ಕರ್ನಾಟಕದ ಶಾಸನಗಳಲ್ಲಿ ದೊರೆಯುವಂತಹ ಮೂಲಸಾಮಗ್ರಿಗಳನ್ನು ವಿಭಿನ್ನವಾದ ದೃಷ್ಟಿಯಿಂದ ವಿಶ್ಲೇಷಿಸಿದ ಯಶಸ್ಸು ಡಾ.ಎಂ.ಚಿದಾನಂದ ಮೂರ್ತಿಯವರಿಗೆ ಸಲ್ಲಬೇಕು. ಇವರ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” ಎಂಬ ಕೃತಿಯಲ್ಲಿ ಉಲ್ಲೇಖಿ ಸಿರುವುದನ್ನು ಇಲ್ಲಿ ಹೇಳುವುದು ಔಚಿತ್ಯಪೂರ್ಣವೆಂದೆನಿಸುತ್ತದೆ. ಜನತೆ ಮತ್ತು ರಾಜರು ಕಾಲದಿಂದ ಕಾಲಕ್ಕೆ ಆಡಳಿತ ನಡೆಸಿರುವುದಕ್ಕೆ ಇತಿಹಾಸವೆಂಬ ಭಾವನೆ ಬಹಳ ಪ್ರಚಲಿತವಾಗಿದೆ. ಜನತೆ ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಬೆಳೆಸಿದ ಕಲೆ, ಅವರ ಜೀವನ ಸಮಸ್ಯೆಗಳು, ಅವರ ‘ಜೀವನ ಮೌಲ್ಯಗಳು’ ಇತ್ಯಾದಿಗಳ ವಿವರಣೆಯೇ, ಆ ದೇಶದ ಮತ್ತು ಜನತೆಯ ಇತಿಹಾಸ.

[1] ಈ ರೀತಿಯ ಇತಿಹಾಸವನ್ನು ಒದಗಿಸುವುದರಲ್ಲಿ ವೀರಗಲ್ಲುಗಳು ಬಹಳ ಪ್ರಮುಖವಾದವು.

ಜೀವದ ಹಂಗನ್ನು ತೊರೆದು ಗ್ರಾಮವನ್ನು ಕಳ್ಳರಿಂದ ರಕ್ಷಿಸಿ, ಗೋಗಳ್ಳರ ಜೊತೆ ಹೋರಾಡಿ, ಕಾಮುಕರ ವಿರುದ್ಧ ಹೋರಾಡಿ ಹಾಗೂ ತಮ್ಮ ಅರಸರ ಪರವಾಗಿ ಹೋರಾಡಿ ಮಡಿದ ವೀರರ ಸ್ಮರಣಾರ್ಥವಾಗಿ ಹಾಕಿಸಿದ ಕಲ್ಲುಗಳನ್ನು ವೀರಗಲ್ಲುಗಳು ಎನ್ನಬಹುದು.[2] ಈ ವೀರರು ತಮ್ಮ ಸ್ವಾರ್ಥಕ್ಕಾಗಿ ಮಡಿಯದೆ ಸಮಾಜದ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದ್ದರಿಂದ ಇವರ ಸ್ಮರಣಾರ್ಥವಾಗಿ ಹಾಕಿಸಿದ ಕಲ್ಲುಗಳೇ ವೀರಗಲ್ಲುಗಳು.[3] ಅವರು ಮಾಡಿದ ಹೋರಾಟ ಇಂದು ನಮ್ಮ ದೃಷ್ಟಿಯಲ್ಲಿ ಏನಾದರೂ ಆಗಿರಲಿ, ಅವರ ಹೋರಾಟವು ಸಾಮಾಜಿಕ ನಿಷ್ಠೆ, ಸ್ವಾಮಿ ಭಕ್ತಿ, ಸ್ವಾಭಿಮಾನಗಳಿಂದ ಕೂಡಿದುದಾಗಿದೆ.[4]

ಯುದ್ಧದಲ್ಲಿ ಗೆದ್ದರೆ ಲಕ್ಷ್ಮಿ ದೊರಕುವಳು, ಸತ್ತರೆ ಪರಲೋಕದಲ್ಲಿ ಸುರಾಂಗನೆಯರು ದೊರಕುವರು ಎಂಬ ನಂಬಿಕೆಯಿತ್ತು. ಈ ನಂಬಿಕೆಯ ಪ್ರಕಾರ ರಣರಂಗದಲ್ಲಿ ಸತ್ತ ವೀರನಿಗಾಗಿ ದೇವಲೋಕದಲ್ಲಿ ಕನ್ನೆಯರು ಕಾದುಕೊಂಡಿರುತ್ತಿದ್ದರಷ್ಟೇ ಅಲ್ಲ, ಅವನನ್ನು ಪಡೆಯಲು ಅವರಲ್ಲಿ ಪೈಪೋಟಿಯು ನಡೆಯುತ್ತಿತ್ತು. ಅವನನ್ನು ದೇವಾಂಗನೆಯರು ಸ್ವರ್ಗಕ್ಕೆ, ಶಿವನೋಲಗಕ್ಕೆ ಕೊಂಡೊಯ್ಯುತ್ತಾರೆ ಎಂದು ಜನರು ನಂಬಿದ್ದರು. ಯುದ್ಧದಲ್ಲಿ ಗೆದ್ದು ಹಿಂದಕ್ಕೆ ಬರುವುದು ಅಥವಾ ಸೋತು ಪ್ರಾಣ ಬಿಡುವುದು ಎರಡಕ್ಕೂ ಸಮಾನವಾದ ಗೌರವವಿದೆ. ಸೋತು ಹಿಂದಕ್ಕೆ ಬರುವುದು ಸಾವಿಗಿಂತ ಕಡೆಯಾದುದು ಎಂದೂ ಸಹ ನಂಬಿದ್ದರು. ಇದನ್ನು ಜನರು ಅಕ್ಷರಶಃ ನಂಬಿದ್ದರೋ ಇಲ್ಲವೋ ತಿಳಿಯದು. ಬಹುಶಃ ನಂಬಿದ್ದರು ಎಂದು ಊಹಿಸಬಹುದು. ಇಂತಹ ವೀರಗಲ್ಲುಗಳ ಬಗ್ಗೆ ಹಲವಾರು ವಿದ್ವಾಂಸರು ತಮ್ಮದೇ ಆದ ರೀತಿಯಲ್ಲಿ ವೈಜ್ಞಾನಿಕ ದೃಷ್ಟಿಯಲ್ಲಿ ಅಧ್ಯಯನ ನಡೆಸಿದ್ದಾರೆ.[5] ಚಿದಾನಂದಮೂರ್ತಿ ಅವರ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” ಹಾಗೂ “ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು” ಎಂಬ ಪುಸ್ತಕದಲ್ಲಿ ಸವಿವರವಾದ ಮಾಹಿತಿ ಒದಗಿಸಿದ್ದಾರೆ. ಇವು ಇನ್ನಿತರ ಸಂಶೋಧನಾ ಗ್ರಂಥಗಳಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು. ನಂತರದಲ್ಲಿ ಆರ್. ಶೇಷಶಾಸ್ತ್ರಿಯವರ “ಕರ್ನಾಟಕದ ವೀರಗಲ್ಲುಗಳು” ಎಂಬ ತಮ್ಮ ಸಂಶೋಧನಾ ಗ್ರಂಥದಲ್ಲಿ ವೀರಗಲ್ಲುಗಳನ್ನು ಹಲವಾರು ವಿಭಾಗ ಮಾಡಿ ಅರ್ಥಪೂರ್ಣವಾದಂತಹ ವಿವರಣೆಯನ್ನು ನೀಡಿದ್ದಾರೆ. ಇದೇ ರೀತಿಂiಲ್ಲಿ ಎಸ್. ಶೆಟ್ಟರ್ ಅವರ “ಮೆಮೊರಿಯಲ್ ಸ್ಟೋನ್ಸ್” ಡಿ.ವಿ. ಪರಮಶಿವಮೂರ್ತಿ ಅವರ “ಕನ್ನಡ ಶಾಸನ ಶಿಲ್ಪ”, ಕೆ.ವಿ. ರಮೇಶ ಅವರ “ಕರ್ನಾಟಕದ ಶಾಸನ ಸಮೀಕ್ಷೆ”. ತಿ.ತಾ. ಶರ್ಮ ಅವರ “ವೀರಗಲ್ಲು‑ಮಾಸ್ತಿಕಲ್ಲು”, ಬಿ.ಆರ್. ಹಿರೇಮಠ ಅವರ ವೀರಗಲ್ಲುಗಳು, ಎಂ.ಎಂ. ಕಲಬುರ್ಗಿ ಅವರ “ಸಮಾಧಿ ಬಲಿದಾನ‑ವೀರಮರಣ” ಸ್ಮಾರಕಗಳು, ಬಿ.ಎಸ್. ಶೇಠೆಯವರ “ಕರ್ನಾಟಕದಲ್ಲಿ ಸತಿ ಪದ್ಧತಿ” ಮುಂತಾದ ಗ್ರಂಥಗಳು ವೀರಗಲ್ಲುಗಳ ಬಗ್ಗೆ ಮಾಹಿತಿ ಒದಗಿಸುತ್ತವೆ. ಇವುಗಳೆಲ್ಲದರ ಆಧಾರದ ಮೇಲೆ ಹಾಗೂ ಕ್ಷೇತ್ರಕಾರ್ಯದಲ್ಲಿ ಮಾಹಿತಿ ಪಡೆದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರು ಗ್ರಾಮದ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳ ಬಗ್ಗೆ ವಿವರಣೆಯನ್ನು ನೀಡುತ್ತಿದ್ದೇನೆ.

ಪಾಂಡವಪುರದಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಈ ಊರು ಪ್ರಾಗೈತಿಹಾಸಿಕ ಕಾಲದಿಂದಲೂ ಚಾರಿತ್ರಿಕ ಸ್ಥಳವಾಗಿದೆ. ಕ್ಷೇತ್ರಕಾರ್ಯದಲ್ಲಿ ೯ ವೀರಗಲ್ಲುಗಳು ಮತ್ತು ೩ ಮಾಸ್ತಿಕಲ್ಲುಗಳು ದೊರೆತಿವೆ. ಆದರೆ, ಮೂರು ವೀರಗಲ್ಲುಗಳು ಭೂಮಿಯೊಳಗೆ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದು, ಅವುಗಳ ಮೇಲ್ಭಾಗವು ಮಾತ್ರ ಸ್ವಲ್ಪ ಕಾಣಿಸುತ್ತಿದ್ದವು. ಅವುಗಳನ್ನು ತೆಗೆದು ಛಾಯಾಚಿತ್ರ ಮಾಡಿಕೊಂಡು ಮತ್ತೆ ಮುಚ್ಚಲಾಗಿದೆ.

ಊರಿನ ಆಗ್ನೇಯ ಭಾಗದ ಹೊಲದಲ್ಲಿ ಒಂದು ಸುಂದರವಾದ ವೀರಗಲ್ಲಿದೆ. ಇದರಲ್ಲಿ ಮೂರು ಹಂತಗಳಲ್ಲಿ ಶಿಲ್ಪವನ್ನು ಕೆತ್ತಲಾಗಿದೆ. ಇದರಲ್ಲಿ ಯಾವುದೇ ಶಾಸನ ಪಾಠವಿರುವುದಿಲ್ಲ. ಇದು ಸುಮಾರು ೫ ಅಡಿ ಎತ್ತರವಿದ್ದು ೨ ಅಡಿ ಅಗಲವಿದೆ. ಕೆಳಹಂತದಲ್ಲಿ ವೀರನು ಶತ್ರುವಿನೊಡನೆ ಹೋರಾಡುತ್ತಿದ್ದಾನೆ. ಇಬ್ಬರ ಕೈಯಲ್ಲಿಯೂ ಕತ್ತಿ ಮತ್ತು ಗುರಾಣಿಯನ್ನು ಹಿಡಿದಿದ್ದಾರೆ. ಮಧ್ಯಭಾಗದಲ್ಲಿ ಹೋರಾಟದಲ್ಲಿ ಮಡಿದ ವೀರನನ್ನು  ದೇವಪುರುಷರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇವರು ಕೈಯಲ್ಲಿ ಚಾಮರವನ್ನು ಹಿಡಿದಿದ್ದಾರೆ. ವೀರನು ಪದ್ಮಾಸನದಲ್ಲಿ ಕುಳಿತಿದ್ದಾನೆ. ಮೂರನೇ ಹಂತದಲ್ಲಿ ಸ್ವರ್ಗಸ್ಥನಾದ ವೀರನು ಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದಾನೆ. ಲಿಂಗದ ಪಕ್ಕದಲ್ಲಿ ನಂದಿಯನ್ನು ಚಿತ್ರಿಸಲಾಗಿದೆ. ಲಿಂಗದ ಮೇಲ್ಭಾಗದಲ್ಲಿ ಸೂರ್ಯ ಮತ್ತು ಅರ್ಧಚಂದ್ರಾಕೃತಿಯನ್ನು ಕೆತ್ತಲಾಗಿದೆ. ಶಿಲ್ಪಿಯು ತಾನು ಕಣ್ಣಾರೆ ಕಂಡ ನೈಜ ಘಟನೆಗಳ ಹಿನ್ನೆಲೆಯನ್ನು ಬಹಳ ಸುಂದರವಾಗಿ ಕಲ್ಲಿನ ಮೇಲೆ ಮೂಡಿಸಿದ್ದಾನೆ.

ತೊಣ್ಣೂರಿನಿಂದ ಪಾಂಡವಪುರಕ್ಕೆ ಹೋಗುವ ರಸ್ತೆಯ ಬಲಭಾಗದ ಹೊಲದಲ್ಲಿ ಸುಮಾರು ೫ ವೀರಗಲ್ಲುಗಳಿವೆ. ರಸ್ತೆಬದಿ ಇರುವ ವೀರಗಲ್ಲೊಂದರ ಕೆಳಭಾಗವು ನೆಲದಲ್ಲಿ ಹೂತುಹೋಗಿದೆ. ಕೇವಲ ಎರಡು ಹಂತಗಳು ಮಾತ್ರ ಇಲ್ಲಿ ಕಾಣಸಿಗುತ್ತವೆ. ಕೆಳಭಾಗದಲ್ಲಿ ಮಡಿದ ವೀರನನ್ನು ದೇವಪುರುಷರು ಚಾಮರ ಸಹಿತವಾಗಿ ಆಕಾಶದಲ್ಲಿ ಕೊಂಡೊಯ್ಯುತ್ತಿರುವಂತೆ ಚಿತ್ರಿಸಲಾಗಿದೆ. ನಂತರದ ಮೇಲ್ಭಾಗದಲ್ಲಿ ಸ್ವರ್ಗಸ್ಥನಾದ ವೀರನು ಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದಾನೆ. ಲಿಂಗದ ಪಕ್ಕದಲ್ಲಿ ನಂದಿಯನ್ನು ಕೆತ್ತಿದ್ದಾರೆ. ಹಾಗೂ ಸೂರ್ಯ, ಚಂದ್ರರನ್ನು ಚಿತ್ರಿಸಲಾಗಿದೆ. ವೀರಗಲ್ಲಿನಲ್ಲಿ ಯಾವುದೇ ಶಾಸನ ಪಾಠವಿರುವುದಿಲ್ಲ.

ಇದೇ ರಸ್ತೆಯ ಮೆಟ್ಟಾರೆ ಎಂದು ಕರೆಯುವ ಜಾಗದಲ್ಲಿ ಒಂದು ಸಣ್ಣ ಲಕ್ಷ್ಮೀ ಗುಡಿಯಿದೆ. ಅದರ ಪಕ್ಕದಲ್ಲಿ ಒಂದು ವೀರಗಲ್ಲಿದ್ದು, ಇದು ಸುಮಾರು ೩ ಅಡಿ ಎತ್ತರ, ೪ ಅಡಿ ಅಗಲವನ್ನು ಹೊಂದಿದೆ. ಈ ವೀರಗಲ್ಲಿನಲ್ಲಿ ಕೇವಲ ೨ ಹಂತಗಳಲ್ಲಿ ಮಾತ್ರ ಶಿಲ್ಪವನ್ನು ಕೆತ್ತಲಾಗಿದೆ. ಮೊದಲನೇ ಹಂತದಲ್ಲಿ ಇಬ್ಬರು ವೀರರು ಕತ್ತಿಯನ್ನು ಹಿಡಿದು ಹೋರಾಡುತ್ತಿದ್ದಾರೆ. ಶಿಲ್ಪಿಯು ಈ ವೀರರನ್ನು ತುಂಬಾ ಸುಂದರವಾಗಿ ಚಿತ್ರಿಸಿದ್ದಾನೆ, ವೀರರು ಧರಿಸಿರುವ ವಸ್ತ್ರವಿನ್ಯಾಸವನ್ನು ಬಹಳ ಸೂಕ್ಷ್ಮತೆಯಿಂದ ತೋರಿಸಿದ್ದಾನೆ. ಮೇಲಿನ ಹಂತದಲ್ಲಿ ಸ್ವರ್ಗಸ್ಥನಾದ ವೀರ ಮತ್ತು ಅವನ ಹೆಂಡತಿ ಸಹ ಕುಳಿತಿರುವುದನ್ನು ಕಾಣಬಹುದು. ಬಹುಶಃ ವೀರನು ಸ್ವರ್ಗಸ್ಥನಾದಾಗ ಅವನ ಪತ್ನಿಯು ಸಹಗಮನವನ್ನು ಆಚರಿಸಿಕೊಂಡಿರಬಹುದು. ದಂಪತಿಗಳ ಪಕ್ಕದಲ್ಲಿ ನಂದಿಯನ್ನು ಚಿತ್ರಿಸಲಾಗಿದೆ. ನಂದಿಯ ಪಕ್ಕದಲ್ಲಿ ಲಿಂಗವನ್ನು ಕೆತ್ತಿದ್ದು, ನಂದಿಯ ಮೇಲ್ಭಾಗದಲ್ಲಿ ಪುಷ್ಪಕ ವಿಮಾನವನ್ನು ತೋರಿಸಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಸೂರ್ಯ ಮತ್ತು ಚಂದ್ರರನ್ನು ಚಿತ್ರಿಸಲಾಗಿದೆ. ವೀರಗಲ್ಲು ಬಹಳ ಸುಂದರವಾಗಿದೆ. ಇದರಲ್ಲಿ ಪಾಠವಿಲ್ಲದಿದ್ದರೂ ಸಹ ಶಿಲ್ಪದ ಆಧಾರದಲ್ಲಿ ವೀರಗಲ್ಲಿನ ಕಥೆಯನ್ನು ತಿಳಿಯಬಹುದು.

ಇದರ ಪಕ್ಕದಲ್ಲಿಯೇ ಒಂದು ಬಲಿದಾನದ ವೀರಗಲ್ಲು ಇದೆ (ನೋಡಿ: ಚಿತ್ರ ೧). ಪ್ರಾಚೀನ ಭಾರತದಲ್ಲಿ ಆತ್ಮಹತ್ಯೆಯನ್ನು ಪಾಪವೆಂದು ತಿಳಿದು ನಿಷೇಧಿಸಿದ್ದರು. ಆದರೂ ಪುರಾಣಗಳಲ್ಲಿ ಕೆಲವು ಬಗೆಯ ದೇಹತ್ಯಾಗಗಳನ್ನು ಒಪ್ಪಿಕೊಳ್ಳಲಾಗಿದೆ. ಬ್ರಾಹ್ಮಣರ ಕೊಲೆ, ಸುರಪಾನ ಮುಂತಾದ ಮಹಾಪಾತಕಗಳನ್ನು ಮಾಡಿದವರು, ತೀರ್ಥಯಾತ್ರೆಗಾಗಿ ಹೊರಟು ದಾರಿಯಲ್ಲಿ ರೋಗಪೀಡಿತನಾಗಿ ತನ್ನ ನಿತ್ಯಕರ್ಮಗಳನ್ನು ಮಾಡಲು ಅಸಮರ್ಥನಾದರೆ, ವೃದ್ಧನೂ, ದೊಡ್ಡರೋಗಿಯೂ ಆಗಿರುವ ವ್ಯಕ್ತಿಯು ಕರ್ಮಗಳನ್ನು ಮಾಡಲಾರದಷ್ಟು ದುರ್ಬಲನಾದರೆ ಎತ್ತರದಿಂದ ಬಿದ್ದೋ, ಬೆಂಕಿಯನ್ನು ಪ್ರವೇಶಿಸಿಯೋ ಉಪವಾಸ ಮಾಡಿಯೊ, ತೀರ್ಥಯಾತ್ರೆ ಹೊರಟೋ ದೇಹತ್ಯಾಗವನ್ನು ಮಾಡಬಹುದು. ಗೃಹಸ್ಥನೂ ಆರೋಗ್ಯಶಾಲಿಯಾಗಿದ್ದರೂ ತನ್ನ ಜೀವಿತದ ಕಾರ್ಯಗಳೆಲ್ಲವೂ ಮುಗಿದವು ಎಂಬ ಭಾವನೆ ಬಂದಿದ್ದರೆ ಲೌಕಿಕ ಭೋಗಗಳ ಆಸೆಗಳೆಲ್ಲವೂ ಬತ್ತಿಹೋಗಿದ್ದರೆ, ವೇದಾಂತಿಯಾಗಿ ಜೀವನದ ನಶ್ವರತೆಯನ್ನು ಅನುಭವಿಸಿದರೆ, ಮೇಲೆ ತಿಳಿಸಿದಂತೆ ದೇಹತ್ಯಾಗವನ್ನು ಮಾಡಬಹುದು. ವೀರನಾದವನು ರಣರಂಗದಲ್ಲಿ ಹೋರಾಡಿ ಸೋತು ಹಿಂದಕ್ಕೆ ಬರುವುದು ಸಾವಿಗಿಂತ ಕಡೆಯಾದುದು ಎಂದು ತಿಳಿದು ದೇಹತ್ಯಾಗವನ್ನು ಮಾಡುತ್ತಿದ್ದರು. ಇದನ್ನು ಆತ್ಮಬಲಿ ಎಂದೂ ಕರೆಯಲಾಗುತ್ತದೆ. ಇಂಥದೇ ಪ್ರಕಾರದ ಒಂದು ವೀರಗಲ್ಲಿದೆ.

ಇದು ೫ ಅಡಿ ಎತ್ತರ, ೪ ಅಡಿ ಅಗಲವಾಗಿದೆ. ಇದರಲ್ಲಿಯೂ ಸಹ ಯಾವುದೇ ಶಾಸನ ಪಾಠವಿರುವುದಿಲ್ಲ. ಕಲ್ಲಿನಲ್ಲಿ ಮೂರು ಹಂತಗಳಲ್ಲಿ ಶಿಲ್ಪವನ್ನು ಕೆತ್ತಲಾಗಿದೆ. ಕೆಳಹಂತದಲ್ಲಿ ಮೂರು ಜನರು, ಮರದ ತುಂಡಿನ ಮೇಲ್ಭಾಗದಲ್ಲಿ ಕತ್ತಿಯ (ಕಠಾರಿ) ಮೊನೆಯನ್ನು ಮೇಲಕ್ಕೆ ಮಾಡಿ ಹಿಡಿಯನ್ನು ಮರದ ತುಂಡಿಗೆ ಸಿಕ್ಕಿಸಿ ನಿಲ್ಲಿಸಲಾಗಿದ್ದು, ಇದಕ್ಕೆ ಮೇಲ್ಭಾಗದಿಂದ ಧುಮುಕಿ ದೇಹತ್ಯಾಗವನ್ನು ಮಾಡಿಕೊಂಡಿದ್ದಾರೆ. ಮಧ್ಯದ ಭಾಗದ ಶಿಲ್ಪದಲ್ಲಿ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಮೇಲಿನ ಹಂತದಲ್ಲಿ ಸ್ವರ್ಗಸ್ಥನಾದ ವೀರನು ಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ. ಲಿಂಗದ ಪಕ್ಕದಲ್ಲಿ ನಂದಿಯನ್ನು ಕೆತ್ತಲಾಗಿದೆ. ಕಲ್ಲಿನ ಮೇಲ್ಪಟ್ಟಿಕೆಯ ಕೆಳಭಾಗದ ಎರಡೂ ಮೂಲೆಗಳಲ್ಲಿ ಸೂರ್ಯ ಮತ್ತು ಚಂದ್ರನನ್ನು ಚಿತ್ರಿಸಲಾಗಿದೆ. ಶಿಲ್ಪದ ದೃಷ್ಟಿಯಲ್ಲಿ ಇದನ್ನು ಗಮನಿಸಿದರೆ, ಇದೊಂದು  ಬಲಿದಾನದ ವೀರಗಲ್ಲೆಂದು ಹೇಳಬಹುದು. ಕೆಳಹಂತದ ಶಿಲ್ಪದಲ್ಲಿ ಮೂರು ಜನರು ಆತ್ಮಬಲಿಗೆ ಬಿದ್ದು, ಮೇಲಿನ ಹಂತದಲ್ಲಿ ಕೇವಲ ಒಬ್ಬನನ್ನು ಮಾತ್ರ ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವುದನ್ನು ಗಮನಿಸಬಹುದು. ಅಂದರೆ ಇಲ್ಲಿ ರಾಜ ಅಥವಾ ಗುಂಪಿನ ನಾಯಕನು ಯುದ್ಧದಲ್ಲಿ ಮಡಿದಾಗ ಅದನ್ನು ಸಹಿಸಲಾಗದೆ ಅವನ ಹಿಂಬಾಲಕರು ಆತ್ಮಬಲಿ ಮಾಡಿಕೊಂಡಿರಬಹುದು. ಈ ರೀತಿಯ ಪ್ರಕರಣಗಳು ಕರ್ನಾಟಕದಲ್ಲಿ ಕೆಲವು ಕಡೆ ಇವೆ. ಇಂತಹ ವೀರಗಲ್ಲುಗಳು ದೊರಕುವುದು ವಿರಳವಾದುದರಿಂದ ಇದೊಂದು ಅಪರೂಪವಾದ ವೀರಗಲ್ಲೆಂದು ಹೇಳಬಹುದು.

ಮೆಟ್ಟಾರೆಯಲ್ಲಿ ಮತ್ತೊಂದು ವೀರಗಲ್ಲಿದ್ದು, ಇದೂ ಸಹ ಸುಂದರವಾಗಿದೆ. ಇದರ ಕೆಳಹಂತದಲ್ಲಿ ವೀರನು ಕತ್ತಿ, ಗುರಾಣಿಯನ್ನು ಹಿಡಿದು ಹೋರಾಡುತ್ತಿರುವ ಚಿತ್ರವಿದೆ. ಇಲ್ಲಿ ಕೇವಲ ಒಬ್ಬ ವೀರನನ್ನು ಮಾತ್ರ ಕೆತ್ತಲಾಗಿದೆ. ಪಕ್ಕದಲ್ಲಿ ಸ್ತ್ರೀ ಶಿಲ್ಪವಿದ್ದು, ಈಕೆಯು ವೀರನಿಗೆ ಪೂಜೆ ಸಲ್ಲಿಸುತ್ತಿದ್ದಾಳೆ. ಎರಡನೇ ಹಂತದಲ್ಲಿ ಮಡಿದ ವೀರನನ್ನು ದೇವಮಾನವರು ಸ್ವರ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಮೇಲಿನ ಹಂತದಲ್ಲಿ ಸ್ವರ್ಗಸ್ಥನಾದ ವೀರನು ಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ. ಲಿಂಗದ ಬಳಿ ನಂದಿಯ ಚಿತ್ರವಿದೆ. ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರನ ಚಿತ್ರವಿದೆ.

ಮೆಟ್ಟಾರೆಯ ಪಕ್ಕದ ಹೊಲದಲ್ಲಿ ಮೂರು ಕಲ್ಲುಗಳಿದ್ದು, ಇವುಗಳು ಭೂಮಿಯೊಳಗೆ ಹೂತುಕೊಂಡಿವೆ. ಕೇವಲ ೧/೨ ಅಡಿ ಮಾತ್ರ ಹೊರಕಾಣುತ್ತವೆ. ಇವುಗಳನ್ನು ಕ್ಷೇತ್ರಕಾರ್ಯ ದಲ್ಲಿ ಗಮನಿಸಿ ಅವುಗಳನ್ನು ಹೊರತೆಗೆದಾಗ ಆ ಮೂರು ಕಲ್ಲುಗಳು ವೀರಗಲ್ಲುಗಳಾಗಿದ್ದವು. ಇದರಲ್ಲಿ ಮೊದಲನೆಯದು ಕೇವಲ ಎರಡು ಹಂತದಲ್ಲಿ ಚಿತ್ರಿಸಲಾಗಿದೆ. ಇದರಲ್ಲಿ ಇಬ್ಬರು ವೀರರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತ್ತಿದ್ದಾರೆ. ಈ ಚಿತ್ರದ ಮೇಲ್ಭಾಗದಲ್ಲಿ ವೀರನು ಕುದುರೆಯ ಮೇಲೆ ಕುಳಿತಿರುವ ಚಿತ್ರವನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಚಿತ್ರಗಳನ್ನು ಚಿತ್ರಿಸಲಾಗಿದೆ. ಎರಡನೆಯ ವೀರಗಲ್ಲಿನಲ್ಲಿ ಕೇವಲ ಒಂದೇ ಹಂತದಲ್ಲಿ ಚಿತ್ರಿಸಲಾಗಿದೆ. ಇದರಲ್ಲಿ ಇಬ್ಬರು ವೀರರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತ್ತಿದ್ದಾರೆ. ಈ ಚಿತ್ರದ ಮೇಲ್ಭಾಗದಲ್ಲಿ ವೀರನು ಕುದುರೆಯ ಮೇಲೆ ಕುಳಿತಿರುವ ಚಿತ್ರವನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳನ್ನು ಕೆತ್ತಲಾಗಿದೆ. ಮತ್ತೊಂದು ವೀರಗಲ್ಲಿನಲ್ಲಿ ಮೂರು ಜನರು ನಿಂತಿದ್ದಾರೆ. ಇವರಲ್ಲಿ ಮಧ್ಯದಲ್ಲಿ ಇರುವ ವ್ಯಕ್ತಿ ವೀರನೆಂದು ಹೇಳಬಹುದು. ಎರಡನೆಯ ಹಂತದಲ್ಲಿ ಮಡಿದ ವೀರನನ್ನು ದೇವಮಾನವರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಮೇಲಿನ ಹಂತದಲ್ಲಿ ಲಿಂಗವಿದ್ದು, ಪಕ್ಕದಲ್ಲಿ ನಂದಿಯ ಚಿತ್ರವಿದೆ. ಲಿಂಗಕ್ಕೆ ವ್ಯಕ್ತಿಯು ಪೂಜೆಯನ್ನು ಸಲ್ಲಿಸುತ್ತಿದ್ದಾನೆ. ಈ ವೀರಗಲ್ಲಿನಲ್ಲಿ ಎಲ್ಲಾ ಚಿತ್ರಗಳಿಗೂ ಒಂದೊಂದು ಪಟ್ಟಿಕೆ(Box)ಗಳನ್ನು ಚಿತ್ರಿಸಲಾಗಿದೆ.

ನಂಬಿನಾರಾಯಣ ದೇವಾಲಯದ ಬಲಭಾಗದಲ್ಲಿ ಅಮ್ಮನವರ ಸನ್ನಿಧಿಯ ಮುಂಭಾಗದಲ್ಲಿ ಒಂದು ಒಡೆದುಹೋಗಿರುವ ವೀರಗಲ್ಲಿದೆ (ನೋಡಿ: ಚಿತ್ರ ೨). ಈ ಫಲಕವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಫಲಕದ ಅರ್ಧಭಾಗವನ್ನು ಒಂದು ಶಿಲ್ಪಕ್ಕಾಗಿಯೂ, ಉಳಿದ ಅರ್ಧಭಾಗದಲ್ಲಿ ೨ ಭಾಗಗಳಾಗಿ ವಿಂಗಡಿಸಿ ಇನ್ನೆರಡು ಶಿಲ್ಪಪಟ್ಟಿಕೆಗಳಿಗಾಗಿ ಅವಕಾಶ ಮಾಡಲಾಗಿದೆ. ಮೊದಲಿನ ಅರ್ಧಭಾಗದಲ್ಲಿ ಶಿಲ್ಪವು ಒಡೆದು ಹೋಗಿದ್ದು, ಪೂರ್ಣ ವಿವರವು ಕಂಡುಬರುವುದಿಲ್ಲವಾದರೂ ಸುಂದರವಾದ ವೀರನ ಶಿಲ್ಪವು ಕಂಡುಬರುತ್ತದೆ. ಕತ್ತಿ ಧರಿಸಿರುವ ಶಿಲ್ಪದ ಸೊಂಟದಿಂದ ಕೆಳಭಾಗಕ್ಕೆ ಸುಂದರವಾದ ವಸ್ತ್ರವಿನ್ಯಾಸವು ಕಂಡುಬರುತ್ತದೆ. ಶಿಲ್ಪದ ಎರಡೂ ಭಾಗಗಳಲ್ಲಿ ಅಕ್ಷರಗಳು ಕಂಡುಬರುತ್ತವೆ. ಮಧ್ಯಭಾಗದ ಪಟ್ಟಿಕೆಯಲ್ಲಿ ಅಪ್ಸರೆಯರು ಚಾಮರಸಹಿತವಾಗಿ ವೀರನನ್ನು ಆಕಾಶದಲ್ಲಿ ಕೊಂಡೊಯ್ಯುತ್ತಿರುವಂತೆ ಚಿತ್ರಿಸಲಾಗಿದೆ. ಮೇಲ್ಬಾಗದ ಪಟ್ಟಿಕೆಯಲ್ಲಿ ಶಿಲ್ಪದ ಭಾಗಗಳು ಪೂರ್ಣನಾಶವಾಗಿರುವುದರಿಂದ ಇದು ಯಾವ ದೇವರಿಗೆ ಸಂಬಂಧಪಟ್ಟಿದ್ದೆಂದು ತಿಳಿದುಬಂದಿಲ್ಲವಾದರೂ ಕುಳಿತಿರುವ ಭಂಗಿಯನ್ನು ಗಮನಿಸಿದರೆ ಶಿವನ ಸಾಯುಜ್ಯದ ಪ್ರತೀಕವಾಗಿರಬಹುದು. ಇದರ ಅಕ್ಕಪಕ್ಕದಲ್ಲಿ ಚಾಮರವನ್ನು ಹಿಡಿದಿರುವ ಅಪ್ಸರೆಯರನ್ನು ಚಿತ್ರಿಸಲಾಗಿದೆ. ಈ ಕಲ್ಲಿನಲ್ಲಿ ಶಾಸನವು ಇದೆ. ಇಲ್ಲಿರುವ ಲಿಪಿಯನ್ನು ಗಮನಿಸಿದರೆ ಬಹುಶಃ ಗಂಗರ ಕಾಲದ ಲಿಪಿಯ ರೀತಿ ಇದೆ.

ಮಾಸ್ತಿಕಲ್ಲುಗಳು

ಪತಿಯೊಡನೆ ಸಹಗಮನವನ್ನು ಮಾಡಿದ ಸತಿಯರ ಸ್ಮಾರಕಕ್ಕಾಗಿ ನಿಲ್ಲಿಸಿದ ಕಲ್ಲುಗಳನ್ನು ಮಾಸ್ತಿಕಲ್ಲು ಅಥವಾ ಮಹಾಸತಿಕಲ್ಲು ಎಂದು ಹೇಳಬಹುದು.[6] ಈ ಸತಿ ಅಥವಾ ಸಹಗಮನ ಪದ್ಧತಿಯೂ ಸಾರ್ವತ್ರಿಕವಾಗಿರಲಿಲ್ಲ ಹಾಗೂ ಬಲಾತ್ಕಾರವೂ ಆಗಿರಲಿಲ್ಲವೆಂಬುದು ಗಮನಿಸಬೇಕಾದ ಸಂಗತಿ. ಪತಿಯೇ ಪರದೈವವೆಂಬ ಭಾವನೆಯಲ್ಲಿ ಬೆಳೆದ ಹೆಣ್ಣು, ಪತಿಯ ಮರಣವನ್ನು ಸಹಿಸಲಾರದೆ ಏಕೈಕ ನಿಷ್ಠೆಯಿಂದ ಆತನನ್ನು ಹಿಂಬಾಲಿಸಿ ಸಂತೋಷದಿಂದ ಒಪ್ಪಿಕೊಂಡು ಸಹಗಮನವನ್ನು ಪ್ರಾರಂಭಿಸಿರುವುದೇ ಮೂಲವಾಗಿರಬೇಕು. ಏಕೆಂದರೆ ಧರ್ಮಶಾಸ್ತ್ರಗಳಲ್ಲಿಯೂ ಬಲತ್ಕಾರದ ಸಹಗಮನಕ್ಕೆ ಒಪ್ಪಿಗೆಯನ್ನು ನೀಡಿಲ್ಲ. ಆದರೂ ಕೆಲವು ಕಡೆಗಳಲ್ಲಿ ಧಾರ್ಮಿಕ ಸ್ವರೂಪ ಬಂದು ಹೆಣ್ಣಿಗೆ ಇಷ್ಟವಿಲ್ಲದಿದ್ದರೂ ಆ ವಿಧಿ ನಡೆಯುತ್ತಿದ್ದಂತೆ ತೋರುತ್ತದೆ. ಎಂ. ಚಿದಾನಂದಮೂರ್ತಿ ಅವರು ಅಭಿಪ್ರಾಯಪಡುವಂತೆ, ಈ ಲೋಕದಂತಹ ಇನ್ನೊಂದು  ಲೋಕವಿದೆಯೆಂದು ಜನರು ದೃಢವಾಗಿ ನಂಬಿದ್ದರು. ವ್ಯಕ್ತಿ ಮಡಿದಾಗ ಅವನು ಪರಲೋಕಕ್ಕೆ ಹೋಗುವನೆಂದು, ಅಲ್ಲಿ ಅವನ ಭೋಗಕ್ಕೆ ಅವನಿಗಿಷ್ಟವಾದ ವಸ್ತುಗಳನ್ನು ಕಳುಹಿಸಬೇಕೆಂದೂ ಭಾವಿಸಿದ್ದರು. ಬಹುಶಃ ಸಹಗಮನ ಪದ್ಧತಿಗೆ ಇದೇ ಮೂಲವಿರಬಹುದು ಎಂಬ ಅವರ ಅಭಿಪ್ರಾಯವನ್ನು ಅಲ್ಲಗಳೆಯುವಂತಿಲ್ಲ. ಗಂಡನು ಇಂಥದ್ದೇ ಕಾರಣಕ್ಕಾಗಿ ಮಡಿದಿರಬೇಕೆಂಬ ಯಾವುದೇ ನಿಯಮವಿದ್ದಂತೆ ಕಾಣುವುದಿಲ್ಲ. ಗಂಡನು ಯುದ್ಧದಲ್ಲಿಯೋ, ಆತ್ಮಬಲಿ ಮಾಡಿಕೊಂಡೊ ಅಥವಾ ಸಹಜವಾದ ಮರಣವನ್ನೊ ಪಡೆದಿರಬಹುದು. ಗಂಡನು ಯಾವ ಕಾರಣಕ್ಕಾಗಿ ಮಡಿದನು ಎಂಬುದನ್ನು ತಿಳಿಯಲು ಶಿಲೆಯ ಪ್ರಕಾರವನ್ನು ಮತ್ತು ಶಿಲ್ಪವನ್ನು ನಿರ್ಣಯಿಸುವಲ್ಲಿ ಬಹಳ ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಸ್ಮಾರಕ ಶಿಲೆಗಳ ಪಾಠವನ್ನಾಗಲಿ, ಶಿಲ್ಪವನ್ನಾಗಲಿ ಗಮನಿಸಿದಾಗ ಅವುಗಳನ್ನು ವೀರಗಲ್ಲು ಎಂಬುದಾಗಿ ಗುರುತಿಸಬೇಕೆ ಅಥವಾ ಮಹಾಸತಿಕಲ್ಲು ಎಂಬುದಾಗಿ ಗುರುತಿಸಬೇಕೆ ಅಥವಾ ವೀರನಿಗೂ ಮಹಾಸತಿಗೂ ಇಬ್ಬರಿಗೂ ಸ್ಮಾರಕವಾಗಿದೆಯೆ ಎಂಬುದು ಸಂಶಯಕ್ಕೀಡಾಗುತ್ತದೆ. ಇವೆಲ್ಲವೂ ಕೆಲವು ಸಮಯದಲ್ಲಿ ಪ್ರಶ್ನಾತೀತವಾಗಿಯೆ ಉಳಿದುಕೊಂಡಿವೆ. ಒಟ್ಟಾರೆಯಾಗಿ ಇದರ ಬಗ್ಗೆ ಹೇಳಬೇಕೆಂದರೆ ಪತಿಯನ್ನು ಹಿಂಬಾಲಿಸಿದ ಮಹಾಸಾಧ್ವಿಯರ ಸ್ಮರಣೆಗಾಗಿ ನೆಟ್ಟಂತಹ ಕಲ್ಲುಗಳೇ ಮಹಾಸತಿ ಕಲ್ಲುಗಳು ಎನ್ನಬಹುದು.

ಕ್ರಿ.ಶ. ೧೦ನೆಯ ಶತಮಾನದ ಆರಂಭದಲ್ಲಿ ಪ್ರವಾಸ ಮಾಡಿದ ಅರಬ್ಬಿ ವರ್ತಕ ಸುಲೇಮಾನನು ಹೇಳುವಂತೆ ಎಲ್ಲೋ ವಿರಳವಾಗಿ ಮಾತ್ರ ರಾಣಿಯರು ತಮ್ಮ ಗಂಡಂದಿರ ಚಿತೆಗಳನ್ನೇರುತ್ತಿದ್ದರು. ಅಲ್ಲಿಯೂ ಬಲವಂತವಿರಲಿಲ್ಲ, ಚಿತೆ ಏರುವುದು ಬಿಡುವುದು ಅವರಿಗೆ ಸೇರಿದುದಾಗಿತ್ತು ಎಂದು ಹೇಳಿದ್ದಾನೆ. ಕ್ರಿ.ಶ. ೬ನೇ ಶತಮಾನದಿಂದ ೧೨ನೇ ಶತಮಾನದ ಮಧ್ಯಭಾಗದವರೆಗೆ ಸಹಗಮನದ ನಿದರ್ಶನಗಳು ದೊರಕುವುದು ಬಹಳ ಕಡಿಮೆ. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ನೊಳಂಬರ ಕಾಲದಲ್ಲಿ ಯಾವುದೇ ಸಹಗಮನದ ಸೂಚನೆಗಳು ಕಂಡುಬರುವುದಿಲ್ಲ. ಆದರೆ ಕರ್ನಾಟಕದಲ್ಲಿ ವೀರಯುಗದೊಡನೆ ಪ್ರಬಲಗೊಂಡ ಸಹಗಮನ ಪದ್ಧತಿಯು ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳ ಕಾಲದಲ್ಲಿ ತನ್ನ ತುದಿಯನ್ನು ತಲುಪಿದೆ ಎನ್ನಬಹುದು.

ಕೃಷ್ಣ ದೇವಾಲಯದ ಹೊರಗೆ ಬಲಭಾಗದಲ್ಲಿ ನೆಟ್ಟಿರುವ ಸುಮಾರು ೫ ಅಡಿ ಎತ್ತರ, ೨ ಅಡಿ ಅಗಲವನ್ನು ಹೊಂದಿರುವ ಕಲ್ಲಿನ ಮೇಲೆ ತೋಳಿನಂತೆ ಕೆತ್ತಲಾಗಿದೆ(ನೋಡಿ: ಚಿತ್ರ ೩). ಇದರಲ್ಲಿ ಯಾವುದೇ ಕಂಬವಿರುವುದಿಲ್ಲ ಮತ್ತು ಹಸ್ತವನ್ನು ವ್ಯತಿರಿಕ್ತವಾಗಿ ಕೆತ್ತಿಲ್ಲದಿದ್ದರೂ ಅದರ ರೂಪಾಂತರವಾಗಿ ಕೆತ್ತಿದ್ದಾನೆ. ಇದರ ಮೇಲ್ಭಾಗದಲ್ಲಿ ಛತ್ರಿಯನ್ನು ಕೆತ್ತಲಾಗಿದೆ. ಸತ್ತ ವೀರನು ದೇವಲೋಕಕ್ಕೆ ಸೇರಿದ ಪುರುಷನಾದುದರಿಂದ ಸಹಗಮನವಾದ ಸತಿಯು ದೇವಲೋಕಕ್ಕೆ ಪತಿಯ ಜೊತೆ ಹೋಗುತ್ತಾಳೆ ಎಂಬ ನಂಬಿಕೆಯಿಂದ ಜನರು ಮಹಾಸತಿ ಕಲ್ಲಿಗೆ ಹೂವು, ತಾಂಬೂಲ, ಛತ್ರಿಗಳನ್ನು ಕೊಟ್ಟು ಮರ‍್ಯಾದೆಗಳನ್ನು ಊರಿನ ಜನ ಸಲ್ಲಿಸುತ್ತಿದ್ದರು.[7] ಈ ರೀತಿಯಲ್ಲಿ ಛತ್ರಿಯನ್ನು ಕೆತ್ತಲ್ಪಟ್ಟಿದ್ದಾರೆ. ಈ ಕಲ್ಲಿನಲ್ಲಿ ತೋಳನ್ನು ದುಂಡಾಗಿ ಕೆತ್ತಿದ್ದಾನೆ. ಇದು ಬಲಗೈನ ಚಿತ್ರವಾಗಿದೆ. ಮಹಾಸತಿಯ ಬಲಗೈ ಶುಭದ, ಸೌಭಾಗ್ಯದ, ಧನ್ಯಜೀವನದ ಸಂಕೇತ ಹಾಗೂ ಕೇವಲ ತೋಳು ಇರುವ ಮಾಸ್ತಿಕಲ್ಲುಗಳನ್ನು ವ್ಯಾಸನ ತೋಳು ಎಂದು ಕರೆಯುತ್ತಾರೆ.[8] ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವುಗಳನ್ನು ಒಂಟಿಕೈ ಮಾಸ್ತಿ ಎಂದು ಕರೆಯುತ್ತಾರೆ. ಆದರೆ ಕೆಲವರು ಇದನ್ನು ನೇಗಿಲು ಎಂದು ಗುರುತಿಸುತ್ತಾರೆ. ನೇಗಿಲಿಗೆ ಛತ್ರಿಯ ಗೌರವವನ್ನು ನೀಡಲಾಗಿದೆ ಎಂದು ಅರ್ಥೈಸುತ್ತಾರೆ. ಹಿಂದೆ ಈ ದೇವಾಲಯದ ಮಾರ್ಗವಾಗಿ ಕೃಷಿ ಭೂಮಿಗೆ ಹೋಗುವವರು ಈ ಕಲ್ಲಿಗೆ ನಮಸ್ಕರಿಸಿ ಹೋಗುತ್ತಿದ್ದರಂತೆ. ಈ ಕಲ್ಲನ್ನು ಗುರುತಿಸುವಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ.

ಊರಿನ ನೈರುತ್ಯ ಭಾಗದಲ್ಲಿರುವ ಮುಸ್ಲಿಂ ದರ್ಗದ ಮುಂಭಾಗದಲ್ಲಿ ಒಂದು ಕಲ್ಲು ಬಿದ್ದಿತ್ತು. ಕ್ಷೇತ್ರಕಾರ್ಯವನ್ನು ಮಾಡುತ್ತಿದ್ದಾಗ ಅದನ್ನು ಗಮನಿಸಿ ತಿರುಗಿಸಿ ನೋಡಿದಾಗ ಅದೊಂದು ಮಾಸ್ತಿಕಲ್ಲಾಗಿತ್ತು (ನೋಡಿ: ಚಿತ್ರ ೪). ಇದು ಸುಮಾರು ೬ ಅಡಿ ಎತ್ತರ ೨ ಅಡಿ ಅಗಲವಿದೆ. ಕಲ್ಲಿನ ಅರ್ಧಭಾಗದಿಂದ ಮೇಲಕ್ಕೆ ಕೆತ್ತಲಾಗಿದೆ. ಇಲ್ಲಿ ಒಂದು ಚೌಕಾಕಾರದ ಸ್ತಂಭವನ್ನು ಕೆತ್ತಿದ್ದು, ಅದರಿಂದ ಬಲತೋಳನ್ನು ಮುಂದೆ ಚಾಚಿ ಮೇಲಕ್ಕೆತ್ತಿರುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಇದರಲ್ಲಿ ಹಸ್ತವನ್ನು ಹಾಗೂ ಬೆರಳುಗಳನ್ನು ಚಿತ್ರಿಸಿದ್ದಾನೆ. ತೋಳನ್ನು ಸಹ ಚೌಕಾಕಾರದಲ್ಲಿ ಕೆತ್ತಲಾಗಿದೆ. ಕೈಯ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರನನ್ನು ಕೆತ್ತಲಾಗಿದೆ. ತೋಳುಬಂದಿ ಗಳನ್ನು ಮತ್ತು ಕೈಯಲ್ಲಿನ ಬಳೆಗಳನ್ನು ಸಹ ಚಿತ್ರಿಸಲಾಗಿದೆ. ಒಟ್ಟಿನಲ್ಲಿ ಇದೊಂದು ಮಾಸ್ತಿಕಲ್ಲಾಗಿದೆ.

ಊರಿನಿಂದ ಪಾಂಡವಪುರಕ್ಕೆ ಹೋಗುವ ರಸ್ತೆಯಲ್ಲಿರುವ ಲಕ್ಷ್ಮೀ ಗುಡಿಯ ಪಕ್ಕದಲ್ಲಿ ಮತ್ತೊಂದು ಮಾಸ್ತಿಕಲ್ಲಿದೆ. (ನೋಡಿ: ಚಿತ್ರ ೫) ಗುಡಿಯ ಬಲಭಾಗದಲ್ಲಿ ಈ ಮಾಸ್ತಿಕಲ್ಲಿದ್ದು ಎಡಭಾಗದಲ್ಲಿ ಬಲಿದಾನದ ಕಲ್ಲಿದೆ. ಈ ಮಾಸ್ತಿಕಲ್ಲು ಸುಮಾರು ೩ ಅಡಿ ಎತ್ತರ, ೪ ಅಡಿ ಅಗಲವಾಗಿದೆ. ಆದರೆ ಕೆಳಭಾಗಕ್ಕೆ ಹೆಚ್ಚಾಗಿ ಹೂಳಲ್ಪಟ್ಟಿದ್ದಾರೆ. ಈ ಕಲ್ಲಿನಲ್ಲಿ ಚೌಕಾಕಾರವಾಗಿ ಕಂಭವನ್ನು ಕೆತ್ತಿದ್ದು ಬಲಗೈನ ತೋಳು ಮುಂದಕ್ಕೆ ಚಾಚಿ ಮೇಲಕ್ಕೆ ಎತ್ತಿದೆ. ಇದೂ ಸಹ ಚೌಕಾಕಾರವಾಗಿ ಕೆತ್ತಲಾಗಿದೆ. ತೋಳಿಗೆ ಬಂದಿಯನ್ನು, ಕೈಗೆ ಬಳೆಗಳನ್ನು ಹಾಕಿರುವುದನ್ನು ಹಾಗೂ ಕೈಬೆರಳುಗಳನ್ನು ಚಿತ್ರಿಸಿದ್ದಾರೆ. ಕೈ ಕೆಳಗೆ ಗಂಡ ಮತ್ತು ಹೆಂಡತಿಯ ಚಿತ್ರಗಳಿವೆ. ಸ್ತಂಭದ ಮೇಲ್ಭಾಗದಲ್ಲಿ ಸ್ತ್ರೀ ಮುಖವನ್ನು ಚಿತ್ರಿಸಿದ್ದಾನೆ. ಸ್ತ್ರೀಯು ತಲೆಗೆ ಹೂವಿನ ದಂಡೆಯನ್ನು ಮುಡಿದಿದ್ದಾಳೆ. ತುರುಬನ್ನು ಇಡಿಯಾಗಿ ಕಟ್ಟಿರುವಂತೆ ಚಿತ್ರಿಸಲಾಗಿದೆ. ಸ್ತಂಭದ ಮೇಲ್ಭಾಗವು ಹೆಣ್ಣಿನ ಮುಖವನ್ನು ಹೋಲುವಂತೆ ಶಿಲ್ಪಲಕ್ಷಣವನ್ನು ಹೊಂದಿದೆ. ಶಿಲ್ಪದ ಮೇಲೆ ಸೂರ್ಯ ಮತ್ತು ಚಂದ್ರನನ್ನು ಕೆತ್ತಲಾಗಿದೆ. ಈ ಮಾಸ್ತಿಕಲ್ಲು ಒಂದು ಅಪರೂಪವಾದುದು ಎಂದು ಹೇಳಬಹುದು. ಏಕೆಂದರೆ ಇಂತಹ ಲಕ್ಷಣಗಳುಳ್ಳ ಮಾಸ್ತಿಕಲ್ಲುಗಳು ದೊರಕುವುದು ವಿರಳ.

ಉಪಸಂಹಾರ

ಕ್ರಿ.ಶ. ೯ ಮತ್ತು ೧೦ನೆಯ ಶತಮಾನದಲ್ಲಿ ಚೋಳರು ಇಂದಿನ ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳನ್ನೊಳಗೊಂಡಂತೆ ಆಳ್ವಿಕೆಯನ್ನು ನಡೆಸುತ್ತಿದ್ದರು. ಹಲವು ಬಾರಿ ಚೋಳರಿಗೂ ಮತ್ತು ಹೊಯ್ಸಳರಿಗೂ ಯುದ್ಧಗಳು ನಡೆದಿವೆ. ತೊಣ್ಣೂರು ಹೊಯ್ಸಳರ ಕಾಲದಲ್ಲಿ ಉಪರಾಜಧಾನಿಯಾಗಿತ್ತು. ಆದುದರಿಂದ ಇಲ್ಲಿ ಅನೇಕ ಬಾರಿ ಯುದ್ಧಗಳು ನಡೆದಿದ್ದುದರಿಂದ, ಇಲ್ಲಿ ಇಷ್ಟೊಂದು ವೀರಗಲ್ಲು‑ಮಾಸ್ತಿಗಲ್ಲುಗಳು ದೊರೆತಿವೆ ಎಂದು ಹೇಳಬಹುದು. ಇದು ಒಂದು ಯುದ್ಧಭೂಮಿಯಾಗಿತ್ತೆಂದು ಹೇಳಬಹುದು. ಇಲ್ಲಿ ದೊರೆತಿರುವ ವೀರಗಲ್ಲುಗಳು ಒಂದೊಂದು ಸಹ ತನ್ನದೇ ಆದ ಇತಿಹಾಸವನ್ನು ಗರ್ಭೀಕರಿಸಿಕೊಂಡಿವೆ. ಬಲಿದಾನದ ಕಲ್ಲಂತೂ ಬಹಳ ವಿರಳವಾದುದು. ಇಲ್ಲಿ ದೊರೆತಿರುವ ಎಲ್ಲಾ ಮಾಸ್ತಿಕಲ್ಲುಗಳು ಒಂದಕ್ಕೊಂದು ಭಿನ್ನವಾಗಿವೆ. ವಿಷಯ ಒಂದೇ ಆಗಿದ್ದರೂ, ಶಿಲ್ಪಿಯು ತನ್ನ ಕಲ್ಪನೆಯಲ್ಲಿ ಅಂದಿನ ಘಟನೆಗಳಿಗನುಗುಣವಾಗಿ ಚಿತ್ರಿಸಿದ್ದಾನೆ. ಒಂದೊಂದು ಮಾಸ್ತಿಕಲ್ಲುಗಳು ಸಹ ಭಿನ್ನವಾಗಿವೆ. ಈ ಎಲ್ಲಾ ಮಾಸ್ತಿಕಲ್ಲುಗಳು ಮರಣದಲ್ಲಿನ ಪತಿಯನ್ನು ಹಿಂಬಾಲಿಸಿ ನಡೆದ ಸತಿಯರು, ಧರ್ಮಕ್ಕಾಗಿ ದೇಹವನ್ನಿತ್ತ ಮಹಾಸಾಧ್ವಿಗಳಾಗಿದ್ದಾರೆ. ಇವರ ಸಾರ್ಥಕ ಬದುಕು ಮತ್ತು ಜೀವನವನ್ನು ಈ ಸ್ಮಾರಕ ಶಿಲೆಗಳು ಇಂದಿಗೂ ಸಾರುತ್ತಾ ನಿಂತಿವೆ.


[1] ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಂಪುಟ‑೧, ಪುಟ ೧

[2] ಆರ್. ಶೇಷ ಶಾಸ್ತ್ರಿ, ಕರ್ನಾಟಕದ ವೀರಗಲ್ಲುಗಳು, ಪುಟ ೪

[3] ಡಿ.ವಿ. ಪರಮಶಿವಮೂರ್ತಿ, ಕನ್ನಡ ಶಾಸನಶಿಲ್ಪ, ಪುಟ ೧೨

[4] ಆರ್. ಶೇಷ ಶಾಸ್ತ್ರಿ, ಕರ್ನಾಟಕದ ವೀರಗಲ್ಲುಗಳು, ಪುಟ ೪

[5] ಎಸ್. ಶೆಟ್ಟರ್, ಮೆಮೋರಿಯಲ್ ಸ್ಟೋನ್, ಪ್ರಸ್ತಾವನೆ

[6] ಬಿ.ಎಸ್. ಶೇಠೆ, ಕರ್ನಾಟಕದಲ್ಲಿ ಸತಿ ಪದ್ಧತಿ, ಪುಟ ೨೫೯

[7] ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಂಪುಟ‑೧, ಪುಟ ೧

[8] ಅದೇ