ತೇರನೆಳೆವರು ನಾವು – ಎಲ್ಲಿದ್ದರೇನು ?
ಬೊಂಬಾಯಿ ಮದರಾಸು ಕಲ್ಕತ್ತ ಡೆಲ್ಲಿ
ಎಲ್ಲ್ಲೆಂದರಲ್ಲಿ,
ಕನ್ನಡದ ಉಸಿರಾಡುವೆದೆಗಳಿರುವಲ್ಲಿ
ಕನ್ನಡದ ಸತ್ವಗಳ ಬೀಜಗಳ ಚೆಲ್ಲಿ
ತೇರ ಮಿಣಿ ಹಾಸಿರಲು
ಹಿಡಿದುಕೊಳ್ಳಿರೊ ಅದನು
ಎಲ್ಲಿದ್ದರೇನು?

ಕೋಟಿ ಕೈಗಳ ಕೂಟ, ಕೋಟಿ ಕಣ್ಗಳ ನೋಟ
ಕೋಟಿ ಹೃದಯದ ಮಿಲನದಾಟದಲ್ಲಿ
ಎದೆ ಎದೆಯ ಬಿಂದಿಗೆಯ ತುಂಬ ತುಂಬಿರುವಂಥ
ಉತ್ಸಾಹದಭಿಷೇಕ ವಾರಿಯಲ್ಲಿ
ಮುಂದೆ ಬನ್ನಿರೊ ಬನ್ನಿ
ಕವಿಮನೋರಥಗಳನು ಬಾಳ ಬೀದಿಯ ಮೇಲೆ
ಎಳೆಯ ಬನ್ನಿ.

ಕನ್ನಡದ ತಾಯ ಮುಖಬಿಂಬ ನಿಮ್ಮೆದೆಯಲ್ಲಿ ಬಿಂಬಿಸಿರೆ
ನಂಬುಗೆಯ ತುಂಬುಗೈ ನೀಡಬನ್ನಿ.
“ಭುವನೇಶ್ವರೀ ದೇವಿ ರಥವನೇರಿದಳು
ಜಯ್ ರಾಜೇಶ್ವರೀ ಕನ್ನಡಿಗರೊಡತೀ !”

ಓ ಎಳೆಯಿರೋ ಕನ್ನಡದ ತೇರ
ನೀವು ನಿಂತಿರುವಂಥ ನೆಲೆಗಳಿಂದ.
ನಾವೆಲ್ಲರೂ ಒಂದು : ತೇರೆಳೆವ ಜನರು.
ಆ ಊರೊ, ಈ ಊರೊ, ಹಿಂದೆಯೋ ಮುಂದೆಯೋ
ಎಲ್ಲಿಯೋ ಒಂದು ಕಡೆ ಕೈ ಹಾಕಿದವರು.