ಕೆರೆಕಟ್ಟೆಗಳು ಭಾರತೀಯ ಪರಂಪರೆಯಲ್ಲಿ ಮಾನವ ಜೀವನದ ಅವಿಭಾಜ್ಯ ಅಂಗಗಳಾಗಿ ಅತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಪ್ರಾಚೀನ ಮಾನವನು ತನ್ನ ನೀರಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮಳೆಯ ನೀರನ್ನು ಸಂಗ್ರಹಿಸುವ, ನದಿಯ ಪ್ರವಾಹವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳನ್ನು ಮಾಡಿ ಅದರಿಂದ ಬೇಸಾಯವನ್ನು ಮಾಡುವುದಲ್ಲದೆ, ತನ್ನ ವಸತಿಯ ಬೆಳವಣಿಗೆಗೆ ಕಾರಣನಾಗಿದ್ದಾನೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನೂತನ ಶಿಲಾಯುಗದ ಕಾಲದಲ್ಲಿ ಹಾಗೂ ಅನಂತರದ ಬೃಹತ್ ಶಿಲಾಯುಗದ ಕಾಲದಲ್ಲಿ ಕೃತಕ ಅಥವಾ ಮಾನವ ನಿರ್ಮಿತ ಪ್ರಾರಂಭವಾದವೆಂದು ಹೇಳಬಹುದು. ಇದನ್ನು ಬೇರೆ ರೀತಿಯಾಗಿ ಹೇಳುವುದಾದರೆ ಕೆರೆಕಟ್ಟೆಗಳ ನಿರ್ಮಾಣ ಕಾರ್ಯ ಕರ್ನಾಟಕದಲ್ಲಿ ಪ್ರಾರಂಭವಾದುದು, ನೂತನ ಶಿಲಾಯುಗದ ಕಾಲದಲ್ಲಿ ಹಾಗೂ ಅದು ಹೆಚ್ಚಿಗೆ ಬೆಳಕಿಗೆ ಬಂದಿರುವುದು ಬೃಹತ್ ಶಿಲಾಯುಗದ ಕಾಲದಲ್ಲಿ.

[1] ಶಾತವಾಹನ ರಾಜನಾದ ಪುಳುಮಾವಿಯ ಮ್ಯಾಕೆದೋಣಿ ಶಾಸನವು ಕೆರೆಗಳ ಬಗ್ಗೆ ಪ್ರಸ್ತಾಪಿಸುವ ಅತಿ ಪ್ರಾಚೀನವಾದ ಶಾಸನ.[2] ಇದಾದ ನಂತರ ಕದಂಬ ಅರಸು, ಮಯೂರಶರ್ಮನ ಚಂದ್ರವಳ್ಳಿಯ ಶಾಸನ, ಆತನು ಅಲ್ಲಿ ಕೆರೆಯೊಂದನ್ನು ಕಟ್ಟಿಸಿದ್ದನ್ನು ಉಲ್ಲೇಖಿಸುತ್ತದೆ.[3] ಕರ್ನಾಟಕ ಪ್ರದೇಶವನ್ನು ಆಳಿದ ಸಾತವಾಹನರು, ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ತಮಿಳುನಾಡಿನ ಚೋಳರು, ಹೊಯ್ಸಳರು, ವಿಜಯನಗರದ ಸಾಮ್ರಾಟರೂ ಹಾಗೂ ಆನಂತರದ ರಾಜಮನೆತನಗಳು ಕೆರೆಕಟ್ಟೆಗಳನ್ನು ಹತ್ತು ಹಲವು ಕಾರಣಗಳಿಗಾಗಿ ನಿರ್ಮಿಸಿದರೂ ವ್ಯವಸಾಯ ಮತ್ತು ವಸತಿ ಪ್ರದೇಶಕ್ಕೆ ನೀರನ್ನು ಒದಗಿಸುವ ಮುಖ್ಯ ಉದ್ದೇಶವನ್ನು ಹೊಂದಿದ್ದವು. ಕೆರೆಕಟ್ಟೆಗಳ ನಿರ್ಮಾಣ ಪುಣ್ಯಪ್ರದವೆಂದು ಭಾವಿಸಿದ್ದ ಅಂದಿನ ಜನ, ಅದನ್ನು ನಿರ್ಮಿಸುವ ಮತ್ತು ಸುಸ್ಥಿತಿಯಲ್ಲಿ ಕಾಪಾಡುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಹಾಗಾಗಿ ಅಂದಿನ ಕೆರೆ‑ಕಟ್ಟೆಗಳು ಇಂದಿನವರೆಗೆ ಉಳಿದುಕೊಂಡು ಬಂದಿವೆ.

ಪ್ರಾಚೀನ ಕಾಲದಲ್ಲಿ ನಿರ್ಮಿತವಾದ ಅಗ್ರಹಾರಗಳು, ದೇವಾಲಯಗಳು, ಛತ್ರಗಳು, ಮಠಗಳು, ಕೆರೆ-ಕಟ್ಟೆಗಳು ಹಾಗೂ ನೂತನವಾಗಿ ಸ್ಥಾಪಿತವಾದ ವಸತಿ ಪ್ರದೇಶಗಳು ಒಂದನ್ನೊಂದು ಅವಲಂಬಿಸಿದ್ದವು. ಈ ಹಿನ್ನೆಲೆಯಲ್ಲಿ ನೋಡಿದಾಗ ಸಹ ತೊಂಡನೂರಿನ ಕೆರೆಗಳು ಹಲವು ಕಾರಣಗಳಿಗಾಗಿ ನಿರ್ಮಾಣವಾಗಿದ್ದರೂ ವ್ಯವಸಾಯಕ್ಕೆ ನೀರೊದಗಿಸುವ ಅಲ್ಲಿನ ಜನವಸತಿಯ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಅಥವಾ ದೇವಾಲಯದ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶಗಳಿಗೆ ಸೀಮಿತವಾಗಿವೆ. ಅವುಗಳನ್ನು ಕೆರೆ‑ಕಟ್ಟೆಗಳು ಮತ್ತು ಕೊಳ ಅಥವಾ ಬಾವಿ ಎಂದೂ ಪಟ್ಟಿ ಮಾಡಬಹುದಾಗಿದೆ. ೧೯೮೦ರ ಮೋಜಣಿಯ ನಕ್ಷೆಯಲ್ಲಿ ಈ ಕೆಳಗಿನ ಕೆಲವು ಜಲಸಂಗ್ರಹಾ ಪ್ರದೇಶಗಳನ್ನು ಗುರುತಿಸಲಾಗಿದೆ. ಅವುಗಳನ್ನು ಸಂಖ್ಯೆ ಹಾಗೂ ವಿವರಗಳೊಂದಿಗೆ ನಕ್ಷೆಯಲ್ಲಿ ಗುರುತಿಸಲಾಗಿದೆ(ನಕ್ಷೆಯನ್ನು ನೋಡಿ).

. ಕೆರೆಕಟ್ಟೆಗಳು

೧.೧     ಯಾದವ ಸಮುದ್ರ/ಮೋತಿ ತಲಾಬ್

೧.೨      ಅಪ್ಪರಸನ ಕಟ್ಟೆ

೧.೩       ರಾಮಾನುಜರ ಕಟ್ಟೆ

೧.೪      ಹಾರುವರ ಕಟ್ಟೆ

೧.೫      ಚಟ್ಟಂಗೆರೆ

೧.೬      ಕುರುಂಕಟ್ಟೆ

೧.೭      ಕಂಡ್ರಕಟ್ಟೆ

೧.೮      ಸುಂಕದಕಟ್ಟೆ

. ಕೊಳಗಳು/ಬಾವಿಗಳು

೨.೧     ನಿಕುಂಭಿಣಿ ದೇವಾಲಯದ ಕೊಳ

೨.೨     ನರಸಿಂಹ ತೀರ್ಥ

೨.೩      ಕಾಳಮ್ಮನ ದೇವಾಲಯದ ಕೊಳ

೨.೪     ಚಕ್ರ ಬಾವಿ

೨.೫     ಬಸ್ತಿ ಕೊಳ

೨.೬     ಕೊಳಂತನ ಬಾವಿ

೨.೭     ಕಣ್ವ ಋಷಿಗಳ ಆಶ್ರಮದ ಬಾವಿ

ತೊಂಡನೂರಿನಲ್ಲಿ ಕಂಡುಬರುವ ಇಷ್ಟೆಲ್ಲಾ ಕೆರೆ‑ಕಟ್ಟೆ, ಬಾವಿ/ಕೊಳಗಳಿದ್ದಾಗ್ಯೂ ಯಾವುದನ್ನೂ ಅಲ್ಲಿನ ಶಾಸನಗಳು ಉಲ್ಲೇಖಿಸದಿರುವುದು ಅವುಗಳ ನಿರ್ಮಾಣ ಕಾಲವನ್ನು ನಿರ್ಧರಿಸುವಲ್ಲಿ ತೊಡಕನ್ನು ಉಂಟು ಮಾಡುತ್ತವೆ. ಇಲ್ಲಿನ ಕೆರೆಕಟ್ಟೆಗಳ ಕುರಿತ ಐತಿಹಾಸಿಕ ವಿವರ ಇಲ್ಲವೆಂದರೆ ತಪ್ಪಾಗಲಾರದು. ಇವುಗಳ ಇತಿಹಾಸದ ಪುನಃ ರಚನೆಗೆ, ಐತಿಹ್ಯಗಳನ್ನೂ, ಸಾಂದರ್ಭಿಕ ದಾಖಲೆಗಳನ್ನು ಆಧರಿಸಿ ಕಟ್ಟಿಕೊಳ್ಳಬೇಕಾಗುತ್ತದೆ. ಸಾಂದರ್ಭಿಕ ಆಕರಗಳನ್ನು, ಅರಸುತ್ತಾ ಹೊರಟ ನಮಗೆ ತೊಂಡನೂರಿನ ಬಗೆಗೆ ಉಲ್ಲೇಖಗಳನ್ನು ಹೊಂದಿರುವ ಆಕರ ಗ್ರಂಥಗಳು ಕಾಣುವುದೇ ಬೆರಳೆಣಿಕೆಯಷ್ಟು. ಅವುಗಳೆಂದರೆ: ಮಂಡ್ಯ ಜಿಲ್ಲಾ ಗೆಜೆಟಿಯರ್, ತೊಣ್ಣೂರು(ಕ್ಷೇತ್ರ ಪರಿಚಯ), ತೊಣ್ಣೂರ ರಾಕ್ಷಸಿ ಕೈಫಿಯತ್ತು(ಕರ್ನಾಟಕದ ಕೈಫಿಯತ್ತುಗಳು), ಸಕ್ಕರೆಯ ಸೀಮೆ ಮತ್ತು ಹಯವದನ ರಾಯರ ಮೈಸೂರು ಗೆಜೆಟಿಯರ್ ಮುಂತಾದ ಕೃತಿಗಳು. ತೊಂಡನೂರಿನಲ್ಲಿ ಈ ವರೆಗೆ ೬೮ ಶಾಸನಗಳು ಲಬ್ಧವಾಗಿವೆ. ಅವುಗಳಲ್ಲಿ ಒಂದು ಸಂಸ್ಕೃತ, ಇಪ್ಪತ್ತನಾಲ್ಕು ಕನ್ನಡ ಹಾಗೂ ನಲವತ್ತೆರಡು ತಮಿಳು ಶಾಸನಗಳು ವರದಿಯಾಗಿದೆ. ಆದರೆ ಅವುಗಳಲ್ಲಿ ಯಾವ ಶಾಸನವೂ, ತೊಂಡನೂರಿನ ಕೆರೆ‑ಕಟ್ಟೆ, ಬಾವಿ/ಕೊಳಗಳ ನಿರ್ಮಾಣದ ಉಲ್ಲೇಖ ಹೊಂದದಿರುವುದು ವಿಷಾದನೀಯ. ಈ ಗ್ರಾಮದ ಬೆಳವಣಿಗೆ ಹಾಗೂ ಅಗ್ರಹಾರಗಳ ಬೆಳವಣಿಗೆಯನ್ನು ಅವಲಂಬಿಸಿ, ಇಲ್ಲಿನ ಕೆರೆಕಟ್ಟೆಗಳ ಹಾಗೂ ಕೊಳ/ಬಾವಿಗಳ ನಿರ್ಮಾಣ ಕಾಲವನ್ನು ನಿರ್ಧರಿಸಬೇಕಾಗುತ್ತದೆ. ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಲೇಖನವನ್ನು ಸಿದ್ಧಪಡಿಸಲಾಗಿದೆ.

ಯಾದವ ಸಮುದ್ರ ಅಥವಾ ಮೋತಿ ತಲಾಬ್

ಇಲ್ಲಿರುವ ವಿಸ್ತಾರವಾದ ಕೆರೆಯಿಂದ ಪ್ರಾಚೀನ ತೊಂಡನೂರು ಇಂದು ಕೆರೆತೊಣ್ಣೂರು ಎಂದಾಗಿರುವುದು(ನೋಡಿ: ಚಿತ್ರ‑೫೬). ಈ ಕೆರೆ ಮೋತಿ ತಲಾಬ್>ತಿರುಮಲ ಸಾಗರ>ಯಾದವ ಸಮುದ್ರ ಎಂದೆಲ್ಲಾ ಉಲ್ಲೇಖಿಸಲ್ಪಟ್ಟಿದೆ. ಪಾಂಡವಪುರ ತಾಲೂಕಿನ ಸಣಬದ ಶಾಸನ, ಈ ಕೆರೆಯನ್ನು ಯಾದವ ಸಮುದ್ರವೆಂದು ಉಲ್ಲೇಖಿಸುತ್ತದೆ.[4]

ಅದರ ಉಲ್ಲೇಖ ಹೀಗಿದೆ.

೧.       ….. ಮಸ್ತ ಪ್ರಶಸ್ತಿಸಹಿತಂ ಶ್ರೀಪೃಥ್ವೀವಲ್ಲಭಂ

೨.       …. ರು ತ್ರಿಭುವನಮಲ್ಲ ತಲಕಾಡುಗಂ .. ಡಿ

೩.       ….. ಕೊಂಗುನಂಗಲಿನೊಣಂಬವಾಡಿಉಚ್ಚಂಗಿಬ

೪.       ….ಸೆಹಾನುಂಗಲುಗೊಂಡ ಭುಜಬಳವೀರ

೫.        …. ಪ್ರತಾಪ ವೀರನಾರಸಿಂಹ ಹೊಯ್ಸಳ

೬.         ದೇವರು ಶ್ರೀ ಮದ್ರಾಜಧಾನಿ ದೋರಸಮುದ್ರದ

೭.         ಲು ಸುಕಸಂಕತಾವಿನೋದದಿಂ ದುಷ್ಟನಿಗ್ರಹ

೮.         ಸಿಷ್ಟಪ್ರತಿಪಾಲನದಿಂ ಪ್ರಿಥಿವಿರಾಜ್ಯಂಗೆಯ್ವು

೯.         ತ್ತಿರಲು ಶ್ರೀಯಾದವನಾರಾಯಣಚತುರ್ವೇ

೧೦.      ದಿಮಂಗಲದ ಯಾದವಸಮುದ್ರದ ಏರಿ

೧೧.      ಯಮೇಗಣ ಹೊಯ್ಸಳೇಶ್ವ(ರ) ದೇವಗೆ ಸ್ನಾನನೈಬೇ

೧೨.      ದ್ಯನಂದಾದೀವಿಗೆಗೆಂದು ಶ್ರೀನಾರಸಿಂಹದೇ

೧೩.       ವರು ಈ ಕೆರೆಯೊಳಗಣ ಸಣಂಬವ ಚಂ

೧೪.      ದ್ರಾರ್ಕ್ಕತಾರಂಬರಂ ಸಲುವಂತಾಗಿ ಕುರ

೧೫.      ವಂಕಿನಾಡ ತಳ್ಳಿಯದ ಮಲ್ಲಿಜೀಯಂಗೆ

೧೬.      ಧಾರಾಪೂರ್ವ್ವಕಂಮಾಡಿ ಬಿಟ್ಟ ದತ್ತಿ …

೧೭.      ಸಣಂಬದ ಸೋಮಿಗೌಡಯಂಬ …

೧೮.      … ಕುಲದ ಮಸಣ … ಗೌಡಿಕೆಗೊಟ

೧೯.       ಯ ಇಂತೀ ಧರ್ಮನಳಿದವರು ಶ್ರೀವಾರ

೨೦.      ಣಾಸಿಯಲು ಸಾಸಿರಕವಿಲೆಯಂ ಸಾಸಿರಬ್ರಾ

೨೧.      ಹ್ಮಣರುವನಳಿದ ಗತಿಗೆ ಹೋಹರು

ಆದರೆ ಶಾಸನವು ಹೆಸರಿಸಿರುವ ದೇವಾಲಯವನ್ನು ಮಂಡ್ಯ ಜಿಲ್ಲಾ ಗೆಜೆಟಿಯರ್ ಸಣಬದ ಗ್ರಾಮದ್ದೆಂದು ಹೀಗೆ ಉಲ್ಲೇಖಿಸುತ್ತವೆ.

“ತೊಣ್ಣೂರು ಕೆರೆಯ ಹಿಂಬದಿಯಲ್ಲಿರುವ ಸಣಬ ಗ್ರಾಮದಿಂದ ವರದಿಯಾಗಿರುವ ತೇದಿರಹಿತ ಶಾಸನ, ಹೊಯ್ಸಳ ಮುಮ್ಮಡಿ ನರಸಿಂಹನು ಯಾದವನಾರಾಯಣ ಚತುರ್ವೇದಿ ಮಂಗಲದ (ತೊಣ್ಣೂರು) ಯಾದವ ಸಮುದ್ರದ ಏರಿಯ ಮೇಲಿನ ಹೊಯ್ಸಳೇಶ್ವರ ದೇವರ ಸ್ನಾನ, ನೈವೇದ್ಯಗಳಿಗೆಂದು ಸಣಬ ಗ್ರಾಮವನ್ನು ಮಲ್ಲಜೀಯನಿಗೆ ದತ್ತಿ ಬಿಟ್ಟಿದ್ದನ್ನು ತಿಳಿಸುತ್ತದೆ. ಆದರೆ ಇಂದು ಸಣಬ ಗ್ರಾಮದ ಅವಿಭಾಜ್ಯ ಅಂಗವಾಗಿರುವ ಈ ಗುಡಿಯು ಪೂರ್ಣ ಜೀರ್ಣೋದ್ಧಾರಗೊಂಡಿದ್ದು, ಕಿರು ಪ್ರಮಾಣದ ಶಿವಲಿಂಗ, ನಂದಿ ಹಾಗೂ ಪರಿಹಾರ ದೇವತಾ ಮೂರ್ತಿಗಳೊಂದಿಗೆ ನಾಲ್ಕಾರು ವೀರಗಲ್ಲುಗಳಷ್ಟೇ ಉಳಿದಿವೆ.”[5]

ಯಾದವ ಸಮುದ್ರ ವ್ಯಾಪ್ತಿಯಲ್ಲಿ ಬರುವ ಸಣಬ ಗ್ರಾಮವನ್ನು ಕೆರೆಯ ಏರಿಯ ಮೇಲಿನ ಹೊಯ್ಸಳೇಶ್ವರ ದೇವರಿಗೆ ದಾನವಾಗಿ ನೀಡಿರುವ ಹಿನ್ನೆಲೆಯಲ್ಲಿ ಸಣಬದ ದೇವಾಲಯವನ್ನು ಹೋಯ್ಸಳೇಶ್ವರ ದೇವಾಲಯವೆಂದು ಗುರುತಿಸಿದರೆ ತಪ್ಪಾಗುತ್ತದೆ. ಕಾರಣ ಶಾಸನದಲ್ಲಿ ಸ್ಪಷ್ಟವಾಗಿ ಕೆರೆಯ ಏರಿಯ ಮೇಲಿರುವ ದೇವಾಲಯಕ್ಕೆ ಬಿಟ್ಟಿರುವ ದತ್ತಿ ಇದಾಗಿದೆ. ಸಣಬ ತೊಣ್ಣೂರು ಕೆರೆಯ ವ್ಯಾಪ್ತಿಯಲ್ಲಿದೆ. ಯಾದವ ಸಮುದ್ರವೆಂದು ಕರೆಯುವ ಕೆರೆ‑ತೊಂಡನೂರಿನ ಕೆರೆಯಲ್ಲದೆ ಬೇರೆ ಕೆರೆಯಿಲ್ಲ. ಪ್ರಾಚೀನ ಕೆರೆಯ ಏರಿಗಳಲ್ಲಿ ಶಿವಾಲಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಉದಾಹರಣೆಗಾಗಿ, ಮದ್ದೂರು ತಾಲೂಕು ಕೊಪ್ಪ ಗ್ರಾಮದ ಕೆರೆ, ಬೆಂಗಳೂರಿನ ಸ್ಯಾಂಕಿ ಕೆರೆಯ ಕೆಳಗಿನ ಶಿವಾಲಯ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ಸಹ ಸ್ಯಾಂಕಿ ಕೆರೆಯ ಮೇಲಿನ ಪ್ರದೇಶದಲ್ಲಿದ್ದು, ಕೆಂಪಾಂಬುದಿ ಕೆರೆ ಏರಿಯ ಮೇಲಿನ ಶಿವಾಲಯ, ಮೈಸೂರಿನ ಬಿಳಿಕೆರೆ ಏರಿಯ ಮೇಲಿನ ಶಿವಾಲಯ ಇತ್ಯಾದಿಗಳನ್ನು ಗಮನಿಸಬಹುದು.

ಹೊಯ್ಸಳ ದೇವಾಲಯ ಕೆರೆಯ ಏರಿಯ ಮೇಲೆ ಇದ್ದುದನ್ನು ಈ ಕೆಳಗಿನ ಉಲ್ಲೇಖ ಪರೋಕ್ಷವಾಗಿ ಖಚಿತಪಡಿಸುತ್ತದೆ. “ಈ ಜಲ ಸಂಪತ್ತನ್ನು ಕಂಡೇ ಹೊಯ್ಸಳರು ತೊಣ್ಣೂರನ್ನು ತಮ್ಮ ಉಪರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆಂಬುದು ಐತಿಹಾಸಿಕ ಸತ್ಯ ಹಾಗೂ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಜಲಸಂಪತ್ತನ್ನು ಎರಡು ಬೆಟ್ಟಗಳು ಕೂಡುವ ಸ್ಥಳದಲ್ಲಿ ಒಡ್ಡು ನಿರ್ಮಿಸಿ ಒಂದೆಡೆ ಶೇಖರಗೊಳ್ಳುವಂತೆ ಮಾಡಿದರು. ಇದಕ್ಕೆ ಕೆರೆಗೆ ನಿರ್ಮಿಸಿರುವ ಮೆಟ್ಟಿಲುಗಳೇ ಸಾಕ್ಷಿ. ಈ ಸೋಪಾನಗಳಿಗೆ ಸಳ, ಗಜೇಂದ್ರ ಮೋಕ್ಷ ಮುಂತಾದ ಕೆತ್ತನೆಗಳಿರುವ ಹೊಯ್ಸಳರ ಕಾಲದ ಶಿಲೆಗಳನ್ನು ಉಪಯೋಗಿಸಲಾಗಿದೆ.”[6]

ಕೆರೆಯ ಸೋಪಾನದಲ್ಲಿ ಕಂಡು ಬರುವ ಹೊಯ್ಸಳ ಶಿಲ್ಪಗಳು ಕೆರೆಯ ಮೆಟ್ಟಿಲುಗಳಿಗೆ ಮಾಡಿದವುಗಳಲ್ಲ ಬದಲಾಗಿ ದೇವಾಲಯದ ಭಿತ್ತಿಯ ಭಾಗಗಳು. ಕೆರೆಯ ಸೋಪಾನದಲ್ಲಿರುವ ಹೊಯ್ಸಳ ದೇವಾಲಯದ ಭಿತ್ತಿಯ ಭಾಗಗಳು ಶಾಸನದ ಉಲ್ಲೇಖ ಹಾಗೂ ಜಿಲ್ಲೆಯ ಹಾಗೂ ರಾಜ್ಯದ ಇತರ ಪ್ರಾಚೀನ ಕೆರೆಗಳ ಮೇಲೆ ಶಿವಾಲಯವಿರುವುದರ ಆಧಾರದ ಮೇಲೆ ಈ ಕೆರೆಯ ಏರಿಯ ಮೇಲೆಯೇ ಹೊಯ್ಸಳೇಶ್ವರ ಶಿವಾಲಯವಿತ್ತೆಂದು ಖಚಿತವಾಗುತ್ತದೆ. ಅಂದರೆ, ಶಾಸನದಲ್ಲಿ ಉಲ್ಲೇಖಿತನಾದ ರಾಜನ ಆಳ್ವಿಕೆಗೆ ಪೂರ್ವದಲ್ಲಿ ಇಲ್ಲಿ ಹೊಯ್ಸಳೇಶ್ವರ ಆಲಯವಿತ್ತು. ಶಾಸನ ಉಲ್ಲೇಖಿಸುವ ಹೊಯ್ಸಳ ರಾಜ, ಮುಮ್ಮಡಿ ನರಸಿಂಹ, ಆತನ ಆಳ್ವಿಕೆಯ ಅವಧಿ ಕ್ರಿ.ಶ. ೧೨೫೫‑೧೨೯೧ರವರೆಗೆ. ಅಂದರೆ ನಿಖರವಾಗಿ ಹೊಯ್ಸಳರಿಗೆ ಪೂರ್ವದಲ್ಲಿ ಇಲ್ಲಿ ಕೆರೆ ಇದ್ದಿತೆಂದು ಖಚಿತವಾಗುತ್ತದೆ. ಕಾರಣ ಹೊಯ್ಸಳರ ಯಾವ ಶಾಸನಗಳಲ್ಲೂ ಕೆರೆಕಟ್ಟಿಸಿದ್ದು ಯಾರೆಂದು ತಿಳಿಸುವುದಿಲ್ಲ. ಅವರು ಇಲ್ಲಿಗೆ ಬರುವ ಹೊತ್ತಿಗಾಗಲೇ ಇಲ್ಲಿ ಕೆರೆ ಇದ್ದಿರಬೇಕು. ಈ ಮೇಲಿನ ವಿವರಣೆಗೆ ವಿರುದ್ಧವಾಗಿ ಇಲ್ಲಿನ ಐತಿಹ್ಯಗಳು ಬೇರೆ ಕಥೆ ಹೇಳುತ್ತವೆ.

“ಹಿಂದೆ ತೊಣ್ಣೂರಿನ ಪ್ರಜೆಗಳು ಮಳೆ ಇಲ್ಲದೆ ನೀರಿನ ಬರಕ್ಕೆ ತುತ್ತಾಗಿ ಕಂಗಾಲಾದಾಗ, ಆ ಊರಿನಲ್ಲಿ ಆಶ್ರಯ ಪಡೆದಿದ್ದ ರಾಮಾನುಜಾಚಾರ್ಯರು ತಮ್ಮ ತಪಶ್ಯಕ್ತಿಯಿಂದ ಈ ಕೆರೆಯನ್ನು ಸೃಷ್ಟಿಸಿದರೆಂಬುದು ಒಂದು ಐತಿಹ್ಯ. ಹೊಯ್ಸಳ ದೊರೆ ಬಿಟ್ಟಿದೇವನ ನೆರವಿನಿಂದ ಕಟ್ಟಿಸಿದ ‘\ರುಮಲ ಸಾಗರ’ವೆಂಬುದು ಮತ್ತೊಂದು ಐತಿಹ್ಯ[7] ಅರ್ಜುನನ ರಥ ಕೂಡ ಇದೇ ಕೆರೆಯಲ್ಲಿ ಮುಳುಗಿತೆಂದು ಮತ್ತೆ ಕೆಲವು ಐತಿಹ್ಯಗಳು ತಿಳಿಸುತ್ತದೆ.[8]

ಈ ಐತಿಹ್ಯಗಳು ದ್ವಂದ್ವಾರ್ಥವನ್ನು ಕೊಡುತ್ತವೆ. ರಾಮಾನುಜರು ನಿರ್ಮಿಸಿದರೆಂದು ಹೇಳುವ ಐತಿಹ್ಯವನ್ನು ಒಪ್ಪಿಕೊಂಡರೆ, ಕೆರೆಯ ಹೆಸರು ಯಾದವ ಸಮುದ್ರವೆಂದೇಕಾಯಿತು? ಎಂದು ತಿಳಿಸುವುದಿಲ್ಲ. ರಾಮಾನುಜರೇ ಕೆರೆ ನಿರ್ಮಿಸಿದ್ದರೆ, ಏಕೆ ಅದು ಆ ಕಾಲದ ಶಾಸನಗಳಲ್ಲಿ ಬಿಂಬಿತವಾಗಿಲ್ಲ ಎಂಬೆಲ್ಲಾ ಸಂದೇಹಗಳು ನಮ್ಮ ಮುಂದೆ ಬರುತ್ತವೆ. ಈ ಸಮಸ್ಯೆಗೆ ಇತರ ಮೂಲಗಳು ಮತ್ತು ಇಲ್ಲಿನ ಇತರ ಚಟುವಟಿಕೆಗಳು ಉತ್ತರವನ್ನು ನಿರ್ದೇಶಿಸುತ್ತವೆ. ಅಂದರೆ ತೊಂಡನೂರಿನ ಬೆಳವಣಿಗೆ, ಇಲ್ಲಿನ ದೇವಾಲಯಗಳ ಚಟುವಟಿಕೆ ಹಾಗೂ ಶಾಸನಗಳ ಸಾಂಸ್ಕೃತಿಕ ಅಧ್ಯಯನದಿಂದ ನಿರ್ಧರಿಸಬಹುದಾಗಿದೆ.

ತೊಂಡನೂರು ಗ್ರಾಮದ ದೇವಾಲಯಗಳ ಪೈಕಿ ಶಾಸನ ಮತ್ತು ಶೈಲಿಯ ಆಧಾರದ ಮೇಲೆ ಇಲ್ಲಿನ ಕೈಲಾಸೇಶ್ವರ ದೇವಾಲಯವನ್ನು ಅತಿ ಪ್ರಾಚೀನ ದೇವಾಲಯವೆಂದು ಗುರುತಿಸಲಾಗಿದೆ. ಈ ಪ್ರದೇಶ ಗಂಗವಾಡಿ ೯೬,೦೦೦ದ ಅವಿಭಾಜ್ಯ ಅಂಗವಾಗಿತ್ತೆಂದು, ತೊಂಡನೂರಿನ ಸುತ್ತಮುತ್ತಲಿನ ಕ್ರಿ.ಶ. ೯‑೧೦ನೆಯ ಶತಮಾನದ ಗಂಗರ ಶಾಸನಗಳು ಖಚಿತಪಡಿಸುತ್ತವೆ.[9] ಅಲ್ಲದೆ, ಮಂಡ್ಯ ಜಿಲ್ಲೆಯ ಹಳೆಬೂದನೂರಿನ, ಕೋಲಾರ ಜಿಲ್ಲೆಯ ಹಾಗೂ ಚಾಮರಾಜನಗರದ ಜಿಲ್ಲೆಯ ರಕ್ಕಸ ಗಂಗನ ಶಾಸನಗಳು, ಆತನು ಕ್ರಿ.ಶ. ೧೦೦೪ ಹೊತ್ತಿಗೆ ಒಂದನೇ ರಾಜೇಂದ್ರ ಚೋಳನ ಅಧೀನನಾಗಿದ್ದನೆಂದು ಸಾರುತ್ತವೆ.[10] ಗಂಗರ ಆಡಳಿತ ವಿಭಾಗಗಳಲ್ಲಿ ಕಂಡುಬರುವ “ತೊಂಡವಾಡಿ”‑“ತೊಂಡನಾಡು” ವಿನ ಕೇಂದ್ರವನ್ನು ತೊಂಡನೂರೆಂದು ಗುರುತಿಸಲಾಗಿದೆ.[11] ಇದನ್ನು ತೊಂಡನೂರಿನ ಸುತ್ತಮುತ್ತ ದೊರೆಯುವ ಗಂಗರ ಶಾಸನಗಳು ಸಹ ಪರೋಕ್ಷವಾಗಿ ಸೂಚಿಸುತ್ತವೆ. ಇದಕ್ಕೆ ಪೂರಕವಾಗಿ ಈ ಪ್ರದೇಶದಲ್ಲಿ ಒಂದನೇ ರಾಜರಾಜ ಮತ್ತು ಕುಲೋತ್ತುಂಗ ಚೋಳನ ಶಾಸನಗಳು ಕ್ರಿ.ಶ. ೧೧೧೪‑೧೫ರವರೆಗೆ ಕಂಡುಬರುತ್ತವೆ.[12] ಇದೇ ಕಾಲದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರನ್ನು ನರಸಿಂಹ ಚತುರ್ವೇದಿ ಮಂಗಲವಾಗಿ ಒಂದನೆಯ ರಾಜೇಂದ್ರನು ಪರಿವರ್ತಿಸಿದುದು ತಿಳಿದು ಬರುತ್ತದೆ. ಮಳೂರು ಮತ್ತು ಕೂಡ್ಲೂರುಗಳನ್ನು ಮಹಾದೇವಿ ಚತುರ್ವೇದಿ ಮಂಗಲವಾಗಿ ರೂಪಾಂತರಿಸಿ, ವೈದಿಕ ಜ್ಞಾನ ಪ್ರಸಾರಕ್ಕೆ ಕಾರಣರಾದರು.[13] ಇದರ ಖಚಿತತೆಗೆ ಪರಾಂತಕನ ಉತ್ತರಮೇರೂರು ಶಾಸನವನ್ನು ಸ್ಮರಿಸಬಹುದು. ಅಂದರೆ ಗಂಗರನ್ನು ಸೋಲಿಸಿ, ಗಂಗವಾಡಿಯ ಪ್ರದೇಶ ತೊಂಡವಾಡಿ, ತೊಂಡನಾಡನ್ನು ಆಕ್ರಮಿಸಿಕೊಂಡ ನಂತರ ಅದರ ಕೇಂದ್ರವಾದ ತೊಂಡನೂರನ್ನು ಚತುರ್ವೇದಿ ಮಂಗಲವಾಗಿ ಪರಿವರ್ತಿಸಿರುವುದು ಸಾಂದರ್ಭಿಕ ಆಕರಗಳಿಂದ ದೃಢಪಡುತ್ತದೆ. ತೊಂಡನೂರಿನ “ಕೈಲಾಸನಾಥ ಮುಡೆಯರ್” ದೇವಾಲಯದ ಕ್ರಿ.ಶ. ೧೨ನೆಯ ಶತಮಾನದ ಶಾಸನಗಳು ಎರಡು ಗುಂಪುಗಳಿಗೆ ಸೇರಿದ ಸ್ಥಾನಪತಿಗಳನ್ನು ಹೆಸರಿಸುತ್ತದೆ.[14] ಅಲ್ಲದೆ ಇದರಲ್ಲಿ ಮೂರು ತಲೆಮಾರಿನವರನ್ನು ಗುರುತಿಸಬಹುದು.

ಕೌಶಿಕ ಗೋತ್ರದ ನಿಕ್ಕರಸರ್ ಪಿಳ್ಳೆ ಮಗ ದೇವ ಪಿಳ್ಳೆ ಮಗ ಗಂಗಾಧರ ಪಿಳ್ಳೆ (ಮೂರು ತಲೆಮಾರು) ಮತ್ತು ಕೂತ ಭಟ್ಟನ್ ಮಗ ಆಳುಡೆಯಾನ್ ಭಟ್ಟನ್ (ಎರಡು ತಲೆಮಾರು) ಹೀಗಾಗಿ, ತಮಿಳು ಮೂಲದ ಮೂರು ತಲೆಮಾರಿನವರು ಕೈಲಾಸನಾಥ ದೇವಾಲಯದಲ್ಲಿ ಸ್ಥಾನಪತಿಗಳಾಗಿದ್ದರೆಂದು ತಿಳಿದುಬರುತ್ತದೆ. ಹಾಗೆಂದ ಮೇಲೆ ಇಲ್ಲಿನ ಕೈಲಾಸನಾಥ ದೇವಾಲಯ ನೂರು ವರ್ಷಗಳಿಗೆ ಮುನ್ನ ಪ್ರಾರಂಭವಾಗಿ ಅಲ್ಲಿ ಅಧ್ಯಯನ, ಅಧ್ಯಾಪನ ಪ್ರಾರಂಭವಾಗಿರುವ ಸಾಧ್ಯತೆಗಳು ಅಧಿಕವಾಗುತ್ತದೆ. ಈ ಕಾಲಘಟ್ಟ ನಮ್ಮನ್ನು ಹಳೆಬೂದನೂರಿನ ಶಾಸನದ ಕಾಲಘಟ್ಟಕ್ಕೆ ಕೊಂಡೊಯ್ಯುತ್ತದೆ. ಇದಕ್ಕೆ ಪೂರಕವಾಗಿ ಗ್ರಾಮದ ಯಾವ ಶಾಸನವೂ ಇದು ಯಾರ ಕಾಲದಲ್ಲಿ ಚತುರ್ವೇದಿ ಮಂಗಲವಾಗಿ ಮಾರ್ಪಟ್ಟಿತೆಂದು ತಿಳಿಸುವುದಿಲ್ಲ. ಬದಲಾಗಿ “ಶ್ರೀಮದನಾದಿಯಗ್ರಹಾರಂ ತೊಂಡನೂರು” ಎಂದು ಇಲ್ಲಿನ ಕ್ರಿ.ಶ. ೧೧೭೫ರ ಶಾಸನ ಉಲ್ಲೇಖಿಸುತ್ತದೆ.[15] ಒಂದು ಕುಟುಂಬದ ಅಥವಾ ಒಂದು ಅಗ್ರಹಾರದ ಚರಿತ್ರೆಯನ್ನು ಮೂರು ತಲೆಮಾರುಗಳವರೆಗೆ ನಿಖರವಾಗಿ ಗುರುತಿಸಬಹುದು. ಆದರೆ ಕ್ರಿ.ಶ. ೧೧೭೫ರ ಹೊತ್ತಿಗೆ ಅಗ್ರಹಾರದ ದಾನಿ ಮರೆತು ಹೋಗಿರಬೇಕಾದರೆ ಇಲ್ಲಿ ಅಗ್ರಹಾರ ಬಹಳ ಹಿಂದಿನಿಂದಲೇ ಇದ್ದಿತೆಂದು ಭಾವಿಸ ಬೇಕಾಗುತ್ತದೆ. ಇದಕ್ಕೆ ಪೂರಕವಾಗಿ, ಅದೇ ದೇವಾಲಯದಲ್ಲಿನ ಕ್ರಿ.ಶ. ೧೨ನೆಯ ಶತಮಾನದ ಶಾಸನ, “ಕೈಲಾಸ ಮುಡೆಯರ್’ ದೇವಾಲಯ ಪುನಃ ಪ್ರತಿಷ್ಠಾಪನೆಯಾದದ್ದನ್ನು ಹೀಗೆ ಉಲ್ಲೇಖಿಸುತ್ತದೆ. ಶ್ರೀಕೈಲಾಸ ಮುಡೈಯಾರ್ಕ್ಕು ತಿರುಪ್ರತಿಷ್ಠೈ.[16] ಅಂದರೆ ಶಾಸನದ ಕಾಲದಲ್ಲಿ ದೇವಾಲಯ ಶಿಥಿಲವಾಗಿದ್ದು, ಅದನ್ನು ಪುನಃ ಸಂಸ್ಥಾಪಿಸಿ, ಪ್ರತಿಷ್ಠಾಪಿಸಿದ್ದಾರೆ ಅಂದ ಮೇಲೆ ದೇವಾಲಯವು ಬಹಳ ಹಿಂದಿನಿಂದಲೇ ಅಲ್ಲಿದ್ದುದು ಖಚಿತವಾಗುತ್ತದೆ. ಕಾರಣ ಕರ್ನಾಟಕದ ಮತ್ತು ದಕ್ಷಿಣ ಭಾರತದ ಪ್ರಾಚೀನ ಶಿಕ್ಷಣವನ್ನು ಅಧ್ಯಯನ ಮಾಡಿರುವ ವಿದ್ವಾಂಸರೆಲ್ಲರೂ ಅಭಿಪ್ರಾಯಪಡುವಂತೆ ಶ್ರೀಮದ್ ಅನಾದಿಯ ಅಗ್ರಹಾರ, ಶ್ರೀರಾಮರ ದತ್ತಿ ಅಗ್ರಹಾರ, ಶ್ರೀಜನಮೇಜಯರ ದತ್ತಿ ಅಗ್ರಹಾರ, ಮುಂತಾದ ಅಗ್ರಹಾರಗಳ ಪ್ರಾಚೀನತೆಯನ್ನು ಅರುಹುವ ಉಲ್ಲೇಖಗಳು, ಅದನ್ನು ರಚಿಸಿದ ವ್ಯಕ್ತಿಗಳ ಹೆಸರು ಮರೆತನಂತರ ಪ್ರಾರಂಭವಾದದ್ದು. ಅಂದರೆ, ಈ ಮರೆಯುವ ಅಥವಾ ಹೆಸರು ಕಳೆದುಹೋಗುವ ಪ್ರಕ್ರಿಯೆ ನಡೆಯಬೇಕಾದರೆ ಕನಿಷ್ಟ ಐದಾರು ತಲೆಮಾರುಗಳ ಕಾಲ ಸರಿಯಬೇಕು. ಶಾಸನದ ಕಾಲವಾದ ಕ್ರಿ.ಶ. ೧೧೭೫ರಿಂದ ಹಿಂದಕ್ಕೆ ಐದಾರು ತಲೆಮಾರುಗಳನ್ನು ನೂಕಿದರೆ ಆ ಕಾಲ ಸಹ ನಮ್ಮನ್ನು ಹಳೆ ಬೂದನೂರಿನ ಶಾಸನದ ಕಾಲಕ್ಕೆ ಕೊಂಡೊಯ್ಯುತ್ತದೆ. ಐತಿಹ್ಯಗಳು ಇದಕ್ಕೆ ಪುಷ್ಟಿ ಕೊಡುತ್ತವೆ.

ಈವರೆಗೆ ಪ್ರಕಟವಾಗಿರುವ ರಾಮಾನುಜರ ಬಗೆಗಿನ ಎಲ್ಲಾ ಐತಿಹ್ಯಗಳು, ಅವರು ಬಂದ ಸಮಯದಲ್ಲಿ ಇಲ್ಲಿ ಅಪಾರ ಸಂಖ್ಯೆಯ ಶೈವರು ಮತ್ತು ಜೈನರಿದ್ದರೆಂದು ಉಲ್ಲೇಖಿಸುತ್ತದೆ. ಅಂದ ಮೇಲೆ ಶೈವರ ಹಾಗೂ ಜೈನರ ಆರಾಧ್ಯ ದೈವಗಳಾದ ಶಿವ ಮತ್ತು ತೀರ್ಥಂಕರ ದೇವಾಲಯಗಳು ಇಲ್ಲಿ ಇದ್ದಿರಲೇಬೇಕು. ಈ ಸಕಾರಣ ಸಾಕ್ಷವನ್ನು ಒಪ್ಪಿಕೊಂಡಾಗ ತೊಂಡನೂರು ೯‑೧೦ನೆಯ ಶತಮಾನಕ್ಕಾಗಲೇ ಅಂದರೆ, ಗಂಗರ ಕಾಲದಲ್ಲಿಯೇ ಅಗ್ರಹಾರವಾಗಿತ್ತೆನ್ನಬಹುದು. ಹಾಗಾಗಿ ಇಲ್ಲಿನ ಕೆರೆಯ ನಿರ್ಮಾಣವೂ ಇದೇ ಕಾಲದಲ್ಲಾಗಿರುವ ಎಲ್ಲಾ ಸಾಧ್ಯತೆಗಳಿವೆ. ಅಂದರೆ ಗಂಗರ ಕಾಲದಲ್ಲಿ ಇದ್ದ ಕೆರೆ, ಚೋಳರ ಆಕ್ರಮಣದ ನಂತರ ಅತಿ ವಿಸ್ತಾರವಾಗಿ ಇಂದಿನ ಎತ್ತರವನ್ನು ಪಡಕೊಂಡಿರುವ ಸಾಧ್ಯತೆ ಇದೆ. ಚೋಳರ ಆಕ್ರಮಿತ ಕಾಲದಲ್ಲಿ ಈ ಪ್ರದೇಶದಲ್ಲಿ ಕೆರೆಕಟ್ಟೆಗಳನ್ನು ನವೀಕರಿಸಿರುವುದಕ್ಕೆ, ಅಗ್ರಹಾರಗಳನ್ನು ಚತುರ್ವೇದಿ ಮಂಗಲಗಳಾಗಿ ಬದಲಾಯಿಸಿರುವುದಕ್ಕೆ ಸಹ ಶಾಸನಾಧಾರಗಳಿರುವ ಹಿನ್ನೆಲೆಯಲ್ಲಿ ಈ ಕೆರೆಯೂ ಅದೇ ಕಾಲದಲ್ಲಿ ನಿರ್ಮಾಣವಾಗಿರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅದನ್ನು ಒಪ್ಪಿಕೊಂಡಲ್ಲಿ ಈ ಗ್ರಾಮವನ್ನು ಅಗ್ರಹಾರವಾಗಿ ಚತುರ್ವೇದಿ ಮಂಗಲವಾಗಿ ನಿರ್ಮಿಸಿದುದು‑ಗಂಗ ‑ಚೋಳರ ಕಾಲದಲ್ಲಿ. ಆ ನಂತರದಲ್ಲಿ ಈ ಪ್ರದೇಶ ದೋರಸಮುದ್ರ‑ಕರೂರು ವ್ಯಾಪಾರದ ಮಾರ್ಗದಲ್ಲಿ ಬರುವುದರಿಂದ ಕಾಲಕ್ರಮೇಣ ತೀವ್ರವಾಗಿ ಬೆಳವಣಿಗೆಯನ್ನು ಹೊಂದಿತು.

ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ, ತೊಂಡನೂರಿನ “ಕೆರೆ”ಯನ್ನು ಪ್ರಾರಂಭಿಸಿದವರು ಗಂಗರು. ಅದನ್ನು ಪುನಃ ನಿರ್ಮಿಸಿದವರು ಚೋಳರು. ಅದನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದ ಕಾರ್ಯ ಆನಂತರದ ರಾಜ ಮನೆತನಗಳಿಂದ ನಡೆದಿದೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಸ್ಥಳೀಯವಾಗಿ ಹರಿಯುವ ಯಾದವ ನದಿಗೆ ಒಡ್ಡನ್ನು ನಿರ್ಮಿಸಿ, ಅದರ ನೀರನ್ನು ವ್ಯವಸಾಯಕ್ಕೆ ಹಾಗೂ ಜನವಸತಿಯ ದೈನಂದಿನ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಇದರ ಪ್ರಾಚೀನ ಹೆಸರು ಶಾಸನಗಳಲ್ಲಿ ಕೇಳಿಬರುವುದಿಲ್ಲ. ಇದನ್ನು ಪ್ರಥಮವಾಗಿ ಶಾಸನಗಳು “ಯಾದವ ಸಮುದ್ರ” ಎಂದು ಉಲ್ಲೇಖಿಸಿದೆ. ಅಲ್ಲಿಂದ ಹೈದರನ ಕಾಲದವರೆಗೆ ಇದರ ಹೆಸರು ಬದಲಾಗುತ್ತಾ ಬಂದಿದೆ. ಇದನ್ನು ಯಾದವ ಸಮುದ್ರ,[17] ತಿರುಮಲ ಸಾಗರ,[18] ಶ್ರೀತೀರ್ಥ ತಟಾಕ,[19] ಮೋತಿ ತಲಾಬ್,[20] “ಶ್ರೀಪಾದತೀರ್ಥ ತಟಾಕ”[21] ಎಂದೆಲ್ಲಾ ರೂಪಾಂತರ ಹೊಂದಿ, ಇಂದು “ಮೋತಿ ತಲಾಬ್” ಎಂದು ಕರೆಸಿಕೊಳ್ಳುತ್ತಿದೆ. ಕೆರೆಯ ಬದಲಾದ ಹೆಸರುಗಳು, ಕೆರೆಯು ನಾಮಪರಿವರ್ತನೆಯ ಕಾಲದಲ್ಲಿ ಅಂದರೆ ಹೊಯ್ಸಳರ ನಂತರದ ಆಡಳಿತಾವಧಿಯಲ್ಲಿ ಪುನಃ ನಿರ್ಮಾಣಗೊಂಡಿದೆ. ವಿಜಯನಗರದ ಅರಸರು, ಮೈಸೂರು ಅರಸರ ಆನಂತರ ಟಿಪ್ಪು ಕೂಡ ಈ ಕೆರೆಯನ್ನು ದುರಸ್ತಿ ಮಾಡಿದ ಉಲ್ಲೇಖವಿದೆ. ಅನಂತರಾಮರವರು,[22] ಈ ಕೆರೆಯು ಟಿಪ್ಪುವಿನ ಕಾಲದಲ್ಲಿ ಪುನಃ ನಿರ್ಮಾಣವಾದದ್ದನ್ನು ಹೀಗೆ ಉಲ್ಲೇಖಿಸಿದ್ದಾರೆ. “ಶ್ರೀರಂಗಪಟ್ಟಣವನ್ನು ಮುತ್ತಲು ಬರುವ ಆಂಗ್ಲ ಪಡೆ ಅದರಿಂದ ಉಪಯೋಗ ಪಡೆದುಕೊಳ್ಳುತ್ತದೆಂದು ೧೭೮೮ರಲ್ಲಿ ಟೀಪುವು ಅದರ ಕಟ್ಟೆಯನ್ನು ಒಡೆಸಿ ನೀರನ್ನೆಲ್ಲಾ ಬರಿದುಮಾಡಿಬಿಟ್ಟಿದ್ದನು”.[23] ಆದರೆ ಆಗ ಶ್ರೀರಂಗಪಟ್ಟಣವನ್ನು ಮುತ್ತಲು ಇಲ್ಲಿಗೆ ಬಂದವರು ಮರಾಠರು. ಈ ಮೊದಲು ಸಹ ಮರಾಠರು ಈ ಮಾರ್ಗದಲ್ಲಿ ಬಂದು ಟೀಪುವನ್ನು ಸೋಲಿಸಿದ್ದರು. ಹಾಗಾಗಿ ಟೀಪು ಮರಾಠರನ್ನು ತಡೆಯಲು ಈ ಕಾರ್ಯವೆಸಗಿ ಅನಂತರ ಅದನ್ನು ಪುನಃ ನಿರ್ಮಿಸಿರುವ ಸಾಧ್ಯತೆಗಳಿವೆ.

ಕೆರೆಗಳು ಧಾರ್ಮಿಕವಾದ ಹಿನ್ನೆಲೆಯನ್ನು ಹೊಂದಿರುವುದು ಅಪರೂಪ. ಈ ಕೆರೆ ಅದನ್ನು ಸಹ ತನ್ನದನ್ನಾಗಿಸಿಕೊಂಡಿದೆ. ಜನಪದರಲ್ಲಿ ಈ ಕೆರೆ “ಪಂಚಾಪ್ಸರಾತಟಾಕ”, “ಅಪ್ಸರಾತಟಾಕ”ವೆಂದು ಹೆಸರುವಾಸಿಯಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಹಾಗೂ ಇತರ ೧೦೮ ಗ್ರಾಮಗಳಿಂದ ಬರುವ ಗ್ರಾಮ ದೇವತೆಗಳ ಆರಾಧಕರು ಇದನ್ನು ಒಪ್ಪಿಕೊಳ್ಳುತ್ತಾರೆ.


[1] ಸಿ.ಎಸ್.ವಾಸುದೇವನ್, ೨೦೦೭: ಕೃಷಿ ಮತ್ತು ನೀರಾವರಿ ವ್ಯವಸ್ಥೆ, ಪ್ರಾಚೀನ ಕರ್ನಾಟಕದ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳ ಮರುಚಿಂತನೆ, (ಸಂ) ರಮೇಶ ನಾಯಕ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ

[2] ಎಂ.ಎ.ಆರ್. ೧೯೨೯: ಪುಟ ೫೦

[3] ಎ.ಆರ್.ಐ.ಇ. ೧೯೧೬: ಪುಟ ೧೧೨‑೧೧೩

[4] ಎ.ಕ.,VI, ಪಾಂ. ೧೨೨

[5] ಮಂಡ್ಯ ಜಿಲ್ಲಾ ಗೆಜೆಟಿಯರ್: ಪುಟ ೧೬‑೧೮

[6] ರಾಮಕೃಷ್ಣಾರ್ಪಣಾನಂದ, ಹೊಯ್ಸಳರ ಉಪರಾಜಧಾನಿ ಕೆರೆ ತೊಣ್ಣೂರು, ಗೃಹಶೋಭಾ, ಪುಟ ೪೮‑೫೦, ಎಪ್ರಿಲ್ ೧೯೯೮

[7] “ಮುತ್ತಿನ ಕೆರೆ” ಪಾಂಡವಪುರ ತಾಲೂಕು ಕನ್ನಡಸಾಹಿತ್ಯ ಪರಿಷತ್ತು ಪ್ರಕಟಣೆ, ಪುಟ ೪೦‑೪೪

[8] ಅನಂತರಾಮು, ೧೯೯೭: ಸಕ್ಕರೆಯ ಸೀಮೆ, ಮೈಸೂರು, ಪುಟ ೭೭‑೮೭

[9] ಎ.ಕ.,VI, ಪಾಂ. ೧೬, ೪೭, ೫೨: ಕೃಪೆ. ೧೯, ೨೦: ಶ್ರೀಪ. ೬೬, ೮೫

[10] ಬಿ.ಷೇಕ್ ಆಲಿ, ೧೯೭೬: ಹಿಸ್ಟರೀ ಆಫ್ ವೆಸ್ಟ್ರನ್ ಗಂಗಾಸ್, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ಪುಟ ೧೫೮‑೧೫೯

[11] ಅದೇ

[12] ಎ.ಕ., VI, ಪಾಂ. ೪೪, ೫೧: ಶ್ರೀಪ. ೬೭, ೭೮

[13] ಎ.ಕ. x

[14] ಎ.ಕ., VI, ಪಾಂ. ೧೦೦, ೧೦೯ ಹಾಗೂ ಅದೇ ದೇವಾಲಯದ ಇತರ ಶಾಸನಗಳು

[15] ಎ.ಕ., VI, ಪಾಂ.೭೯, ಕ್ರಿ.ಶ. ೧೧೭೫

[16] ಎ.ಕ.,VI, ಪಾಂ. ೧೦೪, ಕ್ರಿ.ಶ. ೧೨ನೆಯ ಶತಮಾನ

[17] ಎ.ಕ. VI, ಪಾಂ. ೧೨೨

[18] ಅನಂತರಾಮು, ೧೯೯೭: ಪೂರ್ವೋಕ್ತ

[19] ಎ.ಕ. VI, ಪಾಂ. ೯೯, ಕ್ರಿ.ಶ. ೧೭೨೨

[20] ವೆಂಕಟರಮಣಯ್ಯ (ಸಂ,), ೨೦೦೩; ಶ್ರೀವೈಷ್ಣವ ದಿವ್ಯಕ್ಷೇತ್ರ ತೊಣ್ಣೂರು, ಬೆಂಗಳೂರು, ಪುಟ ೧೬

[21] ಅನಂತರಾಮು, ೧೯೯೭: ಪೂರ್ವೋಕ್ತ

[22] ಅದೇ

[23] ಅದೇ