ಮನುಷ್ಯ ಅಳುತ್ತಾನೆ; ಪ್ರಾಣಿಗಳೂ ಅಳುತ್ತವೆ. ಆದರೆ ಮನುಷ್ಯ ಮಾತ್ರ ನಗಬಲ್ಲ!

ನಕ್ಕಾಗ ಮೈ ಹಗುರವಾಗಿ ಮನಸ್ಸು ನಿರ್ಮಲವಾಗುತ್ತದೆ ಜಡತೆ ಹರಿದು ಹೊಸ ಚೇತನ ಹುಟ್ಟುತ್ತದೆ.

ಎಲ್ಲರೂ ನಗುವರು; ಆದರೆ ನಗಿಸಬಲ್ಲವರು ಕೆಲವರು ಮಾತ್ರ. ಅದರಲ್ಲಿಯೂ ರಾಜಕಾರಣದ ಭಾರದಿಂದ ಬೇಸತ್ತ ಅರಸರನ್ನು ನಗಿಸಬೇಕಾದರೆ, ಅದಕ್ಕೆ ವಿಶೇಷವಾದ ವರವನ್ನೇ ಪಡೆದಿರಬೇಕು!

ನಗು ಒಬ್ಬ ಮನುಷ್ಯನ ಸ್ವಭಾವದ ಕನ್ನಡಿಯಾಗಬಲ್ಲದು. ಅವನು ಏನನ್ನು ನೋಡಿ ನಗುತ್ತಾನೆ, ಯಾರನ್ನು ಹಾಸ್ಯ ಮಾಡುತ್ತಾನೆ, ಏಕೆ ಹಾಸ್ಯ ಮಾಡುತ್ತಾನೆ-ಇವೆಲ್ಲ ಅವನ ಮನಸ್ಸು ಎಷ್ಟು ಬೆಳೆದಿದೆ ಎಂಬುದನ್ನು ತೋರಿಸುತ್ತವೆ. ತಮ್ಮ ತಪ್ಪಿಲ್ಲದೆ ಕಷ್ಟದಲ್ಲಿರುವವರನ್ನು, ಕುಂಟರನ್ನು, ಕರುರುಡರನ್ನು, ದಾರಿಯಲ್ಲಿ ಜಾರಿ ಬಿದ್ದವರನ್ನು, ನೋಡಿ ನಗುವವನು ಮನಸ್ಸು ಪಕ್ವವಾಗಿಲ್ಲದವನು. ಜಂಬದಿಂದ ಅಥವಾ ಇತರರ ಮನಸ್ಸನ್ನು ನೋಯಿಸಲೆಂದೇ ಹಾಸ್ಯಮಾಡುವವನು ಮನಸ್ಸು ಪಕ್ವವಾಗಿಲ್ಲದವನು. ಇತರರ ಅಹಂಕಾರವನ್ನು ತೋರಿಸುವ, ಅವನನ್ನು ತಿದ್ದುವ ಹಾಸ್ಯ, ಮನಸ್ಸಿನಲ್ಲಿ ವಿಷವಿಲ್ಲದ ಹಾಸ್ಯ ಒಳ್ಳೆಯ ಹಾಸ್ಯ.

ಹಿಂದಿನ ಕಾಲದ ರಾಜರ ಆಸ್ಥಾನಗಳಲ್ಲಿ ರಾಜರನ್ನು ನಗಿಸುವ ಉದ್ದೇಶಕ್ಕಾಗಿಯೇ ವಿದೂಷಕರು ನೇಮಕವಾಗಿರುತ್ತಿದ್ದರು. ಅವರಲ್ಲಿ, ಸಮಯಕ್ಕನುಸಾರವಾಗಿ ವಿನೋದಪರವಾದ ಮಾತು- ಕೃತಿಗಳಿಂದ ರಾಜನ ಮತ್ತು ಪರಿವಾರದವರ ಮನರಂಜಿಸಿ, ತುಂಬ ಪ್ರಸಿದ್ಧನಾದವನು ತೆನಾಲಿ ರಾಮಕೃಷ್ಣ, ಇವನು ಎಷ್ಟು ಪ್ರಸಿದ್ಧನಾದ ಎಂದರೆ, ಯಾರನ್ನಾದರೂ ಹಾಸ್ಯಗಾರ ಎಂದು ವರ್ಣಿಸಬೇಕಾದರೆ “ಅವನು ತೆನಾಲಿ ರಾವಕೃಷ್ಣ” ಎನ್ನುವುದೇ ವಾಡಿಕೆಯಾಗಿದೆ.

ನಿರಾಲೋಚನೆಯ ಹುಡುಗ

ಹದಿನಾರನೇ ಶತಮಾದ ಆದಿಭಾಗದಲ್ಲಿ ರಾಮಕೃಷ್ಣ ಆಂಧ್ರದ ಗಾರ್ಲಪಾಡು ಗ್ರಾಮದಲ್ಲಿ ಜನಿಸಿದ. (ಇವನು ತೆನಾಲಿಯಲ್ಲಿ ಹುಟ್ಟಿದ ಎಂದೂ ಕೆಲವರು ಹೇಳುತ್ತಾರೆ.) ತಂದೆ ರಾಮಯ್ಯ, ರಾಮಕೃಷ್ಣ ತೀರ ಚಿಕ್ಕವನಿದ್ದಾಗಲೇ ಮರಣಹೊಂದಿದ. ಇದರಿಂದ ಪಾಪ, ಹುಡುಗ ತಂದೆಯ ಪ್ರೀತಿಯನ್ನು ಅನುಭವಿಸಲಿಲ್ಲ! ತಾಯಿ ಲಕ್ಷ್ಮಮ್ಮ ತನ್ನ ಹುಟ್ಟೂರಾದ ತೆನಾಲಿಗೆ ತನ್ನ ಸೋದರನ ಬಳಿ ಹೋಗಿ ಸೇರಬೇಕಾಯಿತು. ರಾವಕೃಷ್ಣ ಅಲ್ಲೇ ಬೆಳೆದು ದೊಡ್ಡವನಾದುದರಿಂದ ತೆನಾಲಿ ರಾಮಕೃಷ್ಣನಾದ.

ಮಗನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂದು ತಾಯಿಯ ಆಸೆ. ಆದರೆ ಅದು ವೈಷ್ಣವರು ಪ್ರಬಲರಾಗಿದ್ದ ಕಾಲ. ಅನೇಕರಿಗೆ ಇನ್ನೂ ಜಾತಿಮತಗಳ ಸಣ್ಣ ಭಾವನೆಗಳು ಇದ್ದವು. ತಾವು ಈ ಜಾತಿ, ಅವನು ಆ ಜಾತಿ, ಆದುದರಿಂದ ತಾನು ಮೇಲು, ಅವನು ಕೀಳು, ಎಂಬ ತಪ್ಪು ಭಾವನೆಗಳು ಇದ್ದವು. ಸುತ್ತ ಮುತ್ತ ತುಂಬಿದ್ದ ವೈಷ್ಣವ ಬ್ರಾಹ್ಮಣ ಗುರುಗಳಾರೂ ಶೈವನಾದ ರಾಮಕೃಷ್ಣನಿಗೆ ವಿದ್ಯೆ ಕಲಿಸಲು ಒಪ್ಪಲಿಲ್ಲ.

ರಾಮಕೃಷ್ಣನಿಗೆ ಇದರಿಂದ ಏನೂ ವ್ಯಸನವಾಗಲಿಲ್ಲ. ಬೆಳಗಿನಿಂದ ಸಂಜೆಯವರೆಗೆ ತುಂಟ ಹುಡುಗರ ಸಹವಾಸದಲ್ಲಿ ತೋಟಗಳಿಗೆ ನುಗ್ಗಿ ಮಾವಿನಕಾಯಿ, ಹುಣಸೇಕಾಯಿ, ಸೀಬೆಕಾಯಿ ಕದ್ದು ತಿಂದು, ಕಂಡ ಕಂಡ ಬಾವಿ ನೀರು ಕುಡಿದು ಹಾಯಾಗಿರುತ್ತಿದ್ದ.

ತನ್ನ ಮಗನಿಗೆ ವಿದ್ಯೆಯ ಗಂಧವೇ ಇಲ್ಲವಲ್ಲ ಎಂದು ಅವನ ತಾಯಿಗೆ ಅಪಾರ ದುಃಖ. ಆಕೆ ಕಂಡವರ ಮನೆಗಳಲ್ಲಿ ಕೂಲಿ ಮಾಡಿ ಬಂದ ಹಣದಿಂದ ತನ್ನ ಮತ್ತು ತನ್ನ ಮಗನ ಹೊಟ್ಟೆ ತುಂಬಿಸಿತೊಡಗಿದಳು.

ಹುಡುಗನ ಹಂಬಲ

ಹತ್ತು ವರ್ಷದ ಹುಡುಗನಾಗಿ ಬೆಳೆಯುವ ಹೊತ್ತಿಗೆ ರಾಮಕೃಷ್ಣನಿಗೆ ತಿಳುವಳಿಕೆ ಬಂತು. ಆಗಿನ ಕಾಲದಲ್ಲಿ ವಿದ್ಯೆ ಎಂದರೆ ವೇದಗಳು, ಉಪನಿಷತ್ತುಗಳು, ಶಾಸ್ತ್ರ ಗ್ರಂಥಗಳು-ಇವನ್ನು ಅಧ್ಯಯನ ಮಾಡುವುದು. ತಾನು ಅಂತಹ ಗ್ರಂಥಗಳನ್ನು ಓದುವುದಿರಲಿ, ಅಕ್ಷರವನ್ನೂ ಕಲಿಯಲಿಲ್ಲವಲ್ಲ ಎಂದು ಅವನಿಗೆ ನಾಚಿಕೆಯಾಯಿತು. ದುಃಖವಾಯಿತು. ತಾನು ಅನಕ್ಷರಸ್ಥನಾಗಿಯೇ ಇದ್ದೇನೆ ಎನ್ನುವುದನ್ನು ಮನಗಂಡ.

ರಾಮಕೃಷ್ಣ, “ನನ್ನನ್ನು ದಯವಿಟ್ಟು ತಮ್ಮ ಶಿಷ್ಯನಾಗಿ ಸ್ವೀಕರಿಸಿ; ತಮ್ಮ ಸೇವೆ ಮಾಡಿ ಗುರುದಕ್ಷಿಣೆ ಮುಟ್ಟಿಸುತ್ತೇನೆ” ಎಂದು ವಿನಮ್ರನಾಗಿ ಅನೇಕ ಪಂಡಿತರನ್ನು ಬೇಡಿಕೊಂಡ. ಆದರೆ ಅವರು ಇವನನ್ನು ಬಾಯಿಗೆ ಬಂದಂತೆ ಬೈದು ಆಶ್ರಮಗಳಿಂದ, ಶಾಲೆಗಳಿಂದ ಹೊರಕ್ಕೆ ಹಾಕಿದರು!

ತೆನಾಲಿಯಲ್ಲಿ ಕೆಲವೇ ಮಂದಿ ಶೈವ ಬ್ರಾಹ್ಮಣರಿದ್ದರು. ಅವರೂ ಬಡತನದಲ್ಲಿ ಕಷ್ಟಪಡುತ್ತಿದ್ದರು. ಅವರ ಬಳಿಗೆ ಹೋಗಿ ರಾಮಕೃಷ್ಣ ಬೇಡಿಕೊಂಡಾಗ, “ಹೋಗಯ್ಯ ಹೋಗು; ಈ ವಿದ್ಯೆಗೋಸ್ಕರ ಏಕೆ ಕಷ್ಟಪಡುತ್ತಿ? ಭಿಕ್ಷಾಟನೆ ಮಾಡಿ ಹೊಟ್ಟೆ ಹೊರೆದುಕೊ” ಎಂದುಬಿಟ್ಟರು.

ವಿದ್ಯೆ ಸಂಪಾದಿಸುತ್ತೇನೆ

ರಾಮಕೃಷ್ಣನಿಗೆ ಇವರೆಲ್ಲರ ಮೇಲೆ ಬಹು ಕೋಪ, ತಿರಸ್‌ಆರ, ಬೇಸರ ಉಂಟಾಯಿತು. ಇವರೆಂತಹ ಸ್ವಾರ್ಥಿಗಳು! ವಿದ್ಯಾದಾನ ಮಾಡದ ಇವರ ಪಾಂಡಿತ್ಯಕ್ಕೆ ಬೆಲೆಯೇನು? ಎಂದುಕೊಳ್ಳುತ್ತ, “ಇಂನ್ನೆಂದಿಗೂ ವಿದ್ಯೆ ಹೇಳಿಕೊಡಿ ಎಂದು ಯಾರನ್ನೂ ಬೇಡುವುದಿಲ್ಲ. ನಾನೇ ಪ್ರಯತ್ನ ಮಾಡಿ ದಿನನಿತ್ಯದ ವ್ಯವಹಾರಕ್ಕೆ ತಕ್ಕಷ್ಟು ವಿದ್ಯೆ ಸಂಪಾದಿಸಿಕೊಳ್ಳುತ್ತೇನೆ” ಎಂದು ನಿರ್ಧರಿಸಿದ.

“ಅಮ್ಮ, ನಾನು ವಿದ್ಯೆ ಕಲಿಯಲು ಹೋಗುತ್ತೇನೆ. ಆಶೀರ್ವಾದ ಮಾಡು”. ಎಂದು ತಾಯಿಯ ಪಾದಕ್ಕೆ ರಾಮಕೃಷ್ಣ ನಮಸ್ಕರಿಸಿದ. ಆ ಮುಗ್ಧೆ ಮಗನಿಗೆ ಯಾರೋ ಸದ್ಗುರು ವಿದ್ಯಾಪಾರಂಗತನಾಗಿ ಮಹಾ ವಿದ್ವಾಂಸನಾಗು” ಎಂದು ಹಾರೈಸಿದಳು.

ಆದರೆ ರಾಮಕೃಷ್ಣ ಹೋದದ್ದು ಯಾವ ಗುರುವಿನ ಬಳಿಗೂ ಅಲ್ಲ. ಅವರನ ಗುರು, ಊರ ಪಾಠಶಾಲೆಯ ಗೋಡೆಗೆ ಆತು ನಿಂತುಕೊಳ್ಳುವುದು, ಒಳಗೆ ಗುರುಗಳು ಹೇಳಿಕೊಟ್ಟ ಪಾಠಗಳನ್ನು ಗಮನವಿಟ್ಟು ಕೇಳುವುದು, ಮನೆಗೆ ಬಂದು ತಾನು ಕಲಿತ ಪಾಠಗಳನ್ನು ತಾಯಿಯೆದುರು ಪುನರುಚ್ಚರಿಸುವುದು – ಇದು ಅವನ ದಿನಚರಿಯಾಯಿತು.

ಇಷ್ಟಕ್ಕೂ ಅವಕಾಶವಿಲ್ಲ

ಒಳ್ಳೆಯದೆಲ್ಲ ಬೇಗ ಕೊನೆಗೊಳ್ಳುವುದಂತೆ! ವಿದ್ಯಾರ್ಥಿಯೊಬ್ಬ ಒಂದು ದಿನ ರಾಮಕೃಷ್ಣನನ್ನು ನೋಡಿಬಿಟ್ಟ; ಅವನ “ಕಳ್ಳ! ಕಳ್ಳ!” ಎಂದು ಕೂಗಿಕೊಂಡಾಗ ಗುರುಗಳೂ ವಿದ್ಯಾರ್ಥಿಗಳೂ ಶಾಲೆಯಿಂದಾಚೆಗೆ ಓಡಿಬಂದು ರಾಮಕೃಷ್ಣನನ್ನು ಸುತ್ತಗಟ್ಟಿಬೆಟ್ಟರು.

ಗುರುಗಳು ಮಹಾ ಕೋಪದಿಂದ “ಯಾಕೋ, ನಿನಗೆ ಬೇರೆ ಕೆಲಸವಿಲ್ಲವೇ?” ಪಾಠಶಾಲೆಯ ಬಳಿ ಅದೇಕೆ ಸುಳಿದಾಡುತ್ತಿರುತ್ತೀಯೆ?” ಎಂದು ಕೇಳಿದರು. ರಾಮಕೃಷ್ಣ ಅವರಡಿಗಳಿಗೆ ಎರಗಿ ” ನಾನು ವಿದ್ಯೆಗೋಸ್ಕರ ಬಂದೆ” ಎಂದು ಹೇಳಿದ. ಅಳುತ್ತಾ ತನ್ನ ಕಥೆಯನ್ನು ಹೇಳಿಕೊಂಡ.

ಹುಡುಗನಿಗೆ ವಿದ್ಯೆ ಎಂದರೆ ಎಷ್ಟು ಪ್ರೀತಿ, ಅದಕ್ಕಾಗಿ ಎಷ್ಟು ಕಷ್ಟಪಡುತ್ತಿದ್ದಾನೆ ಎಂದು ಕೇಳಿ ಉಪಾಧ್ಯಾಯರಿಗೂ ಅವನ ವಿಷಯದಲ್ಲಿ ಮರುಕ ಉಂಟಾಯಿತು. ಅಭಿಮಾನ ಬಂದಿತು.

ಆದರೆ ಅವರೂ ಏನೂ ಮಾಡುವಂತಿರಲಿಲ್ಲ. ಮತದ ತಪ್ಪು ತಿಳುವಳಿಕೆ ಪಂಜರದಲ್ಲಿ ಅವರೂ ಸಿಕ್ಕಿ ಬಿದ್ದಿದ್ದರು.

ನಾನು ವಿದ್ಯೆಗೋಸ್ಕರ ಬಂದೆ

“ಮಗೂ, ನಿನ್ನಂತಹ ಶಿಷ್ಯನನ್ನು ಪಡೆಯಲು ಪುಣ್ಯಬೇಕು. ಆದರೆ ನಾನು ನಿನ್ನನ್ನು ಜಾತಿಭ್ರಷ್ಟನನ್ನಾಗಿ ಮಾಡುವರು! ಶಾಲೆಯ ಹತ್ತಿರ ಮತ್ತೆ ಬರಬೇಡ, ನಿನಗೆ ತೊಂದರೆ ಕೊಟ್ಟಾರು… ಮುಂದೊಂದು ದಿನ ನೀನು ಮಹಾ ವಿದ್ವಾಂಸನಾಗುತ್ತೀಯೆಂದು ನನ್ನ ಮನಸ್ಸು ನುಡಿಯುತ್ತಿದೆ. ನನ್ನ ಪೂರ್ಣಾರ್ಶೀವಾದವೊಂದೇ ನಿನಗೆ ನಾನು ಕೊಡಬಲ್ಲವಸ್ತು!” ಎನ್ನುತ್ತ ರಾಮಕೃಷ್ಣನ ತಲೆಯ ಮೇಲೆ ಕೈಯಿರಿಸಿ ಹೊರಟುಹೋದರು.

ಒಂದು ಕಥೆ

ತನಗೆ ವಿದ್ಯೆ ಹೇಳಿಕೊಡುವವರು ಯಾರೂ ಇಲ್ಲ ಎಂದು ಪರಿತಪಿಸುತ್ತಿದ್ದ ಹಡುಗನೇ ಪ್ರಸದ್ಧ ವಿದ್ವಾಂಸನಾದ, ರಾಜನ ಆಸ್ಥಾನದಲ್ಲಿ ಮನ್ನಣೆ ಪಡೆದ.

ಇದು ಹೇಗೆ ಸಾಧ್ಯವಾಯಿತು?

ದೈವ ಕೃಪೆಯಿಂದ ಎಂದು ಹೇಳುತ್ತಾರೆ ಹಲವರು, ಪ್ರಸಿದ್ಧ ವ್ಯಕ್ತಿಗಳ ವಿಷಯದಲ್ಲಿ ಅದ್ಭುತಗಳ ಕಥೆಗಳಿರುವಂತೆ ತೆನಾಲಿ ರಾಮಕೃಷ್ಣನ ವಿಷಯದಲ್ಲೂ ಕಥೆಗಳಿವೆ. ಬಹು ಜನರಿಗೆ ಪರಿಚಿತವಾಗಿರುವ ಒಂದು ಕಥೆ ಇದು.

ಉಪಾಧ್ಯಾಯರು ಅವನಿಗೆ ಮತ್ತೆ ಶಾಲೆಯ ಬಳಿ ಬರಬೇಡ ಎಂದು ಹೇಳಿ, ಆಶೀರ್ವಾದ ಮಾಡಿ ಹೊರಟು ಹೋದರಲ್ಲವೆ? ರಾಮಕೃಷ್ಣನಿಗೆ ಮುಂದೇನು ಮಾಡುವುದೆಂದು ತೋರಲಿಲ್ಲ. ತನ್ನ ದುರ್ದೈವವನ್ನು ಹಳಿದುಕೊಳ್ಳುತ್ತ, ದಿಕ್ಕು-ದೆಸೆ ತಿಳಿಯದೆ ನಡೆದ. ಒಂದು ದಟ್ಟ ಅಡವಿಯನ್ನು ಪ್ರವೇಶಿಸಿದ. ನಡೆದು ನಡೆದು ಸಾಕಾಯಿತು. ಒಂದು ಪುರಾತನ ಮುಂದಿರದ ಎದುರು ಕುಳಿತು, ಹುಡುಗ ಅಳಲಾರಂಭಿಸಿದ. ಆಗ ಅಲ್ಲಿಗೊಬ್ಬ ಸಾಧು ಬಂದ.

“ತಮ್ಮಾ, ಯಾರು ನೀನು? ಈ ಭಯಂಕರ ಕಾಡಿನಲ್ಲಿ ಹೀಗೇಕೆ ಅಳುತ್ತ ಕುಳಿತ್ತಿದ್ದೀಯೆ? ನಿನಗೆ ಬಂದಿರುವ ಕಷ್ಟವಾದರೂ ಏನು, ನನ್ನಲ್ಲಿ ನಿಸ್ಸಂಕೋಚವಾಗಿ ಹೇಳಿಕೊ. ಸಾಧ್ಯವಾದರೆ ಪರಿಹರಿಸುತ್ತೇನೆ” ಎಂದು ಆ ಸಾಧು ಹೇಳಿದ.

ರಾಮಕೃಷ್ಣನು, “ಮುನಿವರ್ಯರೇ ನಾನೊಬ್ಬ ತಂದೆ ಇಲ್ಲದ ಹುಡುಗ, ಬಡವಳಾದ ತಾಯಿಗೆ ನಾನೇ ಆಧಾರ. “ವಿದ್ಯಾಹೀನನು ಹದ್ದು ಕಾಗೆಗಳಿಗೆ ಸಮಾನ” ಎಂದು ಆಕೆ ಹೇಳುತ್ತಲೆ ಇರುತ್ತಾಳೆ. ಆದರೆ ನಮ್ಮೂರಿನಲ್ಲಿ ನನಗೆ ಯಾರೂ ಪಾಠ ಹೇಳಿಕೊಡುವುದಿಲ್ಲ. ತಾವಾದರೂ ನನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡು, ವಿದ್ಯಾದಾನ ಮಾಡುವ ಕೃಪೆ ತೋರಬೇಕು” ಎನ್ನುತ್ತ ಆ ತಪಸ್ವಿಯ ಕಾಲುಕಳನ್ನು ಭದ್ರವಾಗಿ ಹಿಡಿದುಕೊಂಡ.

ಆಗ ಆ ತಪಸ್ವಿ ಹೇಳಿದ – “ಮಗೂ, ಈ ವಯಸ್ಸಿನಲ್ಲಿ ಪ್ರಾರಂಭಿಸಿ ನೀನು ಅಪಾರ ವಿದ್ಯಾ ಸಂಪತ್ತನ್ನು ಪಡೆಯುವುದು ಸಾಧ್ಯವಿಲ್ಲ. ನಿನಗೆ ನಾನು ಇನ್ನೊಂದು ದಾರಿ ತೋರುತ್ತೇನೆ. ಅದರಂತೆ ನಡೆದರೆ ನಿನ್ನ ಇಷ್ಟಾರ್ಥ ಸಿದ್ಧಿಯಾಗುವುದು.

“ಇದೋ ಇಲ್ಲಿ ಕಾಣುತ್ತಿದೆಯಲ್ಲ ಈ ದೇವಸ್ಥಾನ, ಇದರ ಅಧಿದೇವತೆ ಮಹಾಮಾತೆ ಕಾಳಿಕಾದೇವಿ. ಭಕ್ತಿಯಿಂದ ಬೇಡಿಕೋಂಡವರಿಗೆ ಆಕೆ ಸುಪ್ರಸನ್ನಳಾಗಿ ವರವನ್ನು ಕೊಡುತ್ತಾಳೆ. ಆ ತಾಯಿಯನ್ನು ಒಲೈಸಿಕೊಳ್ಳುವ ಬೀಜಮಂತ್ರವನ್ನು ನಾನು ನಿನಗೆ ಉಪದೇಶಿಸುತ್ತೇನೆ. ಅದನ್ನು ನೀನು ಹನ್ನೊಂದು ಕೋಟಿ ಸಲ ಭಕ್ತಿಯಿಂದ ಜಪಿಸಬೇಕು. ಆಕೆ ಪ್ರತ್ಯಕ್ಷಳಾಗುವಳು. ಆದರೆ ಆಕೆಯ ಘೋರ ರೂಪಕ್ಕೆ ನೀನು ಹೆದರಬೇಡ.

“ನೀನು ಆಕೆಯ ಅನುಗ್ರಹದಿಂದ ಮಹಾ ವಿದ್ವಾಂಸನಾಗುವೆ. ನಿನಗೆ ಧೈರ್ಯ ಸ್ಥೈರ್ಯಗಳನ್ನು ಕರುಣಿಸಲಿ!”

ಹೀಗೆಂದ ಆ ಸಾಧು, ರಾಮಕೃಷ್ಣನ ಕಿವಿಯಲ್ಲಿ ಬೀಜಮಂತ್ರವನ್ನು ಉಪದೇಶಿಸಿ ಅಲ್ಲಿಂದ ಹೊರಟುಹೋದ.

ಕಾಳಿಯ ಭಕ್ತ

ರಾಮಕೃಷ್ಣ ಸರೋವರದಲ್ಲಿ ಮಿಂದು, ಮಡಿಯುಟ್ಟು, ಪತ್ರಪುಷ್ಪಗಳನ್ನಾಯ್ದು ಗುಡಿಯೊಳಕ್ಕೆ ಪ್ರವೇಶಿಸಿದ. “ಜೈ ಮಹಾಕಾಳಿ! ಜೈ ಜೈ ಕಾಳಿಕಾಮಾತೆ!” ಎಂದು ಘೋಷಿಸುತ್ತಾ, ತಾಯಿಯ ಪಾದಕ್ಕೆ ಪುಷ್ಪ ಪತ್ರಗಳನ್ನರ್ಪಿಸಿ, ಸಾಷ್ಟಾಂಗ ನಮಸ್ಕಾರ ಮಾಡಿದ. ಅನಂತರ ಪದ್ಮಾಸನ ಹಾಕಿ ದೇವಿಯ ಮುಂದೆ ಕುಳಿತು ಕಣ್ಮುಚ್ಚಿ ಸಾಧು ತಿಳಿಸಿಕೊಟ್ಟ ಮಂತ್ರವನ್ನು ಪಠಿಸತೊಡಗಿದ.

ಹೇಳಿ ಕೇಳಿ ಹಾಳುಕಾಡು! ಹಾವುಗಳು, ಹಕ್ಕಿಗಳು, ಬಾವಲಿಗಳು, ನಾನಾ ಬಗೆಯ ಜಂತುಗಳಿಂದ ತುಂಬಿತ್ತು ಆ ಸ್ಥಳ. ಅಲ್ಲಿ ಕುಳಿತು ಹನ್ನೊಂದು ಕೋಟಿ ಸಾರಿ ಬೀಜಮಂತ್ರ ಜಪಿಸುವುದು ಸಾಮಾನ್ಯವೇ? ಹಾವುಗಳು ರಾಮಕೃಷ್ಣನ ಮೇಲೆ ಹರಿದಾಡಿದವು. ಹಕ್ಕಿಗಳು ಕುಕ್ಕಿದವು, ಕ್ರಿಮಿ-ಕೀಟಗಳು ಕಚ್ಚಿದವು. ಆದರೆ ದೃಢಮನಸ್ಸಿನಿಂದ ಕೂಡಿದ ಆ ಭಕ್ತ ಹನ್ನೊಂದು ದಿನಗಳ ಕಾಲ ಅಲುಗಾಡಲಿಲ್ಲ! ಹನ್ನೊಂದು ಕೋಟಿಯ ಮೇಲೆ ಹನ್ನೊಂದು ಬೀಜಮಂತ್ರಗಳು ಮುಗಿದ ಕೂಡಲೆ ಕಾಳಿಕಾಮಾತೆ ಸಹಸ್ರ ಮುಖಗಳೊಂದಿಗೆ ಭೀಕರ ರೂಪ ತಾಳಿ ಪ್ರತ್ಯಕ್ಷಳಾದಳು. “ರಾಮಕೃಷ್ಣಾ! ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಕಣ್ತೆರೆದು ನಿನಗೆ ಬೇಕಾದ ವರ ಕೇಳಿಕೋ”- ದೇವಿ ಹೀಗೆ ಹೇಳಿದಾಗ ರಾಮಕೃಷ್ಣ ಮೆಲ್ಲನೆ ಕಣ್ಣು ಬಿಟ್ಟು ನೋಡಿದ. “ಅಮ್ಮಾ! ನೀನು ಯಾರು?” ಎಂದು ಕೇಳಿದ.

“ಯಾರನ್ನು ನೀನು ಈ ಹನ್ನೊಂದು ದಿನ ಧ್ಯಾನಿಸಿದೆಯೋ ಆ ಕಾಳಿಕಾದೇವಿಯೇ ನಾನು. ನಿನ್ನ ಭಕ್ತಿಗೆ ಮೆಚ್ಚಿ ನಿನ್ನೆದುರು ಬಂದು ನಿಂತಿದ್ದೇನೆ”- ಆ ಮಹಾಮಾತೆ ಹೀಗೆಂದಾಗ ರಾಮಕೃಷ್ಣ ತನ್ನೆರಡೂ ಕಣ್ಣುಗಳನ್ನು ಮುಚ್ಚಿಕೊಂಡು ಆಕೆಗೆ ಸಾಷ್ಟಾಂಗ ನಮಸ್ಕರಿಸಿ ಅನಂತರ ಕಣ್ತೆರೆದು ನೋಡಿದ.

ಸಿಂಹಾರೂಢಳಾದ ಆಧಿಶಕ್ತಿ! ಸಹಸ್ರ ಕ್ರೂರ ಮುಖಗಳು! ಸಹಸ್ರ ಕೆನ್ನಾಲಿಗೆಗಳು! ಸಹಸ್ರ ಜೋಡಿ ಕೆಂಪು ಕಣ್ಣುಗಳು..!

ತನ್ನನ್ನು ನೋಡಿದ ಬಾಲಕ ಅದೆಷ್ಟು ಅಂಜುವನೋ ಎಂದು ನಿರೀಕ್ಷಿಸುತ್ತಿದ್ದ ದೇವಿಗೆ, ರಾಮಕೃಷ್ಣ ಎಳ್ಳಷ್ಟೂ ಹೆದರದೆ, ತನ್ನನ್ನೂ ತನ್ನ ವಾಹನವನ್ನೂ ಮತ್ತೆ ಮತ್ತೆ ನೋಡುತ್ತ ನಿಂತುದನ್ನು ಕಂಡು ಆಶ್ಚರ್ಯವಾಯಿತು!

ತಾಯೀ, ಒಂದು ಯೋಚನೆ ಬಂತು…..”

ಇದ್ದಕ್ಕಿದ್ದಂತೆಯೇ ರಾಮಕೃಷ್ಣ ನಗತೊಡಗಿದ; ಗಹಗಹಿಸಿ ನಕ್ಕ! ಅವನ ವಿಚಿತ್ರ ವರ್ತನೆ ಅರ್ಥವಾಗದ ಆದಿಮಾಯೆ ಕೇಳಿದಳು, “ರಾಮಕೃಷ್ಣ, ಇದೇನು ನಿನ್ನ ನಡವಳಿಕೆ? ಮಹಾಶೂರ ವೀರ ರಕ್ಕಸರೂ ಸಹ ನನ್ನನ್ನು ನೋಡಿ ಹೆದರಿ ನಡಗುತ್ತಾರೆ. ಅಂತಹುದರಲ್ಲಿ, ನೀನು ನನ್ನನ್ನು ನೋಡಿ ನಗುತ್ತಿರುವೆಯಲ್ಲ?”

ರಾಮಕೃಷ್ಣ, “ತಾಯೇ, ನಿನ್ನ ಅಸಂಖ್ಯಾತ ಮುಖಗಳನ್ನೂ ನಿನಗಿರುವ ಎರಡೇ ಕೈಗಳನ್ನೂ ಕಂಡು ಅದೇನೋ ನೆನಪಿಗೆ ಬಂತು, ನಕ್ಕುಬಿಟ್ಟೆ, ದಯಮಾಡಿ ಕ್ಷಮಿಸಬೇಕು” ಎಂದ.

ಕಾಳಿಕಾದೇವಿಗೆ ಕುತೊಹಲ ಕೆರಳಿತು. ಅವನಿಗೆ ನೆನಪಾದ, ನಗೆ ತುವಂತಹ ಆ ವಿಷಯ ಏನೆಂದು ತಿಳಿಸಬೇಕೆಂದು ಆಜ್ಞಾಪಿಸಿದಳು.

“ಮಹಾಮಾತೆ! ನಮಗಿರುವ ಒಂದೇ ಮುಖಕ್ಕೆ ನೆಗಡಿಯಾದಾಗ, ಮೂಗೊರೆಸಲು ಈ ಎರಡು ಕೈಗಳು ಸಾಲದಾಗುತ್ತವೆ. ನಿನಗೆ ನೆಗಡಿಯಾದರೆ ಈ ಸಹಸ್ರ ಮೂಗುಗಳಿಗೆ ನಿನ್ನ ಎರಡು ಕೈಗಳು ಸಾಕೇ ಎಂದು ಯೋಚಿಸಿ ನಗು ಬಂತು. ನನ್ನ ಉದ್ಧಟತನಕ್ಕೆ ಕ್ಷಮಾಪಣೆ ಬೇಡುತ್ತೇನೆ” ಎನ್ನುತ್ತ ರಾಮಕೃಷ್ಣ ಮತ್ತೊಮ್ಮೆ ಆಕೆಗೆ ಅಡ್ಡಬಿದ್ದು ಎದ್ದುನಿಂತ.

ಹುಡುಗನ ನಗುಮುಖ, ವಿನೋದಪರ ಸ್ವಭಾವ ಎರಡು ಕಾಳಿಕಾದೇವಿಗೆ ಮೆಚ್ಚುಗೆಯಾದವು. ತನ್ನ ತಪಸ್ಸಿನ ಗುರಿಯಾದ ವರವನ್ನು ಕೇಳಿಕೊಳ್ಳದೆ, ಹಗುರಾದ ಹಾಸ್ಯದ ಮಾತಾಡಿದ ಈ ಭಕ್ತನನ್ನು ಕಂಡು ತನ್ನ ಭಯಂಕರ ಸ್ವರೂಪ ಬದಲಾಯಿಸಿ ಹಸನ್ಮಖಿಯಾದಳು!

“ರಾಮಕೃಷ್ಣಾ, ನೀನು ನನ್ನನ್ನೇ ನಗಿಸಿಬಿಟ್ಟೆ! ಆದ್ದರಿಂದ ಇನ್ನು ಮುಂದೆ ಸಕಲ ವಿದ್ಯಾಪಾಂಡಿತ್ಯ ಹೊಂದಿ ಸಮಯೋಚಿತ ಮಾತುಗಳನ್ನಾಡುತ್ತ, ಜನತೆಯನ್ನು ನಗಿಸುತ್ತ ಮಹಾ ವಿನೋದಿ, ವಿಕಟಕವಿ ರಾಮಕೃಷ್ಣನೆಂದು ಪ್ರಸಿದ್ಧನಾಗುವೆ; ನಿನ್ನ ಹಾಸ್ಯ ಮನೋಭಾವದಿಂದ ನಿನಗೆ ರಾಜಮನ್ನಣೆ ಸಿಕ್ಕುತ್ತದೆ” ಎಂದು ಹರಸಿದಳು.

ಆದರೆ ರಾಮಕೃಷ್ಣನಿಗೆ ಈ ವರ ತೃಪ್ತಿ ನೀಡಿದಂತಿರಲಿಲ್ಲ; ಅನುಮಾನಗಳು ಬಾಧಿಸತೊಡಗಿದವು. ಬಾವಿಯೊಳಗಿನ ಕಪ್ಪೆಯಂತಿರುವ ತೆನಾಲಿ ಗ್ರಾಮದ ಮಂದಿಗೆ, “ಕತ್ತೆಗೇಕೆ ಕಸ್ತೂರಿ ಗಂಧ?” ಎಂದಂತೆ, ವಿನೋದ ರುಚಿಸೀತೇ? ಅವರ ಮಧ್ಯೆ ಇರಬೇಕಾದ ತನ್ನ ಮೇಲೆ ರಾಜ ದೃಷ್ಟಿ ಬೀಳುವುದಾದರೂ ಹೇಗೆ?

ಅವನ ಸಂಶಯವನ್ನು ಗ್ರಹಿಸಿದ ಮಾತೆ ನಗುತ್ತ, “ಯೋಚಿಸಬೇಡ ಮಗೂ, ದಕ್ಷಿಣ ದೇಶದಲ್ಲಿ ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯವಿದೆ; ಅಲ್ಲಿಗೆ ಹೋಗು. ಅರಸನನ್ನು ಒಲಿಸಿ ಆಸ್ಥಾನ ಕವಿಯಾಗುವೆ. ನಿನಗೆ ನನ್ನ ಆಶೀರ್ವಾದದ ಬಲವಿದೆ” ಎಂದು ನುಡಿದು ಅಂತರ್ಧಾನಳಾದಳು.

ಇದು ರಾಮಕೃಷ್ಣನ ವಿಷಯ ಪ್ರಸಿದ್ಧವಾದ ಒಂದು ಕಥೆ. ಶಾಲೆಗೆ ಹೋಗಲು ಸಾಧ್ಯವಾಗದ ಬಾಲಕ ಹೇಗೆ ವಿದ್ವಾಂಸನಾದ ಎಂಬ ಪ್ರಶ್ನೆಗೆ ಉತ್ತರವಾಗಿ ಒಂದು ಕಥೆ. ಇದು ಎಷ್ಟು ನಿಜವೋ, ಎಷ್ಟು ಸುಳ್ಳೋ! ಆದರೆ ಮುಂದೆ ರಾಜನ ಆಸ್ಥಾನದಲ್ಲಿ ತೆನಾಲಿ ರಾಮಕೃಷ್ಣನ ಎರಡು ಗುಣಗಳು ಎದ್ದುಕಂಡವು. ಒಂದು, ಹಾಸ್ಯಪ್ರಿಯತೆ, ಎಂತಹ ಸಂದರ್ಭದಲ್ಲಿಯೂ ಅದರೆ ಹಾಸ್ಯದ ಮುಖವನ್ನು ಕಾಣಬಲ್ಲವನಾಗಿದ್ದ ರಾಮಕೃಷ್ಣ. ಆದುದರಿಂದಲೇ ಪ್ರತಿ ಸನ್ನಿವೇಶವನ್ನೂ ಹೊಸ ರೀತಿಯಲ್ಲಿ ನೋಡುವುದು ಅವನಿಗೆ ಸಾಧ್ಯವಾಯಿತು. ಎರಡನೆಯದು, ಅವನ ದಿಟ್ಟತನ, ತಾನು ಎಂತಹ ಅಪಾಯದಲ್ಲಿದ್ದರೂ ಧೈರ್ಯವನ್ನು ಕಳೆದುಕೊಂಡವನಲ್ಲ ಅವನು. ಈ ಎರಡು ಗುಣಗಳು ಈ ಕಥೆಯಲ್ಲಿಯೂ ಕಾಣುತ್ತವೆ.

ಗೊಲ್ಲ!

ತಾಯಿಯೊಂದಿಗೆ ವಿಜಯನಗರಕ್ಕೆ ಬಂದ ತೆನಾಲಿ ರಾಮಕೃಷ್ಣ ರಾಜಧಾನಿಯ ಸುಖ, ಸಮೃದ್ಧಿ, ವೈಭವಗಳನ್ನು ಕಂಡು ಬೆರಗಾದ. ಅಲ್ಲಲ್ಲಿ ವಿಚಾರಿಸಿದಾಗ ನಗರದಲ್ಲಿ ಕಲಾವಿದರು. ಸಾಹಿತಿಗಳು, ವಿದ್ವನ್ಮಣಿಗಳು, ಸಮರ ಕುಶಲರು ಇರುವರೆಂದೂ ಅವರಿಗೆಲ್ಲ ರಾಜಾಶ್ರಯ ಉಂಟೆಂದೂ ತಿಳಿದುಬಂತು. ಕೃಷ್ಣದೇವರಾಯನು (೧೫೦೯ರಲ್ಲಿ ಪಟ್ಟಕ್ಕೆ ಬಂದ ರಾಜ) ಪ್ರತಿಭಾವಂತರಿಗೆ ಕಲ್ಪವೃಕ್ಷವಾಗಿದ್ದ.

ಆದರೆ ತಾನು ರಾಜನ ದೃಷ್ಟಿಗೆ ಬೀಳುವ ಬಗೆ ಹೇಗೆ? ಪರಸ್ಥಳದ ತನ್ನನ್ನು ಅರಸನಿಗೆ ಪರಿಚಯ ಮಾಡಿ ಕೊಡುವವರಾರು?

ತನ್ನ ಚಾತುರ್ಯಬಲದಿಂದಲೇ ತಾನು ರಾಜಸಭೆ ಪ್ರವೇಶಿಸಲು ಸಾಧ್ಯ ಎನ್ನುವುದನ್ನರಿತ ರಾಮಕೃಷ್ಣ, ಪ್ರತಿನಿತ್ಯ ಅರಮನೆಯ ಮಹಾದ್ವಾರದ ಬಳಿ ನಿಂತು, ಅವಕಾಶಕ್ಕಾಗಿ ಕಾಯಲಾರಂಭಿಸಿದ.

ಅವನು ನಿರಾಶೆಯಿಂದ ಹಿಂದರುಗಿದ ದಿನಗಳೆಷ್ಟೂ!

ಕಡೆಗೊಂದು ಸುಸಮಯ ಒದಗಿಬಂತು. ತಂಜಾವೂರಿನ ಪ್ರಸಿದ್ಧ ಭಾಗವತ ಮೇಳವೊಂದು ಅರಸನ ಸಮ್ಮುಖದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲೆಂದು ವಿಜಯನಗರಕ್ಕೆ ಬಂತು. ಅಂದು ಅವರು “ಕೃಷ್ಣ ಲೀಲೆ” ಎನ್ನುವ ಆಟವನ್ನಾಡುತ್ತಾರೆ ಎಂದು ರಾಮಕೃಷ್ಣನಿಗೆ ತಿಳಿಯಿತು. ಭಾಗವತ ಮೇಳದವರು ತಮ್ಮ ಆಟಕ್ಕೆ ಅವಶ್ಯಕವಾದ ಉಡಿಗೆ- ತೊಡಿಗೆಗಳನ್ನು ಹೊತ್ತುಕೊಂಡು ಬರುತ್ತಿರುವುದನ್ನು ಕಂಡ ರಾಮಕೃಷ್ಣನಿಗೆ ಉಪಾಯವೊಂದು ಹೊಳೆಯಿತು! ಮನೆಗೆ ಓಡಿಹೋಗಿ ಗೊಲ್ಲನಂತೆ ವೇಷಧರಿಸಿ ದೊಡ್ಡದೊಂದು ಕಡಗೋಲನ್ನು ಹೆಗಲ ಮೇಲಿರಿಸಿಕೊಂಡು ರಾಜಭವನದ ಮುಂದೆ ಬಂದ.

ಬಹುಮಾನದಲ್ಲಿ ಅರ್ಧ

ಮಹಾದ್ವಾರದಲ್ಲಿ ನಿಂತಿದ್ದ ದೊಡ್ಡ ಮೀಸೆಯ ಕಾವಲುಗಾರ, ಒಳ ನುಗ್ಗುತ್ತಿದ್ದ ರಾಮಕೃಷ್ಣನನ್ನು ಅಡ್ಡಗಟ್ಟಿ “ಏಯ್! ಯಾರೋ ನೀನು? ಹೇಳದೇ ಕೇಳದೇ ಒಳ ಹೋಗಲು ನಿನಗೆಷ್ಟೋ ಅಹಂಕಾರ?” ಎಂದು ಆರ್ಭಟಿಸಿದ. ರಾಮಕೃಷ್ಣನು, “ಅಯ್ಯಾ, ಈಗ ತಾನೇ ರಾಜಭವನಕ್ಕೆ ಹೋದ ಭಾಗವತದಾಟದ ಗುಂಪಿನವರಲ್ಲಿ ನಾನೊಬ್ಬ. ಅರಸರೆದುರು ನಡೆಯುವ ಆಟದಲ್ಲಿ ನಾನು ಗೊಲ್ಲನ ಪಾತ್ರ ಮಾಡುತ್ತೇನೆ. ಇದೋ ನೋಡು ನನ್ನ ಕಡಗೋಲು” ಎಂದ.

ಒಳಗೆ ಹೋಗಲು ಪ್ರಯತ್ನಿಸುತ್ತಿದ್ದ ರಾಮಕೃಷ್ಣನನ್ನು ಆ ದ್ವಾರಪಾಲಕ ಮತ್ತೆ ತಡೆದು ಹೇಳಿದ. “ಅವರೊಂದಿಗೆ ಬರದೆ ತಡವಾಗಿ ಬಂದಿದ್ದೀಯ. ದಂಡಕೊಟ್ಟರೆ ಮಾತ್ರ ಒಳಕ್ಕೆ ಬಿಡಬಲ್ಲೆ.”

ರಾಮಕೃಷ್ಣ ಏನು ಕೊಡಬಲ್ಲ?… ಅವನ ಚತುರಮತಿ ಸಹಾಯಕ್ಕೆ ಬಂತು! ರಾಜಭಟನೆದುರ ವಿನೋದವಾಗಿ ಅಭಿನಯಿಸುತ್ತ, “ನೋಡು, ನಾನೊಬ್ಬ ಮಹಾ ವಿನೋದಿ, ವಿದೂಷಕ, ನನ್ನ ಅಭಿನಯಕ್ಕೆ ಮೆಚ್ಚಿ ಅರಸರು ನನಗೆ ವಿಶೇಷ ಬಹುಮಾನ ಕೊಡುತ್ತಾರೆ. ಅದರಲ್ಲಿ ನಿನಗೇನಾದರೂ ಕೊಟ್ಟು ನಾನು ರಾಜಭವನದಿಂದ ಹಿಂದಿರುಗುತ್ತೇನೆ, ಆಗಬಹುದಲ್ಲ?” ಎಂದ.

“ರಾಜರು ಕೊಡುವ ಬಹುಮಾನದಲ್ಲಿ ಅರ್ಧವನ್ನು ನನಗೆ ಕೊಡುತ್ತೀಯ?” ಎಂದು ದ್ವಾರಪಾಲಕ ಕೇಳಿದ.

“ಓಹೋ, ಅಗತ್ಯವಾಗಿ” ಎಂದ ರಾಮಕೃಷ್ಣ.

“ಸರಿ, ಒಳಕ್ಕೆ ಹೋಗು” ಎಂದ ಕಾವಲುಗಾರ.

ರಾಮಕೃಷ್ಣ ಮಹಾದಾನಂದದಿಂದ ಒಳಕ್ಕೆ ಓಡುತ್ತಿರಲು, ದರ್ಬಾರು ಮಂಟಪದ್ವಾರದಲ್ಲಿ ಮತ್ತೊಬ್ಬ ವೈರಿ! ಅದೇ ಮಾದರಿಯ ಗಿರಿಜಾಮೀಸೆಯ ಆಸಾಮಿ! ಯಥಾಪ್ರಕಾರ ಮುಂದೆ ಹೋಗಲು ಅಡ್ಡಿ!

ಹಿಂದಿನ ಕಾವಲುಗಾರನಂತೆಯೇ, ಬಹುಮಾನದ ಅರ್ಧ ಭಾಗವನ್ನು ತನಗೆ ಕೊಟ್ಟು ಹೋಗುವುದಾಗಿ ರಾಮಕೃಷ್ಣನಿಂದ ಭಾಷೆ ತೆಗೆದುಕೊಂಡು ಈ ಕಾವಲುಗಾರನೂ ದಾರಿ ಬಿಟ್ಟ.

ಕೃಷ್ಣಲೀಲೆಯಲ್ಲಿ ರಾಮಕೃಷ್ಣನ ಆಟ

ರಾಜಸಮ್ಮುಖದಲ್ಲಿ “ಕೃಷ್ಣ ಲೀಲೆ” ನಡೆಯುತ್ತಿತ್ತು. ಗೊಲ್ಲಗೊಲ್ಲತಿಯರ ಒಡನಾಡ. ಹಾಲು ಬೆಣ್ಣೆ ಮೊಸರುಗಳ ಸೂರೆ, ಕಾಳೀಮರ್ದನ, ಶಕಟಾಸುರ ಧೇನುಕಾಸುರ ಅಘಾಸುರ ಪೂತನಿ ಇವರನ್ನೆಲ್ಲ ಕೊಂದು ಕಡೆಗೆ ಕಂಸ ಸಂಹಾರ ಮಾಡಿದ್ದು-ಈ ಎಲ್ಲ ಆಖ್ಯಾನ ಮುಗಿದು ಎಲ್ಲ ಭಾಗವತರೂ ಕೃಷ್ಣ ಪಾತ್ರದಾರಿಯನ್ನು ಮುಂದಿರಿಸಿ, ಅವನ ಪರಾಕ್ರಮವನ್ನು ಹೊಗಳುವ ಪದ ಹಾಡುತ್ತಿದ್ದರು.

ರಾಮಕೃಷ್ಣ ತನ್ನ ಕೈಲಿದ್ದ ಕಡಗೋಲಿನಿಂದ ಕೃಷ್ಣನ ಪಾತ್ರ ಧರಿಸಿದ್ದವನ ಬೆನ್ನಿಗೆ ಬಲವಾಗಿ ಹೊಡೆದ. ಅವನು “ಅಯ್ಯೋ! ಅಪ್ಪಾ! ಅಮ್ಮಾ!” ಎಂದು ರೋದಿಸುತ್ತ ಕುಕ್ಕರಿಸಿದ. ತೆನಾಲಿ ರಾಮಕೃಷ್ಣ ಭಾಗವತರಂತೆ,

ಎಂಥ ಪರಾಕ್ರಮಿಯೋ
ನೀನೆಂತಹ
ಪರಾಕ್ರಮಿಯೋ?
ಕಡಗೋಲ
ಹೊಡೆತವ ತಡೆಯದವನಂತೆ!
ಎಂಥ
ಪರಾಕ್ರವಿಯೋ
ನೀ
ಕೃಷ್ಣನೋ ಭ್ರಷ್ಟನೋ?

ಎಂದು ತಾಳಬದ್ಧವಾಗಿ ಹಾಡುತ್ತ ಕುಣಿಯತೊಡಗಿದ.

ಈವರೆಗೆ ಆಟದಲ್ಲಿ ಹಾಸ್ಯ ಇಲ್ಲದೆ, ಸಭಿಕರೂ ಕೃಷ್ಣದೇವರಾಯನೂ ಬೇಸರದಿಂದ ತೂಕಡಿಸುವ ಸ್ಥಿಯಲ್ಲಿದ್ದರು. ರಾಮಕೃಷ್ಣನ ವಿನೋದಮಯ ಅಭಿನಯ ಕಂಡ ಅವರು ಜೋರಾಗಿ ನಗಲಾರಂಭಿಸಿದರು. ಉತ್ತೇಜಿತನಾದ ರಾಮಕೃಷ್ಣ ವಿನೋದಮಯ ಅಭಿನಯ ಕಂಡು ಅವರು ಜೋರಾಗಿ ನಗಲಾರಂಭಿಸಿದರು. ಉತ್ತೇಜಿತನಾದ ರಾಮಕೃಷ್ಣ ಮತ್ತೊಮ್ಮೆ ಕೃಷ್ಣ ವೇಷಧಾರಿಯ ಕಡೆಗೆ ಕಡಗೋಲೆತ್ತಿದಾಗ, ಅವನು ಇವನ ಕಾಲಿಗೆ ಬಿದ್ದು ಕೈಮುಗಿದ. ಇಡೀ ಸಭೆ ಘೋಳ್ಳೆಂದು ನಕ್ಕಿತು!

ರಾಮಕೃಷ್ಣ ಪಾದದಡಿ ಬಿದ್ದವನನ್ನೆಬ್ಬಿಸಿ, “ನಾನು ಶೂರ ವೀರ ಎಂದು ಹೊಗಳಿಕೊಳ್ಳಬೇಡ; ಹೊಗಳಿಸಿಕೊಳ್ಳಲೂ ಬೇಡ. ಸಕಲ ಜೀವಿಗಳ ಅಧಿದೇವತೆಯಾದ ಕಾಳಿಕಾದೇವಿಯನ್ನು ಭಜಿಸು” ಎಂದಾಗ, ಹೆದರಿದ ಆ ಪಾತ್ರಧಾರಿ ಕಾಳೀಗೀತೆಯನ್ನು ಹಾಡಲಾರಂಭಿಸಿದ!

ವಿಕಟಕವಿ

ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದ ಕೃಷ್ಣದೇವರಾಯ, “ಇಂದಿನ ಆಟದಲ್ಲಿ ಹಾಸ್ಯರಸ ಹರಿಸಿ ನಮ್ಮ ಮನ ರಂಜಿಸಿದ ಗೊಲ್ಲ ಪಾತ್ರಧಾರಿಗೆ ವಿಶೇಷ ಬಹುಮಾನ ನೀಡಲಾಗಿದೆ” ಎಂದ.

ಆಟದ ಮೇಳದ ಮುಖ್ಯಸ್ಥನಿಗೆ ಗಾಬರಿಯಾಯಿತು. ಅವನು, “ಪ್ರಭೂ! ಈತ ನಮ್ಮ ಗುಂಪಿನವನಲ್ಲ. ಈವರೆಗೆ ಇವನೊಬ್ಬ ಸಭಾಸದನಿರಬಹುದು ಎಂದುಕೊಂಡಿದ್ದೆ. ಇದರಲ್ಲೇನೋ ಮೋಸವಿದೆ ಮಹಾಸ್ವಾಮಿ!” ಎಂದು ಕೈ ಜೋಡಿಸಿದ.

ರಾಮಕೃಷ್ಣ, “ಮಹಾಪ್ರಭೂ! ನಾನು ಭಾಗವತ ಮೇಳದವನಲ್ಲ, ನಿಜ. ಆದರೆ ಬೇಸರಪಟ್ಟಿದ್ದ ತಮ್ಮನ್ನೂ ಸಭಿಕರನ್ನೂ ನಗಿಸಲೆಂದು ಹೀಗೆ ಮಾಡಿದೆ. ಕ್ಷಮಿಸಬೇಕು” ಎಂದು ತಾನೂ ಕೈಮುಗಿದ. ರಾಜನಿಗೆ ಬಹಳ ಕೋಪ ಬಂದಿತು. “ಮೋಸ ಮಾಡಿದವನಿಗೆ ನೂರು ಚಾಟಿ ಏಟಿನ ಬಹುಮಾನ ನೀಡಿರಿ!” ಎಂದು ಆಜ್ಞಾಪಿಸಿದ.

ಚಾಟಿ ಹಿಡಿದು ಸೇವಕರು ಸಿದ್ಧರಾದರು.

ರಾಮಕೃಷ್ಣನು, “ಮಹಾಪ್ರಭು, ಸ್ವಲ್ಪ ತಡೆಯಬೇಕು. ತಮ್ಮ ಆಸ್ಥಾನದ ಬಾಗಿಲುಗಳನ್ನು ಕಾಯುತ್ತಿರುವವರನ್ನು ಕರೆಸಬೇಕು” ಎಂದು ಬೇಡಿದ.

“ಇದೇನು ವಿಚಿತ್ರ!” ಎಂದುಕೊಂಡರೂ, ರಾಜನು ಅವರನ್ನು ಕರೆಸಿದ. ಅವರು ಬಂದು ರಾಜನಿಗೆ ನಮಸ್ಕರಿಸಿ ನಿಂತರು.

ರಾಮಕೃಷ್ಣನು, “ಅಯ್ಯಾ, ಅರಸರು ನನಗೆ ಕೊಡುವ ಬಹುಮಾನದಲ್ಲಿ ಅರ್ಧರ್ಧವನ್ನು ನಿಮಗೆ ಕೊಡುತ್ತೇನೆ ಎಂದು ನಾನು ಮಾತು ಕೊಟ್ಟಿದ್ದೆ, ಅಲ್ಲವೆ? ಎಂದ.

“ಹೌದು” ಎಂದು ಇಬ್ಬರೂ ಒಪ್ಪಿಕೊಂಡರು.

ರಾಮಕೃಷ್ಣನು, “ಕೇಳಿದಿರಾ ಪ್ರಭೂ? ನೂರು ಚಾಟಿ ಏಟುಗಳಲ್ಲಿ ಇವರಿಬ್ಬರಿಗೂ ಅರ್ಧರ್ಧ ಸಲ್ಲ ಬೇಕು!” ಎಂದ. ಕಾವಲುಗಾರರು ಬೆಚ್ಚಿದರು. ಉಳಿದವರೆಲ್ಲ ನಗೆಯ ಹೊನಲಿನಲ್ಲಿ ಮುಳುಗಿದರು.

ಸೂಕ್ಷ್ಮ ಮತಿಯಾದ ಅರಸ ರಾಮಕೃಷ್ಣನ ಈ ಕಪಟನಾಟಕಕ್ಕೆ ಏನೋ ಹಿನ್ನೆಲೆ ಇರಬೇಕೆಂದು ಊಹಿಸಿ, “ಇಷ್ಟಕ್ಕೆಲ್ಲ ನಿಜವಾದ ಕಾರಣವೇನು ಹೇಳು. ನಮ್ಮನ್ನು ನಗಿಸಿರುವ ನಿನಗೆ ನಮ್ಮ ಕ್ಷಮೆಯಿದೆ” ಎಂದು ಆಜ್ಞಾಪಿಸಿದ. ರಾಮಕೃಷ್ಣ ಅವರಿಗೆ ನಡೆದಿದ್ದ ತನ್ನ ಜೀವನದ ಘಟನೆಗಳನ್ನು ಹೇಳಿಕೊಂಡ.

ಈ ಕಥೆಯನ್ನು ಕೇಳಿ ರಾಜನು, “ರಾಮಕೃಷ್ಣ! ನನ್ನ ಆಸ್ಥಾನದಲ್ಲಿ ಏಳು ಮಂದಿ ಪಂಡಿತೋತ್ತಮರಿದ್ದಾರೆ. ಆದರೆ ನಗೆ ವಿನೋದಗಳಿಗೆ ಕೊರತೆಯಾಗಿರುವ ಇನ್ನೊಂದು ಸ್ಥಾನವಿದೆ. ಅದನ್ನು ನೀನು ತುಂಬು. ಇನ್ನು ಮುಂದೆ ನೀನು ನಮ್ಮ “ವಿಕಟಕವಿ” ಯಾಗಿ, ಎಂಟು ಮಂದಿ ಕೂಡಿದ ಅಷ್ಟ ದಿಗ್ಗಜಗಳಲ್ಲಿ ಒಬ್ಬನಾಗಿರು” ಎಂದು ಅಪ್ಪಣೆ ಕೊಡಿಸಿದ. ಆಸ್ಥಾನದ ವೇಷಭೂಷಣಗಳನ್ನು ಕೊಟ್ಟು ಸನ್ಮಾನಿಸಿದ.

ವಿದ್ವಾಂಸ, ಅಹಂಕಾರಕ್ಕೆ ಶತ್ರು

ತೆನಾಲಿ ರಾಮಕೃಷ್ಣ ವಿನೋದಗಾರ ಎಂದೇ ಪ್ರಖ್ಯಾತನಾಗಿದ್ದಾನೆ. ಆದರೆ ಅವನು ದೊಡ್ಡ ವಿದ್ವಾಂಸನೂ ಕವಿಯೂ ಆಗಿದ್ದ. ತೆಲುಗು ಭಾಷೆಯ “ಪಂಚಮಹಾಕಾವ್ಯ”ಗಳಲ್ಲಿ ಒಂದಾದ “ಪಾಂಡುರಂಗ ಮಹಾತ್ಮೆ”ಯನ್ನು ಬರೆದವನು ಅವನೇ. ಮಹಾ ವಿದ್ವಾಂಸರಿರುವ ರಾಜನ ಆಸ್ಥಾನದಲ್ಲಿ ಕಾವ್ಯ ಬರೆದು ಇಂತಹ ಕೀರ್ತಿಯನ್ನು ಪಡೆದವನೂ ಮಹಾ ವಿದ್ವಾಂಸನೇ ಆಗಿರಬೇಕು. “ಘಟಿಕಾಚಲ ಮಹಾತ್ಮೆ” ಎಂಬ ಕಾವ್ಯವನ್ನು ಬರೆದವನೂ ಅವನೇ. “ಲಿಂಗ ಪುರಾಣ” ಎಂಬ ಗ್ರಂಥವನ್ನೂ ಬರೆದ ಎಂದು ಹೇಳುತ್ತಾರೆ. ಕೃಷ್ಣದೇವರಾಯನ ಸಮಾಲೋಚಕರಲ್ಲಿ ಒಬ್ಬ ರಾಮಕೃಷ್ಣ. ಅನೇಕ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ರಾಜನು ರಾಮಕೃಷ್ಣನೊಡನೆ ಚರ್ಚೆ ಮಾಡುತ್ತಿದ್ದ. ಹೀಗೆ ರಾಮಕೃಷ್ಣ ವಿದ್ವತ್ತು. ವಿವೇಚನೆ ಮತ್ತು ಗಂಭೀರವಾಗಿ ವಿಚಾರಮಾಡಬಲ್ಲ ಸಾಮರ್ಥ್ಯವನ್ನು ಪಡೆದಿದ್ದ.

ಆದರೆ ರಾಮಕೃಷ್ಣನು ಸ್ವಭಾವತಃ ನಗೆಗಾರ. ಅಲ್ಲದೆ, ನಗೆ ಬಹು ಶಕ್ತವಾದ ಆಯುಧ. ಅಹಂಕಾರ, ಮೂರ್ಖತನಗಳನ್ನು ಸುಲಭವಾಗಿ ಎತ್ತಿ ತೋರಿಸುವ ಸಾಧನ ಎಂದು ತಿಳಿದುಕೊಂಡಿದ್ದವನು. ಆದುದರಿಂದ ಬಹುಮಟ್ಟಿಗೆ ಅವನ ವಿನೋದ ಸ್ವಭಾವವನ್ನು ತೋರಿಸುವ ಕಥೆಗಳೇ ಪ್ರಚಾರದಲ್ಲಿವೆ. ಈ ಕಥೆಗಳಲ್ಲಿ ಕೆಲವು ಕೀಳು ಹಾಸ್ಯದ ಕಥೆಗಳು. ಇಂತಹ ಕೀಳುವಟ್ಟದ ಹಾಸ್ಯ ಮಾಡುವವನನ್ನು ಕೃಷ್ಣದೇವರಾಯನಂತಹ ರಾಜ ಪ್ರೋತ್ಸಾಹಿಸುತ್ತಿದ್ದ ಎಂದಾಗಲಿ, ಜನರು ಮೆಚ್ಚಿಕೊಳ್ಳುತ್ತಿದ್ದರು ಎಂದಾಗಲಿ ನಂಬಲು ಸಾಧ್ಯವಿಲ್ಲ. ಅನೇಕರು ತಮಗೆ ಹಾಸ್ಯಮಯವಾಗಿದೆ ಎಂದು ತೋರಿದ ಕಥೆಗಳನ್ನ ತೆನಾಲಿ ರಾಮಕೃಷ್ಣನ ಹೆಸರಿಗೆ ಜೋಡಿಸಿದ್ದಾರೆ.

ಆದರೆ ತೆನಾಲಿ ರಾಮಕೃಷ್ಣನ ಸಮಯಸ್ಫೂರ್ತಿ, ದಿಟ್ಟತನ, ಅಹಂಕಾರಿಗಳಿಗೆ ಬುದ್ಧಿ ಕಲಿಸುವ ರೀತಿ ಇವನ್ನು ತೋರಿಸುವ ಹಲವು ಕಥೆಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದೆ.

ಕಾಶೀ ಪಂಡಿತನನ್ನು ಸೋಲಿಸಿದ್ದು

ಒಮ್ಮೆ ಕಾಶೀಪಟ್ಟಣದ ಮಹಾ ಪಂಡಿತನೊಬ್ಬ ತನ್ನ ಶಿಷ್ಯರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಬಂದ. ಉತ್ತರ ಭಾರತ ಪ್ರವಾಸ ಮಾಡಿ, ಅಲ್ಲಿನ ಪಂಡಿತೋತ್ತಮರನ್ನೆಲ್ಲ ವೇದ, ಉಪನಿಷತ್ತು, ಶಾಸ್ತ್ರಗಳಲ್ಲಿ ಸೋಲಿಸಿ ಬಂದಿದ್ದ ಆತ ರಾಜನ ಅತಿಥಿಯಾದ.

ಆಸ್ಥಾನವನ್ನು ಠೀವಿಯಿಂದ ಪ್ರವೇಶಿಸಿದ ಆ ಪಂಡಿತ, “ಮಹಾರಾಜ, ನಿನ್ನ ಬಳಿ ಘನ ವಿದ್ವಾಂಸರಿರುವರೆಂದು ಕೇಳಿದ್ದೇನೆ. ಅವರು ನನ್ನೊಂದಿಗೆ ವಾದ ಮಾಡಲಿ. ನಾನು ಸೋತರೆ ನನ್ನ ಬಿರುದು ಬಾವಲಿಗಳನ್ನೆಲ್ಲ ಅವರಿಗೆ ಕೊಟ್ಟು ಬಿಡುತ್ತೇನೆ; ಅವರು ಸೋತರೆ ನನ್ನನ್ನು ಗುರುವೆಂದು ಒಪ್ಪಿಕೊಂಡು ಪ್ರಮಾಣ ಬರೆದುಕೊಡಬೇಕು” ಎಂದ.

ಅವನು ಎದೆತಟ್ಟಿ ಮಾತಾನಾಡಿದ ಠೀವಿ, ಅವನ ತೋರಿಸಿದ ಜಯಪತ್ರಗಳು, ಅವನ ಕಂಚುಕಂಠದ ಕಹಳೆ ಕೇಳಿದ ಆಸ್ಥಾನ ವಿದ್ವಾಂಸರು ಬೆರಗಾದರು. ಕೃಷ್ಣದೇವರಾಯನು, “ಪಂಡಿತೋತ್ತಮರೇ, ನಾಳೆ ನನ್ನ ಆಸ್ಥಾನದಲ್ಲಿ ಸ್ಪರ್ಧೆ ನಡೆಯುವುದು” ಎಂದು ಹೇಳಿ ಕಾಶೀಪಂಡಿತನನ್ನು ಬಿಡಾರಕ್ಕೆ ಕಳಿಸಿಕೊಟ್ಟ. ಅನಂತರ ತನ್ನ ವಿದ್ವಾಂಸರನ್ನು ಕರೆಸಿದ. “ಈ ವಾದ ವಿವಾದಕ್ಕೆ ನಿಮ್ಮಲ್ಲಿ ಯಾರು ಸಿದ್ಧರಿರುವಿರಿ?” ಎಂದು ಕೇಳಿದ.

ಆ ವಿದ್ವಾಂಸನ ಠೀವಿಗೆ, ಬಿರುದು ಬಾವಲಿಗಳಿಗೆ ಬೆದರಿದ್ದ ವಿದ್ವಾಂಸರು ಮಾತನಾಡದೆ ತಲೆತಗ್ಗಿಸಿದರು.

ಅರಸನಿಗೆ ತುಂಬ ಕೋಪ ಬಂತು. “ಇಷ್ಟೇ ನನ್ನ ಆಸ್ಥಾನದ ವಿದ್ವಾಂಸರ ಯೋಗ್ಯತೆ!” ಎನ್ನುತ್ತ ಅಲ್ಲಿಂದ ಹೊರಟುಹೋದ. ತೆನಾಲಿ ರಾಮಕೃಷ್ಣ, “ಪ್ರಭುಗಳ ಮರ್ಯಾದೆ ಉಳಿಸದೆ ನಾವಿದ್ದೇನು ಪ್ರಯೋಜನ? ನಾನು ಈ ಕಾರ್ಯ ನಡೆಸಲು ಸಿದ್ಧ!” ಎಂದಾಗ ಇತರ ಏಳು ಮಂದಿ ವಿದ್ವಾಂಸರೂ ಸಂತೋಷದಿಂದ ತಮ್ಮ ಬಿರುದಾಂಕಿತಗಳನ್ನು ರಾಮಕೃಷ್ಣನಿಗೊಪ್ಪಿಸಿ, ಅವನ ಶಿಷ್ಯರಾದರು.

ರಾಮಕೃಷ್ಣನ ಈ ನಿರ್ಧಾರ ಕೇಳಿದ ಕೃಷ್ಣದೇವರಾಯನಿಗೆ ಆಶ್ಚರ್ಯವಾದರೂ, ಮಾರನೆಯ ದಿನ ಎಲ್ಲ ಏರ್ಪಾಟುಗಳನ್ನೂ ಮಾಡಿಸಿದ.

ಕಾಶ್ಮೀರ ರೇಶ್ಮೆಯ ಪಂಚೆ ಉಟ್ಟು, ಜರತಾರಿ ಶಾಲು ಹೊದೆದು, ಜರಿದಾರದಿಂದ ಚವರಿಚಂಡಿಕೆ ಕಟ್ಟಿ, ನವರತ್ನ ಖಚಿತ ಪದಕಗಳನ್ನು ಧರಿಸಿ, ಹಣೆಗೆ ವಿಭೂತಿ ಕುಂಕುಮ ಇರಿಸಿ, ರಾಮಕೃಷ್ಣ ರಾಜಸಮ್ಮುಖಕ್ಕೆ ಬಂದ. ಹೂಗಳು, ಭಟರಾಗಿ ಏಳು ಮಂದಿ ವಿದ್ವಾಂಸರು, ಮುಂದೆ ಅವರ ಹಿಂದೆ ರಾಮಕೃಷ್ಣ! ಅವನು ಕಾಲಿರಿಸಿದ್ದು ಸೇವಕರು ನೆಲದ ಮೇಲಿರಿಸುತ್ತಿದ್ದ ಬಂಗಾರದ ಇಟ್ಟಿಗೆಗಳ ಮೇಲೆ!

 

ಬಂಗಾರದ ಇಟ್ಟಿಗೆಗಳ ಮೇಲೆ ಕಾಲಿರುಸುತ್ತ ರಾಮಕೃಷ್ಣ ಬಂದ

ಅವನು ಬಂದ ವೈಖರಿಯನ್ನು ನೋಡಿಯೇ ಕಾಶೀ ಪಂಡಿತ ಬೆಪ್ಪಾಗಿದ್ದ.

ಕಂಕುಳಲ್ಲಿದ್ದ ಜರತಾರಿ ರೇಶ್ಮೆ ಸುತ್ತಿದ್ದ ದೊಡ್ಡ ಹೊತ್ತಗೆಯನ್ನು ಪೀಠದ ಮೇಲಿಟ್ಟು, “ಯಾರಯ್ಯ ಆ ಮಹಾ ಪಂಡಿತ, ನನ್ನೊಡನೆ ವಾದಿಸಲು ಬಂದಿರುವವನು?” ಎನ್ನುತ್ತ ಗರ್ವದಿಂದ ರಾಮಕೃಷ್ಣ ಒಮ್ಮೆ ಸುತ್ತಲೂ ನೋಡಿದಾಗ, ಇವನ ಆಡಂಬರಕ್ಕೆ ಬೆರಗಾಗಿಹೋಗಿದ್ದ ಕಾಶೀಪಂಡಿತ ಧಿಗ್ಗನೆದ್ದು “ನಾನು” ಎಂದ.

ವಾದ ವಿವಾದ ಪ್ರಾರಂಭವಾಗಲೆಂದು ಅರಸ ಆಜ್ಞಾಪಿಸಿದ ಕೂಡಲೇ ರಾಮಕೃಷ್ಣ, “ಈ ತಿಲಕಾಷ್ಠ ಮಹಿಷ ಬಂಧನ” ಎಂಬ ಗ್ರಂಥದ ಕಡೆ ಬೆರಳುಮಾಡಿದ. ಕಾಶೀಪಂಡಿತ ಹೆದರಿ ಬೆವರಿದ.

ಎಷ್ಟೆಷ್ಟೋ ಗ್ರಂಥಗಳನ್ನು ಓದಿದ್ದ ಆತ, ಈ ಹೆಸರನ್ನೇ ಕೇಳಿರಲಿಲ್ಲ! ಬೀಸುವ ದೊಣ್ಣೆ ತಪ್ಪಿದರೆ ಸಾಕೆಂದು ಯೋಚಿಸಿ, “ಈ ಪುಸ್ತಕವನ್ನು ಹಿಂದೆಂದೋ ಓದಿದ್ದ ನೆನಪು; ಇವತ್ತು ರಾತ್ರಿ ಅಭ್ಯಸಿಸಿ ನಾಳೆ ಚರ್ಚಿಸುತ್ತೇನೆ” ಎಂದು ರಾಜನಲ್ಲಿ ಬಿನ್ನವಿಸಿಕೊಂಡು, ಬಿಡಾರಕ್ಕೆ ಶಿಷ್ಯ ಸಮುದಾಯದೊಂದಿಗೆ ಹಿಂದಿರುಗಿದ.

ರಾತ್ರಿಯೆಲ್ಲ ಕಾಶಿಯ ವಿದ್ವಾಂಸ ಯೋಚಿಸಿಯೇ ಯೋಚಿಸಿದ. “ತಿಲಕಾಷ್ಠ ಮಹಿಷ ಬಂಧನ” ಅವನಿಗೆ ಕಗ್ಗಂಟಾಗಿಯೇ ಉಳಿಯಿತು. ಆ ಗ್ರಂಥದ ಹೆಸರೇ ತಾನು ಕೇಳಿಲ್ಲವಲ್ಲ! ಇಲ್ಲಿದ್ದರೆ ತೀರ ಅವಮಾನವಾದೀತೆಂದು ರಾತ್ರಿಯೇ ಗಂಟುಮೂಟೆ ಕಟ್ಟಿಕೊಂಡು ಓಡಿಹೋದ!

ಈ ಸುದ್ದಿ ತಿಳಿದ ರಾಜನಿಗೆ ಆಶ್ಚರ್ಯವೂ ಸಂತೋಷವೂ ಆಯಿತು. ರಾಮಕೃಷ್ಣನನ್ನು ಕರೆಸಿ, “ಹೆಸರು ಕೇಳಿಯೇ ಕಾಶೀಪಂಡಿತ ಓಡಿಹೋಗಬೇಕಾದರೆ ಅದೆಂಥ ಗ್ರಂಥವಿರಬೇಕು! ನಮಗೆ ತೋರಿಸು” ಎಂದ. ಸುತ್ತಿದ್ದ ವಸ್ತ್ರವನ್ನು ಬಿಚ್ಚಿದ ರಾಮಕೃಷ್ಣ, “ಪ್ರಭೂ! ಇದು ಯಾವ ಮಹಾಗ್ರಂಥವೂ ಅಲ್ಲ. ಇದೋ ಇದು ಎಳ್ಳಿನ ಕಟ್ಟಿಗೆ, ಅಂದರೆ ತಿಲಕಾಷ್ಠ, ಇದು ಕೋಣವನ್ನು ಕಟ್ಟುವ ಹಗ್ಗ, ಅಂದರೆ ಮಹಿಷಬಂಧನ. ಕಟ್ಟಿಗೆಗಳನ್ನು ಹಗ್ಗದಿಂದ ಕಟ್ಟಿದ್ದೇನೆ, ಅಷ್ಟೆ!” ಎಂದು ತೋರಿಸಿದಾಗ ಕೃಷ್ಣದೇವರಾಯ ಬಿದ್ದು ಬಿದ್ದು ನಕ್ಕು, ರಾಮಕೃಷ್ಣನ ಚಾತುರ್ಯಕ್ಕೆ ಮೆಚ್ಚಿ, ಭಾರಿ ಬಹುಮಾನ ಕೊಟ್ಟ.

ಆಸೆಬುರುಕರಿಗೆ ಪಾಠ

ಅರಸನ ಪ್ರೀತಿಯನ್ನೂ ಪ್ರಜೆಗಳ ಆದರವನ್ನೂ ಗಳಿಸಿದ್ದ ರಾಮಕೃಷ್ಣ, ವಿಕಟವಿನೋದಿಯಾಗಿದ್ದು ಏನೂ ಅರಿಯದ ಮುಗ್ಧನಂತೆ ಕಂಡರೂ, ನಿಜವಾಗಿ ಧರ್ಮಪರ ಮತ್ತು ನ್ಯಾಯ ಪಕ್ಷಪಾತಿಯಾಗಿದ್ದ. ರಾಜ್ಯದಲ್ಲಾಗಲೀ, ಆಸ್ಥಾನದಲ್ಲಾಗಲೀ ಅನ್ಯಾಯ ನಡೆದರೆ, ಕೂಡಲೇ ತನ್ನ ಹಾಸ್ಯ ಪ್ರವೃತ್ತಿಯ ಅಸ್ತ್ರದಿಂದ ಅದನ್ನು ಸರಿಪಡಿಸುತ್ತಿದ್ದ.

ವಿಜಯನಗರದ ರಾಜಮಾತೆ ತುಂಬ ಆಚಾರವಂತೆ. ತೀರ್ಥಯಾತ್ರೆಗಳನ್ನು ಮಾಡಿ, ಸಕಲ ವ್ರತಗಳನ್ನೂ ಪೂರೈಸಿ, ದಾನ- ಧರ್ಮಗಳನ್ನು ಮಾಡಿ, ಮೊಕ್ಷ ಮಾರ್ಗವನ್ನು ಕಂಡುಕೊಂಡಿದ್ದಳು. ತನ್ನ ವೃದ್ಧಾಪ್ಯದಲ್ಲಿ ಫಲದಾನ ಮಾಡಿದರೆ ಎಲ್ಲ ದಾನಗಳೂ ಪೂರ್ಣವಾಗುವುವೆಂದು ಯೋಚಿಸಿ, ತನ್ನ ಈ ಇಚ್ಛೆಯನ್ನು ಮಗನಿಗೆ ಹೇಳಿದಳು.

ಮಾತೃಭಕ್ತನಾದ ಕೃಷ್ಣದೇವರಾಯ ಕೂಡಲೇ ರತ್ನಗಿರಿಯಿಂದ ಅತಿ ರುಚಿಕರವಾದ ಮಾವಿನ ಹಣ್ಣುಗಳನ್ನು ತರಿಸಿದ. ಆದರೆ ದುರ್ದೈವ, ಯಾವ ಶುಭದಿನದಲ್ಲಿ ಅವುಗಳನ್ನು ರಾಜಮಾತೆ ಬ್ರಾಹ್ಮಣರಿಗೆ ಕೊಡಬೇಕಿತ್ತೋ ಆ ದಿನ ಬೆಳಗ್ಗೆಯೇ ಆಕೆ ಸ್ವರ್ಗಸ್ಥಳಾದಳು.

ದಿನಕರ್ಮಗಳು ಪ್ರಾರಂಭವಾದಾಗ ಅರಸ, ಕೆಲವು ಬ್ರಾಹ್ಮಣರನ್ನು ಅರಮನೆಗೆ ಕರೆಸಿ, “ನನ್ನ ತಾಯಿಯ ಕೊನೆಯ ಇಚ್ಛೆಯಾಗಿ ಮಾವಿನ ಹಣ್ಣಿನ ದಾನ ಮಾಡುವುದಕ್ಕೆ ಮುಂಚೆಯೇ ಆಕೆ ಮೃತಳಾದಳು. ಈ ಪುಣ್ಯ ಆಕೆಗೆ ಲಭಿಸಬೇಕಾದರೆ ಏನು ಮಾಡಬೇಕು?” ಎಂದು ಕೇಳಿದ.

ಆ ಆಸೆಬುರುಕರು, “ಮಹಾರಾಜ! ಚಿನ್ನದ ಮಾವಿನ ಹಣ್ಣುಗಳನ್ನು ಮಾಡಿಸಿ ಬ್ರಾಹ್ಮಣರಿಗೆ ದಾನ ಮಾಡಿದರೆ ಮಾತ್ರ ನಿಮ್ಮ ತಾಯಿಯ ಆತ್ಮಕ್ಕೆ ಶಾಂತಿ ಸಿಕ್ಕುವುದು” ಎಂದು ಹೇಳಿದರು.

ಈ ಸುದ್ದಿ ರಾಮಕೃಷ್ಣನ ಕಿವಿಗೆ ಬಿತ್ತು. ಮಾರನೆಯ ದಿನ ಆ ಬ್ರಾಹ್ಮಣರ ಮನೆಗಳಿಗೆ ಹೋಗಿ, “ಸ್ವಾಮೀ, ಮಹಾರಾಜರ ತಾಯಿಯವರ ತಿಥಿಯ ದಿನವೇ ನಮ್ಮ ತಾಯಿಯ ತಿಥಿಯೂ ಇದೆ. ಅರಮನೆಯಿಂದ ನೇರ ದಯವಿಟ್ಟು ನಮ್ಮ ಮನೆಗೆ ಬರಬೇಕು” ಎಂದು ವಿಜ್ಞಾಪಿಸಿಕೊಂಡ.

ಅರಸನಿಂದ ಸುವರ್ಣಫಲ ಪಡೆದ ಬ್ರಾಹ್ಮಣರು ತೆನಾಲಿ ರಾಮಕೃಷ್ಣನ ಮನೆಗೆ ಬಂದರು. ಸೇವಕರು ಎಲ್ಲ ಬಾಗಿಲುಗಳನ್ನು ಭದ್ರಪಡಿಸಿ, ಒಳಗಿನಿಂದ ಒಬ್ಬೊಬ್ಬರೂ ಒಂದೊಂದು ಕಾದ ಕಬ್ಬಿಣದ ಸಲಾಕೆಗಳನ್ನು ಹಿಡಿದು ಬಂದು ನಿಂತರು!

ಬ್ರಾಹ್ಮಣರು ನಿಬ್ಬೆರಗಾಗಿ ನೋಡುತ್ತಿರಲು, ರಾಮಕೃಷ್ಣ, “ಪೂಜ್ಯರೇ, ನನ್ನ ತಾಯಿಗೆ ಸಂಧಿವಾತವಿತ್ತು. ಒಂದು ದಿನ ಆಕೆ ತಡೆಯಲಾರದೆ ನನ್ನನ್ನು, ಕಾದ ಕಬ್ಬಿಣದ ಸಲಾಕೆಯಿಂದ ಬರೆ ಎಳೆದರೆ ನೋವು ಕಡಿಮೆಯಾಗುವುದೆಂದೂ ಹಾಗೆ ಮಾಡಬೇಕೆಂದೂ ಕೇಳಿಕೊಂಡಳು. ತಾಯಿಯ ಮಾತು ಮೀರಲಾರದ ನಾನು, ಸಲಾಕೆಯನ್ನು ಕೆಂಪಗೆ ಕಾಯಿಸಿ ತರುವಷ್ಟರಲ್ಲಿ ಆಕೆ ಸತ್ತು ಹೋಗಿದ್ದಳು. ಅವಳ ಆತ್ಮ ಶಾಂತಿಗಾಗಿ ನಿಮಗೆಲ್ಲ ಒಂದೊಂದು ಬರೆ ದಾನ ಮಾಡುತ್ತೇನೆ” ಎಂದ. ಕಾದ ಸಲಾಕೆಯನ್ನು ಹಿಡಿದ ಸೇವಕರ ಜೊತೆಗೆ ಅವರ ಹತ್ತಿರ ಬಂದ. ಆ ಬ್ರಾಹ್ಮಣರು ಅತ್ತಿಂದಿತ್ತ ಓಡಾಡುತ್ತ, “ಏನಿದು ಅನ್ಯಾಯ? ನಾವು ಅತಿಥಿಗಳಲ್ಲವೆ, ನಮ್ಮನ್ನು ಅವಮಾನ ಮಾಡುವೆಯಾ ರಾಮಕೃಷ್ಣ?” ಎಂದು ಅಬ್ಬರಿಸಲಾರಂಭಿಸಿದರು.

“ಇದರಲ್ಲಿ ಅನ್ಯಾಯವೇನು ಬಂತು? ರಾಜಮಾತೆಯ ಕೊನೆಯ ಆಸೆ ಪೂರೈಸಲು ಚಿನ್ನದ ಮಾವಿನ ಹಣ್ಣುಗಳನ್ನು ನೀವೀಗ ತೆಗೆದುಕೊಂಡಿಲ್ಲವೇ? ಹಾಗೆಯೇ, ನನ್ನ ತಾಯಿಯ ಕಡೆಯ ಆಸೆಯನ್ನು ಪೂರೈಸುವುದು ನಿಮ್ಮ ಕರ್ತವ್ಯವಲ್ಲವೇ?” ಎಂದು ರಾಮಕೃಷ್ಣ ಕೇಳಿದ. ಬ್ರಾಹ್ಮಣರಿಗೆ ಆಗ ಜ್ಞಾನೋದಯವಾಯಿತು. ತಮ್ಮ ಆಸೆಗೆ ನಾಚಿಕೆಯಾಯಿತು. ಚಿನ್ನದ ಹಣ್ಣುಗಳನ್ನು ಅಲ್ಲಿಯೇ ಬಿಟ್ಟು ಹೊರಟುಹೋದರು.

“ನೀನೇಕೆ ಅವರಿಗೆ ಅಪಮಾನ ಮಾಡಿದೆ?” ಎಂದು ರಾಜ ಕೇಳಿದಾಗ ರಾಮಕೃಷ್ಣ ಕೊಟ್ಟ ಉತ್ತರ: “ಪ್ರಭೂ! ಅರಮನೆಯ ಖಜಾನೆ ಇರುವುದು ಸ್ವಾರ್ಥಿಗಳ, ಸೋಮಾರಿಗಳ ಹೊಟ್ಟೆ ತುಂಬುವುದಕ್ಕಲ್ಲ, ಪ್ರಜೆಗಳ ಹಿತಕ್ಕಾಗಿ, ದೇಶದ ರಕ್ಷಣೆಗಾಗಿ.”

ನೀರು ಹೇಗೆ ನಿಂತಿದೆ?

ಅರಸನ ಪೋಷಣೆಯಲ್ಲೇ ಇದ್ದರೂ ರಾಮಕೃಷ್ಣ ಎಂದೂ ದೊರೆಗೆ ಹೆದರಿದವನಲ್ಲ; ಸತ್ಯವನ್ನು ನಿರ್ಭೀತಿಯಿಂದ ನುಡಿದುಬಿಡುವುದೇ ಅಲ್ಲದೆ, ಅನೇಕ ವೇಳೆ ತನ್ನ ಪ್ರಭುವಿಗೇ ಅವನು ಪಾಠ ಕಲಿಸಿದ್ದುಂಟು.

ಒಮ್ಮೆ ಕೃಷ್ಣದೇವರಾಯ ಆಗ ತಾನೇ ಕಟ್ಟಿ ಮುಗಿಸಿದ್ದ ಜಲಾಶಯವನ್ನು ಪರಿಶೀಲಿಸಲು ಅಷ್ಟದಿಗ್ಗಜರೊಂದಿಗೆ ಹೋದ. ವಿಸ್ತಾರವಾದ ಆ ನೀರಿನ ರಾಶಿಯನ್ನು ನೋಡುತ್ತ, “ಈ ಜಲಾಶಯದ ನೀರು ಹೇಗೆ ನಿಂತಿದೆ?” ಎಂದು ಕೇಳಿದ.

ಒಬ್ಬ ವಿದ್ವಾಂಸ ಉತ್ತರ ಕೊಟ್ಟ- “ಈ ನೀರು ಶುದ್ಧವಾದ ಮನಸ್ಸಿನ ಅಪ್ಸರೆಯಂತಿದೆ!”

ಇನ್ನೊಬ್ಬ ಹೇಳಿದ- ಶುಭ್ರ ಸ್ಫಟಿಕದಂತೆ ಥಳಥಳಿಸುತ್ತಿದೆ”

“ನಿರ್ಮಲ ಮನಸ್ಸಿನ ಶಾಂತ ಮನುಸ್ಯನಂತೆ ನಿಂತಿದೆ!” ಮೂರನೆಯವನು ವಿವರಿಸಿದ.

ಅರಸ ರಾಮಕೃಷ್ಣನತ್ತ ತಿರುಗಿದಾಗ ಆತ, “ಪ್ರಭೂ! ಜಲಾಶಯದ ನೀರು ನೀವು ಕಟ್ಟಿಸಿದ ಜಲಾಶಯದ ಆಧಾರದ ಮೇಲೆ ನಿಂತಿದೆ” ಎಂದು ಸರಳವಾಗಿ ಹೇಳಿದ. ಹೊಗಳುಭಟರಂತೆ ಇಲ್ಲದ ಮಾತುಗಳಾಡದೆ, ನೇರ ಉತ್ತರಕೊಟ್ಟ ರಾಮಕೃಷ್ಣನ ನಿರ್ಭೀತ ಸ್ವಭಾವವನ್ನು ದೊರೆ ತುಂಬ ಮೆಚ್ಚಿಕೊಂಡ.

ಮುಖ ತೋರಿಸಬೇಡ!”

ಒಂದು ದಿನ ರಾಮಕೃಷ್ಣ ಅಂತಃಪುರದ ಗೋಡೆಗಳ ಮೇಲೆ ಹೊಸದಾಗಿ ಬರೆಸಿದ್ದ ವರ್ಣಚಿತ್ರಗಳನ್ನು ನೋಡುತ್ತಿದ್ದಾಗ, ಅಪ್ಸರೆಯ ಚಿತ್ರವೊಂದು ಕಣ್ಣಿಗೆ ಬಿತ್ತು. ಆಕೆಯ ಉಡಿಗೆ ತೊಡಿಗೆ ಹ್ರಸ್ವವಾಗಿದೆಯೆಂದು ತೋರಿದಾಗ ರಾಮಕೃಷ್ಣ ತಾನೇ ಬಣ್ಣ, ಕುಂಚ ಹಿಡಿದು ಆಕೆಯ ಉಡಿಗೆ ತೊಡಿಗೆಗಳ ಮಾರ್ಪಾಡು ಮಾಡಿದ.

ಆ ವೇಳೆಗೆ ಅಲ್ಲಿಗೆ ಬಂದ ಮಹಾಮಂತ್ರಿ, “ಎಂತಹ ಅವಿವೇಕ ಮಾಡಿದೆ ರಾಮಕೃಷ್ಣಾ? ಅರಸರು ತಾವೇ ನಿಂತು ಬರೆಸಿದ ಚಿತ್ರಕ್ಕೆ ಬಣ್ಣ ಬಳಿದು ಕೂರಿಸಿದ್ದೀಯ! ಅವರಿಗೆ ತುಂಬ ಕೋಪ ಬರುತ್ತದೆ, ಕಠಿಣವಾದ ಶಿಕ್ಷೆ ಕೊಡುವುದು ಖಂಡಿತ! ಆದ್ದರಿಂದ ನೀನು ಎಲ್ಲಾದರೂ ತಲೆ ಮರೆಸಿಕೊಂಡು ಹೋಗು” ಎಂದ.

ಮಾರನೆಯ ದಿನ ಬೆಳಗ್ಗೆ ಮುಖಕ್ಕೆ ಮಡಕೆ ಕವಿಚಿದ್ದ ವ್ಯಕ್ತಿಯೊಬ್ಬ ಅಂತಃಪುರದ ಬಾಗಿಲಿಗೆ ಬಂದು ನಿಂತಾಗ, ಅರಸನಿಗೆ ಏನೊಂದೂ ಅರ್ಥವಾಗಲಿಲ್ಲ.

“ಎಲಾ, ನೀನು ಯಾರು? ಈ ವಿಚಿತ್ರ ವೇಷದಿಂದ ನಮ್ಮ ಸಮ್ಮುಖದಲ್ಲಿ ಬಂದು ನಿಲ್ಲಲು ಕಾರಣವೇನು?” ಎಂದು ರಾಜ ಕೇಳಿದ. ರಾಮಕೃಷ್ಣ ಹೇಳಿದ, “ಮಹಾಪ್ರಭೂ, ನಾನು ತೆನಾಲಿ ರಾಮಕೃಷ್ಣ. ನಾನು ಮಾಡಿದ ಒಂದು ಸಣ್ಣ ಅಪರಾಧಕ್ಕೆ ಮಂತ್ರಿಗಳು, ತಾವು ನನ್ನ ತಲೆ ತೆಗಿಸಿಬಿಡುತ್ತೀರಿ, ಅದರಿಂದಾಗಿ ತಲೆಮರೆಸಿಕೊಂಡು ತಿರುಗಬೇಕು ಎಂದು ಅಪ್ಪಣೆ ಕೊಡಿಸಿದ್ದಾರೆ! ಅದಕ್ಕೇ…..”

ಮಹಾಮಂತ್ರಿ ನಡೆದ ಸಂಗತಿಯನ್ನು ಅರಸನಿಗೆ ವಿವರಿಸಿದಾಗ, ಆತ ರಾಮಕೃಷ್ಣನ ಸಮಯೋಚಿತ ಉಪಾಯವನ್ನು ಮೆಚ್ಚಿ, ಅವನನ್ನು ಕ್ಷಮಿಸಿದ.

ರಾಮಕೃಷ್ಣನ ಸಂಸಾರ

ರಾಮಕೃಷ್ಣನಿಗೆ ಅನುರೂಪಳಾದ ಪತ್ನಿ ಇದ್ದಳು, ಅವಳು ಗಂಡನ ಧಾರಾಳ ಬಿದ್ಧಿಯನ್ನರಿತು, ಅದಕ್ಕೆ ಹೊಂದಿಕೊಂಡು ಹೋಗುತ್ತಿದ್ದಳು.

ವಿಜಯನಗರದ ಅರಸ, ರಾಮಕೃಷ್ಣನಿಗೆ ಅಗ್ರಹಾರದಲ್ಲಿ ದೊಡ್ಡದೊಂದು ಮನೆಯನ್ನೇ ಕಟ್ಟಿಸಕೊಟ್ಟಿದ್ದ. ಆದರೂ ಜೀವನಕ್ಕೆ ತಕ್ಕಷ್ಟು ಹಣ ರಾಮಕೃಷ್ಣನ ಬಳಿ ಸಾಮಾನ್ಯವಾಗಿ ಇರುತ್ತಿರಲಿಲ್ಲ. ಸ್ವಾಭಿಮಾನಿಯಾದ ಆತ ಅರಸನೆದುರು ಎಂದೂ ಕೈ ಚಾಚುತ್ತಿರಲಿಲ್ಲ.

ಕೃಷ್ಣದೇವರಾಯ ಆಗಾಗ ವೇಷ ಮರೆಸಿಕೊಂಡು ರಾತ್ರಿ ವೇಳೆ ನಗರ ಸಂಚಾರ ಮಾಡುತ್ತಿದ್ದ. ಅಂತಹ ಒಂದು ದಿನ, ರಾಮಕೃಷ್ಣನ ಮನೆಯ ಕಿಟಕಿಯಲ್ಲಿ ಇಣಿಕಿ ನೋಡಿದಾಗ, ರಾಮಕೃಷ್ಣ ಬೀಸುವಕಲ್ಲಿನ ಮುಂದೆ ಕುಳಿತು ಕಾಳು ಬೀಸುತ್ತಿರುವುದನ್ನು ಕಂಡ! ಬಡತನದ ಅರಿವಾಗಿ, ಮುಂದಿನ ತಿಂಗಳಿನಿಂದ ಅವನ ಮಾಸಾಶನವನ್ನು ರಾಜನೇ ಹೆಚ್ಚಿಸಿದ!

ರಾಮಕೃಷ್ಣನ ಹೆಂಡತಿ ಚತುರೆ. ಒಮ್ಮೆ ಅವರಲ್ಲಿರುವ ಅಷ್ಟಿಷ್ಟು ಧನ-ಕನಕಗಳನ್ನು ಕದಿಯಲು ಕಳ್ಳರು ಅವರ ಅಂಗಳದಲ್ಲಿ ಅವಿತುಕೊಂಡರು. ಇದನ್ನರಿತ ರಾಮಕೃಷ್ಣ ಹೆಂಡತಿಗೆ ಸುಳಿವು ಕೊಟ್ಟಾಗ, ಇಬ್ಬರೂ ಸೇರಿ “ಊರಲ್ಲಿ ಕಳ್ಳಕಾಕರಿದ್ದಾರೆ ಅವರ ಕಾಟ ಹೆಚ್ಚಾಗಿದೆ; ಬೆಳ್ಳಿ ಬಂಗಾರಗಳನ್ನು ಬಾವಿಯೊಳಗೆ ಬಚ್ಚಿಟ್ಟುಬಿಡೋಣ” ಎಂದು ಕಳ್ಳರಿಗೆ ಕೇಳಿಸುವಂತೆ ಮಾತನಾಡಿಕೊಂಡರು. ಒಂದು ಪೆಟ್ಟಿಗೆಯ ತುಂಬ ಕಲ್ಲು ಮಣ್ಣನ್ನು ತುಂಬಿದರು. ಕಳ್ಳರಿಗೆ ಶಬ್ದ ಕೇಳುವಂತೆ ಬಾವಿಯಲ್ಲಿ ಎತ್ತಿಹಾಕಿದರು. ಒಡವೆಗಳೆಲ್ಲ ಪೆಟ್ಟಿಗೆಯಲ್ಲಿವೆ ಎಂದು ಭಾವಿಸಿದ ಕಳ್ಳರು ರಾತ್ರಿ ಇಡೀ ಬಾವಿಯ ನೀರನ್ನು ಸೇದೆ, ತೋಟದ ಗಿಡಗಳಿಗೆ ಸುರಿದರು. ಬೆಳಗಿನ ಝಾವದಲ್ಲಿ ರಾಮಕೃಷ್ಣ, “ನಮ್ಮ ತೋಟದ ಗಿಡಗಳಿಗೆ ಸಾಕಷ್ಟು ನೀರಾಯ್ತು; ನಿಲ್ಲಿಸಿ!” ಎಂದು ಕೂಗಿದಾಗ, ಬೆದರಿದ ಕಳ್ಳರು ಓಡಿಹೋದರು. ಗಂಡ ಹೆಂಡಿರು ಹೊಟ್ಟೆ ತುಂಬ ನಕ್ಕು ಆನಂದಿಸಿದರು!

 

ಪೆಟ್ಟಿಗೆಯನ್ನು ಬಾವಿಯಲ್ಲಿ ಎತ್ತಿಹಾಕಿದರು

ರಾಮಕೃಷ್ಣನಿಗೆ ಭಾಸ್ಕರ ಶರ್ಮ ಎಂಬ ಮಗ ಇದ್ದ. ಅವನು ತಂದೆಯಂತೆಯೇ ಬುದ್ಧಿವಂತ. ಅಹಂಕಾರಿಗಳಿಗೆ ಬುದ್ಧಿ ಕಲಿಸುವ ಅನೇಕ ಸಂದರ್ಭಗಳಲ್ಲಿ ಅವನೂ ತಂದೆಗೆ ಸಹಾಯ ಮಾಡಿದ ಎಂದು ಹೇಳುತ್ತಾರೆ.

ನಂಜಿಲ್ಲದ ನಗೆ

ರಾಮಕೃಷ್ಣನ ಜೀವನದ ಕಥೆಯೇ ಆಶ್ಚರ್ಯವನ್ನು ಉಂಟುಮಾಡುವಂತಹದು. ಚಿಕ್ಕ ಮಯಸ್ಸಿನಲ್ಲಿ ಹುಡುಗ ತಂದೆಯನ್ನು ಕಳೆದುಕೊಂಡ. ಉಪಾಧ್ಯಾಯರ ಸಂಕುಚಿತ ಜಾತಿ ಭಾವನೆಯಿಂದ ವಿದ್ಯಾಭ್ಯಾಸ ದೊರೆಯಲಿಲ್ಲ. ಆದರೂ ತನ್ನ ಪ್ರಯತ್ನದಿಂದ ವಿದ್ಯೆ ಕಲಿತು, ಪ್ರಸಿದ್ಧ ಪಂಡಿತನಾದ, ಕವಿಯಾದ; ರಾಜನ ಆಸ್ಥಾನದಲ್ಲಿ ಕೀರ್ತಿವಂತನಾದ. ಅಹಂಕಾರಿಗಳಿಗೆ ಹಾಸ್ಯದಿಂದಲೇ ಬುದ್ಧಿ ಕಲಿಸಿದ. ಶ್ರೀಮಂತರಾಗಲಿ, ಪಂಡಿತರಾಗಲಿ, ಅಷ್ಟೇಕೆ ಮಂತ್ರಿಗಳೇ ಆಗಲಿ, ರಾಜನೇ ಆಗಲಿ, ತಪ್ಪು ಮಾಡಿದಾಗ ತಿದ್ದಿದ.

ಜೀವನದಲ್ಲಿ ಗಂಭೀರವಾಗಿ ಚಿಂತನೆ ಮಾಡಬೇಕು. ಆದರೆ ನಗುವುದೂ ಅಗತ್ಯ. ಹಾಸ್ಯದಿಂದ ಮನಸ್ಸು ಹಗುರವಾಗುತ್ತದೆ. ಆದರೆ ನಗುವಾಗ ಇತರರ ಮನಸ್ಸನ್ನು ನೋಯಿಸುವುದು ಉದ್ದೇಶವಾಗಬಾರದು. ಅವರನ್ನು ತಿದ್ದುವುದು ಉದ್ದೇಶವಾಗಬೇಕು, ನಗೆಯಲ್ಲಿ ಸ್ನೇಹವಿರಬೇಕು. ಇಂತಹ ಹಾಸ್ಯ ತೆನಾಲಿ ರಾಮಕೃಷ್ಣನದು.