ಗೊಂಬೆರಾಮ ಊರಿಗೆ ಬಂದ ಎಂದರೆ ಸಾಕು ಹಿಂದೆ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಮೂಡುತ್ತಿತ್ತು. ಊರ ಚಾವಡಿಯ ಪಡಸಾಲೆಯಲ್ಲಿ ಪರದೆ ಕಟ್ಟಿ, ಪರದೆಯ ಮೇಲೆ ಅದ್ಭುತ ಲೋಕವನ್ನೇ ಸೃಷ್ಟಿ ಮಾಡಿ, ನಮ್ಮನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದ ಆ ಗೊಂಬೆರಾಮರು ಊರ ಬಾಗಿಲಿಗೆ ಬಂದರೆಂದರೆ ಊರಿಗೆ ಊರೆ ಸುದ್ದಿಯಾಗುತ್ತಿತ್ತು. ಕಟ್ಟುಮಸ್ತಾದ ಹೋರಿಯ ಮೇಲೆ ಗಂಟುಮೂಟೆ ಕಟ್ಟಿಕೊಂಡು ಮಕ್ಕಳು ಮರಿಗಳನ್ನು ಕಂಕುಳಲ್ಲಿ ಅವುಚಿಕೊಂಡು ಇಡೀ ಕುಟುಂಬ ಊರು ಪ್ರವೇಶಿಸುತ್ತಿತ್ತು. ಪಂಜೆಯನ್ನೇ ಪರದೆ ಮಾಡಿ, ಹರಳೆಣ್ಣೆಯ ದೊಡ್ಡ ದೀಪದ ಬೆಳಕಿನಲ್ಲಿ ಗಒಂಬೆಗೆ ಬಣ್ಣ ತುಂಬ ವಿವಿಧಾಕಾರದ ಗೊಂಬೆಗಳನ್ನು ಹಿಡಿದು ಆಡಿಸುತ್ತಿದ್ದ ಅವರ ಕೈಚಳಕದಿಂದ ಗೊಂಬೆಗೆ ಜೀವ ಬರುತ್ತಿತ್ತು. ಜೀವತುಂಬಿಕೊಂಡ ಗೊಂಬೆ ಯಕ್ಷಗಾನದ ಮಟ್ಟುಗಳಿಗನುಸಾರವಾಗಿ ಹೆಜ್ಜೆ ಹಾಕತೊಡಗಿತೆಂದರೆ ಆ ಬಣ್ಣಕ್ಕು ಕುಣಿಯುವವರಿಗೂ, ಸಂಭಾಷಣೆಯ ಮೋಡಿಗೂ ತಲೆದೂಗದಿದ್ದವರೇ ಇಲ್ಲ.

ಸಾಮಾನ್ಯವಾಗಿ ಗೊಂಬೆರಾಮರ ಇಡೀ ಕುಟುಂಬ ಈ ರೀತಿಯ ಅಲೆದಾಟದಲ್ಲೇ ಬದುಕುಸಾಗಿಸುತ್ತಿತ್ತು. ಅಪ್ಪ ಅವ್ವನಾದಿಯಾಗಿ ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳತನಕ ಒಂದು ತಂಡದಲ್ಲಿ ಹತ್ತು-ಹನ್ನೆರಡು ಜನರಿರುತ್ತಿದ್ದರು. ದಿನಕ್ಕೊಂದು ಊರು, ಮಲಗಿದಲ್ಲೇ ಸೂರು. ಕಲೆಯೇ ಇವರ ಜೀವನವಾಗಿತ್ತು. ಆದ್ದರಿಂದ ಹುಟಟುತ್ತಿದ್ದಂತೆಯೇ ಪಾತ್ರಗಳು, ಸಂಭಾಷಣೆಗಳು, ಹಾಡುಗಳು ಇವರ ಭಾಗವಾಗುತ್ತಿದ್ದವು. ಅದರಿಂದಾಗಿ ಇವರಲ್ಲಿ ಎಲ್ಲರೂಪ್ರತಿಭಾವಂತರೂ, ಪುರಾಣ ಪಾರಂಗತರು, ಇಂಥ ಗೊಂಬೆರಾಮರ ಕುಟುಂಬಗಳು ಈಗ ಎಷ್ಟಿವೆ? ಇದ್ದರೂ ಪ್ರೋತ್ಸಾಹವಿದೆಯೆ? ಕಲೆಯನ್ನೇ ವೃತ್ತಿಯಾಗಿಸಿಕೊಂಡು ಹೊಟ್ಟೆಹೊರೆಯುತ್ತಿದ್ದ ಇವರ ಬಾಳು ಇಂದು ಏನಾಗಿದೆ? ಇತ್ಯಾದಿ ಪ್ರಶ್ನೆಗಳಿಗೆ ಬಹುಶಃ ಈ ಉತ್ತರ ಹೇಳುವುದೇ ಕಷ್ಟವಾಗಿದೆ. ಬದಲಾಗುತ್ತಿರುವ ಈ ಸಮಾಜ ವ್ಯವಸ್ಥೆಯಲ್ಲಿ ಬಹುತೇಕ ನಮ್ಮ ವೃತ್ತಿಕಲಾವಿದರ ಕಡೆಯೂ ಕಣ್ಣೀರಿನದ್ದೆ.

ಆ “ತೊಗಲುಗೊಂಬೆಯಾಟದ ಮೇಲೆ ಆಧುನಿಕತೆಯ ಪ್ರಭಾವ ಮತ್ತು ನವೀಕರಣ ಸಾಧ್ಯತೆ” ಎಂಬುದು ನನ್ನ ವಿಷಯ. ‘ನವೀಕರಣ ಸಾಧ್ಯತೆ’ ಅನ್ನುವಾಗ ಅರ್ಥದ ಹಿನ್ನೆಲೆಯಲ್ಲಿ ನಾನು ವಿಶ್ಲೇಷಣೆಗೆ ಪ್ರಯತ್ನಿಸಿದ್ದೇನೆ. ನವೀಕರಣ ಎಂದರೆ ಕೇವಲ ಗೊಂಬೆಯ ಅಥವಾ ಆಟದ ನವೀಕರಣವೇ? ಅಥವಾ ಕಲಾವಿದ ಹಾಗೂ ನೋಡುಗನ ಆಲೋಚನೆಯ ಮತ್ತು ದೃಷ್ಟಿಯ ನವೀಕರಣವೆ? ನವೀಕರಣ ಮತ್ತು ಸಂರಕ್ಷಣೆಯ ವಿಚಾರಕ್ಕೆ ನಂತರ ಬರುತ್ತೇನೆ.

ಈಗ ‘ಆಧುನಿಕತೆ’ ಅಂದರೆ ಯಾವುದು? ಆಧುನಿಕತೆಯನ್ನು ನಾನು ಇಲ್ಲಿ ಮೂರು ಸ್ತರಗಳಲ್ಲಿ ಗುರುತಿಸಲು ಪ್ರಯತ್ನಿಸಿದ್ದೇನೆ.

೧. ವಿಜ್ಞಾನದ ಹೊಸ ಹೊಸ ಅವಿಷ್ಕಾರಗಳು.

೨. ಸಮಾಜ ವ್ಯವಸ್ಥೆಯ ಒಟ್ಟಾರೆ ಬದಲಾವಣೆ

೩. ದುಡ್ಡೇ ದೊಡ್ಡಪ್ಪನಾಗಿ ಮೆರೆಯುತ್ತಿರುವ ಇಂದಿನ ಪರಿಸ್ಥಿತಿ

ವಿಜ್ಞಾನ ಬೆಳೆದಂತೆ ಅದರ ಜೊತೆಗೇ ಹುಟ್ಟಿಬೆಳೆದ ಸಮೂಹ ಮಾಧ್ಯಮಗಳು, ಸಮೂಹ ಮಾಧ್ಯಮಗಳಾದ ವೃತ್ತ ಪತ್ರಿಕೆ, ರೇಡಿಯೋ, ಟೆಲಿವಿಷನ್ ತಂತ್ರಜ್ಞಾನಗಳಲ್ಲಿ ಆದ ಕ್ರಾಂತಿಕಾರಕ ಬದಲಾವಣೆ, ಇವಕ್ಕೆ ಹೊಂದಿಕೊಂಡಂತೆ ವೀಡಿಯೋ, ಆಡಿಯೋ ಮತ್ತು ಸಿನಿಮಾಗಳು ತಮ್ಮ ಪ್ರಭಾವವನ್ನು ಬೀರುತ್ತಿರುವ ರೀತಿ ಇವೆಲ್ಲವೂ ಯೋಚಿಸಬೇಕಾದ ಸಂಗತಿಗಳೇ. ಅದರಲ್ಲಿಯೂ ‘ಟೆಂಟ್ ಸಿನಿಮಾಗಳು’ ಅಣಬೆಗಳಮತೆ ಹುಟ್ಟಿಕೊಂಡ ಮೇಲೆ ನಮ್ಮ ಹಳ್ಳಿಗಳಿಡೀ ಸಂಸ್ಕೃತಿಯ ಮೇಲೆ ಅವು ಮಾಡಿದ ದಾಳಿಅತ್ಯಂತ ಪ್ರಮುಖವಾದದ್ದು.

ಈ ಮಾಧ್ಯಮಗಳ ಬಗ್ಗೆ ನಾನು ಹೆಚ್ಚು ಹೇಳಲು ಹೋಗುವುದಿಲ್ಲ. ಏಕೆಂದರೆ ಇವುಗಳ ಪರಿಣಾಮ ಎಷ್ಟರಮಟ್ಟಿಗಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವೇ. ಇನ್ನು ಸಮಾಜ ವ್ಯವಸ್ಥೆಯ ಬದಲಾವಣೆಗೆ ಬರೋಣ. ರಾಜ-ಮಹಾರಾಜ ಪಳೇಗಾರರ ಕಾಲ ಅಳಿಯಿತು. ಈ ನಡುವೆ ಬ್ರಿಟೀಷ್ ಸಾಮ್ರಾಜ್ಯವೂ ಸಾಕಷ್ಟ್ರ ರಾಜಕೀಯ ಪ್ರಬಾವ ಬೀರಿ, ಈ ದೇಶದ ಅನೇಕಾನೇಕ ಪ್ರತಿಭಾವಂತರನ್ನು ವಿದೇಶಿ ಮೋಹದ ಆಲಿಂಗನಕ್ಕೆ ಒಳಪಡಿಸಿ ಅದೂ ಅಳೆಯಿತು. ಸ್ವಾತಂತ್ರ್ಯ ಚಳುವಳಿಯ ನಂತರ ಸಂಸ್ಥಾಪನೆಗೊಂಡ ನಮ್ಮ “ಪ್ರಜಾಪ್ರಭುತ್ವ” ಎನ್ನುವ ಹೆಸರಿನ ನಮ್ಮದೇ ಸರ್ಕಾರ ಜಾರಿಗೆ ಬಂತು. ನಿಜವಾಗಿ ಇಲ್ಲಿಂದ ನಮ್ಮ ವ್ಯವಸ್ಥೆಯ ಬದಲಾವಣೆ ಆರಂಭವಾಯಿತು. ನಿನ್ನೆ ಸವಾಧ್ಯಕ್ಷರಾದ ಡಾ. ಕಂಬಾರರು ಹೇಳಿದಂತೆ ‘ಕುಟುಂಬ’ ಎನ್ನುವುದು ತನ್ನ ಅಸ್ತಿತ್ವವನ್ನು ಇನ್ನು ಈ ದೇಶದಲ್ಲಿ ಉಳಿಸಿಕೊಂಡಿದೆಯಾದರೂ ಆ ಕುಟುಂಬ ಬದಕುತ್ತಿರುವ ರೀತಿ ಮಾತ್ರ ಹಿಂದಿಗಿಂತ ಬೇರೆ. ನಮ್ಮ ಕಲಾವಿದರ ಕುಟುಂಬ ಜೀವನ ಸಾಂಸ್ಕೃತಿಕವಾಗಿ ಮತ್ತು ವೈಯಕ್ತಿಕವಾಗಿ ಪರಂಪರೆಯ ಹಿನ್ನೆಲೆಯನ್ನು ಇಟ್ಟುಕೊಂಡಿದೆಯಾದರೂ, ಜೀವನ ಮಾಡುತ್ತಿರುವ ಮತ್ತು ಸಮಾಜದಲ್ಲಿ ತನ್ನನ್ನು ಒಡ್ಡಿಕೊಳ್ಳುತ್ತಿರುವ ರೀತಿ ಮಾತ್ರ ಬೇರೆ.

ಹಿಂದೆ ತೊಗಲುಗೊಂಬೆ ಕಲಾವಿದ ಹಳ್ಳಿ ಹಳ್ಳಿಗೆ ಹೋಗಿ ಪಂಜೆ, ಅಕ್ಕಿ, ಅಸಿಟ್ಟು, ಮೆಣಸಿನಕಾಯಿ ಪಡೆದು ಆಟ ಆಡಿ ಮತ್ತೊಂದು ಊರಿಗೆ ಹೋಗುತ್ತಿದ್ದ ಪರಿಪಾಠ ಇಂದಿನ ಎಷ್ಟು ಜನರಲ್ಲಿ ಉಳಿದಿದೆ. ಅಥವಾ ನಮ್ಮ ಈ ದೊಡ್ಡ ಭರಮಪ್ಪ, ಹೊಂಬಯ್ಯ, ಶಟವಾಜ ಕಟಬರರು ಹಳ್ಳಿಹಳ್ಳಿಗೆ ಹೋದರೂ ಅವರನ್ನು ಆಹ್ವಾನಿಸಿ ಆಟ ಆಡಿಸುವವರು ಯಾರಿದ್ದಾರೆ? ಹೀಗಾಗಿ ಈ ಕಲಾವಿದರು ವ್ಯವಸ್ಥೆಯನ್ನು ಮತ್ತು ಸರ್ಕಾರವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ನಮ್ಮ ಸ್ವಾತಂತ್ರ್ಯಾ ನಂತರದ ರಾಜಕೀಯ ಭಿಕ್ಷುಕನಿಂದ ಕಪ್ಪು ಹಣದ ಆಧುನಿಕ ದೊರೆಗಳವರೆಗೆ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿರುವುದರಂದ ಕಲಾವಿದನೂ ಸಹಜವಾಗಿ ಆಶ್ರಯ ಕೊಡುತ್ತಿದ್ದ ದೇವಸ್ಥಾನ, ಮಠ, ಮಾನ್ಯಗಳು ಎಂಜನಿಯರಿಂಗ್, ಮೆಡಿಕಲ್ ಕಾಲೇಜು ಕಟ್ಟುವ ಹೊಸ ಮಾರ್ಪಾಡಿಗೆ ತಮ್ಮನ್ನು ಹೊಂದಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ನಿರ್ಮಾಣವಾದಾಗ-ಕಲಾವಿದ ಹೇಗೆ ಬದುಕಬೇಕು? ದೊಡ್ಡ ಭರಮಪ್ಪ ಹೊಂಬಯ್ಯ ಅವರುಗಳು ಟೆರಿಕಾಟ್ ಬಟ್ಟೆ ಹಾಕುವುದು, ವಾಚುಕಟ್ಟುವುದು ಅನಿವಾರ್ಯವಾಗಿರುವ ಈ ಸಂದರ್ಭದಲ್ಲಿ ಅವನ ಜೀವನಕ್ಕೆ ಅವನ ಸಹಜ ಶೋಕಿಗೆ ಅವನಿಗೆ ದುಡ್ಡಿನ ಅಗತ್ಯವಿಲ್ಲದೆ? ದುಡ್ಡಿಗಾಗಿ ಕಲಾವಿದ ಅದು ಹುಟ್ಟುವ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನಿಸುವುದು ಅನಿವಾರ್ಯ. ಬಿಜಾಪುರದ ಗಡ್ಡಪ್ಪ ಶಟವಾಜಿ ನಾನು ನೋಡುನೋಡುತ್ತಿದ್ದಂತೆ ತನ್ನ ಗೊಂಬೆಗಳನ್ನು ಕುಟುಂಬ ಯೋಜನೆಯ ಮತ್ತು ಸಣ್ಣ ಉಳಿತಾಯ ಯೋಜನೆಯ ಪ್ರಚಾರಕ್ಕೆ ಬಳಸಿಕೊಂಡ. ಅವನಿಗೆ ಹಣ ಬಂತು, ಕಲೆ ಏನಾಯಿತು? ಇಲ್ಲಿ ತಪ್ಪು ಯಾರದು? ಶಟವಾಜಿಯದೋ ಅಥವಾ ವ್ಯವಸ್ಥೆಯ ನಿರ್ಮಾಪಕರದೋ? ನಾನು ದಾರಿ ತಪ್ಪುತ್ತಿದ್ದೇನೇನೋ ಅನ್ನಿಸುತ್ತಿದೆ. ಕ್ಷಮಿಸಿ, ಗೊಂದಲದಲ್ಲಿರುವ ಮನಸ್ಸು ಹೀಗೆ ಎತ್ತೆತ್ತಲೋ ಹರಿಯುವುದು ಸಹಜ.

ಇನ್ನು ನವೀಕರಣ ಮತ್ತು ಸಂರಕ್ಷಣೆಯ ವಿಚಾರ. ಈ ಆಧುನಿಕತೆ ಅನ್ನುವುದು ಇದೀಗ ಕಂಪ್ಯೂಟರ್ ಯುಗವನ್ನು ಪ್ರವೇಶಿಸಿ ದಿನದಿನವೂ ಹೊಸ ಜಗತ್ತನ್ನೇ ನಮ್ಮಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತಿರುವ ಈ ಸಂದರ್ಭದಲ್ಲಿ ಇದರ ಪ್ರಭಾವದಿಂದ ಮುಕ್ತನಾಗಲು ಯಾವನಿಂದಲೂ ಸಾಧ್ಯವಿಲ್ಲ ಎನ್ನುವ ಮಾತಂತೂ ನಿಜ. ಇಂಥ ಸಂದರ್ಭದಲ್ಲಿ ಜಾನಪದವನ್ನು ಮೂಲಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು ಅನ್ನುವುದು ಕೆಲವರ ವಾದ. ಆದರೆ ಇಲ್ಲಿ ಬರುವ ಪ್ರಶ್ನೆ ಜೀವಂತವಾಗಿ ಉಳಿಸಿಕೊಂಡರೆ ಸಾಕೋ ಅಥವಾ ಮೂಲ ಸ್ಥಿತಿಯಲ್ಲೇ ಉಳಿಯಬೇಕೋ. ಜೀವಂತ ಅಂದಾಗ ಹೇಗೋ ಒಟ್ಟಿನಲ್ಲಿ ಕಲೆ ಉಳಿಯಬೇಕು. ಆದರೆ ಅದು ಅದೇ ಕಲೆಯ ರೂಪಲಕ್ಷಣಗಳನ್ನು ಪಡೆದಿರಬೇಕು. ಅದು ಬಿಟ್ಟು, ಮೂಲ ಸ್ಥಿತಿಯಲ್ಲೇ ಇರಬೇಕು ಅಂದುಕೊಂಡು ನಾವು ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಯೊಚಿಸಿದರೆ ಕಾಲಮಾನದ ವಿರುದ್ಧ ನಾವು ಹೋಗಬೇಕಗುತ್ತದೆ. ಯಾವುದೇ ಕಲೆ ಕಾಲಮಾನದ ಅಗತ್ಯಕ್ಕನುಗುಣವಾಗಿಯೇ ಉಳಿಯಬೇಕು. ಈ ಅಗತ್ಯವನ್ನು ಅರಿತುಕೊಂಡು ಕೆಲವು ಬದಲಾವಣೆಗಳೊಡನೆ ಸ್ವೀಕರಿಸಿದರೆ ಮಾತ್ರ ಕಲೆಯೂ ಉಳಿಯುತ್ತದೆ. ಜನರಿಗೆ ಅಪ್ಯಾಯಮಾನವೂ ಆಗುತ್ತದೆ.

ಆದ್ದರಿಂದ ಕಾಲಮಾನದ ಜೊತೆಗೆ ತೇಲುತ್ತಲೇ ನಮ್ಮ ಸಾಂಸ್ಕೃತಿಕ ಮನಸ್ಸಿಗೆ ಒಂದು ಚೌಕಟ್ಟು ಕಂಡುಕೊಳ್ಳುತ್ತಾ ಪರಂಪರೆಯ ಪಳಿಯುಳಿಕೆಗಳ ಮೇಲೆ ಹೊಸ ರೂಪ ಕೊಡುವ ಕೆಲಸವನ್ನು ಮಾಡಬೇಕಾಗಿದೆ. ಜನರ ಮನೋಧರ್ಮವನ್ನು ಅರ್ಥ ಮಾಡಿಕೊಂಡು, ನಾನಾ ಜಂಜಾಟದ ಆ ಮನಸ್ಸಿನೊಳಕ್ಕೆ ಶಿಸ್ತು ಬದ್ಧವಾದ ಕಲೆಯನ್ನು ತುಂಬುವ ಕೆಲಸವನ್ನು ಮಾಡಬೇಕು.

ಈ ಹಿನ್ನೆಲೆಯಲ್ಲಿ ಕಲೆಯನ್ನು ನವೀಕರಣಗೊಳಿಸಬೇಕಾದರೆ, ಅದಕ್ಕೆ ಒಂದು ಚೌಕಟ್ಟು ನಿರ್ಮಾಣ ಮಾಡಬೇಕಾದರೆ ಮತ್ತು ಆ ಮೂಲಕ ಕಲೆ ಜನರ ಮನಸ್ಸಿಗೆ ಹಿಡಿಸುವಂತೆ ಮಾಡಬೇಕಾದರೆ ಕೆಲವು ಹೊಸಪ್ರಯತ್ನಗಳನ್ನು ನಾವು ಮಾಡಲೇಬೇಕಾಗುತ್ತದೆ. ನನ್ನ ಆಲೋಚನೆ ಹಿನ್ನೆಲೆಯಲ್ಲಿ ಆ ಹೊಸ ಪ್ರಯತ್ನಗಳಾವುವೆಂದರೆ,

೧. ಜನಪದ ಕಲಾ ಜಗತ್ತಿಗೆ ವಿದ್ಯಾವಂತರ ಪ್ರವೇಶ.

೨. ಸಂಘ -ಸಂಸ್ಥೆಗಳು ಜಾನಪದಕ್ಕಾಗಿಯೇ ಹುಟ್ಟಿಕೊಳ್ಳಬೇಕಾದ ಅನಿವಾರ್ಯತೆ.

೩. ಸರ್ಕಾರ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬಬೇಕಾದ ರೀತಿ.

ಯಾವುದೇ ಕಲೆಗೆ ಹೆಚ್ಚು ಬೆಲೆಸಾಗಬೇಕಾದರೆ ಮತ್ತು ವ್ಯವಸ್ಥಿತವಾಗಿ ನಿಲ್ಲಬೇಕಾದರೆ ವಿದ್ಯಾವಂತರು ಅದರಲ್ಲಿ ಪ್ರವೇಶ ಮಾಡುವುದು ಅನಿವಾರ್ಯ. ಅಂದರೆ ವಿದ್ಯಾವಂತ ಇಲ್ಲಿ “ಕೋರಿಯಾಗ್ರಾಫರ್” ಆಗಿ ಕೆಲಸ ಮಾಡುವುದಷ್ಟೇ ಅಲ್ಲದೆ ಅವರ ಜೀವನ ವಿಧಾನಗಳನ್ನು ಅರ್ಥಮಾಡಿಕೊಳ್ಳುವವನಾಗಬೇಕು. ಆದ್ದರಿಂದ ಈ ವಿದ್ಯಾವಂತರು ಹಳ್ಳಿಗಳ್ಲಲಿ ಬೆಳೆದು ಕಲೆಯ ಬಗ್ಗೆ ನಿಜವಾದ ಅಭಿಮಾನ ಇರುವವರಾಗಬೇಕು. ಕಲೆಯ ಪರಂಪರೆಯ ಹಿನ್ನೆಲೆಯ ಸುಧಾರಣೆ ಹೇಗೆ ಮಾಡಬೇಕೆಂಬ ಪರಿಜ್ಞಾನವುಳ್ಳವರಾಗಿರಬೇಕು. ಕರಾವಳಿಯ ಯಕ್ಷಗಾನ ಪ್ರವೇಶದ ನಂತರ ನವೀಕರಣಗೊಂಡ ರೀತಿ ನಮ್ಮೆಲ್ಲರಿಗೂ ಗೊತ್ತೇ ಇದೆ. ಈ ಕ್ಷೇತ್ರಕ್ಕೆ ವಿದ್ಯಾವಂತರು ಪ್ರವೇಶ ಮಾಡುವುದರಿಂದ ಎರಡು ಲಾಭಗಳಿವೆ. ಒಂದು ಕೆಲವು ಅಂಧ ಸಂಪ್ರದಾಯಗಳು ಮತ್ತು ಶೋಷಣಾ ಮೂಲವಾದ ಆಚರಣೆಗಳಿಂದ ಕಲಾವಿದರನ್ನು ಅಥವಾ ಒಟ್ಟಾರೆ ನಪದರನ್ನು ವಿಮುಕ್ತಿಗೊಳಿಸುವುದು, ಎರಡು ಹಿಂದೆಯೇ ಹೇಳಿದಂತೆ ಕಲೆಯ ಸುಧಾರಣೆ ಮಾಡುವುದು. ಈ ಮಾತಿಗೆ ಅನೇಕ ವಿರೋಧಗಳು ಬರಬಹುದು ಆದರೆ ಇಂದಿನ ವಿಜ್ಞಾನ ಯುಗದಲ್ಲಿಯೂ ಧರ್ಮ. ದೇವರು ಮತ್ತು ಆಚರಣೆಗಳ ಹಿನ್ನೆಲೆಯಲ್ಲಿಯೇ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಪ್ರಗತಿ ವಿರೋಧಿ ಧೋರಣೆಯೇ ಆಗುತ್ತದೆ. ಅಜ್ಞಾನ ಮತ್ತು ಬಡತನದಿಂದ ನರಳುತ್ತಿರುವ ಭಾರತದಂತ ದೇಶದಲ್ಲಿ ಶೋಷಣಾರಹಿತವಾದ ಸಮಾಜವೊಂದರ ನಿರ್ಮಾಣವಾಗಬೇಕು ಮತ್ತು ಈ ದೇಶದ ಜನರ ಸಂಸ್ಕೃತಿಯ ಪ್ರಮುಖ ಅಂಗಗಳಾದ ಜಾನಪದ ಕಲೆ ಮತ್ತು ಸಾಹಿತ್ಯ ಸಂಗೀತಗಳು ಉಳಿಯಬೇಕು. ಇದು ದೃಂದದಲ್ಲಿರುವ ಮನಸ್ಸೊಂದರ ಆಲೋಚನೆ ಅನ್ನಿಸಿದರೂ ಈ ಎರಡೂ ಆಗಬೇಕಾದುದು ಅಗತ್ಯ.

ಕಲೆಗಳಿಗೆ ಸಂಬಂಧಿಸಿದ ವಿವಿಧ ಸಂಘ ಸಂಸ್ಥೆಗಳು ಸ್ಥಳೀಯವಾಗಿ ಹುಟ್ಟಿಕೊಳ್ಳಬೇಕು. ಇಂಥ ಸಂಸ್ಥೆಗಳು ಕಲಾವಿದರಲ್ಲಿ ಎಚ್ಚರ ಮೂಡಿಸುವ ಜೊತೆಗೆ ಅವರನ್ನು ಸಂಘಟಿಸಿ ಪ್ರೋತ್ಸಾಹ ನೀಡುವಂತಾಗಬೇಕು. ಕಲೆ, ಸಂಗೀತ ಮತ್ತು ಹಾಡುಗಳ ಬಗ್ಗೆ ಆಸಕ್ತಿ ಇರುವ ಯುವಜನರನ್ನು ಸಂಘಟಿಸಿ ತರಬೇತಿ ನೀಡುವ ಕೆಲಸ ಇಂಥ ಸಂಘ ಸಂಸ್ಥೆಗಳಿಂದ ಆಗಬೇಕು.

ಇನ್ನು ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬುವ ವಿಚಾರಕ್ಕೆ ಬರೋಣ. ಈ ಕೆಲಸವನ್ನು ಯಾರು ಮಾಡಬೇಕು? ಸರ್ಕಾರವೇ ಅಥವಾ ಸಾರ್ವಜನಿಕರೆ? ಯಾವುದೇ ಜಾನಪದ ಕಲೆ ಉಳಿಯಬೇಕದರೆ ಕಲಾವಿದ ಮೊದಲು ಬದುಕಬೇಕು, ಅವನ ಜೀವನ ಮಟ್ಟ ಸುಧಾರಿಸಬೇಕು. ಅಂದರೆ ಆರ್ಥಿಕವಾಗಿ ಅವನು ಕೆಲವು ಸವಲತ್ತುಗಳನ್ನು ಪಡೆಯಬೇಕು. ಜನಪದ ಕಲಾವಿದನ ಜೀವನ ಸುಧಾರಿಸುತ್ತಾ ಹೋದಂತೆ ಅವನು ಶಿಷ್ಟನಾಗಿ ಪರಿವರ್ತನೆಗೊಂಡು ಜಾನಪದ ಕಲಾವಿದನ ಬದುಕಿನಿಂದ ದೂರವಾಗುತ್ತಾನೆ ಕಲೆಯನ್ನು ಮರೆಯುತ್ತಾನೆ ಎಂಬ ಒಂದು ಅಭಿಪ್ರಾಯವುಂಟು. ಆದರೆ ಇದು ಅತಿರೇಕದ ಮತ್ತು ಪ್ರಗತಿವಿರೋಧಿಗಳ ಮಾತು. ವಾಸ್ತವವಾಗಿ ಕಲಾವಿದ ಆರ್ಥಿಕವಾಗಿಯೂ ಸುಸ್ಥಿತಿಯಲ್ಲಿದ್ದಾಗ ಬೇರೆಯ ಯೋಚನೆಗಳೂ ಕಡಿಮೆಯಾಗಿ ತನ್ನ ಕಲೆಯ ಅಭ್ಯಾಸಕ್ಕೆ ಹೆಚ್ಚು ಗಮನ ಕೊಡುತ್ತಾನೆ. ಇದರ ಜೊತೆಗೆ ನಾವು (ಅಂದರೆ ಸರ್ಕಾರ ಮತ್ತು ಸಾರ್ವಜನಿಕರು) ಮಾಡಬೇಕಾದುದು ಕಲಾವಿದರಲ್ಲಿ ಆತ್ಮವಿಶ್ವಾಶವನ್ನು ತುಂಬುವ ಕೆಲಸ. ನಮ್ಮ ಕಲೆಯನ್ನು ಯಾರು ನೋಡುತ್ತಾರೆ ಎನ್ನುವುದು ಬಹುತೇಕ ಜನಪದ ಕಲಾವಿದರ ಕೊರಗು. ಆದರೆ ಅವರ ಕಲೆಗೂ ಬೆಲೆಯಿದೆ. ನೋಡುವವರು ಕೇಳುವವರಿದ್ದಾರೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟು ಕಲಾವಿದನಿಗೆ ತನ್ನ ಕಲೆಯ ಬಗ್ಗೆ ಅಭಿಮಾನ ಮೂಡುವಂತೆ ಮಾಡಬೇಕು. ಒಟ್ಟಾರೆ ಜಾನಪದ ಕಲಾವಿದರಿಗೆ ಅವರದೇ ಅದ್ದೊಂದು ವೇದಿಕೆಯನ್ನು ನಿರ್ಮಾಣಮಾಡಿಕೊಡುವ ಮೂಲಕ ಅವರ ಕಲೆಗಳಿಗೆ ಗೌರವ ತೋರಿಸುವಂತಾಗಬೇಕು.