ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ವಿಶ್ವವಿದ್ಯಾನಿಲಯದ ಇತರ ವಿಭಾಗಗಳಿಗಿಂತ ಭಿನ್ನವಾದುದು. ಇತರ ವಿಭಾಗಗಳು ಕನ್ನಡ ಮತ್ತು ಕರ್ನಾಟಕದ ಬಗೆಗಿನ ಅಧ್ಯಯನಗಳನ್ನು ಕರ್ನಾಟಕಕ್ಕೆ ಸೀಮಿತವಾಗಿ ನಡೆಸಿದರೆ ಈ ವಿಬಾಗವು ಇಂತಹ ಯಾವತ್ತೂ ಅಧ್ಯಯನಗಳನ್ನು ದಕ್ಷಿಣ ಭಾರತ ಮತ್ತು ಇತರ ದ್ರಾವಿಡ ಭಾಷೆಗಳ ವಿಶಾಲ ವ್ಯಾಪ್ತಿಯಲ್ಲಿ ಅಧ್ಯಯನ ಮಾಡುತ್ತದೆ. ಈ ಮೂಲಕ ಕನ್ನಡ ಮತ್ತು ಕರ್ನಾಟಕದ ಅಧ್ಯಯನವನ್ನು ದಕ್ಷಿಣ ಭಾರತದ ವ್ಯಾಪ್ತಿಗೆ ವಿಸ್ತರಿಸುವ ಮಹತ್ವಾಕಾಂಕ್ಷೆ ಈ ವಿಭಾಗಕ್ಕಿದೆ. ತುಳು ಸಾಹಿತ್ಯ ಚರಿತ್ರೆಯು ಅಂತಹ ಮಹತ್ವಾಕಾಂಕ್ಷಿ ಅಧ್ಯಯನ ಯೋಜನೆಯಾಗಿದೆ.

ತುಳು ಸಾಹಿತ್ಯ ಚರಿತ್ರೆಯು ೨೦೦೧ – ೨೦೦೩ನೇ ಸಾಲಿನಲ್ಲಿ ಆಗಿನ ಕುಲಪತಿಯವರಾಗಿದ್ದ ಡಾ. ಎಚ್.ಜೆ. ಲಕ್ಕಪ್ಪಗೌಡರ ಅನುಮತಿಯೊಂದಿಗೆ ಆರಂಭವಾದ ಯೋಜನೆಯಾಗಿದೆ. ಯೋಜನೆಯ ರೂಪುರೇಖೆಯನ್ನು ಮೊದಲು ಸಿದ್ಧಪಡಿಸಿದವರು ಆಗ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರಾಗಿದ್ದ ಪ್ರೊ. ಎ.ವಿ. ನಾವಡ ಅವರು. ವಿಶ್ವವಿದ್ಯಾನಿಲಯದ ಪರಿನಿಯಮದಲ್ಲಿಯೇ ವಿಭಾಗಗಳು ಪರಸ್ಪರ ಸಹಕಾರದಿಂದ ಯೋಜನೆಗಳನ್ನು ರೂಪಿಸಬಹುದೆಂಬ ಸದಾಶಯವಿರುವುದರಿಂದ ವಿಭಾಗದ ಸದಸ್ಯರಾದ ನಾವು ಅದಕ್ಕೆ ಒಪ್ಪಿಕೊಂಡೆವು. ತಾಂತ್ರಿಕ ಕಾರಣಗಳಿಗಾಗಿ ಪ್ರಾತಿನಿಧಿಕ ಸಂಸ್ಥೆಯಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಗಿನ ಅಧ್ಯಕ್ಷರಾದ ಡಾ. ವಾಮನ ನಂದಾವರ ಅವರನ್ನು ಸಂಪರ್ಕಿಸಿದಾಗ ಅವರು ಸಂತೋಷದಿಂದ ಸಹಕರಿಸಲು ಮುಂದೆ ಬಂದರು. ಅಧಿಕಾರಾವಧಿ ಮುಗಿದ ಬಳಿಕವೂ ಅವರು ಈಗಲೂ ಅದೇ ರೀತಿಯ ಸಹಕಾರವನ್ನು ನಮಗೆ ನೀಡುತ್ತಾ ಬಂದಿದ್ದಾರೆ.

ಯೋಜನೆಯನ್ನು ಸೀಮಿತ ಕಾಲಾವಧಿಯಲ್ಲಿ ಮುಗಿಸುವುದು ನಮ್ಮ ಗುರಿಯಾಗಿತ್ತು. ಈಗಿನಂತೆ ಬೃಹತ್ ಗಾತ್ರದಲ್ಲಿ ಪ್ರಕಟಿಸುವ ಯೋಚನೆ ಆಗ ಇರಲಿಲ್ಲ. ಆರಂಭಿಸಿದ ಮೂರು ವರ್ಷಗಳಲ್ಲಿಯೇ ಬಹುಮಟ್ಟಿಗೆ ಪೂರ್ಣಗೊಂಡ ಯೋಜನೆಯು ಹಣಕಾಸಿನ ಕೊರತೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಆಗ ನಮ್ಮ ನೆರವಿಗೆ ಬಂದವರು ಈಗಿನ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈಯವರು ಸ್ಥಗಿತಗೊಂಡ ಯೋಜನೆಯನ್ನು ಮತ್ತೆ ಮುಂದುವರಿಸಲು ಅವಕಾಶ ಕಲ್ಪಿಸಿದುದು ಮಾತ್ರವಲ್ಲದೆ ಸಾಹಿತ್ಯ ಚರಿತ್ರೆ ಎನ್ನುವ ಪರಿಕಲ್ಪನೆಯನ್ನು ಈಗಿರುವಂತೆ ವಿಶಾಲ ನೆಲೆಯಲ್ಲಿ ಪರಿಭಾವಿಸಲೂ ಸಾಧ್ಯವಾಗುವಂತೆ ಅನುವು ಮಾಡಿದ್ದಾರೆ. ಅವರ ಸಲಹೆ – ಸಹಕಾರಗಳಿಲ್ಲದಿದ್ದರೆ ಇಂತಹ ಯೋಜನೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

ಇನ್ನು ‘ಸಾಹಿತ್ಯ ಚರಿತ್ರೆ’ಯಂತಹ ಪರಿಕಲ್ಪನೆಯ ಕುರಿತು ಕೆಲವು ಮಾತುಗಳು. ಈಗಾಗಲೇ ಮೈಸೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳು ಕನ್ನಡ ಸಾಹಿತ್ಯ ಚರಿತ್ರೆಯ ಬೃಹತ್ ಸಂಪುಟಗಳನ್ನು ತಂದಿವೆ. ರಂ.ಶ್ರೀ. ಮುಗಳಿಯವರ ಸಾಹಿತ್ಯ ಚರಿತ್ರೆಯಂತೂ ಜನಪ್ರಿಯವಾಗಿಯೇ ಇದೆ. ಸಾಹಿತ್ಯಕ್ಕೂ ಒಂದು ಚರಿತ್ರೆ ಇರುತ್ತದೆ ಎಂಬ ನಂಬಿಕೆಗಳು ಇಂತಹ ಯಾವತ್ತೂ ಕೃತಿಗಳಲ್ಲಿ ಇದ್ದೇ ಇರುತ್ತವೆ. ಚರಿತ್ರೆಯೇ ವಾಸ್ತವಿಕವಾದುದಲ್ಲ. ಕಲ್ಪಿತವಾದುದು ಎನ್ನುವ ತನಕ ಚರಿತ್ರೆಯ ಬಗೆಗಿನ ಚಿಂತನೆಗಳು ಈಗ ಬದಲಾಗಿವೆ. ಹಾಗೆಯೇ ಕಾಲಾನುಕ್ರಮಣಿಕೆಯಲ್ಲಿ ಚರಿತ್ರೆ ಸಾಗಿ ಬರುತ್ತದೆ ಎನ್ನುವುದೂ ಕೂಡ ಅತಾರ್ಕಿಕವಾದುದೇ. ಹೀಗಿರುವಾಗ ಸಾಹಿತ್ಯ ಚರಿತ್ರೆಯಲ್ಲಿ ಸಮಸ್ಯೆಗಳು ಇನ್ನೂ ಜಟಿಲವಾಗುತ್ತವೆ. ಶಬ್ದ ಪ್ರಯೋಗವೇ ಪ್ರಮಾಣವಾದ ಸಾಹಿತ್ಯ ಕೃತಿಗಳಿಗೆ ಅದನ್ನು ಹೊರತುಪಡಿಸಿದ ಇನ್ನೊಂದು ಆಧಾರವಿಲ್ಲ. ಸಾಹಿತ್ಯದ ದೃಷ್ಟಿಯಿಂದ ಚರಿತ್ರೆ ಎನ್ನುವುದೇ ಅತಾರ್ಕಿಕವಾದುದು. ಅದಕ್ಕೆ ಅಸ್ತಿತ್ವವೇ ಇಲ್ಲ. ಏನಿದ್ದರೂ ಸಾಹಿತ್ಯ ಕೃತಿಗಳು ರಚನೆಯಾದ ಕಾಲಕ್ಕೆ ಸಂಬಂಧಿಸಿದಂತೆ ಮಾತ್ರವಷ್ಟೇ ಚರಿತ್ರೆಯ ಪ್ರವೇಶ ಸಾಧ್ಯವಿದೆ. ಬಹುಶಃ ಸಾಹಿತ್ಯ ಚರಿತ್ರೆಗಳಲ್ಲಿ ಇದನ್ನೇ ಒಂದು ಅವಕಾಶವೆಂದು ಪರಿಗಣಿಸಲಾಗುತ್ತದೆಯಷ್ಟೇ. ಚರಿತ್ರೆಯ ಬಗೆಗೆ ಮಾನಸಿಕವಾಗಿರುವ ಕೆಲವು ಕುತೂಹಲಗಳ ಕಾರಣದಿಂದಾಗಿಯೂ ಸಾಹಿತ್ಯದಂತಹ ಕ್ಷೇತ್ರದಲ್ಲಿಯೂ ಅದರ ಪ್ರಭಾವ ಕಂಡುಬರುತ್ತವೆ. ಯಾವುದೇ ‘ಸಾಹಿತ್ಯ ಚರಿತ್ರೆ’ ರಚನೆಯಾದಾಗಲೂ ಇಂತಹ ಮೂಲಭೂತ ಸಮಸ್ಯೆಗಳು ಇದ್ದೇ ಇರುತ್ತವೆ. ಪ್ರಸ್ತುತ ಸಂಪುಟದಲ್ಲಿಯೂ ಅದನ್ನು ನಿರಾಕರಿಸಲಾಗುವುದಿಲ್ಲ.

ಕನ್ನಡದಂತಹ ರಾಜ್ಯಭಾಷೆಯ ಮನ್ನಣೆ ಪಡೆದಿರುವ ಭಾಷೆಗಳ ರಾಜಕೀಯ ಚರಿತ್ರೆಯೂ ಸುದೀರ್ಘವಾಗಿರುತ್ತದೆ. ಆದರೆ ತುಳುವಿನಂತಹ ಅಧೀನ ಭಾಷೆಗಳಿಗೆ ರಾಜಕೀಯ ಚರಿತ್ರೆಯ ಬದಲಾಗಿ ರಾಜ್ಯಭಾಷೆಯ ಮನ್ನಣೆಯಿಲ್ಲದಾಗಲೂ ಸಾಹಿತ್ಯ ಚರಿತ್ರೆಯೇ ಮಹತ್ತ್ವದ್ದಾಗಿರುತ್ತದೆ. ತುಳು ಸಾಹಿತ್ಯ ಚರಿತ್ರೆಯನ್ನು ನಾವು ಪರಿಭಾವಿಸಿರುವುದು ಈ ದೃಷ್ಟಿಯಿಂದ. ಮನ್ನಣೆಯಲ್ಲಿದ್ದಾಗಲೂ ಅಧೀನ ಭಾಷೆಗಳನ್ನು ಪ್ರಜೆಗಳೇ ತಮ್ಮ ಅಸ್ತಿತ್ವದ ಭಾಗವಾಗಿ ಹೇಗೆ ಸಂಗೋಪನೆ ಮಾಡಿಕೊಂಡು ಬರುತ್ತಾರೆ ಎನ್ನುವುದಕ್ಕೆ ಇಂತಹ ಸಾಹಿತ್ಯ ಚರಿತ್ರೆಗಳು ತೋರ್ಬೆರಳಾಗುತ್ತವೆ. ಆ ದೃಷ್ಟಿಯಿಂದ ತುಳು ಸಾಹಿತ್ಯ ಚರಿತ್ರೆಯು ತುಳುವರ ಭಾಷಾ ಸಂಗೋಪನೆಯ ಚರಿತ್ರೆಯೂ ಹೌದು. ಉಳಿದಂತೆ ಇದರ ಗುಣಗಳು ಸೂರ್ಯಸ್ಪಷ್ಟವಾಗಿಯೇ ಇವೆ. ನಾವು ಮುಜುಗರ ಪಡಬೇಕಾದಂತಹ, ಸಮರ್ಥಿಸಿಕೊಳ್ಳಲೇಬೇಕಾದಂತಹ ಯಾವ ತಾತ್ತ್ವಿಕ ಸಮಸ್ಯೆಗಳೂ ಇಲ್ಲಿಲ್ಲ ಎಂದು ವೈಯಕ್ತಿವಾಗಿ ನನಗಂತೂ ಅನಿಸಿದೆ.

ಆದರೆ ಇಂತಹ ವ್ಯಾಪಕವಾದ ಕಾರ್ಯವು ಇಂದು ಇಡಿಯ ದಕ್ಷಿಣ ಭಾರತದ ಸಂದರ್ಭದಲ್ಲಿಯೂ ಅಗತ್ಯವಾಗಿದೆ. ಆ ದೃಷ್ಟಿಯಿಂದ ‘ದ್ರಾವಿಡ ಸಾಹಿತ್ಯ ಚರಿತ್ರೆ’ ಸಂಪುಟಗಳನ್ನು ಕನ್ನಡದಲ್ಲಿ ತರಬೇಕಾದ ಅಗತ್ಯವಿದೆ. ಈ ಆಲೋಚನೆಯನ್ನು ಮಾನ್ಯ ಕುಲಪತಿಗಳಲ್ಲಿ ನಾನು ಪ್ರಸ್ತಾಪಿಸಿದಾಗ ಅವರು ಸಂತೋಷದಿಂದ ತಾತ್ತ್ವಿಕ ಒಪ್ಪಿಗೆಯನ್ನು ನೀಡಿರುತ್ತಾರೆ. ಹಾಗಾದುದರಿಂದ ಮುಂದಿನ ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳ ಸಾಹಿತ್ಯ ಚರಿತ್ರೆ ಪ್ರಕವಾದಾಗ ಇದು ಎಂತಹ ಘನಕಾರ್ಯವೊಂದಕ್ಕೆ ಪೀಠಿಕೆ ಎಂಬುದರ ಮಹತ್ತ್ವ ಅರಿವಾಗಬಲ್ಲದು.

ಇಂತಹ ಮಹತ್ತ್ವವಾದ ಕಾರ್ಯಗಳಿಗೆ ಹಲವರ ನೆರವು ಬೇಕಾಗುತ್ತದೆ. ಅವರೆಲ್ಲರನ್ನೂ ನೆನೆಸಿಕೊಳ್ಳಬೇಕಾದುದು ಈಗ ನಮ್ಮ ಕರ್ತವ್ಯವಾಗುತ್ತದೆ. ಮುಖ್ಯವಾಗಿ ಈ ಯೋಜನೆಗೆ ಒಪ್ಪಿ ಇಲ್ಲಿಯವರೆಗೆ ಅದು ಸಾಗಿ ಬರಲು ಕಾರಣರಾದ ಅಂದಿನ ಮಾನ್ಯ ಕುಲಪತಿಗಳಾದ ಡಾ. ಎಚ್.ಜೆ.ಲಕ್ಕಪ್ಪಗೌಡರಿಗೆ ವಿಭಾಗವು ಎಂದಿನಿಂದಲೂ ಆಭಾರಿಯಾಗಿದೆ. ಹಾಗೆಯೇ ಈ ಯೋಜನೆಯು ಮುಂದುವರಿಯುವುದಕ್ಕೆ ಮತ್ತು ಈಗ ಈ ರೀತಿಯಾಗಿ ಪ್ರಕಟಣೆಯಾಗುವುದಕ್ಕೆ ಕಾರಣಕರ್ತರಾದ ಇಂದಿನ ಮಾನ್ಯ ಕುಲಪತಿಗಳಾದ ಡಾ. ಬಿ.ಎ.ವಿವೇಕ ರೈಯವರಿಗೆ ವಿಭಾಗವು ಕೃತಜ್ಞತೆಯನ್ನು ಅರ್ಪಿಸುತ್ತದೆ.

ಇದಲ್ಲದೆ ಈ ಮಹತ್ವವಾದ ಕೃತಿಯ ಪ್ರಕಟಣೆಯ ಪೂರ್ವದಲ್ಲಿ ಉದಾರವಾಗಿ ತುಳು ಅಭಿಮಾನಿಗಳು ಧನಸಹಾಯ ಮಾಡಿದ್ದಾರೆ. ಅವರಲ್ಲಿ ಶ್ರೀ ಜೆ. ಕೃಷ್ಣ ಪಾಲೆಮಾರ್, ಮಾನ್ಯ ಶಾಸಕರು, ಸುರತ್ಕಲ್ ವಿಧಾನಸಭಾ ಕ್ಷೇತ್ರ, ಮಂಗಳೂರು, ಶ್ರೀ ಅಂಗಾರ, ಮಾನ್ಯ ಶಾಸಕರು, ಸುಳ್ಯ ವಿಧಾನ ಸಭಾ ಕ್ಷೇತ್ರ, ಸುಳ್ಯ, ಶ್ರೀ ಎ. ಸದಾನಂದ ಶೆಟ್ಟಿ, ಅಧ್ಯಕ್ಷರು, ಶ್ರೀ ದೇವಿ ಎಜುಕೇಷನ್ ಟ್ರಸ್ಟ್, ಮಂಗಳೂರು ಇವರೆಲ್ಲ ಪ್ರಕಟನಾ ಪೂರ್ವದಲ್ಲಿ ತಲಾ ರೂ. ೫೦೦೦/-ದಂತೆ ಧನಸಹಾಯ ನೀಡಿ ನಮ್ಮನ್ನು ಪ್ರೋತ್ಸಾಹಿಸಿರುತ್ತಾರೆ. ಇದಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೊದಲಾದ ಗಣ್ಯ ಮಹನೀಯರೂ ಧನಸಹಾಯ ನೀಡುವುದಾಗಿ ಭರವಸೆ ನೀಡಿರುತ್ತಾರೆ. ಇವರೆಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ.

ಮಂಗಳೂರಿನ ವಿದ್ವಾಂಸರಾದ ಡಾ. ಅಮೃತ ಸೋಮೇಶ್ವರ, ಡಾ. ಚಿನ್ನಪ್ಪಗೌಡ ಅವರು ಈ ಕೃತಿ ಸಂಪುಟಕ್ಕೆ ತಮ್ಮದೇ ಆದ ಒಳನೋಟವನ್ನು ನೀಡಿದ್ದಾರೆ. ಸಂಪುಟದ ಆರಂಭದಿಂದ ಇಲ್ಲಿಯವರೆಗೂ ಡಾ. ವಾಮನ ನಂದವರ ಅವರು ನಮಗೆ ಸಹಾಯ ಮಾಡಿದ್ದಾರೆ. ವಿದ್ವಾಂಸರಾದ ಈ ಮಹನೀಯರಿಗೆ ನಮ್ಮ ಕೃತಜ್ಞತೆಗಳು.

ತುಳು ಸಾಹಿತ್ಯ ಚರಿತ್ರೆಯ ಈ ಬೃಹತ್ ಸಂಪುಟದ ಅಕ್ಷರ ಜೋಡಣೆ ಹಾಗೂ ಮುದ್ರಣ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟ ಮಂಗಳೂರಿನ ಆಕೃತಿ ಕಂಪ್ಯೂಟರ್ಸ್‌ನ ಶ್ರೀ ಕಲ್ಲೂರು ನಾಗೇಶ್ ಹಾಗೂ ಕು. ಭಾರತಿ ಅವರನ್ನು ನೆನೆಯುತ್ತಿದ್ದೇವೆ.

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರು ಮತ್ತು ಅವರ ಬಳಗ ಇದರ ಅಂದಚೆಂದದಲ್ಲಿ ಭಾಗವಹಿಸಿದ್ದಾರೆ. ಅವರಿಗೂ ನೆನಕೆಗಳು.

ಹೀಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿಭಾಗದ ವತಿಯಿಂದ ಹೃತ್ಫೂರ್ವಕ ಕೃತಜ್ಞತೆಗಳು.

– ಮಾಧವ ಪೆರಾಜೆ
ಮುಖ್ಯಸ್ಥರು