ಬಹುಬೇಗ ಬೆಳೆಯುವ ಮೃದು ಕಾಂಡದ ಬಳ್ಳಿ ಸಸ್ಯ. ಒಮ್ಮೆ ನೆಟ್ಟಲ್ಲಿ ಬಹುಕಾಲ ಕಾಯಿ ಬಿಡುತ್ತಿರುತ್ತದೆ.

ಪೌಷ್ಟಿಕ ಗುಣಗಳು: ಕಾಯಿಗಳಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಕಬ್ಬಿಣ, ಜೀವಸತ್ವಗಳು ಇರುತ್ತವೆ.

೧೦೦ ಗ್ರಾಂ ತೊಂಡೆ ಕಾಯಿಗಳಲ್ಲಿನ ವಿವಿಧ ಪೋಷಕಾಂಶಗಳು

ತೇವಾಂಶ ೯೩.೧ ಗ್ರಾಂ
ಶರ್ಕರಪಿಷ್ಟ ೩.೫ ಗ್ರಾಂ
ಪ್ರೊಟೀನ್ ೧.೨ ಗ್ರಾಂ
ಕೊಬ್ಬು ೦.೧ ಗ್ರಾಂ
ಒಟ್ಟು ಖನಿಜ ಪದಾರ್ಥ ೦.೫ ಗ್ರಾಂ
ಕಬ್ಬಿಣ ೦.೧೪ ಗ್ರಾಂ
ಸುಣ್ಣ ೦.೦೪ ಗ್ರಾಂ
’ಎ’ ಜೀವಸತ್ವ ೨೬೦ ಐ.ಯು.
’ಸಿ’ ಜೀವಸತ್ವ ೨೮ ಮಿ.ಗ್ರಾಂ
ರೈಬೋಪ್ಲೇವಿನ್
ನಯಾಸಿನ್

ಔಷಧೀಯ ಗುಣಗಳು : ತೊಂಡೆಕಾಯಿ ಸುಲಭವಾಗಿ ಜೀರ್ಣಗೊಳ್ಳುವ ತರಕಾರಿ. ಅವುಗಳಲ್ಲಿ ಮೂತ್ರವರ್ಧಕ ಹಾಗೂ ವಿರೇಚಕ ಗುಣಗಳಿವೆ. ಅವುಗಳ ಸೇವನೆಯಿಂದ ಮೆದುಳು ಮತ್ತು ಹೃದಯ ಬಲಗೊಳ್ಳುತ್ತವೆ. ತೊಂಡೆಹಣ್ಣು ಕಾಮೋತ್ತೇಜಕ. ದಣಿವನ್ನು ಹೋಗಲಾಡಿಸುವ ಶಕ್ತಿ ಇದೆ. ರಕ್ತದ ಕಾಯಿಲೆಗಳಲ್ಲಿ ಗುಣಕಾರಕ. ಕಾಯಿಗಳನ್ನು ತಿನ್ನುತ್ತಿದ್ದಲ್ಲಿ ಬಾಯಿಯ ದುರ್ಗಂಧ ದೂರಗೊಳ್ಳುವುದು. ಕರುಳುಗಳಲ್ಲಿ ಒಗರನ್ನುಂಟು ಮಾಡುತ್ತವೆ. ತೊಂಡೆ ಎಲೆಗಳು ಶೈತ್ಯಕಾರಕ. ಗಾಯ, ವ್ರಣ ಮುಂತಾದುವುಗಳ ಮೇಲೆ ಹರಡಿ ಕಟ್ಟಿದಾಗ ಉಪಶಮನ ಸಿಗುತ್ತದೆ. ಸಕ್ಕರೆ ಕಾಯಿಲೆಗೆ ಒಳ್ಳೆಯದು. ಚರ್ಮವ್ಯಾದಿಗಳಲ್ಲಿ ಎಲೆಗಳ ರಸವನ್ನು ಲೇಪಿಸುವುದುಂಟು. ಹೂವು ಕಾಮಾಲೆ ರೋಗಕ್ಕೆ ಪರಿಣಾಮಕಾರಕ. ಬೇರು ತೊಗಟೆ ವಿರೇಚಕ.

ಉಗಮ ಮತ್ತು ಹಂಚಿಕೆ : ತೊಂಡೆಯ ತವರೂರು ಏಷ್ಯಾ ಮತ್ತು ಉತ್ತರ ಆಫ್ರಿಕಾಗಳ ಉಷ್ಣಪ್ರದೇಶಗಳು. ಅಸ್ಸಾಂ ಸಹ ಇದರ ಮೂಲಸ್ಥಾನ ಎಂದು ಭಾವಿಸಲಾಗಿದೆ. ಕೆಲವೆಡೆಗಳಲ್ಲಿ ಇದು ಕಾಡು ಬಳ್ಳಿಯಾಗಿ ಕಂಡುಬರುತ್ತದೆ. ಇದರ ಬೇಸಾಯ ಭಾರತ, ಶ್ರೀಲಂಕಾ, ಮಲೇಷ್ಯಾ, ಆಫ್ರಿಕಾ ಮುಂತಾಗಿ ಕಂಡುಬರುತ್ತದೆ.

ಸಸ್ಯ ವರ್ಣನೆ : ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ಬಳ್ಳಿ. ಕಾಡುಬಗೆಗಳ ಕಾಯಿ ರುಚಿಯಲ್ಲಿ ಕಹಿಯಾಗಿರುತ್ತವೆ. ಬೇಸಾಯದ ಬಗೆಗಳು ರುಚಿಕರ, ಎಳೆಯವಿದ್ದಷ್ಟೂ ರುಚಿ ಜಾಸ್ತಿ;; ಬಹುಮಟ್ಟಿಗೆ ಸೌತೆಕಾಯಿಯ ರುಚಿ ಇರುತ್ತದೆ.

ಕಾಂಡ ಬಲಹೀನ; ಮೃದುವಾಗಿರುತ್ತದೆ. ಅದರಲ್ಲಿ ಹಲವಾರು ಕವಲುಗಳಿರುತ್ತವೆ. ಕಾಂಡದ ಉದ್ದಕ್ಕೆ ಉಬ್ಬಿದ ಏಣುಗಳಿರುತ್ತವೆ. ಕಾಂಡ ಎಳೆಯದಿದ್ದಾಗ ಹಸುರು ಬಣ್ಣವಿರುತ್ತದೆ. ಬಲಿತಂತೆಲ್ಲಾ ಸಿಪ್ಪೆ ಕಂದುಬೂದು ಬಣ್ಣವಾಗುತ್ತದೆ. ಹಾಗೂ ಅದರಲ್ಲಿ ನಾರಿನ ಅಂಶ ಹೆಚ್ಚುತ್ತದೆ. ಗೆಣ್ಣು ಹಾಗೂ ಗೆಣ್ಣಿ ನಂತರ ಸ್ಪಷ್ಟ. ನುಲಿ ಬಳ್ಳಿಗಳು ಸರಳವಿರುತ್ತವೆ. ಅವುಗಳ ನೆರವಿನಿಂದ ಹಂಬು ಮೇಲಕ್ಕೇರಲು ಸಾಧ್ಯವಾಗುತ್ತದೆ. ನುಲಿಬಳ್ಳಿಗಳಲ್ಲಿ ಕವಲುಗಳಿರುವುದಿಲ್ಲ. ಎಲೆಗಳು ೫ ರಿಂದ ೧೦ ಸೆಂ.ಮೀ. ಅಗಲ ಮತ್ತು ಅಷ್ಟೇ ಉದ್ದವಿದ್ದು ಹೃದಯಾಕಾರವಿರುತ್ತವೆ. ಎಲೆಗಳಿಗೆ ತೊಟ್ಟು ಇರುತ್ತದೆಯಾದರೂ ಪರ್ವಪುಚ್ಛಗಳಿರುವುದಿಲ್ಲ. ಎಲೆಗಳ ಬಣ್ಣ ಹಸುರು. ನರಬಲೆ ಕಟ್ಟು ಸ್ಫುಟ. ತೊಟ್ಟಿನ ಕಡೆಯಿಂದ ಐದು ಮುಖ್ಯನರಗಳು ಹೊರಟು ಅಂಚಿನ ಕಡೆಗೆ ಸಾಗುತ್ತವೆ. ನರಗಳು ಕವಲೊಡೆದಿರುತ್ತವೆ. ಕೆಲವೊಮ್ಮೆ ನರಗಳ ನಡುವಣ ಭಾಗದಲ್ಲಿ ವೃತ್ತಾಕಾರದ ಗ್ರಂಥಿಗಳು ಇರುವುದುಂಟು.

ಇದರಲ್ಲಿ ಗಂಡು ಮತ್ತು ಹೆಣ್ಣು ಹೂವು ಬೇರೆ ಬೇರೆ, ಹೂವು ಸಾಧಾರಣ ದೊಡ್ಡವಿರುತ್ತವೆ. ಅವುಗಳ ಬಣ್ಣ ಬಿಳುಪು. ಹೂತೊಟ್ಟು ಸಣ್ಣದು. ಹೂಗಳಲ್ಲಿ ರಕ್ಷಾಪತ್ರಗಳು ಇರುವುದಿಲ್ಲ. ಗಂಡು ಹೂವು ೨ ರಿಂದ ೪ ಸೆಂ.ಮೀ. ಉದ್ದವಿದ್ದು, ಮೃದುವಾದ ಪುಷ್ಪ ಪಾತ್ರೆಯ ಎಸಳುಗಳಿಂದ ಕೂಡಿರುತ್ತವೆ. ಎಸಳುಗಳ ಉದ್ದ ೪ ರಿಂದ ೫ ಮಿ.ಮೀ. ಒಟ್ಟು ಐದು ಎಸಳುಗಳಿದ್ದು ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಪುಷ್ಪದಳಗಳ ಸಂಖ್ಯೆ ಐದು. ಅವು ಸುಮಾರು ೨.೫ ಸೆಂ.ಮೀ. ಉದ್ದವಿದ್ದು ಮೇಲೆಲ್ಲಾ ನರಗಳನ್ನು ಹೊಂದಿರುತ್ತವೆ. ಹೂವು ಗಂಟೆಯಾಕಾರ. ಪರಾಗಕೋಶಗಳು ಗೋಲಾಕಾರ. ಕೇಸರಗಳು ಐದು, ಅಂಟಿಕೊಂಡಿರುತ್ತವೆ. ಪರಾಗ ಮೂಲೆಗಳಿಂದ ಕೂಡಿರುತ್ತವೆ. ಅವುಗಳ ಪೈಕಿ ಕೆಲವು ನಿರರ್ಥಕ. ಹೆಣ್ಣು ಹೂಗಳಲ್ಲಿ ಕೇಸರ ಭಾಗಗಳಿದ್ದು ಅಧೋಸ್ಥಿತಿಯ ಅಂಡಾಶಯವನ್ನು ಹೊಂದಿರುತ್ತವೆ. ಕಾಯಿಯಲ್ಲಿ ಮೂರುಭಾಗ; ಅಂಡಕದ ಆಧಾರ ಸಿಪ್ಪೆಯ ಒಳಗೋಡೆಗೆ ಅಂಟಿಕೊಂಡಿರುತ್ತವೆ. ಇದರ ಹೂವು ಅರಳುವುದು ರಾತ್ರಿ ಸಮಯದಲ್ಲಿ. ಕೀಟಗಳು ಪರಾಗಸ್ಪರ್ಶದಲ್ಲಿ ನೆರವಾಗುತ್ತವೆ. ಹೂಗಳಲ್ಲಿ ಸ್ವಲ್ಪ ಪ್ರಮಾಣದ ಮಕರಂದವಿರುತ್ತದೆ. ಕಾಯಿ ಉದ್ದನಾಗಿ, ದುಂಡಗೆ ಉರುಳೆಯಂತಿದ್ದು ಬುಡ ಮತ್ತು ತುದಿಗಳತ್ತ ಚೂಪಾಗಿರುತ್ತವೆ. ಬಿಡಿಕಾಯಿಗಳು ೨.೫ ರಿಂದ ೭.೫ ಸೆಂ.ಮೀ. ಉದ್ದ ಮತ್ತು ೧.೨೫ ರಿಂದ ೨.೫ ಸೆಂ.ಮೀ. ದಪ್ಪ ಇರುತ್ತವೆ. ಅವುಗಳ ಬಣ್ಣ ಹಸುರು ಇಲ್ಲವೇ ಬಿಳುಪು. ಕೆಲವೊಂದರಲ್ಲಿ ಪಟ್ಟಿಗಳಿರುತ್ತವೆ. ಹಣ್ಣು ಪ್ರಾರಂಭಕ್ಕೆ ತುದಿಯತ್ತ ಕೆಂಪಗಾಗಿ ಅನಂತರ ಉಳಿದ ಭಾಗ ಸಹ ಕೆಂಪು ಬಣ್ಣವಾಗುತ್ತವೆ. ತಿರುಳೂ ಸಹ ಕೆಂಪು ಬಣ್ಣ ತಾಳುತ್ತದೆ. ಬೀಜ ಸಣ್ಣ; ಉದ್ದನಾಗಿ ಮೊಟ್ಟೆಯಾಕರ, ಬಣ್ಣ ಹಳದಿಬೂದು. ಹಸಿಯಾಗಿರುವಾಗ ಮೇಲೆಲ್ಲಾ ಲೋಳೆ ಪದಾರ್ಥವಿರುತ್ತದೆ. ಒಣಗಿದಾಗ ನವಿರಾದ ತುಪ್ಪಳ ಕಂಡುಬರುತ್ತದೆ. ಬೀಜ ಬಿತ್ತಿ ಬೆಳೆದಲ್ಲಿ ತಾಯಿಬೇರು ಮುರಿಯುವುದಿಲ್ಲ. ಹಂಬುಗಳನ್ನು ನೆಟ್ಟಾಗ ಜಲ್ಲಿ ಬೇರು ಅಧಿಕ ಸಂಖ್ಯೆಯಲ್ಲಿರುತ್ತವೆ. ಒಮ್ಮೆ ನೆಟ್ಟರೆ ಬಹುಕಾಲ ಫಸಲು ಸಿಗುತ್ತಿರುತ್ತದೆ.

ತಳಿ ಅಭಿವೃದ್ಧಿ : ತೊಂಡೆ ಉತ್ತಮ ದರ್ಜೆಯ ತರಕಾರಿಯಾದಾಗ್ಯೂ ಅದರ ಸುಧಾರಣೆಗೆ ಅಷ್ಟೊಂದು ಗಮನ ಕೊಟ್ಟಿಲ್ಲ. ಕೆಲವೊಂದು ಬಗೆಗಳಲ್ಲಿ ದೊಡ್ಡ ಗಾತ್ರದ ಕಾಲ ಬಿಡುತ್ತವೆ. ಅಂತಹ ಬಗೆಗಳನ್ನು ಹೆಚ್ಚಾಗಿ ಬೆಳೆಯುವಂತಾಗಬೇಕು. ಗಂಡು ಹೂವು ಕಡಿಮೆ ಸಂಖ್ಯೆಯಲ್ಲಿ ಬಿಟ್ಟರೆ ಲಾಭದಾಯಕ. ಅಧಿಕ ಇಳುವರಿ ಕೊಡುವ ಹಾಗೂ ಉತ್ತಮ ಗುಣಗಳಿಂದ ಕೂಡಿದ ತಳಿಗಳು ಬೇಕಗಿವೆ.

ಹವಾಗುಣ :  ತೊಂಡೆಯ ಬೇಸಾಯಕ್ಕೆ ಬಿಸಿಲಿನಿಂದ ಕೂಡಿದ ಆರ್ದ್ರ ಹವಾಗುಣ ಉತ್ತಮ. ಚೆನ್ನಾಗಿ ಮಳೆಯಾಗುವ ಪ್ರದೇಶಗಳಲ್ಲಿ ಬೆಳವಣಿಗೆ ಜಾಸ್ತಿ. ಹಿಮದ ವಾತಾವರಣ ಹಿಡಿಸುವುದಿಲ್ಲ. ಬಿಸಿ ಅಥವಾ ಚಳಿಯಿಂದ ಕೂಡಿದ ಗಾಳಿ ಸೂಕ್ತವಲ್ಲ. ಬಹುಕಾಲ ಒಂದೇ ಸಮನೆ ಮಳೆಯಾಗುತ್ತಿದ್ದರೆ ರೋಗ ಮತ್ತು ಕೀಟಗಳ ಕಾಟ ಹೆಚ್ಚಾಗುತ್ತದೆ. ಹಾಗೂ ಎಲೆಗಳೆಲ್ಲಾ ಉದುರಿ ಬೀಳುತ್ತವೆ.

ಭೂಗುಣ : ಇದಕ್ಕೆ ನೀರು ಬಸಿಯುವ ಮರಳುಗೋಡು ಅತ್ಯುತ್ತಮ. ತೀರಾ ಮರಳಿದ್ದರೆ ಅಂತಹ ಮಣ್ಣಿಗೆ ಕೆಂಪು ಮಣ್ಣು ಅಥವಾ ಕಪ್ಪು ಚಿಗುಟು ಮಣ್ಣನ್ನು ಸೇರಿಸಬೇಕು. ಬಹಳಷ್ಟು ಕಪ್ಪು ಜೇಡಿ ಅಥವಾ ಜಿಗುಟು ಮಣ್ಣಾದಲ್ಲಿ ನೀರು ಬೇಗ ಬಸಿಯದೆ, ಬೇರುಗಳಿಗೆ ತೊಂದರೆಯಾಗುತ್ತದೆ.

ತಳಿಗಳು : ಇದರಲ್ಲಿ ನಿರ್ದಿಷ್ಟ ತಳಿಗಳಂತೇನೂ ಇಲ್ಲ. ಸಾಮಾನ್ಯವಾಗಿ ಕಂಡುಬರುವುದು ಹಸುರು, ಬಿಳಿ ಮತ್ತು ಬಿಳಿಪಟ್ಟೆಗಳಿಂದ ಕೂಡಿದ ಕಾಯಿ ಬಗೆಗಳು. ಸ್ವಲ್ಪ ಗುಂಡಗಿರುವ, ಮೋಟುಕಾಯಿಗಳ ಬಗ್ಗೆ ಹಳ್ಳಿಗಳಲ್ಲಿ ಕಂಡುಬರುತ್ತದೆ. ಅದರ ಕಾಯಿಗಳ ಗುಣಮಟ್ಟ ಅಷ್ಟಕಷ್ಟೇ. ಉದ್ದ ಹಾಗೂ ದೊಡ್ಡ ಗಾತ್ರದ ಬಿಳಿ ಕಾಯಿಗಳಿಗೆ ಬೇಡಿಕೆ ಜಾಸ್ತಿ.

ಸಸ್ಯಾಭಿವೃದ್ಧಿ : ತೊಂಡೆಯನ್ನು ಬೀಜ ಊರಿ ಹಾಗೂ ಹಂಬು ತುಂಡುಗಳನ್ನು ನೆಟ್ಟು ವೃದ್ಧಿ ಮಾಡಬಹುದು. ಬೀಜ ಪದ್ಧತಿ ನಿಧಾನ. ಈ ಪದ್ಧತಿಯಲ್ಲಿ ಹೆಚ್ಚಿನ ಸಂಖ್ಯೆಯ ಗಂಡು ಗಿಡಗಳು ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ನಿರ್ಲಿಂಗ ವಿಧಾನ ಸುಲಭ; ಗಿಡಗಳು ಬಹುಬೇಗ ಬೆಳೆದು ಫಸಲನ್ನು ಬಿಡುತ್ತವೆ. ಹೆಣ್ಣು ಬಳ್ಳಿಗಳಿಂದ ಚೆನ್ನಾಗಿ ಬಲಿತ ಹಂಬುತುಂಡುಗಳನ್ನು ಆರಿಸಿಕೊಳ್ಳಬೇಕು. ಹಂಬುತುಂಡುಗಳು ಕಡೇ ಪಕ್ಷ ೩೦ ಸೆಂ.ಮೀ. ಉದ್ದವಿದ್ದು, ೧ ಸೆಂ.ಮೀ. ದಪ್ಪ ಇರುವುದು ಅಗತ್ಯ. ಅವುಗಳಲ್ಲಿ ತಲಾ ೩ ಗೆಣ್ಣುಗಳಿದ್ದರೆ ಸಾಕು. ಅವುಗಳ ಬುಡಭಾಗವನ್ನು ೫೦-೧೦೦ ಪಿಪಿಎಂ ಸಾಮರ್ಥ್ಯದ ಇಂಡೋಲ್ ಅಸೆಟಿಕ್ ಆಮ್ಲ ಮತ್ತು ೫೦ ಪಿಪಿಎಂ ಸಾಮರ್ಥ್ಯದ ನ್ಯಾಫ್ತಲಿನ್ ಅಸೆಟಿಕ್ ಆಮ್ಲಗಳಲ್ಲಿ ಅದ್ದಿದಾಗ ಅಧಿಕ ಸಂಖ್ಯೆಯಲ್ಲಿ ಬೇರುಬಿಟ್ಟಿದ್ದೇ ಅಲ್ಲದೆ ಗಿಡಗಳು ಬಹುಬೇಗ ವೃದ್ಧಿ ಹೊಂದಿದ್ದಾಗಿ ಸಂಶೋಧನೆಗಳಿಂದ ತಿಳಿದುಬಂದಿದೆ. ಬೇರುಗೆಡ್ಡೆಗಳ ಮೂಲಕವೂ ಸಹ ಇದನ್ನು ವೃದ್ಧಿ ಮಾಡಬಹುದು. ಜೂನ್-ಜುಲೈ ಸೂಕ್ತ; ಸುಮಾರು ೬೦ ದಿನಗಳಲ್ಲಿ ಬೇರು ಬಿಟ್ಟು ಚಿಗುರು ತಳ್ಳುತ್ತವೆ. ಸಾಮಾನ್ಯವಾಗಿ ಬಳ್ಳಿಗಳನ್ನು ಸವರಿದಾಗ ಹಂಬುತುಂಡುಗಳನ್ನು ಸಿದ್ಧಗೊಳಿಸಿ, ಒಟ್ಲು ಪಾತಿಗಳಲ್ಲಿ ನೆಡುವುದು ರೂಢಿಯಲ್ಲಿದೆ. ಹಂಬುತುಂಡುಗಳನ್ನು ಬುಡದ ಎರಡು ಗೆಣ್ಣುಗಳ ಮಣ್ಣೊಳಗೆ ಇಳಿಯುವಂತೆ ನೆಟ್ಟು, ಬುಡದ ಸುತ್ತ ಹಸಿ ಮಣ್ಣನ್ನು ಬಿಗಿಯಾಗಿ ಅದುಮಬೇಕು. ಹದವರಿತು ನೀರು ಕೊಡಬೇಕು.

ಭೂಮಿ ಸಿದ್ಧತೆ ಮತ್ತು ನೆಡುವುದು : ಸೂಕ್ತ ಅಂತರದಲ್ಲಿ ೬೦ ಸೆಂ.ಮೀ. ಗಾತ್ರದ ಗುಂಡುಗಳನ್ನು ಮೇ-ಜೂನ್ ಸುಮಾರಿಗೆ ತೆಗೆದು ಬಿಸಿಲಿಗೆ ಬಿಡಬೇಕು. ಒಂದೆರಡು ಮಳೆಗಳಾದ ನಂತರ ಮೇಲ್ಮಣ್ಣು ಮತ್ತು ತಿಪ್ಪೆಗೊಬ್ಬರಗಳನ್ನು ಹರಡಿ ತುಂಬಬೇಕು. ಸಾಲು ಮತ್ತು ಸಸಿಗಳ ನಡುವೆ ೧.೬ ರಿಂದ ೨.೪ ಮೀಟರ್‌ಗಳಷ್ಟು ಅಂತರ ಕೊಡಬಹುದು. ಪ್ರತಿ ಗುಂಡಿಗೆ ಒಂದರಂತೆ ಚೆನ್ನಾಗಿ ಬೇರುಬಿಟ್ಟು ಚಿಗುರೊಡೆದ ಹಂಬುತುಂಡನ್ನು ನೆಟ್ಟು, ಊರೆಗೋಲು ಸಿಕ್ಕಿಸಿ ಕಟ್ಟಬೇಕು. ಸಸಿಗಳನ್ನು ಜೂನ್-ಜುಲೈ ಅಥವಾ ಆಗಸ್ಟ್-ಸೆಪ್ಟೆಂಬರ್ ಸಮಯದಲ್ಲಿ ನೆಡುವುದು ಒಳ್ಳೆಯದು.

ಗೊಬ್ಬರ : ಇದಕ್ಕೆ ಅಧಿಕ ಪ್ರಮಾಣದ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿ ಹೆಕ್ಟೇರಿಗೆ ೨೫ ಟನ್ ತಿಪ್ಪೆ ಗೊಬ್ಬರ, ೫೦ ಕಿ.ಗ್ರಾಂ ಸಾರಜನಕ, ೧೦೦ ಕಿ.ಗ್ರಾಂ ರಂಜಕ ಮತ್ತು ೫೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಕೊಡಲು ಸೂಚಿಸಿದೆ. ರಾಸಾಯನಿಕ ಗೊಬ್ಬರಗಳನ್ನು ಎರಡು ಸಮಕಂತುಗಳಲ್ಲಿ ಕೊಡುವುದು ಲಾಭದಾಯಕ. ಕೈತೋಟದಲ್ಲಿ ಬೆಳೆದಾಗ ಪ್ರತಿ ಬಳ್ಳಿಗೆ ೩೦ ಕಿ.ಗ್ರಾಂ. ತಿಪ್ಪೆಗೊಬ್ಬರವನ್ನು ಎರಡು ಮೂರು ಸಮಕಂತುಗಳಲ್ಲಿ ಕೊಟ್ಟರೆ ಸಾಕು.

ನೀರಾವರಿ : ಈ ಬೆಳೆಗೆ ಮಣ್ಣು ಯಾವಾಗಲೂ ಹಸಿಯಾಗಿರಬೇಕು. ಹದವರಿತು ನೀರು ಕೊಡುವುದು ಬಹುಮುಖ್ಯ. ನಾಲ್ಕೈದು ದಿನಗಳಿಗೊಮ್ಮೆ ನೀರು ಕೊಟ್ಟರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ತೆಗೆಯಬೇಕು ಹಾಗೂ ಅಂತರ ಬೇಸಾಯ ಹಗುರವಾಗಿರಬೇಕು.

ಹಬ್ಬಿಸುವುದು ಮತ್ತು ಸವರುವಿಕೆ : ತೊಂಡೆ ಬಹುವಾರ್ಷಿಕ ಬೆಳೆ. ಆದ್ದರಿಂದ ದ್ರಾಕ್ಷಿ ಬೆಳೆಗೆ ಹಾಕುವಂತೆ ಬಲವಾದ ತಂತಿಯ ಚಪ್ಪರ ನಿರ್ಮಿಸಬೇಕು. ನೆಲಮಟ್ಟದಿಂದ ೧.೮ ಮೀಟರ್ ಎತ್ತರದಲ್ಲಿ ತಂತಿಯ ಬಲೆ ಹರಡಿ ಬಿಗಿದುಕಟ್ಟಿದ್ದರೆ ಸಾಕು. ಸುಮಾರು ಆರು ತಿಂಗಳಲ್ಲಿ ಹಂಬುಗಳು ಚಪ್ಪರವನ್ನಾಕ್ರಮಿಸುತ್ತವೆ. ಹಂಬುಗಳನ್ನು ಪ್ರತಿವರ್ಷ ಸವರಿ ಮೊಟಕು ಮಾಡಬೇಕು. ನೆಲಮಟ್ಟದಿಂದ ೩೦-೬೦ ಸೆಂ.ಮೀ. ಎತ್ತರದಲ್ಲಿ ಸವರಿದರೆ ಸಾಕು. ಸವರಿದ ಕೂಡಲೇ ಗೊಬ್ಬರ – ನೀರು ಕೊಟ್ಟಲ್ಲಿ ಹೊಸಚಿಗುರು ಬೆಳೆಯುತ್ತದೆ. ಹೀಗೆ ಸುಮಾರು ನಾಲ್ಕು ವರ್ಷಗಳವರೆಗೆ ಒಳ್ಳೆಯ ಫಸಲು ಸಿಗುತ್ತಿರುತ್ತದೆ. ಅನಂತರ ಅವುಗಳನ್ನು ಕಿತ್ತು ಬೇರೆ ಬೆಳೆಯನ್ನಿಡಬೇಕು.

ಕೊಯ್ಲು ಮತ್ತು ಇಳುವರಿ : ಸಸಿಗಳನ್ನು ನೆಟ್ಟ ಆರು ತಿಂಗಳಲ್ಲಿ ಒಳ್ಳೆಯ ಫಸಲು ಸಿಗುತ್ತದೆ. ಏಪ್ರಿಲ್-ನವೆಂಬರ್ ಹೆಚ್ಚು ಇಳುವರಿ ಸಿಗುವ ಕಾಲ. ಕಾಯಿ ಎಳೆಯವಿದ್ದಷ್ಟೂ ಬೇಡಿಕೆ ಜಾಸ್ತಿ. ಮೂರು – ನಾಲ್ಕು ದಿನಗಳಿಗೊಮ್ಮೆ ಕಾಯಿಗಳನ್ನು ಬಿಡಿಸಬೇಕು. ಒಂದೊಂದು ಬಳ್ಳಿಗೆ ೫೦೦೦-೭೦೦೦ ಕಾಯಿ ಸಾಧ್ಯ. ಹೆಕ್ಟೇರಿಗೆ ೩೫-೪೦ ಟನ್ ಕಾಯಿ ಸಿಗುತ್ತವೆ. ಉತ್ತಮ ನಿರ್ವಹಣೆಯಲ್ಲಿ ಹೆಕ್ಟೇರಿಗೆ ೧೦೦ ಟನ್ನುಗಳಷ್ಟು ಇಳುವರಿ ಪಡೆದ ಉದಾಹರಣೆಗಳುಂಟು.

ಕೀಟ ಮತ್ತು ರೋಗಗಳು :

. ಸಸ್ಯಹೇನು : ಈ ಕೀಟಗಳು ಎಲೆ ಮತ್ತು ಹೂಗಳಿಗೆ ಮುತ್ತಿ, ರಸ ಹೀರುತ್ತವೆ. ಹಾನಿಗೀಡಾದ ಭಾಗಗಳು ಸುರುಟಿಗೊಳ್ಳುತ್ತವೆ. ಅವುಗಳನ್ನು ಕೂಡಲೇ ಹತೋಟಿ ಮಾಡಬೇಕ. ಇವುರಗಳ ಹತೋಟಿಗೆ ೧೦ ಲೀಟರ್ ನೀರಿಗೆ ೨೫ ಮಿ.ಲೀ. ಮ್ಯಾಲಾಥಿಯಾನ್ ಇಲ್ಲವೇ ಪ್ಯಾರಾಥಿಯಾನ್ ಕೀಟನಾಶಕ ಬೆರೆಸಿ ಸಿಂಪಡಿಸಬೇಕು.

. ನುಶಿ : ಇವು ಸೂಕ್ಷ್ಮ ಕೀಟಗಳಿದ್ದು ಸಸ್ಯಭಾಗಗಳ ಹಸಿರನ್ನು ಕೆರೆದು ತಿನ್ನುತ್ತವೆ. ಇವುಗಳ ಹತೋಟಿ ಸಸ್ಯಹೇನುಗಳಲ್ಲಿ ಇದ್ದಂತೆ.

. ಗಂಟುನೊಣ : ಇವು ಚಿಗುರು ಭಾಗಗಳಲ್ಲಿ ರಂಧ್ರಗಳನ್ನುಂಟು ಮಾಡುತ್ತವೆ. ಇದರಿಂದ ಸಸ್ಯಬೆಳವಣಿಗೆ ಕುಂಠಿತಗೊಂಡು ಅಲ್ಲೆಲ್ಲಾ ಗಂಟುಗಳೇರ್ಪಡುತ್ತವೆ. ತೋಟದಲ್ಲಿ ಶುಚಿತ್ವ ಮುಖ್ಯ. ಇದರ ಹತೋಟಿಗೆ ಸೂಕ್ತ ಕ್ರಮಗಳು ಇನ್ನೂ ಕಂಡುಬಂದಿಲ್ಲ.

. ಕುಂಬಳದ ದುಂಬಿ : ಇವುಗಳಲ್ಲಿ ಮೂರು ಬಗೆ. ಪ್ರಾಯದ ಕೀಟಗಳು ಬುಡದಲ್ಲಿನ ಮಣ್ಣಿನಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದು ಹೊರಬಂದ ಕೀಟಗಳು ಬೇರು ಮತ್ತು ಎಲೆಗಳನ್ನು ತಿಂದು ಹಾಳು ಮಾಡುತ್ತವೆ. ಈ ಕೀಟಗಳ ಹತೋಟಿಗೆ ೧೦ ಲೀಟರ್ ನೀರಿಗೆ ೪೦ ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬೇಕು.

. ಹಣ್ಣಿನ ನೊಣ : ಇದರ ಹೆಣ್ಣು ನೊಣಗಳು ಹಣ್ಣುಗಳಲ್ಲಿ ಮೊಟ್ಟೆಯಿಡುತ್ತವೆ. ಅಂತಹ ಭಾಗಗಳು ಕೊಳೆಯುತ್ತವೆ. ಹಾನಿಗೀಡಾದ ದೋರೆಗಾಯಿ ಮತ್ತು ಹಣ್ಣುಗಳು ಉದುರಿಬೀಳುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳು ತಿರುಳನ್ನು ತಿಂದು ಹಾಕುತ್ತವೆ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಪ್ಯಾರಾಥಿಯಾನ್ ಮತ್ತು ೧೦೦ ಗ್ರಾಂ. ಬೆಲ್ಲ ಅಥವಾ ಸಕ್ಕರೆ ಬೆರೆಸಿ ಇಟ್ಟಲ್ಲಿ ಅವು ಕುಡಿದು ಸಾಯುತ್ತವೆ.

. ಮೂತಿ ಹುಳು : ಇವು ಚಿಗುರನ್ನು ಕಚ್ಚಿ ಗಾಯ ಮಾಡುತ್ತವೆ. ಅಂತಹ ಭಾಗಗಳು ಬಾಡಿ ಒಣಗುತ್ತವೆ. ಬಳ್ಳಿಗಳ ಬುಡದಲ್ಲಿ ಕಸಕಡ್ಡಿ ಇರಬಾರದು. ಯಾವುದಾದರೂ ಸೂಕ್ತ ಕೀಟನಾಶಕ ಸಿಂಪಡಿಸಿದಲ್ಲಿ ಅವು ಸಾಯುತ್ತವೆ.

. ತುಪ್ಪಳಿನ ರೋಗ : ಎಲೆಗಳ ತಳಭಾಗದಲ್ಲಿ ಬಣ್ಣಗೆಟ್ಟ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಅವು ನೋಡಲು ಎಣ್ಣೆಯಲ್ಲಿ ಅದ್ದಿದಂತೆ ಕಾಣುವುವು. ರೋಗಪೀಡಿತ ಎಲೆಗಳು ಉದುರಿ ಬೀಳುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೫೦ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಇಲ್ಲವೇ ೨೦ ಗ್ರಾಂ ಜೈನೆಬ್ ಕರಗಿಸಿ ಸಿಂಪಡಿಸಬೇಕು.

. ಬೂದಿರೋಗ : ಎಲೆಗಳ ಮೇಲೆಲ್ಲಾ ಬೂದಿಯಂತಹ ನವಿರಾದ  ದೂಳು ಕಾಣಿಸಿಕೊಳ್ಳುತ್ತದೆ. ಅಂತಹ ಭಾಗಗಳನ್ನು ಬೆರಳ ತುದಿಯಿಂದ ಲಘುವಾಗಿ ಬಡಿದರ ಶಿಲೀಂಧ್ರಗಳು ಧೂಳಿನ ರೂಪದಲ್ಲಿ ಹಾರಿ ಉದುರುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೧೫ ಗ್ರಾಂ ದಿನಕಾಪ್ ಬೆರೆಸಿ ಸಿಂಪಡಿಸಬೇಕು.

. ವರ್ಣವಿನ್ಯಾಸ ನಂಜು : ಎಲೆಗಳ ಮೇಲೆ ಹಲವಾರು ಬಣ್ಣಗಳ ಮಣ್ಣುಗಳು ಕಂಡುಬರುತ್ತವೆ. ಅಂತಹ ಬಳ್ಳಿಗಳನ್ನು ಬೇರು ಸಹಿತ ಕಿತ್ತು ನಾಶಮಾಡಬೇಕು.

* * *