ತೊಣ್ಣೂರು, ಕೆರೆತೊಣ್ಣೂರು ಎಂದು ಪ್ರಸಿದ್ಧವಾಗಿರುವ ಊರಿನ ನಿಜವಾದ ಹೆಸರು ‘ತೊಂಡನ<ತೊಣ್ಡನ’ ಊರು. ‘ತೊಣ್ಡ’ ಶಬ್ದದಲ್ಲಿನ ‘ಣ್ಡ’ ಧ್ವನಿಯಲ್ಲಿ ಮೇಲಿನ ಅಕ್ಷರ ‘ಣ’ ಎಂಬುದು ಸಜಾತೀಯ ದ್ವಿತ್ವಕ್ಕೆ ಎಡೆಕೊಟ್ಟುದಕ್ಕಾಗಿ ತೊಣ್ಣೂರೆಂದು ರೂಪ ತಳೆಯಿತು. ಸಜಾತೀಯ ದ್ವಿತ್ವ ಕೆಳಗಿನ ‘ಧ್ವನಿಮಾ’ ಕೂಡ ಆಗಬಹುದು. ಉದಾ. ಕೞ್ತೆ > ಕತ್ತೆ, ಗೞ್ದೆ > ಗದ್ದೆ, ‘ತೊಣ್ಡ’ದಲ್ಲಿನ ‘ಡ’ ದ್ವಿತ್ವ ರೂಪ ತಳೆದರೆ ಶ್ರುತಿಕಟುತ್ವ ಶಬ್ದದ ಜನನವಾಗುತ್ತದೆ. ಕವಿಗೆ ಅಹಿತಕರ ರೂಪ ಆಗುವುದರಿಂದ ‘ತೊಣ್ಣೂರು’ ಎಂದಾಗಿದೆ. ತೊಂಡನೂರು ಭಕ್ತನ ಊರು ಎಂದಾಗುವದರಿಂದ ಇದರ ಅಸ್ತಿತ್ವ ಹೊಯ್ಸಳರ ಕಾಲಕ್ಕಿಂತ ಮುಂಚೆ ಹೋಗಲಾರದು. ಶ್ರೀಮದ್ರಾಮಾನುಜಾಚಾರ್ಯರ ಶಿಷ್ಯನ ಊರು ಆಗ ಇದು ತೊಂಡ-ಭಕ್ತ-ಇವನ ಊರು ಎಂಬ ಶುದ್ಧ ನಿಷ್ಪತ್ತಿಗೆ ನಿದರ್ಶನವಾಗುತ್ತದೆ. ಶಾಸನಗಳಲ್ಲಿ ದೊರೆಯುವ ರೂಪಗಳು

೧. ತೊಣ್ಡನೂರು, ತೊಂಡನೂರು‑ ಪುಟ ೧೧೬, ೧೩೭, ೧೪೯, ೧೫೦, ೧೫೧, ೧೬೯, ೨೨೮, ೨೫೮, ೩೧೬, ೩೧೮, ೩೨೪, ೪೧೬

೨. ತೊಂಣೂರು‑ ಪುಟ ೯೨೨,

೩. ತೊಣ್‌ಡನೂರಾನ‑ ಪುಟ ೧೪೫, ತೊಣ್ಡನೂರಾನ ಪುಟ ೧೪೭

೪. ಸುಂಕತೊಂಡನೂರು‑ ಪುಟ. ೩೦೫, ೩೧೨

ತೊಂಡನೂರು ಮತ್ತು ಸುಂಕಾತೊಂಡನೂರು

[1] ತುಂಬ ಹತ್ತಿರದ ಊರುಗಳು. ಇವುಗಳ ಮಧ್ಯದ ಅಂತರ ಸುಮಾರು ೬‑೭ ಮೈಲಿ ಹತ್ತಿರ ಹತ್ತಿರದಲ್ಲಿಯೆ ಇರುವ ಎರಡು ತೊಂಡನೂರುಗಳು ಏಕೆ ಅಸ್ತಿತ್ವಕ್ಕೆ ಬಂದವು ಎಂಬುದಕ್ಕೆ ಪ್ರಶ್ನೆಯಷ್ಟು ಉತ್ತರ ಸುಲಭವಾಗಿಲ್ಲ. ಹೊಯ್ಸಳರ ಕಾಲದ ದಾಖಲೆಗಳೇ ದೊರಕಿದ್ದು ತತ್ಪೂರ್ವದ ದಾಖಲೆಗಳು ದೊರೆಯುವತನಕ ಏನನ್ನೂ ಹೇಳುವಂತಿಲ್ಲ. ತೊಂಡನೂರು ಎಂದರೆ ಪಲ್ಲವರು, ಪಲ್ಲವರ ಶಾಖೆಗಳಾದ ನೊಳಂಬರು ಇಲ್ಲವೆ ಆದಿಮ ಅಥವಾ ಕಾಡವ ಕುಲದ ಅರಸರು ಇಲ್ಲಿ ಒಂದೊಮ್ಮೆ ಇದ್ದು ತೊಂಡಮಾರನ ಆಳ್ವಿಕೆ ಇಲ್ಲಿತ್ತೆಂಬ ಐತಿಹ್ಯಕ್ಕೆ ಆಧಾರವಾಗಿರಬಹುದು. ಗಂಗರಿಗೂ ಪಲ್ಲವರಿಗೂ ನೆಂಟಸ್ತಿಕೆ ಇದ್ದು ಆ ಶಾಖೆಯ ಯಾರಾದರೂ ಅರಸರಿಗೆ ಸಂಬಂಧಪಟ್ಟಿರಬಹುದು. ತತ್ಕಾರಣ ತೊಂಡನೂರು ಎಂಬ ಶಬ್ದ ಬಳಕೆಯಲ್ಲಿ ಬಂದಿರಬಹುದು.

ಶಾಸನಗಳು ಸಮಕಾಲೀನ ದಾಖಲೆಗಳಾಗಿದ್ದು ಯಾವುದೇ ಪ್ರದೇಶದ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸಗಳ ‘ಅಧ್ಯಯನ’ಕ್ಕೆ ಆಕರಗಳಾಗಿವೆ. ತೊಣ್ಣೂರು ಹಾಗೂ ಹತ್ತಿರದಲ್ಲಿನ ಎಡಬಲದ ಗ್ರಾಮಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸುಮಾರು ೧೦೦ಕ್ಕೆ ಹತ್ತಿರ ಹತ್ತಿರ ದಾಖಲೆಗಳು ದೊರಕಿವೆ. ‘ತೊಂಣೂರು’ ಎಂಬ ಶಬ್ದರೂಪ ಕೆ.ಆರ್.ಪೇಟೆಯ ಚಟ್ಟಂಗೆರೆಯ ಶಾಸನದಲ್ಲಿ ಕಂಡುಬಂದಿದೆ.[2] ತೊಣ್ಣೂರು ಊರಿನಲ್ಲಿಯೇ ದೊರೆತ ಶಾಸನಗಳ ಸಂಖ್ಯೆ ಸದ್ಯ ಪಾಪು ೫೪ರಿಂದ ೧೨೧, ಅಂದರೆ ೬೮ ಶಾಸನಗಳಲ್ಲಿ ಕೆಲವು ಕನ್ನಡ, ಕೆಲವು ತಮಿಳು, ಕೆಲವು ತಮಿಳು-ಕನ್ನಡ ಮಿಶ್ರ ಭಾಷೆಯಿಂದ ಕೂಡಿವೆ. ತೊಣ್ಣೂರು ಊರಲ್ಲಿ ದೊರಕಿದ ಶಾಸನಗಳಲ್ಲಿ ತಮಿಳು ಶಾಸನಗಳೇ ಹೆಚ್ಚಾಗಿವೆ. ಒಂದು ತಾಮ್ರಶಾಸನವಿದ್ದು ಅದು ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಬರೆಯಲಾಗಿದೆ.[3] ಅದು ತನ್ನಷ್ಟಕ್ಕೆ ಒಂದು ಬಹಳ ಮಹತ್ವದ ವಿಶಿಷ್ಟ ಶಾಸನವಾಗಿದೆ.

‘ಯಾದವನಾರಾಯಣ ಚತುರ್ವೇದಿಮಂಗಲ’ ಎಂದು ಪ್ರಸಿದ್ಧವಾದ ತೊಣ್ಣೂರು ಇಲ್ಲಿನ ಲಕ್ಷ್ಮೀನಾರಾಯಣ ಅಥವಾ ನಂಬಿನಾರಾಯಣ ಆದಿಯಾಗಿ ಹಲವು ದೇವಸ್ಥಾನಗಳಿಂದ ‘ಬೃಹತ್ ದೇವಾಲಯಗಳ ತೊಣ್ಣೂರು’ ಎಂದೇ ಪ್ರಸಿದ್ಧ. ಈ ದೇವಾಲಯ ಹೊಯ್ಸಳ ವಂಶದ ಪ್ರಸಿದ್ಧ ದೊರೆ ವಿಷ್ಣುವರ್ಧನನ ಕಾಲಕ್ಕೆ ಅಸ್ತಿತ್ವಕ್ಕೆ ಬಂದಿತ್ತೆಂದು ತಿಳಿದುಬರುತ್ತದೆ.[4] ಇಲ್ಲಿ ದೊರಕಿದ ಶಾಸನಗಳ ಭಾಷೆ ವಿಶೇಷವಾಗಿ ತಮಿಳು ಆಗಿರುವುದರಿಂದ ಇಲ್ಲಿ ತಮಿಳು ಮಾತನಾಡುವ ಜನರೇ ಅಧಿಕ ಸಂಖ್ಯೆಯಲ್ಲಿ ಇದ್ದರೆಂಬುದು ಖಚಿತವಾಗಿದೆ. ಆ ಜನರು ವಿಶೇಷವಾಗಿ ರಾಮಾನುಜರ ಪಾದಪದ್ಮೋಪಜೀವಿಗಳಾಗಿದ್ದರು. ಅವರಿಗಾಗಿ ಆ ಗ್ರಾಮವನ್ನು ಅಗ್ರಹಾರವನ್ನಾಗಿ ಮಾಡಿ, ಅನೇಕ ಬ್ರಾಹ್ಮಣರಿಗೂ, ದೇವಾಲಯಗಳಿಗೂ ವೃತ್ತಿಗಳನ್ನು ಬಿಟ್ಟರು. ವಿಷ್ಣುವರ್ಧನನ ಕಾಲಕ್ಕೆ ಐದು ನಾರಾಯಣ ದೇವಮಂದಿರಗಳು ಅಸ್ತಿತ್ವಕ್ಕೆ ಬಂದುದು ಶಾಸನಗಳಿಂದ ತಿಳಿದು ಬಂದಿದೆ, ಅವೆಂದರೆ

೧. ಬೇಲೂರಿನ ವಿಜಯ ನಾರಾಯಣ[5]

೨. ಮೇಲುಕೋಟೆಯ ಚೆಲುವ ನಾರಾಯಣ[6]

೩. ತೊಂಡನೂರಿನ ನಂಬಿ ನಾರಾಯಣ[7]

೪. ತಲಕಾಡಿನ ಕೀರ್ತಿನಾರಾಯಣ[8]

೫. ಗುಂಡ್ಲುಪೇಟೆಯ ವಿಜಯನಾರಾಯಣ[9]

ಗದುಗಿನ ವೀರನಾರಾಯಣ ದೇವಾಲಯವನ್ನು ಹೊಯ್ಸಳ ದೊರೆ ವಿಷ್ಣುವರ್ಧನನು ಕಟ್ಟಿಸಿದನು ಎಂಬ ಒಂದು ಕಿಂವದಂತಿ ಪ್ರಚಲಿತವಾಗಿದೆ. ವಾಸ್ತವದಲ್ಲಿ ಗದುಗಿನ ದೇವಾಲಯವನ್ನು ದಾಮೋದರ ಶೆಟ್ಟಿಯೆಂಬವನು ಕಟ್ಟಿಸಿದನು(ಕುಮಾರವ್ಯಾಸ: ಒಂದು ಅಧ್ಯಯನ; ಮಲ್ಲಿಗೆ ಇಲ್ಲವೆ ಗದುಗಿನ ನವಯುಗ ಪತ್ರಿಕೆಯ ೨೦೦೧ರ ದೀಪಾವಳಿ ಸಂಚಿಕೆ ಯಾವುದನ್ನಾದರೂ ನೋಡಿ). ಗದುಗಿನಲ್ಲೇ ದೊರೆತ ಶಾಸನ ಸಾರುತ್ತದೆ(Ep. Ind. Vol. 19, pp. 217-222). ಗದಗಿನಲ್ಲಿ ಕ್ರಿ.ಶ. ೧೦೩೭ರಲ್ಲಿ ದಾಮೋದರ ಶೆಟ್ಟಿ ಎಂಬ ವ್ಯಕ್ತಿ ಲೊಕ್ಕಿಗುಂಡಿಯ ಊರೊಡೆಯ ಶಂಕರಯ್ಯ ನಾಯಕರ ಪುತ್ರ ಮುದ್ದಿಮಯ್ಯನಾದ ಆ ಊರ ಸಾಸಿರ್ವರ್ ಸನ್ನಿಧಾನದಲ್ಲಿ ಭೂಮಿಯನ್ನು ಕೊಂಡು ತ್ರೈಪುರುಷ (ತ್ರಿಕೂಟೇಶ್ವರ) ದೇವರಿಗೂ, ಬಾರಹ ನಾರಾಯಣ ದೇವರಿಗೂ (ದೇವಾಲಯಕ್ಕೂ)ದತ್ತಿಯಾಗಿತ್ತನು. ತ್ರಿಕೂಟೇಶ್ವರ ದೇವಾಲಯದಂತೆಯೆ ಇದ್ದ ಆ ಬಾರಹ ನಾರಾಯಣ ದೇವಾಲಯದ (ಅದರ ಭಗ್ನಾವಶೇಷ ವಾದ) ಕಟ್ಟಡವೇ ಇಂದಿನ ವೀರನಾರಾಯಣ ದೇವಾಲಯ. ಪೂರ್ವೋಕ್ತ ಕೃತಿಗಳನ್ನು ಅವಲೋಕಿಸಿದರೆ ಸ್ಪಷ್ಟವಾಗುತ್ತದೆ.

ಯಜನ, ಯಾಜನ, ಅಧ್ಯಯನ, ಅಧ್ಯಾಪನ ಇದು ‘ಯಾದವ ನಾರಾಯಣ ಚತುರ್ವೇದಿಮಂಗಲ’ ಎನಿಸಿದ ತೊಣ್ಣೂರಿನ ಸಂಸ್ಕೃತಿಯ ಚರಿತ್ರೆ. ಅಗ್ರಹಾರದ ಪರ್ಯಾಯ ಶಬ್ದವೇ ‘ಚತುರ್ವೇದಿ ಮಂಗಲ’. ತಮಿಳುನಾಡಿನವರ ಭಾಷೆಯ ಮುಖಾಂತರ ಕನ್ನಡ ನಾಡಿಗೂ, ಭಾಷೆಗೂ ಆಮದಾಗಿದೆ. ಸಂಸ್ಕೃತ ಸ್ವರೂಪವಾದರೂ, ಒಂದೇ ಆದರೂ ಒಂದಷ್ಟು ಭಿನ್ನ ಎನ್ನುವ ರೀತಿಯಲ್ಲಿ ಭಾಸವಾಗುತ್ತದೆ. ಈ ಶಾಸನಗಳಲ್ಲಿ ಹೊಯ್ಸಳರ, ವಿಜಯನಗರದ ಅರಸರ ಮತ್ತು ಅನಂತರ ಮೈಸೂರು ಅರಸರ ಎಂದರೆ ಒಡೆಯರ ಕಾಲದ ಚರಿತ್ರೆ, ಕಿಂಚಿತ್ ತಿಳಿದುಬರುತ್ತದೆ. ‘ತಿರುನಾಳ್’ ಇದು ಜಾತ್ರೆಯಾಗಿದ್ದು ಜಾತ್ರೆಯಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಪಟ್ಟಿದ್ದು ರಂಗಭೋಗ ಕಾರ್ಯಕ್ರಮಗಳಿಗೆ ಸಂಬಂಧ ಹೊಂದಿರುತ್ತದೆ. ಹರಿಕಥೆ, ಸಂಗೀತ, ಯಕ್ಷಗಾನ ಮೂಡಲಪಾಯ (ಬಯಲಾಟ), ವಾದ್ಯ ಗೋಷ್ಠಿಗಳು ರಂಗಭೋಗಕ್ಕೆ ಸಂಬಂಧಪಡುತ್ತವೆ. ದೇವಾಲಯಗಳಲ್ಲಿ “\ರುವಾಯ್ಮೊಳಿ” ಗ್ರಂಥವನ್ನು ಪಠಿಸಲು ಏರ್ಪಾಡು ಮಾಡಿದುದು ತೊಣ್ಣೂರಿನ ಶಾಸನಗಳಲ್ಲಿ ಬಂದಿದೆ.[10] ಇದೊಂದು ವಿಶೇಷ ಪೂಜೆ. ಇದು ಅಂಗಭೋಗದ ಪೂಜಾ ಕೈಂಕರ್ಯ್ಯಗಳಲ್ಲಿ ಒಳಗೊಂಡಿರುತ್ತದೆ. ಅದೊಂದು ಚೆರಪ್ಪಿನ ದಿನ. ನಮ್ಮಾಳ್ವಾರರ ಈ ಕೃತಿ ಶ್ರೀವೈಷ್ಣವರಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ‘ತಿರುವಾಯ್ಮೊಳಿ’ ಕೃತಿಯನ್ನು ‘ಸಿರಿ ಬಾಯಿನುಡಿ’ ಎಂದು ದಿ.ಪು.ತಿ.ನರಸಿಂಹಾಚಾರ್ಯರು ಅನುವಾದ ಮಾಡಿದ್ದಾರೆ.

ತೊಂಡನೂರಿನ ಶಾಸನಗಳು, ವಿಶೇಷವಾಗಿ ದೇವಾಲಯಕ್ಕೆ ದಾನದತ್ತಿಗಳನ್ನು ಕೊಟ್ಟುದನ್ನು ದಾಖಲಿಸುವ ದಾಖಲೆಗಳಾಗಿವೆ. ನಂದಾದೀಪ, ಶ್ರೀವಾರಿಯ ಪೂಜೆಗೆ ಬೇಕಾದ ಹೂಗಳನ್ನು ಬೆಳೆಯಲು ತೋಟ ತುಡಿಕೆ(ನಂದನ ವನಕ್ಕೆ), ಗಂಧ, ಕಪ್ಪುರ, ಕುಂಕುಮ ಇತ್ಯಾದಿಗಳ ಖರೀದಿಗೆ ಖರ್ಚಿಗೆ ಬೇಕಾದ ವ್ಯವಸ್ಥೆಗೆ ಸಂಬಂಧಪಟ್ಟಿದ್ದು ಅನೇಕ ದಾನಿಗಳ ಕೊಡುಗೆಗಳಾಗಿವೆ. ಕೆಲವು ಶಾಸನಗಳು ಜೀರ್ಣೋದ್ಧಾರ ಹಾಗೂ ಸಣ್ಣ ಪುಟ್ಟ ದೇವಾಲಯಗಳ, ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿವೆ. ಇನ್ನು ದೇವರ ನೈವೇದ್ಯಕ್ಕೆ ಅಮೃತಪಡಿಗೆ ಬೇಕಾಗುವ ಭತ್ತಾದಾಯಕ್ಕೆ ಗದ್ದೆ ಭೂಮಿಗಾಗಿ ಕಾವೇರಿ ನದಿಯ ದಂಡೆಯಲ್ಲಿ ಹರವು ಊರಿನ ಹತ್ತಿರ ಕಾವೇರಿ ಪಾತ್ರಕ್ಕೆ ಕಟ್ಟೆಯನ್ನು ಕಟ್ಟಿಸಿ, ಕಾಲುವೆ ತೋಡಿ ಅದರ ವರ್ಷಪ್ರತಿ ತಿದ್ದುವಿಕೆಗೂ (ದುರಸ್ತಿ ಮಾಡುವುದಕ್ಕೂ) ಕುರುವಂಕನಾಡ ಹೊಳೆಯ ಸುಂಕದಲ್ಲಿ ಗ ೬೪ನ್ನು ಸ್ಥಾಯಿಯಾಗಿ ಖರ್ಚಿಗಾಗಿ ಹೊಯ್ಸಳ ದೊರೆಗಳೇ ವ್ಯವಸ್ಥೆ ಮಾಡಿದ್ದರು.[11] ಹೊಯ್ಸಳರ, ವಿಜಯನಗರದ ಅರಸರ ಮತ್ತು ತತ್ ಪೂರ್ವದ ನೀರಾವರಿಯ ನೀಲನಕ್ಷೆಯನ್ನು ಇಂದು ಬರೆದು ಪ್ರಕಟಿಸಲು ಸಾಧ್ಯವಿಲ್ಲ. ಏಕೆಂದರೆ ಆ ವ್ಯವಸ್ಥೆ ಇಂದು ಕೃಷ್ಣರಾಜಸಾಗರ ಕಟ್ಟೆಯ ಒಳಹರಹಿನಲ್ಲಿ ಹಾಗೂ ಹೊರಗಿನ ನೀರಾವರಿಯ ಭೂಮಿಯಲ್ಲಿ ವಿಲೀನವಾಗಿದೆ.

ಚರಿತ್ರೆಯ ಸಂಗತಿಗಳ ದೃಷ್ಟಿಯಿಂದ ತೊಣ್ಣೂರು ಹಾಗೂ ಅದರ ಸುತ್ತಮುತ್ತಣ ಆನಿಕೊಂಡಿರುವ ಊರುಗಳ ಶಾಸನಗಳು ಕೆಲವು ಮಹತ್ವದ ಸಂಗತಿಗಳನ್ನು  ಬೆಳಕಿಗೆ ತರುವ ಸಾಮಗ್ರಿಯನ್ನು ಹೊಂದಿವೆ.

(i) ಹೊಯ್ಸಳದೊರೆ ವಿಷ್ಣುವರ್ಧನನ ಹೆಸರು ಅನಂತರದ ದೊರೆಗಳ ಹೆಸರಿನ ಜೊತೆಗೆ ವಿಶೇಷಣ ಬಿರುದು ಎಂಬ ರೀತಿಯಲ್ಲಿ ಜೋಡಿಸಲ್ಪಟ್ಟಿದೆ

a) ೧) ಸ್ವಸ್ತಿ ಶ್ರೀಮನ್ಮಹಾಮಂಡಳೇಶ್ವರಂ

೨) ಶ್ರೀವಿಷ್ಣುವರ್ಧನ ಭುಜಬಳ ವೀರಹೊ

೩) ಯಿಳ ಬಲ್ಲಾಳ ದೇವರು ದೋರಸ

೪) ಮುದ್ರದ ರಾಜಧಾನಿಯಲ…… ಇತ್ಯಾದಿ (ಪಾಪು ೭೪)

b) ೧) ……….. ಗೊಂಡಭುಜಬಳವೀರಗಂಗ
ವಿಷ್ಣುವರ್ಧನ ಶ್ರೀ ನಾರಸಿಂಹದೇವರು….
………. ಇತ್ಯಾದಿ (ಪಾಪು ೧೦೬)

(ii) ಹೊಯ್ಸಳ ದೊರೆ ೧ನೇ ನರಸಿಂಹನಿಗೆ ಚಾಳುಕ್ಯರ ‘ತ್ರಿಭುವನ ಮಲ್ಲ’ ಹಾಗೂ ‘ಜಗದೇಕಮಲ್ಲ’ ಎಂಬ ಎರಡೂ ಬಿರುದಗಳನ್ನು ಅನ್ವಯಿಸಿ ಹೇಳುತ್ತಿದ್ದರು.

ಪಂಕ್ತಿ : ೧.

ಶ್ರೀ ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮ
ಹಾಮಂಡಳೇಶ್ವರಂ ತ್ರಿಭುವನಮಲ್ಲ ತಳಕಾಡು
ಕೊಂಗುನಂಗಲಿ ಗಂಗವಾಡಿನೊಣಂಬವಾಡಿವುಚ್ಚಂ
ಗಿ ಬನವಾಸಿಹಾನುಂಗಲ್ಲುಗೊಂಡ ಬುಜಬಳ ವೀರಗಂಗ
ಜಗದೇಕಮಲ್ಲ ಶ್ರೀನಾರಸಿಂಹ ಹೊಯ್ಸಣ ದೇವರು
…………..ಇತ್ಯಾದಿ[12]

(iii) ಪಾಂಡವಪುರ ತಾಲೂಕಿನ ಶಾಸನ ಸಂಖ್ಯೆ ೯೬ ತಿಳಿಸುವಂತೆ ೧ನೇ ನರಸಿಂಹನಿಗೆ ಕೆಲ ಕಾಲ ‘ಕೊಡಾಲ’ ಎಂಬುದು ರಾಜಧಾನಿ ಆಗಿತ್ತು[13] ಅಂತೆಯೇ ಕನ್ನಂಬಾಡಿಯ ಒಂದು ಶಾಸನದಲ್ಲಿ ನರಸಿಂಹದೊರೆಗೆ ಬನವಾಸಿಪಟ್ಟಣವೂ ರಾಜಧಾನಿಯಾಗಿತ್ತು. ಆಯಾ ಊರುಗಳಲ್ಲಿ ಆಂತರಿಕ ಸಾಕ್ಷಿಗಳು ದೊರೆಯುವವರೆಗೆ ಇವೇ ಊರುಗಳೆಂದು ಹೇಳಲು ಬರುವುದಿಲ್ಲ. ಏಕೆಂದರೆ ಈ ಹೆಸರಿನ ಊರುಗಳು ಹಲವಿವೆ.

(a) ಉತ್ತರ ಕನ್ನಡ ಜಿಲ್ಲೆಯ ಮೂಲ ರಾಜಧಾನಿ ಬನವಾಸಿ ಆದಿಕದಂಬ ಮನೆತನಕ್ಕೆ ರಾಜಧಾನಿ ಆಗಿತ್ತು. ಆ ರಾಜಮನೆತನದ ಶಾಖೆಗಳವರು ಅಲ್ಲಲ್ಲಿ ತಾವು ನಿಂತಲ್ಲಿ ತಮ್ಮ ತಮ್ಮ ಊರುಗಳಿಗೆ ‘ಬನವಾಸಿ’ ಎಂದು ಹೆಸರನ್ನಿಟ್ಟುಕೊಂಡಿದ್ದರು. (ಕರ್ನಾಟಕ ಗ್ರಾಮನಾಮ ಸೂಚಿ ನೋಡಿ) ಚೆನ್ನರಾಯಪಟ್ಟಣ ತಾಲ್ಲೂಕಿನ ಗಂಡಸಿ ಬಳಿ ಒಂದು ‘ಬನವಾಸಿ’‑ ಗ್ರಾಮವಿದೆ. ಮಂಜರಾಬಾದ ಅಥವಾ ಈಗಿನ ಸಕಲೇಶಪುರ ತಾಲೂಕಿನಲ್ಲಿ ಒಂದು ‘ಬನವಾಸಿ’ ಗ್ರಾಮವಿದೆ.

(b) ‘ಕೋಡಾಲ’ ಎಂಬುದನ್ನು ಗುರುತಿಸಲು ಕಷ್ಟವಾಗುತ್ತದೆ. ಏಕೆಂದರೆ ಈ ಹೆಸರಿನ ಊರುಗಳೂ ಹಲವಿವೆ. ಕ್ರಿ.ಶ.ಸು. ೪‑೭ನೇ ಶತಮಾನದ ‘ಳ’ ಹಾಗೂ ‘ಡ’ ಅಕ್ಷರಗಳ ಲಿಪಿ ಸಾದೃಶ್ಯತೆಯಿಂದ ಒಂದಕ್ಕೆ ಇನ್ನೊಂದು ವ್ಯತ್ಯಯ (CHANGE) ಆಗುವ ಕಾರಣದಿಂದ ಕುವಳಾಲ ಅಥವಾ ಕೋಳಾಲ ಕೋಡಾಲ ಆಗುತ್ತದೆ. ಗಂಗರ ಶಾಖೆಯವರು ತಮ್ಮ ಮೂಲಸ್ಥಳದ ಮೇಲಿನ ಪ್ರಿತಿಯಿಂದ ತಾವು ಹೋದ ಹೋದಲ್ಲಿ ಆ ಊರಿನ ಹೆಸರನ್ನು ಮೇಲ್ಕಾಣಿಸಿದ ಬನವಾಸೆ ಹಾಗೆ ಹಲವು ಗ್ರಾಮಗಳಿಗೆ ಕೋಡಾಲ ಇಲ್ಲವೆ ಕೋಳಾಲ ಅಥವಾ ಕುವಳಾಲ ಮುಂತಾಗಿ ಅಭಿಧಾನಗಳನ್ನು ಇಟ್ಟುಕೊಂಡರು.[14] ಪಾಪು, ಶಾಸನ ೯೬ ‘ಕೋಡಾಲ’ ಗ್ರಾಮ ಹೆಸರನ್ನು ಹೊಂದಿದ್ದರೆ, ಪಾಪು, ಶಾಸನ ಸಂಖ್ಯೆ‑೧೫ ಕ್ಯಾತನಹಳ್ಳಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ದೊರಕಿದುದರಲ್ಲಿ ‘ಕೊಡೆಹಾಳ’ ರೂಪದಲ್ಲಿ ದೊರೆಯುತ್ತದೆ. ಬೆಂಗಳೂರು ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ದೊರಕಿದ ಒಂದು ಶಾಸನದಲ್ಲಿಯೂ ‘ಕೋಡಾಲ’ ಊರಿನ ಪ್ರಸ್ತಾಪವಿದೆ. ‘ಡ’ ‘ಲ’ ‘ಳ’ ಹಾಗೂ ‘ೞ’ ಈ ಅಕ್ಷರಗಳು ಧ್ವನಿಯ ಒಂದು ಸ್ಥರದಲ್ಲಿ ಸಾದೃಶ್ಯತೆಯಿಂದ ಒಂದಕ್ಕೆ ಇನ್ನೊಂದು ವರ್ಣ (Audio and visual) ವ್ಯತ್ಯಾಸ ಆಗುವುದು ಲೋಕರೂಢಿ. ಶಬ್ದಮಣಿದರ್ಪಣಕಾರ ಸೂತ್ರ ೨೮ ಹಾಗೂ ೨೯ರಲ್ಲಿ ವಿವರಿಸಿದ್ದಾನೆ.

ಇವು ವರ್ಣ್ನಾವೃತ್ತಿಗೆ ಸ
ಲ್ವುವು ಸಂದುಂ ಪ್ರಾಸದೆಡೆಗೆ ಸಲ್ಲವು ಯಮಕ
ವ್ಯವಹೃತಿಗಾಗವು ದೇಶೀ
ಯವೆನಿಪುವಾ…. ಇತ್ಯಾದಿ[15]

ಪಾಪು. ನಂ. ೬೨ ನೇ ಶಾಸನ ಒಂದು ತುಣುಕು ಆಗಿರುವ ಶಾಸನ, ಉಪಲಬ್ಧ ಸಾಮಗ್ರಿ ಕೇವಲ ನಾಲ್ಕು ಪಂಕ್ತಿ. ಅದೂ ತ್ರುಟಿತ

೧ ಸಿಪ…

೨ ಗಂಡಮಾ (ರ್ತ್ತಂ)ಡ

೩ ಂಡವನೂ ಆವ

೪ ಗದೆ ಒ

ಒಂದು ವಾಕ್ಯವೂ ಸರಿಯಾಗಿಲ್ಲ ಇದರಲ್ಲೇನಿದೆ? ಎಂದು ಲೇವಡಿಯೂ ಮಾಡಬಹುದು. ಅಕ್ಷರಗಳು ಕ್ರಿ.ಶ. ೧೨ನೆಯ ಶತಮಾನದವೆಂದು ಬರೆದಿದೆ. ಶಾಸನ ತೊಲೆಯಕಲ್ಲು! ನೋಡಲು ಈಗ ಆ ಅಕ್ಷರಗಳೂ ಸರಿಯಾಗಿ ಕಾಣುತ್ತಿಲ್ಲ. ಗಂಡಮಾರ್ತ್ತಂಡ ಎಂಬ ಬಿರುದು ಮಾತ್ರ ತನ್ನಷ್ಟಕ್ಕೆ ಬಹಳ ಮಹತ್ವದ ದಾಖಲೆ ಆಗಿದೆ. ಏಕೆಂದರೆ ಇದು ಆತಕೂರ ಶಾಸನ[16] ಹಾಗೂ ಜುರಾ[17] ಶಾಸನಗಳನ್ನು ಬಲ್ಲವರಿಗೆ ಥಟ್ಟನೆ ಹೊಳೆಯುವ ಸಂಗತಿ ಅದೆಂದರೆ ಈ ಬಿರುದು ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಕೃಷ್ಣನಿಗೆ ಇದ್ದಿತು.

ಈ ತೊಲೆಯಕಲ್ಲು ಎಲ್ಲಿಂದಲೋ ಇಲ್ಲಿಗೆ ಸ್ಥಳಾಂತರಗೊಂಡಿದೆ. ಮುಂದಿನ ಯಾವನೋ ಒಬ್ಬ ರಾಜ ಈ ಬಿರುದನ್ನು ಹೆಮ್ಮೆಯ ಕುರುಹಾಗಿ ಧರಿಸಿರಬಹುದಲ್ಲ ಎಂಬ ಪ್ರಶ್ನೆ ಎತ್ತಬಹುದು. ಆ ಬಿರುದನ್ನು ಇಟ್ಟುಕೊಂಡ ವ್ಯಕ್ತಿ ಬೇರೊಬ್ಬನಾಗಿದ್ದರೆ ಆ ವ್ಯಕ್ತಿ ಯಾರೆಂಬುದು ಪ್ರಶ್ನೆಯಾಗಿಯೇ ಈಗ ನಿಲ್ಲುತ್ತದೆ ಸದ್ಯ.

(v) ಆಗಲೇ ವಿವರಿಸಿದ ಹಾಗೆ ತೊಣ್ಣೂರು ಅಥವಾ ತೊಂಡನೂರ ಉದ್ದ ಅಗಲಗಳನ್ನು ಗಮನಕ್ಕೆ ತಂದುಕೊಂಡರೆ, ಸುಂಕಾತೊಂಡನೂರು ಹಾಗೂ ಹಳೆಯಬೀಡು ಎಂದು ಈಗ ಕರೆಯಿಸಿಕೊಳ್ಳುವ ವಾಸ್ತವದಲ್ಲಿ ಆಗ ‘ಬನದ ತೊಂಡನೂರು’ ಎಂದು ಕರೆಯಿಸಿಕೊಳ್ಳುತ್ತಿದ್ದ ವಿಶಾಲ ಪ್ರದೇಶವನ್ನು ಲಕ್ಷ್ಯಕ್ಕೆ ತಂದುಕೊಳ್ಳಬೇಕಾಗುತ್ತದೆ. ಹತ್ತಾರು ಮೈಲುಗಳ ಉದ್ದಗಲ ವ್ಯಾಪ್ತಿ ಅದೊಂದು ಬಹಳ ದೊಡ್ಡ ಊರಾಗಿತ್ತೆಂಬ ಕಲ್ಪನೆಯನ್ನು ತಂದುಕೊಡುತ್ತದೆ. ಹಳೆಯಬೀಡಿನಲ್ಲಿ ಇದ್ದದ್ದು ‘ಕಂಭೇಶ್ವರ ದೇವಾಲಯ’. ಇದು ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳನ ಕಾಲಕ್ಕಿಂತಲೂ ಮುಂಚೆಯೇ ಇದ್ದುದಕ್ಕೆ ಅಲ್ಲಿ ದಾಖಲೆಗಳಿವೆ.[18] ‘ಕಂಭೇಶ್ವರ’ ಇದನ್ನು ಯಾರು ಕಟ್ಟಿಸಿದರು ಇದಕ್ಕೆ ಸದ್ಯ ಖಚಿತವಾದ ಆಧಾರಗಳಿಲ್ಲ. ಕಂಬಯ್ಯನೆಂಬ ರಾಷ್ಟ್ರಕೂಟರ ದೊರೆ ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದನೆಂಬುದು ಶ್ರವಣಬೆಳ್ಗೊಳದ ಚಿಕ್ಕ ಬೆಟ್ಟದ ಶಾಸನದಿಂದ ಸ್ಪಷ್ಟವಿದೆ. ಇದೊಂದು ಸಾಧ್ಯವಿರಬಹುದಾದ ಊಹೆ.

ಸುಂಕಾತೊಂಡನೂರಿನ ಒಂದು ಶಾಸನ ಕನ್ನಡ ವಚನಸಾಹಿತ್ಯದ ಮೇಲೆ ವಿಶೇಷ ಬೆಳಕನ್ನು ಚೆಲ್ಲುತ್ತದೆ. ಅದೆಂದರೆ

ಶಾಸನ ಪಾಠ

ಪಂಕ್ತಿ : ೧೧ (ಆ)

ತನರಮನೆಯೊಳ ಧರೆಯೊಳು ಮುಂ ಸಂದ
ದಂಡಾಧಿಪರೊಳತಿಶಯಂ ದಾನದೊಳು ಸಕಳ
…. ಮಹಿಮ…. ವಚನ ಸತಸಹಸ್ರ ಪ್ರತಾನಂಗ
ಳೊಳು… ಇತ್ಯಾದಿ[19]

ಈ ಶಾಸನದಲ್ಲಿ ಬರುವ ಕೊಮ್ಮರಾಜ, ಹೊಯ್ಸಳ ದೊರೆ ೧ನೆಯ ನರಸಿಂಹನಿಗೆ ಮಹಾಪ್ರಧಾನನಾಗಿರುತ್ತಾನೆ. ಈ ನರಸಿಂಹ ಕ್ರಿ.ಶ. ೧೧೪೨‑೭೩ರ ಅವಧಿಯಲ್ಲಿ ರಾಜ್ಯವಾಳಿದನೆಂಬುದು ಖಚಿತವಾಗಿ ಗೊತ್ತಿರುವುದರಿಂದ ವಚನ ಸಾಹಿತ್ಯ ಎಷ್ಟು ಸಮೃದ್ಧವಾಗಿತ್ತೆಂಬುದು ಗಮನಾರ್ಹ. ಬಸವಾದಿ ಪ್ರಮಥರು ಬಾಳಿ ಬದುಕಿದ್ದುದು ಇದೇ ಕಾಲ. ಈ ಕೊಮ್ಮರಾಜನು ಬಸವಣ್ಣನವರ ಹಾಗೇ ಕಮ್ಮೆ ಕುಲದ ಬ್ರಾಹ್ಮಣ

ಪಂಕ್ತಿ : ೧೨

ದೇಶಾಧಿಕಾರಿ ಕಮ್ಮೇಕು
ಲೇಶರ್ದ್ವಿಜವಂಶತಿಳಕನ ಪ್ರತಿಮಯಶ (ಂ)
ಕೌಶಿಕ ಗೋತ್ರ ಪವಿತ್ರ.
………………………….ತಂಸ (ಂ)||[20]

ಈ ಕೊಮ್ಮರಾಜ ಕಲ್ಯಾಣದಲ್ಲಾಗಲಿ ಅಥವಾ ಬೇರೆಡೆಯಲ್ಲಾಗಲಿ ಕನ್ನಡ ಶಿವಶರಣರ ಗೋಷ್ಠಿಯನ್ನು ಕಂಡದ್ದಕ್ಕಾಗಲಿ, ಕಟ್ಟಿಕೊಂಡದ್ದಕ್ಕಾಗಲಿ ನಮಗೆ ದಾಖಲೆಗಳು ದೊರಕಿಲ್ಲ. ಆದುದರಿಂದ ಇಲ್ಲಿನ “ಲಕ್ಷ ವಚನ ಪ್ರತಾನ” ಪುರಾತನರು ಅರ್ಥಾತ್ ೬೩ ಪುರಾತನರು, ನಾಯನಾರರು ಹೇಳಿದ ಆ ವಿಪುಲ ವಾಙ್ಮಯ ಸಂಪತ್ತು ಎಂದರ್ಥ. ಬಸವಾದಿ  ಪ್ರಮಥರು ಸಾರಿದ ಆದ್ಯರು ಎಂದರೆ “ಆದ್ಯರ ವಚನ ಪರುಷ ಕಂಡಯ್ಯ ಎಂದರೆ” ತ್ರಿಷಷ್ಟಿ ಪುರಾತನರೆಂದೇ ಅರ್ಥ. ಅವರ ಅಮೃತ ಸದೃಶ ವಾಕ್ಯಗಳೇ ಸೂಳ್ನುಡಿಗಳು. ವಚನ ಸಾಹಿತ್ಯದ ಉಗಮ ಎಲ್ಲಿ ಏನು ಎತ್ತ ಎಂಬುದು ಈ ಶಾಸನದಲ್ಲಿ ಖಚಿತವಿದೆ. ನೋಡುವ ನಿಸ್ಪೃಹವಾದ ಕಣ್ಣುಗಳು ಬೇಕು. ಭಾಷೆ ಯಾವುದೇ ಇರಲಿ ಬಸವಣ್ಣನವರ ಕಾಲಕ್ಕಾಗಲೇ ವಚನ ಸಾಹಿತ್ಯ ಸಾಕಷ್ಟು ಪ್ರಮಾಣದಲ್ಲಿ ಬೆಳೆದು ನಿಂತಿತ್ತು. ‘ಮಾಣಿಕ್ಯ ವಾಚಕಾರ್’ ಎಂಬ ಮಾತನ್ನು ಇಲ್ಲಿ ನೆನಸಿಕೊಂಡರೆ ಸಾಕು. ಎರಡೂ ಭಾಷೆಗಳನ್ನು (ತಮಿಳು ಹಾಗೂ ಕನ್ನಡ) ಅಭ್ಯಾಸ ಮಾಡಿದವರಿಂದ ತೌಲನಿಕ ಅಧ್ಯಯನದ ವೃಕ್ಷ ಫಲಬಿಡಬೇಕಾಗಿದೆ. ಈಗ ಗೊತ್ತಿರುವುದು, ಮಾತನಾಡುತ್ತಿರುವುದು ಏನೆಲ್ಲ ಬರೀ ತೋರಿಕೆಯದು (SUPERFICIAL).

ತೊಣ್ಣೂರಿನ ಬೃಹದ್ದೇವಾಲಯ ಲಕ್ಷ್ಮೀನಾರಾಯಣ ಸ್ವಾಮಿಯ ದೇವಾಲಯ ಅನೇಕ ಶಾಸನಗಳಿಂದ ಮಹತ್ವವನ್ನು ಪಡೆದಿರುವಂತೆ ಅಲ್ಲಿನ ಬೃಹತ್ ತಾಮ್ರ ಶಾಸನವೊಂದರಿಂದಲೂ ಬಹಳ ಮಹತ್ವದ್ದಾಗಿದೆ. ಈ ತಾಮ್ರ ಶಾಸನ ಕರ್ನಾಟಕದ ಕೆಲವೇ ದೊಡ್ಡ ತಾಮ್ರಪಟ ಶಾಸನಗಳಲ್ಲಿ ಒಂದಾಗಿದೆ. ಇದನ್ನು ೧೫ ಹಲಗೆಗಳ ಮೇಲೆ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಮೈಸೂರು ಅರಸರ ಇಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅವರು ಇತ್ತ ಎರಡು ಗ್ರಾಮಗಳ ದತ್ತಿ ಹಾಗೂ ಅವುಗಳನ್ನು ಅಗ್ರಹಾರಗಳಾಗಿ ಮಾರ್ಪಡಿಸಿದುದನ್ನು ಇದು ದಾಖಲಿಸಿದೆ. ಆ ಗ್ರಾಮಗಳೆಂದರೆ ಯಾದವಪುರ ಅದರ ನಾಮಧೇಯ ತೊಂಡನೂರು ಹಾಗೂ ಅತ್ತಿಕುಪ್ಪೆ, ಇವು ಕುರುವಂಕನಾಡೊಳಗಿನ ಗ್ರಾಮಗಳು. ತೊಂಡನೂರಲ್ಲಿರುವ ಲಕ್ಷ್ಮೀನಾರಾಯಣ ಹಾಗೂ ಯಾದವನಾರಾಯಣ ವಸಂತಗೋಪಾಲ ದೇವಾಲಯಗಳಲ್ಲಿ ಪೂಜಾಕೈಂಕರ್ಯಕ್ಕೂ ಮತ್ತು ವಿವಿಧ ದೇಶಗಳಿಂದ ಬಂದ ಬ್ರಾಹ್ಮಣರಿಗೆ ೧೧೨ ವೃತ್ತಿಗಳನ್ನು ಕೊಟ್ಟ ಸಂಗತಿಯನ್ನು ದಾಖಲಿಸುವುದಕ್ಕೂ ಈ ಶಾಸನವನ್ನು ಬರೆಯಲಾಗಿದೆ. ವೃತ್ತಿಗಳ ವಿವರಣೆ ಈ ದಾಖಲೆಯಲ್ಲಿದೆ. ಮತ್ತೆ ವೃತ್ತಿಗಳನ್ನು ಪಡೆದ ಪ್ರತಿಗ್ರಹಿಗಳಿಗೆ ನಿವೇಶನಗಳನ್ನೂ ಕೊಡಲಾಗಿದೆ. ಈ ಶಾಸನವನ್ನು ಬರೆದ ವ್ಯಕ್ತಿ ರಾಮಾಯಣಮ್ ತಿರುಮಲೆಯಾಚಾರ್ಯ ಬಹಳ ದೊಡ್ಡ ಕವಿಯೂ, ಗಮಕಿಯೂ ಹಾಗೂ ಪಂಡಿತನೂ ಆಗಿದ್ದು ಹಲವು ಕೃತಿಗಳನ್ನೂ, ಶಾಸನಗಳನ್ನೂ ರಚಿಸಿದ್ದಾನೆ. ಇವು ತೊಂಡನೂರಲ್ಲದೆ ಮೇಲುಕೋಟೆ, ಹಾಗೂ ಮೈಸೂರುಗಳಲ್ಲಿ ದೊರಕಿವೆ. ಕವಿ ತನ್ನ ಬಗ್ಗೆ ಹೀಗೆ ಹೇಳಿದ್ದಾನೆ:

ಧರ್ಮಸ್ಸುಸ್ಥಿರತಾರಿಯಾಂತು ಕೃಷ್ಣರಾಜಮಹೀಪ್ರತೇಃ
ಯಾವದ್ಧರಾಧರಾಧಾರಾ ಯಾವಚ್ಚಂದ್ರದಿವಾಕರೌ ||
ಕರ್ಣ್ನಾಟಾಂಧ್ರಸುಸಂಸ್ಕೃತ ಕವಿತಾ ಗಾಂಧರ್ವ್ವಕೇಷು ಯಃಕ್ಕುಶಲಃ
ತೇನೇದಂರಾಮಾಯಣ ತಿರುಮಲೆಯಾಚಾರ್ಯಸೂರಿಣಾಫಣಿತಾಃ ||
ಗ್ರಂಥಾಸ್ಸಂತೋಷಾಯ ಪ್ರಭವಂತ್ವಿಹ ತಾಂಬ್ರಶಾಸನೇ ಲಿಖಿತಾಃ
ಶ್ರೀರಾಮಾಯಣ ಭಾರತ ಪಾರಾಯಣ ನಿಹಿತ ವೃತ್ತಿನಾಕೃತಿನಾ
ಕವಿನಾತಿರುಮಲೆಯಾಚಾರ್ಯ್ಯೇಣೇದಂ ತಾಂಬ್ರಶಾಸನಂ ಲಿಖಿತಂ ||
ಶ್ರೀಕೃಷ್ಣ ಕ್ಷ್ಮಾಪತಿರ್ನ್ನಿತ್ಯಂ ಪಾಲಯನ್ನಖಿಲಾಂ ಮಹೀಂ
ಜಯತ್ಯಸೌರಿಪು ಸ್ತೋಮಕರಿಕಂಠೀರವಾತ್ಮಜಃ ||[21]

ಈ ಶಾಸನದ ಕಾಲ ಶಾ.ಶ. ೧೬೪೪, ಶುಭಕೃತ್, ಮಾರ್ಗ್ಗಶಿರ, ಪೌರ್ಣಮೆ ಮಂಗಳವಾರ. ಇದು ಕ್ರಿ.ಶ. ೧೭೨೨ರ ಡಿಸೆಂಬರ್ ೧೧ನೇ ತಾರೀಖಿಗೆ ಸರಿಹೊಂದುತ್ತದೆ.

\ರುಮಲೆಯಾಚಾರ್ಯ ಪಂಡಿತನಾಗಿದ್ದುದಲ್ಲದೆ ಗಾಂಧರ್ವ (ಸಂಗೀತ) ವಿದ್ಯೆಯಲ್ಲಿಯೂ ಪರಿಣತನಾಗಿದ್ದ. ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾರಂಗತನಾಗಿದ್ದ. ಪ್ರಾಚೀನ ಪದ್ಯವೊಂದನ್ನು ಉಳಿಸಿಕೊಟ್ಟು ಪುಣ್ಯಗೈದಿದ್ದಾನೆ, ಆ ಪದ್ಯ ಇಂತಿದೆ

ಶ್ರೀ ತನ್ನಂದದ ರೂಪು ಕೌಸ್ತುಭದೊಳಚ್ಚೊತ್ತಿರ್ದ್ದವೊಲ್ತೋಱೆಕಂ
ಡೇತರ್ಕ್ಕೀಕೆ ಮದೀಯ್ಯ ವಾಸಗೃಹಮನ್ತಾಂ ಪೊಕ್ಕಳೆಂದೀಷೆಯಿಂ
ದಾ ತಾಮ್ರಾಕ್ಷಿ ನಿರೀಕ್ಷಿಸುತ್ತ ಮಿರೆ ತನ್ಮುಗ್ಧತ್ವಮಂಕಣ್ಡು ಸಂ
ಜಾತಾನ್ತಃ ಸ್ಮಿತನಾದ ಕೃಷ್ಣನೊಲಿದೀಗಾನನ್ದ ಸನ್ದೋಹಮಂ ||

ಈ ಪದ್ಯ ಸಾಳ್ವ ಕವಿಯ ‘ರಸರತ್ನಾಕರ’ ದಲ್ಲಿಯೂ ಮತ್ತು ತತ್ಪೂರ್ವದಲ್ಲಿ ಇಮ್ಮಡಿ ನಾಗವರ್ಮನ (ಕ್ರಿ.ಶ. ೧೦೪೨) “ಕಾವ್ಯಾವಲೋಕನ” ಗ್ರಂಥದಲ್ಲೂ ಬಂದಿದ್ದು[22] ಲಾಕ್ಷಣಿಕರಿಂದ ಮಾನಿತವಾಗಿದೆ. ಪೊನ್ನನ ಭುವನೈಕ ರಾಮಾಭ್ಯುದಯ ಕಾವ್ಯದ ನಾಂದಿ ಪದ್ಯ ಆಗಿರಬಹುದು. ಪ್ರಸಿದ್ಧ ಪೂರ್ವಕಾವ್ಯದ್ದೆನ್ನುವದರಲ್ಲಿ ಸಂದೇಹವಿಲ್ಲ. ಕೃಷ್ಣರಾಜನ ರಾಣಿ ತನ್ನ ರೂಪವನ್ನೇ ಕೃಷ್ಣರಾಜನ ಕೊರಳೊಳಗಿನ ಹಾರದ ಪದಕದ ದೊಡ್ಡ ಹರಳಿನಲ್ಲಿ ಕಂಡು ಒಂದು ಕ್ಷಣ ತನ್ನ ಅಸ್ತಿತ್ವವನ್ನೇ ಮರೆತು ದೀರ್ಘ ದೃಷ್ಟಿಯಿಂದ ಈರ್ಷೆಯಿಂದ ನೋಡಿದಳು! ಹೆಂಡತಿ ಇನ್ನೊಬ್ಬಳನ್ನು ಸಹಿಸಳು!! ಆಕೆಯನ್ನು ಕಂಡು ಮಂದಸ್ಮಿತನಾದ ಕೃಷ್ಣ ಎಮಗೀಗೆ ಆನಂದಸಂ ದೋಹವನ್ನು, ಇದು ಹಾಸ್ಯ ಹಾಸ್ಯ ಹೀಗಿರಬೇಕು.

ಈ ಶಾಸನದ ಇನ್ನೊಂದು ಪದ್ಯ ಹೀಗಿದೆ.

ತಾಳಗ್ರಾಹಿವೃತ್ತ || ಒನ್ದು ದೆಶೆಯೊಳ್ತುರುಕರೊನದ ಕಡೆಯೊಳ್ಮೊರಸರೊನ್ದೆಡೆ
ಯೊಳಾರೆಯರಬೃಂದಮಳಲಿಂಬೇ
ಱೊನ್ದು ಬಳಿಯೊಳ್ತಿಗುಳರೊನ್ದಿರವಿನೊಳ್ಕೊಡಗರೊನ್ದು
ಕೆಲದೊಳ್ಮಲೆಗರೊನ್ದುವೆರೆದೆಲ್ಲರ್
ಸನ್ದಣಿಸಿ ಕಾಳಗಕೆ ಮುನ್ದುವರಿವನ್ನಮಧಟಿನ್ದವರ
ಥಟ್ಟುಗಳ ಪನ್ದಲೆಗಳಂ ದಿ
ಗ್ಬೃನ್ದ ಬಲಿಯಿತ್ತು ಗೆಲದಿನ್ದೆ ಚಿಕದೇವನೃಪನನ್ದಮಿಗೆ
ಪೆರ್ಜ್ಜಸಮನೊನ್ದಿ ಸೊಗವಾಳ್ದಂ ||[23]

ಶಾಸ್ತ್ರಕಾರರು ಕನ್ನಡ ಕೈಪಿಡಿ (ಮೈ.ವಿ.ವಿ.ಪ್ರ.ಪು. ೯೭)ಯಲ್ಲಿ ‘ಲಯಗ್ರಾಹಿ’ ಎಂದು ಮಾತ್ರಾ ವೃತ್ತ ಪ್ರಕರಣದಲ್ಲಿ ವಿವರಿಸಿದ್ದಾರೆ. ‘ತಾಳ’, ‘ಲಯ’ ಒಂದು ದೃಷ್ಟಿಯಲ್ಲಿ ಇವು ಪರ್ಯಾಯ ಪದಗಳು.

ತೊಣ್ಡನೂರಿನ ಶಾಸನಗಳು ಕನ್ನಡ ನಾಡಿನ ಇತಿಹಾಸ ಹಾಗೂ ಸಾಂಸ್ಕೃತಿಕ ಅಧ್ಯಯನದಲ್ಲಿ ತಮ್ಮದೇ ಆದ ಕಾಣಿಕೆಯನ್ನು ಅರ್ಪಿಸುತ್ತ ನಿಂತಿವೆ. ಅವುಗಳ ಅಧ್ಯಯನ ಅನನ್ಯವಾಗಿದೆ, ಗುಣದಿಂದ ಗಣ್ಯವಾಗಿದೆ.


[1] ಇಲ್ಲಿನ ಪುಟ ಸಂಖ್ಯೆಗಳು ಎ.ಕ. ಸಂಪುಟ ೬(೧೯೭೭)ಕ್ಕೆ ಸಂಬಂಧಪಟ್ಟಿವೆ.

[2] ಎ.ಕ. ಸಂಪುಟ ೬ (೧೯೭೭) ಕೃಪೇ. ೧೦೨, ಪುಟ ೯೨

[3] ಅದೇ. ಪಾಂಡವಪುರ ೯೯ (೧೯೭೭), ಪುಟ ೧೬೧‑ ೨೦೨

[4] (i) ಅದೇ, ೧೭೫-೧೮೦ ಸಾಲುಗಳು, ಪುಟ ೧೬೮

(ii) ಅದೇ, ಪಾಪು ೧೧, ಪುಟ ೧೧೦-೧೧೧

[5] ಅದೇ. ಸಂಪುಟ ೯ (೧೯೯೦) ಬೇಲೂರು ೧, ಪುಟ ೩

[6] ಅದೇ. ಸಂಪುಟ ೬ (೧೯೭೭) ಪಾಪು ೧೨೪, ಪುಟ ೨೧೭

[7] ಅದೇ. ಪಾಪು ೭೩

[8] ಅದೇ. ಸಂಪುಟ ೫ (೧೯೭೬) ತಿ.ನರಸೀಪುರ ೧೫೧, ಪುಟ ೫೫೭-೫೫೯

[9] ಅದೇ. ಸಂಪುಟ ೩ (೧೯೭೪) ಗುಂಡ್ಲುಪೇಟೆ ೫, ೧೫೧, ಪುಟ ೧೨

[10] ಅದೇ. ಸಂಪುಟ ೬ (೧೯೭೭) ಪಾಪು 66, 68 and 70, ಪರ್ವಕಾಲಗಳಲ್ಲಿ (ಪರ್ವ್ವ> ಪರ್ಬ್ಬ>ಹಬ್ಬ) ಆಚರಿಸುವ ಚೆರಪ್ಪು (ಉತ್ಸವ ಸಮಾರಾಧನೆ) ಅಂಗಭೋಗಕ್ಕೆ ಸಂಬಂಧಿಸಿದೆ.

[11] (a) ಅದೇ ಪಾಪು ೫೬

(b) ಅದೇ ಪಾಪು ೧೯, ಪುಟ ೧೧೫-೧೨೦, ಶಾಸನ ಪಂಕ್ತಿಗಳು: ೧೫‑೨೧ (ಪುಟ ೧೧೬)

[12] ಅದೇ, ಪಾಪು ೮೮, ಪುಟ ೧೫೬

[13] ಅದೇ, ಪಾಪು ೯೬, ಪುಟ ೧೬೦

[14] ಪರಿಷ್ಕರಿಸಲ್ಪಟ್ಟ ಎ.ಕ. ಸಂಪುಟಗಳ ಪದಸೂಚಿಗಳನ್ನು ಪರಿಶೀಲಿಸಿ

[15] ಶಬ್ದಮಣಿದರ್ಪ್ಪಣಂ (ಸಂ.ಪ್ರೊ.ಡಿ.ಎಲ್.ಎನ್.) ಪುಟ ೨೨‑೨೩ (ಆವೃತ್ತಿ‑೩, ೧೯೬೮)

[16] ಅದೇ, ಸಂಪುಟ ೭ (೧೯೭೯) ಮದ್ದೂರು‑೪೨, ಪುಟ ೨೭೬‑೭೭

[17] ಎ.ಇಂಡಿಕಾ ಸಂಪುಟ ೧೯, ಪುಟ ೨೮೯

[18] ಎ.ಕ.ಸಂಪುಟ ೬ (೧೯೭೭) ಪಾಪು.ನಂ.೨೩೧, ಪುಟ ೩೧೨

[19] ಅದೇ ಸಂಪುಟ ೬ (೧೯೭೭) ಪಾಪು ೨೩೬, ಪುಟ ೩೧೬, ವಚನ ಸತಸಹಸ್ರ ಎಂದರೆ ಒಂದು ಲಕ್ಷ ಎಂದರ್ಥವಾಗುತ್ತದೆ. ೧,೦೦,೦೦೦

[20] ಅದೇ ಪಾಪು ೨೩೬ ಪುಟ ೩೧೬

[21] ಅದೇ ಪಾಪು ೯೯, ಪುಟ ೧೮೫

[22] ಕಾವ್ಯಾವಲೋಕನಂ (ಸಂ: ಆರ್.ನರಸಿಂಹಾಚಾರ್ಯರು) ಪದ್ಯ, ೮೧೦

[23] ಚಿಕದೇವರಾಜಭಿನ್ನಪದಲ್ಲಿ ಈ ಪದ್ಯವಿದೆ. ಛಂದೋಗ್ರಂಥಗಳಲ್ಲಿ ಇದನ್ನು ‘ಲಯಗ್ರಾಹಿ’ ವೃತ್ತ ಎಂದು ವಿವರಿಸಿದ್ದಾರೆ. ಈ ಬಗೆಗೆ ಡಾ.ಎಂ.ಚಿದಾನಂದ ಮೂರ್ತಿ ಹಾಗೂ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ತಮ್ಮ ತಮ್ಮ ದೃಷ್ಟಿಯಿಂದ ಬರೆದಿದ್ದಾರೆ.