‘ಗೊಂಬಿ ಆಟ, ಕಿಳ್ಳಿಕ್ಯಾತರ ಆಟ, ಮಂಡ್ಯಾನಾಟ ಎಂದು ಕರೆಯಲ್ಪಡುವ ತೊಗಲು ಗೊಂಬೆಯಾಟ ತುಂಬಾ ಪ್ರಾಚೀನತೆಯನ್ನು ಪಡೆದುಕೊಂಡ ಜಾನಪದ ಕಲೆ, ಜಾನಪದ ಕಲಾವಿದರ ಆಶುಪ್ರತಿಭೆಯನ್ನು ಇದು ಹಿಡಿದಿಟ್ಟಿರುವಂತೆ ಅವರ ಶ್ರೀಮಂತ ಸೌಂದರ‍್ಯ ಪ್ರಜ್ಞೆಗೆ ಉತ್ತಮ ನಿದರ್ಶನವಾಗಿದೆ. ತೊಗಲು ಗೊಂಬೆ ತಯಾರಿಕೆ, ಸಾಹಿತ್ಯ ಮತ್ತು ರಂಗಪ್ರದರ್ಶನ ಈ ಮೂರು ಹಂತಗಳಲ್ಲಿ ಈ ಕಲೆಯನ್ನು ಅಭ್ಯಸಿಸಬಹುದು. ಪ್ರಸ್ತುತ ಲೇಖನ ’ತೊಗಲುಗೊಂಬೆ ಆಟದ ಕಥಾವಸ್ತು ಸಾಹಿತ್ಯ ಮತ್ತು ಸಂಭಾಷಣೆ’ಗಳಿಗೆ ಮಾತ್ರ ಸೀಮಿತಗೊಂಡಿದೆ.’

[1]

ಕಥಾವಸ್ತು:

ತೊಗಲುಗೊಂಬೆಯ ಕಥಾವಸ್ತು ಸಾಮಾನ್ಯವಾಗಿ ಪೌರಾಣಿಕ ಮಹಾಭಾರತ, ರಾಮಾಯಣ, ಭಾಗವತಗಳಿಗೆ ಸಂಬಂಧಿಸಿದ್ದು, ವಿಶೇಷವಾಗಿ ಮಹಾಭಾರತದ ಕಥೆಗಳನ್ನೇ ಈ ಆಟಕ್ಕೆ ಆಯ್ದುಕೊಳ್ಳುವುದಿದೆ. ಮಾನವೀಯ ಭಾವನೆಗಳು ಮಹಾಭಾರತದಲ್ಲಿ ಹೆಚ್ಚು ಮಿಡಿಯುವುದರಿಂದ, ಅದರಲ್ಲಿಯೂ ರಾಗ ದ್ವೇಷಗಳು ಹೆಚ್ಚು ವಿಜೃಂಭಿಸುವುದರಿಂದ ಈ ಕಥಾನಕಗಳ ಆಯ್ಕೆ ಹಳ್ಳಿಗರಿಗೆ ಹೆಚ್ಚು ರುಚಿಸುತ್ತದೆ. ಭೀಮನ ಒರಟುತನ, ಅರ್ಜುನ ಅಭಿಮನ್ಯವಿನ ವೀರ, ಶಕುನಿಯ ಕಾರಸ್ಥಾನ ಇವರಿಗೆ ಬಹುವಾಗಿ ಮೆಚ್ಚಿಗೆಯಾಗಿರುವ ಅಂಶಗಳು. ತಮ್ಮ ಮನೋಮಟ್ಟದ ಸ್ವಭಾವಗಳೇ ಪರದೆಯ ಮೇಲ ’ಕುಣಿ’ಯುವುದರಿಂದ ಈ ವಸ್ತುಗಳು ಅವರಿಗೆ ವಿಶೇಷ ಹಿಡಿಸುತ್ತ ಬಂದಿವೆದೆ ಇದೇ ಬಗೆಯ ಕಥೆಗಳು ತೊಗಲುಗೊಂಬೆ ಆಟಕ್ಕೆ ಆಹಾರವಾಗಿವೆ.

ಸಾಮಾಜಿಕ ಸಿನೇಮಾ, ನಾಟಕಗಳಂಥ ದೃಶ್ಯ ಮಾಧ್ಯಮಗಳ ಪ್ರಭಾವ ಇಮದು ಹೇರಳವಾಗಿದ್ದರೂ ತೊಗಲುಗೊಂಬೆ ಆಟಗಾರರು ಈ ಕಡೆಗೆ ಒಲಿದಿಲ್ಲ. ಒಮ್ಮೆ ಈ ಆಟಗಾರರು ಸಾಮಾಜಿಕ ಕಥಾಸ್ತುಗಳನ್ನೊಳಗೊಂಡ ಆಟಗಳನ್ನು ಪ್ರಾರಂಭಿಸಿದರೆ ಜಾನಪದ ಪ್ರೇಕ್ಷಕರು ಈ ಕಡೆ ಆಕರ್ಷಿತರಾಗಬಹುದೇನೋ. ಆದರೆ ಇಂದಿನ ಸಾಮಾಜಿಕ ಪರಿಸರದ ಪ್ರತಿನಿಧಿಗಳೆನಿಸುವಂತಹ ಗೊಂಬೆಗಳ ಕೊರತೆ ಈ ನಿಟ್ಟಿನ ಬೆಳವಣಿಗೆಯನ್ನು ತಡೆಹಿಡಿದಿದೆ. ಈಗಿನ ಪ್ರಾಚೀನಗೊಂಬೆಗಳೆಲ್ಲ ಪೌರಾಣಿಕ ವೇಷಭೂಷಣಗಳನ್ನು ಹಾಕಿಕೊಂಡಿವೆ. ಆಧುನಿಕ ಆವರಣಕ್ಕೆ ಈ ವೇಷ ಒಗ್ಗುವುದಿಲ್ಲ. ಗೊಂಬೆಗಳನ್ನು ಹಾಗೆ ತಯಾರಿಸಬಹುದಲ್ಲ ಎನ್ನಬಹುದು. ಆದರೆ ಈಗ ಆ ಚರ್ಮದ ಗೊಂಬೆಗಳನ್ನು ಮಾಡುವ ಕಲಾವಿದರನ್ನು ಹುಡುಕಿ ಅಷ್ಟು ಹಣ ಖರ್ಚು ಮಾಡಿ ನೂರಾರು ಗೊಂಬೆಗಳನ್ನು ಆಧುನಿಕ ವಾತಾವರಣಕ್ಕೆ ಹೊಂದಿಕೊಳ್ಳುವಂಥವು ತಯಾರಿಸುವುದು ಅಷ್ಟು ಸುಲಭವಲ್ಲ. ಕಾಕನೂರಿನ ಕಾಕಪ್ಪ ಹೇಳುತ್ತಾರೆ. “ಹೊಸಗೊಂಬೆಗಳನ್ನು ತಯಾರಿಸುವುದು ದೂರ ಉಳಿಯಿತು, ಹಳೆಯ ಗೊಂಬೆಗಳಿಗೆ ಬಣ್ಣ ಹಚ್ಚುವುದಾಗುವುದಿಲ್ಲ. ಏನೋ ಖರ್ಚು ಮಾಡಿ ಮಾಡೇವೆಂದೂ ಅಂಥ ಬಣ್ಣಕಾರರು (ಬಣ್ಣಕೊಡುವ ಕಲಾವಿದರು) ನಮಗೆ ಸಿಗಲಿಲ್ಲ. “ಎಂದೋ ಮಾಡಿದ ಸುಮಾರು ನೂರು ವರ್ಷಗಳ ಹಿಂದಿನ ಪೌರಾಣಿಕ ವೇಷ ಭೂಷಣದ ಗೊಂಬೆಗಳನ್ನೇ ಇವರು ಕುಣಿಸುತ್ತ ಬಂದಿರುವುದರಿಂದ ಈ ಗೊಂಬೆಗಳ ವೇಷಭೂಷಣಗಳ ಮಟ್ಟದಲ್ಲಿಯೇ ಕಥಾ ವಸ್ತುವನ್ನು ಉಳಿಸಿಕೊಳ್ಳುವುದು ಇಂಥ ಕಲಾವಿದರಿಗೆ ಅನಿವಾರ್ಯವಾದಂತೆ ತೋರುತ್ತದೆ.

ತೊಗಲುಗೊಂಬೆ ಆಟದ ಒಂದು ಆಟದ ಕಥಾವಸ್ತು ಹೆಚ್ಚೆಂದರೆ ಮೂರು ತಾಸಿಗೆ ಸೀಮಿತವಾಗಿರುತ್ತದೆ. ತೊಗಲುಗೊಂಬೆ ಕುಣಿಸುವ ಕಲಾವಿದ ತನ್ನ ಮೇಳದೊಂದಿಗೆ ಒಂದು ಊರಲ್ಲಿ ಸುಮಾರು ಹದಿನೈದು ದಿನ ’ಮೆಟ್ಟು’ ಮಾಡುವುದುಂಟು. ಇವರು ಒಂದು ಊರನ್ನು ಪ್ರವೇಶ ಮಾಡಿದ ದಿನದಿಂದ ಆ ಊರಿನ ಬೇರೆ ಬೇರೆ ಓಣಿಯ ಜನ ಒಂದೊಂದು ಕಥಾ ಸಂದರ್ಭವನ್ನು (ಕಥಾವಸ್ತು) ಸೂಚಿಸಿ ಮುಂದಿನ ದಿನಗಳಲ್ಲಿ ಆಟಮಾಡಲು ವೀಳ್ಯೆಕೊಡುವುದುಂಟು. ಈ ರೀತಿ ಹಲವಾರು ದಿನಗಳವರೆಗೆ ಒಂದೇ ಊರಿನ ಬೇರೆ ಬೇರೆ ಕಡೆಗಳಲ್ಲಿ ಇವರು ಆಟವಾಡುವುದರಿಂದ ಆಟಗಳು ಪುನರಾವರ್ತನೆಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಅಥವಾ ಜನರು ಪುನರಾವರ್ತನೆಯನ್ನು ಇಷ್ಟಪಡುವುದಿಲ್ಲ. ತಮ್ಮ ಊರಲ್ಲಿ ಮೇಳ ಇರುವತನಕ ಬೇರೆ ಬೇರೆ ಓಣಿಗಳಲ್ಲಿ ಆಟಗಳು ಜರುಗಿದರೂ ಊರಿನ ಬಹುತೇಕ ಜನ ಎಲ್ಲ ಆಟಗಳನ್ನು ನೋಡಿಬಿಡುವುದರಿಂದ ಹೊಸಹೊಸ ಕಥಾ ವಸ್ತುಗಳನ್ನು ಬಯಸಲು ಕಾರಣವಾಗುತ್ತದೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಒಂದು ವಿಷಯವೆಂದರೆ ಇವರು ಬೇರೆ ಬೇರೆ ಪ್ರಸಂಗಗಳನ್ನು[2] ಎತ್ತಿಕೊಂಡು ಆಟವಾಡಿದರೂ ಈ ಆಟಗಳ ನಡೆಯಲ್ಲಿ ಒಂದು ಬಗೆಯ ಕ್ರಮ (Continuity)ವನ್ನು ಕಾಯ್ದುಕೊಳ್ಳಲಾಗುತ್ತದೆ. ಉದಾಹರಣೆಗೆ ಮಹಾಭಾರತದ ವಿಷಯಗಳನ್ನು ಒಂದು ಊರಿನಲ್ಲಿ ಎತ್ತಿಕೊಂಡು ಆಡುತ್ತಿದ್ದರೆ ಮೊದಲದಿನ ಒಂದು ಓಣಿಯಲ್ಲಿ ಭೀಮನಿಗೆ ಕೌರವರು ವಿಷವುಣಿಸದ ಆಟ ಆಡಿದರೆ ಮುಂದಿನ ದಿನ ಬೇರೊಂದು ಓಣಿಯಲ್ಲಿ ಕೌರವ-ಪಾಂಡವರ ಪಗಡೆಯಾಟದ ಸನ್ನಿವೇಶವಿರುತ್ತದೆ. ಆ ಮುಂದಿನ ದಿನ ಪಾಂಡವರ ವನವಾಸದ ಪ್ರಸಂಗಗಳು, ತರುವಾಯ ಕೀಚಕ ವಧೆ, ಆಮೇಲೆ ಕುರುಕ್ಷೇತ್ರದ ಯುದ್ಧದ ಪ್ರಸಂಗಗಳು ಜರುಗುತ್ತವೆ. ಬೇರೆ ಬೇರೆ ದಿನಗಳಲ್ಲಿ ಪ್ರತ್ಯೇಕವಾಗಿ ಕಾಣುವ ಈ ಕಥಾಭಾಗಗಳು ಊರಿನಲ್ಲಿ ಒಂದು ಸುತ್ತು ಹಾಕಿದಾಗ ಮಹಾಭಾರತದ ಇಡೀ ಕಥೆಗೆ ಒಂದು ಕ್ರಮ ಬದ್ಧತೆ ಪ್ರಾಪ್ತವಾಗುತ್ತದೆ. ವಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿಗೆ ಸೇರಿದ ಕಾಕನೂರಿನ ಕೇಶಪ್ಪ ಇಪ್ಪತ್ತೊಂದು ರಾತ್ರಿ ಇಂಥ ಬೇರೆ ಬೇರೆ ಪ್ರಸಂಗಗಳನ್ನು ಆಡುವ ನಿಷ್ಣಾತತೆಯನ್ನು ಹೊಂದಿದ್ದಾನೆ.

ರಾಮಾಯಣ, ಮಹಾಭಾರತದಂಥ, ಗಂಭೀರ ಸನ್ನಿವೇಶಗಳನ್ನೇ ಇವರು ಆಡುತ್ತಿದ್ದರೂ ಹಾಸ್ಯಕ್ಕಾಗಿ ತೇಪೆ ಹಚ್ಚಿದಂತೆ ಸುಮಾರು ಹದಿನೈದು ಇಪ್ಪತ್ತು ನಿಮಿಷಿನ ಪ್ರತ್ಯೇಕ ಪ್ರಹಸನಗಳನ್ನು ಒಂದೊಂದು ಆಟದಲ್ಲಿ ಅಳವಡಿಸಿಕೊಳ್ಳುವುದುಂಟು. ಇವು ಒಂದು ಆಟದಲ್ಲಿ ಎರಡು ಅಥವಾ ಮೂರು ಸೇರಿಕೊಳ್ಳಬಹುದು.

ಕೆಲವು ಊರಲ್ಲಿ ತಿಂಗಳುಗಟ್ಟಲೆ ಆಡಲು ಅವಕಾಶ ಸಿಗುವುದುಂಟು. ಇಂಥ ಅವಕಾಶ ಮಾಡಿಕೊಟ್ಟ ಉಪಕಾರ ಸ್ಮರಣೆಗೆ ಕೊನೆಯ ದಿವಸ ಬಹಳ ಜನರಿಗೆ ಪ್ರಿಯವಾದ ಅಥವಾ ತನಗೂ ಪ್ರಿಯವಾದ ಒಂದು ಆಟವನ್ನು ಊರಿನ ಗ್ರಾಮದೇವತೆಯ ಗುಡಿಯ ಮುಂದೆ ಕಲಾವಿದ ಪುಕ್ಕಟೆಯಾಗಿ ಆಡಿ ಮುಗಿಸುತ್ತಾನೆ. ಮರುದಿನ ತನ್ನ ಪೇಟೆ, ತಬಲಾದ ಸಂಗಡಿಗರು ಮತ್ತು ಆಟದ ಸರಂಜಾಮುಗಳೊಂದಿಗೆ ಮುಂದಿನ ಊರಿಗೆ ಪ್ರಯಾಣ ಬೆಳೆಸುತ್ತಾನೆ.

ತೊಗಲು ಗೊಂಬೆ ಆಟದ ಈ ಕಥಾ ಪ್ರಸಂಗಗಳು ಮೌಖಿಕವಾಗಿ ತಲೆಯಿಂದ ತಲೆಗೆ ಬಂದವುಗಳು. ಈ ಪ್ರಸಂಗಗಳಿಗೆ ಹಿನ್ನೆಲೆಯಾಗಿ ನಿಂತ ಸಾಹಿತ್ಯಿಕ ಹಸ್ತ ಪ್ರತಿಗಳು ಇದ್ದಂತೆ ತೋರುವುದಿಲ್ಲ. ತಮ್ಮ ಆಟದ ಕಲೆಗಾರಿಕೆಯ ಬಗೆಗೆ ಒಂದು ಬಗೆಯ ಪೂಜ್ಯ ದೃಷ್ಟಿಯನ್ನು ಇವರು ತಾಳಿದ್ದಾರೆ. ಪ್ರತಿ ಹುಣ್ಣಿಮೆ, ಅಮಾವಾಸ್ಯೆಗಳಿಗೆ ಮನೆಯಲ್ಲಿಯ ಗೊಂಬೆಗಳಿಗೆ ಪೂಜೆ ಸಲ್ಲುವಂತೆ ಪ್ರತಿ ಆಟದ ಪ್ರಾರಂಭದಲ್ಲಿ ಸ್ತುತಿಪರವಾದ ಪದ್ಯಗಳಿರುತ್ತವೆ. ಮೊಟ್ಟಮೊದಲು ಗಣೇಶ ಸ್ತೋತ್ರ ತರುವಾಯ ಕೆಲವರು ತಮ್ಮ ಗ್ರಾಮ ದೇವತೆಯ ಸ್ತವನ ಮಾಡುತ್ತಾರೆ. ಈ ಸ್ತೋತ್ರ ಭಾಗ ಮುಗಿದ ಮೇಲೆ ಆಟಗಾರ ತಾನು ಆಡುವ ಕಥಾವಸ್ತುವನ್ನು ಸ್ಪಷ್ಟಪಡಿಸುತ್ತಾನೆ. ಈ ಸಂದರ್ಭದಲ್ಲಿ ಯಾವ ವಿಘ್ನಗಳೂ ಬಾರದಂತೆ ಗಣಪತಿಯನ್ನು ಬೇಡಿಕೊಳ್ಳುತ್ತಾನೆ. ನಮ್ಮ ಬಯಲಾಟಪರಂಪರೆಯ ಪೂರ್ವರಂಗದ ಪ್ರತಿಛಾಯೆಯನ್ನು ಇಲ್ಲಿಯೂ ಕಾಣಬಹುದು.

ಸ್ತೋತ್ರಭಾಗ ಮುಗಿದ ಮೇಲೆ ಪಟ್ಟಿಹಾಕಿ ಆಡಿಸುತ್ತಿರುವ ಓಣಿಯವರನ್ನು, ಓಣಿಯ ಮುಖ್ಯ ಹಿರಿಯರನ್ನೂ ಕೊಂಡಾಡುತ್ತಾನೆ, ತರುವಾಯ ನೇರವಾಗಿ ಕಥಾವಸ್ತುವನ್ನೆತ್ತಿಕೊಳ್ಳುತ್ತಾನೆ.

ಸಾಹಿತ್ಯ:

ಗೊಂಬೆ ಆಟದ ಸಾಹಿತ್ಯ ಮೌಖಿಕವಾಗಿ ಹರಿದು ಬಂದಿದೆ. ಇಲ್ಲಿಯ ಗದ್ಯ ಆಶುಪ್ರತಿಭೆಯನ್ನು ಅವಲಂಬಿಸಿದ್ದರೆ ಪದ್ಯ ಈ ಮೊದಲು ಯಾರ‍್ಯಾರಿಂದಲೋ ರಚಿತಗೊಂಡವುಗಳು – ಹಾಡಲ್ಪಡುತ್ತವೆ. ಗದ್ಯದ ಆಶುಪ್ರತಿಭೆ ಎಂಬುದನ್ನು ನಾವು ತೀರ ಗಂಭೀರವಾಗಿ ಇಲ್ಲಿ ಪರಿಗಣಿಸಬೇಕಾಗಿಲ್ಲ. ಈ ಮುಖ್ಯ ಕಲಾವಿದ ಗೊಂಬೆಯಾಟವನ್ನೇ ವೃತ್ತಿಯಾಗಿ ಸ್ವೀಕರಿಸಿರುವುದರಿಂದ ಒಂದು ಮಟ್ಟದಲ್ಲಿ ಅವನಿಗೆ ಪ್ರಸಂಗದ ಮಾತುಗಳೆಲ್ಲ ಬಾಯಿಪಾಠವಾಗಿರುತ್ತವೆ. ಮಾತಿನ ಓತ ಪ್ರೋತತೆಯನ್ನು ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕು ಮೆಚ್ಚಬೇಕು. ಮಾತನ್ನು ಒಂದೇ ಸಮನೆ ಕಲಾವಿದ ಹೊಂದಿಸಿಕೊಳ್ಳುವಲ್ಲಿ ತೋರಿಸುವ ಜಾಣ್ಮೆ ಅವನ ಧ್ವನಿಯ ವೈವಿಧ್ಯತೆ ಇವೇ ಮುಖ್ಯ. ದಿನವೂ ಆತ ’ನವನವೋನ್ಮೇಷಶಾಲಿನಿ’ ಎಂಬ ಮಟ್ಟದಲ್ಲಿ ಸಾಹಿತ್ಯವನ್ನು ಸೃಷ್ಟಿಸಲರ. ಸಾಹಿತ್ಯಕ್ಕೆ ಹುಟ್ಟು ಹಾಕಲಾರ. ಆದರೆ ಐದಾರು ತಿಂಗಳ ತರುವಾಯವೋ ವರ್ಷದ ತರುವಾಯವೋ ಪುನಃ ಒಂದು ಹಳ್ಳಿಯನ್ನು ಸಂದರ್ಶಿಸುತ್ತಿರುವಾಗ ಒಂದಿಷ್ಟಾದರೂ ಹೊಸದನ್ನು ಕೊಡಬೇಕು ಎಂಬ ಲವಲವಿಕೆ ಖಂಡಿತವಾಗಿಯೂ ಅವನಲ್ಲಿ ಹುಟ್ಟಿಕೊಂಡಿರುತ್ತದೆ. ಈ ಹೊತ್ತಿನಲ್ಲಿ ಬೇರೆ ಬೇರೆ ಹಾಡುಗಳು ಹೊಂದಾಣಿಕೆ ಗೊಂಡಿರಬಹುದು ಮಾತಿನಲ್ಲಿ ಬೇರೆ ಬೇರೆ ಗಾದೆ ಮಾತು, ನುಡಿಗಟ್ಟುಗಳು ಹೆಣೆದುಕೊಂಡಿರಬಹುದು. ವರ್ಣನೆ ಅಲಂಕಾರಗಳಿಗೆ ತುಸು ಮಟ್ಟಿಗಾದರೂ ಬೇರೆ ಮೆರಗು ತುಂಬಿರಬಹುದು. ಮುಖ್ಯ ಕಥಾವಸ್ತುವಿನಿಂದ ಪ್ರತ್ಯೇಕ ನಿಂತುಕೊಳ್ಳುವ ಹಾಸ್ಯ ಪ್ರಸಂಗಗಳನ್ನಂತೂ ಎರಡನೆಯ ಭೆಟ್ಟಿಯಲ್ಲಿ ಹೊಸ ಹೊಸದಾಗಿಯೇ ಕಲ್ಪಿಸಿಕೊಂಡು ಊರಿಗೆ ಕಾಲಿಡುತ್ತಾನೆ. ಒಂದು ಕಲೆ ಕೇವಲ ಹವ್ಯಾಸವಾಗಿರುವುದು ಬೇರೆ; ಜೀವನೋಪಾಯವಾಗಿರುವುದು ಬೇರೆ. ಇಲ್ಲಿ ಕಲೆಯನ್ನು ಜೀವನೋಪಾಯಕ್ಕಾಗಿ ಆಶ್ರಯಿಸಿರುವ ಕಲಾವಿದ ಪ್ರತಿ ಆಟಕ್ಕೂ ಹೊಸ ಹೊಸದನ್ನೇ ನೀಡುತ್ತಾನೆಂದರೆ ಅವನ ಅಳವಿಗೆ ಮೀರಿದ ವಿಷಯವಾಗುತ್ತದೆ.

ತೊಗಲು ಗೊಂಬೆ ಆಟದ ಭಾಷೆ ಅತ್ತ ಶಿಷ್ಟವೂ ಅಲ್ಲ, ಇತ್ತ ಜಾನಪದವೂ ಅಲ್ಲ. ಭಾಷೆ ಪೌರಾಣಿಕ ಕಥಾವಸ್ತುವಿಗೆ ಸಂವಾದಿಯಾಗಿ ಮುಂದುವರಿಯಲು ಅಲ್ಲಲ್ಲಿ ಯತ್ನಿಸಿದರೂ ಇದನ್ನು ಸಂಪೂರ್ಣ ನಿರ್ವಹಿಸುವುದು ಗೊಂಬೆ ಕುಣಿಸುವ ಕಲಾವಿದನಿಗೆ ಸಾಧ್ಯವಾಗುವುದಿಲ್ಲ. ಆಶು ಸಂಭಾಷಣೆಯನ್ನು ಹೆಣೆಯುವ ಜಾನಪದ ಕಲಾವಿದನಿಗೆ ಆಟದುದ್ದಕ್ಕೂ ಶಿಷ್ಟ ದೊಡ್ಡಾಟದ ಆಡಂಬರದ ಶೈಲಿಯನ್ನು ಇಲ್ಲಿಯ ಪಾತ್ರಗಳಿಗೆ ಆರೋಪಿಸುವುದಿಲ್ಲ. ಜಾನಪದ ಪ್ರೇಕ್ಷಕರಿಗೆ ಇಲ್ಲಿಯ ಭಾಷೆ ತಮ್ಮ ನಿತ್ಯ ಭಾಷೆಯ ಸಮೀಪಕ್ಕೆ ಬರುವುದರಿಂದ ಸಂದರ್ಭದ ಗ್ರಹಿಕೆ ಚೆನ್ನಾಗಿ ಆಗುತ್ತದೆ. ದೊಡ್ಡಾಟದ ಆಡಂಬರದ ಮಾತಿನ ಶೈಲಿಗೆ ಜಾನಪದ ಪ್ರೇಕ್ಷಕರು ಬೆರಗಾದರೆ ತೊಗಲುಗೊಂಬೆ ಆಟದ ಸಂಭಾಷಣೆಯ ರೀತಿ ಸಂದರ್ಭವನ್ನು ಸರಳ ಮಾತಿನ ಮೂಲಕ ಚೆನ್ನಾಗಿ ಮನದಟ್ಟುಮಾಡಿಕೊಟ್ಟು ಸನ್ನಿವೇಶಕ್ಕೆ ಸುಖಿಸುವಂತಾಗುತ್ತದೆ.

ಮುಂಚೆ ಹೇಳಿದಂತೆ ಗ್ರಾಂಥಿಕ ಭಾಷೆಯನ್ನು ಸಣ್ಣ ಸಣ್ಣ ಮಾತುಗಳಿಗೆ ಮಾತ್ರ ಉಪಯೋಗಿಸಬಹುದು. ಅಥವಾ ಸಂಭಾಷಣೆಯ ಪ್ರಾರಂಭದ ಹಂತದಲ್ಲಿ ಮಾತ್ರ ಬಳಸಬಹುದು. ಮರುಕ್ಷಣವೇ ಅದು ಜಾನಪದ ಭಾಷೆಯತ್ತ ವಾಲುತ್ತದೆ. ಉದಾಹರಣೆಗೆ ದ್ರೌಪದಿ ವಸ್ತ್ರಾಪಹರಣದ[3] ದುರ್ಯೋಧನ-ಶಕುನಿಯರ ಕೆಳಗಿನ ಎರಡು ಮಾತುಗಳನ್ನು ನೋಡಬಹುದು.

ದುರ್ಯೋಧನ: ರಾಜರೇ ಸಕಲ ಸಾಮ್ರಾಟ ಸಾರ್ವಭೌಮ ಚಕ್ರವರ್ತಿಯಾದ ನಾನು ನಿನ್ನ ಪಾದ ಪದ್ಮಗಳಿಗೆ ನಮಸ್ಕರಿಸುತ್ತೇನೆ.

ಶಕುನಿ: ಏಳ್ರಿ ಮಹಾರಾಜ ಜಯವಾಗಲಿ ಮಂಗಳವಾಗಲಿ ನನ್ನ ಮನಿ ಮುಂದ ನಿನ್ನ ಮನಿ ಮುಂದ ಹಾಲು ಉಕ್ಕೇರಲಿ.

ಗ್ರಾಂಥಿಕ ಮತ್ತು ಜಾನಪದ ಭಾಷೆಗಳ ಒಂದು ಸಂಪೂರ್ಣ ಮಾಧ್ಯಮವನ್ನು ಗೊಂಬೆ ಆಟದ ಭಾಷೆಯಲ್ಲಿ ನಾವು ಕಾಣುತ್ತೇವೆ. ಕೌರವನು ಧರ್ಮರಾಜನನ್ನು ಪಗಡೆಯಾಡಲು ಕರೆದಾಗ ಧರ್ಮರಾಜ ಹೇಳುತ್ತಾನೆ: “ಏನ ಕೌರವಾ ಎಂಥ ಹುಚ್ಚ ಇದ್ದೀಯೋ ಅಕ್ಕಿಹಾಳ ಆದಾವ ಬರ‍್ರೆಂತ ಕರಕೊಂಡ ಬಂದಾವು ನೀವು. ಇನ್ನ ಅಕ್ಕಿಕಾಳ ಪ್ರಾರಂಭ ಮಾಡೂದು ಬಿಟ್ಟ ಪಗಡೆ ಆಟ ಆಡಕೊಂತ ಕುಂತ್ರ ಈ ಕೂಡಿದ ಸಮಾಜ ಏನ ಅಂದೀತು. ಪಾಂಡವರು ಬಲ್ಲವರು ಅಣತಂಮ್ರ ಇವರು ರಾಜಪುತ್ರರು. ರಾಜಸಂಸ್ಥಾನದಲ್ಲಿ ಅಕ್ಕಿಕಾಳ ಮರತು ಪಗಡಿ ಆಡಕೊಂತ ಕುಂತ್ರ ಅಂತ ಲೋಕ ಅಪವಾದಕ್ಕೆ ಗುರಿ ಆಗುತ್ತೇವೆ. ಹುಚ್ಚಾ ಎಲ್ಲಿ ಬುದ್ಧಿ ಇಟ್ಟಿಯೋ ಹಾಗೆ ಮಾಡಲಿಕ್ಕೆ ಹೋಗಬೇಡಾ ಮೊದಲ ಅಕ್ಕಿಕಾಳ ಪ್ರಾರಂಭ ಮಾಡು.”

ಯಾವುದೇ ಕಥಾಭಾಗವನ್ನು ಆಟಗಾರ ಕೈಗೆತ್ತಿಕೊಂಡರೂ ಅಲ್ಲಿ ಸಾಮಾನ್ಯವಾಗಿ ವೀರ, ಕರುಣೆ, ಹಾಸ್ಯ ಭಾವಗಳ ಉದ್ದೀಪನಕ್ಕೆ ಸಾಕಷ್ಟು ಅವಕಾಶವನ್ನು ಮಾಡಿಕೊಳ್ಳುತ್ತಾನೆ. ದ್ರೌಪದಿಯ ವಸ್ತ್ರಾಪಹರಣಕ್ಕೆ ಕೌರವರು ಸಜ್ಜುಗೊಂಡಾಗ ಭೀಮನ ಗುಡುಗು: “ಈ ಹೆಣ್ಣಿನ ಬೆಂಬಲಕ್ಕೆ ಕುಳಿತಿರುವ ಭೀಮ ನಾನು. ಬರ‍್ರಿ, ಹಿಂಡು ಕುರಿಯಲ್ಲಿ ಗಂಡು ತೋಳ ಹೊಕ್ಕಂತೆ ಮಾಡುತ್ತೇನೆ. ಇವರ ಹೆಂಡಿರು ಒಬ್ಬೊಬ್ಬರ ಕೈಗೆ ಸಿಕ್ಕಿರಬಾರದು. “ಕೆಲವು ವೇಳೆ ಶಿಷ್ಟರಿಗೆ ಅಭಾಸವೆನ್ನಿಸಬಹುದಾದ ಮಾತಿನ ರೀತಿ ಗೊಂಬೆಯಾಟದ ವೀರಾವೇಶದ ಮಾತುಗಳಲ್ಲಿ ಉಂಟು. ದುಃಶ್ಯಾಸನ ಭೀಮನ ವಿರುದ್ಧವಾಗಿ ಮಾತನಾಡುತ್ತಾನೆ “ನಾನು ಹೋದ ಟೈಮಕ ಕೂಳಬಕ್ಕ ಭೀಮ ಕೈಗೆ ಸಿಕ್ಕರೆ ಅವನ ಎಲುವ ಪುಡಿ ಪುಡಿ ಮಾಡುವೆ. “ಇಲ್ಲಿಯ ’ಟೈಮಕ’ ಎಂಬ ಶಬ್ದ ಜಾನಪದರಿಗೆ ಸಹಜವಾಗಿಯೇ ತೋರುತ್ತದೆ. ಜಾನಪದರ ಕಲೆ, ಸಾಹಿತ್ಯವನ್ನು ಅಭ್ಯಾಸ ಮಾಡುವಾಗ ಜಾನಪದೀಯ ದೃಷ್ಟಿಯನ್ನು ಇರಿಸಿಕೊಂಡರೇನೆ ಹೆಚ್ಚು ಯೋಗ್ಯವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಕ್ರೋಧ. ವೀರಗಳಂಥ ಭಾವಸ್ಪಷ್ಟನೆಯಲ್ಲಿ ನಮಗೆ ಪರಿಣಾಮ ಮುಖ್ಯವೆನಿಸಬೇಕೇ ಹೊರತು ಕೇವಲ ಶಬ್ದಾರ್ಥಗಳ ಒಣ ವಿಶ್ಲೇಷಣೆಯಲ್ಲ.

ಕರುಣಭಾವದ ಸನ್ನಿವೇಶಗಳಲ್ಲಿ ಮಾತಿಗಿಂತಲೂ ಕರುಣೆಯ ರಾಗಾಲಾಪ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಬಲ್ಲುದು. ಛಾಂದರಾಗದಂಥ ದುಃಖದ ರಾಗವನ್ನು ಎತ್ತಿಕೊಂಡು ಗದ್ಯವನ್ನೇ ವಾಚಿಸುತ್ತ ಹೋಗಿ ಕೊನೆಯಲ್ಲಿ ಹಿಮ್ಮೇಳದವ ’ಕೋಚ್’ ಎತ್ತಿಕೊಟ್ಟುಬಿಟ್ಟರೆ ನೂರು ಮಾತುಗಳ ಪರಿಣಾಮವನ್ನು ಕೇವಲ ರಾಗಾಲಾಪ ಉಂಟುಮಾಡಬಲ್ಲುದು. ಇಂಥಲ್ಲಿ ಸಾಹಿತ್ಯ ಮಾಡಲಾರದ ಪರಿಣಾಮವನ್ನು ಸಂಗೀತ ಮಾಡುತ್ತದೆ. ’ದ್ರೌಪದಿ. “ಮುರಾರಿ ಕಾಯೋ ಮುಕುಂದ ಕಾಯೋ ಹರಿಕೇಶವ, ನಾರಾಯಣ” ಎಂದು ಕೃಷ್ಣಲ್ಲಿ ಮೊರೆಯಿಡುವ ಶಬ್ದಗಳಲ್ಲಿ ಯಾವ ವಿಶೇಷತೆಯೂ ತೋರಲಿಕ್ಕಿಲ್ಲ. ಆದರೆ ಇವೇ ಶಬ್ದಗಳಿಗೆ ಸಂಗೀತ ಆಧಾರವಾಗಿ ನಿಂತರೆ ಪರಿಣಾಮ ಗಾಢವಾಗುತ್ತದೆ.

ತೊಗಲು ಗೊಂಬೆ ಆಟದವರು ಪ್ರೇಕ್ಷಕರನ್ನು ಸೆರೆಹಿಡಿಯುವುದು ಹಾಸ್ಯದ ಮೂಲಕ. ಕೃತ್ರಿಮ ಪ್ರಾಸಗಳು ಕೆಲವು ಸಲ ನಗೆಯುತಕ್ಕಿಸಿದರೆ ಇನ್ನು ಕೆಲವು ಸಲ ಪಾತ್ರಗಳ ಮಟ್ಟಕ್ಕೆ ವ್ಯತಿರಿಕ್ತವಾದ ವಿಷಯ ಜೋಡಣೆಯಿಂದ ನಗೆಯುಕ್ಕುತ್ತದೆ. “ನನ್ನ ಅಪರಾಧ ಕ್ಷಮಾ ಮಾಡೊ ದಾರಿಯೇ ನವಲಗುಂದ ಕೆರಿಯೆ” “ಬಂದ ಬಿಡವಾತಾಯಿ ಹಣ್ಣ ಮೆಣಸಿನಕಾಯಿ” ಎಂಬಂಥ ಮಾತುಗಳಲ್ಲಿ ಕೃತ್ರಿಮವಾದ ಪ್ರಾಸ ಜೋಡಣೆ ಇದೆ. ’ದುಃಶ್ಯಾಸನನಿಗೆ ಈರಿಯ (ಯೂರಿಯಾ) ಗೊಬ್ಬರ ಹಾಕಿದ ಕೇಟಿ ಮಾಡಿಕೊಡಿರೆನ್ನುವುದು ವಿರೋಧಾಭಾಸದ ಪರಮಾವಧಿ ಎನಿಸಿ ಆ ಮಧ್ಯದಲ್ಲಿಯೇ ಹಾಸ್ಯ ರಸ ಜಿನುಗುತ್ತದೆ.

ಮುಖ್ಯ ಕಥಾನಕದ ಮಧ್ಯವೇ ಪ್ರತ್ಯೇಕವಾದ ಚಿಕ್ಕ ಪ್ರಹಸನವನ್ನು ತಂದು ಸೇರಿಸುವುದು ಗೊಂಬೆಯಾಟಗಳ ವೈಶಿಷ್ಟ್ಯ.

ವರ್ಣನೆ ಅಲಂಕಾರಗಳೂ ಗೊಂಬೆ ಆಟದಲ್ಲಿ ಆಗೀಗ ಮಿಂಚುತ್ತವೆ. ಇವು ಒಮ್ಮೆ ಗಂಭೀರ ಭಾವವನ್ನು ಉಂಟು ಮಾಡಿದರೆ ಇನ್ನೊಮ್ಮೆ ನಗುವನ್ನು ಉಕ್ಕಿಸುತ್ತವೆ. ಪಗಡೆ ಆಟದಲ್ಲಿ ಸೋಲುತ್ತ ಬಂದ ಧರ್ಮನನ್ನು ದುರ್ಯೋಧನ ಹಂಗಿಸಲು ಪ್ರಾರಂಭಿಸಿದಾಗ ಧರ್ಮ ಹೇಳುತ್ತಾನೆ “ಸತ್ತ ಸರ್ಪದ ಮ್ಯಾಲ ತಲೀಗೊಂದ ಕಲ್ಲ ಒಗಿದಂತೆ ಮಾತನಾಡಬ್ಯಾಡ.” ಶಕುನಿ ದುಃಶ್ಯಾಸನನಿಗೆ ಬಯ್ಯುವ ಮಾತು “ಬೂಟಿನ್ಯಾಗಿರು ಕಾಲಕುಬಸದಂಥಾ ಸೂಳಿಮಗಾ” ಭೀಮನನ್ನು ಕುರಿತು ದುಃಶ್ಯಾಸನನ ಮಾತು “ಭೀಮ ಅಂದರ ನನ್ನ ಮೈ ಟೇಲರಕ ಹಾಗೂ ಟಾಯರ ಉಬ್ಬಿದ್ಹಂಗ ಉಬ್ಬತೈತಿ. “ಇಲ್ಲಿರುವ ಅಲಂಕಾರಗಳಲ್ಲಿಯ ಉಪಮಾನಗಳು ಪುರಾಣ ಪ್ರಪಂಚದ ಮಡಿವಂತಿಕೆಯನ್ನು ಬಿಟ್ಟುಕೊಟ್ಟು, ಜಾನಪದರು ತಮ್ಮ ಬದುಕಿನಲ್ಲಿ ಕಾಣುವ ಅಥವಾ ತಮಗೆ ವಿಶೇಷವೆನಿಸುವ ವಸ್ತುವಿಶೇಷಗಳನ್ನು ಆಯ್ದುಕೊಂಡಿದ್ದಾರೆ. ಕೆಲವೆಡೆ ಪ್ರತಿಮಾವಿಧಾನವೂ ಕೂಡ ತೋರುವುದುಂಟು. ದ್ರೌಪದಿಯ ಪತಿವ್ರತಾ ಧರ್ಮಕ್ಕೆ ಸರ್ಪದ ಪ್ರತಿಮೆಯನ್ನು ಕೌರವರ ಆಳು ಆರೋಪಿಸುತ್ತಾನೆ. “ಕಡಿಯುವಂತಾ ಸರ್ಪಕ್ಕ ನಾವು ತಡವಿದರ ಅದು ನಮ್ಮನ್ನ ಕಚ್ಚತ್ತೈತಿ.” ಹೀಗೆಯೇ ವರ್ಣನೆಯಲ್ಲಿಯೂ ಕೂಡಾ ಒಂದು ರೀತಿ ಸ್ವಚ್ಛಂದತೆಯನ್ನು ಜಾನಪದರು ಅನುಭವಿಸುತ್ತಾರೆ. ಹೆಚ್ಚಿನ ವರ್ಣನೆ ಬಂದಾಗಲೆಲ್ಲಾ ಗುಲಾಬಿ, ಚಾಂದನಿ, ಬಾಳಿಸುಳಿ, ಕ್ಯಾದಗಿಗರಿ, ಪಾರಿವಾಳ, ಗುಲಗುಂಜಿ ಎಂದು ಮುಂತಾಗಿ ವರ್ಣನೆ ಹರಿದಾಡುತ್ತದೆ.

ಜಾನಪದರಿಗೆ ಸಹನವೆನ್ನಿಸುವ ಬಯ್ಗುಳುಗಳಂತೂ ರಾಶಿರಾಶಿಯಾಗಿ  ತೋರುತ್ತವೆ. ಮಾನಗೇಡಿ, ಸೂಳೀಮಗ, ಪೋದರಿ ಮಗ, ಬೇಬರ್ಸಿ, ಕಾಗಿ ಬಾಯಾಂವಾ, ಗೂಗಿ ಬಾಯಾಂವ, ಗುದ್ಲಿ ಮೋತ್ಯಾಂವಾ, ಸ್ವಾರಿ ಮೋತ್ಯಾಂವ, ರೊಟ್ಟಿ ಹಾಕೂ ಕೆರಸಿ ಬಾಯಾಂವಾ, ಗ್ಯಾಸಿಗೆ ಹವಾ ಹಾಕೂ ಪಂಪಿನ ಮೋತ್ಯಾಂವಾ, ಚಾ ಹಾಕೂ ಕಿಟ್ಲಿ ಬಾಯಾಂವಾ ಮುಂತಾಗಿ ಹೂಗಳು ಅರಳುತ್ತಲೇ ಇರುತ್ತವೆ! ಇವು ಬಯ್ಗಳಗಳಾದರೆ ಕೆಟ್ಟದ್ದನ್ನು ಹಾರೈಸುವ ಸೊಗಸೇ ಇನ್ನೊಂದು ಬಗೆಯದು. ನಿನ್ನ ಮೈತುಂಬ ನಾರುಗಳಾಗಲಿ, ನಿನ್ನ ಬಾಯಾಗ ಹುಳಾ ಬೀಳಲಿ, ನಿನ್ನ ಕಣ್ಣಾಗ ಗೊಡಚಿ ಬೆಳೀಲಿ, ನಿನ್ನ ಬಾಸಿಂಗದಾಗ ಮಣ್ಣ ತುಂಬಲಿ ಮುಂತಾದವುಗಳು ಜಾನಪದ ಒರಟುತನವನ್ನು ಬಿಂಬಿಸುತ್ತವೆ.

ಆಧುನಿಕ ಪರಿಸರದ ಶಬ್ದಗಳು ಪುರಾಣ ಪ್ರಪಂಚದಲ್ಲೂ ಯಾವ ಎಗ್ಗಿಲ್ಲದೆ ಓಡಾಡುತ್ತವೆ. ಧರ್ಮನನ್ನು ಶಕುನಿ ಪಗಡೆಯಾಟಕ್ಕೆ ಕರೆಯುತ್ತಾನೆ. “ರಂಭಾ, ಊರ್ವಶಿ ಡ್ಯಾನ್ಸಿನವರ ಬರೂತನಕಾ ಚಂದಕ್ಕಾಗಿ ಮಜಾಕಾಗಿ, ಟಾಯಿಮಪಾಸ ಆಗೂದಕ್ಕಾಗಿ ಮೂರ ಪಗಡಿ ಆಟಾ ಆಡ್ರ್ಯಲಾ, ಪಾಂಡವರ ಆಳು ಹೇಳುತ್ತಾನೆ “ಈಗ ನಾ ಡ್ಯೂಟಿ ಮಾಡಾಕ್ಹತ್ತೀನಿ” ಹೀಗೆಯೇ ಪಾರ್ಟಿ, ರಿಕಾರ್ಡ, ಆರ್ಡರ್‌, ಸೌಂಡ, ಲಿಸ್ಟ, ಗ್ಯಾರಂಟಿ, ಪಾವರ ಮುಂತಾದ ಇಂಗ್ಲೀಷ್ ಶಬ್ದಗಳು ಸಮಯ ಸಂದರ್ಭನೋಡದೆ ಗಂಭೀರ ಮಾತುಗಳ ಮಧ್ಯದಲ್ಲಿಯೂ ಸೇರಿಕೊಳ್ಳುತ್ತವೆ.

ಗೊಂಬೆ ಆಟದಲ್ಲಿ ಗಾದೆ ಮಾತುಗಳು, ಗಾದೆಯ ಸತ್ತ್ವದ ಮಾತುಗಳು ಧಾರಾಳವಾಗಿ ಬಳಕೆಯಾಗುತ್ತವೆ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಬಹುದು:

“ತಂದಿ ತಾಯಿ ಸತ್ತು ಸೋದರ ಮಾವ ಉಳೀಬೇಕು.”
“ಬಲ್ಲವರ ಮಾತಾಡೂದು ಬೆಲ್ಲದ್ಹಂಗ,:
“ದುಷ್ಟರ ಕಂಡರ ದೂರ ಇರಬೇಕು
ಸಜ್ಜನರ ಸಂಗಾ ಮಾಡಬೇಕು”.
“ಕಳ್ಳ, ಹೊಕ್ಕ ಮನಿ ಉಳೀತಂತ ಕೊಳ್ಳಿಹೊಕ್ಕ ಮನಿ ಉಳ್ಳೀಲಿಲ್ಲಂತ”
“ಮಾತಕೊಟ್ಟರ ಹೋತು ಮುತ್ತು ಒಡದರ ಹೋತು”
“ಧರ್ಮೋಜಯ ಕರ್ಮೋಲಯ”
“ಹೆಣ್ಣು ಮಕ್ಕಳಿಗೆ ಮಾನಕ್ಕಿಂತ ಹೆಚ್ಚಿನದೇನೂ ಇಲ್ಲ.”
“ಹೊಟ್ಟಿಕಡದವರ ಅಜವಾನ ತಿನಬೇಕು.”
“ಊರ ಮುಂದಿನ ಕುಂಟೆ ಒಬ್ಬ ಕಡದ ಅನಾಂವಾ ಒಬ್ಬ ಬಳದ ಅನಾಂವಾ”

ಸಂಭಾಷಣೆ:

ಗೊಂಬೆ ಆಟದ ಮುಖ್ಯ ಕಲಾವಿದನ ತಾಕತ್ತಿರುವುದು ಸಂಭಾಷಣಾ ಸಾಮರ್ಥ್ಯದಲ್ಲಿ. ಸಂಭಾಷಣೆಯ ದೃಷ್ಟಿಯಿಂದ ಈತನದು ಏಕಪಾತ್ರಭಿನಯ ಪರದೆಯ ಹಿಂದೆ ಕುಳಿತು ಆಯಾ ಸನ್ನಿವೇಶ, ಪಾತ್ರಗಳಿಗನುಗುಣವಾಗಿ ಕಲಾವಿದ ಮಾಡುತ್ತಾನೆ. ನೋಡುತ್ತಿರುವ ಪ್ರೇಕ್ಷಕರಿಗೆ ಬೇರೆ ಬೇರೆ ಜನ ಮಾತನಾಡುತ್ತಿದ್ದಾರೇನೋ ಎಂಬ ಭ್ರಾಂತಿಯನ್ನು ಹುಟ್ಟಿಸುವ ಮಟ್ಟಿಗೆ ಅವನ ಧ್ವನಿಯಲ್ಲಿ ವೈವಿದ್ಯತೆಯಿರುತ್ತದೆ. ಶಕುನಿಯ ಮಾತು ಒಂದು ಬಗೆಯಾದರೆ ಧರ್ಮ ದುರ‍್ಯೋಧನರ ಮಾತುಗಳ ರೀತಿಯೇ ಇನ್ನೊಂದು ಬಗೆ, ಧರ್ಮನ ಸಂಭಾವಿತತನದ ಮಿದುಮಾತುಗಳು ಬೇರೆ. ಧುರ್ಯೋಧನನ ಮತ್ತು ಭೀಮರ ಗಡಸು ಮಾತಿನ ವೈಖರಿಯೇ ಬೇರೆ. ಸ್ತ್ರೀ ಪಾತ್ರಗಳ ವೈವಿಧ್ಯತೆ ಸಾಧಿಸುತ್ತಾನೆ. ದ್ರೌಪದಿ. ಸೀತೆಯರು ಸಾಮಾನ್ಯವಾಗಿ ಗ್ರಾಂಥಿಕ ಭಾಷೆಯಲ್ಲಿ ಮಾತನಾಡಿದರೆ ಹಾಸ್ಯಕ್ಕಾಗಿ ಬರುವ ಸ್ತ್ರೀ ಪಾತ್ರ ಅಪ್ಪಟ ಜಾನಪದದ  ಸೊಗಡನ್ನು ಉಳಿಸಿಕೊಳ್ಳುತ್ತದೆ. ಮತ್ತೆ ವಯೋಮಾಕ್ಕನು ಸಾರವಾಗಿಯೂ ಧ್ವನಿಯಲ್ಲಿ ಏರಿಳಿತಗಳುಂಟು. ಒಬ್ಬ ಮುದುಕಿಯ ಗೊಂಬೆ ಪರದೆಯ ಮೇಲಿದ್ದಾಗ ಆ ಗೊಂಬೆಯ ಪರವಾಗಿ ಮಾತನಾಡಿದವನೇ ಈ ಮೊದಲು ದುರ‍್ಯೋಧನ ಮತ್ತು ಭೀಮರ ಮಾತುಗಳನ್ನೂ ಹೇಳಿದ್ದ ಎಂದರೆ ನಂಬುವುದು ತುಂಬಾ ಕಷ್ಟವಾಗುತ್ತದೆ. ಆದರೆ ವಾಸ್ತವವಾಗಿ ಎಲ್ಲ ಪಾತ್ರಗಳಿಗೂ ಧ್ವನಿ ಕೊಡುವವನು ಒಬ್ಬನೇ.

ಆಟ ನಡೆಸುವವನು ಮಾತನಾಡುತ್ತ ಹೋದಂತೆ ಪರದೆಯ ಮುಂದೆ ಕುಳಿತ ತಬಲಾದವನು ’ಹಾಂಹೂಂ’ ಎನ್ನುತ್ತ ‘ಮುಂದೇನಾಯಿತು’ ’ಆಮೇಲೇನಾಯಿತು’ ’ಹೌದೇನು’ ’ಹೀಗೇನು’ ಎಂದು ಪ್ರತಿಕ್ರಿಯೆ ತೋರಿಸುತ್ತ ಹೋಗುತ್ತಾನೆ. ಪಾತ್ರಗಳು ಇಲ್ಲದಿದ್ದಾಗ ಆಟಗಾರ ನಿರೂಪಕನಾಗಿ ಕಥೆಯನ್ನು ಮುನ್ನಡೆಸುತ್ತಾನೆ. ಆಗಲೂ ತಬಲಾದವನ ಪ್ರತಿಕ್ರಿಯೆ ಸಾಗಿಯೇ ಇರುತ್ತದೆ.

ಪಾತ್ರಗಳ ಮಟ್ಟಕ್ಕನುಗುಣವಾಗಿ ಭಾಷೆಯನ್ನು ಕಲ್ಪಿಸಿಕೊಂಡು ಹೆಣೆಯುವುದು ಮೊದಲನೇ ಹಂತವಾದರೆ ಆ ಧ್ವನಿಯಲ್ಲಿ ಪಾತ್ರ ಸ್ವಭಾವಕ್ಕನುಗುಣವಾಗಿ ಸಹಜತೆಯನ್ನು ತೋರುವುದು ಎರಡನೆಯ ಹಂತ. ಕೆಳಗೆ ಕೊಟ್ಟಿರುವ ದುರ‍್ಯೋಧನ ಮತ್ತು ಶಕುನಿಯರ ಸಂಭಾಷೆ ಗ್ರಾಂಥಿಕ ಮತ್ತು ಜಾನಪದ ಭಾಷೆಯ ಮುಖಾಂತರ ಮುನ್ನಡೆಯುವುದನ್ನು ನೋಡಬಹುದು.

ದುರ್ಯೋಧನ: ಮಾಮಾ, ನಿನಗೆ ಪಾಂಡವರ ಕೀರ್ತಿವಾರ‍್ತೆ ಗೊತ್ತಿಲ್ಲವೇ?

ಶಕುನಿ: ಇಲ್ಲೊ ಮಾರಾಯಾ ನಾವು ಊರಬಿಟ್ಟು ಬಾಳದಿವ್ಸ ಆತು.

ದುರ್ಯೋಧನ : ಮಾಮಾ ಪಾಂಡವರ ಕೀರ್ತಿಯನ್ನು ರೈತರು ಹೊಗಳುತ್ತಾರೆ. ಮಾಮಾ ನನ್ನ ಕೀರ್ತಿ ಯಾಕ ಹೊಗಳೂದಿಲ್ಲಾ.

ಶಕುನಿ : ಶಾಂತನಾಗು ಮಹರಾಜಾ ದುಡುಕಬ್ಯಾಡ ಅಪಾ ದುಡಕಿದರ ಪ್ರಯೋಜ್ನ ಇಲ್ಲಾ.

ದುರ್ಯೋಧನ : ಮಾಮಾ ಪಾಂಡವರ ಆಸ್ತಿ ನನ್ನ ಕೈವಶವಾಗಬೇಕಾದರೆ ನಾನೇನು ಮಾಡಬೇಕು. ಅವರ ಭೂಮಿ, ಸೀಮಿ ಈ ಬಹಾದ್ದೂರನ ವಶವಾಗಬೇಕದರೆ ಏನು ಮಾಡಬೇಕು ಹೇಳು.

ಶಕುನಿ : ರಾಜಾ. ಪಾಂಡವರ ನೋಡರಿ ಯುದ್ಧದಲ್ಲಿ ಸೋಲುದಿಲ್ಲ. ಮೋಸಮಾಡಿ ಅವರ‍್ನ ಕೊಲಬೇಕು. ಸುಳಸುಳ್ಳ ನಿನ್ನ ಮಗನ್ನ ಲಗ್ನ ಐತಿ ಅಂತ ಸುಳ್ಳಸುಳ್ಳ ಜಾಹೀರಾತು ಕೊಡು ಪಾಂಡವರ‍್ನ ರಂಬೀಸಿ ಇಲ್ಲಿ ಹಸ್ತಿನಕ್ಕೆ ಕರಕೊಂಡು ಬರತೀನಿ. ಅವರ ಐದೂ ಮಂದಿ ಲಗ್ನಕ್ಕೆ ಬಂದಾಗ ನೀವೇನ ಮಾಡಬೇಕು; ಮೂರ ಪಗಡಿ ಆಟಾ ಆಡಬೇಕು. ಆ ಪಗಡಿ ಆಟದೊಳಗೆ ಅವರಿಗೆ ಸೋಲಾಕ್ಕೈತಿ ನಿನಗೆ ಗೆಲುವಾಕ್ಕೈತಿ.

ಇಂಥ ಭಾಷೆಯ ಬೆನ್ನೇರಿ ಧ್ವನಿಯಲ್ಲಿ ಏರಿಳಿತಗಳನ್ನು ಮಾಡಿಕೊಂಡು ಪಾತ್ರಗಳಿಗೆ ಸಹಜತೆಯೊದಗಿಸಿ ಕಳೆಕಟ್ಟುವುದು ಕಲಾವಿದನ ಶಕ್ತಿಯನ್ನವಲಂಬಿಸಿದೆ. ಈ ಬಗೆಯ ಸಂಭಾಷಣಾ ಶಕ್ತಿ ಚಾತೂರ‍್ಯಗಳು ತೊಗಲುಗೊಂಬೆ ರಂಗ ಪ್ರಯೋಗದ ಜೀವವಿದ್ದಂತೆ.

ಆಧುನಿಕ ಕಾಲದ ಮನರಂಜನಾ ಮಾಧ್ಯಮಗಳ ಮಧ್ಯದಲ್ಲಿ ಇಂದು ತೊಗಲುಗೊಂಬೆ ಆಟಕ್ಕೆ ಮುಂಚಿನ ಬೆಲೆ ಉಳಿದಿಲ್ಲ. ಆದರಿಸುವವರಿಲ್ಲದೆ ಕೆಲವು ಕಲಾವಿದರು ಈ ಆಟದ ಕೈ ಬಿಟ್ಟರೆ ಈ ವಲಯದಲ್ಲಿ ಇರುವ ಬೆರಳೆಣಿಕೆಯ ಕೆಲವರು ಮಸಳಿಸುತ್ತಿದ್ದಾರೆ. ಈ ಕಲಾವಿದರ ಪೋಷಣೆ, ಗೊಂಬೆಗಳ ಪುನರ್‌ನಿರ್ಮಾಣ ಒಟ್ಟಾರೆ ಈ ಕಲೆಯನ್ನು ಉಳಿಸಿಕೊಳ್ಳುವ ಹೊಣೆ ವಿಶ್ವವಿದ್ಯಾಲಯ ಮತ್ತು ಅಕಾಡೆಮಿಗಳ ಮೇಲಿದೆ.

* * *[1]  ಪ್ರಸ್ತುತ ಲೇಖನ ವಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಪ್ರಚಲಿತವಿರುವ ತೊಗಲುಗೊಂಬೆಯಾಟದ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿದೆ.

[2]  ಇಲ್ಲಿ ಪ್ರಸಂಗ ಎನ್ನುವುದನ್ನು ಕಥಾ ಸನ್ನಿವೇಶ ಅಥವಾ ಕಥಾ ಸಂದರ್ಭ ಎಂಬರ್ಥದಲ್ಲಿ ಬಳಸಿದೆ. ಯಕ್ಷಗಾನದ ಪ್ರಸಂಗ ಎಂಬ ಪಾರಿಭಾಷಿಕ ಅರ್ಥದಲ್ಲಲ್ಲ.

[3]  ಇಲ್ಲಿಂದ ಈ ಪ್ರಬಂಧದುದ್ದಕ್ಕೂ ಬಳಸಿಕೊಂಡಿರುವ ಮಾತು, ಸಂಭಾಷಣೆಗಳು ದ್ರೌಪದಿ ವಸ್ತ್ರಾಪಹರಣ ಎಂಬ ತೊಗಲು ಗೊಂಬೆಯಾಟಕ್ಕೆ ಸಂಬಂಧಿಸಿದವುಗಳು ದಿನಾಂಕ ೧೪.೭.೧೯೯೮೬ ರಂದು ಕಾಕೂರ ಕೇಶಪ್ಪ ಕಿಳ್ಳಿಕ್ಯಾತರ ಎಂಬವರು ಈ ಆಟ ಆಡಿದರು. ಇದನ್ನು ನಾನು ಧ್ವನಿ ಮುದ್ರಿಸಿಕೊಂಡಿದ್ದೇನೆ.