ಜನಪದ ಸಾಹಿತ್ಯ ನಿಂತ ನೀರಲ್ಲ. ಅದನ್ನು ಒಂದು ಊರಿಗೆ, ಒಂದು ತಾಲ್ಲೂಕಿಗೆ ಅಥವಾ ಒಂದು ಜಿಲ್ಲೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಪ್ರಸಾರ ಮತ್ತು ಪ್ರಚಾರ ಜನಪದ ಸಾಹಿತ್ಯದ ಮುಖ್ಯಗುಣಗಳಾಗಿರುತ್ತವೆ. ಮೌಖಿಕ ಪ್ರಸಾರದಿಂದ ಈ ಸಾಹಿತ್ಯ ವ್ಯಕ್ತಿಯಿಂದ ವ್ಯಕ್ತಿಗೆ, ಸಮುದಾಯದಿಂದ ಸಮುದಾಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಿರುತ್ತದೆ. ಆದರೂ ‘ಊರು’ ಎಂಬುದು ಜನಪದ ಸಾಹಿತ್ಯದ ಅಧ್ಯಯನದಲ್ಲಿ ಒಂದು ಮುಖ್ಯ ಘಟಕವಾಗಬಹುದೆಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಅದೇ ರೀತಿ ಜನಪದ ಸಾಹಿತ್ಯದ ವಿಷಯದಲ್ಲಿ ಒಬ್ಬರೇ ಹೇಳುವ ಸಾಹಿತ್ಯವೂ ಗಂಭೀರವಾಗಿ ಪರಿಶೀಲಿಸಲು ಯೋಗ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ‘ತೊಣ್ಣೂರಿನ ಜನಪದ ಸಾಹಿತ್ಯ’ ಎಂಬುದು ಅರ್ಥಪೂರ್ಣ ಶೀರ್ಷಿಕೆಯಾಗುತ್ತದೆ.

ಕರ್ನಾಟಕದ ಯಾವುದೇ ಹಳ್ಳಿಯಂತೆ ತೊಣ್ಣೂರು ಕೂಡ ಜನಪದ ಸಾಹಿತ್ಯ ನಿಧಿಯಿಂದ ಕೂಡಿದ ಅಮೂಲ್ಯ ಆಕರವೆಂದೇ ಹೇಳಬೇಕು. ಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಜಾನಪದದ ಸಂಗ್ರಹಣೆ ಮಾಡುವ ಮೂಲಕ ವಿದ್ವಾಂಸರ ಗಮನ ಸೆಳೆದವರಲ್ಲಿ ಮೊದಲನೆಯವರು ಅರ್ಚಕ ಬಿ. ರಂಗಸ್ವಾಮಿ. ಇವರ ‘ಹುಟ್ಟಿದ ಹಳ್ಳಿ’ ಜಾನಪದ ಸಂಗ್ರಹಣೆಯಲ್ಲಿ ಹೊಸ ಹಾದಿಯನ್ನು ತೋರಿದೆ. ಅನಂತರ ಕಾಲದಲ್ಲಿ ಈ ತರಹದ ಕೆಲವು ಅಧ್ಯಯನಗಳು ನಡೆದು ಜನಪದ ಸಾಹಿತ್ಯದ ಸಮೃದ್ದಿಗೆ ಸಾಕ್ಷಿಯಾಗಿವೆ. ‘ಚೆನ್ನಾದೇವಿ ಅಗ್ರಹಾರ ಒಂದು ಅಧ್ಯಯನ’ (ಡಾ.ಗೋವಿಂದರಾಜು) ಮುಂತಾದ ಪಿಎಚ್.ಡಿ. ಪ್ರಬಂಧಗಳು ಒಂದು ಊರಿನ ಜಾನಪದೀಯ ಅಧ್ಯಯನದ ವಿಸ್ತಾರದ ಅರಿವನ್ನು ಮೂಡಿಸುತ್ತವೆ.

ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ತ್ವವಿರುವಂಥ ಪ್ರದೇಶಗಳಲ್ಲಿ ತೊಣ್ಣೂರು ಕೂಡ ಒಂದು. ತೊಂಡನೂರು ಅಥವಾ ತೊಣ್ಣೂರು ಮಂಡ್ಯಜಿಲ್ಲೆಯ ಪಾಂಡವಪುರದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಗ್ರಾಮ. ಈಗ ಇದು ಸಾಧಾರಣ ಗ್ರಾಮದಂತೆ ಕಂಡರೂ ಒಂದು ಕಾಲದಲ್ಲಿ ಹೊಯ್ಸಳರ ಉಪರಾಜಧಾನಿ ಯಾಗಿದ್ದುದಲ್ಲದೆ ಕರ್ನಾಟಕದ ಶ್ರೀವೈಷ್ಣವ ಧರ್ಮದ ಇತಿಹಾಸದಲ್ಲಿ ಹೆಸರಿಸಬೇಕಾದ ಕ್ಷೇತ್ರವಾಗಿದೆ. ರಾಮಾನುಜಾಚಾರ್ಯರು ತಮಿಳುನಾಡಿನಲ್ಲಿ ಚೋಳರ ಕಿರುಕುಳ ತಾಳಲಾಗದೆ ಕರ್ನಾಟಕಕ್ಕೆ ಆಗಮಿಸಿದರು. ಅವರು ಮೊದಲು ರಾಮನಾಥಪುರಕ್ಕೆ ಬಂದು ಅನಂತರ ಸಾಲಿಗ್ರಾಮಕ್ಕೆ ಬಂದರು. ಅಲ್ಲಿ. ಜೈನರನ್ನು ಶ್ರೀವೈಷ್ಣವರನ್ನಾಗಿ ಪರಿವರ್ತಿಸಿದರು. ಸಾಲಿಗ್ರಾಮದಿಂದ ತೊಂಡನೂರಿಗೆ ಬಂದ ರಾಮಾನುಜಾಚಾರ್ಯರು ವೈಷ್ಣವಧರ್ಮ ಪ್ರಚಾರವನ್ನು ಮುಂದುವರಿಸಿದರು. ಆಗ ತೊಂಡನೂರಿನಲ್ಲಿ ಭಟ್ಟಿ ವಿಠ್ಠಲದೇವರಾಯನೆಂಬ ಜೈನರಾಜ ಆಳುತ್ತಿದ್ದ. ಆಚಾರ್ಯರು ಅವನನ್ನು ಶಿಷ್ಯನನ್ನಾಗಿ ಮಾಡಿಕೊಂಡು ಅವನಿಗೆ ವಿಷ್ಣುವರ್ಧನನೆಂಬ ಹೆಸರನ್ನು ಕೊಟ್ಟರು. ಇಂದಿಗೂ ಹಳೆಯ ಅರಮನೆಯ ತಳಪಾಯದ ಅವಶೇಷಗಳನ್ನು ತೊಣ್ಣೂರಿನಲ್ಲಿ ನೋಡಬಹುದು. ಕ್ರಿ.ಶ. ೧೧೭೩ರ ಶಾಸನವೊಂದರ ಪ್ರಕಾರ ಈ ಊರಿಗೆ ತೊಂಡನೂರು ಎಂಬ ಹೆಸರಲ್ಲದೆ, ಯಾದವ ಚತುರ್ವೇದಿ ಮಂಗಲ, ಪದ್ಮಗಿರಿ ಎಂಬ ಹೆಸರುಗಳೂ ಇದ್ದಂತೆ ತಿಳಿಯುತ್ತದೆ. ಹೊಯ್ಸಳರ ಪ್ರಧಾನ ರಾಜಧಾನಿ ಯಾಗಿದ್ದ ದೋರಸಮುದ್ರ ಕ್ರಿ.ಶ.೧೩೨೬ರಲ್ಲಿ ಶತ್ರುಗಳ ವಶವಾದಾಗ ಹೊಯ್ಸಳ ದೊರೆಗಳಿಗೆ ತೊಣ್ಣೂರು ಆಶ್ರಯ ನೀಡಿತು.

ತೊಣ್ಣೂರು ಎಂಬ ಹೆಸರು ತೊಂಡನೂರಿನ ಇನ್ನೊಂದು ರೂಪ. ‘ತೊಂಡ’ ಎಂದರೆ ಭಕ್ತ. ವಿಷ್ಣುಭಕ್ತರಿಂದ ತುಂಬಿದ ಊರು ಎಂಬರ್ಥದಲ್ಲಿ ಈ ಹೆಸರು ಬಂದಿದೆ. ಈ ಊರಿನ ಇತಿಹಾಸಕ್ಕೆ ಸಂಬಂಧಿಸಿದ ಉಳಿಕೆಗಳಲ್ಲದೆ ಐತಿಹ್ಯ ಮತ್ತು ಪುರಾಣಗಳಿಗೆ ಆಧಾರವಾದ ಅನೇಕ ಪ್ರದೇಶಗಳು ತೊಣ್ಣೂರಿನಲ್ಲಿವೆ. ಈ ಊರಿಗೆ ಕೆರೆ ತೊಣ್ಣೂರು ಎಂದು ಹೆಸರಾಗಿದೆ. ರಾಮಾನುಜರು ಈ ಊರಿನ ಜನರಿಗಾಗಿ ಈ ಕೆರೆಯನ್ನು ನಿರ್ಮಿಸಿದರೆಂದು ಪ್ರತೀತಿ. ಇಲ್ಲಿಯ ಬೆಟ್ಟದ ಮೇಲಿನ ದೇವಸ್ಥಾನದಿಂದ ಕೆರೆಯ ದಂಡೆಗೆ ಇಳಿದರೆ ಒಂದು ಗುಹೆ ಕಾಣಿಸುತ್ತದೆ. ಇದಕ್ಕೆ ‘ರಾಕ್ಷಸಿ ಗುಹೆ’ ಎನ್ನುತ್ತಾರೆ. ಈ ಗುಹೆಯಲ್ಲೇ ಉದ್ದಂಡಿ ಎಂಬ ರಾಕ್ಷಸಿ ಇದ್ದಳೆಂದು ಹೇಳುತ್ತಾರೆ. ಇವಳ ಮಗಳಾದ ಪುಂಡರೀಕಾಕ್ಷಿ ಎಂಬ ಸುಂದರಿಯನ್ನು ಕರಿಬಂಟ ಮೋಹಿಸಿದನೆಂದು ಜನಪದ ಸಾಹಿತ್ಯದಲ್ಲಿ ವರ್ಣಿತವಾದುದರಿಂದ ಸಹಜವಾಗಿಯೇ ಆ ಸ್ಥಳದ ಬಗ್ಗೆ ಪುರಾಣ, ಐತಿಹ್ಯ, ಜನಪದ ಗೀತೆಗಳು, ಕಥನ ಗೀತೆಗಳು, ಯಕ್ಷಗಾನಗಳು ಮುಂತಾದ ಸಾಹಿತ್ಯ ಮೂಡಿಬಂದಿದೆ. ಇದರಲ್ಲಿ ಊರಿನ ಜನಜೀವನ, ಸಂಸ್ಕೃತಿ, ನಂಬಿಕೆಗಳು ಮತ್ತು ಸಂಪ್ರದಾಯಗಳು ಸೇರಿಕೊಂಡಿವೆ.

ರಾಮಾನುಜಾಚಾರ್ಯರು ತೊಂಡನೂರಿಗೆ ಆಗಮಿಸಿದ್ದು, ತೊಂಡನೂರಿನ ಸ್ಥಳೀಯ ವಿಚಾರಗಳು, ಕರಿಬಂಟನ ಬಗೆಗಿನ ವಿಷಯಗಳು ಜಾನಪದಕ್ಕೆ ಸೇರಿದ ಅನೇಕ ಐತಿಹ್ಯಗಳಲ್ಲಿ ಮತ್ತು ಪುರಾಣಗಳಲ್ಲಿ ಸೇರಿಕೊಂಡಿವೆ. ಜನಜನಿತವಾದ ಕೈಫಿಯತ್ತುಗಳಲ್ಲಿ ಈ ವಿಷಯಗಳು ಪ್ರಸ್ತಾವಗೊಂಡಿವೆ. ‘ತೊಣ್ಣೂರು ರಾಕ್ಷಸಿ ಕೈಫಿಯತ್ತು’ (ಕರ್ನಾಟಕದ ಕೈಫಿಯತ್ತುಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೪ ಪು. ೬೫) ಹೆಚ್ಚು ಪೌರಾಣಿಕ ಅಂಶಗಳಿಂದ ಕೂಡಿದೆ. ಕರಿಬಂಟನಿಗೆ ಪರಮೇಶ್ವರನು ಜೀವಕೊಡುವುದರಿಂದ ಮುಕ್ತಾಯವಾಗುವ ಈ ಕೈಫಿಯತ್ತಿನ ವಿಷಯಗಳು ಬೇರೆ ಬೇರೆ ಪ್ರಕಾರಗಳಲ್ಲಿ ವಿವಿಧ ರೂಪಗಳನ್ನು ಪಡೆದಿವೆ. ಈ ಎಲ್ಲ ರೂಪಾಂತರಗಳಲ್ಲಿ ಪ್ರಧಾನ ಪಾತ್ರಗಳೆಂದರೆ ಕರಿಬಂಟ, ಉದ್ದಂಡಿ, ಪುಂಡರೀಕಾಕ್ಷಿ. ಅಷ್ಟಗ್ರಾಮಗಳ ಕೈಫಿಯತ್ತಿನಲ್ಲಿ ಮತಾಧಾರಕರಾದಂಥ ರಾಮಾನುಜಾಚಾರ್ಯರು ಮೆಲ್ಲುನಾಡಿಗೆ (ಮೇಲ್ನಾಡು) ಚಿತ್ತೈಸುವವರೆಗೆ ನಡೆದ ಶಾಲಿವಾಹನ ಶಕವರುಷ ೮೪೫ ಸಂದ ತರುವಾಯದಲ್ಲಿ ಕ್ರಮಿಕಂಟ ಚೋಳರಾಯನು ನೀಡಿದ ಕಿರುಕುಳ, ರಾಮಾನುಜರು “ಸಾಲಿಗ್ರಾಮಕ್ಕೆ ಬಂದು, ವಡಹನಂಬಿ ಮುಂತಾದವರಿಗೆಲ್ಲ ಜ್ಞಾನಬೋಧೆಯಲ್ಲಿ ತಿಳುಹಿ ಅಲ್ಲಿ ತೀರ್ಥವನ್ನು ಉಂಟುಮಾಡಿ, ಅಲ್ಲಿಂದ ಯಾದವಪುರಿಯಾದ ತೊಣ್ಣೂರಿಗೆ ಚಿತ್ತೈಸಿ, ತೆರಕಣಾಂಬಿಗೆ ಬಂದು ಅಲ್ಲಿ ಬಿಟ್ಟಿದೇವರಾಯನಿಗೆ ಮಂತ್ರೋಪದೇಶವನ್ನು ಮಾಡಿ, ಇವರಿಗೆ ವಿಷ್ಣುವರ್ಧನರಾಯರು ಎಂದು ನಾಮಾಂಕಿತವ” ಕೊಟ್ಟ ವೃತ್ತಾಂತವಿದೆ (ಕರ್ನಾಟಕದ ಕೈಫಿಯತ್ತುಗಳು, ಪು. ೧೦).

ಜನಪದ ಸಾಹಿತ್ಯ

ಜನಪದ ಸಾಹಿತ್ಯ ನಾಡಿನ ಸಂಸ್ಕೃತಿಗೆ ಕನ್ನಡಿ ಹಿಡಿಯುತ್ತದೆ. ಮೌಖಿಕ ಪರಂಪರೆ ನಾಡಿನ ಸಾಮಾನ್ಯ ಜನತೆಯ ನಾಡಿಯ ಮಿಡಿತ ಎನ್ನಬಹುದು. ಇದು ಲಿಖಿತ ಪರಂಪರೆಯಂತಲ್ಲದೆ ನೇರವಾಗಿ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹರಿದುಬರುತ್ತದೆ. ಜನಪದ ಸಾಹಿತ್ಯದಲ್ಲಿ ಗದ್ಯ, ಪದ್ಯ, ಲಘು ಪ್ರಕಾರ, ದೀರ್ಘ ಪ್ರಕಾರ,  ಕಥನ, ಕಥನೇತರ ಎಂಬ ವ್ಯತ್ಯಾಸಗಳನ್ನು ನೋಡಬಹುದು. ಜನಪದಗೀತೆ, ಕಥನಗೀತೆ, ಕಥೆ, ಗಾದೆ ಮತ್ತು ಒಗಟು ಜನಪದ ಸಾಹಿತ್ಯದ ಮುಖ್ಯಪ್ರಕಾರಗಳು. ಇವಲ್ಲದೆ ಕಲಾ ಪ್ರಕಾರವಾದ ಯಕ್ಷಗಾನಕ್ಕೂ ಸಾಹಿತ್ಯವಿರುತ್ತದೆ. ಈ ಎಲ್ಲ ತರಹದ ಸಾಹಿತ್ಯ ಪ್ರಕಾರಗಳು ಒಂದು ಊರಿನ ಜಾನಪದದ ಭಾಗವಾಗಿವೆ.

ಜನಪದ ಗೀತೆ

ಜನಪದ ಗೀತೆಗಳಲ್ಲಿ ಅನೇಕ ಬಗೆಗಳಿವೆ. ಇವುಗಳಲ್ಲಿ ಕೆಲವು ಮನೆಯ ಒಳಗೆ ಹಾಡುವಂಥವು, ಕೆಲವು ಮನೆಯ ಹೊರಗೆ ಹಾಡುವಂಥವು. ಬೀಸುವ ಕಲ್ಲಿನ ಹಾಡು, ಒನಕೆಯ ಹಾಡು, ಹಬ್ಬದ ಹಾಡು ಮುಂತಾದವು ಮನೆಯ ಒಳಗೆ ಹಾಡುವಂಥವು. ನಾಟಿಹಾಡು, ಕಳೆಕೀಳುವ ಹಾಡು, ಕೋಲಾಟದ ಹಾಡು ಮುಂತಾದವು ಮನೆಯ ಹೊರಗೆ ಹಾಡುವಂಥವು. ವಿವಿಧ ಸಂದರ್ಭಗಳಲ್ಲಿ ಹಾಡುವಂಥ ಹಾಡುಗಳನ್ನು ವರ್ಗೀಕರಿಸಿದಾಗ ಜನನ ಸಂದರ್ಭದ ಹಾಡುಗಳು, ಮಕ್ಕಳ ಆಟದ ಹಾಡುಗಳು, ಮದುವೆಯ ಹಾಡುಗಳು ಮುಂತಾದ ರೀತಿಯಲ್ಲಿ ವಿಭಾಗಿಸಿ ಹೇಳಬಹುದು.

ತೊಣ್ಣೂರಿನಲ್ಲಿ ಜನಪದ ಸಾಹಿತ್ಯ ಸಮೃದ್ಧವಾಗಿದೆ. ನಾಗರಿಕತೆ ಪ್ರಗತಿ ಹೊಂದುತ್ತಿರುವ ಈ ಕಾಲದಲ್ಲೂ ತೊಣ್ಣೂರಿನಂಥ ಊರುಗಳಲ್ಲಿ ಜನಪದ ಸಾಹಿತ್ಯ ವೈವಿಧ್ಯಮಯವಾಗಿ ಅಸ್ತಿತ್ವದಲ್ಲಿದೆ. ತೊಣ್ಣೂರಿನ ಜನಪದ ಸಾಹಿತ್ಯ ಸಾಮಾನ್ಯವಾಗಿ ಮಂಡ್ಯ ಜಿಲ್ಲೆಯ ಜನಪದ ಸಾಹಿತ್ಯದ ಪ್ರತಿನಿಧಿಯಂತೆಯೇ ಕಾಣುತ್ತದೆ. ಕೆಲವು ಐತಿಹ್ಯಗಳು, ಪುರಾಣಗಳು ಮತ್ತು ಸ್ಥಳೀಯ ಕಥೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಈ ಊರಿನ ಜನಪದ ಸಾಹಿತ್ಯ  ಮಂಡ್ಯ, ಮೈಸೂರು ಮತ್ತಿತರ ನೆರೆಹೊರೆಯ ಜಿಲ್ಲೆಗಳಲ್ಲಿರುವ ಪ್ರಾತಿನಿಧಿಕ ಸಾಹಿತ್ಯವೇ ಆಗಿರುತ್ತದೆ.

ತೊಣ್ಣೂರು, ಲಕ್ಷ್ಮೀಸಾಗರ, ಸುಂಕತೊಣ್ಣೂರುಗಳಲ್ಲಿ ಕ್ಷೇತ್ರಕಾರ್ಯ ನಡೆಸಿದಾಗ ಸಿಕ್ಕಿದ ಜನಪದ ಸಾಹಿತ್ಯದ ಸ್ವರೂಪ ಹೀಗಿದೆ:

ದೇವತೆಗಳನ್ನು ಕುರಿತ ಹಾಡುಗಳು

ಇದರಲ್ಲಿ ಮೇಲುಕೋಟೆಯ ಚೆಲುವನಾರಾಯಣ, ಮಲೆಯ ಮಹದೇಶ್ವರ, ಚುಂಚನಗಿರಿಯ ಭೈರವ, ಲಕ್ಷ್ಮೀದೇವಮ್ಮ, ನಾರಾಯಣದೇವರು, ಶನಿದೇವ, ದೇವಮ್ಮ ಅಥವಾ ಪಟ್ಟಲದಮ್ಮ ಸೇರಿವೆ. ನನಗೆ ಪ್ರಬಂಧದ ಶೀರ್ಷಿಕೆ ಕೊಟ್ಟಮೇಲೆ ನೀವು ಜನಪದ ಗೀತೆಗಳಲ್ಲಿ ತೊಣ್ಣೂರಿನ ಉಲ್ಲೇಖಗಳಿರುವಂಥವನ್ನೇ ಆದಷ್ಟು ಗಮನದಲ್ಲಿಡಬೇಕೆಂದು ತಿಳಿಸಿದ್ದರು. ಆದರೆ ದೇವಮ್ಮನ ಹಾಡಿನಲ್ಲಿ, ನಾರಾಯಣಸ್ವಾಮಿಯ ಹಾಡಿನಲ್ಲಿ ಮಾತ್ರ ತೊಣ್ಣೂರಿನ ಪ್ರಸ್ತಾಪ ಬರುತ್ತದೆ. ಉಳಿದ ಯಾವ ಹಾಡಿನಲ್ಲೂ ಇಲ್ಲ.

ಬಾರೆ ದೇವಮ್ಮ ನೀರಿಗೆ ಹೋಗೋಣ
ಸಾಲು ಬೇಲೂರ ಕುಣಿಗಲ್ಲು ಕೋಲುಕೋಲೆ
ಸಾಲು ಬೇಲೂರ ಕುಣಿಗಲ್ಲು ಕೋಲು ಕೋಲೆ
………………………………
ಎಲ್ಗೆ ದೇವಮ್ಮ ದೂರದ ಪಯಣ
ಎಲ್ಗೆ ದೇವಮ್ಮ ದೂರದ ಪಯಣ ಹೋಯಿತೀಯೆ
ಹಿರಿಯ ತೊಣ್ಣೂರ ಮದಗದ ಕೆರೀಗೆ || ಕೋಲು ಕೋಲೆ ||

ಈ ಕೋಲು ಪದದಲ್ಲಿ ಹಾಗೂ ‘ಬೀದಿ ಶೃಂಗಾರ ಬಿಡಿ ಮುತ್ತು ಬಂಗಾರ ತೇರೇ ಶೃಂಗಾರ ಗಿರಿಯಲ್ಲಿ ನಾಮ ಬಂಗಾರ’ ಎಂದು ಆರಂಭವಾಗುವ ದೇವಮ್ಮನನ್ನು ಕುರಿತು ಹಾಡುವ ಗೀತೆಯಲ್ಲಿ

ಗದ್ದೆ ಬಯಲಲ್ಲಿ ಬರುತಾಳೆ ಗದ್ದೆ ಬಯಲಲ್ಲಿ ಬರುತಾಳೆ ದೇವಮ್ಮ
ಹಿರಿಯ ತೊಣ್ಣೂರ ಮದಗದೇರಿಯ ಮೇಲೆ
ಜಲನಾಡಿ ಜಡೆಯ ಒದರಾಳು ಜಲನಾಡಿ ಜಡೆಯ

ಇವೆರಡು ಹಾಡುಗಳಲ್ಲಿ ಮಾತ್ರ ತೊಣ್ಣೂರಿನ ಹೆಸರು ಇದೆ. ಇದನ್ನು ಬಿಟ್ಟರೆ ಕರಿಬಂಟನ ಕಥೆಯಲ್ಲಿ ತೊಣ್ಣೂರಿನ ಉಲ್ಲೇಖವಿದೆ.

ಮದುವೆಯ ಹಾಡುಗಳು

ಆರಂಭದ ವಿಳ್ಳೆಶಾಸ್ತ್ರದಿಂದ ಹಿಡಿದು ಮದುಮಕ್ಕಳನ್ನು ಬೀಳ್ಕೊಡುವವರೆಗೆ ಅನೇಕ ಹಾಡುಗಳನ್ನು ಹೇಳುವುದುಂಟು. ಬೀಗರನ್ನು ಜರಿಯುವ ಪದ, ಮದುಮಗನನ್ನು ಆಹ್ವಾನಿಸುವುದು, ಮುಹೂರ್ತ ಕಂಬ ನೆಡುವುದು, ಕಂಕಣ ಕಟ್ಟುವುದು, ಧಾರೆ ಇತ್ಯಾದಿ ಇಲ್ಲ ಶಾಸ್ತ್ರಗಳಿಗೂ ಇಲ್ಲಿ ಹಾಡುಗಳಿವೆ. ಇವುಗಳನ್ನು ಅತ್ಯಂತ ರೋಚಕವಾಗಿ ಮುದನೀಡುವಂತೆ ಹಾಡುತ್ತಾರೆ.

ಬಸುರಿಯ ಬಯಕೆಗಳು, ಮಗು ಆಡಿಸುವಾಗ, ಮಲಗಿಸುವಾಗ ಹಾಡುವ ದೂರಿ ಹಾಡು, ಲಾಲಿ ಹಾಡುಗಳು ಇಲ್ಲಿ ಹೇರಳವಾಗಿ ದೊರೆಯುತ್ತವೆ.

ಕೃಷಿಗೆ ಸಂಬಂಧಿಸಿದ ಹಾಡುಗಳು

ಕೃಷಿಗೆ ಸಂಬಂಧಿಸಿದಂತೆ ಮಳೆರಾಯನನ್ನು ಕರೆಯುವ ಹಾಡು, ತಿಂಗಳಮಾವನ ಹಾಡು, ನಾಟಿಹಾಕುವಾಗ, ಬತ್ತ ಬಡಿಯುವಾಗ ಹೇಳುವ ಪದಗಳು ಇವೆ. ಇವುಗಳಲ್ಲಿ ಗಾಯಕರು ಬಳಸಿರುವ ಉಪಮೆ ರೂಪಕಗಳು ಅತ್ಯಂತ ಚೇತೋಹಾರಿಯಾದಂಥವು.

ಪ್ರಸ್ತುತದಲ್ಲೂ ನಾವು ಮಳೆಯೊಡನೆ ಜೂಜಾಟವಾಡುತ್ತಿದ್ದೇವೆ. ಇಂಥ ಮಳೆರಾಯನನ್ನು

ಒಂದೆಲೆ ಒಣಗಿದ್ದೊ ಒಂದೆಲೆ ಚಿಗುರಿದ್ದೊ
ಒಂದೇಲೆಲೂದಾ ಮಳೆರಾಯ ಬಂದುಯ್ಯೊ ಜಿಡಿ ಮಳೆಯೆ

ಎಂದು ಕರೆದು

ಮಳೆರಾಯ ಹುಯಿದೇದ್ರೆ ಇರುಲಾರೊ ನಾವೀ
ಬಡವಾರು ಆದೊ ನಾವೀ
ಬಡವಾರು ಆದೊ ನಾವೀ ಬಂದುಯ್ಯೋ….
ದನಕರ ಎಲ್ಲಾವು ಮೇವಿಲ್ದೆ ಬತ್ತೋದೊ
ನಿನ್ ದಮ್ಮಯ್ಯ ಕಾಣೊ ಮಳೆರಾಯ ಬಂದುಯ್ಯೊ….

ಮಳೆ ಇಲ್ಲದಿದ್ದರೆ ಭೂಮಿಯಲ್ಲಿ ಉಂಟಾಗುವ ಭೀಕರ ಪರಿಸ್ಥಿತಿಯ ವಿವರಗಳನ್ನೂ ನೀಡುವರು ಜಾನಪದರು. ಮಳೆ ಬರಲಿ ಎಂದು ಮಳೆರಾಯನನ್ನು ಅಂಗಲಾಚಿ ಬೇಡುವರು. ಮಳೆರಾಯನ ಇನ್ನೊಂದು ಹಾಡಿನಲ್ಲಿ ಬೆಳೆಯುವ ಬೆಳೆಗಳ ವಿವರ, ಭೂಮಿಯ ಗುಣ ಇತ್ಯಾದಿ ವಿವರಗಳಿವೆ.

ಬೀಸುವ, ಕುಟ್ಟುವ ಪದಗಳೂ ಶಿಶುಪ್ರಾಸಗಳೂ ಇವೆ. ಶಿಶುಪ್ರಾಸವೊಂದು ಹೀಗಿದೆ.

ಬತ್ತಕುಟ್ಟು ಬತ್ತಕುಟ್ಟು ದೊಡ್ ಒನ್ಕೇಲಿ
ಅಕ್ಕಿಕೇರ್ ಅಕ್ಕಿಕೇರ್ ಗಿಲ್ಕಿ ಮೊರ್ದಲ್ಲಿ
ಅನ್ನ ಮಾಡ್ ಅನ್ನ ಮಾಡ್ ಮಣ್ಣಿನ ಮಡ್ಕೇಲಿ
ಅನ್ನ ಉಣ್ ಅನ್ನ ಉಣ್ ಕಂಚಿನ ತಣಿಗೇಲಿ
ಕೈತೊಳಿ ಕೈತೊಳಿ ಬಾಳೆಗುಂಡೀಲಿ

ಮಾನವ ಬಳಸುವ ಆಹಾರ, ಅದರ ತಯಾರಿಕೆಯ ವಿವರಗಳಿರುವುದರ ಜೊತೆಗೆ ಜಾನಪದರು ಕೈತೊಳೆಯುವುದೆಲ್ಲಿ? ಬಾಳೆ ಗುಂಡೀಲಿ! ಹಳ್ಳಿಗಳಲ್ಲಿ ಪ್ರತಿಯೊಂದು ಮನೆಯ ಹಿತ್ತಲಲ್ಲೂ ಬಾಳೆಯ ಗಿಡಗಳನ್ನು ಬೆಳೆಯುತ್ತಿದ್ದ ವಿಚಾರ, ಹಾಗೆಯೇ ಊಟವಾದ ಮೇಲೆ ಮನೆಯ ಜನರೆಲ್ಲ ಬಾಳೆಗುಂಡಿಯಲ್ಲಿ ಕೈತೊಳೆದರೆ ಬಾಳೆಗೆ ನೀರು ಎರೆದಂತೆಯೂ ಆಗುತ್ತದೆ. ಇತ್ಯಾದಿ ವಿಷಯಗಳನ್ನು ನಾಲ್ಕೈದೇ ಸಾಲಿನಲ್ಲಿ ಸಮರ್ಥವಾಗಿ ನಿರೂಪಿಸಿರುವ ಶಿಶುಗೀತೆಯಿದು.

ತತ್ವಪದಗಳು

ತೊಣ್ಣೂರಿನ ಜನಪದ ಗಾಯಕರು ಹಾಡುವ “ಎಲ್ಲೋ ಜೋಗಪ್ಪ ನಿನ್ನರಮನೆ, ಎಲ್ಲೊ ಜೋಗಪ್ಪ ನಿನ್ ತಳಮಾನೆ….” ಎಂಬ ಹಾಡು ತತ್ತ್ವಪದವಾಗಿ ಮಾರ್ಪಾಡಾಗಿದೆ. ಇದು ಇಲ್ಲಿಯ ವೈಶಿಷ್ಟ್ಯ

ತೊರಿಯ ತಡಿಯಲ್ಲಿ ಒಂದು ಮನೆಯ ಮಾಡಿ
ಬೆಟ್ಟದ ಮೇಲೆ ಒಂದು ಬಿದಿರ ಕಡಿದಿ
ಅದುಕಾಣೆ ನನ್ನ ಅರಮನೆ ಅದು ಕಾಣೆ ನನ್ನ ತಳಮಾನೆ

ಹಟ್ಟೀಯ ನಾ ಕಟ್ಟಿ ತೊಟ್ಟೀಯ ನಾ ತಿರುಗಿ
ಹಟ್ಟಿಲೊಂದರಗಳಿಗೆ ಇರಗೊಡದೆ
ಹಟ್ಟಿಲೊಂದರಗಳಿಗೆ ಇರಗೊಡದೆ ಜವರಾಯ
ಎಳೆದುಕೊಂಡೋದನು ಯಮರಾಯ
ಎಳೆದುಕೊಂಡೋದನು ಯಮರಾಯ ಎಲ್ಲೋ

ಮುತ್ತೈದೆ ಹೆಂಡತಿ ಮುಂದಗಡೆ ಕುಳಿತುಕೊಂಡಿ
ಚೆಂದಕೊಂದ್ಮಾತ ಹೇಳಲಿಲ್ಲ
ಚೆಂದಕೊಂದ್ಮಾತ ಹೇಳಲಿಲ್ಲ ಜವರಾಯ
ಎಳೆದುಕೊಂಡೋದನು ಜವರಾಯ

ಹೀಗೆ ಈ ಹಾಡು ಮುಂದುವರಿಯುತ್ತದೆ. ಇಷ್ಟೇ ಅಲ್ಲದೆ ಉತ್ತರ ದೇವಿಯ ಹಾಡು ಇತ್ಯಾದಿ ಜನಪದ ಖಂಡಕಾವ್ಯಗಳೂ ಇಲ್ಲಿ ದೊರೆಯುತ್ತವೆ.

ಕಥನಗೀತೆ

ತೊಣ್ಣೂರಿನಲ್ಲಿ ಲಭ್ಯವಿರುವ ಕಥನಗೀತೆಗಳಲ್ಲಿ ಕರಿಬಂಟನ ಕಥೆಯನ್ನು ಮುಖ್ಯವಾಗಿ ಹೆಸರಿಸಬೇಕು. ಈಗ ಈ ಕಥೆಯನ್ನು ಹೇಳುವ ಜನ ದಿನೇ ದಿನೇ ಕಡಿಮೆಯಾಗಿದ್ದಾರೆ. ಕರಿಬಂಟನ ಕಥೆಯನ್ನು ಮಂಡ್ಯ, ಮೈಸೂರು, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಹಾಡುತ್ತಾರೆ. ಕರಿಬಂಟನ ಕಥೆಯ ಮುಖ್ಯಪಾತ್ರಗಳೆಲ್ಲ ಈ ಕಥನಗೀತೆಯಲ್ಲಿ ಕಾಣಿಸುತ್ತವೆ. ತೊಣ್ಣೂರಿನ ರಾಕ್ಷಸಿಯಾದ ಉದ್ದಂಡಿ, ಅವಳ ಮಗಳಾದ ಪುಂಡರೀಕಾಕ್ಷಿ, ಕರಿಬಂಟ ಎಂಬ ಮೂರು ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಇದೇ ಗದ್ಯಕತೆಗಳು ಮತ್ತು ಯಕ್ಷಗಾನಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಸಿಕ್ಕುತ್ತದೆ. ಈ ಕಥೆಯಲ್ಲಿ ಬೇರೆ ಬೇರೆ ಪಾಠಾಂತರಗಳೂ ಇವೆ.

ಜನಪದ ಕತೆಗಳು ಸಾಮಾನ್ಯವಾಗಿ ಒಂದೇ ಬಗೆಯವು. ಕಿನ್ನರ ಕತೆಗಳು, ಪ್ರಾಣಿ ಕತೆಗಳು, ಅದ್ಭುತ ಕತೆಗಳನ್ನು ಇಲ್ಲಿ ಹೇಳುವುದುಂಟು.

ಗಾದೆಗಳು, ಒಗಟುಗಳು ಸಾಮಾನ್ಯವಾಗಿ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಒಂದೇ ಬಗೆಯಲ್ಲಿ ಇರುತ್ತವೆ. ಕೇವಲ ಭಿನ್ನ ಪಾಠಗಳನ್ನಷ್ಟೇ ಗುರುತಿಸಬಹುದು.

ಇಲ್ಲಿಯ ವಕ್ತೃಗಳಿಂದ ಸಂಗ್ರಹಿಸಿದ ಒಗಟೊಂದು ಹೀಗಿದೆ:

ಕಪ್ಪೆಗೊಳೆಲ್ಲ ಕಣ್ಕಪ್ ಇಕ್ಕಂಡು ಕಟ್ಟೆನೀರಿಗೆ ಹೋಗುವಾಗ
ನಾಗಪ್ಪಸ್ವಾಮಿ ಬೀದೀಲಿ ಕೂತಗಂಡು ವಾರದ ಬಾಕಿ ಎಲ್ಲೆಂದ

ಕೋಳಿಗಳೆಲ್ಲ ಮರಿಗಳ ಕಟ್ಟುಗಂಡು ತಿಪ್ಪೆಗುಂಡಿ ಕೆರಿವಾಗ
ಗರುಡಾಳಸ್ವಾಮಿ ಗರಗರ ಸುತ್ತಿ ವಾರದ ಬಾಕಿ ಎಲ್ಲೆಂದ

ಇಲಿಸುಂಡಗೊಳು ಮರಿಗಳ ಕಟ್ಟುಗಂಡು ಹೆಗ್ಗಣ ಬಿಲವ ಕೆರಿವಾಗ
ಕೊತ್ತಣ್ಣ ಬಂದು ಕ್ವಾಣೇಲಿ ಕೂತಗಂಡ ವಾರದ ಬಾಕಿ ಎಲ್ಲೆಂದ

ಇಲಿಸುಂಡನ ಹೆಂಡತಿ ಹಸಿಬಿಸಿ ಬಾಣತಿಯಾಗಬೇಕು ನೋಡಿರಣ್ಣ
ಚೋಜಿಗವ ನೀವೆಲ್ಲ ಕೇಳಿರಣ್ಣ

ಕರಿಬಂಟನ ಕತೆ

ಬಲ್ಲಾಳರಾಜ ಎಂಬಾತ ಹಳೆಬೀಡಿನಲ್ಲಿದ್ದ. ಅವನಿಗೆ ಪದ್ಮಾವತಿ ಎಂಬ ಸುಂದರವಾದ ಮಗಳಿದ್ದಳು. ಮದುವೆ ವಯಸ್ಸಿಗೆ ಬಂದಾಗ ಬೇರೆ ಬೇರೆ ದೇಶದ ರಾಜರ ಚಿತ್ರಪಟ ತರಿಸಿದ ರಾಜ. ಕೊಯಮತ್ತೂರಿನ ಕಡೆಯವನಾದ ರಾಜ ಕರಿರಾಜನನ್ನು(ಧಾರಾಪುರದ ಪಕ್ಕದಲ್ಲಿ) ಪದ್ಮಾವತಿ ಒಪ್ಪುತ್ತಾಳೆ. ಕರಿರಾಜ ಇವಳನ್ನೇ ಮದುವೆ ಆಗಬೇಕು ಎಂದು ನಿಶ್ಚಯಿಸಿ ಕುದುರೆಯೇರಿ ಹೊರಟ. ಮಾರ್ಗಮಧ್ಯದಲ್ಲಿ ಶ್ರೀರಂಗಪಟ್ಟಣದ ಬಳಿ ವಿಶ್ರಮಿಸಿಕೊಳ್ಳುತ್ತಿದ್ದ.

ತೊಣ್ಣೂರಿನಲ್ಲಿ ಉದ್ದಂಡಿ ಎಂಬ ರಾಕ್ಷಸಿಯಿದ್ದಳು (ಒಂದು ಪ್ರಾಂತವನ್ನು ಆಳುತ್ತಿದ್ದ ಬಲಿಷ್ಠ ಹೆಣ್ಣು, ಈಕೆ ರಾಕ್ಷಸಿ ಎಂಬುದಕ್ಕೆ ಯಾವುದೇ ಕುರುಹು ಇಲ್ಲ) ಅವಳಿಗೆ ಸುಂದರಿ ಸ್ಫುರದ್ರೂಪಿ ಹೆಣ್ಣು ಮಗಳಿದ್ದಳು. ಮಗಳನ್ನು ತನ್ನ ತಮ್ಮನಿಗೆ ಕೊಟ್ಟು ಲಗ್ನ ಮಾಡಬೇಕೆಂದುಕೊಂಡಿದ್ದಳು. ಈಕೆಯ ಮಗಳು ವಿಹಾರಕ್ಕಾಗಿ ಊರಿನ ಹೊರಗೆ ಬಂದಿದ್ದಳು. ಆಗ ಕರಿಬಂಟನನ್ನು ನೋಡಿ ಮೋಹಗೊಂಡು ಅವನನ್ನೇ ಮದುವೆಯಾಗಲು ಬಯಸಿ ತನ್ನ ಮನೆಗೆ ಕರೆತಂದಳು. ಈ ವಿಷಯ ಉದ್ದಂಡಿಗೆ ತಿಳಿದು ಹೇಗಾದರೂ ಇವನನ್ನು ಉಪಾಯದಿಂದ ಕೊಲ್ಲಬೇಕೆಂದು ತೀರ್ಮಾನಿಸಿ, ತನ್ನ ತಮ್ಮ ಮತ್ತು ಕರಿಬಂಟನನ್ನು ಒಂದೆಡೆ ಮಲಗಿಸಿದಳು. ಕರಿಬಂಟನಿಗೆ ಗಾಢ ನಿದ್ರೆ ಬಂದ ಸಂದರ್ಭದಲ್ಲಿ ಉದ್ದಂಡಿ ಕರಿಬಂಟನ ಕಾಲಿಗೆ ಒಂದು ದಾರ ಕಟ್ಟಿದಳು. ಇದರ ಸುಳಿವು ತಿಳಿದಿದ್ದ ಪುಂಡರೀಕಾಕ್ಷಿ ಅವನ ಕಾಲಿಂದ ಅದನ್ನು ತೆಗೆದು ತನ್ನ ಮಾವನ ಕಾಲಿಗೆ ಕಟ್ಟಿದಳು. ಸರಿಹೊತ್ತಿನಲ್ಲಿ ಉದ್ದಂಡಿ ಆತನ ಹೊಟ್ಟೆ ಬಗೆದು ಕರುಳು ತೆಗೆದು ಹಾರಹಾಕಿಕೊಂಡು ಅಟ್ಟಹಾಸದಿಂದ ಮೆರೆಯುತ್ತಿದ್ದಳು. ಆಮೇಲೆ ತಿಳಿಯಿತು ಸತ್ತವನು ತನ್ನ ತಮ್ಮ ಎಂದು. ಕರಿಬಂಟನಿಗೆ ಎಚ್ಚರವಾಗಿ ಭಯಭೀತನಾಗಿ ಓಡಿ ಓಡಿ ಬಂದು ಸುಂಕತೊಣ್ಣೂರು ತಲಪಿದ. ಅವನ ಬೆನ್ನಟ್ಟಿ ಬಂದಳು ಉದ್ದಂಡಿ.

ಸುಂಕತೊಣ್ಣೂರು ಎಲ್ಲ ಕಡೆಯಿಂದ ಸುಂಕ ವಸೂಲಿ ಮಾಡುವ ಸ್ಥಳ. ಸುಂಕದ ಕಟ್ಟೆ ಮೇಲೆ ಏಳುಜನ ಕುಳಿತು ಯಾವುದೇ ಬಗೆಯ ವ್ಯಾಜ್ಯಗಳಿಗೆ ನ್ಯಾಯ ತೀರ‍್ಮಾನ ಮಾಡುತ್ತಿದ್ದರು. ನ್ಯಾಯ ಮಾಡುವವರು ಇವರಿಬ್ಬರನ್ನೂ ಕಂಡು ಏನೆಂದು ಕೇಳಿದರು. ಉದ್ದಂಡಿ ಬೇರೆ ವೇಷದಿಂದ ಬಂದು ಇವನು ನನ್ನ ಅಳಿಯ. ನನ್ನ ಬಾಣಂತಿ ಮಗಳನ್ನು ಬಿಟ್ಟು ಓಡಿಹೋಗು ತ್ತಿದ್ದಾನೆ. ನೀವೇ ನ್ಯಾಯ ಹೇಳಿ ಎನ್ನುತ್ತಾಳೆ. ಇವರು ಬೇರೆ ಯಾವುದೋ ನ್ಯಾಯ ತೀರ‍್ಮಾನ ಮಾಡಬೇಕಾಗಿರುತ್ತದೆ. ಇವರಿಬ್ಬರನ್ನೂ ಒಂದೆಡೆ ಇಟ್ಟು ‘ನೀವು ಇಲ್ಲಿರಿ ಆ ನ್ಯಾಯ ಮುಗಿದ ಮೇಲೆ ನಿಮ್ಮ ನ್ಯಾಯ ತೀರ‍್ಮಾನ ಮಾಡುತ್ತೇವೆ’ ಎನ್ನುತ್ತಾರೆ. ಕರಿಬಂಟ ಅನುಮಾನ ವ್ಯಕ್ತಪಡಿ ಸುತ್ತಾನೆ. ಏನಾದರೂ ನಾವು ಮಾತಿಗೆ ತಪ್ಪಿದರೆ ಕೊಂಡಕ್ಕೆ ಬಿದ್ದು ಸಾಯುತ್ತೇವೆ. ನಮ್ಮ ಮಾತು ನಂಬಿ ಎಂದೆನ್ನುತ್ತಾರೆ. ಅವರು ಹೋದ ಬಳಿಕ ಇವಳು ಅವನನ್ನು ಕೊಲ್ಲುತ್ತಾಳೆ. “ನಿಮ್ಮ ಭಾಷೆ ನಿಮಗಾಯ್ತು, ನಮ್ಮ ಭಾಷೆ ನಮಗಾಯ್ತು” ಎಂದು ಪುಂಡರೀಕಾಕ್ಷಿ ಹೊರಟು ಹೋಗುತ್ತಾಳೆ. ಅವರು ಬಂದು ನೋಡುವಷ್ಟರಲ್ಲಿ ಅನಾಹುತ ನಡೆದಿರುತ್ತದೆ. ಆ ಏಳು ಜನ ಮುಖಂಡರೂ ಅಗ್ನಿಕೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಬಲ್ಲಾಳ ರಾಜನ ಮಗಳು ಪದ್ಮಾವತಿಗೆ ಈ ವಿಷಯ ತಿಳಿಯುತ್ತದೆ. ಅವಳು ಅವನೇ ನನ್ನ ಗಂಡ. ಅವನಿಲ್ಲದ ಮೇಲೆ ತಾನು ಬದುಕಿದ್ದೇನು ಫಲ ಎಂದು ತೀರ‍್ಮಾನಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಶಿವಪಾರ್ವತಿ ಪ್ರತ್ಯಕ್ಷರಾಗುತ್ತಾರೆ. ಎಲ್ಲರೂ ಬದುಕುತ್ತಾರೆ.

ಪುಂಡರೀಕಾಕ್ಷಿ ಗುಡಿ ಅಥವಾ ರಾಕ್ಷಸಮ್ಮನ ಗುಡಿ

ಸುಂಕಾ ತೊಣ್ಣೂರಿನಲ್ಲಿ ಮೂರು ಕಲ್ಲುಗಳಿವೆ. ಇವು ಒಡೆದು ಮೂಡಿದವು ಎನ್ನುತ್ತಾರೆ. ಸುಂಕತೊಣ್ಣೂರಿನ ಹೆಣ್ಣು ಮಗಳನ್ನು ಮದುವೆಯಾಗಿ ಬಂದ ಅಳಿಯಂದಿರೆಲ್ಲ ರಕ್ತಕಾರಿ ಸಾಯುತ್ತಿರುತ್ತಾರೆ. ಕಾರಣ ಏನೇ ಇರಬಹುದು. ಆದರೆ ರಾಕ್ಷಸಿಗೆ ಅಳಿಯಂದಿರನ್ನು ಕಂಡರೆ ಆಗುವುದಿಲ್ಲ. ಅದಕ್ಕೆ ಹೀಗಾಗಿರಬಹುದೆ ಎಂದು ಜನ ಊಹಿಸುತ್ತಾರೆ. ಯಾಕೆ ಹೀಗೆ ಎಂದು ಶಾಸ್ತ್ರ ಕೇಳಿದಾಗ ರಾಕ್ಷಸಿ ದೃಷ್ಟಿ ಆ ಅಳಿಯಂದಿರ ಮೇಲೆ ಬಿದ್ದು ಹೀಗಾಗುತ್ತಿದೆ. ಆ ಗುಡಿಗೆ ಅಡ್ಡಲಾಗಿ ಏನಾದರೂ ಒಂದು ಶಿಲೆ ಇಟ್ಟರೆ ಇದು ಪರಿಹಾರವಾಗುತ್ತದೆ ಎನ್ನುತ್ತಾರೆ. ಆ ಮೂರು ಕಲ್ಲುಗಳನ್ನು ಉದ್ದಂಡಿ, ಮಗಳು, ಅಳಿಯ ಎಂದು ಹೇಳುತ್ತಾರೆ. ಆ ಮೂರು ಕಲ್ಲುಗಳಿಗೆ ಅಡ್ಡಲಾಗಿ ಅಳಿಯ ಮಗಳಿರುವ ಒಂದು ಅಗಲವಾದ ಕಲ್ಲನ್ನಿಡಲಾಗಿದೆ. ಈ ಕಲ್ಲಿನ ಹಿಂಭಾಗದಲ್ಲಿ ಆ ಮೂರು ಕಲ್ಲುಗಳಿವೆ. ಅನಂತರ ಆ ಊರಿನ ಅಳಿಯಂದಿರು ಬದುಕಿ ಉಳಿಯುತ್ತಾರೆ. ಒಂದು ಕಾಲದಲ್ಲಿ ಸುಂಕತೊಣ್ಣೂರಿನ ಹೆಣ್ಣು ಮಕ್ಕಳನ್ನು ಮದುವೆ ಮಾಡುವುದೇ ತುಂಬ ಕಷ್ಟವಾಗಿತ್ತಂತೆ. ಈ ಗುಡಿಯ ಹಿಂಭಾಗದಲ್ಲಿ ಅನೇಕ ವೀರಗಲ್ಲುಗಳಿವೆ. ಅವುಗಳಲ್ಲಿ ಸ್ವಲ್ಪ ದೊಡ್ಡದಾದ ಏಳು ವೀರಗಲ್ಲುಗಳನ್ನು ಆ ಏಳುಜನ (ಕೊಂಡಕ್ಕೆ ಹಾರಿದ) ಗೌಡರವು ಎಂದು ಹೇಳಲಾಗುವುದು.

ಇಲ್ಲಿ ಎರಡು ವರ್ಷಗಳಿಗೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದಂತೆ. ಈಗ್ಗೆ ಐದು ವರ್ಷಗಳ ಹಿಂದೆ ನಡೆದಿತ್ತಂತೆ. ಸುಂಕಾ ತೊಣ್ಣೂರಿನ ಕೆರೆಯ ಬಳಿ ಈ ಗುಡಿ ಇದೆ.

ಯಕ್ಷಗಾನ

ತೊಣ್ಣೂರಿಗೆ ಸಂಬಂಧಿಸಿದ ಕರಿಬಂಟನ ಕಥೆ ಅನೇಕ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿದೆ. ಈ ಕಥೆ ಕರ್ನಾಟಕದ ಗಡಿಯನ್ನು ದಾಟಿ ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಮುಂತಾದ ಕಡೆ ಕೂಡ ಪ್ರಚಲಿತವಾಗಿದೆ. ಈ ಕಥೆ ಪಡೆದ ಸಾಹಿತ್ಯ ರೂಪಗಳಲ್ಲಿ ಯಕ್ಷಗಾನವೂ ಒಂದು.

ಕನ್ನಡದ ಯಕ್ಷಗಾನ ಸಾಹಿತ್ಯದಲ್ಲಿ ಕೆಂಪಣ್ಣಗೌಡನ ‘ಕರಿರಾಯ ಚರಿತ್ರೆ’ ತೀರ ಹಳೆಯದೆಂದು ಕಾಣುತ್ತದೆ. ಓಲೆಯಲ್ಲಿ ಬರೆಯಲಾಗಿರುವ ಪ್ರತಿಯಲ್ಲಿ ‘ದುರ್ಮತಿ ಸಂವತ್ಸರದ ಜ್ಯೇಷ್ಠ ಬಹುಳ ಬುಧವಾರ ಮಧ್ಯಾಹ್ನದ ಕಾಲದವರೆಗೆ ಸಂಪೂರ್ಣಂ’ ಎಂದಿರುವುದರಿಂದ ಕ್ರಿ.ಶ.೧೪೮೦ಕ್ಕಿಂತ ಹಿಂದೆಯೇ ಈ ಯಕ್ಷಗಾನ ರಚಿತವಾದಂತೆ ತೋರುತ್ತದೆ. ಕವಿಚರಿತೆಕಾರರು ಈ ಯಕ್ಷಗಾನ ಕ್ರಿ.ಶ.೧೭೬೦ರ ಕಾಲದ್ದು ಎಂದು ಹೇಳಿರುವುದಕ್ಕೆ ಆಧಾರವಿಲ್ಲವೆಂದು ಶ್ರೀ ಹ.ಕ.ರಾಜೇಗೌಡ ಹೇಳುತ್ತಾರೆ(ಕೆಂಪಣ್ಣಗೌಡನ ಯಕ್ಷಗಾನ ಕಾವ್ಯಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ೧೯೯೩, ಪು. xxxvi). ಸುಮಾರು ಹದಿನೆಂಟು ಜನ ಲೇಖಕರು ಕರಿರಾಯನ ಚರಿತ್ರೆಯನ್ನು ಬರೆದರೆಂದು ಸೂಚಿಸುತ್ತದೆ. ಗಂಗದೊರೆ ರಕ್ಕಸಗಂಗನೇ ಕರಿಬಂಟನೆಂದು ಕೆಲವು ವಿದ್ವಾಂಸರು ಭಾವಿಸಿದ್ದಾರೆ(ಮೇಲಿನದೇ ಪು.xliii). ಕರಿಬಂಟನ ಕಥೆಯ ಅಂತಿಮ ಘಟನೆ ಚಿತ್ರದುರ್ಗ ಜಿಲ್ಲೆಯ ಹಾಯಕಲ್ಲಿನಲ್ಲಿ ನಡೆದಿದೆ ಎಂದು ವಿದ್ವಾಂಸರು ಭಾವಿಸಿದ್ದಾರೆ. ಐತಿಹ್ಯದ ಪ್ರಕಾರ ತೊಂಡನೂರು ರಾಕ್ಷಸಿ ಕರಿಬಂಟನನ್ನು ಕೊಲ್ಲಲು ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಬಳಿಯ ಹೊಸಗುಡ್ಡದಿಂದ ಓಡಿಸಿಕೊಂಡು ಬಂದು ಹಾಯಕಲ್ಲಿನಲ್ಲಿ ಈತನನ್ನು ಕೊಂದಳು. ಇದು ಕಲ್ಪನೆ ಎಂಬುದು ಸ್ಪಷ್ಟ. ಈ ಕಥೆಯಲ್ಲಿ ತೊಣ್ಣೂರು ಪ್ರಧಾನ ಕೇಂದ್ರ. ಅದನ್ನು ಮಾತ್ರ ಯಾವ ಕಥೆಯಲ್ಲೂ ಬದಲಾಯಿಸಲು ಸಾಧ್ಯವಿಲ್ಲ.

ಕಥೆಗಳ ಪ್ರಕಾರ ಕರಿರಾಯ ಧಾರಾಪುರದ ರಾಜಕುಮಾರ. ಅವನಿಗೆ ಹಳೆಬೀಡಿನ ಬಲ್ಲಾಳರಾಯ ತನ್ನ ಮಗಳು ಧರಣಿಮೋಹಿನಿ ಎಂಬವಳನ್ನು ಕೊಟ್ಟು ಮದುವೆ ಮಾಡಬೇಕೆಂದುಕೊಳ್ಳುತ್ತಾನೆ. ಕರಿರಾಯ ಹಳೆಬೀಡಿಗೆ ಹೊರಡುತ್ತಾನೆ. ತೊಣ್ಣೂರಲ್ಲಿ ಭೇತಾಳ ರಾಜ ಆಳುತ್ತಿರುತ್ತಾನೆ. ಅವನ ರಾಣಿ ಉದ್ದಂಡಿ. ಇವರ ಮಗಳು ಪುಂಡರೀಕಾಕ್ಷಿ. ಇವಳು ಕರಿರಾಯನನ್ನು ಪ್ರೀತಿಸಿದಳು. ಆದರೆ ಉದ್ದಂಡಿ ತನ್ನ ಮಗಳನ್ನು ತಮ್ಮ ಬೊಮ್ಮ ರಕ್ಕಸನಿಗೆ ಕೊಡಬೇಕೆಂದುಕೊಂಡಳು. ಆಕೆ ಉಪಾಯದಿಂದ ಕರಿರಾಯನನ್ನು ಕೊಲ್ಲುತ್ತಾಳೆ. ಈ ಐತಿಹ್ಯವನ್ನು ಕವಿಗಳು ಯಕ್ಷಗಾನದಲ್ಲಿ ಬಳಸಿಕೊಳ್ಳುವಾಗ ಅತಿಮಾನುಷ ವಾತಾವರಣ ವನ್ನು ಕಲ್ಪಿಸಿದರು.

ಇಲ್ಲಿ ಒಂದು ವಿಶೇಷವಿದೆ. ಜನಪದ ಸಾಹಿತ್ಯದಲ್ಲಿ ಗದ್ಯಕಥನಗಳು ಸಾಮಾನ್ಯವಾಗಿ ಸುಖಾಂತವಾಗಿರುತ್ತವೆ. ಕಥನಗೀತೆಗಳು ಮತ್ತು ಮಹಾಕಾವ್ಯಗಳು ದುಃಖಾಂತವಾಗಿರುತ್ತವೆ. ರಾಮಾಯಣ ಮಹಾಭಾರತದಂಥವು ಕೂಡ ಮೊದಲು ಜನಪದ ಮಹಾಕಾವ್ಯ ಗಳಾಗಿದ್ದುದರಿಂದಲೇ ಅವು ದುರಂತ ಕಾವ್ಯಗಳಾಗಿವೆ ಎಂದು ಊಹಿಸಲಾಗಿದೆ. ಕರಿಬಂಟನ ಕಾಳಗದ ಕಥನಗೀತೆಗಳ ವಿಷಯದಲ್ಲೂ ಇದನ್ನು ಗಮನಿಸಬಹುದು. ಈ ಕಥೆ ಸಹಜವಾಗಿಯೇ ದುರಂತದಿಂದ ಕೂಡಿದೆ. ಕರಿಬಂಟನ ಕೊಲೆಯೊಂದಿಗೆ ಕಥನ ಮುಕ್ತಾಯವಾಗುತ್ತದೆ. ಆದರೆ ಗದ್ಯಕಥೆಗಳಲ್ಲಿ ಕೊನೆಗೆ ಶಿವಪಾರ್ವತಿಯರನ್ನು ತಂದು ಕರಿಬಂಟನನ್ನು ಬದುಕಿಸಿ ಕಥೆಯನ್ನು ಸುಖಾಂತ ಮಾಡುವುದು ಕಂಡುಬರುತ್ತದೆ.

ಮೌಖಿಕ ಪರಂಪರೆಯಲ್ಲಿ ಕಥೆಯಾಗಿಯೂ ಗೀತೆಯಾಗಿಯೂ ಪ್ರಖ್ಯಾತಿ ಪಡೆದಿದ್ದ ಕರಿಬಂಟನ ಕಥೆ ಅನಂತರ ಕಾಲದಲ್ಲಿ ಯಕ್ಷಗಾನ ಕಾವ್ಯವಾಗಿಯೂ ನಾಟಕವಾಗಿಯೂ ಹೆಚ್ಚು ಹೆಚ್ಚು ಪ್ರಚಾರ ಪಡೆಯಿತು. ಕೆಂಪಣ್ಣಗೌಡನ (ಕ್ರಿ.ಶ.ಸು. ೧೪೮೦) ‘ಕರಿರಾಯ ಚರಿತೆ’ ಎಂಬ ಯಕ್ಷಗಾನ ಕಾವ್ಯವೇ ಅತ್ಯಂತ ಪ್ರಾಚೀನವಾದುದು. ಅನಂತರ ಸಾಂಬಯ್ಯನ (ಕ್ರಿ.ಶ.ಸು. ೧೭೫೦) ‘ಕರಿಯಬಂಟನ ಕಥೆ’ ಯಕ್ಷಗಾನ, ಬಾಳಾಕ್ಷನ (ಕ್ರಿ.ಶ.ಸು. ೧೮೦೦) ಕರಿಯಬಂಟನ ಕಥೆ ಯಕ್ಷಗಾನ, ಯಜಮಾನ್ ಸಿದ್ಧಲಿಂಗಪ್ಪನ (ಕ್ರಿ.ಶ.ಸು. ೧೮೯೫) ‘ಕರಿಯಬಂಟನ ಕಥೆ’ ಎಂಬ ನಾಟಕ, ವೀರನಗೆರೆ ಪುಟ್ಟಣ್ಣನ (೧೯ನೆಯ ಶ.) ‘ಕರಿಯಬಂಟನ ಕಥೆ’ ಕೃತಿಗಳು ರಚಿತವಾಗಿವೆ(ಆರ್.ನರಸಿಂಹಾಚಾರ್, ಕರ್ಣಾಟಕ ಕವಿಚರಿತೆ, ಸಂ. ೩, ಬೆಂಗಳೂರು, ೧೯೭೪). ಕೆಂಪಣ್ಣಗೌಡ, ವೀರನಗೆರೆ ಪುಟ್ಟಣ್ಣ ಇವರಿಬ್ಬರ ಕೃತಿಗಳು ಮಾತ್ರ ಪ್ರಕಟಗೊಂಡಿವೆ. ೧೯೯೦ರಲ್ಲಿ ಡಿ.ಎ.ಶಂಕರ್ ಅವರು ಕರಿಬಂಟನನ್ನು ಕುರಿತು ನಾಟಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ಇಂದಿಗೂ ಶ್ರಾವಣ ಶನಿವಾರಗಳಂದು ಹಾಗೂ ಕಾರ್ತೀಕ ಮಾಸದಲ್ಲಿ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ರೂಪದಲ್ಲಿ ಕರಿಬಂಟನ ಕಥೆ ಪ್ರದರ್ಶನಗೊಳ್ಳುತ್ತಿರುವುದು ಅದರ ಜನಪ್ರಿಯತೆಯನ್ನು ಸೂಚಿಸುತ್ತದೆ.

ಮುಕ್ತಾಯ

ತೊಣ್ಣೂರಿನ ಜನಪದ ಸಾಹಿತ್ಯವನ್ನು ಪರಿಶೀಲಿಸಿದಾಗ ಪೌರಾಣಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳು ಈ ಸಾಹಿತ್ಯದಲ್ಲಿ ಬೆರೆತಿರುವುದನ್ನು ಗಮನಿಸಬಹುದು. ತೊಣ್ಣೂರಿನ ಸುತ್ತಮುತ್ತ ಹಳ್ಳಿಗಳು ಮತ್ತು ನೆರೆಹೊರೆಯ ಜಿಲ್ಲೆಗಳು ಇದೇ ರೀತಿಯ ಹಲವು ಸಾಂಸ್ಕೃತಿಕ ಮಹತ್ತ್ವದ ಅಂಶಗಳಿಂದ ಕೂಡಿವೆ ಎಂಬುದು ಸ್ಪಷ್ಟವಾಗುತ್ತದೆ. ಗೌತಮಕ್ಷೇತ್ರ (ಶ್ರೀರಂಗಪಟ್ಟಣ), ಹಳೇಬೀಡು, ಮಲ್ಲಿಗನೂರು, ಸುಂಕಾತೊಣ್ಣೂರು, ಮೂಗೂರು ಮುಂತಾದವು ಅಸ್ತಿತ್ವದಲ್ಲಿರುವ ಊರುಗಳೇ. ಇವುಗಳ ಜೊತೆಗೆ ಐತಿಹ್ಯಗಳು ಮತ್ತು ಪುರಾಣಗಳು ಸೇರಿ ಒಂದು ಕಲ್ಪಿತ ವಾತಾವರಣ ಸೃಷ್ಟಿಯಾಗಿದೆ. ಇಂಥ ತೊಣ್ಣೂರಿನಲ್ಲಿ ಜನಪದ ಸಾಹಿತ್ಯದ ಸಂರಕ್ಷಣೆ ನಡೆಯಬೇಕು. ಈ ನಿಟ್ಟಿನಿಂದ ಕ್ಷೇತ್ರಕಾರ್ಯ ಕೈಗೊಂಡು ಜನಪದ ಸಾಹಿತ್ಯ ಸಂಗ್ರಹಿಸಿ ಪ್ರಕಟಿಸುವತ್ತ ಗಮನಹರಿಸಬೇಕಿದೆ.

ವಕ್ತೃಗಳು

ಶ್ರೀಮತಿ/ಶ್ರೀ

ಹೆಸರು

ವಯಸ್ಸು

ಊರು

ವೃತ್ತಿ

ಜಯಮ್ಮ ೫೦ ಕೆರೆತೊಣ್ಣೂರು ಕೃಷಿ
ಸರೋಜಮ್ಮ ೬೦
ಸ್ವಾಮಿಗೌಡ ೬೦ ಕೃಷಿ
ರಘುರಾಂಭಟ್ ೪೫ ಅರ್ಚಕರು
ಜಬ್ಬಾರ್‌ಖಾನ್ ೭೦ ವ್ಯಾಪಾರ
ನರಸಿಂಗನ್.ವಿ. ೯೨ ಸುಂಕತೊಣ್ಣೂರು ಅರ್ಚಕರು
ಹನುಮಮ್ಮ ೬೦ ಲಕ್ಷ್ಮೀಸಾಗರ
ಜಯಲಕ್ಷ್ಮಮ್ಮ ೫೦
ಭದ್ರಮ್ಮ ೬೦
ನಾಗಮ್ಮ ೬೦
ಕೆಂಚಮ್ಮ ೬೦