ಪ್ರಕೃತಿದತ್ತವಾಗಿ ಸುಂದರವಾಗಿರುವ ತೊಣ್ಣೂರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿಗೆ ಸೇರಿರುವ ಒಂದು ಗ್ರಾಮ. ಇದು ಕಸಬೆಯಿಂದ ವಾಯವ್ಯ ದಿಕ್ಕಿನಲ್ಲಿ ಸುಮಾರು ೮ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಪಶ್ಚಿಮೋತ್ತರ ಭಾಗದಲ್ಲಿ ಪ್ರಕೃತಿದತ್ತವಾಗಿ ಹಬ್ಬಿರುವ ಬೆಟ್ಟದ ಸಾಲು ಇದೆ. ಅಲ್ಲದೇ ಇದರ ದಕ್ಷಿಣ ಮತ್ತು ಪೂರ್ವಭಾಗದಲ್ಲಿ ಹಸಿರಿನಿಂದ ಕಂಗೊಳಿಸುವ ಹೊಲಗದ್ದೆಗಳು ಕಾಣಬರುತ್ತವೆ. ಈ ಬೆಟ್ಟದ ಸಾಲಿನ ಮತ್ತು ಹಸಿರುಗದ್ದೆಗಳ ನಡುವಿನಲ್ಲಿ ಈ ತೊಣ್ಣೂರು ಗ್ರಾಮವಿದೆ.

ತೊಣ್ಣೂರು ಐತಿಹಾಸಿಕ ಪ್ರದೇಶವಾದುದರಿಂದ ಐತಿಹ್ಯಗಳು ಮತ್ತು ಪುರಾಣಗಳು ಅಧಿಕ ಸಂಖ್ಯೆಯಲ್ಲಿ ಸಿಕ್ಕುತ್ತವೆ. ಈ ಊರಿನ ಗುಡಿಗೋಪುರ, ಕೆರೆ, ಬಾವಿ, ಗುಹೆ, ಬೆಟ್ಟ, ಗುಡ್ಡಗಳ ಹಿಂದೆ ಪುರಾಣಗಳು ಮತ್ತು ಐತಿಹ್ಯಗಳು ಮೂಡಿಬಂದಿವೆ. ಇಲ್ಲಿಯ ಗ್ರಾಮದೇವತೆ, ಉದ್ದಂಡಿ, ಪುಂಡರೀಕಾಕ್ಷಿ ಮತ್ತು ಇತರ ವಿಷಯಗಳನ್ನು ಕುರಿತಂತೆ ಗದ್ಯಕಥನಗಳಿವೆ. ತೊಂಡನೂರು, ಸುಂಕ ತೊಣ್ಣೂರಿನ ರಾಕ್ಷಸಮ್ಮ ಅಥವಾ ಪುಂಡರೀಕಾಕ್ಷಿ, ಪಟ್ಟಲದಮ್ಮ, ಕೆರೆಯ ಬಳಿಯ ಮುಸಲ್ಮಾನ ಸಂತನ ಗೋರಿ, ಪಾರ್ಥಸಾರಥಿ ದೇವಾಲಯ, ರಾಮಾನುಜಾಚಾರ್ಯರ ಬಗೆಗೆ ಅನೇಕ ಐತಿಹ್ಯಗಳಿವೆ. ತೊಂಡನೂರಿನಲ್ಲಿರುವ ಪಾರ್ಥಸಾರಥಿ ದೇವಸ್ಥಾನದ ಬಗೆಗೆ ಮುಂದೆ ಹೇಳುವ ಎರಡು ಐತಿಹ್ಯಗಳಿವೆ.

ಮಹಾಭಾರತ ಕಾಲದ್ದು ಈ ಪಾರ್ಥಸಾರಥಿ ದೇವಸ್ಥಾನ. ಈ ಸುತ್ತಮುತ್ತ ಎಲ್ಲೂ ಪಾರ್ಥಸಾರಥಿ ದೇವಾಲಯವಿಲ್ಲ. ಇದೊಂದು ವಿಶೇಷ. ಇದನ್ನು ಯುಧಿಷ್ಠರ ಪ್ರತಿಷ್ಠೆ ಮಾಡಿದ ಎನ್ನುತ್ತಾರೆ. ಇದು ಬಿಟ್ಟಿದೇವನ ಕಾಲದಲ್ಲಿ ಜೀರ್ಣೋದ್ಧಾರವಾಯಿತಂತೆ. ಇದನ್ನು ಯಾದವಪುರ, ಯಾದವ ನಾರಾಯಣಪುರ, ಕರವೀರಪುರ, ತೊಂಡನೂರು, ಬಲ್ಲಾಳ ರಾಯನಪುರ, ಚತುರ್ವೇದಿ ಮಂಗಲ ಹಾಗು ಕಲ್ಯಾಣಪುರವೆಂದು ಕರೆಯಲಾಗುತ್ತಿತ್ತು.

[1]

ಸ್ಥಳಪುರಾಣ

ಇಲ್ಲಿಯ ಯೋಗನರಸಿಂಹ ದೇವಾಲಯವನ್ನು ಕೃತಯುಗದಲ್ಲಿ ಪ್ರಹ್ಲಾದ ಪ್ರತಿಷ್ಠಾಪಿಸಿ ದನೆಂದೂ, ಇಲ್ಲಿಯ ನಾರಾಯಣ ದೇವಾಲಯವನ್ನು ಇಂದ್ರ ಪ್ರತಿಷ್ಠಾಪಿಸಿದನೆಂದೂ ಪ್ರತೀತಿ. ಹೀಗೆ ಜನರನ್ನು ರಕ್ಷಿಸಲು ಶ್ರೀಮನ್ನಾರಾಯಣನು ಅವತಾರವನ್ನೆತ್ತಿ ಬಂದು ಇಲ್ಲಿ ನೆಲೆಸಿದ ನೆಂದು ಸ್ಥಳಪುರಾಣವಿದೆ.[2]

ಇಲ್ಲಿರುವ ಒಂದು ಸ್ಥಳಪುರಾಣದ ಪ್ರಕಾರ ಈ ಗ್ರಾಮದಲ್ಲಿ ಮೊದಲು ಒಬ್ಬಳು ರಾಕ್ಷಸಿ ನೆಲೆಸಿದ್ದಳು. ಅವಳು ಈ ಗ್ರಾಮದ ಮತ್ತು ಅದರ ಸುತ್ತಮುತ್ತಲಿನ ಊರಿನ ಜನರಿಗೆ ತುಂಬಾ ತೊಂದರೆಯನ್ನು ಕೊಡುತ್ತಿದ್ದಳು. ಇದರಿಂದಾಗಿ ಈ ಗ್ರಾಮ ಮತ್ತು ಸುತ್ತಮುತ್ತಲಿನ ಜನರು ಈ ರಾಕ್ಷಸಿಯ ಕಾಟದಿಂದ ಭಯಗ್ರಸ್ಥರಾಗಿ ಜೀವಿಸುವಂತಾಯಿತು. ಹೀಗೆ ಈ ರಾಕ್ಷಸಿಯ ಕಾಟವನ್ನು ಬಹಳ ದಿನಗಳ ಕಾಲ ಅನುಭವಿಸಿದ ಜನರು ಇವಳು ಕೊಡುತ್ತಿದ್ದ ತೊಂದರೆಯಿಂದ ವಿಮುಕ್ತಿಯನ್ನು ಪಡೆಯಲು ಶ್ರೀಮನ್ನಾರಾಯಣನಲ್ಲಿ ಮೊರೆಹೊಕ್ಕು ಪ್ರಾರ್ಥಿಸಿಕೊಂಡರಂತೆ. ಆಗ ಈ ಜನರ ಪ್ರಾರ್ಥನೆಗೆ ಓಗೊಟ್ಟು ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ ಬಂದು ರಾಕ್ಷಸಿಯನ್ನು ಸಂಹಾರ ಮಾಡಿದನು. ನಂತರ ಶ್ರೀಮನ್ನಾರಾಯಣನು ಈ ಗ್ರಾಮದ ಜನರ ರಕ್ಷಣೆಗಾಗಿ ಅಲ್ಲಿಯೇ ನೆಲಸಿದನೆಂದು ಈ ಗ್ರಾಮದ ಮುಖ್ಯಸ್ಥರೊಬ್ಬರು ವಿವರಿಸುತ್ತಾರೆ.[3]

ಇದೇ ಗ್ರಾಮಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಥಳ ಪುರಾಣದ ಪ್ರಕಾರ ಇಲ್ಲಿ ನೀಲ ಎಂಬ ರಾಕ್ಷಸಿ ವಾಸವಾಗಿದ್ದು, ತೊಣ್ಣೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಿಂಸೆ ಕೊಡುವುದಲ್ಲದೆ ಸಂಕಷ್ಟಕ್ಕೆ ಗುರಿಮಾಡುತ್ತಿದ್ದಳಂತೆ. ಈ ಹಿಂಸೆ ಮತ್ತು ಸಂಕಟದಿಂದ ಪಾರಾಗಲು ಈ ಗ್ರಾಮದ ಜನರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟಿಗೆ ಸೇರಿ ಗ್ರಾಮದೇವತೆಯಾದ ಮರಿತೋಪಮ್ಮನಲ್ಲಿ ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಣೆ ಮಾಡುವಂತೆ ಬೇಡಿಕೊಂಡಾಗ ಜನರ ಈ ಕೋರಿಕೆಯನ್ನು ಈಡೇರಿಸುವುದಕ್ಕಾಗಿ ಮರತೋಪಮ್ಮ ಪ್ರತ್ಯಕ್ಷಳಾಗಿ ಆ ರಾಕ್ಷಸಿಯನ್ನು ಸಂಹಾರ ಮಾಡಿ ಗ್ರಾಮದ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ಶಾಂತಿ ಮತ್ತು ನೆಮ್ಮದಿ ಜೀವನ ನಡೆಸುವಂತೆ ಮಾಡಿದಳೆಂದು ಸ್ಥಳೀಯ ಜನರು ವಿವರಿಸುತ್ತಾರೆ.

ಈ ಗ್ರಾಮದ ಇನ್ನೊಂದು ಸ್ಥಳಪುರಾಣದ ಪ್ರಕಾರ ಹಿಂದೆ ಈ ಗ್ರಾಮದಲ್ಲಿ ಒಬ್ಬಳು ರಾಕ್ಷಸಮ್ಮ ಎಂಬುವಳು ನೆಲೆಸಿದ್ದಳು. ಅವಳು ಈ ಗ್ರಾಮದ ಜನರಿಗೆ ಹಿಂಸೆಯನ್ನು ನೀಡುತ್ತಿದ್ದಳಂತೆ. ಹೀಗಿರುವಾಗ ಈ ರಾಕ್ಷಸಿಗೆ ಒಬ್ಬಳು ಹೆಣ್ಣು ಮಗಳಿದ್ದಳಂತೆ. ಅವಳು ವಯಸ್ಸಿಗೆ ಬಂದಾಗ ಅವಳನ್ನು ಒಬ್ಬ ಕರಿಬಂಟನೆಂಬುವನು ಪ್ರೀತಿಸುತ್ತಿದ್ದನಂತೆ. ಈ ಪ್ರೀತಿ ಗಾಢವಾಗಿ ಬೆಳೆದು ಜನರಿಗೆಲ್ಲ ಗೊತ್ತಾಗಲಾರಂಭಿಸಿತು. ಇದನ್ನು ತಿಳಿದ ರಾಕ್ಷಸಿ ಕರಿಬಂಟನನ್ನು ಸಂಹಾರ ಮಾಡಲು ರಭಸದಿಂದ ಉತ್ತರಾಭಿಮುಖವಾಗಿ ಓಡಿ ಹೋಗುತ್ತಾಳೆ. ಇದನ್ನು ತಿಳಿದ ಕರಿಬಂಟನು ರಾಕ್ಷಸಿಯ ಮಗಳನ್ನು ಕರೆದುಕೊಂಡು ಕೈಗೆ ಸಿಗದಂತೆ ಕಣ್ಮರೆಯಾಗಿ ಓಡಿಹೋಗುತ್ತಾನೆ. ಆಗ ರಾಕ್ಷಸಿಯು ಓಡಿ ಹೋಗುವ ರಭಸಕ್ಕೆ ಉತ್ತರದಲ್ಲಿದ್ದ ಬೆಟ್ಟವು ಇಬ್ಭಾಗವಾಯಿತು. ನಂತರ ಬೇಸತ್ತ ರಾಕ್ಷಸಿಯು ಆ ಬೆಟ್ಟದ ಬುಡದಲ್ಲಿರುವ ಗುಹೆಯೊಂದರಲ್ಲಿ ಸೇರಿಕೊಂಡಳೆಂದು ಯಜಮಾನ ಚೆನ್ನೇಗೌಡರು ಕಥೆಯನ್ನು ಹೇಳುತ್ತಾರೆ.

ಈ ಗ್ರಾಮದಿಂದ ಲಕ್ಷ್ಮೀಸಾಗರಕ್ಕೆ ಹೋಗುವ ರಸ್ತೆಮಾರ್ಗದಲ್ಲಿ ಇರುವ ಮಾವಿನ ಮರಗಳಿಂದ ಕೂಡಿದ ತೋಪಿನಲ್ಲಿ ಗ್ರಾಮದೇವತೆಯಾದ ಆದಿಶಕ್ತಿ ನಿಕುಂಬಿಣಿ ದೇವಿಯ ಒಂದು ಸಣ್ಣ ದೇವಾಲಯವಿದೆ. ಈ ದೇವತೆಯ ಸ್ವರೂಪ (ಲಕ್ಷಣ) ಕುದುರೆಯ ಮೇಲೆ ಆಸೀನಳಾಗಿದ್ದು, ಒಂದು ಕೈಯಲ್ಲಿ ಖಡ್ಗವೊಂದನ್ನು ಹಿಡಿದುಕೊಂಡಿದ್ದಾಳೆ. ಈ ದೇವಿಯು ನೆಲೆಸಿದ್ದ ಕ್ಷೇತ್ರದಲ್ಲಿ ಬರೀ ಕರವೀರ ವೃಕ್ಷಗಳು ಯಥೇಚ್ಛವಾಗಿ ಬೆಳೆದಿದ್ದರಿಂದ ಇದಕ್ಕೆ ಕರವೀರಪುರವೆಂದು ಕರೆಯಲಾಯಿತಂತೆ.[4]

ಮಧ್ವಾಚಾರ್ಯರು ತೊಣ್ಣೂರಿಗೆ ರಾಮಾನುಜರ ದರ್ಶನಕ್ಕಾಗಿ ಬಂದು ಸ್ವಲ್ಪ ಕಾಲದವರೆಗೆ ಇಲ್ಲಿಯೇ ನೆಲೆಸುತ್ತಾರೆ. ಹೀಗಿರುವಾಗ ಒಂದು ದಿನ ಇವರ ಕನಸಿನಲ್ಲಿ ತಾಯಿಯಾದ ನಿಕುಂಬಿಣಿದೇವಿಯು ಗೋಚರಿಸಿ (ಪ್ರತ್ಯಕ್ಷಳಾಗಿ) ನಾನು ಆದಿಶಕ್ತಿ ನನ್ನನ್ನು ಈ ಸ್ಥಳದಲ್ಲಿ ಈಗ ಇರುವ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡು, ನಂತರ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಮಹಾಕಾಳಿಯನ್ನು ಪ್ರತಿಷ್ಠಾಪನೆ ಮಾಡು ಎಂದು ಹೇಳಿ ಅದೃಶ್ಯಳಾದಳಂತೆ. ಅದೇ ರೀತಿ ಮಧ್ವಾಚಾರ್ಯರು ತಾಯಿಯ ಆದೇಶದಂತೆ ಆದಿಶಕ್ತಿಯನ್ನು ಪ್ರತಿಷ್ಠಾಪನೆ ಮಾಡಿದರಂತೆ. ಅಲ್ಲದೇ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ಮಹಾಕಾಳಿಯನ್ನು ಪ್ರತಿಷ್ಠಾಪನೆ ಮಾಡಿದರಂತೆ ಎಂಬುದು ಇಲ್ಲಿಯ ಸ್ಥಳಪುರಾಣದಿಂದ ತಿಳಿದುಬರುತ್ತದೆ.[5]

ಐತಿಹ್ಯ

ಈ ತೊಣ್ಣೂರಿನಲ್ಲಿ ಹಿಂದೆ ತೊಂಡಮಾರನೆಂಬುವನು ರಾಜ್ಯಭಾರ ಮಾಡುತ್ತಿದ್ದರಿಂದಾಗಿ ಇದಕ್ಕೆ ತೊಂಡನೂರು ಎಂಬ ಹೆಸರು ಬಂದಿತೆಂದು ಐತಿಹ್ಯವಿದೆ. ಈ ತೊಂಡನೂರೆ ಕಾಲಕಳೆದಂತೆ ತೊಣ್ಣೂರಾಯಿತೆಂದು ತಿಳಿದುಬರುತ್ತದೆ. ತಮಿಳು ಭಾಷೆಯಲ್ಲಿ “ತೊಂಡ” ಎಂದರೆ ಭಕ್ತ. ಅಂದರೆ ಭಕ್ತರು ನೆಲಸಿದ್ದ ಊರು ಎಂದರ್ಥ.[6]

ಹೊಯ್ಸಳ ದೊರೆಯಾದ ವಿಷ್ಣುವರ್ಧನನು ತಲಕಾಡಿನ ವಿಜಯದ ನಂತರ ಆ ವಿಜಯದ ನೆನಪಿಗಾಗಿ ಐದು ನಾರಾಯಣ ದೇವಾಲಯಗಳನ್ನು ಕಟ್ಟಿಸುತ್ತಾನೆ. ಅದರಲ್ಲಿ ಈ ಗ್ರಾಮದಲ್ಲಿರುವ ನಂಬಿ ನಾರಾಯಣ ದೇವಾಲಯವೂ ಒಂದಾಗಿದೆ. ಈ ದೇವರು ನಂಬಿ ಎಂಬ ಭಕ್ತನಿಗೆ ಒಲಿದು ಬಂದಿದ್ದರಿಂದಾಗಿ ಈ ದೇವರಿಗೆ “ನಂಬಿ ನಾರಾಯಣ” ಎಂದು ಹೆಸರು ಬಂದಿತೆಂದು ಐತಿಹ್ಯ.[7]

ಈ ಗ್ರಾಮವನ್ನು ಬಿಟ್ಟಿದೇವನಿಗಿಂತ ಮೊದಲು ಅವನ ಅಣ್ಣನಾದ ಬಲ್ಲಾಳರಾಯನು ಆಳುತ್ತಿದ್ದರಿಂದ ಇದಕ್ಕೆ ಬಲ್ಲಾಳರಾಯಪುರವೆಂದೂ ಕರೆಯುತ್ತಿದ್ದರು. ಅಲ್ಲದೆ ಬಿಟ್ಟಿದೇವನ ಮಗಳಿಗೆ ಹಿಡಿದಿದ್ದ ಚತುರ್ವೇದಿಯೆಂಬ ಬ್ರಹ್ಮರಾಕ್ಷಸನಿಗೆ ಶ್ರೀಮದ್ರಾಮಾನುಜಾಚಾರ್ಯರ ಪ್ರಭಾವದಿಂದ ಮೋಕ್ಷಲಾಭವಾದುದರಿಂದ ಇದನ್ನು “ಚತುರ್ವೇದಿ ಮಂಗಲಂ” ಎಂದು ಹಾಗೂ ಕಲ್ಯಾಣಪುರಂ ಎಂದೂ ಕರೆಯಲಾರಂಭಿಸಿದರಂತೆ.[8]

ಇದೇ ಗ್ರಾಮದಲ್ಲಿರುವ ಶಾಸನಗಳಲ್ಲಿ[9] ರಾಮಾನುಜಾಚಾರ್ಯರು ಈ ಸ್ಥಳಕ್ಕೆ ಭೇಟಿಕೊಟ್ಟಿದ್ದಕ್ಕೆ ನಿದರ್ಶನ ದೊರೆಯುತ್ತದೆ. ಇದರಿಂದಾಗಿ ಈ ಊರು ಶ್ರೀವೈಷ್ಣವ ಪಂಥದ ಮುಖ್ಯ ಕ್ಷೇತ್ರವಾಗಿತ್ತೆಂದು ಹೇಳಬಹುದಾಗಿದೆ. ಬಿಟ್ಟಿದೇವನು ರಾಮಾನುಜಾ ಚಾರ್ಯರಿಗೆ ರಾಜಾಶ್ರಯ ನೀಡಿ ಅವರಿಗೂ ಅವರ ಶಿಷ್ಯರಿಗೂ ಇಲ್ಲಿ ಪ್ರತ್ಯೇಕವಾದ ಚರ್ತುವೇದಿ ಮಂಗಲವನ್ನು ಕಟ್ಟಿಸಿಕೊಟ್ಟನೆಂಬುದಾಗಿ ತಿಳಿದುಬರುತ್ತದೆ.

ರಾಮಾನುಜಾಚಾರ್ಯರು ಕನ್ನಡನಾಡಿಗೆ ಬರುವ ಮುನ್ನ ತಮಿಳುನಾಡಿನಲ್ಲಿ ಆಗ ಆಳ್ವಿಕೆ ಮಾಡುತ್ತಿದ್ದ ಚೋಳರ ದೊರೆಯಾದ ಕುಲೋತ್ತುಂಗ ಚೋಳನ ಆಶ್ರಯದಲ್ಲಿ ನೆಲೆಸಿದ್ದರು. ನಂತರದ ಕಾಲದಲ್ಲಿ ರಾಜನಾದ ಕುಲೋತ್ತುಂಗ ಚೋಳನು ಶೈವಧರ್ಮಿಯ ನಾಗಿದ್ದನು. ಇವನ ಆಳ್ವಿಕೆಯ ಕಾಲದಲ್ಲಿ ತಮಿಳುನಾಡಿನಲ್ಲಿ ಶೈವಧರ್ಮದ ಪ್ರಚಾರ ಮತ್ತು ಬೆಳವಣಿಗೆಗಾಗಿ ಬಹಳ ಪ್ರಯತ್ನ ನಡೆಸಲಾಗಿತ್ತು. ಹೀಗಿರುವಾಗ ಕುಲೋತ್ತುಂಗ ಚೋಳನು ರಾಮಾನುಜರನ್ನು ವೈಷ್ಣವ ಧರ್ಮವನ್ನು ತ್ಯಜಿಸಿ ಶೈವಧರ್ಮಕ್ಕೆ ಮತಾಂತರಗೊಳಿಸಲು ಮುಂದಾಗುತ್ತಾನೆ. ಆದರೆ ರಾಮಾನುಜಾಚಾರ್ಯರು ವೈಷ್ಣವ ಧರ್ಮವನ್ನು ಬಿಟ್ಟುಹೋಗಲು ಒಪ್ಪಿಗೆ ನೀಡದಿದ್ದುದರಿಂದ ಕುಲೋತ್ತುಂಗ ಚೋಳನು ಒಮ್ಮೆ ರಾಮಾನುಜರನ್ನು ರಾಜ್ಯಸಭೆಗೆ ಕರೆದು ಅವರನ್ನು ಅವಮಾನ ಮಾಡಲು ಮತ್ತು ಅವರ ಶಿರಚ್ಛೇದನಕ್ಕೆ ಪ್ರಯತ್ನ ನಡೆಸುತ್ತಾನೆ. ಇದನ್ನು ತಿಳಿದ ರಾಮಾನುಜಾಚಾರ್ಯರ ಶಿಷ್ಯರೊಬ್ಬರು ಗುರುಗಳನ್ನು ರಕ್ಷಿಸಲು ತಾನು ರಾಮಾನುಜಾಚಾರ್ಯರಂತೆ ವೇಷ ಧರಿಸಿಕೊಂಡು ರಾಜನ ಸಭೆಗೆ ಹೋಗುತ್ತಾರೆ. ನಂತರ  ರಾಮಾನುಜಾಚಾರ್ಯರು ಕನ್ನಡನಾಡಿಗೆ ಬರುತ್ತಾರೆ. ಕನ್ನಡ ನಾಡಿಗೆ ಆಗಮಿಸಿದ ಅವರು ವೈಷ್ಣವ ದೇವಾಲಯಗಳನ್ನು ಸಂದರ್ಶಿಸುತ್ತಾರೆ. ನಂತರ ಮೇಲುಕೋಟೆಗೆ ತೆರಳಿ ಅಲ್ಲಿ ಕೆಲವು ದಿನಗಳ ಕಾಲ ವೈಷ್ಣವ ಧರ್ಮದ ಉಪದೇಶವನ್ನು ಮಾಡಿ, ನಂತರ ತೊಣ್ಣೂರಿಗೆ ಆಗಮಿಸಿ ಅಲ್ಲಿಯೇ ನೆಲೆಯೂರಲು ಮುಂದಾಗುತ್ತಾರೆ. ಆಗ ಕನ್ನಡ ನಾಡಿನ ದಕ್ಷಿಣ ಭಾಗವನ್ನು ಆಳ್ವಿಕೆ ಮಾಡುತ್ತಿದ್ದ ದೊರೆ ಎಂದರೆ ಹೊಯ್ಸಳ ದೊರೆಯಾದ ಬಿಟ್ಟಿದೇವನು ರಾಮಾನುಜಾಚಾರ್ಯರಿಗೆ ಆಶ್ರಯನೀಡಿ ಅವರಿಗೂ, ಅವರ ಶಿಷ್ಯವೃಂದಕ್ಕೂ ಒಂದು ಮಠವನ್ನು ಕಟ್ಟಿಸಿಕೊಡುತ್ತಾನೆ ಎಂಬುದು ಒಂದು ಪ್ರತೀತಿ.

ರಾಮಾನುಜಾಚಾರ್ಯರು ಕನ್ನಡ ನಾಡಿನಲ್ಲಿ ನೆಲೆನಿಂತ ಸಮಯದಲ್ಲಿ ಬಿಟ್ಟಿದೇವನಿಗೆ ಒಬ್ಬಳು ಮಗಳಿರುತ್ತಾಳೆ (ಹರಿಯಲಾದೇವಿ) ಇವಳಿಗೆ ಒಂದು ಪೀಡೆಯ ಸಂಬಂಧಿ ರೋಗವು ಅಂಟಿಕೊಂಡಿದ್ದು, ಅವಳಿಗೆ ತುಂಬಾ ತೊಂದರೆಯನ್ನು ಕೊಡುತ್ತಿರುತ್ತದೆ. ಆಗ ಬಿಟ್ಟಿದೇವನು ಈ ಪೀಡೆ ರೋಗದಿಂದ ನರಳುತ್ತಿರುವ ತನ್ನ ಮಗಳನ್ನು ವಿಮುಕ್ತಿಗೊಳಿಸುವು ದಕ್ಕಾಗಿ ಆಗ ಇದ್ದ ಜೈನ ಪಂಡಿತರಲ್ಲಿ ಮನವಿ ಮಾಡಿಕೊಳ್ಳುತ್ತಾನೆ. ಆದರೆ ಜೈನ ಪಂಡಿತರು ಬಿಟ್ಟಿದೇವನ ಮಗಳಿಗೆ ಅಂಟಿಕೊಂಡಿದ್ದ ಪೀಡೆಯನ್ನು ತೊಲಗಿಸಲು ಮಾಡಿದ ಪ್ರಯತ್ನ ಗಳೆಲ್ಲವೂ ನಿರರ್ಥಕವಾದುದರಿಂದ, ಅದೇ ವೇಳೆಗೆ ತಮಿಳುನಾಡಿನಿಂದ ಕನ್ನಡನಾಡಿಗೆ ಆಗಮಿಸಿದ್ದ ರಾಮಾನುಜರಿಗೆ ಈ ವಿಷಯ ತಿಳಿಯುತ್ತದೆ. ಆಗ ರಾಮಾನುಜಾಚಾರ್ಯರು ಬಿಟ್ಟಿದೇವನಲ್ಲಿ ಕೇಳಿದಾಗ ಈ ವಿಷಯವನ್ನು ತಿಳಿಸುತ್ತಾನೆ. ಅದೇ ವೇಳೆಯಲ್ಲಿ ರಾಮಾನುಜಾಚಾರ್ಯರು ನಿಮ್ಮ ಮಗಳಿಗೆ ಹಿಡಿದಿರುವ ಪೀಡೆಯನ್ನು ತೊಲಗಿಸಲು ಅವರು ಮಾಡಿದ ಪ್ರಯತ್ನಗಳೆಲ್ಲವೂ ನಿರರ್ಥಕವಾದುದರಿಂದ, ಅದೇ ವೇಳೆಗೆ ತಮಿಳುನಾಡಿನಿಂದ ಕನ್ನಡನಾಡಿಗೆ ಆಗಮಿಸಿದ್ದ ರಾಮಾನುಜರಿಗೆ ಈ ವಿಷಯ ತಿಳಿಯುತ್ತದೆ. ಆಗ ರಾಮಾನುಜಾಚಾರ್ಯರು ಬಿಟ್ಟಿದೇವನಲ್ಲಿ ಕೇಳಿದಾಗ ಈ ವಿಷಯವನ್ನು ತಿಳಿಸುತ್ತಾನೆ.  ಅದೇ ವೇಳೆಯಲ್ಲಿ ರಾಮಾನುಜಾಚಾರ್ಯರು ನಿಮ್ಮ ಮಗಳಿಗೆ ಹಿಡಿದಿರುವ ಪೀಡೆಯನ್ನು ನಾನು ತೊಲಗಿಸುತ್ತೇನೆ. ಆದರೆ ಒಂದು ಷರತ್ತು. ಅದೇನೆಂದರೆ ನಿಮ್ಮ ಮಗಳು ಕಾಯಿಲೆಯಿಂದ ಉಪಶಮನವಾದ ನಂತರ ನೀವು ಜೈನಧರ್ಮವನ್ನು ತ್ಯಜಿಸಿ ವೈಷ್ಣವ ಧರ್ಮವನ್ನು ಸ್ವೀಕರಿಸುವುದಾದರೆ ಮಾತ್ರ ಎಂದು ಹೇಳುತ್ತಾರೆ. ಆಗ ಬಿಟ್ಟಿದೇವನು ಸಮ್ಮತಿಯನ್ನು ನೀಡುತ್ತಾನೆ. ಅದರಂತೆ ರಾಜನ ಮಗಳಿಗೆ ಅಂಟಿಕೊಂಡಿದ್ದ ಪೀಡೆಯನ್ನು ತಮ್ಮ ದೈವಬಲದಿಂದ ಹೋಗಲಾಡಿಸುತ್ತಾರೆ. ಇದನ್ನು ತಿಳಿದ ಬಿಟ್ಟಿದೇವನು ರಾಮಾನುಜರಲ್ಲಿದ್ದ ದೈವಭಕ್ತಿಗೆ ಮಾರುಹೋಗಿ ಮಾತಿನಂತೆ ಜೈನಧರ್ಮವನ್ನು ಬಿಟ್ಟು ವೈಷ್ಣವ ಧರ್ಮವನ್ನು ಸ್ವೀಕರಿಸಿದನಂತೆ. ನಂತರ ರಾಮಾನುಜರಿಗೆ ರಾಜಧರ್ಮದ ಆಶ್ರಯವನ್ನು ನೀಡಿ, ಅವರನ್ನು ವೈಷ್ಣವ ಧರ್ಮದ ಪ್ರವರ್ತಕರನ್ನಾಗಿ ನೇಮಿಸುತ್ತಾನೆ.

ರಾಮಾನುಜಾಚಾರ್ಯರಿಗೆ ರಾಜಾಶ್ರಯ ನೀಡಿ ವೈಷ್ಣವ ಧರ್ಮದ ಪ್ರವರ್ತಕರನ್ನಾಗಿ ನೇಮಿಸಿದಾಗ ಅಲ್ಲಿಯೇ ನೆಲೆಸಿದ್ದ ಜೈನಧರ್ಮಿಯರಿಗೆ ಆತಂಕ ಉಂಟಾಗುತ್ತದೆ. ಅದೇನೆಂದರೆ ರಾಮಾನುಜರು ಇಲ್ಲಿಯೇ ಉಳಿದರೆ ಜೈನಧರ್ಮಕ್ಕೆ ಉಳಿಗಾಲವಿರುವುದಿಲ್ಲ ವೆಂದು ತಿಳಿದು, ಅವರನ್ನು ತಮಿಳುನಾಡಿಗೆ ಹೋಗುವಂತೆ ಮಾಡಲು ಪ್ರಯತ್ನಿಸುತ್ತಾರೆ. ರಾಮಾನುಜರಿಗೆ ಜೈನಧರ್ಮೀಯರು ಹಲವಾರು ಪ್ರಶ್ನೆಗಳನ್ನು ಹಾಕುತ್ತಾರೆ. ಆಗ ರಾಮಾನುಜರು ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಒಂದೇ ಬಾರಿ ಉತ್ತರವನ್ನು ನೀಡಿ ಜಯಶಾಲಿಯಾಗುತ್ತಾರೆ. ಜೈನ ವಿದ್ವಾಂಸರುಗಳು ಇದರಿಂದ ವಿಚಲಿತರಾಗಿ ರಾಮಾನುಜರೊಡನೆ ವಾದಮಾಡಿ ಸೋತರು. ನಂತರ ತೊಂಡನೂರಿನ ಸಹಸ್ರಾರು ಪ್ರಜೆಗಳಿಗೆ ಅವರು ವೈಷ್ಣವ ದೀಕ್ಷೆ ನೀಡಿದರು. ಈ ಊರಿನ ಪಕ್ಕದಲ್ಲಿ ಎರಡು ಬೆಟ್ಟಗಳ ಮಧ್ಯೆ ಹರಿಯುವ ನೀರಿಗೆ ಅಡ್ಡಕಟ್ಟೆಯನ್ನು ಕಟ್ಟಿ ತಿರುಮಲಸಾಗರವನ್ನು ನಿರ್ಮಿಸಲು ಸಹಾಯ ಮಾಡಿದರು.[10]

ರಾಮಾನುಜಾಚಾರ್ಯರು ಕ್ರಮವಾಗಿ ವೇದಪುರುಷರು, ಭೃಗುಮಹರ್ಷಿ ಮತ್ತು ಪ್ರಹ್ಲಾದನಿಂದ ಕಟ್ಟಿಸಲ್ಪಟ್ಟ ತೊಂಡನೂರಿನ ಲಕ್ಷ್ಮೀನಾರಾಯಣ, ಗೋಪಾಲಕೃಷ್ಣ ಮತ್ತು ಯೋಗನರಸಿಂಹಸ್ವಾಮಿಯ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದರು. ವಿಷ್ಣುವರ್ಧನ ಮಹಾರಾಜನೂ ಭಕ್ತವೃಂದವೂ ಈ ದೇವಾಲಯಗಳಲ್ಲಿ ದಿನ ನಿತ್ಯೋತ್ಸವ ಪಕ್ಷೋತ್ಸವ, ವಾರ್ಷಿಕೋತ್ಸವಗಳಿಗಾಗಿ ದತ್ತಿಗಳನ್ನು ನೀಡಿದನು. ಇದರ ಫಲದ ಸ್ವರೂಪವಾಗಿ ದಿನೇ ದಿನೇ ತೊಂಡನೂರಿನ ಪ್ರಜೆಗಳಿಗೂ, ಭಕ್ತಾದಿಗಳಿಗೂ, ರಾಜಪರಿವಾರ ದವರಿಗೂ ಸುಖಶಾಂತಿಯಿಂದ ಸಮೃದ್ಧರಾದುದಲ್ಲದೆ ತೊಂಡನೂರಿನ ಸಂಸ್ಥಾನವು ಹೊಯ್ಸಳ ಸಾಮ್ರಾಜ್ಯವಾಗಿ ಪರಿವರ್ತನೆಯಾಯಿತು.

ಇಲ್ಲಿರುವ ಮುಸಲ್ಮಾನರ ಗೋರಿಯ ಬಗೆಗಿರುವ ಐತಿಹ್ಯವೊಂದು ಹೀಗಿದೆ:

ಅರಬ್ ದೇಶದ ಹಜರತ್ ಸೈಯದ್ ಸಾಲಾರ್ ಮಸೂದ್ ಎಂಬಾತ ರಾಮಾನುಜರ ಸಮಕಾಲೀನ. ಆತ ರಾಮಾನುಜರಿದ್ದ ಸ್ಥಳಕ್ಕೆ ಬಂದ. ಮೊದಲು ತೊಂಡನೂರು ಕೆರೆಯಲ್ಲಿ ಸ್ನಾನ ಮಾಡಿ ಬಂದು ಅವರನ್ನು ಭೇಟಿಯಾದ. ಕೆರೆಯ ಬಳಿ ಒಂದು ಬಸವ ಇತ್ತು. ಆ ಜಾಗವೇ ತನಗೆ ಐಕ್ಯವಾಗಲು ಪ್ರಶಸ್ತ. ಆ ಜಾಗ ಬೇಕು ಎಂದ ಸಾಲಾರ್ ಮಸೂದ್, ಬಸವನನ್ನು ತನ್ನ ಎಡಗಾಲು ಹೆಬ್ಬೆರಳಿನಿಂದ ತಳ್ಳಿದ. ಬಸವ ಆ ಜಾಗ ಬಿಟ್ಟು ಬೇರೆ ಕಡೆ ಹೋಯಿತು. ಬಸವ ಇದ್ದ ಸ್ಥಳದಲ್ಲಿ ಆತ ಜೀವಂತ ಸಮಾಧಿ ಆದ. ಆತ ಭಾರತಕ್ಕೆ ಬರುವ ವೇಳೆಗೆ ಮದುವೆ ನಿಶ್ಚಯವಾಗಿತ್ತು(ಪಾನ್ ಕಾ ರಸಂ ಅಥವಾ ವಿಳ್ಳೆಶಾಸ್ತ್ರ). ಆಕೆಯ ಹೆಸರು ಬೀಬಿ ಫಾತಿಮ. ಯಾರಿಗೂ ಹೇಳದೆ ಖಾಜಿ ಭಾರತದ ಈ ಸ್ಥಳಕ್ಕೆ ಬಂದಿದ್ದ. ಬೀಬಿಗೆ ಈತ ಸಮಾಧಿಸ್ಥನಾದ ವಿಚಾರ ಕನಸಿನಲ್ಲಿ ಬಂತು. ಅವಳು ತನ್ನ ಸಹಚರರೊಡನೆ ಇದೇ ತೊಂಡನೂರಿಗೆ ಬಂದಳು. ಕೆರೆಯಲ್ಲಿ ಸ್ನಾನ ಮಾಡಿ ಸಮಾಧಿ ಹತ್ತಿರ ನಿಂತು “ನಾನು ಸತ್ಯವಂತೆ ಆಗಿದ್ರೆ ನನ್ನನ್ನೂ ನಿನ್ನ ಜೊತೆ ಸೇರಿಸಿಕೊ” ಎಂದು ಪ್ರಾರ್ಥಿಸಿದಳಂತೆ. ಗೋರಿ ಬಾಯಿಬಿಟ್ಟಾಗ ಅವಳೂ ಒಳಗೆ ಸೇರಿಕೊಂಡಳು. ಅವಳ ಜೊತೆ ಬಂದವರು ನಮ್ಮನ್ನು ಬಿಟ್ಟುಹೋಗುವಳಲ್ಲ ಎಂದು ಆಕೆಯ ಸೆರಗು ಹಿಡಿದುಕೊಂಡರಂತೆ. ಸೆರಗು ಮಾತ್ರ ಗೋರಿ ಮೇಲೆ ಬಹಳ ವರ್ಷಗಳ ಕಾಲ ಹಾರಾಡುತ್ತಿತ್ತಂತೆ. ಜನ ಮುಟ್ಟಿ ಮುಟ್ಟಿ ಹಾಳಾಗಿ ಈಗ ಅದು ಇಲ್ಲವೇ ಇಲ್ಲ.

ಇಲ್ಲಿರುವ ಕೆರೆಯನ್ನು ರಾಮಾನುಜರು ಕಲ್ಲುಗಳಿಂದ ಯಾದವನದಿಗೆ ಅಡ್ಡಕಟ್ಟೆ ಹಾಕಿಸಿ ತಮ್ಮ ಶ್ರೀಪಾದ ತೀರ್ಥವನ್ನು ಅನುಗ್ರಹಿಸಿದ ಸ್ಥಳ, ಶ್ರೀಪಾದ ತೀರ್ಥರಿಂದ ವಿಷ್ಣುವರ್ಧನನ ಮಗಳಿಗೆ ಪಿಶಾಚಿಯ ವಿಮೋಚನೆಯಾಯಿತು. ಇದಕ್ಕೆ ಯಾದವ ಸಮುದ್ರಂ, ತಿರುಮಲಸಾಗರ, ಪಂಚಾಪ್ಸರತಟಾಕ ಮತ್ತು ಮೋತಿತಲಾಬ್ ಎಂದು ಹೆಸರು ಬಂದಿತೆಂದು ಹೇಳಲಾಗಿದೆ.

ಇಲ್ಲಿನ ಇನ್ನೊಂದು ಐತಿಹ್ಯದ ಪ್ರಕಾರ, ಹಿಂದೆ ಒಮ್ಮೆ ಧಾರಾಕಾರವಾಗಿ ಮಳೆ ಸುರಿದಿದ್ದರಿಂದಾಗಿ ಊರಿನ ವಾಯವ್ಯ ಭಾಗದಲ್ಲಿರುವ ಕೆರೆಯು ತುಂಬಿಕೊಂಡಿತಂತೆ. ಆಗ ಈ ಕೆರೆಯಲ್ಲಿಯೇ ಇದ್ದ ಒಂದು ಹೆಬ್ಬಾವು ಕೆರೆಯ ತೂಬಿನೊಳಗೆ ಬಂದು ಸೇರಿಕೊಂಡು ಹೊರಬರಲಾಗದೇ ಅಲ್ಲಿಯೇ ಸೇರಿಕೊಂಡಿದ್ದರಿಂದ ಕೆರೆಯ ನೀರು ಹೊರಹೊಗದೆ ಇದ್ದುದರಿಂದಾಗಿ ಕೆರೆಯು ಒಡೆದುಹೋಗುವ ಅಪಾಯದಲ್ಲಿತ್ತು. ಇದನ್ನು ಮನಗಂಡ ಊರಿನ ಯಜಮಾನ (ಮುಖ್ಯಸ್ಥ) ಡಂಗೂರವನ್ನು ಹೊಡೆಸಿ ಸಾರಿದನಂತೆ. ಅದೇನೆಂದರೆ ಕೆರೆಯ ತೂಬಿನಲ್ಲಿ ಸೇರಿಕೊಂಡಿರುವ ಹಾವನ್ನು ಕೊಂದುಹಾಕಿ ನೀರು ಹೊರಬರುವಂತೆ ಮಾಡಿದವರಿಗೆ ಬಹುಮಾನವನ್ನು ಮತ್ತು ಒಂದಿಷ್ಟು ಭೂಮಿಯನ್ನು ಕೊಡುವುದಾಗಿ ಸಾರಿದನಂತೆ. ಹೀಗೆ ಸಾರಿದಾಗ ಊರಿನ ಯಾವುದೇ ವ್ಯಕ್ತಿಗಳು ತೂಬಿನಲ್ಲಿ ಸೇರಿಕೊಂಡಿದ್ದ ಹಾವನ್ನು ಕೊಂದು ಹಾಕಲು ಮುಂದೆ ಬರಲಿಲ್ಲವಂತೆ. ಅದೇ ಊರಿನಲ್ಲಿ ವಾಸವಾಗಿದ್ದ ಹರಿಜನ ಕೇರಿಯ ಯುವಕನು ಧೈರ್ಯಮಾಡಿ ಮೈಗೆಲ್ಲ ಕತ್ತಿಯನ್ನು ಕಟ್ಟಿಕೊಂಡು ಕೈಯಲ್ಲೊಂದು ಕತ್ತಿಯನ್ನು ಹಿಡಿದು ಮುಂದೆ ಬಂದು ನಿಂತನಂತೆ. ಇದನ್ನು ನೋಡಿದ ಯಜಮಾನನು ಅವನ ಕೊರಳಿಗೆ ಹೂವಿನ ಹಾರವನ್ನು ಹಾಕಿ ನೀರಿಗಿಳಿದು ಹೆಬ್ಬಾವನ್ನು ಕೊಂದು ಹಾಕಲು ಆದೇಶ ನೀಡಿದನಂತೆ. ಆಗ ಯುವಕನು ಯಜಮಾನನ ಆದೇಶದಂತೆ ನೀರಿಗಿಳಿದು ಈಜಿಕೊಂಡು ಹೋಗಿ ಕೆರೆಯ ನೀರು ಹೋಗುವ ತೂಬಿನಲ್ಲಿ ಸೇರಿಕೊಂಡಿದ್ದ ಹೆಬ್ಬಾವಿನೊಡನೆ ಸೆಣಸಾಡಿ ಅದನ್ನು ಕೊಂದು ಹಾಕಿದನಂತೆ. ಯುವಕನು ಹಾವಿನೊಡನೆ ಹೋರಾಡಿದ್ದರಿಂದ ಅವನೂ ಸಹ ಆ ಸ್ಥಳದಲ್ಲಿಯೇ ಸಾವನ್ನಪ್ಪಿದನಂತೆ. ಯುವಕನ ಕೊರಳಿಗೆ ಹಾಕಿಕೊಂಡಿದ್ದ ಹೂವಿನಹಾರದ ಚೂರುಗಳು ಕೆರೆಯ ತೂಬಿನ ಮೂಲಕ ಹೊರಗೆ ತೇಲಿಹೋದವು. ಅವು ಎಲ್ಲಿಯವರೆಗೆ ತೇಲಿಹೋದವೋ ಅಲ್ಲಿಯವರೆಗಿನ ಭೂಮಿಯನ್ನು ಅವನ ಸಂಬಂಧಿಕರಿಗೆ ಕೊಟ್ಟು, ಮಾತಿನಂತೆ ನಡೆದುಕೊಂಡನೆಂಬುದಾಗಿ ಜನರು ವಿವರಣೆಯನ್ನು ನೀಡುತ್ತಾರೆ.[11]

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಡಾ. ಎಸ್. ವೇಣುಗೋಪಾಲಾಚಾರ್ಯ, ೨೦೦೨: ಭಕ್ತಪುರೀ ತೊಂಡನೂರಿನ ಮಹಾತ್ಮೆ, ಪುಟ ೨

[2] ಅದೇ, ಪುಟ ೧‑೨

[3] ತೊಣ್ಣೂರಿನ ಚೆನ್ನೇಗೌಡರು ನೀಡಿದ ವಿವರಣೆ

[4] ಡಾ. ಎಸ್. ವೇಣುಗೋಪಾಲಾಚಾರ್ಯ, ೨೦೦೨: ಪೂರ್ವೋಕ್ತ, ಪುಟ ೧‑೨

[5] ಡಾ. ಎಚ್.ಎಂ. ನಾಗರಾಜು, ೨೦೦೬: ಯದುಗಿರಿ ನಾಡು, ಪುಟ ೫೧

[6] ಡಾ. ಎಸ್. ವೇಣುಗೋಪಾಲಾಚಾರ್ಯ, ೨೦೦೨: ಭಕ್ತಪುರಿ ತೊಂಡನೂರಿನ ಮಹಾತ್ಮೆ,     ಪುಟ ೧

[7] ಡಾ. ಎಚ್.ಎಂ. ನಾಗರಾಜು, ೨೦೦೬: ಯದುಗಿರಿನಾಡು,  ಪುಟ ೫೦

[8] ಎಂ.ಎ.ಆರ್. ೧೯೩೨: ಪುಟ ೧೮೯ ಮತ್ತು ಎಂ.ಎ.ಆರ್. ೧೯೪೪: ಪುಟ ೫೭

[9] ಡಾ. ಎಸ್. ವೇಣುಗೋಪಾಲಾಚಾರ್ಯ, ೨೦೦೨: ಪೂರ್ವೋಕ್ತ, ಪುಟ ೨

[10] ಎಂ.ಎ.ಆರ್.೧೯೧೨: ಪುಟ ೧೧ ಮತ್ತು ಎಂ.ಎ.ಆರ್. ೧೯೩೨: ಪುಟ ೩

[11] ಡಾ. ಎಸ್. ವೇಣುಗೋಪಾಲಚಾರ್ಯ, ೨೦೦೨: ಪೂರ್ವೋಕ್ತ, ಪುಟ ೨