ವೈಶಾಖ ಶುಕ್ಲ ಪೂರ್ಣಿಮಾ ರಾತ್ರಿ ಹಬ್ಬಿದೆ ಸುತ್ತ,
ಕರಗಿ ಹೋಗಿದೆ ಕತ್ತಲೆಯ ಹುತ್ತ.
ಹೆಡೆ ಮುದುರಿ ಬಿದ್ದಿದೆ ಕೆಳಗೆ ಸಾಷ್ಟಾಂಗ ವಿನ್ಯಾಸದಲಿ
ಮಿನುಗು ದೀಪದ ಮಯ್ಯ ನಗರ ವಿಸ್ತಾರ.
ಆಕಾಶಾದ್ಯಂತ ಹರಿದಿದೆ ಬೆಳುದಿಂಗಳಿನ ಪ್ರಭಾಪೂರ.

ಮೌನ ಧ್ಯಾನಸ್ಥವಾಗಿವೆ ಈ ವಸಂತ ಸುಮಭಾರ
ಗಂಧೋನ್ಮತ್ತ ತರುಸಂಕುಲ ;
ದಿಕ್ಕು ದಿಕ್ಕುಗಳಲ್ಲಿ ಕೈಮುಗಿದು ನಿಂತಿವೆ ಮೋಡ
ತೋಡಿಕೊಳ್ಳುವ ಹಾಗೆ ಹೃದಯ ಭಾರ.
ಕಾರುಣ್ಯ ಲಹರಿಯೊಳದ್ದಿ ಕಣ್ತೆರೆದ ನಕ್ಷತ್ರಗಳ
ತುಟಿಯಲ್ಲಿ ಮಿನುಗುತಿದೆ ನಿಶ್ಶಬ್ದ ಮಂತ್ರೋಚ್ಚಾರ :
‘ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ.’

ಓ ಸ್ವಾಮಿ, ನೀ ಬರುವ ಮೊದಲು ಅಸಂಖ್ಯಾತ ವೈಶಾಖ ಶುಕ್ಲ-
ಪೂರ್ಣಿಮಾ ರಜನಿಗೆಚ್ಚರವಿರದ ನಿದ್ರೆ.
ನೀ ಬಂದ ಮೇಲೆ ವರುಷ ವರುಷವೂ ಈ ವೈಶಾಖ ಶುಕ್ಲ-
ಪೂರ್ಣಿಮೆಗೆ ನಿನ್ನ ಧ್ಯಾನದ ಮುದ್ರೆ !