ಭೌಗೋಳಿಕವಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳು ಸ್ವಲ್ಪ ಹೆಚ್ಚು ಕಡಿಮೆ ಒಂದೇ ಲಕ್ಷಣಗಳನ್ನು ಹೊಂದಿವೆ ಎಂದು ಹೇಳಬಹುದು. ಬೀಳುವ ಮಳೆ, ಚಳಿ, ಹವಾಗುಣದಲ್ಲಿ ಅಂತಹ ಹೆಚ್ಚಿನ ಬದಲಾಣೆಗಳು ಕಂಡುಬರುವುದಿಲ್ಲ (ಮೈಸೂರಿನಲ್ಲಿ ಚಾಮುಂಡಿಬೆಟ್ಟ, ಪಾಂಡವಪುರದಲ್ಲಿ ಫ್ರೆಂಚ್‌ರಾಕ್ಸ್, ರಾಮನಗರದಲ್ಲಿ ಕಂಡುಬರುವ ಬೆಟ್ಟಗುಡ್ಡಗಳೇ ಹೆಚ್ಚು ಪ್ರಮುಖವಾದುದು. ಇವುಗಳು ವಾಯುಗುಣ, ಮಳೆ, ಗಾಳಿ ಇತ್ಯಾದಿಗಳು ಸಮತೋಲನದಲ್ಲಿ ಇರುವಂತೆ ಸ್ವಾಭಾವಿಕವಾಗಿ ನೋಡಿಕೊಂಡು ಬಂದಿವೆ). ಅದೇ ರೀತಿ ಯದುಗಿರಿ ಬೆಟ್ಟ ಪ್ರದೇಶದಿಂದ ತೊಣ್ಣೂರು ಸಹ ಸಮತೋಲನ ದಲ್ಲಿದ್ದು, ಅಂತಹ ಯಾವುದೆ ಪ್ರಾಕೃತಿಕ ಅಸಮತೋಲನ ಕಂಡುಬರುವುದಿಲ್ಲ ಮತ್ತು ಇಲ್ಲಿನ ಕೆರೆಗೆ ಹೆಚ್ಚಿನ ನೀರು ಇತಿಹಾಸ ಪೂರ್ವ ಕಾಲದಿಂದಲೂ ಸಂಗ್ರಹವಾಗುತ್ತಾ ಬಂದಿದೆ.

ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಪಾಂಡವಪುರ ತಾಲ್ಲೂಕಿನಲ್ಲಿ ಮಳೆಗಾಲವಿರುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆಯನ್ನು ತೆಗೆದುಕೊಂಡರೆ ಅದು ವಾರ್ಷಿಕವಾಗಿ ಸುಮಾರು ೨೭.೨೧ರಿಂದ ೨೯.೨೧ ಇಂಚುಗಳಷ್ಟು ಮಳೆ ಬೀಳುತ್ತದೆಂದು ತಿಳಿದುಬಂದಿದೆ. ದಿನಾಂಕ ೧೨ ನವೆಂಬರ್ ೧೯೨೫ ರಂದು ನಾಗಮಂಗಲದಲ್ಲಿ ಸತತವಾಗಿ ೨೪ ಗಂಟೆಗಳ ಕಾಲ ೭.೯೦ ಇಂಚಿನಷ್ಟು (೨೦೦.೭ ಮಿ.ಮೀ.) ಬಿದ್ದ ಮಳೆಯೇ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಒಂದು ದಿವಸದಲ್ಲಿ ಬಿದ್ದ ಅತಿ ಹೆಚ್ಚು ಮಳೆಯಾಗಿದೆ.

ವಾತಾವರಣದ ತಾಪಮಾನವನ್ನು ಅಳೆಯುವ ಸಲಕರಣೆ ೧೯೬೭ರವರೆಗೆ ಈ ಜಿಲ್ಲೆಯಲ್ಲಿ ಅಳವಡಿಸಿರಲಿಲ್ಲ. ಆದ್ದರಿಂದ ಜಿಲ್ಲೆಯ ತಾಪಮಾನವನ್ನು ಅಳೆಯಲು ಪಕ್ಕದ ಮೈಸೂರು ಜಿಲ್ಲೆಯ ತಾಪಮಾನ ಯಂತ್ರದ ಸಹಾಯದಿಂದಲೇ ಅಳೆಯಲಾಗುತ್ತಿತ್ತು. ಅದರಂತೆ ಮಂಡ್ಯ ಜಿಲ್ಲೆಯ ತಾಪಮಾನವು ಅತಿಹೆಚ್ಚು ಶಾಖವುಳ್ಳ ತಿಂಗಳುಗಳಲ್ಲಿ ೩೭ರಿಂದ ೩೫ ಡಿಗ್ರಿ ಸೆಲ್ಸಿಯಸ್ ಇದ್ದರೆ ಅತ್ಯಂತ ಕಡಿಮೆ ತಾಪಮಾನವು ೧೬ರಿಂದ ೧೦.೬ ಡಿಗ್ರಿ ಸೆಲ್ಸಿಯಸ್ ಇರುತ್ತದೆಂದು ತಿಳಿದುಬಂದಿದೆ.

ಇನ್ನು ೧೯೬೧ರ ಜನಗಣತಿಯಂತೆ ಪಾಂಡವಪುರ ತಾಲ್ಲೂಕಿನಲ್ಲಿ ಒಟ್ಟು ೮೭,೬೦೯ ಜನಸಂಖ್ಯೆಯಿತ್ತೆಂದು ತಿಳಿದುಬಂದಿದೆ. ೧೯೫೧ರಲ್ಲಿ ಇದೇ ತಾಲ್ಲೂಕಿನಲ್ಲಿ ೭೦,೩೯೫ರಷ್ಟು ಜನಸಂಖ್ಯೆ ಇದ್ದದ್ದು ಹತ್ತು ವರ್ಷಗಳಲ್ಲಿ ೧೭,೨೧೪ರಷ್ಟು ಹೆಚ್ಚಾಗಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಲೆಕ್ಕ ಮಾಡಿದರೆ ಇಂದು ಸುಮಾರು ೭೨,೦೦೦ದಷ್ಟು ಜನಸಂಖ್ಯೆ ಹೆಚ್ಚಾಗಿರಬಹುದು, ಅಂದರೆ ಈಗ ಆ ಪಾಂಡವಪುರ ತಾಲ್ಲೂಕಿನಲ್ಲಿ ಸುಮಾರು ೧,೬೦,೦೦೦ಕ್ಕೂ ಹೆಚ್ಚು ಜನಸಂಖ್ಯೆ ಇರಬಹುದು.

ಮಂಡ್ಯ ಜಿಲ್ಲೆಯ ಪ್ರಾಗಿತಿಹಾಸವನ್ನು ತೆಗೆದುಕೊಂಡರೆ ಪಾಂಡವಪುರ ತಾಲ್ಲೂಕು ಬಹಳ ಮುಖ್ಯವಾಗುತ್ತದೆ. ಇಲ್ಲಿಯ ಕುಂತಿಬೆಟ್ಟದಲ್ಲಿ (ಫ್ರೆಂಚ್ ರಾಕ್ಸ್) ರಾಬರ್ಟ್ ಬ್ರೂಸ್ ಫೂಟ್ ಅವರು ೧೪, ಡಿಸೆಂಬರ್ ೧೯೦೫ರಲ್ಲಿ ನವಶಿಲಾಯುಗದ ಕೆಲವು ಅವಶೇಷಗಳನ್ನು ಕಂಡುಹಿಡಿದು ೧೯೧೬ರಲ್ಲಿ ತಮ್ಮ ಪುಸ್ತಕ(Indian Prehistoric and Protohistoric Antiquities)ದಲ್ಲಿ ಪ್ರಕಟಿಸಿದ್ದಾರೆ.

ಅವರ ನಂತರ ಡಾ.ಎಂ.ಎಸ್.ಕೃಷ್ಣಮೂರ್ತಿಯವರು ಸಹ ಇದೇ ಕುಂತಿಬೆಟ್ಟದಲ್ಲಿ (ಫ್ರೆಂಚ್ ರಾಕ್ಸ್) ಸಂಶೋಧನೆ ನಡೆಸಿ ಪ್ರಾಗಿತಿಹಾಸದ ಅವಶೇಷಗಳನ್ನು ಸಂಗ್ರಹಿಸಿ ಆರ್ಕಿಯಾಲಾಜಿಕಲ್ ಸ್ಟಡೀಸ್‌ನಲ್ಲಿ ಪ್ರಕಟಿಸಿದ್ದಾರೆ. ಇತಿಹಾಸ ಮತ್ತು ಸಂಸ್ಕೃತಿ, ಸಂಪುಟ‑೪ (೧೯೮೯)ರಲ್ಲೂ ಸಹ ಪ್ರಕಟಿಸಿದ್ದಾರೆ. ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನನ ಕಾಲದಲ್ಲಿ ಫ್ರೆಂಚರ ಒಂದು ತುಕಡಿ ಸೈನ್ಯವು ಇಲ್ಲಿ ಬೀಡು ಬಿಟ್ಟಿದ್ದರಿಂದ, ಈ ಗುಡ್ಡಗಳಿಗೆ ಫ್ರೆಂಚ್ ರಾಕ್ಸ್ ಎಂಬ ಹೆಸರು ಬಂದಿತು. ಇಲ್ಲದಿದ್ದರೆ ಸ್ಥಳೀಯವಾಗಿ ಇಂದಿಗೂ ಸಹ ಈ ಬೆಟ್ಟಗುಡ್ಡ ಪ್ರದೇಶವನ್ನು ಅಕ್ಕ‑ತಂಗಿ ಬೆಟ್ಟ ಎಂದು ಕರೆಯುತ್ತಾರೆ. ಡಾ.ಸಿ. ಮಹದೇವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಶ್ರೀರಂಗಪಟ್ಟಣದ ಕಾವೇರಿ ನದಿತೀರದಲ್ಲಿ ಸೂಕ್ಷ್ಮಶಿಲಾಯುಗ ಕಾಲದ ಕಲ್ಲಿನ ಆಯುಧಗಳನ್ನು ಸಂಗ್ರಹಿಸಿದ್ದಾರೆ.

ಇದಿಷ್ಟು ಮಂಡ್ಯ ಜಿಲ್ಲೆಯಲ್ಲಿ ಇದುವರೆವಿಗೂ ನಡೆದಿರುವ ಪ್ರಾಗಿತಿಹಾಸ ಕಾಲದ ಸಂಶೋಧನೆಗಳಾಗಿದ್ದು ಈ ತೊಣ್ಣೂರಿನ ಭಾಗದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದಿರಲಿಲ್ಲ. ದಿನಾಂಕ ೨೭‑೦೮‑೧೯೯೫ರಂದು ಇದೇ ಪಕ್ಕದ ಅಂದರೆ ತೊಣ್ಣೂರು ಕೆರೆಯ ಹಿನ್ನೀರಿನ ಭಾಗದಲ್ಲಿ ಬರುವ ಸಣಬದ ಸ್ನೇಹಿತರಾದ ಉಗ್ರನರಸಿಂಹೇಗೌಡರು ಹೇಮಾವತಿ ನದಿಯ ನೀರಿನ ಸಂಪರ್ಕಕ್ಕಾಗಿ ಕಾಲುವೆ ತೋಡುವ ಸಂದರ್ಭದಲ್ಲಿ ಸಿಕ್ಕಿದ ಕೆಲವು ಮಡಿಕೆ ಚೂರುಗಳನ್ನು ಸಂಗ್ರಹಿಸಿ ತೆಗೆದುಕೊಂಡು ಬಂದರು. ಅವುಗಳ ಆಧಾರದ ಮೇಲೆ ಇಲ್ಲಿ ಒಂದು ಉತ್ತಮ ಮಟ್ಟದ ಸಂಶೋಧನೆಯನ್ನು ಕೈಗೊಂಡಾಗ, ಇದುವರೆವಿಗೂ ಕರ್ನಾಟಕ ರಾಜ್ಯದ ಬೃಹತ್ ಶಿಲಾಯುಗ ಸಂಸ್ಕೃತಿಯ ಯಾವ ನೆಲೆಗಳಲ್ಲೂ ದೊರೆಯದ ಸಂಶೋಧನಾತ್ಮಕ ಮಾಹಿತಿಗಳು ಲಭ್ಯವಾದವು.

ನನ್ನ ಸಂಶೋಧನೆಯಿಂದ ಕಂಡು ಬಂದಿದ್ದೇನೆಂದರೆ ಈ ತೊಣ್ಣೂರಿನ ಕೆರೆಯ ಹಿನ್ನೀರಿನಲ್ಲಿ ಬೃಹತ್‌ಶಿಲಾಯುಗ ಸಂಸ್ಕೃತಿಯ ಅನೇಕ ಸಮಾಧಿಗಳು ಕಂಡುಬಂದವು. ಅವುಗಳಲ್ಲಿ ಬಹಳಷ್ಟು ಸಮಾಧಿಗಳು ಹಾಳಾಗಿದ್ದರೂ, ಅಲ್ಲಿ ಕೆಲವು ಮೇಲ್ ಹಾಸುಕಲ್ಲು (Cap-Stone) ಪಿಟ್ ಸಮಾಧಿಗಳು, ಕಲ್ಲು ವೃತ್ತಗಳುಳ್ಳ ಸಮಾಧಿಗಳು, ಸಿಸ್ಟ್ (ಹಾದಿ ಕೋಣೆ) ಸಮಾಧಿಗಳು ಮತ್ತು ಕೇರನ್ ವೃತ್ತಗಳು ಕಂಡುಬಂದವು. ಇವುಗಳಲ್ಲಿ ಅನೇಕ ಸಮಾಧಿಗಳು ಈಗ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಮುಳುಗಿಹೋಗಿರುವ ಸಂಭವವು ಇದೆ.

ಮಡಿಕೆಗಳು

ಕರ್ನಾಟಕದ ಬೇರೆ ಬೃಹತ್ ಶಿಲಾಯುಗದ ನೆಲೆಗಳಲ್ಲಿ ಕಂಡುಬರುವ ಕೆಂಪು, ಕಪ್ಪು ಮತ್ತು ಕೆಂಪು ಮಿಶ್ರಿತ ಕಪ್ಪುಮಡಿಕೆ ಚೂರುಗಳು ಇಲ್ಲಿಯೂ ಸಹ ಕಂಡುಬಂದಿವೆ. ತೊಣ್ಣೂರಿನ ಕೆಲವು ಕೆಂಪು ಮಡಿಕೆಗಳು ಮೂರು ಅಥವಾ ನಾಲ್ಕು ಕಾಲುಗಳುಳ್ಳವುಗಳಾಗಿದ್ದು ಮೈಸೂರು ಜಿಲ್ಲೆಯ ಕೊಪ್ಪ ಹಾಗೂ ಟಿ.ನರಸೀಪುರಗಳಲ್ಲಿ ನಡೆಸಿರುವ ಉತ್ಖನನಗಳಲ್ಲಿ ದೊರಕಿರುವ ಮಡಿಕೆಗಳಿಗೆ ಬಹಳ ಹೋಲಿಕೆಯಾಗುತ್ತದೆ. ಈ ಮಡಿಕೆ ಚೂರುಗಳನ್ನು ಅಧ್ಯಯನ ಮಾಡಿದರೆ ಅವುಗಳು ಸಣ್ಣ ಹಾಗು ಮಧ್ಯಮ ಗಾತ್ರದ ಮಡಿಕೆಗಳಾಗಿದ್ದು, ಗೃಹಬಳಕೆಯ ವಸ್ತುಗಳಾಗಿರಬಹುದು. ಕೆಲವು ಕೆಂಪು ಮಿಶ್ರಿತ ಕಪ್ಪುಮಡಿಕೆಗಳ ಮೇಲೆ ಹೊರಭಾಗದಲ್ಲಿ ಗ್ರಾಫಿಟಿ ಗುರುತುಗಳಿರುವುದು ಸಹ ಕಂಡುಬಂದಿದೆ. ಈ ಗ್ರಾಫಿಟಿ ಗುರುತುಗಳು ಕರ್ನಾಟಕದ ಇತರೆ ಬೃಹತ್‌ಶಿಲಾಯುಗ ಸಂಸ್ಕೃತಿಯ ಗ್ರಾಫಿಟಿ ಗುರುತುಗಳಿಗೆ ಹೋಲಿಕೆಯಾಗುತ್ತವೆ.

ಅಪರೂಪದ ಮುಖ್ಯ ಸಂಶೋಧನೆ: ಇದುವರೆವಿಗೂ ಕರ್ನಾಟಕದಲ್ಲಾಗಲಿ ಅಥವಾ ದಕ್ಷಿಣ ಭಾರತದ ಬೃಹತ್‌ಶಿಲಾಯುಗ ಕಾಲದ ನೆಲೆಗಳಲ್ಲಾಗಲಿ ಅಥವಾ ಸಮಾಧಿ ನೆಲೆಗಳಲ್ಲಾಗಲಿ ಕಂಡುಬರದೆ ಇರುವ ಮೂರು ಮನುಷ್ಯರ ಚಿತ್ರಗಳನ್ನು ಹಾಗೂ ಕೆಲವು ಸಣ್ಣಕುಳಿಗಳನ್ನು ಸಣಬದ ಬೃಹತ್‌ಶಿಲಾಯುಗದ ಸಮಾಧಿಯೊಂದರ ಮೇಲಿನ ಇಡುವ ಮುಚ್ಚುಗಲ್ಲಿನ (Cap‑Stone) ಮೇಲೆ ಕಂಡುಬಂದಿದೆ.

ಸುಮಾರು ಮೂರೂವರೆ ಅಡಿ ಅಗಲ ಮತ್ತು ನಾಲ್ಕೂವರೆ ಅಡಿಯಷ್ಟು ಉದ್ದವಿರುವ ಈ ಸಮಾಧಿ ಮುಚ್ಚುಗಲ್ಲು ಕಡು ಗ್ರಾನೈಟ್ ಶಿಲೆಯಾಗಿದ್ದು, ಇದರ ಮೇಲೆ ನೇರವಾಗಿ ಹಾಗೂ ಸ್ವಲ್ಪ ಆಳವಾಗಿ ಗೆರೆಗಳು ಬರುವಂತೆ ಸ್ಪಷ್ಟವಾಗಿ ಕೊರೆದು ಮೂರು ಮನುಷ್ಯರ ಚಿತ್ರಗಳನ್ನು ಮೂಡಿಸಿದ್ದಾರೆ. ಅವುಗಳಲ್ಲಿ ಎರಡು ಚಿತ್ರಗಳ ವೃತ್ತಾಕಾರದ ತಲೆಗಳು ಪೂರ್ವಕ್ಕಿದ್ದು, ದೇಹ ಹಾಗೂ ಕಾಲುಗಳು ಪಶ್ಚಿಮಕ್ಕೆ ಬರುವಂತೆ ಮೂಡಿಸಿದ್ದಾರೆ. ಇವುಗಳಲ್ಲಿ ಒಂದು ಚಿತ್ರ ಉಳಿದ ಚಿತ್ರಗಳಿಗಿಂತ ಉದ್ದವಾಗಿದ್ದು, ದೇಹದ ಭಾಗ ಯಾವುದೇ ಅಂಕು ‑ಡೊಂಕುಗಳಿಲ್ಲದೆ ನೇರವಾಗಿ ಮೂಡಿಸಲಾಗಿದೆ. ಈ ಚಿತ್ರದ ಕೆಳಭಾಗದಲ್ಲಿ ಉತ್ತರಕ್ಕೆ ಮೇಲೆ ತಿರುಗಿಕೊಂಡಂತೆ ಗೆರೆಗಳನ್ನು ಮೂಡಿಸಿದ್ದರೆ, ಮತ್ತೊಂದು ದಕ್ಷಿಣಕ್ಕೆ ಸ್ವಲ್ಪ ದೊಡ್ಡದಾಗಿ ಕೆಳಗೆ ಭಾಗಿ ನೇರವಾಗಿ ಬರುವಂತೆ ಗೆರೆಗಳನ್ನು ಮೂಡಿಸಿ ಬಂಡೆಯಲ್ಲಿ ಕೊರೆಯಲಾಗಿದ್ದು, ಅವುಗಳನ್ನು ಕಾಲುಗಳೆಂದು ಗ್ರಹಿಸಬಹುದು. ತಲೆಯ ಭಾಗವು ವೃತ್ತಾಕಾರವಾಗಿದ್ದು, ಅಲ್ಲಿಂದ ಸ್ವಲ್ಪ ಕೆಳಭಾಗದಲ್ಲಿ ದೇಹದ ಬಲಭಾಗದ ಕೈಯನ್ನು “U” ಅಕ್ಷರದ ರೀತಿ ಬಗ್ಗಿಸಿ ಸೊಂಟದ ಭಾಗಕ್ಕೆ ತಂದು ಸೇರಿಸಲಾಗಿದೆ. ದೇಹದ ಎಡಭಾಗದ ಮತ್ತೊಂದು ಕೈಯನ್ನು ತಲೆಯವರೆವಿಗೂ ಕೊರೆದು ಮೇಲಕ್ಕೆ ಏನನ್ನೋ ಎತ್ತಿ ಹಿಡಿದಂತೆ ಕಾಣುವ ಹಾಗೆ ಕೊರೆದು ಬಿಡಿಸಲಾಗಿದೆ. ಈ ಚಿತ್ರದ ಎಡಭಾಗದಲ್ಲಿ, ಆಕಾರದಲ್ಲಿ ಇದಕ್ಕಿಂತಲೂ ಸ್ವಲ್ಪ ಚಿಕ್ಕದಾದ ಮತ್ತೊಂದು ಮನುಷ್ಯಾಕೃತಿಯ ಚಿತ್ರವನ್ನು ಕೊರೆಯಲಾಗಿದ್ದು, ಒಂದನೆಯ ಚಿತ್ರದಂತೆ ಇದರ ದೇಹವು ಸಹ ನೇರವಾಗಿದೆ. ಮೊದಲನೆಯ ಚಿತ್ರದ ತಲೆಗಿಂತ ಇದರ ತಲೆ ಸ್ವಲ್ಪ ದಪ್ಪವಾಗಿದ್ದು ದೇಹ ಭಾಗದ ಕೊನೆಯಲ್ಲಿ “U” ರೀತಿಯಲ್ಲಿ ಬರುವಂತೆ ಮಾಡಿ ಎರಡು ಕಾಲುಗಳನ್ನು ಗೆರೆಗಳ ರೀತಿಯಲ್ಲಿ ಕೊರೆಯಲಾಗಿದೆ.

ಈ ಎರಡು ಚಿತ್ರಗಳ ತಲೆಗಳ ಮೇಲ್ಭಾಗದಲ್ಲಿ ದಕ್ಷಿಣ ದಿಕ್ಕಿಗೆ ತಲೆ ಬರುವಂತೆ ಹಾಗೂ ಪೂರ್ವ ದಿಕ್ಕಿಗೆ ನಡೆದುಕೊಂಡು ಹೋಗುತ್ತಿರುವಂತೆ ಈ ಎರಡು ಚಿತ್ರಗಳಿಗಿಂತಲೂ ಚಿಕ್ಕದಾದ ಮತ್ತು ದೇಹದ ಅಳತೆಗೆ ಸರಿಹೊಂದುವ ವೃತ್ತಾಕಾರದ ತಲೆಯನ್ನು ಕೊರೆಯಲಾಗಿದೆ. ಎರಡು ಕೈಗಳಲ್ಲಿ ಬಲಗೈಯನ್ನು ಕೆಳಗೆ ಬಾಗಿಸಿ, ಮತ್ತೆ ದೇಹದ ಮಧ್ಯಭಾಗಕ್ಕೆ ಬರುವಂತೆ ಬಾಗಿಸಿ ಅರ್ಧವೃತ್ತಾಕಾರದಲ್ಲಿ ಕೊರೆಯಲಾಗಿದೆ ಮತ್ತು ಎಡಗೈಯನ್ನು ಶಿರದವರೆಗೆ ಮೇಲಕ್ಕೆ ಎತ್ತಿ ಹಿಡಿಯಲಾಗಿದೆ. ಆದರೆ ಈ ಮೂರು ಚಿತ್ರಗಳಲ್ಲಿ ದೊಡ್ಡದಾದ ಚಿತ್ರದಲ್ಲಿ ಹಿಡಿದಿರುವಂತೆ ಏನನ್ನು ಹಿಡಿದುಕೊಂಡಿಲ್ಲ. ಎಡಗಾಲನ್ನು ಸ್ವಲ್ಪ ಮುಂದಕ್ಕೆ ಚಾಚಿ ಪೂರ್ವ ದಿಕ್ಕಿಗೆ ನಡೆದುಕೊಂಡು ಹೋಗುವ ಭಂಗಿಯಲ್ಲಿ ಒಂದೇ ಕಲ್ಲಿನ ಮೇಲೆ ಕೊರೆದಿರುವುದು ಬಹಳ ಅಪರೂಪ ಮತ್ತು ಆಕರ್ಷಕವಾದ ಬೃಹತ್ ಶಿಲಾಯುಗ ಸಂಸ್ಕೃತಿಯ ಚಿತ್ರ ಕಲೆಯಾಗಿದ್ದು, ಇದುವರೆವಿಗೂ ಬೇರೆಲ್ಲೂ ಕಂಡುಬಂದಿಲ್ಲವೆಂದು ಹೇಳಬಹುದು.

ಇದೇ ಸಮಾಧಿ ಕಲ್ಲಿನ ಮೇಲೆ, ಈ ಮೂರು ಚಿತ್ರಗಳಲ್ಲದೆ ಪೂರ್ವಭಾಗದಲ್ಲಿ ಎರಡು ಕುಳಿಗಳನ್ನು ಮಾಡಿ ಅದರ ಹೊರಭಾಗದಲ್ಲಿ ಗೆರೆಯನ್ನು ಕೊರೆದು ಅದರೊಳಗೆ ಕುಳಿಗಳು ಬರುವಂತೆ ಮಾಡಲಾಗಿದೆ. ಒಂದು ಕುಳಿ ಈ ಕಲ್ಲಿನ ಅಂಚಿನಲ್ಲಿದ್ದರೆ, ಮತ್ತೊಂದನ್ನು ಸ್ವಲ್ಪ ಕೆಳಭಾಗದಲ್ಲಿ ಮೂಡಿಸಲಾಗಿದೆ. ಈ ಎರಡು ಕುಳಿಗಳ ಸುತ್ತ ಕೊರೆದು ಮೂಡಿಸಿರುವ ಗೆರೆಯನ್ನು ಯಾವ ಉದ್ದೇಶದಿಂದ ಮಾಡಲಾಗಿದೆ ಎಂದು ಹೇಳಲಾಗುವುದಿಲ್ಲ. ಆದರೂ ಈ ಎರಡು ಕುಳಿಗಳು ಮಾತ್ರ ಈ ಗೆರೆಯೊಳಗೆ ಮೂಡಿಬಂದಿವೆ. ಇದಲ್ಲದೆ ಇನ್ನೂ ಐದು ಕುಳಿಗಳಿದ್ದು, ಅವುಗಳಲ್ಲಿ ಮೂರು ಒಂದು ಸಮೂಹದಲ್ಲಿದ್ದು ಕಲ್ಲಿನ ಉತ್ತರ ಭಾಗದಲ್ಲಿ ತೋಡಲಾಗಿದೆ. ಇನ್ನೆರಡು ಕುಳಿಗಳು ಪಶ್ಚಿಮಾಭಿಮುಖವಾದ ಉತ್ತರ ಭಾಗದಲ್ಲಿ ಕಂಡುಬಂದಿವೆ.

ಈ ರೀತಿ ಸಣಬದಲ್ಲಿ ಇನ್ನು ಕೆಲವು ಸಮಾಧಿಯ ಮೇಲ್ ಕಲ್ಲುಗಳು ಕಂಡುಬಂದರೂ ಬೇರೆ ಯಾವ ಕಲ್ಲಿನಲ್ಲೂ ಈ ರೀತಿಯ ಚಿತ್ರಗಳು ಕಂಡುಬರುವುದಿಲ್ಲ. ಈ ಚಿತ್ರಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದರೆ, ಬಹುಶಃ ಇವುಗಳು ಒಂದೇ ಕುಟುಂಬದ ಸದಸ್ಯರ ಚಿತ್ರಗಳಾಗಿರಬಹುದು. ದೊಡ್ಡದಾಗಿ ಕೊರೆದಿರುವ ಚಿತ್ರ ಗಂಡಸಿನದೆಂದು, ಅದರ ಪಕ್ಕದಲ್ಲಿ ಸ್ವಲ್ಪ ತಲೆದಪ್ಪ ಮತ್ತು ಒಂದೇ ಅಳತೆ ಕಾಲುಗಳನ್ನು ಹೊಂದಿ ನೇರವಾಗಿ ನಿಂತಿರುವ ಚಿತ್ರವನ್ನು ಹೆಂಗಸಿನ ಚಿತ್ರವೆಂದು ಕಲ್ಪಿಸಿಕೊಳ್ಳಬಹುದು. ಈ ಎರಡೂ ಚಿತ್ರಗಳಿಗಿಂತ ಸಣ್ಣದಾದ ಚಿತ್ರವನ್ನು ಮಗುವಿನ ಚಿತ್ರವೆಂದು ಊಹಿಸಿಕೊಂಡರೆ ತಪ್ಪಾಗಲಾರದು. ಆದರೆ ದೊಡ್ಡ ಚಿತ್ರ ಗಂಡಸಿನದೆಂದು ಕಲ್ಪಿಸಿಕೊಂಡರೂ ಅದು ಒಂದು ಕೈಯನ್ನು ಮೇಲಕ್ಕೆತ್ತಿ ಹಿಡಿದಿರುವುದೇನೆಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಕಲ್ಲುಬಂಡೆಗಳ ಮೇಲೆ ಕೆತ್ತಿರುವ ಶಿಲ್ಪಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಅಥವಾ ಇಂತಹ ಸಮಾಧಿಗಳ ಉತ್ಖನನ ಮಾಡಿ ಅದಕ್ಕೆ ಪೂರಕವಾದ ಮಾಹಿತಿಗಳು ಸಮಾಧಿಗಳೊಳಗೆ ಕಂಡುಬಂದರೆ ಹೆಚ್ಚಿನ ಸಂಶೋಧನೆ ನಡೆಸಿ ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು.

ಇನ್ನು ಈ ಕಲ್ಲಿನಲ್ಲಿ ಕಂಡುಬರುವ ಕುಳಿಗಳು, ಈ ರೀತಿಯ ಕುಳಿಗಳು ಇನ್ನು ಅನೇಕ ಸಮಾಧಿಗಳ ಮೇಲ್ ಕಲ್ಲುಗಳಲ್ಲಿ ಕಂಡುಬಂದಿವೆ. ಸಣಬದ ಜನರಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ನಡೆಸಿದಾಗ, ಅವರುಗಳು ಈಗಲೂ ಪಿತೃಪಕ್ಷದ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಈ ಕುಳಿಗಳಲ್ಲಿ ಆಹಾರ ಪದಾರ್ಥಗಳನ್ನಿಟ್ಟು ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆಂದು ತಿಳಿಸಿದರು. ಬಹುಶಃ ಈ ಪದ್ಧತಿ ಬೃಹತ್‌ಶಿಲಾಯುಗ ಕಾಲದಿಂದಲೂ ನಡೆದುಕೊಂಡು ಬಂದಿರಬೇಕು. ಹಿಂದೆಯೂ ಸಹ ಇದೇ ಪದ್ಧತಿಯನ್ನು ಅನುಸರಿಸಲು ಈ ಕುಳಿಗಳನ್ನು ತೋಡಿರಬಹುದು. ನನ್ನ ಇತ್ತೀಚಿನ ಕ್ಷೇತ್ರಕಾರ್ಯದಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೆಲವು ಬೃಹತ್ ಶಿಲಾಯುಗ ಕಾಲದ ಸಮಾಧಿ ಮೇಲಿನ ಕಲ್ಲುಗಳಲ್ಲಿ ಇಂತಹ ಕುಳಿಗಳಿರುವುದನ್ನು ಸಂಶೋಧಿಸಿದ್ದೆನಾದರೂ ಯಾವುದೇ ಕಲ್ಲುಗಳ ಮೇಲೆ ಮನುಷ್ಯನ ಆಕೃತಿಗಳನ್ನು ಕೊರೆದಿರುವ ಕಲ್ಲುಹಾಸುಗಳು ಕಂಡುಬಂದಿಲ್ಲ.

ಇದನ್ನು ನೋಡಿದ ಪ್ರೊ. ಎ.ವಿ. ನರಸಿಂಹಮೂರ್ತಿ ಮತ್ತು ಪ್ರೊ.ಅ.ಸುಂದರ ಅವರು ಇದು ಬಹಳ ಅಪರೂಪವಾಗಿ ಕಂಡುಬಂದಿರುವ ಬೃಹತ್‌ಶಿಲಾಯುಗ ಕಾಲದ ಮನುಷ್ಯರ ಕೆತ್ತನೆ ಚಿತ್ರಗಳೆಂದು ತಿಳಿಸಿದ್ದಾರೆ. ಇದುವರೆವಿಗೂ ಪ್ರಕಟಗೊಂಡಿರುವ ಬೃಹತ್ ಶಿಲಾಯುಗದ ಅನೇಕ ಗ್ರಂಥಗಳನ್ನು ಗಮನಿಸಿದ್ದೇನೆ. ಅವುಗಳಲ್ಲೂ ಸಹ ಈ ರೀತಿಯಾದ ಸಮಾಧಿ ಮೇಲಿನ ಹಾಸು ಕಲ್ಲಿನ ಮೇಲೆ ಕೊರೆದಿರುವ ಚಿತ್ರಗಳ ಬಗ್ಗೆ ಮಾಹಿತಿಗಳು ಕಂಡುಬಂದಿಲ್ಲ. ಆದ್ದರಿಂದ ಇದು ಒಂದು ಬಹಳ ಅಪರೂಪದ ಹಾಗೂ ಬಹಳ ಮುಖ್ಯವಾದ ಸಂಶೋಧನೆಯಾಗಿದ್ದು, ಈ ನಿಟ್ಟಿನಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸುವವರಿಗೆ ಇದೊಂದು ಬಹಳ ಮುಖ್ಯವಾದ ಅಂಶವಾಗಲಿದೆ. ೧೯೯೬‑೯೭ರಲ್ಲಿ ಪ್ರೊ.ಎ.ವಿ.ನರಸಿಂಹಮೂರ್ತಿ ಅವರು ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ತೊಣ್ಣೂರು ಕೆರೆಯ ಈ ಮಾನವ ಆಕೃತಿಗಳ ಕೆತ್ತನೆಯನ್ನು ಉಲ್ಲೇಖಿಸಿ ಪ್ರಶಂಶಿಸಿದ್ದಾರೆ.

ಮತ್ತೊಂದು ಮುಖ್ಯ ಅಂಶ ಎಂದರೆ, ಕರ್ನಾಟಕದಲ್ಲಿ ಬೃಹತ್‌ಶಿಲಾಯುಗ ಕಾಲದ ಜನರು ಕೆರೆಯ ನೀರನ್ನು ಕೃಷಿ ಕಾರ್ಯಗಳಿಗೆ ಬಳಸಿಕೊಂಡಿರುವುದು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಮಲ್ಲೇಶ್ವರ, ಮೈಸೂರು ಜಿಲ್ಲೆಯ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಮತ್ತು ಈ ತೊಣ್ಣೂರು ಕೆರೆಯ ನೀರನ್ನು ಅವಲಂಬಿಸಿ ಕೃಷಿಕಾರ್ಯ ನಡೆದಿದೆ. ಈ ಮೂರು ಪ್ರದೇಶಗಳು ನನ್ನ ಇತ್ತೀಚಿನ ಸಂಶೋಧನೆಗಳಿಂದ ಕಂಡುಬಂದಿವೆ. ಮಲ್ಲೇಶ್ವರ ಮತ್ತು ಆಯರಹಳ್ಳಿಗಳಲ್ಲಿನ ಕೆರೆಗಳು ಇಂದು ಬತ್ತಿ ಹೋಗಿದ್ದರೆ, ತೊಣ್ಣೂರಿನ ಕೆರೆ ಇಂದಿಗೂ ಸಮೃದ್ಧವಾಗಿದ್ದು ಅಲ್ಲಿಯ ಜನರು ಅದನ್ನು ಸೊಗಸಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಸಂಶೋಧನೆಯಿಂದ ತೊಣ್ಣೂರಿನ ಕೆರೆ ಬೃಹತ್ ಶಿಲಾಯುಗದ ಕಾಲದಿಂದಲೂ ಜನವಸತಿ ಮತ್ತು ವ್ಯವಸಾಯಕ್ಕೆ ಬಳಕೆಯಾಗುತ್ತಿತ್ತು ಮತ್ತು ಆಗಿನಿಂದಲೂ ಬಹಳ ಉಪಯುಕ್ತ ಕೆರೆಯಾಗಿತ್ತೆಂದು ಹೇಳಬಹುದು. ಬೃಹತ್ ಶಿಲಾಯುಗದ ಕಾಲದಲ್ಲಿ ಬತ್ತ, ರಾಗಿಯಲ್ಲದೆ ಇತರೆ ದವಸ ಧಾನ್ಯಗಳನ್ನು ಬೆಳೆಯುತ್ತಿದ್ದುದು ಮೈಸೂರು ಜಿಲ್ಲೆಯ ಕಾವೇರಿ ನದಿ ದಡದ ಕೊಪ್ಪ, ಚಿತ್ರದುರ್ಗ ಜಿಲ್ಲೆ ಚಿನ್ನಹಗರಿ ನದಿ ದಡದ ಬ್ರಹ್ಮಗಿರಿ ಇತ್ಯಾದಿ ನದಿಗಳ ದಡಗಳಲ್ಲಿ ನಡೆದಿರುವ ಉತ್ಖನನಗಳಿಂದ ತಿಳಿದುಬಂದಿದ್ದು, ಇಲ್ಲಿಯೂ ಸಹ ಈ ರೀತಿಯ ಬೆಳೆಗಳನ್ನು ಬೃಹತ್‌ಶಿಲಾಯುಗ ಕಾಲದಲ್ಲಿ ಬೆಳೆದಿರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ತೊಣ್ಣೂರು ಕೆರೆಯ ಹಿನ್ನೀರಿನಲ್ಲಿ ಉತ್ತಮ ಹಾಗೂ ಅಪರೂಪವಾದ ಬೃಹತ್‌ಶಿಲಾಯುಗ ಕಾಲದ ಸಮಾಧಿ ನೆಲೆ ಕಂಡುಬಂದಿರುವುದು ಬಹಳ ಸಂತೋಷದ ವಿಷಯ. ಇಲ್ಲಿ ಇದೇ ಕಾಲದ ವಸತಿ ನೆಲೆ ಸಹ ಇದ್ದಿರಬಹುದು. ಆದರೆ ಈಗಿನ ಜನವಸತಿ ಯಿಂದ ಅದು ಸಂಪೂರ್ಣವಾಗಿ ನಾಶವಾಗಿ ಹೋಗಿರಬಹುದು ಅಥವಾ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿದರೆ ವಸತಿ ನೆಲೆ ಕಂಡುಬರಬಹುದು.

ತೊಣ್ಣೂರು ಹಾಗೂ ಸಣಬಗಳಲ್ಲಿ ಕ್ಷೇತ್ರಕಾರ್ಯ ನಡೆಸಿ ಈ ಹೆಚ್ಚಿನ ಸಂಶೋಧನೆ ಮಾಡಲು ಸಹಕರಿಸಿದ ಸಣಬದವರೇ ಆದ ಶ್ರೀ ಉಗ್ರನರಸಿಂಹೇಗೌಡರು, ಡಾ. ಲತಾ ಉಗ್ರನರಸಿಂಹೇಗೌಡ, ಪ್ರಜಾವಾಣಿ ಪತ್ರಕರ್ತರಾದ ಶ್ರೀ ಜಿ.ಪಿ.ಬಸವರಾಜು ಅವರು, ಪ್ರೊ. ಗೋವಿಂದಯ್ಯ ಹಾಗೂ ಇತರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಅಡಿಟಿಪ್ಪಣಿಗಳು

೧. B.K.Gururaja Rao, 1972 :  Megalithic Culture in South India, Prasaranga, University of Mysore.

೨. Mandya District Gazetteer, 1967 : Chief Editor, Published by  Karnataka State Govt.

೩. B.Narasimhaiah, 1980 : Neolithic and Megalithic Cultures in Tamil Nadu, Sandeep Prakashana, Delhi.

೪. Felix R.Poturi, 1979 : Translated by Tanca and Bernard Alexander, Prehistoric Heritage, Mac Donald and Jane’s.

೫. Robert Bruce Foote, 1999 : The Foote Collection of Indian Prehistoric and Protohistoric Antiquities (Reprinted), Govt. Museum, Chennai.

೬. Sri Mortimer Wheeler, 2004 : Archaeology from  the Earth (Reprinted), Munshiram Manoharlal, New Delhi.

೭. Staurt Piggott, 1962 : Prehistoric India, (Reprinted) Penguin books.

೮. ಇತಿಹಾಸ ದರ್ಶನ, ೧೯೯೬‑೯೭ : ಸಂಪಾದಕರು, ಸೂರ್ಯನಾಥ ಕಾಮತ್.

೯. Archaeological Studies, 1979 : Edited by A.V.Narasimha Murthy, Dept. of Studies in History and Archaeology Mysore University, Mysore.

೧೦. ಇತಿಹಾಸ ದರ್ಶನ, ೧೯೮೯ : ಸಂಪಾದಕರು, ಸೂರ್ಯನಾಥ ಕಾಮತ್, ಸಂಪುಟ‑೪