ಕಂ|| ಶ್ರೀಯನರಾತಿಬಳಾಸೃ
ಕ್ತೋಯಯೊಳ್ ಪಡೆದ ವೀರನುಱದರಿಗಳನಾ|
ತ್ಮೀಯಪದಸುರಿತ ನಖ
ಚಾಯೆಗಳೊಳ್ ನಱಸಿ ನಿಂದ ಗಂಡಂ ಹರಿಗಂ| ೧

ವ|| ಆ ಪೊೞಲ ಪೊಱವೋೞಲನೆಯ್ದೆ ವರ್ಪಾಗಳ್-

ಕಂ|| ಕತ್ತುರಿಯ ಸಗಣ ನೀರ್ ಬಿಡು ಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂ|
ಪತ್ತಿನ ಬಿತ್ತರದೆತ್ತಿದ ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ|| ೨

ವ|| ಅಂತಾಗಳೊಂದುತ್ತರಂ ಬಳೆಯೆ ಸೊಗಯಿಸುವ ಪೊೞಲೊಳಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ ಗೋರೋಚನಾ ಸಿದ್ಧಾರ್ಥ ದೂವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣ ಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಯರುಂ ಬದ್ಧವಣದ ಪಗಳುಂಬೆರಸಿದಿರ್ವಂದು ಮೆಯ್ಯಿಕ್ಕಿ ಪೊಡಮಟ್ಟು ಪಾಂಡವರುಮಂ ಮುಂದಿಟ್ಟೊಡಗೊಂಡು ಬಂದು ಪೊೞಲಂ ಪುಗಿಸೆ ಪೊಕ್ಕು ಬೀಡನೆಲ್ಲಿ ಬಿಡುವಮೆನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆನಲ್ಲಿಗೆ ಬಿಜಯಂಗೆಯ್ಯಿಮೆನೆ-

ಕಂ|| ಅರಗು ಮೊದಲಾಗೆ ಘೃತ ಸ

ಜ್ಜರಸಂ ಬೆಲ್ಲಂ ಸಣಂಬಿವೆಂಬಿವಱಂ ವಿ|
ಸ್ತರಿಸಿ ಸಮೆದಿಂದ್ರಭವನಮೆ
ಧರೆಗವತರಿಸಿರ್ದುದೆನಿಸುವರಗಿನ ಮನೆಯಂ|| ೩

ವ|| ತಾನೆ ಮುಂದಿಟ್ಟೊಡಂಗೊಂಡು ಬಂದು ಪುಗಿಸೆ ಪಾಂಡವರಯ್ವರುಂ ಕೊಂತಿವೆರಸು ಕಿಱದಾನುಂ ಬೇಗಮಿರ್ದು ದಾನ ಸನ್ಮಾನಾದಿಗಳಿಂ ಸಂತಸಂಬಡಿಸಿ ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು ಧರ್ಮಪುತ್ರನಾ ಮನೆಯಂ ಪರೀಕ್ಷಿಸಿ ನೋಡಲೊಡಮಱದು ನಿಜಾನುಜ ಸಹಿತಂ ಕೊಂತಿವೆರಸೇಕಾಂತದೊಳಿಂತೆಂದಂ-

೧. ಶತ್ರುಸೈನ್ಯದ ರಕ್ತಸಮುದ್ರದಲ್ಲಿ ಜಯಲಕ್ಷ್ಮಿಯನ್ನು ಪಡೆದ ವೀರನೂ ತನಗೆ ಅನರಾಗದ ಶತ್ರುಗಳನ್ನು ತನ್ನ ಕಾಲಿನಲ್ಲಿ ಹೊಳೆಯುತ್ತಿರುವ ಉಗುರಿನ ಕಾಂತಿಯ ನೆರಳಿನಲ್ಲಿ ನಿಲ್ಲಿಸಿದ ಪರಾಕ್ರಮಶಾಲಿಯೂ ಆದ ಅರ್ಜುನನು ಆ ಪಟ್ಟಣದ ವ|| ಹೊರಭಾಗವನ್ನು ಬಂದು ಸೇರಿದನು. ೨. ಪಟ್ಟಣದ ಮನೆಗಳೆಲ್ಲ ಕಸ್ತೂರಿಯಿಂದ ಕೂಡಿದ ಸಗಣಿನೀರು, ಬಿಡಿಬಿಡಿಯಾದ ಮುತ್ತಿನ ರಂಗೋಲೆ, ಚಲಿಸುತ್ತಿರುವ ರೇಷ್ಮೆಯ ಬಟ್ಟೆಯ ಬಾವುಟಗಳು, ಅತುಲೈಶ್ವರ್ಯದಿಂದ ಕೂಡಿದ ಮುತ್ತಿನ ಮಂಟಪ ಇವುಗಳಿಂದ ಅಲಂಕೃತವಾಗಿದ್ದುವು. ವ|| ಹಾಗೆ ವೈಭವದಿಂದ ಕೂಡಿ ಸೊಗಯಿಸುತ್ತಿರಲು ಪಟ್ಟಣದಲ್ಲಿ ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆಯೆಂಬ ಎಂಟು ವಿಧ ಅಲಂಕಾರಗಳಿಂದ ಕೂಡಿ ದುರ್ಯೋಧನನ ಸೂಚನೆಯ ಪ್ರಕಾರ ಮೊದಲೇ ಸಿದ್ಧವಾಗಿದ್ದ ಪುರೋಚನನು ಗೋರಚನ (ಹಸುವಿನ ಎದೆಯಲ್ಲಿರುವ ಒಂದು ಜಾತಿಯ ಕೊಬ್ಬು) ಅಕ್ಷತೆ, ಗರಿಕೆಯ ಚಿಗುರು, ಮಾದಲಹಣ್ಣು, ಕನ್ನಡಿ, ಕಳಮಾಕ್ಷತೆ ಮೊದಲಾದವುಗಳನ್ನು ಕಯ್ಯಲ್ಲಿ ಧರಿಸಿದ್ದ ಸ್ತ್ರೀಯರು ಮಂಗಳವಾದ್ಯಗಳು ಮೊದಲಾದವುಗಳಿಂದ ಕೂಡಿ ಎದುರಿಗೆ ಬಂದು ದೀರ್ಘದಂಡನಮಸ್ಕಾರಮಾಡಿ ಪಾಂಡವರನ್ನು ಮುಂದಿಟ್ಟುಕೊಂಡು ಬಂದು ಪಟ್ಟಣವನ್ನು ಪ್ರವೇಶಮಾಡಿಸಿ ‘ಎಲ್ಲಿ ಬೀಡುಬಿಡೋಣ’ (ಇಳಿದುಕೊಳ್ಳೋಣ) ಎಂದು ಪಾಂಡವರು ಪ್ರಶ್ನೆಮಾಡಲು ಅವನು ನಿಮ್ಮಯ್ಯನಾದ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ಮೊದಲೇ ಮನೆಯನ್ನು ಸಿದ್ಧಪಡಿಸಿದ್ದೇನೆ; ಅಲ್ಲಿಗೆ ದಯಮಾಡಿ ಎಂದನು. ೩. ಅರಗು ಮೊದಲಾದ ತುಪ್ಪ, ಸಜ್ಜರಸ, ಬೆಲ್ಲ, ಸೆಣಬು ಇವುಗಳಿಂದ ವಿಸ್ತಾರವಾಗಿ ನಿರ್ಮಿಸಿದ ದೇವೇಂದ್ರನರಮನೆಯೇ ಭೂಮಿಗಿಳಿದು ಬಂದಿದೆಯೋ ಎನಿಸಿದ್ದ ಅರಗಿನ ಮನೆಯನ್ನು ವ|| ತಾನೆ ಮುಂದಾಗಿ ಒಡಗೊಂಡು ಬಂದು ಪ್ರವೇಶಮಾಡಿಸಲು ಅಯ್ದುಜನ ಪಾಂಡವರೂ ಕುಂತಿಯೊಡಗೂಡಿ ಕೆಲವು ಕಾಲವಿದ್ದು ದಾನಸನ್ಮಾನಾದಿಗಳಿಂದ ಸಂತೋಷಪಡಿಸಿ ಪುರೋಚನನನ್ನು ಅವನ ಮನೆಗೆ ಹೋಗುವ ಹಾಗೆ ಹೇಳಿ ಧರ್ಮರಾಜನು ಆ ಮನೆಯನ್ನು ಪರೀಕ್ಷಿಸಿ ನೋಡಿ

ಚಂ|| ಇದು ಮನೆಯಂದವಲ್ತುರಿವ ದಳ್ಳುರಿಯುಗ್ಗಡದಂದಮಾಗಿ ತೋ ಱಿದಪುದು ಕಣ್ಗೆ ಸಜ್ಜರಸದೆಣ್ಣೆಯ ತುಪ್ಪದ ಕಂಪಿದೆಲ್ಲಮೆಂ|

ಬುದೆ ಬಗೆದಲ್ಲಿ ನೋಡುವೊಡಮಿಟ್ಟಗೆ ಕಲ್ಮರನೆಂಬುದಿಲ್ಲ ಕೂ ರದನಿದನೊಡ್ಡಿದಂ ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೇ|| ೪

ವ|| ಅದಲ್ಲದೆಯುಮತ್ಯಾದರಸ್ಸಂಭ್ರಮಮುತ್ಪಾದಯತಿಯೆಂಬುದೀ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗಿನಿತಾದರಂ ಗೆಯ್ವಿದೆಲ್ಲಂ ನಮ್ಮಂ ಮೆಳ್ಪಡಿಸಲೆಂದೆ ಮಾಡಿದಂ ನಾಮಿದನಱಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮೆಂದು ನಿಚ್ಚಂ ಬೇಂಟೆವೋಗೆ ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡೇಕಾಂತದೊಳ್ ವಿದುರನಟ್ಟಿದ ವಿನ್ನಾಣಂಗಳಂ ಪೇೞ್ದು ನಂಬಿಸಿ ನೀಮೆಂತುಂ ಬಲ್ಲಿರಂತೆ ಪೊಱಮಟ್ಟು ಪೋಗಿಮೆಂದು ಜತುಗೃಹ ಕವಾಟ ಪುಟ ಸಂಗಳೊಳ್ ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು ಪೇೞ್ದು ಪೋಪುದುಂ ಪಾಂಡವರುಂ ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನೆನಲುಂ ಮುನ್ನಿನ ದಿವಸಮೊಳಗಣ ಪರಿಜನಮೆಲ್ಲಮಂ ಪಾರ್ವರನೂಡುವ ನೆವದೊಳೆ ಪೊಱಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನೂಡಿ ನಿಷಾದಿತಿಯೆಂಬ ಬೇಡಿತಿಗಮಯ್ವರ್ ಮಗಂದಿರ್ಗಮುಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಸುಂದಿದರ್ ಪುರೋಚನನುಮಾ ಮನೆಯೊಳೊಂದೋವರಿಯೊಳ್ ಮಱಕೆಂದಿದನಾ ಪ್ರಸ್ತಾವದೊಳರ್ಧ ರಾತ್ರಿಯಾದಾಗಳ್ ಕೊಂತಿವೆರಸಯ್ವರುಮಂ ಮುನ್ನಮೊಯ್ಯನೊಯ್ಯನೆ ಸುರಂಗದಿ ಪೊಱಮಡಿಸಿ ಭೀಮಸೇನಂ ಪುರೋಚನಂ ಮಱಕೆಂದಿರ್ದೋವರಿಯೊಳ್ ಕಿಚ್ಚಂ ಕೊಳಿಸಲೊಡಂ-

ಕಂ|| ಅಡೆವೊತ್ತದೆ ಕಿಱಕಿಱದನೆ ಸುಡದಿನಿಸರೆಪೊರೆಕನಾಗದೆಯೆ ಸಸಿದಂದೊಂ|
ದೆಡೆಯೊಳಗೊಟ್ಟಿರ್ದರಳೆಯ ನೊಡನಳುರ್ವಂತುಳುರ್ದನನಲನರಗಿನ ಮನೆಯಂ| ೫

ಅದರ ರಹಸ್ಯವನ್ನು ತಿಳಿದು ತಮ್ಮಂದಿರೊಡಗೂಡಿದ ಕುಂತಿಗೆ ರಹಸ್ಯವಾಗಿ ಹೀಗೆ ಹೇಳಿದನು- ೪. ಇದು ಮನೆಯ ಹಾಗೆ ಕಾಣುವುದಿಲ್ಲ. ಉರಿಯುವ ದಾವಾಜ್ಞಾಲೆಯ ರಾಶಿಯಂತೆ ಕಣ್ಣಿಗೆ ಕಾಣುತ್ತಿದೆ. ಎಲ್ಲಿ ಪರೀಕ್ಷಿಸಿ ನೋಡಿದರೂ ಸಜ್ಜರಸದ ಎಣ್ಣೆಯ ತುಪ್ಪದ ವಾಸನೆಯೇ ಇದೆ. ಇಟ್ಟಿಗೆ, ಕಲ್ಲು, ಮರ ಎಂಬುವುದಿಲ್ಲ. ಶತ್ರುವಿಗೆ ಸಂತೋಷವಾಗುವುದಕ್ಕೋಸ್ಕರ ಅಹಿತನಾದ ವಿರೋಚನನು ಈ ಉಪಾಯವನ್ನು ಒಡ್ಡಿದ್ದಾನೆ. ಇದಕ್ಕೆ ಮಾರದೇವತೆಯು ನಿಟ್ಟುಸಿರು ಬಿಡುತ್ತಾಳೆಯೇ (ಅಂದರೆ ಇಲ್ಲ, ಅದು ಅವಳಿಗೆ ತೃಪ್ತಿಕರವಾಗಿಯೇ ಇರುತ್ತದೆ) ವ|| ಅಷ್ಟೇ ಅಲ್ಲದೆ ‘ವಿಶೇಷವಾದ ಆದರವು ಸಂದೇಹವನ್ನುಂಟುಮಾಡುತ್ತದೆ’ ಎಂಬುದುಂಟು. ‘ಈ ಪುರೋಚನನೆಂಬ ಭೂತವು ದೂರ್ಯೋಧನನ ಆಜ್ಞೆಯ ಪ್ರಕಾರ ನಮಗಿಷ್ಟು ಆದರವನ್ನು ತೋರಿಸುವುದೆಲ್ಲ ನಮ್ಮನ್ನು ಮೋಸಮಾಡುವುದಕ್ಕಾಗಿಯೇ ಮಾಡಿದ್ದಾನೆ. ನಾವು ಇದನ್ನು ತಿಳಿಯದ ಹಾಗೆ ಬೇಟೆಗೆ ಹೋಗುವ ನೆಪದಲ್ಲಿ ದಾರಿಯನ್ನು ಹುಡುಕೋಣ’ ಎಂದು ನಿತ್ಯವೂ ಬೇಟೆಗೆ ಹೋಗುತ್ತಿರಲು ಪುರೋಚನನೂ ಇವರ ಹೊರಗಿನ ರಕ್ಷಣೆಯನ್ನು ತನ್ನ ಕಣ್ಣಿನ ಮೇಲುನೋಟದಿಂದಲೇ ನೋಡುತ್ತಿರುವಷ್ಟರಲ್ಲಿ ವಿದುರನ ನಂಬಿಕೆಗೆ ಪಾತ್ರನಾದ ಕನಕನೆಂಬ ಸೇವಕನು ಬಂದು ಪಾಂಡುವರನ್ನು ಕಂಡು ರಹಸ್ಯವಾಗಿ ಅವರಿಗೆ ವಿದುರನು ಕಳುಹಿಸಿದ ಸಂಜ್ಞೆಗಳನ್ನು ಹೇಳಿ ನಂಬುವ ಹಾಗೆ ಮಾಡಿ ‘ನೀವು ಹೇಗೂ ತಿಳಿದವರಾಗಿದ್ದೀರಿ; ಹಾಗೆಯೇ ಹೊರಟು ಹೋಗಿ ಎಂದು ಅರಗಿನ ಮನೆಯ ಬಾಗಿಲಿನ ಸಂದಿಯಲ್ಲಿ ನೆಲದೊಳಗಿನ ರಂಧ್ರವನ್ನು ಗಂಗೆಯ ಆಚೆಯ ದಡದಲ್ಲಿ ಹೊರಗೆ ಬರುವಂತೆ ಸಿದ್ಧಪಡಿಸಿ ಆ ವಿಷಯವನ್ನು ಅವರಿಗೆ ಹೇಳಿಹೋದನು. ಪಾಂಡವರೂ ಕೂಡ ಪುರೋಚನನು ತಮ್ಮನ್ನು ಮುಂದಿನ ದಿವಸ ಛೇದಿಸುತ್ತಾನೆಂದು ತಿಳಿದು ಮೊದಲ ದಿನವೇ ಬ್ರಾಹ್ಮಣರಿಗೆ ಭೋಜನಮಾಡಿಸುವ ನೆಪದಲ್ಲಿ ತಮ್ಮ ಪರಿವಾರವನ್ನೆಲ್ಲ ಹೊರಗೆ ಹೋಗುವ ಹಾಗೆ ಮಾಡಿದರು. ಸೂರ್ಯನು ಮುಳುಗುವ ಹೊತ್ತಿನಲ್ಲಿ ಬ್ರಾಹ್ಮಣರಿಗೆಲ್ಲ ಊಟ ಮಾಡಿಸಿ ನಿಷಾದಿತಿಯೆಂಬ ಬೇಡರವಳಿಗೂ ಅವಳ ಅಯ್ದು ಜನ ಮಕ್ಕಳಿಗೂ ಊಟ ಮಾಡಿಸಿದರು. ಅವರು ತೃಪ್ತಿಯಾಗಿ ತಿಂದು ಬಳಲಿದಂತವರಾಗಿ ಮೈಮರೆತು ನಿದ್ರಿಸಿದರು. ಪುರೋಚನನೂ ಆ ಮನೆಯ ಒಂದು ಕೋಣೆಯಲ್ಲಿ ಎಚ್ಚರತಪ್ಪಿ ಮಲಗಿದನು. ಆ ಸಂದರ್ಭದಲ್ಲಿ ಅರ್ಧರಾತ್ರಿಯಾದಾಗ ಭೀಮಸೇನನು ಕುಂತಿಯೊಡನೆ ಅಯ್ದುಜನಗಳನ್ನು ಮೊದಲೇ ನಿಧಾನವಾಗಿ ಸುರಂಗದಿಂದ ಹೊರಡಿಸಿ ಪುರೋಚನನು ಮೈಮರೆತು ಮಲಗಿದ್ದ ಕೊಠಡಿಗೆ ಬೊಂಕಿಯನ್ನು ಹಚ್ಚಿದನು. ೫. ಅಡಿಯ ಭಾಗ ಹತ್ತಿಕೊಳ್ಳದೆ ಸ್ವಲ್ಪ ಸ್ವಲ್ಪವಾಗಿ ಸುಡದೆ ಸ್ವಲ್ಪವೂ ಅರೆಕರಿಕಾಗದೆ ಬಿಡಿಸಿಟ್ಟಿದ್ದ ಹತ್ತಿಯ ರಾಶಿಯನ್ನು ಒಟ್ಟಿಗೇ

ಕಂ|| ಮೇಲಾದ ಪಾಂಡುಸುತರನು ಪಾಲಂಭಂಗೆಯ್ಯುತಿರ್ಪ ದುರ್ಯೋಧನನಂ||
ಲೀಲೆಯೆ ನುಂಗುವ ಮೃತ್ಯುವ ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ|| ೬

ವ|| ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವರಗಿನುರಿಯ ಬಂಬಲ್ಗಳಂ ಪೊಸೆದು ಬಿದಿರ್ದು ಕಳೆದು ಸುರಂಗದೊಳಗಣಿಂದಮೆ ತನ್ನೊಡವುಟ್ಟಿದರ್ ಕೂಡೆ ವಂದನನ್ನೆಗಮಿತ್ತಂ-

ಕಂ|| ಅರಗಿನ ಮನೆಯೊಳ್ ಪಾಂಡವ ರುರಿದೞದರಕ್ಕಟಯ್ಯೊ ದುರ್ಯೋಧನನೆಂ|
ಬೆರಲೆಯಿನೆಂದೞುತುಂ ತ ತ್ಪುರಜನಮೞಲೊದಪಿ ಪರಿದು ನೋಡಿತ್ತಾಗಳ್| ೭

ವ|| ನೋಡಿ ರೂಪಱಯಲಾಗದಂತು ಕರಿಮುರಿಕನಾಗಿರ್ದ ಬೇಡಿತಿಯು ಮನವಳಯ್ವರ್ ಮಕ್ಕಳುಮಂ ಕೊಂತಿಯುಂ ಪಾಂಡವರುಮಪ್ಪರೇನುಂ ತಪ್ಪಲ್ಲೆಂದು ಪುರಪ್ರಧಾನರ್ಕಳ್ ತದ್ವ ತ್ತಾಂತಮೆಲ್ಲಮಂ ಪೇೞ್ದು ಧೃತರಾಷ್ಟ್ರಂಗಂ ಪೇೞಲಟ್ಟಿದೊಡೆ-

ಕಂ|| ಮನದೊಳ್ ತ್ರೈಭುವನಮನಾ
ಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಮಂ| ದಿನಿಸಂಧನೃಪಂ ತನ್ನಯ
ಜನದೊಳ್ ಕೆಲನಱಯೆ ಕೃತಕ ಶೋಕಂಗೆಯ್ದಂ|| ೮

ವ|| ಆಗಳ್ ನದೀತನೂಜ ಭಾರದ್ವಜ ಕೃಪರವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ ವಿದುರಂ ತಾನಱದುಮಱಯದಂತೆ ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿಕ್ರಿಯೆಗಳಂ ಮಾಡಿ ಮಗುೞೆ ವಂದನನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು ತಾರಾಗಣಂಗಳ್‌ನಿಂದ ನೆಲೆಯಿಂದೆಸೆಯಂ ಪೊೞ್ತ್ತುಮನಱದು ತೆಂಕಮೊಗದೆ ಪಯಣಂಬೋಗಿ-

ಮ|| ತಡಕುಂ ಪಿಟ್ಟೆಯುಮೊತ್ತೆ ಮೆಲ್ಲಡಿಗಳಂ ಬಳ್ಕುತ್ತುಮಳ್ಕುತ್ತುಮೋ

ರಡಿಗೊರ್ಮೊರ್ಮೆ ಕುಳುತ್ತುಮೇೞುತಿರೆ ಕಂಡಿಂತಾಗದಿನ್ನೇೞಮೆಂ| ದೊಡನಂದಯ್ವರುಮಂ ನಿಜಾಂಸಯುಗದೊಳ್ ಪೊತ್ತೆತ್ತಿ ತಳ್ತೂಳ್ವ ಸೀ

ಱುಡುವಿಂದದ್ಭುತದಾ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ|| ೯

ವ್ಯಾಪಿಸುವಂತೆ ಅರಗಿನ ಮನೆಯನ್ನು ಅಗ್ನಿಯು ತಕ್ಷಣ ವ್ಯಾಪಿಸಿದನು. ೬. ಉತ್ತಮರಾದ ಪಾಂಡವರನ್ನು ಮೋಸಮಾಡುತ್ತಿರುವ ದುರ್ಯೋಧನನನ್ನು ಆಟದಿಂದಲೇ ನುಂಗುವ ಮೃತ್ಯುದೇವತೆಯ ನಾಲಗೆಯೆನ್ನುವ ಹಾಗೆ ಹಲವು ಅಗ್ನಿಜ್ವಾಲೆಗಳು ಹೊರಟವು. ವ|| ಆಗ ಭೀಮಸೇನನು ತನ್ನ ತಲೆಯ ಮೇಲೆಯೂ ಶರೀರದ ಮೇಲೆಯೂ ಕರಗಿ ಸುರಿಯುತ್ತಿದ್ದ ಅರಗಿನ ಜ್ವಾಲೆಯ ಸಮೂಹಗಳನ್ನು ಹೊಸದು ಒದರಿ ಕಳೆದು ಸುರಂಗದೊಳಗಿನಿಂದಲೇ ತನ್ನ ಸಹೋದರರ ಜೊತೆಯಲ್ಲಿ ಬಂದನು. ಅಷ್ಟರಲ್ಲಿ ಈ ಕಡೆ- ೭. ದುರ್ಯೋಧನನೆಂಬ ವಿಷದ ಹುಳುವಿನಿಂದ ಪಾಂಡವರು ಅರಗಿನ ಮನೆಯಲ್ಲಿ ಬೆಂದು ನಾಶವಾದರು; ಅಯ್ಯೋ ಅಬ್ಬ ಎಂದು ಅಳುತ್ತ ಆ ಪಟ್ಟಣಿಗರೆಲ್ಲ ಹೆಚ್ಚುತ್ತಿರುವ ದುಖದಿಂದ ಬಂದು ನೋಡಿದರು. ವ|| ನೋಡಿ ಗುರುತಿಸಲಾಗದಷ್ಟು ಕರಿಕುಮುರುಕಾಗಿದ್ದ ಬೇಡಿತಿಯನ್ನೂ ಅವಳ ಅಯ್ದು ಜನ ಮಕ್ಕಳನ್ನೂ ಕುಂತಿ ಹಾಗೂ ಪಾಂಡವರೇ ಆಗಿದ್ದಾರೆ ವ್ಯತ್ಯಾಸವಿಲ್ಲ ಎಂದು ನಿಷ್ಕರ್ಷಿಸಿ ಊರ ಮುಖ್ಯಸ್ಥರು ಆ ವಿಚಾರವನ್ನೆಲ್ಲ ಧೃತರಾಷ್ಟ್ರನಲ್ಲಿಗೂ ಹೇಳಿ ಕಳುಹಿಸಿದರು. ೮. ಅದನ್ನು ಕೇಳಿ ತನಗೆ ಆ ದಿನ ಮೂರುಲೋಕವನ್ನು ಆಳುವಷ್ಟು ಸಂತೋಷ ಹೆಚ್ಚಿದರೂ ಅಕ್ಕಪಕ್ಕದವರು ತಿಳಿಯುವ ಹಾಗೆ ಧೃತರಾಷ್ಟ್ರನು ತನ್ನ ಜನದ ಮಧ್ಯದಲ್ಲಿ ಕಪಟದುಖವನ್ನು ಪ್ರದರ್ಶಿಸಿದನು. ವ|| ಆಗ ಭೀಷ್ಮದ್ರೋಣ ಕೃಪರು ಏಕಪ್ರಕಾರವಾಗಿ ಸುರಿಯುವ ಕಣ್ಣೀರೆಂಬ ಮಳೆಗಾಲದಿಂದ ಬಾಡಿದ ಮುಖವುಳ್ಳವರಾಗಿರಲು ವಿದುರನು ತಾನು ತಿಳಿದಿದ್ದರೂ ತಿಳಿಯದವನಂತೆ ದುಖದಿಂದ ಕೂಡಿದವನಾಗಿ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ವಾರಣಾವತಕ್ಕೆ ಹೋಗಿ ಅಲ್ಲಿ ಅರ್ಧಸುಟ್ಟಿದ್ದ ದೇಹಗಳಿಗೆ ಸಂಸ್ಕಾರಮಾಡಿ ತರ್ಪಣಾದಿಗಳನ್ನು ಕೊಟ್ಟು ಹಿಂತಿರುಗಿದನು. ಅಷ್ಟರಲ್ಲಿ ಈ ಕಡೆ ಪಾಂಡವರು ಸುರಂಗ ಮಾರ್ಗದಿಂದ ಹೊರಟು ನಕ್ಷತ್ರಸಮೂಹಗಳಿದ್ದ ಸ್ಥಾನಗಳಿಂದ ದಿಕ್ಕನ್ನೂ ಹೊತ್ತನ್ನೂ ತಿಳಿದು ಪ್ರಯಾಣ ಮಾಡಿದರು. ೯. ಮೃದುವಾದ ತಮ್ಮ ಕಾಲುಗಳನ್ನು ಕಲ್ಲುಗಳೂ ಹೆಂಟೆಯೂ ಒತ್ತುತ್ತಿರಲು ಬಳುಕುತ್ತಲೂ ಹೆದರುತ್ತಲೂ ಒಂದೊಂದು ಹೆಜ್ಜೆಗೂ ಕೂರುತ್ತಲೂ ಏಳುತ್ತಲೂ ಇರುವುದನ್ನು (ಭೀಮಸೇನನು) ನೋಡಿ ‘ಇನ್ನು ಮುಂದೆ ಹೀಗಾಗುವುದಿಲ್ಲ ಏಳಿ

ಚಂ|| ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ ಸ್ಪದಮದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕ|

ಪ್ರದಮದು ನಿರ್ಝರೋಚ್ಚಳಿತ ಶೀಕರ ಶೀತಳ ವಾತ ನರ್ತಿತೋ
ನ್ನದ ಶಬರೀ ಜನಾಳಕಮದಾಯತ ವೇತ್ರಲತಾವಿತಾನಕಂ|| ೧೦

ವ|| ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನೆಯ್ತಂದದಱ ಕೆೞಗಯ್ವರುಮ ನಿೞಪಿದೊಡಧ್ವಾನ ಪದ ಪರಿಶ್ರಮ ಶ್ರಾಂತರ್ ನಿದ್ರಾಭರಪರವಶರಾಗಿರೆ ಭೀಮಂ ಜಾವಮಿರ್ದು ತನ್ನೊಡವುಟ್ಟಿದರ್ಗಾದ ಪ್ರವಾಸಾಯಾಸಂಗಳ್ಗಂ ದೆಸೆಗಂ ಮನ್ಯುಮಿಕ್ಕು ಕಣ್ಣ ನೀರಂ ತುಂಬಿ-

ಚಂ|| ಭರತನ ವಂಶದೊಳ್ ನೆಗೞ್ದ ಪಾಂಡುಗೆವುಟ್ಟಿಯುವಿ ಸಮಸ್ತ ಸಾ
ಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುವಿ ಮಹೋಗ್ರ ಕೇ|
ಸರಿ ಕರಿಕಂಠ ಗರ್ಜಿತ ಮಹಾಟವಿಯೊಳ್ ಮಱಕೆಂದಿ ನೀಮುವಿ ಮರದಡಿಯೊಳ್ ಶಿವಾಶಿವ ರವಂಗಳಿನೆೞ್ಚಱುವಂತುಟಾದುದೇ|| ೧೧

ವ|| ಎಂದು ನುಡಿಯುತ್ತಿರ್ಪನ್ನೆಗಂ ಕೋಕನದಬಾಂಧವನುದಯಾಚಳಶಿಖರ ಶೇಖರನಾದ ನಾಗಳಾ ಬನಮನಾಳ್ವ ಹಿಡಿಂಬನೆಂಬನವರ ಬರವನಱದು ತನ್ನ ತಂಗೆ ಹಿಡಿಂಬೆಯೆಂಬಳಂ ಕರೆದು-

ಕಂ|| ನಿಡಿಯರ್ ಬಲ್ಲಾಯದ ಬ ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|
ತೊಡರ್ದರ್ ನಮ್ಮಯ ಭಕ್ಷದೊ
ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨

ವ|| ಎಂಬುದುಮಂತೆಗೆಯ್ವೆನೆಂದು-

ಕಂ|| ಆಗಸದೊಳಗೊಂದು ಮಹೀ ಭಾಗದೊಳಿನ್ನೊಂದು ದಾಡೆಯಾಗಿರೆ ಮನದಿಂ|
ಬೇಗಂ ಬರ್ಪಳ ದಿಟ್ಟಿಗ
ಳಾಗಳೆ ಪತ್ತಿದುವು ಗೆಂಟಳ್ ಮಾರುತಿಯಂ|| ೧೩

ಎಂದು’ ಒಟ್ಟಿಗೆ ಆ ಅಯ್ದು ಜನವನ್ನು ತನ್ನ ಎರಡು ಭುಜದ ಮೇಲೆ ಹೊತ್ತು ವ್ಯಾಪಿಸಿ ಶಬ್ದಮಾಡುತ್ತಿರುವ ಜೀರುಂಡೆಯಿಂದ ಅದ್ಭುತವಾಗಿದ್ದ ಹಿಡಿಂಬವನವೆಂಬ ಕಾಡನ್ನು ವಾಯುಪುತ್ರನಾದ ಭೀಮಸೇನನು ಪ್ರವೇಶಿಸಿದನು. ೧೦. ಆ ಹಿಡಿಂಬವನವು ಮದ್ದಾನೆಗಳ ಕೊಂಬೆಂಬ ಒನಕೆಯಿಂದ ಮುರಿಯಲ್ಪಟ್ಟ ದೊಡ್ಡಮರಗಳಿಗೆ ಆಶ್ರಯವಾಗಿದ್ದಿತು. ಸಿಂಹಗರ್ಜನೆಯಿಂದ ಉಂಟಾದ ಪ್ರತಿಧ್ವನಿಯಿಂದ ಭಯಂಕರವಾಗಿ ಕಂಡಿತು. ಬೆಟ್ಟ ಝರಿಗಳಲ್ಲಿ ಮೇಲಕ್ಕೆದ್ದ ತುಂತುರುಗಳಿಂದ ಒದ್ದೆಯಾದ ಗಾಳಿಯಿಂದ ಕುಣಿಸಲ್ಪಟ್ಟ ಮದಿಸಿರುವ ಬೇಡಿತಿಯರ ಮುಂಗುರುಳುಗಳಿಂದ ಮನೋಹರವಾಗಿತ್ತು. ವಿಸ್ತಾರವಾದ ಬೆತ್ತದ ಬಳ್ಳಿಗಳ ಮೇಲ್ಕಟ್ಟುಗಳಿಂದ ತುಂಬಿದ್ದಿತು. ವ|| ಆ ಕಾಡಿನ ಒಳಭಾಗದ ಮಧ್ಯದಲ್ಲಿ ವಿಸ್ತಾರವಾದ ಆಲದ ಮರದ ಸಮೀಪಕ್ಕೆ ಬಂದು ಅದರ ಕೆಳಗಡೆ ಆ ಅಯ್ದು ಜನರನ್ನು ಇಳಿಸಿದನು. ಅವರು ದಾರಿ ನಡೆದ ಬಳಲಿಕೆಯಿಂದ ನಿದ್ರಾಭಾರಕ್ಕೆ ಅನರಾದರು. ಭೀಮನು ಅವರಿಗೆ ಕಾವಲಾಗಿದ್ದು ತನ್ನ ಒಡಹುಟ್ಟಿದವರಿಗುಂಟಾದ ಪ್ರಯಾಣದಾಯಾಸಕ್ಕೂ ದುರ್ದೆಶೆಗೂ ದುಖವು ಉಲ್ಬಣಿಸಿ ಬರಲು ಕಣ್ಣ ನೀರನ್ನು ತುಂಬಿಕೊಂಡನು. ೧೧. ಭರತವಂಶದಲ್ಲಿ ಪ್ರಸಿದ್ಧನಾದ ಪಾಂಡುರಾಜನಿಗೆ ಮಕ್ಕಳಾಗಿ ಹುಟ್ಟಿಯೂ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಸಮಸ್ತ ಭೂಮಂಡಲಕ್ಕೆ ಒಡೆಯರಾಗಿಯೂ ಈ ಭಯಂಕರವಾದ ಸಿಂಹ ಮತ್ತು ಆನೆಗಳ ಕೊರಳಿನಿಂದ ಹೊರಟ ಗರ್ಜನೆಗಳಿಂದ ಕೂಡಿದ ಈ ಘೋರಾರಣ್ಯದಲ್ಲಿ ಮೈಮೆರೆತು ಮಲಗಿ ನೀವೂ ಈ ಮರದಡಿಯಲ್ಲಿ ನರಿಗಳ ಅಮಂಗಳಕರವಾದ ಧ್ವನಿಯಿಂದ ಎಚ್ಚರಗೊಳ್ಳುವ ಹಾಗೆ ಆಯಿತೆ? ವ|| ಎಂದು ಹೇಳುತ್ತಿರುವಷ್ಟರಲ್ಲಿಯೇ ಕಮಲಸಖನಾದ ಸೂರ್ಯನು ಉದಯಪರ್ವತದ ಕೋಡಿಗೆ ಬಂದು ಸೇರಿದನು (ಸೂರ್ಯನು ಉದಯಿಸಿದನು). ಆಗ ಆ ಅರಣ್ಯಪ್ರದೇಶವನ್ನು ಆಳುವ ಹಿಡಿಂಬನೆಂಬುವನು ಅವರ ಬರವನ್ನು ತಿಳಿದು ತನ್ನ ತಂಗಿಯಾದ ಹಿಡಿಂಬೆಯೆಂಬವಳನ್ನು ಕರದೆ ೧೨. ನೀಳವಾಗಿಯೂ ಬಲುದಪ್ಪನಾಗಿಯೂ ದಾಂಡಿಗರಾಗಿಯೂ ಇರುವ ಅಯ್ದು ಜನ ಆಲದ ಮರದ ಕೆಳಗೆ ಇದ್ದಾರೆ. ಇನ್ನು ನಮ್ಮ ಆಹಾರಕ್ಕಾಗಿ ಸಿಕ್ಕಿಬಿದ್ದಿದ್ದಾರೆ. ಹೋಗಿ ಬೇಯಿಸಿ ಅಡುಗೆ ಮಾಡಿ ಸಿದ್ಧಪಡಿಸು; ನೀನೂ ನಾನೂ ತಿನ್ನೋಣ. ವ|| ಎನ್ನಲು ಹಾಗೆಯೇ ಮಾಡುತ್ತೇನೆ ಎಂದು. ೧೩. ಆಕಾಶದಲ್ಲಿ ಒಂದು ಭೂಮಿಯಲ್ಲಿ ಒಂದು ದವಡೆಯಾಗಿರಲು

ವ|| ಅಂತೊಂದಂಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪೆಯಪ್ಪುದಱಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು ತನ್ನತ್ತ ಮೊಗದೆ ಬರ್ಪಳಂ ಕಂಡು-

ಕಂ|| ಖೇಚರಿಯೋ ಭೂಚರಿಯೊನಿ ನಿ ಶಾಚರಿಯೋ ರೂಪು ಬಣ್ಣಿಸಲ್ಕಾರ್ಗಮವಾ|
ಗ್ಗೊಚರವಿ ಕಾನನಮುಮ ಗೋಚರಮಿವಳಿಲ್ಲಿಗೇಕೆ ಬಂದಳೊ ಪೇೞಂ||

ವ|| ಎಂಬನ್ನೆಗಮಾಕೆ ಮದನನ ಕೆಯ್ಯಿಂ ಬರ್ದುಕಂದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗೇನೆಂಬೆಯೇಕೆ ಬಂದೆಯೆಂದೊಡಾಕೆಯೆಂದಳೆರಡಱಯ ದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ  ಬನಂ ಹಿಡಿಂಬವನೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯೆನೆಂಬೆನಾತನ ಬೆಸದಿಂ ನಿಮ್ಮಿನಿಬರುಮಂ-

ಕಂ|| ಪಿಡಿದಡಸಿ ತಿನಲ್ ಬಂದಿ ರ್ದೆಡೆಯೊಳ್ ನಿನಗಾಗಿ ಮದನನೆನ್ನನೆ ತಿನೆ ಕೇಳ್|
ಪಡೆನೋಡಲ್ ಬಂದವರಂ ಗುಡಿವೊಱಸಿದರೆಂಬುದಾಯ್ತು ನಿನ್ನೆನ್ನೆಡೆಯೊಳ್|| ೧೫

ವ|| ಎಂದೀ ಮಱಲುಂದಿದರಾರ್ಗೆಂದೊಡೆನ್ನ ತಾಯ್ವಿರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ಗೆ ನೀನೆನ್ನ ಪೆಗಲನೇಱು ಗಗನತಳಕ್ಕುಯ್ವೆನೆನೆ ಭೀಮಸೇನನಾ ಮಾತಿಂಗೆ ಮುಗುಳ್ನಗೆ ನಕ್ಕು-

ಚಂ|| ಅೞಪಿದೆಯಂತುಮಲ್ಲದೆ ನಿಶಾಚರಿಯೈ ನಿನಗಪ್ಪುದಪ್ಪುದೀ ಯೞನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಮಾತನೊ|
ಡ್ಡೞಯದ ಗಂಡವಾತನೆನುತಂತಿರೆ ತಂಗೆಯ ಮಾಣ್ದುದರ್ಕವಂ ಮೊೞಗಿ ಸಿಡಿಲ್ದದೊಂದು ಸಿಡಿಲೇೞ್ಗೆಯಿನೆಯ್ತರೆ ವಂದು ಭೀಮನಂ|| ೧೬

(ಅಂದರೆ ದೊಡ್ಡದಾಗಿ ಬಾಯಿ ತೆರೆದುಕೊಂಡು) ಮನೋವೇಗವನ್ನು ಮೀರಿ ಬರುತ್ತಿದ್ದ ಅವಳ ದೃಷ್ಟಿಗಳು ದೂದದಿಂದಲೇ ಭೀಮನನ್ನು ಸೇರಿಕೊಂಡವು. ವ|| ಹಾಗೆ ಒಂದು ಬಾಣ ಹೋಗುವಷ್ಟು ದೂರದಲ್ಲಿಯೇ ಕಾಮಬಾಣಕ್ಕೆ ಅನಳಾಗಿ ತಾನು ಇಷ್ಟ ಬಂದ ರೂಪವನ್ನು ಧರಿಸುವ ಸಾಮರ್ಥ್ಯವುಳ್ಳವಳಾದುದರಿಂದ ಸುಂದರಳಾದ ಕನ್ನಿಕೆಯ ಆಕಾರವನ್ನು ತಾಳಿ ಭೀಮನ ಕಡೆಗೇ ಬಂದಳು. ತನ್ನ ಕಡೆಗೆ ಬರುತ್ತಿದ್ದ ಅವಳನ್ನು ನೋಡಿದನು. ೧೪. ಭೀಮನು ಇವಳು ಅಂತರಿಕ್ಷದಲ್ಲಿ ಸಂಚರಿಸುವ ವಿದ್ಯಾಧರಿಯೋ ಭೂಮಿಯಲ್ಲಿ ಸಂಚಾರಮಾಡುವ ಮನುಷ್ಯಸ್ತ್ರೀಯೋ, ಇಲ್ಲ ರಾತ್ರಿಯಲ್ಲಿ ಸಂಚಾರಮಾಡುವ ರಾಕ್ಷಸಿಯೋ! ಇವಳ ರೂಪವನ್ನು ವರ್ಣಿಸುವುದಕ್ಕೆ ಯಾರಿಗೂ ಮಾತಿನಿಂದ ಸಾಧ್ಯವಿಲ್ಲ. ಈ ಕಾಡೂ ಕೂಡ ಯಾರಿಗೂ ಪರಿಚಿತವಿಲ್ಲದುದು. ಇವಳಿಲ್ಲಿಗೇಕೆ ಬಂದಳು ಎಂದು ಯೋಚಿಸಿದನು. ವ|| ಅಷ್ಟರಲ್ಲಿ ಅವಳು ಮನ್ಮಥನ ಕಯ್ಯಿಂದ ಬದುಕಿ ಪುಷ್ಪಬಾಣದ ಹಾಗೆ ಭೀಮಸೇನನ ಪಕ್ಕದಲ್ಲಿ ಬಂದು ಕುಳಿತುಕೊಂಡಿರಲು ಭೀಮಸೇನನು ಅವಳನ್ನು ಕುರಿತು ನೀನು ಯಾರ ಮಗಳು? ನಿನ್ನ ಹೆಸರೇನು? ಯಾತಕ್ಕೆ ಬಂದಿದ್ದೀಯೆ ಎನ್ನುಲು (ಆಕೆ ಅವನನ್ನು ಕುರಿತು) ಸಂದೇಹವಿಲ್ಲದೆ ದೃಢವಾಗಿ ಪ್ರೀತಿಸಿ ಬಂದ ನಿನ್ನಲ್ಲಿ ಸುಳ್ಳನ್ನು ಹೇಳಬಾರದು. ಈ ಕಾಡು ಹಿಡಿಂಬವನಮೆಂಬುದು. ಇದನ್ನು ಆಳುವ ಹಿಡಿಂಬನೆಂಬ ರಾಕ್ಷಸನು ನಮ್ಮಣ್ಣ; ನನ್ನ ಹೆಸರೂ ಹಿಡಿಂಬೆಯೆಂದು; ಅವನ ಆಜ್ಞೆಯ ಪ್ರಕಾರ ನಿಮ್ಮಿಷ್ಟು ಜನವನ್ನು

೧೫. ಹಿಡಿದು ಬಾಯಿಗೆ ತುರಿಕಿಕೊಂಡು ತಿನ್ನಲು ಬಂದ ಸಮಯದಲ್ಲಿ ಮನ್ಮಥನು ನನ್ನನ್ನೇ ತಿಂದುಬಿಟ್ಟಿದ್ದಾನೆ. “ಸೈನ್ಯವನ್ನು ನೋಡಲು ಬಂದವರ ಕೈಯಲ್ಲಿ ಬಾವುಟವನ್ನು ಹೊರಿಸಿದರು” ಎಂಬ ಗಾದೆಗೆ ಅನುಗುಣವಾಯಿತು ನಿನ್ನ ನನ್ನ ಸಂಬಂಧವು ವ|| ಎಂದು ‘ಈ ಮೈಮರೆತು ಮಲಗಿರುವವರಾರು’ ಎಂದು ಕೇಳಿದಳು. ಅವರು ನನ್ನ ತಾಯಿ ಮತ್ತು ಸಹೋದರರು ಎಂದು ಉತ್ತರಕೊಡಲು ಹಿಡಿಂಬನು ಬಂದು ಅವರನ್ನು ತಿನ್ನುವುದಾದರೆ ತಿನ್ನಲಿ; ನೀನು ನನ್ನ ಹೆಗಲನ್ನು ಏರಿಕೋ, ಆಕಾಶಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಳು. ಅದಕ್ಕೆ ಭೀಮಸೇನನು ಹುಸಿನಗೆ ನಕ್ಕು ೧೬. ನೀನು ನನ್ನಲ್ಲಿ ಮೋಹಗೊಂಡಿದ್ದಿಯೆ; ಅಲ್ಲದೆ ನೀನು ರಾಕ್ಷಸಿಯಾಗಿದ್ದೀಯೆ; ಈ ಅಯ್ಯೋಗ್ಯವಾದ ಮಾತು ನಿನಗೆ ತಕ್ಕುದಾಗಿದೆ. ನಿನ್ನ ಹಿರಿಯಣ್ಣನೇ ಬರಲಿ, ಅವನ ಊನವಾಗದ ವೀರ್ಯಾಲಾಪಗಳನ್ನು ಪರೀಕ್ಷಿಸಿ ನೋಡೋಣ ಎನ್ನುಕ ಹಾಗೆಯೇ ಇರಲು ತಂಗಿಯು ಸಾವಕಾಶಮಾಡಿದುದಕ್ಕಾಗಿ ಹಿಡಿಂಬನು ಗರ್ಜನೆ ಮಾಡಿ ಸಿಡಿಲವೇಗದಿಂದ

ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವ ದೊಳಿಂತೆಂದಂ-

ಕಂ|| ಏಂ ಗಾವಿಲನಯೊ ನಿನ್ನಂ ನಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕು ಮಾ ತಂಗವಿರೋಗೆ ಕುರಂಗ ಸಂಗರ ಧರೆಯೊಳ್|| ೧೭

ವ|| ಎಂಬುದುಂ ಹಿಡಿಂಬನಾಡಂಬರಂಗೆಯ್ದು ತುಂಬುರುಕೊಳ್ಳಿಯತಂಬರಂಬರಂ ಸಿಡಿಲ್ದು-

ಚಂ|| ಕಡುಪಿನೆ ಪೊತ್ತು ಪಾಸಯನೆಯ್ತರೆ ಭೀಮನುಮೊತ್ತಿ ಕಿಱ್ತು ಬೇ
ರೊಡನೆ ಮಹೀಜಮೊಂದನಿಡೆಯುಂ ಬಿಡೆ ಪೊಯ್ಯೆಯುಮಾ ಬನಂ ಪಡ| ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನೆ ಜೋಲ್ದು ದೈತ್ಯನಂ
ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮೆಯೆ ಸೀಳ್ದು ಬೀಸಿದಂ|| ೧೮

ವ|| ಆಗಳಾ ಕಳಕಳಕ್ಕೆ ಮಱಲುಂದಿದಯ್ವರುಮೆೞ್ಚತ್ತಿದೇನೆಂದು ಬೆಸಗೊಳೆ ತದ್ವೃತ್ತಾಂತ ಮೆಲ್ಲಮನಱಪಿ ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪೊಡಂಬಡಂ ನುಡಿಯೆ ಕೊಂತಿಯುಂ ಧರ್ಮಪ್ರತ್ರನುವಿಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ಬೇಡೀಕೆಯಂ ಕೆಯ್ಕೊಳ್ವುದೆ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಱಂಗಿ ಕೞ್ತಲಿಸಿದ ಮರುದುಱುಗಲ ನಡುವೆ ಸುಧಾ ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಪ್ಟೊಡದು ಹಿಡಿಂಬಪುರಮೆಂಬುದೆಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿಟ್ಟೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊೞಲಂ ಪುಗಿಸಿ ತನ್ನಸಂಪತ್ತುಮಂ ಶ್ರೀಯುಮಂ ಮೆದು ಮಜ್ಜನ ಭೋಜನತಾಂಬೂಲ ಲೇಪನಂಗಳಿಂ ಪಥಪರಿಶ್ರಮಮೆಲ್ಲಮಂ ಕಳೆದು ಭೀಮಸೇನನುಂ ತಾನುಂ-

ಹತ್ತಿರಕ್ಕೆ ಬಂದು ಭೀಮನನ್ನು- ವ|| ನೋಡಿ ಕಣ್ಣುಗಳಿಂದ ಕೆಂಡದ ಸಮೂಹವೂ ಉರಿಯು ಮೊತ್ತವೂ ಚೆಲ್ಲುತ್ತಿರಲು ನೀನೊಬ್ಬನೇ ನನ್ನಲ್ಲಿ ಹೇಗೆ ಕಾದುತ್ತೀಯೆ; ಈ ಮೈಮರೆತು ಮಲಗಿದವರನ್ನೆಲ್ಲ ಎಚ್ಚರಗೊಳಿಸು, ಇವರಿಷ್ಟು ಜನವನ್ನು ಒಂದೇ ಸಲ ಹೊಸೆದು ಮುಕ್ತುತ್ತೇನೆ ಎಂದನು. ಸಾಹಸಭೀಮನು ತನ್ನ ಚಡ್ಡಿಯನ್ನು (ನಡುಕಟ್ಟು?) ಬಿಚ್ಚದೆ (ಸಡಲಿಸದೆ) ಉದಾಸೀನನಾಗಿಯೇ ಅವನನ್ನು ಕುರಿತು ಹೀಗೆಂದನು. ೧೭. ಎಂತಹ ದಡ್ಡನೊ ನೀನು? ನಿನ್ನನ್ನು ನುಂಗುವುದಕ್ಕೆ ಇಷ್ಟು ಜನವನ್ನೂ ಎಬ್ಬಿಸಬೇಕೆ? ಜಿಂಕೆಯೊಡನೆ ಯುದ್ಧಮಾಡುವ ರಣರಂಗದಲ್ಲಿ ಗಜವಿರೋಯಾದ ಸಿಂಹಕ್ಕೆ ಸಹಾಯವನ್ನೂ ಕೊಡಿಸಬೇಕೆ? ಎಂದನು. ವ|| ಹಿಡಿಂಬನು ಆರ್ಭಟಿಸಿ ತೂಬರಮರದ ಸೌದೆಯ ಕೊಳ್ಳಿಯ ಹಾಗೆ ಆಕಾಶದವರೆಗೆ ನೆಗೆದು-೧೮. ಒಂದು ಹಾಸುಬಂಡೆಯನ್ನು ವೇಗದಿಂದ ಕಿತ್ತು ಹೊತ್ತು ಬರಲು ಭೀಮನೂ ಬಲಾತ್ಕಾರದಿಂದ ಒಂದು ಮರವನ್ನು ಬೇರೊಡನೆಯೇ ಕಿತ್ತು ಅವನ ಮೇಲೆ ಬೀಸುವುದರಿಂದಲೂ ಒಂದೇ ಸಮನಾಗಿ ಹೊಡೆಯುವುದರಿಂದಲೂ ಆ ಕಾಡೆಲ್ಲ ಚೆಲ್ಲಾಪಿಲ್ಲಿಯಾಗುವ ಹಾಗೆ ಕಲ್ಲಿನಿಂದಲೂ ಮರದಿಂದಲೂ ಬಡಿದು ನಿಧಾನವಾಗಿ ಜೋತುಬಿದ್ದ ಆ ರಾಕ್ಷಸನನ್ನು ಹಿಡಿದುಕೊಂಡು ತಾವರೆಯ ದಂಟನ್ನು ಸೀಳುವ ಹಾಗೆ ಒಂದೇ ಸಲ ಸೀಳಿ ಎಸೆದನು. ವ|| ಆಗ ಆ ಕಲಕಲಶಬ್ದದಿಂದ ಮೈಮರೆತು ನಿದ್ದೆ ಮಾಡುತ್ತಿದ್ದ ಅಯ್ದು ಜನವೂ ಎಚ್ಚೆತ್ತು ಇದೇನೆಂದು ಪ್ರಶ್ನೆಮಾಡಲು ಆ ವಿಷಯವನ್ನೆಲ್ಲಾ ತಿಳಿಸಿ ಹಿಡಿಂಬೆಯು ಆಡಂಬರವಿಲ್ಲದೆ ಸರಳವಾಗಿ ಭೀಮನ ವಿಷಯದಲ್ಲಿ ತನ್ನ ಒಪ್ಪಿಗೆಯನ್ನು ತಿಳಿಸಲು ಕುಂತಿಯೂ ಧರ್ಮರಾಜನೂ ಇವಳು ಸಾಮಾನ್ಯಳಾದ ಹೆಂಗಸಲ್ಲ; ರಾಕ್ಷಸಸ್ತ್ರೀಯೆಂದು ಭಾವಿಸಬೇಡ, ಅವಳನ್ನು ಸ್ವೀಕರಿಸುವುದೇ (ನಿನಗೆ ಯೋಗ್ಯವಾದ) ಕಾರ್ಯ ಎಂದು ಅವಳಿಗೂ ಭೀಮಸೇನನಿಗೂ ಗಾಂಧರ್ವವಿವಾಹವನ್ನು ಮಾಡಿದರು. ಹಿಡಿಂಬೆಯು ನೀವು ಇಲ್ಲಿರುವುದು ಬೇಡ; ಬೆಟ್ಟದ ಮೇಲೆ ಕರ್ರಗೆ ಕಪ್ಪಾಗಿ ಕಾಣುವ ಮರಗಳ ತೋಪಿನ ಮಧ್ಯೆ ಸುಣ್ಣದಿಂದ ಬಿಳುಪಾಗಿ ಮಾಡಲ್ಪಟ್ಟು ಎತ್ತರವೂ ಮನೋಹರವೂ ಆಗಿ ನಿಮ್ಮಕಣ್ಣಿಗೆ ಕಾಣುತ್ತಿರುವ ಆ ಉಪ್ಪರಿಗೆ ಮನೆಗಳು ನಮ್ಮಪಟ್ಟಣ (ರಾಜಧಾನಿ), ಅಲ್ಲಿಗೆ ಹೋಗೋಣ ಬನ್ನಿ ಎಂದು ಅವರನ್ನು ಮುಂದುಮಾಡಿಕೊಂಡು ಹೋಗಿ ಮಹಾವೈಭವದಿಂದ ಪುರಪ್ರವೇಶಮಾಡಿದಳು. ತನ್ನ ಐಶ್ವರ್ಯವನ್ನೂ ವೈಭವವನ್ನೂ ಅವರಿಗೆ ಪ್ರಕಾಶಪಡಿಸಿ ಸ್ನಾನ, ಭೋಜನ, ತಾಂಬೂಲ ಗಂಧಾದಿಗಳಿಂದ ದಾರಿನಡೆದ ಬಳಲಿಕೆಗಳನ್ನೆಲ್ಲ ಕಳೆದು ಸತ್ಕರಿಸಿದಳು. ಭೀಮಸೇನನೂ

ಕಂ|| ಎಲ್ಲಿ ಕೊಳನೆಲ್ಲಿ ತಣ್ಬುೞ
ಲೆಲ್ಲಿ ಲತಾಭವನಮೆಲ್ಲಿ ಧಾರಾಗೃಹಮಂ|
ತಲ್ಲಿಯೆ ತೊಡರ್ದದಲ್ಲಿಯೆ ನಿಂ ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್|| ೧೯

ವ|| ಅಂತು ರಮಿಯಿಸಿ ಪೊೞಲ್ಗೆ ಮಗುೞ್ದು ಬಂದೊಡಾಕೆಗಂ ಭೀಮಂಗಂ

ಕಂ|| ಕಾರಿರುಳ ತಿರುಳ ಬಣ್ಣಂ ಕೂರಿದುವೆನೆ ತೊಳಪ ದಾಡೆ ಮಿಳಿರ್ವುರಿಗೇಸಂ|
ಪೇರೊಡಲೆಸೆದಿರೆ ಪುಟ್ಟಿದ ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ|| ೨೦

ವ|| ಅಂತು ಪುಟ್ಟುವುದುವಿಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯ ಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರೆ ಪಾಂಡಮರುಮಲ್ಲಿ ಮೂಱು ವರುಷಮಿರ್ದು ತೃಣದ್ವೈಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ-

ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ|
ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ
ಱರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧

ರಗಳೆ|| ಅಲ್ಲಿ ಸೊಗಯಿಸುವ ಕೃತಕಗಿರಿಗಳಿಂ
ಕಲ್ಪತರುಗಳೊಳ್ ಪೋಲ್ವ ಮರಗಳಿಂ ನಂದನಂಗಳೊಳ್ ಸುೞದ ಬಿರಯಿಯಿಂ
ಕಂಪು ಕಣ್ಮಲೆಯೆ ಪೂತ ಸುರಯಿಯಿಂ||
ಸುತ್ತಲುಂ ಪರಿವ ಜರಿವೊನಲ್ಗಳಿಂ
ದೆತ್ತಲುಂ ನಲಿವ ಪೊಸ ನವಿಲ್ಗಳಿಂ|
ಬೆಳೆದು ಮಗಮಗಿಪ ಗಂಧಶಾಳಿಯಿಂ
ದಲ್ಲಿ ಸುಱವ ಗಿಳಿವಿಂಡಿನೋಳಿಯಿಂ||
ಈಂಟುಜಳಯೆನಿಪಗೞ ನೀಳ್ಪಿನಿಂ
ನೆಗೆದು ಸೊಗಯಿಸುವ ಕೋಂಟೆಯೊಳ್ಪ್ಪಿನಿಂ|
ವಿವಿಧ ದೇವ ಗೃಹದಾಟಪಾಟದಿಂ
ಮಱುಗಿ ಬಟ್ಟೆಯರ ನೋೞ್ಪ ನೋಟದಿಂ||
ಪಂಚರತುನದೊಳೆ ನೆದ ಪಸರದಿಂ
ತೋರಣಂಗಳೊಳೆ ತೊಡರ್ದ ತಿಸರದಿಂ|
ಧನದರನ್ನರಿವರೆನಿಪ ಪರದರಿಂ
ದೇವರನ್ನರಿವರೆನಿಪ ಬಿರುದರಿಂ||
ನೆಯೆ ಸೊಗಯಿಪಾ ಯೇಕಚಕ್ರಮಂ
ಮೆಚ್ಚಿದಂ ಹರಿಗನಮಿತ ವಿಕ್ರಮಂ| ೨೨

ತಾನು ೧೯. ಎಲ್ಲಿ ಸರೋವರಗಳುಂಟೋ ಎಲ್ಲಿ ತಂಪಾದ ತೋಪುಗಳುಂಟೋ ಎಲ್ಲಿ ಬಳ್ಳಿವಾಡಗಳುಂಟೋ ಎಲ್ಲಿ ಬಳ್ಳಿವಾಡಗಳುಂಟೋ ಎಲ್ಲಿ ಏಕಪ್ರಕಾರವಾಗಿ ನೀರು ಹರಿಯುವ ಮನೆಗಳುಂಟೋ ಅಲ್ಲಲ್ಲಿಯೇ ಸೇರಿಕೊಂಡು ಅಲ್ಲಲ್ಲಿಯೇ ನಿಂತು ಹಿಡಿಂಬೆಯು ವಾಯುಪುತ್ರನಲ್ಲಿ ರಮಿಸಿದಳು. ೨೦. ಕಗ್ಗತ್ತಲೆಯಿಂದ ಕೂಡಿದ ರಾತ್ರಿಯ ಬಣ್ಣವು ಇಲ್ಲಿ ಮೊನಚಾಯಿತು (ಬಟ್ಟಿಯಿಳಿಸಿದೆ) ಎನ್ನುವ ಹಾಗೆ ತೊಳಗುತ್ತಿರುವ ಕೋರೆಹಲ್ಲೂ ಅಲುಗಾಡುತ್ತಿರುವ ಕೆಂಗೂದಲೂ ದೊಡ್ಡ ದೇಹವೂ ಪ್ರಕಾಶಮಾನವಾಗಿರಲು ಯಾರಿಗಾದರೂ ಭಯವನ್ನುಂಟುಮಾಡು ವಂತಿರುವ ಘಟೋತ್ಕಚನೆಂಬ ಮಗನು ಹುಟ್ಟಿದನು. ವ|| ದೈವಸಂಕಲ್ಪದಿಂದ ರಾಕ್ಷಸರಿಗೆ ಕೂಡಲೇ ಗರ್ಭವನ್ನು ಧರಿಸುವುದೂ ಕೂಡಲೇ ಹೆತ್ತು ಕೂಡಲೇ ಯೌವನಪ್ರಾಪ್ತಿಯೂ ಉಂಟಾಗುವುದರಿಂದ ಆಗಲೇ ಹದಿನಾರುವರ್ಷದ ಬಾಲಕನಾಗಿರಲು ಪಾಂಡವರು ಅಲ್ಲಿ ಮೂರುವರ್ಷಕಾಲವಿದ್ದು ವೇದವ್ಯಾಸರ ಉಪದೇಶಪ್ರಕಾರ ಏಕಚಕ್ರಪುರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿದರು.

೨೧. ಹಿಡಿಂಬೆಯನ್ನು ಬರಮಾಡಿಕೊಂಡು ಘಟೋತ್ಕಚನನ್ನೂ ಹತ್ತಿರಕ್ಕೆ ಕರೆದು ಇಲ್ಲಿಯವರೆಗೆ ಸುಖವಾಗಿ ಸಂತೋಷವಾಗಿ ಇಲ್ಲಿ ಇದ್ದೆವು. ಇನ್ನು ಇರಬಾರದು ಹೋಗುತ್ತೇನೆ ಎಂದು ಹೇಳಿ ಅವರು ಆದರದಿಂದ ಕೊಟ್ಟ ಯಾವ ಪದಾರ್ಥವನ್ನೂ ಸ್ವೀಕರಿಸದೆ ಅಲ್ಲೆಯೇ ಬಿಟ್ಟು ಪ್ರೀತಿಯಿಂದ ಬುದ್ಧಿಹೇಳಿ ಸುಖಪ್ರಯಾಣದಿಂದ ಪಾಂಡವರು ಏಕಚಕ್ರಪುರವನ್ನು ಸೇರಿದರು. ೨೨. ಅಲ್ಲಿ ಸುಂದರವಾಗಿ

ವ|| ಅಂತು ಮೆಚ್ಚಿ ತಮ್ಮುತಯ್ವರುಮಿನ್ನವು ಪೊೞಲ್ಗಳಿಲ್ಲೀ ಪೊೞಲ್ಗೆ ನಾಲ್ಕು ಯುಗದೊಳಂ ವಸುಮತಿ ಪದ್ಮನಗರಮೇಕಚಕ್ರಂ ಬಹುಧಾನ್ಯಮೆಂಬ ನಾಲ್ಕು ಪೆಸರಾದುದೆಂದು ಮನಂಗೊಂಡು ನೋಡುತ್ತುಂ ಬಂದು ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಯಾಲೆಯೊಳ್ ಬೀಡಂ ಬಿಟ್ಟು ಧರಾಮರ ವೇಷದೊಳೊಂದು ವರುಷಮಿರ್ಪನ್ನೆಗಮೊಂದುದಿವಸಂ-

ಕಂ|| ತುಂಬಿದ ರಕ್ತತೆಯಿಂ ನಿಜ
ಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆ|
ಟ್ಟಂಬೋಲ್ ತೇಜಂ ಮಸುಳ್ವಿನ
ಮಂಬರಮಂ ಬಿಸುಟನಾಗಳಂಬುಜಮಿತ್ರಂ|| ೨೩

ವ|| ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರಾರ್ಜುನ ನಕುಲ ಸಹದೇವರ್ ಪೋದರನ್ನೆಗಮಿತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಪಾಂತದೊಳ್-

ಕಂ|| ಸಾರೆಯೊಳೞ್ವ ಮಹಾ ದ್ವಿಜ
ನಾರಿಯ ಮಮತಾವಿಪೂರಿತೋರ್ಜಿತ ರವದಿಂ|
ಕಾರುಣ್ಯಾಕ್ರಂದನಮನಿ
ವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್|| ೨೪