ವ|| ಆಗಿ ಮಱುದಿವಸಂ ನೇಸಱು ಮೂಡೆ-

ಕಂ|| ತಂತಮ್ಮ ರಾಜ್ಯ ಚಿಹ್ನಂ
ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ|
ತಂತಮ್ಮೆಸೆವ ವಿಳಾಸಂ
ತಂತಮ್ಮಿರ್ಪೆಡೆಯೊಳೀಳಿಯಿಂ ಕುಳ್ಳಿರ್ದರ್|| ೪೩

ವ|| ಆಗಳ್ ದ್ರುಪದಂ ತನ್ನ ಪುರಕ್ಕಮಂತಪುರಕ್ಕಂ ಪರಿವಾರಕ್ಕಂ-

ಕಂ|| ಸಾಸಿರ ಪೊಂಗೆಯ್ದುಂ ಚಿ
ಕಾಸಟಮೆಂದೊಂದು ಲಕ್ಕಗೆಯ್ವುದಿದರ್ಕಂ||
ಮಾಸರಮುಡಲೆಂದಕ ವಿ
ಳಾಸದಿನುಡಲಿಕ್ಕಿ ನೆಯೆ ಬಿಯಮಂ ಮೆದಂ|| ೪೪

ವ|| ಅಂತು ಮೆದು ಕೂಸಂ ನೆಯೆ ಕೆಯ್ಗೆಯ್ಸಿಮೆಂದು ಮುನ್ನಂ ಕೆಯ್ಗೆಯ್ಸುತಿರ್ದ ತಱದ ಗುಱುಗೆಯರಪ್ಪಂತಪುರ ಪುರಂಯರಂ ಕರೆದು ಪೇೞ್ವುದುಮಂತೆಗೆಯ್ವೆಮೆಂದು-

ಕಂ|| ಈ ಪೊೞಂಗೀ ರುತುವಿಂ
ಗೀ ಪಸದನಮಿಂತುಟಪ್ಪ ಮೆಯ್ವಣ್ಣಕ್ಕಿಂ|
ತೀ ಪೂವಿನೊಳೀ ತುಡುಗೆಯೊ
ಳೀ ಪುಟ್ಟಿಗೆಯೊಳ್ ಬೆಡಂಗುವಡೆದೆಸೆದಿರ್ಕುಂ|| ೪೫

ವ|| ಎಂದು ನೆಯ ಪಸದನಂಗೊಳಿಸಿ-

ಚಂ|| ತುಡಿಸದೆ ಹಾರಮಂ ಮೊಲೆಯ ಬಿಣ್ಪಿನೊಳಂ ನಡು ಬಳ್ಕಿದಪ್ಪುದೀ
ನಡುಗುವುಲ್ಲವೇ ತೊಡೆ ನಿತಂಬದ ಬಿಣ್ಪಿನೊಳೇವುದಕ್ಕ ಪೋ|
ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಮೆಂ
ತುಡಿಸುವುದಕ್ಕ ನೂಪುರಮನೀ ತೊಡವೇವುದೊ ರೂಪೆ ಸಾಲದೆ|| ೪೬

ವ|| ಎಂದೆಂದೋರೊರ್ವರಾಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು ಮಂಗಳವಸದನ ಮಿಕ್ಕಿಯುಂ ಪೊಸ ಮದವಳಿಗೆಯಪ್ಪುದಱಂ ತುಡಿಸಲೆವೇೞ್ಕುಮೆಂದು ನೆಯೆ ಪಸದನಂಗೊಳಿಸಿ-

ರಾಜರು ತಮ್ಮ ತಮ್ಮ ಶಕ್ತಿಪ್ರದರ್ಶನ ಮಾಡಲು ವಿಶೇಷ ಉತ್ಸಾಹಗೊಂಡರು. ವ|| ಮಾರನೆಯ ದಿನ ಸೂರ್ಯೋದಯವಾಯಿತು. ೪೩. ರಾಜರು ತಮ್ಮ ತಮ್ಮ ರಾಜ್ಯಚಿಹ್ನೆ ವೈಭವ ಸೈನ್ಯ ವಿಳಾಸಗಳಿಂದ ಕೂಡಿ ತಾವಿದ್ದ ಸ್ಥಳಗಳಲ್ಲಿ ಸಾಲಾಗಿ ಕುಳಿತರು. ವ|| ಆಗ ದ್ರುಪದನು ತನ್ನ ಪಟ್ಟಣಕ್ಕೂ ರಾಣಿವಾಸಕ್ಕೂ ಪರಿವಾರಕ್ಕೂ ೪೪. ಸಹಸ್ರಹೊನ್ನನ್ನು ಕೊಟ್ಟರೂ ಇದು ಲಭ್ಯವಾಗುವುದಿಲ್ಲ. ಹತ್ತಿಯ ಬಟ್ಟೆಯಾದರೂ ಇದು ಲಕ್ಷ ಬೆಲೆಯುಳ್ಳದ್ದು ಎಂಬ ವಸ್ತ್ರಗಳನ್ನು ಮಧುರವಾಗಿ ಧರಿಸಲೂ ಸಂತೋಷದಿಂದ ಉಡಲೂ ಕೊಟ್ಟು ವಿಶೇಷವಾಗಿ ತನ್ನ ಔದಾರ್ಯವನ್ನು ಪ್ರಕಾಶಿಸಿದನು. ವ|| ಹಾಗೆಯೇ ಕನ್ಯೆಯನ್ನು ಪೂರ್ಣವಾಗಿ ಅಲಂಕರಿಸಿ ಎಂದು ಹೇಳಿದನು. ಹಾಗೆ ಹೇಳುವುದಕ್ಕೆ ಮುಂಚೆಯೇ (ತಾವಾಗಿಯೇ) ಅಲಂಕರಿಸುತ್ತಿದ್ದ ಶಕ್ತರೂ ಅನುಭವಶಾಲಿಗಳೂ ಆದ ರಾಣಿ ವಾಸದ ಸ್ತ್ರೀಯರು ಹಾಗೆಯೇ ಮಾಡುತ್ತೇವೆಂದರು. ೪೫. ಈ ಹೊತ್ತಿಗೆ ಈ ಋತುವಿಗೆ ಇಂತಹ ಅಲಂಕಾರ; ಇಂತಹ ಮೈಬಣ್ಣಕ್ಕೆ ಇಂತಹ ಹೂವು ಈ ಆಭರಣ ಈ ಸೀರೆ ಉಚಿತವಾದುದು ವ|| ಎಂದು ನಿಷ್ಕರ್ಷಿಸಿ ಪೂರ್ಣವಾಗಿ ಅಲಂಕಾರ ಮಾಡಿದರು. ೪೬. ಹಾರವನ್ನು ತೊಡಿಸದಿದ್ದರೂ ಮೊಲೆಯ ಭಾರದಿಂದಲೇ ಸೊಂಟವು ಬಳಕುತ್ತದೆ. ಪಿರ್ರೆ (ಪೃಷ್ಠಭಾಗ)ಯ ಭಾರದಿಂದಲೇ ತೊಡೆ ನಡುಗುವುದಲ್ಲವೇ? (ಆದುದರಿಂದ) ಒಡ್ಯಾಣದ ಭಾರ ಬೇರೆಯೇತಕ್ಕೆ? ಅದನ್ನು ತೊಡದೆ ಬಿಡು. ತೊಡೆಯ ಭಾರವೇ ಪಾದಕಮಲಗಳಿಗೆ ಭಾರವಾಗಿದೆ (ಹೀಗಿರುವಾಗ) ಕಾಲಂದಿಗೆಯನ್ನೇಕೆ ತೊಡಿಸುವುದು. ಈಕೆಗೆ ಆಭರಣಗಳೇತಕ್ಕೆ ರೂಪೇ ಸಾಲದೆ? ವ|| ಎಂದು ಒಬ್ಬೊಬ್ಬರೂ ಆಕೆಯ ಸೌಂದರ್ಯವನ್ನು ಹೊಗಳಿ ಮಂಗಳಾಲಂಕಾರಮಾಡಿದರು. ಹೊಸ ಮದುವಣಗಿತ್ತಿಯಾದುದರಿಂದ ಆಭರಣವನ್ನೂ ತೊಡಿಸಲೇ

ಕಂ|| ಮಸೆದುದು ಮದನನ ಬಾಳ್ ಕೂ
ರ್ಮಸೆಯಿಟ್ಟುದು ಕಾಮನಂಬು ಬಾಯ್ಗೂಡಿದುದಾ|
ಕುಸುಮಾಸ್ತ್ರನ ಚಕ್ರಮಿದೆಂ
ಬೆಸಕಮನಾಳ್ದತ್ತು ಪಸದನಂ ದ್ರೌಪದಿಯಾ|| ೪೭

ವ|| ಅಂತು ನೆಯೆ ಪಸದನಂಗೊಳಿಸಿ ಬಿಡುಮುತ್ತಿನ ಸೇಸೆಯನಿಕ್ಕಿ ತಾಯ್ಗಂ ತಂದೆಗಂ ಪೊಡಮಡಿಸಿ-

ಕಂ|| ನಿಟ್ಟಿಸೆ ಹೋಮಾನಲನೊಳ್
ಪುಟ್ಟಿದ ನಿನಗಕ್ಕ ಪರಕೆ ಯಾವುದೊ ನಿನ್ನಂ|
ಪುಟ್ಟಿಸಿದ ಬದಿ ನೆಗೞ್ತೆಯ
ಜೆಟ್ಟಿಗನೊಳ್ ನೆರಪುಗೀಗಳರಿಕೇಸರಿಯೊಳ್|| ೪೮

ವ|| ಎಂದು ಪರಸಿ ಕನಕತೃನಕಖಚಿತಮುಂ ಮೌಕ್ತಿಕಸ್ತಂಭಮುಮಪ್ಪ ಸರ್ವತೋಭದ್ರಮೆಂಬ ಸಿವಿಗೆಯನೇಱಸಿ ಚಾಮರದ ಕುಂಚದಡಪದ ಡವಕೆಯ ವಾರ ವಿಳಾಸಿನಿಯರೆಡುಂ ಕೆಲದೊಳ್ ಸುತ್ತಿಱದು ಬಳಸಿ ಬರೆ ತಲೆವರಿದೋಜೆಯ ಪಿಡಿಯನೇಱ ಪೆಂಡವಾಸದೊಳ್ವೆಂಡಿರ್ ಬಳಸಿ ಬರೆ ತಳ್ತು ಪಿಡಿದ ಕನಕ ಪದ್ಮದ ಸೀಗುರಿಗಳ ನೆೞಲೆಡೆವಱಯದೆ ಬರೆ ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ ನೆಯೆ ಪಣ್ಣಿದ ಮದಾಂಧ ಗಂಧಸಿಂಧುರಂಗಳನೇಱ ಬರೆ ಮುಂದೆ ಪರಿವ ಧವಳಚ್ಛತ್ರ ಚಂದ್ರಾದಿತ್ಯ ಪಾಳಿಕೇತನಾದಿ ರಾಜ್ಯ ಚಿಹ್ನಂಗಳುಂ ಮೊೞಗುವ ಮಂಗಳತೂರ್ಯಂಗಳೆಸೆಯೆ ಪೆಱಪೆಱಗೆ ದ್ರೌಪದಿ ಶೃಂಗಾರಸಾಗರಮೆ ಮೇರೆದಪ್ಪಿ ಬರ್ಪಂತೆ ಬರೆ-

ಕಂ|| ಪರೆದುಗುವ ಪಂಚ ರತ್ನದ
ಪರಲ್ಗಳುದಿರ್ದೆಸೆಯೆ ಸೌಧದೊಳೆ ಕೆದಱದ ಕ|
ಪ್ಪುರವಳ್ಕುಗಳೆಸೆಯೆ ಸಯಂ
ಬರ ಸಾಲೆಯನೆಸೆವ ಲೀಲೆಯಿಂ ಪುಗುತಂದಳ್|| ೪೯

ವ|| ಆಗಳ್-

ಕಂ|| ನುಡಿವುದನೆ ಮದು ಪೆಱತಂ
ನುಡಿಯೆ ಕೆಲರ್ ನೋಡದಂತೆ ನೋಡೆ ಕೆಲರ್ ಪಾ|
ವಡರ್ದವೊಲಿರೆ ಕೆಲರೊಯ್ಯನೆ
ತುಡುಗೆಯನೋಸರಿಸೆ ಕೆಲರುದಗ್ರಾವನಿಪರ್|| ೫೦

ಬೇಕೆಂದು ಪೂರ್ಣವಾಗಿ ಅಲಂಕಾರಮಾಡಿದರು. ೪೭. ಆ ದ್ರೌಪದಿಯ ಅಲಂಕಾರವು ಮನ್ಮಥನ ಕತ್ತಿಯು ಮಸೆಯಲ್ಪಟ್ಟಿತು, ಕಾಮನ ಬಾಣವು ಹರಿತವಾಗಿ ಮಾಡಲ್ಪಟ್ಟಿತು, ಪುಷ್ಪಬಾಣನಾದ ಅನಂಗನ ಚಕ್ರಾಯುಧವು ಹರಿತವಾದ ಬಾಯಿಂದ ಕೂಡಿದುದಾಯಿತು ಎನ್ನುವಷ್ಟು ಸೌಂದರ್ಯವನ್ನು ಪಡೆಯಿತು. ವ|| ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿ ಬಿಡಿಮುತ್ತಿನ ಅಕ್ಷತೆಯನ್ನು ಅವಳ ತಲೆಯ ಮೇಲೆ ಚೆಲ್ಲಿ ತಾಯಿಗೂ ತಂದೆಗೂ ನಮಸ್ಕಾರ ಮಾಡಿಸಿದರು. ೪೮. ವಿಚಾರಮಾಡುವುದಾದರೆ ಹೋಮಾಗ್ನಿಯಲ್ಲಿ (ಯಜ್ಞ ಕುಂಡದಲ್ಲಿ) ಹುಟ್ಟಿದ ನಿನಗೆ ಪ್ರತ್ಯೇಕವಾದ ಹರಕೆ ಯಾಕಮ್ಮ, ನಿನ್ನನ್ನು ಹುಟ್ಟಿಸಿದ ಆ ವಿಯು ಸುಪ್ರಸಿದ್ಧ ಪರಾಕ್ರಮಿಯಾದ ಆ ಅರಿಕೇಸರಿಯಲ್ಲಿ ನಿನ್ನನ್ನು ಸೇರಿಸಲಿ ವ|| ಎಂದು ಹರಸಿ ಹೊಳೆಯುವ ಚಿನ್ನದಿಂದ ಕೆತ್ತಲ್ಪಟ್ಟುದೂ ಮುತ್ತಿನ ಕುಂಭಗಳನ್ನುಳ್ಳದೂ ಸರ್ವತೋಭದ್ರವೆಂಬ ಹೆಸರುಳ್ಳುದೂ (ನಾಲ್ಕು ಕಡೆಯೂ ಬಾಗಿಲುಳ್ಳದು) ಆದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಚಾಮರ, ಕುಂಚ, ಎಲೆ ಅಡಿಕೆಯ ಚೀಲ ಮತ್ತು ಪೀಕದಾನಿಗಳನ್ನು ಹಿಡಿದಿದ್ದ ಪರಿವಾರದ ಹೆಂಗಸರು ಎರಡುಪಕ್ಕದಲ್ಲಿಯೂ ಸುತ್ತ ಗುಂಪುಗೂಡಿ ಬಳಸಿ ಬರುತ್ತಿರಲು ಮುಂದೆ ಹೋಗುತ್ತಿರುವ ಕ್ರಮಬದ್ಧವಾದ ಹೆಣ್ಣಾನೆಯನ್ನು ಹತ್ತಿಕೊಂಡು ರಾಣಿವಾಸದ ಸಭ್ಯಸ್ತ್ರೀಯರ ಸುತ್ತ ಬರುತ್ತಿರಲು ಎತ್ತಿಹಿಡಿದ ಸೀಗುರಿಗಳು ನೆರಳು ವಿಚ್ಛಿತ್ತಿಯಿಲ್ಲದೆ ಜೊತೆಯಲ್ಲಿಯೇ ಬರುತ್ತಿರಲು ದ್ರುಪದನೂ ಧೃಷ್ಟದ್ಯುಮ್ನನೂ ಮುತ್ತು ಮಾಣಿಕ್ಯಾಭರಣಗಳಿಂದ ಪೂರ್ಣವಾಗಿ ಅಲಂಕಾರಮಾಡಿದ ಮದ್ದಾನೆಗಳನ್ನೇರಿ ಬರುತ್ತಿರಲು ಮುಂಭಾಗದಲ್ಲಿ ಹರಿದುಹೋಗುತ್ತಿದ್ದ ಬಿಳಿಯ ಕೊಡೆ, ಚಂದ್ರ, ಸೂರ್ಯ, ಧ್ವಜಸಮೂಹವೇ ಮೊದಲಾದ ರಾಜಚಿಹ್ನೆಗಳೂ ಶಬ್ದಮಾಡುತ್ತಿದ್ದ ಮಂಗಳವಾದ್ಯಗಳೂ ಪ್ರಕಾಶಿಸುತ್ತಿರಲು ಹಿಂಭಾಗದಲ್ಲಿ ದ್ರೌಪದಿಯು ಶೃಂಗಾರಸಾಗರವೇ ಎಲ್ಲೇ ಮೀರಿ ಬರುವಂತೆ ಬಂದಳು. ೪೯. ಎಲ್ಲೆಲ್ಲಿಯೂ ಹರಡಿದ್ದ ಪಂಚರತ್ನದ ಹರಳುಗಳೂ ಪಚ್ಚಕರ್ಪೂರದ ಹಳುಕುಗಳೂ ಪ್ರಕಾಶಿಸುತ್ತಿರಲು ಸ್ವಯಂವರ ಶಾಲೆಯನ್ನು ಸರಳವಿಲಾಸದಿಂದ ಪ್ರವೇಶಿಸಿದಳು. ವ|| ಆಗ ೫೦. (ಅವಳನ್ನು ನೋಡಿ ದಿಗ್ಭ್ರಾಂತರಾಗಿ) ಕೆಲವರು ಹೇಳಬೇಕಾದುದನ್ನು ಮರೆತು ಬೇರೆಯದನ್ನು ನುಡಿದರು, ಕೆಲವರು

ಒಡನೆ ನೆರೆದರಸುಮಕ್ಕಳ
ನಿಡುಗಣ್ಗಳ ಬಳಗಮೆಱಗೆ ತನ್ನಯ ಮೆಯ್ಯೊಳ್|
ನಡೆ ಬಳಸಿ ಪಲರುಮಂಬಂ
ತುಡೆ ನಡುವಿರ್ದೊಂದು ಪುಲ್ಲೆಯಿರ್ಪಂತಿರ್ದಳ್|| ೫೧

ಮೊನೆಯಂಬುಗಳೊಳೆ ಪೂಣ್ದಪ
ನನಿಬರುಮಂ ಕಿಱದು ಬೇಗದಿಂ ಹರಿಗನದ|
ರ್ಕೆನಗೆಡೆವೇೞ್ಕುಮೆ ಎಂಬವೊ
ಲನಿಬರುಮಂ ಪೂಣ್ದನತನು ನನೆಯಂಬುಗಳಿಂ|| ೫೨

ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ-

ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ
ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|
ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ
ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩

ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ-

ಮ|| ಕನಕೋಚ್ಚಾಸನಸಂಸ್ಥಿತಂ ನೃಪನಮಂ ಬೆಂಗೀಶನುತ್ತುಂಗ ಪೀ
ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ|
ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ
ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪ್ರತ್ರೇಕ್ಷಣೇ|| ೫೪

ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂ ಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ-

ನೋಡದಂತೆ ದ್ರೌಪದಿಯನ್ನು ನೋಡುತ್ತಿದ್ದರು, ಮತ್ತೆ ಕೆಲವರು ಹಾವನ್ನು ಎದುರಿಸಿದವರಂತಿದ್ದರು ಮತ್ತೆ ಕೆಲವು ರಾಜಶ್ರೇಷ್ಠರು ಆಭರಣಗಳನ್ನು ಓರೆಮಾಡುತ್ತಿದ್ದರು. ೫೧. ಒಟ್ಟಿಗೆ ಅಲ್ಲಿ ನೆರೆದಿದ್ದ ರಾಜಕುಮಾರರ ನೀಳವಾದ ಕಣ್ಣುಗಳ ಸಮೂಹವು ತನ್ನ ಶರೀರದ ಮೇಲೆ ಎರಗಿ ನಾಟಿಕೊಳ್ಳಲು ಸುತ್ತಲೂ ಅನೇಕರು ಪ್ರಯೋಗಮಾಡಿದ ಬಾಣಗಳ ಮಧ್ಯೆ ಸಿಕ್ಕಿದ ಹುಲ್ಲೆಯಂತೆ ದ್ರೌಪದಿ ತೋರಿದಳು. ೫೨. ಅರಿಗನು ಅಲ್ಪಕಾಲದಲ್ಲಿಯೇ ಅಷ್ಟುಜನವನ್ನೂ ಮೊಣಚಾದ ಬಾಣಗಳಿಂದ ಹೂಳಿಬಿಡುತ್ತಾನೆ. ಅದಕ್ಕಾಗಿ ನಾನು ಬಾಣಬಿಡುವುದಕ್ಕೆ ಸ್ಥಳಬೇಕಲ್ಲವೇ? ಎನ್ನುವ ಹಾಗೆ ಮನ್ಮಥನು ಅಷ್ಟು ಜನರನ್ನೂ ಪುಷ್ಪಬಾಣಗಳಿಂದ ಹೂಳಿದನು. ವ|| ಆಗ ಪಾಂಡವರು ತಮ್ಮನ್ನು ಇತರರು ತಿಳಿದಂತೆ (ಗುರುತಿಸದಂತೆ) ಬ್ರಾಹ್ಮಣವೇಷದಿಂದಲೇ ಬ್ರಹ್ಮಸಭೆಯಲ್ಲಿ ಬಂದು ಕುಳಿತಿದ್ದರು. ೫೩. ಭೂಮಿಯಲ್ಲಿ (ನೆಲದ ಮೇಲೆ) ಶ್ರೇಷ್ಠರಾದ ಭಟರೂ ಎತ್ತರವಾದ ಮದ್ದಾನೆ ಮತ್ತು ಕುದುರೆಯ ಸಮೂಹಗಳೂ ಚಚ್ಚೌಕವಾದ ಮಂಟಪಗಳಲ್ಲಿ ರಾಜಶ್ರೇಷ್ಠರ ಮನೋಹರವಾದ ಸಮೂಹವೂ ಅಂತರಿಕ್ಷ ಪ್ರದೇಶದಲ್ಲಿ ಕಿಂಪುರುಷ, ಕಿನ್ನರ, ಖೇಚರ, ಸಿದ್ಧಪುರುಷರ ಸಮೂಹವೂ ತುಂಬಿರಲು ಈ ಮೂರುನೆಲೆಗಳಿಂದ ಸ್ವಯಂವರ ಮಂಟಪವು ಮೂರುಲೋಕವನ್ನೂ ಹೋಲುತ್ತಿತ್ತು. ವ|| ಆಗ ಅಲ್ಲಿರುವವರ ವಿಷಯವನ್ನು ತಿಳಿದುಕೊಂಡು ಪಕ್ಕದಲ್ಲಿದ್ದ ಸುಂದರಮಾಲೆಯೆಂಬ ಚೇಟಿಯು ದ್ರೌಪದಿಗೆ ಅವರ ಪರಿಚಯ ಮಾಡಿಸಿದಳು. ೫೪. ಎಲೌ ಕಮಲದಳಾಕ್ಷಿಯಾದ ದ್ರೌಪದಿಯೇ ಆ ಎತ್ತರವಾದ ಚಿನ್ನದ ಪೀಠದಲ್ಲಿ ಕುಳಿತಿರುವವನು ವಂಗದೇಶದ ದೊರೆ, ಎತ್ತರವೂ ದಪ್ಪವೂ ಆದ ಭುಜದಲ್ಲಿ ಉದ್ದವಾದ ಹಾರವುಳ್ಳವನು ಪಾಂಡ್ಯ, ವಿಶೇಷ ಆಕರ್ಷಿತನಾಗಿ ಕೆಳಗಣ್ಣಿನಲ್ಲಿ ನಿನ್ನನ್ನೇ ನೋಡುತ್ತಿರುವವನು ಚೇರಮ, ಸೂರ್ಯತೇಜಸ್ಸುಳ್ಳ ಆತ ಕಳಿಂಗದೇಶದರಸನು ನೋಡು. ವ|| ಈ ಕಡೆ ಬೀಸುವ ಚಾಮರಗಳ ಹೊಳಪಿನಿಂದಲೂ ಎತ್ತಿದ ಬೆಳುಗೊಡೆಗಳ ಬೆಳುಪಿನಿಂದಲೂ ದಿಕ್ಕುಗಳಲ್ಲಿ ಬಿಳಿಯಬಣ್ಣದಿಂದ ಕೂಡಿದುದಾಗಿರಲು ಹೊಗಳುತ್ತಲಿರುವವರ ಸ್ವರಗಳಿಂದಲೂ ಹಾಡುತ್ತಿರುವವರ ಹೊಗಳುಭಟ್ಟರ ಮಧುರವಾದ ಧ್ವನಿಗಳಿಂದಲೂ ದಿಗಂತಗಳೆಲ್ಲವೂ ಇದ್ದಕ್ಕಿದ್ದ ಹಾಗೆ ತುಂಬಿರಲು ರತ್ನಖಚಿತವಾದ ಆಸನದ ಮೇಲೆ

ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ
ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ|
ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್
ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫

ವ|| ಮತ್ತಿತ್ತ ಮಿಂಚಂ ತಟ್ಟಿ ಮೆಡಱದಂತೆ ಸುತ್ತಿಱದ ಕಾಲ್ಗಾಪಿನ ಕಡಿತಲೆಯ ಬಳಸಿದಗಣ್ಯ ಪಣ್ಯಾಂಗನಾಜನದ ನಡುವೆ ಮಣಿಮಯಪೀಠಂಗಳನೇಱ-

ಕಂ|| ಆಯತ ಯದುವಂಶ ಕುಲ
ಶ್ರೀಯಂ ತೞ್ಕೈಸಿದದಟರತಿರಥರವರ|
ತ್ಯಾಯತಭುಜಪರಿಘರ್ ನಾ
ರಾಯಣ ಬಲದೇವರೆಂಬರಂಬುಜವದನೇ|| ೫೬

ವ|| ಎಂದು ಕಿಱದಂತರಂ ಪೋಗಿ-

ಉ|| ಇಂತಿವರಿನ್ನರೀ ದೊರೆಯರೆಂದೆಱವಂತಿರೆ ಪೇೞ್ದುವೇೞ್ದು ರಾ
ಜಾಂತರದಿಂದೆ ರಾಜಸುತೆಯಂ ನಯದಿಂದವಳುಯ್ದಳಂತು ಸ|
ದ್ಭ್ರಾಂತ ಸವಿರಣೋತ್ಥಿತ ವಿಶಾಲ ವಿಳೋಳ ತರಂಗ ರೇಖೆ ಪ
ದ್ಮಾಂತರದಿಂದಮಿಂಬಱದು ಮಾನಸಹಂಸಿಯನುಯ್ವಮಾರ್ಗದಿಂ|| ೫೭

ವ|| ಅಂತು ನೆರೆದರಸುಮಕ್ಕಳಾರುಮಂ ಮೆಚ್ಚದೆ ಮಗುೞೆವರೆ ದ್ರುಪದನಿದಳೆಲ್ಲ ಮೇನಿಂ ಹೋಮಾಗ್ನಿಸಂಭವಮಪ್ಪ ದಿವ್ಯಚಾಪಮನೇಱಸಿಯುವಿಯಯ್ದು ಶರದೊಳಾಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ವಿನನಿಸಲಾರ್ಪೊಡೆ ಬಂದೇಱಸಿಯು ಮೆಚ್ಚು ಗೆಲ್ಲಂಗೊಡೆನ್ನ ಮಗಳಂ ಮದುವೆಯಪ್ಪುದೆಂಬುದುಮಾಮಾಮೆ ಬಿಲ್ಲನೇಱಸಿದಪೆವೆಂದನಿಬರಾನುಮರಸುಮಕ್ಕಳ್ ಬಂದು-

ಉ|| ಏಱಪೆವೆಂದರ್ ನೆಲದಿನೆತ್ತಲುಮಾಱದೆ ಬಿೞ್ದು ನೆತ್ತರಂ
ಕಾಱಯುಮೆತ್ತಿ ಕಯ್ಯುಡಿದುಮಾಗಳೆ ಕಾಲುಡಿದುಂ ಬೞಲ್ದು ಪ
ಲ್ಲಾಱ ಪೊಡರ್ಪುಗೆಟ್ಟುಸಿರಲಪ್ಪೊಡಮಾಱದೆ ಪೋದೊಡಾಗಳಾ
ನೇಱಪೆನೆಂದು ಪೊಚ್ಚಱಸಿ ಬಂದು ಸುಯೋಧನನುಗ್ರಚಾಪಮಂ|| ೫೮

ತನ್ನ ಕಾಲನ್ನು ಠೀವಿಯಿಂದ ನೀಡಿ ೫೫. ನನ್ನ ಮೃದುವಾದ ಹೃದಯವನ್ನು ಪುಷ್ಪಬಾಣವು ಈ ದಿನ ಹೀಗೆ ಚುಚ್ಚುತ್ತಿದೆ ಎನ್ನುವ ಹಾಗೆ ನೆಯ್ದಿಲ ಹೂವಿನ ಕಾವನ್ನು ಒಂದು ಕೈಯಲ್ಲಿ ತಿರುಗಿಸುತ್ತಲೂ ಅಷ್ಟು ಜನ ತಮ್ಮಂದಿರೂ ತನ್ನ ಎರಡು ಪಕ್ಕದಲ್ಲಿಯೂ ಬಂದಿರಲು ನಿನ್ನ ಸೌಂದರ್ಯಕ್ಕೆ ಸೋತಿದ್ದರೂ ಆ ಸಂಗೀತಕ್ಕೆ ಸೋತವನಂತೆ ತಲೆಯನ್ನು ತೂಗುವ ಅವನು ದುರ್ಯೋಧನ ಭೂಪತಿ; ಆತನನ್ನು ನೀನು ನೋಡು. ವ|| ಈ ಕಡೆ ಮಿಂಚನ್ನೇ ಮುಸುಕಿದ್ದಾರೆಯೋ ಎನ್ನುವಂತಿರುವ ಅಸಂಖ್ಯಾತರಾದ ವೇಶ್ಯಾಸ್ತ್ರೀಯರ ಮಧ್ಯೆ ರತ್ನಖಚಿತವಾದ ಪೀಠದ ಮೇಲೆ ೫೬. ಕುಳಿತಿರುವವರು ವಿಸ್ತಾರವಾದ ಯದುಲಕ್ಷ್ಮಿಯನ್ನು ಆಲಿಂಗನಮಾಡಿಕೊಂಡಿರುವ ಶೂರರೂ ಪರಾಕ್ರಮಿಗಳೂ ದೀರ್ಘವಾದ ಪರಿಘಾಯುಧದಂತಿರುವ ತೋಳುಗಳನ್ನುಳ್ಳವರೂ ಆದವರು ಕೃಷ್ಣಬಲರಾಮರೆಂಬುವರು. ವ|| ಎಂದು ಸ್ವಲ್ಪದೂರ ಹೋಗಿ ೫೭. ಇವರು ಇಂತಹವರು, ಈ ಯೋಗ್ಯತೆಯುಳ್ಳವರು ಎಂದು ಚೆನ್ನಾಗಿ ತಿಳಿಯುವ ಹಾಗೆ ಹೇಳಿ ಕೇಳಿ ರಾಜರೊಬ್ಬರಿಂದ ಮುಂದಕ್ಕೆ ಆ ದ್ರೌಪದಿಯನ್ನು ಬಿರುಸಾಗಿ ಬೀಸಿದ ಗಾಳಿಯಿಂದ ಮೇಲಕ್ಕೆದ್ದ ವಿಶಾಲವೂ ಚಂಚಲವೂ ಆದ ಅಲೆಗಳ ಸಾಲು ಹದವರಿತು ಕಮಲದಿಂದ ಮೇಲಕ್ಕೆ ರಾಜಹಂಸವನ್ನು ಸೆಳೆದೊಯ್ಯುವ ರೀತಿಯಲ್ಲಿ ಈ ಚೆಟಿಯು ಕರೆದುಕೊಂಡು ಹೋದಳು. ವ|| ಹಾಗೆ ಅಲ್ಲಿ ಸೇರಿದ್ದ ರಾಜಕುಮಾರರಲ್ಲಿ ಯಾರನ್ನೂ ಮೆಚ್ಚದೆ ದ್ರೌಪದಿಯು ಹಿಂದಿರುಗಿ ಬರಲು ದ್ರುಪದನು ಇದರಲ್ಲೇನಿದೆ, ಅಗ್ನಿಕುಂಡದಲ್ಲಿ ಹುಟ್ಟಿದ ದಿವ್ಯಧನುವನ್ನು ಹೆದೆಯೇರಿಸಿ ಈ ಅಯ್ದು ಬಾಣಗಳಿಂದ ಆಕಾಶದಲ್ಲಿ ನಲಿದು ಹೊಳೆಯುತ್ತಿರುವ ಯಂತ್ರದ ಮೀನನ್ನು ಹೊಡೆಯಲು ಸಮರ್ಥನಾದರೆ ಬಂದು ಬಿಲ್ಲನ್ನು ಹೂಡಿ ಜಯವನ್ನು ಪಡೆದು ನನ್ನ ಮಗಳನ್ನು ಮದುವೆಯಾಗಬಹುದು ಎಂಬುದಾಗಿ ಸಾರಿದನು. ನಾವು ತಾವು ಬಿಲ್ಲನ್ನು ಏರಿಸುತ್ತೇವೆಂದು ಎಷ್ಟೋ ಜನ ರಾಜಕುಮಾರರು ಬಂದರು. ೫೮. ಏರಿಸುತ್ತೇನೆ ಎಂದವರು ಅದನ್ನು ನೆಲದಿಂದೆತ್ತಲೂ ಸಮರ್ಥರಾಗದೆ ಬಿದ್ದು ರಕ್ತವನ್ನು ಕಾರಿ, ಕೈಮುರಿದು ಕಾಲುಮುರಿದು ಬಳಲಿ ಬಾಯೊಣಗಿ ಶಕ್ತಿಗುಂದಿ ಉಸಿರಿಸುವುದಕ್ಕೂ ಆಗದೆ ಹೋಗಲು ದುರ್ಯೋಧನನು ನಾನು ಏರಿಸುತ್ತೇನೆಂದು ಜಂಭದಿಂದ ಬಂದನು. ಆ ಭಯಂಕರವಾದ

ವ|| ಮೂಱು ಸೂೞು ಬಲವಂದು ಪೊಡಮಟ್ಟು-

ಕಂ|| ಪಿಡಿದಾರ್ಪ ಭರದಿನೆತ್ತ
ಲ್ಕೊಡರಿಸಿದೊಡೆ ನೆಲದಿನಣಮೆ ತಳರದೆ ಬಿಲ್ ನಿ|
ಲ್ತೊಡೆ ಗುಡು ಗುಡು ಗುಡು ಗೊಳ್ಳೆಂ
ಡೊಡನಾರೆ ಸುಯೋಧನಂ ಕರಂ ಸಿಗ್ಗಾದಂ|| ೫೯

ವ|| ಆಗಿ ಪೋಗಿ ಕರ್ಣನ ಮೊಗಮಂ ನೋಡಿದೊಡೆ ಕರ್ಣನಾಳ್ದನ ಸಿಗ್ಗಾದ ಮೊಗಮಂ ಕಂಡು-

ಕಂ|| ಆನೇಱಪೆನೆಂದಾ ಕಾ
ನೀನಂ ಬಂದೆತ್ತಿ ಬಿಲ್ಲನೇಱಸಿ ತೆಗೆಯಲ್|
ತಾನಾರ್ತನಿಲ್ಲ ತೆಗೆವಂ
ತಾ ನೃಪತಿಗಳರಿಗನಿದಿರೊಳೇಂ ಪುಟ್ಟಿದರೇ|| ೬೦

ವ|| ಅಂತಾ ಬಿಲ್ಲಂ ಪಿಡಿದವರೆಲ್ಲಂ ಬಿಲ್ಲುಂಬೆಱಗುಮಾಗಿ ಸಿಗ್ಗಾಗಿ ಪೋಗಿ ತಂತಮ್ಮಿರ್ಪೆಡೆಯೊಳಿರೆ ಪಾಂಚಾಳರಾಜನೀ ನೆರೆದರ ಸುಮಕ್ಕಳೊಳಾರುವಿ ಬಿಲ್ಲನೇಱಸಲಾರ್ತರಿಲ್ಲವಿ ಜನವಡೆಯೊಳಾರಾನುವಿ ಬಿಲ್ಲನೇಱಸಲಾರ್ಪೊಡೆ ಬನ್ನಿಮೆಂದು ಸಾಱುವುದುಂ-

ಚಂ|| ಮುಸುಕಿದ ನೀರದಾವಳಿಗಳಂ ಕಿರಣಂಗಳೊಳೊತ್ತಿ ತೇಜಮ
ರ್ವಿಸುವಿನಮಾಗಳೊರ್ಮೊದಲೆ ಮೂಡುವ ಬಾಳ ದೀನೇಶಬಿಂಬದೊಂ|
ದೆಸಕದಿನಾ ದ್ವಿಜನ್ಮಸಭೆಯಂ ಪೊಱಮಟ್ಟೊಡೆ ಮಾಸಿದಂದಮುಂ
ಪಸದನದಂತೆ ಕಣ್ಗೆಸೆದು ತೋಱದುದಾ ಕದನತ್ರಿಣೇತ್ರನಾ|| ೬೧

ವ|| ಅಂತು ಪೊಱಮಡುವರಾತಿಕಾಲಾನಲನಂ ಕಂಡು ಕಡ್ಡುವಂದ ದೊಡ್ಡರೆಲ್ಲಂ ಮುಸುಱ-

ಕಂ|| ಸಂಗತಸತ್ವರ್ ಕುರು ರಾ
ಜಂಗಂ ಕರ್ಣಂಗಮೇಱಸಲ್ಕರಿದನಿದಂ|
ತಾಂ ಗಡಮೇಱಪನೀ ಪಾ
ರ್ವಂಗಕ್ಕಟ ಮೆಯ್ಯೊಳೊಂದು ಮರುಳುಂಟಕ್ಕುಂ|| ೬೨

ವ|| ಎಂದು ಬಾಯ್ಗೆ ವಂದುದನೆ ನುಡಿಯೆ ರಂಗಭೂಮಿಯ ನಡುವೆ ನಿಂದು ದಿವ್ಯಚಾಪಕ್ಕೆ ಪೊಡವಟ್ಟವಯವದಿನೆಡಗೆಯ್ಯೊಳೆತ್ತಿಕೊಂಡು ತನ್ನ ಬಗೆದ ಕಜ್ಜಮಂ ಗೊಲೆಗೊಳಿಸುವಂತಾ ಬಿಲ್ಲ ಗೊಲೆಯನೇ ನೂಂಕಿ-

ಬಿಲ್ಲನ್ನು ವ|| ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದನು. ೫೯. ಹಿಡಿದುಕೊಂಡು ತನ್ನ ಶಕ್ತಿಯಿದ್ದಷ್ಟನ್ನೂ ಉಪಯೋಗಿಸಿ ವೇಗದಿಂದ ಎತ್ತಲು ಪ್ರಯತ್ನಪಟ್ಟನು, ಅದು ನೆಲದಿಂದ ಸ್ವಲ್ಪವೂ ಅಲುಗದೆ ನಿಂತುಬಿಟ್ಟಿತು. ಗುಡುಗುಡುಗುಡುಗೊಳ್ಳೆಂದು ನೋಡುತ್ತಿದ್ದವರು ಕೂಗಿಕೊಂಡರು, ದುರ್ಯೋಧನನು ವಿಶೇಷವಾಗಿ ಲಜ್ಜಿತನಾದನು. ವ|| ದುರ್ಯೋಧನನು ಕರ್ಣನ ಮುಖವನ್ನು ನೋಡಿದನು. ಕರ್ಣನು ಸ್ವಾಮಿಯ ನಾಚಿದ ಮೊಗವನ್ನು ನೋಡಿ ೬೦. ನಾನು ಏರಿಸುತ್ತೇನೆಂದು ಬಂದು ಎತ್ತಿ ಏರಿಸಲು ಶಕ್ತನಾಗಲಿಲ್ಲ. ಹಾಗೆ ಮಾಡುವುದಕ್ಕೆ ಆ ರಾಜರುಗಳು ಅರ್ಜುನನಿಗಿಂತ ಸಮರ್ಥರಾಗಿ ಹುಟ್ಟಿದ್ದಾರೆಯೇನು? ವ|| ಹಾಗೆ ಆ ಬಿಲ್ಲನ್ನು ಹಿಡಿದವರೆಲ್ಲರೂ ಅಸ್ತವ್ಯಸ್ತವಾಗಿ ಲಜ್ಜಿತರಾಗಿ ಹೋಗಿ ತಾವು ತಾವು ಇದ್ದ ಸ್ಥಳಗಳಲ್ಲಿದ್ದರು. ಆಗ ದ್ರುಪದನು ಇಲ್ಲಿರುವ ರಾಜಕುಮಾರರಲ್ಲಿ ಈ ಬಿಲ್ಲನ್ನೇರಿಸಲು ಯಾರೂ ಶಕ್ತರಾಗಲಿಲ್ಲ. ಈ ಜನದ ಗುಂಪಿನಲ್ಲಿ ಯಾರಾದರೂ ಈ ಬಿಲ್ಲನ್ನೇರಿಸುವ ಶಕ್ತಿಯಿದ್ದರೆ ಬನ್ನಿ ಎಂದು ಸಾರಿದನು. ೯೧. ಮುಚ್ಚಿಕೊಂಡಿರುವ ಮೋಡಗಳ ಸಮೂಹವನ್ನು ಕಿರಣಗಳಿಂದ ಒತ್ತಿ ತೇಜಸ್ಸು ಪ್ರಕಾಶಮಾನವಾಗುತ್ತಿರಲು ಇದ್ದಕ್ಕಿದ್ದ ಹಾಗೆ ಉದಯವಾಗುವ ಬಾಲಸೂರ್ಯ ಬಿಂಬದೊಂದು ರೀತಿಯಲ್ಲಿ ಬ್ರಾಹ್ಮಣ ಸಭೆಯಿಂದ ಅರ್ಜುನನು ಹೊರಟುಬಂದನು. ಆ ಕದನತ್ರಿಣೇತ್ರನ ಮಲಿನವಾಗಿದ್ದ ರೀತಿಯೂ ಅಲಂಕಾರಮಾಡಿರುವಂತೆಯೇ ಕಣ್ಣಿಗೆ ರಮಣೀಯವಾಗಿ ತೋರಿತು. ವ|| ಹಾಗೆ ಹೊರಟು ಬರುವ ಅರಾತಿಕಾಲನಲನನ್ನು ಕಂಡು ಗಡ್ಡಬಂದ ವೃದ್ಧರೆಲ್ಲ ಮುತ್ತಿಕೊಂಡು ೬೨. ಸತ್ವಶಾಲಿಗಳಾದ ದುರ್ಯೋಧನಕರ್ಣರಿಗೂ ಏರಿಸುವುದಕ್ಕೆ ಅಸಾಧ್ಯವಾದ ಇದನ್ನು ಇವನು ಈ ಹಾರುವನು ಏರಿಸುತ್ತಾನಲ್ಲವೇ? ಈ ಬ್ರಾಹ್ಮಣನಿಗೆ, ಅಯ್ಯೋ, ಶರೀರದಲ್ಲಿ ಪಿಶಾಚಿ ಸೇರಿಕೊಂಡಿರಬೇಕು ವ|| ಎಂದು ಬಾಯಿಗೆ ಬಂದುದನ್ನು ಆಡಿದರು. ಅರ್ಜುನನು ರಂಗಸ್ಥಳದ ಮಧ್ಯಭಾಗದಲ್ಲಿ ನಿಂತುಕೊಂಡು ದಿವ್ಯಮನಸ್ಸಿಗೆ ನಮಸ್ಕಾರಮಾಡಿ ಶ್ರಮವಿಲ್ಲದೆ ಎಡಗೈಯ್ಯಿಂದಲೇ ಎತ್ತಿಕೊಂಡು ತಾನು ಕೈಹಾಕಿದ ಕಾರ್ಯವನ್ನು ಸುಗಮವಾಗಿ ಮುಗಿಸುವಂತೆ

ಮ|| ದೆಸೆ ಕಂಪಂಗೊಳೆ ಕೊಂಡು ದಿವ್ಯಶರಮಂ ಕರ್ಣಾದಿಗಳ್ ಕಂಡು ಬೆ
ಕ್ಕಸಮಾಗಿರ್ಪಿನಮೊಂದೆ ಸೂೞೆ ತೆಗೆದಾಕರ್ಣಾಂತಮಂ ತಾಗೆ ನಿ
ಟ್ಟಿಸಲಾರ್ಗಾರ್ಗಿಸಲಕ್ಕುಮೆಂಬೆಸಕದಾ ವಿನಂ ಸಮಂತೆಚ್ಚು ಮೆ
ಚ್ಚಿಸಿದಂ ದೇವರುಮಂ ಧನುರ್ಧರರುಮಂ ವಿದ್ವಿಷ್ಟವಿದ್ರಾವಣಂ|| ೬೩

ವ|| ಆಗಳಾ ಪಿಡಿದ ಬಿಲ್ಲೆ ಕರ್ಬಿನ ಬಿಲ್ಲಾಗೆಯುಮಂಬುಗಳೆ ಪೂವಿನಂಬುಗಳಾಗೆಯು ಮೆಚ್ಚ ವಿನೆ ವಿನಕೇತನಮಾಗೆಯುಂ ಸಹಜಮನೋಜನಂ ಮನೋಜನೆಂದೆ ಬಗೆದು-

ಚಂ|| ನಡೆ ಕಡೆಗಣ್ ಮನಂ ಬಯಸೆ ತಳ್ತಮರ್ದಪ್ಪಲೆ ತೋಳ್ಗಳಾಸೆಯೊಳ್
ತೊಡರ್ದಿರೆ ಪೊಣ್ಮೆ ಘರ್ಮಜಲಮುಣ್ಮೆ ಭಯಂ ಕಿಡೆ ನಾಣ್ ವಿಕಾರದೊಳ್|
ತೊಡರ್ದಿರೆ ಕೆಯ್ತವುಮ್ಮಳಿಪ ಕನ್ನೆಗೆ ಸುಂದರಮಾಲೆ ಮಾಲೆಯಂ
ತಡೆಯದೆ ನೀಡೆ ಮಾಣದೆ ಗುಣಾರ್ಣವನಂ ಸತಿ ಮಾಲೆ ಸೂಡಿದಳ್|| ೬೪

ವ|| ಆಗಳ್ ದ್ರುಪದಂ ಬದ್ದವಣದ ಪಗಳಂ ಬಾಜಿಸಲ್ವೇೞ್ದು ಸುರತ ಮಕರ ಧ್ವಜನಂ ದ್ರೌಪದಿಯೊಡನೆ ಸಿವಿಗೆಯನೇಱಸಿ ಧೃಷ್ಟದ್ಯುಮ್ನ ಯುಧಾಮನ್ಯೂತ್ತಮೌಜಶ್ಯಿಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನೆಲಂ ಮೂರಿವಿಟ್ಟಂತೆ ಬರೆ ಮುಂದಿಟ್ಟು ಪೊೞಲ್ಗೊಡಗೊಂಡುವರ್ಪುದುಮಿತ್ತ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಶಾಸನಾದಿಗಳೊಳಾಲೋಚಿಸಿ ಪೇೞಮೇಗೆಯ್ವಮೆನೆ ಕರ್ಣನಿಂತೆಂದಂ-

ಮ|| ಜನಮೆಲ್ಲಂ ನೆರೆದಕ್ಕಟಣ್ಣರಿವರಿಂದೇವಂದರೇವೋದರೆಂ
ಬಿನಮೇಂ ಪೋಪಮೆ ನಾಡ ಕೂಟಕುಳಿಗಳ್ಗೇದೋಸಮೇಂ ಬನ್ನಮೊಂ|
ದನೆ ಕೇಳಾಂತರನಿಕ್ಕಿ ಮಿಕ್ಕ ವಿಜಯಶ್ರೀಕಾಂತೆಗಂ ಕಾಂತೆಗಂ
ನಿನಗಂ ದೋರ್ವಲದಿಂದಮೊಂದೆ ಪಸೆಯೊಳ್ ಪಾಣಿಗ್ರಹಂಗೆಯ್ಯೆನೇ|| ೬೫

ವ|| ಎನೆ ಶಲ್ಯನಿಂತೆಂದಂ-

ಚಂ|| ಕುಡುವೊಡೆ ನಿಸ್ತ್ರಪಂ ಕುಡುವುದೇಱಸಿದಂ ಬೆಸೆಕೋಲನೆಂದು ಪೇೞು
ಕುಡುವುದೆ ಕನ್ನೆಯಂ ದ್ವಿಜಕುಲಂಗಿದು ವಿಶ್ವನರೇಂದ್ರ ವೃಂದದೊಳ್|
ತೊಡರ್ದ ಪರಾಭವಂ ದ್ರುಪದನಂ ತಱದೊಟ್ಟದೆ ಕೆಮ್ಮಗಾನಿದಂ
ಕಡೆಗಣಿಸಿರ್ದೊಡೆನ್ನ ಕಡುಗೊರ್ವಿದ ತೋಳ್ಗಳ ಕೊರ್ವದೇವುದೋ|| ೬೬

ಆ ಬಿಲ್ಲಿನ ತುದಿಯನ್ನು ಎಳೆದು ಕಟ್ಟಿ- ೬೩. ದಿಕ್ಕುಗಳೆಲ್ಲ ನಡುಗುವ ಹಾಗೆ ದಿವ್ಯ ಬಾಣವನ್ನು ತೆಗೆದುಕೊಂಡು ಕರ್ಣನೇ ಮೊದಲಾದವರು ನೋಡಿ ಆಶ್ಚರ್ಯಪಡುತ್ತಿರಲು ಒಂದೇ ಸಲಕ್ಕೆ ಕಿವಿಮುಟ್ಟುವವರೆಗೆ ಸೆಳೆದು ಇದನ್ನು ಯಾರಿಗೆ ನೋಡುವುದಕ್ಕೂ ಹೊಡೆಯುವುದಕ್ಕೂ ಸಾಧ್ಯ ಎಂಬಂತಿದ್ದ ಮೀನನ್ನು ಛೇದಿಸಿ ದೇವತೆಗಳನ್ನೂ ಕುಶಲರಾದ ಬಿಲ್ಗಾರರನ್ನೂ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಸಂತೋಷ ಪಡಿಸಿದನು. ವ|| ಆಗ ಅವನು ಹಿಡಿದ ಬಿಲ್ಲನ್ನೇ ಕಬ್ಬಿನ ಬಿಲ್ಲನ್ನಾಗಿಯೂ ಬಾಣಗಳನ್ನೇ ಪುಷ್ಪಬಾಣಗಳನ್ನಾಗಿಯೂ ಹೊಡೆದ ಮೀನನ್ನೇ ಮೀನಿನ ಬಾವುಟವನ್ನಾಗಿಯೂ ಸಹಜಮನೋಜನಾದ ಅರ್ಜುನನನ್ನೇ ಮನ್ಮಥನನ್ನಾಗಿಯೂ ಭಾವಿಸಿದಳು. ೬೪. ಅವಳ ಕಡೆಗಣ್ಣು ಅವನಲ್ಲಿ ನಾಟಿತು. ಮನಸ್ಸು ಅವನನ್ನು ಬಯಸಿತು, ತೋಳುಗಳು ಅವನ ಗಾಢಾಲಿಂಗನಕ್ಕೆ ಆಶಿಸಿತು. ಬೆವರು ಹೆಚ್ಚುತ್ತಿದ್ದಿತು ಭಯವು ಉಂಟಾಯಿತು ನಾಚಿಕೆ ಮಾಯವಾಯಿತು, ಅಂಗವಿಕಾರಗಳು ಶರೀರದಲ್ಲಿ ತಲೆದೋರಿದುವು. ಸುಂದರಮಾಲೆಯೆಂಬ ಚೇಟಿ ಸ್ವಯಂವರ ಮಾಲೆಯನ್ನು ಸಾವಕಾಶಮಾಡದೆ ಅವಳ ಕೈಲಿತ್ತಳು. ಸತಿಯಾದ ದ್ರೌಪದಿಯು ಗುಣಾರ್ಣವನಿಗೆ ಮಾಲೆಯನ್ನು ಹಾಕಿದಳು.

ವ|| ಆಗ ದ್ರುಪದನು ಮಂಗಳವಾದ್ಯಗಳನ್ನು ವಾದನಮಾಡಿಸಿ ಸುರತಮಕರಧ್ವಜನಾದ ಅರ್ಜುನನನ್ನು ದ್ರೌಪದಿಯೊಡನೆ ಪಲ್ಲಕ್ಕಿಯನ್ನೇರಿಸಿ ಧೃಷ್ಟದ್ಯುಮ್ನ, ಯುಧಾಮನ್ಯು, ಉತ್ತಮೌಜ, ಶಿಖಂಡಿ ಮತ್ತು ಚೇಕಿತಾನರೆಂಬ ತನ್ನ ಮಕ್ಕಳೂ ಮತ್ತು ತಮ್ಮಂದಿರೊಡಗೂಡಿ ನೆಲವು ಬಾಯಿಬಿಟ್ಟ ಹಾಗೆ ಅರ್ಜುನನನ್ನು ಮುಂದಿಟ್ಟುಕೊಂಡು ಪಟ್ಟಣಕ್ಕೆ ಬಂದನು. ದುರ್ಯೋಧನನು ಕರ್ಣ, ಶಲ್ಯ, ಶಕುನಿ, ದುಶ್ಯಾಸನನೇ ಮೊದಲಾದವರಲ್ಲಿ ಆಲೋಚಿಸಿ ಈಗ ಏನು ಮಾಡೋಣ ಹೇಳಿ ಎನ್ನಲು ಕರ್ಣನು ಹೀಗೆ ಹೇಳಿದನು. ೬೫. ಜನವೆಲ್ಲ ಒಟ್ಟುಗೂಡಿ ಅಯ್ಯೋ ಅಣ್ಣಂದಿರು ಈ ದಿನ ಏಕೆ ಬಂದರು ಏಕೆ ಹೋಗುತ್ತಾರೆ ಎನ್ನುವ ಹಾಗೆ ನಾವು ಹೋಗುವುದೇ? ಪರಾಕ್ರಮಿಗಳಾದ ನಮಗೆ ಈ ತೆರನಾದ ಸೋಲು ಅವಮಾನಕರ, ನನ್ನ ಅಭಿಪ್ರಾಯವಿದು : ಎದುರಿಸಿದವರನ್ನು ಸೋಲಿಸಿ ಈಗ ಕೈಮೀರಿರುವ ವಿಜಯಲಕ್ಷ್ಮಿಗೂ ಈ ದ್ರೌಪದಿಗೂ ನಿನಗೂ ನನ್ನ ಬಾಹುಬಲದಿಂದ ಒಂದೇ ಹಸೆಮಣೆಯಲ್ಲಿ ಪಾಣಿಗ್ರಹಣ (ವಿವಾಹ)ವನ್ನು ಮಾಡಲಾರೆನೇ? ಎಂದನು. ೬೬. ಕನ್ಯಾದಾನ ಮಾಡಬೇಕಾದರೆ ಲಜ್ಜೆಯಾಗದ ರೀತಿಯಲ್ಲಿ ದಾನಮಾಡಬೇಕು. ಹತ್ತಿಯನ್ನು ಎಕ್ಕುವ ಬಿಲ್ಲಿನಂತಿರುವ ಈ ಬಿಲ್ಲನ್ನು

ವ|| ಎಂದು ಕೆಳರ್ದು ನುಡಿದು ಸಯಂಬರಕೆ ನೆರೆದರಸುಮಕ್ಕಳೆಲ್ಲರನುತ್ಸಾಹಿಸಿ ನೋಡೆ ನೋಡೆ-

ಉ|| ಪಕ್ಕರೆಯಿಕ್ಕಿ ಬಂದುವು ಹಯಂ ಘಟೆ ಪಣ್ಣಿದುವಾಯುಧಂಗಳಿಂ
ತೆಕ್ಕನೆ ತೀವಿ ಬಂದುವು ರಥಂ ಪುಲಿವಿಂಡುವೊಲಾದಳುರ್ಕೆ ಕೈ|
ಮಿಕ್ಕಿರೆ ಬಂದುದೊಂದಣಿ ರಣಾನಕ ರಾವಮಳುಂಬಮಾದುದಾರ್
ಮಿಕ್ಕು ಬರ್ದುಂಕುವನ್ನರಿವರ್ಗೆಂಬಿನೆಗಂ ಮಸಗಿತ್ತು ರಾಜಕಂ|| ೬೭

ವ|| ಅಂತು ನೆಲಂ ಮೂರಿವಿಟ್ಟಂತೆ ತಳರ್ದು-

ಚಂ|| ತೆರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳೋಳಿವಟ್ಟ ಬೆ
ಳ್ನೊರೆಗಳ ಪಿಂಡನೆತ್ತಿಸಿದ ಬೆಳ್ಗೊಡೆಗಳ್ ಮಕರಂಗಳ ಭಯಂ|
ಕರ ಕರಿಗಳ್ ತೆಱಂಬೊಳೆವ ವಿಂಗಳನುಳ್ಕುವ ಕೈದುಗಳ್ ನಿರಾ
ಕರಿಸಿರೆ ಮೇರೆದಪ್ಪಿ ಕವಿದತ್ತು ನರಾಪಸೈನ್ಯಸಾಗರಂ|| ೬೮

ವ|| ಅಂತು ಕವಿದ ರಿಪುಬಳಜಳನಿಯ ಕಳಕಳರವಮಂ ಕೇಳ್ದು ಪೊೞಲಂ ಪುಗಲೊಲ್ಲದೆ ನಿಂದ ಮನುಜಮಾಂಧಾತನಂ ಪಾಂಚಾಳರಾಜನಿಂತೆಂದಂ-

ಮ|| ಧನುವಂ ನೀಂ ತೆಗೆದೆಚ್ಚು ವಿನನಳವಂ ಕೆಯ್ಕೊಂಡುದರ್ಕಂ ಕರಂ
ನಿನಗೀ ಕನ್ನಿಕೆ ಸೋಲ್ತುದರ್ಕಮೆರ್ದೆಯೊಳ್ ಕೋಪಾಗ್ನಿ ಕೈಗಣ್ಮೆ ಬಂ|
ದಿನಿತುಂ ರಾಜಕುಲಂ ಸಮಸ್ತಭರದಿಂ ಮೇಲೆೞ್ದುದಿನ್ ಕಾವನಾ
ವನೊ ನೀನಲ್ಲದೆ ಕಾವುದೆನ್ನ ತಲೆಯಂ ವಿದ್ವಿಷ್ಟವಿದ್ರಾವಣಾ|| ೬೯

ವ|| ಎಂಬುದುಮರಾತಿಕಾಳಾನಳನಿದರ್ಕೇನುಂ ಚಿಂತಿಸಲ್ವೇಡ ನೀಮೆನ್ನ ಕಾಳೆಗಮಂ ಪೆಱಗಿರ್ದು ನೋಡಿಮೆಂದು ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಣೆ ಪುಗುವರಾತಿಬಲಮಂ ಮಾರ್ಕೊಂಡು ತೆಗೆನೆದಿಸೆ-

ಚಂ|| ಸರಳ ಪೊದಳ್ದ ಬಲ್ಸರಿಯ ಕೋಳ್ಗಿರಲಾಱದೆ ಬಿಲ್ ತೆರಳ್ದು ದು
ರ್ಧರ ಹಯಮೞ ಸಂದಣಿಸಿ ಸಂದಣಿ ಕೊೞ್ಗುದಿಗೊಂಡುದಗ್ರ ಭೀ|
ಕರ ರಥಮೞ ದಂತಿಘಟೆಗಳ್ ಪೆಱಗಿಟ್ಟೊಡೆ ಕಟ್ಟೆಗಟ್ಟಿದಂ
ತಿರೆ ತಳರ್ದತ್ತರಾತಿಬಲಮಾಂಪವರಾರ್ ಕದನತ್ರಿಣೇತ್ರನಂ|| ೭೦

ಏರಿಸಿದನೆಂಬ ಕಾರಣದಿಂದ ಬ್ರಾಹ್ಮಣವಂಶದವನಿಗೆ ಕನ್ಯೆಯನ್ನು ಕೊಡುವುದೇ? ಈ ಪರಾಭವವು ಸಮಸ್ತರಾಜವೃಂದಕ್ಕೂ ಸಂಬಂಧಪಟ್ಟುದು, ಆದುದರಿಂದ ಈಗ ನಾನು ಈ ದ್ರುಪದನನ್ನು ತರಿದು ಹಾಕದೆ ಸುಮ್ಮನಿದ್ದರೆ ಕೊಬ್ಬಿ ಬೆಳೆದಿರುವ ನನ್ನ ತೋಳುಗಳಿಗೆ ಸಾರ್ಥಕತೆಯೇನು? ವ|| ಎಂದು ಕೋಪಿಸಿ ನುಡಿದು ಸ್ವಯಂವರಕ್ಕೆ ಸೇರಿದ್ದ ಎಲ್ಲ ರಾಜಕುಮಾರರನ್ನೂ ಪ್ರೋತ್ಸಾಹಿಸಿ ನೋಡುತ್ತಿದ್ದಂತೆಯೇ ೬೭. ಜೇನುಗಳನ್ನು ಧರಿಸಿದ ಕುದುರೆಗಳು ಬಂದುವು. ಆನೆಗಳ ಸಮೂಹವು ಯುದ್ಧಸನ್ನದ್ಧವಾದವು. ಆಯುಧಗಳಿಂದ ತುಂಬಿದ ರಥಗಳು ಬಂದವು. ಕಾಲಾಳುಸೈನ್ಯದ ಪಂಕ್ತಿಯೊಂದು ಹುಲಿಯ ಹಿಂಡಿನ ಹಾಗೆ ಕೈಮೀರಿ ಮುಂದೆ ಬಂದಿತು. ಯುದ್ಧವಾದ್ಯವೂ ವಿಜೃಂಭಿಸಿತು. ಇದನ್ನು ಮೀರಿ ಯಾರು ಬದುಕುತ್ತಾರೆ ಎನ್ನುವ ಹಾಗೆ ರಾಜಸಮೂಹವು ರೇಗಿ ಬಂದಿತು. ವ|| ಹಾಗೆ ನೆಲವು ಪ್ರಸರಿಸಿದ ಹಾಗೆ ನಡೆದು ೬೮. ಚಲಿಸುತ್ತಿರುವ ಧ್ವಜಗಳ ಸಮೂಹವು ತೆರೆಗಳ ರಾಶಿಗಳನ್ನೂ ಎತ್ತಿ ಹಿಡಿದ ಬಿಳಿಯ ಕೊಡೆಗಳು ಸಾಲಾಗಿರುವ ಬಿಳಿಯ ನೊರೆಗಳ ಸಮೂಹವನ್ನೂ ಭಯಂಕರವಾದ ಆನೆಗಳು ಮೊಸಳೆಗಳನ್ನೂ ಪ್ರಕಾಶಿಸುತ್ತಿರುವ ಆಯುಧಗಳು ಹೊಳೆಯುತ್ತಿರುವ ಮೀನುಗಳನ್ನೂ ತಿರಸ್ಕರಿಸುತ್ತಿರಲು ರಾಜರ ಸೇನಾಸಮುದ್ರವು ಮೇರೆಯನ್ನು ಮೀರಿ ಕವಿಯಿತು. ವ|| ಹಾಗೆ ಮುತ್ತಿದ ಶತ್ರುಸೇನಾಸಮುದ್ರದ ಕಳಕಳಶಬ್ದವನ್ನು ಕೇಳಿ ಪುರಪ್ರವೇಶ ಮಾಡದೇ ನಿಂದ ಮನುಜಮಾಂಧಾತನಾದ ಅರ್ಜುನನನ್ನು ಕುರಿತು ಪಾಂಚಾಳರಾಜನಾದ ದ್ರುಪದನು ಹೀಗೆಂದನು- ೬೯. ನೀನು ಬಿಲ್ಲನ್ನು ಏರಿಸಿ ಮೀನನ್ನು ಹೊಡೆದು ಪರಾಕ್ರಮವನ್ನು ಪ್ರದರ್ಶಿಸಿದುದಕ್ಕೂ ಈ ಕನ್ಯೆ ನಿನಗೆ ವಿಶೇಷವಾಗಿ ಸೋತು ಅನಳಾದುದಕ್ಕೂ ಎದೆಯಲ್ಲಿ ಕೋಪಾಗ್ನಿ ಹೆಚ್ಚಿ ಈ ರಾಜಸಮೂಹವು ವಿಶೇಷ ವೇಗದಿಂದ ನಮ್ಮ ಮೇಲೆದ್ದಿದೆ. ಇನ್ನು ಮೇಲೆ ನಮ್ಮನ್ನು ರಕ್ಷಣೆ ಮಾಡುವವರು ನೀನಲ್ಲದೆ ಮತ್ತಾರು? ಎಲೈ ವಿದ್ವಿಷ್ಟ ವಿದ್ರಾವಣನೇ ನನ್ನ ತಲೆಯನ್ನು ಕಾಯಬೇಕು ಎಂದನು. ವ|| ಅರಾತಿಕಾಲಾನಳನು (ಅರ್ಜುನನು) ಇದಕ್ಕೆ ನೀವು ಏನೂ ಚಿಂತಿಸಬೇಕಾಗಿಲ್ಲ; ನೀವು ನನ್ನ ಕಾಳೆಗವನ್ನು ಹೊರಗಿದ್ದು ನೋಡಿ ಎಂದು ಹೇಳಿ ತಾನೂ ಭೀಮಸೇನನೂ ಉತ್ತಮವಾದ ಬಿಲ್ಲುಗಳನ್ನು ತೆಗೆದುಕೊಂಡು ಪ್ರತಿಜ್ಞೆಮಾಡಿ ಪ್ರವೇಶಮಾಡಿದ ಶತ್ರುಸೈನ್ಯವನ್ನು ಪ್ರತಿಭಟಿಸಿ ದೀರ್ಘವಾಗಿ ಎಳೆದು ಪ್ರಯೋಗಮಾಡಿದರು. ೭೦. ಒಟ್ಟಿಗೆ ಸೇರಿದ