ತೊಣ್ಣೂರು ನಮಗೆ ಐತಿಹಾಸಿಕವಾಗಿ ಕಂಡು ಬರುವುದು ಸುಮಾರು ೧೨ನೇ ಶತಮಾನದ ಶಾಸನಗಳಿಂದ. ಶಾಸನಗಳ ಪ್ರಕಾರ ಈ ಗ್ರಾಮಕ್ಕೆ ಯಾದವನಾರಾಯಣ ಚತುರ್ವೇದಿಮಂಗಲ ಮತ್ತು ತೊಂಡನೂರು ಎಂಬುದು ಪರ್ಯಾಯ ಹೆಸರುಗಳು. ಹೊಯ್ಸಳರನ್ನು ಯಾದವರೆಂದು ಶಾಸನಗಳಲ್ಲಿ ಕರೆಯಲಾಗಿದ್ದು, ಅವರು ಕಟ್ಟಿಸಿದ ಅಗ್ರಹಾರದಲ್ಲಿ ನಾರಾಯಣದೇವರನ್ನು ಪ್ರತಿಷ್ಠೆ ಮಾಡಿದ್ದರಿಂದ ಇದಕ್ಕೆ ಶಾಸನಗಳಲ್ಲಿ ಯಾದವನಾರಾಯಣ ಚತುರ್ವೇದಿಮಂಗಲ ಎಂದು ಕರೆಯಲಾಗಿದೆ. ಇಲ್ಲಿ ಚತುರ್ವೇದವನ್ನು ಓದುತ್ತಿದ್ದ ಬ್ರಾಹ್ಮಣರು ಹಾಗೂ ಇತರರು ನೆಲೆಸಿದ್ದರು.

ತೊಣ್ಣೂರು ಎಂಬುದು ತೊಂಡನೂರು ಎಂಬುದರ ಸಂಕ್ಷಿಪ್ತ ಅಥವಾ ಗ್ರಾಮ್ಯರೂಪ. ಇಲ್ಲಿರುವ ಕೆರೆಯ ಆಧಾರದ ಮೇಲೆ ಈ ಗ್ರಾಮಕ್ಕೆ ಕೆರೆ ತೊಣ್ಣೂರು ಎಂದೂ ಸಮೀಪದಲ್ಲೇ ಇರುವ ಮತ್ತೊಂದು ಗ್ರಾಮಕ್ಕೆ ಸುಂಕಾ ತೊಣ್ಣೂರು ಎಂದು ಹೆಸರಿಡಲಾಗಿದೆ.

ಈ ಗ್ರಾಮದಲ್ಲಿ ನಾವು ಮುಖ್ಯವಾಗಿ ಮೂರು ಮತಗಳನ್ನೂ ಅನೇಕ ಪಂಥಗಳನ್ನೂ ನೋಡಬಹುದಾಗಿದೆ. ಆ ಮೂರು ಪ್ರಮುಖ ಮತಗಳೆಂದರೆ,

೧. ಹಿಂದೂ, ೨. ಜೈನ ಮತ್ತು ೩. ಮುಸಲ್ಮಾನ

ಇವುಗಳಲ್ಲಿ ಭಾರತದೇಶದ ಪ್ರಮುಖ ಧರ್ಮವಾದ ಹಿಂದೂ ಅಥವಾ ಸನಾತನ ಧರ್ಮವೇ ಈ ಗ್ರಾಮದ ಮುಖ್ಯವಾದ ಮತವಾಗಿದ್ದು, ಈ ಧರ್ಮದ ಆಧಾರದ ಮೇಲೆಯೇ ಗ್ರಾಮದಲ್ಲಿ ಪ್ರತಿಯೊಂದು ಚಟುವಟಿಕೆಯೂ ನಡೆಯುತ್ತಿತ್ತು ಎಂದು ಇಲ್ಲಿರುವ ಸಾಕಷ್ಟು ಸಂಖ್ಯೆಯ ಶಾಸನಗಳು ಉಲ್ಲೇಖಿಸುತ್ತವೆ. ಧರ್ಮಕಾರ್ಯಗಳು, ದೇವರಿಗೆ ನಂದಾದೀಪದ ದಾನ, ಸುವರ್ಣನಾಣ್ಯ ಹಾಗೂ ವೃತ್ತಿಭೂಮಿಗಳ ದಾನ ಇತ್ಯಾದಿಗಳು ಭಾರತೀಯ ಧರ್ಮಶಾಸ್ತ್ರಗಳ ಆಧಾರದ ಮೇಲೆ ನಡೆದ ಧಾರ್ಮಿಕ ಕಾರ್ಯಗಳಾಗಿವೆ. ಹಿಂದೂ ಮತದಲ್ಲಿ ನಾವು ಇಲ್ಲಿ ವೈಷ್ಣವ, ಶೈವ ಪಂಥಗಳನ್ನು ಕಾಣಬಹುದಾದರೂ ಮೊದಲಿಗೆ ಈ ಕ್ಷೇತ್ರದ ಶೈವ ಸಂಪ್ರದಾಯವನ್ನು ನಾವು ಇಲ್ಲಿ ವಿವೇಚಿಸಬಹುದು.

ಸಾಮಾನ್ಯವಾಗಿ ವೈಷ್ಣವ ಆಗಮಗಳ ಪ್ರಕಾರ, ಶಿವನ ದೇವಾಲಯವು ಮುಖ್ಯದೇವಾಲಯದ ಅಥವಾ ಊರಿನ ಈಶಾನ್ಯಕ್ಕಿರಬೇಕು. ಇಂದು ಇಲ್ಲಿರುವ ಶಿಥಿಲವಾದ ಕೈಲಾಸೇಶ್ವರ ದೇವಾಲಯವೂ ಸಹ ಊರಿನ ಹಾಗೂ ಮುಖ್ಯದೇವಾಲಯವಾದ ನಂಬಿನಾರಾಯಣನಿಗೆ ಈಶಾನ್ಯಭಾಗದಲ್ಲಿದೆ. ಇಂದು ಇಲ್ಲಿ ನೆಲೆಸಿರುವ ಬಹುಸಂಖ್ಯಾತ ಒಕ್ಕಲಿಗ ಸಮುದಾಯವನ್ನು ನಾವು ಶೈವರು ಎಂದು ಹೇಳುವಂತಿಲ್ಲ. ಹಾಗೆಯೇ ವೈಷ್ಣವರು ಎಂದೂ ಸಹ ಹೇಳುವಂತಿಲ್ಲದೆ, ಇಲ್ಲಿನ ಇತರ ಜನಾಂಗಗಳೂ ಸಹ ಎರಡೂ ಧರ್ಮವನ್ನು ಅನುಸರಿಸುತ್ತಾರೆ.

ಈ ಕೈಲಾಸೇಶ್ವರ ದೇವಾಲಯವು ಇಂದು ಶಿಥಿಲಗೊಂಡಿದ್ದು, ಶಾಶ್ವತವಾಗಿ ಹಾಳಾಗುವ ಅಪಾಯದಲ್ಲಿದೆ. ಇಲ್ಲಿನ ಅನೇಕ ಶಾಸನಗಳು ನಮಗೆ ಅಂದಿನ ದೇವಾಲಯದ ಭವ್ಯತೆಯನ್ನು ಕಣ್ಣಮುಂದೆ ತರುತ್ತವೆ. ಶಾಸನಗಳ ಪ್ರಕಾರ ಹೇಳುವುದಾದರೆ, ಈ ದೇವಾಲಯವು ಆ ಕಾಲದ ಜನಜೀವನದಲ್ಲಿ ಪ್ರಮುಖಪಾತ್ರವನ್ನು ವಹಿಸಿತ್ತು. ಅದಲ್ಲದೆ, ದೇವಾಲಯವನ್ನು ಕಟ್ಟಿದ ಕಾಲವನ್ನು ಹೇಳುವ ಶಾಸನಗಳು ಇಲ್ಲಿ ಇಲ್ಲವಾದರೂ, ಇಲ್ಲಿರುವ ಶಾಸನಗಳಲ್ಲಿ ಕಂಡುಬರುವ “ಸ್ಥಾನಪತಿ” ಎಂಬ ಪ್ರಯೋಗವು ದೇವಾಲಯವು ಅತ್ಯಂತ ಪ್ರಾಚೀನ ಎಂಬ ಅಂಶವನ್ನು ತೋರಿಸುತ್ತದೆ. ಕರ್ನಾಟಕದಲ್ಲಿದ್ದ ಕಾಳಾಮುಖ ಮತ್ತು ಪಾಶುಪತ ಶೈವಸಂಪ್ರದಾಯಗಳ ಪ್ರಭಾವವು ಕಲ್ಯಾಣಚಾಲುಕ್ಯರ ಕಾಲದಲ್ಲಿ ಅಧಿಕವಾಗಿದ್ದು, ನಂತರದ ಹೊಯ್ಸಳರ ಕಾಲದಲ್ಲಿಯೂ ಸಹ ಮುಂದುವರಿಯಿತು ಎಂಬುದಕ್ಕೆ ರಾಮಾನುಜಾಚಾರ್ಯರ ಗ್ರಂಥಗಳು ಮತ್ತು ಅವರ ಗುರುಗಳಾದ ಶ್ರೀಯಾಮುನಾಚಾರ್ಯರ (ಸುಮಾರು ಕ್ರಿ.ಶ. ೧೦೫೦)ಗ್ರಂಥಗಳಲ್ಲಿ ಕಂಡು ಬರುವ ಉಲ್ಲೇಖಗಳೇ

[1] ಸಾಕ್ಷಿಗಳಾಗಿವೆ.

ಆದರೂ ಸಹ ತೊಂಡನೂರಿನಲ್ಲಿದ್ದ ಶೈವಪಂಥವು ಕಾಳಾಮುಖ ಅಥವಾ ಪಾಶುಪತ ಸಿದ್ಧಾಂತವಾಗಿತ್ತೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಕಾಳಾಮುಖ ಮತ್ತು ಪಾಶುಪತ ಸಿದ್ಧಾಂತದ ಉತ್ತರ ಕರ್ನಾಟಕ ದೇವಾಲಯಗಳ[2] ಸ್ವರೂಪಕ್ಕೂ ಈಗ ಇಲ್ಲಿರುವ ಕೈಲಾಸೇಶ್ವರ ದೇವಾಲಯದ ಸ್ವರೂಪಕ್ಕೂ ಬಹಳ ಮಟ್ಟಿಗೆ ವ್ಯತ್ಯಾಸಗಳು ಕಂಡುಬರುತ್ತದೆ. ನಮ್ಮ ಅಭಿಪ್ರಾಯದ ಪ್ರಕಾರ ಶಾಸನಗಳ ಅಧ್ಯಯನದ ಮೇಲೆ ನಾವು, ಇಲ್ಲಿ ಇದ್ದಿದ್ದು ತಮಿಳುನಾಡಿನಲ್ಲಿ ಹನ್ನೊಂದನೇ ಶತಮಾನದಲ್ಲಿ ಪ್ರಚಲಿತವಿದ್ದ ಶೈವಸಿದ್ಧಾಂತ ಎಂದು ಹೇಳಬಹುದು. ಆದರೆ ಮುಂದೆ ಬಂದ ವೀರಶೈವ ಸಿದ್ಧಾಂತ ಅಥವಾ ಲಿಂಗಾಯತ ಸಿದ್ಧಾಂತಕ್ಕೂ ಇದಕ್ಕೂ ಯಾವುದೇ ನಿಕಟ ಸಾಮ್ಯವು ಕಂಡುಬರುವುದಿಲ್ಲ.

ಈ ಪ್ರದೇಶವು ಹೊಯ್ಸಳರಿಗಿಂತ ಮುಂಚೆ ತಮಿಳುನಾಡಿನ ಚೋಳರ ಪ್ರಭಾವವನ್ನು ಹೊಂದಿದ್ದರಿಂದ ಇಲ್ಲಿನ  ಹೆಚ್ಚು ಶಾಸನಗಳು ತಮಿಳುಭಾಷೆಯಲ್ಲಿರುವುದಲ್ಲದೆ, ಇಲ್ಲಿನ ಎಲ್ಲಾ ದೇವಾಲಯಗಳಲ್ಲಿ ತಮಿಳುನಾಡಿನಿಂದ ಬಂದ ಪ್ರಮುಖರ ಹೆಸರುಗಳು ಉಲ್ಲೇಖಗೊಂಡಿವೆ. ಕೆಲವು ದೇವಾಲಯಗಳನ್ನು ತಮಿಳುನಾಡಿನ ಶಿಲ್ಪಿಗಳೆ ನಿರ್ಮಿಸಿರುವಂತಿದೆ.

ಈ ಕೈಲಾಸೇಶ್ವರ ದೇವಾಲಯವನ್ನು ಶಾಸನಗಳಲ್ಲಿ “ಶ್ರೀಕೈಲಾಸಮುಡೈಯಾರ್ ಕೋಯಿಲ್” ಎಂದು ಕರೆಯಲಾಗಿದೆ. ಶಾಸನಗಳಲ್ಲಿ ಬರುವ ಕೆಲವು ಸ್ಥಾನಪತಿಗಳ ಹೆಸರುಗಳು ಹೀಗಿವೆ. ದೇವ ಪ್ಪಿಳ್ಳೈಯಾನ್[3] ಕೂತ್ತಬಟ್ಟರ್ ಪಿಳ್ಳೆ ಆಳುಡೈಯಾನ್ ಬಟ್ಟ[4], ಮಹಾದೇವ ಭಟ್ಟ, ತಳುವಕ್ಕುರೈನ್ದಾನ್ ಭಟ್ಟ, ಆಳುಡೈಯಾರ್ ಭಟ್ಟ, ಆಳ್ವಾನ್ ಭಟ್ಟ,[5] ಕೌಶಿಕಗೋತ್ರದ… ಳೈಯಾರ್ ಪಿಳ್ಳೈ ಮುಂತಾದವರ ಹೆಸರುಗಳು ಕಂಡು ಬರುತ್ತವೆ. ಇದರಿಂದ ಈ ದೇವಾಲಯದಲ್ಲಿ ಇವರ ವಂಶದವರು ಪುತ್ರಪೌತ್ರಪರಂಪರೆಯಾಗಿ ಇದ್ದರೆಂಬುದು ಸ್ಪಷ್ಟವಾಗುವುದರಿಂದ ದೇವಾಲಯದ ಪ್ರಾಚೀನತೆ ತಿಳಿಯುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ವಿವಿಧ ಗೋತ್ರಗಳ ಸ್ಥಾನಪತಿಗಳ ಉಲ್ಲೇಖ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಕುಟುಂಬದಲ್ಲಿ ಯಾರಾದರೂ ಮರಣಹೊಂದಿದರೆ, ಅಥವಾ ಹುಟ್ಟಿದರೆ, ಅಶೌಚ ಅಂದರೆ ಸೂತಕವು ಉಂಟಾಗುತ್ತದೆ. ಆಗ ಆ ಮನೆಯವರು ಪೂಜೆ ನಡೆಸುವಂತಿಲ್ಲ. ಆದ್ದರಿಂದಲೇ ಬೇರೆ ಬೇರೆ ಗೋತ್ರದವರನ್ನು ನಿಯಮಿಸಬೇಕೆಂದು ಆಗಮಗಳು ಹೇಳುತ್ತವೆ. ಅದನ್ನು ಈ ದೇವಾಲಯಗಳಲ್ಲಿ ನಡೆಸಿರುವುದನ್ನು ನಾವು ಕಾಣುತ್ತೇವೆ. ಇದರಿಂದ ನಮಗೆ ಈ ದೇವಾಲಯವು ಆಗಮಗಳಲ್ಲಿ ಹೇಳಿದ ಎಲ್ಲ ಪೂಜಾಪದ್ಧತಿಗಳನ್ನು ಒಳಗೊಂಡಿತ್ತು ಎಂಬ ಅಂಶವು ಸ್ಪಷ್ಟವಾಗುತ್ತದೆ.

ಎಲ್ಲ ರಾಜರೂ, ಮತ್ತು ಇತರರು ಈ ಕೈಲಾಸೇಶ್ವರ ದೇವಾಲಯಕ್ಕೆ ದಾನ, ಧರ್ಮ ಮತ್ತು ದತ್ತಿಗಳನ್ನು ಕಾಲಕಾಲಕ್ಕೆ ನೀಡಿ ಅಭಿವೃದ್ದಿಯತ್ತ ಗಮನಹರಿಸಿರುವುದು ಶಾಸನಗಳಲ್ಲಿ ಸ್ಪಷ್ಟವಾಗಿದೆ. ಇದು ೧೧ನೇ ಶತಮಾನದಿಂದ ಆರಂಭಿಸಿ ೧೬‑೧೭ನೇ ಶತಮಾನಗಳವರೆಗೂ ಮುಂದುವರೆದಂತೆ ಕಂಡು ಬಂದಿದ್ದು, ಈಗ ಇಲ್ಲಿ ಶೈವಧರ್ಮವು ತನ್ನ ನೆಲೆಯನ್ನು ಬಹಳಮಟ್ಟಿಗೆ ಕಳೆದುಕೊಂಡಿದೆ ಎಂಬುದಕ್ಕೆ ಪಾಳುಬಿದ್ದಿರುವ ಕೈಲಾಸೇಶ್ವರ ದೇವಾಲಯವೇ ಸಾಕ್ಷಿಯಾಗಿದೆ.

ಇದಲ್ಲದೇ ಇಲ್ಲಿ ಶೈವಧರ್ಮಕ್ಕೆ ಸೇರಿದ ಅಂದರೆ ಶಿವನ ಮತ್ತೊಂದು ದೇವಾಲಯದ ಉಲ್ಲೇಖ ಕಂಡುಬರುತ್ತದೆ. ಈ ದೇವಾಲಯ ಸಾಕಷ್ಟು ಪ್ರಾಚೀನವಾದ ದೇವಾಲಯವಾಗಿದ್ದು, ವೀರಬಲ್ಲಾಳನ ಕಾಲದ ಶಾಸನದಲ್ಲಿ ಇದರ ಉಲ್ಲೇಖ  ಕಂಡು ಬರುತ್ತದೆ.[6] ಶಾಸನದ ಪ್ರಕಾರ ಇದು ನಖರೇಶ್ವರ ದೇವಾಲಯ. ಬಹುಶಃ ಸಂಸ್ಕೃತದ ಪ್ರಕಾರ ಅದು ನಗರೇಶ್ವರ ಅಥವಾ ನಕ್ರೇಶ್ವರ ಇರಬಹುದು. ಇಲ್ಲಿಯೂ ಕೂಡ ತಪೋಧನನಾದ ಅಮೃತರಾಶಿ ಸ್ಥಾನಪತಿಯ ಉಲ್ಲೇಖವು ಬಂದಿದ್ದು, ಇದೂ ಕೂಡ ಒಂದು ಪ್ರಮುಖ ದೇಗುಲವಾಗಿತ್ತು. ಅದೆಂದರೆ ನಂಬಿನಾರಾಯಣನ ದೇಗುಲಕ್ಕೆ ನೈಋತ್ಯದಲ್ಲಿರುವ ನಗರೇಶ್ವರ ದೇವಾಲಯ. ಆದರೆ ಇಂದು ಇಲ್ಲಿ ದೇವಾಲಯದ ಬದಲು ಮುಸ್ಲಿಂರ ದರ್ಗವು ಕಂಡುಬರುತ್ತದೆ. ಅಲ್ಲೇ ನಗರೇಶ್ವರ ದೇವಾಲಯವಿತ್ತೆ ಎಂಬ ಪ್ರಶ್ನೆಗೆ ಪೂರ್ಣರೀತಿಯ ಆಧಾರಗಳು ದೊರೆಯುವುದಿಲ್ಲ.

ಈ ಎರಡು ದೇವಾಲಯಗಳ ಉಲ್ಲೇಖ ಮತ್ತು ಶಾಸನಗಳಿಂದ ಒಂದು ಕಾಲಕ್ಕೆ ತೊಂಡನೂರಿನಲ್ಲಿ ಶೈವಧರ್ಮವು ಅತ್ಯಂತ ಪ್ರಬಲವಾಗಿತ್ತೆಂದು ಊಹಿಸಬಹುದು. ಆದರೆ ಕಾಲಕ್ರಮೇಣ ಶ್ರೀ ವೈಷ್ಣವಧರ್ಮವು ಜನಪ್ರಿಯವಾಗಿದ್ದರಿಂದ ಶೈವಧರ್ಮದ ಪ್ರಾಬಲ್ಯವು ಕಡಿಮೆಯಾಗತೊಡಗಿತು.

ಇನ್ನು ಶ್ರೀವೈಷ್ಣವ ಪಂದವು ಈ ತೊಂಡನೂರಿನಲ್ಲಿ ಅತ್ಯಂತ ಪ್ರಮುಖವಾಗಿದೆ. ಇತಿಹಾಸದ ದೃಷ್ಟಿಕೋನದಿಂದ ಗಮನಿಸುವುದಾದರೆ ಶ್ರೀವೈಷ್ಣವ ಪಂಥವು ಇಲ್ಲಿ ಮೊದಲಬಾರಿಗೆ ಕರ್ನಾಟಕದ ರಾಜಾಶ್ರಯವನ್ನು ಪಡೆದಿದ್ದು ಮಾತ್ರವಲ್ಲದೇ, ಮುಂದೆ ಕರ್ನಾಟಕದ ಒಂದು ಮಹತ್ವದ ಪಂಥವಾಯಿತು.

ಈ ವಿಚಾರವಾಗಿ ಈಗ ನಾವು ಕೂಲಂಕಷವಾಗಿ ವಿವೇಚಿಸೋಣ. ೧೨ನೆಯ ಶತಮಾನದ ಆದಿಭಾಗದಲ್ಲಿ ಚೋಳರ ಮೇಲೆ ಹೊಯ್ಸಳ ಅರಸರ ಅಧಿಕಾರ ಪ್ರಭಾವಯುತವಾಗಿ ಬೆಳೆಯಲಾರಂಭಿಸಿತ್ತು. ಆ ಕಾಲದಲ್ಲಿ ತಮಿಳುನಾಡಿನಲ್ಲಿ ಆಳುತ್ತಿದ್ದ ಚೋಳ ಅರಸರು ಧಾರ್ಮಿಕ ಆಚರಣೆಗಳಲ್ಲಿ ಸ್ವಾತಂತ್ರ್ಯವನ್ನು ನೀಡದೇ ಕೆಲವೊಂದು ನಿರ್ದಿಷ್ಟಪಂಥಗಳನ್ನು ಆಚರಣೆಗೊಳಿಸಲು ಇತರ ಧಾರ್ಮಿಕ ಪಂಥಗಳ ಮುಖಂಡರುಗಳನ್ನು ಬಲವಂತಪಡಿಸ ಲಾರಂಭಿಸಿದರು. ಇಂತಹ ವಿಪ್ಲವಕಾಲದಲ್ಲಿ ತಮಿಳುನಾಡನ್ನು ತೊರೆದು ಕರ್ನಾಟಕಕ್ಕೆ ಬಂದವರೇ ರಾಮಾನುಜಾಚಾರ್ಯರು. ಇವರು ತಾವು ನಂಬಿದ್ದ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚಾರಪಡಿಸಿದರು. ಮಾತ್ರವಲ್ಲದೇ ಈ ಸಿದ್ಧಾಂತವನ್ನು ಅನುಸರಿಸುವವರಿಗೆಲ್ಲರಿಗೂ ಒಂದು ವಿಶಿಷ್ಟ ಚಿಹ್ನೆಗಳನ್ನು ನೀಡಿ ಅವರನ್ನು ಶ್ರೀವೈಷ್ಣವರೆಂದು ಕರೆದರು. ಹಾಗಾಗಿ ರಾಮಾನುಜಾಚಾರ್ಯರನ್ನು ಗುರುಗಳನ್ನಾಗಿ ಒಪ್ಪಿಕೊಂಡವರನ್ನು ಶ್ರೀವೈಷ್ಣವರೆಂದು ಕರೆಯಲಾಯಿತು. ರಾಮಾನುಜರಿಗಿಂತ ಮೊದಲೇ ೮‑೯ನೆಯ ಶತಮಾನಗಳಲ್ಲಿ ಶಂಕರರು ಆರಂಭಿಸಿದ್ದ ಅದ್ವೈತಸಿದ್ಧಾಂತವನ್ನು ಅನುಸರಿಸಿದವರನ್ನು ಸ್ಮಾರ್ತರೆಂದೂ, ೧೩ನೆಯ ಶತಮಾನದಲ್ಲಿ ಬಂದ ಮಧ್ವಾಚಾರ್ಯರರ ಅನುಯಾಯಿಗಳನ್ನು ಮಾಧ್ವರು ಎಂದು ಇಂದಿಗೂ ಕರೆಯಲಾಗುತ್ತದೆ. ಆದರೂ ರಾಜಮನೆತನಗಳ ಆಶ್ರಯದಲ್ಲಿ ಬೆಳೆದ ಶ್ರೀವೈಷ್ಣವ ಮತಕ್ಕೆ ಸಿಕ್ಕಿದ ಪ್ರೋಇನ್ನಾವ ಪಂಥಗಳಿಗೂ ಸಿಗಲಿಲ್ಲ ಎಂಬುದು ನಿರ್ವಿವಾದವಾದ ಅಂಶವಾಗಿದೆ. ಹೊಯ್ಸಳರ ನಂತರ ವಿಜಯನಗರದ ಅರಸರು, ಮೈಸೂರು ಅರಸರು ಈ ಸಿದ್ಧಾಂತಕ್ಕೆ ಪ್ರೋನೀಡಿದರು. ಉತ್ತರಕರ್ನಾಟಕದ ಬಾದಾಮಿಯ ಗುಹೆಗಳಲ್ಲಿ ಕೂಡ ಆಳ್ವಾರರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಶಾಸನದ ಉಲ್ಲೇಖಗಳು ಈ ಪಂಥಕ್ಕೆ ಸಿಕ್ಕಿದ ರಾಜಾಶ್ರಯದ ಪ್ರಮಾಣವನ್ನು ತಿಳಿಸುತ್ತದೆ.

ನಾವು ಹೇಳಿದಂತೆ ರಾಮಾನುಜಾಚಾರ್ಯರು ಕರ್ನಾಟಕಕ್ಕೆ ಬಂದಾಗ ಇಲ್ಲಿ ಆಳುತ್ತಿದ್ದವನು ಹೊಯ್ಸಳ ಅರಸ ವಿಷ್ಣುವರ್ಧನ. ನೀಲಗಿರಿ, ಕಣ್ಣೆಗಾಲ, ಕೊಳ್ಳೇಗಾಲ, ತಲಕಾಡು ಮುಂತಾದ ಕರ್ನಾಟಕದ ಪ್ರದೇಶಗಳನ್ನು ಚೋಳರ ಹಿಡಿತದಿಂದ ಬಿಡಿಸುವುದರಲ್ಲಿ ತಲ್ಲೀನನಾಗಿದ್ದ. ಇಂತಹ ಸಮಯದಲ್ಲಿ ಹೊಯ್ಸಳ ರಾಜಧಾನಿಯಾದ ದೋರಸಮುದ್ರದಿಂದ ಯುದ್ಧಕ್ಕಾಗಿ ಬರಲು ಸಾಧ್ಯವಿಲ್ಲವಾಗಿ, ಈ ತೊಣ್ಣೂರು ಗ್ರಾಮದಲ್ಲಿ ತನ್ನ ಯುದ್ಧಕ್ಕಾಗಿ ರಾಜಧಾನಿ ಯೊಂದನ್ನು ಹೊಂದಿದ್ದ.

ಇನ್ನು ಈ ತೊಂಡನೂರು ತೊಂಡ ಎಂದರೆ ದಾಸ. ಬಹುಶಃ ಚೋಳರಾಜನ ದಾಸನೊಬ್ಬನಿಂದ ನಿರ್ಮಿತವಾದ್ದರಿಂದ ಈ ಹೆಸರು ಬಂದಿರಬೇಕು.[7] ಇದೇ ಗ್ರಾಮದಿಂದ ತೆರಳಿದವನೊಬ್ಬ ರಾಮಾನುಜರನ್ನು ತಮಿಳುನಾಡಿನಲ್ಲಿ ಭೇಟಿಮಾಡಿ, ಅವರಿಂದ ಶಿಷ್ಯದೀಕ್ಷೆಯನ್ನು ಪಡೆದಿದ್ದ. ಏಕೆಂದರೆ, ರಾಮಾನುಜರ ಜೀವನ ಚರಿತ್ರೆಯಲ್ಲಿ ಅವರು ತೊಂಡನೂರಿಗೆ ಬಂದಿದ್ದೇ ಈ ತೊಂಡನೂರಿನ ಭಕ್ತನ ಪ್ರಾರ್ಥನೆಯ ಮೇರೆಗೆ. ರಾಮಾನುಜರು ಮೊದಲಿಗೆ ತಮಿಳುನಾಡಿನ ಸತ್ಯಮಂಗಲದ ಮಾರ್ಗವಾಗಿ ರಾಮನಾಥಪುರ, ಸಾಲಿಗ್ರಾಮ (ಕೃಷ್ಣರಾಜನಗರ ತಾಲ್ಲೂಕು)ಕ್ಕೆ ಬಂದರು. ರಾಮಾನುಜರ ಬಳಿ ಯಾವಾಗಲೂ ಇರುತ್ತಿದ್ದ ಶಿಷ್ಯ ಈ ಸಾಲಿಗ್ರಾಮದ ಆಂಧ್ರಪೂರ್ಣ ಅಥವಾ ವಡುಹನಂಬಿ. ಇವರಿಂದಲೇ ರಾಮಾನುಜರ ಜೀವನಚರಿತ್ರೆಯು ಬರೆಯಲ್ಪಟ್ಟಿತು. ಇವರು ಹೇಳುವಂತೆ ತೊಂಡನೂರಿನ ಭಕ್ತನನ್ನು ನೋಡುವ ಇಚ್ಛೆಯಿಂದ ರಾಮಾನುಜರು ಸಾಲಿಗ್ರಾಮದಿಂದ ತೊಂಡನೂರಿಗೆ ದಯಮಾಡಿಸಿದರು.[8]

ಈ ಪ್ರಪನ್ನಾಮೃತವು ಹೇಳುವಂತೆ ಆಗ ಇಲ್ಲಿ ಆಳುತ್ತಿದ್ದ ರಾಜ ವಿಟ್ಟಲ ದೇವರಾಯ (ಐತಿಹಾಸಿಕವಾಗಿ ದಾಖಲೆಗಳಿಲ್ಲ). ಇವನು ಜೈನಮತಾಶ್ರಯಿಯಾಗಿದ್ದು, ಇವನ ಮಗಳಿಗೆ ಒಂದು ಬ್ರಹ್ಮರಾಕ್ಷಸವು ಹಿಡಿದಿತ್ತು. ಈ ಪುತ್ರಿಯು ದಿಗಂಬರೆಯಾಗಿ, ವಿವಸ್ತ್ರಳಾಗಿ ಹೊರಭಾಗದಲ್ಲೂ ಸಹ ಸುತ್ತಾಡುತ್ತಿದ್ದಳು. ಈ ರಾಜನ ಮಗಳನ್ನು ಗುಣಪಡಿಸಲು ಭಾರತದ ಅನೇಕ ವೈದ್ಯರು, ಮಂತ್ರವಾದಿಗಳು ಅಶಕ್ತರಾಗಿದ್ದರು. ಇದರಿಂದ ನಿರ್ವ್ವಿಣ್ಣೆಯಾದ ರಾಜನ ಪತ್ನೀಯೂ ಸಹ ಚಿಂತಾಕ್ರಾಂತಳಾಗಿದ್ದಳು. ಆಗ ತೊಂಡನೂರಿನ ರಾಮಾನುಜರ ಭಕ್ತ, ತೊಂಡನೂರು ನಂಬಿಯು ರಾಮಾನುಜರ ಪಾದತೀರ್ಥದಿಂದ ಈ ಬ್ರಹ್ಮರಾಕ್ಷಸದಿಂದ ಇವಳಿಗೆ ಮುಕ್ತಿಯು ದೊರಕುತ್ತದೆ ಎಂದು ಹೇಳಲಾಗಿ, ರಾಜ ಮತ್ತು ರಾಣಿಯರು ಅವರ ಉಪದೇಶದಂತೆ ರಾಮಾನುಜರನ್ನು ಅರಮನೆಗೆ ಕರೆಯಿಸಿದರು. ಆಗ ರಾಮಾನುಜರ ಪಾದತೀರ್ಥದಿಂದ ಅವಳಿಗೆ ಬ್ರಹ್ಮರಾಕ್ಷಸವು ಬಿಡುಗಡೆಯಾಗಿ, ಆಗಲೇ ಅವಳು ವಸ್ತ್ರವನ್ನು ಉಟ್ಟು ಬಂದು ರಾಮಾನುಜರಿಗೆ ನಮಸ್ಕರಿಸಿದಳು. ಇದರಿಂದ ಸಂತಸಗೊಂಡ ರಾಜನು ರಾಮಾನುಜರನ್ನು ಪ್ರಾರ್ಥಿಸಲು ರಾಜನಿಗೆ ಪಂಚಸಂಸ್ಕಾರಗಳನ್ನು ಮಾಡಿ ಅವನನ್ನು ಶ್ರೀವೈಷ್ಣವನನ್ನಾಗಿ ಮಾಡಿದ್ದಲ್ಲದೆ, ಅವನಿಗೆ ವಿಷ್ಣುವರ್ಧನಮಹಾರಾಜ ಎಂದು ನಾಮಕರಣ ಮಾಡಿದರು.

ನಂತರ ಇದನ್ನು ತಿಳಿದ ಒಂದುಸಾವಿರ ಜೈನರು, ರಾಮಾನುಜರನ್ನು ವಾದದಲ್ಲಿ ಸೋಲಿಸಲು ನಿರ್ಣಯಿಸಿದರು, ಆಗ ರಾಮಾನುಜರು ಒಂದು ತೆರೆಯ ಹಿಂದೆ ಕುಳಿತು ಆದಿಶೇಷನ ಅವತಾರವನ್ನು ಪಡೆದು ಸಾವಿರ ಹೆಡೆಗಳಿಂದ ಸಾವಿರ ವಿಧವಾದ ಯುಕ್ತಿಗಳಿಂದ ಪ್ರತಿಯೊಬ್ಬ ಜೈನನನ್ನೂ ವಾದದಲ್ಲಿ ಸೋಲಿಸಿದರು. ಈ ಘಟನೆಯು ನಡೆದ ನಂತರ ಕೆಲವರು ಜೈನರು ಶ್ರೀವೈಷ್ಣವಧರ್ಮವನ್ನು ಸ್ವೀಕರಿಸಿದರು.[9]

ಐತಿಹಾಸಿಕವಾಗಿ ನಾವು ಈ ಪ್ರಸಂಗವನ್ನು ಪೂರ್ಣ ನಿಜವೆಂದು ಹೇಳಲಾಗದಿದ್ದರೂ ಸಹ, ಅಂದಿನ ಕಾಲದ ತೊಂಡನೂರಿನ ಶಾಸನಗಳ ಆಧಾರದ ಮೇಲೆ ಹಾಗೂ ಹೊಯ್ಸಳ ವಿಷ್ಣುವರ್ಧನನ ಶಾಸನಗಳ ಮೇಲೆ ಕೆಲವೊಂದು ವಿಚಾರಗಳನ್ನು ವಿವೇಚಿಸಬಹುದು.

ಈ ವಿಷಯದ ಬಗ್ಗೆ ವಿವರವಾದ ಚರ್ಚೆಯನ್ನು ಮಾಡೋಣ. ಪ್ರಪನ್ನಾಮೃತ ಮತ್ತು ಇತಿಹಾಸಕಾರರಿಂದ ನೀಡಲ್ಪಟ್ಟ ಕಾಲಮಾನಗಳು ಒಂದಕ್ಕೊಂದು ಸರಿಹೊಂದುವುದಿಲ್ಲ. ಸಾಹಿತ್ಯಕ ಆಧಾರಗಳ ಪ್ರಕಾರ ರಾಮಾನುಜರು ಹುಟ್ಟಿದ್ದು ಶಾಲಿವಾಹನ ಶಕ ಒಂಭೈನೂರ ಮೂವತ್ತೊಂಭತ್ತು, ಪಿಂಗಳ ಸಂವತ್ಸರ, ಚೈತ್ರಮಾಸ, ಆದ್ರಾನಕ್ಷತ್ರದಂದು. ಅಂದರೆ ಕ್ರಿ.ಶ. ೧೦೧೭ನೆಯ ಇಸವಿ. ಈ ಹುಟ್ಟಿದ ದಿನಾಂಕದ ಬಗ್ಗೆ ನಮಗೆ ಯಾವುದೇ ಆಕ್ಷೇಪಣೆಗಳಿಲ್ಲ. ಅದೇ ಗ್ರಂಥದ ಪ್ರಕಾರ ಅವರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆಯಲ್ಲಿ ನಾರಾಯಣದೇವರ ಪುನಪ್ರತಿಷ್ಠೆಮಾಡಿದ್ದು ಶಾಲಿವಾಹನ ಶಕ ಸಾವಿರದ ಇಪ್ಪತ್ತು ಬಹುಧಾನ್ಯ ಸಂವತ್ಸರ, ಅಂದರೆ ಕ್ರಿ.ಶ. ೧೦೯೮ನೆಯ ಇಸವಿ. ಅಂದರೆ ಅದಕ್ಕೆ ಮುಂಚೆ ರಾಮಾನುಜರು ತೊಂಡನೂರಿನಲ್ಲಿ ಇದ್ದಿರಬೇಕು. ಅಂದರೆ ಕ್ರಿ.ಶ. ೧೦೯೮ ಮಾರ್ಚ ಅಥವಾ ಅದಕ್ಕಿಂತ ಹಿಂದೆ ಅಂದರೆ ಕ್ರಿ.ಶ. ೧೦೯೭ರಲ್ಲಿ ತೊಂಡನೂರಿನಲ್ಲಿ ಇದ್ದಿರಬೇಕು. ಆಗ ರಾಮಾನುಜರಿಗೆ ೮೧ ವರ್ಷ ವಯಸ್ಸು.

ಆ ಸಮಯದಲ್ಲಿ ತೊಂಡನೂರಿನಲ್ಲಿ ಆಳುತ್ತಿದ್ದವರು ಯಾರು? ಅನೇಕ ಪುಸ್ತಕಗಳಲ್ಲಿ ಕಂಡು ಬರುವಂತೆ ಅವರು ಹೊಯ್ಸಳರ ರಾಜನಾದ ಬಿಟ್ಟಿಗನನ್ನು ಶ್ರೀವೈಷ್ಣವಧರ್ಮಕ್ಕೆ ಪರಿವರ್ತಿಸಿ ವಿಷ್ಣುವರ್ಧನ ಎಂದು ಹೆಸರು ನೀಡಿದರು. ಆದರೆ ಅವನು ಜೈನನಾಗಿದ್ದಂತೆ ಮತ್ತು ವೈಷ್ಣವಧರ್ಮವನ್ನು ನಂತರ ಸ್ವೀಕರಿಸಿದಂತೆ ಕಾಣುವುದಿಲ್ಲವಲ್ಲ? ಎಂಬ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಹೇಳಲು ಕಷ್ಟವಾದರೂ ಈ ಕೆಳಕಂಡಂತೆ ಸಮಾಧಾನ ನೀಡಬಹುದು.

‘Karnataka through the ages’ ಎಂಬ ಗ್ರಂಥದಲ್ಲಿ ಗುರುಪರಂಪರೆಯ ಸಾಹಿತ್ಯಕ ಆಧಾರಗಳ ಮೇಲೆ ಈ ರೀತಿ ಹೇಳಲಾಗಿದೆ. ರಾಮಾನುಜರು ಕರ್ನಾಟಕಕ್ಕೆ ಬಂದಿದ್ದು ಕ್ರಿ.ಶ. ೧೦೯೬ರಲ್ಲಿ, ಹೊಯ್ಸಳರ ರಾಜನಾದ ವಿಷ್ಣುವರ್ಧನನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದು ೧೦೯೩ರಲ್ಲಿ ಮತ್ತು ಮೇಲುಕೋಟೆಯ ನಾರಾಯಣನನ್ನು ಪ್ರತಿಷ್ಠೆ ಮಾಡಿದ್ದು ೧೧೦೦ರಲ್ಲಿ.[10] ಅದೇ ಗ್ರಂಥದಲ್ಲಿ ಶ್ರವಣಬೆಳಗೊಳದ ಸ್ಥಳಪುರಾಣದ ಪ್ರಕಾರ ವಿಷ್ಣುವರ್ಧನನು ರಾಮಾನುಜರಿಂದ ತಪ್ತಮುದ್ರಾಂಕನ ಅಥವಾ ಸಮಾಶ್ರಯಣವನ್ನು ಕ್ರಿ.ಶ. ೧೧೧೭ರಲ್ಲಿ ಮಾಡಿಸಿಕೊಂಡ ಎಂದು ಹೇಳಲಾಗಿದೆ ಎಂದು ಉದ್ಧರಿಸಿದ್ದಾರೆ.[11] ಪ್ರಪನ್ನಾಮೃತ ಮತ್ತು ಇಲ್ಲಿ ಹೇಳಿದ ಸಾಹಿತ್ಯಕ ಆಧಾರಗಳು ಬಹಳಷ್ಟು ಮಟ್ಟಿಗೆ ಸರಿಹೊಂದುತ್ತವೆ.

ಆದರೆ ಇತಿಹಾಸಕಾರರ ಪ್ರಕಾರ ವಿಷ್ಣುವರ್ಧನನು ಅಧಿಕಾರಕ್ಕೆ ಬಂದದ್ದು ಕ್ರಿ.ಶ.೧೧೦೭ರಲ್ಲಿ ಮತ್ತು ಅವನು ಕ್ರಿ.ಶ. ೧೧೪೨ರಲ್ಲಿ ಮರಣಹೊಂದಿದ.[12] ಅಂದರೆ ೧೦೯೬ರಲ್ಲಿ ಅವನು ರಾಮಾನುಜರಿಂದ ದೀಕ್ಷೆಯನ್ನು ಪಡೆದಿದ್ದ ಎಂದು ಹೇಳಲು ಶಾಸನಗಳ ಆಧಾರವಿಲ್ಲ. ಅಥವಾ ಅವನ ಇತರ ಶಾಸನಗಳಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಕಂಡು ಬರುವುದಿಲ್ಲ. ಎರೆಯಂಗನ ಕಾಲ ಕ್ರಿ.ಶ. ೧೦೬೩ರಿಂದ ೧೧೦೦. ಅವನ ಮಕ್ಕಳು ಮೂರು ಜನ. ಬಲ್ಲಾಳ, ವಿಷ್ಣುವರ್ಧನ ಮತ್ತು ಉದಯಾದಿತ್ಯ. ಬಹುಶಃ ಎರೆಯಂಗನ ಕಾಲದಲ್ಲಿ ವಿಷ್ಣುವರ್ಧನನು ಯುವರಾಜನಾಗಿದ್ದು, ಆದ್ದರಿಂದಲೇ ಸಾಹಿತ್ಯಕ ಗ್ರಂಥಗಳಲ್ಲಿ ಅವನನ್ನು ರಾಜ ಎಂದು ಕರೆದಿರಬಹುದು. ಅದೂ ಅಲ್ಲದೇ ಅವನ ಅನೇಕ ಶಾಸನಗಳ ಪ್ರಕಾರ ಅವನನ್ನು ಬಿಟ್ಟಿಗ ಎಂದು ಕರೆಯಲಾಗುತ್ತಿತ್ತು. ಈ ಬಿಟ್ಟಿಗ ಅಥವಾ ಬಿಟ್ಟಲ ಎಂಬುದು ಸಂಸ್ಕೃತದ ವಿಷ್ಣು ಎಂಬುದರ ತದ್ಭವರೂಪ. ಆದ್ದರಿಂದ ಈ ವಿಷಯದಲ್ಲಿ ಶಾಸನಗಳಿಗೂ ಮತ್ತು ಗುರುಪರಂಪರೆಯ ಗ್ರಂಥಗಳಿಗೂ ಸಾಮ್ಯತೆ ಕಂಡು ಬರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಅವನು ದೀಕ್ಷೆ ಪಡೆದಾಗ ಚಿಕ್ಕವನಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ರಾಜ್ಯಸೂತ್ರವನ್ನು ಪಡೆದಿರಲಿಲ್ಲ.

ಯದುಗಿರಿಯ ನಾಡು ಎಂಬ ಪುಸ್ತಕದಲ್ಲಿ ಈ ಕೆಳಕಂಡಂತೆ ಆಧಾರಪೂರ್ವಕವಾಗಿ ಹೇಳಲಾಗಿದೆ.[13] “ಕ್ರಿ.ಶ. ೧೧೨೦ರಲ್ಲಿ ವಿಷ್ಣುವರ್ಧನ ಯಾದವಪುರದ ತುವ್ವಳೇಶ್ವರ ದೇವಾಲಯಕ್ಕೆ ದತ್ತಿ ಬಿಟ್ಟಿರುವುದು ಶಾಸನದಿಂದ[14] ತಿಳಿದುಬರುತ್ತದೆ. ವಿಷ್ಣುವರ್ಧನ ಅನೇಕ ಸಲ ಯಾದವಪುರದಲ್ಲಿ ವಾಸ್ತವ್ಯ ಹೂಡಿದ್ದನೆಂದು ಶಾಸನಗಳು ತಿಳಿಸುತ್ತವೆ.[15] ಮುಂದುವರೆದು ಹೇಳುತ್ತಾ ವಿಷ್ಣುವರ್ಧನ ಕ್ರಿ.ಶ. ೧೧೧೪ರಲ್ಲಿ ತಲಕಾಡು ಯುದ್ಧದಲ್ಲಿ ಚೋಳರ ಮೇಲೆ ವಿಜಯಸಾಧಿಸಿದ ನೆನಪಿಗಾಗಿ ಈ ದೇವಾಲಯವನ್ನು ಕಟ್ಟಿಸಿದ.[16] ಇನ್ನೊಂದು ಶಾಸನ ದಿಂದ[17] ರಾಮಾನುಜರು ಈ ಸ್ಥಳಕ್ಕೆ ಭೇಟಿಕೊಟ್ಟಿದ್ದಕ್ಕೆ ನಿದರ್ಶನ ದೊರೆಯುತ್ತದೆ” ಎಂದು ಉಲ್ಲೇಖಿಸಲಾಗಿದೆ.

ಮತ್ತೊಂದು ಕಾರಣದಿಂದ ವಿಷ್ಣುವರ್ಧನನು ಶ್ರೀ ವೈಷ್ಣವಪಂಥಾನುಯಾಯಿಯಾಗಿದ್ದನು ಎಂದು ಊಹಿಸಬಹುದು. ಶ್ರವಣಬೆಳಗೊಳದ ಶಾಸನಗಳ ಪ್ರಕಾರ ಲಕ್ಷ್ಮೀದೇವಿಗೆ ಒಂದು ಗಂಡುಮಗುವಿನ ಜನನವಾಯಿತು, ಎರಡನೆಯ ವರದಿಯು ಅವನ ಸೈನ್ಯವು ಯುದ್ಧದಲ್ಲಿ ಜಯಿಸಿತ್ತು. ಆಗ ಅವನ ಮಗನಿಗೆ ವಿಜಯನಾರಸಿಂಹ ಎಂದೂ, ಅಲ್ಲಿ ಒಂದು ಬಸದಿಯನ್ನು ನಿರ್ಮಿಸಲು ಹೇಳಿ ಅದಕ್ಕೆ ವಿಜಯಬಸದಿ ಎಂದೂ ಸಹ ಕರೆಯಲಾಯಿತು. ಅಂದರೆ ಜೈನಗುರುಗಳ ಬಳಿ ಇದ್ದಾಗಲೂ ಸಹ ತಾನು ಶ್ರೀವೈಷ್ಣವ ಮತಕ್ಕೆ ಅನುಸಾರವಾಗಿಯೇ ತನ್ನ ಮಗನ ನಾಮಕರಣವನ್ನು ಮಾಡುತ್ತಾನೆ.

ಅವನ ಅನೇಕ ಶಾಸನಗಳನ್ನು ನೋಡಿದಾಗ ತಿಳಿದು ಬರುವ ಮತ್ತೊಂದು ಅಂಶವೆಂದರೆ ಶ್ರೀವೈಷ್ಣವ ದೇವಾಲಯಗಳಿಗೆ ತಾನೇ ಸ್ವತಃ ದಾನಗಳನ್ನು ಮಾಡಿದ್ದಾನೆ, ಶೈವ ಹಾಗೂ ಇತರ ಮತಗಳ ದೇವಾಲಯಗಳಿಗೆ ಅವನ ಆಸ್ಥಾನದ ವರಿಷ್ಠರು ದಾನಗಳನ್ನು ನೀಡಿರುವುದು ಅವನ ಶ್ರೀವೈಷ್ಣವನಿಷ್ಠೆಯನ್ನು ತೋರಿಸುತ್ತದೆ. (ಕೆಲವೊಂದು ಅಪವಾದಗಳು ಇರಬಹುದು)

ಈ ಚರ್ಚೆಯನ್ನು ಬದಿಗಿಟ್ಟು ತೊಂಡನೂರಿನಲ್ಲಿ ಆಚರಣೆಯಲ್ಲಿದ್ದ ಶ್ರೀವೈಷ್ಣವ ಪಂಥದ ಬಗೆಗೆ ಹೇಳುವುದಾದರೆ ಇಲ್ಲಿರುವ ಅನೇಕ ಶಾಸನಗಳು ಇಲ್ಲಿದ್ದ ಶ್ರೀವೈಷ್ಣವ ಆಚರಣೆಗಳ ಪಟ್ಟಿಯನ್ನು ನೀಡುತ್ತವೆ. ಮುಖ್ಯವಾದ ನಂಬಿನಾರಾಯಣ, ನರಸಿಂಹ ಮತ್ತು ಕೃಷ್ಣನ ದೇವಾಲಯಗಳು ಪ್ರಾರಂಭದಲ್ಲಿ ರಾಮಾನುಜರು ಪ್ರತಿಪಾದನೆ ಮಾಡಿದ್ದ ಶ್ರೀವೈಷ್ಣವ ಪಂಥದ ಪಾಂಚರಾತ್ರ ಆಗಮಗಳ ಪೂಜಾಪದ್ಧತಿಯನ್ನು ಹೊಂದಿದ್ದವು. ಆದರೆ ಈಗ ನರಸಿಂಹ ಮತ್ತು ಕೃಷ್ಣನ ದೇವಾಲಯಗಳಲ್ಲಿ ವೈಖಾನಸ ಆಗಮ ಪಂಥವು ಕಂಡು ಬರುತ್ತದೆ. ತೊಂಡನೂರಿನಲ್ಲಿ ರಾಮಾನುಜರ ಅನುಯಾಯಿಗಳಾದ ಶ್ರೀವೈಷ್ಣವರು ಅತ್ಯಂತ ಪ್ರಮುಖವಾದ ಸ್ಥಾನವನ್ನು ಹೊಂದಿದ್ದರೆಂಬುದು ಶಾಸನಗಳಿಂದ ವಿಧಿತವಾಗುತ್ತದೆ. ಶಾಸನಗಳಲ್ಲಿ[18] ಇವರುಗಳನ್ನು ಮಹಾಜನಗಳೆಂದು ಕರೆಯಲಾಗಿದ್ದು, ಅವರಿಂದಲೇ ದೇವಾಲಯದ ನಿತ್ಯೋತ್ಸವಗಳು ನಡೆಯುವಂತೆ ಏರ್ಪಾಡಾಗಿತ್ತು.

ದೇವಾಲಯಗಳಲ್ಲಿ ನಿತ್ಯೋತ್ಸವಗಳಾದ ಬ್ರಹ್ಮೋತ್ಸವ, ಮಾಸೋತ್ಸವ ಹಾಗು ರಾಮನವಮಿ ಮತ್ತು ಕೃಷ್ಣಜನ್ಮೋತ್ಸವಗಳು ನಡೆಯುತ್ತಿದ್ದವು. ಅದಲ್ಲದೇ ಹಿಂದೂ ಧರ್ಮದ ಮುಖ್ಯ ಸಂಕ್ರಮಣದಿನಗಳಲ್ಲಿ ವಿಶೇಷಪೂಜೆಯು ನಡೆಯುತ್ತಿತ್ತು. ಇಲ್ಲಿನ ನಂಬಿನಾರಾಯಣ ದೇಗುಲದ ಶಾಸನಗಳು ಈ ಬ್ರಹೋತ್ಸವಗಳ ಬಗೆಗೆ ಉಲ್ಲೇಖಿಸುತ್ತವೆ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಈ ದಿನಗಳನ್ನು ತಿರುನಾಳು ಎಂದು ಕರೆಯಲಾಗಿದ್ದು, ಈ ತಿರುನಾಳನ್ನು (ಮಹೋತ್ಸವ ದಿನ) ಇದೇ ದೇವಾಲಯದ ಕ್ರಿ.ಶ. ೧೨೮೬ರ ಶಾಸನವು ಉಲ್ಲೇಖಿಸುತ್ತದೆ.[19] ಅದೂ ಅಲ್ಲದೇ ಈ ವಿಶೇಷ ದಿನಗಳಲ್ಲಿ ತಮಿಳು ದಿವ್ಯಪ್ರಬಂಧಗಳನ್ನು ಪಾರಾಯಣ ಮಾಡಲಾಗುತ್ತಿತ್ತು. ಅವುಗಳಲ್ಲಿ ಮುಖ್ಯವಾದ ತಿರುವಾಯ್‌ಮೊಳಿ ಪ್ರಬಂಧದ ಪಾರಾಯಣವನ್ನು ಇಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.[20] ಅಂತಹ ತಿರುವಾಯ್ ಮೊಳಿ ಹೇಳುತ್ತಿದ್ದ ಒಬ್ಬ ತಿರುನರೆಯೂರ್ ದಾಸರನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.[21] ನರಸಿಂಹನ ದೇಗುಲದಲ್ಲಿರುವ ಶಾಸನವೊಂದು ಕೃಷ್ಣನ ಜನ್ಮೋತ್ಸವವನ್ನು ಶ್ರೀಜಯನ್ತಿ ಎಂದು ಉಲ್ಲೇಖಿಸುತ್ತದೆ.[22] ಹೀಗೆ ಶ್ರೀಜಯನ್ತಿ, ತಿರುನಾಳು, ತಿರುವಾಯ್ಮೊಳಿ ಮುಂತಾದ ಶಬ್ದಗಳಲ್ಲದೇ ಅನೇಕ ವಿಧವಾದ ಶ್ರೀವೈಷ್ಣವ ಶಬ್ದಗಳ ಪ್ರಯೋಗಗಳು ಈ ಶಾಸನಗಳಲ್ಲಿ ಕಂಡುಬರುತ್ತವೆ.

ಇದರಿಂದ ನಮಗೆ ತಿಳಿದು ಬರುವ ಅಂಶವೆಂದರೆ, ರಾಮಾನುಜರ ಕಾಲದಲ್ಲಿ ಪ್ರಸಿದ್ಧವಾದ ನಾಲ್ಕು ಮುಖ್ಯಕ್ಷೇತ್ರಗಳಿಗೂ ಇಲ್ಲಿಗೂ ಸಂಬಂಧವಿತ್ತೆಂಬುದು. ಇಲ್ಲಿನ ಶಾಸನಗಳಲ್ಲಿ ಶ್ರೀರಂಗಕ್ಷೇತ್ರ, ಕಂಚಿಯ ವರದರಾಜನ, ಮೇಲುಕೋಟೆಯ ತಿರುನಾರಾಯಣನ ಉಲ್ಲೇಖಗಳು ಕಂಡುಬರುತ್ತವೆ. ಆದರೆ ತಿರುಪತಿಯ ಉಲ್ಲೇಖ ಕಂಡುಬರುವುದಿಲ್ಲ.[23] ಅದಲ್ಲದೆ ಶ್ರೀವೈಷ್ಣವರ ಮುಖ್ಯ ಹೆಸರುಗಳಾದ, ದಾಸ, ಕುಲಶೇಖರ, ಆಂಡಾಳ್, ತಿರುವಾರಾಧನ, ಉತ್ತಮನಂಬಿ, ಅಲ್ಲಾಳದೇವ, ತಿರುವರಂಗ ಮುಂತಾದ ಅನೇಕ ಹೆಸರುಗಳು ಸರಳವಾಗಿ ಬಳಕೆ ಯಾಗಿರುವುದರಿಂದ ಇಲ್ಲಿ ಶ್ರೀವೈಷ್ಣವಧರ್ಮದ ನೆಲೆಗಟ್ಟು ಎಷ್ಟು ಗಟ್ಟಿಯಾಗಿತ್ತೆಂಬು ದನ್ನು ಊಹಿಸಬಹುದು.

ಮತ್ತೊಂದು ಮುಖ್ಯವಾದ ವಿಷಯವೆಂದರೆ ಇಲ್ಲಿನ ಶಾಸನವೊಂದು ತೊಂಡನೂರಿನಲ್ಲಿದ್ದ ರಾಮಾನುಜ ಮಠದ ಉಲ್ಲೇಖವನ್ನು ನೀಡುತ್ತದೆ.[24] ಇದರ ಕಾಲವು ನಿಖರವಾಗಿ ನೀಡಿಲ್ಲದಿದ್ದರೂ, ಇದು ರಾಮಾನುಜರು ವಾಸಿಸುತ್ತಿದ್ದ ಮಠವಾಗಿರಬಹುದು. ಮಠವೆಂದರೆ ವಾಸ್ತವ್ಯವಿದ್ದ ಜಾಗಗಳಾಗಿದ್ದು, ರಾಮಾನುಜಕೂಟ ಎಂದು ಕಂಡು ಬರುವ ವಿಜಯನಗರ ಕಾಲದ ಹಂಪಿಯ ಶಾಸನಗಳಲ್ಲಿ, ಅದು ಭಕ್ತರು ಸೇರುತ್ತಿದ್ದ ಜಾಗವೆಂದು ಹೇಳಲಾಗಿದೆ.[25]

ನಂತರದ ತಾಮ್ರಪಟಗಳ ಶಾಸನದ ಆಧಾರದಿಂದ ಹೇಳಬಹುದಾದ ವಿಷಯವೆಂದರೆ ಕ್ರಿ.ಶ. ೧೨ನೆಯ ಶತಮಾನದಿಂದ ಆರಂಭವಾದ ಶ್ರೀವೈಷ್ಣವ ಧರ್ಮವು ಸುಮಾರು ೧೮ನೆಯ ಶತಮಾನದ ವರೆಗೆ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿಯೇ ಮುಂದುವರೆಯಿತು. ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಂದಲೂ ಭಕ್ತರ ಸಂಪರ್ಕಗಳು ಈ ಊರಿಗೆ ಉಂಟಾಯಿತು. ಆದರೆ ಕಾಲನ ದವಡೆಗೆ ಸಿಕ್ಕಿ ಇಂದು ಅನೇಕ ಕಾರಣಗಳಿಂದ ಇಲ್ಲಿ ಶ್ರೀವೈಷ್ಣವ ಧರ್ಮದ ಮೇಲೆ ಹೇಳಿದ ವೈಭವಗಳು ಮರೆಯಾಗಿ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಕೆಲವೊಂದು ಪದ್ಧತಿಗಳು ನಡೆಯುತ್ತಾ ಬಂದಿವೆ. ಇಂದು ಕೇವಲ ಅರ್ಚಕರು ಮಾತ್ರ ಈ ಧರ್ಮಕ್ಕೆ ಸೇರಿದವರಾಗಿದ್ದಾರೆ.

ವೈಖಾನಸಾಗಮ: ನಾವಾಗಲೇ ಹೇಳಿದಂತೆ ಇಲ್ಲಿನ ಶಾಸನಗಳ ಆಧಾರದಿಂದ ಹೇಳುವುದಾದರೆ ಪಾಂಚರಾತ್ರಾಗಮವೇ ಮೂರೂ ದೇವಾಲಯಗಳಲ್ಲಿ ಬಳಕೆಯಲ್ಲಿತ್ತಾದರೂ, ಇಂದು ವೀತ್ತಿರುನ್ದ ಪೆರುಮಾಳ್ ಅಂದರೆ ಕೃಷ್ಣ ಮತ್ತು ನರಸಿಂಹನ ದೇಗುಲಗಳಲ್ಲಿ ವೈಖಾನಸಾಗಮ ಚಾಲ್ತಿಯಲ್ಲಿದೆ. ಆದರೆ ಇದು ಎಂದಿನಿಂದ ಜಾರಿಗೆ ಬಂದಿತೆಂಬುದು ನಮಗೆ ತಿಳಿದುಬರುವುದಿಲ್ಲ. ಆದರೆ ಈ ಮೂರು ದೇವಾಲಯಗಳಲ್ಲಿ ಶ್ರೀವೈಷ್ಣವ ಧರ್ಮಕ್ಕೆ ಸಂಬಂಧಪಟ್ಟ ಹನ್ನೆರಡು ಜನ ಆಳ್ವಾರರು, ರಾಮಾನುಜರು, ಮಣವಾಳ ಮಹಾಮುನಿಗಳು, ದೇಶಿಕರು ಮತ್ತು ತೊಂಡನೂರು ನಂಬಿಗಳ ವಿಗ್ರಹಗಳು ಕಂಡು ಬರುತ್ತವೆ.[26]

ಹೀಗೆ ಶ್ರೀವೈಷ್ಣವ ಧರ್ಮವು ಕೇವಲ ತೊಂಡನೂರಿನಲ್ಲಿ ಮಾತ್ರವಲ್ಲದೇ ಪೂರ್ಣಭಾರತ ದೇಶದಲ್ಲಿ ವ್ಯಾಪಿಸಿದ್ದು, ಅದು ತೊಂಡನೂರಿನ ನೆಲೆಗಟ್ಟಿನ ಮೇಲೆ ಎಂದರೆ ತಪ್ಪಾಗಲಾರದು.

ಸ್ಮಾರ್ತರು ಮತ್ತು ಮಾಧ್ವರು

ಅದ್ವೈತ ವೇದಾಂತದ ಆಚಾರ್ಯರಾದ ಶಂಕರಭಗವತ್ಪಾದರನ್ನು ಅನುಸರಿಸುವವರಿಗೆ ಸ್ಮಾರ್ತರೆಂದು ಕರೆಯಲಾಗಿದ್ದು, ಅವರು ಪಂಚಾಯತನ ಪೂಜೆಗಳನ್ನು ಮಾಡುವವರಾಗಿದ್ದಾರೆ. ಅದೇ  ರೀತಿ ಮಧ್ವಾಚಾರ್ಯರು ಪ್ರಚಾರಗೊಳಿಸಿದ ದ್ವೈತದರ್ಶನವನ್ನು ಅನುಸರಿಸುವವರನ್ನು ಮಾಧ್ವರೆಂದು ಕರೆಯಲಾಗಿದೆ. ಇಲ್ಲಿನ ಐತಿಹ್ಯಗಳ ಪ್ರಕಾರ ಮಧ್ವಾಚಾರ್ಯರು ನಿಕುಂಭಿನಿ ದೇವಿಯ ಪ್ರತಿಷ್ಠೆಯನ್ನು ನೆರವೇರಿಸಿದರು. ಆದರೆ ಈ ವಿಷಯವನ್ನು ಪುಷ್ಟಿಗೊಳಿಸುವ ಯಾವ ಅಂಶವೂ ಸಹ ಕಂಡುಬರುವುದಿಲ್ಲ.[27] ಮೈಸೂರಿನ ಅರಸರ ತಾಮ್ರಶಾಸನದ[28] ಪ್ರಕಾರ ತೊಂಡನೂರಿನಲ್ಲಿ ಈ ಎರಡೂ ಪಂಥದ ಬ್ರಾಹ್ಮಣರು ವಾಸಿಸುತ್ತಿದ್ದು, ಅವರಿಗೆ ವೃತ್ತಿಗಳನ್ನು ನೀಡಲಾಗಿತ್ತು. ಆದರೆ ಇಂದು ಕೇವಲ ಒಂದೇ ಒಂದು ಸ್ಮಾರ್ತರ ಮನೆ ಮಾತ್ರ ಕಂಡುಬರುತ್ತದೆ.

ಜೈನಧರ್ಮ

ರಾಮಾನುಜರ ಜೀವನ ಚರಿತ್ರೆಗಳ ಪ್ರಕಾರ ಇಲ್ಲಿ ಸಾವಿರಾರು ಮಂದಿ ಜೈನರಿದ್ದು, ರಾಮಾನುಜರು ಅವರನ್ನು ವಾದದಲ್ಲಿ ಸೋಲಿಸಿದರು. ಆದರೆ ಯಾವುದೇ ಶಾಸನಗಳು, ಇಲ್ಲಿ ಜೈನಧರ್ಮವಿದ್ದ ವಿಚಾರವನ್ನು ತಿಳಿಸುವುದಿಲ್ಲ. ಅಲ್ಲದೆ, ಇಲ್ಲಿ ಜೈನಧರ್ಮಕ್ಕೆ ಸಂಬಂಧಪಟ್ಟ ಯಾವುದೇ ಬಸದಿಗಳಾಗಲಿ, ಶಿಲ್ಪಗಳಾಗಲಿ, ತ್ರುಟಿತ ಶಾಸನಗಳಾಗಲಿ ಕಂಡು ಬರುವುದಿಲ್ಲ. ಆದರೆ ನಂಬಿನಾರಾಯಣನ ದೇವಾಲಯದಲ್ಲಿ ಸಿಂಹ ಲಾಂಛನವಿರುವ ಪಾಣಿಪೀಠವೊಂದಿದೆ. ಬಹುಶಃ ಇದು ಜೈನ ಬಸದಿಯೊಂದಕ್ಕೆ ಸೇರಿದ್ದಿರಬಹುದು. ಈ ಕುರಿತು ಹೆಚ್ಚಿನ ಶೋಧನೆ ನಡೆಯಬೇಕಿದೆ. ಇಂದು ಒಬ್ಬ ಜೈನಧರ್ಮೀಯರೂ ಸಹ ಇಲ್ಲಿ ವಾಸವಾಗಿಲ್ಲ.

ಇಸ್ಲಾಂ ಮತ ಹಾಗೂ ಅದರ ಪಂಥಗಳು

ತೊಂಡನೂರಿನಲ್ಲಿ ಇಸ್ಲಾಂ ಮತದ ಪ್ರವೇಶ ಸುಮಾರು ೧೪ನೆಯ ಶತಮಾನದ ಮಧ್ಯಭಾಗದಲ್ಲಿ. ಇಸ್ಲಾಂ ಧರ್ಮದಲ್ಲಿ ಷಿಯಾ ಮತ್ತು ಸುನ್ನಿ ಎಂಬ ಎರಡು ಪಂಗಡಗಳಿವೆ. ಷಿಯಾ ಪಂಥದ ಪ್ರಕಾರ ಪ್ರವಾದಿಗಳಾದ ಮಹಮದ್ ಅವರ ವಂಶದವರೆ, ಅಂದರೆ ಅವರು ಸೂಚಿಸಿದವರೆ ನಾಯಕರಾಗಬೇಕು. ಶಿಯಾ‑ತ್‑ಆಲಿ ಅವರ ನಾಯಕರು. ಸುನ್ನಿಧರ್ಮದ ಪ್ರಕಾರ ಸುನ್ನಿ ಎಂದರೆ ಅರೆಬಿಕ್ ಪ್ರವಾದಿಗಳ ಸಂಸ್ಕೃತಿಯನ್ನು ಪಾಲಿಸುವವರು ಎಂದರ್ಥ. ಪ್ರವಾದಿ ಮಹಮದರ ಸಂಸ್ಕೃತಿಗಳನ್ನು ಅನುಸರಿಸುವವರನ್ನು ಸುನ್ನಿ ಎಂದು ಕರೆಯಲಾಗಿದ್ದು. ಪ್ರವಾದಿ ಮಹಮದರ ನಂತರ ಇವರ ಪಂಗಡದ ಮೊದಲ ನಾಯಕರು ಅಬುಬಕರ್. ಈ ಧರ್ಮದಲ್ಲಿ ಪ್ರಪಂಚದಾದ್ಯಂತ ಕೇವಲ ಹದಿನೈದು ಶತಾಂಶ ಷಿಯಾ ಮುಸ್ಲಿಮರಿದ್ದು, ಇನ್ನುಳಿದ ಸುಮಾರು ಎಂಭತ್ತೈದು ಶತಾಂಶ ಜನರು ಸುನ್ನಿ ಪಂಥಕ್ಕೆ ಸೇರಿದವರಾಗಿದ್ದಾರೆ.

ತೊಂಡನೂರಿನಲ್ಲಿರುವ ದರ್ಗವು ಸುನ್ನಿ ಪಂಥಕ್ಕೆ ಸೇರಿದ್ದಾಗಿದೆ. ಇಲ್ಲಿ ಧರ್ಮಪ್ರವಾದಿ ಯಾದ ಸೈಯದ್ ಸಾಲಾರ್ ಮಸೂದ್ ಘಾಜಿ ಅವರು ತಮ್ಮ ಪತ್ನಿಯಾದ ಬೀಬಿ ಫಾತಿಮಾ ಹಾಗೂ ತಮ್ಮ ಅನುಯಾಯಿಗಳೊಡನೆ ಇಲ್ಲಿಗೆ ಬಂದು ಪ್ರಶಾಂತ ವಾತಾವರಣವನ್ನು ನೋಡಿ ಇಲ್ಲಿಯೇ ಪ್ರಾರ್ಥನೆಗಳನ್ನು ಸಲ್ಲಿಸುತ್ತಾ ಇದ್ದು ಬಿಟ್ಟರು.[29] ಇಲ್ಲಿ ಇದರ ಕಾಲವನ್ನು ಹಿಜ್ರ ಶಕೆಯ ೭೬೦, ಅಂದರೆ ಕ್ರಿ.ಶ. ೧೩೫೮ ಎಂದು ಬರೆಯಲಾಗಿದೆ. ನಂತರ ಅವರು ಜೀವಂತವಾಗಿ ಸಮಾಧಿಯಾದರು.

ಆದರೆ ಮತ್ತೊಂದು ಐತಿಹ್ಯದ ಪ್ರಕಾರ ದೋರಸಮುದ್ರವನ್ನು ನಾಶಮಾಡಿದ ನಂತರ ಮುಸಲ್ಮಾನ ದಾಳಿಕೋರರು ತೊಣ್ಣೂರಿಗೂ ಬರುತ್ತಾರೆ. ಆ ಸೈನ್ಯದ ದಳಪತಿಯೇ ಈ ಸಾಲಾರ್ ಮಸೂದ್ ಎಂದೂ, ಆ ಸಾಲಾರ್‌ನ ಸಮಾಧಿಯೇ ಈಗ ದರ್ಗವಾಗಿದೆ ಎಂದೂ ಸಹ ಹೇಳುತ್ತಾರೆ.[30]

ಮುಂದೆ ಇದು ಮುಸ್ಲಿಮರ ಒಂದು ಪವಿತ್ರಸ್ಥಳವಾಯಿತು. ದರ್ಗದ ಒಳಭಾಗದಲ್ಲಿ ಸಮಾಧಿಯಿದ್ದು, ಅದು ಸೈಯದ್ ಸಾಲಾರ್ ಮಸೂದ್ ಘಾಜಿ ಮತ್ತು ಅವರ ಪತ್ನಿಯಾದ ಬೀಬಿ ಫಾತಿಮಾ ಅವರದಾಗಿದೆ. ಹೊರಭಾಗದಲ್ಲಿ ಕೆಲವು ಸಮಾಧಿಗಳಿದ್ದು, ಅದು ಅವರ ಅನುಯಾಯಿಗಳದೆಂದು ಹೇಳಲಾಗಿದೆಯಾದರೂ, ಕೆಲವರು ಅದನ್ನು ಟಿಪ್ಪೂ ಸುಲ್ತಾನ್ ಅವರ ಸಂಬಂಧಿಕರದೆಂದು ಹೇಳುತ್ತಾರೆ. ಭಾರತದ ಎಲ್ಲಾ ಕಡೆಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಿದ್ದು, ಪ್ರತಿವರ್ಷವೂ ದೊಡ್ಡ ಪ್ರಮಾಣದಲ್ಲಿ ಉರುಸ್ ನಡೆಯುತ್ತದೆ.

ಆದರೆ ಈ ವಿಷಯಗಳನ್ನು ನಿಖರವಾದ ಕಾಲಮಾನಗಳೊಡನೆ ಹೇಳಲು ಯಾವುದೇ ಆಧಾರಗಳು ಕಂಡುಬರುವುದಿಲ್ಲ. ಆದರೂ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ತೊಣ್ಣೂರಿನಲ್ಲಿ ಮಸೀದಿಯೊಂದು ಪ್ರವರ್ಧಮಾನದಲ್ಲಿತ್ತು ಎಂದು ಶಾಸನವೊಂದರಿಂದ ತಿಳಿಯುತ್ತದೆ.[31]

ತೊಂಡನೂರಿನಲ್ಲಿ ಈಗ ನೆಲೆಸಿರುವ ವಿವಿಧ ಪಂಥ ಹಾಗೂ ಜನಾಂಗಗಳ ಸಂಖ್ಯಾ ವಿವರಗಳು ಹೀಗಿವೆ.[32]

ಹಿಂದೂಗಳು

೧. ವಿಶ್ವಕರ್ಮ ೧೫ ಕುಟುಂಬ
೨. ಮಡಿವಾಳಸೆಟ್ಟರು ೦೬ ಕುಟುಂಬ
೩. ವೈಷ್ಣವರು (ಶಾತಾದ) ೧೦ ಕುಟುಂಬ
೪. ಶ್ರೀವೈಷ್ಣವರು ೦೨ ಕುಟುಂಬ
೫. ಬ್ರಾಹ್ಮಣರು ೦೧ ಕುಟುಂಬ
೬. ಬಣಜಿಗ ಶೆಟ್ಟರು (ವೈಷ್ಣವ) ೦೫ ಕುಟುಂಬ
೭. ಪರಿಶಿಷ್ಟ ಜಾತಿಯವರು ೧೨ ಕುಟುಂಬ
೮. ಒಕ್ಕಲಿಗರು ೩೦೦ ಕುಟುಂಬ
೯. ಗಾಣಿಗರು ೦೨ ಕುಟುಂಬ
೧೦. ಕುಂಬಾರರು ೨೫ ಕುಟುಂಬ
೧೧. ಕ್ಷೌರಿಕರು ೦೮ ಕುಟುಂಬ

ಮುಸಲ್ಮಾನರು

ಸುಮಾರು ೧೦ ಕುಟುಂಬದವರಿದ್ದು, ಎಲ್ಲರೂ ಸುನ್ನಿಪಂಥಕ್ಕೆ ಸೇರಿದವರಾಗಿದ್ದಾರೆ.


[1] ಯಾಮುನಾಚಾರ್ಯರ ಆಗಮ ಪ್ರಾಮಾಣ್ಯ‑೮೩ನೇ ವಾದ ಹಾಗೂ ರಾಮಾನುಜರ ಶ್ರೀ ಭಾಷ್ಯ

[2] ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಇವರು ಪ್ರಕಟಪಡಿಸಿರುವ ಡಾ.ವಸುಂಧರಾ ಫಿಲಿಯೋಜಾ ಅವರ ಕರ್ನಾಟಕದಲ್ಲಿ ಲಾಕುಳಶೈವ ಜಕ್ಕಣಾಚಾರ್ಯರು ಎಂಬ ಪುಸ್ತಕವನ್ನು ನೋಡಬಹುದು.

[3] EC Vol. 6, Pandavapura, No. 105

[4] Ibid, No 107

[5] Ibid, No. 110

[6] Ibid, No. 74

[7] ದೇವರ ಕೊಂಡಾರೆಡ್ಡಿಯವರು ವಿಭಿನ್ನವಾದ ಅರ್ಥವಿವರಣೆಯನ್ನು ಇದೇ ಸಂಪುಟದಲ್ಲಿ ತಮ್ಮ ಲೇಖನದಲ್ಲಿ ನೀಡಿದ್ದಾರೆ.

[8] ಪ್ರಪನ್ನಾಮೃತ, ೨೪ನೇ ಆಶ್ವಾಸ

[9] Ibid

[10] Karnataka through the ages, Ed, Dr.R.R.Divakar, Published by Government of Mysore, 1968, page no. 420

[11] ಅದೇ, ಪುಟ ಸಂಖ್ಯೆ ೪೨೧

[12] ಕರ್ನಾಟಕ ಇತಿಹಾಸ ಕುರಿತಾದ ಬಹಳ ಪುಸ್ತಕಗಳಲ್ಲಿ ಈ ಕಾಲ ಕಂಡುಬರುತ್ತದೆ.

[13] ನಾಗರಾಜು ಎಚ್.ಎಂ., ಯದುಗಿರಿಯನಾಡು, ಪುಟ ೪೫

[14] E.C.III, Sr. 43

[15] E.C. III, M.A.R. 1932, p. 189; M.A.R. 1944, p.57

[16] M.A.R. 1912, p.11 and 1932, p.3

[17] E.C. XIV Sr. 235

[18] EC Vol. 6, Pandavapura, Tonnur, No.67, 72,

[19] EC Vol. 6, Pandavapura, Tonnur, No. 68

[20] Ibid, 68, 70

[21] Ibid, 67, 70

[22] Ibid, No. 119

[23] ತೊಣ್ಣೂರಿನ ಹತ್ತಿರ ತಿರುಮಲಸಾಗರ ಛತ್ರವೆಂಬ ಊರಿದ್ದು (ಹಿಂದೆ ತೊಣ್ಣೂರಿನ  ವ್ಯಾಪ್ತಿಗೆ ಸೇರಿತ್ತು), ಅಲ್ಲಿ ವೆಂಕಟರಮಣಸ್ವಾಮಿ ದೇವಾಲಯವಿತ್ತು. ಆ ದೇವಾಲಯ ಮತ್ತು ದೇವರನ್ನು ಮೈಸೂರಿನ ಒಂಟಿಕೊಪ್ಪಲಿಗೆ ಸ್ಥಳಾಂತರಿಸಲಾಯಿತು. ಅಲ್ಲದೆ ತೊಣ್ಣೂರಿನ ಕೆರೆಗೆ ತಿರುಮಲಸಾಗರ ಎಂಬ ಹೆಸರು ಸಹ ಇದೆ. ಈ ಹಿನ್ನೆಲೆಯಲ್ಲಿ ತೊಣ್ಣೂರು ತಿರುಪತಿ ಮೊದಲಾದ ಶ್ರೀವೈಷ್ಣವ ಕ್ಷೇತ್ರಗಳೊಂದಿಗೆ ಗಾಢವಾದ ಧಾರ್ಮಿಕ ಸಂಬಂಧ ಹೊಂದಿತ್ತೆನ್ನಬಹುದು.

[24] E.C. Vol 6, No. 55

[25] ಹೆಚ್ಚಿನ ವಿವರಗಳಿಗಾಗಿ ಹಂಪಿಯ ವಿಠಲ ದೇವಾಲಯದ ಶಾಸನಗಳನ್ನು ನೋಡಬಹುದು.

[26] ಈ ವಿಗ್ರಹಗಳ ಬಗೆಗೆ ಪ್ರತ್ಯೇಕವಾದ ಲೇಖನವೊಂದು ಇದೇ ಸಂಪುಟದಲ್ಲಿದೆ.

[27] ನಾಗರಾಜು ಎಚ್.ಎಂ. ಅವರ ಯದುಗಿರಿಯ ನಾಡು ಎಂಬ ಪುಸ್ತಕದಲ್ಲಿ ಈ ಐತಿಹ್ಯವನ್ನು ಉಲ್ಲೇಖಿಸಿದ್ದಾರೆ.

[28] EC Vol. 6, Pandavapura, Tonnur, No.99

[29] ಕ್ಷೇತ್ರಕಾರ್ಯ ಮಾಡಿದಾಗ ದರ್ಗದಲ್ಲಿದ್ದ ಮೇಲ್ವಿಚಾರಕರು ಹೇಳಿದ್ದು, ಆಧಾರಗಳು ಕಂಡು ಬರುವುದಿಲ್ಲ.

[30] ಈ ವಿಷಯವನ್ನು ಯದುಗಿರಿಯನಾಡು ಪುಸ್ತಕದಲ್ಲಿಯೂ ಉಲ್ಲೇಖಿಸಲಾಗಿದೆ.

[31] E.C.IV, Kr. 18 and 20

[32] ಈ ಊರಿನ ಯಜಮಾನರಾದ ಚನ್ನೇಗೌಡರು ಈ ಅಂಕಿ ಅಂಶಗಳನ್ನು ನೀಡಿದ್ದಾರೆ.