕ್ಷಗಾನವನ್ನು ಪೂರ್ಣಶಾಸ್ತ್ರೀಯ, ಪೂರ್ಣ ಜಾನಪದ ಎಂದು ವರ್ಗೀಕರಿಸದೆ ಮಧ್ಯಮ ಜಾತಿಯ ಶಿಷ್ಟ ಕಲೆಯೆಂದು ಪರಿಭಾವಿಸಬಹುದು. ತಲೆಮಾರುಗಳಿಂದ ಪಂಡಿತ-ಪಾಮರರನ್ನು ಏಕಕಾಲಕ್ಕೆ ರಂಜಿಸುತ್ತಾ ಇಂದಿಗೂ ಜನಾಕರ್ಷಣೆಯನ್ನು ಉಳಿಸಿ ಬೆಳೆಯುತ್ತಿರುವ ಕಲೆ ಯಕ್ಷಗಾನ, ಮೇರು ಮಟ್ಟದ ಕಲಾವಿದರು, ಕಲಾಭಿಜ್ಞರು ಹಾಗೂ ವಿದ್ವಾಂಸರು ಈ ರಂಗದಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಈಗಲೂ ಯಕ್ಷಗಾನದಲ್ಲಿ ಸಂಶೋಧನೆ, ಕ್ಷೇತ್ರ ಕಾರ್ಯ, ಗ್ರಂಥ ಪ್ರಕಟಣೆ ಮತ್ತು ಸುಧಾರಣೆಯ ಕೆಲಸ ಕಾರ್ಯಗಳು ನಡೆಯುತ್ತಲೇ ಇವೆ.

ಆರಂಭದ ದಿನಗಳಲ್ಲಿ ಯಕ್ಷಗಾನ ಪೌರಾಣಿಕ ಜಗತ್ತಿನಲ್ಲಿ ಮಾತ್ರ ವಿಹರಿಸುತ್ತಿದ್ದ ಕಲೆ. ಆಗ ರಂಗಸ್ಥಳದಲ್ಲಿ ಮೆರೆಯುತ್ತಿದ್ದುದು ಕೇವಲ ದೇವ-ದೇವತೆಗಳು, ದೈತ್ಯ-ರಾಕ್ಷಸರು ಹಾಗೂ ಅತಿಮಾನವತೆಯ ಸನ್ನಿವೇಶಗಳು ಮಾತ್ರ. ಅದಕ್ಕನುಗುಣವಾಗಿ ಪುರಾಣ ಪ್ರಸಂಗಗಳೇ ರಚನೆಯಾಗುತ್ತಿದ್ದವು. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಮಹಾಕಾವ್ಯಗಳಲ್ಲದೆ ದೇವೀ ಭಾಗವತ, ಶಿವ-ವಿಷ್ಣು-ಗರುಡ ಪುರಾಣಗಳು ಅಂತಹ ಪ್ರಸಂಗಗಳಿಗೆ ಆಕರವಾಗುತ್ತಿದ್ದವು. ಕನ್ನಡದಲ್ಲಿ ಸುಮಾರು ಕ್ರಿ.ಶ. ೧೫೦೦ರ ಹೊತ್ತಿಗೆ ಆರಂಭಗೊಂಡ ಯಕ್ಷಗಾನ ಪದ್ಯ ಪ್ರಬಂಧಗಳಲ್ಲಿ ೧೯೩೦ರ ತನಕವೂ ಪೌರಾಣಿಕ ಕಥಾವಸ್ತು, ಪುರಾಣಕಾಲದ ಆಶಯ ಮತ್ತು ಭಾವನಾತ್ಮಕ ನಿರೂಪಣೆಗಳೇ ಮುಖ್ಯವಾಗಿದ್ದವು. ಇಲ್ಲಿ ಸಂಸ್ಕೃತಿಯ ಅಲೌಕಿಕ ಮಗ್ಗುಲು ಮಾತ್ರ ಚಿತ್ರಿತವಾಗಿದೆ. ದೇವಿದಾಸ, ನಾಗಪ್ಪಯ್ಯ, ಅಜಪುರದ ಸುಬ್ಬ, ವೆಂಕಟ, ಹಟ್ಟಿಯಂಗಡಿ ರಾಮಭಟ್ಟ, ಪಾರ್ತಿ ಸುಬ್ಬ, ಹಳೆಮಕ್ಕಿ ರಾಮ, ಪಾಂಡೇಶ್ವರ ವೆಂಕಟ, ಮಟ್ಟಿ ವಾಸುದೇವ ಪ್ರಭು, ವಾರಂಬಳ್ಳಿ ವಿಷ್ಣು, ಕಲ್ಯಾಣಿ ಭೀಮರಾಯ, ನಗಿರೆ ಸುಬ್ಬ, ಮಯ್ಯವಟಿ ವೆಂಕಟ, ಗೆರಸೊಪ್ಪೆ ಶಾಂತಪ್ಪಯ್ಯ, ಮೂಲ್ಕಿ ರಾಮಕೃಷ್ಣಯ್ಯ, ಸಂಕಯ್ಯ ಭಾಗವತ, ಮುದ್ದಣ, ಬವುಳಾಡಿ ವೆಂಕಟರಮಣಯ್ಯ, ಹಿರಿಯಣ್ಣ ಹೆಬ್ಬಾರ, ಕಡಂದಲೆ ರಾಮಾರಾಯ, ಬಲಿ ನಾರಾಯಣ ಭಾಗವತ, ಶೇಷಗಿರಿ ಭಾಗವತ, ಕವಿ ಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿ, ಕೀರಿಕ್ಕಾಡು ವಿಷ್ಣು ಭಟ್, ಸೀತಾನದಿ ಗಣಪಯ್ಯ ಶೆಟ್ಟಿ, ಅಗರಿ ಶ್ರೀನಿವಾಸ ಭಾಗವತ, ಕಡತೋಕಾ ಮಂಜುನಾಥ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ, ಅಮೃತ ಸೋಮೇಶ್ವರ, ಎನ್. ನಾರಾಯಣ ಶೆಟ್ಟಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಮಂದಾರ ಕೇಶವ ಭಟ್, ಶೇಣಿ ಗೋಪಾಲಕೃಷ್ಣ ಭಟ್, ಮಧುಕುಮಾರ್ ನಿಸರ್ಗ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ರಾಘವ ನಂಬಿಯಾರ್, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಕೆ. ಗೋವಿಂದ ಭಟ್, ಪುಳಿಂಚ ರಾಮಯ್ಯ ರೈ, ವೈ. ಚಂದ್ರಶೇಖರ ಎಟ್ಟಿ, ಅನಂತರಾಮ ಬಂಗಾಡಿ, ದಿನಕರ ಎಸ್. ಪಚ್ಚನಾಡಿ, ಬಿ. ಬಾಬು ಕುಡ್ತಡ್ಕ, ಕಂದಾವರ ರಘುರಾಮ ಶೆಟ್ಟಿ, ಯಕ್ಷಾನಂದ ಕುತ್ಪಾಡಿ, ಶ್ರೀಧರ ಡಿ.ಎಸ್., ಕೆ.ಎಸ್.ಮಂಜುನಾಥ್ ಮೊದಲಾದ ಯಕ್ಷಗಾನ ಕವಿಗಳ ಕೃತಿಗಳಲ್ಲಿ ಉದಾತ್ತ ಸಂದೇಶಗಳನ್ನು ಸಾರುವ ಪೌರಾಣಿಕ ಹಿನ್ನೆಲೆಯ ವಿಪುಲ ಪಾತ್ರ ಸೃಷ್ಟಿಯನ್ನು ಕಾಣಬಹುದು.

ಸುಮಾರು ಒಂದು ಶತಮಾನದಿಂದೀಚೆಗೆ ಯಕ್ಷಗಾನರಂಗದಲ್ಲಿ ಆಧುನಿಕ ಪ್ರಸಂಗಗಳು ಕಾಲಿಟ್ಟವು. ಚಾರಿತ್ರಿಕ, ಜಾನಪದ, ಸಾಮಾಜಿಕ ಹಾಗೂ ಕಾಲ್ಪನಿಕ ಕತೆಗಳಿಗೂ ಇಲ್ಲಿ ವಿಪುಲ ಅವಕಾಶ ದೊರೆಯಿತು. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಪ್ರಸಂಗಕರ್ತರು ಇಂತಹ ರೋಚಕ ಕತೆಗಳನ್ನಾಯ್ದುಕೊಂಡು ಅನೇಕ ಪ್ರಸಂಗಗಳನ್ನು ಬರೆದರು. ಅದು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ವಿವಿಧ ಮೇಳಗಳ ಮೂಲಕ ರಂಗ ಪ್ರಯೋಗವನ್ನು ಕಂಡವು.

ತುಳು ಯಕ್ಷಗಾನ

ತುಳುವಿನಲ್ಲಿ ಯಕ್ಷಗಾನಕ್ಕೆ ದೀರ್ಘ ಪರಂಪರೆ ಇಲ್ಲ. ರತ್ನಾಕರ ವರ್ಣಿ, ಮುದ್ದಣ, ಪಾರ್ತಿಸುಬ್ಬರಂತಹ ಉದ್ದಾಮ ಕವಿಗಳು ತುಳುವರಾಗಿದ್ದೂ ತುಳುಭಾಷೆಯಲ್ಲಿ ಪ್ರಸಂಗ ರಚಿಸಲು ಮುಂದಾಗಲಿಲ್ಲ. ಈ ವಿಷಯವಾಗಿ ಬಡಕಬೈಲ್ ಪರಮೇಶ್ವರಯ್ಯರು ತಮ್ಮ ‘ತುಳು ಕಿಟ್ಣರಾಜಿ ಪರ್ಸಂಗ’ದಲ್ಲಿ ಹೀಗೆನ್ನುತ್ತಾರೆ –‘ ಕಣಿಪುರತ್ತ ಕಿಟ್ಣ ದೇವೆರೆ ದೇವಸ್ಥಾನೊದ ಪಾಟಾಲ್ದಿ ಪರ್ವದಿ ಮಗೆ ಸುಬ್ಬೆ ತಾನ್ ಕೂಡಾ ಜಾತಿ ತುಳುವೆ ಆದ್‌ಪ್ಪುನಗ ತನ ಜಾತಿದ ಗೊತ್ತುಗಾಂಡಲಾ ಉಪ್ಪಡ್‌೦ದ್‌೦ದ್ ಒಂಜೇ ಒಂಜಿ ಪರ್ಸಂಗೊ ತುಳುಟ್ ಬರೆತ್‌ಜೆ. ದಾಯೆಗಾದ್‌? ಸುಬ್ಬನ ಕಾಲೊದ ಮೇಲರಸುಲು ಕನಡೆರಾದಿತ್ತಿನೆಡ್ಜ್ ಆಯೆಲಾ ಅಂಚ ಕನ್ನಡೊದು ಬರೆದುಪ್ಪೊಡತ್ತಂದೆ ಆಯಗ್ ಕನ್ನಡದಾತೆ ಪಿರಿತಿ ತುಳುಟು ಇತ್ತ್‌೦ಡ್‌೦ದ್ ಪಣಿಯೆರೆ ಕಣಿಪುರತ ಕಿಟ್ಣ ದೇವೆರೆ ಗುರ್ತದೀದ್ ಆಯೆ ಮಲ್ತಿನ ಏತೇತೋ ತುಳು ಕೀರ್ತನೆ ತೂವೆರೆ ತಿಕ್ಕುಂಡು’ (ಆ ಕಣಿಪುರ ಕೃಷ್ಣದೇವರ ದೇವಸ್ತಾನದ ಪಾಟಾಲ್ತಿ ಪಾರ್ವತಿಯ ಮಗ ಸುಬ್ಬ ತಾನು ಅಪ್ಪಟ ತುಳುವನಾಗಿದ್ದು ತನ್ನ ಜಾತಿಯನ್ನು ತಿಳಿಸುವುದಕ್ಕಾದರೂ ಇರಲೆಂದು ಒಂದೇ ಒಂದು ಪ್ರಸಂಗವನ್ನು ತುಳುವಿನಲ್ಲಿ ಬರೆಯಲಿಲ್ಲ; ಯಾಕಾಗಿ? ಸುಬ್ಬನ ಕಾಲದ ಮೇಲರಸುಗಳು ಕನ್ನಡಿಗರಾಗಿದ್ದುದರಿಂದ, ಅವನೂ ಹಾಗೆ ಕನ್ನಡದಲ್ಲೇ ಬರೆದಿರಬೇಕಲ್ಲದೆ, ಅವನಿಗೆ ಕನ್ನಡದಷ್ಟೇ ಪ್ರೀತಿ ತುಳುವಿನಲ್ಲೂ ಇತ್ತೆಂಬುದಕ್ಕೆ ಕಣಿಪುರದ ಕೃಷ್ಣದೇವರ ಅಂಕಿತವಿಟ್ಟು ಆತನು ಬರೆದಿರುವ ಅದೆಷ್ಟೋ ತುಳು ಕೀರ್ತನೆಗಳು ಕಾಣಲು ಸಿಗುತ್ತವೆ.)

ಬೇರೆ ಬೇರೆ ದ್ರಾವಿಡ ಭಾಷೆಗಳಲ್ಲಿ ಬೇರೆ ಬೇರೆ ಪ್ರಕಾರವಾಗಿ ದೇಶ-ಕಾಲಗಳಿಗೆ ತಕ್ಕಂತೆ ಬೆಳೆದು ಬಂದ ಮೂಲದ್ರಾವಿಡ ಕಲೆಯಾದ ಯಕ್ಷಗಾನ, ದ್ರಾವಿಡ ಭಾಷೆಗಳ ಪಂಕ್ತಿಗೇ ಸೇರಿದ ತುಳುವಿನ ಕಣಕ್ಕೆ ಕಾಲಿರಿಸಲು ಬಹಳ ತಡವಾಯ್ತು. ಈ ಸಾಹಸಕ್ಕೆ ಮೊದಲು ಕೈಹಾಕಿದವರು ಪೆರುವಡಿ ಸಂಕಯ್ಯ ಭಾಗವತರು. ೧೮೮೭ನೇ ಇಸವಿಯಲ್ಲಿ ಅವರು ಬರೆದ ‘ಪಂಚವಟಿ ವಾಲಿ ಸುಗ್ರೀವೆರೆ ಕಾಳಗೊ’, ಪಾರ್ತಿ ಸುಬ್ಬನ ಪ್ರಸಂಗದ ಅನುವಾದವಾದರೂ ಸ್ವತಂತ್ರ ಕೃತಿಯ ಸೊಗಸು, ಸೌಂದರ್ಯ ಅವರಲ್ಲಿದೆ. ಕೆಲವೆಡೆ ಮೂಲವನ್ನೂ ಮೀರಿದ ಕಾವ್ಯ ಕೌಶಲವನ್ನು ಅಲ್ಲಿ ಕಾಣಬಹುದು.

ಕಳೆದ ಶತಮಾನದ ಮೂರನೇ ದಶಕದಲ್ಲಿ ತುಳುನಾಡಿನಲ್ಲಿ ತುಳು ಚಳವಳಿ ಆರಂಭಗೊಂಡ ಹಿನ್ನೆಲೆಯಲ್ಲಿ ಕೆಲವು ಲೇಖಕರು ಬೇರೆ ಬೇರೆ ತೀರಿಯ ಕೃತಿಗಳನ್ನು ಬರೆಯಲು ಮುಂದಾದರು. ಬಡಕಬೈಲು ಪರಮೇಶ್ವರಯ್ಯರು ಬರೆದ ‘ತುಳು ಕಿಟ್ಣ ರಾಜಿ ಪರ್ಸಂಗೊ’ ಒಂದು ಸುಂದರವಾದ ಅನುವಾದ. ದೇರಂಬಳ ತ್ಯಾಂಪಣ್ಣ ಶೆಟ್ಟರು ‘ಪಂಚವಟಿ’ಯನ್ನು ಯಥವತ್ತಾಗಿ ಅನುವಾದಿಸಿದ್ದಾರೆ. ಕೆಮ್ತೂರು ದೊಡ್ಡಣ್ಣ ಶೆಟ್ಟರ ‘ಅಂಗದ ಸಂಧಾನ’ ಕಿನ್ನಿಮಜಲ್ ಈಶ್ವರ ಭಟ್ಟರ ‘ತುಳು ಸೇತು ಬಂಧೊ’, ನಡುವಳಚ್ಚಿಲ್ ಸೀತಾರಾಮ ಆಳ್ವರ ‘ರಾವಣ ಮೋಕ್ಷೊ’, ಅನಂತರಾಮ ಬಂಗಾಡಿಯವರ ‘ಸ್ವಾಮಿ ಭಕ್ತೆ ಅತಿಕಾಯೆ’, ಮಧುಕುಮಾರ ನಿಸರ್ಗರ ‘ಕರ್ಣಾವಸಾನೊ’- ಇದೇ ದಾರಿಯಲ್ಲಿ ನಡೆದ ಇತರ ಪ್ರಯತ್ನಗಳು. ಆದರೆ ಇವೆಲ್ಲವೂ ತುಳು ಭಾಷೆಗೆ ಅನುವಾದಗೊಂಡ ಪುರಾಣ ಪ್ರಸಂಗಗಳೆಂಬುದು ಗಮನಾರ್ಹ.

ಪಂದಬೆಟ್ಟು ವೆಂಕಟರಾಯರ ‘ಕೋಟಿ ಚೆನ್ನಯ’ ಪ್ರಸಂಗ (೧೯೩೯) ತುಳುನಾಡಿನ ಯಕ್ಷಗಾನಕ್ಕೆ ಹೊಸಬಾಗಿಲು ತೆರೆದುಕೊಟ್ಟಿತು ಎನ್ನಬಹುದು. ತುಳುನಾಡಿನ ತುಂಬ ದೈವಗಳಾಗಿ ಗರಡಿಗಳಲ್ಲಿ ಆರಾಧಿಸಲ್ಪಡುತ್ತಿದ್ದ ಅವಳಿ ವೀರರು ಯಕ್ಷಗಾನ ರಂಗಸ್ಥಳದಲ್ಲಿ ಇನ್ನೊಂದು ಬಗೆಯ ಕಾರಣೀಕವನ್ನು ಕಾಣಿಸಿ ಮಹಿಮಾನ್ವಿತರಾದರು. ‘ಬೈದರ್ಕಳ ಪ್ರತಾಪ’ ಕೋಟಿಚೆನ್ನಯರನ್ನು ತುಳುನಾಡಿನ ಸಾಂಸ್ಕೃತಿಕ ಪುರುಷರನ್ನಾಗಿಸಿ, ಸಮಾಜದ ಎಲ್ಲಾ ವರ್ಗದವರಿಗೂ ಪ್ರಿಯರನ್ನಾಗಿಸಿತು. ಆ ಬಳಿಕ ತುಳುನಾಡ ಸಿರಿ, ಕೋರ್ದಬ್ಬು ಬಾರಗ, ದೇವುಪೂಂಜ ಪ್ರತಾಪ, ಕಾಂತಾಬಾರೆ – ಬೂದಾಬಾರೆ, ಅಗೋಳಿ ಮಂಜಣ – ಹೀಗೆ ಇನ್ನೂ ಅನೇಕ ತುಳು ಜಾನಪದ ಕತೆಗಳು ಯಕ್ಷಗಾನ ಪ್ರಸಂಗಗಳಾಗಿ ಪ್ರೇಕ್ಷಕರಿಗೆ ಹೊಸ ರುಚಿ ನೀಡಿದವು.

ತುಳು ಯಕ್ಷಗಾನಕ್ಕೆ ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ಆರಂಭವಾದಂತೆ, ಅನೇಕರು ಹೊಸರಚನೆಗಳ ಕಡೆಗೆ ಚಿಂತನೆ ಹರಿಸಿದರು. ತುಳು ಪ್ರಸಂಗಕರ್ತರು ಜಾನಪದ, ಚಾರಿತ್ರಿಕ, ಅರ್ಧ ಚಾರಿತ್ರಿಕ – ಜಾನಪದ, ಅರ್ಧ ಜಾನಪದ – ಅಜ್ಜಿಕತೆಗಳು, ಸಂಪೂರ್ಣ ಕಾಲ್ಪನಿಕ ಕತೆಗಳನ್ನು ಆಯ್ದುಕೊಂಡು ಪ್ರಸಂಗ ರಚನೆಗೆ ತೊಡಗಿದರು. ಕಾಲದ ಹರಿವಿನೊಂದಿಗೆ ಬಂದ ಈ ಬದಲಾವಣೆಯನ್ನು ಯಾರೂ ಆಕ್ಷೇಪಿಸಲಿಲ್ಲ. ಯಕ್ಷಗಾನದಲ್ಲಿ ಕೆಲವು ಸುಧಾರಣೆಗಳನ್ನು ತರಬೇಕೆಂಬ ಆಲೋಚನೆಯನ್ನು ಐದಾರು ದಶಕಗಳ ಹಿಂದೆಯೇ ಈ ರಂಗದಲ್ಲಿ ದುಡಿದ ಹಿರಿಯರು ಘೋಷಿಸುತ್ತಾ ಬಂದಿದ್ದಾರೆ. ೧೯೩೦ರಲ್ಲಿ ಬೆಳ್ಳಾರೆಯ ಅಯ್ಯನಕಟ್ಟೆಯಲ್ಲಿ ಜರುಗಿದ ಯಕ್ಷಗಾನ ಮಹಾಸಭೆಯಲ್ಲಿ ಅಂದಿನ ಜಿಲ್ಲಾ ವಿದ್ಯಾಧಿಕಾರಿ ಆರ್. ತಾತಾಚಾರ್ಯರ ಅಧ್ಯಕ್ಷತೆಯಲ್ಲಿ ಕೆಲವು ನಿರ್ಣಯಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ ಎರಡನೆಯ ನಿರ್ಣಯ ಐತಿಹಾಸಿಕ ಮತ್ತು ಸಾಮಾಜಿಕ ಯಕ್ಷಗಾನ ಪ್ರಬಂಧಗಳನ್ನು ರಚಿಸಬೇಕು ಎಂಬುದು. ಇದು ಯಕ್ಷಗಾನ ಕವಿಗಳಲ್ಲಿ ಹೊಸ ಉತ್ಸಾಹ ಮೂಡಿಸಿತು. ೧೯೩೩ರಲ್ಲಿ ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟರು ಪ್ರಕಟಿಸಿದ ‘ರಾಣಾ ರಾಜಸಿಂಹ’ ಎಂಬ ಐತಿಹಾಸಿಕ ಪ್ರಸಂಗದಲ್ಲಿ ಈ ಬಗ್ಗೆ ಉಲ್ಲೇಖವಿದೆ. “ಈಗಿನ ಸುಧಾರಣಾ ಪ್ರಪಂಚದಲ್ಲಿ ಪೌರಾಣಿಕ ಕಥೆಗಳ ಸ್ಥಾನವನ್ನು ಐತಿಹಾಸಿಕ ಚರಿತ್ರೆಗಳೂ, ಐತಿಹಾಸಿಕ ಚರಿತ್ರೆಗಳ ಸ್ಥಾನವನ್ನು ಸಾಮಾಜಿಕ ನಾಟಕಗಳೂ ಆಕ್ರಮಿಸಲಾರಂಭಸಿದ್ದರಿಂದ ನಮ್ಮ ಯಕ್ಷಗಾನದಲ್ಲೂ ಕಾಲಕ್ಕೆ ತಕ್ಕ ಕೋಲವಾಗ ಬೇಕೆಂಬ ಗಾದೆಯಂತೆ ಸುಧಾರಣೆಯನ್ನು ಮಾಡಬೇಕಾಯ್ತು. ಇದರಿಂದಲೇ ಜನಜಾಗೃತಿ ಮಾಡು ವಗತ್ಯವಿರುವುದರಿಂದಲೂ, ಪಾತ್ರವರ್ಗದವರ ಅಭಿಲಾಷೆಯಂತೆ ಪ್ರೇಕ್ಷಕರ ಮನಸ್ಸನ್ನು ತೃಪ್ತಿಗೊಳಿಸಲು ಮೊದಲಿದ್ದ ಪ್ರಸಂಗಗಳು ಸಾಲದೆ ಹೋದದ್ದರಿಂದ ಸಮಾಜದ ಅಭಿಲಾಷೆಗನುಸಾರವಾದ ಯೋಗ್ಯತೆಯು ಯಕ್ಷಗಾನಲದಲ್ಲೂ ಇರಬೇಕಾಯ್ತು. ಆದುದರಿಂದ ಯಕ್ಷಗಾನದ ಸುಧಾರಣೆಗಾಗಿ ೧೯೨೫-೨೬ನೇ ಸಾಲಿಗೆ ಸದ್ವಿದ್ಯವಾಂತರಾದ ಅನೇಕರ ಸೇರುವಿಕೆಯಿಂದ ದಕ್ಷಿಣ ಕನ್ನಡ ಮುಖ್ಯ ಕ್ಷೇತ್ರವಾದ ಮಂಗಳೂರಿನಲ್ಲಿ ಶ್ರೀಯುತುಳ್ಳಾಲ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದ ‘ಯಕ್ಷಗಾನೋಜ್ಜೀವಿನೀ’ ಸಭೆಯ ಆಜ್ಞೆಯಂತೆ ಅಧ್ಯಕ್ಷ ಮಹಾಶಯರ ಅಪ್ಪಣೆಯನ್ನು ಪಡೆದು ‘ರಾಣಾರಾಜಸಿಂಹ’ ಎಂಬೀ ಐತಿಹಾಸಿಕ ಪ್ರಬಂಧವನ್ನು ಹನ್ನೆರಡು ಅಂಕಗಳಾಗಿ ಬರೆದು ಪೂರ್ತಿಗೊಳಿಸಿದೆ” ಎಂದು ಪ್ರಸಂಗದ ಪೀಠಿಕೆಯಲ್ಲಿ ಕೆ.ಪಿ. ವೆಂಕಪ್ಪ (ಕೆದಂಬಾಡಿ ಪಕೀರ ವೆಂಕಪ್ಪ) ಶೆಟ್ಟರು ಹೇಳಿಕೊಂಡಿದ್ದಾರೆ.

ಪಂಜೆ ಮಂಗೇಶರಾಯರೂ ‘ಪಾಣಿಪತ’ ಎಂಬ ಪುಟ್ಟ ಐತಿಹಾಸಿಕ ಪ್ರಸಂಗ ಬರೆದಿದ್ದಾರೆ. ನಾರಂಬಾಡಿ ಸುಬ್ಬಯ್ಯ ಶೆಟ್ಟರು ಬರೆದ ಕೆಲವು ಪ್ರಸಂಗಗಳು ತುಳು ಯಕ್ಷಗಾನದ ಮೈಲಿಕಲ್ಲುಗಳೆಂದೇ ಹೇಳಬೇಕು. ಅವರ ಕೋಡ್ದಬ್ಬು ಬಾರಗ, ತುಳುನಾಡ ಸಿರಿ, ದೇವುಪೂಂಜ ಪ್ರತಾಪ, ಸರ್ಪಮತ್ಸರ, ಪಂಜುರ್ಲಿ ಪ್ರತಾಪ, ದಳವಾಯಿ ದುಗ್ಗಣ್ಣೆ (ಮೂಲನಾಟಕ ಕೆ.ಬಿ. ಭಂಡಾರಿ) ಇತ್ಯಾದಿ ಪ್ರಸಂಗಗಳು ಜನಮನ್ನಣೆ ಗಳಿಸಿದವು. ಕಲ್ಲಾಡಿ ಕೊರಗ ಶೆಟ್ಟಿ ಹಾಗೂ ಅವರ ಪುತ್ರ ಕಲ್ಲಾಡಿ ವಿಠಲ ಶೆಟ್ಟರ ಕುಂಡಾವು ಮತ್ತು ಕರ್ನಾಟಕ ಮೇಳಗಳು ತುಳು ಆಟಗಳಿಗೆ ಮೊದಲ ಮಣೆ ಹಾಕಿ ನಾರಂಬಾಡಿಯವರ ಎಲ್ಲಾ ಪ್ರಸಂಗಗಳನ್ನೂ ಚೆನ್ನಾಗಿ ಪ್ರದರ್ಶಿಸಿ, ಜನಸಾಮಾನ್ಯರ ಆಡು ಭಾಷೆಯಲ್ಲೇ ರಂಗಕ್ಕಿಳಿಸಿ ಜನರ ಹತ್ತಿರ ಬಂದವು.

ದಾಮೋದರ ಮಂಡೆಚ್ಚ, ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ರಾಮದಾಸ ಸಾಮಗ, ಮಾಧವ ಶೆಟ್ಟಿ, ಮಂಕುಡೆ ಸಂಜೀವ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಮದ್ಯಡ್ಕ ಗೋಪಾಲ ಶೆಟ್ಟಿ, ಮೂಡಬಿದ್ರೆ ಕೃಷ್ಣರಾವ್, ಪುಳಿಂಚ ರಾಮಯ್ಯ ರೈ, ಗುಂಪೆ ರಾಮಯ್ಯ ಶೆಟ್ಟಿ, ಮೊದಲಾದ ಕಲಾವಿದರು ಆ ಕಾಲದಲ್ಲಿ ತುಳು ಭಾಷೆಯ ಅಂದ-ಚಂದ, ಸತ್ವ-ಸಾರಗಳನ್ನು ರಂಗಸ್ಥಳದ ಮೇಲೆ ಅನಾವರಣಗೊಳಿಸಿ, ಪ್ರೇಕ್ಷಕರ ಮೇಲೆ ಇನ್ನಿಲ್ಲದ ಪ್ರಭಾವ ಬೀರಿದರು.

ಆಧುನಿಕ ತುಳು ಪ್ರಸಂಗಗಳ ಕತೆ ಮತ್ತು ಸಾಹಿತ್ಯ

ಈಚೆಗೆ ಮೂರ್ನಾಲ್ಕು ದಶಕಗಳಲ್ಲಿ ತುಳು ಭಾಷೆಯಲ್ಲಿ ಹಲವಾರು ಪ್ರಸಂಗಗಳ ರಚನೆಯಾಯಿತು. ಬಹುತೇಕ ತೆಂಕುತಿಟ್ಟಿನ ಎಲ್ಲಾ ಮೇಳಗಳು (ಕಟೀಲು ಧರ್ಮಸ್ಥಳ ಹೊರತು) ತುಳು ಆಟಗಳನ್ನು ಆಡತೊಡಗಿದವು. ಇದರಿಂದ ತುಳು ಪ್ರಸಂಗಗಳಿಗೆ ಬೇಡಿಕೆ ಹೆಚ್ಚಾಯಿತು. ಪರಿಣಾಮವಾಗಿ ಪ್ರಸಂಗಗಳ ಗುಣಮಟ್ಟ ಕಡಿಮೆಯಾಯ್ತು. ಪ್ರಸಂಗಕರ್ತರ ನಡುವೆ ಪೈಪೋಟಿ ಉಂಟಾಯಿತು. ಹಾಗಾಗಿ ತುಳು ಪ್ರಸಂಗಗಳು ಸಂಖ್ಯೆಯಲ್ಲಿ ಹೆಚ್ಚಾದರೂ ಅವುಗಳಿಗೆ ಬಾಳಿಕೆ ಇಲ್ಲದಂತಾಯ್ತು. ಒಂದು ವರ್ಷ ರಂಗದಲ್ಲಿ ರಂಜಿಸಿದ ಪ್ರಸಂಗ ಅದರ ಮರುವರ್ಷವೇ ಹೇಳಹೆಸಿಲ್ಲದಂತಾಗುತ್ತಿತ್ತು. ತಕ್ಷಣ ಹೊಸಹೊಸ ಪ್ರಸಂಗಗಳು ಹುಟ್ಟಿಬರುತ್ತಿದ್ದವು. ಅದರಲ್ಲಿ ಜಳ್ಳು ಎಷ್ಟೇ ಇರಲಿ, ಕಾಳು ಕಮ್ಮಿಯೇ ಇರಲಿ –ಅವುಗಳನ್ನು ಸಂಗ್ರಹಿಸಿಡುವುದು ಬಹಳೆ ಅಗತ್ಯ. ಹುಟ್ಟಿನಲ್ಲೇ ನಾಶವಾದರೆ ಮುಂದಿನ ತಲೆಮಾರಿಗೆ ಅದರ ಸುಳಿವೂ ಇಲ್ಲದೇ ಹೋಗುತ್ತದೆ. ಒಂದು ಕಾಲಘಟ್ಟದಲ್ಲಾದ ಕಲಾಸಾಹಿತ್ಯದ ಗೈಮೆಗೆ ಅರ್ಥವಿಲ್ಲದಂತಾಗುತ್ತದೆ. ಸಂಶೋಧನೆಗೆ ಇಳಿಯುವವರಿಗೆ ಬೇಕಾದ ಸರಕೂ ಲಭ್ಯವಾಗುವುದಿಲ್ಲ.

ಈಗಿನ ತುಳು ಪ್ರಸಂಗಗಳು ಕೇವಲ ಒಂದೆರಡು ವರ್ಷ ಪ್ರದರ್ಶನಗೊಳ್ಳುವ ಉದ್ದೇಶದಿಂದ ಮಾತ್ರ ಬರೆಯಲ್ಪಡುವಂಥವುಗಳಾದುದರಿಂದ ಅವುಗಳ ಭದ್ರತೆಯ ಬಗ್ಗೆ ಯಾರೂ ಯೋಚಿಸುವುದಿಲ್ಲ. ಆ ಪ್ರಸಂಗಗಳು ಮುದ್ರಣಗೊಳ್ಳುವುದೂ ವಿರಳ. ಕೈಪ್ರತಿಯ ಹಾಳೆಗಳು ಲೇಖಕರ ಕೈತಪ್ಪಿ ಯಾವ್ಯಾವುದೋ ಮೇಳಗಳನ್ನು ಸುತ್ತಿ ಮತ್ತೆ ಎಲ್ಲೋ ಕಳೆದು ಹೋಗುತ್ತವೆ. ಆದ್ದರಿಂದ ಅವುಗಳ ಶಾಶ್ವತ ದಾಖಲೆಗಾಗಿ ಕಳೆದ ಮೂರು ದಶಕಗಳಲ್ಲಿ ತೆಂಕುತಿಟ್ಟಿನ ವಿವಿಧ ಮೇಳಗಳು ಆಡಿದ ಕೆಲವು ನೂತನ ತುಳು ಪ್ರಸಂಗಗಳ ಯಾದಿಯನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ. ಇದು ಪರಿಪೂರ್ಣ ಅಲ್ಲ. ಈ ಪ್ರಸಂಗಗಳೆಲ್ಲಾ ಆಯಾಯ ಪ್ರಸಂಗಕರ್ತರ ಹೆಸರಿನೊಂದಿಗೇ ಗೌರವಿಸಲ್ಪಡುತ್ತವೆ.

ಅನಂತರಾಮ ಬಂಗಾಡಿ

ಯಕ್ಷಗಾನ ಪ್ರಸಂಗಕರ್ತರ ಎರಡನೆಯ ತಲೆಮಾರಿನ ಜಾನಪದ ಮತ್ತು ಕಾಲ್ಪನಿಕ ಕತೆಗಳ ಆಧಾರದಲ್ಲಿ ತುಳು ಪ್ರಸಂಗಗಳನ್ನು ಬರೆದು ಹೆಸರಾದವರು ಅನಂತರಾಮ ಬಂಗಾಡಿ. ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ತುಳು ಐತಿಹಾಸಿಕ ನಾಟಕ ಹಾಗೂ ಯಕ್ಷಗಾನ ಪ್ರಸಂಗಗಳನ್ನು ಬರೆಯುತ್ತಿರುವ ಸಾಹಸಿ. ಬಂಗಾಡಿಯವರು ಬರೆದು ರಂಗಸ್ಥಳದಲ್ಲಿ ಮೆರೆದ ತುಳು ಯಕ್ಷಗಾನಗಳ ಪಟ್ಟಿ ಹೀಗಿದೆ.

೧. ಮೂಲೆರೆ ಬೂಡುದ ಚಂದನ ಬಾಲೆ ೨. ಬಂಗವಾಡಿದ ಕೊಲ್ಲಿ ದುಗೆ ೩. ಬಂಗಾರ್ ಬಾಲೆ ಬೊಳ್ಳಿಕುಮಾರೆ ೪. ಬಾಲೆ ದುಗ್ಗು ಕೊಂಡೆ ಬಲ್ಲಾಳ್ತಿ ೫. ಮೂಜೂರ ಉಲ್ಲಾಕುಳು ಮೂವೆರ್ ದೆಯ್ಯೊಂಕುಳ್ ೬. ಶ್ರೀಂತ್ರಿದ ಚೆನ್ನಕ್ಕೆ ೭. ಪಟ್ಟದ ಪದ್ಮಲೆ ೮. ಕಾಡ ಮಲ್ಲಿಗೆ ೯. ಪುಂಚದ ಪುರ್ಪ ೧೦. ಮರ್ಮಲ್ ಮಂದರೆ ೧೧. ಬಂಗಾರ್ ಕೇದಗೆ ೧೨. ನಾಗ ಸಂಪಿಗೆ ೧೩. ಸ್ವಾಮಿಭಕ್ತೆ ಅತಿಕಾಯೆ ೧೪. ಪದ್ಮ ತಾಮರೆ ೧೫. ಕೈ ಪತ್ತಿ ಕಂಡನಿ ೧೬. ಬೊಳ್ಳಿ ಗಿಂಡ್ಯೆ ೧೭. ಮದ್ರೆಂಗಿ ಮದ್ಮಾಳ್ ೧೮. ಸ್ವಾಮಿ ಭಕ್ತೆ ಕಾಜವೆ ೧೯. ಕಾನದ ತನಿಯೆ ೨೦. ಸಿಂಗಾರ್ದ ಸಿರಿಮುಡಿ ೨೧. ಮಗಳೆನ ಮದಿಪು ೨೨. ಸ್ವರ್ಗದ ಸುರಗೆ ೨೩. ಕಾಂಚನ ಗಂಗೆ ೨೪. ಕಂಚಿದ ಕಂಕಣ ೨೫. ಪದೆತಿ ಪದ್ಮಕ್ಕ ೨೬. ಗೆಜ್ಜೆ ಕತ್ತಿ ೨೭. ಕಲ್ಜಿಗದ ಕರ್ಣೆ ೨೮. ಪದ್ಮ ಕೋಮಲೆ ೨೯. ಸರ್ಪ ಸಂಕಲೆ ೩೦. ಸತ್ಯದ ಸತ್ತಿಗೆ ೩೧. ಗೋಣ ತಂಕರೆ ೩೨. ಧರ್ಮದೈವ ಕೊಡಮಂದಾಯೆ ೩೩. ಕೇದಿಗೆ ಕೆಂಚಮ್ಮ ೩೪. ಕುಡುಪು ಕ್ಷೇತ್ರ ಮಹಾತ್ಮೆ ೩೫. ಅಂಗಜಾಲ ಸಿರಿಗಂಗೆ ೩೬. ಸತ್ಯ ಸಿರಿ ಕನ್ಯಗೆ ೩೭. ಶಲ್ಯ ಸಾರೆತಿ-ಕರ್ಣನ ಅಂತ್ಯ ೩೮. ಭೀಷ್ಮಗ್ ಪಗರಿ ಮಂಚ ೩೯. ಕಲ್ಲಾಯಿ ಕನ್ಯಗೆ ೪೦. ಬೂಡುದ ಬೊಮ್ಮಯೆ ೪೧. ಪಟ್ಟದ ಪೆರುಮಳೆ ೪೨. ಸಿರಿಕಿಷ್ಣೆ ಚಂದಪಾಲಿ ೪೩. ಗಾಂಡೀವ ಬಿರುವೆ ೪೪. ಪಟ್ಟೊದ ಪೂಂಜೆ ೪೫. ಬಿರುವ ಬೀರೆ ಬೊಲ್ಲ ಬೈದ್ಯೆ.

ಇಷ್ಟಲ್ಲದೆ ಬಂಗಾಡಿಯವರು ಹದಿನಾಲ್ಕು ಕನ್ನಡ ಪ್ರಸಂಗಗಳನ್ನೂ ರಚಿಸಿದ್ದಾರೆ. ಇವರ ಎಂಟು ತುಳು ಪ್ರಸಂಗಗಳನ್ನು ಮಂಗಳೂರಿನ ನಿತ್ಯಾನಂದ ಗ್ರಂಥಾಲಯ ಪ್ರಕಟಿಸಿದೆ. ಕಾಲ್ಪನಿಕ ತುಳು ಪ್ರಸಂಗಗಳಿಗೆ ತುಳುವಿನಲ್ಲೇ ಸ್ವತಂತ್ರ ಪದ್ಯ ರಚನೆ ಮಾಡಿದ ಪ್ರಥಮ ಕವಿ ಅನಂತರಾಮ ಬಂಗಾಡಿ. ಅವರ ಮೊದಲ ತುಳು ಪದ್ಯ ರಚನೆಯ ಪ್ರಸಂಗ ಪಟ್ಟದ ಪದ್ಮಲೆಯಲ್ಲಿ ಬರುವ ಒಂದು ಸನ್ನಿವೇಶದ ಭಾಮಿನಿ ಷಟ್ಪದಿ ಹೀಗಿದೆ –

ಉಂಡು ಮಲ್ದಿನ ದೇವೆರೆನ ತರೆ |
ತುಂಡು ಮಲ್ದಿನ ದೇವೆರೆನ ಗಣ |
ದಂಡ್ ಭೂಮಿಗ್ ಜೈದ್ ಬತ್ತಿನಲೆಕ್ಕ ಬಲ್ಲಾಳೆ |
ಮಂಡೆ ತಗ್ಗದ್ ಕಪ್ಪ ಕೊರ್ಪಿನ
ತುಂಡು ರಾಯೆರೆ ತೂದು ಕೋಪೊಡು |
ದಂಡ್ ಕೊನೊದುಲ ಬರ್ಪಿ ಯೇಳ್ಯೊಡು ತೆರಿಯೆ ಬಂಗರಸು || ೧ ||

ಪಟ್ಟದ ಪದ್ಮಲೆ ಪ್ರಸಂಗದಲ್ಲಿ ಬೀಡಿನ ಪ್ರಧಾನಿ ಪದ್ಮಣ್ಣನ ತ್ಯಾಗವನ್ನು ಕಾಣಿಸಿದ್ದಾರೆ. ಅರಸು ವಂಶವನ್ನು ಉಳಿಸಿವುದಕ್ಕಾಗಿ ತನ್ನ ಮಗುವನ್ನೇ ಬಲಿಕೊಡುವ ಸನ್ನಿವೇಶದಲ್ಲಿ ಆತನ ಪತ್ನಿಯೂ ಸಹಕರಿಸುವ ತ್ಯಾಗದ ಪರಾಕಾಷ್ಠೆ ಇಲ್ಲಿದೆ.

ರಾಗ ಸೌರಾಷ್ಟ್ರ – ತಿವುಡೆ

ಮೂಲವಂಶೊಲ ಒರಿದ್ ಕಂಡನಿ | ಬಾಳ ರಂದ್‌ದ್‌ಲಕ್ಷ್ಮಿಲ ||
ಬಾಲೆ ತನ್ನೆನ್ ಕನತ್‌ಕೊರ್ತಳ್ | ಜಾಲ್‌ಗಾಳ್ || ೧ ||

ಕನ್ನಡದಲ್ಲಿರುವ ‘ಚಲಿಸುವ ಜಲದಲ್ಲಿ ಮತ್ಸ್ಯನಿಗೆ’ ಎಂಬ ಪದ್ಯದ ಭಾಷಾಂತರವಾಗಿ ‍ನೀರ್ಡ್‌ನೀಂದುನ ಮೀನವತಾರೊಗು |

ಪೇರ್ದ ಕಡಲ್‌ದ ಪಾಳೆವುಗು! (ಪಾಳೆವು – ಕೂರ್ಮ) ಎಂದು ಬರೆದಿದ್ದಾರೆ.

ಅನಂತರಾಮರ ‘ಸ್ವಾಮಿಭಕ್ತೆ ಅತಿಕಾಯೆ’ ಕನ್ನಡ ಪ್ರಸಂಗದ ರೂಪಾಂತರ. ಇಲ್ಲಿನ ಪದ್ಯಗಳು ಮೂಲ ಪ್ರಸಂಗದ ಧಾಟಿಯಲ್ಲೇ ಇವೆಯಾದರೂ ಅವುಗಳಲ್ಲಿ ಪ್ರಸಂಗಕರ್ತರ ಸ್ವಂತಿಕೆಯ ಛಾಪಿದೆ.

ರಾಗ ಕಾಂಬೋಧಿ ಜಂಪೆ

ಅಪ್ಪ ಪೋಡ್ಯುಜಿ ಯಾನ್ ತರ್ಪುಡ್ದು ಬೂಳ್ಯ ಕೊರಿ |
ತಪ್ಪಂದೆ ಲಡಾಯಿಗಿನಿ ಪೋಪೆ |
ಒಪ್ಯೆನಾರಾವಣೆಲ ಕೊರ್ಪೆ ಬೂಳಿಯೊ ಮಗಕ್
ಒಪ್ಪುದುಲ ಪಿದಡುವೆನೆ ಬೇಗ || ೧ ||

ಬೊಳ್ಳಿ ಗಿಂಡೆಪ್ರಸಂಗದಲ್ಲಿ ಕರಿಯ ಡೊಂಬನ ಪ್ರವೇಶದ ಪದ್ಯ
ಅರ್ಯಸವಾಯ್

ಕಡಲ್‌ದ ಬರಿತಲ ಕುಡಲದ ವೂರುಡೆ |
ಮಡಲಾಯೆರೆ ಬೊಟ್ಟುನು ಸುತ್ಯೆ ||
ಕಡಪುಲ ದಾಂಟಿಯೆ ಡೊಂಬೆಲ ಕೈಟೇ |
ಗುಡುಗುಡು ಗುಮ್ಮಟೆ ಬೊಟ್ಟೊಂದು || ೧ ||

ಕರ್ನಾಟಕ ಮೇಳದವರು ಆಡುತ್ತಿದ್ದ ಕಾಡುಮಲ್ಲಿಗೆ ಆರುನೂರು ಪ್ರಯೋಗ ಕಂಡು ತುಳು ಭಾಷೆಯಲ್ಲಿ ಕ್ರಾಂತಿಯೆಬ್ಬಿಸಿದ ಪ್ರಸಂಗ. ಈ ಪ್ರಸಂಗದಲ್ಲಿ ಬಂಗಾಡಿಯವರು ತುಳುನಾಡಿನ ವೈಶಿಷ್ಟ್ಯವನ್ನು ಕೊಂಡಾಡಿದ್ದಾರೆ.

ಪೀಠಿಕೆ ಪದ್ಯ – ರಾಗ : ಸೌರಾಷ್ಟ್ರ – ತಾಳ : ತ್ರಿವುಡೆ

ಕುಡರಿದಕ್ಕ್‌ದ್ ವುಂಡು ಮಲ್ದಿನ |
ಕಡಲ ಬರಿ ಕಟ್ಟಾಡಿ ಬೂಡುನು |
ನಡಪುಡಿಯೆ ಬೊಮ್ಮಣ್ಣೆ ಪೊರ್ಲುಡು |
ಬಡೆಕಾಯಿಡ್ಲ || ೧ ||

ಈ ಕತೆಯಲ್ಲಿ ಬರುವ ಉದ್ಯಾವರದ ಅರಸನ ವ್ಯಕ್ತಿತ್ವವನ್ನು ಪೌರಾಣಿಕ ಪಾತ್ರಗಳೊಂದಿಗೆ ಹೋಲಿಸಿ ವಿವರಿಸುವ ಒಂದು ಭಾಮಿನ ಷಟ್ಪದಿ ಹೀಗಿದೆ-

ಪಗರಿ ಬುಡ್ಪಿನ ಬಿರ್ಸ್‌ಗಂಗೆನ |
ಮಗನ ಪುಳ್ಳಿನ ದಾನ ಧರ್ಮೊಡು |
ಪಗೆಲ್ ರಾಜನ ಮಗೆನೆ ರೂಪೊಡು ಮನ್ಮತೆಲಕೇಣೀ ||
ನಗೊಟು ಬಡೆಕ್ಕಾದ ಕುಬೇರೆನ |
ಬಿಗುಟು ಚಂದ್ರೆಗೆ ಸತ್ಯೊಡಾಯೆನೆ |
ಲಗುಟು ನಡಪಿನ ಚಂದ್ರಮತಿ ಕಂಡನಿಲ ತಾನಾದ್ || ೧ ||

‘ಮಲ್ಲಿಗೆ’ ಎಂಬ ಕಾಡಕನ್ಯೆಯನ್ನು ನೋಡಿ ಖಳನಾಯಕ ಬೀರಣ್ಣ ‘ನೀನು ಯಾರಿಗಾಗಿ ಕಾಯುತ್ತಿರುವೆ….?’ ಎಂದು ಪ್ರಶ್ನಿಸಿದಾಗ ಆಕೆ ನೀಡುವ ಚಾತುರ್ಯದ ಉತ್ತರ –

ಭಾಮಿನಿ

ಸಾರಕಣ್ಣ್‌ಲ ಉಪ್ಪುನಾಯನ |
ಬೀರೆ ಮಗನ್‌ಲ ಕೆರ್ತಿನಾಯನ |
ದಾರೆ ದರೆಸೆತಿಯಾಳೆನ್‌ಲ ಕೊನೊದೀತಿನಾಯನಲಾ ||
ಊರು ಪೊತ್ತದಿನಾಯ ನಮ್ಮನ್ |
ಬಾರಿ ಕಾತೊಂದುಲ್ಲೆ ತಿನರೆಗ್ |
ಯೇರ್ಯೀ ಕೇಣುವಯ ಪಂಡ್‌ದ್ ಪಂಡೊಳಪಗಾಳ್ || ೧ ||

[ಭಾವಾರ್ಥ : ಸಾವಿರ ಕಣ್ಣುಳ್ಳವ (ದೇವೆಂದ್ರ)ನ ವೀರಪುತ್ರ (ವಾಲಿ)ನನ್ನು ಕೊಂದವ(ರಾಮ)ನ ಪಟ್ಟದರಸಿ(ಸೀತೆ)ಯನ್ನು ಕದ್ದೊಯ್ದವ (ರಾವಣ)ನ ಊರು ಸುಟ್ಟವ (ಹನುಮಂತ)ನ ಅಪ್ಪ (ವಾಯು)ನನ್ನು ಕಾಯುತ್ತಿದ್ದೇನೆ.]

ವಾಯು ಸೇವನೆಗಾಗಿ ಬಂದಿರುವೆ ಎಂಬ ಉತ್ತರ ಕೊಡುವ ಈ ಪದ್ಯದಲ್ಲಿ ಒಗಟಿನ ಚಮತ್ಕಾರವನ್ನು ಬಳಸಲಾಗಿದೆ. ಇದು ಮುದ್ದಣನ ‘ಕುಮಾರ ವಿಜಯ’ದಲ್ಲಿ ಬರುವ –‘ಅತಿಥಿಯನು ಪೆತ್ತವನ ಪಿತನ ತಳೋದರಿಯನೊಯ್ದನ….’ ಎಂಬ ಪದ್ಯವನ್ನು ನೆನಪಿಸುತ್ತದೆ.

ಅನಂತರಾಮ ಬಂಗಾಡಿ ಬರೆದ ಹೆಚ್ಚಿನ ಪ್ರಸಂಗಗಳು ‘ತುಳು ಪಾಡ್ದನ’ ಆಧಾರಿತ ಕತೆಗಳನ್ನೊಳಗೊಂಡಿವೆ. ‘ಪಟ್ಟದ ಪೆರುಮಳೆ’ ಪ್ರಸಂಗದಲ್ಲಿ ಕೋಟಿಚೆನ್ನಯರ ಹುಟ್ಟಿನ ಹಿನ್ನೆಲೆಯ ಕತೆಯಿದೆ. ನಾಗಬ್ರಹ್ಮರು ಕಾಂಜವ ಕೀಂಜವ ಎಂಬ ಪಕ್ಷಿದ್ವಯರುಗಳನ್ನು ಸೃಷ್ಟಿಸುವುದು, ಅವು ಸತಿಪತಿಗಳಾಗಿ ತಮ್ಮ ಮೊದಲ ತತ್ತಿಯನ್ನು ಬ್ರಹ್ಮದೇವರಿಗೆ ಅರ್ಪಿಸಲು ಕೊಂಡೊಯ್ಯುವಾಗ ಆ ತತ್ತಿ ಕಲ್ಲಿಗೆ ಬಿದ್ದು ಒಡೆಯುವುದು; ಅದರೊಳಿನ ತಿರುಳು ಬಿದ್ದಲ್ಲಿ ಮೃಣ್ಮಯವಾದ ಅರಮನೆ ಆಗಿ ಅದರಲ್ಲಿ ಏಕನಸಾಲೆರೂ ಉದಿಸಿ ಬರುತ್ತಾರೆ. ಅವರಲ್ಲಿ ಹುಟ್ಟಿದವನೇ ಪೆರುಮಳ ಬಲ್ಲಾಳನೆಂದು ತುಳು ಸಂಧಿಯೊಂದು ಹೇಳುತ್ತದೆ. ಅದೇ ಕಾಂಜವ ಕೀಂಜವ ಹಕ್ಕಿಗಳು ಎರಡನೆಯ ತತ್ತಿಯನ್ನು ಬ್ರಹ್ಮದೇವರಿಗೆ ಅರ್ಪಿಸಲು ಒಯ್ಯುವಾಗ ಅದು ಕಡಲಿಗೆ ಬಿದ್ದು, ಓಬಣ್ಣ ಭಟ್ಟರಿಗೆ ಸಿಕ್ಕಿ ಬಿಳಿ ಅಕ್ಕಿ ರಾಶಿಯಲ್ಲಿಟ್ಟಾಗ ಹೆಣ್ಣು ಮಗುವೊಂದು ಹುಟ್ಟುತ್ತದೆ. ಅವಳೇ ಸುವರ್ಣ ಕೇದಗೆ. ಅವಳು ದೇಯಿಯ ತಾಯಿ, ದೇಯಿ ಹಡೆದ ಅವಳಿ ಮಕ್ಕಳು ಕೋಟಿ ಚೆನ್ನಯರು. ಅವರನ್ನು ಸಾಕಿದವನು ಪೆರುಮಳ ಬಲ್ಲಾಳ. ‘ಪಟ್ಟದ ಪೆರುಮಳೆ’ ಪ್ರಸಂಗದಲ್ಲಿ ಅವನ ಹಿನ್ನೆಲೆಯಿದೆ. ಅದೇ ರೀತಿ ‘ದೇವು ಪೂಂಜ ಪ್ರತಾಪ’ದ ಪೂರ್ವ ಭಾಗ ದುಗಣ ಕೊಂಡೆಯ ಕತೆಯನ್ನೂ ಬಂಗಾಡಿ ಪ್ರಸಂಗವಾಗಿಸಿದ್ದಾರೆ. ಹೊಸ ಬಗೆಯ ‘ಚಂದಪಾಲಿ ದೇವಿ-ಗಾಳಿ ಕಿಷ್ಣದೇವೆರ್’ ಪಾಡ್ದನದ ಆಧಾರದಲ್ಲಿ ‘ಶ್ರೀ ಕೃಷ್ಣ ಚಂದ್ರಾವಳಿ’ ಯನ್ನು ‘ಸಿರಿ ಕಿಟ್ಣೆ ಚಂದಪಾಲಿ’ ಎಂಬ ಹೆಸರಿನಲ್ಲಿ ಪ್ರಸಂಗ ಬರೆದಿದ್ದಾರೆ.

ತುಳು ಭಾಷೆಯ ಪದ್ಯಗಳು, ಗೊಲ್ಲರ ಅನಾಗರಿಕ ಜೀವನ, ಶ್ರೀಕೃಷ್ಣ ದೇವರು ಆ ಜನರ ಮೌಢ್ಯವನ್ನು ಕಳೆಯುವ ಸುಂದರ ಚಿತ್ರಣ ಇಲ್ಲಿ ಮೂಡಿ ಬಂದಿದೆ. ಅಮೃತ ಸೋಮೇಶ್ವರರ ‘ಅಮರ ಶಿಲ್ಪಿ’ ಕನ್ನಡ ಪ್ರಸಂಗವನ್ನು ಬಂಗಾಡಿ ‘ತುಳುನಾಡ ಕಲ್ಕುಡೆ’ ಎಂಬ ಹೆಸರಿನಲ್ಲಿ ತುಳುವಿಗೆ ಅನುವಾದಿಸಿದ್ದಾರೆ. ಹಾಗೆಯೇ ‘ತುಳುವಾಲ ಬಲಿಯೇಂದ್ರೆ’ ಎನ್ನುವ ಪ್ರಸಂಗವನ್ನು ಕೂಡಾ ಬರೆದಿದ್ದಾರೆ.

ಈಗಿನ ತುಳು ಪ್ರಸಂಗಗಳು ಕಾಲ್ಪನಿಕ ಕತೆಗಳನ್ನೇ ಆಯ್ದುಕೊಳ್ಳುವುದರಿಂದ ಯಕ್ಷಗಾನ ಕುಲಗೆಟ್ಟು ಹೋಗಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ತುಳು ಪ್ರಸಂಗಕರ್ತರು ಪೌರಾಣಿಕ, ಚಾರಿತ್ರಿಕ ಹಾಗೂ ಪಾಡ್ದನ ಆಧಾರಿತ ಪ್ರಸಂಗ ರಚನೆಯಲ್ಲಿ ತೊಡಗಿರುವುದು ಒಂದು ಉತ್ತಮ ಪ್ರಯತ್ನ. ಹಾಗಾಗಿಯೇ ದೈವ ದೇವರ, ಸ್ಥಳ ಪುರಾಣ ಹಾಗೂ ಕಾರಣಿಕ ಪುರುಷರ ಕತೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ‘ಧರ್ಮ ದೈವ ಕೊಡಮಂದಾಯೆ’, ಬ್ರಹ್ಮ ಬಲಾಂಡಿ, ಮೂಜೂರು ಉಲ್ಲಾಕುಳು ಇತ್ಯಾದಿ ಪ್ರಸಂಗಗಳು ಈ ನಿಟ್ಟಿನಲ್ಲಿ ಜನಪ್ರಿಯವಾಗಿವೆ.

ವ್ಯಾಕರಣದ ದೃಷ್ಟಿಯಿಂದ ತುಳು ಭಾಷೆಯಲ್ಲಿ ವ್ಯಂಜನಾಕ್ಷರ ಹ್ರ ಸ್ವವಾಗಿಯೇ ಉಳಿಯುತ್ತದೆ. ಆಳ್ (ತ್ರಿಮಾತ್ರಾ ಗಣ), ಕನ್ನಡದಲ್ಲಿ ದ್ವಿಮಾತ್ರಾ ಗಣ, ಯಾನ್ (ತ್ರಿಮಾತ್ರಾ ಗಣ), ಉಚ್ಚಾರ ಲಘುತ್ವದಲ್ಲಿ ತುಳುಭಾಷೆ ಕ್, ಗ್, ಚ್, ಬ್-ಇವುಗಳನ್ನು ಹಾಗೆಯೇ ಉಳಿಸಿದೆ ಅಣ್ಣಪ್ಪೆ- ಅಣ್ಣ+ಅಪ್ಪೆ=ಅಣ್ಣಪ್ಪೆ, ‘ಅಪ್ಪೆ’ ಎಂಬುದಕ್ಕೆ ಎರಡು ಅರ್ಥದ ಉಚ್ಚಾರ; ಇದೊಂದು ವಿಶೇಷ. ಕೊಡಮಂದಾಯೆ – ‘ಕೊಡಮಣಿತಾಯಿ’ ಆಗುವಾಗ ಎರಡು ರೀತಿಯ ಅರ್ಥ. ಗ್ರಾಮ್ಯ ಭಾಷೆಯಲ್ಲಿ ‘ತ್ತಾಯಿ’ ಗಂಡಾಗಿ, ‘ತ್ತಾಯಿ’ ಕನ್ನಡದಲ್ಲಿ ‘ಹೆಣ್ಣು’ ಎಂಬ ಅರ್ಥ ಕೊಡುತ್ತದೆ. ಬಂಗಾಡಿಯವರ ಪ್ರಸಂಗಗಳಲ್ಲಿ ಈ ವ್ಯತ್ಯಾಸಗಳನ್ನು ತಿಳಿದು ಬಳಸಲಾಗಿದೆ. ಆದರೆ ಅವರ ಹೆಚ್ಚಿನ ಪದ್ಯಗಳಲ್ಲಿ ‘ಲ’ ಪ್ರಯೋಗ ಅತಿಯಾಗಿ ಕಂಡುಬರುತ್ತದೆ. ತುಳು ಭಾಷೆಯ ಕವಿತೆಗಳಿಗೆ ‘ಲ’ ಅಂತ್ಯಪ್ರಾಸ ಅನಿವಾರ್ಯವಲ್ಲ ಎಂಬುದನ್ನು ಭಾಷಾ ವಿದ್ವಾಂಸರು ಒಪ್ಪಿದ್ದಾರೆ.

ನಿತ್ಯಾನಂದ ಕಾರಂತ ಪೊಳಲಿ

ಯಕ್ಷಗಾನ ವಾಚಸ್ವತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಪುತ್ರ ಪೊಳಲಿ ನಿತ್ಯಾನಂದ ಕಾರಂತರು ಯಕ್ಷಗಾನದ ಹವ್ಯಾಸಿ ಕಲಾವಿದರು ಹಾಗೂ ಪ್ರಸಂಗಕರ್ತರು. ಅವರು ಬರೆದ ತುಳು ಪ್ರಸಂಗಗಳು.

೧. ಕಾಂತು ಕಬೇದಿ ೨. ಬೂತ ಬೈಕಡ್ಡಿ ೩. ಸತ್ಯದಪ್ಪೆ ಚೆನ್ನಮ್ಮ ೪. ನಾಡ ಕೇದಗೆ ೫. ಗೆಜ್ಜೆ ಪೂಜೆ ೬. ಗಿಂಡೆದ ಗಿಳಿ ೭. ಪುಣ್ಣಮೆದ ಪೊಣ್ಣು ೮. ನಾಗಬರ್ನ. ಗಿಂಡೆದ ಗಿಳಿ ೧೦. ಮಾಜಂದಿ ಕುಂಕುಮ ೧೧. ಧರ್ಮಧಾರೆ ೧೨. ಮಾಣಿಕ್ಯ ಮಾಧವಿ ೧೩. ಪರಕೆದ ಗಗ್ಗರ ೧೪. ಸ್ವರ್ಣ ಕೇದಗೆ ೧೫. ಬದಿತ ಪೊಣ್ಣು ೧೬. ಸಾಮ್ರಾಟ್ ಸಂಕಣ್ಣೆ ೧೭. ಅಪ್ಪೆನ ಆತ್ಮ. ಇವಲ್ಲದೆ ದೇವಸಿರಿ ಕನ್ನೆ, ರಾಣಿ ರುದ್ರಾಂಬೆ, ದಂಡಕಾರಣ್ಯ ಎಂಬ ಕನ್ನಡ ಪ್ರಸಂಗಗಳನ್ನೂ ಅವರು ಬರೆದಿದ್ದಾರೆ.

ಕಾರಂತರ ಈ ಪ್ರಸಂಗಗಳ ಹೆಚ್ಚಿನ ಪದ್ಯಗಳು ಕನ್ನಡದಲ್ಲೇ ಇವೆ.

ಮೇಳದವರು ಅವುಗಳನ್ನು ತುಳು ಭಾಷೆಯಲ್ಲಿ ಆಡುತ್ತಿದ್ದುದರಿಂದ ಅವು ತುಳು ಪ್ರಸಂಗಗಳಾಗಿವೆ. ಕದ್ರಿ ಮೇಳದವರು ಆಡುತ್ತಿದ್ದ ಅವರ ‘ಸತ್ಯದಪ್ಪೆ ಚೆನ್ನಮ್ಮ’ ಪ್ರಸಂಗ ಆ ಕಾಲದಲ್ಲಿ ಅತೀ ಹೆಚ್ಚು ಪ್ರಚಾರ ಪಡೆದಿತ್ತು. ಉಡುಪಿಯ ಒಂದು ಸಂಸ್ಥೆ ಏರ್ಪಡಿಸಿದ ಪ್ರೇಕ್ಷಕರ ಅಭಿಪ್ರಾಯ ಸಂಗ್ರಹ ಸಮೀಕ್ಷೆಯಲ್ಲಿ ಅವರ ಸತ್ಯದಪ್ಪೆ ಪ್ರಸಂಗಕ್ಕೆ ಪ್ರಥಮ ಸ್ಥಾನ ಹಾಗೂ ‘ನಾಡಕೇದಗೆ’ಗೆ ದ್ವಿತೀಯ ಸ್ಥಾನ ಲಭಿಸಿದೆ.

‘ಸತ್ಯದಪ್ಪೆ ಚೆನ್ನಮ್ಮ’ ಪ್ರಸಂಗದ ಪದ್ಯ ಅರ್ಧ ಕನ್ನಡ ಹಾಗೂ ಉಳಿದರ್ಧ ತುಳುವಿನಲ್ಲಿದೆ. ಚಾಮುಂಡಿ ದೈವದ ಕೋಪದಿಂದ ಅಳಿದುಹೋದ ಅರಸು ಸಂತಾನ ಚೆನ್ನಮ್ಮ ಎಂಬ ಹೆಣ್ಣಿನ ಸತ್ಯ-ತ್ಯಾಗದಿಂದ ಮತ್ತೆ ಚಿಗುರೊಡೆಯುವುದು ಈ ಕತೆಯ ತಿರುಳು. ‘ನಾಡಕೇದಗೆ’ಯಲ್ಲಿ ಕಿಚ್ಚು –ಮತ್ಸರಕ್ಕೆ ಬಲಿಯಾದ ಒಂದು ಅರಸು ಮನೆತನದ ಕತೆ ಇದೆ. ರಾಜ ಬಾರಿ ಎಂಬವ ತನ್ನ ಮೂರ್ಖತನದಿಂದ ಹೆಣ್ಣೊಬ್ಬಳ ಮಾನಾಪಹಾರ ಮಾಡಿದಾಗ, ಅವಳ ಸೇಡಿನ ಕಿಡಿ ರಾಜಬಾರಿಯ ವಂಶನಾಶಕ್ಕೆ ಕಾರಣವಾಗುವ ಬಗೆ, ಮಾಟ–ಮಂತ್ರ-ಮೋಸ – ಒಳಸಂಚು ಇತ್ಯಾದಿ ಷಡ್ಯಂತ್ರಗಳಿಂದ ಮೈನವಿರೇಳಿಸುವ ಸನ್ನಿವೇಶಗಳನ್ನೊಳಗೊಂಡು ಈ ಪ್ರಸಂಗ ಪ್ರೇಕ್ಷಕರಿಗೆ ಎಲ್ಲಾ ಬಗೆಯ ಮನರಂಜನೆಯನ್ನು ಒದಗಿಸುತ್ತದೆ.

‘ಮಾಜಂದಿ ಕುಂಕುಮ’ ಪ್ರಸಂಗದಲ್ಲಿ ಹೆಣ್ಣೊಬ್ಬಳನ್ನು ವರ್ಣಿಸುವ ಒಂದು ತುಳು ಪದ್ಯ ಹೀಗಿದೆ –

ರಾಗ : ಶಂಕರಾಭರಣ – ತಾಳ : ತ್ರಿವುಡೆ

ಲೋಕೊಡುಪ್ಪನ ಪೊರ್ಲು ಕಡಲ್‌ನ್‌ |
ಪಾಕ ವರ್ಷೊಡು ದೇವೆರ್ |
ಜೋಕೆ ಮಲ್ತ್‌ದ್‌ ಕಡೆದ್ ಪೊಣ್ಣನ್ | ಕಡಪುಡಿಯೆರೆ || ೧ ||
ಬಾನೊಡಿತ್ತಿನ ಚಂದ್ರದೇವರ್ |
ದಾನೆ ಬತ್ತೆರ್ ಲೋಕೊಗು |
ಮೋನೆ ಅರಳುನ ಪೂತ ಪೊರ್ಲುಯೆ ಯೇರ್ ತೆರಿವೆ || ೨ ||

‘ಗೆಜ್ಜೆ ಪೂಜೆ’ ಪ್ರಸಂದ ಕಥಾ ಸಂಗ್ರಹ ಮನೋಹರ ಕುಮಾರ್ ಅವರದು. ಕಾರಂತರು ಪದ್ಯ ರಚಿಸಿದ್ದಾರೆ. ಇದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕಟಪಾಡಿಯ ಅರಸು ವಿಕ್ರಮನ ಸಂಸಾರವನ್ನು ಸರ್ವನಾಶ ಮಾಡಲು ಹೆಣಗುವ ದುಷ್ಟ ನಾಗ ಎಂಬಾತ ಹಾಗೂ ಗೆಜ್ಜೆ ಪೂಜೆಯ ಉರುಳಿಗೆ ಸಿಗುವ ರಾಜಕುಮಾರಿ ತುಳಸಿ- ಇವರ ಸುತ್ತ ಹೆಣೆಯಲಾದ ಈ ಪ್ರಸಂಗ ಸಮಾಜದಲ್ಲಿ ಹಿಂದೆ ಬಳಕೆಯಲ್ಲಿದ್ದ ಗೆಜ್ಜೆಪೂಜೆ –ದೇವದಾಸಿ ಪದ್ಧತಿಯ ಕೆಡುಕನ್ನು ಮನೋಜ್ಞವಾಗಿ ಬಿಂಬಿಸುತ್ತದೆ.

‘ಸಾಮ್ರಾಟ್ ಸಂಕಣ್ಣೆ’ –ಉತ್ತಮ ಚಾರಿತ್ರಿಕ ಕಥಾವಸ್ತು ಇರುವ ಪ್ರಸಂಗ. ನಾಟಕಕಾರ ರತ್ನಾಕರ ರಾವ್ ಕಾವೂರು ಅವರ ಅದೇ ಹೆಸರಿನ ನಾಟಕವನ್ನಾಧರಿಸಿ ನಿತ್ಯಾನಂದ ಕಾರಂತರು ಈ ಪ್ರಸಂಗ ರಚಿಸಿದ್ದಾರೆ. ಇಕ್ಕೇರಿಯ ಅರಸ ಸದಾಶಿವ ನಾಯಕನ ಮಕ್ಕಳಾದ ದೊಡ್ಡ ಸಂಕಣ್ಣ ಮತ್ತು ಸಣ್ಣ ಸಂಕಣ್ಣರ ವಿಭಿನ್ನ ವ್ಯಕ್ತಿತ್ವದ ಕತೆ ಇಲ್ಲಿದೆ. ದೊಡ್ಡ ಸಂಕಣ್ಣನ ಸತ್ಯ, ತ್ಯಾಗ, ನೀತಿಗೆ ವ್ಯತಿರಿಕ್ತವಾಗಿ ಸಣ್ಣ ಸಂಕಣ್ಣ ಮತ್ತವನ ಗೆಳೆಯ ವಿರೂಪಣ್ಣನ ಅನ್ಯಾಯ, ಅಕ್ರಮ-ಅದಕ್ಕಾಗಿ ಅವರು ಅನುಭವಿಸುವ ಶಿಕ್ಷೆ ಅಲ್ಲದೆ ಬಾದಶನ ಅಕ್ಬರನಿಂದ ಪುರಸ್ಕೃತನಾಗಿ ಮತ್ತೆ ಇಕ್ಕೇರಿಯ ಸಾಮ್ರಾಟನಾಗುವ ದೊಡ್ಡ ಸಂಕಣ್ಣ ನಾಯಕನ ಉದಾತ್ತ ಚರಿತ್ರೆ ಈ ಪ್ರಸಂಗದಲ್ಲಿದೆ. ಪ್ರಸಂಗದ ಪದ್ಯಗಳು ಕನ್ನಡದಲ್ಲೇ ಇವೆ. ಧ್ವನಿ ಸುರುಳಿಗಾಗಿ ಕೆಲವು ಪದ್ಯಗಳನ್ನು ಕಾರಂತರು ತುಳುವಿಗೆ ರೂಪಾಂತರಿಸಿದ್ದಾರೆ.

ಈ ಪ್ರಸಂಗದಲ್ಲಿ ರಾಮಾಯಣದ ‘ಪಾದುಕಾ ಪ್ರದಾನ’ದ ನೆನಪು ಹುಟ್ಟಿಸುವ ಒಂದು ಸನ್ನಿವೇಶ ಇದೆ. ಸಣ್ಣ ಸಂಕಣ್ಣ ತಾನುಗೈದ ಪಾಪದಿಂದ ಪಶ್ಚಾತ್ತಾಪಗೊಂಡು, ತೀರ್ಥಯಾತ್ರೆಯಾಗಿ ಹೋದ ಅಣ್ಣನನ್ನು ಭೇಟಿಯಾಗಿ ರಾಜ್ಯಕ್ಕೆ ಹಿಂದಿರುಗಿ ಬಂದು ಅಧಿಕಾರ ಸೂತ್ರವನ್ನು ವಹಿಸಿಕೊಳ್ಳುವಂತೆ ಅಂಗಲಾಚುತ್ತಾನೆ. ದೊಡ್ಡ ಸಂಕಣ್ಣ ಅಷ್ಟೇ ನಯವಾಗಿ ನಿರಾಕರಿಸಿ, ತಮ್ಮನಿಗೆ ಸಾಂತ್ವನ ಹೇಳುತ್ತಾನೆ.