ಕನ್ನಡ ವಿಶ್ವವಿದ್ಯಾಲಯವು ಮೊದಲಿನಿಂದಲೂ ವಿದ್ಯೆಯ ಸೃಷ್ಠಿ ಮತ್ತು ಪ್ರಸಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ವಿವಿಧ ವಿಭಾಗಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿವೆ. ಪ್ರಸ್ತುತ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಹಮ್ಮಿಕೊಂಡಿರುವ ಯೋಜನೆಗಳಲ್ಲಿ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಯು ಸಹ ಒಂದು. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಗ್ರಾಮ ಅಥವಾ ಪಟ್ಟಣವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಚರಿತ್ರೆ, ಪುರಾತತ್ವ ಮತ್ತು ಸಂಸ್ಕೃತಿಯನ್ನು ಕುರಿತು ಸಂಶೋಧಿಸಿ ವಿಚಾರ ಸಂಕಿರಣವನ್ನು ಏರ್ಪಡಿಸುತ್ತದೆ. ಈ ಸಂದರ್ಭದಲ್ಲಿ ಸಂಶೋಧಕರು ಕ್ಷೇತ್ರಕಾರ್ಯ ಮಾಡಿ ತಮ್ಮ ಗ್ರಹಿಕೆಯನ್ನು ಸ್ಥಳೀಯರ ಮುಂದಿಟ್ಟು, ಅವರೊಡನೆ ಚರ್ಚಿಸಿ ಅಂತಿಮವಾಗಿ ತಮ್ಮ ಸಂಶೋಧನ ಲೇಖನವನ್ನು ಸಿದ್ಧಪಡಿಸುತ್ತಾರೆ. ಹೀಗೆ ಪ್ರತಿಯೊಂದು ವಿಷಯವನ್ನು ಕುರಿತು ಸಿದ್ಧಗೊಂಡ ಲೇಖನಗಳನ್ನು ವಿಶ್ವವಿದ್ಯಾಲಯದ ಪ್ರಸಾರಾಂಗವು ಕೃತಿರೂಪದಲ್ಲಿ ಪ್ರಕಟಿಸುವ ಮೂಲಕ, ಅಜ್ಞಾತವಾಗಿದ್ದ ಊರೊಂದರ ಚರಿತ್ರೆ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಬೆಳಕಿಗೆ ತಂದಂತಾಗುವುದು. ಈ ನಿಟ್ಟಿನಲ್ಲಿ ಇದೊಂದು ಸಾರ್ಥಕ ಕೆಲಸವಾಗಿದ್ದು, ವಿಭಾಗ ಮತ್ತು ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸುತ್ತಿದೆ. ಬಹುಮುಖ್ಯವಾಗಿ ಕನ್ನಡ ವಿಶ್ವವಿದ್ಯಾಲಯದ ಯೋಜನೆಗಳು ಹಾಗು ಅದರ ಕೆಲಸ ಕಾರ್ಯಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಮೂಲಕ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ತನ್ನ ವ್ಯಾಪ್ತಿಯಲ್ಲಿ ಸಾರ್ಥಕವಾದ ಕೆಲಸ ಮಾಡುತ್ತಿದೆ.

ಪ್ರಸ್ತುತ ಮಾಲೆಯಲ್ಲಿ ಪ್ರಕಟಗೊಳ್ಳುತ್ತಿರುವ ತೊಣ್ಣೂರು ಕೃತಿಯು ಒಟ್ಟು ಹದಿನಾಲ್ಕು ಸಂಶೋಧನ ಲೇಖನಗಳನ್ನು ಒಳಗೊಂಡಿದೆ. ಈ ಎಲ್ಲಾ ಲೇಖನಗಳನ್ನು ಆಯಾಯ ವಿದ್ವಾಂಸರು ಕ್ಷೇತ್ರಕಾರ್ಯ ನಡೆಸಿ ಹಾಗೂ ಈ ಹಿಂದಿನ ಪ್ರಕಟಣೆಗಳನ್ನು ಗಮನಿಸಿ ಅತ್ಯಂತ ಗಂಭೀರವಾಗಿ ಸಿದ್ಧಪಡಿಸಿದ್ದಾರೆ. ಹಾಗಾಗಿ ಈ ಲೇಖನಗಳನ್ನು ತುಂಬಾ ಪರಿಶ್ರಮದಿಂದ ಸಿದ್ಧಪಡಿಸಿದ ಡಾ.ಎನ್.ಎಸ್.ರಂಗರಾಜು, ಡಾ.ಜಿ.ಕರಿಯಪ್ಪ, ಡಾ. ದೇವರಕೊಂಡಾರೆಡ್ಡಿ, ಶ್ರೀ ಸೀತಾರಾಮ ಜಾಗೀರ್‌ದಾರ್, ಡಾ.ಎಂ.ಪಿ.ಮಹದೇವಯ್ಯ, ಶ್ರೀ ಎಸ್. ರಾಜೇಂದ್ರಪ್ಪ, ಡಾ. ಎಂ.ಎಸ್.ಕೃಷ್ಣಮೂರ್ತಿ, ಡಾ.ಆರ್.ಹೆಚ್.ಕುಲಕರ್ಣಿ, ಡಾ. ಲ.ನ. ಸ್ವಾಮಿ, ಶ್ರೀ ಶೆಲ್ವಪ್ಪಿಳ್ಳೈ ಅಯ್ಯಂಗಾರ್, ಡಾ. ಅಕ್ಕಮಹಾದೇವಿ, ಡಾ.ಕೇಶವನ್ ಪ್ರಸಾದ್ ಕೆ. ಮರಟ್ಟಿ, ಡಾ.ಜಯಲಕ್ಷ್ಮಿ ಸೀತಾಪುರ ಇವರೆಲ್ಲರಿಗೂ ತುಂಬು ಹೃದಯದ ವಂದನೆಗಳು. ಪ್ರಸ್ತುತ ಲೇಖನಗಳು, ತೊಣ್ಣೂರಿನ ಸಮಗ್ರ ಇತಿಹಾಸ, ಪುರಾತತ್ವ ಮತ್ತು ಸಂಸ್ಕೃತಿಯನ್ನು ಓದುಗರಿಗೆ ಪರಿಚಯಿಸು ವಲ್ಲಿ ಯಶಸ್ವಿಗೊಂಡಿವೆ.

ಕನ್ನಡ ವಿಶ್ವವಿದ್ಯಾಲಯದ ಈ ಕಾರ್ಯಕ್ರಮವನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ ತೊಣ್ಣೂರಿನ ಜನತೆ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಯ “ತೊಣ್ಣೂರು” ವಿಚಾರ ಸಂಕಿರಣ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದ್ದಾರೆ. ಹಾಗು ಪ್ರಸ್ತುತ ಕೃತಿ ರೂಪುಗೊಳ್ಳಲು ಕಾರಣರಾಗಿದ್ದಾರೆ. ಈ ವಿಚಾರಸಂಕಿರಣ ಕಾರ್ಯಕ್ರಮದ ಸ್ಥಳಿಯ ಜವಾಬ್ದಾರಿ ವಹಿಸಿಕೊಂಡು ಹಗಲಿರುಳು ಶ್ರಮಿಸಿದ ನಿವೃತ್ತ ಉಪಾಧ್ಯಾಯರಾದ ಶ್ರೀ ಪುಟ್ಟೇಗೌಡ ಅವರನ್ನು ವಿಶೇಷವಾಗಿ ನೆನೆಯುತ್ತೇನೆ. ಅದೇ ರೀತಿ ಕ್ಷೇತ್ರಕಾರ್ಯಕ್ಕಾಗಿ ತೆರಳಿದ್ದ ಎಲ್ಲ ವಿದ್ವಾಂಸರಿಗೂ ಸ್ಥಳಿಯ ಮಾರ್ಗದರ್ಶನ ಮತ್ತು ಸಹಕಾರವನ್ನು ನೀಡಿದ ಶ್ರೀ ರಘುರಾಮ್ ಭಟ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಸ್ಥಳೀಯ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿದ ಮೊರಾರ್ಜಿ ವಸತಿ ಶಾಲೆಯ ಅಧ್ಯಾಪಕರು ಮತ್ತು ಸಿಬ್ಬಂದಿಯವರನ್ನು ನೆನೆಸುತ್ತೇನೆ. ಸಅದೇ ರೀತಿ ವಿಶ್ವವಿದ್ಯಾಲಯವು ಸಹ ತೊಣ್ಣೂರನ್ನು ಕುರಿತ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ತನ್ನ ಸಾಂಸ್ಕೃತಿಕ ಜವಾಬ್ದಾರಿಯನ್ನು ಪ್ರಕಟಿಸಿದೆ. ಅಂದಿನ ಕುಲಪತಿಗಳಾಗಿದ್ದ ಡಾ. ಬಿ.ಎ. ವಿವೇಕ ರೈ ಅವರು ತೊಣ್ಣೂರಿನಲ್ಲಿ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುವ ಮೂಲಕ ಅದರ ಯಶಸ್ವಿಗೆ ಕಾರಣರಾಗಿದ್ದಾರೆ. ಉದ್ಘಾಟನೆ ಮಾಡಿದ ಪ್ರೊ. ಲಕ್ಷ್ಮಣ ತೆಲಗಾವಿಯವರ ಆಶಯ ಭಾಷಣ ತೊಣ್ಣೂರಿನ ಮೌಖಿಕ ಚರಿತ್ರೆಯ ಮೇಲೆ ಹೊಸ ಬೆಳಕನ್ನೇ ಚೆಲ್ಲಿತು. ಈ ಸಂದರ್ಭದಲ್ಲಿ ಅವರುಗಳನ್ನು ನೆನೆಯದಿರಲಾರೆ. ಈ ವಿಚಾರ ಸಂಕಿರಣದ ಉದ್ಘಾಟನೆ ಹಾಗು ಸಮಾರೋಪ ಗಳಲ್ಲಿ ಭಾಗವಹಿಸಿದ ಮಹನೀಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದರ ಜತೆಗೆ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಬಡಿಗೇರ, ಸಹೋದ್ಯೋಗಿಗಳಾದ ಡಾ. ಸಿ.ಎಸ್. ವಾಸುದೇವನ್, ಶ್ರೀರಮೇಶ ನಾಯಕ ಮತ್ತು ಡಾ. ಎಸ್.ವೈ. ಸೋಮಶೇಖರ, ಕಛೇರಿ ಸಹಾಯಕ ದಿ. ನಾಗಯ್ಯ ಮತ್ತು ಶ್ರೀ ರಮೇಶ ಇವರುಗಳು ನೀಡಿದ ಸಹಕಾರ ಸ್ಮರಣೀಯ.

ಈ ಎಲ್ಲ ಪರಿಶ್ರಮಗಳ ಮೂರ್ತರೂಪವಾದ ಪ್ರಸ್ತುತ ಕೃತಿಯನ್ನು ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರು ಅತ್ಯಂತ ಆಸ್ಥೆಯಿಂದ ಪ್ರಕಟಿಸಲು ಹಾಗು ಅದರಲ್ಲಿ ಅಧ್ಯಯನಕ್ಕೆ ಅಗತ್ಯವಾದ ಛಾಯಾಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ವಿಭಾಗದ ಅಧ್ಯಯನ ಪುಸ್ತಕಗಳ ಆಶಯವನ್ನು ಈಡೇರಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅವರನ್ನು ಅತ್ಯಂತ ಪ್ರೀತಿಯಿಂದ ನೆನೆಯುತ್ತೇನೆ. ಇನ್ನು ಮಾನ್ಯ ಕುಲಸಚಿವರಾದ ಶ್ರೀ ಪೂಜಾರ್ ಅವರು ಸದಾ ನಮ್ಮನ್ನೆಲ್ಲ ಶೈಕ್ಷಣಿಕವಾಗಿ ಬೆಂಬಲಿಸುವ ಮೂಲಕ ವಿಭಾಗದ ಉನ್ನತಿಗೆ ಕಾರಣರಾಗಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಪ್ರೀತಿಯಿಂದ ಸ್ಮರಿಸುತ್ತೇನೆ.

ಪ್ರಸ್ತುತ ಕೃತಿ ಪ್ರಕಟಗೊಳ್ಳಲು ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರು ಆಸಕ್ತಿ ವಹಿಸಿದ್ದಾರೆ. ಅವರಿಗೆ ನನ್ನ ವಂದನೆಗಳು. ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ, ಕಲಾವಿದರಾದ ಶ್ರೀ ಕೆ.ಕೆ. ಮಕಾಳಿ ಇವರಿಗೆ ತುಂಬು ಪ್ರೀತಿಯ ವಂದನೆಗಳು ಸಲ್ಲುತ್ತವೆ. ಈ ಕೃತಿಯ ಅಕ್ಷರ ಜೋಡಣೆ ಮಾಡಿದ ಹೊಸಪೇಟೆ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿಯವರ ಶ್ರಮ ನೆನೆಯುವಂತದ್ದು. ಅವರಿಗೆ ನನ್ನ ವಂದನೆಗಳು.

ತೊಣ್ಣೂರಿನ ಇತಿಹಾಸ ಮತ್ತು ಪುರಾತತ್ವಕ್ಕೆ ಸಂಬಂಧಿಸಿದಂತೆ ಇದು ಮೊತ್ತಮೊದಲ ಕೃತಿಯಾಗಿದ್ದು, ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಗೊಳ್ಳುತ್ತಿರುವುದು ಸಂತಸದ ಸಂಗತಿ. ಹಾಗು ಪ್ರಸ್ತುತ ಕರ್ನಾಟಕದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಕ್ಷೇತ್ರಕ್ಕೆ ಒಂದು ಹೊಸ ಸೇರ್ಪಡೆ ಎಂದು ಭಾವಿಸುತ್ತೇನೆ.