ಒಂದು ಗ್ರಾಮದಲ್ಲಿ ಅನೇಕ ವೈವಿದ್ಯಗಳನ್ನು ಕಾಣುತ್ತೇವೆ. ಹಲವಾರು ಭಿನ್ನ ಸಮುದಾಯಗಳು ಕೂಡಿ ಸಹಕಾರದ ಬದುಕನ್ನು ನಡೆಸುವುದು. ಒಂದಕ್ಕಿಂತ ಹೆಚ್ಚು ದೈವಗಳನ್ನು ಆರಾಧಿಸುವ ಸಂಪ್ರದಾಯವಿದ್ದರು ಪರಸ್ಪರ ಪೂರಕ ಹಾಗೂ ಹೊಂದಾಣಿಕೆಯಿಂದ ಹಬ್ಬ-ಜಾತ್ರೆ-ಉತ್ಸವ-ಹರಕೆ ಮತ್ತು ಇತರೆ ಆಚರಣೆಗಳನ್ನು ರೂಢಿಸಿಕೊಂಡಿರುವುದು “ಆಡು ಮುಟ್ಟದ ಸೊಪ್ಪಿಲ್ಲ ದೇವರಿಲ್ಲದ ಸ್ಥಳವಿಲ್ಲ” ಎಂಬುದು ಗ್ರಾಮೀಣರಲ್ಲಿ ರೂಢಿಯಲ್ಲಿರುವ ಒಂದು ಗಾದೆ ಮಾತು. ನಾಸ್ತಿಕರು ಈ ಮಾತನ್ನು ಒಪ್ಪದಿರಬಹುದು. ಆದರೆ ಆಸ್ತಿಕರು ಮಾತ್ರ ದೈವಗಳಲ್ಲಿ ಅಪಾರ ಶ್ರದ್ಧೆ ಮತ್ತು ಭಕ್ತಿಯನ್ನು ಹೊಂದಿದ್ದಾರಲ್ಲದೆ, ಏಕಕಾಲದಲ್ಲಿ ಹಲವಾರು ದೈವಗಳ ಆಚರಣೆ ಮಾಡುವುದನ್ನು ಕಾಣುತ್ತೇವೆ. ದೈವ ಅಥವಾ ದೇವರ ಕಲ್ಪನೆ ಬಗೆಗೆ ಇಂದಿಗೂ ಖಚಿತವಾದ ನಿರ್ಧಾರಗಳಿಲ್ಲ. ಆದಾಗ್ಯೂ ಜಗತ್ತಿನಾದ್ಯಂತ ಹತ್ತು ಹಲವಾರು ಧರ್ಮಗಳು ಮತ್ತು ಲಕ್ಷಾಂತರ ದೈವಗಳ  ಆರಾಧನೆ ನಿತ್ಯವು ನಡೆಯುತ್ತಿದೆ. ಕೋಟ್ಯಾನುಕೋಟಿ ಜನರು ವಾರ, ಅಮವಾಸೆ, ಹುಣ್ಣಿಮೆ, ಜಯಂತಿ, ಹಬ್ಬ, ಜಾತ್ರೆ, ಉತ್ಸವ, ತೇರು-ತೆಪ್ಪ, ಹರಕೆ ಎಂದು ನಿರಂತರವಾಗಿ ತಮ್ಮ ತಮ್ಮ ಗ್ರಾಮದ ದೈವಗಳ ಆಚರಣೆಯಲ್ಲಿ ತೊಡಗಿರುವುದುಂಟು. ಇದಕ್ಕೆ ಕೆರೆ ತೊಣ್ಣೂರು ಗ್ರಾಮವು ಹೊರತಾಗಿಲ್ಲ. ಇಂತಹ ನಂಬಿಕೆ ಮತ್ತು ಆಚರಣೆಗಳು ಕೇವಲ ಒಂದೆರಡು ವರ್ಷಗಳಲ್ಲಿ ರೂಢಿಗೆ ಬಂದವುಗಳಲ್ಲ. ಆಯಾ ಗ್ರಾಮಗಳು ಜನವಸತಿ ಮೂಲಕ ಅಸ್ತಿತ್ವವನ್ನು ಪಡೆದುಕೊಂಡ ಸಂದರ್ಭದಿಂದ ಆರಂಭಿಸಿ ತಲೆ-ತಲೆಮಾರಿನಿಂದಲೂ ಮುಂದುವರಿದುಕೊಂಡು ಬಂದಿವೆ.

ಪ್ರಸ್ತುತ ಲೇಖನವು ಕೆರೆ ತೊಣ್ಣೂರು ಗ್ರಾಮದ ದೈವಗಳ ಆಚರಣೆಯನ್ನು ಕುರಿತ ವಿಶ್ಲೇಷಣಾತ್ಮಕವಾದ ಆಧ್ಯಯನವಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ  ತಾಲೂಕಿನ ಕೆರೆ ತೊಣ್ಣೂರು ಐತಿಹಾಸಿಕ ಮಹತ್ವವುಳ್ಳ ಗ್ರಾಮವಾಗಿದೆ. ಆದ್ದರಿಂದಲೇ ಈ ಗ್ರಾಮದಲ್ಲಿ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಕಟ್ಟಲ್ಪಟ್ಟ ಶಿಷ್ಟದೈವಗಳ ಪುರಾತನವಾದ ವಿಶಾಲ ದೇವಾಲಯಗಳು ಮತ್ತು ಗ್ರಾಮದಲ್ಲಿನ ವಿವಿಧ ಸಮುದಾಯಗಳು ಸಾಮೂಹಿಕವಾಗಿ ಅಥವಾ ಪ್ರತ್ಯೇಕವಾಗಿ ಆಚರಣೆಗೈಯುವ ಪುರುಷ ಮತ್ತು ಸ್ತ್ರೀ ದೈವಗಳ ದೇವಾಲಯ ಅಥವಾ ಸ್ಥಳಗಳು ಇವೆ. ಪಟ್ಲಮ್ಮ (ಕುಂಬಿನಿದೇವಿ) ಬಿಸಿಲಮಾರಿ, ಕಾಳಮ್ಮ, ಗವಿರಂಗಪ್ಪ ಮತ್ತು ಮುನಿಯಪ್ಪ ದೈವಗಳು ಪ್ರಮುಖವಾದವುಗಳು.

ಗವಿರಂಗಪ್ಪ: ಗ್ರಾಮದ ಪಶ್ಚಿಮ ದಿಕ್ಕಿಗೆ ಒಂದು ಸಣ್ಣ ಗುಡ್ಡವಿದೆ. ಅದು ಕುರುಚಲು ಗಿಡಗಳಿಂದ ಕೂಡಿದೆ. ನಡುವೆ ಅಲ್ಲಲ್ಲಿ ಸಣ್ಣ ಮತ್ತು ದೊಡ್ಡ ಬಂಡೆಗಳಿದ್ದು, ದನ, ಕರು, ಆಡು, ಕುರಿಗಳನ್ನು ಮೇಯಿಸಲು ಸೂಕ್ತವಾದ ಪ್ರದೇಶವಾಗಿದೆ. ಇದೇ ಗುಡ್ಡದಲ್ಲಿ ಒಂದು ವಿಶಾಲವಾದ ಬಂಡೆಯಿದ್ದು ಅದರ ತುದಿಯು ಮೇಲ್ಚಾವಣಿಯಂತೆ ಚಾಚಿಕೊಂಡಿದೆ. ತಳದಲ್ಲಿ ಒಬ್ಬಿಬ್ಬರು ಕುಳಿತು ವಿರಮಿಸಲು ಅವಕಾಶವಿದೆ. ಬಂಡೆಯ ಪಕ್ಕದಲ್ಲಿ ಒಂದು ಅಸ್ವಾರದ ಮರವನ್ನು ನೆಡಲಾಗಿದೆ. ಇದನ್ನು ಕೊಂಡ (ಗುಡ್ಡ) ಅಸ್ವಾರ ಎಂದೂ ಕರೆಯುವರು. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳ ಮುಂದೆ ಈ ಮರವನ್ನು ಬೆಳೆಸುವುದು ಕಂಡುಬರುತ್ತದೆ. ಬಿಲ್ವ, ತುಳಸಿ ದಳದಂತೆ  ಅಸ್ವಾರದ ದಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಒಟ್ಟಾರೆ ಈ ತಾಣ ಧಣಿದವರಿಗೆ ಆಶ್ರಯ ನೀಡುವುದು. ಕೆರೆ ತೊಣ್ಣೂರು ಗ್ರಾಮದ ಜನರು ಈ ತಾಣವನ್ನು ‘ರಂಗಪ್ಪನ ಗವಿ’ ಎಂದು ಕರೆಯುವುದು ರೂಢಿಯಲ್ಲಿದೆ.  ಅಷ್ಟೆ ಅಲ್ಲದೆ ಈ ಸ್ಥಳದಲ್ಲಿ ಒಂದು ವಿಶೇಷ ಆಚರಣೆಯನ್ನು ನೆರವೇರಿಸುವುದುಂಟು. ಆ ಕಾರಣಕ್ಕಾಗಿ ಇದಕ್ಕೆ ಮಹತ್ವದ ಸ್ಥಾನವಿದೆ. ಈ ಪ್ರದೇಶಕ್ಕೆ ಗವಿರಂಗಪ್ಪ ಮತ್ತು ಗವೀರಪ್ಪ ಎಂದು ಕರೆಯುವುದೂ ವಾಡಿಕೆಯಲ್ಲಿದೆ.

ಆಚರಣೆ ಕ್ರಮ: ಪರಿಶಿಷ್ಟ ಜಾತಿ ಸಮುದಾಯವನ್ನು ಹೊರತುಪಡಿಸಿ ಉಳಿದ ಎಲ್ಲಾ ಕೋಮಿನವರು ಈ ಆಚರಣೆಗಳನ್ನು ನೆರವೇರಿಸುವರು. ತಮ್ಮ ತಮ್ಮ ಮನೆಗಳಲ್ಲಿ ಸಾಕಿದ ಹಸುವು ಕರುವಿಗೆ ಜನ್ಮ ನೀಡಿದಾಗ ಆ ಆಕಳ ಗಿಣ್ಣಾಲನ್ನು (ಮೊದಲ ದಿನದ ಹಾಲು) ಮೀಸಲಿಟ್ಟು ಮೂರು ಅಥವಾ ಐದನೆಯ ದಿನದಂದು ಅದರಿಂದ ಸಿದ್ಧಪಡಿಸಿದ ಗಿಣ್ಣು ಮತ್ತು ಮೊಸರನ್ನವನ್ನು ಒಯ್ದು ಗವಿರಂಗಪ್ಪನಿಗೆ ನೈವೈದ್ಯ ಮಾಡಿ ಪೂಜೆ ಸಲ್ಲಿಸುವರು. ಬಳಿಕ ಜನರಿಗೆಲ್ಲ ಪ್ರಸಾದವನ್ನು ಹಂಚುವರು. ಆ ದಿನ ರಾತ್ರಿ ನೆಂಟರಿಷ್ಟರನ್ನು ಮನೆಗೆ ಆಹ್ವಾನಿಸಿ ಗಿಣ್ಣೂಟ ಮಾಡಿಸುವ ಪದ್ಧತಿಯೂ ರೂಢಿಯಲ್ಲಿದೆ. ಈ ಆಚರಣೆಗೆ ವಾರದ ನಿರ್ಬಂಧಗಳಿರುವುದಿಲ್ಲ.

ಪ್ರಚಲಿತ ಐತಿಹ್ಯ:  ವಿಶಾಲವಾದ ಕೆರೆಯನ್ನು ಹೊಂದಿರುವ ಕೆರೆ ತೊಣ್ಣೂರು ಕೃಷಿಗೆ ಉತ್ತಮವಾದ ಪ್ರದೇಶವಾಗಿದೆ. ಇಲ್ಲಿ ಕೃಷಿಯೆ ಪ್ರಧಾನವಾದ ಕಸುಬಾಗಿತ್ತು. ಪಶುಪಾಲನೆಯು ಇವರಿಗೆ ಉಪಕಸುಬಾಗಿ ಹಾಲು, ಮೊಸರು, ಬೆಣ್ಣೆ, ತುಪ್ಪದ ಅಗತ್ಯವನ್ನು ಪೂರೈಸುತ್ತಿತ್ತು. ಹಿಂದೆ ಗ್ರಾಮದ ಜಾನುವಾರುಗಳನ್ನು ಮೇಯಿಸುವ ಸಲುವಾಗಿ ಓರ್ವ ವ್ಯಕ್ತಿಯನ್ನು ನಿಯೋಜಿಸಿಕೊಳ್ಳಲಾಗುತ್ತಿತ್ತು. ಅದಕ್ಕೆ ಪ್ರತಿಯಾಗಿ ಪ್ರತಿ ಕುಟುಂಬದಿಂದ ವರ್ಷಕ್ಕೊಮ್ಮೆ ದವಸಧಾನ್ಯವನ್ನು ಪಡೆದುಕೊಳ್ಳುತ್ತಿದ್ದನು. ಇದೇ ಪ್ರಕಾರವಾಗಿ ರಂಗಪ್ಪ ಎಂಬ ವ್ಯಕ್ತಿಯು ಕೆರೆ ತೊಣ್ಣೂರು ಗ್ರಾಮದ ಪಶುಪಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು. ಅಷ್ಟೇ ಅಲ್ಲ ಅಪಾರ ಶ್ರದ್ಧೆಯಿಂದ ಪಶುಗಳನ್ನು ಕಾಪಾಡುವ ಹೃದಯವಂತನಾಗಿದ್ದನು. ತಾನು ಕೆಲಸದಲ್ಲಿ ನಿರತನಾಗಿರುವಾಗ ಯಾವುದೇ ಆಕಳು ಕರುವಿಗೆ ಜನ್ಮ ನೀಡಿದಾಗ ಅದನ್ನು ಜೋಪಾನ ಮಾಡಿ ಮನೆಗೆ ತಲುಪಿಸುತ್ತಿದ್ದನು.

ಪಶುಗಳ ಲಾಲನೆ ಪಾಲನೆಗಾಗಿ ತನ್ನನ್ನೆ ಮುಡಿಪಾಗಿಸಿದ್ದ ರಂಗಪ್ಪನನ್ನು ಇಡೀ ಗ್ರಾಮದ  ಜನರೆಲ್ಲರು ಗೌರವಿಸುತ್ತಿದ್ದರು. ಪಶುಗಳನ್ನು ಮೇಯಲು ಬಿಟ್ಟು ತಾನು ಗುಡ್ಡದಲ್ಲಿದ್ದ (ಗವಿಯ) ಬಂಡೆಯ ಕೆಳಗಡೆ ವಿಶ್ರಾಂತಿ ಪಡೆಯುತ್ತಿದ್ದನು. ಹಾಗೆಯೇ ಒಂದು ದಿನ ಕರ್ತವ್ಯ ನಿರತನಾಗಿದ್ದ ರಂಗಪ್ಪ ಸ್ಥಳದಲ್ಲಿ ವಿರಮಿಸುತ್ತಿದ್ದಾಗ ಕೊನೆಯುಸಿರೆಳೆದ ಕಾರಣ ಆ ಗವಿಯನ್ನು ಆತನ ಹೆಸರಿನಿಂದಲೇ ಕರೆಯಲು ಆರಂಭಿಸಿದ್ದಾರೆ. ‘ರಂಗಪ್ಪನ ಗವಿ’ ಎಂದು ಗ್ರಾಮದವರಿಗೆಲ್ಲಾ ಪರಿಚಿತವಾದ ಸ್ಥಳವಾಗಿದೆ. ಕೇವಲ ಆ ಪ್ರದೇಶಕ್ಕೆ ರಂಗಪ್ಪನ ಹೆಸರಿನಿಂದ ಕರೆಯುವುದು ಮಾತ್ರವಲ್ಲ ಗೌರವ ಸೂಚಕವಾಗಿ ಆಚರಣೆಯನ್ನು ನೆರವೇರಿಸುವುದುಂಟು. ಈ ಕುರಿತು ಆಚರಣೆ ಕ್ರಮ ಎಂಬ ಶೀರ್ಷಿಕೆಯಲ್ಲಿ ಚರ್ಚಿಸಲಾಗಿದೆ.

ಇಲ್ಲಿ ರಂಗಪ್ಪನು ಮಾಡಿದ ಪ್ರಾಮಾಣಿಕ ಸೇವೆಯ ಫಲವಾಗಿ ಆತ ದೈವತ್ವವನ್ನು ಪಡೆದುಕೊಂಡು ಕೆರೆ ತೊಣ್ಣೂರಿನ ಜನರಿಂದ ವಿಶೇಷ ರೀತಿಯಲ್ಲಿ ಆರಾಧನೆಗೆ ಬಳಗಾಗಿರುವುದು ಮಹತ್ವದ ಸಂಗತಿಯಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಜನರು ಮೌಢ್ಯವಂತರು, ನಿರ್ಜೀವ ವಸ್ತುಗಳನ್ನು ದೇವರೆಂದು ಆರಾಧಿಸುತ್ತಾರೆ ಎಂಬ ತಿಳಿವಳಿಕೆ ಎಲ್ಲರಲ್ಲೂ ಇದೆ. ಆದರೆ ಪಶುಪಾಲಕ ಕೆಲಸದ ಮೂಲಕ ಇಡೀ ಗ್ರಾಮದ ಜನತೆ (ಪರಿಶಿಷ್ಟ ಜಾತಿಯವರನ್ನು ಹೊರತುಪಡಿಸಿ)ಯ ಸೇವೆಗೈದ ರಂಗಪ್ಪ ಕೇವಲ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದನು. ಗ್ರಾಮದ ಪ್ರತಿ ಮನೆಯ ಬೆಳಕಾಗಿದ್ದನು. ಆ ಕಾರಣಕ್ಕಾಗಿಯೇ ರಂಗಪ್ಪನನ್ನು ಶಾಶ್ವತವಾಗಿ ಸ್ಮರಿಸಿಕೊಳ್ಳುವ ಸಲುವಾಗಿ ಅತ್ಯಂತ ಸೂಕ್ತವಾದ ಆಚರಣೆಯನ್ನು ರೂಢಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೆರೆ ತೊಣ್ಣೂರು ಗ್ರಾಮದ ಜನರು ತಮ್ಮ ಪೂರ್ವಜರು  ನಿರ್ವಹಿಸುತ್ತಿದ್ದ ಕಸುಬನ್ನು (ಪಶುಪಾಲನೆ) ಮುಂದುವರಿಸುವುದು ಮಾತ್ರವಲ್ಲದೇ ಗೌರವವನ್ನು ಇಟ್ಟುಕೊಂಡಿರುವುದು ವ್ಯಕ್ತವಾಗುತ್ತದೆ. ಓರ್ವ ವ್ಯಕ್ತಿಯು ಮಾಡಿದ ಉಪಕಾರಕ್ಕೆ ಸಲ್ಲಬೇಕಾದ ಪ್ರತ್ಯುಪಕಾರವೆಂದರೆ, ಆತನಿಗೆ ಇನ್ನೊಂದು ಉಪಕಾರ ಅಥವಾ ಸಹಾಯ ಮಾಡುವುದಲ್ಲ. ಉಪಕಾರಕ್ಕೆ ಪ್ರತ್ಯುಪಕಾರವೆಂದರೆ ಅದು ಕೇವಲ  ನೆನೆಕೆ ಮಾತ್ರ ಈ ಸತ್ಯವನ್ನು ಅರಿತ ಸದರಿ ಗ್ರಾಮದ ಜನರು ತಮ್ಮ ಮನೆಯಲ್ಲಿ ಆಕಳು ಕರುವಿಗೆ ಜನ್ಮ ಕೊಟ್ಟಾಗ ರಂಗಪ್ಪನನ್ನು ನೆನೆಯುವುದು ಆ ನಿಮಿತ್ತ ಸಾಂಕೇತಿಕವಾಗಿ ಗಿಣ್ಣು, ಮೊಸರನ್ನ ನೈವೈದ್ಯ ಮಾಡುವುದನ್ನು ನಾವು ಕಾಣುತ್ತೇವೆ.

ಕಾಳಮ್ಮ:  ಕಾಳಮ್ಮ ಈ ಗ್ರಾಮದಲ್ಲಿ ಆಚರಣೆಗೆ ಬಳಪಡುವ ಮತ್ತೊಂದು ದೇವತೆ. ತೊಣ್ಣೂರು ಕಾಳಮ್ಮ ಎಂಬುದು ಈ ದೇವತೆಗಿರುವ ಇನ್ನೊಂದು ಹೆಸರು. ಮೂಲದಲ್ಲಿ ಇದೊಂದು ಸಾಮಾನ್ಯ ಹುತ್ತ. ವರ್ಷಕ್ಕೊಮ್ಮೆ ಷಷ್ಠಿಯ ಸಂದರ್ಭದಲ್ಲಿ ಹುತ್ತವನ್ನು ಪೂಜಿಸುವುದು ಹಿಂದೂಗಳಲ್ಲಿರುವ ಒಂದು ಸಂಪ್ರದಾಯ. ವಾರ್ಷಿಕ ಪೂಜೆಯು ಮುಂದುವರಿದು ವಾರದ ಪೂಜೆಯಾಗಿ ಅದಕ್ಕೆ ದೇವಸ್ಥಾನ ನಿರ್ಮಾಣ ಮಾಡಿರುವುದು ನಿರೀಕ್ಷಿತವಾದುದು. ಅಂತಿಮವಾಗಿ ಆ ದೇವಸ್ಥಾನಕ್ಕೆ ಪೂಜಾರಿಯೊಬ್ಬನ ಆಗಮನವಾಗಿದೆ. ಉಳಿದಂತೆ ಗ್ರಾಮ ದೇವತೆಗೆ ಸಲ್ಲುವಂತೆ ಕಾಳಮ್ಮ ದೇವತೆಗೂ ಕೆಲವು ಆಚರಣೆಗಳನ್ನು ರೂಢಿಸಿಕೊಂಡ ಕಾರಣ ಗ್ರಾಮದ ಎಲ್ಲಾ ಜನರು ವಾರದಲ್ಲಿ ಅಥವಾ ತಮ್ಮ ಹರಕೆಯನ್ನು ಒಪ್ಪಿಸುವುದುಂಟು. ಹೀಗಾಗಿ ಒಂದು ಕಾಲದಲ್ಲಿ  ಕೇವಲ ಹುತ್ತವಾಗಿ ಪೂಜಿಸಲ್ಪಡುತ್ತಿದ್ದು, ಕ್ರಮೇಣ ದೇವಸ್ಥಾನ ನಿರ್ಮಾಣಗೊಂಡು ಗ್ರಾಮದ ಜನರೆಲ್ಲರೂ ತಮ್ಮ ಕಷ್ಟ ಸುಖಗಳಿಗೆ ಆಶ್ರಯಿಸುವ ಸ್ಥಿತಿಯನ್ನು ಪಡೆದು ಕಾಳಮ್ಮ ಎಂಬ ಹೆಸರನ್ನು ಹೊಂದಿದ್ದು ಹಿಂದೂ ಧರ್ಮದಲ್ಲಿ ಸೋಜಿಗದ ಸಂಗತಿಯೇನಲ್ಲ.

ಕಾಳಮ್ಮ ದೇವತೆಯನ್ನು ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಶ್ರೀಮತಿ ಜಯಮ್ಮ ಎಂಬ ಓರ್ವ ಮಹಿಳೆ ಕಳೆದ ೨೭ ವರ್ಷಗಳಿಂದ ಪೂಜಾರಿಣಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ವಾರದಲ್ಲಿ ಎರಡು ದಿನ ಮಂಗಳವಾರ ಮತ್ತು ಶುಕ್ರವಾರಗಳಂದು ಉಪವಾಸವಿದ್ದು ಪೂಜಿಸುವುದು ಮುಂದುವರಿದಿದೆ. ದೇವತೆ ಮೈಮೇಲೆ ಬರುತ್ತಾಳೆ ಎಂದು ಸಾರ್ವಜನಿಕರು ಹೇಳುತ್ತಾರೆ. ಆದರೆ ಪ್ರಸ್ತುತ ಕಾಳಮ್ಮದೇವತೆಗೆ ಯಾವುದೇ ಹಬ್ಬದ ಆಚರಣೆ ಇರುವುದಿಲ್ಲ. ಮೊದಲೇ ಹೇಳಿರುವಂತೆ ಹರಕೆ ಒಪ್ಪಿಸುವುದುಂಟು ನಾಗ ದೋಷಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಅಮ್ಮನಿಗೆ ಬೆಳ್ಳಿಯ ಆಭರಣಗಳು ಮತ್ತು ಸೀರೆಯನ್ನು ಒಪ್ಪಿಸುವುದು ಭಕ್ತರಲ್ಲಿ ರೂಢಿಯಲ್ಲಿರುವ ಒಂದು ಪದ್ಧತಿಯಾಗಿದೆ.

ಕಾಳಮ್ಮನ ದೇವಸ್ಥಾನದ ಮುಂದೆ ರಂಗದ ಕಲ್ಲಿದ್ದು ರಂಗದ ಕುಣಿತಕ್ಕಾಗಿ ಅದನ್ನು ಪ್ರತಿಷ್ಠಾಪಿಸಿದ್ದು  ಎಂಬುದನ್ನು ಗಮನಿಸಿದಾಗ  ಹಿಂದೆ ಇಲ್ಲಿ ದೇವತೆ ಹಬ್ಬ ಆಚರಣೆ ಯಲ್ಲಿದ್ದಿರಬಹುದು ಎಂದು ಊಹಿಸಲು ಸಾಧ್ಯವಿದೆ. ಕಾಲಾನಂತರದಲ್ಲಿ ಬೇರೆ ಪ್ರಭಾವಿ ದೇವರು ಮತ್ತು ದೇವಸ್ಥಾನಗಳು ನಿರ್ಮಾಣವಾದ ಪ್ರಯುಕ್ತ ಈ ದೇವತೆಯು ನೈಪಥ್ಯಕ್ಕೆ ಸರಿದಿದೆ.

ಹಿಂದೂ ಧರ್ಮದಲ್ಲಿನ ಸಾಧ್ಯತೆಗಳೆಂದರೆ, ರಾತ್ರೋರಾತ್ರಿ ಒಂದು ಪ್ರದೇಶ, ಒಬ್ಬ ವ್ಯಕ್ತಿ, ಒಂದು ವಸ್ತು ಅಥವಾ ಒಂದು ಮರ ಏನಾದರು ಒಂದು ಪವಾಡ ಸದೃಶ ಘಟನೆಗೆ ಕಾರಣವಾಗಿದೆ ಎಂಬ ಸುದ್ದಿಯನ್ನು ಕೇಳಿದರಷ್ಟೆ ಸಾಕು ಅದು ದೈವ ಸಮಾನ ಎಂಬ ಕಲ್ಪನೆಯಿಂದ ಪೂಜೆಗೆ ಅರ್ಹವಾಗಿಬಿಡುವ ಸಾಧ್ಯತೆ ಇದೆ. ಕೆಲವೊಮ್ಮೆ ಅತಿ ಅಪಾಯಕಾರಿ ಯಾದ ಯಾವುದನ್ನೇ ಕಂಡರೂ ಪ್ರಾಣ ಭಯದಿಂದ ತನ್ನ ಉಳಿವಿಗಾಗಿ ಭಯದಿಂದ ಧೀನನಾಗಿ ವರ್ತಿಸುತ್ತಾನೆ. ವಿಷಜಂತುವಾದ ನಾಗರಹಾವು ಅದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಅದು ವಾಸಿಸುವ ಹುತ್ತ ಪವಿತ್ರಸ್ಥಾನವಾಗಿ ಪೂಜಿಸುವುದನ್ನು ರೂಢಿಸಿಕೊಂಡಿರುವುದು ಕ್ರಮೇಣ ಅದಕ್ಕೊಂದು ದೇವಸ್ಥಾನ ನಿರ್ಮಾಣವಾಗಿರುವುದು ಬಹಳ ಸ್ಪಷ್ಟವಾಗಿ ಗೋಚರವಾಗುತ್ತದೆ. ಆ ಹಿನ್ನೆಲೆಯಲ್ಲಿ ಕಾಳಮ್ಮ ದೇವತೆ ಅಸ್ತಿತ್ವಕ್ಕೆ ಬಂದುದಾಗಿದೆ. ಕಾಳ ಸರ್ಪ ಎಂಬುದು ನಾಗರಹಾವುಗಳಲ್ಲಿ ಬಹಳ ಅಪಾಯಕಾರಿಯಾದುದು. ಗಿಡ ಮರ, ಬೆಟ್ಟ, ಗುಡ್ಡ, ಹಳ್ಳ ಕೊಳ್ಳ, ನದಿ ಸರೋವರ ಪ್ರಕೃತಿಯನ್ನೇ ಹೆಣ್ಣೆಂದು ಕರೆಯುವುದು ಮಾನವನ ಸಹಜ ಗುಣವಾಗಿದೆ. ಇಲ್ಲಿಯು ಸಹ ಕಾಳ ಸರ್ಪನ ಇರುವಿಕೆಗಾಗಿ ಹುತ್ತದ ಪೂಜೆ ಮುಂದೆ ಕಾಳಮ್ಮ ದೇವತೆಯಾಗಿರುವುದೆಂದು ಊಹಿಸಲು ಸಾಧ್ಯವಿದೆ.

ವಿಶ್ವಕರ್ಮ ಕುಟುಂಬವು ಈ ದೇವತೆಯ ಪೂಜಾರಿಗಳಾಗಿರುವುದನ್ನು ವಿವೇಚನೆಗೆ ಒಳಪಡಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಸಾಮಾನ್ಯವಾಗಿ ಊರಿನ ಹೊರಭಾಗದಲ್ಲಿ ವಿಶ್ವಕರ್ಮ ಪಂಗಡವಾದ ಕಮ್ಮಾರ ಅಥವಾ ಬಡಗಿ ತಮ್ಮ ಕಸುಬಿಗೆ ಆಯ್ಕೆ ಮಾಡಿಕೊಳ್ಳು ತ್ತಿದ್ದ ಪ್ರದೇಶ. ಪ್ರತಿನಿತ್ಯ ಕೆಲಸ ಆರಂಭಿಸುವ ಮೊದಲು ಅವರ ಕುಲದೇವತೆಯಾದ ಕಾಳಮ್ಮ ದೇವತೆಯನ್ನು ನೆನೆಯುವುದು ವಾಡಿಕೆ. ಹತ್ತಿರದಲ್ಲೇ ಇದ್ದ ಹುತ್ತವೇ ಕಾಳಮ್ಮ ದೇವತೆಯ ಸ್ಥಾನವನ್ನು ಪಡೆದುಕೊಂಡು ಮುಂದೆ ಗ್ರಾಮಕ್ಕೆ ದೇವತೆಯಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಮಾನುಜಾಚಾರ್ಯರ ಆಗಮನ, ರಾಜಮಹಾರಾಜರ ಆಳ್ವಿಕೆ, ಶಿಷ್ಟದೈವಗಳ ಭದ್ರತೆಯಲ್ಲಿ ಸಾಮಾನ್ಯ ದೇವತೆ ಕಾಳಮ್ಮ ಗೌಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಬಿಸಿಲಮಾರಮ್ಮ: ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲೆಲ್ಲಾ ಮಾರಮ್ಮನ ಉಪಾಸನೆಯನ್ನು ಕಾಣುತ್ತೇವೆ. ಆದರೆ ಪ್ರತಿ ಗ್ರಾಮದವರು ಮಾರಮ್ಮನನ್ನು ಸ್ಥಳೀಕರಿಸಿಕೊಳ್ಳುವುದು ಕಂಡುಬರುತ್ತದೆ. ಉದಾಹರಣೆಗೆ ಮದ್ದೂರು ಮಾರಮ್ಮ, ಕುಂತೂರು ಮಾರಮ್ಮ, ಕೆಲವು ವಿಶೇಷಣಗಳು ಮಾರಮ್ಮನಿಗೆ ಸೇರಿಕೊಂಡಿವೆ. ಕೋಣನ ಮಾರಮ್ಮ, ಒರಳುಕಲ್ಲು ಮಾರಮ್ಮ, ಗುಂಡುಕಲ್ಲು ಮಾರಮ್ಮ ಇತ್ಯಾದಿ. ಗ್ರಾಮದ ಗಡಿಯನ್ನು ಕಾಯುವ ಮಾರಮ್ಮನಿಗೆ ದಂಡು ಮಾರಮ್ಮ, ದಂಡಿನ ಮಾರಮ್ಮ ಎಂಬ ಹೆಸರಿದ್ದರೆ ಸದಾ ಬಿಸಿಲಿನಲ್ಲಿ ಇರುವ ಮಾರಮ್ಮನಿಗೆ ಬಿಸಿಲಮಾರಮ್ಮ ಎಂಬುದಾಗಿ ಕರೆಯುವರು. ಕೆರೆ ತೊಣ್ಣೂರು ಗ್ರಾಮದಲ್ಲೂ ಸಹ ಬಿಸಿಲಮಾರಮ್ಮ ದೇವಸ್ಥಾನವಿದೆ. ಮೊದಲೇ ಹೇಳಿದಂತೆ ಇದಕ್ಕೆ ಯಾವುದೇ ಕಟ್ಟಡ ಅಥವಾ ದೇವಸ್ಥಾನ ಇರುವುದಿಲ್ಲ. ಒಂದು ಸಣ್ಣ ಕಟ್ಟೆಯ ಮೇಲೆ ಕಲ್ಲನ್ನು ಪ್ರತಿಷ್ಟಾಪಿಸಿದ್ದು ಅದರ ಸುತ್ತಲು ೮-೧೦ ಅಡಿಯ ಅಂತರದಲ್ಲಿ ಐದು ಅಡಿ ಎತ್ತರದ ಗೋಡೆಯನ್ನು ನಿರ್ಮಿಸಿದ್ದಾರೆ. ದೀಪಗಳನ್ನು ಹಚ್ಚಲು ತ್ರಿಕೋನಾಕಾರದ ಗೂಡುಗಳನ್ನು ಮಾಡಿರುತ್ತಾರೆ. ಒಳಗೆ ಪ್ರವೇಶಿಸಲು ಪೂರ್ವ ಮುಖದಲ್ಲಿ ದ್ವಾರವನ್ನು ಬಿಡಲಾಗಿದೆ.

ಬೇರೆಲ್ಲಾ ಮಾರಮ್ಮದೇವತೆಗಿಂತ ಬಿಸಿಲಮಾರಮ್ಮನ ಉಪಾಸನೆ ಬಹಳ ವಿಶಿಷ್ಟವಾದುದು. ಮನೆಯಲ್ಲಿ ಯಾರಿಗಾದರೂ ಅಮ್ಮ (chicken pox) ಕಾಣಿಸಿಕೊಂಡರೆ ಮಂಗಳವಾರ ಮತ್ತು ಶುಕ್ರವಾರಗಳಂದು ಅಮ್ಮನ ಕಲ್ಲಿಗೆ ಬೇವಿನ ತಪ್ಪಲು ಇಟ್ಟು ನೀರು ಹಾಕಿ ಪೂಜಿಸುವರು. ಅದೇ ಬೇವಿನ ತಪ್ಪಲನ್ನು ಮನೆಗೆ ಒಯ್ದು ಅರೆದು ಅರಿಶಿನ ಮಿಶ್ರಣ ಮಾಡಿ ಮೈಗೆಲ್ಲ ಹಚ್ಚುವರು. ಐದನೇ ದಿನದಂದು ಆತ/ಆಕೆಗೆ ಸ್ನಾನ ಮಾಡಿಸಿ ಬಿಸಿಲ ಮಾರಮ್ಮನ ದೇವಸ್ಥಾನಕ್ಕೆ ಕರೆದೊಯ್ಯುವರು. ಅಂದು ದೇವತೆಗೆ ಎಳೆನೀರು ಮತ್ತು ಮೊಸರನ್ನದ ನೈವೈದ್ಯ ಮಾಡಿದ ಬಳಿಕ ಎಳೆನೀರನ್ನು ಕೈಯಲ್ಲಿ ತೆಗೆದುಕೊಂಡು ಆ ವ್ಯಕ್ತಿಯ ಮುಖಕ್ಕೆ ಎರಚುವರು. ಇದರಿಂದ ಅಮ್ಮ ಹೊರಟು ಹೋಗುತ್ತದೆ ಎಂದು ನಂಬುತ್ತಾರೆ. ಈ ಮಾದರಿ  ಪೂಜೆಯು ಕೇವಲ  ಅಮ್ಮ ಕಾಣಿಸಿಕೊಂಡಾಗ ಆ ಕುಟುಂಬದವರು ಮಾತ್ರ ನೆರವೇರಿಸುವ ಸಾಂದರ್ಭಿಕ ಪೂಜೆಯಾಗಿರುತ್ತದೆ. ಇದಲ್ಲದೆ ಅಮ್ಮನಿಗೆ ವರ್ಷದಲ್ಲಿ ಒಮ್ಮೆ ವಿಶೇಷ ಪೂಜೆಯು ಸಲ್ಲುತ್ತದೆ.

ವಿಶೇಷ ಪೂಜೆ: ವರ್ಷದಲ್ಲಿ ಒಮ್ಮೆ ಅಂದರೆ ಮಾರ್ಚ್ ತಿಂಗಳಿನಲ್ಲಿ ತಂಬಿಟ್ಟಿನ ಆರತಿ ಮಾಡುವ ಪದ್ಧತಿಯಿದೆ. ಹಾಗೆಯೇ ಸುಗ್ಗಿ ಕಾಲದಲ್ಲಿ ಅವರೆಕಾಳು ಕಡುಬು, ಬೇಯಿಸಿದ ಗೆಣಸು ಮತ್ತು ಮೊಸರನ್ನದ ನೈವೇದ್ಯ ಮಾಡುವುದುಂಟು. ಮತ್ತೊಂದು ಗ್ರಾಮದೇವತೆಯಾದ ಪಟ್ಲಮ್ಮನ ಹಬ್ಬದ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಬಿಸಿಲಮಾರಮ್ಮನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಬಾಯಿಗೆ ಬೀಗ ಹಾಕಿಸಿಕೊಂಡು ಹೋಗುವ ನಿಯಮವಿದೆ.

ಅಪರೂಪದ ವಿಶೇಷ ಪೂಜೆ: ಇಂಥಹ ಪೂಜೆಗಳು ಬಹಳ ಅಪರೂಪದ್ದು. ಅದು ಕೇವಲ ಜನರ ಬಾಯಿಂದ ಬಾಯಿಗೆ ಸುದ್ದಿಯಾಗಿ “ಜನ ಮರುಳೋ ಜಾತ್ರೆ ಮರುಳೋ” ಎಂಬ ಗಾದೆಯಂತೆ ಪ್ರತಿಯೊಬ್ಬರು ಅದರಲ್ಲಿ ಆಸಕ್ತಿವಹಿಸುತ್ತಾರೆ. ಅಲ್ಲದೆ ಆಚರಣೆಗೂ ತರುತ್ತಾರೆ. ಪ್ರಸ್ತುತ ಸಂದರ್ಭದಲ್ಲಿ ಅಂಥದ್ದೇ ಒಂದು ಅಪರೂಪದ ಆಚರಣೆಯು ಬಿಸಿಲ ಮಾರಮ್ಮನಿಗೆ ನೆರವೇರಿತು. ಆ ಕುರಿತ  ವರದಿಯನ್ನು ಇಲ್ಲಿ ದಾಖಲಿಸಲಾಗಿದೆ. “ಗಂಡು ಮಕ್ಕಳನ್ನು ಉಳ್ಳವರು ಅವರ ಆರೋಗ್ಯ ಮತ್ತು ಆಯುಷ್ಯದ ವೃದ್ದಿಗಾಗಿ ಮಾರಮ್ಮನಿಗೆ ವಿಶೇಷವಾಗಿ ನೈವೇದ್ಯ ಮಾಡಿಸಬೇಕು” ಎಂಬ ಸುದ್ದಿಯನ್ನು ಆಧರಿಸಿ ಮಾರಮ್ಮನಿಗೆ ಮಂಗಳವಾರ ಮತ್ತು ಶುಕ್ರವಾರಗಳಂದು ಆಯಾ ಸಮುದಾಯಗಳ ಅಥವಾ ಭಕ್ತರ ಆಹಾರ ಪದ್ಧತಿಗೆ ಅನುಸಾರವಾಗಿ ನೈವೇದ್ಯವನ್ನು ನೆರವೇರಿಸಿದರು. ಎಳನೀರು, ಮೊಸರನ್ನ, ಕೋಳಿ, ಹಣ್ಣು-ಹಂಪಲು ನೈವೇದ್ಯದಲ್ಲಿ ಬಳಸಲಾದ ಪದಾರ್ಥಗಳು. ಇದು ಆಕಸ್ಮಿಕವಾಗಿ ನಡೆದ ವಿಶೇಷ ಪೂಜೆಯೇ ಹೊರತು ಯಾವಾಗಲೂ ನೆರವೇರುವಂಥದ್ದಲ್ಲ.

ಗ್ರಾಮೀಣ ಜನರಲ್ಲಿರುವ ಅನುಭವವು ಆಧುನಿಕ ವಿಜ್ಞಾನಕ್ಕಿಂತ ಮಿಗಿಲಾದುದು. ಏಕೆಂದರೆ, ಅವರು ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುವಾಗ ಕೇವಲ ದೇಹವನ್ನು ಮಾತ್ರ ಪರಿಗಣಿಸುತ್ತಿರಲಿಲ್ಲ. ಅದರೊಂದಿಗೆ ಮನಸ್ಸು ಇದೆ ಅದಕ್ಕು ಸೂಕ್ತವಾದ ಚಿಕಿತ್ಸೆ ಬೇಕು ಎಂಬ ಮನಶಾಸ್ತ್ರ ಅವರಿಗೆ ತಿಳಿದಿತ್ತು. ಆದ್ದರಿಂದಲೇ ಇಂದಿಗೂ ಅವರಲ್ಲಿ ಯಾವುದೇ ರೋಗಕ್ಕೆ ಎರಡು ರೀತಿಯ ಚಿಕಿತ್ಸೆ ರೂಢಿಯಲ್ಲಿದೆ. ಅದಕ್ಕೆ ಪೂರಕವಾದುದೇ ಈ ಬಿಸಿಲಮಾರಮ್ಮನ ಆರಾಧನೆ. ಸಾಮಾನ್ಯವಾಗಿ ಅಮ್ಮ ಕಾಣಿಸಿಕೊಳ್ಳುವುದು ದೇಹದಲ್ಲಿ ಅತಿಯಾಗಿ ಉತ್ಪತ್ತಿಯಾದ ಉಷ್ಣವನ್ನು ಅನಿವಾರ್ಯವಾಗಿ ಹೊರಹಾಕುವಾಗ ಅದು ಒಂದೇ ಗುಳ್ಳೆಯ ರೂಪದಲ್ಲಿ ಅಥವಾ ದೇಹದಲ್ಲೆಲ್ಲಾ ಗುಳ್ಳೆಗಳಾಗಿ ಕಾಣಿಸಿಕೊಳ್ಳುತ್ತದೆ ಎಂದು ನಂಬಿದ್ದಾರೆ. ಅದಕ್ಕಾಗಿ ಮಾರಮ್ಮನ ದೇವಸ್ಥಾನಕ್ಕೆ ಹೋಗುವುದು ಬೇವಿನ ತಪ್ಪಲು ತಂದು ಅರೆದು ಅರಿಶಿನ ಬೆರಸಿ ಮೈಗೆಲ್ಲಾ ಹಚ್ಚುವುದುಂಟು. ಐದು ದಿನಗಳ ಬಳಿಕ ಪುನಃ ದೇವಸ್ಥಾನಕ್ಕೆ ಹೋಗುವುದು. ಒಟ್ಟನಲ್ಲಿ ಶುದ್ಧವಾಗಿರಬೇಕು. ಗಾಯ ಉಲ್ಬಣ ಆಗದಂತೆ ತಡೆಯಲು ಬೇವು ಅರಿಶಿನ ಬಳಸಬೇಕು ಎಂಬುದನ್ನು ಈ ದೇವತೆಯನ್ನು ಪೂಜಿಸುವ ನೆಪದಲ್ಲಿ ಪಾಲಿಸುತ್ತಾರೆ.

ವೈಜ್ಞಾನಿಕವಾಗಿ ಅಮ್ಮ ಕಾಣಿಸಿಕೊಳ್ಳುವುದು ವೈರಲ್ ಇನ್‌ಫೆಕ್ಷನ್‌ನಿಂದ ಮಾತ್ರ. ಇದು ಗುಣವಾಗಲು ಕನಿಷ್ಟ ಏಳು ದಿನಗಳು ಬೇಕು. ಅದಕ್ಕಾಗಿ ಸ್ವಚ್ಚತೆಯನ್ನು ಕಾಪಾಡುವು ದಲ್ಲದೆ ರೋಗಿಯನ್ನು ಕೊಠಡಿಯ ಒಳಗೆ ಇರಿಸುವುದು ಅಗತ್ಯ, ಕಾರಣ ರೋಗ ಅನ್ಯರಿಗೂ ಹರಡಬಾರದು ಎಂಬ ಉದ್ದೇಶ. ಬೇವು ಆಂಟಿ ಸೆಪ್ಟಿಕ್ ಗುಣವನ್ನು ಹೊಂದಿದೆ. ಒಟ್ಟಾರೆ ರೋಗ ವಾಸಿಯಾಗಲೂ ಬೇವಿನ ತಪ್ಪಲು, ಅರಿಶಿನದ ಬಳಕೆಯು ಇದೆ. ಸ್ವಚ್ಚತೆಯನ್ನು ಕಡ್ಡಾಯವಾಗಿ ಪಾಲಿಸಲು ದೇವತೆಯ  ಭಯವನ್ನು ಇಟ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯವಾದ ಅಂಶವೆಂದರೆ, ಬಿಸಿಲ ಮಾರಮ್ಮನ ಕಟ್ಟೆ ಅಥವಾ ದೇವಸ್ಥಾನಗಳು ಒಂದು ಬೇವಿನ ಮರದ ಆಶ್ರಯದಲ್ಲೇ ಇರುತ್ತದೆ. ಅಲ್ಲದೆ ಪೂಜೆ ಮಾಡಿಕೊಡಲು ಪೂಜಾರಿಯ ಮಧ್ಯಸ್ಥಿಕೆ ಇರುವುದಿಲ್ಲ. ನೇರವಾಗಿ ರೋಗಿಯ ಕುಟುಂಬದವರೇ ಯಾವ ಅಡೆ ತಡೆಯು, ಸುಲಿಗೆಯು ಇಲ್ಲದೇ ಪೂಜಿಸಿಕೊಂಡು ಹೋಗಲು ವ್ಯವಸ್ಥೆಗೊಳಿಸಿರುವುದು ಜನಪದರ  ದೂರದೃಷ್ಟಿ, ಸೂಕ್ಷ್ಮ ಪ್ರಜ್ಞೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಅಮ್ಮ ಬರುವುದು ಕೆಳವರ್ಗದವರು ಹಾಗೂ ಸ್ವಚ್ಚತೆಯ ಕೊರತೆಯಿಂದ ಎಂದು ತಿಳಿಯುವುದಾದರೆ, ಇಲ್ಲಿ ಉನ್ನತ ವರ್ಗದ ದೇವಸ್ಥಾನ ಮತ್ತು ಪೂಜಾರಿಗಳು ಭಾಗಿಯಾಗುವುದನ್ನು ಉದ್ದೇಶ ಪೂರ್ವಕವಾಗಿ ಸ್ವಯಂ ನಿಯಂತ್ರಿಸಿರುವ ಸಾಧ್ಯತೆಯೂ ಇಲ್ಲದಿಲ್ಲ.

ಪಟ್ಟಲ್ಲದಮ್ಮ ಅಥವ ಪಟ್ಲಮ್ಮ ದೇವತೆ: ಕುಂಬಳದೇವಿ, ನಿಕುಂಭಿನಿ ದೇವಿ ಎಂಬುದು ಸಹ ಈ ದೇವತೆಯ ಪರ್ಯಾಯ ಹೆಸರುಗಳು. ಈ ದೇವತೆಯ ದೇವಸ್ಥಾನವು ತೊಣ್ಣೂರು ಗ್ರಾಮದ ಹೊರಗೆ ಉತ್ತರ ದಿಕ್ಕಿನಲ್ಲಿರುವ ತೋಪಿನಲ್ಲಿದೆ(ನೋಡಿ: ಚಿತ್ರ‑೬೪).

ಒಂದು ಹೊಸ ಗ್ರಾಮ ನಿರ‍್ಮಾಣ ಮಾಡುವ ಸಂದರ್ಭದಲ್ಲಿ, ಮುಖಂಡರಾದವನೊಬ್ಬನ ತಲೆಮೇಲೆ ತುಂಬಿದ ಹರಬಿ ಹೊರಿಸಿ ನಿರ್ದಿಷ್ಟ ಸ್ಥಳದಿಂದ ಆರಂಭಿಸಿ ಪೂರ್ವಾಭಿಮುಖವಾಗಿ ಅವನು ಹೋಗಬೇಕು. ಹೋಗುವಾಗ ಒಂದು ಸಣ್ಣ ಮೂಳೆಯಿಂದ ಹರಬಿಗೆ ತೂತು ಮಾಡುವರು. ಅವನು ಪೂರ್ವ ನಿರ್ಧರಿತ ಸ್ಥಳಗಳ ಮೂಲಕ ಹಾದು ಹೋಗುವನು. ಹರಬಿಯಿಂದ ನೀರು ಬಿದ್ದ ಸ್ಥಳದಲ್ಲೆಲ್ಲ ಗುರುತು ಹಾಕಿಕೊಂಡು ಹೋಗಿ ಅದನ್ನು ಎಲ್ಲೆ ಮಾಡಿಕೊಂಡು ಗ್ರಾಮನಿರ‍್ಮಾಣ ಮಾಡುತ್ತಿದ್ದರಂತೆ. ಪಟಲ ಎಂದರೆ ನಿರ್ದಿಷ್ಟ ಪ್ರದೇಶ ಎಂದರ್ಥ. ಆ ಪ್ರದೇಶದ ಗ್ರಾಮ ದೇವತೆಗೆ ಪಟಲದಮ್ಮ ಎನ್ನುವರು. ಆ ದೇವತೆಗೆ ವಿಶೇಷ ಪೂಜೆ ನಡೆಯುತ್ತದೆ. ಪಟ್ಟಣವೇ ಪಟಲ ಆಗಿರಬಹುದು. ನಿಕುಂಭಿಣಿದೇವಿ ಜನಪದರ ಬಾಯಿಯಲ್ಲಿ ಪಟ್ಟಲದಮ್ಮ ಆಗಿದ್ದಾಳೆ. ಇವಳನ್ನು ಕುಂಬಳದೇವಿ, ಕುಂಭಿಣಿ, ನಿಕುಂಭಿಣಿ ಎಂದು ಕರೆಯುತ್ತಾರೆ. ನಿಕುಂಭಿಣಿದೇವಿ ಎಂದರೆ ನಿಕುಂಭಿಣಿ ಎಂಬ ಯಾಗದ ಅಧಿದೇವತೆ. ರಾವಣ ರಾಮನನ್ನು ಕೊಲ್ಲುವ ಸಲುವಾಗಿ ಈ ಯಾಗ ಮಾಡಿದನೆಂದು ಪ್ರತೀತಿ. ಒಂದು ಯಜ್ಞದ ಅಧಿದೇವತೆಯಾಗಿದ್ದ ಈ ದೇವತೆ ಇಂದು ಗ್ರಾಮದೇವತೆಯಾಗಿದ್ದಾಳೆ. ಇಲ್ಲಿ ಹಬ್ಬ ಆಚರಿಸುವಾಗ ಕುರಿ ಕೋಳಿಗಳನ್ನು ಕಡಿಯುತ್ತಾರೆ. ಇದೊಂದು ಶಕ್ತಿದೇವತೆ. ಸಾಲಾಗಿ ನೆಟ್ಟಿರುವ ಹನ್ನೊಂದು ಚಿಕ್ಕ ಕೋಡುಗಲ್ಲುಗಳನ್ನೆ ಪಟ್ಲಮ್ಮನೆಂದು ಕರೆಯುತ್ತಾರೆ. ಇವಳನ್ನು ಕುಂಭಿಣಿ, ನಿಕುಂಬಿಣಿ ಎಂದು ಸಹ ಕರೆಯುತ್ತಾರೆ. ಈಗ್ಗೆ ಹಬ್ಬ ನಡೆದು ಸುಮಾರು ೩೪ ವರ್ಷಗಳಾಗಿದೆ. ಅಂದರೆ ೧೯೭೪ರಲ್ಲಿ ಸಾರ್ವತ್ರಿಕವಾಗಿ ಹಬ್ಬ ನಡೆದಿತ್ತು. ಜನರ ಆರ್ಥಿಕ ಶಕ್ತಿಯನ್ನು ಅವಲಂಬಿಸಿ ಈ ಹಬ್ಬವನ್ನು ನಡೆಸಲಾಗುತ್ತದೆ.

ಈಗ ಈಕೆಗೆ ಒಂದು ರೂಪವನ್ನು ನೀಡಿದ್ದಾರೆ. ಅದರ ಪ್ರಕಾರ ಕಂಚಿನ ಪಟವಿದೆ. ಅದರಲ್ಲಿ ಚಾಮುಂಡಿಯ ರೂಪವಿದ್ದು, ಕುದುರೆಯ ಮೇಲೆ ಕುಳಿತಿದ್ದಾಳೆ. ನಾಲ್ಕು ಕೈಗಳನ್ನು ಹೊಂದಿದ್ದು, ಬಲಗೈಗಳಲ್ಲಿ ಕತ್ತಿ ಮತ್ತು ತ್ರಿಶೂಲ ಹಾಗೂ ಎಡಗೈಗಳಲ್ಲಿ ಡಮರುಗ ಮತ್ತು ಕುದುರೆಯ ಲಗಾಮನ್ನು ಹಿಡಿದಿದೆ.

ಈ ದೇವತೆಯ ಮಹಿಮೆಯನ್ನು ಕುರಿತು ಕಥೆಯೊಂದಿದೆ. ಸುಮಾರು ವರ್ಷಗಳ ಹಿಂದೆ ಮೈಸೂರಿನ ಜವಳಿ ವ್ಯಾಪಾರಿಗಳಾದ ಕಾಡಯ್ಯನ ಕುಟುಂಬದವರು ಶಿರಾ ಮತ್ತು ಪಾವಗಡ ಪ್ರದೇಶದಲ್ಲಿ ಬಟ್ಟೆವ್ಯಾಪಾರ ಮುಗಿಸಿ (ಕಮಾನಿನ ಎತ್ತಿನ ಬಂಡಿಯಲ್ಲಿ  ದೂರ ಪ್ರಯಾಣ ಮಾಡುವುದು ಅಂದು ರೂಢಿಯಲ್ಲಿತ್ತು) ವಾಪಸ್ಸು ಬರುತ್ತಿದ್ದರು. ಮಾರ್ಗ ಮಧ್ಯೆ ಯಾವುದೋ ಒಂದು ಗ್ರಾಮದಲ್ಲಿ ದೇವರಿಗೆ ಹರಕೆ ಬಿಟ್ಟ ಮೇಕೆಯೊಂದು ಇವರ ಕಮಾನು ಬಂಡಿಯನ್ನು ಹಿಂಬಾಲಿಸಿ ಬಂದಿತು. ಒಂದೆರಡು ದಿನಗಳ ಬಳಿಕ ಈಗಿನ ಪಟ್ಲಮ್ಮನ ದೇವಸ್ಥಾನವಿರುವ ಪ್ರದೇಶಕ್ಕೆ ಬಂದರು. ಅಲ್ಲಿ ವಿಶ್ರಾಂತಿ ಪಡೆಯುತ್ತ ಜೊತೆಗೆ ಬಂದಿದ್ದ ಮೇಕೆಯನ್ನು ಕೊಯ್ದು ಅಡುಗೆ ಮಾಡಿ ಊಟ ಮಾಡುವ ಸಿದ್ಧತೆಯಲ್ಲಿದ್ದರು. ಮೇಕೆಯು ಕಮಾನು ಬಂಡಿಯನ್ನು ಹಿಂಬಾಲಿಸಿದ ಸುದ್ದಿಯನ್ನು ತಿಳಿದು, ಅದರ ಮಾಲೀಕನು ಮತ್ತು ಕೆಲವರು ಕೂಡಿ ಇವರು ತಂಗಿದ್ದ ಸ್ಥಳಕ್ಕೆ ಬಂದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವ್ಯಾಪಾರಿಗಳು ಈ ಸಂಕಟದಿಂದ ಪಾರಾಗಲು ಅನ್ಯ ಮಾರ್ಗವಿಲ್ಲದೆ ಅಲ್ಲೆ ಇದ್ದ ಪಟ್ಲಮ್ಮನಿಗೆ ಕೈಮುಗಿದು “ಅಮ್ಮ ನಿನ್ನಲ್ಲಿ ಸತ್ಯವಿದ್ದರೆ ನಮ್ಮನ್ನು ಈ ಸಂಕಷ್ಟದಿಂದ ಪಾರುಮಾಡು. ಇಲ್ಲಿರುವ ಮಾಂಸವೆಲ್ಲಾ ಕುಂಬಳಕಾಯಿ ತಾಳ್ದ ಆಗಬೇಕು. ನಿನಗೆ ಗುಡಿ ಕಟ್ಟಿಸುತ್ತೇವೆ ಎಂದು ಬೇಡಿಕೊಳ್ಳುತ್ತಾರೆ ನಮಗೆ ಏನಾದರೂ ಒಂದು ಸುಳಿವನ್ನು ಕೊಡು ತಾಯಿ” ಎಂದು ಹರಕೆ ಮಾಡಿಕೊಳ್ಳುತ್ತಾರೆ. ಅಷ್ಟರಲ್ಲಿ ಒಂದು ನಿಂಬೆಹಣ್ಣು ಉರುಳಿಕೊಂಡು ಬರುತ್ತದೆ. ಬಳಿಕ ಮೇಕೆಯ ಮಾಲೀಕ ಮತ್ತು ವ್ಯಾಪಾರಿಗಳ ನಡುವೆ ನ್ಯಾಯ ಪಂಚಾಯತಿ ಆರಂಭವಾಗುತ್ತದೆ. ಕೊನೆಯಲ್ಲಿ ನಾವು ಸಿದ್ಧಪಡಿಸಿರುವ ಅಡುಗೆಯನ್ನು ಪರೀಕ್ಷಿಸಿ ನೋಡಿ ಎಂಬುದಾಗಿ ಹೇಳಿದಾಗ, ಶಂಕೆಯಿಂದ ಅಣಿಗೊಳಿಸಿದ್ದ ಅಡುಗೆಯನ್ನು ಪರಿಶೀಲಿಸುತ್ತಾರೆ. ಅಲ್ಲಿ ಕಂಡುಬಂದದ್ದು ಕುಂಬಳಕಾಯಿ ತಾಳ್ದ. ಇದನ್ನು ಕಂಡು ಅವರು ನಿರುತ್ತರರಾಗಿ ಹೊರಟು ಹೋಗುತ್ತಾರೆ.

ಆಕಸ್ಮಿಕವಾಗಿ ಒದಗಿಬಂದ ಸಂಕಟದಿಂದ ಪಾರು ಮಾಡಿ ಅನುಭವಿಸಬೇಕಾಗಿದ್ದ ಅಪಮಾನದಿಂದ ಮುಕ್ತಗೊಳಿಸಿದ ಪಟ್ಲಮ್ಮದೇವಿಯ ಶಕ್ತಿಗೆ ವ್ಯಾಪಾರಗಾರರು ಚಕಿತರಾದರು. ತಾವು ಹರಕೆ ಮಾಡಿಕೊಂಡಂತೆ ದೇವಸ್ಥಾನವನ್ನು ಕಟ್ಟಿಸಿದ್ದಾರೆ . ಅಲ್ಲದೆ ಪ್ರತಿವರ್ಷವೂ ತಪ್ಪದೆ ದೇವತೆಯ ಪೂಜೆಗೆ ಬಂದು ಹೋಗುತ್ತಾರೆ ಎಂಬ ಮಾಹಿತಿಯು ತೊಣ್ಣೂರು ಗ್ರಾಮದ ಜನರಿಂದ ತಿಳಿದುಬಂದಿದೆ.

ಹಬ್ಬದ ಹಿನ್ನೆಲೆ : ಎಲ್ಲಾ ಗ್ರಾಮದಲ್ಲಿ ಇರುವಂತೆ ಕೆರೆ ತೊಣ್ಣೂರಿನಲ್ಲೂ ಹಲವಾರು ದೈವಗಳನ್ನು ಆರಾಧಿಸುವುದು ಸಾಮಾನ್ಯ. ಹಾಗೆಯೇ ಒಂದೇ ದೇವತೆಯನ್ನು ಹಲವಾರು ಗ್ರಾಮದವರು ಕೂಡಿ ಹಬ್ಬ ನಡೆಸುವುದು ಪಟ್ಲಮ್ಮನ ಜಾತ್ರೆಯಲ್ಲಿ ಕಾಣಬಹುದಾಗಿದೆ. ಪ್ರತಿ ವರ್ಷವೂ ಯುಗಾದಿಗೂ ಮುಂಚಿತವಾಗಿ ಕೆರೆ ತೊಣ್ಣೂರು ಮತ್ತು ಪಟ್ಟಣಗೆರೆ  ಗ್ರಾಮದವರು ಪಟ್ಲಮ್ಮನಿಗೆ ಹಬ್ಬ ಮಾಡುವರು. ಅದೇ ರೀತಿ ಯುಗಾದಿಯ ಅನಂತರ ಲಕ್ಷ್ಮಿಸಾಗರದ ಗ್ರಾಮಸ್ಥರು ಇದೇ ದೇವತೆಗೆ ಹಬ್ಬ ನೆರವೇರಿಸುವರು.

ಹಬ್ಬ ಜರುಗುವ ಕ್ರಮ : ಸಾಮಾನ್ಯವಾಗಿ ಹಬ್ಬಕ್ಕೆ ಮೊದಲು ರಂಗದ ಕುಣಿತವು ಆರಂಭವಾಗುತ್ತದೆ. ಶುಕ್ರವಾರವು ಹಬ್ಬವಾದ್ದರಿಂದ ಹಿಂದಿನ ದಿನ ರಾತ್ರಿ ಕೆರೆ ತೊಣ್ಣೂರು, ಪಟ್ಟಣಗೆರೆ ಮತ್ತು ಹತ್ತಿರದ ಗ್ರಾಮದ ಜನರು ಈ ರಂಗದ ಕುಣಿತದಲ್ಲಿ ಪಾಲ್ಗೊಳ್ಳುವರು. ಮರುದಿನ ಅಂದರೆ ಶುಕ್ರವಾರದಂದು ಪಟ್ಟಣಗೆರೆ ಗ್ರಾಮಸ್ಥರು ಬಂಡಿಯನ್ನು (ಸುಮಾರು  ೪ ೧/೨ ಅಡಿ ಎತ್ತರದ ಮರದ ಗಾಲಿ) ಪಟ್ಲಮ್ಮನ ದೇವಸ್ಥಾನಕ್ಕೆ ಉರುಳಿಸಿಕೊಂಡು ಬರುವರು. ಹಬ್ಬದ ವಿದ್ಯುಕ್ತ ಚಾಲನೆಗೆ  ಬಂಡಿ ಬರುವುದು ಸೂಚನೆಯಾಗಿದೆ.  ಇದೆಲ್ಲವೂ ನೇಮದಂತೆ ನೆರವೇರಬೇಕು. ಪಟ್ಟಣಗೆರೆಯಿಂದ ಬಂಡಿ ತಂದವರು ಅಮ್ಮನ ದೇವಸ್ಥಾನದ ಮುಂದೆ ಸಿದ್ಧಪಡಿಸಿರುವ ಕೊಂಡವನ್ನು ಹಾಯ್ದು ಒಳಗೆ ಪ್ರವೇಶ ಪಡೆಯಬೇಕು. ಆನಂತರ ಉಳಿದಭಕ್ತರು ಕೊಂಡ ಹಾಯ್ದು ಬರುತ್ತಾರೆ. ಅಂದು ರಾತ್ರಿಯು ಸಹ ರಂಗದ ಕುಣಿತ ಮುಂದುವರಿಯುವುದು. ಹರಕೆ ಮಾಡಿಕೊಂಡವರು ಜನರಿಗೆ ಕಜ್ಜಾಯ ಮತ್ತು ಬಾಳೆಹಣ್ಣು ಹಂಚುವುದುಂಟು.

ಬಲಿ ಕಾರ್ಯಕ್ರಮ: ಪಟ್ಲಮ್ಮನ ಹಬ್ಬದ ಪ್ರಮುಖವಾದ ದಿನ ಇದಾಗಿದೆ. ಎರಡು ಗ್ರಾಮದವರು ಪ್ರಾಣಿ ಬಲಿ ನೀಡುವುದು, ನೂರಾರು ಭಕ್ತರಿಂದ ಹರಕೆ ಒಪ್ಪಿಸುವುದು, ಬಾಯಿಬೀಗ ಹಾಕಿಸಿಕೊಳ್ಳುವುದು, ಹೊಸ ಬಟ್ಟೆ ಧರಿಸುವುದು ಹಾಗೂ ಖಾರದ ಊಟ (ಮಾಂಸಾಹಾರ)ದ ವಿಶೇಷ ದಿನ ಶನಿವಾರ. ಸಾಮಾನ್ಯವಾಗಿ ಗ್ರಾಮದೇವತೆ ಹಬ್ಬಗಳು ಪ್ರತಿವರ್ಷ ನಿಗದಿತ ಸಮಯಕ್ಕೆ ಜರುಗುವುದು ವಾಡಿಕೆ. ಆ ಪ್ರಕಾರವಾಗಿ ಪಟ್ಟಣಗೆರೆ ಮತ್ತು ಕೆರೆ ತೊಣ್ಣೂರು ಗ್ರಾಮದವರು ಒಪ್ಪಂದದ ಪ್ರಕಾರ ಕ್ರಮವಾಗಿ  ಅಂದು ನಾಲ್ಕು ಗಂಟೆಗೆ ಸರಿಯಾಗಿ ಅಮ್ಮನಿಗೆ ಬಲಿ ಅರ್ಪಿಸುವರು. ವಿಶೇಷ ಪೂಜಾ ವಿಧಿಗಳು ನೆರವೇರಿದ  ಬಳಿಕ ತೀರ್ಥವನ್ನು ತಂದು ವಧೆ ಸ್ಥಾನದಲ್ಲಿ ಬಲಿಗೆ ಸಿದ್ಧವಿರುವ ಪ್ರಾಣಿಯ ತಲೆಯ ಮೇಲೆ ಚಿಮುಕಿಸುವರು. ಆಗ ಪ್ರಾಣಿ ತಲೆಯನ್ನು ಒದರುವುದು. ಅದನ್ನೇ ಅಮ್ಮ ಒಪ್ಪಿಗೆ ನೀಡಿದಳು ಎಂದು ಪರಿಗಣಿಸಿ ಸಕಲ ನೇಮಗಳೊಂದಿಗೆ ಸಿದ್ಧವಾಗಿರುವ ವ್ಯಕ್ತಿಯೋರ್ವನು ಹರಿತವಾದ ಕತ್ತಿಯಿಂದ ಒಂದೇ ಏಟಿಗೆ ಬಲಿ ಪ್ರಾಣಿಯ ರುಂಡ ಮತ್ತು ಮುಂಡವನ್ನು ಬೇರ್ಪಡಿಸುವನು. ಎರಡನೆಯ ಬಲಿ ಕೆರೆ ತೊಣ್ಣೂರು ಗ್ರಾಮದವರಿಂದ ಅದೇ ಪ್ರಕಾರವಾಗಿ ಅರ್ಪಿಸಲಾಗುವುದು. ಈ ಎರಡು ಗ್ರಾಮಗಳಿಂದ  ದೇವತೆಗೆ ಪ್ರಧಾನ ಹಾಗೂ ಊರೊಟ್ಟಿನ ಬಲಿ ಅಥವಾ ಹರಕೆ ಒಪ್ಪಿಸಿ ಅನಂತರ ಎರಡು ಗ್ರಾಮಗಳ ಭಕ್ತರು ತಮ್ಮ ತಮ್ಮ ಹರಕೆಯನ್ನು ಕುರಿ ಕೋಳಿಯನ್ನು ಬಲಿ ಕೊಡುವ ಮೂಲಕ ಒಪ್ಪಿಸುವ ಕ್ರಮವಿದೆ.

ಬಲಿ ಕಾರ್ಯ ಮುಗಿಯುತ್ತಿದ್ದಂತೆಯೇ ಬಹಳ ಸಡಗರದಿಂದ ಮನೆ ಮನೆಗಳಲ್ಲಿ ಖಾರದ ಭೋಜನ ಸಿದ್ಧಪಡಿಸಿ ಪಟ್ಲಮ್ಮನಿಗೆ ನೈವೇದ್ಯ ಮಾಡುವರು. ಆದರೆ ಅಮ್ಮನಿಗೆ ದೇವಸ್ಥಾನದ ಒಳಗೆ ಸಿಹಿ ಭೋಜನವನ್ನು ಮಾತ್ರ ನೈವೇದ್ಯ ಮಾಡುತ್ತಾರೆ.

ಬಾಯಿಬೀಗ ಹಾಕಿಸಿಕೊಳ್ಳುವುದು: ಇದು ಸಹ ಪಟ್ಲಮ್ಮನಿಗೆ ಭಕ್ತರು ವೈಯಕ್ತಿಕವಾಗಿ ಸಲ್ಲಿಸುವ ಒಂದು ಉಗ್ರ ರೂಪದ ಹರಕೆಯಾಗಿದೆ. ಅಂದು ಶನಿವಾರ ಹರಕೆ ಸಲ್ಲಿಸುವ ಭಕ್ತರು ಸ್ನಾನ, ಮಡಿಯಿಂದ ಬಿಸಿಲ ಮಾರಮ್ಮನ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಮಾಡಿಸಿ ತಾವು ಒಯ್ದಿರುವ ಬೆಳ್ಳಿಯ ಬಾಯಿಬೀಗವನ್ನು ಕೊಟ್ಟು ಅದಕ್ಕಾಗಿ ನೇಮಕ ವಾಗಿರುವ ವ್ಯಕ್ತಿಯೋರ್ವನ ಕೈಯಿಂದ ಬಾಯಿಬೀಗ ಹಾಕಿಸಿಕೊಳ್ಳುವರು. ಅಲ್ಲಿಂದ ಪಟ್ಲಮ್ಮನ ದೇವಸ್ಥಾನಕ್ಕೆ ಬಂದು ಮಧ್ಯಾಹ್ನದ ಅನಂತರ ಬಾಯಿಬೀಗ ತೆಗೆಸಿಕೊಳ್ಳುವರು. ಅಂದರೆ ಪೂಜಾರಿಯಿಂದ ಅರಿಶಿನ ಕುಂಕುಮ ಹಾಕಿ  ತೀರ್ಥವನ್ನು ಚಿಮುಕಿಸಿದ  ಬಳಿಕ ಅದಕ್ಕಾಗಿ ನೇಮಕವಾಗಿರುವ ವ್ಯಕ್ತಿಯೋರ್ವ ಭಕ್ತರಿಗೆ ಬಾಯಿ ಬೀಗವನ್ನು ತೆಗೆಯುತ್ತಾನೆ. ಆಗ ಭಕ್ತರು ಅಮ್ಮನಿಗೆ  ಹರಕೆ ಸಲ್ಲಿಸಿದ ಸಂತೃಪ್ತಿಯಿಂದ ಪೂಜೆ ಸಲ್ಲಿಸುವರು.

ಮುಡಿ ಕೊಡುವುದು: ಸಾಮಾನ್ಯವಾಗಿ ಹರಕೆಗಳಲ್ಲೆಲ್ಲಾ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸಲ್ಲುವ ಹರಕೆಯೆಂದರೆ ಮುಡಿಸೇವೆ ಅಥವಾ ಮುಡಿಕೊಡುವುದು ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಏಕೆಂದರೆ ಬೇರೆಲ್ಲವುಗಳಿಗಿಂತ ಸರಳ ಮತ್ತು ಸಾಧುವಾದುದು. ಯಾವುದೇ ಹಿಂಸಾತ್ಮಕ ಪ್ರಕ್ರಿಯೆಗೆ ಒಳಗಾಗುವುದಿಲ್ಲ. ಪಟ್ಲಮ್ಮನ ಈ ಹಬ್ಬದಲ್ಲಿ ಬಲಿಯ ದಿನದಂದು ಭಕ್ತರು ದೇವತೆಗೆ ವೈಯಕ್ತಿಕವಾಗಿ ಸಾಧು ಮತ್ತು ಉಗ್ರ ರೂಪಗಳೆರಡರಲ್ಲೂ ಅವರಿಗೆ ಒಪ್ಪಿತವಾದ  ರೀತಿಯಲ್ಲಿ ಹರಕೆ ಒಪ್ಪಿಸುವುದು ರೂಢಿಯಲ್ಲಿದೆ. ಆ ಪ್ರಕಾರವಾಗಿ  ಇಂದು ಬೆಳಗಿನಿಂದಲೇ ಬಾಯಿಬೀಗ ಹಾಕಿಸಿಕೊಳ್ಳುವುದು, ಮುಡಿ ಕೊಡುವುದು ನಡೆಯುತ್ತದೆ. ಹಾಗೆಯೇ ಕೊಂಡ ಹಾಯುವ ಹರಕೆ ಹೊತ್ತವರು ಸಹ ಕೊಂಡದ ದಿನದಿಂದ ಹರಕೆ ಸಲ್ಲಿಸುವರು. ಹುಟ್ಟಿದ ಮಕ್ಕಳಿಗೆ ಕೂದಲು ತೆಗೆಸುವುದಕ್ಕೆ ‘ಜವಳ ತೆಗೆಸುವುದು’ ಎಂದು ಕರೆಯುವರು. ಅದಕ್ಕಾಗಿ ಅನೇಕರು ದೂರದ ಧಾರ‍್ಮಿಕ ಕೇಂದ್ರಗಳಿಗೆ ಹೋಗಿ ಬರುವುದುಂಟು. ಆದರೆ ಗ್ರಾಮೀಣ ಜನರಿಗೆ ಸಮಯ ಮತ್ತು ಹಣದ ಕೊರತೆಯಿಂದ ಅಂತಹ ಕೂದಲ ತೆಗೆಸುವ ಕಾರ್ಯವನ್ನು ಗ್ರಾಮದೇವತೆಯ ಹಬ್ಬದ ಸಂದರ್ಭದಲ್ಲಿ ನೆರವೇರಿಸುವುದು ಉತ್ತಮವಾದ ಕ್ರಮವಾಗಿದೆ. ಹೆಚ್ಚು ಖರ್ಚಿಲ್ಲದೆ ಸರಳವಾಗಿ ಮುಗಿಯುತ್ತದೆ.

ಸಿಹಿತಿಂಡಿ ಹಂಚುವುದು: ಹರಕೆ  ಎಂಬುದು ವೈವಿಧ್ಯಮಯವಾದುದು. ಹಾಗೂ ಅವರವರ ಇಚ್ಚೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿರುತ್ತದೆ. ಹಾಗೆಯೇ ಪಟ್ಲಮ್ಮನ ಹಬ್ಬದಲ್ಲಿ ಸಿಹಿ ಹಂಚುವ ಹರಕೆಯು ಒಂದು. ಕಜ್ಜಾಯ, ಬಾಳೆಹಣ್ಣು, ಬೋಂದಿ ಮತ್ತು ಲಾಡು ಹಂಚುವುದುಂಟು. ಆರ್ಥಿಕ ಅನುಕೂಲವುಳ್ಳವರು ಹರಕೆಗೆ ಬೇಕಾದ ಪದಾರ್ಥವನ್ನು ಮನೆಯಲ್ಲೆ ಸಿದ್ಧಪಡಿಸಿಕೊಳ್ಳುತ್ತಾರೆ. ಕೆಲವರು ಅಂಗಡಿಯಲ್ಲಿ ಖರೀದಿಸಿ ಹಂಚುವ ಮೂಲಕ ಹರಕೆ ತೀರಿಸುವ ಕ್ರಮವಿದೆ. ಪ್ರಸ್ತುತ ಸಂದರ್ಭದಲ್ಲಿ ಮಾಡಿಕೊಳ್ಳುವ ಹರಕೆಗೆ ವಿಶೇಷವಾದ ಉದ್ದೇಶವೇನು ಇರುವುದಿಲ್ಲ. ತಮಗೆ ಒದಗಿ ಬಂದ ಕಷ್ಟವು ಪರಿಹಾರವಾಗಬೇಕು ಅದಕ್ಕಾಗಿ ತಾವು ನಂಬಿರುವ ದೈವಕ್ಕೆ ಪ್ರತಿಯಾಗಿ ಮಾಡಿಕೊಳ್ಳುವ ಒಪ್ಪಂದವೇ ಆಗಿದೆ. ಅದು ನೆರವೇರಿದಾಗ ಸಹಜವಾಗಿ ಕುಟುಂಬಕ್ಕೆ ಅಥವಾ ವೈಯಕ್ತಿಕವಾಗಿ ಉಂಟಾಗುವ ಸಂತಸದ ಗಳಿಗೆಯನ್ನು ಮನೆ ಮಂದಿಗೆಲ್ಲಾ ಸಿಹಿ ಹಂಚುವುದು ಅಥವಾ ಸಿಹಿ ಭೋಜನದ ವ್ಯವಸ್ಥೆ ಮಾಡುವುದು ಈಗಲೂ ರೂಢಿಯಲ್ಲಿರುವುದು ತಿಳಿದ ಸಂಗತಿ. ಆ ಸಂತಸವನ್ನು ಸಾರ್ವಜನಿಕರ ಜೊತೆಯಲ್ಲಿ ಹಂಚಿಕೊಳ್ಳುವ ಸಲುವಾಗಿ ಜಾತ್ರೆ ಅಥವಾ ಹಬ್ಬಗಳ ಸಂದರ್ಭದಲ್ಲಿ ದೇವರ ಇಲ್ಲವೇ ದೇವತೆ ಹೆಸರಿನಲ್ಲಿ ನಿರ್ದಿಷ್ಟವಾದ ಸಿಹಿ ಪದಾರ್ಥ(ಕಜ್ಜಾಯ, ಬೂಂದಿ, ಲಾಡು, ಬಾಳೆಹಣ್ಣು ಇತ್ಯಾದಿ)ಗಳನ್ನು ಹಂಚುವುದು ಒಂದು ಸಂಪ್ರದಾಯವಾಗಿ ರೂಢಿಯಲ್ಲಿರುವುದು ನಮ್ಮ ಪೂರ್ವಜರಲ್ಲಿ ಒಬ್ಬರ ಸಂತಸವನ್ನು ಎಲ್ಲರೂ ಹಂಚಿಕೊಳ್ಳುವ ಮುಕ್ತವಾದ ಮನಸ್ಸುಗಳಿದ್ದವು ಎಂಬುದನ್ನು ತಿಳಿಯಬಹುದಾಗಿದೆ.

ಇಷ್ಟಾಗಿಯೂ ಕೂಡ ಈ ಹಂಚುವಿಕೆಯು ಯಾವ ಯಾವ ಜನರಿಗೆ ಮೀಸಲಾಗಿತ್ತು ಎಂಬ ಪ್ರಶ್ನೆಯೂ ಎದುರಾಗುತ್ತದೆ. ಏಕೆಂದರೆ ಪಟ್ಲಮ್ಮನ ಹಬ್ಬ ಜರುಗುವ ತೋಪಿನಲ್ಲೇ ಒಂದು ತುದಿಯಲ್ಲಿ ಪರಿಶಿಷ್ಟ ಜಾತಿ ಜನರಿಗಾಗಿಯೇ ಮೀಸಲಾದ ಬೇರೊಂದು ಪಟ್ಲಮ್ಮನ ಚಿಕ್ಕ ದೇವಸ್ಥಾನ ನಿರ್ಮಿಸಲಾಗಿದೆ. ಪಟ್ಲಮ್ಮನ ಹೆಸರನ್ನು ಕುರಿತು ಪ್ರಸ್ತಾಪಿಸುವುದು ಸೂಕ್ತವೆಂದು ಭಾವಿಸಿದ್ದೇನೆ. ಹಬ್ಬದ ಸಂದರ್ಭದಲ್ಲಿ ಮೊದಲಿಗೆ ಪಟ್ಟಣಗೆರೆ ಗ್ರಾಮದಿಂದ ಬಂಡಿಯನ್ನು ಉರುಳಿಸಿಕೊಂಡು ಬರುವುದು ಸಂಪ್ರದಾಯ. ಅಂದರೆ ಅವರಿಗೆ ಈ ಹಬ್ಬದಲ್ಲಿ ಬಹಳ ವಿಶೇಷವಾದ ಸ್ಥಾನಮಾನವಿದೆ ಎಂಬುದು ಸ್ಪಷ್ಟ. ಅದೇ ರೀತಿ ಪಟ್ಲಮ್ಮನಿಗೆ ಬಲಿಯನ್ನು ಕೊಡುವ ಸಂದರ್ಭದಲ್ಲೂ ಪಟ್ಟಣಗೆರೆ ಗ್ರಾಮದ ವತಿಯಿಂದ ಮೊದಲ ಬಲಿಯನ್ನು ಅರ್ಪಿಸಬೇಕು. ಅನಂತರದ ಸರದಿ ಕೆರೆ ತೊಣ್ಣೂರು ಗ್ರಾಮದ ಜನರದ್ದು. ಪಟ್ಲಮ್ಮ ಎಂಬ ಹೆಸರು ಪಟ್ಟಣದಮ್ಮ>ಪಟ್ಲದರ್ಮ>ಪಟ್ಲಮ್ಮ ಆಗಿದೆ. ಆದ್ದರಿಂದ ಇದು ಪಟ್ಟಣದ ಗ್ರಾಮದೇವತೆಯೇ ಸರಿ. ಅಂದರೆ ತೊಣ್ಣೂರು ಹಿಂದೆ ಪಟ್ಟಣವಾಗಿದ್ದು, ಅದರ ಉಪಭಾಗವೇ ಇಂದಿನ ಪಟ್ಟಣಗೆರೆ ಗ್ರಾಮ. ಹಾಗಾಗಿ ಪ್ರಸ್ತುತ ಪಟ್ಲಮ್ಮ ತೊಣ್ಣೂರಿನ ಗ್ರಾಮದೇವತೆ ಯಾಗಿದ್ದಾಳೆ.

ನಿಜವಾದ ಅರ್ಥದಲ್ಲಿ ದೇವತೆಯೆಂದು ಹೇಳಲಾಗುವ ಅಥವಾ ಪ್ರತಿಷ್ಟಾಪಿಸಲಾಗುವ ವಿಗ್ರಹ ಅಥವಾ ವಸ್ತುಗಳಿಂದ ನೇರವಾಗಿ ಯಾವುದೇ ಪವಾಡ ಅಥವಾ ಅದ್ಭುತಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ ಅಂತಹವುಗಳಿಗೆ ಅದ್ಭುತ ಶಕ್ತಿಯನ್ನು ತುಂಬುವವರು ಈ ಸಾಮಾನ್ಯ ಜನತೆ, ಹಾಗೂ ಅವರ ಮುಗ್ಧ ಮನಸ್ಸು. ಏಕೆಂದರೆ, ಯಾವುದೇ ಒಂದು ವಸ್ತುವು ಅಥವಾ ಕಲ್ಲು ಇವರ ಪಾಲಿಗೆ ದೇವತೆಯೆಂದು ಒಪ್ಪಿಕೊಂಡು ಅದಕ್ಕೆ ಜೀವ ತುಂಬಿ ತಮ್ಮನ್ನು ಕಾದು ಕಾಪಾಡುವ, ಕೇಳಿದ್ದೆಲ್ಲವನ್ನು ಕೊಡುವ, ಜೀವನದಲ್ಲಿ ನೆಮ್ಮದಿ ಸುಖವನ್ನು ನೀಡುವ ಶಕ್ತಿಯಾಗಿ ಮಾರ್ಪಡಿಸುವುದು ಸಾಮಾನ್ಯವಾದ ಸಂಗತಿಯಲ್ಲ. ಆದ್ದರಿಂದ ಗ್ರಾಮೀಣ ಜನತೆಯ ಈ ಮನೋದಾಷ್ಟತೆ ಅಪಾರವಾದುದು. ಹಲವಾರು ಸಂದರ್ಭಗಳಲ್ಲಿ ವಿಜ್ಞಾನವು ಅವರ ಪವಾಡಗಳಿಗೆ ಉತ್ತರ ಹುಡುಕಲು ಸಾಧ್ಯವಾಗದೇ ಮೂಕ ಪ್ರೇಕ್ಷಕ ಮಾತ್ರ ಆಗಿರುವುದನ್ನು ಹಲವಾರು ಉದಾಹರಣೆಗಳೊಂದಿಗೆ ಹೇಳಬಹುದು. ಅದಕ್ಕೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಬಲಿ ಹಬ್ಬವನ್ನು ಸೀಗೆಮಾರಮ್ಮನಿಗೆ ಹಲವಾರು ವರ್ಷಗಳಿ ಗೊಮ್ಮೆ ಆಚರಿಸುವುದುಂಟು. ಇಲ್ಲಿನ ಪವಾಡವೆಂದರೆ, ಜೀವಂತ ವ್ಯಕ್ತಿಯನ್ನು ನಿರ್ಜೀವ ಗೊಳಿಸುವ ಒಂದು ದಿನದ ಬಳಿಕ ಜೀವ ಬರುವಂತೆ ಮಾಡುವುದು ವಿಜ್ಞಾನಕ್ಕೂ ನಿಲುಕದ ಸವಾಲಾಗಿದೆ. ಅಂದ ಮಾತ್ರಕ್ಕೆ ಜಗತ್ತಿನಲ್ಲಿರುವ ಮೂರು ಕೋಟಿ ದೇವರುಗಳನ್ನು ಒಪ್ಪಿಕೊಳ್ಳಬೇಕು ಎಂಬುದು ಈ ಹೇಳಿಕೆಯ ಉದ್ದೇಶವೂ ಅಲ್ಲ. ನಂಬದವರಿಗೆ ಏನೆಲ್ಲವೂ ಸಾಧ್ಯ ಎಂಬ ಸತ್ಯವನ್ನು ಇಲ್ಲಿ ಉಲ್ಲೇಖಿಸುವುದೇ ಆಗಿದೆ.

ಉಪಸಂಹಾರ: ಪ್ರತಿದಿನವೂ ಮಾನವನ ಮನಸ್ಸು ವಿಕಸನಗೊಳ್ಳುತ್ತಿದೆ. ಇಂದು ಅಸಾಧ್ಯವಾದುದು ನಾಳೆಗೆ ಸಾಧ್ಯವಾಗುತ್ತದೆ. ಆಧುನಿಕ ಯುಗದ ಹೆಸರಲ್ಲಿ ಮಾನವ ತನ್ನ ಮನಸ್ಸಿಗಿಂತಲೂ ವೇಗವಾಗಿ ನಿಖರವಾಗಿ, ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುವಂತಹ ಯಂತ್ರಗಳನ್ನು ಸೃಷ್ಟಿಸಿದ್ದಾನೆ. ಆದರೆ ‘ದೇವರು’ ಮತ್ತು ‘ದೇವತೆ’ ಎಂಬ ಅಗೋಚರ ಶಕ್ತಿಗಳ ಒಳಗುಟ್ಟನ್ನು ಅರಿಯಲು ಸಾಧ್ಯವಾಗಿಲ್ಲ ಎಂದು ಹೇಳುವುದು ಅನಿವಾರ್ಯ ವೆನಿಸುತ್ತದೆ. ಏಕೆಂದರೆ ಅನುಭವಕ್ಕೆ ತಂದುಕೊಳ್ಳಲಾಗದ ಬರಲಾಗದ ಕೇವಲ ಅನ್ಯರಿಗೆ ಉಂಟಾಗುವ ಪ್ರಭಾವ ಮತ್ತು ಪರಿಣಾಮಗಳನ್ನು ನೋಡಿ ತಿಳಿದುಕೊಳ್ಳುವ ಈ ದೈವದ ಶಕ್ತಿ ಆ ದೈವಕ್ಕೆ ಗೊತ್ತು ಎಂದು ಹೇಳಿದರೆ ವ್ಯಂಗ್ಯವಾಗಲಾರದು ಎಂಬುದು ನನ್ನ ಅಭಿಮತ. ಈ ನಿಟ್ಟಿನಲ್ಲಿ ಕೆರೆ ತೊಣ್ಣೂರು ಎಂಬ ಒಂದು ಗ್ರಾಮ ಮಾತ್ರವಲ್ಲ ರಾಷ್ಟ್ರದ ಸಮಸ್ತ ಗ್ರಾಮಗಳೇ  ಈ ಸಾಲಿನಲ್ಲಿ ನಿಲ್ಲುತ್ತವೆ ಎಂಬುದು ಸರ್ವರಿಗೂ ಸ್ವಯಂ ವೇದ್ಯವಾದುದು.