ವ|| ಆಗಳ್ ಕರ್ಣನರ್ಣವನಿನಾದದಿಂದಾರ್ದು ಗುಣಾರ್ಣವನೊಳ್ ಬಂದು ತಾಗಿ ಶಲ್ಯಂ ಭೀಮಸೇನನೊಳ್ ತಾಗಿ ಕಿಱದುಂ ಪೊೞ್ತು ಕಾದೆ-

ಚಂ|| ಅರಿದು ಗೆಲಲ್ಕೆ ಪಾರ್ವನ ಶರಾಸನವಿದ್ಯೆಯನೆಂದು ನೊಂದು ನಿ
ತ್ತರಿಸದೆ ಪಾರ್ವನೊಳ್ ಕಲಹಮಾಗದು ಚಿ ದೊರೆಯಲ್ತಿದೆಂದು ಭಾ|
ಸ್ಕರಸುತನೊಯ್ಯನೋಸರಿಸೆ ಮದ್ರಮಹೀಶನುಮಂ ಮರುತ್ಸುತಂ
ವಿರಥನೆ ಮಾಡಿ ತಳ್ತು ನೆಲಕಿಕ್ಕಿದನೊರ್ಮೆಯ ಮಲ್ಲಯುದ್ಧದೊಳ್|| ೭೧

ವ|| ಆಗಳಾ ಬಲದ ನಡುವಿರ್ದ ನಾರಾಯಣಂ ಬಲದೇವಂಗೆ ಸುಟ್ಟಿತೋಱ ಭೀಮಾರ್ಜುನರ್ಕಳಿವರಮೋಘಮಪ್ಪರೆಂದವರ ಸಾಹಸಕ್ಕೆ ಮೆಚ್ಚಿ ಸಂತಸಂಬಟ್ಟಿರ್ದಾಗಳುೞದರಸು ಮಕ್ಕಳೆಲ್ಲಂ ಕರ್ಣ ಶಲ್ಯರ್ ಮೊಗಂದಿರಿದುದಂ ಕಂಡು ಮನಂಗೆಟ್ಟು-

ಕಂ|| ಕರಮೊಸೆದಾ ದ್ರುಪದಜೆಯೊಳ್
ನೆರೆದೊಸಗೆಗೆ ತಮ್ಮ ಬೀರಮಂ ಬಂಕಮುಮಂ|
ತೆಱವುಂ ತೆಲ್ಲಂಟಿಯುಮೆಂ
ದರಿಕೇಸರಿಗಾಗಳೀವವೋಲ್ ಬೆನ್ನಿತ್ತರ್|| ೭೨

ವ|| ಆಗಳ್ ವಿಕ್ರಾಂತತುಂಗಂ ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಱ ಮುಗುಳ್ನಗೆ ನಗುತ್ತುಂ ಪಾಂಚಾಳರಾಜತನೂಜೆಗಿಂತೆಂದಂ-

ಕಂ|| ನಿನ್ನನುೞುಗಿಸಲುಮಾಜಿಯೊ
ಳೆನ್ನಂ ಬೆಂಕೊಂಡು ಕಾದಲುಂ ಬಿಂದೀಗಳ್|
ಬಿನ್ನನೆ ಮೊಗದಿಂ ಬೀರರ್
ಬೆನ್ನಿತ್ತುದನಿನಿಸು ನೋಡ ಸರಸಿರುಹಮುಖೀ|| ೭೩

ವ|| ಎಂಬನ್ನೆಗಂ ದ್ರುಪದಂ ಬಂದವರ್ ಪಾಂಡವರಪ್ಪುದುಮಂ ತನ್ನಳಿಯಂ ವಿಕ್ರಮಾರ್ಜುನನಪ್ಪುದುಮಂ ತಪ್ಪಿಲ್ಲದಱದು ಮಹಾವಿಭೂತಿಯಿಂ ಪೊೞಲಂ ಪುಗಿಸಿ-

ಚಂ|| ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋರಣದೋಳಿಗಳ್ ತಳ
ತ್ತಳಿಸೆ ವಿಚಿತ್ರಕೇತುತತಿಗಳ್ ಮಿಳಿರ್ದಾಡೆ ಪುರಾಂಗನಾಜನಂ|
ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಂ
ಬಳೆಯಿಸೆ ಪೊಕ್ಕನಾ ದ್ರುಪದಮಂದಿರಮಂ ಪರಸೈನ್ಯಭೈರವಂ|| ೭೪

ಬಿಲ್ಲಿನ ಮಳೆಯ ಸುರಿತವನ್ನು ತಡೆಯಲಾರದೆ ಬಿಲ್ಲಾಳುಗಳು ಹಿಮ್ಮೆಟ್ಟಿದರು, ಪ್ರತಿಭಟಿಸಲಾಗದೆ ಕುದುರೆಗಳು ನಾಶವಾದವು. ಗುಂಪುಕೂಡಿದ ಬಿಲ್ಲಾಳಿನ ಸಾಲುಗಳು ಬಿಲ್ಲಿನ ಪೆಟ್ಟಿನಿಂದ ಕುದಿದುಹೋಯಿತು. ಎತ್ತರವೂ ಭಯಂಕರವೂ ಆದ ರಥವು ಅಳಿದುಹೋಯಿತು. ಆನೆಯ ಸಮೂಹವು ಹಿಮ್ಮೆಟ್ಟಿ ಓಡಿತು. ಹಿಂದೆ ಇದ್ದ ಆನೆಯ ಗುಂಪುಗಳು ಕಟ್ಟೆಯನ್ನು ಕಟ್ಟಿದ ಹಾಗಿರಲು ಶತ್ರುಸೈನ್ಯವು ಸರಿದೋಡಿತು. ಕದನತ್ರಿಣೇತ್ರನಾದ ಅರ್ಜುನನನ್ನು ಪ್ರತಿಭಟಿಸುವವರಾರಿದ್ದಾರೆ? ವ|| ಆಗ ಕರ್ಣನು ಸಮುದ್ರಘೋಷದಿಂದ ಆರ್ಭಟಮಾಡಿ ಗುಣಾರ್ಣವನಲ್ಲಿಯೂ ಶಲ್ಯನು ಭೀಮಸೇನನಲ್ಲಿಯೂ ತಾಗಿದರು. ೭೧. ಕರ್ಣನು ಹಾರುವನ ಬಿಲ್ವಿದ್ಯೆಯನ್ನು ಗೆಲುವುದಸಾಧ್ಯ ಎಂದು ದುಖಿಸಿ ಚಿ ಬ್ರಾಹ್ಮಣರಲ್ಲಿ ಜಗಳವಾಡುವುದು ಯೋಗ್ಯವಲ್ಲ ಎಂದು ನಿಧಾನವಾಗಿ ಹಿಮ್ಮೆಟ್ಟಿದನು, ಭೀಮನೂ ಮದ್ರರಾಜನಾದ ಶಲ್ಯನನ್ನು ರಥದಿಂದ ಕೆಳಕ್ಕಿಳಿಸಿ ಮಲ್ಲಯುದ್ಧದಲ್ಲಿ ಒಂದೇ ಸಲಕ್ಕೆ ನೆಲಕ್ಕುರುಳಿಸಿದನು. ವ|| ಆಗ ಆ ಸೈನ್ಯದ ಮಧ್ಯೆ ಇದ್ದ ಶ್ರೀಕೃಷ್ಣನು ಬಲರಾಮನಿಗೆ ಇವರು ಭೀಮಾರ್ಜುನರು ಎಂದು ಬೆರಳಿನಿಂದ ಸುಟ್ಟಿ ತೋರಿಸಿ ಇವರು ಅತಿಸಾಹಸಿಗಳಾಗುತ್ತಾರೆ ಎಂದು ಅವರ ಪರಾಕ್ರಮಕ್ಕೆ ಸಂತೋಷಪಟ್ಟನು. ಉಳಿದ ರಾಜಕುಮಾರರೆಲ್ಲ ಕರ್ಣಶಲ್ಯರು ಮುಖತಿರುಗಿಸಿ ಹಿಮ್ಮೆಟ್ಟಿದುದನ್ನು ನೋಡಿ ಉತ್ಸಾಹಶೂನ್ಯರಾಗಿ ೭೨. ದ್ರೌಪದಿಯನ್ನು ಪಡೆಯಲು ಬಂದು ಸೇರಿದ ಸಂತೋಷಕ್ಕಾಗಿ ತಮ್ಮ ಪರಾಕ್ರಮವನ್ನೂ ಅಹಂಕಾರವನ್ನೂ ತಪ್ಪು ಕಾಣಿಕೆಯನ್ನಾಗಿಯೂ ಬಳುವಳಿಯನ್ನಾಗಿಯೂ ಅರಿಕೇಸರಿಗೆ ಕೊಡುವ ಹಾಗೆ ಬೆನ್ನುತಿರುಗಿಸಿ ಪಲಾಯನ ಮಾಡಿದರು. ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಬಿಲ್ಲಿನ ತುದಿಯ ಮೇಲೆ ಕಯ್ಯನ್ನೂರಿಕೊಂಡು ಹುಸಿನಗೆ ನಗುತ್ತ ದ್ರೌಪದಿಗೆ ಹೀಗೆ ಹೇಳಿದನು- ೭೩. ಎಲೌ ಕಮಲಮುಖಿಯಾದ ದ್ರೌಪದಿಯೇ ಈ ವೀರರು ನಿನ್ನನ್ನು ಒಲಿಸುವುದಕ್ಕೂ ನನ್ನೊಡನೆ ಜಗಳವಾಡುವುದಕ್ಕೂ ಬಂದು ಈಗ ಪೆಚ್ಚು ಮುಖದಿಂದ ಬೆನ್ನು ತಿರುಗಿಸಿ ಹೋಗುತ್ತಿರುವುದನ್ನು ಸ್ವಲ್ಪನೋಡು ಎಂದು ತೋರಿಸಿದನು. ವ|| ಅಷ್ಟರಲ್ಲಿ ದ್ರುಪದನು ಅಲ್ಲಿಗೆ ಬಂದಿರುವವರು ಪಾಂಡವರಾಗಿರುವುದನ್ನೂ ತನ್ನ ಅಳಿಯನು ವಿಕ್ರಮಾರ್ಜುನ ನಾಗಿರುವುದನ್ನೂ ನಿಶ್ಚಯವಾಗಿ ತಿಳಿದು ಮಹಾವೈಭವದಿಂದ ಪುರಪ್ರವೇಶ ಮಾಡಿಸಿದನು. ೭೪. ಪಟ್ಟಣದಲ್ಲಿ ಕನ್ನಡಿ ಮತ್ತು ಕಂಚಿನ

ವ|| ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭದ್ರದೊಳಂ ಕರ್ಕೇತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಮೊಪ್ಪುವ ವಿವಾಹಗೇಹಮಂ ಸಮೆಯಿಸಿಯದಱ ನಡುವಣಾರ್ದ್ರಮೃತ್ತಿಕಾವಿರಚಿತಮಪ್ಪ ಚತುರಾಂತರದೊಳ್ ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪೆಸೆಯೊಳ್ ಗುಣಾರ್ಣವನನಾ ದ್ರುಪದಜೆಯನೊಡನೆ ಕುಳ್ಳಿರಿಸಿ ಹಿತ ಪುರೋಹಿತ ಪ್ರಾಜ್ಯಾಜ್ಯಾಹುತಿಹುತ ಹುತವಹಸಮಕ್ಷದೊಳ್ ಕೆರೆದು ಪ್ರಾಣಿಗ್ರಹಂಗೆಯ್ಸೆ-

ಚಂ|| ಇಡಿದಿರೆ ಮಂಜಿನೊಳ್ ತುಱುಗಿ ತೆಂಕಣಗಾಳಿಯೊಳಾದ ಸೋಂಕಿನೊಳ್
ನಡುಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ|
ತೊಡರ್ದವೊಲಾಗೆ ಘರ್ಮಜಲದಿಂ ನಡುಪಾಕೆಯ ಪಾಣಿಪಲ್ಲವಂ
ಬಿಡಿದು ಬೆಡಂಗನಾಳ್ದುದು ಗುಣಾರ್ಣವನೊಪ್ಪುವ ಪಾಣಿಪಲ್ಲವಂ|| ೭೫

ವ|| ಅಂತೊರ್ವರೊರ್ವರ ಕಿಱುಕುಣಿಕೆಗಳಂ ಪಿಡಿದು ರತಿಯುಂ ಕಾಮದೇವನುಂ ಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಗೆ ವಂದು ಕನಕಗಿರಿಯ ಬಲಗೊಳ್ವ ಪತಂಗ ದಂಪತಿಯಂತಾ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞು ಬಲವಂದು ನಿಂದಿಂ ಬೞಯಮಾಕೆ ಪುರೋಹಿತನ ಪೇೞ್ದೋಜೆಯೊಳ್ ಲಾಜೆಯನಗ್ನಿಕುಂಡದೊಳ್ ಸುರಿದು-

ಚಂ|| ಅದಱ ಪೊದಳ್ದು ನೀಳ್ದ ಪೋಗೆಯಂ ಲುಳಿತಾಳಕ್ಕೆ ತನ್ನ ವಕ್ತ್ರ ಪ
ದ್ಮದಿನೊಸೆದಾಂತೊಡಾಕೆಯ ಕಪೋಲದೊಳಾ ನವ ಧೂಮಲೇಖೆ ಬೆ|
ಳ್ಪಿದಿರ್ಗೊಳೆ ಗಾಡಿವೆತ್ತಡರ್ದು ಕತ್ತುರಿಯೊಳ್ ಮದವಟ್ಟೆಯಂ ವಿಳಾ
ಸದೆ ತೆಗೆದಂತೆ ಕಣ್ಗೆಸೆದು ತೋಱದುದಾ ಕದನತ್ರಿಣೇತ್ರನಾ|| ೭೬

ವ|| ಅಂತು ಸೊಗಯಿಸೆ ಪಾಡುವ ಮಂಗಳವಂಗಳುಮೋದುವ ಋಚೆಗಳುಂ ಪರಸುವ ಪರಕೆಗಳುಮೆಸೆಯೆ ಪಸೆಯೊಳಿರ್ದು-

ತೋರಣದ ಸಮೂಹಗಳು ಥಳಿಥಳಿಸಿ ಒಪ್ಪಿದವು. ವಿಧವಿಧವಾದ ಬಾವುಟಗಳ ಸಮೂಹಗಳು ಅಲುಗಾಡಿದುವು. ಪುರದ ಸ್ತ್ರೀಜನರು ಜಯಜಯವೆಂದು ಘೋಷಿಸುವ ಶಬ್ದವೂ ಚೆಲ್ಲುವ ಮಂತ್ರಾಕ್ಷತೆಯೂ ಮನಸ್ಸಿಗೆ ಸಂತೋಷವನ್ನು ಹೆಚ್ಚಿಸಿದುವು. ಪರಸೈನ್ಯಭೈರವನಾದ ಅರ್ಜುನನು ದ್ರುಪದನ ಅರಮನೆಯನ್ನು ಪ್ರವೇಶಿಸಿದನು. ವ|| ಆಗ ದ್ರುಪದನು ಪಚ್ಚೆಯೆಂಬ ರತ್ನದಿಂದ ಮಾಡಿದ ನೆಲಗಟ್ಟಿನಿಂದಲೂ ಎಳೆಯ ಇಂದ್ರನೀಲಮಣಿಯಿಂದ ಮಾಡಿದ ಕಂಭಗಳಿಂದಲೂ ಹವಳದ ಜಂತಿಗಳಿಂದಲೂ ಪದ್ಮರಾಗದ ಬೋದಿಗೆಗಳಿಂದಲೂ ಇಂದ್ರನೀಲದ ಉಪ್ಪರಿಗೆಗಳಿಂದಲೂ ಚಿನ್ನದ ಜಾಲರಿಗಳಿಂದಲೂ ಸಟಿಕದ ಚಿತ್ರಿತವಾದ ಗೋಡೆಗಳಿಂದಲೂ ಚಂದ್ರಕಾಂತ ಶಿಲೆಯಿಂದ ನಿರ್ಮಿಸಿದ ಮೇಲ್ಮಹಡಿಯಿಂದಲೂ ವಿವಾಹಗೃಹವನ್ನು ಸಿದ್ಧಗೊಳಿಸಿದನು. ಅದರ ಮಧ್ಯೆ ಹಸಿಯ ಮಣ್ಣಿನಿಂದ ಮಾಡಿದ ಚಚ್ಚೌಕದ ಹಸೆಯ ಜಗಲಿಯಲ್ಲಿ ಚಚ್ಚೌಕವಾದ ಮುತ್ತಿನ ಹೊಂಬಣ್ಣದ ಹಸೆಯ ಮಣೆಯ ಮೇಲೆ ರೇಷ್ಮೆಯ ಹಸೆಯಲ್ಲಿ ಗುಣಾರ್ಣವನನ್ನೂ ದ್ರೌಪದಿಯನ್ನೂ ಕುಳ್ಳಿರಿಸಿದನು. ಬಂಧುಗಳು, ಪುರೋಹಿತರು, ಶುದ್ಧವಾದ ತುಪ್ಪದ ಹವಿಸ್ಸನ್ನು ಹೋಮಮಾಡಿಸಿದರು. ದ್ರುಪದನು ಅಗ್ನಿಸಮಕ್ಷಮದಲ್ಲಿ ಧಾರೆಯೆರೆದು ಪಾಣಿಗ್ರಹಣವನ್ನು ಮಾಡಿಸಿದನು. ೭೫. ಒತ್ತಾಗಿ ಕೂಡಿಕೊಂಡಿರುವ ಮಂಜಿನಿಂದ ವ್ಯಾಪ್ತವಾದ ದಕ್ಷಿಣಮಾರುತ ಸ್ಪರ್ಶದಿಂದ ಅಲುಗಾಡುತ್ತಿರುವ ಅಶೋಕಲತೆಯ ಚಿಗುರಿನಲ್ಲಿ ಹೊಸದಾದ ಮಾವಿನ ಚಿಗುರು ಸೇರಿಕೊಂಡ ಹಾಗೆ ಬೆವರಿನಿಂದ ನಡುಗುತ್ತಿರುವ ಆಕೆಯ ಚಿಗುರಿನಂತಿರುವ ಕಯ್ಯನ್ನು ಹಿಡಿದು ಗುಣಾರ್ಣವನ ಸುಂದರವಾದ ಪಾಣಿಪಲ್ಲವವು ಸೌಂದರ್ಯವನ್ನು ಹೊಂದಿತು. ವ|| ಹಾಗೆ ಒಬ್ಬರು ಇನ್ನೊಬ್ಬರ ಕಿರುಬೆರಳನ್ನು ಹಿಡಿದು ರತಿಯೂ ಕಾಮದೇವನೂ ಬರುವ ಹಾಗೆ ಹೋಮಕುಂಡದ ಅಗ್ರಭಾಗಕ್ಕೆ ಬಂದು ಮೇರುಪರ್ವತವನ್ನು ಪ್ರದಕ್ಷಿಣೆ ಮಾಡುವ ಸೂರ್ಯದಂಪತಿಗಳ ಹಾಗೆ ಅಗ್ನಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ ನಿಂತ ಬಳಿಕ ದ್ರೌಪದಿಯು ಆ ಪುರೋಹಿತನು ಹೇಳಿದ ಕ್ರಮದಲ್ಲಿ ಲಾಜಹೋಮವನ್ನು ಮಾಡಿದಳು. ೭೬. ಕೊಂಕುಗೂದಲಿನ ಆ ದ್ರೌಪದಿಯು ದಟ್ಟವೂ ದೀರ್ಘವೂ ಆದ ಅರಳಿನ ಹೊಗೆಯನ್ನು ತನ್ನ ಮುಖಕಮಲದಲ್ಲಿ ಪ್ರೀತಿಯಿಂದ ಧರಿಸಿರುವ ಅವಳ ಕೆನ್ನೆಯಲ್ಲಿ ಆ ಹೊಸಹೊಗೆಯ ರೇಖೆಯು ಸೌಂದರ್ಯದಿಂದ ಕೂಡಿ ಊರ್ಧ್ವಮುಖವಾಗಿ ಕಸ್ತೂರಿಯಿಂದ ರಚಿಸಿದ ಪತ್ರಲೇಖೆ (ಕಪೋಲಪತ್ರ – ಅಲಂಕಾರಕ್ಕಾಗಿ ಕನ್ನೆಯ ಮೇಲೆ ಬರೆದುಕೊಳ್ಳುವ ಚಿತ್ರ)ಯಂತೆ ಆ ಕದನತ್ರಿಣೇತ್ರನ ಕಣ್ಣಿಗೆ ಸೊಗಸಾಗಿ ಕಂಡಿತು. ವ|| ಸೊಗಸಾಗಿರುವ ಹಾಗೆ ಹಾಡುತ್ತಿರುವ ಮಂಗಳಧ್ವನಿಗಳೂ ಪಠಿಸುತ್ತಿರುವ ವೇದಮಂತ್ರಗಳೂ ಹರಸುವ ಹರಕೆಗಳೂ ಪ್ರಕಾಶಿಸುತ್ತಿರಲು

ಚಂ|| ಪರಿಜೆಯನಂಟು (?) ಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೋ
ಸರಿಸುವ ಹಾರಮಂ ಪಿಡಿದು ನೋಡುವ ಕಟ್ಟಿದ ನೂಲ ತೊಂಗಲಂ|
ತಿರಿಪುವ ಕೆಯ್ತದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭಯಂ
ಬೆರಸಿದ ನಾಣುಮಂ ಕ್ರಮದೆ ಪಿಂಗಿಸು ಬೇಸಱದಿರ್ ಗುಣಾರ್ಣವಾ|| ಎ ೭೭

ವ|| ಎಂದು ಕೆಲದೊಳಿರ್ದ ದಂಡುರುಂಬೆಗಳ್ ಬುದ್ಧಿವೇೞೆ-

ಉ|| ಕಾಂತೆ ಪೊದಳ್ದ ನಾಣ ಭರದಿಂದಧರೀಕೃತ ಚಂದ್ರಬಿಂಬ ಸ
ತ್ಕಾಂತಿಯನಾನನಾಂಬುಜಮನೊಯ್ಯನೆ ಬಾಗಿರೆ ಕಾದಲಂಗೆ ಸ|
ಯ್ತಂತಿರು ನಾಣ್ಚದೆಂದಣುಗೆಯರ್ ಪಿಡಿದೞ್ಕಳೆತ್ತಿ ಬುದ್ಧಿ ವೇ
ೞ್ದಂತೆ ಕದಂಪಿನೊಳ್ ಪೊಳೆದುವಾಕೆಯ ಹಾರ ಮರೀಚಿ ಮಾಲೆಗಳ್|| ೭೮

ವ|| ಅಂತೊಪ್ಪುವ ವಿವಾಹಮಂಗಳದೊಸಗೆಯೊಳ್ ಮಂಗಳ ಪಾಠಕರೆೞ್ದು ನಿಂದಿರ್ದು-

ಶಾ|| ಇಂದ್ರಾನೋಕಹಮೊಪ್ಪುವಿಂದ್ರತುರಂಗಂ ಸಂದಿಂದ್ರಗೇಹಂ ಪೊದ
ಳ್ದಿಂದ್ರಾನೇಕಪಮೊಪ್ಪುವಿಂದ್ರನಖಿಳೇಂದ್ರೈಶ್ಚರ್ಯಮಿಂದ್ರಾಣಿ ಸಂ|
ದಿಂದ್ರಾನರ್ಘ್ಯವಿಭೂಷಣಂಗಳರಿಭೂಪಾಳಾವಳೀದುಸ್ತಮ
ಶ್ಚಂದ್ರಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೭೯

ವ|| ಎಂದು ಮಂಗಳವೃತ್ತಂಗಳನೋದೆ ಕಿಱದುಂ ಬೇಗಮಿರ್ದೆತ್ತಿದ ಬೋನದೊಳ್ ಕಲ್ಯಾಣಾಮೃತಾಹಾರಮನಾರೋಗಿಸಿ ಬೞಯಂ ಯಕ್ಷಕರ್ದಮದ ಕೆಯ್ಗಟ್ಟಿಯೊಳ್ ಕೆಯ್ಯಂ ತಿೞುರ್ದು ತಂಬುಲಮಂ ಕೊಂಡು-

ಕಂ|| ಕವಿ ಗಮಕಿ ವಾದಿ ವಾಗ್ಮಿ
ಪ್ರವರರ ಪಂಡಿತರ ನೆಗೞ್ದ ಮಾತಱವರ ಸ|
ಬ್ಬವದವರೊಡನಂತೊಸೆದ
ನ್ನವಾಸದೋಲಗದೊಳಿರ್ದನಾಗಳ್ ಹರಿಗಂ|| ೮೦

ವ|| ಆ ಪ್ರಸ್ತಾವದೊಳ್-

ಹಸೆಯಲ್ಲಿದ್ದ ತುಂಟಸಖಿಯರು ಗುಣಾರ್ಣವನಿಗೆ ಹೀಗೆಂದು ಸೂಚಿಸಿದರು. ೭೭. ಕೆನ್ನೆಯನ್ನು ಸವರು, ಚಿನ್ನದ ಹೂವನ್ನು ಓರೆಮಾಡು, ಹಾರವನ್ನು ಹಿಡಿದು ಪರೀಕ್ಷೆಮಾಡು, ಅಲಂಕಾರಕ್ಕಾಗಿರುವ ನೂಲಿನ ಕುಚ್ಚನ್ನು ತಿರುಗಿಸು, ಕಾರ್ಯಗಳ (ಚೇಷ್ಟೆಯ) ನೆಪದಿಂದ ಕೋಮಲಶರೀರೆಯಾದ ಆ ದ್ರೌಪದಿಯ ಸಂಶಯವನ್ನೂ ಭಯದಿಂದ ಕೂಡಿದ ನಾಚಿಕೆಯನ್ನೂ ಗುಣಾರ್ಣವನೇ ನೀನು ಕ್ರಮಕ್ರಮವಾಗಿ ಹೋಗಲಾಡಿಸು. ಈ ಕಾರ್ಯದಲ್ಲಿ ನೀನು ಬೇಸರಪಡಬೇಡ, ವ|| ಎಂದು ಪಕ್ಕದಲ್ಲಿದ್ದ ತುಂಟದಾಸಿಯರು ಬುದ್ಧಿಹೇಳಲು-

೭೮. ದ್ರೌಪದಿಯು ಲಜ್ಜಾಭಾರದಿಂದ ಚಂದ್ರಬಿಂಬದ ಕಾಂತಿಯನ್ನೂ ಕೀಳುಮಾಡಿದ್ದ ತನ್ನ ಮುಖಕಮಲವನ್ನು ನಿಧಾನವಾಗಿ ಬಗ್ಗಿಸಿರಲು ಅವಳ ಸಖಿಯರು ಪ್ರೀತಿಯಿಂದ ಅವಳ ಮುಖವನ್ನೆತ್ತಿ ‘ನಿನ್ನ ಪ್ರಿಯನಿಗೆ ಸರಿಯಾಗಿರು’ ಎಂದು ಬುದ್ಧಿಹೇಳುತ್ತಿದ್ದಾರೆಯೋ ಎನ್ನುವ ರೀತಿಯಲ್ಲಿ ಅವಳ ಕೆನ್ನೆಯಲ್ಲಿ ಅವಳ ಹಾರದ ಕಾಂತಿಸಮೂಹವು ಹೊಳೆಯಿತು. ವ|| ಹಾಗೆ ಪ್ರಕಾಶಮಾನವಾಗಿದ್ದ ಮದುವೆಯ ಶುಭೋತ್ಸವದಲ್ಲಿ ಹೊಗಳುಭಟರು ಎದ್ದು ನಿಂತು- ೭೯. ಇಂದ್ರನ ಮರವಾದ ಕಲ್ಪವೃಕ್ಷವೂ ಪ್ರಕಾಶಮಾನವಾದ ಇಂದ್ರನ ಕುದುರೆಯಾದ ಉಚ್ಛೆ ಶ್ರವೂ ಸುಪ್ರಸಿದ್ಧವಾದ ಇಂದ್ರನ ಅರಮನೆಯಾದ ಸುಧರ್ಮವೆಂಬ ಸಭಾಮಂಟಪವೂ ಬಲಿಷ್ಠವಾದ ಇಂದ್ರನ ಆನೆಯಾದ ಐರಾವತವೂ ಇಂದ್ರನ ಸಕಳೈಶ್ವರ್ಯಗಳೂ ಇಂದ್ರನ ರಾಣಿಯಾದ ಶಚೀದೇವಿಯೂ ಇಂದ್ರನ ಬೆಲೆಯಿಲ್ಲದ ಆಭರಣಗಳೂ ಶತ್ರುರಾಜರೆಂಬ ಕೆಟ್ಟ ಕತ್ತಲೆಗೆ ಚಂದ್ರನಾಗಿರುವ ಅವನಿಗೆ ಹಿರಿದಾದ ಸುಖಸಂಪತ್ತನ್ನೂ ಅತುಲೈಶ್ವರ್ಯವನ್ನೂ ಕೊಡಲಿ ವ|| ಎಂದು ಮಂಗಳಗೀತೆಗಳನ್ನು ಓದಲು ಸ್ವಲ್ಪ ಕಾಲವಾದ ಮೇಲೆ ಬಡಿಸಿದ ಶುಭಕರವಾದ ಅಮೃತಕ್ಕೆ ಸಮಾನವಾದ ಆಹಾರವನ್ನು ಊಟಮಾಡಿ ಪಚ್ಚಕರ್ಪೂರ ಅಗರು ಕಸ್ತೂರಿ ಶ್ರೀಗಂಧ ಕೇಸರಿ ಮೊದಲಾದ ಸುಗಂಧದ್ರವ್ಯಗಳನ್ನು ಮಿಶ್ರ ಮಾಡಿದ ಲೇಪನದ ಕದಡಿನಿಂದ ಕಯ್ಯನ್ನು ಲೇಪಿಸಿಕೊಂಡು ತಾಂಬೂಲವನ್ನು ಸ್ವೀಕರಿಸಿ- ೮೦. ಅರ್ಜುನನು, ಕವಿಗಳು, ಗಮಕಿಗಳು, ವಾದಿಗಳು, ವಾಗ್ಮಿಗಳು, ಶ್ರೇಷ್ಠರಾದ ಪಂಡಿತರು ಪ್ರಸಿದ್ಧರಾದ ಸಂಭಾಷಣಕಾರರು, ಹಾಸ್ಯಗಾರರು ಇವರೊಡನೆ ಸಂತೋಷದಿಂದ ಭೋಜನಶಾಲೆಯಲ್ಲಿದ್ದನು. ವ|| ಆ ಸಂದರ್ಭದಲ್ಲಿ –

ಎ ಇಲ್ಲಿ ಪರಿಜೆಯೆಂಬ ಶಬ್ದಕ್ಕೆ ಅರ್ಥ ದುರವಗಾಹ

ಉ|| ಬೇಸ ಲೋಕಮಂ ತಗುಳ್ದು ಸುಟ್ಟೞಲಿಂದೆ ಖರಾಂಶು ನಾರಕಾ
ವಾಸದೊಳಾೞ್ವವೋಲಪರರ್ವಾಯೊಳಾೞ್ವುದುಮಿತ್ತ ವಂದ ಸಂ|
ಧ್ಯಾಸಮಯಾತ್ತರಕ್ತರುಚಿ ಪಿಂಗೆ ಬೞಕ್ಕುದಯಾದ್ರಿಯೊಳ್ ಪದಂ
ಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಗೆ ಹಿಮಾಂಶುಮಂಡಲಂ|| ೮೧

ವ|| ಆಗಳ್ ದ್ರುಪದಂ ನಿಜಾಂತಪುರಪರಿವಾರಂಬೆರಸುದಾರಮಹೇಶ್ವರನಲ್ಲಿಗೋಲಗಕ್ಕೆ ವಂದು ನೃತ್ಯ ವಾದ್ಯ ಗೀತಾತೋದ್ಯಂಗಳೊಳ್ ಕಿಱದುಂ ಬೇಗಮಿರ್ದೋಲಗಮುಮಂ ಪರೆಯಲ್ವೇೞ್ದು ಮತ್ತಿನ ನಾಲ್ವರ್ಗಂ ಕೊಂತಿಗಂ ಬೇವೇ ಮಾಡಂಗಳಂ ಬೀಡುವೇೞ್ದು ಗುಣಾರ್ಣವನಂ ಸೆಜ್ಜೆಗೆ ಬಿಜಯಂಗೆಯ್ಯಿಮೆನೆ ಕಾಮಂ ಕಳನೇಱುವಂತೆ ಸೆಜ್ಜೆಯನೇಱ ಸೆಡೆದಿರ್ದ ನಲ್ಲಳಂ ನೋಡಿ-

ಉ|| ನೋಟದೊಳೞ್ಕಜಂಬಡೆದು ಮೆಲ್ನುಡಿಯೊಳ್ ಬಗೆವೊಕ್ಕು ಜಾಣೊಳ
ಳ್ಳಾಟಮನೆಲ್ಲಮಂ ಕಿಡಿಸಿ ಸೋಂಕಿನೊಳೊಯ್ಯನೆ ಮೆಯ್ವೊಣರ್ಚಿ ಬಾ|
ಯ್ಗೂಟದೊಳೞ್ಕಱಂ ಪಡೆದು ಕೂಟದೊಳುಣ್ಮಿದ ಬೆಚ್ಚ ತೞ್ಕೆಯೊಳ್
ಕೂಟ ಸುಖಂಗಳಂ ಪಡೆದನೇಂ ಚದುರಂ ಗಳ ಬದ್ದೆದಲ್ಲೞಂ|| ೮೨

ಬೇಡಿಸುವಪ್ಪುಗಳ್ಗೊರೆವ ಲಲ್ಲೆಯ ಮೆಲ್ನುಡಿಗಳ್ಗೆ ಕೂಡೆ ನಾ
ಣೂಡಿದ ಕೆಂದುಗಳ್ಗೆ ಬಗೆಗೊಂಡಿನಿಸಂ ತಲೆದೂಗುವಂತೆವೋಲ್|
ನಾಡೆ ಪೊದಳ್ದು ನೀಳ್ದವರ ಸುಯ್ಗಳ ಗಾಳಿಯೊಳೊಯ್ಯನೊಯ್ಯನ
ಳ್ಳಾಡುವುದಾಯ್ತು ತತ್ಸುರತಮಂದಿರದುಜ್ಜ ಳದೀಪಿಕಾಂಕುರಂ|| ೮೩

ವ|| ಅಂತಾ ಯಿರುಳ ನಾಲ್ಕು ಜಾವಮುಂ ಕಾಮನ ಜಾಗರದಂತವರ್ಗೆ ಕೆಂದಿನೊಳೆ ಬೆಳಗಾಗೆ-

ಚಂ|| ನಿನಗಿನಿಸಪ್ಪೊಡಂ ಮನದೊಳೋವದ ಕೞ್ತಲೆಯೆಂಬ ಪಾಪ ಕ
ರ್ಮನ ಮಱಗಳ್ ಕರಂ ಪಲವುಮಂ ಸೆಗೆಯ್ದೆವಿವೆಂದು ತಮ್ಮನ|
ಣ್ಪಿನೊಳವನೊಪ್ಪಿಪಂತೆ ಮುಗುಳೊಳ್ ಮಱಸುಂದಿದ ತುಂಬಿ ಪಾ ಕೋ
ಕನದ ಕುಲಂಗಳುಳ್ಳಲರ್ದುವೆಂಬಿನಮಂದೊಗೆದಂ ದಿವಾಕರಂ|| ೮೪

ವ|| ಅಂತು ಮಾರ್ತಾಂಡನುಂ ಪ್ರಚಂಡ ಮಾರ್ತಾಂಡನುಮುದಿತೋದಿತರಾಗೆ-

೮೧. ಲೋಕವನ್ನು ಬೆನ್ನಟ್ಟಿ ಅದು ದುಖಪಡುವಂತೆ ಸುಟ್ಟು ದುಖದಿಂದ ಸೂರ್ಯನು ನರಕವಾಸದಲ್ಲಿ ಮುಳುಗುವ ಹಾಗೆ ಪಶ್ಚಿಮಸಮುದ್ರದಲ್ಲಿ ಮುಳುಗಿದನು. ಸಂಧ್ಯಾಕಾಲದಲ್ಲುಂಟಾದ ಕೆಂಪುಕಾಂತಿಯು ಹಿಂಜರಿಯಿತು. ಅನಂತರ ಚಂದ್ರಮಂಡಲವು ಹದವಾಗಿ ಕಾಸಿದ (ಶುಭ್ರಮಾಡಿದ) ಶುದ್ಧಚಿನ್ನದಿಂದ ಮಾಡಿದ ಗಂಟೆಯ ಹಾಗೆ ಕಣ್ಣಿಗೆ ಕಾಣಿಸಿತು. ವ|| ಆಗ ದ್ರುಪದನು ತನ್ನ ಅಂತಪುರದ ಪರಿವಾರದವರೊಡನೆ ಉದಾರಮಹೇಶ್ವರನಾದ ಅರ್ಜುನನ ಸಭಾಗೃಹಕ್ಕೆ ಬಂದು ನೃತ್ಯ, ವಾದ್ಯ, ಗೀತ, ಮಂಗಳವಾದ್ಯಗಳಲ್ಲಿ ಭಾಗಿಯಾಗಿ ಸಭೆಯನ್ನು ವಿಸರ್ಜಿಸುವಂತೆ ಹೇಳಿ ಧರ್ಮರಾಜನೇ ಮೊದಲಾದ ಉಳಿದ ನಾಲ್ಕು ಜನಗಳಿಗೂ ಕುಂತೀದೇವಿಗೂ ಬೇರೆಬೇರೆ ಮನೆಗಳನ್ನು ಬಿಡಾರವನ್ನಾಗಿ ಮಾಡಿಸಿ ಗುಣಾರ್ಣವನನ್ನು ಶಯ್ಯಾಸ್ಥಳಕ್ಕೆ ದಯಮಾಡಿಸಿ ಎಂದನು. ಅರ್ಜುನನು ಮನ್ಮಥನು ಯುದ್ಧರಂಗವನ್ನು ಪ್ರವೇಶ ಮಾಡುವ ಹಾಗೆ ಹಾಸಿಗೆಯ ಮೇಲೆ ಕುಳಿತು ಲಜ್ಜೆಯಿಂದ ಕೂಡಿದ್ದ ತನ್ನ ಪ್ರಿಯಳನ್ನು ನೋಡಿ

೮೨. ನೋಟದಿಂದ ಪ್ರೀತಿಯನ್ನುಂಟುಮಾಡಿ ಮೃದುವಾದ ಮಾತಿನಿಂದ ಅವಳ ಮನಸ್ಸನ್ನು ಗೆದ್ದು ಜಾಣ್ಮೆಯಿಂದ ಅವಳ ನಡುಗುವಿಕೆ (ಕಂಪನ)ಯನ್ನು ಹೋಗಲಾಡಿಸಿ ಮೆಲ್ಲನೆ ಸೋಂಕುವುದರಿಂದ ಅವಳ ಮೈಯಲ್ಲಿ ತನ್ನ ಮೈಯ್ಯನ್ನು ಸೇರಿಸಿ ತುಟಿಗಳೆರಡನ್ನೂ ಸೇರಿಸಿ ಮುತ್ತಿಟ್ಟು ಬಿಗಿಯಾಗಿ ಆಲಿಂಗನಮಾಡಿಕೊಂಡು ರತಿಸುಖವನ್ನೂ ಪಡೆದನು. ಅರ್ಜುನನು ಏನು ಚದುರನೋ? ೮೩. ಆಶೆಪಡುತ್ತಿರುವ ಆಲಿಂಗನಗಳಿಗೂ ಆಡುತ್ತಿರುವ ಪ್ರೀತಿಯ ಮೃದುನುಡಿಗೂ ವಿಶೇಷವಾಗಿ ಲಜ್ಜೆಯಿಂದ ಕೂಡಿದ ಸುರತಕ್ರೀಡೆಗೂ ಮೆಚ್ಚಿ ದೀಪಗಳು ಒಂದಿಷ್ಟು ತಲೆದೂಗುವ ಹಾಗೆ ವಿಶೇಷವಾಗಿ ವ್ಯಾಪಿಸಿ ನೀಳವಾಗಿ ಬೆಳೆದ ಆ ರತಿಕ್ರೀಡಾಮಂದಿರದ ಪ್ರಕಾಶಮಾನವಾದ ದೀಪದ ಕುಡಿಯು ಅವರ ಉಸಿರಿನ ಗಾಳಿಯಿಂದ ನಿಧಾನವಾಗಿ ಅಳ್ಳಾಡುತ್ತಿದ್ದವು. ವ|| ಆ ರಾತ್ರಿಯ ನಾಲ್ಕು ಜಾವಗಳೂ ಕಾಮನ ಜಾಗರಣೆಯಂತೆ ಸುರತಕ್ರೀಡೆಯಲ್ಲಿಯೇ ಕಳೆದವು. ಬೆಳಗಾಯಿತು. ೮೪. ಸ್ವಲ್ಪವಾದರೂ ನಿನಗೆ ಪ್ರಿಯವಲ್ಲದ ಕಳ್ತಲೆಯೆಂಬ ಪಾಪಿಷ್ಠನ ಮರಿಗಳನೇಕವನ್ನು ಇಗೋ ಸೆರೆಹಿಡಿದಿದ್ದೇನೆ. ಇದೋ ಇಲ್ಲಿ ಇದೆ, ಒಪ್ಪಿಸಿಕೋ ಎಂದು ತಮ್ಮ ಸ್ನೇಹದಿಂದ ಒಪ್ಪಿಸುವ ಹಾಗೆ ಮೊಗ್ಗುಗಳಲ್ಲಿ ಮಲಗಿದ್ದ ತುಂಬಿಗಳು ಹಾರಿಹೋಗಲು ಕಮಲಸಮೂಹಗಳು ಚೆನ್ನಾಗಿ ಅರಳಿದುವು, ಸೂರ್ಯೋದಯವಾಯಿತು. ವ|| ಹಾಗೆ ಸೂರ್ಯನೂ

ಮ|| ಕಚಭಾರಾಳಸಗಾಮಿನೀಪರಿವೃತಂ ಗಂಗಾತರಂಗೋಪಮಾ
ನ ಚಳಚ್ಚಾಮರ ವಾತ ಪೀತ ನಿಜ ಘರ್ಮಾಂಭಕಣಂ ದ್ರೌಪದೀ|
ಕುಚಕುಂಭಾರ್ಪಿತ ಕುಂಕುಮದ್ರವ ವಿಲಿಪ್ತೋರಸ್ಥಳಂ ದಾಂಟೆ ಕೀ
ರ್ತಿ ಚತುರ್ವಾಯನಿರ್ದನಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ|| ೮೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದ್ರೌಪದೀಕಲ್ಯಾಣವರ್ಣನಂ ತೃತೀಯಾಶ್ವಾಸಂ

ಪ್ರಚಂಡಮಾರ್ತಾಂಡನಾದ ಅರ್ಜುನನೂ ಅಭಿವೃದ್ಧಿಯಾಗುತ್ತಿರಲು- ೮೫. ಕೇಶಪಾಶದ ಭಾರದಿಂದ ಬಳಲಿ ನಿಧಾನವಾಗಿ ನಡೆಯುವ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟವನೂ ಗಂಗೆಯ ಅಲೆಗಳ ಹಾಗೆ ಅಲುಗಾಡುತ್ತಿರುವ ಚಾಮರದ ಗಾಳಿಯಿಂದ ಕುಡಿಯಲ್ಪಟ್ಟ ತನ್ನ ಬೆವರಿನ ಹನಿಯನ್ನುಳ್ಳವನೂ ದ್ರೌಪದಿಯ ಕುಚಕುಂಭಗಳಿಗೆ ಲೇಪನ ಮಾಡಿದ್ದ ಕುಂಕುಮಕೇಸರಿಯ ದ್ರವದಿಂದ ಕೂಡಿಕೊಂಡಿರುವ ಎದೆಯುಳ್ಳವನೂ ಆದ ಅರ್ಜುನನು ತನ್ನ ಕೀರ್ತಿಯು ನಾಲ್ಕು ಸಮುದ್ರಗಳನ್ನೂ ದಾಟಿರಲು ಆ ದಿನ ಅಲ್ಲಿ ಸುಖವಾಗಿದ್ದನು.

ವ|| ಇದು ವಿವಿಧ ವಿದ್ವಾಂಸರಿಂದ ಸ್ತುತಿಸಲ್ಪಟ್ಟ ಜಿನನ ಪಾದಕಮಲದ ವರಪ್ರಸಾದದಿಂದ ಹುಟ್ಟಿದುದೂ ಪ್ರಸನ್ನವೂ ಗಂಭೀರವೂ ಆದ ಮಾತುಗಳನ್ನು ರಚಿಸುವುದರಲ್ಲಿ ಜಾಣನಾದ ಕವಿತಾಗುಣಾರ್ಣವನಿಂದ ವಿರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ದ್ರೌಪದೀಕಲ್ಯಾಣ ವರ್ಣನಾತ್ಮಕವಾದ ಮೂರನೆಯ ಆಶ್ವಾಸ.