ನಾಟಕ ಒಂದು ಸಂಕೀರ್ಣ ಕಲೆ. ಸಾಹಿತ್ಯ ನೃತ್ಯ ಸಂಗೀತ ಚಿತ್ರ ಅಭಿನಯ-ಇವು ನಾಟಕದ ಮುಖ್ಯ ಅಂಗಗಳು. ನಾಟಕದ ಸ್ವರೂಪ ಮತ್ತು ಪ್ರಕಾರಗಳನ್ನಾಧರಿಸಿ ಇವುಗಳ ಪ್ರಮಾಣ ಹೆಚ್ಚು ಕಡಿಮೆ ಇರಬಹುದು. ಇವುಗಳಲ್ಲಿ ಒಂದನ್ನೊ ಎರಡನ್ನೋ ಪೂರ್ತಿ ಕೈಬಿಟ್ಟ ರಂಗ ಪ್ರಕಾರಗಳೂ ಇವೆ. ಆದರೆ ಒಂದು ನಾಟಕ ಸಂಪೂರ್ಣ ಅನಿಸಿಕೊಳ್ಳಬೇಕಾದರೆ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಇವೆಲ್ಲವೂ ಅವಶ್ಯವೆಂಬುದು ಸಾಮಾನ್ಯ ತಿಳುವಳಿಕೆ.

ತೊಗಲುಗೊಂಬೆಯಾಟ ಒಂದು ಜಾನಪದ ನಾಟಕ. ನಾಟಕದ ಸಾಮಾನ್ಯ ಅಂಶಗಳು ಇಲ್ಲಿವೆ. ಚಿತ್ರಕಲೆ, ಮಾತುಗಾರಿಕೆ ಮತ್ತು ಸಂಗೀತ ಇವು ಈಜಾನಪದ ನಾಟಕದ ಮುಖ್ಯ ಅಂಗಗಳಾಗಿವೆ. ತೆಳುವಾದ ತೊಗಲಿನ ಮೇಲೆ ಚಿತ್ರಿಸಿರುವ ಪಾರದರ್ಶಕ ಬಣ್ಣದ ಗೊಂಬೆಗಳು ಇಲ್ಲಿ ಪಾತ್ರಧಾರಿಗಳಾಗಿರುವುದರಿಂದ ಈನಾಟಕಕ್ಕೆ ‘ತೊಗಲುಗೊಂಬೆಯಾಟ’ ಎಂಬ ಹೆಸರು ಬಂದಿತು ಈ ಗೊಂಬೆಗಳ ಮೋಹಕ ವರ್ಣ ವಿನ್ಯಾಸಕ್ಕೆ ಪ್ರೇಕ್ಷಕರು ಮರುಳಾಗುತ್ತಾರೆ. ನಂತರದ ಸ್ಥಾನ ಸಂಗೀತಕ್ಕೆ.

ನಾಟಕದಲ್ಲಿ, ಸಂಗೀತದ ಸ್ಥಾನವೇನು? ಅದನ್ನು ಎಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳಬೇಕು? ಸಂಗೀತವಿಲ್ಲದೆ. ನಾಟಕ ಆಗಲುಸಾಧ್ಯವಿಲ್ಲವೇ? ಮುಂತಾದ ಪ್ರಶ್ನೆಗಳು ನಿನ್ನೆ ಇಂದಿನವರನ್ನು ಕಾಡಿವೆ. ಕಾಡುತ್ತಿವೆ. ಒಂದು ಕಾಲಕ್ಕೆ ಸಂಗೀತವು ಇಡೀ ನಾಟಕವನ್ನೆಲ್ಲ ವ್ಯಾಪಿಸಿ ನಿಂತು ನಾಟಕೀಯ ಪರಿಣಾಮಕ್ಕೆ ಅಡ್ಡಿಯಾಗದಾಗ ಸಂಗೀತ ಒಂದುಪೋಷಕ ಅಂಶವಾಗುವುದರ ಬದಲು ಒಂದು ಸಮಸ್ಯೆಯಾಯಿತು. ಈ ಸಮಸ್ಯೆಗೆ ಪರಿಹಾರ ಕಾಣುವ ಪ್ರಯತ್ನದಲ್ಲಿ ಕೆಲವರು ಸಂಗೀತದ ಸಂಪರ್ಕವಿಲ್ಲದೆಯೇ ನಾಟಕಗಳನ್ನು ಸಿದ್ಧಗೊಳಿಸಿ ಪ್ರಯೋಗಿಸಿದರು. ಇಂಥ ಪ್ರಯೋಗಳು ಹವ್ಯಾಸಿ ರಂಗಭೂಮಿನಿಂತ ನೀರಾದಾಗ ವೈಚಾರಿಕತೆಯ ಬಡಬಡಿಕೆಯಾದಾಗ ಅದಕ್ಕೆ ಹೊಸ ರಕ್ತ ನೀಡುವ  ಅನಿವಾರ‍್ಯತೆ ಉಂಟಾಯಿತು.  ಆಗ ಸಂಗೀತವೇ ಆ ಹೊಸ ರಕ್ತವಾಗಿ ಹವ್ಯಾಸಿ ರಂಗಭೂಮಿಯನ್ನು ಚೇತನಗೊಳಿಸಿತು. ಅಂದರೆ ನಾಟಕಕ್ಕೆ ಸಂಗೀತ ಬೇಕೇ ಬೇಕು ಎಂಬ ತತ್ವಕ್ಕೆ ಬಂದುನಿಂತಂತಾಯಿತು. ಸಂಗೀತಕ್ಕಿರುವ ಭಾವ ತೀವ್ರತೆಯ ಗುಣವನ್ನು ಅಲಕ್ಷಿಸಲಾಗದು. ಅದಿಲ್ಲದೆ ನಾಟಕ ಅಪೂರ್ಣವನಿಸುತ್ತದೆ. ತಲೆತಲಾಂತರಗಳಿಂದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುತ್ತ ಬಂದಿರುವ ಕಲಾವಿದರು ಈ ತತ್ವ-ಚರ್ಚೆಗಳ ಗೊಡವೆಗೆ ಹೋದವರಲ್ಲ. ಸಂಗೀತವನ್ನು ತಮ್ಮ ಪ್ರಯೋಗಕ್ಕೆ ಹಿತಮಿತವಾಗಿ ಜೌಚಿತ್ಯ ಪೂರ್ಣವಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ತೊಗಲುಗೊಂಬೆಯಾಟಕ್ಕೆ ಸಂಗೀತ ಅನಿವಾರ‍್ಯವಾಗಿದೆ.

ತೊಗಲುಗೊಂಬೆಯಾಟ ಪ್ರಯೋಗಿಸುವ ಜನಾಂಗದವರಿಗೆ ಕಿಳ್ಳಿಕ್ಯತರು, ಕಟಬರ, ಗೊಂಬೆರಾಮರು ಎಂದೆಲ್ಲ ಕರೆಯುತ್ತಾರೆ. ಇವರು ಮಹಾರಾಷ್ಟರ ಮೂಲದವರು. ತಲೆ ತಲಾಂತರಗಳಿಂದ ತೊಗಲುಗೊಂಬೆಯಾಡಿಸುವುದನ್ನೇ ಒಂದು ವೃತ್ತಿಯಾಗಿ ಸ್ವೀಕರಿಸಿದವರು. ಈ ಅನಕ್ಷಸ್ಥರ ಸಮುದಾಯ ಸೃಷ್ಟಿಸಿಕೊಂಡ ರಂಗಪ್ರಕಾರವುಕುತೂಹಲ ಪೂರ್ಣವಾಗಿದೆ. ಇವರುರಾಮಾಯಣದ ಕತೆಯೊಂದನ್ನೇ ಆಡುವುದು ಸಾಮಾನ್ಯ. (ಆದ್ದರಿಂದ ಇವರಿಗೆ ಗೊಂಬೆರಾಮಯರು ಎಂಬ ಹೆಸರು). ಇದನ್ನುಹಂತ ಹಂತವಾಗಿ ಮೂರು ರಾತ್ರಿಗಳಷ್ಟು ವಿಸ್ತರಿಸಿ ಪ್ರಯೋಗಿಸಬಲ್ಲರು. ಸಂಕ್ಷಿಪ್ತವಾಗಿ ಒಮದು ರಾತ್ರಿ ಮುಗಿಸಬಲ್ಲರು. ತಮ್ಮ ಈ ನೀಡಿದಾದ ಪ್ರಯೋಗವನ್ನು ವೈವಿಧ್ಯಮಯವಾದ ಹಾಡುಗಾರಿಕೆ, ರಸವತ್ತಾದ ಮಾತುಗಾರಿಕೆ ಗಳಿಂದ ಆಕರ್ಷಕವಾಗಿಡುತ್ತಾರೆ.

ನಮ್ಮ ಸಂಗೀತ ಪರಂಪರೆಯಲ್ಲಿ ಮಾರ್ಗ ಮತ್ತು ದೇಶಿ ಅಥವಾ ಶಿಷ್ಟ ಜಾನಪದ ಎಂಬ ಎರಡು ಪ್ರಭೇದಗಳಿವೆ. ಇವುಗಳ ಪರಸ್ಪರ ಕೊಡುಕೊಳಿಕೆ ನಿರಂತರವಾದುದು. ಸರಳ ಮತ್ತು ಆಕೃತ್ರಿಮ ಜಾನಪದ ಸಂಗೀತದಿಂದ ಬುದ್ಧಿಯ ಸಾಹಚರ‍್ಯ ಮತ್ತು ಶಾಸ್ತ್ರೀಯ ಚೌಕಟ್ಟುಗಳನ್ನುಳ್ಳ ಶಿಷ್ಟ ಸಂಗೀತ ಹುಟ್ಟಿ ಬೆಳೆದಿರುವುದು ಸರ್ವವೇದ್ಯ. ಹಾಗೆ ಎಷ್ಟೋ ಹಂತಗಳಲ್ಲಿ ಜಾನಪದ ಸಂಗೀತದ ಮೇಲೆ ಶಿಷ್ಟ ಸಂಗೀತ ನಿಚ್ಛಳವಾಗಿ ತನ್ನ ಪ್ರಭಾವ ಬೀರಿರುವುದನ್ನುಸ್ಪಷ್ಪವಾಗಿ ಕಾಣುತ್ತೇವೆ. ಈಹಿನ್ನೆಲೆಯಲ್ಲಿ ತೊಗಲು ಗೊಂಬೆಯಾಟದ ಸಂಗೀತದ ಸ್ವರೂಪವನ್ನು ಗುರುತಿಸಬೇಕಾಗುತ್ತದೆ.

ಒಂದು ಹಂತದಲ್ಲಿ ಅಚ್ಚ ಜಾನಪದ ಸಂಗೀತವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಗರತಿ ಹಾರು, ಹಂತಿಹಾಡು ಮುಂತಾದವು. ಇಂಥ ಹಾಡುಗಳು ಸೃಷ್ಟಿಗೊಳ್ಳುವ ಮತ್ತು ಅಭಿವ್ಯಕ್ತಿಗೊಳ್ಳುವ ಸಂದರ್ಭ ವಿಶಿಷ್ಟವಾದುದು. ಅಲ್ಲಿ ಸ್ವರಗಳ ವೈವಿದ್ಯಕ್ಕೆ ಹೆಚ್ಚಿನ ಗಮನ ನೀಡಲಾಗುವುದಿಲ್ಲ. ಸೀಮಿತ ಸ್ವರ ಸಮೂಹದ ಮೂಲಕ ಭಾವಗಳು ಸಂಗತಿಗಳು ಸರಳವಾದ ಕ್ರಮದಲ್ಲಿ ಒಡಮೂಡುತ್ತೆ. ವಸ್ತು ಮತ್ತು ಸ್ವರ ಸಮೂಹಗಳ ಬಾಂಧವ್ಯ ಪೂರಕವಾಗಿರುತ್ತದೆ. ಬಯಲಾಟ, ತತ್ವಪದ ಮುಂತಾದವುಗಳಿಗೆ ಬಂದಾಗ ಅಚ್ಚ ಜಾನಪದ ಸಂಗೀತ ಸ್ವಲ್ಪಮಟ್ಟಿಗೆ ತನ್ನ ಸ್ವರೂಪ ಬದಲಾಯಿಸಿಕೊಳ್ಳುತ್ತದೆ. ಹಾಡಿನ ವಸ್ತುವಿಗೆ ಅನುಗುಣವಾಗಿ ಸ್ವರ ಸಮೂಹದ ಸ್ವರೂಪದ ಬದಲಾಗುವುದು ಸಹಜ. ಶಿಷ್ಟದ ಛಾಯೆ ಅನಿವಾರ್ಯವಾಗಿ ಗೋಚರಿಸುತ್ತದೆ. ಸಂಸ್ಕೃತಿಯ ಅಂಶಗಳು ಯಾವಾಗಲೂ ಮೇಲಿನಿಂದ ಕೆಳಗೆ ಪ್ರವಹಿಸುತ್ತವೆ. ಶಿಷ್ಟವಲಯದ ರಂಗಭೂಮಿಯ ಕೆಲವು ಅಂಶಗಳು ಜಾನಪದ ರಂಗಭೂಮಿಯ ಮೇಲೆ ತಮ್ಮ ಗುರುತುಗಳನ್ನು ಮೂಡಿಸುವುದು ಸಹಜವಾಗಿದೆ. ವೈವಿಧ್ಯತೆಯನ್ನು ಅಪೇಕ್ಷಿಸುವಜಾನಪದ ಪ್ರತಿಭೆ ತನಗೆ ದಕ್ಕುವಷ್ಟು ಶಿಷ್ಟ ಅಂಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಅರಗಿಸಿಕೊಳ್ಳುವ ಪ್ರಕ್ರಿಯೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ತೊಗಲುಗೊಂಬೆಯಾಟದ ಸಂಗೀತ ಇದಕ್ಕೆ ಸಾಕ್ಷಿಯಾಗಿದೆ.

ತೊಗಲುಗೊಂಬೆಯಾಟದ ಸಂಗೀತ ವೈವಿಧ್ಯಮವಾಗಿದೆ. ಸಮಕಾಲಿನ ಮೇಳಗಳ ಸಂಗೀತ ಗಮನಿಸಿದರೆ ಹಲವಾರು ಸಂಶಯಗಳು ಗೊಂದಲಗಳು ಕಂಡುಬರುತ್ತವೆ. ಅಚ್ಚ ಜಾನಪದ, ಅರೆಜಾನಪದ, ಶಿಷ್ಟ-ಈ ಮೂರು ತರಹದ ಹಾಡುಗಾರಿಕೆಯನ್ನು ಇಂದಿನ ತೊಗಲುಗೊಂಬೆಯಾಟದ್ಲಲಿ ಗುರುತಿಸಬಹುದಾಗಿದೆ. ಕಿಳ್ಳಿಕ್ಯಾತರು ಪಕ್ಕಾಜಾನಪದ ಜೀವಿಗಳಾಗಿರುವುದರಿಂದ ಮೂಲತಃ ಅವರ ಈ ರಂಗ ಪ್ರಕಾರ ಅಚ್ಚ ಜಾನಪದವಾಗಿರಲೇಬೇಕು. ಕಥೆಯ ಸ್ವರೂಪಮತ್ತು ಮಾತುಗಾರಿಕೆಯಲ್ಲಿ ಈ ತಾಜಾ ಜಾನಪದತನ ಇರುವಂತೆ ಹಾಡುಗಾರಿಕೆಯಲ್ಲಿಯೂ ಇದದಿತು.ಕೆಲವು ತಂಡದವರು ಇಂದಿಗೂ ಈ ಅಚ್ಚ ಜಾನಪದ ಸಂಗೀತವನ್ನು ಉಳಿಸಿಕೊಂಡಿದ್ದಾರೆ. ತೀರಾ ಸರಳ ಮತ್ತು ನೇರವಾಗಿರುವ ಈ ಮೂಲ ಸಂಗೀತ ಶೈಲಿ ನಿರಾಭರಣ ಸುಂದರಿಯಂತೆ. ತನ್ನ ಸೀಮಿತ ಪ್ರತಿಭಾವಿನ್ಯಾಸದ ಚೌಕಟ್ಟಿನೊಳಗಡೆ ಸಾಧ್ಯವಾದಷ್ಟು ಸೊಗಸು-ವೈವಿಧ್ಯತೆಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ಈ ಸಂಗೀತಶೈಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.ಇಲ್ಲಿಯ ಹಾಡುಗಳು ರಾಗ ಬದ್ಧವಾದಂಥವುಗಳಲ್ಲ. ಅವು ಕೇವಲ ಧಾಟಿಗಳು. ಗೊಂಬೆಗಳ ಕುಣಿತಕ್ಕೆ ಚಲನೆಗೆ ಅನುಕೂಲವಾಗುವಂಥ ಈ ರಚನೆಗಳು ಮೇಲ್ನೋಟಕ್ಕೆ ಒರಟು ಅನಿಸುತ್ತವೆ. ಆದರೆ ಈ ಒರಟುತನದಲ್ಲಿ ಸರಳತೆಯಿದೆ. ಆಕೃತ್ರಿಮ ಸೊಗಸಿದೆ. ಮುಂದಿನ ಹಂತದಲ್ಲಿ ಮೂಡಲಪಾಲಯ ಬಯಲಾಟಗಳ ಪ್ರಭಾವ ತೊಗಲು ಗೊಂಬೆಯಾಟದ ಮೇಲಾದುದು ಸ್ಪಷ್ಟವಾಗಿ ಕಂಡುಬರುತ್ತದೆ. ಮೂಡಲಪಾಯ ಬಯಲಾಟ ಅತ್ಯಂತ ಶಕ್ತಿಶಾಲಿ ಹಾಗೂ ಜನಪ್ರಿಯ ರಂಗ ಪ್ರಕಾರವಾಗಿ ಪ್ರಚಾರ ಪಡೆಯಲು ಅನೇಕ ಕಾರಣಗಳಿವೆ. ಮುಖ್ಯವಾಗಿ ಅದರ ಸಂಗೀತ ಮತ್ತು ಕುಣಿತಗಳು ಹೆಚ್ಚು ಆಕರ್ಷಕ ಅನಿಸಿದವು. ತೊಗಲುಗೊಂಬೆಯಾಟ ಯಾವ ಪರಿಸರದಲ್ಲಿ ಯಾವ ಪ್ರೇಕ್ಷಕರನ್ನು ಪಡೆದುಕೊಂಡಿದೆಯೊ ಮೂಡಲಪಾಯ ಬಯಲಾಟವೂ ಅದೇ ಪರಿಸರದ ಅದೇ ಪ್ರೇಕ್ಷಕರನ್ನು ಹೊಂದಿದೆ.ಆದರೆ ಇವೆರಡರ ಪ್ರಯೋಗ ಸ್ವರೂಪದಲ್ಲಿ ವ್ಯತ್ಯಾಸವಿದೆ. ತೊಗಲುಗೊಂಬೆಯಾಟದ ಸಾಧ್ಯತೆಗಳು ತೀರಾ ಸೀಮಿತಿ. ಇದಕ್ಕೆ ಹೋಲಿಸಿದರೆ ಮೂಡಲಪಾಯ ಬಯಲಾಟದ ಸಾಧ್ಯತೆಗಳು ಹೆಚ್ಚು. ಹೀಗಾಗಿ ಮೂಡಲಪಾಯ ಬಯಲಾಟದ ಭವ್ಯ ಪ್ರದರ್ಶನದ ಮುಂದೆ ತೊಗಲುಬೊಂಬೆಯಾಟ ಕಿರಿದಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್. ಅಲ್ಲದೆ ಮೂಡಲಪಾಯ ಬಯಲಾಟಕ್ಕೆ ಅಕ್ಷರಸ್ಥಕವಿ, ಸಂಗೀತಗಾರರ ಬೆಂಬಲವಿದ್ದುದೊಂದು ಅದರ ಪ್ರಮುಖ ಹೆಚ್ಚುಗಾರಿಕೆ. ಆದ್ದರಿಂದ ತೊಗಲುಗೊಂಬೆಯಾಟದ ಮೂಡಲಪಾಯ ಬಯಲಾಟದ ಪ್ರಭಾವ ಸಹಜವಾಗಿ ಬಿದ್ದಿತು. ಈ ಪ್ರಭಾವ ಇತರ ಅಂಶಗಳಿಗಿಂತ ಸಂಗೀತಕ್ಕೆ ಹೆಚ್ಚು ಸಂಬಂಧಿಸಿದೆ. ಸಂಪೂರ್ಣ ಭಿನ್ನವಾಗಿರುವ ತೊಗಲು ಗೊಂಬೆಯಾಟ ಅಲ್ಲಿಂದ ಸಂಗೀತವನ್ನು ಮಾತ್ರ ಸ್ವೀಕರಿಸುವುದು ಸಾಧ್ಯವಿತ್ತು.

ತನ್ನ ಮೂಲ ಹಾಡುಗಾರಿಕೆ ಮೂಡಲಪಾಯ ಬಯಲಾಟದ ಹಾಡುಗಾರಿಕೆಯ ಮುಂದೆ ಒರಟಾಗಿ ಕಾಣಲಾರಂಭಿಸಿದ್ದರಿಂದ ತೊಗಲುಗೊಂಬೆಯಾಟದ ಹಾಡುಗಾರಿಕೆ ತನ್ನನ್ನು ತಾನು ಪರಿಸ್ಕಾರಗೊಳಿಸಿಕೊಂಡು ಪ್ರೇಕ್ಷಕರನ್ನು ಆಕರ್ಷಿಸಿ ಕೊಳ್ಳಬೇಕಾಯಿತು. ಶ್ರೀಮಂತ ಪರಂಪರೆಯಾಗಿ ರೂಢಿಗೊಂಡ ಮೂಡಲಪಾಯ ಬಯಲಾಟದ ಪ್ರಜ್ವಲ ಪ್ರಕಾಶದೆದುರು ತೊಗಲುಗೊಂಬೆಯಾಟದ ಮಿಣುಕು ದೀಪದ ಬೆಳಕು ಮಂಕಾಗಿ ಕಂಡದ್ದು ಸಹಜ. ಬರಬರುತ್ತ ಕಿಳ್ಳಿಕ್ಯಾತರು ಹಂತ-ಹಂತವಾಗಿ ಮೂಡಲಪಾಯ ಬಯಲಾಟದ ಧಾಟಿಗಳನ್ನು ಸ್ವೀಕರಿಸಲಾರಂಭಿಸಿದರು. ಆ ಅಚ್ಚುಕಟ್ಟಾಗಿ ಧಾಟಿಗಳನ್ನು ಅನುಕರಿಸಿದರು. ಕಿಳ್ಳಿಕ್ಯಾತರಲ್ಲಿ ಅಪರೂಪಕ್ಕೆ ಸಂಗೀತಜ್ಞಾನವಿರುವವರೂ ಇದ್ದಾರೆ. ಇವರು ತಾವು ಹಾಡುವ ಹಾಡುಗಳ ರಾಗ ತಾಳಗಳನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದಾರೆ. ಈ ಮೂಡಲಪಾಯ ಬಯಲಾಟದ ಪ್ರಭಾವ ಎಷ್ಟು ಗಾಢವಾಯಿತೆಂದರೆ ತೊಗಲು ಗೊಂಬೆಯಾಟದ ಮೊದಲಿನ ಹಾಡುಗಳ ಬದಲಾಗಿ ತಮ್ಮ ಪರಿಸರದಲ್ಲಿ ಪ್ರಚಾರದಲ್ಲಿರುವ ಮೂಡಲಪಾಯ ಬಯಲಾಟದ ಹಾಡುಗಳನ್ನು ನೇರವಾಗಿ ಸ್ವೀಕರಿಸಿದರು. ಈ ಹಾಡುಗಳ ಪ್ರಯಾಣ ಹೆಚ್ಚಾದಂತೆ ಹಿಮ್ಮೇಳನದಲ್ಲಿಯೂ ಬದಲಾವಣೆಯಾಗಬೇಕಾಯಿತು.

ಹೊಟ್ಟೆಪಾಡಿಗಾಗಿ ತಮ್ಮ ಪ್ರದರ್ಶನ ನೀಡುವ ಕಿಳ್ಳಿಕ್ಯಾತರಿಗೆ ಪ್ರೇಕ್ಷಕರನ್ನು ಮೆಚ್ಚಿಸುವುದು ಅನಿವಾರ‍್ಯ, ಪ್ರಚಲಿತವಿರುವ ನಾಟಕದ ಹಾಡುಗಳನ್ನು, ಸಿನೆಮಾ ಹಾಡುಗಳನ್ನು ತತ್ವಪ್ರದರ್ಶನಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಾರೆ. ಅಲ್ಲಲ್ಲಿ ಸಣ್ಣಾಟದ ಧಾಟಿಗಳು ನುಸುಳುವುದೂ ಉಂಟು. ಒಟ್ಟಾರೆ ಇಂದಿನ ತೊಗಲುಗೊಂಬೆಯಾಟದ ಸಂಗೀತ ಹಲವಾರು ಶೈಲಿಯ ಧಾಟಿಗಳನ್ನು ಒಳಗೊಂಡು ಸಮ್ಮಿಶ್ರ ಸಂಗೀತವಾಗಿದೆ.

ತೊಗಲುಗೊಂಬೆಯಾಟದ ಮುಖ್ಯ ಹಾಡುಗಾರನಿಗೆ ಒಂದಿಬ್ಬರು ಹಿಮ್ಮೇಳದ ವರಿರುತ್ತಾರೆ. ಮೊದಲು ಡೋಲು ಉಪಯೋಗಿಸುತ್ತಿದ್ದರು. ಅಂದಿನ ಅತ್ಯಂತ ಸರಳಧಾಟಿಗಳಿಗೆ ಇದು ಸೂಕ್ತವಾದ ಪಕ್ಕವಾದ್ಯವಾಗಿತ್ತು. ಮೂಡಲಪಾಯ ಬಯಲಾಟದ ಹಾಡುಗಳ ದಾಳಿ ಆರಂಭವಾದ ಮೇಲೆ ಡೋಲು ಮರೆಯಾಗಿ ಮದ್ದಳೆ ರೂಢಿಗೆ ಬದಿತು. ‘ಪಾವರಿ’ ಕಿಳ್ಳಿಕ್ಯಾತರ ಒಂದು ವಿಶಿಷ್ಟ ಶ್ರುತಿವಾದ್ಯ. ಇಂದು ಇದು ಕಣ್ಮರೆಯಾಗುತ್ತಿದೆ. ಇದರ ಸ್ಥಾನವನ್ನು ಹಾರ‍್ಮೋನಿಯಂ ಆಕ್ರಮಿಸುತ್ತಿದೆ. ತಾಳಗಳು ಮೊದಲಿನಿಂದಲೂ ಇವೆ. ಇದಿಷ್ಟು ತೊಗಲುಗೊಂಬೆಯಾಟದ ವಾದ್ಯಪರಿಕರ.

* * *