ಯಾವುದೇ ಕಲೆ ಮುಖ್ಯವಾಗಿ ಮನರಂಜನ ಪ್ರಧಾನವಾದುದು. ತನ್ನ ವಿಶಿಷ್ಟ ಅಂದಗಾರಿಕೆಯಿಂದ, ಆಕರ್ಷಕ ಶೈಲಿಯಿಂದ, ಅಪೂರ್ವ ತಂತ್ರ ಪ್ರಧಾನ ಗುಣಗಳಿಂದ ಜನರನ್ನು ರಂಜಿಸುವಂತಹುದು. ಅದು ಮಾನವನ ಒಂದು ಅದ್ಬುತ ಪ್ರತಿಭೆಯ ಫಲ. ಅವರ ವಿಶೇಷ ಕೌಶಲದಿಂದ ಕಾಲ್ಪನಿಕವಾದ ಹಾಗೂ ಆಂತರಿಕವಾದ ಕಲಾ ಪ್ರತಿಭೆಯಿಂದ ಸೃಷ್ಟಿಯಾದದ್ದು. ಆನಪದ ಕಲೆಯಾಗಲಿ, ಶಿಷ್ಟಕಲೆಯಾಗಲಿ ಯಾವುದೋ ಇದರಿಂದ ಹೊರತಾದುದಲ್ಲ.

ಕಲೆ, ಒಂದು ರೀತಿಯಲ್ಲಿ ನಮ್ಮನ್ನು ನಿತ್ಯ ಬದುಕಿನ ಜಂಜಾಟದಿಂದ ಬೇರ್ಪಡಿಸಿ ಆನಂದವನ್ನುಂಟು ಮಾಡುವ ಸಾಧನ. ಅದು ನವುರಾಗಿದ್ದಷ್ಟು ಹೆಚಚು ಕೌಶಲ ಹಾಗೂ ಕುಸುರಿ ಕೆಲಸಗಳಿಂದ ಕೂಡಿದ್ದಷ್ಟು ಅದರಿಂದ ದೊರೆಯುವ ಮನರಂಜನೆ ಅತಿಶಯವಾದುದಾಗಿರುತ್ತದೆ. ಪ್ರೇಕ್ಷಕ ಅದರಿಂದ ಉತ್ತೇಜಿತನಾಗುತ್ತಾನೆ. ಯಾವುದೇ ಕಲೆ ಪ್ರೇಕ್ಷಕ ವರ್ಗವನ್ನು ಮಯಮರೆಸುವಂತಿರಬೇಕು. ಅದೇ ಆ ಒಂದು ಕಲೆಯ ಒರೆಗಲ್ಲು. ಸೌಂದರ್ಯ ಯಾವುದೇ ಕಲೆಯ ಮೊದಲ ಲಕ್ಷಣ. ಬದುಕು ಒಂದು ಕಲೆ ಎಂದು ಹೇಳುವುದುಂಟು. ಬದುಕು ಕಲೆಯಾಗಬೇಕಾದರೆ ಅದರಲ್ಲಿಯ ಎಲ್ಲ ಅಂಗಗಳೂ ಹದವರಿತು ಲಯಬದ್ಧವಾಗಿ ಕೂಡಿ ಬರಬೇಕಾಗುತ್ತದೆ.

ಜನಪದ ರಂಗ ಪ್ರಕಾರಗಳಲ್ಲಿತೊಗಲುಗೊಂಬೆ ಆಟಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಹಲವು ದೃಷ್ಟಿಯಿಂದ ಮಾನವ ರಂಗಭೂಮಿ ಹಾಗೂ ಸೂತ್ರದ ಗೊಂಬೆಯಾಟಗಳಿಗಿಂತ ಹೆಚ್ಚಿನ ವೈಶಿಷ್ಟ್ಯವನ್ನು ಹೊಂದಿದ ಕಲೆ. ಇವೆರಡರಲ್ಲಿಯೂ ಗೊಂಬೆಗಳಾಗಲಿ ಅಥವಾ ಪಾತ್ರಗಳಾಗಲಿ ತೆರೆದ ರಂಗಮಂದಿರದಲ್ಲಿ ಅಭಿನಯಿಸಬೇಕಾಗುತ್ತದೆ. ನರ್ತಿಸಬೇಕಾಗುತ್ತದೆ. ಅವು ನೇರವಾಗಿ ಪ್ರೇಕ್ಷಕರಿಗೆ ಕಾಣಿಸಿಕೊಳ್ಳುತ್ತವೆ. ಆದರೆ ತೊಗಲುಗೊಂಬೆಯಾಟದಲ್ಲಿ ಹಾಗಲ್ಲ. ಅವು ತೆರೆಯ ಹಿಂದೆಯೇ ಉಳಿದು ಪ್ರೇಕ್ಷಕರನ್ನು ಸೆರೆ ಹಿಡಿಯುವ ಕೆಲಸವನ್ನು ಮಾಡುತ್ತವೆ. ತೆರೆಯ ಹಿಂದೆಯೇ ನಿಂತುವರ್ಣಮಯ ಜಗತ್ತನ್ನು ಕುಣಿಸುವವರಾಗಲಿ ಯಾರೊಬ್ಬರೂ ಪ್ರೇಕ್ಷಕ ವರ್ಗಕ್ಕೆ ಕಾಣಿಸದಂತೆ ರಂಗದ ಒಳಗೇ ನಿಂತು ದೊಡ್ಡ ಟಿ.ವಿ.ಯೊಂದರ ಒಳಗೆ ಉಳಿದು ಕೆಲಸ ಮಾಡುವ ಯಂತ್ರಭಾಗಗಳಂತೆ ಕಾರ್ಯ ನಿರ್ವಹಿಸುತ್ತಾರೆ. ಇಡೀ ರಂಗಸಜ್ಜಿಕಯೇ ಒಂದು ದೊಡ್ಡ ಟಿ.ವಿ.ಯಂತೆ ಭಾಸವಾಗುತ್ತದೆ. ಹಾಗೆ ಕಂಡುಬರಬೇಕಾದರೆ ಅದರ ಬಹುಮುಖ್ಯ ಅಂಗಗಳಾದ ರಂಗ ಸಜ್ಜಿಕೆ ಪ್ರದರ್ಶನ ತಂತ್ರ, ಬಣ್ಣಗಾರಿಕೆ ಹಾಗೂ ಗೊಂಬೆಗಳ ರಚನೆ ಅಪೂರ್ವ ರೀತಿಯದಾಗಿರಬೇಕಾಗುತ್ತದೆ. ಇವುಗಳಲ್ಲಿ ಅಚ್ಚುಕಟ್ಟುತನ ಕಂಡುಬಂದರೆ ಇಡೀ ಪ್ರದರ್ಶನ ನೈಜ ಆವರಣನ್ನು ಕಲ್ಪಿಸಿಕೊಂಡು ಉಳಿದ ಆಟಗಳಲ್ಲಿ ಅಸಾಧ್ಯವಾದ ಎಷ್ಟೋ ಅದ್ಭುತಗಳನ್ನು ಸೃಷ್ಟಿಸಬಲ್ಲದು. ಪ್ರೇಕ್ಷಕರನ್ನು ರಂಜಿಸಬಲ್ಲುದು.

ತೊಗಲುಗೊಂಬೆ ಆಟ ಹಾಗೂ ಅದರ ಕಲಾವಿದರು ಇಲ್ಲಿ ಎಲ್ಲವೂ ವಿಶಿಷ್ಟ ಬಗೆಯದು. ಬಯಲಾಟ ಮತ್ತು ಸೂತ್ರದ ಗೊಂಬೆ ಆಟಗಳಲ್ಲಿ ಭಾಗವತರು, ವಾದ್ಯ ವಿಶೇಷದವರು, ವೇಷ ಭೂಷಣದವರು, ಬಣ್ಣದವರು, ರಂಗ ಸಜ್ಜಿಕೆ ನಿರ್ಮಿಸುವವರುಸ ಎಲ್ಲರೂಬೇರೆ ಬೇರೆ. ಇಲ್ಲಿ ಎಲ್ಲರೂ ಎಲ್ಲವೂ ಪರಾವಲಂಬಿಗಳೇ. ಆದರೆ ತೊಗಲುಗೊಂಬೆ ಆಟದವರದ್ದು ಹಾಗಲ್ಲ ಇವರು ಪೂರ್ಣ ಸ್ವಾವಲಂಬಿಗಳು. ಆಟಕ್ಕೆ ಸಂಬಂಧಿಸಿದಂತೆ ಯಾವುದಕ್ಕೂ ಯಾರನ್ನೂ ಆಶ್ರಯಿಸಿವವರಲ್ಲ. ಎಲ್ಲವನ್ನೂ ತಾವೇ ಹೊಂದಿಸಿಕೊಂಡು ಸಿದ್ಧಪಿಸಿಕೊಳ್ಳಬಲ್ಲ ಚತುರರು. ಕಲಾ ತಜ್ಞರು ಬಹುಕಲಾ ನಿಪುಣರು

ಗೊಂಬೆಗಳ ತಯಾರಿಕೆ ಮತ್ತು ಬಣ್ಣಗಾರಿಕೆ: ತೊಗಲು ಗೊಂಬೆ ಆಟದ ಹಿರಿಮೆ ಮತ್ತು ವಿಶಿಷ್ಟ್ಯ ಅದರ ಪ್ರದರ್ಶನಕ್ಕಷೇ ಸೀಮಿತವಾದುದಲ್ಲ. ಗೊಂಬೆಗಳನ್ನು ತೆರೆಯ ಹಿಂದೆ ತಂದು ತಮ್ಮ ಕೈಚಳಕವನ್ನು ತೋರಿ, ಅವುಗಳಿಗೆ ಜೀವತುಂಬಿದಂತೆ ಆಡಿಸಿ ತೋರಿಸುವುದು ಅದರ ಒಂದು ಭಾಗವಾದರೆ ಹಾಗೆ ರಂಗದ ಮೇಲೆ ತರುವ ಗೊಂಬೆಗಳನ್ನು ಸಿದ್ಧಪಡಿಸುವಲ್ಲಿ ತೋರುವ ಕೈಚಳಕ ಮತ್ತೂ ವಿಶಿಷ್ಟ ಬಗೆಯದು. ತೊಗಲುಗೊಂಬೆ ಆಟದ ಸಂಪೂರ್ಣ ಸ್ವಾಮ್ಯ ತೊಗಲು ಗೊಂಬೆ ಆಟದವರದ್ದೇ. ಈದೃಷ್ಟಿಯಿಂದ ಗೊಂಬೆರಾಯರು ಬಹುಮುಖ ಪ್ರತಿಭೆಯ ಕಲಾವಿದರು. ಅವರ ಕೈಚಳಕ ಗೊಂಬೆಗಳನ್ನು ಆಡಿಸುವುದರಲ್ಲಿ ಅಷ್ಟೇ ಅಲ್ಲ ಅವುಗಳ ಧರ್ಮವನ್ನು ಹದಗೊಳಿಸಿ, ಬೇಕಾದ ಆಕಾರಕ್ಕೆ ಕತ್ತರಿಸಿ ಕಣ್ಣಿಗೆ ಬೇಕಾದ ಆಭರಣ ವಿಶೇಷಗಳನ್ನುಅದರಲ್ಲಿಯೇ ಕೊರೆದು, ಬಣ್ಣ ತುಂಬುವವರೆಗೆ ಅದು ವ್ಯಾಪಿಸಿದೆ.

ಕರ್ನಾಟಕದಲ್ಲಿ ಈ ಗೊಂಬೆಗಳ ರಚನೆಗೆ ಮುಖ್ಯವಾಗಿ ಬಳಸುವ ಚರ್ಮ ಜಿಂಕೆಯದು. ಇದರ ಜೊತೆಗೆ ಮೇಕೆಯ ಚರ್ಮವನ್ನು ಬಳಸುವುದೂ ಉಂಟು. ಆದರೆ ಎಲ್ಲ ದೃಷ್ಟಿಯಿಂದಲೂ ಜಿಂಕೆಯ ಧರ್ಮವೆ ಇದಕ್ಕೆ ಹೆಚ್ಚು ಶ್ರೇಷ್ಠ ಎಂದು ಅವರು ಹೇಳುತ್ತಾರೆ. ಕಾರಣ ಅದು ಹೆಚ್ಚು, ಪಾರದರ್ಶಕ ಎಂಬುದು ಒಂದು ಮತ್ತೊಂದು ಸುಕ್ಕಗಟ್ಟದೆ ಅದು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಎಂಬುದು. ಇದಲ್ಲದೆ ಜಿಂಕೆಯ ಧರ್ಮದಿಂದ ಮಾಡಿದ ಗೊಂಬೆಗಳು ಹೆಚ್ಚು ಶ್ರೇಷ್ಠ ಎಂಬ ಭಾವನೆಯೂ ಒಂದು. ಅ ಕಾರಣಕ್ಕಾಗಿಯೇ ಹಿಂದೆ ಕೆಲವರು ತಮ್ಮ ಹಿರಿಯರ ಹೆಸರಿನಲ್ಲಿ ಗೊಂಬೆಗಳನ್ನು ಮಾಡಿಸಿಕೊಡುತ್ತಿದ್ದಾಗ ರಾಮಕೃಷ್ಣ ಮುಂತಾದ ದೇವತೆಗಳ ಗೊಂಬೆಗಳಿಗೆ ಜಿಂಕೆಯ ಧರ್ಮವನ್ನೇ ಆಯ್ಕೆ ಮಾಡುತ್ತಿದ್ದರು.

ಜಿಂಕೆ ಹಾಗೂ ಆಡಿನ ಚರ್ಮವೇ ಅಲ್ಲದೆ ಆಂಧ್ರದ ಹಾಗೂ ಅದರ ಗಡಿನಾಡು ಪ್ರದೇಶಗಳಲ್ಲಿ. ದೊಡ್ಡ ದೊಡ್ಡ ಗೊಂಬೆಗಳ ರಚನೆಗೆ ಎಮ್ಮೆಯ ಧರ್ಮವನ್ನು ಬಳಸುತ್ತಾರೆ. ಇಲ್ಲಿಯ ಗೊಂಬೆಗಳು ಆಳೆತ್ತರದವಾದ್ದರಿಂದ ಇಂತಹ ದೊಡ್ಡ ಪ್ರಾಣಿಗಳ ಧರ್ಮ ಇಲ್ಲಿ ಅನಿವಾರ್ಯ.

ಹೀಗೆ ತಮ್ಮ ಗೊಂಬೆಗಳ ರಚನೆಗೆ ಬೇಕಾದ ಜಿಂಕೆಯ ಧರ್ಮವನ್ನು ಅವರುಕಾಡಿನಲ್ಲಿ ಬೇಟೆಯಾಡಿ ಪಡೆಯುತ್ತಿದ್ದರು. ಹಲವೊಮ್ಮೆ ಊರಿನ ಗೌಡರುಗಳೇ ಶಿಕಾರಿ ಮಾಡಿ ಜಿಂಕೆಗಳನ್ನು ಕೊಂದು ಧರ್ಮವನ್ನುಗೊಂಬೆರಾಮರಿಗೆ ದಾನವಾಗಿ ಕೊಟ್ಟು ಅವರಿಂದ ಹಿರಿಯರ ಹೆಸರಿನಲ್ಲಿ ಗೊಂಬೆಗಳನ್ನು ಮಾಡಿಸುತ್ತಿದ್ದರು. ಕೆಲವು ಸಾರಿ ಹಳ್ಳಿ ಪಿಕ್ಕಿರಿಂದ ಚರ್ಮವನ್ನು ಕೊಂಡು ಇವರಿಗೆ ಕೊಡುತ್ತಿದ್ದುದೂ ಉಂಟು.

ತೊಗಲಿನ ಸಂಪಾದನೆ ಹೀಗಾದ ಮೇಲೆ ಅದನ್ನು ಹದಗೊಳಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ ಬಣ್ಣ ತುಂಬುವ ಮುಂದಿನ ಹಂತಗಳು ಗೊಂಬೆರಾಮರದೇ.

ತೊಗಲು ಬಹಳ ದಿನಗಳವರೆಗೆ, ಯಾವ ರೀತಿಯಿಂದಲೂ ಕೆಡದಂತೆ ಹಾಗೂ ಹೆಚ್ಚು ಪಾರದರ್ಶಕವಾಗಿ ತೋರುವಂತೆ ಮಾಡಲು ಅವರು ಅನುಸರಿಸುತ್ತಿದ್ದ ಕ್ರಮ ವಿಶಿಷ್ಟವಾದದೇ. ಧರ್ಮವನ್ನು ಮೊದಲು ನೀರಿನಲ್ಲಿ ಚನ್ನಾಗಿ ನೆನಸಿ, ಅನಂತರ ಕೂದಲೆಲ್ಲಾ ಚನ್ನಾಗಿ ಹೋಗುವಂತೆ ಉಜ್ಜಿ ಒಣಗಿಸುತ್ತಾರೆ. ಹೀಗೆ ಉಜ್ಜಿ ಕೂದಲನ್ನು ತೆಗೆದ ಧರ್ಮ ಒಳ್ಳೆಯ ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ಹಾಳೆಯಂತೆ ತೋರುತ್ತದೆ. ಅದರ ಮೇಲೆ ಕಲಾವಿದ ತನ್ನಕೈಚಳಕವನ್ನು ತೋರುತ್ತಾನೆ. ಮೂದಲು ದಬ್ಬಳದಂತಹ ಚೂಪಾದ ಸಾಧನದ ಸಹಾಯದಿಂದ ಬೇಕಾದ ಚಿತ್ರವನ್ನು ಅದರ ಮೇಲೆ ಗೆರೆ ಎಳೆದಂತೆ ಬಿಡಿಸಿಕೊಳ್ಳುತ್ತಾನೆ. ಅನಂತರ ಅದನ್ನು ಕತ್ತರಿಸಿ ಅದರಿಂದ ಬೇರ್ಪಡಿಸಿಕೊಳ್ಳುತ್ತಾನೆ.

ಹೀಗೆ ರಚನೆಗೊಂಡಂತಹ ಗೊಂಬೆಗಳಲ್ಲಿ ಎರಡು ಬಗೆಯನ್ನು ಕಾಣಬಹುದು. ಒಂದು ಒಂದೇ ತೊಗಲಿನಲ್ಲಿ ಸಮಗ್ರ ಚಿತ್ರವನ್ನು ಬಿಡಿಸುವುದು. ವ್ಯಕ್ತಿ. ರಥ, ಸಾರಥಿ, ಆಯುಧಗಳೆಲ್ಲವನ್ನು ಒಳಗೊಂಡಂತೆ ಅದರ ರಚನೆಯಾದರೆ, ಮತ್ತೊಂದು ಮರದ ಗೊಂಬೆಯ ರೀತಿ ಎಲ್ಲವೂ ಪ್ರತ್ಯೇಕವಾಗಿ ಕಂಡು ಬರುವಂತಹ ಗೊಂಬೆಗಳು. ಇಲ್ಲಿ ಅದರ ರುಂಡ, ಮುಂಡ, ಕೈಕಾಲುಗಳನ್ನು ಪ್ರತ್ಯೇಕವಾಗಿಸಿ ಅನಂತರ ಜೋಡಿಸುವುದು. ಇಲ್ಲಿ ಪ್ರತ್ಯೇಕವಾಗಿ ಕೈಕಾಲುಗಳನ್ನು ಆಡಿಸುವಂತೆ ಮಾಡಲು ಅವಕಾಶವರುತ್ತದೆ.

ಈ ಎರಡೂ ರೀತಿಯ ಗೊಂಬೆಗಳ ರಚನೆಗೆ ಬಳಸುವ ತಂತ್ರ ಮಾತ್ರ ಒಂದೇ. ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಆದ ಮಾಲೆ, ಆಯಾ ಪಾತ್ರಗಳಿಗನುಗುಣವಾಗಿ ತಮ್ಮ ಕುಸುರಿ ಕೆಲಸವನ್ನು ಆರಂಭಿಸುತ್ತಾರೆ. ಪಾತ್ರಗಳ ಕಿರೀಟ, ಆಭರಣ ಸೀರೆಯ ಅಂಚು. ರಥದ ಚಕ್ರ, ಕಣ್ಣು ಮುಂತಾದ ಭಾಗಗಳನ್ನು ಬಿಡಿಸುವಾಗ ಅವರ ಕಲಾ ಪ್ರತಿಭೆಯ ಮತ್ತೊಂದು ಮುಖ ವ್ಯಕ್ತವಾಗುತ್ತದೆ. ಆ ಚರ್ಮದ ಮೇಲೆ ಸಣ್ಣ ಮತ್ತು ದೊಡ್ಡ ರಂಧ್ರಗಳನ್ನು ಮಾಡುವುದರ ಮೂಲಕವೇ ಕಲಾವಿದ ಎಲ್ಲ ಬಗೆಯ ಆಭರಣ ವಿಶೇಷಗಳ ಕಲ್ಪನೆಯನ್ನು ಆಕರ್ಷಕವಾಗಿ ತರುತ್ತಾರೆ. ಕಿರೀಟ ಹಾಗೂ ಇತರ ಆಭರಣಗಳನ್ನು ಚಿತ್ರಿಸುವಾಗ ಕಲಾವಿದ ತನ್ನ ಸೂಕ್ಷ್ಮತೆಯನ್ನು ಮೆರೆಯುತ್ತಾನೆ. ಉಳಿದ ಭಾಗಗಳಿಗೆ ಬಣ್ಣವನ್ನು ಬಳಿದು, ಈ ದೀಪದ ಬೆಳಕಿನಲ್ಲಿ ಅವು ನಿಜವಾದ ಆಭರಣಗಳಂತೆಯೇ ತೋರುವಂತೆ ಮಾಡುತ್ತಾನೆ.

ಹೀಗೆ ತೊಗಲಿನ ಮೇಲೆ ಚಿತ್ರವನ್ನು ಕಲಾತ್ಮಕವಾಗಿ ಬಿಡಿಸಿಕೊಳ್ಳುವುದು ಕೊರೆಯುವುದು ಒಂದು ಹಂತದ ಕೆಲಸವಾದರೆ, ಹಾಗೆ ಬಿಡಿಸಿಕೊಂಡ ಭಾಗಗಳು ಆಕರ್ಷಕವಾಗಿ ಕಾಣಿಸಲು ಹಾಗೂ ಅದರ ಆಭರಣಗಳು ಅಪೂರ್ವ ರೀತಿಯಲ್ಲಿ ಎದ್ದು ಕಾಣಲು ಬಳಸುವ ಬಣ್ಣ ಹಾಗೂ ಬಣ್ಣಗಾರಿಕೆಯೂ ಅಷ್ಟೇ ಮುಖ್ಯವಾದುದು. ಇಲ್ಲಿ ಬಳಸುವ ಬಣ್ಣಗಳಾದರೂ ಸ್ವತಃ ಅವರಿಂದಲೇ ಸಿದ್ಧವಾದುವುಗಳು. ಹಿಂದೆ ಗಿಡಮೂಲಿಕೆಗಳಿಂದ ಇಂತಹಬಣ್ಣಗಳನ್ನು ತಯಾರಿಸಿಕೊಳ್ಳುತ್ತಿದ್ದರಂತೆ. ಅನಂತರ ಅಂಗಡಿಯಲ್ಲಿ ಮಾರುವ ಬಣ್ಣಗಳನ್ನು ಅವುಗಳ ಜೊತೆ ಬಳಲಸಾರಂಭಿಸಿದರು. ಅವರ ಪ್ರಕಾರ ತವೇ ಗಿಡಮೂಲಿಕೆಗಳಿಂದ ತಯಾರಿಸಿಕೊಂಡ ಬಣ್ಣಗಳು ಹೆಚ್ಚು. ಆಕರ್ಷಕ ಹಾಗೂ ಹೆಚ್ಚುಕಾಲ ಬಾಳಿಕೆ ಬರುವ ಬಣ್ಣಗಳಾಗಿದ್ದವು. ತೊಗಲು ಗೊಂಬೆಗಳಿಗೆ ಎದ್ದುಕಾಣುವಂತಹ ಬಣ್ಣಗಳನ್ನು ಹಾಕುವುದೇ ಹೆಚ್ಚು ಅದರಲ್ಲಿಯೂ ಕೆಂಪು, ಕಪ್ಪು, ಹಳದಿ ಬಣ್ಣಗಳು ವಿಶೇಷವಾಗಿ ಕಾಣಿಸಿಕೊಳ್ಳುತ್ತವೆ. ಈ ಗೊಂಬೆಗಳು ಬಣ್ಣ ಹಾಕಿದ ಮೇಲೂ ಮಸುಕಾಗಿ ಬರಿಯ ನೇರನೋಟಕ್ಕೆ ಕಂಡರೂ. ರಾತ್ರಿಯ ಹೊತ್ತಿನಲ್ಲಿ ದೀಪದ ಬೆಳಕು ಅದರ ಮೇಲೆ ಬಿದ್ದಾಗ ಅದು ಕಾಣಿಸಿಕೊಳ್ಳುವ ರೀತಿಯೇ ಬೇರೆ. ಇಲ್ಲಿಯ ಒಂದೊಂದು ಪಾತ್ರವೂ ಚಿತ್ರಕಲೆಯ ದೃಷ್ಟಿಯಿಂದ ಅಜಂತ ಎಲ್ಲೋರಗಳ ಚಿತ್ರಗಳಂತೆ ನಮ್ಮನ್ನು ಆಕರ್ಷಿಸುತ್ತವೆ.

ಆಯಾ ಪಾತ್ರಗಳಿಗೆ ಬಳಸುವ ಬಣ್ಣಗಳಲ್ಲಿಯೇ ಅವುಗಳ ರೂಪ ಸ್ವರೂಪವನ್ನು ಸ್ಪಷ್ಟಪಡಿಸುವ ಈ ಕಲಾವಿದರ ಕೈಚಳಕ ಅಪೂರ್ವ ರೀತಿಯದು. ರೌದ್ರ ಪಾತ್ರ ಸೌಮ್ಯಪಾತ್ರ, ಸ್ತ್ರೀಪಾತ್ರ, ಹಾಗೂ ಹಾಸ್ಯಪಾತ್ರಗಳ ಬಣ್ಣಗಾರಿಕೆಯಲ್ಲಿ ಅವರು ತೋರುವ ವೈಶಿಷ್ಟ್ಯ ಅವರ ಕಲಾಪ್ರತಿಭೆಗೆ ಸಾಕ್ಷಿ. ಹಾಗೆಯೇ ಅವರು ತರುವ ಆನೆ, ಕುದುರೆ, ಒಂಟೆಯಂತಹ ಪ್ರಾಣಿಗಳ ಗೊಂಬೆಗಳು ಎಂತಹವರನ್ನೂ ಆಕರ್ಷಿಸುತ್ತವೆ.

ಹೀಗೆ ಬಣ್ಣಹಾಕಿ ಸಿದ್ಧಗೊಳಿಸಿದ ಗೊಂಬೆಗಳನ್ನು ನೆರಳಿನಲ್ಲಿಯೇ ಒಣಗಿಸುತ್ತಾರೆ. ಯಾವುದೇ ಕಾರಣಕ್ಕೆ ಬಿಸಿಲಿನಲ್ಲಿ ಒಣಗಿಸಿದರೆ ಬಣ್ಣ ಹಾಳಾಗುತ್ತದೆಯಂತೆ.

ಇಷ್ಟೆಲ್ಲಾ ಆದಮೇಲೆ ಗೊಂಬೆಗಳು ನೇರವಾಗಿ ನಿಂತುಕೊಳ್ಳಲು ಅನುವಾಗುವಂತೆ ಬಿದಿರಿನ ಅಥವಾ ಲಾಳದ ಕಡ್ಡಿಯನ್ನು ಮಧ್ಯಕ್ಕೆ ಸೀಳಿ ಅದರ ಮಧ್ಯೆ ಗೊಂಬೆಯನ್ನು ಸಿಕ್ಕಿಸಿ ದಾರದಿಂದ ಅಲ್ಲಲ್ಲಿ ಹೊಲಿಗೆ ಕಾಕಿರುತ್ತಾರೆ. ಗೊಂಬೆಯನ್ನು ಹಿಡಿದು ಕುಣಿಸಲು ಅನುವಾಗುವಂತೆ ತಳಗಡೆ ಅರ್ಧ ಅಡಿ ಉದ್ದದಷ್ಟು ಕಡ್ಡಿಯನ್ನು ಬಿಟ್ಟಿರುತ್ತಾರೆ-ಇದು ಒಂದು ತೆರನಾದ ಗೊಂಬೆಗಳಿಗೆ. ಈ ರೀತಿಯ ಗೊಂಬೆಗಳು ಪ್ರಾರಂಭದಲ್ಲಿ ಇದ್ದಂತಹವು. ಇವುಗಳ ರಚನಾ ವಿಧಾನವೇ ಬೇರೆ. ಯಾವ ಜೋಡಣೆಯೂ ಇಲ್ಲದೆ ಅಗಲವಾದ ಒಂದೇ ತೊಗಲಿನಲ್ಲಿ ಎಷ್ಟು ಪಾತ್ರಗಳನ್ನಾದರೂ ಬಿಡಿಸುತ್ತಿದ್ದರು. ಅವುಗಳಿಗೆ ಕೈಕಲುಗಳ ಪ್ರತ್ಯೇಕ ಚಲನೆಗೆ ಅವಕಾಶ ವಿರುವುದಿಲ್ಲ. ಈ ರೀತಿಯ ಗೊಂಬೆಗಳನ್ನೇ ಕುಳಿತುಕೊಂಡು ಆಡಿಸುವುದು. ಅನಂತರ ಬಂದ ಗೊಂಬೆಗಳಿಗೆ ಕೈಕಾಲು ಚಲನೆ, ಮುಖವನ್ನು ಆ ಕಡೆ ಈ ಕಡೆ ತಿರುಗಿಸುವ ಚಮತ್ಕಾರಗಳಿಂದ ಕೂಡಿ ದರ್ಶನಕ್ಕೆ ಬಂದಿತು. ಸೂತ್ರದ ಗೊಂಬೆಯ ಅಂಗಾಂಗ ಚಲನೆಗೆ ಮಾಡಿಕೊಂಡತಹ ತಂತ್ರವನ್ನೇ ಇಲ್ಲಿ ಬೇರೊಂದು ರೀತಿಯಲ್ಲಿ ಮಾಡಿಕೊಳ್ಳಲಾಗಿದೆ. ಕತ್ತು, ಸೊಂಟ, ತೋಳು, ತೊಡೆಯಕೀಲು, ಮಂಡಿ ಇವುಗಳೆಲ್ಲ ಬಿಡಿ ಬಿಡಿಯಾಗಿದ್ದು, ದಾರದ ಸಹಾಯದಿಂದ ಅವುಗಳನ್ನು ಜೋಡಿಲಾಗಿದೆ. ಒಂದೊಂದನ್ನು ಪ್ರತ್ಯೇಕವಾಗಿ ಆಡಿಸುವಂತೆ ಅನುಕೂಲವಾಗಲು ಬಿದಿರುಕಡ್ಡಿಗೆ ಸೇರಿಸಲಾಗಿದೆ. ಕತ್ತು. ಎದೆಯ ಭಾಗ ಸೊಂಟ ಇವು ನೇರವಾಗಿ ನಿಲ್ಲಲು ಅನುಕೂಲವಾಗುವಂತೆ ಇವು ಮೂರನ್ನು ಸೇರಿಸಿದಂತೆ ಒಂದು ಕಡ್ಡಿಯನ್ನು ಜೋಡಿಸಲಾಗಿರುತ್ತದೆ. ಸೂತ್ರದ ಗೊಂಬೆಗಳನ್ನು ಆಡಿಸುವಂತೆ ಈ ಕಡ್ಡಿಗಳನ್ನು ಹಿಡಿದುಕೊಂಡು ಅವುಗಳಿಂದ ಆಟ ಆಡಿಸುತ್ತಾರೆ. ಚಿಕ್ಕ ಗೊಂಬೆಗಳಾದರೆ ಕುಳಿತುಕೊಂಡೇ ಈ ರೀತಿಯ ಗೊಂಬೆಗಳನ್ನು ಆಡಿಲು ಸಾಧ್ಯವಾಗುತ್ತದೆ. ಆದರೆ ಮೂಡಲಪಾಯ ಮತ್ತು ಆಂಧ್ರದ ಗಡಿಭಾಗಗಳಲ್ಲಿರುವಂತಹ ಆಳುದ್ದನೆಯ ಗೊಂಬೆಗಳಾದರೆ ನಿಂತುಕೊಂಡೇ ಆಡಿಸಬೇಕಾಗುತ್ತದೆ.

ಈ ರೀತಿಯ ಗೊಂಬೆಗಳು ಯಾವಾಗಿನಿಂದ ಬಳಕೆಗೆ ಬಂದವು ಎಂಬುದಕ್ಕೆ ಯಾವ ಸ್ಪಷ್ಟ ಆಧಾರವೂ ದೊರೆಯುವುದಿಲ್ಲ. ಪ್ರಾರಂಭದಲ್ಲಿ ಈ ರೀತಿಯ ಗೊಂಬೆಗಳು ಇರಲಿಲ್ಲ ಎಂಬುದು ಸ್ಪಷ್ಟ. ಏಕೆಂದರೆ ಈ ರೀತಿಯ ಕೈಕಾಲು ಚಲನೆಯ ಗೊಂಬೆಗಳು ಬಳಕೆಯಲ್ಲಿದ್ದ ಮೇಲೆ ಆ ಬಗೆಯ ಗೊಂಬೆಗಳ ಅವಶ್ಯಕತೆ ಅಷ್ಟಾಗಿ ಕಂಡು ಬರುವುದಿಲ್ಲ. ಬಹುಶಃ ಸೂತ್ರದ ಗೊಂಬೆಯಿಂದ ಪ್ರಭಾವಿತವಾಗಿ ತೊಗಲು ಗೊಂಬೆಯಲ್ಲೂ ಅಂತಹುದೇ ತಂತ್ರವೆಲ್ಲ ಅಲ್ಲಿಯದರಂತೆಯೇ ಇರುವುದರಿಂದ ಈ ಅಂಶ ಸೂತ್ರಕ್ಕೆ ದೂರವೆನಿಸಲಾರದು. ಆದರೆ ಇದಾವುದಕ್ಕೂ ಆಧಾರಗಳು ದೊರೆಯುವುದಿಲ್ಲ.

ಈ ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡುವುದೂ ಒಂದು ಕಲೆಯೇ ಆಗಿದೆ. ಅವುಗಳು ಸುಕ್ಕು ಬಾರದಂತೆ, ಒಣಗಿ ಒರಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಾಗುವುದರಿಂದ ಅವುಗಳ ಮೃದುತ್ವ ಮಾಯವಾಗಿ ಗೊಂಬೆಗಳು ತಮ್ಮ ಸೂಕ್ಷ್ಮತೆಯನ್ನುಕಳೆದುಕೊಳ್ಳುತ್ತವೆ. ಅದಕ್ಕಾಗಿ ಅವರು ಗಿಡಮೂಲಿಕೆಗಳಿಂದ ತಯಾರಿಸಿದ ಒಂದು ಬಗೆಯ ದ್ರವನ್ನು ಅವುಗಳಿಗೆ ಆಗಿಂದಾಗ್ಗೆ ಬಳಿಯುತ್ತಿರುತ್ತಾರೆ. ಈ ಎಲ್ಲ ಸಿದ್ದೌಷದವೂ ಅವರಿಂದಲೇ ತಯಾರಾದದ್ದು. ಹೀಗೆ ವುಗಳನ್ನು ಸಂರಕ್ಷಿಸುವುದರಿಂದ ಅವುಗಳು ತಮ್ಮ ಮುಲರೂಪವನ್ನು ಉಳಿಸಿಕೊಂಡು ನೂರುವರ್ಷಕ್ಕೂ ಹೆಚ್ಚು ಕಾಲ ಬಾಳಿಕೆ ಬರಬಲ್ಲವು. ಆಟ ಆಡಿಸಿಯಾದ ಮೇಲೆ ಗೊಂಬೆಗಳನ್ನೆಲ್ಲ ಅಚ್ಚುಕಟ್ಟಾಗಿಇಡಲು ಅದಕ್ಕಂದೇ ಮಾಡಿದ ಬಿದಿರು ಪೆಟ್ಟಿಗೆಯಲ್ಲಿ ಜೋಡಿಸಿರುತ್ತಾರೆ. ಇದಕ್ಕೆ ಅವರು ‘ಬಾವಲಿ’ ಎಂದು ಕರೆಯುತ್ತಾರೆ. ಇದು ಅವರಿಗೆ ಪೂಜ್ಯ ವಸ್ತುವೇ.

ರಂಗಸಜ್ಜಿಕೆ: ತೊಗಲುಗೊಂಬೆ ಆಟದ ರಂಗಸಜ್ಜಿಕೆ ಎರಡು ಬಗೆಯಲ್ಲಿ ಕಂಡು ಬರುತ್ತವೆ. ಒಂದು ಚಿಕ್ಕಗೊಂಬೆಗಳಿಗೆ ಸಂಬಂಧಿಸಿದ್ದು, ಮತ್ತೊಂದು ದೊಡ್ಡ ಗೊಂಬೆಗಳಿಗೆ ಸಂಬಂಧಿಸಿದ್ದು.

ಗೊಂಬೆಯಾಟದ ರಂಗಮಂದಿರಕ್ಕೆ ಬೇಕಾದುದು-ನೆಡವುದಕ್ಕೆ ನಾಲ್ಕುಗಳು, ಮೇಲ್ಭಾಗದಲ್ಲಿ ಕಟ್ಟುವುದಕ್ಕೆ ನಾಲ್ಕುಗಳು, ಮೇಲ್ಬಾಗ ಮತ್ತು ಗೊಂಬೆಗಳನ್ನು ತೋರಿಸುವ ಭಾಗವೊಂದನ್ನುಳಿದು ಮಿಕ್ಕ ಮೂರು ಕಡೆಗಳಲ್ಲಿ ಮರೆಮಾಡಲು ಬೇಕಾಗುವ ಚಾಪೆ ತಡಿ ಅಥವಾ ಸೋಗೆಗರಿ. ಗೊಂಬೆಗಳ ಪ್ರದರ್ಶನದ ಭಾಗಕ್ಕೆ ಬೇಕಾಗುವ ಬಿಳಿಯ ಪಂಚೆ ಹಾಗೂ ಕರಿಯ ಕಂಬಳಿ. ಇದಿಷ್ಟಿದ್ದರೆ ತೊಗಲುಗೊಂಬೆಯಾಟದ ರಂಗಮಂದಿರ ಸಿದ್ಧಗೊಳ್ಳುತ್ತದೆ. ಜೊತೆಗೆ ಶೋಭೆ ಮತ್ತು ಶುಭದ ಸಂಕೇತವೆಂಬಂತೆ ಮಾವಿನ ಸೊಪ್ಪಿನ ತೋರಣವನ್ನು ಕಟ್ಟುವ ವಾಡಿಕೆಯುಂಟು.

ಕುಳಿತುಕೊಂಡು ಕುಣಿಸುವ ಚಿಕ್ಕದಾದ ಗೊಂಬೆಗಳ ರಂಗಮಂದಿರ ಸಾಮಾನ್ಯವಾಗಿ ಆರು ಅಡಿ ಎತ್ತರವಿದ್ದು ಎಂಟು ಅಡಿಯಷ್ಟು ಚಚ್ಚೌಕವಾಗಿರುತ್ತದೆ. ರಂಗದ ಮುಂಭಾಗದಲ್ಲಿ ಕೆಳಗಡೆ ೨ ೧/೨ ಅಡಿಯಷ್ಟು ಕರಿಯ ಕಂಬಳಿಯನ್ನು ಕಟ್ಟುತ್ತಾರೆ. ಮೇಲ್ಭಾಗದಲ್ಲಿ ಇನ್ನುಳಿದ ೩ ೧/೨ ಅಡಿಷ್ಟು ಜಾಗಕ್ಕೆ ಅಪ್ಪಟ ಬಿಳಿಯ ಬಣ್ಣದ ಪಂಚೆಯನ್ನು ಕಟ್ಟುತ್ತಾರೆ. ಗೊಂಬೆಗಳನ್ನು ಅದರ ಹಿಂಬದಿಯಲ್ಲಿಯೇ ಪ್ರದರ್ಶಿಸುವುದು. ಗೊಂಬೆಗಳನ್ನು ಆಡಿಸುವವರು ಒಳಭಾಗದಲ್ಲಿಯೇ  ಕುಳಿತಿದ್ದರೂ ಈ ಕಂಬಳಿಯಿಂದಾಗಿ ಅವರ‍್ಯಾರೂ ಪ್ರೇಕ್ಷಕರ ಕಣ್ಣಿಗೆ ಬೀಳುವುದಿಲ್ಲ. ಒಳಗಡೆ ಇವರ ಹಿಂಭಾಗದಲ್ಲಿ ಒಂದು ದೀಪವನ್ನು ತೂಗುಬಿಟ್ಟಿರುತ್ತಾರೆ. ಇದರ ಬೆಳಕು ತೊಗಲುಗೊಂಬೆಗಳ ಮೇಲೆ ಬಿದ್ದು ಆಗೊಂಬೆಗಳ ಪ್ರತಿಬಿಂಬ ಪಂಚೆಯ ಮೇಲೆ ಅದ್ಭುತವಗಿ ಕಾಣಿಸಿಕೊಳ್ಳುತ್ತದೆ. ನಿಜವಾದ ತೊಗಲು ಗೊಂಬೆಯ ಮಾಯಾಲೋಕ ಸೃಷ್ಟಿಗೊಳ್ಳುವುದು ಇಲ್ಲಿಯೇ. ಗೊಂಬೆಗಳ ಅಪೂರ್ವ ವರ್ಣ ಆ ಬೆಳಕಿನಲ್ಲಿ ಉಜ್ವಲವಾಗಿ ಕಾಣಿಸಿಕೊಳ್ಳುತ್ತದೆ.

ತೊಗಲು ಗೊಂಬೆಗಳ ಕಟ್ಟು, ಅವುಗಳನ್ನು ಆಡಿಸುವವರು, ವಾದ್ಯವೃಂದದವರು, ಹಾಡುವವರು. ಮಕ್ಕಳು-ಮರಿ ಇಡೀ ತೊಗಲು ಗೊಂಬೆ ಯಾಟಗಾರರ ಸಂಸಾರವೇ ಈ ರಂಗಮಂದಿರಲ್ಲಿ ಅಡಗಿ ಕೊಂಡಿರುತ್ತದೆ. ಆದರೆ ಹೊರಗೆ ಕುಳಿತು ನೋಡುವ ಪ್ರೇಕ್ಷಕರಿಗೆ ಮಾತ್ರ ಗೊಂಬೆಗಳಲ್ಲದೆ ಬೇರೇನೂ ಕಾಣುವುದಿಲ್ಲ. ಕರಿಯ ಕಂಬಳಿ ಅದೆಲ್ಲವನ್ನು ಮರೆಮಾಡಿ ಬಿಟ್ಟಿರುತ್ತದೆ. ಈ ರೀತಿಯ ರಂಗ ಮಂದಿರ, ಚಿಕ್ಕದಾದ ಗೊಂಬೆಗಳು, ಹೆಚ್ಚು ಪ್ರಚಲಿತವಾಗಿರುವ ತೆಂಕಲಪಾಯ ಮತ್ತು ಬಡಗಲಪಾಯಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.

ಚಿಕ್ಕಗೊಂಬೆಗಳ ರಂಗಮಂದಿರ ಈ ತೆರನಾದುದಾದರೆ ಆಳೆತ್ತರದ ಗೊಂಬೆಗಳ ರಂಗಮಂದಿರದ ರಚನೆಯೇ ಬೇರೆ. ಅದು ಬಯಲು ಸೀಮೆಯ ಬಯಲಾಟದ ರಂಗಮಂದಿರವನ್ನೇ ಹೆಚ್ಚು. ಕಡಿಮೆ ಹೋಲುವಂತಿರುತ್ತದೆ. ಇಲ್ಲಿಯ ಗೊಂಬೆಗಳು ಹಾಗೆಯೇ ವೈಭವಪೂರಿತವಾಗಿದ್ದು ಕೆಲವು ಗೊಂಬೆಗಳು ಆಕಾರದಲ್ಲಿ ಮನುಷ್ಯಗಿಂತಲೂ ದೊಡ್ಡದಾಗಿರುತ್ತವೆ. ಇಂತಹ ಗೊಂಬೆಗಳನ್ನು ಕುಣಿಸಬೇಕಾದರೆ ಕಲಾವಿದ ನಿಂತುಕೊಳ್ಳುತ್ತಾನೆ. ನಿಂತುಕೊಂಡೇ ಸೂತ್ರದ ಗೊಂಬೆಯನ್ನು ಆಡಿಸುವಂತೆ ಕಡ್ಡಿಯ ಸಹಾಯದಿಂದ ಇದನ್ನು ಆಡಿಸುತ್ತಾನೆ. ಪಾತ್ರಗಳನ್ನು ಕುಣಿಸುವಾಗ ಜೊತೆಯಲ್ಲಿ ತಾನೂ ಕುಣಿಯುತ್ತಾನೆ. ಆಗ ಬಯಲಾಟದ ಪಾತ್ರಗಳಂತೆ ಕಾಲಿಗೆ ಗೆಜ್ಜೆಯನ್ನು ಈತ ಕಟ್ಟಿಕೊಂಡಿರುತ್ತಾನೆ. ಕುಣಿತವೆಂದ ಕೂಡಲೆ ಕೆಳಭಾಗದಲ್ಲಿ ಹಲಗೆಗಳನ್ನು ಹಾಸಿ ಕಟ್ಟಲನ್ನು ನಿರ್ಮಿಸುವುದು ವಾಡಿಕೆ. ಇಷಟೆಲ್ಲ ಆದ ಮೇಲೆ ಆಡಿಸುವ ಭಾಗವೊಂದನ್ನು ಬಿಟ್ಟು, ಉಳಿದ ಮೂರು ಕಡೆಗಳನ್ನು ಸೊಗೆಯ ಗರಿಯಿಂದಲೋ ಚಾಪೆ ಅಥವಾ ತಡಿಕೆಯಿಂದಲೋ ಮರೆ ಮಾಡುತ್ತಾರೆ. ಮುಂಭಾಗವನ್ನು ಬಿಳಿಯ ಪಂಚೆಯಿಂದ ಮುಚ್ಚುತ್ತಾರೆ. ಇದನ್ನು ಅಳವಡಿಸಲು ಜಾಲಿಯ ಮುಳ್ಳನ್ನು ಬಳಸುತ್ತಾರೆ. ಈ ಪಂಚೆ ಸಾಮಾನ್ಯವಾಗಿ ಎರವಲು ಪಡೆದು ತಂದದ್ದೇ ಆಗಿರುತ್ತದೆ. ಪ್ರದರ್ಶನವನ್ನು ತೋರುವುದು. ಈ ಭಾಗದಿಂದಲೇ ಇದಕ್ಕೆ ಮಾವಿನ ಸೊಪ್ಪಿನ ತೋರಣ ಅಲಂಕಾರಕ್ಕೆ ಇರುತ್ತದೆ. ಉಳಿದೆಲ್ಲ ತಂತ್ರವೂ ಕುಳಿತುಕೊಂಡು ಆಡಿಸುವ ಗೊಂಬೆಗಳ ರಂಗಮಂದಿರದಂತೆಯೇ.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹಿಮ್ಮೇಳದವರು ರಂಗಮಂದಿರದ ಹೊರಗೆ ಮುಂಭಾಗದ ಒಂದುಪಕ್ಕದಲ್ಲಿ ಕುಳಿತುಕೊಳ್ಳುವುದೂ ಉಂಟು. ಗೊಂಬೆಗಳನ್ನು ಕುಣಿಸುವವರು ಮಾತ್ರ ರಂಗಮಂದಿರದ ಒಳಗಡೆ ಇರುತ್ತಾರೆ. ಆದರೆ ದಕ್ಷಿಣ ಕರ್ನಾಟಕದ ಭಾಗದಲ್ಲಿ ಎಲ್ಲರೂ ರಂಗದ ಒಳಭಾಗದಲ್ಲಿಯೇ ಸೇರಿಕೊಂಡಿರುತ್ತಾರೆ.

ಪ್ರದರ್ಶನ ತಂತ್ರ: ತೊಗಲುಗೊಂಬೆ ಆಟದ ಪೂರ್ಣ ಯಶಸ್ಸು ಅದನ್ನು ಪ್ರದರ್ಶಿಸುವ ತಂತ್ರದಲ್ಲಿ ಅಡಗಿರುತ್ತದೆ ಕುಣಿಸುವವರ ಕೈ ಚಳಕದಲ್ಲಿರುತ್ತದೆ. ಶಿಸ್ತು ಯಾವುದೇ ಕಲೆಯ ಯಶಸ್ಸಿನ ಗುಟ್ಟು. ಯಾವುದೇ ಕಲಾವಿದ ಅಂತಹ ಶಿಸ್ತನ್ನು ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದರೆ ಅದಕ್ಕೆ ಸೋಲೆಂಬುದಿರುವುದಿಲ್ಲ.

ಅಚ್ಚುಕಟ್ಟಾದ ರಂಗಸಜ್ಜಿಕೆಯಲ್ಲಿ  ಗೊಂಬೆಗಳನ್ನು ಪ್ರದರ್ಶಿಸುವಾಗ ಕಲಾವಿದ ಹಲವು ಸೂಕ್ಷ್ಮಗಳನ್ನು ಮೆರೆಯೇಕಾಗುತ್ತದೆ. ಚಿಕ್ಕಗೊಂಬೆಗಳ ಪ್ರದರ್ಶನಕ್ಕಾಗಲೀ ದೊಡ್ಡಗೊಂಬೆಗಳ ಪ್ರದರ್ಶನಕ್ಕಾಗಲೀ ಇದು ಅನಿವಾರ್ಯ. ದೊಡ್ಡ ಗೊಂಬೆಗಳ ಪ್ರದರ್ಶನಕ್ಕೆ ಹೋಲಿಸಿದರೆ ಚಿಕ್ಕಗೊಂಬೆಗಳ ಪ್ರದರ್ಶನ ಹೆಚ್ಚುಪರಿಣಾಮಕಾರಿಯಾಗಿ ಕಲಾತ್ಮಕವಾಗಿ ಕಂಡು ಬರುತ್ತದೆ. ಅಂದರೆ, ದೊಡ್ಡ ಗೊಂಬೆಗಳ ಪ್ರದರ್ಶನ ಆಕರ್ಷಕವಾಗಿರುವುದಿಲ್ಲವಂದಲ್ಲ. ಆದರೆ ಅದರಲ್ಲಿ ಸ್ವಾಭಾವಿಕವಾಗಿಯೇ ಕಂಡು ಬರುವ ಒಂದುದೋಷವೆಂದರೆ; ಗೊಂಬೆಗಳ ಜೊತೆಯಲ್ಲಿ ಅವುಗಳನ್ನು ಕುಣಿಸುವವರೂ, ಹಾಗೂ ಒಳಗಿರುವ ಎಲ್ಲಾ ವ್ಯಕ್ತಿಗಳೂ, ಅಲ್ಲಿಯ ಚಟುವಟಿಕೆಗಳೂ ಪ್ರೇಕ್ಷಕರಿಗೆ ಕಾಣುತ್ತವೆ. ಕೆಲವೊಂದು ಸಂದರ್ಭದಲ್ಲಿ ಇದು ಆಕಲೆಯ ಆಸ್ವಾದನೆಗೆ ಅಡ್ಡಿಯಾಗಿ ತೋರಬಹುದು. ಆದರೆ ಹಾಗಾಗದಂತೆ ಸಂಪೂರ್ಣವಾಗಿ ಗೊಂಬೆಗಳಲ್ಲಿಯೇ ಪ್ರೇಕ್ಷಕರನ್ನು ತಲ್ಲೀನಗೊಳಿಸಬೇಕಾದರೆ ಅಲ್ಲಿಯ ಕಲಾವಿದ ಚಿಕ್ಕಗೊಂಬೆಗಳ ಕಲಾವಿದಗಿಂತ ಹೆಚ್ಚು ಶ್ರಮ ಪಡಬೇಕಾಗುತ್ತದೆ, ತಂತ್ರವನ್ನು ಬಳಸಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಬಹಳ ಕಷ್ಟದ ಕೆಲಸವೇ. ಎಲ್ಲಿಯೂ ಅಡೆ-ತಡೆಯಿಲ್ಲದಂತೆ ಒಳಗಿನ ಯಾವ ಗೊಂದಲವೂ ಪ್ರೇಕ್ಷಕನ ಬಳಸುವ ಬಿಳಿಯ ಪರದೆ ಹಾಗೂ ದೀಪದ ವ್ಯವಸ್ಥೆಯ ಕಡೆಗೆ ಹೆಚ್ಚು ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಚಿಕ್ಕಗೊಂಬೆಯಾಟಕ್ಕೂ ಇವೆರಡರ ಎಚ್ಚರ ಇರಬೇಕಾಗುತ್ತದೆಯಾದರೂ ದೊಡ್ಡ ಗೊಂಬೆ ಆಟದವರಿಗೆ ಇದು ಇನ್ನೂ ಹೆಚ್ಚು.

ತೊಗಲುಗೊಂಬೆ ಪ್ರದರ್ಶನದಲ್ಲಿ ಎಲ್ಲ ಕಲಾವಿದರೂಮುಖ್ಯವೇ. ಗೊಂಬೆಗಳನ್ನು ಹಿಡಿದು ಕುಣಿಸುವ ಮುಖ್ಯ ಕಲಾವಿದರಷ್ಟೇ ಆ ದಿನದ ಪ್ರಸಂಗಕ್ಕನುಗುನವಾಗಿ ಗೊಂಬೆಗಳನ್ನು ಕ್ರಮವಾಗಿ ಜೋಡಿಸಿಕೊಂಡು, ಅಷ್ಟೇ ಚುರುಕಿನಿಂದ ಕುಣಿಸುವವನಿಗೆ ಅದನ್ನು ಎತ್ತಿ ಕೊಡುವ ಕಲಾವಿದನೂ ಮುಖ್ಯನಾಗುತ್ತಾನೆ. ಇಲ್ಲಿ ಒಂದು ಕೈ ಸ್ವಲ್ಪ ತಡವರಿಸಿದರೆ ಎಲ್ಲವೂ ತಡವರಿಸಬೇಕಾಗುತ್ತದೆ.

ತೆರೆಮರೆಯಲ್ಲಿ ನಿಂತು ನಿರ್ಜೀವ ಗೊಂಬೆಗಳಿಗೆ ಜೀವತುಂಬಿದಂತೆ ಪ್ರದರ್ಶಿಸುವಲ್ಲಿ ಕಲಾವಿದ ತೋರುವ ತಂತ್ರ ಅಪೂರ್ವ ರೀತಿಯದು. ಒಂದೇ ಗೊಂಬೆ ರಂಗದ ಮೇಲೆ ಬಂದಾಗ ಹಾಗೂಒಂದಕ್ಕಿಂತ ಹೆಚ್ಚು ಗೊಂಬೆಗಳು ಬಂದಾಗ ಕಲಾವಿದ ಬಳಸುವ ತಂತ್ರ ವಿಶಿಷ್ಟ ಬಗೆಯದು. ಸಂಭಾಷಣೆ, ಯುದ್ಧ, ಸಾವು, ನೃತ್ಯ ಮುಂತಾದ ಸಂದರ್ಭಗಳಲ್ಲಿ ಕಲಾವಿದ ತೋರುವ ಕೈ ಚಳಕ ಆಕರ್ಷಕವಾದುದು. ಪರಸ್ಪ ಬಾಣಗಳ ಪ್ರಯೋಗವಂತೂ ವಿಶಿಷ್ಟ ರೀತಿಯದಾಗಿರುತ್ತದೆ. ಪಾತ್ರಗಳು ಆ ಮುಖ ಈ ಮುಖ ಮಾಡಿ ಮಾತನಾಡುವ ಸಂದರ್ಭಗಳಲ್ಲಿ ಅವುಗಳ ಚಲನೆ ಅತ್ಯಂತ ಚುರುಕವಾಗಿರಬೇಕಾಗುತ್ತದೆ. ಕಲಾವಿದ ಆ ಕಡೆ ಗಮನ ಕೊಡದೆ ಹೋದರೆ ಅದರ ನೆರಳು ಪರದೆಯ ಮೇಲೆ ಬಿದ್ದು, ಸೂಕ್ಷ್ಮವಾಗಿ ನೊಡುವವರಿಗೆ ಅಭಾಸವೆನಿಸಬಹುದು. ಆದರೆ ನಿಜವಾದ ಕಲಾವಿದ ಹಾಗಾಗದಂತೆ ನೋಡಿಕೊಳ್ಳುತ್ತಾನೆ. ತೊಗಲುಗೊಂಬೆಯಾಟದ ವೈಶಿಷ್ಟ್ಯ ಹಾಗೂ ಯಶಸ್ಸು ನಿಂತಿರುವುದು ಇಂತಹವುಗಳಿಂದಲೇ.

ಯಾವುದೇ ಒಂದು ಜನಪದ ಕಲೆ ಜನಪದರ ದೃಷ್ಟಿಯಿಂದಲೇ ಬೇರೆಯಾಗಿ ನಿಲ್ಲುತ್ತದೆ, ಶಿಷ್ಟರ ದೃಷ್ಟಿಯಿಂದಲೇ ಬೇರೆಯಾಗಿ ಉಳಿಯುತ್ತದೆ. ಅದರ ಕೆಲವೊಂದು ಅದ್ಭುತಗಳು ಅಪರೂಪಕ್ಕೆ ನೋಡುವ ಶಿಷ್ಟವರ್ಗಕ್ಕೆ ಕೌತಕವಾಗಿ ಹೆಚ್ಚು ಆಕರ್ಷಕವಾಗಿ ತೋರಬಹುದಾದರೂ; ಕೇವಲ ಮನರಂಜನೆಯ ದೃಷ್ಟಿಯಿಂದಷೇ ನೋಡುವಹಲವರಿಗೆ ಹಿಡಿಸದೇ ಹೋಗಬಹುದು. ಬಹುಶಃ ಇಲ್ಲಿ ಅಂತಹವರ ಅಸ್ಪಾದನೆಗೆ ಅಡ್ಡಿಯಾಗುವ ಅಂಶಗಳೆಂದರೆ ಅಲ್ಲಿಯ;

-ರಂಗತಂತ್ರದಲ್ಲಿ ಕಂಡು ಬರುವ ದೋಷಗಳು
-ಹಾಡುಗಾರಿಕೆ
-ವಾದ್ಯಗಳ ಬಳಕೆ
ಸಂಭಾಷಣೆಯಲ್ಲಿ ಕಾಣಿಸಿಕೊಳ್ಳುವ ದೋಷಗಳು.

ಆದರೆ ಜನಪದರ ದೃಷ್ಟಿಯಿಂದ ಇವಾವು ಎದ್ದುಕಾಣುವ ದೋಷವಲ್ಲ. ಅವರಿಂದಲೇ ಅವರಿಗಾಗಿಯೇ ಹುಟ್ಟಿಕೊಂ ಈ ಕಲೆಗಳು ಅವರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಒಬ್ಬ ಹೊರಗಿನವನಾಗಿ ಸಂಶೋಧನ ದೃಷ್ಟಿಯಿಂದ, ತಾಂತ್ರಿಕ ದೃಷ್ಟಿಯಿಂದ ಪರಿಶೀಲಿಸಲು ಹೊರಟಾಗ ಇಂತಹ ಕೊರತೆಗಳು ಕಾಣಿಸಿಕೊಳ್ಳುತ್ತವೆ. ಇಷ್ಟಾದರೂ ತೊಗಲುಗೊಂಬೆ ಆಟದ ಕಲಾವಿದರು ಗೊಂಬೆಗಳನ್ನು ಕುಣಿಸುವಲ್ಲಿ ತೋರುವ ಕೈಚಳಕ ಎಂತಹವರನ್ನೂ ಬೆರಗುಗೊಳಿಸುವಂತಹುದು. ಆ ಕಾರಣಕ್ಕಾಗಿ ತೊಗಲು ಗೊಂಬೆಯಾಟ ಇಂದಿಗೂ ಒಂದು ಜನಪ್ರಿಯ ಕಲೆಯಾಗಿ ಜೀವಂತವಾಗಿ ಉಳಿದುಬರಲು ಸಾಧ್ಯವಾಗಿದೆ.

* * *