ಸ್ಥಳೀಯರ ನಂಬಿಕೆಯಂತೆ

ಈ ತಟಾಕದಲ್ಲಿ ಪಂಚಕನ್ಯೆಯರು, ಅಪ್ಸರಾಸ್ತ್ರೀಯರು, ದೇವಾನುದೇವತೆಗಳು ಜಲವಿಹಾರಕ್ಕಾಗಿ ಹಾಗೂ ಜಲಕ್ರೀಡೆಗಾಗಿ ಆಗಮಿಸುತ್ತಾರೆ. ಆದ್ದರಿಂದ ಇದು ಪವಿತ್ರವಾದದ್ದೆಂಬ ಭಾವನೆಯಿದೆ. ಹಾಗಾಗಿ, ಈ ತಟಾಕಕ್ಕೆ ಸುತ್ತಮುತ್ತಲಿನ ನೂರೆಂಟು ಗ್ರಾಮದ ಗ್ರಾಮದೇವತೆಗಳು ಶಿವರಾತ್ರಿಯಿಂದ ಪ್ರಾರಂಭ ಮಾಡಿ, ಚಾಂದ್ರಮಾನ ಯುಗಾದಿಯವರೆಗೆ ಶುಭಸ್ನಾನಕ್ಕೆ ಆಗಮಿಸುತ್ತಾರೆ(ನೋಡಿ:ಕೋಷ್ಟಕ). ಕೆಲವು ಗ್ರಾಮದೇವತೆಗಳು ಕಾರ್ತಿಕ ಮಾಸದಲ್ಲಿ ಸಹ ಇಲ್ಲಿಗೆ ಶುಭಸ್ನಾನಕ್ಕೆ ಬರುತ್ತವೆ. ಇಲ್ಲಿಗೆ ಬರುವ ಗ್ರಾಮದೇವತೆಗಳನ್ನು ಅರ್ಚಕ ವೃಂದ ಮತ್ತು ದೇವತೆಗಳ ಆರಾಧಕರು, ದೇವತೆಗಳನ್ನು ಭಕ್ತಿಭಾವದಿಂದ ಇಲ್ಲಿಗೆ ಕರೆತಂದು ಅವರುಗಳಿಗೆ ಅವಭೃತ ಸ್ನಾನ ಮಾಡಿಸುತ್ತಾರೆ (ನೋಡಿ: ಚಿತ್ರ‑೫೭). ಇಲ್ಲಿ ನಡೆಯುವ ಅವಭೃತ ಸ್ನಾನದ ಕ್ರಮ ಕೆಳಗಿನಂತಿದೆ.

[1]

ಗ್ರಾಮದಿಂದ ಕರೆತಂದ ಎಲ್ಲಾ ದೇವತೆಗಳನ್ನು, ಪೂಜಾ ಸಾಮಗ್ರಿಗಳನ್ನು ಮತ್ತು ಅಲಂಕರಣ ಸಾಮಗ್ರಿಗಳನ್ನು ಮೊದಲು ಶುಚಿಗೊಳಿಸುತ್ತಾರೆ (ನೋಡಿ: ಚಿತ್ರ‑೫೮). ಆನಂತರ ದೇವತೆಗಳಿಗೆ ಪುಣ್ಯಾಹವನ್ನು ಪುರೋಹಿತರಿಂದ ಮಾಡಿಸಿದ ಬಳಿಕ ಗೋವಿನ ಗಂಜಲದಿಂದ ಶುದ್ದೀಕರಿಸುತ್ತಾರೆ. ಶುದ್ಧವಾದ ಮೇಲೆ ನೂರೆಂಟು ಕುಂಭದ ಅಭಿಷೇಕ ಮಾಡಿ, ಅಲಂಕಾರ ಮಾಡುತ್ತಾರೆ. ಅಭಿಷೇಕಕ್ಕೆ ಕೊನೆಯಲ್ಲಿ ಅಷ್ಟಗಂಧವನ್ನು ಬಳಸುತ್ತಾರೆ. ಹೀಗೆ ಅವಭೃತ ಸ್ನಾನ ಮಾಡಿಕೊಂಡ ದೇವರಿಗೆ, ಷೋಡಶೋಪಚಾರ ಪೂಜೆ, ಆನಂತರ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಪ್ರತಿ ಗ್ರಾಮದೇವತೆಯ ಹೆಸರಿನಲ್ಲಿ ಹೋಮ ಮಾಡಲಾಗು ತ್ತದೆ. ಸ್ತ್ರೀ ದೇವತೆಗಳಿಗೆ ಶಕ್ತಿ ದೇವತೆಯ ಹೆಸರಿನಲ್ಲಿ, ಶಿವಸಂಬಂಧೀ ದೇವತೆಗಳಿಗೆ ಶಿವಸ್ತುತಿಯ ಮೂಲಕ, ವಿಷ್ಣು ಸಂಬಂಧೀ ದೇವತೆಗಳಿಗೆ ವಿಷ್ಣು ಸಂಬಂಧೀ ಸ್ತುತಿಗಳಿಂದ ಹೋಮ ಮಾಡಿ, ಕಳಾಕರ್ಷಣೆ ಮಾಡಿ, ರಕ್ಷೆಯನ್ನು ಕೊಡಲಾಗುತ್ತದೆ. ಈ ಕ್ರಿಯೆಗಳನ್ನು ತೊಂಡನೂರಿನ ಪುರೋಹಿತರು ನೆರವೇರಿಸುತ್ತಾರೆ. ರಕ್ಷೆಯನ್ನು ಸ್ವೀಕರಿಸಿದ ದೇವತೆಗಳು ರಕ್ಷೆಯೊಂದಿಗೆ ಸ್ವಗ್ರಾಮಕ್ಕೆ ತೆರಳುತ್ತವೆ. ಈ ಕಾರ್ಯಕ್ಕೆ ಬರುವ ಎಲ್ಲಾ ದೇವತೆಗಳು ಶಿಷ್ಟ ಸಂಪ್ರದಾಯದಿಂದ ಪೂಜೆಗೊಳ್ಳದ, ಜಾನಪದ ಅಥವಾ ಅವೈದಿಕ ರೀತಿಯಲ್ಲಿ ಪೂಜೆಗೊಳ್ಳುವ ಸಾಂಪ್ರದಾಯಿಕ ದೈವಗಳು. ಪಾಂಡವಪುರ ತಾಲೂಕಿನ ಹಾರೋಹಳ್ಳಿಯ ಗ್ರಾಮದೇವತೆಯ ಅರ್ಚಕಿ ಸಾಕಮ್ಮ ಈ ಕಾರ್ಯಕ್ಕೆ “ಹಳೇ ನೀರಿಗೆ ವಸ್ತ್ರ ಕೊಡುವುದು” ಎಂದು ಅವರುಗಳು ಕರೆಯುವುದಾಗಿ ತಿಳಿಸಿದರು. ಮುಂಗಾರು ಮಳೆ, ಹೊಸ ವರ್ಷದಲ್ಲಿ ಪ್ರಾರಂಭವಾಗುವ ಮುನ್ನ ನೆರವೇರಿಸುವ ಕಾರ್ಯವಾದ್ದರಿಂದ ತಟಾಕದಲ್ಲಿರುವ ನೀರು ಹಳೆಯ ನೀರಾಗುತ್ತದೆ. ಅದಕ್ಕೆ ಪೂಜಿಸಿ, ಬಾಗಿನ ಕೊಡುವ ಸಂಪ್ರದಾಯ ಜನಪದರಲ್ಲಿದೆ. ಅದಕ್ಕೆ ಅವರು ಹೀಗೆ ಹೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಪುರೋಹಿತರು ಮಂತ್ರಪುರಸ್ಸರವಾಗಿ ಪುಣ್ಯಾಹ ಮಾಡಿದ ನಂತರ ಗೋವಿನ ಗಂಜಲವನ್ನು ಬಳಸಿ, ದೇವರನ್ನು ಪುನಃ ಶುದ್ದಿಗೊಳಿಸುವುದು. ಅವರಿಗೆ ಪುರೋಹಿತರ ಮಂತ್ರಶುದ್ದಿಗಿಂತ ತಮ್ಮ ಆಚಾರ ಮತ್ತು ಸಾಂಪ್ರದಾಯಿಕ ಶುದ್ದಿಯೇ ಮಖ್ಯವಾಗಿದೆ. ದೇವರಿಗೆ ಅಭಿಷೇಕ, ಪೂಜೆ, ಹೋಮಗಳಾದ ತರುವಾಯ, ದೇವರಿಗೆ ನೈವೇದ್ಯ ರೂಪದಲ್ಲಿ ಕಡಲೆಕಾಳು, ಕಬ್ಬು, ಬೆಲ್ಲ, ಸೌತೇಕಾಯಿ, ಹೊಸ ಅಕ್ಕಿಯ ತಂಬಿಲ ‑ತಂಬಿಟ್ಟು, ಹೊಸ ಅಕ್ಕಿಯನ್ನು ಸಮರ್ಪಿಸುತ್ತಾರೆ.

ಈ ಎಲ್ಲಾ ಕ್ರಮಗಳನ್ನು ಅಲ್ಲಿನ ಸ್ಥಳೀಯ ಅರ್ಚಕರಾದ, ಚಂದ್ರಶೇಖರಯ್ಯ ಜೋಯಿಸ್ ವಿವರಿಸಿದ್ದು ಹೀಗೆ: ಯಾದವ ಕೆರೆಗೆ ಅವಭೃತ ಸ್ನಾನಕ್ಕೆ ಬರುವ ಎಲ್ಲಾ ಗ್ರಾಮದೇವತೆಗಳು ಅವೈದಿಕ ರೀತಿಯಲ್ಲಿ ಪೂಜೆಗೊಳ್ಳುವುದರಿಂದ, ವರ್ಷಕ್ಕೆ ಒಮ್ಮೆ ಜಾತ್ರೆಗೆ ಪೂರ್ವದಲ್ಲಿ ಆ ದೇವತೆಗಳ ಉತ್ಸವ ಮೂರ್ತಿಗಳ ಬಿಂಬ ಶುದ್ದೀ ರೂಪದಲ್ಲಿ ಈ ಪೂಜಾ ಕಾರ್ಯಗಳು ನೆರವೇರುತ್ತವೆ. ಈ ಕಾರ್ಯಕ್ರಮದ ಮೊದಲ ಹಂತವೆಂದರೆ ಗಂಗೆ ಪೂಜೆ ಅಥವಾ ಗಂಗೆಗೆ ಬಾಗಿನ ಕೊಡುವುದು. ಅನಂತರ ಗಣೇಶನನ್ನು ಪ್ರಾರ್ಥಿಸಿ, ಕಳಶ ಸ್ಥಾಪಿಸಿ, ಪುಣ್ಯಾಹ ಮಾಡಿದ ಬಳಿಕ, ಗಣೇಶ ಹಾಗೂ ನವಗ್ರಹ ಹೋಮ ಮಾಡುತ್ತಾರೆ. ತರುವಾಯ, ಪ್ರತಿ ಗ್ರಾಮದೇವತೆಯ ಪ್ರಧಾನ ಹೋಮವನ್ನು ಬೀಜಾಕ್ಷರ ಸಹಿತ, ಮೂಲ ಮಂತ್ರದಿಂದ ಮಾಡುತ್ತಾರೆ. ಇದಾದ ಬಳಿಕ, ಕಳೆಯನ್ನು ಬಿಂಬದಲ್ಲಿ ಆವಾಹನೆ ಮಾಡಿ ಸಂಸ್ಥಾಪಿಸಿ, ರಕ್ಷೆಯನ್ನು ಧರಿಸುತ್ತಾರೆ.[2]

ಗ್ರಾಮ ಹಿರಿಯರು ತೊಂಡನೂರಿನ ಕೆರೆಯನ್ನು “ಪಂಚಾಪ್ಸರಾ ತಟಾಕ” ”ಅಪ್ಸರಾ ತಟಾಕ” ಎಂದು ಕರೆಯುತ್ತಾರೆ. ಅವರ ಪ್ರಕಾರ, ಅಮಾವಾಸ್ಯೆ ಮತ್ತು ಪೌರ್ಣಮಿ ವಿಶೇಷ ದಿನಗಳು. ನಿವೃತ್ತ ಶಿಕ್ಷಕರಾದ ಟಿ.ಕೆ. ತಿಮ್ಮೇಗೌಡರು ಹೇಳುವಂತೆ: “ನಮ್ಮ ತಾತನ ಸ್ನೇಹಿತರಾದ ಜೋಗಪ್ಪ ಒಮ್ಮೆ ಪೌರ್ಣಮಿ ರಾತ್ರಿ, ಮೀನು ಹಿಡಿಯಲು ಅವನ ಜೊತೆಗಾರನ ಸಂಗಡ ಕೆರೆಗೆ ಹೋಗಿದ್ದರಂತೆ. ಅವತ್ತು ಭಾರಿ ಮಳೆ ಬಂದದ್ದರಿಂದ ಸಂಜೆ ಹಿಂದೆ ಬರಲಾಗಲಿಲ್ಲ. ಮೋಡಗಳು ಬಹಳವಾಗಿದ್ದರಿಂದ ಕತ್ತಲಾವರಿಸಿತು. ಬಲೆ ಬಿಟ್ಟು ಅಲ್ಲಿಯೇ ರಾತ್ರಿ ಸರಿಹೊತ್ತಿನವರೆಗೆ ಕುಳಿತು ಮಳೆನಿಂತ ಬಳಿಕ ಗ್ರಾಮಕ್ಕೆ ಬಂದರು. ಊಟಕ್ಕೆ ಬರುವಾಗ, ಇಬ್ಬರೂ ಸ್ನೇಹಿತರು ಯಾರಿಗೆ ಮೊದಲು ಎಚ್ಚರವಾಗುತ್ತದೆ ಅವರು ಮತ್ತೊಬ್ಬರನ್ನು ಕರೆದುಕೊಂಡು ಬಲೆ ಎತ್ತಲು ಬರುವುದೆಂದು ಕಟ್ಟು ಮಾಡಿಕೊಂಡು ಬಂದರು. ಆದರೆ ಜೋಗಪ್ಪ ಎದ್ದಾಗ ತಿಂಗಳಬೆಳಕು ಬಹಳ ಇದ್ದದ್ದರಿಂದ, ಬೆಳಕಾಗಿದೆ ಎಂದು ಗ್ರಹಿಸಿ ತನ್ನ ಜೊತೆಗಾರ ಕೆರೆಗೆ ಹೋಗಿರಬಹುದೆಂದು ತಿಳಿದು,  ಒಬ್ಬನೇ ಕೆರೆಯ ಬಳಿ ಬಂದನಂತೆ. ಅವನು ಕೆರೆಗೆ ಬಂದು ನೋಡುತ್ತಾನೆ. ಗುಡ್ಡದ ಮೇಲೆ ನಗಾರಿ, ನೌಬತ್ತು, ಡೌಲು (ಡೋಲು) ಬಡಿದು ನರ್ತನ ಮಾಡುತ್ತಿದ್ದ ದೇವತೆಗಳು ಕಾಣುತ್ತಾರೆ. ಅವಿತು ಕುಳಿತು ದೇವತೆಗಳ ನರ್ತನವನ್ನು ನೋಡುತ್ತಿದ್ದ ಜೋಗಪ್ಪನನ್ನು ಕಂಡ ದೇವತೆಗಳು ಆತನ ಪೂರ್ವಾಪರ ವಿಚಾರಿಸಿ, ಅವನಿಗೆ ತಾವು ಬರುವ ಸುದ್ದಿ ಯಾರಲ್ಲಿಯೂ ಹೇಳಬೇಡವೆಂದು ತಾಕೀತು ಮಾಡಿ, ಒಂದು ಚಿನ್ನದ ತುಂಡು ಕೊಟ್ಟರಂತೆ. ಜೋಗಪ್ಪನ ಹೊಟ್ಟೇಲಿ ಈ ಸುದ್ದಿ ಬಾಳ ದಿನ ಉಳಿಯಲಿಲ್ಲ. ಜೋಗಪ್ಪ ಇದನ್ನು ಅವನ ಜೊತೆಗಾರನಿಗೆ ಹೇಳಿ, ದೇವರು ಕೊಟ್ಟ ಚಿನ್ನ ತೋರಿಸಲು ಮನೆಗೆ ಬಂದು ಪೆಟ್ಟಿಗೆ ತೆಗೆದು ನೋಡುತ್ತಾನೆ. ಅದು ಮರಳಾಗಿತ್ತಂತೆ.

ವಸ್ತುಸ್ಥಿತಿ

ಸರ್ಕಾರಿ ದಾಖಲೆಗಳಲ್ಲಿ ಈ ಕೆರೆಯನ್ನು “ಮೋತಿ ತಲಾಬ್” ಎಂದು ದಾಖಲಿಸಲಾಗಿದೆ. ಈ ಕೆರೆಯ ಏರಿಯು ೩೯೦ ಅಡಿ ಉದ್ದವಾಗಿದ್ದು, ಎಂಬತ್ತು ಅಡಿ ಎತ್ತರವಾಗಿದೆ. ಕೆರೆಯ ತೂಬಿನ ಸಮೀಪದ ಬಂಡೆಯ ಮೇಲೆ ಇದರ ವಿವರಗಳಿದ್ದು, ಅದು ಸರ್ಕಾರಿ ದಾಖಲೆಗಳ ವಿವರಕ್ಕೆ ಹೋಲಿಕೆಯಾಗುವುದಿಲ್ಲ. ಈ ಕೆರೆಯು ಸುಮಾರು ೦.೪೬೭ ಟಿ.ಎಂ.ಸಿ.ಯಷ್ಟು ಜಲಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ೨೧೦೦ ಎಕರೆ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ.[3] ಈ ಕೆರೆ ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಸರಾಗಿದ್ದು, ಇತ್ತೀಚೆಗೆ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ಆದರೆ ಪ್ರವಾಸಿಗರ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಮೋತಿ ತಲಾಬ್ ಕೆರೆಯನ್ನು ಪದ್ಮಗಿರಿ ಶ್ರೇಣಿಯ ಎರಡು ಬೆಟ್ಟ ಸಾಲುಗಳ ನಡುವಿನ ಕಂದರವನ್ನು ಅಣೆಕಟ್ಟಾಗಿ ಕಟ್ಟಿ ನಿರ್ಮಿಸಲಾಗಿದೆ. ನೀರಿನ ಒತ್ತಡ ಏರಿಯ ಮೇಲಿರದೆ ಬೆಟ್ಟಗಳ ಮೇಲಿರುವುದು  ಈ ಕೆರೆಯ ವಿಶೇಷತೆ. ಕೆರೆಯಲ್ಲಿ ಶೇಖರವಾದ ಜಲ ವಿಶೇಷವಾದ ತೂಬಿನ ಮೂಲಕ ಹೊರಹರಿಯುತ್ತದೆ. ಇದನ್ನು ಮದಗವೆಂದು ಕರೆಯುತ್ತಾರೆ. ತೂಬನ್ನು ಏರಿಯಲ್ಲಿ ರಚಿಸದೆ ಬೆಟ್ಟದ ಬಂಡೆಯಲ್ಲಿ ನಿರ್ಮಿಸಿದ್ದಾರೆ. ಬೆಟ್ಟದ ಕಠಿಣವಾದ ಕಲ್ಲು ಬಂಡೆಯನ್ನು ಕೊರೆದು ನೀರಿನ ಒತ್ತಡವನ್ನು ಕಡಿಮೆ ಮಾಡಿ, ಕೊರೆದಿರುವ ಪ್ರದೇಶದಲ್ಲಿ ಸುಣ್ಣ, ಗಾರೆ ಮತ್ತು ಇಟ್ಟಿಗೆಗಳನ್ನು ಬಳಸಿ ಹಲವು ಹಂತಗಳಲ್ಲಿ ನೀರು ಹೋಗಲು ಅವಕಾಶ ಮಾಡಿರುತ್ತಾರೆ(ನೋಡಿ: ಚಿತ್ರ‑೫೯). ಕೆರೆಯ ನೀರಿನ ಮಟ್ಟವನ್ನು ಅನುಸರಿಸಿ, ತೂಬುಗಳನ್ನು ತೆರೆಯುತ್ತಿದ್ದರೆಂದು ಗ್ರಾಮಸ್ಥರು ತಿಳಿಸುತ್ತಾರೆ. ಹಾಗೆ ನೀರನ್ನು ನಿಲ್ಲಿಸಲು ಒಳಭಾಗದಿಂದ ಮರದ ದಿಮ್ಮಿಯನ್ನು ಬಳಸುತ್ತಿದ್ದರಂತೆ. ಆದರೆ ಈಗ, ಯಾಂತ್ರೀಕೃತ ತೂಬನ್ನು ನಿರ್ಮಿಸಿದ್ದಾರೆ. ತೂಬಿನ ರಚನೆಯನ್ನು ನೋಡಿದಾಗ ಮೇಲಿನ ಮಾಹಿತಿಯೆಲ್ಲಾ ನಿಜವೆನಿಸುತ್ತದೆ. ಸುಮಾರು ಒಂದೂವರೆ ಮೀಟರ್ ಅಗಲದ ಸುಮಾರು ೧೦೦ ಮೀಟರ್ ಉದ್ದವಾದ ಬೆಟ್ಟವನ್ನು ಕೊರೆದು ಮಾಡಿದ ಕಣಿವೆಯಲ್ಲಿ ನಿರ್ಮಿಸಿದ್ದಾರೆ. ಇದು ಅಂದಿನ ನೀರಾವರಿ ತಂತ್ರಜ್ಞಾನವನ್ನು ಎತ್ತಿಹಿಡಿಯುತ್ತದೆ. ಮದಗದಿಂದ ಹೊರ ಹರಿದ ನೀರು, ಕೆಳಗೆ ಹರಿದು, ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿತವಾದ ಮೇಲು ಕಾಲುವೆಯ ಮೂಲಕ ಕೆಳಗಿನ ಅಪ್ಪರಸನಕಟ್ಟೆ ಸೇರುತ್ತಿತ್ತು. ಕೆರೆ ಏರಿಯ ಕೆಳಭಾಗದಲ್ಲಿ ಹಾಗು ಅಪ್ಪರಸನ ಕಟ್ಟೆಯ ಮೇಲುಭಾಗದಲ್ಲಿ ಸಮಾನಾಂತರವಾಗಿ ನಿರ್ಮಾಣಗೊಂಡಿದ್ದ ಈ ಮೇಲು ಕಾಲುವೆ ಹಾಳಾಗಿದ್ದು, ಅವಶೇಷವಾಗಿ ಉಳಿದಿದೆ. ಜಲತಂತ್ರಜ್ಞಾನ ದೃಷ್ಟಿಯಿಂದ ಈ ಅವಶೇಷಗಳು ಅಧ್ಯಯನ ಯೋಗ್ಯವಾಗಿವೆ. ಕೆರೆಯ ಏರಿಯನ್ನು ತಲುಪಲು ನರಸಿಂಹ ದೇವಾಲಯದಿಂದ ಹಾಸುಕಲ್ಲುಗಳನ್ನು ಬಳಸಿ ಮಾಡಿರುವ ಪ್ರಾಚೀನ ದಾರಿ ಇದೆ.

ಮದಗ

ಯಾದವ ಸಮುದ್ರದಿಂದ ಪ್ರಾರಂಭವಾಗಿ ಮೋತಿ ತಲಾಬ್‌ನವರೆಗೆ ಬೆಳೆದ ಈ ಕೆರೆ ಇಲ್ಲಿನ ಜನರ ಜೀವನಾಡಿಯಾಗಿದೆ. ಕೆರೆಯ ಇತಿಹಾಸ ಐತಿಹ್ಯಗಳಷ್ಟು ಈ ಕೆರೆಯ ತೂಬು ಹೆಸರಾಗಿದೆ. ಈ ಕೆರೆಯ ತೂಬನ್ನು “ರಾಮಾನುಜರ ಗಂಗೆ”, “ರಾಮಾನುಜರ ತೀರ್ಥ” ಮತ್ತು ಮದಗ ಎಂದೆಲ್ಲಾ ಕರೆಯುತ್ತಾರೆ. ಮದಗ ಪದಕ್ಕೆ ಕನ್ನಡ ನಿಘಂಟು ಕೆರೆಯ ತೂಬು, ನೀರು ಹರಿಯುವ ಕಾಲುವೆ ಎಂಬ ಅರ್ಥಗಳನ್ನು ಕೊಡುತ್ತದೆ.[4]

ಇಂದಿಗೂ ಸ್ಥಳೀಯರು ಹೇಳುವಂತೆ, ರಾಮಾನುಜರ ಗಂಗೆಯಲ್ಲಿ ಪ್ರೇತ, ದೆವ್ವ ಪೀಡೆ ಹಿಡಿದವರನ್ನು ಕರೆತಂದು, ಇದರಲ್ಲಿ ಸ್ನಾನ ಮಾಡಿಸಿದರೆ ಬಿಟ್ಟು ಹೋಗುತ್ತವೆ ಎಂದು ಹಲವರು ನಂಬುತ್ತಾರೆ. ಅಂತಹ ಒಂದು ಸಂದರ್ಭ ನಮ್ಮ ಇತ್ತೀಚಿನ ಕ್ಷೇತ್ರ ಕಾರ್ಯದಲ್ಲಿ ಕೂಡ ಕಂಡು ಬಂದಿತು. ಇದಕ್ಕೆಲ್ಲ ಕಾರಣ ಅವರುಗಳು ಇದನ್ನು ದೇವಗಂಗೆ ಎಂದು ಭಾವಿಸಿದ್ದಾರೆ. ಮದಗ ನಿರ್ಮಾಣವಾದ ಬಗ್ಗೆ ಸಹ ಇಲ್ಲಿ ಹಲವು ಐತಿಹ್ಯಗಳಿವೆ. ಒಂದು ಐತಿಹ್ಯದ ಪ್ರಕಾರ ರಾಮಾನುಜಾಚಾರ್ಯರು ತಮ್ಮ ಮಂತ್ರದಂಡದಿಂದ ಬೆಟ್ಟವನ್ನು ಕೊರೆದು ಈ ಕೆರೆಯ ತೂಬನ್ನು ನಿರ್ಮಿಸಿದ್ದಾರೆ. ಆದ್ದರಿಂದ ಇದನ್ನು “ರಾಮಾನುಜರ ಗಂಗೆ”, “ರಾಮಾನುಜರ ತೀರ್ಥ” ಎಂದೆಲ್ಲಾ ಕರೆಯುವುದಾಗಿ ಐತಿಹ್ಯ ಹೇಳುತ್ತಾರೆ.

ಮತ್ತೊಂದು ಐತಿಹ್ಯ ಹೀಗೆ ಹೇಳುತ್ತದೆ: “ನಮ್ಮೂರಿನ ಕೆರೆಯ ಬಚ್ಚಲಿರುವ ಜಾಗವನ್ನು ನೀವು ನೋಡಿದ್ದೀರಿ. ಅದೊಂದು ಅದ್ಭುತವಾದ ಜಾಗ. ರಾಕ್ಷಸಮ್ಮ ಬಂಡೆಗಳನ್ನು ಕೊಚ್ಚಿಕೊಂಡು ಅಲ್ಲಿಂದಲೇ ಓಡಿಹೋದಳು ಎನ್ನುತ್ತಾರೆ. ಈ ತೂಬಿನ ಬಗ್ಗೆ ಮತ್ತೊಂದು ಕಥೆ ಇದೆ. ಆ ಬಂಡೆಯಲ್ಲಿ ಒಂದಾದ ಮೇಲೆ ಒಂದರಂತೆ ಏಳು  ಕಂಡಿಗಳಿವೆ. ನೀರು ಹರಿದು ಬರುವುದು ಅಲ್ಲಿಂದಲೇ. ಒಂದು ಸಾರಿ ಒಂದು ಹೆಬ್ಬಾವು ಆ ಏಳು ಕಂಡಿಗಳೊಳಗೆ ಅತ್ತಿಂದಿತ್ತ ಇತ್ತಿಂದತ್ತ ನುಸುಳಿ ಭದ್ರವಾಗಿ ಹೆಣೆದುಕೊಂಡುಬಿಟ್ಟಿತು. ಅದರಿಂದ ನೀರು ಹೊರಗೆ ಹರಿಯದಾಯಿತು, ಆಗ ಆ ಊರಿನ ಯಜಮಾನ ಡಂಗುರ ಸಾರಿಸಿ, ಯಾರು ಮದಗದಲ್ಲಿ ಇಳಿದು, ಹಾವನ್ನು ಬಿಡಿಸಿ, ಗದ್ದೆಗೆ ನೀರು ಬರುವ ಹಾಗೆ ಮಾಡುತ್ತಾರೋ ಅವರಿಗೆ ಬಳುವಳಿ ಕೊಡುತ್ತೇವೆಂದು ಹೇಳಿದರು. ಇದರಿಂದ ಉತ್ತೇಜಿತನಾದ ಹರಿಜನರ ಹುಡುಗನೊಬ್ಬ ಮೈಗೆಲ್ಲಾ ಕತ್ತಿ ಕಟ್ಟಿಕೊಂಡು ಕೈಯಲ್ಲಿ ಕತ್ತಿ ಹಿಡಿದು, ಮದಗಕ್ಕೆ ಇಳಿದು, ಹಾವಿನೊಂದಿಗೆ ಸೆಣಸಿ, ನೀರು ಬಿಡಿಸಿದನು. ಆದರೆ ಅವನಿಗೂ ಏಟಾಗಿ ತೀರಿಹೋದನು. ಅವನ ಕುಟುಂಬದವರಿಗೆ, ಅವನಿಗೆ ಹಾಕಿದ್ದ ಹೂವಿನಹಾರದ ಹೂವುಗಳು ನೀರಿನಲ್ಲಿ ಸಾಗಿದವರೆಗೆ ಜಮೀನನ್ನು ಬಳುವಳಿ ನೀಡಿದರು.”[5]

ಅಪ್ಪರಸನ ಕಟ್ಟೆ

ಅರಸನ ಕಟ್ಟೆಯೇ ಅಪ್ಪರಸನ ಕಟ್ಟೆಯಾಯಿತೆಂದು ಐತಿಹ್ಯಗಳು ತಿಳಿಸುತ್ತವೆ(ನೋಡಿ: ಚಿತ್ರ‑೬೦). ಅಪ್ಸರೆಯರ ತಟಾಕವೇ ಅಪ್ಪರಸನಕಟ್ಟೆಯಾಗಿದೆಯೆಂದು ಮತ್ತೆ ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಗ್ರಾಮಸ್ಥರು ಈ ಕೆರೆಯಲ್ಲಿ ಕಂಡುಬರುವ ತಾವರೆಯ ಗಿಡವನ್ನು ಅನುಸರಿಸಿ, ಅದನ್ನೇ ಅಪ್ಸರೆಯರ ತಟಾಕವೆನ್ನುತ್ತಾರೆ. ಮೇಲಿನ ಕೆರೆಯ ನೀರನ್ನು ದೈವಕೈಂಕರ್ಯಗಳಿಗೆ ಬಳಸುತ್ತಿದ್ದರಿಂದ, ಕೆರೆಯ ಏರಿಯಿಂದ ಜಿನುಗಿದ ನೀರನ್ನು ಕೆಳಮಟ್ಟದಲ್ಲಿ ಶೇಖರಿಸಿ, ಅದನ್ನು ಶೌಚ ಮತ್ತು ವ್ಯಕ್ತಿಗತ ನೈರ್ಮಲ್ಯಕ್ಕೆ ಬಳಸುತ್ತಿದ್ದರೆಂದು ಕ್ಷೇತ್ರ ಕಾರ್ಯದಲ್ಲಿ ಮಾಹಿತಿ ದೊರಕಿದೆ.

ಈ ಕೆರೆಯ ಹೆಸರಿನ ಬಗೆಗೆ ಚಿಂತಿಸುತ್ತಾ ಅಪ್ಸರಾತಟಾಕ, ಅಪ್ಸರೆಯ ಕೆರೆ, ಅಗಸರ ಕಟ್ಟೆಯಾಗಿ ಅನಂತರದಲ್ಲಿ ಅಪ್ಪರಸನ ಕಟ್ಟೆಯಾಗಿರಬಹುದೆಂದು ಹೇಳಬಹುದು. ಆದರೆ, ತೊಂಡನೂರಿನ ಕೆರೆಗಳ ಬೆಳವಣಿಗೆಯನ್ನು ಗುರುತಿಸಿದರೆ ಅಪ್ಸರಾತಟಾಕ ‑ಅಗಸರ ಕಟ್ಟೆ ‑ಅಪ್ಪರಸನ ಕಟ್ಟೆಯಾಗಿರುವ ಸಾಧ್ಯತೆಗಳಿವೆ. ಪ್ರಾರಂಭದ ದಿನಗಳಲ್ಲಿ ಇಲ್ಲಿನ ಪ್ರಾರಂಭಿಕ ಕೆರೆ ಇದಾಗಿದ್ದರಿಂದ, ಮನೋಹರವಾಗಿದ್ದರಿಂದ ಅಪ್ಸರಾತಟಾಕವಾಗಿ, ಮೇಲಿನ ಕೆರೆ ಕಟ್ಟಿದ ನಂತರ, ಕೆಳಗಿನ ಕೆರೆ, ದೈವಕಾರ್ಯಗಳಿಗೆ ಬದಲಾಗಿ, ಜನರ ವ್ಯಕ್ತಿಗತ ಶೌಚ ಹಾಗು ಇತರ ಕಾರ್ಯಗಳಿಗೆ ಬಳಕೆಯಾಗಿದ್ದರಿಂದ ಅಗಸರಕಟ್ಟೆಯಾಗಿ, ಅಪ್ಪರಸನ ಕಟ್ಟೆಯಾಗಿರುವ ಸಾಧ್ಯತೆಗಳು ಕಂಡುಬರುತ್ತವೆ. ಗ್ರಾಮದ ವೃದ್ಧರೊಬ್ಬರು, ಅಪ್ಪರಸನ ಕಟ್ಟೆಗೆ ಕೆರೆಯ ತೂಬಿನಿಂದ ಬರುವ ನೀರು ಹರಿಯುತ್ತಿರಲಿಲ್ಲ. ಅಲ್ಲದೆ ಇದರ ನೀರು ವ್ಯವಸಾಯಕ್ಕೆ ಬಳಕೆಯಾಗುತ್ತಿರಲಿಲ್ಲವೆಂದಿದ್ದಾರೆ. ಅಂದರೆ ಮೇಲಿನ ಕೆರೆಯ ನೀರು ವ್ಯವಸಾಯಕ್ಕೆ ಪ್ರತ್ಯೇಕವಾಗಿ ಹರಿಯುತ್ತಿತ್ತು. ಈ ಎಲ್ಲಾ ವಿವರಗಳನ್ನು ಗಮನಿಸಿದಾಗ ಈ ಕೆರೆ, ಅಗಸರಿಂದ ಹಾಗೂ ಇತರ ವ್ಯಕ್ತಿಗಳಿಂದ ವ್ಯಕ್ತಿಗತ ಶೌಚಕ್ಕೆ ಬಳಕೆಯಾಗಿದ್ದಿತು. ಹಾಗಾಗಿ, ಅಪ್ಸರೆಯ ಕೆರೆ, ಅಗಸರಕಟ್ಟೆ ಎಂದಾಗಿ, ಆನಂತರ ಅಪ್ಪರಸನ ಕಟ್ಟೆಯಾಗಿರಬೇಕು. ಚೋಳರಿಗೂ ಪೂರ್ವದ ಈ ಕೆರೆಯು ಇಂದು ಅಪ್ಪರಸನ ಕೆರೆಯಾಗಿರುವ ಸಾಧ್ಯತೆಗಳಿವೆ. ಅಂದರೆ ಪ್ರಾರಂಭದ ಕೆರೆ ಇದಾಗಿದ್ದು, ಆ ನಂತರ ಚೋಳರು ಬೃಹತ್ ನೀರಾವರಿ ಕೆರೆಗಳನ್ನು ನಿರ್ಮಿಸಿರುವಂತೆ ಇದರ ಮೇಲಿನ ಯಾದವ ಸಮುದ್ರವನ್ನು ರಚಿಸಿದ್ದಾರೆ. ಹಾಗಾಗಿ ಈ ಕೆರೆ, ಕೆಳಗಿನ ಕೆರೆಯಾಗಿ ಶೌಚ ಇತ್ಯಾದಿಗಳಿಗೆ ಬಳಕೆಯಾಗಿ, ತನ್ನ ಸ್ಥಾನವನ್ನು ಮೇಲಿನ ಕೆರೆಗೆ ಬಿಟ್ಟುಕೊಟ್ಟಿದೆ ಎಂದರೆ ತಪ್ಪಾಗಲಾರದು. ಕಾರಣ ಕೆರೆಯ ನಿರ್ಮಾಣ, ಅದರ ಸ್ಥಳ ಈ ನಿರ್ಧಾರಕ್ಕೆ ಪೂರಕವಾಗಿದೆ. ಇಂದು ಮೇಲಿನ ಕೆರೆಯ ಮದಗದಿಂದ ಬಿದ್ದ ನೀರನ್ನು ಇಲ್ಲಿ ಸಂಗ್ರಹಿಸಿಕೊಂಡು ಕಾಲುವೆಯ ಮೂಲಕ ವ್ಯವಸಾಯಕ್ಕೆ ನೀರೊದಗಿಸುತ್ತದೆ. ಹಾಗಾಗಿ ಈ ಕಾಲುವೆಯು ಮೇಲಿನ ಕೆರೆಯ ಬಲದಂಡೆ ಕಾಲುವೆಯಾಗಿ ತೊಣ್ಣೂರು ಗ್ರಾಮದ ಜಮೀನುಗಳಿಗೆ ನೀರುಣಿಸುತ್ತದೆ.

ರಾಮಾನುಜರ ಕಟ್ಟೆ

ಈ ಕಟ್ಟೆಯು ನರಸಿಂಹ ಸ್ವಾಮಿಯ ದೇವಾಲಯದ ಬಲಪಾರ್ಶ್ವದಲ್ಲಿ ಕಂಡುಬರುತ್ತದೆ. ಈ ಕಟ್ಟೆಯು ಇಲ್ಲಿನ ವೈಷ್ಣವ ದೇವಾಲಯಗಳಾದ, ಕೃಷ್ಣಸ್ವಾಮಿ, ನಂಬಿನಾರಾಯಣ ಮತ್ತು ನರಸಿಂಹ ಸ್ವಾಮೀ ದೇವಾಲಯಗಳ ಸಮೀಪದಲ್ಲಿದೆ. ಅಲ್ಲದೆ ಶ್ರೀವೈಷ್ಣವ ಬ್ರಾಹ್ಮಣರು ವಾಸಿಸುವ ಅಗ್ರಹಾರದ ನಡುವೆ ಈ ಕಟ್ಟೆ ಇದ್ದುದರಿಂದ ಅವರು ಈ ಕಟ್ಟೆಯನ್ನು ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬಳಸಿಕೊಂಡಿದ್ದಾರೆ.  ಕಾರಣ ನರಸಿಂಹ ತೀರ್ಥವೆಂದು ಕರೆಯುವ ಮತ್ತೊಂದು ಕೊಳ ಅಥವಾ ಬಾವಿ ರಾಮಾನುಜರ ಕಟ್ಟೆಯ ಪಾರ್ಶ್ವದಲ್ಲಿಯೇ ಇದೆ(ನೋಡಿ: ಚಿತ್ರ‑೬೧). ಸ್ಥಳೀಯರ ಹೇಳಿಕೆ ಹಾಗೂ ಪ್ರತೀತಿಯಂತೆ, ನರಸಿಂಹ ತೀರ್ಥವೇ ನಾರಾಯಣಸ್ವಾಮಿ ಮತ್ತು ನರಸಿಂಹಸ್ವಾಮಿ ಆಲಯಗಳ ತೀರ್ಥದ ಅವಶ್ಯಕತೆಯನ್ನು ಪೂರೈಸುತ್ತಿತ್ತೆಂದು ತಿಳಿದುಬರುತ್ತದೆ. ನರಸಿಂಹತೀರ್ಥದ ಮುಂದಿರುವ ಪ್ರಾಚೀನ ತೀರ್ಥಸ್ನಾನ ಮಂಟಪ ಸಹ ಇದಕ್ಕೆ ಪುಷ್ಠಿಯನ್ನು ಕೊಡುತ್ತದೆ. ನರಸಿಂಹಸ್ವಾಮಿ ದೇವಾಲಯದ ಅರ್ಚಕರು ಹೇಳುವಂತೆ, ಮೇಲೆ ಹೇಳಿದ ದೇವಾಲಯಗಳ ವಿಶೇಷ ಸಂದರ್ಭಗಳಲ್ಲಿ ದೇವಾಲಯದ ಉತ್ಸವಮೂರ್ತಿಯ ಅವಭೃತ ಸ್ನಾನ ಈ ಮಂಟಪದಲ್ಲಿ ನೆರವೇರುತ್ತಿತ್ತು. ಹಾಗೂ ಇಂದಿಗೂ ಈ ಪದ್ಧತಿ ಇಲ್ಲಿ ಚಾಲ್ತಿಯಲ್ಲಿದೆ. ಹಾಗೆಂದ ಮೇಲೆ, ಕೊಳದ ತೀರ್ಥವನ್ನು ಕುಡಿಯಲು, ದೇವರ ಕಾರ್ಯಗಳಿಗೆ, ಸೀಮಿತವಾಗಿರಿಸಿಕೊಂಡು, ಕಟ್ಟೆಯ ನೀರನ್ನು ಸ್ನಾನ ಮತ್ತು ಇತರ ಅವಶ್ಯಕತೆಗಳಿಗೆ ಬಳಸಿಕೊಂಡಿದ್ದರೆಂದು ಖಚಿತವಾಗಿ ಹೇಳಬಹುದು.

ಹಾರುವರ ಕಟ್ಟೆ

ಗ್ರಾಮದಲ್ಲಿ ಇಂದು ಈ ಹೆಸರಿನ ಕಟ್ಟೆ ಕಂಡುಬರುವುದಿಲ್ಲ. ಅದನ್ನು ಮುಚ್ಚಿ ಹಾಕಿ ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಟ್ಟಲಾಗಿದೆ. ಆದರೆ, ಅದರ ಹೆಸರಿನ ನಿಷ್ಪತ್ತಿ ಮತ್ತು ಅಲ್ಲಿ ಕಂಡುಬರುವ ಇಂತಹ ಸ್ಮಾರಕಗಳ ಆಧಾರದಿಂದ ಈ ಪ್ರದೇಶದ ಬಗ್ಗೆ ಕೆಲವು ಮಾಹಿತಿಗಳನ್ನು ಕಲೆಹಾಕಬಹುದು. ಈ ಕೆರೆಯನ್ನು ಗ್ರಾಮದಿಂದ ಪಾಂಡವಪುರಕ್ಕೆ  ಹೋಗುವ ಮಾರ್ಗದ ಬಲಬದಿಯಲ್ಲಿ ಗುರುತಿಸಬಹುದು. ಅಂದರೆ ಈಗಿನ ಊರಿನ ಆಗ್ನೇಯ ಮೂಲೆಯಲ್ಲಿತ್ತು. ಈ ಕಟ್ಟೆಯ ಹೆಸರೇ ಸೂಚಿಸುವಂತೆ, ಕಟ್ಟೆಯ ಬಳಕೆ ಬಹುಶಃ ಹಿಂದೆ ಅಗ್ರಹಾರದ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿರಬೇಕು. ಹಾಗಾಗಿ ಇದನ್ನು ಹಾರುವರ ಕಟ್ಟೆ ಎಂದು ಕರೆದಿರಬಹುದು. ಕಾರಣ ಹಿಂದಿನ ಕಾಲದಲ್ಲಿ ಬ್ರಾಹ್ಮಣರು ಬಳಸುವ ನೀರಿನ ಮೂಲಗಳನ್ನು ಇತರರು ಬಳಸುತ್ತಿರಲಿಲ್ಲ. ಈ ಕೆರೆಗೆ ನೀರು ಮೇಲಿನ ಚಟ್ಟಂಗೆರೆಯಿಂದ ಹರಿದು ಬರುತ್ತಿತ್ತು. ಇದನ್ನು ಊರಿನವರು ಶೌಚ ಮತ್ತು ದನಕರುಗಳಿಗೆ ಬಳಸುತ್ತಿದ್ದರು. ಈ ಕೆರೆಯ ದಕ್ಷಿಣ ಮತ್ತು ನೈರುತ್ಯಕ್ಕೆ ಊರಿದ್ದ ಸೂಚನೆಗಳು ದೊರೆಯುತ್ತವೆ.

ಚಟ್ಟಂಗೆರೆ

ಸ್ಥಳೀಯವಾಗಿ, ಚಟ್ಟಂಗೆರೆಯ ಪಕ್ಕದ ಪ್ರದೇಶ ಮತ್ತು ಪುಟ್ಟ ಗ್ರಾಮವನ್ನು ಪಟ್ಟಣಗೆರೆ ಎಂದು ಕರೆಯುತ್ತಾರೆ. ಇನ್ನು ಕೆಲವರು ಇಲ್ಲಿ ಹಿಂದೆ ಭತ್ತವನ್ನು ಅಕ್ಕಿ ಮಾಡುವ ಕೊಟ್ಟಣಗಳು ಇದ್ದದ್ದರಿಂದ ಇದನ್ನು ಕೊಟ್ಟಣಗೆರೆ‑ಚಟ್ಟಂಗೆರೆ ಎಂದು ಕರೆಯುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ. ಅಲ್ಲಿನ ನೀರಿನ ಮೂಲವಾದ ಈ ಕೆರೆಗೂ ಅದೇ ಹೆಸರು ಬಂದಿದೆ ಎನ್ನುತ್ತಾರೆ.

ಪ್ರಸ್ತುತ ಸಾಲಾರ್ ಮಸೂದ್ ದರ್ಗದ ಹಿಂದೆ ಕಂಡುಬರುವ ಕೆರೆಯನ್ನು ಚಟ್ಟಂಗೆರೆ (ಪಟ್ಟಣಗೆರೆ) ಎಂದು ಕರೆಯಲಾಗುತ್ತದೆ. ಕೆರೆಯ ಹೆಸರಿನ ಹಿಂದಿನ ನಿಷ್ಪತ್ತಿಯ ಮೂಲ ಮತ್ತು ಸುತ್ತಮುತ್ತಲಿನ ಸ್ಮಾರಕಗಳ ಅಧ್ಯಯನ ಕೆರೆಯ ಹೆಸರಿಗೆ ಹೊಸ ಅರ್ಥ ಕೊಡುತ್ತದೆ.

ಊರಲ್ಲಿ ಚಿನಕುರುಳಿಗೆ ಸಾಗುವ ಮಾರ್ಗದಲ್ಲಿ ಬಂದರೆ, ಮೊದಲು ನಮಗೆ ಬಸದಿ ಎಂದು ಗುರುತಿಸಿದ ಒಂದು ಪಾಳುಮಂಟಪ ದೊರೆಯುತ್ತದೆ. ಅದರ ಪಕ್ಕದಲ್ಲಿಯೆ ಬಸದಿ ಕೊಳವಿದ್ದುದಾಗಿ, ಅದನ್ನು ರಸ್ತೆ ಮಾಡಲು ಮುಚ್ಚಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಆನಂತರ ದೊರೆಯುವುದೇ ಸಾಲಾರ್ ಮಸೂದ್ ದರ್ಗ ಮತ್ತು ಅದರ ಹಿಂದಿರುವ ಪ್ರಸ್ತುತ ಚಟ್ಟಂಗೆರೆ ಕೆರೆ. ತೊಂಡನೂರಿನ ಶಾಸನವೊಂದು ನಖರೇಶ್ವರ ಎಂಬ ದೇವಾಲಯವನ್ನು ಹೆಸರಿಸುತ್ತದೆ. ಅದನ್ನು ಹುಡುಕುತ್ತಾ ಹೊರಟ ನಮಗೆ ಎಡವಿದ್ದೆ ಸಾಲಾರ್‌ಮಸೂದ್ ದರ್ಗ. ದರ್ಗದ ರಚನಾಶೈಲಿ ಸಂಪೂರ್ಣವಾಗಿ ಹಿಂದೂ ದೇವಾಲಯ ವನ್ನು ಹೋಲುತ್ತದೆ. ಶಾಸನದಲ್ಲಿ ಉಲ್ಲೇಖಿತ ನಖರೇಶ್ವರ ಇಲ್ಲಿನ ಪಟ್ಟಣ ಪ್ರದೇಶದ ಪ್ರಮುಖ ಆಲಯವಾಗಿದ್ದಿರಬಹುದು. ಕಾರಣ ಮಧ್ಯಯುಗದಲ್ಲಿ ನಖರ ವ್ಯಾಪಾರೀ ಸಂಘ ತನ್ನ ಕಾರ್ಯಕ್ಷೇತ್ರವಿದ್ದೆಡೆಯಲ್ಲೆಲ್ಲಾ ಶಿವಾಲಯಗಳನ್ನು ರಚಿಸಿರುವ ಉದಾಹರಣೆಗಳಿವೆ. ಉದಾಹರಣೆಗೆ ಬಸರೂರಿನಲ್ಲಿ ಸಹ ಇದೇ ಕಾಲದ ಶಾಸನೋಕ್ತ ನಖರೇಶ್ವರ ದೇವಾಲಯವಿದೆ. ಬಸರೂರು ಸಹ ಒಂದು ಪ್ರಮುಖ ವ್ಯಾಪಾರ ಕೇಂದ್ರ. ಹಾಗೆಯೇ ತೊಂಡನೂರು ಒಂದು ಪ್ರಮುಖ ವ್ಯಾಪಾರ ಪಟ್ಟಣ ಹಾಗೂ ಉಪ ರಾಜಧಾನಿ. ಹೊಯ್ಸಳರ ಕಾಲದಲ್ಲಿ ಒಂದು ಉತ್ತಮ ನಗರವಾಗಿ ಅಭಿವೃದ್ದಿ ಹೊಂದಿದ ಈ ಪಟ್ಟಣದಲ್ಲಿ ಹಲವು ಬಗೆಯ ವ್ಯಾಪಾರ ವಹಿವಾಟು ನಡೆಯುತ್ತಿದ್ದುದಕ್ಕೆ ಆಧಾರಗಳಿವೆ. ಹಾಗಾಗಿ, ಈ ಕೆರೆಯ ಪ್ರದೇಶವೇ ಪಟ್ಟಣಗೆರೆ. ಇಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ವ್ಯಾಪಾರಿಗಳು ಇಲ್ಲಿ ನೆಲೆಸಿದ್ದರಿಂದ ಈ ಪ್ರದೇಶವನ್ನು ಪಟ್ಟಣವೆಂದು ಕರೆದಿದ್ದಾರೆ. ಅದಕ್ಕೆ ಆಸರೆಯಾದ ಕೇರಿ, ಪಟ್ಟಣಕೇರಿ ಹಾಗೂ ಕೆರೆ ಪಟ್ಟಣಕೆರೆಯಾಗಿದೆ ಎಂದು ತಿಳಿಯಬಹುದು. ಇನ್ನು ಕೊಟ್ಟಣಗೇರಿಗಳ ವಿಚಾರಕ್ಕೆ ಬಂದರೆ, ಅದೂ ಇದೇ ಆಸುಪಾಸಿನಲ್ಲಿ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇಲ್ಲಿ ಭತ್ತ ಬೆಳೆಯುತ್ತಿದ್ದು, ಶಾಸನಗಳಿಂದ ವೇದ್ಯವಾಗುತ್ತದೆ. ದೇವಾಲಯಗಳಿಗೆ ಅಕ್ಕಿಯನ್ನು ದಾನ ನೀಡಿರುವುದನ್ನು ಶಾಸನಗಳು ಉಲ್ಲೇಖಿಸಿವೆ. ಪಟ್ಟಣ ಪ್ರದೇಶಗಳಲ್ಲಿ ಉಪಕಸುಬುಗಳು ಬಳಕೆಯಲ್ಲಿತ್ತು. ಪಟ್ಟಣ ಪ್ರದೇಶಗಳಲ್ಲಿ ಭತ್ತದಿಂದ ಅಕ್ಕಿ ಮಾಡುವ, ಎಣ್ಣೆ ಮಾಡುವ ಉಪ ಕಸುಬುಗಳು ಬಹಳವಾಗಿ ಪ್ರಚಲಿತದಲ್ಲಿತ್ತು. ನಖರ ಸಂಘ ಅಕ್ಕಿಯ ವ್ಯಾಪಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಸಹ ತಿಳಿದುಬರುತ್ತದೆ. ಹಾಗಾಗಿ ಇಲ್ಲಿ ಕೊಟ್ಟಣಗೇರಿ ಸಹ ಇದ್ದಿರಬೇಕು. ಇವುಗಳ ಅಪಭ್ರಂಶ ರೂಪವೇ (ಪಟ್ಟಣ-ಕೊಟ್ಟಣ) ಚಟ್ಟಂಗೆರೆಯಾಗಿರ ಬಹುದು. ಇಲ್ಲಿ ಎರಡೂ ಸಾಧ್ಯತೆಗಳು ಸಾಧುವೆಂದು ತಿಳಿದುಬರುತ್ತದೆ. ದೇವಾಲಯವಿದ್ದ ಪ್ರದೇಶವು ಅಗ್ರಹಾರವಾಗಿದ್ದರಿಂದ ಕೇವಲ ಬ್ರಾಹ್ಮಣರು ಅಲ್ಲಿ ವಾಸಿಸುತ್ತಿದ್ದರು. ಅದರ ಸಮೀಪದಲ್ಲಿ ವರ್ತಕರು, ಇತರ ಜನರು ವಾಸಿಸುತ್ತಿದ್ದರು. ಹಾಗಾಗಿ, ಇದನ್ನು ಪಟ್ಟಣ ಪ್ರದೇಶವೆಂದು ಕರೆದಿದ್ದಾರೆ. ಇಲ್ಲಿನ ಶಾಸನಗಳಲ್ಲಿ ದೇವಾಲಯಗಳಿಗೆ ಅಕ್ಕಿಯನ್ನು ಅಧಿಕವಾಗಿ ದಾನ ಮಾಡಿರುವ ವಿವರಗಳು ಕಂಡುಬರುತ್ತದೆ. ದೇವಾಲಯದ ಸಮೀಪದಲ್ಲಿಯೇ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಜಿನವರಿಗೆ ಮತ್ತು ವಾದ್ಯದವರಿಗೆ ದತ್ತಿ ನೀಡಿದ ಜಮೀನಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇದನ್ನು ಕೊಟ್ಟಣಗೆರೆಯಿಂದ ಚಟ್ಟಂಗೆರೆ ಆಗಿರಬಹುದೆಂದೂ ಊಹಿಸಬಹುದಾಗಿದೆ.

ಈ ಕೆರೆಯ ನೀರನ್ನು ಬಳಸಿ, ದೇವಾಲಯದ ಕೆಳಗಿನ ಪ್ರದೇಶವನ್ನು ನೀರಾವರಿಗೆ ಒಳಪಡಿಸಿ ವ್ಯವಸಾಯ ಮಾಡುತ್ತಿದ್ದರು. ಇಂದು ಕೆರೆ ಹೂಳು ತುಂಬಿಕೊಂಡು ಸಣ್ಣ ಕೆರೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಇದರ ಅಚ್ಚುಕಟ್ಟು ಮತ್ತಿತರ ವಿವರಗಳು ಲಭ್ಯವಾಗಿಲ್ಲ.

ಕುರುಂಕಟ್ಟೆ

ಚಟ್ಟಂಗೆರೆಯಿಂದ ಚಿನಕುರುಳಿ ರಸ್ತೆಯಲ್ಲಿ ಮುಂದವರಿದರೆ ಕಣ್ವ ಋಷಿಗಳು ತಪಸ್ಸನ್ನಾಚರಿಸಿದ ಆಶ್ರಮ ಪ್ರದೇಶವೆಂದು ಬೆಟ್ಟದ ತಪ್ಪಲಿನಲ್ಲಿ ಪ್ರಾಚೀನ ದೇವಾಲಯವನ್ನು ಗುರುತಿಸುತ್ತಾರೆ. ಆ ದೇವಾಲಯದ ಮುಂದೆ ತುಂಬಾ ದೂರದಲ್ಲಿ ಕಾಣುವ ಕಟ್ಟೆಯೇ ಕುರುಂಕಟ್ಟೆ. ಇದರ ನೀರನ್ನು ವ್ಯವಸಾಯಕ್ಕೆ ಬಳಸುತ್ತಿದ್ದುದು ತಿಳಿದುಬರುತ್ತದೆ. ಆದರೆ ಅದರ ಬಗ್ಗೆ ವಿವರಗಳು ಲಭ್ಯವಿಲ್ಲ. ಹೆಸರಿನ ಬಗ್ಗೆ ಸಹ ಸರಿಯಾದ ಮಾಹಿತಿ ದೊರೆಯುವುದಿಲ್ಲ.

ಕಂಡ್ರಕಟ್ಟೆ

ಊರಿನ ಪೂರ್ವದಿಕ್ಕಿನಲ್ಲಿ ದೇವರಾಜಪಟ್ಟಣದ ಸಮೀಪದಲ್ಲಿ ಕಂಡ್ರಕಟ್ಟೆಯನ್ನು ಗುರುತಿಸುತ್ತಾರೆ. ಆದರೆ ಇಂದು ಅದು ಕೂಡ ಮುಚ್ಚಿಹೋಗಿದೆ. ಈ ಹಿಂದಿನ ದಿನಗಳಲ್ಲಿ ಈ ಕಟ್ಟೆಯನ್ನು ಗ್ರಾಮದ ಮಡಿವಾಳರು, ಮಾನವ ಅಶೌಚದ ಬಟ್ಟೆಯನ್ನು ಶುದ್ಧ ಮಾಡಲು ಬಳಸುತ್ತಿದ್ದರೆಂದು ತಿಳಿಸುತ್ತಾರೆ.

ಸುಂಕದಕಟ್ಟೆ

ಸುಂಕದಕಟ್ಟೆಯನ್ನು ಸಹ ಇದೇ ಪ್ರಾಚೀನ ದೇವರಾಜ ಪಟ್ಟಣದ ಸಮೀಪದಲ್ಲಿ ಗುರುತಿಸುತ್ತಾರೆ. ಸುಂಕವನ್ನು ವಸೂಲಿ ಮಾಡುವ ಸ್ಥಳದಲ್ಲಿ ಜನಜಾನುವಾರುಗಳಿಗೆ ನೀರಿನ ಸೌಲಭ್ಯಕ್ಕಾಗಿ ನಿರ್ಮಿಸಿದ ಕಟ್ಟೆಯಾಗಿದ್ದರಿಂದ ಸುಂಕದಕಟ್ಟೆ ಎಂದು ಕರೆಯಲಾಗಿದೆ.

ಕೊಳ-ಬಾವಿ-ತೀರ್ಥ

ತೊಂಡನೂರಿನ ದೇವಾಲಯಗಳ ಒಂದು ವಿಶೇಷತೆ ಎಂದರೆ ಎಲ್ಲಾ ದೇವಾಲಯಗಳ ಸಮೀಪದಲ್ಲಿ ಸೋಪಾನಗಳಿಂದ ನಿರ್ಮಿತವಾದ ಕೊಳ ಕಂಡುಬರುತ್ತದೆ. ಇನ್ನು ಕಂದಾಯ ಇಲಾಖೆಯ ನಕ್ಷೆಯಲ್ಲಿ ಇಳಿಯುವ ಬಾವಿಗಳು ಎಂದು ಗುರುತಿಸಲಾಗಿದೆ. ಪ್ರತೀ ದೇವಾಲಯದ ಆಸುಪಾಸಿನಲ್ಲಿ ಈ ಬಗೆಯ ಕೊಳಗಳಿವೆ. ಅವುಗಳನ್ನು ತೀರ್ಥವೆಂದೂ ಕರೆಯುತ್ತಾರೆ.

ನಿಕುಂಭಿಣಿ ದೇವಾಲಯದ ಕೊಳ

ಗ್ರಾಮದ ಹೊರವಲಯದಲ್ಲಿ ಇರುವ ನಿಕುಂಭಿಣಿ ದೇವಾಲಯದ ದಕ್ಷಿಣದಲ್ಲಿ ಒಂದು ಸಣ್ಣ ಕೊಳವಿದೆ. ಅದನ್ನು ನಿಕುಂಭಿಣಿ ದೇವಾಲಯದ ಕೊಳವೆನ್ನುತ್ತಾರೆ. ಈ ದೇವತೆ ರಾಕ್ಷಸರ ದೇವತೆಯಾಗಿದ್ದು, ಇಂದ್ರಜಿತ್ ಯಾಗ ಮಾಡುವಾಗ ಯಾಗದ ರಕ್ಷಣೆ ಮಾಡಲು ಸ್ಥಾಪಿಸಿದ ದೇವತೆಯೇ ನಿಕುಂಭಿಣಿ ದೇವಿ ಎನ್ನುವುದು ಸ್ಥಳೀಯ ಪ್ರತೀತಿ.

ನರಸಿಂಹತೀರ್ಥ

ನರಸಿಂಹಸ್ವಾಮಿಯ ದೇವಾಲಯದ ನೈರುತ್ಯದಲ್ಲಿ ನರಸಿಂಹತೀರ್ಥವೆನ್ನುವ ಕೊಳವಿದೆ. ವಾಸ್ತವವಾಗಿ ಇದನ್ನು ಮೇಗಳಬಾವಿ ಎಂದು ಕರೆಯಲಾಗುತ್ತದೆ (ನೋಡಿ: ಚಿತ್ರ‑೬೧). ಈ ಕೊಳದಲ್ಲಿ ಇಂದಿಗೂ ಯಾರೂ ಸ್ನಾನ ಮಾಡುವುದಿಲ್ಲ. ಸಾಬೂನು ಇತರ ಪದಾರ್ಥಗಳನ್ನು ಬಳಸಿ ಬಟ್ಟೆ ಇತ್ಯಾದಿಗಳನ್ನು ತೊಳೆಯುವುದಿಲ್ಲ. ಅತೀ ಪ್ರಾಚೀನ ಕಾಲದಿಂದಲೂ ಇದನ್ನು ನರಸಿಂಹ ಸ್ವಾಮಿ, ಲಕ್ಷ್ಮಿನಾರಾಯಣ ದೇವಾಲಯದ ತೀರ್ಥದ ಕೊಳವಾಗಿ ಬಳಸಿದ್ದಾರೆ. ಅದನ್ನು ದೇವಾಲಯದ ಅರ್ಚಕರು ಖಚಿತಪಡಿಸುತ್ತಾರೆ. ಇದೇ ಕೊಳದ ಪಕ್ಕದಲ್ಲಿ  ತೀರ್ಥಸ್ನಾನದ ಮಂಟಪವಿದೆ.

ಕಾಳಮ್ಮನ ದೇವಾಲಯದ ಕೊಳ

ಕಾಳಮ್ಮನ ದೇವಾಲಯದ ಕೊಳ ದೇವಾಲಯದ ಆವರಣದಲ್ಲಿದೆ. ಆದರೆ ಇಂದು ದೇವಾಲಯದ ಉಪಯೋಗಕ್ಕೆ ಬಾರದಂತೆ ಕೊಳಚೆ ನೀರಿನಿಂದ ಆವೃತವಾಗಿದ್ದು, ಭಾಗಶಃ ಮುಚ್ಚಿಹೋಗಿದೆ. ಈ ಕೊಳವು ಗ್ರಾಮದ ವ್ಯಕ್ತಿಯೊಬ್ಬರ ಖಾಸಗಿ ಒಡೆತನದಲ್ಲಿರುವುದಾಗಿ ಕ್ಷೇತ್ರಕಾರ್ಯದಲ್ಲಿ ತಿಳಿದುಬಂದಿತು. ಕೊಳದ ಆಕಾರವನ್ನಾಗಲೀ, ವಿಸ್ತಾರವನ್ನಾಗಲೀ ತಿಳಿಯದಷ್ಟು ಮಟ್ಟಿಗೆ ಕೊಳದ ಪ್ರದೇಶ ಮುಚ್ಚಿಹೋಗಿದೆ. ಹಾಗೂ ರಿಪೇರಿ ಮಾಡದಷ್ಟು ಹಾಳಾಗಿದೆ.

ಚಕ್ರತೀರ್ಥ ಬಾವಿ

ಸಾಲಾರ್ ಮಸೂದ್ ದರ್ಗದ ದಕ್ಷಿಣ ಭಾಗದಲ್ಲಿರುವ ಕೊಳವನ್ನು ಚಕ್ರಬಾವಿ ಎಂದು ಕರೆಯುತ್ತಾರೆ. ಇದು ಆಕಾರದಲ್ಲಿ ನರಸಿಂಹ ತೀರ್ಥವನ್ನು ಹೋಲುತ್ತದೆ. ಇಂದು ಇದು ಗ್ರಾಮದ ಹೊರವಲಯದಲ್ಲಿದೆ.

ಬಸ್ತಿ ಕೊಳ

ಬಸ್ತಿ ಕೊಳವನ್ನು ಚಿನಕುರುಳಿಗೆ ಮಾರ್ಗವನ್ನು ಮಾಡುವ ಕಾಲದಲ್ಲಿ ಮುಚ್ಚಿ ಹಾಕಿರುವುದರಿಂದ ಅದರ ಅವಶೇಷ ಕಂಡುಬರುವುದಿಲ್ಲ.

ಕೊಳಾಂತನ ಬಾವಿ

ನರಸಿಂಹತೀರ್ಥದ ಬಳಿ ಇರುವ ಈ ಕೊಳ ಇಂದು ಗ್ರಾಮದ ರೈತರಾದ ಲಕ್ಕೆಗೌಡರ ಮಗ ಕುಳ್ಳೆಗೌಡರ ಜಮೀನಿನಲ್ಲಿದೆ. ಈ ಕೊಳ ಸಹ ಸಾಕಷ್ಟು ನಶಿಸಿದೆ. ಈ ಕೊಳದ ವಿಶೇಷತೆ ಎಂದರೆ, ಮೇಲುಕೋಟೆಯ ಅಷ್ಟ ತೀರ್ಥದ ದಿನ, ಈ ಕೊಳದಲ್ಲಿ ತೀರ್ಥೋದ್ಭವ ವಾಗುತ್ತದೆ. ಇಂದಿಗೂ ಈ ವಿಸ್ಮಯ ನಡೆಯುತ್ತದೆ ಎನ್ನುತ್ತಾರೆ ಅದರ ಒಡೆತನ ಹೊಂದಿರುವ ಕುಳ್ಳೆಗೌಡರು.

ಕಣ್ವ ಋಷಿಗಳ ಆಶ್ರಮ ಬಾವಿ

ಇದೂ ಸಹ ಈ ಮೇಲೆ ಹೇಳಿದ ಕೊಳಗಳ ಮಾದರಿಯಲ್ಲಿದೆ. ಕಣ್ವರ ಆಶ್ರಮದ ದೇವಾಲಯದ ಸಮೀಪದಲ್ಲಿ ಕಂಡುಬರುವ ಈ  ಕೊಳ ಅಂದಿನ ಕಾಲದಲ್ಲಿ ದೇವಾಲಯದ ತೀರ್ಥದ ಅವಶ್ಯಕತೆಯನ್ನು ಪೂರೈಸಿದೆ. ಕಾರಣ ಜನರಿಗೆ ನೀರೊದಗಿಸಲು ಅದರ ಸಮೀಪದಲ್ಲಿಯೇ ಒಂದು ಸಣ್ಣ ಕೆರೆ ಇದೆ. ಆದ್ದರಿಂದ ಈ ಬಾವಿಗಳೆಲ್ಲಾ ಪ್ರತಿ ದೇವಾಲಯದ ಪೂಜಾ ಕೈಂಕರ್ಯಗಳಿಗೆ ಬೇಕಾದ ತೀರ್ಥವನ್ನು ಒದಗಿಸುವ ದೇವಾಲಯದ ಬಾವಿಗಳಾಗಿದ್ದ ವೆಂದು ನಿಸ್ಸಂಶಯವಾಗಿ ಹೇಳಬಹುದು.

ಉಪಸಂಹಾರ

ತೊಣ್ಣೂರು ಗಂಗರ ಕಾಲದಲ್ಲಿ “ತೊಂಡವಾಡಿ” ತೊಂಡನಾಡಿನ ಕೇಂದ್ರವಾಗಿ, ಆ ನಂತರ ಚೋಳರಿಂದ ಚತುರ್ವೇದಿ ಮಂಗಲವಾಗಿ, ಹೊಯ್ಸಳರ ಕಾಲದಲ್ಲಿ ಉಪ ರಾಜಧಾನಿಯಾಗಿ, ವೈಷ್ಣವರ ತೀರ್ಥಕ್ಷೇತ್ರವಾಗಿ, ಶೈವ, ಜೈನ, ವೈಷ್ಣವರ ವಾಸಸ್ಥಾನವಾಗಿ, ಆ ನಂತರದಲ್ಲಿ ಅವನತಿ ಹೊಂದಿದ ಒಂದು ಪ್ರಾಚೀನ ಜನವಸತಿ ಕೇಂದ್ರ.

ಈ ಕೇಂದ್ರದ ಪ್ರಮುಖ ಆಕರ್ಷಣೆ ಅಲ್ಲಿನ ಕೆರೆ. ಇದನ್ನು ಯಾದವ ಸಮುದ್ರ, ತಿರುಮಲ ಸಾಗರ, ಶ್ರೀತೀರ್ಥತಟಾಕ, ಪಂಚಾಪ್ಸರಾ ತಟಾಕ, ಮೋತಿ ತಲಾಬ್ ಎಂದೆಲ್ಲಾ ಕರೆಯಲಾಗುತ್ತದೆ. ಕೆರೆಗೆ ಹೋಗಲು ಪ್ರಾಚೀನ ಕಾಲುದಾರಿಯಿದ್ದು ಕಲ್ಲುಗಳನ್ನು ಹಾಸಲಾಗಿದೆ(ನೋಡಿ: ಚಿತ್ರ‑೬೨). ಇತ್ತೀಚೆಗೆ ವಾಹನಗಳಿಗಾಗಿ ಪೂರ್ವದ ಕಡೆಯಿಂದ ರಸ್ತೆಯನ್ನು ನಿರ್ಮಿಸಲಾಗಿದೆ. ಈ ಕೆರೆಯು  ಪ್ರಾರಂಭದಲ್ಲಿ ಚೋಳರಿಂದ ನಿರ್ಮಿತವಾಯಿತು. ಆ ನಂತರ ಹೊಯ್ಸಳರು, ವಿಜಯನಗರ ಅರಸರು, ಮೈಸೂರು ಅರಸರು, ಟೀಪುವಿನ ಕಾಲದಲ್ಲಿ ದುರಸ್ತಿಗೊಂಡಿರುವುದಕ್ಕೆ ಪುರಾವೆಗಳು ದೊರೆಯುತ್ತದೆ.

ಹೊಯ್ಸಳರ ಕಾಲದಲ್ಲಿ ಕೆರೆಯ ಮೇಲೆ ಹೊಯ್ಸಳೇಶ್ವರ ದೇವಾಲಯವಿದ್ದುದನ್ನು ಶಾಸನ ಖಚಿತಪಡಿಸುತ್ತದೆ. ಇದಕ್ಕೆ ಪೂರಕವಾಗಿ, ಕೆರೆಯ ಸೋಪಾನದಲ್ಲಿ ಹೊಯ್ಸಳ ದೇವಾಲಯದ ಶಿಲ್ಪಗಳು, ದೇವಾಲಯದ ಭಾಗಗಳು ಕಂಡುಬರುತ್ತವೆ. ಅಂದರೆ, ಹೊಯ್ಸಳರ ಅನಂತರ ದೇವಾಲಯ ನಶಿಸಿದ್ದಾಗ ಹಾಗೂ ಕೆರೆಯ ಪುನರುಜ್ಜೀವನಗೊಳಿಸುವ ಕಾಲದಲ್ಲಿ ಆ ದೇವಾಲಯದ ಭಾಗಗಳನ್ನು ಬಳಸಿರುತ್ತಾರೆ. ಈ ಕೆರೆಯನ್ನು ಟೀಪು ತನ್ನ ಮೂರನೇ ಮೈಸೂರು ಯುದ್ಧದ ಕಾಲದಲ್ಲಿ ಬ್ರಿಟೀಷರಿಗೆ ನೀರು ದೊರೆಯಬಾರದೆಂದು ತೆರವು ಮಾಡಿದನೆಂದು ಹೇಳಲಾಗುತ್ತದೆ. ಆದರೆ ಬ್ರಿಟಿಷರು ಈ ಭಾಗವನ್ನು ಮೂರನೇ ಮೈಸೂರು ಯುದ್ಧದ ಕಾಲದಲ್ಲಿ ಆಕ್ರಮಿಸಿದ್ದರ ಉಲ್ಲೇಖ ಇತಿಹಾಸದ ದಾಖಲೆಗಳಲ್ಲಿ ಕಂಡು ಬರುವುದಿಲ್ಲ. ಹಾಗೇನಾದರೂ ಈ ಕೆರೆಯ ನೀರನ್ನು ತೆರವು ಮಾಡಿದ್ದರೆ, ಹೈದರನಾಮೆ ಹೇಳುವಂತೆ ಚಿನಕುರುಳಿ ಮತ್ತು ಮೇಲುಕೋಟೆಯನ್ನು ಮರಾಠರು ಮುತ್ತಿದಾಗ, ಮರಾಠರ ಮುಂದುವರಿಕೆಯನ್ನು ತಡೆಯಲು ಈ ಕೆರೆಯ ನೀರನ್ನು ತೆರವು ಮಾಡಿರುವ ಸಾಧ್ಯತೆ ಇದೆ. ಇದನ್ನು ಖಚಿತವಾಗಿ ಹೇಳಲು ಆಕರಗಳಿಲ್ಲ. ಆದರೆ ಭಾವಿಸಲು ಸಾಕಷ್ಟು ಆಕರಗಳು ದೊರೆಯುತ್ತವೆ. ಮತ್ತೆ ಇದು ಪುನಃ ನಿರ್ಮಾಣವಾಗಿದೆ. ಇದೆಲ್ಲದರ ಮಧ್ಯೆ ಇಂದಿಗೂ ಸ್ಥಳೀಯರಲ್ಲಿ ಪೂಜ್ಯಭಾವನೆಗೆ ಒಳಗಾಗಿರುವ ಈ ಕೆರೆಯಲ್ಲಿ ನೂರಾರು ದೇವತೆಗಳು ಅವಭೃತ ಸ್ನಾನಕ್ಕೆ ಆಗಮಿಸುತ್ತಿವೆ ಅಂದ ಮೇಲೆ ತೊಂಡನೂರಿನ ಈ ಕೆರೆ ಒಂದು ಸಹಸ್ರಮಾನದ ಇತಿಹಾಸವನ್ನು ಹೊಂದಿ ರಾಜಕೀಯದ ಏಳು ಬೀಳಿನೊಂದಿಗೆ ತನ್ನ ಏಳುಬೀಳುಗಳನ್ನು ಕಂಡುಕೊಂಡಿದೆ. ಇತ್ತೀಚೆಗೆ ಇದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ (ನೋಡಿ: ಚಿತ್ರ‑೬೩).

ಇತರ ಕೆರೆಕಟ್ಟೆಗಳು, ಬಾವಿಗಳು ಸಹ ಇದಕ್ಕೆ ಅಪವಾದವಾಗಿಲ್ಲ. ಇಂದು ನಾವು ಕಾಣುವ ತೊಂಡನೂರು ಕೇವಲ ಪಳೆಯುಳಿಕೆ. ಅದೇ ಆಗಾಧವಾಗಿರಬೇಕಾದರೆ, ನಿಜವಾದ ಪ್ರಾಚೀನ ನಗರದ ಅಗಾಧತೆಯನ್ನು ಅರಿಯಲು ಸದ್ಯದ ಅಧ್ಯಯನ ಒಂದು ದಾರಿದೀವಿಗೆಯಾಗುತ್ತದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 


[1] ಲೇಖಕರು ೨೦೦೭ರ ಫೆಬ್ರವರಿ ೧೬ ರಂದು ಶಿವರಾತ್ರಿಯ ದಿನದಂದು ಹಾಗೂ ಇತರ ಎಲ್ಲಾ ಪ್ರಾರಂಭಿಕ ಕಾರ್ಯಕ್ಷೇತ್ರದಲ್ಲಿ ಕಲೆಹಾಕಿದ ವಿವರಗಳ ಒಟ್ಟು ಸಾರಾಂಶ.

[2] ಈ ಎಲ್ಲಾ  ವಿವರಗಳನ್ನು ನೀಡಿದ ಅರ್ಚಕರಾದ ಶ್ರೀಯುತ ಚಂದ್ರಶೇಖರಯ್ಯ ಮತ್ತು ಶ್ರೀ ಕುಮಾರ್‌ರವರಿಗೆ ಲೇಖಕರು ಆಭಾರಿಯಾಗಿದ್ದಾರೆ.

[3] ಮಂಡ್ಯ ಜಿಲ್ಲಾ ಗೆಜೆಟಿಯರ್, ಪುಟ ೯೧೬‑೯೨೮

[4] ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಪ್ರಕಟಿಸಿರುವ ಕನ್ನಡ‑ಕನ್ನಡ ಸಂಕ್ಷಿಪ್ತ ನಿಘಂಟು.

[5] ಅನಂತರಾಮು, ೧೯೯೭: ಪೂರ್ವೋಕ್ತ