ಬೆಳಿಗ್ಗೆ ಸೊಗಸಾದ ಬಿಸಿನೀರಿನ ತುಂತುರು ಸ್ನಾನ ಮುಗಿಸಿ, ಇನ್ನೇನು ಕೆಳಗೆ ಹೋಗಿ ಒಲ್ಲದ ಉಪಹಾರ ಮುಗಿಸಿ ಸಿದ್ಧವಾಗಬೇಕು ಅಂದುಕೊಳ್ಳುತ್ತಿರುವ ವೇಳೆಗೆ ಮಹಾದೇವಯ್ಯನವರ ಫೋನ್‌ಕರೆ ಬಂತು. ‘ಈ ದಿನ ಉಪಹಾರಕ್ಕೆ ಹೋಗಬೇಡಿ, ಮನೆಯಿಂದ ತರುತ್ತಿದ್ದೇನೆ,’ ಎಂದು ಹೇಳಿದ ಅರ್ಧಗಂಟೆಯೊಳಗಾಗಿ ತರಕಾರಿ ಹಾಕಿ ಮಾಡಿದ ಬಿಸಿಬಿಸಿ ಉಪ್ಪಿಟ್ಟು ನನ್ನ ಕೋಣೆಯ ಟೇಬಲ್ ಮೇಲಿತ್ತು.

ಬಂದ ದಿನ ಇದ್ದ ಚಳಿ ದಿನದಿಂದ ದಿನಕ್ಕೆ ಕಡಮೆಯಾಗಿ, ಉಷ್ಣಾಂಶ ಅಧಿಕವಾಗತೊಡಗಿದೆ. ಈ ದಿನವಂತೂ ಉಜ್ವಲವಾದ ಬಿಸಿಲು. ಬಿಸಿಲಲ್ಲಿ ದೂರ ದೂರದವರೆಗೂ ಎತ್ತರದ ಮನೆಗಳ ಮಾಸ್ಕೋ ನಗರ, ಒಂದೊಂದು ಕಟ್ಟಡವೂ ನೂರಾರು ಕಿಟಕಿ ಕಣ್ಣುಗಳಿಂದ, ಎರಕ ಹೊಯ್ದ ಬೃಹದಾಕಾರದ ಗೂಡುಗಳಂತೆ ಒಂದರ ಬದಿಗೊಂದು ಜೋಡಿಸಿದಂತೆ ಕಂಡವು. ಈ ದಿನ ಮಧ್ಯಾಹ್ನ ನನ್ನನ್ನು  ಇಲ್ಲಿ ಒಪ್ಪಿಕೊಂಡ ‘ಇನ್‌ಸ್ಟಿಟ್ಯೂಟ್ ಆಫ್ ಈಸ್ಟರ್ನ್‌ಲ್ಯಾಂಗ್ವೇಜಸ್’ಗೆ ಹೋಗಬೇಕು. ಮುಖ್ಯ ಪ್ರೊಫೆಸರ್ ಅವರನ್ನು  ಎರಡು ಗಂಟೆಗೆ ಭೆಟ್ಟಿಯಾಗಬೇಕು – ಎಂದು ವೊಲೋಜ ಮೊದಲೇ ತಿಳಿಸಿದ್ದ. ಆದ್ದರಿಂದ ಬೆಳಗಿಂದ ಅಷ್ಟು ಹೊತ್ತಿನ  ತನಕ ಒಂದೆರಡು ‘ಮ್ಯೂಸಿಯಂ’ ಗಳನ್ನಾದರೂ ನೋಡೋಣ ಅಂದುಕೊಂಡೆ. ಒಂಬತ್ತಕ್ಕೆ ವೊಲೋಜ ಬಂದ. ಅವನೊಡನೆ ಒಂದು ಬಸ್ಸನ್ನೇರಿ, ಮೆಟ್ರೋ ಹಿಡಿದು ಕೆಂಪು ಚೌಕದೆಡೆಗೆ ಬಂದು ಪಕ್ಕದ ಉದ್ಯಾನವನ್ನು ಹಾದು ಪುಷ್ಕಿನ್ ಆರ್ಟ್ ಗ್ಯಾಲರಿಗೆ ಬಂದೆವು. ಆದರೆ ಅಲ್ಲಿ ಮುಖ್ಯವಾದ ಶಿಲ್ಪ ಕಲಾವಿಭಾಗವನ್ನು ದುರಸ್ತು ಮಾಡುವ ಸಲುವಾಗಿ ಮುಚ್ಚಲಾಗಿತ್ತು. ನೋಡಲು ಅವಕಾಶವಿದ್ದ ಕೆಲವು ಭಾಗಗಳನ್ನು ಮಾತ್ರ ಹೊಕ್ಕೆವು. ಫ್ರೆಂಚ್, ಇಟಾಲಿಯನ್ ವರ್ಣಚಿತ್ರ ವಿಭಾಗದಲ್ಲಿ ಪ್ರಮುಖ ಕಲಾವಿದರ ಕೃತಿಗಳನ್ನಿರಿಸಲಾಗಿತ್ತು. ಒಂದೊಂದು ವಿಭಾಗದಲ್ಲೂ ಮೇಲ್ವಿಚಾರಣೆಗೆಂದು ವಯಸ್ಸಾದ ಮಹಿಳೆಯರು ಕೂತಿದ್ದರು. ಇದೇ ಪ್ರದರ್ಶನಾಲಯದಲ್ಲಿ ಎಸ್ಕಿಮೋ ಜನರ ಕಲಾ ಪ್ರದಶನವಿದೆ ಎಂದು ಕೂತ ಮುದುಕಿಯೊಬ್ಬಳು ತಿಳಿಸಿದಳು. ಅದನ್ನು ನೋಡಲೆಂದು ನಡೆದೆವು. ಎಸ್ಕಿಮೋ ಕಲೆ ಪ್ರಾಚೀನವಾದ ಆದಿವಾಸಿಗಳ ವಿಚಿತ್ರ ಕಲ್ಪನೆಗಳಿಗೆ ರೂಪು ಕೊಟ್ಟಂತೆ ಇತ್ತು ; ಆದರೂ ಅದರಲ್ಲಿ ಆ ಜನ ಬದುಕುವ ಪರಿಸರ ಸ್ಫುಟವಾಗಿ ಮೂಡಿತ್ತು. ಅಲ್ಲೆ ಒಂದೆಡೆ ಈಜಿಪ್ಟ್ ಕಲಾ ವಿಭಾಗ ತೆರೆದಿತ್ತು. ಅದನ್ನು ಪ್ರವೇಶಿಸಿದ ಕೂಡಲೇ ಸಾವಿರಾರು ವರ್ಷಗಳ ಹಿಂದಕ್ಕೆ ನಾವು ಹೋದಂತಾಯಿತು. ಈಜಿಪ್ಟಿನ ಸಂಸ್ಕೃತಿ – ನಾಗರಿಕತೆಯ ಪ್ರಾಚೀನ ಇತಿಹಾಸವನ್ನು ಹಂತ ಹಂತವಾಗಿ ಪರಿಚಯ ಮಾಡಿಕೊಡುವ ಅವಶೇಷಗಳು, ಐತಿಹಾಸಿಕ ಸಂಗತಿಯ ಶಿಲ್ಪಗಳು, ಪಿರಮಿಡ್ಡಿನ ಮಾದರಿಗಳು, ರಾಜರುಗಳ ಶಿಲಾ ಪ್ರತಿಮೆಗಳು, ಮಮ್ಮಿಗಳು – ಅಧಿಕ ಸಂಖ್ಯೆಯಲ್ಲಿದ್ದವು. ಇವನ್ನೆಲ್ಲ ಮುಗಿಸುವ ವೇಳೆಗೆ ಆಗಲೇ ಹನ್ನೆರಡು ಗಂಟೆ ಆಗಿತ್ತು. ಅಲ್ಲಿಂದ ಹೊರಟು ‘ನ್ಯಾಷನಲ್ ಹೋಟೆಲ್’ ನ ಕೆಫೆಗೆ ನುಗ್ಗಿದೆವು. ಅಂಥ ಗದ್ದಲವಿರಲಿಲ್ಲ. ಆದರೂ ಊಟ ಮುಗಿಯುವ ವೇಳೆಗೆ ಎರಡು ಗಂಟೆಯಾಗಿತ್ತು. ಅವಸರದಿಂದ, ಹತ್ತಿರವೇ ಇದ್ದ ‘ಇನ್‌ಸ್ಟಿಟ್ಯೂಟ್’ ಗೆ ಧಾವಿಸಿದೆವು. ಬಾಗಿಲಲ್ಲಿ ನಮ್ಮ ‘ಮೇಲಂಗಿ’ (ಓವರ್‌ಕೋಟ್) ಗಳನ್ನು ಕಳಚಿ, ಗುರುತಿನ ಬಿಲ್ಲೆ ತೆಗೆದುಕೊಂಡು ಒಳಗೆ ಬಂದೆವು. ಅನೇಕ ಕೊಠಡಿಗಳನ್ನು ಹಾದು ಡಾ. ಆಕ್ಸಿನೋವ್ ಅವರ ಕೊಠಡಿಯ ಬಳಿಗೆ ಬರುತ್ತಲೇ, ಡಾ. ಆಕ್ಸಿನೋವ್ ಅವರೇ ಎದ್ದು ಬಂದು ಕೈ ಕುಲುಕಿ ಒಳಗೆ ಕರೆದೊಯ್ದು ಕೂರಿಸಿದರು. ಈ ಎರಡು ದಿನ ನನ್ನನ್ನು ಕಾಯಿಸಿದ್ದಕ್ಕಾಗಿ ಕ್ಷಮೆ ಕೋರಿದರು. ‘ನೋಡಿ, ನೀವು ಬರುತ್ತೀರೆಂಬ ವಿಷಯದ ಬಗ್ಗೆ, ನಿಮ್ಮ  ಇಲ್ಲಿನ ಕಾರ್ಯಕ್ರಮದ ಬಗ್ಗೆ, ನಿಮ್ಮ ದೇಶದ ಸರ್ಕಾರದಿಂದ ಸಾಕಷ್ಟು ಮೊದಲೇ ಸುದ್ದಿಬಾರದೆ, ಸ್ವಲ್ಪ ತೊಂದರೆಯಾಗಿದೆ. ಅದೇನೇ  ಇರಲಿ, ಈಗ ನಾವು ಕೂತು ನಿಮ್ಮ ಕಾರ್ಯಕ್ರಮಗಳನ್ನು ನಿರ್ಧರಿಸೋಣ’ ಎಂದರು. ನಾನೂ ಅವರೂ ಕೂಡಲೆ ಕಾರ್ಯಕ್ರಮಗಳನ್ನು ಯೋಚಿಸಿದೆವು: ನಾನು ಕೊಡುವ ಉಪನ್ಯಾಸಗಳ ವಿವರ ; ಯಾವ ದಿನ ಯಾವ ಸಂಸ್ಥೆಯಲ್ಲಿ ಎಷ್ಟು ಹೊತ್ತಿಗೆ ನಾನು ಮಾತನಾಡಬೇಕೆಂಬುದರ ವ್ಯವಸ್ಥೆ; ನಾನು ಸಂದರ್ಶಿಸಬೇಕೆಂದಿರುವ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಪಟ್ಟಿ ;  ಜತೆಗೆ  ಮಾಸ್ಕೋ ನಗರದಲ್ಲಿ ನೋಡಬೇಕಾದ ಮಹತ್ವದ ಐತಿಹಾಸಿಕ ಸಾಂಸ್ಕೃತಿಕ ಸ್ಥಳಗಳ ವಿವರ – ಎಲ್ಲವನ್ನೂ ಚರ್ಚಿಸಿದೆವು. ‘ಮಾಸ್ಕೋ ಅಲ್ಲದೆ ಬೇರೆ ಇನ್ಯಾವ ಊರುಗಳಿಗಾದರೂ ನನ್ನನ್ನು ಕಳುಹಿಸುವ ಕಾರ್ಯಕ್ರಮ ಉಂಟೆ’ ಎಂದೆ. ‘ಗೊತ್ತಿಲ್ಲ’ ಎಂದರು. ‘ಲೆನಿನ್‌ಗ್ರಾಡ್ ನೋಡಬೇಕೆಂದು ನನಗೆ ಆಸೆ’ ಎಂದೆ. ‘ನೋಡೋಣ, ವಿದೇಶ ವ್ಯವಹಾರ ಶಾಖೆಯೊಂದಿಗೆ ಮಾತನಾಡುತ್ತೇನೆ’ ಎಂದರು. ‘ಕಡೇಪಕ್ಷ  ನಾನು ಮಹರ್ಷಿ ಟಾಲ್‌ಸ್ಟಾಯ್ ಅವರ ಹುಟ್ಟೂರಾದ ಯಾಸ್ನಾಯಾ ಪೋಲಾಯ್ನವನ್ನಾದರೂ ನೋಡಲೇಬೇಕು’ ಎಂದೆ. “Oh ! That is place of pilgrimage for every Indian” ಎಂದರು. ‘ನಿಮಗೆ ಇಷ್ಟರಲ್ಲೆ ಕಾರನ್ನು ಒದಗಿಸಲು ಏರ್ಪಾಡು ಮಾಡುತ್ತೇನೆ. ನೋಡಬೇಕಾದ ಸ್ಥಳಗಳನ್ನು ಬೇಗ ಬೇಗ ನೋಡಬಹುದು. ಸರಿ, ನಿಮಗೆ ಇನ್ನೇನನ್ನು ನೋಡಲು ಇಷ್ಟ ; ನಿಸ್ಸಂಕೋಚವಾಗಿ ಹೇಳಿ’ ಎಂದರು. ನಾನೆಂದೆ ‘ನಾನೂ ಒಬ್ಬ ಲೇಖಕ; ಇಲ್ಲಿನ ಕೆಲವು ಲೇಖಕರನ್ನು ಭೆಟ್ಟಿಯಾಗಬೇಕು; ಪ್ರಕಾಶನ ಸಂಸ್ಥೆಯನ್ನು, ಪುಸ್ತಕ  ಭಂಡಾರಗಳನ್ನು ಸಂದರ್ಶಿಸಬೇಕು’ ಎಂದೆ. ‘ಅದಕ್ಕೇನು, ಅಗತ್ಯವಾಗಿ ವ್ಯವಸ್ಥೆ ಮಾಡೋಣ. ನೀವು ಇನ್ನೆರಡು ದಿನ ಕಾಯಬೇಕು ಅಷ್ಟೆ. ನಾನು ವ್ಯವಸ್ಥೆ ಮಾಡಿದ ನಂತರ ಎಲ್ಲ ಸಲೀಸಾಗಿ ನಡೆಯುತ್ತದೆ ಎಂದು ಭರವಸೆ ನೀಡಿದರು. ನನ್ನ ಭಾಷಾ ಸಹಾಯಕ ವೊಲೋಜನನ್ನು ಬರಮಾಡಿಕೊಂಡು ಅರ್ಧಗಂಟೆ ರಷ್ಯನ್ ಭಾಷೆಯಲ್ಲಿ ಚರ್ಚಿಸಿ ಅವನ ಡೈರಿಯಲ್ಲಿ ನನ್ನ ಕಾರ್ಯಕ್ರಮಗಳ ಬಗ್ಗೆ ಗುರುತು ಹಾಕಿಸಿದರು.

ಡಾ. ಆಕ್ಸಿನೋವ್ ತುಂಬ ಚುರುಕಾದ ಮನುಷ್ಯ. ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತಾಡುತ್ತಾನೆ. ದೆಹಲಿಯಲ್ಲಿ ಮೂರು ವರ್ಷ ಇದ್ದು ರಷ್ಯನ್ ಭಾಷೆಯ ಕಲಿಕೆಗೆ ವ್ಯವಸ್ಥೆ ಮಾಡಿದನಂತೆ. ಈತ ಪಂಜಾಬಿ ಭಾಷೆಯನ್ನು ಇಲ್ಲಿ ಕಲಿಸುವ ಪ್ರೊಫೆಸರ್; ಹಾಗೂ ಈ ಸಂಸ್ಥೆಯ ನಿರ್ವಾಹಕ. ಮರುದಿನ ತನ್ನ ಸಂಸ್ಥೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಭೆಗೆ ಪರಿಚಯ ಮಾಡಿಕೊಡುವುದಾಗಿಯೂ, ಈ ಸಂಸ್ಥೆಯ ಬಗ್ಗೆ ವಿವರಗಳನ್ನು ತಿಳಿಸುವುದಾಗಿಯೂ ಭರವಸೆ ನೀಡಿ ಬೀಳ್ಕೊಟ್ಟ.

ಈ ವೇಳೆಗೆ ಮೂರುವರೆಯಾಗಿತ್ತು. ಸಂಜೆಯ ತನಕ ಇರುವ ಸಮಯದಲ್ಲಿ ಇನ್ನೂ ಒಂದು ಕಲಾಶಾಲೆಯನ್ನು ನೋಡುವುದೆಂದುಕೊಂಡೆವು. ‘ತ್ರಿತ್ಯಾಕೋವ್ ಆರ್ಟ್ಸ್ ಗ್ಯಾಲರಿ’ಯ ಬಳಿಗೆ ಬಂದು  ಟಿಕೇಟು ಕೊಂಡು, ಬಾಗಿಲಲ್ಲಿ ನಮ್ಮ ಮೇಲಂಗಿಗಳನ್ನು ಒಪ್ಪಿಸಿ ಒಳಗೆ ಹೊಕ್ಕೆವು.  ಇದು ಬಹುಶಃ ಅತ್ಯಂತ ದೊಡ್ಡ ಕಲಾಶಾಲೆ, ನಿಧಾನವಾಗಿ ನೋಡಿ ಮುಗಿಸಲು ಮೂರುನಾಲ್ಕು ಗಂಟೆಗಳಾದರೂ ಬೇಕು. ನೂರಾರು ಕೊಠಡಿಗಳು; ಸಾವಿರಾರು ಚಿತ್ರಗಳು. ರಷ್ಯದ ಇತಿಹಾಸಕ್ಕೆ ಸಂಬಂಧಪಟ್ಟವು; ರಷ್ಯದ ವಿವಿಧ ಪ್ರಾಂತ್ಯಗಳ ಸಂಸ್ಕೃತಿಗೆ, ದೃಶ್ಯಗಳಿಗೆ ಸಂಬಂಧಟಪಟ್ಟವು;  ರಷ್ಯದ ಜಾನಪದ ಕಲ್ಪನೆಗಳಿಗೆ ರೂಪು ಕೊಡುವಂಥವು; ರಷ್ಯಾದ ಆಧುನಿಕ ಕ್ರಾಂತಿಯ ಇತಿಹಾಸ ಹಾಗೂ ವ್ಯಕ್ತಿಗಳಿಗೆ ಸಂಬಂಧಪಟ್ಟವು. ಚಿತ್ರಗಳಲ್ಲದೆ ಶಿಲಾಶಿಲ್ಪಗಳೂ ಸಾಕಷ್ಟಿವೆ. ಏನು ನೋಡಿದೆ ಎಂಬುದನ್ನೇ ನೆನಪಿನಲ್ಲಿಡಲಾರದಷ್ಟು ಸಂಖ್ಯೆಯ ಸಂಗ್ರಹಗಳನ್ನು ನೋಡಿ ಮುಗಿಸುವ ವೇಳೆಗೆ ಕಾಲುಗಳು ಬಿದ್ದುಹೋದವು.