ಒಂದು ನಾಡಿನ ಇಲ್ಲವೆ ಜನಾಂಗದ ಸಂಸ್ಕೃತಿಯ ಅವಿಭಾಜ್ಯ ಅಂಗಗಳೆನಿಸಿದ ವಿವಿಧ ಬಗೆಯ ಕಲೆಗಳ ಮತ್ತು ಕಲಾಮಾಧ್ಯಮಗಳ ಮೂಲ-ಚೂಲಗಳನ್ನು ಅವುಗಳ ಪ್ರಾಚೀನತೆ-ಪರಂಪರೆಗಳನ್ನು ಗುರುತಿಸುವಲ್ಲಿ-೧.ಭೂ ಅಗೆತಗಳಲ್ಲಿ ದೊರೆತ ಅವಶೇಷಗಳು ೨. ಶಾಸನ, ಸಾಹಿತ್ಯ, ಇತಿಹಾಸ, ಬಖೈರ, ಕೈಫಿಯತ್ತು ಇತ್ಯಾದಿ ಲಿಖಿತ ದಾಖಲೆಗಳು ೩. ವಾಸ್ತು ಮತ್ತು ಮೂರ್ತಿಶಿಲ್ಪಗಳು ಮತ್ತು ೪. ಜನಪದರಲ್ಲಿ ಈಗಲೂ ಕಂಡು-ಕೇಳಿಬರುವ ಮತ್ತು ರೂಢಿಯಲ್ಲಿರುವ ಐತಿಹ್ಯ, ನಂಬಿಕೆ, ಗಾದೆ ಆಚರಣೆ ಮತ್ತು ವಿವಿಧ ಬಗೆಯ ಮನರಂಜನೆಯ ಆಟಗಳು ನೆರವು ನೀಡಬಲ್ಲವರು. ಜನಪದ ಕಲೆಗಳಿಗೆ ಸಂಬಂಧಿಸಿದಂತೆ ಕೊನೆಯದು ಹೆಚ್ಚು ಸಹಾಯಕಾರಿ.

ಆದರೆ ಜನಪದರು ಶಿಷ್ಟರಂತೆ ತಮ್ಮ ಕಲೆಗಳ ಬಗ್ಗೆ ಬರೆದಿಡಲಿಲ್ಲ. ಏಕೆಂದರೆ ಅವರಿಗೆ ಬರೆಯಲು ಬರುತ್ತಿರಲಿಲ್ಲ. ಪ್ರದರ್ಶನ ಪ್ರಧಾನವಾದ ಕಲೆಗಳು ಜನಪದರಲ್ಲಿ ಹೇಳಿಕೆ ಕೇಳಿಕೆ ನೋಡುವಿಕೆಗಳ ಮೂಲಕವೆ. ಒಬ್ಬನಿಂದ ಮತ್ತೊಬ್ಬನಿಗೆ. ತಂದೆಯಿಂದ ಮಗನಿಗೆ, ಮೇಳದಿಂದ ಮೇಲಕ್ಕೆ ಮನೆತನದಿಂದ ಮನೆತನಕ್ಕೆ ಅನುವಂಶಿಕವಾಗಿಯೊ ವೃತ್ತಿರೂಪದಲ್ಲೋ ಹವ್ಯಾಸವಾಗಿಯೋ ಮೂಮದುವರಿದುಕೊಂಡು ಬಂದವು. ಹೀಗೆ ಮುಂದುವರಿದುಕೊಂಡು ಬರುವಾಗ ಜನಪದ ಕಲೆಗಳ ಬಗ್ಗೆ ಆಸ್ತಕ್ತಿಯಿದ್ದ ಕೆಲವರು ಶಿಷ್ಯರು ತಾವಾಗಿಯೊ ಅಥವಾ ಜನಪದರು ಅಪೇಕ್ಷಿಸಿದರೆಂದೂ ಆ ಕಲೆಗಳಲ್ಲಿ ತಾವೂ ಒಂದಿಷ್ಟು ಕೈಯಾಡಿಸಿದರು. ಸ್ವತಃ ಮುಗ್ಧ ಜನಪದರೇ ಯಾವ ಯಾವುದೊ ಪ್ರಭಾವಗಳಿಗೆ ಒಳಗಾಗಿ ತಮ್ಮ ಕಲೆಗಳಲ್ಲಿ  ಮತ್ತು ಕಲಾಪ್ರಕಾರಗಳಲ್ಲಿ ಅಷ್ಟಿಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತ, ಹೊಸದನ್ನು ಹೊಂದಿಸಿಕೊಳ್ಳುತ್ತ ಬಂದರು. ಹೀಗೆ ಸರಳತೆಯಿಂದ ಸಂಕೀರ್ಣದತ್ತ ಜನಪದ ಕಲೆಗಳು ಸಾಗುತ್ತಿರುವವಾದರೂ ಅವುಗಳಲ್ಲಿಯ ಮೂಲ ಸೊಗಡು ಆ ಜವಾರಿತನ ಅವರಿಗೇ ತಿಳಿಯದಂತೆ ಕೆಲವು ಆಚರಣೆಗಳ ರೂಪದಲ್ಲಿ ಕೆಲಮಟ್ಟಿಗಾದರೂ ಉಳಿದುಕೊಂಡು ಬಂದಿದೆ. ಅಂತಹ ಆಚರಣೆಗಲ ವಿಶ್ಲೇಷಣೆಯಿಂದ ಜನಪದ ಕಲೆಗಳ ಮೂಲ ಮತ್ತು ಪ್ರಾಚೀನತೆಯನ್ನು ತಿಳಿದುಕೊಳ್ಳಲು ಸಾಧ್ಯವಿದೆ.

ಇಷ್ಟು ಹಿನ್ನೆಲೆಯೊಂದಿಗೆ ಜನಪದ ರಂಗಭೂಮಿಯ ಕಲಾಪ್ರಕಾರಗಳಲ್ಲಿ ಒಂದಾದ ತೊಗಲು ಗೊಂಬೆಯಾಟದ ಪರಿಶೀಲನೆಗೆ ತೊಡಗಬಹುದು.

ತೊಗಲು ಗೊಂಬೆಯಾಟ ಜನಪದ ವೃತ್ತಿರಂಗಭೂಮಿಯ ಒಂದು ಪ್ರಕಾರ. ಇದನ್ನು ಒಂದು ಜನಾಂಗದವರು-ಕಿಳ್ಳಿಕೇತರು -ತಮ್ಮ ಒಂದು ವೃತ್ತಿಯಾಗಿ ಬೆಳಿಸಿಕೊಂಡು ಬಂದಿದ್ದಾರೆ. ಛಾಯಾಮೂಲವಾದ ಈ ಕಲಾಪ್ರಕಾರದಲ್ಲಿ ಉಳಿದವುಗಳಂತೆ ಪ್ರೇಕ್ಷಕರಿಗೆ ರಂಗಭೂಮಿಯ ಮೇಲೆ ವ್ಯಕ್ತಿಗಳು ಕಂಡು ಬರದೆ ಪರದೆಯ ಮೇಲೆ ಗೊಂಬೆಗಳ ನೆರಳು ಮಾತ್ರ ಕಂಡು ಬರುತ್ತಿದ್ದು ಅವುಗಳನ್ನು ಆಡಿಸುವ ವ್ಯಕ್ತಿ ಹಾಗೂ ಆ ಆಟಕ್ಕೆ ಹಾಡು ಹಾಗೂ ವಾದ್ಯಸಂಗೀತದ ಹಿನ್ನೆಲೆಯೊದಗಿಸುವ ಅವನ ಕುಟುಂಬದ ಸದಸ್ಯರು ಮರೆಯಲ್ಲೇ ಇರುತ್ತಾರೆ.

ಕಲೆಗಳೆಲ್ಲ ದೇವ ಸೃಷ್ಟಿಯೆಂಬ ಮಾತಿದೆ. ಅದನ್ನು ನಂಬುವವರ ಸಂಖ್ಯೆ ಕಡಿಮೆಯೇನಿಲ್ಲ. ಆ ಮಾತಿನ ಧ್ವನ್ಯರ್ಥ ಏನೇ ಇದ್ದರೂ, ವಾಸ್ತವ ದೃಷ್ಟಿಯಿಂದ ಆ ಕಲೆಗಳ ಬಗ್ಗೆ ಆಲೋಚನೆ ಮಾಡುವವರೂ ನಮ್ಮಲ್ಲಿ ಇಲ್ಲದಿಲ್ಲ. ಅವರು ಕಲೆಯ ಉಗಮ. ಸಂಕೀರ್ಣ ಮತ್ತು ಸಮ್ಮಿಶ್ರ ಕಲೆಗಳಾದ ಮಾನವ ರಂಗಭೂಮಿ ಮತ್ತು ಗೊಂಬೆಗಳ ರಂಗಭೂಮಿಯಲ್ಲಿ ಯಾವುದು ಪ್ರಾಚೀನ. ಅವು ಒಂದರ ಮೇಲೊಂದು ಬೀರರಬಹುದಾದ ಪ್ರಭಾವ ಪರಿಣಾಮಗಳು-ಇತ್ಯಾದಿ ಹಲವು ವಿಷಯಗಳ ಬಗ್ಗೆ ಆಳವಾಗಿ ಆಲೋಚಿಸಿ ತಮ್ಮ ವಾದಗಳನ್ನು ಮಂಡಿಸಿದ್ದಾರೆ, ಇನ್ನೂ ಮಂಡಿಸುತ್ತಿದ್ದಾರೆ. ತೊಗಲುಗೊಂಬೆಯಾಟ ಮೊದಲೋ ಸೂತ್ರದ ಬೊಂಬೆಯಾಟ ಮೊದಲೋ ಎಂಬ ವಾದವೂ ಇದೆ. ಅದೆಲ್ಲದರ ವಿಸ್ತಾರವಾದ ಪ್ರತಿಪಾದನೆಗೆ ಹೋಗದೆ ಅವಶ್ಯವೆನಿಸಿದ್ದನ್ನು ಮಾತ್ರ ಅಲ್ಲಲ್ಲಿ ಸೂಚಿಸಿ ಪ್ರಸ್ತುತ ಪ್ರಬಂಧ ಸಿದ್ಧಪಡಿಸಲಾಗಿದೆ.

ತೊಗಲುಗೊಂಬೆಯಾಟ ಕಿಳ್ಳಿಕೇತರಂತಹ ಅನಕ್ಷರಸ್ಥ ಹಾಗೂ ಶಿಷ್ಟರ ದೃಷ್ಟಿಯಲ್ಲಿ ಕೆಳಮಟ್ಟದ ಜನಾಂಗದವರ ವೃತ್ತಿಕಲೆಯಾದುದರಿಂದಲೇ ಇರಬೇಕು. ಅದರ ಪ್ರಾಚೀನತೆ ಮತ್ತು ಪರಂಪರೆಯನ್ನು ಗುರುತಿಸಲು ಶಿಷ್ಟರ ಕಲೆಯಾದ ಸೂತ್ರದ ಗೊಂಬೆಯಾಟದಷ್ಟು ಆಧಾರಗಳು ದೊರೆಯುವುದಿಲ್ಲ. ಆಧುನಿಕ ಸಿನಿಮಾತಂತ್ರವನ್ನು ನೆನಪಿಗೆ ತರುವ ನಮ್ಮ ತೊಗಲು ಗೊಂಬೆಯಾಟದ ವಿಧಾನ ಜನಪದದ ಬುದ್ಧಿಯ ಕೂಸೊ? ಅಥವಾ ಬೇರೆ ಯಾವುದೊ ಅಂತಹ ಶಿಷ್ಟ ಪ್ರಕಾರದಿಂದ ಅವರಿಗೆ ಪ್ರೇರಣೆ ದೊರೆಯಿತೊ? ನಿರ್ಧರಿಸುವುದು ಕಷ್ಟ.

ತೊಗಲುಗೊಂಬೆಯಾಟವನ್ನೇ ಹೋಲುವ ಒಂದು ಬಗೆಯ ಪ್ರಾಚೀನ ನೆರಳು-ನಾಟಕ. ಸಂಸ್ಕೃತ ನಾಟಕರಂಗಭೂಮಿಗೆ ಮೂಲವಾಗಿರಬೇಕೆಂದು ಕೆಲವರು ಹೇಳುತ್ತಾರೆ. ಆ ನೆರಳು ನಾಟಕಕ್ಕೂ ತೊಗಲುಗೊಂಬೆಯಾಟಕ್ಕೂ ಏನಾದರೂ ಸಂಬಂಧ ವಿದೆಯೇ ಈ ಬಗ್ಗೆ ಡಾ. ಚಂದ್ರಶೇಖರ ಕಂಬಾರ ಅವರು “… ದೊರೆತ ಉಲ್ಲೇಖಗಳ ವರ್ಣನೆ ಈ ಕಿಳ್ಳಿಕೇತರಾಟದ ಪ್ರಯೋಗವನ್ನು ಬ್ಯಹುಮಟ್ಟಿಗೆ ಹೋಲುತ್ತ, ’ಮಹಾಭಾಷ್ಯ’ದಲ್ಲಿ ಶಾಭನಿಕರು ನೆರಳು-ಆಕೃತಿಯ ಚಲನ ವಲನಗಳನ್ನು ಕಥೆಯಾಗಿ ಪ್ರೇಕ್ಷಕರಿಗೆ ವಿವರಿಸುತ್ತಿದ್ದರೆಂದು ಅಭಿಪ್ರಾಯವಿದೆ. ಸೀತಾ ಬೆಂಗಾ ಗವಿಯಲ್ಲಿ ನೆರಳು ನಾಟಕದ ಪರದೆಯನ್ನು ಸೂಚಿಸುವ ಗೀರುಗಳಿವೆ. ಪ್ರಾಚೀನ ಸಾಹಿತ್ಯದಲ್ಲಿ ಛಾಯಾ ನಾಟಕಗಳ (ನೆರಳು ಸ್ವರೂಪದ ನಾಟಕ) ಉಲ್ಲೇಖಗಳಿದ್ದು ಅಂಥ ನಾಟಕಗಳು ಈಗ ಸಿಕ್ಕಿವೆ” (ಮನ್ವಂತರ ೪) ಎಂದು ಹೇಳಿರುವುದು ತುಂಬಾ ಮಹತ್ವದ್ದಾಗಿದೆ. ಇನ್ನೊಬ್ಬ ಜನಪದ ವಿದ್ವಾಂಸರು ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸುತ್ತ “ಮೇಘ ಪ್ರಭಾಚಾರ್ಯನ ಚೈತನ್ಯ ಪ್ರಬಂಧದಲ್ಲಿ ಕಿಳ್ಳೆಕೇತರ ಆಟದಲ್ಲಿ ಉಪಯೋಗಿಸುವ ತಾಂತ್ರಿಕ ರೀತಿಯ ನಿಖರವಾದ ವರ್ಣನೆಯಿದೆ” ಎನ್ನುತ್ತಾ. (ಎಂ.ಟಿ. ಧೂಪದಃ ಕರ್ನಾಟಕದ ಜಾನಪದ ರಂಗಭೂಮಿ, ೧೯೭೧ ಪುಟ ೧೬೬) ಡಾ. ಚಂದ್ರಶೇಖರ ಕಂಬಾರ ಅವರು ಮೇಘಪ್ರಭಾಚಾರ್ಯನ ’ಧರ್ಮಾಭ್ಯುದಯ’ ಕೃತಿಯಲ್ಲಿ “ಮೇಘ ಪ್ರಭಾಚಾರ್ಯನ ಧರ್ಮಾಭ್ಯುದಯ ಅಥವಾ ಛಾಯಾನಾಟ್ಯ ಪ್ರಬಂಧ ನಿರ್ದೇಶನದಲ್ಲಿ ಅರಸನಿಗೆ ಸನ್ಯಾಸಿಯಾಗಬೇಕಾದ ತೆರೆಯ ಹಿಂದುಗಡೆ ಆ ಸ್ವರೂಪದ ಗೊಂಬೆಯನ್ನಿಡಬೇಕೆಂದಿದೆ” ಎಂದು ಬಂದಿರುವುದಾಗಿ ಹೇಳಿ ತೆರೆಯ ಹಿಂದೆ ಗೊಂಬೆಯನ್ನಿಟ್ಟು ಅದರ ನೆರಳು ತೆರೆಯ ಮೇಲೆ ಬೀಳುವಂತೆ ಮಾಡುತ್ತಿದ್ದ ವಿಧಾನದತ್ತ ನಮ್ಮ ಗಮನ ಸೆಳೆದಿದ್ದಾರೆ. ಆದರೆ ಇಡೀ ನಾಟಕವೇ ನಮ್ಮ ತೊಗಲುಗೊಂಬೆಯಾಟದಂತೆ ಮುಂದುವರಿಯುತ್ತಿತ್ತೆ? ರಂಗಭೂಮಿಯ ಮೇಲೆ ಕೆಲವು ದೃಶ್ಯಗಳನ್ನು ತೋರಿಸಬಾರದೆಂಬ ನಿಯಮ ಸಂಸ್ಕೃತ ನಾಟಕಗಳಲ್ಲಿದೆ. ಅರಸನೊಬ್ಬನು ಸನ್ಯಾಸಿಯಾಗುವುದನ್ನು ರಂಗಭೂಮಿಯ ಮೇಲೆ ತೋರಿಸಬಾರದೆಂಬ ಕಾರಣದಿಂದ ನೆರಳು ಸ್ವರೂಪದಲ್ಲಿ ಅದನ್ನು ತೋರಿಸಿರಬಹುದಾದ ಸಾಧ್ಯತೆಯಿದೆ. ನಿರ್ದೇಶನ ಭಾಗದಲ್ಲಿ ಈ ಮಾತು ಬಂದಿರುವುದನ್ನು ಇಲ್ಲಿ ಗಮನಿಸಬೇಕು.

ಇಂತಹ ನೆರಳು ನಾಟಕಗಳಿಂದ ಸಂಸ್ಕೃತ ನಾಟಕ ಪ್ರಭಾವಿತವಾಗಿರಬೇಕೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಸಂಸ್ಕೃತ ನಾಟಕಗಳಿಗೆ ಅದೇ ಮೂಲವೆಂದು ಗಟ್ಟಿಯಾಗಿಯೇ ಹೇಳುತ್ತಾರೆ. ಡಾ. ಕಂಬಾರ ಅವರು “ಸಂಸ್ಕೃತ ನಾಟಕಕ್ಕೆ ಕೆಲವರು ಅಭಿಪ್ರಾಯ ಪಡುವಂತೆ ಇದೇ (ನೆರಳು ನಾಟಕ) ಮೂಲವಾಗಿರಲಿಕ್ಕಿಲ್ಲವಾದರೂ ಇಂಥ ಪ್ರಕಾರವೊಂದು ಪ್ರಾಚೀನಕಾಲದಿಂದ ಬಳಕೆಯಲ್ಲಿದ್ದಿತೆಂದು ಗೊತ್ತಾಗುತ್ತದೆ. ಇದು ಜಾನಪದ ಕಲೆಯಾಗಿಯೆ ಬೆಳೆದು ಇನ್ನೂ ಜನಪದಕ್ಕೇ ಪರಿಮಿತವಾದ ಕಲೆಯಾಗಿದೆಯೆಂದು ಹೇಳಬಹುದು” ಎನ್ನುತ್ತಾರೆ. ಆದರೆ ಜನಪದ ಈ ಪ್ರಕಾರದ ಉಪಯೋಗವನ್ನು ಶಿಷ್ಟರು ತಮ್ಮ ನಾಟಕಗಳಲ್ಲಿ ಒಂದು ವಿಶಿಷ್ಟ ಉದ್ದೇಶಕ್ಕಾಗಿ ಬಳಸಿಕೊಂಡಿರಬಹುದಾದ ಸಾಧ್ಯತೆಯನ್ನು ಸಂಪೂರ್ಣ ತಳ್ಳಿಹಾಕಲು ಬರುವುದಿಲ್ಲ. ಇದರಿಂದ ಕಿಳ್ಳೆಕೇತರ ತೊಗಲುಗೊಂಬೆಯಾಟದಂತಹ ನೆರಳಿನ ಆಟಕ ಪರಂಪರೆ ಬಹಳ ಹಿಂದಕ್ಕೆ ಹೋಗುತ್ತದೆಂದು ಹೇಳಬಹುದು.

ಕಿಳ್ಳಿಕೇತ ಹೆಸರು ಮತ್ತು ತೊಗಲುಗೊಂಬೆಯಾಟದ ಬಗ್ಗೆ ಜನಪದರಲ್ಲಿ ಇರುವ ನಂಬಿಕೆಗಳನ್ನು ಆಧರಿಸಿಯೂ ಅದರ ಪ್ರಾಚೀನತೆಯನ್ನು ಊಹಿಸಲು ಸಾಧ್ಯವಿದೆ. ಕಿಳ್ಳಿಕೇತ ಶಬ್ದವನ್ನು ಬೇರೆ ಬೇರೆ ವಿದ್ವಾಂಸರು ಬೇರೆ ಬೇರೆಯಾಗಿ ಅರ್ಥಯಿಸಿದ್ದಾರೆ. ಮತ್ತು ಅದರ ವ್ಯುತ್ಪತ್ತಿಯನ್ನು ಕೂಡ ತಮ್ಮದೇ ಆದ ರೀತಿಯಲ್ಲಿ ಹೇಳಿದ್ದಾರೆ. ಅವುಗಳಲ್ಲಿ ಕಿಳ್ಳಿಕೇತ ಶಬ್ದ ಕೀಳುಕಥಾ ದಿಂದ ಬಂದಿರಬೇಕೆಂಬುದು ಒಂದು. ಇದನ್ನು ಒಪ್ಪಿದರೆ ಮೊದಮೊದಲು ಕೀಳುಕಥೆಯನ್ನು ಆಡುತ್ತಿರಬಹುದಾದ ಕಿಳ್ಳಿಕೇತರು ಆಮೇಲೆ ಯಕ್ಷಗಾನ ಬಯಲಾಟಗಳ ಪ್ರಭಾವಕ್ಕೆ ಒಳಗಾಗಿಯೊ, ಬೇರೆ ಕಾರಣದಿಂದಲೊ ರಾಮಾಯಣ ಮಹಾಭಾರತದ ಕಥೆಗಳನಜ್ನು ಆಡಲಾರಂಭಿಸಿರಬೇಕೆಂದಾಗುತ್ತದೆ. ತೊಗಲುಗೊಂಬೆಯಾಟ ಹಲವಂದದಿಂದ ಯಕ್ಷಗಾನ ಬಯಲಾಟಗಳ ಪ್ರಭಾವಕ್ಕೆ ಒಳಗಾಗಿರುವುದನ್ನು ಆಧಾರಸಹಿತ ಡಾ. ಎಚ್‌.ಕೆ. ರಂಗನಾಥ ಅವರು ತಮ್ಮ ಕರ್ನಾಟಕ ಥಿಯೇಟರ್‌ದಲ್ಲಿ ಪ್ರತಿಪಾದಿಸಿದ್ದಾರೆ. ಇದು ನಿಜವಿದ್ದಲ್ಲಿ ಕಿಳ್ಳಿಕೇತ ಜನಾಂಗ ಮತ್ತು ಅವರು ತೋರಿಸುವ ತೊಗಲುಗೊಂಬೆಯಾಟ ಬಹಳ ಪ್ರಾಚೀನವೆಂದು ಹೇಳಬೇಕಾಗುತ್ತದೆ.

ಕಾಲಕ್ಕೆ ಸರಿಯಾಗಿ ಮಳೆ ಬರುತ್ತದೆಂಬ ನಂಬಿಕೆಯಿಂದ ತೊಗಲು ಬೊಂಬೆಯಾಟವನ್ನು ಕಾರ್ತಿಕೋತ್ಸವಕ್ಕೆ ತಪ್ಪದೇ ಆಡಿಸುವ ಪರಿಪಾಠ ಇನ್ನೂ ಹಲವಾರು ಹಳ್ಳಿಗಳಲ್ಲಿದೆ. ಪಾಂಡವರು ವನವಾಸಕ್ಕೆ ಹೊರಟಾಗ ಅವರೊಡನೆ ತಮ್ಮ ಮೂಲಪುರಷನೂ ಸಂಚರಿಸುತ್ತ ದಕ್ಷಿಣಕ್ಕೆ ಬಂದನೆಂದು ಹೇಳುತ್ತ ಕಿಳ್ಳಿಕೇತರು ಆ ಮೂಲಕ ತಮ್ಮ ಪ್ರಾಚೀನತೆಯನ್ನು ಪಾಂಡವರಷ್ಟು ಹಿಂದಕ್ಕೆ ಒಯ್ಯುತ್ತಾರೆ. (ಜಿ.ಶಂ.ಪಃ ಜನಪದ ಕೆಲವು ಮುಖಗಳು ಪುಟ ೮೭) ಪಾಂಡವರು ತಮ್ಮ ಅಜ್ಞಾತವಾಸವನ್ನು ವಿರಾಟನಗರದಲ್ಲಿ ಕಳೆಯುತ್ತಿದ್ದಾಗ ಇಡೀ ಭಾರತದಲ್ಲಿ ಅನಾವೃಷ್ಟಿಯಾದರೂ ವಿರಾಟನ ರಾಜ್ಯದಲ್ಲಿ ಮಾತ್ರ ಸಮೃದ್ಧಿ ಇತ್ತಂತೆ (ಈ ಘಟನೆ ಪಾಂಡವರೆಲ್ಲಿರುವುದನ್ನು ಗುರುತಿಸಲು ದುರ್ಯೋಧನನಿಗೆ ಸಹಾಯವಾಯಿತಂತೆ) ಎಂತಲೇ ವಿರಾಟಪರ್ವ ಆಡಿದರೆ ಮಳೆ ಬರುತ್ತದೆಂಬ ನಂಬಿಕೆ ಈಗಲೂ ಹಳ್ಳಿಗರಲ್ಲಿದೆ. ಹೀಗೆ ಪಾಂಡವರೊಡನೆ ತಮ್ಮ ಮೂಲ ಪುರುಷ ಬಂದನೆಂದು ಕಿಳ್ಳಿಕೇತರು ಹೇಳುವುದು. ಪಾಂಡವರು ವಿರಾಟನಗರದಲ್ಲಿದ್ದಾಗ ಬೇರೆಡೆ ಮಳೆಯಾಗಿದಿದ್ದರೂ ವಿರಾಟನ ರಾಜ್ಯದಲ್ಲಿ ಮಾತ್ರ ಮಳೆಯಾಯಿತೆಂಬ ಐತಿಹ್ಯ. ತೊಗಲುಗೊಂಬೆಯಾಟ ಆಡಿಸಿದರೆ ಕಾಲಕಾಲಕ್ಕೆ ಮಳೆ ಬರುತ್ತದೆಂಬ ಜನಪದರ ನಂಬಿಕೆ ಇವೆಲ್ಲವನ್ನು ಸುತ್ತ ಹಾಕಿದಾಗ ಮಳೆಗೆ ಸಂಬಂಧಿಸಿದ ಒಂದು ಧಾರ್ಮಿಕವಿಧಿಯಾಗಿ ಈ ಆಟವನ್ನು ಆಡಿಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಇದು ನಿಶ್ಚಯವಾಗಿಯೂ ಗೊಂಬೆಯಾಟದ ಪ್ರಾಚೀನತೆಯತ್ತ ಬೆರಳು ತೋರಿಸುತ್ತದೆ.

ಕಿಳ್ಳಿಕೇತರು ತಮ್ಮ ಮೂಲದ ಬಗ್ಗೆ ಹೇಳುವ ಬೇರೆ ಬೇರೆ ಕಥೆಗಳಿಂದ ಹಾಗೂ ಅವರಿಗಿರುವ ಬೇರೆ ಬೇರೆ ಹೆಸರುಗಳಿಂದ ಕೂಡ ತೊಗಲುಗೊಂಬೆಯಾಟದ ಪ್ರಾಚೀನತೆಯನ್ನು ಊಹಿಸಲು ಬರುವಂತಿದೆ. ತೊಗಲು ಬೊಂಬೆಯಾಟವನ್ನು ಆಂಧ್ರದಲ್ಲಿ ’ತೋಲು ಬೊಮ್ಮಲಾಟ’ ಕೇರಳದಲ್ಲಿ ’ತೋಲಪಾವಕೂತ’, ಒರಿಸ್ಸಾದಲ್ಲಿ ’ರಾವಣ ಛಾಯಾ’ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮಲ್ಲಿ ಕಿಳ್ಳಿಕೇತರಿಗೆ ಇರುವ ಇನ್ನೊಂದು ಹೆಸರು ’ಗೊಂಬೆರಾಮರು’, ಆ ಹೆಸರು ಅವರಿಗೆ ಬಂದ ಬಗ್ಗೆ ಅವರು ಒಂದು ಕಥೆಯನ್ನೇ ಹೇಳುತ್ತಾರೆ. ಅದರ ಪ್ರಕಾರ ಅವರ ಪೂರ್ವಜರು ಶ್ರೀರಾಮನ ಕಾಲದವರು, ಮತ್ತು ಅವರು ಅವನ ಅತ್ಯಂತ ನಿಷ್ಠಾವಂತ ಭಕ್ತು. ರಾಮನು ಈ ಲೋಕದಿಂದ ನಿರ್ಗಮಿಸುವಾಗ ಇವರ ಮೂಲ ಪುರುಷರು “ನೀನಂತೂ ಹೊರಟೆ ಇನ್ನು ನಮ್ಮ ಪಾಡೇನು? ನಮ್ಮ ಜೀವನೋಪಾಯಕ್ಕೆ ಒಂದು ಹಾದಿ ತೋರಿಸು” ಎಂದು ಪ್ರಾರ್ಥಿಸಿದಾಗ, ಶ್ರೀರಾಮಚಂದ್ರ ತನ್ನ ಒಂದು ಚಿತ್ರಪಟವನ್ನು ಅವರಿಗೆ ಕೊಟ್ಟು “ಇದನ್ನು ಜನರಿಗೆ ತೋರಿಸಿ ಜೀವಿಸಿರಿ” ಎಂದು ಹೇಳಿ ಮಾಯವಾದನಂತೆ (ಡಿ.ಕೆ. ರಾಜೇಂದ್ರ: ಜನಪದ ವೃತ್ತಿನಾಟಕಗಳು ಬೊಂಬೆಯಾಟಗಳು, ಲೇಖನ, ಜೀ. ಶಂ.ಪ. ಸಂಪಾದಿ ’ಜಾನಪದ ಸಮಾವೇ’ ಕೃತಿಯಲ್ಲಿ ಪುಟ ೧೭೭. ಅಡಿ ಟಿಪ್ಪಣಿ). ಈಕಥೆ ತಮ್ಮ ಪ್ರಾಚೀನತೆಯನ್ನು ಮತ್ತು ರಾಮನೊಡನೆ ತಮ್ಮ ಸಂಬಂಧವನ್ನು ಸೂಚಿಸಲು ಗೊಂಬೆರಾಮರು ಕಲ್ಪಿಸಿದ ಒಂದು ಕಟ್ಟು ಕಥೆಯಾಗಿರಬಹುದು.  ಈಗಲೂ ಅವರಲ್ಲಿ ಮೊದಲು ಹುಟ್ಟಿದ ಗಂಡುಮಗುವಿಗೆ ’ರಾಮ’ನ ಹೆಸರಿಡಲಾಗುವುದಂತೆ-ಆದರೆ ರಾಮಾಯಣಕ್ಕೆ ಸಂಬಂಧಿಸಿದ ಚಿತ್ರಪಟವನ್ನೇ ಅವನು ಆರಂಭದಲ್ಲಿ ಜನರಿಗೆ ತೋರಿಸಿ ಅವರು ಹೊಟ್ಟೆ ಹೊರೆಯುತ್ತಿರಬಹುದಾದ ಸುಳುಹನ್ನು ಇದು ನೀಡುತ್ತದೆ. ಹೀಗೆ ಚಿತ್ರಪಟವನ್ನು ತೋರಿಸಿ ಜನರನ್ನು ರಂಜಿಸುತ್ತಿದ್ದ ಪದ್ಧತಿಯ ಬಗ್ಗೆ ಹತ್ತನೆಯ ಶತಮಾನದ ಕೃತಿ ’ವಡ್ಡಾರಾಧನೆ’ಯ ಸುಕುಮಾರಸ್ವಾಮಿಯ ಕಥೆಯಲ್ಲಿ ಆಧಾರ ದೊರೆಯುತ್ತದೆ. (ಅಲ್ಲಿ ಕಳ್ಳರು ಹಾಗೆ ಮಾಡಿದ್ದಾರೆ.) ಆರಂಭದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಚಿತ್ರಪಟಗಳನ್ನು ತೋರಿಸ ಜೀವಿಸುತ್ತಿದ್ದ ಕಿಳ್ಳಿಕೇತರು ಆಮೇಲೆ ಅದೇ ಕಥೆಗೆ ಸಂಬಂಧಿಸಿದ ತೊಗಲು ಗೊಂಬೆಗಳನ್ನು ಮಾಡಿ ಮಾಡಿ ಆಡಿಸಿ ಜೀವಿಸಲಾರಂಭಿಸಿರಬೇಕು. ತದನಂತರ ಮಹಾಭಾರತದ ಕಥೆಗಳನ್ನು ಆಡಲಾರಂಭಿಸಿರಬೇಕು.

ಹೀಗೆ ’ಕಿಳ್ಳಿಕೇತ’ ಹೆಸರು ಮತ್ತು ಅವರು ತಮ್ಮನ್ನು ಕುರಿತು ಹೇಳುವ ಕಥೆಗಳನ್ನು ಆಧರಿಸಿ ತೊಗಲುಗೊಂಬೆಯಾಟದ ಪ್ರಾಚೀನತೆಯನ್ನು ಊಹಿಸಬಹುದಾದರೂ ಎಷ್ಟು ಪ್ರಾಚೀನವೆಂದು ಗೆರೆ ಕೊರೆದು ಹೇಳಲು ಬಾರದು. ಇನ್ನೊಂದು ವಿಧಾನದಿಂದ ಈ ಕಲೆಯ ಹಳಮೆಯನ್ನು ಕಂಡು ಹಿಡಿಯುವ ಪ್ರಯತ್ನಗಳೂ ನಡೆದಿವೆ. ಹೊರದೇಶಗಳಲ್ಲಿ ಪ್ರಚಲಿತವಿರುವ ನಮ್ಮ ಈ ಕಲೆಯಂತಹ ಕಲೆಗಳನ್ನು ತೌಲನಿಕವಾಗಿ ಅಭ್ಯಸಿಸಿ ಯಾವುದು ಯಾವುದರಿಂದ ಪ್ರಭಾವಿತವಾಗಿದೆ ಎಂಬುದನ್ನು ಗುರುತಿಸುವುದೇ ಆ ವಿಧಾನ. ಸಯಾಮ  ಇಂಡೋಚೈನಾ, ಜಾವಾ ಮತ್ತು ಬಾಲಿ ದೇಶಗಲಲ್ಲಿ ನಮ್ಮಲ್ಲಿಯ ತೊಗಲುಗೊಂಬೆಯ ಆಟಗಳಂತಹ ಆಟಗಳೇ ಪ್ರದರ್ಶನಗೊಳ್ಳುತ್ತಿವೆ. ಅವುಗಳನ್ನು ನಡೆಸಿಕೊಡುವವರು ಮುಸ್ಲಿಮರಾದರೂ ಕಥೆಗಳು ಮಾತ್ರ ಭಾರತದವೇ ಆಗಿವೆ. ನಮ್ಮ ದೇಶದಿಂದ ಯಾವುದೋ ಕಾಲಕ್ಕೆ ಅಲ್ಲಿಗೆ ಹೋಗಿರಬೇಕೆಂದು ಊಹಿಸಲಾಗುತ್ತದೆ. ಅದಕ್ಕೆ ಕಾರಣ ಆ ಪ್ರದೇಶಗಳು ಒಂದು ಕಾಲಕ್ಕೆ ದಕ್ಷಿಣ ಭಾರತದ ಚಕ್ರವರ್ತಿಗಳ ರಾಜ್ಯ ಸೇರಿದ್ದವು. ಗಂಗೈಕೊಂಡ ಬಿರುದಿನ ಒಬ್ಬ ಚೋಳ ಚಕ್ರವರ್ತಿ ಅವುಗಳನ್ನು ಗೆದ್ದಂತೆ ತಿಳಿದು ಬರುತ್ತದೆ (ಎಚ್.ಕೆ. ರಂಗನಾಥ: ಕರ್ನಾಟಕ ಥೇಟರ್’ಪುಟ ೪೬, ಅಡಿಟಿಪ್ಪಣಿ ೨) ಕ್ರಿ.ಶ. ೧೦೧೨ರಿಂದ ೧೦೪೪ ವರೆಗೆ ಆಳಿದ ಒಂದನೆಯ ರಾಜರಾಜೇಂದ್ರ ಚೋಳನಿಗೆ ಗಂಗೈಕೊಂಡ ಬಿರುದಿದ್ದಂತೆ ಇತಿಹಾಸದಿಂದ ತಿಳಿದು ಬರುತ್ತದೆ. ಅವನ ಕಾಲದಲ್ಲಿ ಈ ಕಲೆ ಪ್ರಾಯಃ ಆ ದೇಶಗಳಿಗೆ ಹೋಗಿರಬೇಕು.

ಪ್ರಾಚೀನವಾದ ಈ ಛಾಯಾ ಗೊಂಬೆಯಾಟದ ಕಲೆ, ಆಂಧ್ರಪ್ರದೇಶದ ಕರಾವಳಿಯಿಂದ ಅಲ್ಲಿಗೆ ವಲಸೆ ಹೋದವರಿಂದ ಆಗ್ನೇಯ ಏಶಿಯಾ ಪ್ರವೇಶಿಸಿರಬೇಕೆಂದು ಊಹಿಸುವವರೂ ಇದ್ದಾರೆ. ಜಾವಾದಿಂದ ಅರಬರು ಅದನ್ನು ತಮ್ಮ ದೇಶಕ್ಕೆ ಒಯ್ದಿರಬೇಕು. ಅಲ್ಲಿಂದ ಅದು ಸಿರಿಯಾ, ಟರ್ಕಿ ಮತ್ತು ಉತ್ತರ ಆಫ್ರಿಕಾ ತಲುಪಿರಬಹುದೆಂದು ಅವರು ಅಭಿಪ್ರಾಯ ಪಡುತ್ತಾರೆ. ಹಾಗೆಯೇ ಮುಂದುವರಿದು “ಪ್ರಾಚೀನ ಉಲ್ಲೇಖಗಳನ್ನು ಆಧರಿಸಿ ಭಾರತದ ಪ್ರಾಚೀನ ಆಚಾರ್ಯರು ಈ ಕಲೆಯನ್ನು ಧರ್ಮ ಮತ್ತು ನೀತಿಬೋಧನೆಯ ಮಾಧ್ಯಮವಾಗಿ ಮಾಡಿಕೊಂಡಿದ್ದರೆಂದು ಹೇಳಲು ಬರುತ್ತದೆ. ಈ ಕಲೆ ಜನಪ್ರಿಯವಾಗುತ್ತ ಹೋದಂತೆ ಮನರಂಜನೆಯ ಶೈಲಿಯನ್ನು ಅನುಸರಿಸಲಾರಂಭಿಸಿದರೂ ನೀತಿಯ ಸಂದೇಶವನ್ನು ಸಂಪೂರ್ಣಬಿಡಲಿಲ್ಲ. ಹಾಗೂ ಧರ್ಮ ಭೋದೆಯಿಂದ ಬಹುದೂರ ಸರಿಯಲಿಲ್ಲ. “ಎಂಬ ಮಾತನ್ನು ಸೇರಿಸುತ್ತಾರೆ (ಶ್ಯಾಮ ಪರಮಾರ: Traditional Folk Media in India (1975), ಪುಟ ೪೦, ೪೧ ’ಬ್ರಿಟಾನಿಕಾ ವಿಶ್ವಕೋಶ’ ಸಂಪುಟ ೧೮, ಪುಟ ೮೭೪ ಬಿ, ೧೯೭೧) ದಲ್ಲೂ ಈ ಕಲೆ ಭಾರತದಿಂದ ಹೊರದೇಶಗಳಿಗೆ ಹೋದ ಬಗ್ಗೆ ಬರುತ್ತದೆ.

ಹನ್ನೆರಡನೆಯ ಶತಮಾನದ ವಚನಕಾರರು ತಮ್ಮಚಳುವಳಿಯ ತೀವ್ರತೆ ಹಾಗೂ ಪರಿಣಾಮತೆಗಾಗಿ ’ಬಹುರೂಪ’ ದಂತಹ ಹಲವಾರು ಜಾನಪದ ಮಾಧ್ಯಮಗಳನ್ನು ಬಳಸಿಕೊಂಡಿದ್ದಾರೆ. ಸೂತ್ರಧಾರ ’ಸೂತ್ರದ ಬೊಂಬೆ’ಯಂತಹ ಉಲ್ಲೇಖಗಳು ಬಸವ ಚೆನ್ನಬಸವ, ಅಲ್ಲಮ ಮೊದಲಾದ ವಚನಕಾರರ ವಚನಗಳಲ್ಲಿ ಬರುತ್ತವೆ. ಪ್ರಾಯ ಅವು ಸೂತ್ರದ ಬೊಂಬೆಯಾಟಕ್ಕೆ ಆಧಾರಗಳಾಗಬಹುದು. ತೊಗಲು ಬೊಂಬೆಯಾಟವನ್ನು ಅವರು ಸೂಚಿಸುತ್ತವೆಯೇ? ಖಚಿತಗೊಳ್ಳಬೇಕು. ಕಲಕೇತ ಬೊಮ್ಮಯ್ಯನೆಂಬ (ಮೇಖಲೇಶ್ವರಲಿಂಗ ಅಂತ?) ಒಬ್ಬ ವಚನಕಾರ ಬರುತ್ತಾನೆ. ಬಸವಣ್ಣನವರ ವಚನಗಳಲ್ಲಿ ’ಕಲಕೇತ’ ಶಬ್ದವಿದೆ. ’ಕಿಳ್ಳಿಕೇತ’, ’ಕಲಕೇತ’ ಶಬ್ದಗಳಲ್ಲಿಯ ಒಂದು ರೀತಿಯ ಹೋಲಿಕೆಯನ್ನು ಆಧರಿಸಿ ಕಲಕೇತ ಬೊಮ್ಮಯ್ಯ ಕಿಳ್ಳಿಕೇತನೇ ಆಗಿರಬೇಕೆಂದು ಹೇಳುವವರೂ ಇದ್ದಾರೆ. ’ಬಸವಪುರಾಣ’ದಲ್ಲಿ (೨೪-೩ ರಿಂದ ೫) ” ಅವನು ಹಣೆಗೆ ವಿಭೂತಿ ಕಿವಿಯಲ್ಲಿ ಕೆಂದಳಿರು ಧರಿಸಿದ್ದ  ಕಪ್ಪು ವಸ್ತ್ರಧಾರಿಯಾದ ಅವನು ಎಡದ ಕಾಲಲ್ಲಿ ಕಾಲಂದುಗೆ. ಇನ್ನೊಂದು ಕಾಲದಲ್ಲಿ ಗೆಜ್ಜೆ ಧರಿಸಿದ್ದ. ತೂಗಾಡುತ್ತ ನಡೆದುಕೊಂಡು ಬರುತ್ತಿದ್ದ. ಆ ಕಲಕೇತ ಎಡಗೈಯಲ್ಲಿ ಟಗರಿನ ಕೊಂಬನ್ನು ಬಲಗೈಯಲ್ಲಿ ಬಿಳಿಯ ಬಣ್ಣದ ಗದೆಯಂತಹ ಆಯುಧ ಹಿಡಿದಿದ್ದ. ಅದನ್ನು ತಿರುಗಿಸುತ್ತ “ಧರಾರುದ್ರ ನಿಟಿಲಾಗ್ನಿಯ ಟಗರು ಬಂದ. ಜಿನಧರ್ಮ ವಿನಾಶಕ ವೀರಭದ್ರನ ಮದಕರಿ ಬಂದ” ಮುಂತಾಗಿ ಕಲಕೇತನನ್ನು ಕುರಿತ ವರ್ಣನೆ ಬರುತ್ತದೆ. (ಪಿ.ವಿ. ನಾರಾಯಣ:, ವಚನ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ, ಪುಟ೩೧೦). ಈ ವರ್ಣನೆಯನ್ನು ನೋಡಿದಾಗ ಹಾಗೆಯೆ ಇಲ್ಲಿ ತೊಗಲುಗೊಂಬೆಯ ಇಲ್ಲವೆ ನೆರಳಿನಾಟದ ಉಲ್ಲೇಖವಿಲ್ಲದುದನ್ನು ಗಮನಿಸಿದಾಗ ಕಲಕೇತ ಬೊಮ್ಮಯ್ಯ ಕಿಳ್ಳಿಕೇತನಾಗಿದ್ದನೆ? ಎಂಬ ಸಂಶಯ ಬರುತ್ತದೆ. ಕೆಲವು ವಚನಕಾರರು ತಮ್ಮ ವಚನಗಳಲ್ಲಿ ಅಂತಹದೇನೂ ಕಂಡುಬರುವುದಿಲ್ಲ. ಕಲಕೇತನು ವೀರಭದ್ರನ ವೇಷಧರಿಸಿ ಕುಣಿದು ಭಕ್ತರನ್ನು ನಲಿಸಿ ನಗಿಸಿ ಬಂದ ದ್ರವ್ಯದಿಂದ ದಾಸೋಹ ಮಾಡುವವನೆಂದು ಹೇಳುವ ವಿದ್ವಾಂಸರೂ ಇದ್ದಾರೆ. (ಡಾ. ಎಲ್. ಬಸವರಾಜು ಶಿವದಾಸ ಗೀತಾಂಜಲಿ, ಪೀಠಿಕೆ ಪುಟ. ೩೮) ಕಲಕೇತನ ಒಂದು ವಚನದಲ್ಲಿ ಕೈಯಲ್ಲಿ ಟಗರ ಕೊಂಬನ್ನು ಹಿಡಿದು ಬರುವ ಒಂದು ವಿಶಿಷ್ಟ ವೇಷದ ಉಲ್ಲೇಖ ಬರುತ್ತದೆ (ವಚನ ಸಾಹಿತ್ಯ-ಒಂದು ಸಾಂಸ್ಕೃತಿಕ ಅಧ್ಯಯನ, ಪುಟ ೩೧೦). ಆದುದರಿಂದ ಕಲಕೇತ ಬೊಮ್ಮಯ್ಯ ಕಿಳ್ಳಿಕೇತನಾಗಿದ್ದನೆಂಬ ಬಗ್ಗೆ ಇನ್ನೂ ಸಂಶಯ ಇಟ್ಟುಕೊಳ್ಳುವುದು ಸರಿ ಎನಿಸುತ್ತದೆ.

ಪದ್ಮಣಾಂಕ ಕವಿಯ ಪದ್ಮರಾಜ ಪುರಾಣದಲ್ಲಿ (೧೪,೧೫ ಶತಮಾನ), “ಕಪಟ ನಾಟಕ ಸೂತ್ರಧಾರಿ ಗುರುರೂಪ ವಿಶ್ವಪತಿ ಆಡಿಸಿದೊಡಾಡಿದರಲ್ಲದೆ ಅಕಟ ಪರಕಿಪೊಡೆ ಈ ತೊವಲ ಬೊಂಬೆಗಳ್‌ತಾಮೆ ಅಡಲ್ ಸ್ವತಂತ್ರಮೆ? “(೬-೨೨) ಎಂದು ಬರುತ್ತದೆ. ತನ್ನ ಮೇಲೆ ಚಾಡಿ ಹೇಳಿದವರನ್ನು ಪದ್ಮರಸ ಇಲ್ಲಿ ’ತೊವಲಬೊಂಬೆ’ಎಂದು ಕರೆದಿದ್ದಾನೆ. ಅದುದರಿಂದ ಇದು ಕಿಳ್ಳಿಕೇತರಾಡಿಸುವ ತೊಗಲ ಗೊಂಬೆಯಲ್ಲ. ಇದೊಂದು ರೂಪಕಾಲಂಕಾರವೆನ್ನಬಹುದು.

ಕಿಳ್ಳಿಕೇತರು ಮತ್ತು ತೊಗಲು ಗೊಂಬೆಯಾಟದೆ ಪರಂಪರೆಗೆ ಒಂದು ಖಚಿತ ಆಧಾರ ಬ್ರಿಟಿಷರ ಕಾಲದ ಮುಂಬಯಿ ಪ್ರಾಂತದ ಗೆಜಟೀಯರದಲ್ಲಿ (ಸಂಪುಟ XXIII) ದೊರೆಯುತ್ತದೆ. ನೂರೈದು ವರ್ಷಗಳ ಹಿಂದೆ ಎಂದರೆ ಕ್ರಿ.ಶ. ೧೮೮೪ರಲ್ಲಿ ಅದನ್ನು ಸಿದ್ಧಪಡಿಸಲಾಗಿದೆ. ಅದರ ೧೯೬ರಿಂದ ೨೦೧ರ ವರೆಗಿನ ಪುಟಗಳಲ್ಲಿ ಕಿಳ್ಳಿಕೇತರನ್ನು ಕುರಿತಂತೆ ವಿವರ ಬರುತ್ತದೆ. ಅವರನ್ನು ಸ್ಥಳೀಯವಾಗಿ ’ಕಟಬರು’ ಎಂದು ಕರೆಯುತ್ತಿದ್ದ ಬಗ್ಗೆಯೂ ಅಲ್ಲಿ ಉಲ್ಲೇಖಿಸಲಾಗಿದೆ. ಪಾಂಡವರು ರಾಜ್ಯ ಕಳೆದುಕೊಂಡು ಕಾಡಿನಲ್ಲಿ ತಿರುಗಾಡುತ್ತಿರುವಾಗ ಅವರ ಜೊತೆ ಬಂದ ಒಬ್ಬ ಕ್ಷತ್ರಿಯ ವ್ಯಕ್ತಿಯೇ ಕಿಳ್ಳಿಕೇತರ ಮೂಲ ಪುರಷ. ಅವರೆಲ್ಲರಿಗೂ ಕನ್ನಡ ಮಾತನಾಡಲು ಬರುತ್ತದೆ. ಬೇರೆ ಪ್ರದೇಶದಿಂದ ಕರ್ನಾಟಕಕ್ಕೆ ಬಂದ ಬಗ್ಗೆ ಅವರಲ್ಲಿ ಯಾವ ಸಾಂಪ್ರದಾಯಿಕ ಕಥೆಯೂ ಇಲ್ಲ. ಆದುದರಿಂದ ಅವರು ಬಹಳ ದಿನಗಳಿಂದ ಇಲ್ಲಿಯೇ ಇದ್ದವರು. ಮನೆಯಲ್ಲಿ ಮಾತ್ರ ಕನ್ನಡ ಪದಮಿಶ್ರ ಒಂದು ಬಗೆಯ ಮರಾಠಿ ಮಾತಾಡುತ್ತಾರೆ. ಪ್ರತಿ ಮೂರು ತಿಂಗಳ ಕೊನೆಗೆ ಅವರು ನಾಡಿನಲ್ಲೆಲ್ಲ ಒಮ್ಮೆಯಾದರೂ ತಿರುಗಾಡಿ ಬರಬೇಕೆಂಬ ನೇಮ ಅವರಲ್ಲಿದೆ. ಅದು ಒಂದು ವೇಳೆ ಸಾಧ್ಯವಾಗದೆ ಹೋದರೆ ಒಲೆಯನ್ನಾದರೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಯ್ಯಲಾಗುತ್ತದೆ. ಗಂಡಸರು ಹಗಲು ಬಲೆ ಬೀಸಿ ಮೀನು ಹಿಡವ ಕೆಲಸ ಮಾಡುತ್ತಾರೆ. ಸಾಯಂಕಾಲ (ರಾತ್ರಿ) ಪಾರದರ್ಶಕ ತೊಗಲಿನ ಮೇಲೆ ರಬ್ರಬಾಗಿ ಬಿಡಿಸಿದ ರಾಮ, ಲಕ್ಷ್ಮಣ, ಸೀತಾ, ಹನುಮಂತ ರಾವಣ ಮತ್ತು ಇತರ ದೇವತೆಗಳ ಬಣ್ಣದ ಚಿತ್ರಗಳ ಆಟ ತೋರಿಸುತ್ತಾರೆ. ಆ ಚಿತ್ರಗಳು ಉತ್ತರ ಕೊಂಕಣ ಮತ್ತು ದಕ್ಷಿಣದ ಚಿತ್ರಗಳನ್ನು ಹೋಲುತ್ತವೆ….. ಬಾಗಲಕೋಟೆ, ಬದಾಮಿ, ಹುನಗುಂದ ಮೊದಲಾದ ಊರುಗಳಲ್ಲಿ ಈಗಲೂ ಅವರಿಗ ಇನಾಮು ಭೂಮಿಗಳು ಇವೆ. ಆದರೆ ಅವರು ಅವುಗಳನ್ನು ಸ್ವಂತ ಸಾಗುವಳಿ ಮಾಡುವುದಿಲ್ಲ… ಆಯುಧ ನಿಷೇಧ. ಅರಣ್ಯ ಕಡಿಯಬಾರದೆಂಬ ಕಾನೂನುಗಳು ಬಂದ ಮೇಲೆ ಆ ಪ್ರದೇಶದ ಜನ. ತಮ್ಮ ಬೆಳೆದ ಹೊಲಗಳಿಗೆ ಬಿದ್ದ ಹಾವಳಿ ಮಾಡುವ ಹಂದಿಗಳನ್ನು ಕೊಲ್ಲಲು ಕಿಳ್ಳಿಕೇತರನ್ನುದುಡ್ಡು ಕೊಟ್ಟು ಕರಿಸಿಕೊಳ್ಳುತ್ತಾರೆ. ಕಿಳ್ಳಕೇತರಲ್ಲಿ ಹಲವಾರು ಬೆಡಗುಗಳಿವೆ. ಅವರವರು ಮಾಡುವ ಕಾರ್ಯಾನುಗುಣವಾಗಿ ಅವುಗಳಲ್ಲಿ ತಾರತಮ್ಯವಿದೆ. ಹುಟ್ಟಿನಿಂದ ಮೊದಲುಗೊಂಡು ಸಾಯುವವರೆಗೆ ಅವರಲ್ಲಿ ಹಲವಾರು ಸಂಸ್ಕಾರಗಳು ನೆರವೇರುತ್ತವೆ. ಮುಂತಾಗಿ ಹೇಳಿ ಅವುಗಳ ವಿವರಣೆಯನ್ನು ಕೂಡ ಗೆಜಟಿಯರಿನಲ್ಲಿ ಕೊಡಲಾಗಿದೆ.

ಪ್ರಸ್ತುತ ಗೆಜಟಿಯರಿನಲ್ಲಿಯ ಅತ್ಯಂತ ಮಹತ್ವದ ಸಂಗತಿಯೆಂದರೆ, ಅದರಲ್ಲಿ ಬಂದಿರುವ ಕಿಳ್ಳಿಕೇತರ ಸನದೊಂದರ ಉಲ್ಲೇಖ. ಆ ಸನದಿನಲ್ಲಿ ಕಾಣಿಸಿರುವ ದಿನಾಂಕ ಕಾರ್ತಿಕ, ೯೩೦ ನೆಯ ಫಸಲಿ. ಅದು ಅವರಿಗೆ ಕೊಡಲ್ಪಟ್ಟದು ಬಿಜಾಪುರದ ಎರಡನೆಯ ಸುಲ್ತಾನನ ಕಾಲದಲ್ಲಿ. ಫಸಲಿವರ್ಷ ೯೩೦ನ್ನು ಕ್ರಿ.ಶ. ಕ್ಕೆ ಪರಿವರ್ತಿಸಿದರೆ ಅದು ಸುಮಾರು ಕ್ರಿ.ಶ. ೧೮೨೦ ಅಥವಾ ೧೫೩೪ ಆಗುತ್ತದೆ. ಆಗ ವಿಜಾಪುರದಲ್ಲಿ ಆಳುತ್ತಿದ್ದವ ಆದಿಲ್‌ಷಾಹಿ ಮನೆತನದ ಎರಡನೆಯ ಸುಲ್ತಾನ ಇಸ್ಮಾಯಿಲ್. ಅವನು ಕ್ರಿ.ಶ ೧೮೧೦ರಿಂದ ೧೫೨೪ರ ವರೆಗೆ ರಾಜ್ಯಭಾರ ಮಾಡಿದಂತೆ ಇತಿಹಾಸದಿಂದ ನಮಗೆ ತಿಳಿದು ಬರುತ್ತದೆ. ಆದುದರಿಂದ ಕಿಳ್ಳಿಕೇತರ ಬಳಿಯ ಸನದಿನ ಬಗ್ಗೆ ಸಂಶಯ ತಾಳಬೇಕಿಲ್ಲ ವೆನಿಸುತ್ತದೆ. ಅಂತೂ ಕ್ರಿ.ಶ. ೧೫೨೦ರ ಕಾಲಕ್ಕಾಗಲೆ ಕಿಳ್ಳಿಕೇತರು ತೊಗಲು ಗೊಂಬೆಯಾಟ ನಡೆಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಅವರಿಗೆ ಇನಾಮು ಭೂಮಿಗಳೂ ಇದ್ದುದರಿಂದ ಸಮಾಜದಲ್ಲಿ ಒಂದು ಸ್ಥಾನವೂ ಅವರಿಗಿದ್ದಿರಬಹುದು. ಎರಡು ಮೂರು ಶತಮಾನಗಳಿಂದಲೂ ಅವರ ಜೀವನಕ್ರಮದಲ್ಲಿ ಯಾವುದೇ ಬಗೆಯ ಬದಲಾವಣೆಯಾಗಿಲ್ಲವೆಂಬ ಮಾತು ಗೆಜಟಿಯರಿನಲ್ಲಿ ಬರುತ್ತದೆ. ಅದರಿಂದಾಗಿ ಅವರ ಪ್ರಾಚೀನತೆ ಇನ್ನೂ ಹಿಂದೆ ಹೋಗಬಹುದು.

ಕ್ರಿ.ಶ. ೧೯೦೯ರಲ್ಲಿ ಇ. ಥರ್ಸ್ಟನ್ ಬರೆದ ’ಕಾಸ್ಟ್ಸ ಅಂಡ್ ಟ್ರೈಬ್ಸ’ ಗ್ರಂಥದಲ್ಲಿ (ಪುಟ ೨೯೩) ಯೂ ಕಿಳ್ಳಿಕೇತರ ಬಗ್ಗೆ ಕೆಲವು ವಿವರಗಳು ಬರ್‌ಉತ್ತವೆ. ತೆಲುಗು ಮತ್ತು ಕನ್ನಡ ಪ್ರದೇಶಗಳಲ್ಲಿ ಅವರು ತಮ್ಮ ಆಟಗಳಿಂದ ಜನರನ್ನು ರಂಜಿಸುತ್ತಿದ್ದ ಬಗ್ಗೆ ಅಲ್ಲಿ ಹೇಳಲಾಗಿದೆ. ಅನಂತಪುರ ಜಿಲ್ಲೆಯ ಕಿಳ್ಳಿಕೇತರನ್ನು ಕುರಿತು “They travel round the villages and give performance where ever they can secure sufficient potranage. Contribution take the form of money or oil the foot-lights” ಮುಂತರಾಗಿ ಅಲ್ಲಿ ಉದ್ಧರಿಸಲಾಗಿದೆ.

ಎಸ್.ಎಮ್. ನಟೇಶಶಾಸ್ತ್ರಿ ಅವರು ಕಿಳ್ಳಿಕೇತರ ವೃತ್ತಿಯ ಬಗ್ಗೆ- Their profession is enaction religious dramas before the Village public. The black ಕಂಬಳಿ is their screen, and any mandapa or village chavadi or open house in thier Stage… They carry with them pictures painted in colours and deer skins which are well tanned and made fine like parchament” (Indian Review VIII 1906) ಎಂದು ಹೇಳಿರುವುದನ್ನು ಕೂಡ ಗೆಜಟಿಯರಿನಲ್ಲಿ ಉಲ್ಲೇಖಿಸಲಾಗಿದೆ. ತೊಗಲುಗೊಂಬೆಗಳ ವಿವಿಧ ಅಂಗಗಳನ್ನು ತಂತಿಗಳಿಂದ ಜೋಡಿಸಿರುವ ರೀತಿ, ಬಿದಿರು ಕಡ್ಡಿಯ ಚಲನವಲನದ ಮೂಲಕ ಗೊಂಬೆಗಳ ಆಯಾಭಾಗಗಳನ್ನು ಚಲಿಸುವಂತೆ ಮಾಡಿ ಅವುಗಳ ಅಭಿನಯವನ್ನು ಪ್ರೇಕ್ಷಕರಿಗೆ ತೋರಿಸುವ ಕೈಚಳಕ, ಹಿನ್ನೆಲೆಯ ಹಾಡು, ವಾದ್ಯಸಂಗೀತ ಹಾಗೂ ರಾಮಾಯಣ ಮಹಾಭಾರತಗಳಿಂದ ಆಯ್ದುಕೊಂಡ ಕಥೆಗಳ  ಬಗ್ಗೆಯೂ ಅಲ್ಲಿ ವಿವರವಿದೆ.

ಹಳೆಯ ಮುಂಬಯಿಪ್ರಾಂತ ಸರಕಾರ ಹೊರಡಿಸಿದ ಬೆಳಗಾಂ ಗೆಜಟಿಯರದಲ್ಲಿ (ಪುಟ ೧೯೬), ಕಿಳ್ಳೇಕ್ಯಾತರು ಮಹಾರಾಷ್ಟ್ರದ ಕೊಲ್ಲಾಪುರ ಅಥವಾ ಸಾತಾರಾ ಕಡೆಯಿಂದ ತಂಡತಂಡವಾಗಿ ಕನ್ನಡ ನಾಡಿಗೆ ವಲಸೆ ಬಂದಂತೆ ಹೇಳಿದೆ. ವಿಜಾಪುರದ ಗೆಜಟಿಯರದಲ್ಲಿ ಕಿಳ್ಳಿಕೇತರು ಬೇರೆ ಪ್ರದೇಶದಿಂದ ವಲಸೆ ಬಂದ ಬಗ್ಗೆ ಉಲ್ಲೇಖವಿಲ್ಲದಿದ್ದರೂ ಅವರ ಮನೆಮಾತು ಕನ್ನಡ ಮಿಶ್ರಿತ ಮರಾಠಿ ಎಂಬುದನ್ನು ಮೇಲೆ ನೋಡಿದ್ದೇವೆ. ಕ್ರಿ.ಶ. ೧೯೩೦ರಲ್ಲಿ ಪ್ರಕಟಗೊಂಡ ‘The Mysore Castes and Tribes’ ಗ್ರಂಥದಲ್ಲಿಯೂ ಕಿಳ್ಳಿಕೇತರ ಬಗ್ಗೆ ಸುಧೀರ್ಘ ವಿವರ ಬರುತ್ತದೆ. (ಪುಟ ೫೧೩ ರಿಂದ ೫೩೫) ಅವರು ಉಪಯೋಗಿಸುವ ದೊಡ್ಡ ಮತ್ತು ಚಿಕ್ಕ ತೊಗಲುಗೊಂಬೆಗಳನ್ನು ಕುರಿತು ಅವರಿಗಿದ್ದ ಇನಾಮು ಭೂಮಿಯನ್ನು ಕುರಿತು ಇನ್ನು ಹಲವಾರು ವಿಷಯಗಳನ್ನು ಕುರಿತು ಅಲ್ಲಿ ಪ್ರಸ್ತಾಪಿಸಲಾಗಿದೆ.

ಕಿಳ್ಳಿಕೇತ ಜನಾಂಗದ ಮೂಲಪುರುಷನನ್ನು ಕುರಿತಂತೆ ಈ ಗ್ರಂಥದಲ್ಲಿ (ಪುಟ ೫೨೦) ಒಂದು ಸ್ವಾರಸ್ಯಕರ ಕಥೆ ಬರುತ್ತದೆ. ಅದರ ಪ್ರಕಾರ ಕಿಳ್ಳಿಕೇತರು ಮೂಲತಃ ಮಹಾರಾಷ್ಟ್ರದ ಬೇಸಾಯಗಾರರು. ಅವರ ಒಬ್ಬ ಹೆಣ್ಣುಮಗಳು ಕತ್ತಾರೆ ಕಾಳಾಚಾರಿ ಎಂಬ ಅಕ್ಕಸಾಲಿಗನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು. ಆ ವಿಷಯ ಬಯಲಾದ ಮೇಲೂ ಅವಳು ಆಚಾರಿಯ ಜೊತೆಯೇ ಇದ್ದು ಏಳು ಜನ ಮಕ್ಕಳನ್ನು ಪಡೆದಳು. ಜಾತಿಯಿಂದ ಹೊರದೂಡಲ್ಪಟ್ಟ ಅವಳಿಗೆ ಆಚಾರಿಯೆ ಗರಿಗಳನ್ನು ಹೆಣೆದು ಗೊಂಬೆಮಾಡುವ, ಚರ್ಮವನ್ನು ಕತ್ತರಿಸಿ ಬಗೆ ಬಗೆಯ ಆಕಾರ ರೂಪಿಸುವ ಇವೇ ಮೊದಲಾದ ಕಲೆಗಳನ್ನು ಕಲಿಸಿ ಪದ ಹಾಡುತ್ತ ಜನರನ್ನು ರಂಜಿಸಿ ಹೊಟ್ಟೆ ಹೊರೆದು ಕೊಳ್ಳುವಂತೆ ಹೇಳಿದ. ಅವರು ಅದೇ ಕೆಲಸ ಮಾಡುತ್ತ ಸುಖವಾಗಿದ್ದು ತಮ್ಮದೇ ಆದ ಜಾತಿಯೊಂದನ್ನು ನಿರ್ಮಿಸಿಕೊಂಡರು. ಆ ಮೇಲೆ ಬಹಳ ಬಡವರಾಗಿದ್ದ ಅವರ ಸೋದರಮಾವಂದಿರೂ ಇವರನ್ನು ಬಂದು ಸೇರಿದರು. ಆದ್ದರಿಂದ ಅವರು ತಾವು ನೆಲಸಿದ್ದ ಪ್ರದೇಶವನ್ನು ಬಿಟ್ಟು ತಂಡತಂಡವಾಗಿ ದಕ್ಷಿಣದ ಕಡೆಗೆ ವಲಸೆ ಬಂದು ಅಲ್ಲಿಯೇ ನೆಲೆಸಿದರು. ಹೀಗೆ ಒಂದು ತಂಡದ ಅನಂತರ ಮತ್ತೊಂದು ತಂಡ ಕರ್ನಾಟಕಕ್ಕೆ ವಲಸೆ ಬಂದುದನ್ನು ಬಿಜಾಪುರದ ಗೆಜಟಿಯರ್‌ದಲ್ಲಿ ಬರುವ ಕೆಲವು ವಿವರಗಳಿಂದ ಗುರುತಿಸಲು ಬರುವಂತಿದೆ.

ಕಿಳ್ಳಿಕೇತರಲ್ಲಿ ಗಣಾಚಾರಿ, ಶಿವಾಚಾರಿ, ನೆಕನಾರಿ (ಕಟ್ಟೀಮನಿ), ಸಿಂಧ್ಯ (ಹಳೆಮನಿ), ಇತ್ಯಾದಿ ಗೋತ್ರ ಇಲ್ಲವೆ ಬೆಡಗುಗಳಿವೆಯಂತೆ. ಇವುಗಳಲ್ಲಿ ತಾರತಮ್ಯವಿದೆ. ಒಂದು ತಂಡದ ಅನಂತರ ಮತ್ತೊಂದು ತಂಡ ಬಂದು ನೆಲಸಿದುದೇ ಅದಕ್ಕೆ ಕಾರಣವೆಂದು ಗೆಜೆಟಿಯರ್‌ದಲ್ಲಿ ಹೇಳಲಾಗಿದೆ. ಈ ಬಗೆಯ ಗೋತ್ರಗಳ ವ್ಯವಸ್ಥೆ ಮಾಡಿದವ ಪುಣೆಯ ಹನುಮಂತರಾವ್ ನರಸಿಂಗರಾವ್ ಹವೇಲಿ ಎಂಬವನಂತೆ. ಇವನೇ ಎಲ್ಲ ಪಂಗಡಗಳಿಗೆ ಮುಖ್ಯನಾಗಿ ’ಸರ್‌ಗಣಾಚಾರಿ’ ಆದ. ಇವನ ವಂಶದವರಿಗೇ ಗಣಾಚಾರಿ ಹುದ್ದೆ. ಉಳಿದೆಲ್ಲ ಗೋತ್ರದವರಿಗೂ ಅವರವರಿಗನುಗುಣವಾದ ಕಾರ್ಯಗಳನ್ನು ಹೇಳಲಾಗಿದೆ.

ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಗೊಂಬೆರಾಮರೆಂದು ಕರೆಯಲ್ಪಡುವ ಈ ಕಿಳ್ಳಿಕೇತರು ತಮ್ಮನ್ನು ತಾವು ’ಚಿತ್ರ ಮರಾಟ’ ಜನರೆಂದು ಹೇಳಿಕೊಳ್ಳುತ್ತಾರೆ. ಬಳ್ಳಾರಿ ಮತ್ತು ಆಂಧ್ರಭಾಗದಲ್ಲಿಯ ಕಿಳ್ಳಿಕೇತರು ಆಟದ ಆರಂಭದಲ್ಲಿ ಗಣಪತಿ, ಶಾರದಾಸ್ತುತಿ ಮಾಡಿದ ನಂತರ ತಮಗೆ ಜೀವನಮಾರ್ಗ ಹೇಳಿಕೊಟ್ಟ ಒಬ್ಬ ’ಒವಜ’ ನನ್ನು ಎಂದರೆ ಉಪಾಧ್ಯಾಯನನ್ನು ಕೊಂಡಾಡುತ್ತಾರೆ, (ನಂ. ತಪಸ್ವಿ ಕುಮಾರ ಅವರ ’ಕರ್ನಾಟಕದಲ್ಲಿ ತೊಗಲು ಗೊಂಬೆಯಾಟಗಳು’ ಲೇಖನ, ’ಕಬ್ಬಿನ ಹಾಲು’ ಗ್ರಂಥದಲ್ಲಿ, ಪುಟ ೧೯೭) ಪ್ರಾಯಃ ಅವನು ಮೇಲೆ ಉಲ್ಲೇಖಿತನಾಗಿರುವ ಕಾಳಾಚಾರಿಯೇ ಆಗಿರಬೇಕು. ಇದೆಲ್ಲವನ್ನು ನೋಡಿದಾಗ ತೊಗಲುಗೊಂಬೆಯಾಟದ ಕಿಳ್ಳಿಕೇತರು ಬಹಳಷ್ಟು ಹಿಂದೆಯೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು ತೊಗಲುಗೊಂಬೆಯಾಟದ ಜಪರಂಪರೆಯನ್ನು ಮುಂದುವರಿಸಿದರೆಂದು ಹೇಳ ಬೇಕಾಗುತ್ತದೆ.

ಶಿವರಾಮ ಕಾರಂತರು “ಇಂಥ ತೊಗಲುಗೊಂಬೆ ಆಟಗಾರರ ಮೇಳಗಳು ಒಟ್ಟು ಕನ್ನಡ ದೇಶದಲ್ಲಿ ನಾಲ್ಕಾರು ಇವೆಯೊ ಇಲ್ಲವೊ” ಎಂದು ಸಂದೇಹಿಸಿರುವುದನ್ನು (ಯಕ್ಷಗಾನ-ಬಯಲಾಟ ಪುಟ ೧೫೨) ಒಪ್ಪದ ನಂ. ತಪಸ್ವಿಕುಮಾರ್ ಅವರು ಅಕ್ಕಿ ಹೆಬ್ಬಾಳ್‌, ತ್ಯಾಪೇನ ಹಳ್ಳಿ (ನಾಗಮಂಗಲ ಹತ್ತಿರ), ಕದಬಹಳ್ಳಿ (ಬೆಳ್ಳೂರ ಬಳಿ), ಮ್ಯಾರ್ಕೋನ ಹಳ್ಳಿ ಪ್ರದೇಶ, ಕೇತುಹಳ್ಳಿ (ರಾಮನಗರದ ಬಳಿ), ಮುದುಗೆರೆ, ಬೊಮ್ಮಾಲಾಟಪುರಂ (ಬಳ್ಳಾರಿ ಜಿಲ್ಲೆ,), ಚಿತ್ರದುರ್ಗ ಹಾಗೂ ಬೆಳಗಾವ್ ಜಿಲ್ಲೆ-ಇತ್ಯಾದಿ ಕಡೆ ಇರುವ ಹಲವು ಹತ್ತು ತಂಡಗಳನ್ನು ಹೆಸರಿಸಿ ತೊಗಲುಗೊಂಬೆಯಾಟದ ಪರಂಪರೆ ಹರಿಗಡೆಯದೆ ಮುಂದುವರಿದು ಬಂದುದನ್ನು ಸ್ಪಷ್ಟಪಡಿಸಿದ್ದಾರೆ (ಕಬ್ಬಿನ ಹಾಲು ಪುಟ ೨೧೪.೧೫). ಗೊಂಬೆರಾಮ ಹೊಂಬಯ್ಯನ ಬಳಿ ಮೂವತ್ತಕ್ಕೂ ಹೆಚ್ಚು ’ಪ್ರಸಂಗ’ದ ಚಿತ್ರಗಳು, ಪದ್ಯಗಳನ್ನೊಳಗೊಂಡ ’ಪ್ರಸಂಗ’ದ ಪ್ರತಿಗಳು ಇರುವ ಬಗ್ಗೆ ಉತ್ತರ ರಾಮಾಯಣ ಸೇರಿದಂತೆ ಸಂಪೂರ್ಣ ರಾಮಾಯಣ. ಆದಿಪರ್ವದಿಂದ ಮೊದಲುಗೊಂಡ ಸ್ವರ್ಗಾರೋಹನ ಪರ್ವದ ವರೆಗಿನ ಮಹಾಭಾರತದ ಪ್ರಸಂಗಗಳನ್ನು ಈ ಮೇಳದವರು ಆಡುತ್ತಿದ್ದ ಬಗ್ಗೆ, ಪರಸ್ಪರ ಸಂಬಂಧವಿರುವ ಪ್ರಸಂಗಗಳನ್ನು ಸೇರಿಸಿ ಮಹಾಭಾರತ ಮಾಲಿಕೆಯನ್ನು ಐದು ಆರು ರಾತ್ರಿ ಪ್ರದರ್ಶಿಸುತ್ತಿದ್ದ ಬಗ್ಗೆ ತಪಸ್ವಿಕುಮಾರ್ ಅವರು ತಿಳಿಸಿದ್ದಾರೆ (ಪುಟ ೨೦೪.೨೦೫). ಒಂಬತ್ತು ಮೊಳ ಉದ್ದದ ಪರದೆಯ ಬಟ್ಟೆಯನ್ನು ಮಾತ್ರ ಬೇಡಿಯೇ ಪಡೆಯಬೇಕೆಂಬ ಸಂಪ್ರದಾಯ ಆ ತಂಡದವರಲ್ಲಿದ್ದ ಬಗ್ಗೆ ಆಯಾ ದಿನದ ತಿಥಿ ನಕ್ಷತ್ರ ಆಡುವ ಕಥೆ ಇವುಗಳಿಗೆ ಅನುಗುಣವಾಗಿ ಅಟ್ಟದ ಮುಖದ ದಿಕ್ಕನ್ನು ನಿರ್ಧರಿಸುತ್ತಿದ್ದ ಬಗ್ಗೆ ಶಕುನ ಕೇಳಿಯೇ ಇವರು ಕಾರ್ಯಾರಂಭ ಮಾಡುತ್ತಿದ್ದ ಬಗ್ಗೆ ತಮ್ಮ ಲೇಖನದಲ್ಲಿ (ಪುಟ ೨೦೯) ತಿಳಿಸಿದ್ದಾರೆ. ಕುಟುಂಬ ಬೆಳೆದು ವರಮಾನ ಸಾಲದಾದಾಗ ಹಿರಿಯ ಗಂಡುಮಕ್ಕಳು ತಂದೆಯಿಂದ ಬೇರೆಯಾಗಿದ್ದು, ತಾವೂ ಗೊಂಬೆ ಕಥೆಯಾಡಿ ಸ್ವತಂತ್ರ ಜೀವನ ನಡೆಸುವುದೇ ಹೆಚ್ಚಂತೆ. ಹೀಗೆ ಒಂದೊಂದು ಕುಟುಂಬ ತೊಗಲು ಗೊಂಬೆಯಾಟದ ಪರಂಪರೆಯನ್ನು ಕೊಂಡಿ ಕಳಚದಂತೆ ಮುಂದುವರಿಸಿಕೊಂಡು ಬಂದಿರುವುದಕ್ಕೆ ಇನ್ನು ಉದಾಹರಣೆ ಗಳಿರಬಹುದು.

ಬೆಳಗಾವ ಜಿಲಲೆಯ ಗೊಸಬಾಳದ ಹನಬುಮಂತದೇವರಿಗೆ ಸಂಬಂಧಿಸಿದಂತೆ ಒಂದು ಕಿಳ್ಳಿಕೇತರ ಮನೆತನವಿದ್ದು ಅವರಿಗೆ ಮಾನ್ಯದ ಹೊಲವಿದೆ. ಪ್ರತಿವರ್ಷ ಕಾರ್ತಿಕೋತ್ಸವದಂದು (ದೀಪಾವಳಿ), ಮಳೆ ಸಮಯಕ್ಕೆ ಸರಿಯಾಗಿ ಬರಲೆಂದು ಪಾಂಡವರ ಆಟ ಆಡುತ್ತಾರೆ. (ಎಚ್‌.ಕೆ. ರಂಗನಾಥ ಕರ್ನಾಟಕ ಥಿಯೇಟರ್ ಪುಟ ೪೬) ಧಾರವಾಡದ ಒಬ್ಬ ವೃದ್ಧರು ಮೊಟ್ಟ ಮೊದಲಸಲ ಸಿನಿಮಾ ನೋಡಿದಾಗ “ಓ ಕುಂದಣಗಾರ ಅವರು ತಮ್ಮ Development of Kannada Dram” ಎಂಬ ಲೇಖನದಲ್ಲಿ (J.B.B.R.A.S.IVP, 313-322) ಉಲ್ಲೇಖಿಸಿದ್ದಾರೆ. ಮಂಗಳೂರು ಜನಪದ ಸಮ್ಮೇಳನದಲ್ಲಿ ಬೆಳ್ಳೂರು ಮೇಳದವರು ನಡೆಸಿಕೊಟ್ಟ “ತ್ರಿಪುರ ಸಂಹಾರ” ತೊಗಲು ಗೊಂಬೆಯಾಟದಲ್ಲಿ, ಕತ್ತನ್ನು ಹಾಗು ಅಶ್ವತ್ಥದ ಎಲೆಗಳನ್ನು ಕತ್ತರಿಸಿದ ದೃಶ್ಯ ತುಂಬಾ ಸಹಜವಾಗಿತ್ತೆಂದು ಎಲ್. ಆರ್. ಹೆಗಡೆ ಅವರು ಪ್ರತ್ಯಕ್ಷ ನೋಡಿ ಹೇಳಿದ್ದಾರೆ. (ಜನಪದ ಜೀವನ ಮತ್ತು ಕಲೆ, ಪುಟ ೨೪೫)

ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಾವು ಸಣ್ಣವರಿದ್ದಾಗ ನೋಡಿದ ತೊಗಲುಗೊಂಬೆಯಾಟ ಗೊಂಬೆರಾಮರನ್ನು ಕುರಿತು. ಅವರ ಅದ್ಭುತ ಕಲಾಪ್ರದರ್ಶನ ಕುರಿತು, ಹಾಗೆಯೆ ತಮ್ಮ ಆಟಕ್ಕೆ ಬೇಕಾದ ಎಲ್ಲವನ್ನೂ ಸಾಮಾನ್ಯವಾಗಿ ತಾವೇ ಸಿದ್ಧಪಡಿಸಿಕೊಳ್ಳುವುದನ್ನು ಕುರಿತು ಅನೇಕ ಉಪಯುಕ್ತ ಮಾತುಗಳನ್ನು ಹೇಳಿದ್ದಾರೆ. (ಕಬ್ಬಿನ ಹಾಲು, ಪುಟ ೧೭೯ ರಿಂದ ೧೯೫).

೧೯೮೪ರ ಅಕ್ಟೋಬರ್ ೨,೩,೪ ಈ ಮೂರು ದಿನ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ತೊಗಲು ಗೊಂಬೆಯಾಟದ ರಾಚನಿಕ ಅಧ್ಯಯವನ್ನು ಕುರಿತು ಒಂದು ಕಮ್ಮಟವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ತೊಗಲು ಗೊಂಬೆಯಾಟದ ಪ್ರದರ್ಶನವನ್ನು ನಡೆಸಿಕೊಟ್ಟವರು ಎಡ್ರಮ್ಮನಹಳ್ಳಿ ಕಿಳ್ಳಿಕೇತ ಭರಮ್ಮಪ್ಪ ಮತ್ತು ಅವನ ಕುಟುಂಬದವರು. ಅವರು ಪ್ರದರ್ಶಿಸಿದ ಪ್ರಸಂಗ ರಾಮಾಯಣದ್ದು. ಆರಂಭದಲ್ಲಿ ಗಣಪತಿ. ಸರಸ್ವತಿಯರ ಸ್ತುತಿ, ತದನಂತರ ಗೊಲ್ಲ ಗವಳಗಿತ್ತಿಯರ ದೃಶ್ಯ ತರಲಾಗಿತ್ತು. ಇದು ’ಕೃಷ್ಣಪಾರಿಜಾತ’ ಸಣ್ಣಾಟದ ಪ್ರಭಾವ. ಜೈನರಾಮಾಯಣದ ಪ್ರಭಾವನ್ನು ಸೂಚಿಸುವ ಸನ್ನಿವೇಶಗಳೂ ಇದರಲ್ಲಿದ್ದುದು ಒಂದು ವಿಶೇಷ. ಸ್ವತಃ ಭರಮಪ್ಪನಿಂದ ತಿಳಿದು ಬಂದ ಇತಿವೃತ್ತ ಇಷ್ಟು-ಅವರ ಮನೆ ಮಾತು ಮರಾಠಿ. ಅವರು ಆಟ ಕಲಿತದ್ದು ತಮ್ಮ ಹೆಣ್ಣಜ್ಜ-ಹೆಣ್ಣಜ್ಜಿಯರಿಂದ, ದೊಡ್ಡಪ್ಪನಾದ ಮೋರಗೇರಿಯ ಬಸಪ್ಪನ ಮಗನೂ ಆಟ ನಡೆಸುತ್ತಿದ್ದ. ಅವನು ಉಪಯೋಗಿಸುತ್ತಿದ್ದ ಗೊಂಬೆಗಳನ್ನೇ ಇವರು ಬಳಸುತ್ತಿದ್ದರು. ಊರಿನ ಗೌಡರು ಶಾನಬೋಗರು ಇವರಿಗೆ ಇನಾಮಾಗಿ ಹೊಲ ಕೊಟ್ಟಿದ್ದರು. ಭರಮಪ್ಪನ ಮಗಳು ಭರಮಕ್ಕನ ಗಂಡನಮನೆಯವರೂ ಗೊಂಬೆಯಾಟ ಆಡುತ್ತಿದ್ದರು.

ತಮ್ಮ ಆಟದಲ್ಲಿ ಬರುವ ಕ್ಯಾತನ ಬಗೆಗೂ ಭರಮಪ್ಪ ತನ್ನದೇ ಆದ ವಿವರಣೆ ಕೊಟ್ಟ. ಅವನ ಪ್ರಕಾರ ಕ್ಯಾತಪ್ಪ ಜೋಕುಮಾರನಿಗಿಂತ ಮೊದಲು ಹುಟ್ಟಿದವ. ಅವನ ಹೆಂಡತಿ ಬಂಗಾರಕ್ಕ ಇಬ್ಬರೂ ಬೆತ್ತಲೆ, ಕ್ಯಾತಪ್ಪನ ತಲೆಯ ಮೇಲೆ ಜುಟ್ಟ. ಅವನು ಬಂಡಿಗೆ ಬಂಟ, ರಾಶಿಗೆ ಬೂದ, ಊರಿಗೆ ಕರಗಲ್ಲು, ಕಿಳ್ಳಿಕೇತನೇ ಸಾರಥಿ, ’ಕಿಳ್ಳೆ’ ಎಂದರೇನೆಂಬುದಕ್ಕೆ ಭರಮಣ್ಣನಿಂದ ಉತ್ತರ ದೊರೆಯಲಿಲ್ಲ. ಮೂವತ್ತು ಮೂರು ಊರಿನ ಹದ್ದಿನೊಳಗೆ ಆಟ ಆಡುವ ಹಕ್ಕು ಅವನಿಗಿದೆಯಂತೆ. ರಾಶಿಯ ಸಂದರ್ಭದಲ್ಲಿ ಆಯ ದೊರೆಯುತ್ತಂತೆ. ಆಯ ತೆಗೆದುಕೊಳ್ಳುವಾಗ “ಸಾಲಿಗೆ ಸಾವಿರ ಖಂಡಗಾಗಲಿ, ಮೂಲಿಗೆ ಮೂವತ್ತು ಖಂಡಗಾಗಲಿ, ಹೊಕ್ರ ಹೊಲ ಬೆಳೀಲಿ, ಹಿಡಿದಂತ ಭೂಮಿ ತಾಯಿ ಹೆಚ್ಚಲಿ, ಪಾಂಡವರಂತ ದೆಶಿ ಬರಲಿ, ಭೀಮಣ್ಣ ಕಾಮಣ್ಣರಂತ ಬಣವಿ ಒಟ್ಟಲಿ, ಗಂಗಮ್ಮಾ ಗೌರಮ್ಮಾರಂತ ಹಗೆ ತುಂಬಲಿ ಹುಲ ಹುಲಗ್ಯೋ ಹೆಬ್‌ಹುಲಗ್ಯೋ” ಎಂದ್ರ‍್ಯ ಹರಕೆ ಕೊಡುತ್ತಾನಂತೆ.

ಊರಮನಿ ಕಿಳ್ಳಿಕ್ಯಾತರು, ಮೀನಗಾರ ಕಿಳ್ಳಿಕ್ಯಾತರು ಇರುವುರೆಂದು ಭರಮಪ್ಪ ಹೇಳಿದ. ಅವರ ಮನೀದೇವರು ಹಲವರು. ಹುಲಿಗೆಮ್ಮ. ಎಲ್ಲಮ್ಮ, ಕೋಲಶಾಂತ, ತಿಪ್ಪೇರುದ್ರಸ್ವಾಮಿ, ಕೊಟ್ಟೂರೇಶ, ಮದ್ದಾನಸ್ವಾಮಿ, ಗೋಣಿ ಬಸಪ್ಪ ಇವರೆಲ್ಲರನ್ನು ಪೂಜಿಸುವುದಾಗಿ ತಿಳಿಸಿದ. ತೊಗಲುಗೊಂಬೆಗಳನ್ನು ಹಾಗೂ ಕಿಳ್ಳಿಕೇತನನ್ನು ದಸರಾ, ಯುಗಾದಿ ಪಾಡ್ಯಾಗಳೆಂದು ಪೂಜಿಸುತ್ತಾರಂತೆ, ಖಂಡಾಪೂಜೆಯ ದಿನ ಬಲಿ.

ತಮ್ಮ ಹಿರಿಯರಿಂದಲೆ ಅವರಿಗೆ ಕಥೆಗಳು ಬಂದವಂತೆ. ಗೊಲ್ಲತಿ ಪ್ರವೇಶ ಯಾವ ಪ್ರಸಂಗವೇ ಇರಲಿ ಇದ್ದೇ ಇರುತ್ತಿತ್ತೆಂದು ಅವನು ಹೇಳಿದ. ಒಮ್ಮೆ ಸ್ಟೇಜ ಹಾಕಿದ ಮ್ಯಾಲೆ ಕಿತ್ತೊದಿಲ್ಲವೆಂತೆ. ದಿಕ್ಕು ನೋಡಿ ಸ್ಟೇಜ ಹಾಕುವುದಿಲ್ಲವಾಗಿಯೂ ತಿಳಿಸಿ. “ಡೊಂಬ ಗಂಗಿ ಹೂಡಿದ ರಾತು. ಕಿಳ್ಳಿಕೇತ ಗೂಡಿ ಕಟ್ಟಿದರಾತು”  ಎಂಬ ಗಾದೆ ಮಾತನ್ನು ಭರಮಪ್ಪ ಮಧ್ಯೆ ತೋರಿಸಿದ. ಮೊದಲಿನ ಗಣಪತಿ ಸ್ತುತಿ ಬೇರೆಯಾಗಿದ್ದು ಈಗ ತಾನು ಬೇರೆ ಅನ್ನುತ್ತಿರುವುದಾಗಿಯೂ ತಿಳಿಸಿದ. ಮೊದಲು, ಮುಕ್ತಾಯ ಮಾಡುವಾಗ “ತಯ್ಯದಿತ್ತಾ” ಮಾತ್ರ ಅನ್ನುತ್ತಿದ್ದರಂತೆ. ಈಗ ದೊಡ್ಡಾಟದ ಪದ ಮುಗುಸು ಹಾಗ ಮುಗಿಸುತ್ತಾರೆ.

ಒಡಲಡಕಿ (ಕೂಡ್ಲಗಿ ತಾಲೂಕು) ಗರಗ (ಮಾರೆಮ್ಮಾನಹಳ್ಳಿ ಹತ್ತಿರ) ಅನಕುಂಟಿ (ರಾಣೆಬೆನ್ನೂರು ತಾಲೂಕು), ಹಟ್ಟಿ (ಮುಳಗುಂದ ತಾಲೂಕು), ಇಲ್ಲೆಲ್ಲ ತೊಗಲಗೊಂಬೆ ಆಟದವರು ಇರುವುದಾಗಿಯೂ ತಿಳಿಸಿದ. ಇದೇ ಭರಮಪ್ಪನೇ ರಶಿಯಾಕ್ಕೆ ಹೋಗಿ ಬಂದಿದ್ದಾನೆ.

ಇದೆಲ್ಲವನ್ನು ಕೇಳಿದಾಗ ಕಥೆ, ಹಾಡಿನ ರೀತಿ ಇತ್ಯಾದಿಗಳಲ್ಲಿ ಒಂದಿಷ್ಟು ಬದಲಾವಣೆಗೆ ಮಾಡಿಕೊಂಡಿದ್ದರೂ, ತೊಗಲುಗೊಂಬೆಯಾಟದ ಪರಂಪರೆಯನ್ನು ಕಿಳ್ಳಿಕೇತರು ತಂದೆಯಿಂದ ಮಗನಿಗೆ ವಂಶಪಾರಂಪರ‍್ಯವಾಗಿ ಸಾಗಿಸಿಕೊಂಡು ಬಂದಿರವುದು ಸ್ಪಷ್ಟವಾಯಿತು. ಇಂತಹ ಕಲಾವಿದರಿಗೆ ಎಲ್ಲರಿಂದಲೂ ಪ್ರೋತ್ಸಾಹ  ದೊರೆಯಬೇಕಾದುದು ಅತ್ಯವಶ್ಯ.

* * *