ಅರ್ಥಾಲಂಕಾರಪ್ರಕರಣಂ

ಕಂ || ಶ್ರೀವಿದಿತಾರ್ಥಾಲಂಕಾರಾವಳಿಯಂ ವಿವಿಧಭೇ*ವಿ[1]ಭವಾಸ್ಪದಮಂ |

ಭಾವಿಸಿ ಬೆಸಸಿದನಖಿಳ-ಧರಾ-ವಲ್ಲಭ-ನಿಂತಮೋಘ-ವರ್ಷ-ನೃಪೇಂದ್ರಂ ||೧||

 

ಅರ್ಥಾಲಂಕಾರಗಳ ಹೆಸರುಗಳು

ವರಜಾತಿ-ರೂಪಕಾರ್ಥಾಂತರ-ವಿನ್ಯಾಸಾತಿರೇಕ-ಯಾಥಾಸಂಖ್ಯಾ- |

ಸ್ಥಿರ-ದೀಪಕೋಪಮಾ-ಬಂಧು[2]ರಾತಿಶಯ-ಸದೃಶ-ಯೋಗಿತಾಕ್ಷೇಪಂಗಳ್ ||೨||

ಶ್ಲೇಷೋತ್ಪ್ರೇಕ್ಷಾ-ಸೂಕ್ಷ್ಮ-ವಿಶೇಷ-ಸಮಾಹಿತ-ಸಮಾಸ-ಪರ್ಯಾಯೋಕ್ತಾ- |

ನ್ವೇಷ-ವಿರೋಧಾಪ್ರಸ್ತುತ-ಶೇಷ-ನಿದರ್ಶನ-ಸಹೋಕ್ತಿ-ಸಂಕೀರ್ಣಂಗಳ್ ||೩||

ನುತ-ಪರಿವೃತ್ತಿ-ವ್ಯಾಜಸ್ತುತಿ-ಹೇತು-ವಿಭಾವನಾ-ಲ[3]ವೋದಾತ್ತಾಪ- |

ಹ್ನುತಿ-ರಸವದೂರ್ಜಿತ-ವ್ಯಾವೃತಿ-ಪ್ರಿಯತರಾಶಿಗಳ್  ಕ್ರಮಾದ್ಯುಕ್ತಂಗಳ್ ||೪||

ವಿದಿತಾರ್ಥಾಲಂಕಾರಾಸ್ಪದ-ಭೇದಂಗಳ್ ಪುರಾಣ-ಶಾಸ್ತ್ರೋಕ್ತಂಗಳ್ |

ತದನುಮತ-ಲಕ್ಷ್ಯ-ಲಕ್ಷಣ-ನಿದರ್ಶನಂಗಳನನುಕ್ರಮಮೋಕ್ತಿಯೆ ಪೇೞ್ವೆಂ ||೫||

 

ಮೂರನೆಯ ಪರಿಚ್ಛೇದ

೧. ಅನೇಕ ಭೇದ ಪ್ರಭೇದಗಳಿಗೆ ತಾಣವಾಗಿರುವ ಪ್ರಸಿದ್ಧ ಅರ್ಥಾಲಂಕಾರಗಳ ಸಮೂಹವನ್ನು ನೃಪತುಂಗ ಮಹಾರಾಜನು ವಿಮರ್ಶಿಸಿ ಹೀಗೆ ನಿರ್ಣಯಿಸಿರುವನು- *ಇಲ್ಲಿಯೂ ಹೊಸ ಪರಿಚ್ಛೇದದ ಆರಂಭದಲ್ಲಿ ಮಂಗಳಾರ್ಥವಾಗಿ ಶ್ರೀಕಾರ ಬಂದಿರುವುದನ್ನು ಗಮನಿಸಬೇಕು.*

೨-೫. ‘ಜಾತಿ’, ‘ರೂಪಕ’, ‘ಅರ್ಥಾಂತರನ್ಯಾಸ’, ‘ವ್ಯತಿರೇಕ’, ‘ಯಥಾಸಂಖ್ಯ’, ‘ದೀಪಕ’, ‘ಉಪಮಾ’, ‘ಅತಿಶಯೋಕ್ತಿ’, ‘ಸದೃಶಯೋಗಿತಾ’, ‘ಆಕ್ಷೇಪ’, ‘ಶ್ಲೇಷ’, ‘ಉತ್ಪ್ರೇಕ್ಷಾ’, ‘ಸೂಕ್ಷ್ಮ’, ‘ವಿಶೇಷ’, ‘ಸಮಾಹಿತ’, ‘ಸಮಾಸೋಕ್ತಿ’, ‘ಪರ್ಯಾಯೋಕ್ತ’, ‘ವಿರೋಧ’, ‘ಅಪ್ರಸ್ತುತಪ್ರಶಂಸೆ’, ನಿದರ್ಶನ’, ‘ಸಹೋಕ್ತಿ’, ‘ಸಂಕೀರ್ಣ’, ‘ಪರಿವೃತ್ತಿ’, ‘ವ್ಯಾಜಸ್ತುತ್ತಿ’, ‘ಹೇತು’, ‘ವಿಭಾವನಾ’, ‘ಲವ’, ‘ಉದಾತ್ತ’, ‘ಅಪಹ್ನುತಿ’, ‘ರಸವತ್’, ‘ಊರ್ಜಿತ’, ‘ವ್ಯಾವೃತ್ತಿ’, ‘ಪ್ರಿಯತರ’ (=‘ಪ್ರೇಯಸ್’), ‘ಆಶೀಃ’-ಇವು ಅನುಕ್ರಮವಾಗಿ ಪೂರ್ವ ಲಕ್ಷಣಗ್ರಂಥಗಳಲ್ಲಿ ಉಕ್ತವಾಗಿರುವ ಅರ್ಥಾಲಂಕಾರದ ಭೇದಗಳು. ಶಾಸ್ತ್ರೋಕ್ತವಾದ ರೀತಿಯಲ್ಲಿ ಈ ಅಲಂಕಾರಗಳಿಗೆಲ್ಲ ಇದೇ ಅನುಕ್ರಮದಲ್ಲಿಯೇ ಲಕ್ಷಣ ಮತ್ತು ಲಕ್ಷ್ಯಯಗಳನ್ನೀಗ ಹೇಳುವೆನು.

. ‘ಜಾತಿ’ (=ಸ್ವಭಾವೋಕ್ತಿ)

ಭಾವಿಸಿ ಸಮಸ್ತ-ವಸ್ತು-ವಿಭಾವಿತ-ಜಾತಿ-ಕ್ರಿಯಾ-ಗುಣ-ದ್ರವ್ಯ-ಸ್ವಾ |

ಭಾವಿಕ-ಗುಣಮಂ ಪೇೞ್ವುದು ಕೇ[4]ವಲಮಾ ಜಾತಿಯೆಂಬ ಸದಳಂಕಾರಂ ||೬||

I) ಜಾತಿಸ್ವಭಾವಾಖ್ಯಾನ

ಧವಳಾಪಾಂಗಂ ಕೇಕಾ-ರವ-ಮುಖರಂ ಹ[5]ರಿತ-ಶಾಬಲಾಂಕ-ಕಳಾಪಂ |

[6]ವಿಲಾದಂ ಸೊಗಯಿಸುಗುಂ ಸುವಿನೀಲಾಯತ-ಗಳಂ ಪಯೋದಾಗಮದೊಳ್ ||೭||

II) ಕ್ರಿಯಾಸ್ವಭಾವಾಖ್ಯಾನ

ಅರೆಮುಚ್ಚಿ ಕಣ್ಗಳಂ ವನಕರಿ ಮೆಲ್ಲದೆ ಲಲಿತಸಲ್ಲಕೀಪಲ್ಲವಮಂ |

ಸ್ಮರ-ವಶದಿಂದಿರ್ದುದು ನಿಜ-ಕರೇಣು-ಪೇಚಕ-ನಿರೂಪಿತಾಯತ-ಹಸ್ತಂ ||೮||

೬. (ಕಾವ್ಯದಲ್ಲಿ ವರ್ಣನೀಯವಾಗಿರುವ) ಎಲ್ಲ ವಸ್ತುವಿನ ಸ್ವಾಭಾವಿಕವಾದ ಜಾತಿ (=(= class ), ಕ್ರಿಯಾ (=action), ಗುಣ (=quality), ದ್ರವ್ಯ (=individual object) ಗಳನ್ನು (ವಾಸ್ತವಿಕವಾಗಿ ಇರುವಂತೆಯೇ) ಹೇಳುವುದು ‘ಜಾತಿ’ ಎಂಬ ಅಲಂಕಾರ. *ಇದಕ್ಕೆ ‘ಸ್ವಭಾವೋಕ್ತಿ’ಯೆಂದೂ ನಾಮಾಂತರವಿದೆ.*

೭. ಮಳೆಗಾಲ ಆರಂಭವಾದಾಗ ಬಿಳಿಯ ಕಡೆಗಣ್ಣನೋಟಗಳುಳ್ಳ, ಕೇಕೆಯ ಧ್ವನಿಯನ್ನು ಗಟ್ಟಿಯಾಗಿ ಮಾಡುವ, ಹಸಿರು ಮತ್ತು ಮಿಶ್ರವರ್ಣದಿಂದ ಚಿತ್ರಿಸಿದಂತಿರುವ ಗರಿಗಳನ್ನುಳ್ಳ, ನೀಲವೂ ಉನ್ನತವೂ ಆದ ಕೊರಳಿನ ನವಿಲಿ ತುಂಬಾ ಸೊಗಸಾಗಿರುವುದು. *ಇದು ನವಿಲಿನ ಜಾತಿಯ ಸ್ವಭಾವವನ್ನೇ ಯಥಾವತ್ತಾಗಿ ವರ್ಣಿಸುವುದರಿಂದ ಜಾತ್ಯಲಂಕಾರ.*. ಮಳೆಗಾಲ ಬಂದೊಡನೆ ನವಿಲುಗಳು ತುಂಬಾ ಆನಂದದಿಂದ ಕತ್ತೆತ್ತಿ ಹಾಡುತ್ತ ಗರಿಗೆದರಿ ಕುಣಿಯುವುದು ಅವುಗಳ ಜಾತಿಸ್ವಭಾವ. ಇಲ್ಲಿ ಕವಿ ಇದ್ದುದನ್ನು ಇದ್ದಂತೆಯೇ ಬಣ್ಣಿಸಿದ್ದಾನೆ; ತನ್ನ ಕಲ್ಪನೆಯಿಂದ ಯಾವ ಅಂಶವನ್ನೂ ಸೇರಿಸಲು ಹೋಗಿಲ್ಲ. ಇಂಗ್ಲಿಷ್‌ನಲ್ಲಿ Parts of speech & noun ಮುಂತಾದ ಎಂಟೆನ್ನುವಂತೆ ಸಂಸ್ಕೃತದಲ್ಲಿ ‘ಜಾತಿ’, ‘ಗುಣ’, ‘ಕ್ರಿಯಾ’, ‘ದ್ರವ್ಯ’ಗಳ ವಾಚಕಗಳೆಂದು ನಾಲ್ಕಾಗಿ ವಿಭಾಗಮಾಡುವುದು ವ್ಯಾಕರಣ ಸಂಪ್ರದಾಯ.

೮. ಕಣ್ಣುಗಳನ್ನು (ಆನಂದದಿಂದ) ಅರ್ಧ ಮುಚ್ಚಿ, ಕಾಡಾನೆಯು ಮೆಚ್ಚಾದ ಸಲ್ಲಕೀಲತೆಯ ಚಿಗುರನ್ನು ಮೆಲ್ಲದೆಯೇ ತನ್ನ ಹೆಣ್ಣಾನೆಯ ತುದಿಬಾಲದಿಂದ ತನ್ನ ನಿಡಿದಾದ ಸೊಂಡಿಲನ್ನು ಸವರಿಸಿಕೊಳ್ಳತ್ತಾ ಕಾಮವಶವಾಗಿದ್ದಿತು. *ಇಲ್ಲಿ ಕಾಮಾವಸ್ಥೆಯಲ್ಲಿರುವ ಮದ್ದಾನೆಯ ಸ್ವಾಭಾವಿಕ ಕ್ರಿಯೆಗಳನ್ನೇ ಬಣ್ಣಿಸಿರುವುದರಿಂದ ಇದು ಕ್ರಿಯಾಸ್ವಭಾವೋಕ್ತಿ.*

III) ಗುಣಸ್ವಭಾವಾಖ್ಯಾನ

ಅಮೀಳನಮಂ ಕಣ್ಗಳೊಳಾ ಮನದೊಳಗೊಸಗೆಯಂ ಶರೀರದೊ[7]ಳೆತ್ತಂ

ರೋಮಾಂಚ-ಕಂ[8]ಚುವಂ ಮದಿರಾ-ಮದವಾ[9]ಗಿಸೆ ತೆಗೞ್ಪನಾಕೆಯ ನುಡಿಯೊಳ್ ||೯||

IV) ದ್ರವ್ಯಸ್ವಭಾವಾಖ್ಯಾನ

ತಳ-ಮಿತ-ಮಧ್ಯೆಯನಾಯತ-ವಿಳೋಳ-ಲೋಚನೆಯನುನ್ನತ-ಸ್ತನ-ಯುಗೆಯಂ |

ಲಳಿತ-ವಿಳಾಸಿನಿಯಂ ಕೋಮಳಾಂಗಿಯಂ ಪೃಥು-ನಿತಂಬ-ಬಿಂಬೆಯ ನು[10]ೞದಂ ||೧೦||

 

ಅತಿಶಯ-ಧವಳ-ಧರಾಧಿಪ-ಮತದಿಂದ ಜಾತಿಯೆಂಬಳಂಕಾರಮನಿಂ- |

ತತಿ-ನಿಪುಣರರಿಗೆ ತೋರ್ಪೆಂ ಶ್ರುತಿ-ಸುಭಗಮೆನಿಪ್ಪ ರೂಪಕಾಲಂಕೃತಿಯಂ ||೧೧||

೯. ಮದ್ಯದ ಮದವು ಆಕೆಯ ಕಣ್ಣುಗಳಲ್ಲಿ ಆಮೀಲನವನ್ನೂ (=ಮುಚ್ಚುವಿಕೆಯನ್ನೂ), ಮನದಲ್ಲಿ ಅನುರಾಗವನ್ನೂ, ಮೈಯಲ್ಲಿ ರೋಮಾಂಚವೆಂಬ ಕುಪ್ಪಸವನ್ನೂ, ನುಡಿಯಲ್ಲಿ ತೊದಲನ್ನೂ ಉಂಟುಮಾಡಿರಲು…. *ಮದ್ಯಪಾನದ ಫಲವಾಗಿ ಚೆಲುವೆಯಲ್ಲಿ ಉಂಟಾದ ಗುಣವಿಕಾರವನ್ನು ಇಲ್ಲಿ ವರ್ಣಿಸಿರುವುದರಿಂದ ಇದು ಗುಣ ಸ್ವಭಾವೋಕ್ತಿ.*

೧೦. ಬಡನಡುವಿನವಳೂ, ವಿಶಾಲ ಚಂಚಲ ನೇತ್ರೆಯೂ, ಉನ್ನತ ಕುಚೆಯೂ, ಮನೋಹರೆಯೂ ಆ ಸುಕುಮಾರಿಯೂ ಆದ ಗುರುನಿತಂಬಿನಿಯನ್ನು ಅವನು ತೊರೆದನು. *ಇಲ್ಲಿ ಹೆಣ್ಣಿನ ಅಂಗಾಂಗದ ವಾಸ್ತವಿಕ ವರ್ಣನೆಯಿರುವುದರಿಂದ ಇದು ದ್ರವ್ಯ ಸ್ವಭಾವೋಕ್ತಿ. ದ್ರವ್ಯ-ಪದಾರ್ಥಸ್ವರೂಪ’.*

೧೧. ಬುದ್ಧಿವಂತರು ‘ಜಾತಿ’ಯೆಂಬ ಅಲಂಕಾರ ಈ ರೀತಿಯೆಂದು ನೃಪತುಂಗನ ಮತದಂತೆ ತಿಳಿಯಬೇಕು. ಮುಂದೆ ಶ್ರವಣಮಧುರವಾದ ರೂಪಕಾಲಂಕಾರವನ್ನು ತೋರಿಸುವೆನು. *‘ಕವಿಮಾರ್ಗ’ವನ್ನು ಬರೆದವನೊಬ್ಬ; ಅದನ್ನು ಸಂಸ್ಕರಿಸಿ ‘ಕವಿರಾಜಮಾರ್ಗವನ್ನು ಬರೆದವನು ಇನ್ನೊಬ್ಬ’ನೆಂಬ ಆಧುನಿಕ ವಾದವನ್ನು ನಿರಾಕರಿಸಲು ಈ ಒಂದು ಪದ್ಯದ ಸಾಕ್ಷ್ಯವೇ ಪ್ರಬಲ ಪ್ರಮಾಣವೆನಿಸಬಹುದಾಗಿದೆ. ಒಂದೇ ಪದ್ಯದ ಮೊದಲರ್ಧವನ್ನು ಪರಿಷ್ಕರ್ತನು ಬರೆದಿರಬೇಕೆಂದೂ (ನೃಪತುಂಗನ ನಾಮಾಂಕಿತವಿರುವುದರಿಂದ), ಉತ್ತರಾರ್ಧವನ್ನು ಮೂಲ ಲೇಖಕನು ಬರೆದಿರಬೇಕೆಂದೂ (‘ತೋರ್ಪ’ ಎಂದು ಉತ್ತಮಪುರುಷ ಸ್ಪಷ್ಟವಾಗಿ ಪ್ರಯುಕ್ತವಾಗಿರುವುದರಿಂದ) ಕಲ್ಪಿಸಿದರೆ ವಿಶ್ವಾಸಾರ್ಹವೆನಿಸೀತೆ? ಆದ್ದರಿಂದ ಸಂದಿಲ್ಲದಂತೆ ಐಕ್ಯಸೂತ್ರವಿರುವ ಈ ಗ್ರಂಥದ ಇಡಿಯ ರಚನೆ ಒಬ್ಬನೇ ಗ್ರಮಥಕಾರನದೆಂಬುದನ್ನು ಶಂಕಿಸಬಾರದು.*


* ಭೇದಂ ‘ಸೀ’.

[1] ವಿಬುಧಾಸ್ಪದಮಂ ‘ಅ, ಬ’.

[2] ರತಿಶಯ ‘ಅ’.

[3] ‘ಲ’ ‘ಅ’ ದಲ್ಲಿ ಲುಪ್ತ.

[4] ಕೇವಲಮೇ ‘ಅ, ಬ’.

[5] ಹಕಿತಶಾಬಜಾತಿಂಕ ಕಳಾಪಂ ‘ಅ’.

[6] ನವಿಲಾಟಂ  ‘ಪಾ’; ‘ಅ, ಬ, ಸೀ’, ಮೈಸೂರು ಆವೃತ್ತಿಯಲ್ಲಿ ‘ನವಿಲಾದಂ’ ಎಂದೇ ಇದೆ.

[7] ದೊಳಿತ್ತಂ ‘ಅ’.

[8] ಕಂಚುಕಂ ‘ಪಾ’. ಕಂಚು ಕಂ ‘ಬ’ ಕಂಭುವಂ ‘ಅ’.

[9] ವಾಗಿಸಿ ‘ಅ’.

[10] ನುಳಿದಂ ‘ಅ’.