ಮನೆಗಳಲ್ಲಿ ಮಹಡಿಮನೆ ಹೇಗೊ ಹಾಗೆ
ಮರಗಳಲ್ಲಿ ಇದು ಮಹಡಿಮರ,
ಇದರುಪ್ಪರಿಗೆಯಲ್ಲೇ ಎಲ್ಲ ಸಂಸಾರ.

ನೆಲಕೂ ಇದಕ್ಕು ವ್ಯವಹಾರ
ಬಲುದೂರ.
ಬೇರೊ ಒಳಗೊಳಗೇ ಹತ್ತುದಿಕ್ಕಿಗೆ ಹೊರಟ ರಾಯಭಾರ.

ಆದರೂ, ಉದ್ದನೆಯ ಮೊರಡು ದಿಂಡಿನ ಒಳಗೆ
ಮೇಲಕ್ಕೆ ನೀರೇರಿಸುವ ಪಂಪು ಕಾಣದು ನಮಗೆ,
ನೆಲವೆ ಬೆರಗಾಗುವುದು ಎತ್ತರದಲ್ಲಿ ಸುತ್ತಲೂ
ತುಂಬಿ ತೂಗುವ ಗೊನೆಗೆ.

ಇದಕ್ಕಿಲ್ಲ ಮಾಗಿ ಬಂದಾಗ ಎಲೆ ಕಳಚಿ ವಸಂತ-
ನಾರೈಕೆಯಲ್ಲಿ ಚಿಗುರುವ ಹಂಗು.
ಇದು ಸರ್ವತಂತ್ರ ಸ್ವತಂತ್ರ ;
ನೆಟ್ಟನೆಯೆ ಮೇಲೆದ್ದು ಎತ್ತರದಲ್ಲಿ ಎಲ್ಲೋ ಥಟ್ಟನೆಯೆ ಗರಿಬಿಚ್ಚಿ
ನಿಲ್ಲುವ ವಿಚಿತ್ರ.

ಸಂಜೆ ಮುಂಜಾನೆಯಲಿ ಬಾನ ಹಿನ್ನೆಲೆಯಲ್ಲಿ
ಯಾರೋ ಹಾಕಿರುವ ಕಸೂತಿಯ ನೆನಪು.
ಇದರ ಗರಿಗಳ ಮೇಲೆ ಬಿಸಿಲು ಬೆಳುದಿಂಗಳಿನ
ಹೊಳಪು-ಝಳಪು.
ಸದಾ ಗರಿಗೆದರಿ ನಿಂತ ನವಿಲಿನ ಒನಪು.

ಇದ್ದಕ್ಕಿದ್ದಂತೆ ಗರಿಗಳ ಕಳಚಿ ಧಡಾರನೆ ಎಸೆದು
ನೀಲಿಯಲಿ ನಸುನಕ್ಕು ನಿಲ್ಲುವ
ಭಂಗಿಯೇ ಭಂಗಿ.
ಸಂಗದೊಳಗಿದ್ದೂ ಸದಾ ನಿಸ್ಸಂಗಿ-
ಯಾವ ಕ್ಷಣವಾದರೂ ಕಟ್ಟಿಕೊಂಡದ್ದೆಲ್ಲ
ಬಿಟ್ಟು ನಿಲ್ಲಲು ಸಿದ್ಧ
ನೆನಪಾಗುವರು ಕ್ರಿಸ್ತ-ಬುದ್ಧ.