ಉಳುತ್ತಿರುವ ರೈತ

ಆಧುನಿಕ ಚಲನಚಿತ್ರಕ್ಕೆ ಪ್ರೇರಣೆ ನೀಡಿರಬಹುದಾದ ತೊಗಲುಗೊಂಬೆಯಾಟಕ್ಕೆ ಒಂದು ಪ್ರಾಚೀನ ಪರಂಪರೆ ಇದೆ. ಭಾರತದಲ್ಲಿ ಹುಟ್ಟಿ ಇತರೆಡೆ ಹಬ್ಬಿರುವ ಈ ಕಲೆಗೆ ರಾಮಾಯಣ, ಮಹಾಭಾರತ, ಪುರಾಣಗಳೇ ಮೂಲ ಕಥಾ ವಸ್ತುಗಳಾಗಿವೆ. ಆಗ್ನೇಯೇಷ್ಯಾ, ಚೀನಾಗಳ ಮೂಲಕ ಟರ್ಕಿ, ಗ್ರೀಸ್ ಗಳಿಗೆ ಹೋದ ಈ ಕಲೆ ಕ್ರಮೇಣ ಹೊಸರೂಪವನ್ನು ಪಡೆದಿದೆ. ವಿದೇಶಗಳಲ್ಲಿ ತೊಗಲುಗೊಂಬೆಯಾಟದ ವೃತ್ತಿಪರ ಕಂಪನಿಗಳಿವೆ ಮತ್ತು ಅವು ಅತ್ಯಂತ ಜನಪ್ರಿಯತೆ ಗಳಿಸಿವೆ.

ಇಂಡೋನೇಷ್ಯಾದಲ್ಲಿ ಈ ಪರಂಪರೆ ಜೀವಂತವಾಗಿದ್ದು, ಸಾಂಸ್ಕೃತಿಕವಾಗಿ ಆ ದೇಶದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಓರಿಸ್ಸಾ, ಮಹಾರಾಷ್ಟ್ರ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಪ್ರಚಲಿತವಿರುವ ಈ ಕಲೆ ಪ್ರಾದೇಶಿಕವಾದ ಭಿನ್ನತೆಗಳೊಂದಿಗೆ ಭಿನ್ನ ಹೆಸರುಗಳನ್ನು ಹೊಂದಿದೆ. ತೊಗಲುಗೊಂಬೆಯಾಟ (ಕರ್ನಾಟಕ), ತೋಲುಬೊಮ್ಮಲಾಟ (ಆಂಧ್ರ), ತೋಲ ಪಾವೈಕೊತ್ತು (ತಮಿಳುನಾಡು), ತೋಲು ಪಾವಕೋಟ್ಟು (ಕೇರಳ), ರಾವಣಛಾಯಾ (ಒರಿಸ್ಸಾ) ಇತ್ಯಾದಿ. ಕರ್ನಾಟಕದಲ್ಲಿ ಈ ತೊಗಲುಗೊಂಬೆಯಾಟವು ಮಲೆನಾಡು ಮತ್ತು ಕರಾವಳಿಯನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಹವಾಮಾನದಲ್ಲಿ ಆದ್ರ್ರತೆ ಹೆಚ್ಚಿದ್ದರೆ ಚರ್ಮದ ಗೊಂಬೆಗಳು ಬೇಗನೆ ಕೆಡುವ ಸಾಧ್ಯತೆ ಇರುವುದರಿಂದ ಮಳೆ ಹೆಚ್ಚು ಬೀಳುವ ಪ್ರದೇಶದಲ್ಲಿ ತೊಗಲುಗೊಂಬೆಗಳ ಬಳಕೆ ಇರಲಿಕ್ಕಿಲ್ಲ.

ತೊಗಲುಗೊಂಬೆ ಆಡಿಸುವವರನ್ನು ‘ಕಿಳ್ಳೇಕೇತ’ರೆಂದು ಕರೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಇವರಿಗೆ ‘ಕಿಳ್ಳೇಕ್ಯಾತರು’ ಅಥವಾ ‘ಗೊಂಬೆರಾಮರು’ ಎಂಬ ಹೆಸರಿದೆ. ಉತ್ತರ ಕರ್ನಾಟಕದಲ್ಲಿ ‘ಕಿಳ್ಳೀಕ್ಯಾತ’ ಎಂಬ ಹೆಸರೇ ಹೆಚ್ಚು ಪ್ರಚಲಿತದಲ್ಲಿದ್ದರೆ, ಬಳ್ಳಾರಿಯ ಕಡೆ ತೆಲುಗಿನ ಪ್ರಭಾವದಿಂದ ‘ಬೊಮ್ಮಲಾಟವಾರು’ ಎಂಬ ಹೆಸರು ರೂಢಿಗೆ ಬಂದಿದೆ.

ತೊಗಲುಗೊಂಬೆ ಆಟಗಾರರಿಗೆ ‘ಗೊಂಬೆರಾಮರು’ ಎಂಬ ಹೆಸರು ಬಂದಿರುವುದಕ್ಕೆ ಒಂದು ಐತಿಹ್ಯ ಹೇಳುತ್ತಾರೆ. ಶ್ರೀರಾಮ ಸಾಯುವ ಮುನ್ನ ತನ್ನ ಪ್ರೀತಿಯ ಭಕ್ತರಿಗೆ ಒಂದು ಚಿತ್ರಪಟ ಕೊಟ್ಟು ಇದರಿಂದ ಜೀವಿಸಿರೆಂದು ಹೇಳಿದನಂತೆ. ಅಂದಿನಿಂದ ಗುಹನ ವಂಶಕ್ಕೆ ಸೇರಿದ ಆ ಭಕ್ತರು ‘ಗೊಂಬೆರಾಮ’ ಆಟ ನಡೆಸುತ್ತ ಬಂದರಂತೆ. ಗೊಂಬೆರಾಮರು, ಈಗಲೂ ತಮ್ಮ ಮೊದಲ ಮಗನಿಗೆ ‘ರಾಮ’ನೆಂಬ ಹೆಸರನ್ನು ಇಡುತ್ತಿದ್ದಾರೆ. ಶ್ರೀರಾಮ ಸತ್ತರೂ ಚಿತ್ರಪಟದ ಮೂಲಕ ತಮ್ಮೊಂದಿಗೆ ಜೀವಂತವಾಗಿದ್ದಾನೆಂದು ಅವರು ನಂಬುತ್ತಾರೆ.

ಹತ್ತು ತಲೆಯ ರಾವಣ

‘ಕಿಳ್ಳೇಕೇತ’ ಎಂಬುದು ತೊಗಲುಗೊಂಬೆ ಆಟದಲ್ಲಿನ ಹಾಸ್ಯ ಪಾತ್ರದ ಹೆಸರು. ಯಕ್ಷಗಾನ ಬಯಲಾಟಗಳಲ್ಲಿ ಕೋಡಂಗಿ- ಹನುಮನಾಯಕರುಗಳು ಇದ್ದ ಹಾಗೆ, ತೊಗಲುಗೊಂಬೆ ಆಟದಲ್ಲಿ ಕಿಳ್ಳೇಕೇತ ತನ್ನ ಹೆಂಡತಿ ಬಂಗಾರಕ್ಕನೊಂದಿಗೆ ನಾನಾ ಬಗೆಯ ಹಾಸ್ಯಗಳನ್ನು ಮಾಡುತ್ತಿರುತ್ತಾನೆ. ಜನರನ್ನು ರಂಜಿಸುತ್ತಾನೆ. ಅವನ ಪಾತ್ರದ ಜನಪ್ರಿಯತೆಯಿಂದಾಗಿ ತೊಗಲುಗೊಂಬೆ ಆಡಿಸುವ ವೃತ್ತಿಯವರನ್ನೇ ‘ಕಿಳ್ಳೇಕೇತರು’ ಎಂದು ಕರೆಯುವುದು ರೂಢಿಗೆ ಬಂದಿರಬೇಕು. ಅದೇ ಕೆಲವೆಡೆ ‘ಕಿಳ್ಳೇಕ್ಯಾತ’ ಎಂದೂ ಉಚ್ಚಾರಗೊಂಡಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶಗಳಿಗೆ ಈ ಕಲೆ ಮಹಾರಾಷ್ಟ್ರದಿಂದ ಬಂದಿರಬೇಕು. ಕಾರಣ, ‘ಕಿಳ್ಳೇಕೇತರ’ ಮನೆಮಾತು ಮರಾಠಿ ಮಿಶ್ರಿತ ‘ಅರೆಮರಾಠಿ’ ಭಾಷೆ. ಇವರು ಮಹಾರಾಷ್ಟ್ರಕ್ಕೆ ಮಧ್ಯಭಾರತದಿಂದ ಬಂದಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಮಹಾರಾಷ್ಟ್ರದ ವಲಸೆ ಕುರಿತು ಒಂದು ಐತಿಹ್ಯವಿದೆ. ಕಾಳಾಚಾರಿ ಎಂಬ ಅಕ್ಕಸಾಲಿಗನು ರೈತಕುಟುಂಬದ ಹೆಣ್ಣಿನೊಂದಿಗೆ ಗುಪ್ತಸಂಬಂಧ ಇಟ್ಟುಕೊಂಡಿದ್ದನಂತೆ. ಅವನಿಂದ ಅವಳು ಒಟ್ಟೂ ಏಳು ಮಕ್ಕಳನ್ನು ಪಡೆದಳಂತೆ. ಕೊನೆಗೊಮ್ಮೆ ರಹಸ್ಯ ಬಯಲಾದಾಗ ಅವಳನ್ನು, ಮಕ್ಕಳ ಸಮೇತ ಮನೆಯಿಂದ ಹೊರಹಾಕಿದರಂತೆ. ಕಾಳಾಚಾರಿ ಮಕ್ಕಳಿಗೆ ಗೊಂಬೆ ಕಲೆಯನ್ನು ಕಲಿಸಿ, ಜೀವನ ನಡೆಸಲು ದಾರಿ ಮಾಡಿಕೊಟ್ಟನಂತೆ. ಅವರಲ್ಲಿ ಕೆಲವರು ಮುಂದೆ ಮಹಾರಾಷ್ಟ್ರ ಬಿಟ್ಟು ಕರ್ನಾಟಕ, ಆಂಧ್ರಗಳ ಕಡೆ ಬಂದರು ಎನ್ನಲಾಗಿದೆ. ಕಿಳ್ಳೇಕೇತ ಸಮುದಾಯ ಮೊದಲಿನಿಂದಲೂ ಬಹಳ ನಿಷ್ಠಾವಂತರೂ, ಬುದ್ಧಿವಂತರೂ ಆಗಿದ್ದಿರಬೇಕು. ಶಿವಾಜಿಯು ಕಿಳ್ಳೆಕೇತರನ್ನು ಗುಪ್ತಚಾರರನ್ನಾಗಿ ನೇಮಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಜೊತೆಗೆ, 12ನೆಯ ಶತಮಾನದಲ್ಲಿಯೂ ಸಿಲೋನಿನ ರಾಜ ಗಜಬಾಹು ತಮಿಳು ತೊಗಲುಗೊಂಬೆ ಆಟಗಾರರನ್ನು ಗೂಢಚಾರನ್ನಾಗಿ ನೇಮಿಸಿಕೊಂಡಿದ್ದ ಎಂಬ ಹೇಳಿಕೆಯೂ ಇದೆ.

ತೊಗಲುಗೊಂಬೆ ನೆರಳು- ಬೆಳಕಿನ ಸಂಯೋಜನೆಯಿಂದ ನಡೆಸುವ ಒಂದು ಅದ್ಭುತ ಆಟ. ನೆರಳಿನಲ್ಲಿಯೇ ರಂಗುರಂಗಾದ ಕಲೆ ಅರಳುತ್ತ ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಕೊಂಡೊಯ್ಯುತ್ತದೆ. ಈ ಕಲ್ಪನೆಯೇ ರೋಮಾಂಚನಕಾರಿ. ತೊಗಲುಗೊಂಬೆ ಆಟ ಆಡಿಸಿದರೆ ಮಳೆ ಬರುತ್ತದೆ; ದನಕರುಗಳಿಗೆ ಬರುವ ರೋಗ ನಿವಾರಣೆಯಾಗುತ್ತದೆ. ಊರಿಗೆ ಕೇಡು ಬರುವುದಿಲ್ಲ ಎಂಬ ನಂಬಿಕೆಗಳಿವೆ. ಕೆಲವರು ಪುತ್ರ ಸಂತಾನಾಪೇಕ್ಷೆಯಿಂದ, ಒಳ್ಳೆಯ ಬೆಳೆ ಪ್ರಾಪ್ತಿಗಾಗಿ ತೊಗಲುಗೊಂಬೆ ಆಡಿಸಿದರೆ, ಮತ್ತೆ ಕೆಲವರು ಮದುವೆ ಮತ್ತಿತರ ಧಾರ್ಮಿಕ ಸಂದರ್ಭಗಳಲ್ಲಿ, ಹಬ್ಬ- ಹರಿದಿನಗಳಲ್ಲಿ, ಸುಗ್ಗಿ ಮುಗಿದ ಮೇಲೆ ಮನರಂಜನೆಗಾಗಿ ಗೊಂಬೆಯಾಟ ಆಡಿಸುತ್ತಾರೆ. ಸಾಮಾನ್ಯವಾಗಿ ಜಾತ್ರೆ- ಉತ್ಸವಗಳ ಸಂದರ್ಭದಲ್ಲಿಯೇ ಆಟ ಏರ್ಪಡಿಸುತ್ತಾರೆ. ಕಾರ್ತಿಕೋತ್ಸವದ ಮುಕ್ತಾಯದ ದಿನ ತೊಗಲುಗೊಂಬೆಯನ್ನು ಆಡಿಸಬೇಕೆಂಬ ಕಟ್ಟಳೆ ಹಿಂದೆ ಇರುತ್ತಿದ್ದುದನ್ನು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ.

ಪಂಚನಾರೀ ಅಶ್ವ

ಹಿಂದೆ ಸಮಾಜದಲ್ಲಿ ಕಿಳ್ಳೇಕೇತರಿಗೆ ಒಳ್ಳೆಯ ಸ್ಥಾನ- ಮಾನಗಳಿದ್ದ ಹಾಗೆ ತಿಳಿದುಬರುತ್ತದೆ. ಗೊಂಬೆಯಾಟದವರನ್ನು ಸಾಕ್ಷಾತ್ ದೇವರ ಪ್ರತಿನಿಧಿಗಳು ಎಂದು ಭಾವಿಸುತ್ತಿದ್ದುದುಂಟು. ಚರ್ಮದ ಕೆಲಸ ಮಾಡುವ ಇತರರಿಗೆ ಗುಡಿಗಳಲ್ಲಿ ಪ್ರವೇಶ ನಿಷೇಧವಿದ್ದ ಕಾಲದಲ್ಲಿ ಕಿಳ್ಳೇಕೇತರಿಗೆ ಗುಡಿ ಪ್ರವೇಶಕ್ಕೆ ಅವಕಾಶವಿತ್ತು. ಕಿಳ್ಳೇಕೇತರಲ್ಲಿ ಹೆಚ್ಚಿನವರು ಅಲೆಮಾರಿಗಳು. ಹಲವು ಕುಟುಂಬಗಳು ಹಳ್ಳಿಯಲ್ಲಿ ನೆಲೆಸಿದ್ದು, ಕೃಷಿ, ಕೂಲಿ ಮಾಡುತ್ತಾರೆ. ಕೆಲವು ಮನೆತನದವರಿಗೆ ಪ್ರತಿ ವರ್ಷ ಗೊಂಬೆಯಾಟ ಆಡಿಸಲು ಕೊಟ್ಟ ಇನಾಮು ಹೊಲಗಳಿವೆ. ಹಳ್ಳಿಗಳಲ್ಲಿ ಕಿಳ್ಳೇಕೇತರು ಆಡಳಿತದ ಹುದ್ದೆಯನ್ನೂ ಪಡೆದಿರುವುದುಂಟು.

ಯಕ್ಷಗಾನ ಬಯಲಾಟ, ಸೂತ್ರದ ಗೊಂಬೆಯಾಟ ಮುಂತಾದ ಪ್ರದರ್ಶನ ಕಲೆಗಳಲ್ಲಿ ಅವಕ್ಕೆ ಸಂಗೀತ, ವಾದ್ಯ, ಕುಣಿತ, ಸಂಭಾಷಣೆ, ಬಣ್ಣಗಾರಿಕೆ ಮುಂತಾದವುಗಳ ನಿರ್ವಹಣೆಗೆ ಬೇರೆ ಕಲಾವಿದರು ಬಂದು ಸಹಕರಿಸುತ್ತಾರೆ. ಹೀಗೆ ಅನೇಕರ ಸಹಕಾರದೊಂದಿಗೆ ಒಂದು ಸಮಷ್ಟಿಕಲೆ ಪ್ರದರ್ಶನಗೊಳ್ಳಬೇಕಾಗುತ್ತದೆ. ಆದರೆ ತೊಗಲು ಗೊಂಬೆಯಾಟ ಅಂತಹ ಕಲೆಯಲ್ಲ. ಇದು ಕುಟುಂಬದ ಕಲೆ. ಒಂದು ಕುಟುಂಬದ ಸದಸ್ಯರು ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಈ ಕಲೆಯ ಪ್ರದರ್ಶನದಲ್ಲಿ ಭಾಗಿಗಳಾಗುತ್ತಾರೆ. ಹಸಿತೊಗಲು ಸಂಪಾದಿಸಿಕೊಳ್ಳುವುದು, ಅದನ್ನು ತಿಕ್ಕಿ ಹದಮಾಡಿ, ಪಾರದರ್ಶಕಗೊಳಿಸಿಕೊಳ್ಳುವುದು, ಚಿತ್ರರಚನೆ, ಪ್ರದರ್ಶನಕ್ಕೆ ಗೊಂಬೆ ಅಣಿಗೊಳಿಸುವುದು ಮತ್ತು ಪ್ರದರ್ಶನ ಸಂದರ್ಭದಲ್ಲಿ ಹಾಡುವುದು, ವಾದ್ಯ ನುಡಿಸುವುದು, ತಾವೂ ಕುಣಿಯುತ್ತ ಗೊಂಬೆಗಳನ್ನು ಕುಣಿಸುವುದು, ಆಶು ಸಂಭಾಷಣೆ ನಡೆಸುವುದು. ಇವೆಲ್ಲವನ್ನು ಸಾಮಾನ್ಯವಾಗಿ ಒಂದೇ ಕುಟುಂಬದವರು ಮಾಡುತ್ತಾರೆ.

ರಾಮಾಯಣ, ಮಹಾಭಾರತ, ಪುರಾಣಗಳ ಕಥಾನಕಗಳೊಂದಿಗೆ ಜನಪದ ಕಥೆಗಳನ್ನು ತೊಗಲುಗೊಂಬೆಯಾಟದಲ್ಲಿ ಬಳಸಿಕೊಳ್ಳುತ್ತಾರೆ. ಜನ ಸಾಮಾನ್ಯರಿಗೆ ಜೀವನ ಮೌಲ್ಯಗಳನ್ನು ಸಾಂಪ್ರದಾಯಿಕ ಕಲೆಯೊಂದರ ಮೂಲಕ ತಲುಪಿಸುವ ಕೆಲಸ ಇದಾಗಿದೆ. ಕಿಳ್ಳೇಕೇತರು ಹಾಡುವ ಹಾಡುಗಳು ಸಾಮಾನ್ಯವಾಗಿ ಬಯಲಾಟಗಳ ಮಟ್ಟುಗಳಲ್ಲಿಯೇ ಇರುತ್ತವೆ. ಆರಂಭದಲ್ಲಿ ಅವುಗಳ ಹಾಡುಗಳು ಬೇರೆ ರೀತಿ ಇದ್ದುದಾಗಿ ವಿದ್ವಾಂಸರು ಊಹಿಸಿದ್ದಾರೆ. ಈಗ ಬಯಲಾಟದ ಪಠ್ಯದ ಪದಗಳೊಂದಿಗೆ ಕೆಲವೊಮ್ಮೆ ಮರಾಠಿ ಇಲ್ಲವೆ ತೆಲುಗು ಭಾಷೆಯ ಹಾಡುಗಳನ್ನು ಮಧ್ಯೆ- ಮಧ್ಯೆ ಸೇರಿಸಿಕೊಳ್ಳುತ್ತಾರೆ. ಆದರೆ ಸಂಭಾಷಣೆಗಳು ಆಯಾ ಸಂದರ್ಭದಲ್ಲಿಯೇ ಹುಟ್ಟಿಕೊಳ್ಳುತ್ತವೆ. ಈ ಆಶುಸಂಭಾಷಣೆಗಳು ಕನ್ನಡದಲ್ಲಿಯೇ ಇರುತ್ತವೆ. ಗಡಿಭಾಗದಲ್ಲಿ ಇತರ ಭಾಷೆಯ ಶಬ್ದಗಳೂ ಸಂಭಾಷಣೆಯಲ್ಲಿ ನುಸುಳುತ್ತವೆ.

ಜನರಂಜನೆಗಾಗಿ ಹಾಸ್ಯವನ್ನು ಹೆಚ್ಚು ಬಳಸಲಾಗುತ್ತದೆ. ಇದಕ್ಕಾಗಿ ಕಿಳ್ಳೇಕ್ಯಾತ ಮತ್ತು ಬಂಗಾರಕ್ಕ ಎಂಬ ಗಂಡು- ಹೆಣ್ಣು ಪಾತ್ರಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಕಪ್ಪು ಅಥವಾ ಕೆಂಪು ಬಣ್ಣದ, ಡೊಳ್ಳು ಹೊಟ್ಟೆಯ, ಬೋಳುತಲೆಯ, ಪುಳ್ಳಜುಟ್ಟಿನ, ದಪ್ಪ ತುಟಿಯ ವಕ್ರ ವ್ಯಕ್ತಿಯಾಗಿ ಕಿಳ್ಳೇಕ್ಯಾತ ರಂಗದ ಮೇಲೆ ತನ್ನ ಹೆಂಡತಿಯೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಾನೆ. ಇವರಿಬ್ಬರೂ ಗೊಂಬೆಯಾಟದಲ್ಲಿ ಜನಪ್ರಿಯ ಜೋಡಿಗಳು. ಹಾಸ್ಯಭರಿತ ಸಂಭಾಷಣೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ.

ತೊಗಲುಗೊಂಬೆಗಳನ್ನು ಜಿಂಕೆ, ಆಡು, ಕತ್ತೆ, ಎಮ್ಮೆ ಮುಂತಾದವುಗಳ ಚರ್ಮದಿಂದ ತಯಾರಿಸುತ್ತಾರೆ.. ಜಿಂಕೆಯ ಚರ್ಮ ನಯ ಮತ್ತು ಸೂಕ್ಷ್ಮವಾಗಿದ್ದು, ಹೆಚ್ಚು ಪಾರದರ್ಶಕತೆಯಿಂದ ಕೂಡಿರುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ದೇವತಾ ಪಾತ್ರಗಳ ಗೊಂಬೆಗಳನ್ನು ಜಿಂಕೆಯ ಚರ್ಮದಿಂದಲೇ ನಿರ್ಮಿಸಬೇಕೆಂಬ ನಿಯಮವಿದೆ. ತೊಗಲುಗೊಂಬೆ ಮಾಡಿಸಿಕೊಟ್ಟರೆ ವಂಶಕ್ಕೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಹಿರಿಯರ ಹೆಸರಿನಲ್ಲಿ ಜಿಂಕೆಯ ಚರ್ಮದಿಂದ ರಾಮ, ಕೃಷ್ಣ, ಸೀತೆ ಮುಂತಾದ ದೇವತಾ ಪಾತ್ರಗಳ ಗೊಂಬೆಯನ್ನು ಹಳ್ಳಿಗಳಲ್ಲಿ ಮಾಡಿಸಿಕೊಡುತ್ತಿದ್ದರು. ಆಂಧ್ರ ಮತ್ತು ಗಡಿನಾಡಿನ ಗೊಂಬೆಗಳು ಆರು ಅಡಿ ಎತ್ತರವಾಗಿರುವುದರಿಂದ ಅವಕ್ಕೆ ಎಮ್ಮೆಯ ಚರ್ಮವೇ ಬೇಕಾಗುತ್ತದೆ.

ಕೌಸಲ್ಯೆ ತೊಟ್ಟಿಲಲ್ಲಿ ರಾಮ

ಕಿಳ್ಳೇಕೇತರಿಗೆ ತೊಗಲುಗೊಂಬೆ ರಚಿಸುವ ಕಲೆ ಕರಗತವಾಗಿರುತ್ತದೆ. ಮೊದಲು ಚರ್ಮವನ್ನು ಬಿಸಿನೀರಿನಲ್ಲಿ ಅದ್ದಿ ಬ್ರಷ್ ಅಥವಾ ಚಾಕುವಿನಿಂದ ಕೆರೆಸಿ, ನಯಗೊಳಿಸುತ್ತಾರೆ. ಆಮೇಲೆ ಕಲ್ಲಿನ ಮೇಲೆ ಒಣಗಿಸಿ, ಉಳಿದ ಕೂದಲುಗಳನ್ನು ಕೀಳುತ್ತಾರೆ. ನಂತರ ಒಳಭಾಗದಲ್ಲಿ ಮಾಂಸವಿದ್ದರೆ ಅದನ್ನು ತಣ್ಣೀರಿನಿಂದ ತೊಳೆದು ಶುದ್ಧಗೊಳಿಸುತ್ತಾರೆ. ಚರ್ಮವನ್ನು ಹದಗೊಳಿಸುವಲ್ಲಿ ಇನ್ನೊಂದು ಪದ್ಧತಿಯೂ ಇದೆ.

ಚರ್ಮದ ಮೇಲೆ ಬಿಸಿನೀರು ಚಿಮುಕಿಸಿ, ಅದನ್ನು ಸುತ್ತಿ ಭಾರವಾದ ವಸ್ತುವಿನ ಕೆಳಗೆ ಇಡುತ್ತಾರೆ. ಮೂರು ದಿನಗಳ ನಂತರ ತೆಗೆದರೆ ಅದರಲ್ಲಿರುವ ರೋಮಗಳೆಲ್ಲ ಉದುರಿರುವುದು ಕಂಡುಬರುತ್ತದೆ. ಹೀಗೆ ನಯಗೊಳಿಸಿದ ಚರ್ಮವನ್ನು ನೆರಳಿನಲ್ಲಿ ಒಣಗಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸಿದರೆ, ಚರ್ಮ ಸುಕ್ಕುಗಟ್ಟುತ್ತದೆ. ತೆಳ್ಳಗೆ ಪಾರದರ್ಶಕದಂತೆ ಆದ ಚರ್ಮದ ಮೇಲೆ ಚೂಪಾದ ಲೋಹದ ವಸ್ತುವಿನಿಂದ ಚಿತ್ರಗಳನ್ನು ಚಿತ್ರಿಸುತ್ತಾರೆ.

ಗೊಂಬೆಗಳ ಚಿತ್ರ ರಚನೆಯಲ್ಲಿ ಕಲಾವಿದರ ಸೃಜನಶೀಲತೆ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಪಾತ್ರಗಳ ಮುಖ ಒಂದು ಬದಿಗಿರುವಂತೆ ಚಿತ್ರಗಳ ರಚನೆ ಇರುತ್ತದೆ. ಇದು ಪಾತ್ರಗಳನ್ನು ಕುಣಿಸುವದಕ್ಕೆ ಮತ್ತು ಸಂವಾದಕ್ಕೆ ಅನುಕೂಲವಾಗುತ್ತದೆ. ತೊಗಲುಗೊಂಬೆ ಚಿತ್ರಗಳ ಇನ್ನೊಂದು ವೈಶಿಷ್ಟ್ಯವೆಂದರೆ, ಮುಖದ ಒಂದೇ ಬದಿಗೆ ಎರಡು ಗೋಲಿ ಕಣ್ಣುಗಳನ್ನು ಬಿಡಿಸಿರುವುದು. ಲೇಪಾಕ್ಷಿ ಅಥವಾ ವಿಜಯನಗರ ಚಿತ್ರಶೈಲಿ ಪ್ರಭಾವ ಇಂಥ ರಚನೆಗಳ ಹಿಂದೆ ಇದ್ದಿರಬಹುದಾದರೂ ಚಿತ್ರಗಳನ್ನು ಪರದೆಯ ಮೇಲೆ ಕುಣಿಸುವಾಗ ಗೊಂಬೆಗಳ ಪಾದರಸದಂಥ ಚಲನೆಗೆ ಪೂರಕವಾಗಿ ನಡೆಯುವ ಸಂಭಾಷಣೆಗೆ, ಭಾವ ಪುಷ್ಟಿಯನ್ನು ತುಂಬಿ ಪಾತ್ರಗಳನ್ನು ಜೀವಂತಗೊಳಿಸುವ ಕಾರ್ಯ ಆ ಭ್ರಾಮಕ ಜಗತ್ತಿನಲ್ಲಿ ನಡೆಯುತ್ತದೆ. ಪಾತ್ರಕ್ಕೆ ತಕ್ಕ ಬಣ್ಣಗಾರಿಕೆ ಹಾಗೂ ವೇಷಭೂಷಣಗಳನ್ನು ರಚಿಸುವಲ್ಲಿ ಕಲಾವಿದರ ಹೆಚ್ಚುಗಾರಿಕೆ ಪ್ರದರ್ಶಿತವಾಗುತ್ತದೆ.

ಕುದುರೆ

ಸ್ತ್ರೀಪಾತ್ರದ ಗೊಂಬೆಗಳಿಗೆ ಉದ್ದನೆಯ ಮೂಗು, ಅಗಲ ಕಣ್ಣು, ಬೈತಲೆ ತೆಗೆದು ಕಟ್ಟಿದ ತುರುಬು ಇರುತ್ತದೆ. ತುರುಬಿಗೆ ಸುತ್ತ ಹೂ ಮುಡಿಸಿರುತ್ತಾರೆ. ಬೈತಲೆ ಬಟ್ಟು, ಮೂಗುತಿ ಹಾಗೂ ಬುಲಾಕು, ಕೈಬಳೆ, ಕುತ್ತಿಗೆಯ ತುಂಬ ಆಭರಣಗಳನ್ನು ಚರ್ಮದಲ್ಲಿ ರಂಧ್ರ ಕೊರೆದು ಚಿತ್ರಿಸುತ್ತಾರೆ. ಪ್ರದರ್ಶನ ಸಂದರ್ಭದಲ್ಲಿ ದೀಪದ ಬೆಳಕು ಆ ರಂಧ್ರಗಳಿಂದ ಹಾದು, ಆಭರಣಗಳಿಗೆ ವಜ್ರಕಾಂತಿಯನ್ನು ನೀಡಿ, ತೊಗಲುಗೊಂಬೆಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ. ಚೌಕಳಿ ಸೀರೆ ಸಾಮಾನ್ಯವಾದುದು. ರಾಮ, ವಿಷ್ಣು, ಕೃಷ್ಣ ಮುಂತಾದ ದೇವತಾ ಪಾತ್ರಗಳಿಗೆ ನೀಲಿ, ನಸುಗೆಂಪು, ಹಳದಿ ಬಣ್ಣಗಳನ್ನು, ರಾವಣ, ದುರ್ಯೋಧನ, ಭೀಮ, ಹಿಡಿಂಬೆ, ಶೂರ್ಪನಖಿ ಮುಂತಾದ ದುಷ್ಟ ಹಾಗೂ ರಾಕ್ಷಸ ಪಾತ್ರಗಳಿಗೆ ಸಿಂಧೂರ, ಕಡುಗೆಂಪು, ಕಪ್ಪು, ಹಳದಿ ಬಣ್ಣಗಳನ್ನೂ ಬಳಸುತ್ತಾರೆ. ಸಾಮಾನ್ಯ ಪಾತ್ರಗಳ ಮೈಬಣ್ಣ ತೊಗಲಿನ ಬಣ್ಣವೇ ಆಗಿರುತ್ತದೆ. ಸಾಮಾನ್ಯವಾಗಿ ಕೈಬೆರಳಿನಲ್ಲಿಯೇ ಬಣ್ಣ ಹಚ್ಚುವುದುಂಟು. ಜೊತೆಗೆ ಇಣಚಿಕೂದಲು, ಕರುವಿನ ಕಿವಿಯ ಕೂದುಲುಗಳ ಕುಂಚವನ್ನೂ ಬಳಸಲಾಗುತ್ತದೆ. ತೊಗಲುಗೊಂಬೆಗಳ ಆಕರ್ಷಣೆಗೆ ಕಲಾವಿದರ ಕುಸುರಿಗೆಲಸ ಹಾಗೂ ಬಣ್ಣಗಾರಿಕೆಗಳೇ ಮುಖ್ಯಕಾರಣವಾಗುತ್ತವೆ.

ಸಾಮಾನ್ಯವಾಗಿ ಒಂದು ತೊಗಲಿನಿಂದ ಕಲಾವಿದರು ಒಂದೇ ಪಾತ್ರವನ್ನು ರಚಿಸುತ್ತಾರೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು, ಅಂದರೆ; ಸುಮಾರು 10-12 ಪಾತ್ರಗಳವರೆಗೂ ಸಂಯೋಜನೆಯನ್ನು ಒಂದೇ ಚರ್ಮದ ಮೇಲೆ ಮಾಡಿರಬಹುದು. ಇದಕ್ಕೆ ವಿಶೇಷವಾದ ಸಾಮರ್ಥ್ಯ ಬೇಕು. ಇಂಥ ಸಂಕೀರ್ಣ ರಚನೆಯ ಗೊಂಬೆಗಳು ಕಲಾವಿದರ ಪ್ರೌಢಿಮೆಗೆ ನಿದರ್ಶನವಾಗುತ್ತವೆ. ಕೋಟೆ- ಕಾಳಗದ ವರ್ಣನೆ, ಗೋಪಿಕಾಸ್ತ್ರೀಯರ ಜಲಕ್ರೀಡೆ, ಸ್ತ್ರೀಯರು ಮೊಸರು ಕಡೆಯುವ ಚಿತ್ರ, ರೈತ ಎತ್ತುಗಳ ಸಹಾಯದಿಂದ ಭೂಮಿ ಉಳುವ ಚಿತ್ರ, ಕಪಿ ಸೈನ್ಯ, ಕಪಿಗಳು ತಮ್ಮ ಬಾಲಗಳನ್ನೇ ಪಲ್ಲಕ್ಕಿ ಮಾಡಿ ಸೀತೆಯನ್ನು ಕರೆ ತರುತ್ತಿರುವ ಚಿತ್ರ ಇತ್ಯಾದಿ ನೂರಾರು ಉದಾಹರಣೆ ಕೊಡಬಹುದು.

ಇದೊಂದು ಬಗೆಯ ರಚನೆಯಾದರೆ ಗೊಂಬೆಗಳ ಕೈ, ಕಾಲು, ಕತ್ತು, ಸೊಂಟ, ತೊಡೆಯ ಕೀಲು, ಮಂಡಿ ಇವುಗಳನ್ನು ಪ್ರತ್ಯೇಕ ರಚಿಸಿ, ದಾರದ ಸಹಾಯದಿಂದ ಅವುಗಳನ್ನು ಜೋಡಿಸುವುದು ಮತ್ತೊಂದು ಬಗೆಯ ರಚನೆ. ಈ ಎರಡನೆಯ ಬಗೆ ಪ್ರಾಯಶಃ ಸೂತ್ರದ ಗೊಂಬೆಯ ಪ್ರಭಾವದಿಂದ ಹುಟ್ಟಿಕೊಂಡಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಗೊಂಬೆಗಳು ನೇರವಾಗಿ ನಿಂತುಕೊಳ್ಳುವಂತೆ ಮಾಡಲು ಬಿದಿರಿನ ಅಥವಾ ಲಾಳದ ಕಡ್ಡಿಯನ್ನು ಮಧ್ಯಕ್ಕೆ ಸೀಳಿ ಅದರ ಮಧ್ಯೆ ಗೊಂಬೆ ಸಿಕ್ಕಿಸಿ ದಾರದಿಂದ ಅಲ್ಲಲ್ಲಿ ಹೊಲಿಗೆ ಹಾಕುತ್ತಾರೆ. ಗೊಂಬೆಯನ್ನು ಹಿಡಿದು ಕುಣಿಸಲು ಅನುಕೂಲವಾಗುವಂತೆ ಕೆಳಗಡೆ ಅರ್ಧ ಅಡಿ ಉದ್ದದಷ್ಟು ಕಡ್ಡಿಯನ್ನು ಬಿಟ್ಟಿರುತ್ತಾರೆ. ಕೈ ಕಾಲು, ಮುಖಗಳನ್ನು ಬೇರೆ ಮಾಡಿರುವ ಗೊಂಬೆಗಳ ಬಿಡಿಭಾಗಗಳನ್ನು ದಾರದ ಸಹಾಯದಿಂದ ಜೋಡಿಸಿ ನಂತರ ಕಡ್ಡಿಯನ್ನು ಹಚ್ಚಲಾಗುವುದು.

ತೊಗಲುಗೊಂಬೆ ದೃಶ್ಯ ಕಲೆಯಾಗಿದ್ದು, ಅದರಲ್ಲಿ ರಾಮಾಯಣ, ಮಹಾಭಾರತ, ಪುರಾಣ, ಕಥೆಗಳನ್ನು ಪ್ರದರ್ಶಿಸುತ್ತಾರೆಂದುಕೊಂಡರೂ ಸಮಕಾಲೀನ ಸಮಾಜದ ಚಿತ್ರಣ, ಅಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಚಿತ್ರಿತವಾಗಿರುವುದನ್ನು ಕಾಣಬಹುದು. ಕಪ್ಪು ಕಂಬಳಿ ಹೊದ್ದು ಮೊಳಕಾಲುದ್ದದ ಧೋತಿ ಉಟ್ಟು, ತಲೆಗೆ ವಿಶಿಷ್ಟ ರೀತಿಯ ಮುಂಡಾಸು ಸುತ್ತಿಕೊಂಡ ಹಾವಾಡಿಗ, ತನ್ನ ಪ್ರೀತಿಯ ಎತ್ತುಗಳೊಂದಿಗೆ ಭೂಮಿ ಉಳುತ್ತಿರುವ ರೈತ. ಬೇಟೆಗಾರನೊಂದಿಗೆ ಅವನ ಒಡನಾಡಿ ನಾಯಿ, ನದಿಯಲ್ಲಿ ದೋಣಿ ನಡೆಸುತ್ತಿರುವ ದೃಶ್ಯ, ಕಪಿಲೆಯಿಂದ ನೀರೆತ್ತುವ, ಕುರಿಗಾಹಿಗಳು ಕುರಿಕಾಯುವ, ಈಚಲು ಮರದಿಂದ ಹೆಂಡ ಇಳಿಸುವ, ಒಂಟೆಯ ಮೇಲೆ ಕುಳಿತು ಡಂಗುರ ಸಾರುವ ವರ್ಣಮಯ ದೃಶ್ಯಗಳು, ಜಾತ್ರೆಯ ಸಂದರ್ಭ ಇತ್ಯಾದಿ ಸಮಕಾಲೀನ ಸಮಾಜದ ಚಿತ್ರಗಳನ್ನು ಬಿಡಿ- ಬಿಡಿಯಾಗಿಯಾದರೂ ತೋರಿಸಿಕೊಡುತ್ತವೆ.

ಒಂಟೆ ಮೇಲೆ ಡಂಗುರ

ಇದರೊಂದಿಗೆ, ಕರಕೊಡದ ರೈತನನ್ನು ಬಂಧಿಸಿದ ಚಿತ್ರವೊಂದು ಮನಕಲಕುವಂತಿದೆ. ಅವನ ತಲೆಯ ಮೇಲೆ ಮರದ ಪೆಟ್ಟಿಗೆ ಇದೆ. ಪಕ್ಕದಲ್ಲಿರುವ ಹೆಂಡತಿ ಕೈಯಲ್ಲಿ ಒಂದು ಬುಟ್ಟಿ, ಅದರಲ್ಲಿ ಬೆಕ್ಕೊಂದು ಹೊರಗೆ ಇಣುಕಿ ನೋಡುತ್ತಿರುವ ದೃಶ್ಯ ತುಂಬ ಮನೋಜ್ಞವಾಗಿದೆ. ಕೆಲವೊಮ್ಮೆ ಊರ ಗೌಡನ ಮೆಚ್ಚಿಗೆಯ ಸಲುವಾಗಿ ಗೊಂಬೆರಾಮರು ಸಮಕಾಲಿನ ವೇಷ- ಭೂಷಣಗಳನ್ನು ಚಿತ್ರದಲ್ಲಿ ರೂಪಿಸಲು ಪ್ರಯತ್ನಿಸಿರಬಹುದು.

ಏಕೆಂದರೆ, ಕೆಲವು ಗೊಂಬೆಗಳ ಉಡಿಗೆ-ತೊಡುಗೆಗಳಲ್ಲಿ ಸ್ಥಳೀಯ ಸಂಸ್ಕೃತಿಯ ಪ್ರಭಾವವನ್ನು ಗುರುತಿಸಬಹುದಾಗಿದೆ. ನವನಾರೀ ಕುಂಜರ, ಪಂಚನಾರೀ ಅಶ್ವ ಮುಂತಾದ ಚಿತ್ರಗಳು ತುಂಬ ತಾಂತ್ರಿಕವಾಗಿದ್ದು, ಕಲಾವಿದರು ಅದನ್ನು ಯಶಸ್ವಿಯಾಗಿ ಕಲಾತ್ಮಕವಾದ ರೀತಿಯಲ್ಲಿ ನಿರ್ವಹಿಸಿದ್ದಾರೆನ್ನಬಹುದು.

ಮೊಗಲರ ಕಾಲದಲ್ಲಿ ಇಸ್ಲಾಮಿಕ್ ಶಿಲ್ಪಕಲಾ ಶೈಲಿಯ ಪ್ರಭಾವ ತೊಗಲುಗೊಂಬೆಯ ಮೇಲೂ ಆಗಿದ್ದು ಕಂಡುಬರುತ್ತದೆ. ಋಷಿಗಳ ಗಡ್ಡ, ತಲೆಯ ಟೋಪಿ ಇವುಗಳಲ್ಲೆಲ್ಲ ಆ ಶೈಲಿಯ ಪ್ರಭಾವ ಗುರುತಿಸಬಹುದು. ಬ್ರಿಟಿಷರ ಕಾಲದಲ್ಲಿಯೂ ಅವರ ಪ್ರಭಾವದಿಂದ ಹ್ಯಾಟು, ಬೂಟುಗಳು, ಬಂದೂಕು, ತೊಗಲು ಚಿತ್ರದಲ್ಲಿ ಕಾಣಿಸಿಕೊಂಡವು. ಸಂಭಾಷಣೆಯಲ್ಲಿಯೂ ಅನೇಕ ಆಂಗ್ಲ ಶಬ್ದಗಳು ಜನಸಾಮಾನ್ಯರ ಶಬ್ದಗಳಾಗಿ ಕೇಳಿಬಂದವು.

ತೊಗಲುಗೊಂಬೆಗಳಿಗೆ ಬಣ್ಣಗಳನ್ನು ಕಲಾವಿದರೇ ಪರಂಪರಾಗತ ರೀತಿಯಲ್ಲಿ ತಯಾರಿಸಿಕೊಳ್ಳುತ್ತಾರೆ. ಗೊಂಬೆಗಳಲ್ಲಿ ಎದ್ದುಕಾಣುವ ಬಣ್ಣಗಳೆಂದರೆ ಕೆಂಪು, ಕಪ್ಪು, ಹಳದಿ, ನೀಲಿ, ಸಿಂಧೂರ, ಪಚ್ಚೆನೀಲಿ ಇತ್ಯಾದಿ.

ಕಪ್ಪು– ದೀಪದ ಕಾಡಿಗೆ ಅಥವಾ ತೆಂಗಿನಕಾಯಿ ಚಿಪ್ಪನ್ನು ಸುಟ್ಟು ಕರಕು ತಯಾರಿಸಿಕೊಳ್ಳುತ್ತಾರೆ. ಅದನ್ನು ಪುಡಿ ಮಾಡಿ ನೀರಿನಲ್ಲಿ ಕದಡಿ ಅದಕ್ಕೆ ಜಾಲಿಯ ಅಂಟನ್ನು ಸೇರಿಸುತ್ತಾರೆ. ಹೀಗೆ ಕಲಿಸಿದ ಬಣ್ಣವನ್ನು ಮಣ್ಣಿನ ಕುಡಿಕೆಯಲ್ಲಿಟ್ಟು ಚನ್ನಾಗಿ ಕಡ್ಡಿಯಿಂದ ಕದಡುತ್ತಾರೆ. ಆರು ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಬಿಳಿ ಬಟ್ಟೆಯಲ್ಲಿ ಸೋಸುತ್ತಾರೆ. ಇಂಥ ಕಪ್ಪುಬಣ್ಣ ವರ್ಷಗಟ್ಟಲೆ ಕೆಡುವುದಿಲ್ಲ.
ಕೆಂಪು– ಮುತ್ತುಗದ ಹೂ, ಗೋರಂಟಿ ಎಲೆ, ಸುಣ್ಣ, ಕಾಚು ಇವೆಲ್ಲವನ್ನು ಸೇರಿಸಿ, ನೀರಿನಲ್ಲಿ ಕದಡಿ, ಚೆನ್ನಾಗಿ ಕುದಿಸಿ, ನಂತರ ಅದನ್ನು ಮೂರು ದಿನ ಕೊಳೆಯಲು ಬಿಟ್ಟು, ಆ ಬಳಿಕ ಬಿಳಿ ಬಟ್ಟೆಯಲ್ಲಿ ಸೋಸಿ, ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಕು. ಆ ಕೆಂಪು ಪುಡಿಯನ್ನು ಬೇವಿನ ಅಂಟಿನಲ್ಲಿ ಕೂಡಿಸಿ ಬಳಸುತ್ತಾರೆ. ಈಗ ಎಂಮಟ್ಟಿ ಕಲ್ಲನ್ನು ಪುಡಿಮಾಡಿ ಅದರಿಂದ ಕೆಂಪು ಬಣ್ಣ ಪಡೆಯುತ್ತಾರೆ. ಉರಿಮಂಜೆ ಬೀಜದ ಪುಡಿಯನ್ನು ನೀರಿನ ಜೊತೆಗೆ ಬೆರೆಸಿ ನೆನೆ ಹಾಕಿ, ಬೇವಿನ ಅಂಟನ್ನು ಕಲಸಿ ಸೋಸಿದರೆ ಕೆಂಪು ಬಣ್ಣ ಬರುತ್ತದೆ. ಇಲ್ಲವೆ ಪಾಪಾಸು ಕಳ್ಳಿ ಹಣ್ಣಿನಿಂದಲೂ ಕೆಂಪುಬಣ್ಣ ಪಡೆಯುತ್ತಾರೆ.
ನೀಲಿ– ತುಂಬೇಗಿಡದ ಎಲೆಗಳನ್ನು ಅರೆದು ಅದರ ರಸವನ್ನು ಅಂಟಿನಲ್ಲಿ ಕೂಡಿಸಿ ಉಪಯೋಗಿಸುತ್ತಾರೆ. ತುಂಬೆ ಸೊಪ್ಪಿನ ರಸದ ಜೊತೆಗೆ ಹರಿದಾಳ ಸೇರಿಸಿ ಅರೆದು ನೀರು, ಬೇವಿನ ಅಂಟು ಸೇರಿಸಿ ಪಚ್ಚೆ ನೀಲಿ ಬಣ್ಣ ತಯಾರಿಸುತ್ತಾರೆ.
ಸಿಂಧೂರ– ಮದರಂಗಿಯ ಮಿಶ್ರಣದಲ್ಲಿ ಸುಣ್ಣವನ್ನು ಸೇರಿಸಿ ಕೆಲವು ದಿನ ಕೊಳೆಯಲು ಬಿಟ್ಟು ನಂತರ ಬೇವಿನ ಅಂಟನ್ನು ಬೆರೆಸಿ ಉಪಯೋಗಿಸುತ್ತಾರೆ.
ಹಳದಿ– ಬಂಗಾಳಿ ಕಾಯಿ ಎಂಬ ಹಣ್ಣಿನ ರಸವನ್ನು ಬೇವಿನ ಅಂಟಿನಲ್ಲಿ ಸೇರಿಸಿ ಒಂದು ಹದಕ್ಕೆ ತಂದು ಹಳದಿ ಬಣ್ಣ ಪಡೆಯುತ್ತಾರೆ. ವಿಶಿಷ್ಟ ಕೆಂಪು ಮುಖ್ಯವಾದ ಬಣ್ಣವಾಗಿದ್ದು, ಹಸಿರು, ನೀಲಿಯೊಂದಿಗೆ ಸೇರಿ ಅದಕ್ಕೆ ಛಾಯೆಯನ್ನು ಒದಗಿಸುತ್ತದೆ. ಮೃದುವಾದ ಹಳದಿ, ಅದಕ್ಕೆ ಸಹಜ ಹಿನ್ನೆಲೆಯನ್ನು ಒದಗಿಸುತ್ತದೆ. ಹೀಗೆ ನೈಸರ್ಗಿಕ ಬಣ್ಣಗಳಿಂದಲೇ ಭ್ರಾಮಕ ಪ್ರಪಂಚವನ್ನು ಕಲಾವಿದರು ಸೃಷ್ಟಿಸುತ್ತಾರೆ. ಪರಂಪರಾಗತ ರೀತಿಯಲ್ಲಿ ತಯಾರಿಸುವ ಗಿಡಮೂಲಿಕೆಯ ಬಣ್ಣಗಳು ಬಹು ಕಾಲದವರೆಗೂ ಮಾಸದೇ ಇರುತ್ತಿದ್ದವು. ಜೊತೆಗೆ ಕಡಿಮೆ ಬಣ್ಣವನ್ನು ಉಪಯೋಗಿಸಿ, ಗರಿಷ್ಠ ಪರಿಣಾಮವನ್ನು ಸಾಧಿಸುವ ಅದ್ಭುತ ಕಲೆ ಇದೆಂದು ಕಲಾ ವಿಮರ್ಶಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

ನಾಗಬಂಧ

ತೊಗಲುಗೊಂಬೆಗಳನ್ನು ಚರ್ಮದಿಂದ ಸಿದ್ಧಪಡಿಸುವ ಹಾಗೂ ಬಣ್ಣ ತುಂಬುವ ಕಲೆ, ಬಹಳ ಹಿಂದಿನ ಗೊಂಬೆರಾಮರಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ಆ ಕಲಾವಿದರು ಪರಂಪರೆಯಿಂದ ತಮ್ಮಲ್ಲಿ ಉಳಿದುಬಂದಿರುವ ಗೊಂಬೆಗಳನ್ನೇ ಸಾಧ್ಯವಾದಾಗ ಆಟವಾಡಿಸುವ ದುರವಸ್ಥೆಗೆ ಬಂದು ತಲುಪಿದ್ದಾರೆ. ಈಗ ಕೆಲವೇ ಕೆಲವರಿಗೆ ಮಾತ್ರ ಈ ಕಲೆಗಳೆಲ್ಲ ಗೊತ್ತಿವೆ. ಚರ್ಮದ ಬದಲು ಪ್ಲಾಸ್ಟಿಕ್ ಹಾಳೆ, ದೇಶೀ ಬಣ್ಣಗಳ ಬದಲು ರಾಸಾಯನಿಕ ಬಣ್ಣ ಬಳಕೆ,.. ಇವು ಇಂದಿನ ವಾಸ್ತವವಾಗಿದೆ. ಇದರಿಂದಾಗಿ, ತೊಗಲುಗೊಂಬೆಗಳ ಬಣ್ಣಗಳಲ್ಲಿ ಹೊಳಪು, ಗೊಂಬೆಗಳ ಆಕಾರ- ವಿನ್ಯಾಸಗಳಲ್ಲಿ ಸೂಕ್ಷ್ಮತೆ ಇಲ್ಲವಾಗುತ್ತಿವೆ. ಈಗೀಗ ಇಂಥ ಬಣ್ಣಗಳ ತಯಾರಿಕೆ ನಿಂತು ಹೋಗಿದ್ದು, ಪೇಟೆಯಲ್ಲಿ ದೊರೆಯುವ ರಾಸಾಯನಿಕ ಬಣ್ಣಗಳನ್ನೇ ಕಲಾವಿದರು ಆಶ್ರಯಿಸತೊಡಗಿದ್ದಾರೆ.

ಸಾಮಾನ್ಯವಾಗಿ ಸುಗ್ಗಿಯ ಕಾಲದಲ್ಲಿ ಹಳ್ಳಿಗಳಲ್ಲಿ ತೊಗಲುಗೊಂಬೆಯಾಟ ಆಡಿಸುತ್ತಾರೆ. ಕಿಳ್ಳೇಕೇತರು ತಮ್ಮಲ್ಲಿಯೇ ಗುಂಪುಮಾಡಿಕೊಂಡು ಹಳ್ಳಿಗಳನ್ನು ಹಂಚಿಕೊಂಡಿರುತ್ತಾರೆ. ನಿರ್ದಿಷ್ಟ ಹಳ್ಳಿಯಲ್ಲಿ ಹಂಚಿಕೊಂಡ ಆ ಗುಂಪಿನವರೇ ಆಟ ಆಡಿಸಬೇಕು. ಕಿಳ್ಳೇಕೇತರ ಗುಂಪಿನ ಮುಖ್ಯಸ್ಥ ಊರ ಮುಖಂಡರನ್ನು ಭೇಟಿ ಮಾಡಿ, ಆಟ ಆಡಿಸುವ ದಿನ ನಿಗದಿಪಡಿಸಿಕೊಳ್ಳುತ್ತಾನೆ. ಊರಿನ ಮಧ್ಯ ಭಾಗದಲ್ಲಿ ಅಥವಾ ದೇವಸ್ಥಾನದ ಎದುರಿಗೆ ವಿಶಾಲವಾದ ಜಾಗವಿರುವ ಕಡೆ ಆಟ ಆಡಿಸುತ್ತಾರೆ. ಗೊಂಬೆಗಳ ಆಕಾರದ ಮೇಲೆ ತೊಗಲುಗೊಂಬೆಯ ಆಟದ ರಂಗಮಂದಿರವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದ 2 ರಿಂದ 2 1/2 ಅಡಿ ಎತ್ತರದ ಗೊಂಬೆಗಳಿದ್ದರೆ ಒಂದು ರೀತಿ, ಆರಡಿ ಎತ್ತರದ ಗೊಂಬೆಗಳಿದ್ದರೆ ಮತ್ತೊಂದು ರೀತಿ ಹೀಗೆ ಎರಡು ರೀತಿಯ ರಂಗಮಂದಿರಗಳನ್ನು ಗುರುತಿಸಬಹುದು.

ಚಿಕ್ಕ ಗೊಂಬೆಗಳಿಗಾಗಿ ನಾಲ್ಕು ಬಿದಿರಿನ ಕಂಬಗಳನ್ನು ನೆಟ್ಟು, ಅವುಗಳ ಮೇಲೆ ನಾಲ್ಕು ಬಿದಿರಿನ ಗಳಗಳನ್ನು ಕಟ್ಟಿ, ಮುಂಭಾಗವನ್ನು ಬಿಟ್ಟು, ಉಳಿದ ಮೂರು ಕಡೆ ಚಾಪೆ, ತಡಿಕೆಗಳನ್ನು ಬಳಸಿ, ಸುತ್ತಲೂ ಮರೆಮಾಡಿಕೊಳ್ಳುತ್ತಾರೆ. ಮುಂದುಗಡೆ, ಕೆಳಭಾಗದಲ್ಲಿ ಎರಡೂವರೆ ಅಡಿ ಕರಿಬಟ್ಟೆ ಅಥವಾ ಕರಿ ಕಂಬಳಿ ಕಟ್ಟಿ ಅದರ ಮೇಲ್ಗಡೆ ಬಿಳಿ ಪಂಜೆಯನ್ನು ಕಟ್ಟುತ್ತಾರೆ. ದಿನದ ತಿಥಿ, ನಕ್ಷತ್ರ, ಆಡುವ ಕಥೆ ಇವುಗಳಿಗನುಗುಣವಾಗಿ ಅಟ್ಟದ ಮುಖದ ದಿಕ್ಕನ್ನು ನಿರ್ಧರಿಸುತ್ತಾರೆ. ಅಲ್ಲದೆ ಬಿಳಿಪಂಚೆಯನ್ನು ಬೇಡಿಯೇ ಪಡೆಯಬೇಕೆಂಬ ಸಂಪ್ರದಾಯವಿದೆ. ಚಿಕ್ಕ ಗೊಂಬೆಗಳನ್ನು ಕುಳಿತು ಆಡಿಸುತ್ತಾರೆ. ಇದಕ್ಕೆ ಆರು ಅಡಿ ಎತ್ತರ ಹಾಗೂ ಎಂಟು ಅಡಿ ಅಗಲದ ರಂಗಸ್ಥಳ ಸಾಕಾಗುತ್ತದೆ.

ಬೇಟೆಗೆ ಹೊರಟ ದೊರೆ

ಗೊಂಬೆಯನ್ನಾಡಿಸುವವರು ಕರಿಕಂಬಳಿಯ ಹಿಂದೆ ಒಳಭಾಗದಲ್ಲಿ ಕುಳಿತಿದ್ದು, ಅವರು ಯಾರೂ ಪ್ರೇಕ್ಷಕರ ಕಣ್ಣಿಗೆ ಕಾಣಿಸುವುದಿಲ್ಲ. ಒಳಗಡೆ, ಬಿಳಿಬಟ್ಟೆಯ ಹಿಂಬಾಗದಲ್ಲಿ ಒಂದು ದೀಪವನ್ನು ಇಳಿಬಿಟ್ಟಿರುತ್ತಾರೆ. ಮೊದಲಾದರೆ ಹೊಂಗೆ ಅಥವಾ ಹರಳೆಣ್ಣಿಯ ದೀಪವನ್ನು ತೂಗುಬಿಡುತ್ತಿದ್ದರು. ಈಗ ಪೆಟ್ರೋಮ್ಯಾಕ್ಸ್, ವಿದ್ಯುತ್ ದೀಪಗಳು ಬಂದಿವೆ. ದೀಪದ ಬೆಳಕು ಪಾರದರ್ಶಕ ತೊಗಲುಗೊಂಬೆಗಳ ಮೇಲೆ ಬಿದ್ದು, ಆ ಗೊಂಬೆಗಳ ಪ್ರತಿಫಲನ ಬಿಳಿಪಂಜೆಯ ಮೇಲೆ ಮೋಹಕವಾಗಿ ಮೂಡಿ, ಪ್ರೇಕ್ಷಕರ ಮನದಲ್ಲಿ ವಿಶಿಷ್ಟ ಕಲ್ಪನಾಲೋಕವನ್ನು ಸೃಷ್ಟಿಸುತ್ತದೆ.

ಇನ್ನು, ಎರಡನೆಯ ರೀತಿಯ ಆಳೆತ್ತರದ ಗೊಂಬೆಗಳನ್ನು ನಿಂತುಕೊಂಡೇ ಆಡಿಸಬೇಕಾಗುತ್ತದೆ. ಅದಕ್ಕೆ ಅಕ್ಕ- ಪಕ್ಕ, ಹಿಂದೆ ಮೂರು ಕಡೆಗೂ ಚಾಪೆ ಅಥವಾ ತಡಿಕೆಗಳಿಂದ ಮುಚ್ಚಿರುವ ವಿಶಾಲ ರಂಗಮಂಟಪವೇ ಬೇಕು. ಎತ್ತರದ ಗೊಂಬೆಗಳನ್ನು ಕುಣಿಸುವಾಗ ಕಲಾವಿದ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ತಾನೂ ಕುಣಿಯುತ್ತಾನೆ. ಇಂಥ ರಂಗಮಂದಿರದ ವೇದಿಕೆಯನ್ನು ಮರದ ಹಲಗೆಗಳಿಂದ ಮಾಡಿರುತ್ತಾರೆ.

ತೊಗಲುಗೊಂಬೆಯಾಟದಲ್ಲಿ ಗೊಂಬೆ ಆಡಿಸುವವನ ಕೈಚಳಕವೇ ಮುಖ್ಯವಾಗಿದ್ದು, ಆಯಾ ಪಾತ್ರಗಳ ಗತ್ತುಗಾರಿಕೆಗೆ ಸರಿಹೊಂದುವಂತೆ ಹಾಡನ್ನೋ, ಸಂಭಾಷಣೆಯನ್ನೋ ನುಡಿಯುತ್ತ ತನ್ನ ಎರಡೂ ಕೈಗಳಿಂದ ಒಂದೊಂದು ಗೊಂಬೆಗಳನ್ನು ಹಿಡಿದು ಕುಣಿಸುತ್ತಾನೆ. ತೆರೆಯ ಮರೆಯಲ್ಲಿ ಪುರುಷ ಪಾತ್ರಗಳ ಹಿಂದೆ ಪುರುಷರು, ಸ್ತ್ರೀ ಪಾತ್ರಗಳ ಹಿಂದೆ ಸ್ತ್ರೀಯರು ನಿಲ್ಲುವರು.

ಪ್ರದರ್ಶನ ಇಡೀ ರಾತ್ರಿ ನಡೆಯುವುದು. ಪಾತ್ರಗಳನ್ನು ರಂಗಕ್ಕೆ ತರುವುದಾಗಲಿ, ಬೇರೆ- ಬೇರೆ ಆಯುಧಗಳನ್ನು ಹಿಡಿದು ಯುದ್ಧ ಮಾಡುವುದೇ ಆಗಿರಲಿ ಅಥವಾ ಸಂಭಾಷಣೆ ನಡೆಸುವುದೇ ಆಗಲಿ, ಮಾತಿನೊಂದಿಗೆ ಕ್ರಿಯೆ, ಕ್ರಿಯೆಗೆ ತಕ್ಕಂತೆ ಪಾತ್ರದ ಗೊಂಬೆಗಳ ಕತ್ತು, ಕೈ, ಕಾಲು ಆಡಿಸುವುದು, ರ್ದೀಕಾಲದ ಅಭ್ಯಾಸದಿಂದ ಮಾತ್ರ ಸಾಧ್ಯ. ಏಕಕಾಲದಲ್ಲಿ ಅನೇಕ ಪಾತ್ರಗಳು ರಂಗದ ಮೇಲಿದ್ದಾಗ, ಹಾಡು- ಸಂಭಾಷಣೆಗಳನ್ನು ಚಾಕ-ಚಕ್ಯತೆಯಿಂದ ನಿರ್ವಹಿಸಬೇಕಾಗುತ್ತದೆ. ಇದೆಲ್ಲ ನುರಿತ ಕಲಾವಿದರಿಂದ ಮಾತ್ರ ಸಾಧ್ಯವಾಗುತ್ತದೆ.

ಆಟದ ಆರಂಭದಲ್ಲಿ ಗಣಪತಿ ಸ್ತುತಿ, ಶಾರದಾ ಪ್ರಾರ್ಥನೆಗಳಾದ ನಂತರ ಆ ದಿನದ ಮುಖ್ಯ ಆಖ್ಯಾನ ಪ್ರಾರಂಭವಾಗುತ್ತದೆ. ಗಂಡಸರು ಮತ್ತು ಹೆಂಗಸರು ಕೂಡಿಯೇ ಹಾಡುವುದು ಈ ಆಟದ ವೈಶಿಷ್ಟ್ಯ. ಹಿಮ್ಮೇಳದಲ್ಲಿ ಅನೇಕ ವಾದ್ಯಗಳನ್ನು ಬಳಸುತ್ತಾರೆ. ಇದು ಪ್ರಾದೇಶಿಕವಾಗಿ ಅಲ್ಪ ವ್ಯತ್ಯಾಸವನ್ನು ಪಡೆಯುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಮೃದಂಗ, ಮುಖವೀಣೆಗಳ ಜೊತೆಗೆ ಇನ್ನೊಂದು ವಿಶಿಷ್ಟ ನಾದವಿರುತ್ತದೆ. ಅದು ತಣಿಗೆ ಶೃತಿ. ಕಂಚಿನ ಗಂಗಾಳವೊಂದನ್ನು ನೆಲದ ಮೇಲೆ ಬೋರಲು ಹಾಕಿ ಅದರ ಮೇಲೆ ಮಧ್ಯಭಾಗದಲ್ಲಿ ಸ್ವಲ್ಪ ಮೇಣವನ್ನು ಮೆತ್ತಿ ಹಂಚಿ ಕಡ್ಡಿಯನ್ನು ಅದರಲ್ಲಿ ನೆಟ್ಟು, ಎರಡೂ ಕೈಗಳಿಂದಲೂ ಉಜ್ಜಿದಾಗ ಹೊರಡುವ ನಾದ ವಿಶಿಷ್ಟವಾಗಿರುತ್ತದೆ. ಉತ್ತರ ಕರ್ನಾಟಕದಲ್ಲಿ ಡೋಲು(ರಾಯಚೂರು, ಬೆಳಗಾಂ ಕಡೆ) ಪುಂಗಿ, ತಾಳ, ಮುಖವೀಣೆ ಮತ್ತು ಪಾವರೆ ವಾದ್ಯಗಳನ್ನು ಬಳಸುತ್ತಾರೆ. ಪಾವರೆ ವಾದ್ಯ ಕಂಚಿನ ಗಂಗಾಳದ ಮೇಲೆ ಜೋಳದ ಕಡ್ಡಿಯನ್ನು ನೀವಿ ಹುಟ್ಟಿಸುವ ನಾದವಾಗಿದೆ. ಕೆಲವರು ಹಾರ್ಮೋನಿಯಂ, ಕೊಳಲು ಮುಂತಾದ ವಾದ್ಯಗಳನ್ನೂ ಮೇಳದಲ್ಲಿ ಸೇರಿಸಿಕೊಂಡಿರುತ್ತಾರೆ.

ಅಪಾರ ಶ್ರಮವಹಿಸಿ ತಯಾರಿಸಿದ ತೊಗಲುಗೊಂಬೆ ಸುಕ್ಕುಗಟ್ಟದಂತೆ, ಜಾಗೃತೆಯಾಗಿ ನೋಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಗಿಡಮೂಲಿಕೆಗಳ ರಸವನ್ನು ಅವುಗಳಿಗೆ ಆಗಾಗ ಬಳಿಯುತ್ತಿರುತ್ತಾರೆ. ಆಟವಾಡಿದ ನಂತರ ಗೊಂಬೆಗಳನ್ನು ಪೂಜಿಸಿ ಬಿದಿರಿನ ಪೆಟ್ಟಿಗೆಗಳಲ್ಲಿ ಜೋಡಿಸಿ ಇಡುತ್ತಾರೆ. ಇದಕ್ಕೆ ‘ಬಾವಲಿ’ ಎಂಬ ಹೆಸರಿದೆ. ಗೊಂಬೆಗಳು ಹಾಳಾಗಿದ್ದರೆ ಅಥವಾ ಗೊಂಬೆ ಆಟವನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲವಾದರೆ, ಅಂಥ ಗೊಂಬೆಗಳನ್ನು ನೀರಿನಲ್ಲಿ ತೇಲಿಬಿಡುತ್ತಾರೆ.

ಕರ್ನಾಟಕದಲ್ಲಿ ತೊಗಲುಗೊಂಬೆಗಳ ಅಧ್ಯಯನ ಕ್ರೈಸ್ತ ಮಿಶನರಿಗಳ ಕಾಲದಿಂದಲೂ ನಡೆಯುತ್ತ ಬಂದಿದೆ. ಜರ್ಮನ್ ವಿದ್ವಾಂಸರುಗಳಾದ ಡಾ. ಫಿಶೆಲ್, ಡಾ. ಜೆ. ಜಾಕೋಬ್, ಪಿ.ಕೆ. ಹಾಲ್, ಡಾ. ಸೆಲ್ಟ್ಮನೋ ಸ್ಪೈಸ್, ಹೆಜ್ ಇ.ಲುಡ್ಡರ್ ಮುಂತಾದವರು ಗೊಂಬೆಯಾಟದ ಕಲೆಯಿಂದ ಆಕರ್ಷಿತರಾಗಿ ಅಧ್ಯಯನ ಮಾಡಿರುತ್ತಾರೆ. ‘ಮೈಸೂರು ಟ್ರೈಬ್ಸ್ ಆಂಡ್ ಕಾಸ್ಟ್ಕಿ’ನಲ್ಲಿಯೂ, ಥಸ್ರ್ಟನ್ನನ ‘ಇಂಡಿಯನ್ ಕಾಸ್ಟ್ಸ್ಕಿ’ನಲ್ಲಿಯೂ, ಬಿಜಾಪುರ, ಬೆಳಗಾಂವ ಗೆಜೆಟೆಯರ್ ಗಳಲ್ಲಿಯೂ ಈ ಸಮುದಾಯದ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತವೆ. ಕರ್ನಾಟಕ ಚಿತ್ರಕಲಾ ಪರಿಷತ್ತು ರಾಜ್ಯದ ಎಲ್ಲ ಕಡೆಗೂ ಸುತ್ತಾಡಿ ತೊಗಲುಗೊಂಬೆ ಸಂಗ್ರಹಿಸಿ ಅಧ್ಯಯನ ಮಾಡಿದೆ.

ಸೇತುಬಂಧನ

ಪ್ರಾದೇಶಿಕ ವೈವಿಧ್ಯತೆಯನ್ನು ಗುರುತಿಸುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ತೌಲನಿಕ ಅಧ್ಯಯನ ನಡೆಸಿ, ತೊಗಲುಗೊಂಬೆಯಾಟದ ಕಲೆಯ ಮಹತ್ವವನ್ನು ಅರಿತಿದೆ. ಈ ದಿಶೆಯಲ್ಲಿ ಎಂ.ಎಸ್. ನಂಜುಂಡರಾವ್ ಅವರ ಪ್ರಯತ್ನ ಸ್ತುತ್ಯಾರ್ಹವಾದುದು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪ್ರಕಟವಾದ ಅವರ ‘ಕರ್ನಾಟಕ ತೊಗಲುಗೊಂಬೆಯಾಟ’ ಈ ದಿಶೆಯಲ್ಲಿ ಒಂದು ಮಹತ್ವದ ಕೃತಿ. ಇವರಲ್ಲದೆ ಕರ್ನಾಟಕದಲ್ಲಿ ಮುಖ್ಯವಾಗಿ ಜೀ.ಶಂ. ಪರಮಶಿವಯ್ಯ, ಡಿ.ಕೆ. ರಾಜೇಂದ್ರ, ಎಸ್.ಎ. ಕೃಷ್ಣಯ್ಯ, ಎಚ್.ಕೆ. ರಾಮನಾಥ, ಟಿ. ಗೋವಿಂದರಾಜು, ಎಸ್.ಸಿ. ಪಾಟೀಲ ಮುಂತಾದವರೆಲ್ಲ ತೊಗಲುಗೊಂಬೆ ಆಟ ಕುರಿತು ವ್ಯಾಪಕ ಅಧ್ಯಯನ ಮಾಡಿರುತ್ತಾರೆ.

ಒಂದು ಪರಿವೀಕ್ಷಣೆಯ ಪ್ರಕಾರ, 1988ರ ಹೊತ್ತಿಗೆ ಕರ್ನಾಟಕದಲ್ಲಿ 167 ತೊಗಲುಗೊಂಬೆ ತಂಡಗಳಿದ್ದವು. ಯಾವುದೇ ರೀತಿಯ ಪ್ರೋತ್ಸಾಹ ದೊರೆಯದೆ, ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ, ಅನೇಕ ಕಲಾವಿದರು ಈ ಕಲೆಯನ್ನು ಬಿಟ್ಟುಕೊಟ್ಟರು. ತುಂಗಭದ್ರಾ ನದಿಗೆ ಆಣೆಕಟ್ಟು ಕಟ್ಟಿ ಸುತ್ತಲಿನ ಜಮೀನಿಗೆ ನೀರು ದೊರೆತಾಗ ಕೆಲವು ಕಲಾವಿದರು ತಮ್ಮ ಗೊಂಬೆಗಳನ್ನು ತುಂಗೆಗೆ ಚೆಲ್ಲಿ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರು. ಈಗ ಕರ್ನಾಟಕದಲ್ಲಿ ಕೆಲವೇ ಕೆಲವು ಕುಟುಂಬಗಳು ಸಕ್ರಿಯವಾಗಿ ತೊಗಲುಗೊಂಬೆಯಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಉಳಿದ ಕುಟುಂಬಗಳು ಸಾಂಪ್ರದಾಯಿಕ ವಿಧಿಯಾಗಿ ಕ್ವಚಿತ್ತಾಗಿ ಗೊಂಬೆಯಾಟ ಆಡಿಸುವುದನ್ನು ಉಳಿಸಿಕೊಂಡಿವೆ.

ಪ್ರಾಚೀನ ಕಾಲದಲ್ಲಿ ತೊಗಲುಗೊಂಬೆ ಆಟದ ಪ್ರಕಾರ ಭಾರತದಿಂದಲೇ ವಿದೇಶಗಳಿಗೆ ಹೋಗಿದ್ದರೂ ಆಧುನಿಕ ಸಂದರ್ಭದಲ್ಲಿ ಕರ್ನಾಟಕದ ತೊಗಲುಗೊಂಬೆಯಾಟವನ್ನು ವಿದೇಶಗಳಿಗೆ ಕೊಂಡೊಯ್ದು ಪ್ರದರ್ಶಿಸಿದ ಮೊದಲ ಕೀರ್ತಿ, ನಾಗಮಂಗಲದ ಹೊಂಬಯ್ಯನವರ ತಂಡಕ್ಕೆ ಸಲ್ಲುತ್ತದೆ. ಕರ್ನಾಟಕದ ತೊಗಲುಗೊಂಬೆಯಾಟವನ್ನು ಅಧ್ಯಯನ ಮಾಡಿದ ಪ್ರೊ. ಮೆಲ್ ಹೆಲಿಸ್ಟನ್ ಅವರ ಪ್ರಯತ್ನದಿಂದಾಗಿ ಹೊಂಬಯ್ಯ ತಂಡಕ್ಕೆ 1980ರಲ್ಲಿ ಅಮೆರಿಕದಲ್ಲಿ ನಡೆದ ಜಾಗತಿಕ ಗೊಂಬೆ ಆಟದ ಉತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಯಡ್ರಾಮನಹಳ್ಳಿ ದೊಡ್ಡ ಭರಮಪ್ಪ ಕೂಡ ಜರ್ಮನಿಗೆ ಹೋಗಿ ಅಲ್ಲಿ ಪ್ರದರ್ಶನ ನೀಡಿದ್ದಾರೆ. ಅದರಂತೆ ಯಡ್ರಾಮನಳ್ಳಿ ದೊಡ್ಡಬಾಳಪ್ಪ ಮತ್ತು ಬಿಂಕದಕಟ್ಟೆ ವಿರೂಪಾಕ್ಷ ಛತ್ರಿ, ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.

ಇವರೆಲ್ಲ ಕರ್ನಾಟಕದ ಅತ್ಯುತ್ತಮ ಗೊಂಬೆಯಾಟದ ಕಲಾವಿದರಾಗಿದ್ದು, ಜಾಗತಿಕ ಮಟ್ಟದಲ್ಲಿ ಕನ್ನಡದ ಅದ್ಭುತ ಕಲೆಯೊಂದರ ಪರಿಚಯವನ್ನು ಮಾಡಿಕೊಟ್ಟಿರುತ್ತಾರೆ. ಉಳಿದ ಕಲೆಗಿಂತಲೂ ಹೆಚ್ಚಿನ ಬಹುಮುಖ ಪ್ರತಿಭೆ, ತೊಗಲುಗೊಂಬೆ ಕಲಾವಿದನಲ್ಲಿ ಇರಬೇಕಾಗುತ್ತದೆ. ಗೊಂಬೆ ತಯಾರಿಸಿಕೊಳ್ಳುವುದರಿಂದ ಹಿಡಿದು, ಗೊಂಬೆ ಆಡಿಸುವವರೆಗಿನ ಪ್ರತಿಯೊಂದು ಹಂತದಲ್ಲಿಯೂ ಸೃಜನಶೀಲ ಪ್ರತಿಭೆ ತೋರಿಸಲು ಅಲ್ಲಿ ಅವಕಾಶವಿದೆ. ಅಂಥ ಸಾಮರ್ಥ್ಯವಿರುವ ಕಲಾವಿದ ಮಾತ್ರ ನಮ್ಮೆದುರಿಗೇ ಒಂದು ಅದ್ಭುತ ಕಲಾಲೋಕವನ್ನು ಸೃಷ್ಟಿಮಾಡಿ ತೋರಿಸಬಲ್ಲ.

ರಾಣಿ

ಕರ್ನಾಟಕದಲ್ಲಿ ತೊಗಲುಗೊಂಬೆಯಾಟಕ್ಕೆ ಮತ್ತು ಚಿತ್ರಸಂರಚನೆಗೆ ಕಾಯಕಲ್ಪ ದೊರೆತಿದ್ದು, ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರ ಪ್ರೇರಣೆಯಿಂದ. ಅವರ ಮಾರ್ಗದರ್ಶನದಲ್ಲಿಯೇ ಬೆಳಗಲ್ಲು ವೀರಣ್ಣ, ಗೊಂಬೆ ಆಟಕ್ಕೆ ಹೊಸ ವಸ್ತುಗಳ ಪ್ರಯೋಗ ಮಾಡಿದರು. 1982ರಲ್ಲಿ ಅವರು ನಿರ್ಮಿಸಿದ ‘ಸ್ವಾತಂತ್ರ್ಯ ಸಂಗ್ರಾಮ’ ಒಂದು ಯಶಸ್ವಿ ಪ್ರಯೋಗವಾಯಿತು. ನಂತರದಲ್ಲಿ ಅವರು ‘ರಾಣಿ ಕಿತ್ತೂರು ಚೆನ್ನಮ್ಮ’, ‘ಝಾನ್ಸಿರಾಣಿ ಲಕ್ಷ್ಮೀಬಾಯಿ’, ‘ಸಿಪಾಯಿದಂಗೆ’, ‘ಬಸವೇಶ್ವರ’, ‘ಛತ್ರಪತಿ ಶಿವಾಜಿ’ ಮುಂತಾದ ರಾಷ್ಟ್ರೀಯ ವೀರರನ್ನು, ಸಾಂಸ್ಕೃತಿಕ ನಾಯಕರನ್ನೂ, ಶಿಶುನಾಳ ಶರೀಫರಂತಹ ಸಂತರನ್ನು ಕುರಿತು ಗೊಂಬೆಯಾಟ ವಿನ್ಯಾಸಗೊಳಿಸಿ, ಪ್ರಯೋಗಿಸಿದರು.

ಸಂಡೂರ ವಿ.ಟಿ. ಕಾಳಯ್ಯ ರಚಿಸಿದ ‘ಬಾಪು ಕಥೆ’ ಪ್ರಯೋಗ ವೀರಣ್ಣನವರ ಹೆಸರನ್ನು ಈ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿಸಿತು. 1988ರಲ್ಲಿ ನವದೆಹಲಿ, ಚಂಡೀಗಢ ಮುಂತಾದ ಕಡೆ ಅದರ ಪ್ರಯೋಗಗಳಾದವು. ನಾಗಮಂಗಲದ ಹೊಂಬಯ್ಯ, ಎಡ್ರಾಮನಹಳ್ಳಿ ದೊಡ್ಡ ಭರಮಪ್ಪ, ಬೆಳಗಲ್ಲು ವೀರಣ್ಣ ಮುಂತಾದ ಕೆಲವೇ ಕಲಾವಿದರು ಕಲೆಯ ಮೇಲಿನ ಪ್ರೀತಿಯಿಂದ ಇಂದಿಗೂ ಗೊಂಬೆಯಾಟವನ್ನು ವೃತ್ತಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರಲ್ಲೂ ಅವರು ಅದೇ ಬಗೆಯ ಕಲಾ ಪ್ರೀತಿ- ಅಭಿಮಾನ ಉಳಿಯುವಂತೆ ಮಾಡಿರುತ್ತಾರೆ.

ಈಗಾಗಲೇ ಹೇಳಿದಂತೆ ವಿದೇಶಗಳಲ್ಲಿ ತೊಗಲುಗೊಂಬೆಯಾಟ, ವಾಣಿಜ್ಯೀಕರಣಗೊಂಡಿದೆ. ಅಲ್ಲಿ ವೃತ್ತಿನಿರತ ಕಂಪನಿಗಳಿವೆ. ಕರ್ನಾಟಕದ ತೊಗಲುಗೊಂಬೆಯಾಟ ಸಾಂಪ್ರದಾಯಿಕ ರೀತಿಯನ್ನು ಉಳಿಸಿಕೊಂಡಿದೆ. ಆಧುನಿಕ ಸಂವಹನ ಮಾಧ್ಯಮಗಳ ಭರಾಟೆಯಲ್ಲಿಯೂ ತನ್ನದೇ ಆದ ಅನನ್ಯತೆಯನ್ನು ಅದು ಉಳಿಸಿಕೊಂಡಿರುವುದು ಗಮನಾರ್ಹ. ಸಾವಿರಾರು ವರ್ಷಗಳಿಂದ ಹಳ್ಳಿಗರನ್ನು ಆಕರ್ಷಿಸಿ ಅವರಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಗಟ್ಟಿಗೊಳಿಸುತ್ತ ಬಂದಿರುವ ಈ ಗೊಂಬೆಯಾಟಗಳನ್ನು ಅಲ್ಪ- ಸ್ವಲ್ಪ ಬದಲಾವಣೆಯೊಂದಿಗೆ ಆಧುನಿಕ ಜೀವನದಲ್ಲಿ ಸ್ಪಂದಿಸುವಂತೆ ಮಾಡಲು ಸಾಧ್ಯವಿದೆ.

ಈಗಾಗಲೇ ಸರ್ಕಾರದ ಯೋಜನೆಗಳ ಕುರಿತ ಜನಜಾಗೃತಿಗೆ ಬಳಕೆಯಾಗುತ್ತಿರುವ ಅವುಗಳನ್ನು ಶೈಕ್ಷಣಿಕ ವಲಯಕ್ಕೆ ತಂದು ಪಠ್ಯಕ್ರಮದಲ್ಲಿ ಅಳವಡಿಸಬೇಕಾದ ಅಗತ್ಯವಿದೆ. ಆಧುನಿಕ ಮಾಧ್ಯಮಗಳ ದುಷ್ಪರಿಣಾಮವಾಗಿ ಮುರುಟುತ್ತಿರುವ ಮಕ್ಕಳ ಕಲ್ಪನಾ ಶಕ್ತಿಯನ್ನು ತೊಗಲುಗೊಂಬೆಯಾಟದಂಥ ಮಾಧ್ಯಮ ಮಾತ್ರ ತನ್ನ ರಂಗು- ರಂಗಿನ ಚಿತ್ತಾಕರ್ಷಕ ಗೊಂಬೆಗಳ ನೆರಳಿನಾಟದಿಂದ ಮತ್ತೆ ಚಿಗುರುವಂತೆ ಮಾಡಬಲ್ಲದು. ಈ ವೇದಿಕೆಯಲ್ಲಿ ಧಾರವಾಡದ ಪ್ರಕಾಶ ಗರೂಡ ಕೆಲವು ಪ್ರಯೋಗಗಳನ್ನು ಮಾಡಿರುತ್ತಾರೆ. ಮಕ್ಕಳಿಗಾಗಿ ತೊಗಲುಗೊಂಬೆ ರಚಿಸಿ, ಪ್ರದರ್ಶಿಸುವ ತರಬೇತಿ ಶಿಬಿರಗಳನ್ನು ಆಗಾಗ ಹಮ್ಮಿಕೊಂಡು ಕಾರ್ಯೋನ್ಮುಖರಾಗುತ್ತಿರುವುದು ಪ್ರಶಂಸನೀಯ.

——————————————————————————————————————————————
ಹೆಚ್ಚಿನ ಓದಿಗೆ :
* ಕೃಷ್ಣಯ್ಯ ಎಂ.ಎಚ್., ವಿಜಯಾ ಕೃಷ್ಣರಾವ್ ಸಿ.ಆರ್.(ಸಂ), ಕರ್ನಾಟಕ ಕಲಾ ದರ್ಶನ ಸಂ.1, ನವಕರ್ನಾಟಕ ಪ್ರಕಾಶನ, ಬೆಂಗಳೂರು-2010
* ಗೋವಿಂದರಾಜು ಟಿ, ಗೊಂಬೆರಾಮರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು-1993
* ಧೂಪದ ಎಂ.ಟಿ. ಕರ್ನಾಟಕ ಜಾನಪದ ರಂಗಭೂಮಿ, ಹಂಸಧ್ವನಿ ಪ್ರಕಾಶನ, ಬೆಂಗಳೂರು-1971
* ನಂಜುಂಡರಾವ್ ಎಂ.ಎಸ್. ಕರ್ನಾಟಕ ತೊಗಲುಗೊಂಬೆಯಾಟ, ಕರ್ನಾಟಕ ಚಿತ್ರಕಲಾ ಪರಿಷತ್ತು, ಬೆಂಗಳೂರು-2000
* ಪಾಟೀಲ ಎಸ್.ಸಿ. ಕರ್ನಾಟಕ ಜನಪದ ಚಿತ್ರಕಲೆ, ವೀರಶೈವ ಅಧ್ಯಯನ ಸಂಸ್ಥೆ, ಗದಗ-1993
* ಮಾಡ್ತ ವಿಲ್ಯಂ (ಪ್ರ.ಸಂ.) ಜಾನಪದ ಸಾಹಿತ್ಯ ದರ್ಶನ ಭಾಗ-16, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-1994
* ರಾಮನಾಥ ಎಚ್.ಕೆ. ಕನ್ನಡ ರಂಗಭೂಮಿ ವಿಕಾಸ, ಅಭಿನಯ ಪ್ರಕಾಶನ, ಮೈಸೂರು-1990
* ರಾಜೇಂದ್ರ ಡಿ.ಕೆ. ದಕ್ಷಿಣ ಕರ್ನಾಟಕ ಜನಪದ ರಂಗಭೂಮಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-1980
* Krishnaiah S.A. Karnataka Puppetry, Regional Resources Centre for Folk Performing Arts M.G.M.College, Udupi, Karnataka-1988
* Mel Helstein, Shdow Puppets and their Iconography our Cultural Fabric Puppet Thetre in India, Ministry of Education and Culture, Govt. of India, Delhi-1982
* Nanjundaiah H.V. and Iyer Anantha Krishna L.K. The Mysore Tribes and Castes, Mysore Universtiy, Mysore-1930
* Nangunda Rao M.S. Leather Puppetry in Karnataka, Karnatak Chitrakala Parishat, Bengalore-2000