ಮಾನವನು ಅನಾದಿಕಾಲದಿಂದಲೂ ನಂಬಿಕೆ ಮತ್ತು ತತ್ಸಂಬಂಧವಾದ ಆಚರಣೆಗಳನ್ನು ನಡೆಸಿಕೊಂಡು ಬಂದಿರುವುದನ್ನು ಮನಗಾಣುತ್ತೇವೆ. ಕಾಲಕಾಲಕ್ಕೆ ಹೊಸ ಹೊಸ ನಂಬಿಕೆ ಮತ್ತು ಆಚರಣೆಗಳು ಪ್ರವೇಶ ಮಾಡುತ್ತಿರುತ್ತವೆ. ಇವೆಲ್ಲವೂ ಅವನ ಮಾನಸಿಕ ನೆಮ್ಮದಿಗಾಗಿ ಮಾಡಿಕೊಂಡಿರುವ ಚಿಕಿತ್ಸಕ ಸ್ವರೂಪದ ಸಾಧನಗಳೆನ್ನಬಹುದು. ನಂಬಿಕೆಯ ಭೌತಿಕ ರೂಪವೆ ಆಚರಣೆ. ಮಾನವನ ನಾಗರಿಕತೆಯ ಬೆಳವಣಿಗೆಯಲ್ಲಿ ಕೃಷಿ ಆಧಾರಿತ ಬದುಕು ಬಹು ಮಹತ್ವದ್ದು. ಈ ಹಂತದಲ್ಲಿ ಅವನು ತನ್ನ ನಂಬಿಕೆ ಮತ್ತು ಆಚರಣೆಗಳನ್ನು ಇಮ್ಮಡಿಗೊಳಿಸಿ ಕೊಂಡಂತೆ ಕಂಡುಬರುತ್ತದೆ. ಇಂದಿಗೂ ಇತರ ವೃತ್ತಿಯವರಿಗಿಂತ ಕೃಷಿಕ ಸಮುದಾಯ ಹೊಂದಿರುವ ನಂಬಿಕೆ ಮತ್ತು ಆಚರಣೆಗಳು ವಿಶಿಷ್ಟವಾದವು. ಹಾಗೆಂದು ಉಳಿದ ಸಮುದಾಯಗಳ ನಂಬಿಕೆ ಮತ್ತು ಆಚರಣೆಗಳಿಗೆ ಅರ್ಥವಿಲ್ಲವೆಂದಲ್ಲ. ಪ್ರಸ್ತುತ ಅಧ್ಯಯನದಲ್ಲಿ ಒಂದು ಪರಿಸರದಲ್ಲಿ ವಾಸಿಸುವ ಜನರಲ್ಲಿ ರೂಢಿಯಲ್ಲಿರುವ ನಂಬಿಕೆ ಮತ್ತು ಆಚರಣೆಗಳನ್ನು ಇಡಿಯಾಗಿ ನೋಡುವ ಪ್ರಯತ್ನ ಮಾಡಲಾಗಿದೆ.

ತೊಣ್ಣೂರಿನಲ್ಲಿ ವಿವಿಧ ಜನ ಸಮುದಾಯಗಳು ವಾಸಿಸುತ್ತಿವೆ. ಅವರಲ್ಲಿ ಒಕ್ಕಲಿಗ, ಗಾಣಿಗ, ಕುಂಬಾರ, ನಾವಿದ, ಬಡಗಿ, ಹೊಲೆಯ ಮತ್ತು ಮುಸಲ್ಮಾನ ಸಮುದಾಯದವರು ಸೇರಿದ್ದಾರೆ. ಈ ಎಲ್ಲ ಸಮುದಾಯಗಳು ಸ್ವಲ್ಪ ವ್ಯತ್ಯಾಸದಲ್ಲಿ ಒಂದು ಸಮನಾದ ನಂಬಿಕೆ ಮತ್ತು ಆಚರಣೆಗಳ ನೆಲೆಯಲ್ಲಿ ಬದುಕುತ್ತಿದ್ದಾರೆ. ಮುಖ್ಯವಾಗಿ ತೊಣ್ಣೂರಿನಲ್ಲಿರುವ ಈ ಎಲ್ಲ ಸಮುದಾಯಗಳು ಕೃಷಿಯಲ್ಲಿ ತೊಡಗಿರುವುದು ಗಮನಾರ್ಹ. ಹಾಗಾಗಿ ಇವರ ನಂಬಿಕೆ ಮತ್ತು ಆಚರಣೆಗಳು ಸಹ ಏಕರೂಪದವು. ಮುಂಗಾರು ಮಳೆಬಿದ್ದ ನಂತರ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ಆಗ ಕೃಷಿಕರು ನೇಗಿಲು ಹೂಡುವ ದಿನ ಹೊಲದಲ್ಲಿ ಪೂಜೆಮಾಡುತ್ತಾರೆ. ನಂತರ ಭಿತ್ತನೆ ಮಾಡುವಾಗಲೂ ಸಹ ಪಿಳ್ಳಂಗೋವಿಯನ್ನು (ಸಗಣಿ ಉಂಡೆಗೆ ಗರಿಕೆ ಹುಲ್ಲನ್ನು ಸಿಕ್ಕಿಸಿ ಮಾಡಿದ್ದು. ಇದನ್ನು ಗಣಪತಿ ಎಂದು ಭಾವಿಸುತ್ತಾರೆ) ಮಾಡಿಕೊಂಡು ಪೂಜಿಸಿ ಭಿತ್ತನೆ ಆರಂಭಿಸುತ್ತಾರೆ. ಇದಾದ ನಂತರ ಬೆಳೆ ಬಂದು ಕುಯ್ಯುವ  ಮುನ್ನ ಹೆಚ್ಚು ಮಾಡುತ್ತಾರೆ. ಅಂದರೆ ಮೂರು ಹಿಡಿ ಬೆಳೆಯನ್ನು ಕುಯ್ದು ಸಾಲಾಗಿ ಇಟ್ಟು ಅದರ ಮುಂದೆ ಮೂರು ಸಣ್ಣ ಕಲ್ಲುಗಳನ್ನು ಸಾಲಾಗಿ ಇಟ್ಟು ಅವುಗಳಿಗೆ ಅರಿಸಿನ ಕುಂಕುಮ ಹಚ್ಚುತ್ತಾರೆ. ನಂತರ ಮೊಸರನ್ನ ಇಟ್ಟು ನೈವೇದ್ಯಮಾಡಿ ಪೂಜೆ ಸಲ್ಲಿಸುತ್ತಾರೆ. ಅನಂತರ ಕುಯ್ಲು ಮಾಡುತ್ತಾರೆ. ಹೀಗೆ ಕುಯ್ದ ನಂತರ ಕಣದಲ್ಲಿ ಧಾನ್ಯವನ್ನು ಬೇರ್ಪಡಿಸಿ ರಾಶಿ ಕಟ್ಟುತ್ತಾರೆ. ಅಂತಿಮವಾಗಿ ರಾಶಿ ಪೂಜೆಯನ್ನು ಮಾಡುತ್ತಾರೆ. ರಾಶಿಯ ಮೇಲೆ ಸುತ್ತಲೂ ಮೊರದ ತುದಿಯಲ್ಲಿ ಮಂಡಲಾಕೃತಿಯ ಗೆರೆ ಚಿತ್ರವನ್ನೂ ಬಿಡಿಸುತ್ತಾರೆ. ಹೀಗೆ ಕೃಷಿಯ ಆರಂಭದಿಂದ ಧಾನ್ಯವನ್ನು ಮನೆಗೆ ಸಾಗಿಸುವವರೆಗೂ ವಿವಿಧ ಆಚರಣೆಗಳನ್ನು ನೆರವೇರಿಸುವ ಕೃಷಿಕ ಸಮುದಾಯ ತನ್ನದೇ ಆದ ನಂಬಿಕೆಗಳನ್ನು ಪಾರಂಪರಿಕವಾಗಿ ನಡೆಸಿಕೊಂಡು ಬಂದಿದೆ.

ಊರಿನಲ್ಲಿರುವ ಒಕ್ಕಲಿಗ ಸಮುದಾಯದ ಕೆಲವು ಮನೆತನಗಳು, ವಿಶೇಷವಾಗಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ತಮ್ಮ ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಆಗ ಮನೆಯಲ್ಲಿ ಮಾಡಿದ ಕೋಸಂಬರಿ, ಮಜ್ಜಿಗೆ ಇತರ ಆಹಾರ ಪದಾರ್ಥಗಳನ್ನು ಒಯ್ದು ಸಮಾಧಿಗೆ ನೈವೇದ್ಯ ಮಾಡಿ ಬರುತ್ತಾರೆ. ಈ ಪದ್ಧತಿಯು ಕರ್ನಾಟಕದಲ್ಲಿ ಕ್ರಿ.ಪೂ. ೧೨೦೦ ರಿಂದ ೩೦೦ರವರೆಗಿನ ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲದಲ್ಲಿ ಅಸ್ತಿತ್ವದಲ್ಲಿತ್ತು. ಈ ಕಾಲದಲ್ಲಿ ನಿರ್ಮಾಣಗೊಂಡ ಬೃಹತ್ ಕಲ್ಗೋರಿಗಳಲ್ಲಿ ರಂಧ್ರವನ್ನು ರಚಿಸಿ, ಆ ರಂಧ್ರದ ಮೂಲಕ ಆಹಾರ ಪದಾರ್ಥಗಳನ್ನು ಸಮಾಧಿಯೊಳಗೆ ಹಾಕಲಾಗುತ್ತಿತ್ತು. ಹೀಗೆ ಹಾಕಿದ ಆಹಾರ ಪದಾರ್ಥಗಳನ್ನು ಮೃತ ಪೂರ್ವಿಕರು ಸ್ವಿಕರಿಸುತ್ತಿದ್ದರೆಂಬ ನಂಬಿಕೆ ಅಂದಿನ ಸಮಾಜದಲ್ಲಿತ್ತು.

ಈ ನಂಬಿಕೆ ಮತ್ತು ಆಚರಣೆ ಪ್ರಸ್ತುತ ೨೧ನೆಯ ಶತಮಾನದಲ್ಲೂ ರೂಢಿಯಲ್ಲಿದ್ದು, ಮುಂದುವರೆದಿರುವುದು ಗಮನಾರ್ಹ ಸಂಗತಿ. ಇದರಿಂದ ಒಂದು ವಿಷಯ ಸುಸ್ಪಷ್ಟ. ಅದೇನೆಂದರೆ ಯಾವುದೇ ನಂಬಿಕೆ ಅಥವಾ ಆಚರಣೆ ದುತ್ತೆಂದು ರಾತ್ರೋರಾತ್ರಿ ಬರುವುದಿಲ್ಲ. ಅವುಗಳಿಗೆ ನೂರಾರು ವರ್ಷಗಳ ಪಾರಂಪರಿಕವಾದ ಹಿನ್ನೆಲೆ ಇರುವುದು ಸ್ಪಷ್ಟವಾಗುತ್ತದೆ. ವ್ಯಕ್ತಿಯು ಮರಣಾನಂತರವೂ ಅದೃಶ್ಯ ಸ್ಥಿತಿಯಲ್ಲಿದ್ದು, ಬದುಕಿರುತ್ತಾನೆ ಎಂಬ ನಂಬಿಕೆ ಅವರದು. ಇದಕ್ಕೆ ಪೋಷಕವಾಗಿ ಪಿತೃಪಕ್ಷದ ಆಚರಣೆಯು ನಮ್ಮಲ್ಲಿದೆ. ಇದನ್ನಂತೂ ಎಲ್ಲ ಸಮುದಾಯದವರೂ ಅತ್ಯಂತ ಶ್ರದ್ದೆಯಿಂದ ಆಚರಿಸುತ್ತಾರೆ. ಹೊಸಬಟ್ಟೆ, ಬಗೆಬಗೆಯ ತಿಂಡಿಗಳನ್ನು ಮಾಡಿ ಎಡೆ ಇಟ್ಟು ಭಕ್ತಿಯಿಂದ ತಮ್ಮ ಪೂರ್ವಿಕರನ್ನು ನೆನೆಯುತ್ತಾರೆ. ಈ ಪಿತೃಪಕ್ಷದ ಆಚರಣೆಯಲ್ಲಿ ಕೆಲವರು ಬ್ರಾಹ್ಮಣ ಪುರೋಹಿತರನ್ನು, ಕೆಲವರು ದಾಸಪ್ಪ, ಮತ್ತೆ ಕೆಲವರು ಜೋಗಪ್ಪನನ್ನು ಕರೆದು ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಇನ್ನು ಕೆಲವರು ತಾವೇ ನೇರವಾಗಿ ಎಡೆ ಇಡುವ ಮೂಲಕ ಪಿತೃಪಕ್ಷವನ್ನು ಆಚರಿಸುತ್ತಾರೆ. ಬಂಧು ಮಿತ್ರರನ್ನು ಕರೆದು ಸತ್ಕರಿಸುವ ಮೂಲಕ ಪೂರ್ವಿಕರಿಗೆ ಸ್ವರ್ಗ ಪ್ರಾಪ್ತಿಯಾಗಲಿ, ಮೋಕ್ಷ ದೊರೆಯಲಿ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹಾರೈಸುತ್ತ ಈ ಬಗೆಯ ಆಚರಣೆಗಳು ನಡೆಯುತ್ತವೆ. ಅಲ್ಲದೆ ಪಿತೃಗಳ ಪೂಜೆಯಿಂದ ಕಷ್ಟಗಳು ಕಳೆದು, ಮಕ್ಕಳ ಆರೋಗ್ಯ ಸುಧಾರಿಸಿ, ನಮ್ಮೆಲ್ಲರನ್ನು ಕಾಪಾಡಲಿ ಎಂಬ ಬಲವಾದ ನಂಬಿಕೆಯನ್ನು ಹೊಂದಿರುತ್ತಾರೆ.

ಇನ್ನು ಉಳಿದಂತೆ ಬರುವ ಯುಗಾದಿ, ದೀಪಾವಳಿ, ಸಂಕ್ರಾಂತಿ, ಶಿವರಾತ್ರಿ ಹಬ್ಬಗಳನ್ನು ಹೆಚ್ಚು ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬಗಳ ಆಚರಣೆಯಲ್ಲಿ ಬೇರೆ ಗ್ರಾಮಗಳಿಗಿಂತ ಏನೂ ವ್ಯತ್ಯಾಸ ಇರುವುದಿಲ್ಲ. ಆದರೆ ಕೆಲವು ಸ್ಥಳೀಯ ಹಬ್ಬಗಳ ಆಚರಣೆ ಗಮನಾರ್ಹ ವಾಗಿದೆ. ಅವುಗಳಲ್ಲಿ ಶಿವರಾತ್ರಿಯ ನಂತರ ಆಚರಿಸುವ ಮುನಿಯಪ್ಪನ ಹಬ್ಬ ಪ್ರಮುಖ ವಾದುದು.

ಈ ಹಬ್ಬವನ್ನು ಆಚರಿಸುವ ಸಂಬಂಧ ಊರಿನವರು ರಂಗ ಎಂಬ ಊರ ಮಧ್ಯದ ಸ್ಥಳದಲ್ಲಿ ಸಭೆ ಸೇರುತ್ತಾರೆ(ನೋಡಿ: ಚಿತ್ರ‑೬೫). ಈ ಹಬ್ಬದ ವೇಳೆಗೆ ಕೃಷಿ ಕೆಲಸಗಳೆಲ್ಲ ಮುಗಿದು, ಬಿಡುವು ಮಾಡಿಕೊಂಡಿರುತ್ತಾರೆ. ಸಭೆಯಲ್ಲಿ ಹಬ್ಬದ ದಿನವನ್ನು ನಿಗದಿಪಡಿಸುತ್ತಾರೆ. ಈ ಸಂಬಂಧವಾಗಿ ಕರಕಲು ಹಾಕುತ್ತಾರೆ. ನಂತರ ಕೆಲವು ಸಲಹೆ ಸೂಚನೆಗಳನ್ನು ಪರಿಶೀಲಿಸಿ ಊರಿನವರು ಅದನ್ನು ಪಾಲಿಸುವಂತೆ ತೀರ್ಮಾನ ಕೈಗೊಳ್ಳುತ್ತಾರೆ. ಹಬ್ಬದ ಹಿಂದಿನ ದಿನ ಊರಿನಲ್ಲಿ ಬನ್ನಂತಮ್ಮನ ಹಬ್ಬ ಆಚರಿಸುತ್ತಾರೆ. ಆ ದಿನ ಬೀದಿಗೊಂದರಂತೆ ಕುರಿ ಅಥವಾ ಮೇಕೆಯನ್ನು ಕೊಯ್ದು ಆ ಮಾಂಸವನ್ನು ಆ ಬೀದಿಯಲ್ಲಿರುವ ಎಲ್ಲ ಮನೆಯವರು ಹಂಚಿಕೊಳ್ಳುತ್ತಾರೆ. ಈ ಮಾಂಸದ ಪ್ರಮಾಣ ಸಾಮಾನ್ಯವಾಗಿ ೩೦೦ ಗ್ರಾಂನಿಂದ ೬೦೦ ಗ್ರಾಂವರೆಗೆ ಇರುತ್ತದೆ. ಹೀಗೆ ಊರಿನ ಎಲ್ಲ ಬೀದಿಯವರು ತಂತಮ್ಮ ಬೀದಿಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಮಾರನೆ ದಿನ ಮನೆಯನ್ನು ಗುಡಿಸಿ, ಸಾರಿಸಿಕೊಂಡು ಮಡಿಯಲ್ಲಿ ಪಾತ್ರೆಗಳನ್ನು ಶುದ್ಧಮಾಡಿಕೊಳ್ಳುತ್ತಾರೆ. ನಂತರ ಮಧ್ಯಾಹ್ನದ ವೇಳೆಗೆ ಪ್ರತಿ ಮನೆಯವರು ತಮ್ಮ ಅಡಿಗೆ ಪಾತ್ರೆಗಳನ್ನು ಹೆಡಿಗೆಯಲ್ಲಿ ಇಟ್ಟುಕೊಂಡು ಬೀದಿಯಲ್ಲಿ ಬರುವ ಮೆರವಣಿಗೆಯಲ್ಲಿ ಸೇರಿಕೊಂಡು ಮುಂದೆ ಸಾಗುತ್ತಾರೆ. ಈ ಮೆರವಣಿಗೆಯಲ್ಲಿ ಊರಿನ ಆಯ್ಕೆಗೊಂಡ ಮಡಿವಾಳ ಜನಾಂಗದ ವ್ಯಕ್ತಿಯೊಬ್ಬ ಮಣೆಯಲ್ಲಿ ಮಣ್ಣಿನ ಮೂರ್ತಿಯನ್ನಿಟ್ಟುಕೊಂಡು ಮುಂದೆ ಸಾಗುತ್ತಾನೆ. ಪ್ರತಿ ಮನೆಯವರು ಈ ಮೂರ್ತಿಗೆ ಅರಿಸಿನ ಕುಂಕುಮವನ್ನಿಟ್ಟು ಪೂಜಿಸಿ ನಂತರ ತಾವು ಮೆರವಣಿಗೆಯೊಂದಿಗೆ ಹೋಗುತ್ತಾರೆ.

ಹೀಗೆ ಊರನ್ನೆಲ್ಲ ಸುತ್ತಾಡಿದ ನಂತರ ಮೆರವಣಿಗೆಯು ಊರಿನ ಉತ್ತರಕ್ಕಿರುವ ಅಪ್ಪರಸನ ಕಟ್ಟೆಯ ಬಳಿ ಇರುವ ತೋಟದಲ್ಲಿ ಸೇರುತ್ತದೆ. ಅಲ್ಲಿ ಸಾಲಾಗಿ ಒಲೆಗಳನ್ನು ಹಚ್ಚಿಕೊಂಡು ಅಡುಗೆ ಮಾಡಲು ಆರಂಭಿಸುತ್ತಾರೆ. ಅವರವರ ಶಕ್ತಾನುಸಾರ ಮೇಕೆ ಅಥವಾ ಕುರಿಯನ್ನು ಕೊಯ್ದು ಅಡುಗೆಯನ್ನು ಮಾಡಿ ಮರದ ಬುಡದಲ್ಲಿ ಪೂಜಿಸಿರುವ ಮುನಿಯಪ್ಪ ದೇವರಿಗೆ ಎಡೆ ನೀಡುತ್ತಾರೆ. ನಂತರ ತಾವು ಊಟಮಾಡಿ ಉಳಿದ ಅಡುಗೆಯನ್ನು ಮನೆಗೆ ಸಾಗಿಸಿ, ಮಾರನೆ ದಿನವೂ ಸಹ ಅದನ್ನೆ ಊಟಮಾಡುತ್ತಾರೆ.

ಇಲ್ಲಿ ಮುನಿಯಪ್ಪ ದೇವರು ಕೃಷಿಭೂಮಿಯಲ್ಲಿ ಅಡ್ಡಾಡುತ್ತಾನೆ ಎಂಬುದು ಜನಪದರ ನಂಬಿಕೆ. ಅವರ ಕಲ್ಪನೆಯ ಮುನಿಯಪ್ಪ ದೇವರು, ಜಡೆಯನ್ನು ಬಿಟ್ಟಿದ್ದು, ದಪ್ಪ ಕಣ್ಣುಗಳ ಭಯಾನಕ ರೂಪವೆಂದು ತಿಳಿದಿದ್ದಾರೆ. ಮುನಿಯಪ್ಪ ಕೆಲವೊಮ್ಮೆ ಸರ್ಪದ ರೂಪದಲ್ಲಿ ಇದ್ದು ಕೃಷಿಭೂಮಿಯಲ್ಲಿ ಅಡ್ಡಾಡುತ್ತಾನೆ ಎಂದು ನಂಬುತ್ತಾರೆ. ಅವನಿಂದ ಯಾವುದೇ ತೊಂದರೆಯಾಗಬಾರದೆಂಬ ನಂಬಿಕೆಯಿಂದಲೂ ಸಹ ಈ ಆಚರಣೆಯನ್ನು ಮಾಡುತ್ತಾರೆ. ಇದನ್ನು ಇತರೆಡೆ ಮುನಿಸೇವೆ ಎಂದು ಸಹ ಕರೆಯುತ್ತಾರೆ. ಹೀಗಾಗಿ ತೊಣ್ಣೂರಿನ ಜನಪದರ ಹಬ್ಬಗಳ ಆಚರಣೆಯಲ್ಲಿ ಮುನಿಯಪ್ಪನಹಬ್ಬ ವಿಶಿಷ್ಟವಾದ ಸ್ಥಾನ ಪಡೆದಿದೆ. ಇದರ ಹಿಂದಿರುವ ಸಾಂಸ್ಕೃತಿಕ ಆಶಯಗಳು ಮಹತ್ವದ್ದಾಗಿವೆ. ಹಬ್ಬದ ದಿನ ಊರಿನ ಎಲ್ಲಾ ಜಾತಿಯವರು ಒಂದೇ ಕಡೆ ಅಡುಗೆ ಮಾಡುತ್ತಾರೆ. ಆದರೂ ಒಲೆಗಳ ಸಾಲುಗಳು ಆಯಾಯ ಜಾತಿಯವರಿಗೆ ಪ್ರತ್ಯೇಕವಾಗಿ ಇರುತ್ತವೆ. ಈ ಜಾತಿಗಳಲ್ಲಿ ಹೊಲೆಯರನ್ನು ಮಾತ್ರ ಹೊರಗಿಟ್ಟಿರುವುದು ದುರದೃಷ್ಟಕರ. ಈ ಹಬ್ಬದ ಸಂದರ್ಭದಲ್ಲಿ ಉಳಿದ ಎಲ್ಲ ಜಾತಿಯವರು ತೋಟದಲ್ಲಿ ಅಡುಗೆ ಮಾಡುವ ಹಕ್ಕು ಮತ್ತು ಅವಕಾಶವನ್ನು ಪಡೆದಿರುತ್ತಾರೆ. ಹಾಗಾಗಿ ಹೊಲೆಯರನ್ನು ಊರಿನ ಒಳನಿವಾಸಿಗಳೆಂದು ಪರಿಗಣಿಸದಿರುವುದು ಇಲ್ಲಿ ಎದ್ದು ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಸಂಬಂಧವಾದ ಚಟುವಟಿಕೆಗಳಲ್ಲಿ ಅವರ ಸೇವೆಯನ್ನು ಪಡೆಯಲಾಗುತ್ತದೆ. ಈ ಬಗೆಯ ಕೆಲವು ಗ್ರಾಮೀಣ ಜಾನಪದೀಯ ಹಬ್ಬಗಳು ಅಸ್ಪೃಶ್ಯತೆಯ ಆಚರಣೆಯಿಂದ ಮುಕ್ತವಾಗಿಲ್ಲ.

ಈ ಊರಿನ ಮತ್ತೊಂದು ಜಾನಪದೀಯ ಹಬ್ಬವೆಂದರೆ ಹಲವು ವರ್ಷಗಳಿಂದ ನಿಂತುಹೋಗಿರುವ ಪಟ್ಲಮ್ಮನ ಹಬ್ಬ. ಈ ಹಬ್ಬವು ೪೦ ವರ್ಷದ ನಂತರ ೧೯೭೪ ‑೭೫ರಲ್ಲಿ ನಡೆದಿತ್ತು. ಅನಂತರ ಇಂದಿನವರೆಗೂ ಈ ಹಬ್ಬ ನಡೆದಿಲ್ಲ. ಒಂದು ವಾರಕಾಲ ನಡೆಯುವ ಈ ಹಬ್ಬದಲ್ಲಿ ಊರನ್ನು ತಳಿರುತೋರಣಗಳಿಂದ ಅಲಂಕರಿಸಿ, ಊರ ಮಧ್ಯದಲ್ಲಿರುವ ರಂಗದಲ್ಲಿ ಕುಣಿತದ ಕಾರ್ಯಕ್ರಮ ಹಗಲು ರಾತ್ರಿಯೆನ್ನದೆ ನಡೆಯುತ್ತದೆ. ತಮಟೆಯ ಸದ್ದಿಗೆ ಹೆಜ್ಜೆಹಾಕುವ ಈ ನೃತ್ಯದಲ್ಲಿ ಪುರುಷರು ಬಣ್ಣದ ಕರವಸ್ತ್ರವನ್ನಿಡಿದು ಸಾಲಾಗಿ ಕುಣಿಯುತ್ತಾರೆ. ಈ ನೃತ್ಯ ಬುಡಕಟ್ಟು ಜನರ ನೃತ್ಯವನ್ನು ನೆನಪಿಸುತ್ತದೆ. ಹಾಗು ಪ್ರಾಗಿತಿಹಾಸಕಾಲದ ಗವಿವರ್ಣ ಚಿತ್ರಗಳಲ್ಲಿನ ಸಮೂಹ ನೃತ್ಯವನ್ನು ಹೋಲುತ್ತದೆ. ಅಂದರೆ ಬೇಟೆ ಮತ್ತು ಪಶುಪಾಲನೆ ಹಂತದ ಸಾಮೂಹಿಕ ನೃತ್ಯಗಳು ಇಂದಿಗೂ ಸಮಾಜದಲ್ಲಿ ಉಳಿದು ಬಂದು, ಚಾಲ್ತಿಯಲ್ಲಿರುವುದು ಗಮನಾರ್ಹ ಸಂಗತಿ. ರಂಗದ ನೈರುತ್ಯ ಮೂಲೆಯಲ್ಲಿ ಬಿದಿರಿನ ಗೋಪುರವನ್ನು ನಿರ್ಮಿಸುತ್ತಾರೆ. ಈ ಬಿದಿರುಗಳಿಗೆ ಹರಕೆ ಹೊತ್ತವರು ಬಾಳೆಗೊನೆ ಕಟ್ಟುತ್ತಾರೆ. ಹಬ್ಬದ ಕೊನೆದಿನ ತಂತಮ್ಮ ಬಾಳೆಗೊನೆಯನ್ನು ಬಿಚ್ಚಿಕೊಂಡು ಮನೆಗೆ ಒಯ್ಯುತ್ತಾರೆ. ಈ ಸಂದರ್ಭದಲ್ಲಿ ಹರಕೆ ಹೊತ್ತವರು ಬಾಯಿಗೆ ಬೀಗ ಹಾಕಿಸಿಕೊಳ್ಳುತ್ತಾರೆ. ಎರಡು ಕೆನ್ನೆಗಳ ನಡುವೆ ತಂತಿಯನ್ನು ಚುಚ್ಚಲಾಗುತ್ತದೆ. ಈ ಹರಕೆಯಲ್ಲಿ ಹೆಚ್ಚಾಗಿ ಸ್ತ್ರೀಯರು ಭಾಗಿಗಳಾಗಿರುತ್ತಾರೆ. ಈ ಎಲ್ಲಾ ಆಚರಣೆಗಳ ಹಿನ್ನೆಲೆಯಲ್ಲಿ ತೊಣ್ಣೂರಿನ ಪಟ್ಲಮ್ಮನ ಹಬ್ಬ ವಿಶೇಷ ಆಚರಣೆ ಎನ್ನಬಹುದು.

ಇನ್ನು ತೊಣ್ಣೂರಿನ ಗ್ರಾಮಸ್ಥರು ಊರಿನ ಶಿಷ್ಟ ದೇವರುಗಳ ಜಾತ್ರೆ ಹಾಗೂ ವಿಶೇಷ ಪೂಜಾಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಇಲ್ಲಿನ ಗೋಪಾಲಕೃಷ್ಣ ದೇವರ ಜಾತ್ರೆಯ ಹಿಂದಿನ ದಿನ ನಡೆಯುವ ದೇವರ ವಿವಾಹದಲ್ಲಿ, ಊರಿನ ಜನರು ದೇವರುಗಳಿಗೆ ಹಣದ ರೂಪದಲ್ಲಿ ಮುಯ್ಯಿಯನ್ನು ಸಲ್ಲಿಸಿ ಅರ್ಚಕರಿಂದ ಓದಿಸುತ್ತಾರೆ. ಶಿವರಾತ್ರಿಯಂದು ಊರಿನವರೆಲ್ಲ ಇಲ್ಲಿನ ಕೈಲಾಸೇಶ್ವರ ದೇವಾಲಯದಲ್ಲಿ ನೆರೆದು ಪೂಜೆ ಸಲ್ಲಿಸುತ್ತಾರೆ. ಮಾರನೆದಿನ ದೇವಾಲಯದ ಆವರಣದಲ್ಲಿ ಅಡುಗೆ ಮಾಡಿ ಬಂದಂತಹ ಭಕ್ತರಿಗೆ ಪ್ರಸಾದವನ್ನು ವಿತರಿಸುತ್ತಾರೆ. ಇನ್ನು ಸಂಕ್ರಾಂತಿಯಂದು ದನಗಳಿಗೆ ಬಣ್ಣ ಬಳಿದು, ಬೆಂಕಿಯಲ್ಲಿ ಕಿಚಾಯಿಸುತ್ತಾರೆ. ಆ ದಿನ ಮನೆಗಳಲ್ಲಿ ವಿಶೇಷವಾದ ಅಡುಗೆಗಳನ್ನು ಮಾಡಿಕೊಳ್ಳುತ್ತಾರೆ.

ತೊಣ್ಣೂರಿನಲ್ಲಿರುವ ಮುಸ್ಲಿಮರು ಭಾವೈಕ್ಯತೆಗೆ ಹೆಸರಾದವರು. ದರ್ಗದಲ್ಲಿ ನಡೆಯುವ ಉರುಸ್ ಕಾರ್ಯಕ್ರಮದಲ್ಲಿ ಊರಿನವರೆಲ್ಲರು ಭಾಗವಹಿಸಿ ಸೈಯದ್ ಸಾಲಾರ್ ಮಸೂದ್ ಸೂಫಿ ಸಂತನ ಸಮಾಧಿಗೆ ಗಂಧ ಹಚ್ಚುತ್ತಾರೆ. ಬಹುತೇಕ ಹಿಂದುಗಳು ಸಹ ಈ ದರ್ಗಕ್ಕೆ ಭೇಟಿ ನೀಡಿ, ತಮ್ಮ ಕಷ್ಟಗಳ ಪರಿಹಾರಕ್ಕೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ತೊಣ್ಣೂರಿನ ಜನರು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಹೆಸರಾಗಿದ್ದಾರೆ. ಪರಸ್ಪರ ಗೌರವಿಸುತ್ತಾರೆ. ಹಬ್ಬಗಳಲ್ಲಿ ಭಾಗಿಯಾಗಿ ಉಟೋಪಚಾರ ನಡೆಸುತ್ತಾರೆ. ಮೈಸೂರು ಅರಸರು ತಮ್ಮ ಆಳ್ವಿಕೆಯವರೆಗೂ ಈ ಉರುಸಿಗೆ ಧೂಪವನ್ನು ಕಳುಹಿಸುತ್ತಿದ್ದರಂತೆ. ಗಂಧವನ್ನು ಆನೆಯ ಮೇಲೆ ಗೌರವದಿಂದ ತರಲಾಗುತ್ತಿತ್ತು.

ತೊಣ್ಣೂರಿನ ಜನರು ಸ್ನೇಹಪರರು, ಜಾತ್ಯಾತೀತ ನಿಲುವುಳ್ಳವರು ಆಗಿದ್ದು, ಜನರ ಕಷ್ಟಸುಖಗಳಿಗೆ ನೆರವಾಗುತ್ತಾರೆ. ಅಪ್ಪಟ ಜಾನಪದೀಯರಾಗಿದ್ದರೂ ಸಹ ಶಿಷ್ಟ ನಂಬಿಕೆ ಮತ್ತು ಆಚರಣೆಗಳನ್ನು ಹೆಚ್ಚಾಗಿ ಆಚರಿಸುತ್ತಾರೆ. ಜನನ, ಮರಣ, ಋತುಮತಿ ಮತ್ತು ವಿವಾಹ ಕಾರ್ಯಗಳಿಗೆ ಬ್ರಾಹ್ಮಣ ಪುರೋಹಿತರನ್ನು ಕರೆದು ಪುಣ್ಯಾಹ ಮಾಡಿಸುತ್ತಾರೆ. ಹಸು, ಕರು ಹಾಕಿದಾಗ ಗಿಣ್ಣಿನ ಊಟ ಏರ್ಪಡಿಸುತ್ತಾರೆ. ಹೀಗೆ ತಮ್ಮ ಬದುಕಿನ ಬವಣೆಗಳ  ನಡುವೆಯೂ ನಂಬಿಕೆ ಮತ್ತು ಆಚರಣೆಗಳನ್ನು ಜೀವಂತವಾಗಿರಿಸಿಕೊಂಡು ಅರ್ಥಪೂರ್ಣ ಜೀವನವನ್ನು ನಡೆಸುತ್ತಿದ್ದಾರೆ.

ಜನರು ತಮ್ಮ ಆಹಾರದಲ್ಲಿ ಹೆಚ್ಚಾಗಿ ರಾಗಿಯನ್ನು ಬಳಸುತ್ತಾರೆ. ರಾಗಿಯಲ್ಲಿ ರೊಟ್ಟಿ ಮತ್ತು ಮುದ್ದೆಯನ್ನು ಮಾಡಿಕೊಳ್ಳುತ್ತಾರೆ. ಹುರುಳಿ, ತೊಗರಿಬೇಳೆ, ಅವರೆ, ಅಲಸಂದಿ ಕಾಳುಗಳನ್ನು ಸಾಂಬಾರಿಗೆ ಬಳಸುತ್ತಾರೆ. ಅನ್ನವನ್ನು ಅಲ್ಪ ಪ್ರಮಾಣದಲ್ಲಿ ಮುದ್ದೆಯ ನಂತರ ಸೇವಿಸುತ್ತಾರೆ. ಮಾಂಸಾಹಾರದ ಸೇವನೆ ಸಾಮಾನ್ಯವಾಗಿರುತ್ತದೆ. ಸಸ್ಯಾಹಾರಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅದರಲ್ಲೂ ಸೊಪ್ಪಿನ ಸಾರ(ಉಪ್ಸಾರು)ನ್ನು ಹೆಚ್ಚು ಮಾಡುತ್ತಾರೆ. ಆಧುನಿಕ ಸಂದರ್ಭಕ್ಕೆ ತಕ್ಕಂತೆ ಹಾಗೂ ನೀರಾವರಿ ಸೌಕರ್ಯದಿಂದಾಗಿ ಇಂದು ಹೆಚ್ಚು ಹೆಚ್ಚು ಭತ್ತ ಬೆಳೆಯುತ್ತಾರೆ. ಇದರಿಂದ ಅವರ ಆಹಾರ ಕ್ರಮದಲ್ಲೂ ವ್ಯತ್ಯಾಸ ಉಂಟಾಗಿದೆ. ರಾಗಿ ಬಳಕೆ ಕಡಿಮೆಗೊಂಡು ಅಕ್ಕಿಯ ಬಳಕೆ ಹೆಚ್ಚಾಗಿದೆ. ಕೆಲವು ಹಿರಿಯರು ತಮ್ಮ ಹಿಂದಿನ ಊಟದ ಕ್ರಮವನ್ನು ಕುರಿತು ಮೆಚ್ಚುಗೆಯ ಮಾತನಾಡುತ್ತಾರೆ. ಮುದ್ದೆ, ರೊಟ್ಟಿಯ ಬದಲಿಗೆ ಇಂದು ದೋಸೆ, ಇಡ್ಲಿ, ಮಸಾಲೆ ಅನ್ನ(ಫಲಾವ್)ದಂತಹ ಆಹಾರಗಳು ಪ್ರಮುಖವಾಗಿವೆ.

ಕಾಲಕ್ಕೆ ತಕ್ಕಂತೆ ವೇಷಭೂಷಣಗಳಲ್ಲೂ ಬದಲಾವಣೆ ಕಾಣುತ್ತೇವೆ. ಗಂಡಸರು ದೋತಿ, ಅಂಗಿ, ಟವಲ್ ಧರಿಸುತ್ತಾರೆ. ಯುವಕರು ಸಾಮಾನ್ಯವಾಗಿ ಪ್ಯಾಂಟ್ ಮತ್ತು ಅಂಗಿ ತೊಡುತ್ತಾರೆ. ಮಹಿಳೆಯರಲ್ಲಿ ಹಿರಿಯ ಸ್ತ್ರೀಯರನ್ನು ಹೊರತುಪಡಿಸಿದರೆ ಉಳಿದಂತೆ ಆಧುನಿಕ ಸೀರೆ,  ನೈಟಿ, ಚೂಡಿದಾರ್‌ನಂತಹ ವಸ್ತ್ರಗಳನ್ನು ಧರಿಸುತ್ತಾರೆ. ಒಟ್ಟಿನಲ್ಲಿ ಆಧುನಿಕ ಜೀವನ ಕ್ರಮಕ್ಕೆ ಮುಖಮಾಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದರೂ ಹಳೆಯ ನಂಬಿಕೆ ಮತ್ತು ಆಚರಣೆಗಳನ್ನು ತಪ್ಪದೇ ಪಾಲಿಸುತ್ತಾರೆ.