ಪಾಂಡವಪುರ ತಾಲೂಕಿನ ಈಗಿನ ತೊಣ್ಣೂರು ಗ್ರಾಮವು ಕ್ರಿ.ಶ.೧೨ನೆಯ  ಶತಮಾನದಿಂದ ಪ್ರಸಿದ್ದಿಗೆ ಬಂದಿದೆ. ಅದಕ್ಕಿಂತ ಮೊದಲು ಈ ಗ್ರಾಮದ ಸ್ಥಿತಿಗತಿ ಅಥವಾ ಸ್ಥಳ ಎಲ್ಲಿತ್ತೆಂದು ತಿಳಿಯುವುದು ಕಷ್ಟ. ಈ ಊರು ಅಲ್ಲಿನ ದೇವಾಲಯಗಳಿಂದ ಹಾಗೂ ಕೆರೆಯಿಂದ ಪ್ರಸಿದ್ದಿಯಾಗಿದೆ. ಇತಿಹಾಸವಲ್ಲದೆ ಜಾನಪದ ಕಥೆ ಕರಿಬಂಟನ ಕಾಳಗದಲ್ಲಿ ಬರುವ ‘ತೊಣ್ಣೂರು ರಾಕ್ಷಸಿ’ ಪಾತ್ರದಿಂದಲೂ ಈ ಗ್ರಾಮ ಪ್ರಸಿದ್ದಿ. ಈ ಗ್ರಾಮದಲ್ಲಿನ ದೊಡ್ಡಕೆರೆಗೆ ನಿಜಾಮನು ‘ಮೋತಿತಲಾಬ್’ ಎಂದು ಕರೆದಿದ್ದುದನ್ನು ಇಲ್ಲಿ ನೆನಸಿಕೊಳ್ಳ ಬಹುದು.

ತೊಣ್ಣೂರಿಗೆ ಈ ಹೆಸರು ಹೇಗೆ ಬಂತೆಂದು ಅನೇಕರು ಬೇರೆ ಬೇರೆ ಭಾವಿಸಿದ್ದಾರೆ. ಈ ಗ್ರಾಮದ ಶಾಸನಗಳನ್ನು ಗಮನಿಸಿದಾಗ ಸುಮಾರು ೬೫ಕ್ಕಿಂತಲೂ ಹೆಚ್ಚು ಶಾಸನಗಳು ದೊರೆತಿದ್ದು ಅವು ತಮಿಳು, ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿವೆ. ಇವುಗಳಲ್ಲಿ ತಮಿಳು ಶಾಸನಗಳೇ ಅಧಿಕ. ಇದಕ್ಕೆ ಕಾರಣ ಈ ತೊಣ್ಣೂರು ಪ್ರಧಾನವಾಗಿ ಶ್ರೀವೈಷ್ಣವ ಕ್ಷೇತ್ರವಾಗಿದ್ದುದು. ಶಾಸನಗಳಲ್ಲಿ ಉಕ್ತವಾಗಿರುವ ಸ್ಥಳನಾಮವನ್ನು ಗಮನಿಸಿದಾಗ ಕನ್ನಡ ಮತ್ತು ತಮಿಳು ಶಾಸನಗಳೆರಡರಲ್ಲಿಯೂ ತೊಂಡನೂರು, ತೊಣ್ಣನೂರು ಎಂಬ ಉಲ್ಲೇಖಗಳೇ ಹೆಚ್ಚಿಗೆ ದೊರೆತಿವೆ.

ಈ ಪದದ ಉಲ್ಲೇಖವು ಕ್ರಿ.ಶ. ೧೧೭೩ರಿಂದ ಆರಂಭವಾಗಿ ಕ್ರಿ.ಶ. ೧೭೨೨ರ ಇಮ್ಮಡಿ ಕೃಷ್ಣರಾಜ ಒಡೆಯರವರೆಗೆ ಶಾಸನಗಳಲ್ಲಿ ಉಲ್ಲೇಖವಾಗಿದೆ. ಕೆಲವು ಶಾಸನಗಳಲ್ಲಿ ತೊಂಡನೂರಿನ ಜೊತೆಯಲ್ಲಿ ಯಾದವನಾರಾಯಣ ಚತುರ್ವೇದಿಮಂಗಲ ಎಂದೂ ಉಲ್ಲೇಖಗೊಂಡಿದೆ. ಈ ಗ್ರಾಮನಾಮವೂ ಸಹ ಕ್ರಿ.ಶ.೧೧೭೩ರ ಶಾಸನದಲ್ಲಿಯೇ ಬಂದಿದೆ. ಅಂದರೆ ಕ್ರಿ.ಶ. ೧೧೫೭ರ ಕಾಲಕ್ಕಾಗಲೇ ಈ ಗ್ರಾಮಕ್ಕೆ ಯಾದವ ನಾರಾಯಣ ಚತುರ್ವೇದಿಮಂಗಲವೆಂಬ ಹೆಸರು ರೂಢಿಯಲ್ಲಿತ್ತು. ಜನಸಾಮಾನ್ಯರು ಇದನ್ನು ತೊಂಡನೂರು ಎಂದು ಕರೆದಿದ್ದರೆ, ಅಗ್ರಹಾರದ ಜನರು ಯಾದವನಾರಾಯಣ ಚತುರ್ವೇದಿ ಮಂಗಲವೆಂದು ಕರೆಯುತ್ತಿದ್ದಿರಬಹುದು. ಅಥವಾ ಈ ಯಾದವನಾರಾಯಣ ಚತುರ್ವೇದಿಮಂಗಲ ಎಂಬ ಗ್ರಾಮವಾಚಕವು ಕೇವಲ ಬರವಣಿಗೆಯಲ್ಲಿಯೇ ಇದ್ದಿರಬಹುದು. ಹೀಗಾಗಿ ತೊಂಡನೂರು ಎಂಬ ಉಲ್ಲೇಖವೇ ಎಲ್ಲಾ ಕಾಲಕ್ಕೂ ಸಾರ್ವತ್ರಿಕವಾಗಿತ್ತೆಂದು ಊಹಿಸಬಹುದು. ವಿಶೇಷವೆಂದರೆ ಕ್ರಿ.ಶ.೧೧೫೭ರ ಶಾಸನದಲ್ಲಿ ತೊಂಡನೂರು ಹೆಸರಿನ ಉಲ್ಲೇಖವಿಲ್ಲ. ಯಾದವ ನಾರಾಯಣ ಚತುರ್ವೇದಿಮಂಗಲ ವೆಂದೇ ಕರೆಯಲಾಗಿದೆ.

ಈ ತೊಣ್ಣೂರು ಗ್ರಾಮವು ಕ್ರಿ.ಶ.೧೧೫೭ಕ್ಕಿಂತ ಮೊದಲೇ ಅಸ್ತಿತ್ವದಲ್ಲಿದ್ದರೂ ವಿಷ್ಣುವರ್ಧನ ಶಾಸನದಲ್ಲಿ ಈ ಗ್ರಾಮದ ಹೆಸರಿನ ಉಲ್ಲೇಖವಿಲ್ಲ. ಹೀಗಾಗಿ ಈ ಕಾಲಕ್ಕೆ ಈ ಗ್ರಾಮವು ಒಂದು ಕುಗ್ರಾಮವಾಗಿತ್ತೆಂದು ಊಹಿಸಿದಲ್ಲಿ ತಪ್ಪಾಗಲಾರದು. ಹಾಗಾದರೆ ಇದರ ಗ್ರಾಮನಾಮ ಇತಿಹಾಸ ಎಷ್ಟು ಹಿಂದೆ ಹೋಗುತ್ತದೆಂಬ ಜಿಜ್ಞಾಸೆ ಸಹಜವಾಗಿ ಮೂಡುತ್ತದೆ. ಇಲ್ಲಿನ ಕೆರೆಯ ಬಗ್ಗೆ ಕ್ರಿ.ಶ.೧೨ ಮತ್ತು ೧೩ನೆಯ ಶತಮಾನದ ಶಾಸನಗಳು ಉಲ್ಲೇಖಿಸುತ್ತಾ ಇದನ್ನು ‘ಪೆರಿಯ ಏರಿ’ ಅಂದರೆ ದೊಡ್ಡ ಕೆರೆ ಎಂದು ಕರೆದಿವೆ. ಈ ಕೆರೆಯ ಆಯಕಟ್ಟನ್ನು ಗಮನಿಸಿದಾಗ ಇಲ್ಲಿ ಚಿಕ್ಕ ತೊರೆಯೊಂದಿದ್ದು, ಅದಕ್ಕೆ ಅಡ್ಡಲಾಗಿ ಹೊಯ್ಸಳರ ಕಾಲದಲ್ಲಿ ಕೆರೆ ಕಟ್ಟಲಾಗಿದೆ. ಇತ್ತೀಚೆಗೆ ಈ ಗ್ರಾಮದಲ್ಲಿ ಗಂಗರ ಕಾಲದ ವೀರಗಲ್ಲೊಂದು ದೊರೆತಿದ್ದು, ಗ್ರಾಮದ ಇತಿಹಾಸವನ್ನು ಇನ್ನೂ ಹಿಂದಕ್ಕೆ ಹಾಕಬಹುದಾಗಿದೆ. ಸುಮಾರು ಕ್ರಿ.ಶ. ೧೦ನೆಯ ಶತಮಾನಕ್ಕೆ ಸೇರುವ ಶಾಸನ ಇದಾಗಿದೆ. ಇದಕ್ಕೂ ಹಿಂದೆ ಈ ಗ್ರಾಮವಿತ್ತೆಂಬುದಕ್ಕೆ ಬರೆವಣಿಗೆಯ ದಾಖಲೆಗಳು ದೊರೆತಿಲ್ಲ. ಆದರೆ ತೊಂಡನೂರು ಎಂಬ ಗ್ರಾಮವಾಚಿಗೆ ಪೂರಕವಾಗಿ ಕೆಲವು ಮಾಹಿತಿಗಳು ದೊರೆತಿದ್ದು, ಆ ಮಾಹಿತಿಗಳನ್ನು ಈ ಗ್ರಾಮಕ್ಕೆ ಅನ್ವಯಿಸಬಹುದಾಗಿದೆ. ಇದೊಂದು ಸಾದೃಶ ಊಹೆ.

ತೊಂಡನೂರು ಎಂದರೆ ಅರ್ಥವೇನೆಂದು ಗಮನಿಸೋಣ. ಈ ಪದವನ್ನು ಬಿಡಿಸಿದಾಗ ತೊಂಡನ್+ಊರು = ತೊಂಡನೂರು ಎಂದಾಗುತ್ತದೆ. ಇದೊಂದು ವ್ಯಕ್ತಿವಾಚಕದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಕನ್ನಡದಲ್ಲಿ ತೊಂಡೆ ಎಂದರೆ ಕಬ್ಬಿನ ಸುಳಿ ಎಂದರ್ಥ. ಗಿಡದ ಮೃದುವಾದ ಭಾಗ, ಚಿಗುರು ಎಂದೂ ಅರ್ಥೈಸಬಹುದು. ಇದನ್ನು ಸಂಸ್ಕೃತದಲ್ಲಿ ಪಲ್ಲವ ಎಂದೂ ಕರೆಯುತ್ತಾರೆ. ಪಲ್ಲವ ಎಂಬ ಹೆಸರಿನ ವಂಶದ ರಾಜರು ಆಳಿದ ಪ್ರದೇಶವನ್ನು ತೊಂಡೈಮಂಡಲವೆಂದು ಕರೆಯುತ್ತಾರೆ. ಹೀಗಾಗಿ ಪಲ್ಲವರಿಗೆ ತೊಂಡೈ ಮಂಡಲದವರೆಂಬ ಅಡ್ಡ ಹೆಸರೂ ಇದ್ದಿರಬಹುದು.

ಪ್ರಸ್ತುತ ಲೇಖನದಲ್ಲಿ ತೊಂಡನೂರು ಎಂಬ ಶಬ್ದದ ನಿಷ್ಪತ್ತಿ ಬಗ್ಗೆ ಯೋಚಿಸುವಾಗ ಈ ತೊಂಡನ್ ಮತ್ತು ಕಟ್ಟಿದ ಊರು ಯಾವುದು ಎಂಬುದಕ್ಕೆ ಆಧಾರಗಳನ್ನು ಹುಡುಕುವಾಗ ನಮಗೆ ಎರಡು ದಾಖಲೆಗಳು ನೆನಪಿಗೆ ಬರುತ್ತವೆ. ಅವುಗಳೆಂದರೆ ಗುಂಡ್ಲುಪೇಟೆ ತಾಲೂಕಿನ ಒಂದು ಶಾಸನ ಹಾಗು ಮಂಡ್ಯ ಜಿಲ್ಲೆಯ ಒಂದು ಶಾಸನ. ಈ ಎರಡೂ ಶಾಸನಗಳು ಗಂಗರಾಜ ಒಂದನೆಯ ಶಿವಮಾರನ ಕಾಲಕ್ಕೆ ಸೇರಿದವಾಗಿವೆ. ಇವುಗಳ ವಿಷಯ ಪಲ್ಲವ ಎಳ ಅರಸರು ಇಲ್ಲಿನ ನದಿಗಳಿಗೆ ಅಡ್ಡಕಟ್ಟೆಯನ್ನು ಕಟ್ಟಿದ ವಿಷಯ ಪ್ರಧಾನವಾಗಿವೆ. ಈ ಅಡ್ಡಕಟ್ಟೆಗಳನ್ನು  ಕಟ್ಟಿದ ನದಿಗಳ ಹೆಸರು ಉಲ್ಲೇಖವಾಗಿದೆಯಾದರೂ ಅವನ್ನು ಸ್ಪಷ್ಟವಾಗಿ ಇದೇ ಎಂದು ಗುರುತಿಸಲಾಗಿಲ್ಲ. ಅವನ್ನು ಈಗಿನ ತೊಣ್ಣೂರು ಬಳಿ ಹರಿಯುವ ತೊರೆಗೆ ಸಮೀಕರಿಸಿದಲ್ಲಿ ಪಲ್ಲವ ಎಳ ಅರಸರು (ಯುವರಾಜರು) ಈಗಿನ ತೊಂಡನೂರು ಸಮೀಪ ತೊರೆಗೆ ಅಡ್ಡಕಟ್ಟೆ ಕಟ್ಟಿರಬಹುದು ಅದು ಮುಂದೆ ಹೊಯ್ಸಳರ ಕಾಲದಲ್ಲಿ ದೊಡ್ಡ ಕಟ್ಟೆ ಕಟ್ಟಿದಾಗ ಮುಳುಗಡೆ ಯಾಗಿದ್ದಿರಬಹುದು.

ಹೀಗಾಗಿ ಪಲ್ಲವ ಎಳ ಅರಸರು ಇಲ್ಲಿ ಕೆರೆ ಕಟ್ಟಿ, ಊರು ಸ್ಥಾಪಿಸಿದ್ದುದರಿಂದ ಇದಕ್ಕೆ ತೊಂಡನ್ (ಪಲ್ಲವನು) ಊರು ಎಂಬ ಹೆಸರು ಬಂದಿರಬಹುದು.

ಈ ನಾಮ ನಿಷ್ಪತ್ತಿಯು ಒಂದು ಸಾಧಾರ ಊಹೆಯಿಂದ ಮಾಡಲಾಗಿದೆ. ಈಗ ದೊರೆತಿರುವ ಆಧಾರಗಳ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ಈ ಗ್ರಾಮವು ವ್ಯಕ್ತಿವಾಚಕವಾದ ಪಲ್ಲವ ಕಟ್ಟು>ಪಲ್ಲವನಕೆರೆ= ತೊಂಡನ್ ಊರು ಎಂದು ಬಂದಿರಬೇಕು.