ನಾಡಿನ ಸಮಗ್ರ ಇತಿಹಾಸವನ್ನು ಅರಿಯುವಲ್ಲಿ ಪ್ರಾದೇಶಿಕ ಇತಿಹಾಸದ ಅಧ್ಯಯನ ಅತ್ಯವಶ್ಯಕವಾಗಿದ್ದು ತಪ್ಪಿರುವ ಕೊಂಡಿಗಳನ್ನು ಬೆಸೆಯುವಲ್ಲಿ ನೆರವಾಗುತ್ತದೆ. ಸಾಮ್ರಾಜ್ಯಗಳ ಏರುಪೇರುಗಳನ್ನು ಗುರುತಿಸುವುದರ ಜೊತೆಗೆ ಸ್ಥಳೀಯ ಇತಿಹಾಸದ ಮಹತ್ವವನ್ನೂ ಮನವರಿಕೆ ಮಾಡಿಕೊಳ್ಳಲು ಸಹಕರಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿನ ಪ್ರಾದೇಶಿಕ ಇತಿಹಾಸದ ಅಧ್ಯಯನವು ಮೇಲ್ನೋಟಕ್ಕೆ ಸಮಾಧಾನವೆನಿಸಿದರೂ, ಒಳಹೊಕ್ಕಾಗ ಆಗಬೇಕಾಗಿರುವ ಕೆಲಸಗಳ ಅಗಾಧತೆ ಎಂತಹವರನ್ನೂ ಗಾಬರಿಗೊಳಿಸುತ್ತದೆ. ಪ್ರಮುಖ ರಾಜಮನೆತನಗಳ ಇತಿಹಾಸದ ಜೊತೆಗೆ ಪ್ರಾಂತೀಯ ಅರಸರುಗಳ ಅಧ್ಯಯನವು ನಡೆದಿದೆಯಾದರೂ, ಹೆಚ್ಚಿನ ಸಾಮಂತರಸರ  ಇತಿಹಾಸವಿನ್ನೂ ಕಗ್ಗತ್ತಲಿನಲ್ಲೇ ಉಳಿದಿದೆ. ಅಂತಹವರಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದ ಪಾಳೇಗಾರರು, ಆರಣಿಯ ಅರಸರು, ಕೋಲಾರ ಜಿಲ್ಲೆಯ ತಾಡೆಗೊಳ್ಳದ ಅರಸರು, ಕರಾವಳಿ ಭಾಗದ ಅಸಂಖ್ಯಾತ ಹೆಗ್ಗಡೆಗಳು ಮುಂತಾದವರನ್ನು ಇಲ್ಲಿ ಹೆಸರಿಸಬಹುದಾಗಿದೆ. ನಾಡಿನ ಪ್ರಮುಖ ಸ್ಥಳಗಳ, ಇತಿಹಾಸ ಕೇಂದ್ರಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿದೆಯಾದರೂ ಇನ್ನು ಅಸಂಖ್ಯಾತ ಚಾರಿತ್ರಿಕ ಕೇಂದ್ರಗಳು ಎಲೆಮರೆಕಾಯಾಗಿಯೇ ಉಳಿದಿವೆ. ಇಂತಹ ಸಂದರ್ಭದಲ್ಲಿ ನಾಡಿನ ಇತಿಹಾಸವನ್ನು ಕೆಳಸ್ತರದ ಗ್ರಾಮೀಣ ನೆಲೆಯಿಂದ ಪುನಾರಚಿಸುವಂತಹ ಸಂದಿಗ್ಧ ಸ್ಥಿತಿಯಲ್ಲಿ ಇಂದು ನಾವಿದ್ದೇವೆ. ವ್ಯಕ್ತಿ ಕುಟಂಬಗಳಿಗೆ ಇತಿಹಾಸವಿರುವಂತೆ, ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸವಿದ್ದು ಅದನ್ನು ಅರಿತು ಗ್ರಾಮದ ಸಮಗ್ರ ಚಿತ್ರವನ್ನು ನೀಡುವ ಗ್ರಾಮಕೋಶಗಳ ರಚನೆಯತ್ತ ಇತಿಹಾಸಕಾರರು ಗಮನಹರಿಸಬೇಕಾಗಿದೆ. ಅಂತರ್ ಶಿಸ್ತೀಯ ಹಾಗೂ ಬಹುಶಾಸ್ತ್ರೀಯ ಅಧ್ಯಯನಗಳಿಂದ ಚಾರಿತ್ರಿಕ ಕೇಂದ್ರಗಳನ್ನು ವಿಭಿನ್ನ ದೃಷ್ಠಿಕೋನದಿಂದ ನೋಡುವ ಯತ್ನಗಳೂ ನಡೆದಿದೆ.

ಪ್ರಾಚೀನ ಶಾಸನಗಳಲ್ಲಿ ‘ತೊಂಡನೂರು’, ‘ತೊಣ್ಡನೂರು’, ‘ಯಾದವಪುರ’ ಎಂದೆಲ್ಲಾ ಉಲ್ಲೇಖಿತಗೊಂಡಿರುವ, ಕೆರೆತೊಣ್ಣೂರು ಎಂದೂ ಚಿರಪರಿಚಿತವಾಗಿರುವ ತೊಣ್ಣೂರು, ಪಾಂಡವಪುರ ತಾಲ್ಲೂಕಿನಲ್ಲಿರುವ ಚಾರಿತ್ರಿಕ ಮಹತ್ವದ ಸ್ಥಳ. ಶ್ರೀವೈಷ್ಣವ ಯತಿ, ರಾಮಾನುಜರಿಗೆ ಆಶ್ರಯ ನೀಡಿದ ಸ್ಥಳ ಎಂಬ ಖ್ಯಾತಿ ಪಡೆದಿರುವ ಸ್ಥಳ. ತೊಣ್ಣೂರಿನ ಇತಿಹಾಸವನ್ನು ಶಿಲಾಯುಗ ಸಂಸ್ಕೃತಿಯಿಂದ ಗಂಗ, ಹೊಯ್ಸಳ, ವಿಜಯನಗರ, ನಾಗಮಂಗಲ, ಹೈದರ್‑ಟಿಪ್ಪು ಹಾಗೂ ಮೈಸೂರು ಅರಸರ ಕಾಲದವರೆವಿಗೂ ನಿರಂತರವಾಗಿ ಗುರುತಿಸಬಹುದಾಗಿದೆ. ಅದರಲ್ಲೂ ತೊಣ್ಣೂರಿನ ಇತಿಹಾಸ ವಿಶೇಷವಾಗಿ ಹೊಯ್ಸಳರ ಆಡಳಿತಾವಧಿಯಲ್ಲಿ ಹೆಚ್ಚು ದೈದೀಪ್ಯಮಾನವಾಗಿದ್ದು, ಅವರ ಕಾಲದ ಶಾಸನಗಳು ಈವರೆಗೆ ಅಧಿಕ ಸಂಖ್ಯೆಯಲ್ಲಿ ತೊಣ್ಣೂರಿನಲ್ಲಿ ಲಭಿಸಿವೆ. ಈ ಗ್ರಾಮದ ಇತಿಹಾಸವನ್ನು ಅರಿಯಲು ಶಾಸನಾಧಾರಗಳನ್ನೇ ಪ್ರಧಾನವಾಗಿ ಅವಲಂಬಿಸಬೇಕಾಗಿದ್ದು, ‘ಕರಿಬಂಟನ ಕಾಳಗ’ ಜನಪದ ಕಾವ್ಯವೂ ಸೇರಿದಂತೆ ಸಾಹಿತ್ಯಿಕ ಆಧಾರಗಳು ಸೀಮಿತ ವ್ಯಾಪ್ತಿಯನ್ನು ಹೊಂದಿವೆ. ಚಾರಿತ್ರಿಕ ದಾಖಲೆಗಳು ನೀಡಲಾಗದ ವಿವರವನ್ನು ಸ್ಥಳೀಯ ಐತಿಹ್ಯ, ಜನಪದೀಯ ನಂಬಿಕೆ, ಆಚರಣೆ ಹಾಗೂ ಮೌಖಿಕ ಪರಂಪರೆ(oral history)ಗಳು ಒದಗಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ತೊಣ್ಣೂರಿನ ಬಳಿಯಿರುವ ಪದ್ಮಗಿರಿ ಬೆಟ್ಟದಲ್ಲಿ ನಿಸರ್ಗ ಕಲ್ಲಾಸರೆ, ಗವಿಗಳಿದ್ದು, ಸಮೀಪದಲ್ಲೇ ಹರಿದಿರುವ (ತೊಂಡೆ) ಹಳ್ಳ(ಯಾದವನದಿ)ದಿಂದಾಗಿ ಶಿಲಾಯುಗ ಮಾನವರ ವಸತಿಗೆ ಸೂಕ್ತ ಪರಿಸರವನ್ನು ಅದು ಹೊಂದಿದ್ದು, ನೆರೆಯ ಮೇಲುಕೋಟೆ ಕುಂತಿಬೆಟ್ಟ, ಸಣಬ ಮುಂತಾದೆಡೆಗಳಲ್ಲೂ ಶಿಲಾಯುಗ ಸಂಸ್ಕೃತಿಯ ಅವಶೇಷಗಳು ಪತ್ತೆಯಾಗಿರುವುದು ಉಲ್ಲೇಖಾರ್ಹ.

[1] ಇದರಿಂದ ನೂತನ ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲಕ್ಕಾಗಲೇ ತೊಣ್ಣೂರು, ಮಾನವವಸತಿ ನೆಲೆಯಾಗಿ ರೂಪುಗೊಂಡು, ಈ ಪರಿಸರದಲ್ಲಿ ಕೃಷಿಯು ಆರಂಭಗೊಂಡು, ಬಳಿಯಲ್ಲೇ ಹರಿದಿದ್ದ ಹಳ್ಳಕ್ಕೆ ಸಣ್ಣ ಒಡ್ಡನ್ನು ನಿರ್ಮಿಸಿ, ಕಿರು ಕೆರೆಯೊಂದನ್ನು ಅವರು ರೂಪಿಸಿಕೊಂಡಿದ್ದಿರಬಹುದೆಂದು ಊಹಿಸಬಹುದಾಗಿದೆ.

ಈ ಊರ ಹೆಸರಾದ ‘ತೊಣ್ಣೂರು’ ಮೂಲತಃ ತೊಂಡನೂರು ರೂಪದಲ್ಲೇ ಲಭಿಸುತ್ತಿದ್ದು, ‘ತೊಂಡ’ ಎಂದರೆ ಭಕ್ತ ಎಂಬ ಸೌಮ್ಯ ಅರ್ಥದೊಂದಿಗೆ ‘ಒರಟ, ವಡ್ಡ’ ಎಂಬ ಅರ್ಥವನ್ನು ಹೊಂದಿದೆ.[2] ‘ತೊಂಡನೂರು’ ಪದ ನಿಷ್ಪತ್ತಿಯನ್ನು ವಿವೇಚಿಸಿದಾಗ, ತೊಂಡೆ ಎಂಬ ಜಾತಿಯ ಸಸ್ಯದಿಂದ ಸಮೃದ್ಧವಾಗಿದ್ದ ಈ ಹಳ್ಳಕ್ಕೆ ತೊಂಡೆಹಳ್ಳ ಎಂಬ ಹೆಸರು ರೂಢಿಗೆ ಬಂದು ತೊಂಡೆಹಳ್ಳ(ತೊಂಡಾಳ)ದ ಮೇಲೆ ವಸತಿನೆಲೆ ರೂಪುಗೊಂಡಾಗ ‘ತೊಂಡೆಹಳ್ಳಿ’ (ತೊಂಡಳಳ್ಳಿ) ಎಂಬ ಹೆಸರು ಆ ಗ್ರಾಮಕ್ಕೆ ಬಂದು, ಮುಂದೆ ಅದು ಬೆಳೆದು ಪಟ್ಟಣವಾದಾಗ ತೊಂಡಳೂರು ಎಂಬ ರೂಪ ರೂಢಿಗೆ ಬಂದು, ಕ್ರಮೇಣ ಅದೇ ತೊಂಡನೂರು ಎಂದು ರೂಪಾಂತರ ಗೊಂಡಿರಬೇಕು. (“ಊರು” ಪದವು ಸಂಸ್ಕೃತದ ‘ಪುರ’>ಹುರ>ವೂರು ಉಚ್ಛಾರದಲ್ಲಿ ಳ/ಲ ಅಕ್ಷರಗಳು ಣ/ನ ರೂಪ ಪಡೆದು ಬರಹದಲ್ಲೂ ಚಾಲ್ತಿಗೊಳ್ಳುತ್ತವೆ. ಉದಾ. ಪಲ/ಪಣ. ಪಲ್ಲವ ಶಾಸನಗಳಲ್ಲಿ ತೊಂಡೆಮಂಡಲದ ಉಲ್ಲೇಖವಿದ್ದರೆ, ತೊಣ್ಣೂರಿನ ಶಾಸನ[3]ವೊಂದರಲ್ಲಿ ತೊಂಡಾಚಾರಿಯ ಉಲ್ಲೇಖವಿದ್ದು, ಪಾಂಡವಪುರದ ಕ್ರಿ.ಶ. ೧೮೪೮ರ ಶಾಸನದಲ್ಲಿ ‘ತೊಂಡಮಂಡಲಾತ್ತಾನ್’[4] ಎಂಬ ಪದ ಪ್ರಯೋಗವಿದೆ. ಶ್ರೀವೈಷ್ಣವ ಆಳ್ವಾರುಗಳಲ್ಲಿ ‘ತೊಂಡರಡಿಪ್ಪೊಡಿಯಾಳ್ವಾರು’[5] ಎಂಬ ಆಳ್ವಾರರು ಇದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹೀಗೆ ಪೂರ್ವೇತಿಹಾಸ ಕಾಲದಲ್ಲಿ ನಿಸರ್ಗ ನೆಲೆಯಲ್ಲಿ ರೂಪುಗೊಂಡ ಈ ಊರು, “ತೊಂಡೆ” ಸಸ್ಯದಿಂದ ಕೂಡಿದ್ದ, ಹಳ್ಳದ ದಂಡೆಯ ಮೇಲೆ ತಲೆ ಎತ್ತಿದ್ದರಿಂದ ಅದರ ಹೆಸರನ್ನು ನಿಸರ್ಗವಾಚಿ ಹಿನ್ನೆಲೆಯಲ್ಲೇ ಗ್ರಹಿಸಬೇಕಾಗಿದೆ. ಚಾಮರಾಜನಗರ ಹಾಗೂ ಸವಣೂರು ತಾಲ್ಲೂಕುಗಳಲ್ಲಿ ಇದೇ ಹೆಸರಿನ ಗ್ರಾಮಗಳಿದ್ದು, ಅಲ್ಪಸ್ವಲ್ಪ ವ್ಯತ್ಯಾಸದೊಂದಿಗೆ ಇದೇ ಹೆಸರನ್ನು ಹೊಂದಿರುವ ಇನ್ನೂ ಹದಿನೆಂಟು ಗ್ರಾಮಗಳು ರಾಜ್ಯದಲ್ಲಿವೆ.[6]

ನಾಡಿನ ಪೂರ್ವೇತಿಹಾಸ ಕಾಲದೀಚೆಗಿನ ಇತಿಹಾಸದಲ್ಲೂ ಹಲವಾರು ಏಳು‑ಬೀಳುಗಳು ಕಂಡುಬಂದು, ನಾಲ್ಕನೆಯ ಶತಮಾನದಲ್ಲಿ ತಲಕಾಡಿನ ಗಂಗರು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಂಡು ಈ ಭಾಗದಲ್ಲಿ ಪ್ರಾಬಲ್ಯಗಳಿಸಿದ ಅಂಶವನ್ನು ಈ ತಾಲ್ಲೂಕಿನ ಶಾಸನಗಳೂ ಸೇರಿದಂತೆ ಇತರೆಡೆಯ ಶಾಸನಗಳು ವ್ಯಕ್ತಪಡಿಸುತ್ತವೆ. ತೊಣ್ಣೂರಿನಲ್ಲಿ ಲಭಿಸಿರುವ ಏಕೈಕ ಗಂಗಶಾಸನ,[7] ಸುಮಾರು ೯ನೆಯ ಶತಮಾನಕ್ಕೆ ಸೇರಿದ್ದು, ಅದರ ಪಾಠವಿನ್ನೂ ಪ್ರಕಟವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಆಗ ತೊಣ್ಣೂರು ಒಂದು ಸಣ್ಣ ಗ್ರಾಮವಾಗಿತ್ತೆಂದು ತರ್ಕಿಸಬಹುದಾಗಿದೆ. ನೆರೆಯ ಮೇಲುಕೋಟೆ[8]ಯಲ್ಲಿರುವ ಗುಹಾಂತರ ಆಲಯಗಳನ್ನು ವಿದ್ವಾಂಸರು ಗಂಗರ ಕಾಲಕ್ಕೆ ಗುರುತಿಸುತ್ತಾರೆ. ಹಾಗೆಯೇ ಅಲ್ಲಿರುವ ಕೆಲವು ಕಂಬಗಳೂ ಗಂಗಶಿಲ್ಪ ಲಕ್ಷಣವನ್ನು ಹೊಂದಿವೆ ಎಂಬ ಅಭಿಪ್ರಾಯವಿದೆ. ಇದೇ ತಾಲೂಕಿನ ನೆರೆಯ ಚಿನಕುರಳಿ,[9] ಬೇವಿನಕುಪ್ಪೆ,[10] ಕ್ಯಾತನಹಳ್ಳಿ[11]ಗಳಲ್ಲೂ ಗಂಗಶಾಸನಗಳು ಪತ್ತೆಯಾಗಿವೆ.

ಗಂಗರನ್ನು ಸೋಲಿಸಿ ಗಂಗವಾಡಿಯನ್ನು ವಶಪಡಿಸಿಕೊಂಡ ಚೋಳರ ಆಳ್ವಿಕೆಯಲ್ಲಿ ತೊಂಡೆಹಳ್ಳಿ>ತೊಂಡನೂರು ಆಗಿ ರೂಪಾಂತರಗೊಂಡಿರುವ ಸಾಧ್ಯತೆಗಳಿವೆಯಾದರೂ ಅದನ್ನು ಪುಷ್ಟೀಕರಿಸಲು ಬಲಿಷ್ಟ ಆಧಾರಗಳಿಲ್ಲ. ಆದರೂ ತೊಣ್ಣೂರಿನಲ್ಲಿ ಕಂಡುಬರುವ ಹೊಯ್ಸಳ ದೇವಾಲಯಗಳು ಚೋಳಶೈಲಿಯಲ್ಲಿರುವ ಹಿನ್ನೆಲೆಯಲ್ಲಿ, ತೊಣ್ಣೂರಿನಲ್ಲಿ ನೆಲೆಯೂರಿರ ಬಹುದಾದ ಚೋಳರ ಕಾಲದ ತಮಿಳು ಕುಟುಂಬಗಳ ಬಗ್ಗೆ ವಿವೇಚಿಸುವ ಅಗತ್ಯವಿದೆ. ತೊಣ್ಣೂರಿನಲ್ಲಿ ಈ ವರೆಗೆ ಪತ್ತೆಯಾಗಿರುವ ಸುಮಾರು ೭೦ ಶಾಸನಗಳಲ್ಲಿ ಅರ್ಧಕ್ಕೂ ಹೆಚ್ಚು (೪೩) ಶಾಸನಗಳು ತಮಿಳು ಭಾಷೆಯಲ್ಲಿರುವುದು ಉಲ್ಲೇಖಾರ್ಹವಾದರೂ ಅವುಗಳಲ್ಲೊಂದೂ ಚೋಳರ ಕಾಲಕ್ಕೆ ಸೇರಿದವಾಗಿಲ್ಲ ಎಂಬುದು ಅಷ್ಟೇ ಗಮನಾರ್ಹ, ಆದರೂ ಇಲ್ಲಿಯ ಲಕ್ಷ್ಮೀನಾರಾಯಣ, ನರಸಿಂಹ ದೇವಾಲಯ, ಕೃಷ್ಣದೇವಾಲಯ, ಕೈಲಾಸೇಶ್ವರ ದೇವಾಲಯಗಳು ತಮಿಳುನಾಡು ಮೂಲದ ದಾನಿಗಳಿಂದ ನಿರ್ಮಾಣಗೊಂಡಿರುವ ಅಂಶವನ್ನು ಮರೆಯುವಂತಿಲ್ಲ. ಇದಕ್ಕೆ ಪೂರಕವಾಗಿ ಇಲ್ಲಿಯ ದೇವಾಲಯಗಳಿಗೆ ಇಂದಿಗೂ ಭಕ್ತರು ದೂರದ ತಮಿಳುನಾಡು ಹಾಗೂ ಆಂಧ್ರದ ವಿವಿಧ ಭಾಗಗಳಿಂದ ಬಂದು ಹೋಗುವ ಕ್ರಿಯೆ ಮುಂದುವರಿದಿದೆ.

ತೊಣ್ಣೂರು, ಹನ್ನೊಂದನೆಯ ಶತಮಾನದ ಅಂತ್ಯಕ್ಕಾಗಲೇ ಪ್ರಮುಖ ಶ್ರೀವೈಷ್ಣವ ಕ್ಷೇತ್ರವಾಗಿ ರೂಪಿತಗೊಂಡಿರಬಹುದಾದರೂ, ಹೊಯ್ಸಳ ವಿಷ್ಣುವರ್ಧನನೊಂದಿಗೆ ಅದರ ವೈಭವೋಪೇತ ಇತಿಹಾಸ ಆರಂಭಗೊಳ್ಳುತ್ತಿದ್ದು, ಶ್ರೀವೈಷ್ಣವ ಯತಿ ರಾಮಾನುಜರ ಆಗಮನದಿಂದಾಗಿ ಪ್ರಜ್ವಲಿಸಲಾರಂಭಿಸಿತೆಂದರೆ ತಪ್ಪಾಗಲಾರದು. ಹೊಯ್ಸಳರ ಆಳ್ವಿಕೆಯಲ್ಲಿ ತೊಣ್ಣೂರು, ಪ್ರಮುಖ ಶ್ರೀವೈಷ್ಣವ ಕೇಂದ್ರವಾಗಿ ರೂಪಿತಗೊಂಡು, ವಿಷ್ಣುವರ್ಧನ, ಒಂದನೆಯ ನರಸಿಂಹ, ಇಮ್ಮಡಿ ಬಲ್ಲಾಳ, ಇಮ್ಮಡಿ ನರಸಿಂಹ, ಹಾಗೂ ಮುಮ್ಮಡಿ ನರಸಿಂಹರ ಆಳ್ವಿಕೆಯಲ್ಲಿ ಸಮೃದ್ಧ ರಾಜಾಶ್ರಯವನ್ನು ಪಡೆದಿತ್ತು. ಧಾರ್ಮಿಕ ಕೇಂದ್ರವಾಗಿ, ಸಾಂಸ್ಕೃತಿಕ ನೆಲೆಯಾಗಿ ದಕ್ಷಿಣ ಭಾರತದುದ್ದಗಲಕ್ಕೂ ಅದರ ಕೀರ್ತಿ ಹಬ್ಬಿತ್ತು.

ಹೊಯ್ಸಳ ವಿಷ್ಣುವರ್ಧನ (ಕ್ರಿ.ಶ. ೧೧೦೪‑ಕ್ರಿ.ಶ. ೧೧೫೨) ಹಾಗೂ ಮುಮ್ಮಡಿ ಬಲ್ಲಾಳ(ಕ್ರಿ.ಶ. ೧೨೯೧‑ ಕ್ರಿ.ಶ. ೧೩೪೨)ರ ಆಳ್ವಿಕೆಯಲ್ಲಿ ತೊಣ್ಣೂರು ಅವರ ಉಪರಾಜಧಾನಿ ಯಾಗಿತ್ತೆಂದೂ ಹೇಳಲಾಗುತ್ತದೆ.[12] ಆದರೆ ತೊಣ್ಣೂರಿನಲ್ಲಿ ಈವರೆಗೆ ಲಭಿಸಿರುವ ಯಾವುದೇ ಹೊಯ್ಸಳ ಶಾಸನಗಳಲ್ಲಿ, ಅದನ್ನು ರಾಜಧಾನಿ ಎಂದು ಕರೆದಿರದೇ, ಕೇವಲ ಅಗ್ರಹಾರ, ಹಿರಿಯ ಅಗ್ರಹಾರ, ಅನಾದಿ ಅಗ್ರಹಾರ, ಯಾದವ ನಾರಾಯಣ ಚತುರ್ವೇದಿ ಮಂಗಲ, ಯಾದವಪುರ ಎಂಬ ವಿಶೇಷಣಗಳನ್ನಷ್ಟೇ  ಅದಕ್ಕೆ ನೀಡಲಾಗಿದೆ. ಮಿಗಿಲಾಗಿ ತೊಣ್ಣೂರಿನ ಹೆಚ್ಚಿನ ಶಾಸನಗಳು ದೋರಸಮುದ್ರವನ್ನೇ ರಾಜಧಾನಿ ಎಂದು ಮೇಲಿಂದ ಮೇಲೆ ಹೆಸರಿಸಿರುವುದು ಗಮನಾರ್ಹ. ಆದರೂ ಈ ಸಂಬಂಧ ವಿದ್ವಾಂಸರು ಉಲ್ಲೇಖಿಸುವ ಚಿಕ್ಕಮಗಳೂರು ತಾಲ್ಲೂಕಿನ ಒಂದು (ಕ್ರಿ.ಶ. ೧೧೨೫) ಶಾಸ[13] ಹಾಗೂ ಚಾಮುಂಡಿಬೆಟ್ಟದ ಕ್ರಿ.ಶ. ೧೧೨೮ರ ಶಾಸನಗಳಲ್ಲಿ[14] ಬರುವ “ಯಾದವಪುರ”ವನ್ನು ತೊಣ್ಣೂರಿನೊಂದಿಗೆ ಸಮೀಕರಿಸಲು ಮುಂದಾಗುವ ವಿದ್ವಾಂಸರುಗಳ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಆ ಶಾಸನಗಳಲ್ಲಿ ಪೂರಕ ಮಾಹಿತಿ ಇಲ್ಲ. ಆದರೆ ಅದೇ ಸಂದರ್ಭದಲ್ಲಿ ವಿಷ್ಣುವರ್ಧನನ ಕಾಲಕ್ಕೆ ಸೇರಿದ ಇದೇ ತಾಲ್ಲೂಕಿನ ಶಂಭೂನಹಳ್ಳಿ[15] ಹಾಗೂ ಹೊಸಕೋಟೆಯ[16] ತೇದಿರಹಿತ ಶಾಸನಗಳಲ್ಲೂ ‘ಯಾದವಪುರ’ದ ಉಲ್ಲೇಖವಿದ್ದು, ಇದರಿಂದ ಹೊಸಕೋಟೆಗೆ ‘ಯಾದವಪುರ’ ಎಂಬ ಹೆಸರಿದ್ದ ಅಂಶ ಸೃಷ್ಟವಾಗುತ್ತಿದ್ದು, ಚಾಮುಂಡಿಬೆಟ್ಟದ ಶಾಸನದಲ್ಲಿ ಉಕ್ತವಾಗಿರುವ ಯಾದವಪುರ ಇದೇ ಆಗಿರಬೇಕೆಂದು ಅನುಮಾನಿಸಲು ಅವಕಾಶವಿದೆ. ಇವೆಲ್ಲದರ ನಡುವೆಯೂ ಈ ತೊಣ್ಣೂರೇ, ಶಾಸನೋಕ್ತ ‘ಯಾದವಪುರ’ ಎಂದು ಒಪ್ಪಿದರೆ, ಆಗ ರಾಮಾನುಜಚಾರ್ಯರು, ಕ್ರಿ.ಶ. ೧೧೨೮ರವರೆಗೂ ತೊಣ್ಣೂರಿನಲ್ಲಿದ್ದರೆಂದು ಒಪ್ಪಬೇಕಾಗುತ್ತದೆ. ಹಾಗೆ ಒಪ್ಪಿದರೆ ರಾಮಾನುಜರ ಜೀವಿತಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಗೊಂದಲಗಳು ಉದ್ಭವಿಸುತ್ತವೆ. ಹಾಗೆಯೇ ಲಕ್ಷ್ಮೀನಾರಾಯಣ ಗುಡಿಯ ಹಿಂಭಾಗದಲ್ಲಿ ಹೊಯ್ಸಳರ ಕಾಲದ ಅರಮನೆ ಕಟ್ಟಡದ ಅವಶೇಷಗಳಿವೆ ಎಂದು ಹೇಳಲಾಗುತ್ತಾದರೂ ಇಂದು ಏನೇನೂ ಉಳಿದಿಲ್ಲ.

ತೊಣ್ಣೂರು, ವಿಷ್ಣುವರ್ಧನನ ಪಾಲನೆಗೆ ಒಳಪಟ್ಟಿದ್ದು, ರಾಮಾನುಜಾಚಾರ್ಯರ ಪಾದ ಸ್ಪರ್ಶದಿಂದಾಗಿ ಪಾವನವಾಯಿತೆಂದು ಕೃಷ್ಣದೇವಾಲಯದ ಕ್ರಿ.ಶ. ೧೭೨೨ರ ತಾಮ್ರಶಾಸನದಲ್ಲಿ ದಾಖಲಿಸಲಾಗಿದೆ. ಆದರೆ ರಾಮಾನುಜರ ಸಮಕಾಲೀನ ಹೊಯ್ಸಳ ಶಾಸನಗಳಲ್ಲಿ ಅವರ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಉಲ್ಲೇಖ ಲಭಿಸದಿರುವುದು ಅನೇಕ ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ. ರಾಮಾನುಜರು ತೊಣ್ಣೂರಿಗೆ ಬಂದಿದ್ದರೆಂಬ ಅಂಶವನ್ನೇ ಅನುಮಾನದಿಂದ ನೋಡಬೇಕೆಂದೆನಿಸುತ್ತದೆ. ಆದರೆ ಸುಮಾರು ೧೨ನೆಯ ಶತಮಾನಕ್ಕೆ ಸೇರಿದ ಕೃಷ್ಣನ ಗುಡಿಯ ಶಾಸನದಲ್ಲಿ[17] ಇಳೈಯಾಳ್ವನ್(ರಾಮಾನುಜ)ರ ಶಿಷ್ಯನಾದ ತಿರುವರಂಗದಾಸನು, ಕೂತ್ತಾಂಡಿ ವಿಣ್ನಾಗಾರದ ವಿರ‍್ತುರುಂದ ಪೆರುಮಾಳಿಗೆ ದತ್ತಿ ಬಿಟ್ಟ ಅಂಶ ದಾಖಲಾಗಿದೆ. ಇದು ಸುಮಾರು ಕ್ರಿ.ಶ. ೧೧೭೫ಕ್ಕೆ ಸೇರಿದ ಶಾಸನವಾಗಿದ್ದು, ಇಲ್ಲಿ ರಾಮಾನುಜರು ಇಳೈಯಾಳ್ವನ್ ಎಂದು ವಿಶೇಷಣಾಂಕಿತರಾಗಿ ಉಲ್ಲೇಖಿತಗೊಂಡಿದ್ದಾರೆ. ತೊಣ್ಣೂರಿನ ಲಕ್ಷ್ಮೀನಾರಾಯಣ ದೇವಾಲಯದಲ್ಲಿರುವ ಇನ್ನೊಂದು ಶಾಸನ[18] ಸುಮಾರು ೧೪ನೆಯ ಶತಮಾನಕ್ಕೆ ಸೇರಿದ್ದು, ಅದರಲ್ಲಿ ರಾಮಾನುಜ ಮಠದಲ್ಲಿದ್ದ ೪೨ ವಟುಗಳ ಜೀವಿತಕ್ಕೆಂದು ದತ್ತಿಬಿಟ್ಟಿದ್ದರ ಪ್ರಸ್ತಾಪವಿದೆ. ನೆರೆಯ ಮೇಲುಕೋಟೆಯ ಶಾಸನಗಳಲ್ಲಿ ಎಂಬೆರುಮಾನ್,[19] ರಾಮಾನುಜಾಚಾರ್ಯ ಮುಂತಾಗಿ ಉಲ್ಲೇಖಗಳು ೧೪ನೆಯ ಶತಮಾನದ ಶಾಸನಗಳಲ್ಲಿ ಲಭಿಸುತ್ತವೆ(ಹೆಚ್ಚಿನ ಚರ್ಚೆಗೆ ಬಾ.ರಾ. ಗೋಪಾಲ್‌ರವರ ‘ಕರ್ನಾಟಕದಲ್ಲಿ ಶ್ರೀರಾಮಾನುಜಾಚಾರ್ಯರು’, ಪ್ರಸಾರಾಂಗ, ಮೈಸೂರು, ೧೯೮೪, ಕೃತಿಯನ್ನು ನೋಡಿ).

ಚೋಳರನ್ನು ತಲಕಾಡಿನಿಂದ ಹೊಡೆದೊಡಿಸಿ, ಗಂಗವಾಡಿ ೯೬೦೦೦ವನ್ನು ವಶಪಡಿಸಿ ಕೊಂಡ ಹೊಯ್ಸಳ ವಿಷ್ಣುವರ್ಧನನು, ಅದರ ನೆನಪಾಗಿ ತನ್ನ ರಾಜ್ಯದಲ್ಲಿ ನಿರ್ಮಿಸಿದ ಪಂಚನಾರಾಯಣ ದೇವಾಲಯಗಳಲ್ಲಿ ತೊಣ್ಣೂರಿನ ಲಕ್ಷ್ಮೀನಾರಾಯಣ (ನಂಬಿನಾರಾಯಣ) ದೇವಾಲಯವೂ ಒಂದೆಂಬ ಅಭಿಪ್ರಾಯವಿದೆಯಾದರೂ ತಲಕಾಡು, ಬೇಲೂರು ದೇವಾಲಯಗಳಲ್ಲಿನ ವೈಭವವಿಲ್ಲಿ ಕಂಡುಬರುವುದಿಲ್ಲ. ಚೋಳರ ಮೇಲಿನ ದಿಗ್ವಿಜಯದ ನೆನಪಾಗಿ ತಲಕಾಡಿನಲ್ಲಿ ಗುಡಿ ನಿರ್ಮಿಸಿದ್ದಕ್ಕೆ ಕ್ರಿ.ಶ. ೧೧೧೭ರ ಶಾಸನಯುಕ್ತ[20] ಕೀರ್ತಿ ನಾರಾಯಣ ದೇವಾಲಯ ತಲಕಾಡಿನಲ್ಲಿದೆ. ಆದರೆ ಅದೇ ತೊಣ್ಣೂರಿನ ಲಕ್ಷ್ಮೀನಾರಾಯಣ ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಖರ ದಾಖಲೆಗಳು ಲಭ್ಯವಿಲ್ಲ. ಆದರೂ ಅಲ್ಲಿರುವ ತೇದಿರಹಿತ ಶಾಸನವೊಂದು[21] ಸುರಿಗೆಯ ನಾಗಯ್ಯನು ವಿಷ್ಣುವರ್ಧನ ಪ್ರತಾಪ ಹೊಯ್ಸಳದೇವರ ಆದೇಶದಂತೆ ಈ ದೇವಾಲಯದಲ್ಲಿ ಓಲಗಸಾಲೆಯನ್ನು ನಿರ್ಮಿಸಿದ್ದನ್ನು ಪ್ರಸ್ಥಾಪಿಸುತ್ತಿದ್ದು (ಕಾಲ ಕ್ರಿ.ಶ.ಸು. ೧೧೨೦) ಈ ಶಾಸನವೊಂದನ್ನಾಧರಿಸಿ ಅದು ಕ್ರಿ.ಶ. ೧೧೨೦ಕ್ಕೆ ಮೊದಲೇ ನಿರ್ಮಾಣಗೊಂಡಿರಬೇಕೆಂದು ವಿದ್ವಾಂಸರು ತರ್ಕಿಸಿದ್ದಾರೆ. ಈ ದೇವಾಲಯವನ್ನು ವಿಷ್ಣುವರ್ಧನನೇ ನಿರ್ಮಿಸಿ, ತೊಂಡನೂರನ್ನು ಅಗ್ರಹಾರವನ್ನಾಗಿಸಿ ಅದಕ್ಕೆ ಯಾದವನಾರಾಯಣ ಚತುರ್ವೇದಿ ಮಂಗಲ ಎಂಬ ಅಭಿಧಾನವನ್ನು ನೀಡಿ ದೇವರ ಪೂಜಾವಿಧಿ ಮತ್ತು ಶ್ರೀವೈಷ್ಣವರ ಜೀವನೋಪಾಯಕ್ಕೆಂದು ಅಲ್ಲೇ ಇದ್ದ ಕೆರೆಯನ್ನು ವಿಸ್ತರಿಸಿ ಉದಾರ ದತ್ತಿ ನೀಡಿ, ಅದನ್ನು ಸರ್ವಮಾನ್ಯ ಅಗ್ರಹಾರವೆಂದು ಘೋಷಿಸಿದನೆಂದು ಊಹಿಸಬಹುದಾಗಿದ್ದರೂ, ಅದನ್ನು ಪುಷ್ಠೀಕರಿಸಲು ಸಧ್ಯಕ್ಕೆ ಆಧಾರಗಳ ಕೊರತೆ ಇದೆ.

ಕಟ್ಟಾ ಶೈವಮತಾನುಯಾಯಿಗಳಾಗಿದ್ದ ಚೋಳ[22] ಸಾಮ್ರಾಟರಲ್ಲಿ ಒಬ್ಬನಾದ ಕುಲೋತ್ತುಂಗ ಚೋಳನ ಕಿರುಕುಳ ತಾಳಲಾರದೆ ಶ್ರೀವೈಷ್ಣವ ಯತಿ ರಾಮಾನುಜಾಚಾರ್ಯರು ತಲೆಮರೆಸಿಕೊಂಡು ಸೇಲಂ ಮಾರ್ಗವಾಗಿ ಹೊಯ್ಸಣನಾಡಿಗೆ ಆಗಮಿಸಿ ರಾಮನಾಥಪುರ‑ ಮಿರ್ಲೆ‑ಸಾಲಿಗ್ರಾಮ ಮಾರ್ಗವಾಗಿ ತೊಣ್ಣೂರಿಗೆ ಬಂದು ಇಲ್ಲಿ ಸ್ವಲ್ಪ ಕಾಲ ತಂಗಿದ್ದು ನಂತರ ಮೇಲುಕೋಟೆಗೆ ತೆರಳಿ, ಅಲ್ಲೂ ಚೆಲುವನಾರಾಯಣ ದೇವಾಲಯವನ್ನು ನಿರ್ಮಿಸಿ, ಶ್ರೀವೈಷ್ಣವ ಧರ್ಮವನ್ನು ಪ್ರಚುರಪಡಿಸಿ ದೇವಾಲಯ ಹಾಗೂ ರಾಮಾನುಜಕೂಟಗಳ ನಿರ್ವಹಣೆಗೆಂದು ೫೨ ಶಿಷ್ಯರ ಸಮಿತಿಯನ್ನು ರಚಿಸಿ, ಶ್ರೀರಂಗಕ್ಕೆ ತೆರಳಿದರೆಂದು ಹೇಳಲಾಗುತ್ತದೆ.[23] ತಮಿಳುನಾಡಿನಿಂದ ಹೊರಟ ರಾಮಾನುಜರು ತೊಣ್ಣೂರು ಮತ್ತು ಮೇಲುಕೋಟೆಗಳನ್ನು ತಲುಪಲು ಅನುಸರಿಸಿದರೆಂದು ಹೇಳಲಾಗುವ ಮೇಲಿನ ಮಾರ್ಗವು ಬಳಸುಮಾರ್ಗವಾಗಿದ್ದು, ಆ ರೀತಿ ಮಾಡಲು ಕಾರಣವೇನೆಂದು ವಿವೇಚಿಸಬೇಕಾಗಿದೆ. ಕೇರಳದ ಕಾಸರಗೋಡು ಮೂಲಕ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಗೆ ಹೋಗಿ ಅಲ್ಲಿಂದ ಕಾವೇರಿ ನದಿಯಂಚಲ್ಲೇ ಸಾಗಿ, ಮೇಲೆ ಸೂಚಿಸಿರುವ ಸ್ಥಳಗಳ ಮೂಲಕ ಸಾಲಿಗ್ರಾಮದವರೆಗೂ ಬಂದು, ಅಲ್ಲಿಂದ ಎಡತೊರೆ, ಕನ್ನಂಬಾಡಿ, (ಬೆಳಗೂಳ‑ಶ್ರೀರಂಗಪಟ್ಟಣ) ಇಲ್ಲವೇ (ಸೀತಾಪುರ‑ಹರವು) ಮಾರ್ಗವಾಗಿ ತೊಣ್ಣೂರನ್ನು ತಲುಪಿರುವ ಸಾಧ್ಯತೆಯ ಬಗ್ಗೆ ಚಿಂತಿಸಬೇಕಿದೆ. ತೊಣ್ಣೂರಿನಲ್ಲಿದ್ದ ರಾಮಾನುಜರಿಗೆ ಕನಸಿನಲ್ಲಿ ಕಾಣಿಸಿಕೊಂಡ ಚೆಲುವ ನಾರಾಯಣನ ಸೂಚನೆಯಂತೆ ಮೇಲುಕೋಟೆಗೆ ಬಂದ ರಾಮಾನುಜರ ಧರ್ಮಪ್ರಸಾರ ಕಾರ್ಯಕ್ಕೆ ನೆರವಾದವರು ಹೊಲೆಯರೆಂದು ತಿಳಿದುಬರುತ್ತದೆ. ಆದರೆ ರಾಮಾನುಜರು ತೊಣ್ಣೂರನ್ನು ತ್ಯಜಿಸಿ ಮೇಲುಕೋಟೆಯತ್ತ ಸಾಗಲು ಇದ್ದ ನೈಜ ಕಾರಣವೆನೆಂಬುದನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ.

ಹೊಯ್ಸಳ ವಿಷ್ಣುವರ್ಧನನು ರಾಮಾನುಜರ ಪ್ರಭಾವಕ್ಕೊಳಗಾಗಿ ಜೈನಮತವನ್ನು ತ್ಯಜಿಸಿ, ಶ್ರೀವೈಷ್ಣವಾನುಯಾಯಿಯಾಗುವ ಮೂಲಕ ಬಿಟ್ಟಿದೇವ ಎಂದಿದ್ದ ತನ್ನ ಹೆಸರನ್ನು ವಿಷ್ಣುವರ್ಧನನೆಂದು ಮಾರ್ಪಡಿಸಿಕೊಂಡು, ತನ್ನ ಸಾಮ್ರಾಜ್ಯದಲ್ಲಿ ಶ್ರೀ ವೈಷ್ಣವಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದನೆಂದು ಹೇಳಲಾಗುತ್ತದೆ. ವಿಷ್ಣುವರ್ಧನನ ಮತಾಂತರ ಘಟನೆ ನಡೆದದ್ದು ಕ್ರಿ.ಶ. ೧೦೯೮ರ ನಂತರ ಎಂದು ನಂಬಲಾಗಿದ್ದು, ಅದಕ್ಕೆ ಬೆಳಗೊಳದ ಕ್ರಿ.ಶ. ೧೦೯೮ರ ಶಾಸನವನ್ನು[24] ಉಲ್ಲೇಖಿಸಲಾಗುತ್ತಿತ್ತು. ಆದರೆ ಬಾ.ರಾ. ಗೋಪಾಲ್[25] ಅವರು ಆ ಶಾಸನದ ಕಾಲವನ್ನು ಕ್ರಿ.ಶ. ೧೩೩೮ ಎಂದು ಪುನರ್‌ನಿಗದಿಪಡಿಸುವ ಮೂಲಕ ಮುಮ್ಮಡಿಬಲ್ಲಾಳನ ಕಾಲಕ್ಕೆ ಈ ಶಾಸನವನ್ನು ಗುರುತಿಸುತ್ತಾರೆ. ಆದರೆ ನಂತರದ ಶಾಸನಗಳಲ್ಲೂ ವಿಷ್ಣುವರ್ಧನನನ್ನು ಬಿಟ್ಟಿದೇವನೆಂದೆ ಕರೆದಿರುವ ಉದಾಹರಣೆಗಳಿವೆ.[26] ಅದೇ ರೀತಿ ವಿಷ್ಣುವರ್ಧನನು ಶ್ರೀವೈಷ್ಣವ ಧರ್ಮದೊಂದಿಗೆ ಇತರ ಧರ್ಮಗಳಿಗೂ ಸಮಾನ ಆಶ್ರಯ ನೀಡಿದ್ದು, ಅದನ್ನು ನಂತರದಲ್ಲಿ ಕಟ್ಟಲ್ಪಟ್ಟ ಅನೇಕ ಶೈವ‑ಜೈನ ದೇವಾಲಯಗಳು ಖಚಿತಪಡಿಸುತ್ತವೆ. ಅಲ್ಲದೆ ಅವನ ಮಡದಿ, ಪಟ್ಟದ ರಾಣಿ ಶಾಂತಲೆ ಜೈನ ಮತಾವಲಂಬಿ ಯಾಗಿದ್ದಳೆಂಬುದನ್ನು ಮರೆಯುವಂತಿಲ್ಲ.

ತೊಣ್ಣೂರಿಗೆ ಬಂದಿದ್ದ ರಾಮಾನುಜಾಚಾರ್ಯರು, ಸ್ಥಳೀಯರ ಅನುಕೂಲಕ್ಕಾಗಿ ತಮ್ಮ ಯತಿದಂಡವನ್ನು ಬಳಸಿ ಯಾದವನದಿ(ತೊಂಡೆಹಳ್ಳ)ಗೆ ಒಡ್ಡು ನಿರ್ಮಿಸಿ, ಯಾದವ ಸಮುದ್ರ ರೂಪಿಸಿ ನೀರಾವರಿ ಸೌಕರ್ಯ ಕಲ್ಪಿಸುವ ಮೂಲಕ ಈ ಗ್ರಾಮವನ್ನು ಆರ್ಥಿಕವಾಗಿ ಸಮೃದ್ಧಗೊಳಿಸಿದರೆಂದೂ, ಅವರಿಂದ ರೂಪುಗೊಂಡ ಈ ಕೆರೆ, ಅದಕ್ಕಂಟಿದಂತೆ ಇರುವ ಮದಗ(ರಾಮಾನುಜಗಂಗೆ)ಗಳೇ ಅವೆಂದು ಹೇಳಲಾಗುವ ಐತಿಹ್ಯ ಇಂದಿಗೂ ಚಾಲ್ತಿ ಯಲ್ಲಿದೆ.[27] ಆದರೆ ಆ ಕೆರೆಯ ನಿರ್ಮಾಣದ ನೇರ ಉಲ್ಲೇಖ ಯಾವುದೇ ಸಮಕಾಲೀನ ಶಾಸನಗಳಲ್ಲೂ ಕಂಡು ಬರುವುದಿಲ್ಲ. ಆದರೂ ಕೆರೆಯು ಬಹಳ ಹಿಂದೆಯೇ ನಿರ್ಮಾಣ ಗೊಂಡಿದ್ದು, ಅದರ ಹಿರಿಯ ಏರಿಯ ಕೆಳಗಿನ ಭೂಮಿಯನ್ನು ದತ್ತಿ ನೀಡಿದ ಬಗ್ಗೆ, ಹರಿದಿದ್ದ ಕಾಲುವೆಗಳ ಬಗ್ಗೆ, ಒಂದನೆಯ ನರಸಿಂಹನ (ಕ್ರಿ.ಶ. ೧೧೫೨‑೧೧೭೩) ಕಾಲದ ಶಾಸನಗಳಲ್ಲಿ ಸುಳಿವು ಲಭಿಸುತ್ತದೆ. ಮಿಗಿಲಾಗಿ ಹರುಹಿನ ಕಾಲುವೆಯ ವಾರ್ಷಿಕ ದುರಸ್ತಿನಿರ್ವಹಣೆಗಳಿಗೆಂದೆ ಕುರುವಂಕನಾಡ ಹೊಳೆಸುಂಕದಲ್ಲಿ ೬೪ ಗದ್ಯಾಣಗಳನ್ನು ತೊಣ್ಣೂರ ಮಹಾಜನರಿಗೆ ದತ್ತಿ ಬಿಟ್ಟ ಅಂಶವೂ ಲಕ್ಷ್ಮೀನಾರಾಯಣ ದೇವಾಲಯದ ವಾಹನಮಂಟಪದ ತಳಪಾದಿಕಲ್ಲ ಮೇಲಿನ ಶಾಸನದಲ್ಲಿದೆ.[28] ಆ ಕಾರಣ ಲಕ್ಷ್ಮೀನಾರಾಯಣ ದೇವಾಲಯವು ನಿರ್ಮಾಣಗೊಂಡ ಸಂದರ್ಭದಲ್ಲೇ ಈ ಕೆರೆಯೂ ವಿಸ್ತೃತಗೊಂಡು ಕಾಲಕಾಲಕ್ಕೆ ದುರಸ್ತಿಗೊಂಡಿದೆ ಎಂದು ತರ್ಕಿಸಬಹುದಾಗಿದೆ. ತೊಣ್ಣೂರಿನಲ್ಲಿದ್ದ ೧೨ ಬಸದಿಗಳನ್ನು ನಾಶಪಡಿಸಿ, ಅವುಗಳ ಕಲ್ಲು ದಿಂಡುಗಳನ್ನು ಬಳಸಿಕೊಂಡು ಈ ಕೆರೆಗೆ ಒಡ್ಡು ನಿರ್ಮಿಸಿದರೆಂದು ಹೇಳಲಾಗುತ್ತದೆ. ಆದರೆ ತೊಣ್ಣೂರಿನಲ್ಲಿ ಜೈನಶಾಸನ ಈವರೆಗೆ ದೊರೆತಿಲ್ಲ. ಬದಲಿಗೆ ನೆರೆಯ ಕ್ಯಾತನಹಳ್ಳಿಯ ಕ್ರಿ.ಶ. ೧೧೭೫ರ ಶಾಸನ[29] ಕೊಡೆಹಾಳ ಬಸದಿಗೆ ಯಾದವನಾರಾಯಣ ಚತುರ್ವೇದಿ ಮಂಗಲದಲ್ಲಿ ೫೦ ಕೊಳಗ ಗದ್ದೆ ಹಾಗೂ ೧೦೦೦ ಕೊಳಗ ಬೆದ್ದಲೆ ಭೂಮಿಯನ್ನು ಖರೀದಿಸಿ ದಾನ ನೀಡಿದ್ದನ್ನು ತಿಳಿಸುತ್ತದೆ.

ರಾಮಾನುಜಾಚಾರ್ಯರು ೧೨,೦೦೦ ಜೈನರನ್ನು ಏಕಕಾಲದಲ್ಲಿ ವಾದದಲ್ಲಿ ಸೋಲಿಸಿದ ಸ್ಥಳವೇ ಇಂದಿನ ನರಸಿಂಹದೇವಾಲಯವೆಂಬ ಐತಿಹ್ಯವಿದೆ. ಆದಿಶೇಷನ ನೆರವಿನೊಂದಿಗೆ ಇದನ್ನು ಸಾಧಿಸುವ ಮೂಲಕ ಜೈನರನ್ನು ಬಗ್ಗುಬಡಿದು, ಶ್ರೀವೈಷ್ಣವ ಧರ್ಮವನ್ನು ಜನಪ್ರಿಯಗೊಳಿಸಿದರೆಂದು ಹೇಳಲಾಗುತ್ತದೆ. ಅದರ ನೆನಪಾಗಿ ನರಸಿಂಹಗುಡಿಯ ಎಡಭಾಗದಲ್ಲಿ ಆದಿಶೇಷನನ್ನು ಪ್ರಭಾವಳಿ/ಛತ್ರಿಯಂತೆ ಹೊಂದಿರುವ ರಾಮಾನುಜರ ಗಾರೆಯ ಮೂರ್ತಿಯನ್ನು ತೋರಿಸಲಾಗುತ್ತದೆ. ಇದರಿಂದ ನರಸಿಂಹ ದೇವಾಲಯವು ರಾಮಾನುಜ ಪೂರ್ವದ್ದೆಂದು ಭಾಸವಾಗುತ್ತದೆ. ಆದರೆ ಈ ದೇವಾಲಯವು ಕ್ರಿ.ಶ. ೧೧೫೨ರಲ್ಲಿ ನಿರ್ಮಾಣಗೊಂಡ ಅಂಶ ಅಲ್ಲೇ ಇರುವ ಎರಡು ಶಾಸನಗಳಿಂದ[30] ಸ್ಪಷ್ಟವಾಗುತ್ತದೆ. ಈ ಅಂಶಗಳು ರಾಮಾನುಜರು ಮತ್ತು ಜೈನ ಮುನಿಗಳ ನಡುವಣ ಸಂವಾದ ಘಟನೆಯ ಸತ್ಯಾಸತ್ಯತೆಯನ್ನು ಪುನರ್‌ಪರಿಶೀಲಿಸಲು ಪ್ರೇರೇಪಿಸುತ್ತದೆ. ಇಲ್ಲಿರುವ ರಾಮಾನುಜರ ಗಾರೆ ಶಿಲ್ಪವೂ ಸು. ೧೮-೧೯ನೇ ಶತಮಾನದ ರಚನೆಯಾಗಿರುವ ಸಾಧ್ಯತೆಗಳಿವೆ. ನರಸಿಂಹನ (ಸಿಂಗಪೆರುಮಾಳ) ಈ ದೇವಾಲಯವು ಮಲೆಯ ಮೇಲೆ ಚೊಕ್ಕಾಂಡಿ ಪಿಳ್ಳೆಯಿಂದ ನಿರ್ಮಿಸಲ್ಪಟ್ಟಿದ್ದು, ಈ ದೇವಾಲಯ ಪರಿಸರವನ್ನು ನರಸಿಂಹಪುರ, ನರಸಿಂಹಪಟ್ಟಣ ಎಂದು ಕರೆಯುತ್ತಿದ್ದ ಅಂಶ ಸ್ಥಳೀಯ ಹಾಗೂ ನೆರೆಯ ಶಾಸನಗಳಲ್ಲೂ[31] ದಾಖಲಾಗಿದೆ. ಮಿಗಿಲಾಗಿ ಈ ದೇವಾಲಯದಲ್ಲಿ ಮತ್ತಿಯಾಂಬಾಕ್ಕಂನ ಆಂಡಾಳ್ ಎಂಬ ಮಹಿಳೆಯು ತಾನು ಪ್ರತಿಷ್ಠಾಪಿಸಿದ ವೆಣ್ಣೆಕೂತ್ತಪಿಳ್ಳೆ(ಕೃಷ್ಣ)ಯ ಜಯಂತಿಯ ಪೂಜಾವಿಧಿಗೆಂದು ನೀಡಿದ ೬ ಪೊನ್ನು ಗದ್ಯಾಣದಿಂದ ಬರುವ ಬಡ್ಡಿಯನ್ನು ಬಳಸಿಕೊಳ್ಳುವ ವ್ಯವಸ್ಥೆ ಮಾಡಿದ್ದ ಅಂಶ ಅಲ್ಲಿಯ ಇನ್ನೆರಡು ಶಾಸನಗಳಲ್ಲಿದೆ.[32] ಆದರೆ ಆ ಮೂರ್ತಿಯು ಈ ದೇವಾಲಯದಲ್ಲಿ ಇದ್ದಂತಿಲ್ಲ.

ಇಲ್ಲಿಯ ಪಾರ್ಥಸಾರಥಿ (ಕೃಷ್ಣ) ದೇವಾಲಯವು ಒಂದನೆಯ ನರಸಿಂಹನ ಕಾಲದಾಗಿದ್ದು, ಅವನ ತಂದೆ ಹೊಯ್ಸಳ ವಿಷ್ಣುವರ್ಧನನಿನ್ನು ಆಳ್ವಿಕೆಯಲ್ಲಿ ಇದ್ದಾಗಲೇ ದತ್ತಿ ನೀಡಲ್ಪಟ್ಟಿರುವ ಅಂಶ ಶಾಸನವೊಂದರಿಂದ (ತೆಂಗಿನಘಟ್ಟ‑ ಕ್ರಿ.ಶ. ೧೧೩೩) ವೇದ್ಯವಾಗುತ್ತದೆ.[33] ಅದೇ ರೀತಿ ಈ ಗುಡಿಯಲ್ಲಿರುವ ಕ್ರಿ.ಶ. ೧೧೪೦ರ ಶಾಸನದಲ್ಲಿ[34] ವಿತ್ತಿರುಂದ ನಾರಾಯಣದೇವರ ಪೂಜಾವಿಧಿಗಳಿಗೆಂದು ಊರ ೧೦ ವೃತ್ತಿಯ ತೆರಿಗೆಯನ್ನು ದಾನ ಬಿಟ್ಟಿದ್ದನ್ನು ದಾಖಲಿಸಿದೆ. ಆದರೆ ಅದೇ ದೇವಾಲಯದ ತಳಪಾದಿಕಲ್ಲ ಮೇಲಿರುವ ಕ್ರಿ.ಶ. ೧೧೫೭ರ ಇನ್ನೊಂದು ಶಾಸನ[35] ಜಗದೇಕಮಲ್ಲದೇವ ಬಿರುದಾಂಕಿತನಾದ ಹೊಯ್ಸಳ ಒಂದನೆಯ ನರಸಿಂಹನು, ರಾಜಧಾನಿ ದೋರಸಮುದ್ರದಿಂದ ರಾಜ್ಯಭಾರ ಮಾಡುತ್ತಿದ್ದಾಗ, ಯಾದವ ನಾರಾಯಣ ಚತುರ್ವೇದಿ ಮಂಗಲದ ಮಧ್ಯದಲ್ಲಿ, ಕಾರಿಕುಡಿಯ ಕೂತ್ತಾಂಡಿ ದಂಡನಾಯಕನು, ತಿಲ್ಲೆಕೂತ್ತವಿಣ್ನಗೌರವನ್ನು ಮಾಡಿಸಿ ಶ್ರೀಲಕ್ಷ್ಮಿ(ಶ್ರೀದೇವಿ), ಶ್ರೀಭೂಮಿ (ಭೂದೇವಿ) ಸಹಿತವಾಗಿ ವಿತ್ತಿರುಂದ ಪೆರುಮಾಳ ದೇವರನ್ನು ಪ್ರತಿಷ್ಠಾಪಿಸಿದಾಗ, ತೊಂಡನೂರು ಸೀಮೆ ಸ್ಥಳಕ್ಕೆ ಸೇರಿದ ಎರಡು ಬೆಟ್ಟಹಳ್ಳಿ, ಎರಡು ಸಿಂಧಗಟ್ಟ, ಬಾಚಿಹಳ್ಳಿ, ಶೀಳನೆರೆ ಮುಂತಾದ ಮೂವತ್ತು ಗ್ರಾಮದ ಪ್ರಭುಗೌಂಡಗಳು, ಕೂತ್ತಾಂಡಿ ದಂಡನಾಯಕನಿಂದ ೨೦೦ ಹೊನ್ನನ್ನು ಪಡೆದು ಪಡುವ ಬೆಟ್ಟಹಳ್ಳಿ ಗ್ರಾಮವನ್ನು ಸರ್ವಮಾನ್ಯವಾಗಿ ದತ್ತಿಬಿಟ್ಟ ಅಂಶವನ್ನು ನಿವೇದಿಸುತ್ತದೆ. ಅಲ್ಲದೇ ಊರಲ್ಲಿ ೮೦ ಗದ್ಯಾಣ ಕೊಟ್ಟು ೯೨೮ ಮಾವಿನಮರಗಳನ್ನುಳ್ಳ ಹಿರಿಯಬನವನ್ನು ಕೇಶವ ದೀಕ್ಷಿತರಿಂದ ಖರೀದಿಸಿ ಈ ದೇವಾಲಯಕ್ಕೆ ದತ್ತಿ ಬಿಟ್ಟಿದ್ದನ್ನು ದಾಖಲಿಸುತ್ತಾ, ಈ ದಾನಕ್ಕೆ ಮದ್ದೂರು ಹಾಗೂ ತೈಲೂರು ಗ್ರಾಮಸಭೆಗಳವರೂ ಸಾಕ್ಷಿಯಾಗಿದ್ದ ಅಂಶವನ್ನು ಈ ಶಾಸನ ದಾಖಲಿಸಿದೆ.[36] ಮಿಗಿಲಾಗಿ ಈ ದೇವಾಲಯವನ್ನು ಕೂತ್ತಾಂಡಿದಂಡನಾಯಕನು ನಿರ್ಮಿಸಿದ ಅಂಶವನ್ನು ತಮಿಳು ಹಾಗೂ ಕನ್ನಡ ಭಾಷೆ ಗಳೆರಡರಲ್ಲೂ ಮೂರ‍್ನಾಲ್ಕು ಕಡೆ ದಾಖಲಿಸಲಾಗಿದೆ.[37] ಕೃಷ್ಣದೇವಾಲಯದ ಮಹಾದ್ವಾರದ ಬಳಿಯಿರುವ ತಮಿಳು ಶಾಸನದಲ್ಲಿ[38] ಮುಡಿಗೊಂಡ ಚೋಳಪುರದ (ಕೊಳ್ಳೇಗಾಲ ತಾ. ಮುಡಿಗುಂಡ) ವಾಗೀಶ್ವರ ಕೋಯಿಲಿನ ನಾರಾಯಣಭಟ್ಟನ ಮಗ ಈ ದೇವರಿಗೆ ನೀಡಿದ ಪಾತ್ರೆ ಪಡಗಗಳ, ಉಲ್ಲೇಖವಿದೆ. ಈ ದೇವಾಲಯದ ಹೊರಪ್ರಾಕಾರದ ಆಗ್ನೆಯ ಮೂಲೆಯಲ್ಲಿರುವ ಉಬ್ಬುಶಿಲ್ಪವೊಂದು ನೇಗಿಲ ಕೆತ್ತನೆಯನ್ನು ಹೊಂದಿದೆ ಎಂಬ ಅಭಿಪ್ರಾಯವಿದೆ, ಬಲರಾಮನ ಕಲ್ಲು ಎಂದೂ ರೂಢಿಯಲ್ಲಿ ಹೇಳಲಾಗುತ್ತದೆ.[39] ಆದರೆ ಅದು ಮೂಲತಃ ವಾಮನಮುದ್ರೆ ಕಲ್ಲಾಗಿರುವ ಸಾಧ್ಯತೆಗಳೇ ಹೆಚ್ಚಾಗಿರುವಂತೆ ತೋರುತ್ತದೆ.

ಊರಾಚೆ ಇರುವ ಕೈಲಾಸೇಶ್ವರ ದೇವಾಲಯವು ತೊಣ್ಣೂರಿನ ಪ್ರಾಚೀನ ದೇವಾಲಯ ವೆಂಬ ಅಭಿಪ್ರಾಯವನ್ನು ವಿದ್ವಾಂಸರು ವ್ಯಕ್ತಪಡಿಸುತ್ತಾರೆ.[40] ಆದರೆ ಆ ದೇವಾಲಯದ ತಳಪಾದಿಕಲ್ಲ ಮೇಲಿರುವ ಶಾಸನದಿಂದ[41] ಆ ದೇವಾಲಯವು ಒಂದನೆಯ ನರಸಿಂಹನ (ಕ್ರಿ.ಶ. ೧೧೫೨‑ ಕ್ರಿ.ಶ. ೧೧೭೩) ಕಾಲದಲ್ಲಿ ನಿರ್ಮಾಣಗೊಂಡಿರುವ ಅಂಶ ವೇದ್ಯ ವಾಗುತ್ತಿದ್ದು, ಇನ್ನೊಂದು ಶಾಸನದಲ್ಲಿ[42] ಕೈಲಾಸೇಶ್ವರ ಗುಡಿಯ ಸ್ಥಾನಪತಿ ದೇವಪಿಳ್ಳೆ ಹಾಗೂ ಲಕ್ಷ್ಮಿನಾರಾಯಣ ಗುಡಿಯ ಸ್ಥಾನಪತಿ ತಿರುವರಂಗದಾಸರುಗಳ ಉಲ್ಲೇಖವಿದೆ. ಅಲ್ಲೇ ಇರುವ ಇನ್ನೊಂದು ಶಾಸನ[43] ತೊಣ್ಡಾಚಾರಿಯು ದೇವರ ನಂದಾದೀಪದ ಸೇವೆಗೆಂದು ನಾಲ್ವರು ಭಟ್ಟರಿಗೆ ತಲಾ ಒಂದೊಂದು ಗದ್ಯಾಣದಿಂದ ಬರುವ ಬಡ್ಡಿಯನ್ನು ದತ್ತಿ ಬಿಟ್ಟಿದ್ದನ್ನು ದಾಖಲಿಸಿದೆ. ಈ ಗುಡಿಯ ರಂಗಮಂಟಪದ ಕಂಬಗಳ ಮೇಲಿರುವ ಶಾಸನಗಳಿಂದ[44] ಅದು ಮುಮ್ಮಡಿ ನರಸಿಂಹನ ಕಾಲದ ಸೇರ್ಪಡೆ ಎಂದು ತರ್ಕಿಸಬಹುದಾಗಿದೆ. ಈ ಗುಡಿಯ ಬದಿಯಲ್ಲೇ ಇರುವ ಕಿರುಗುಡಿಯನ್ನು ‘ಕಳ್ಳರಗುಡಿ’[45] ಎಂದು ಕರೆಯಲಾಗುತ್ತಿದ್ದು, ಹೆಚ್ಚಿನ ವಿವರಗಳು ಲಭ್ಯವಿಲ್ಲ. ಅದರ ಬಗೆಗೂ ಪರಿಶೀಲಿಸುವ ಅಗತ್ಯವಿದೆ.

ಇಮ್ಮಡಿ ಬಲ್ಲಾಳನ (ಕ್ರಿ.ಶ. ೧೧೭೩‑ ಕ್ರಿ.ಶ. ೧೨೨೦) ಆಳ್ವಿಕೆಯಲ್ಲಿ ತೊಣ್ಣೂರಿನ ದೇವಾಲಯಗಳಿಗೆ ಸಮೃದ್ಧ ರಾಜಪೋಷಣೆ ಲಭಿಸಿದ ಅಂಶ ಅನೇಕ ಶಾಸನಗಳಿಂದ ವೇದ್ಯವಾಗುತ್ತದೆ. ತೊಣ್ಣೂರಿನ ಕ್ರಿ.ಶ.೧೧೭೪ರ ಶಾಸನ,[46] ಲಕ್ಷ್ಮಿನಾರಾಯಣ ದೇವರ ಮಜ್ಜನ ಸೇವೆಗೆಂದು ದತ್ತಿಬಿಟ್ಟಿದ್ದನ್ನು ದಾಖಲಿಸುತ್ತಿದ್ದು, ಕೊನೆಯಲ್ಲಿ ‘ಬಾಳಚಂದ್ರದೇವರ ಗುಡ್ಡ ಲಖಣ್ಣ’ ಎಂಬ ಉಲ್ಲೇಖವಿದ್ದು, ಜೈನನಾಮದಂತೆ ಕಾಣುವ ಇದು ಶಾಸನಶಿಲ್ಪಿಯ ಹೆಸರಾಗಿರುವ ಸಾಧ್ಯತೆಗಳಿವೆ. ಇದೇ ಕಾಲಕ್ಕೆ ಸೇರಿದ ಇನ್ನೊಂದು ಶಾಸನ[47] ಮಜ್ಜನ ಸೇವೆಯಲ್ಲಿ ಬಳಸುವ ಕೈದೀವಿಗೆಗಳಿಗೆಂದು ಹಿರಿಯ ಹೆಗಡೆ ಮಾಚಯ್ಯನೂ ಸೇರಿದಂತೆ ಮೂವರು ಹೆಗ್ಗಡೆಗಳು ಒಂದೆತ್ತಿನ ಗಾಣದ ತೆರಿಗೆ ಹಾಗೂ ತಿಂಗಳ ಪಡಿಯಲ್ಲಿ ಒಂದು ಬಳ್ಳ ಎಣ್ಣೆಯನ್ನು ತಿರುವರಂಗದಾಸರ ವಶಕ್ಕೆ ನೀಡಿದ ಅಂಶವನ್ನು ದಾಖಲಿಸಿದೆ. ತೀರಾ ಇತ್ತೀಚಿನವರೆಗೆ ನರಸಿಂಹನ ಗುಡಿಯ ಮುಂಭಾಗವು ಹಿಪ್ಪೆ ಮರದ ತೋಪಾಗಿತ್ತು. ಅದರ ನಿರ್ವಹಣೆ ಇತ್ತೀಚಿನವರೆಗೂ ಗಾಣಿಗರ ಕೈಯಲ್ಲೇ ಇತ್ತು. ಅವರು ಹಿಪ್ಪೆ ಹರಳುಗಳನ್ನು ಆಯ್ದು, ಎಣ್ಣೆ ತಯಾರಿಸಿ ಊರಿನ ಪ್ರಮುಖ ದೇವಾಲಯಗಳಿಗೆ ನೀಡುತ್ತಿದ್ದರು. ಆದರೆ ಇಂದು ಅಲ್ಲಿ ವಸತಿ ಶಾಲೆ ನಿರ್ಮಾಣಗೊಂಡಿದೆ.

ಲಕ್ಷ್ಮಿನಾರಾಯಣ ಗುಡಿಯಲ್ಲಿರುವ ಕ್ರಿ.ಶ. ೧೧೭೫ರ ಶಾಸನ,[48] ಶ್ರೀಕರಣದ ಕಲಿಯಣ್ಣನಿಂದ ಶ್ರೀಕರಣದ ಹೆಗ್ಗಡೆ ಎರೆಯಣ್ಣನು ಒಂಭತ್ತು ವೃತ್ತಿಯನ್ನು ಖರೀದಿಸಿ, ಕಾಂಜಿಊರಿ(ಕಾಂಚಿಪುರಂ)ನ ಅಲ್ಲಾಳಪೆರುಮಾಳ ದೇವರಿಗೆ ದತ್ತಿ ಬಿಟ್ಟಿದ್ದನ್ನು ದಾಖಲಿಸಿದೆ. ಅಲ್ಲೇ ಇರುವ ಇನ್ನೊಂದು ಶಾಸನ,[49] ಲಕ್ಷ್ಮೀನಾರಾಯಣ ದೇವರ ವೀರವಲ್ಲಾಳ ತಿರುಮಂಟಪದ ಸುಣ್ಣಬಣ್ಣಗಳಿಗೆಂದೂ ತಿರುವಾಯ್ಮೋಳಿಯನ್ನು ಹಾಡುವ ತಿರುನರೆಯೂರು ದಾಸರ ನಗದು ದಾನದಲ್ಲಿ ೫೦ ಗದ್ಯಾಣವನ್ನು ಗೋಮಠದಲ್ಲಿ ರಾಮಪುರಾಣದ ಪಠಣಕ್ಕೆಂದು ದತ್ತಿ ಬಿಟ್ಟಿದ್ದನ್ನು ಉಲ್ಲೇಖಿಸಿದರೆ, ಕ್ರಿ.ಶ. ೧೧೭೩ರ ಇನ್ನೊಂದು ಶಾಸನ,[50] ಊರಚೆಂಗುಂಟೆ ಕೆಳಗಿನ ಭೂಮಿಯನ್ನು ದೇವರ ಸೇವೆಗೆಂದು ಕುಲಶೇಖರದಾಸ ಲಕ್ಷ್ಮೀನಾಥರಿಗೆ ಊರ ಮಹಾಜನಗಳು ದಾನ ಕೊಟ್ಟಿದ್ದನ್ನು ತಿಳಿಸುತ್ತದೆ. ಇದೇ ಗುಡಿಯಲ್ಲಿರುವ ಕ್ರಿ.ಶ. ೧೧೮೯ರ ಶಾಸನದಲ್ಲಿ[51] ಯಾದವಗಿರಿ (ಮೇಲುಕೋಟೆ) ಕೋಟೆಯ ರಕ್ಷಪಾಲಕರಾಗಿದ್ದ ಅಚ್ಯುತಮಯ್ಯ, ವೀರೈಯ್ಯರ ಮಕ್ಕಳು ತೊಣ್ಣೂರಿನ ಗಡಿಯಲ್ಲಿದ್ದ ನಖರೇಶ್ವರ ದೇವರ ನಂದಾದೀಪದ ಸೇವೆಗೆಂದು ಗ್ರಾಮದ ಮಗ್ಗದೆರೆಯಲ್ಲಿ ಒಂದು ಮಗ್ಗದ ಆಯವನ್ನು ದಾನ ಕೊಟ್ಟ ವಿವರವಿದೆ. ಇದೇ ರೀತಿ ಇಲ್ಲಿಯ ಕೃಷ್ಣದೇವಾಲಯಕ್ಕೂ ಇಮ್ಮಡಿ ಬಲ್ಲಾಳನ ಆಳ್ವಿಕೆಯಲ್ಲಿ ದತ್ತಿ ಬಿಡಲಾಗಿದ್ದು, ಗುಡಿ ಮುಂದಿರುವ ತೋರಣಗಂಬದ ಮೇಲಿನ ಕ್ರಿ.ಶ. ೧೧೭೫ರ ಶಾಸನ ದಿಂದ,[52] ಅದು ವೀರಬಲ್ಲಾಳನ ತಿರುಗೋಪುರದ ಭಾಗವಾಗಿದ್ದ ಅಂಶ ವೇದ್ಯವಾಗುತ್ತದೆ. ಅಲ್ಲೇ ಇರುವ ಕ್ರಿ.ಶ. ೧೧೭೫, ಕ್ರಿ.ಶ. ೧೧೭೭ರ ಶಾಸನಗಳು ಆ ದೇವರಿಗೆ ದತ್ತಿ ಬಿಟ್ಟಿದ್ದನ್ನು ದಾಖಲಿಸಿವೆ. ತೊಣ್ಣೂರಿನ ಕ್ರಿ.ಶ. ೧೧೯೬ರ ಶಾಸನ,[53] ಲಕ್ಷ್ಮೀನಾರಾಯಣ ದೇವರ ಸೇವೆಗೆಂದು, ಮಾರಿದ ತನ್ನ ಮನೆ ನಿವೇಶನದಿಂದ ಬಂದ ಐದು ಪೊನ್ನನ್ನು ಉತ್ತಮನಂಬಿಯು ದತ್ತಿ ಬಿಟ್ಟಿದ್ದನ್ನು ತಿಳಿಸುತ್ತದೆ. ಕೃಷ್ಣಗುಡಿಯಲ್ಲಿರುವ ಕ್ರಿ.ಶ. ೧೧೭೩ರ[54] ಶಾಸನ, ದೇವರ ಸೇವೆಗೆಂದು ೨೮೦ಗುಳಿ ವಿಳೆಯದೆಲೆ ತೋಟದಿಂದ ಬರುವ ಆದಾಯವನ್ನು ಉಂಬಳಿ ಬಿಟ್ಟಿದ್ದನ್ನು ತಿಳಿಸುತ್ತದೆ. ಇಮ್ಮಡಿಬಲ್ಲಾಳರ ಕ್ರಿ.ಶ. ೧೨೧೪ರ ಲಕ್ಷ್ಮಿನಾರಾಯಣ ಗುಡಿ ಶಾಸನದಲ್ಲಿ[55] ಅಗ್ರಹಾರದ ಮಹಾಜನಗಳು ದೇವರ ಸೇವೆಗೆಂದು ಪಾಪ್ಪಲ್‌ಕಾವಲಿ ಬಯಲಲ್ಲಿ ೧೦೦ ಕುಳಿ ಭೂದಾನ ನೀಡಿದ ಪ್ರಸ್ತಾಪವಿದೆ. ಇಮ್ಮಡಿ ನರಸಿಂಹನ (ಕ್ರಿ.ಶ. ೧೨೨೦‑೩೫) ತೊಣ್ಣೂರಿನ ಕ್ರಿ.ಶ. ೧೨೨೩ರ ಶಾಸನ[56] ಮಹಾಪ್ರಧಾನ ಹೆಗ್ಗಡೆ ದಾಮಣ್ಣನು, ಕೃಷ್ಣದೇವರಿಗೆ ಎರಡು ಬೆಟ್ಟಹಳ್ಳಿ ಹಾಗೂ ಶಿರಿಮಾಕನಹಳ್ಳಿಗಳನ್ನು ದತ್ತಿ ಬಿಟ್ಟಿದ್ದನ್ನು ದಾಖಲಿಸಿದೆ. ಇಮ್ಮಡಿ ನರಸಿಂಹನ ನಂತರ ಅಧಿಕಾರಕ್ಕೆ ಬಂದ ಸೋಮೇಶ್ವರ (ಕ್ರಿ.ಶ. ೧೨೩೫‑೧೨೫೪)ನ ಆಳ್ವಿಕೆಗೆ ಸಂಬಂಧಿಸಿದಂತೆ ಶಾಸನಗಳಾವುದೂ ತೊಣ್ಣೂರಿನಲ್ಲಿ ಲಭಿಸಿಲ್ಲ. ಮಧುರೆ ಪಾಂಡ್ಯರೊಂದಿಗೆ ಕೈಜೋಡಿಸಿದ ಇವನು ಕಣ್ಣಾನೂರನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಇವನ ಮಕ್ಕಳಾದ ಮುಮ್ಮಡಿ ನರಸಿಂಹ ಹಾಗೂ ರಾಮನಾಥರ ನಡುವೆ ಸಾಮ್ರಾಜ್ಯವು ವಿಭಜಿಸಲ್ಪಟ್ಟು, ಮುಮ್ಮಡಿ ನರಸಿಂಹ ದೋರಸಮುದ್ರದಲ್ಲೆ ನೆಲೆಸಿದ.

ಮುಮ್ಮಡಿ ನರಸಿಂಹನ (ಕ್ರಿ.ಶ. ೧೨೫೪‑೯೨) ಆಳ್ವಿಕೆಗೆ ಸೇರಿದ, ಇಲ್ಲಿಯ ಹೊಲವೊಂದರಲ್ಲಿರುವ ಕ್ರಿ.ಶ. ೧೨೭೬ರ ಶಾಸನ,[57] ಅಗ್ರಹಾರದ ಮಹಾಜನಗಳು ನಾರಾಯಣದೇವರ ತಿರುವಿಡಿಯಾಟಕ್ಕೆಂದೂ, ದೇವರ ನಂದನವನದ ನಿರ್ವಹಣೆಗೆಂದು ನಾಲ್ಕು ಪೊನ್ನು ದತ್ತಿ ಬಿಟ್ಟಿದ್ದನ್ನು ದಾಖಲಿಸಿದೆ. ಕ್ರಿ.ಶ. ೧೨೮೬ರ ಇನ್ನೊಂದು ಶಾಸನದಲ್ಲಿ[58] ಅರಸನ ಉಲ್ಲೇಖವಿರದೆ, ದೇವರ ತಿರುನಾಳು, ತಿರುವಾಯ್ಮೋಳಿ, ಚೆರಪುಗಳಿಗೆಂದು ಆರು ಕಳನಿ ಅಕ್ಕಿ ಹಾಗೂ ನಾಲ್ಕು ಕಳನಿ ತೊಗರಿಬೇಳೆ ಬೆಳೆಯಲು ಅಗತ್ಯವಿರುವ ೧೦ ಸಲಗೆ ಭೂಮಿಯನ್ನು ದತ್ತಿಬಿಟ್ಟು, ದೇವರ ಪ್ರಸಾದದಲ್ಲಿ ಎರಡು ನಳಿಯನ್ನು ದೇಶಸ್ಥರಿಗೆ ನೀಡಬೇಕೆಂಬ ಷರತ್ತನ್ನು ವಿಧಿಸಲಾಗಿದೆ. ತೊಣ್ಣೂರು ಕೆರೆಯ ಹಿಂಬದಿಯ ಸಣಬ ಗ್ರಾಮದಲ್ಲಿರುವ ಮುಮ್ಮಡಿ ನರಹಸಿಂಹನ ಶಾಸನದಿಂದ[59] ಯಾದವ ನಾರಾಯಣ ಚತುರ್ವೇದಿ ಮಂಗಲದ ಯಾದವ ಸಮುದ್ರದ ಏರಿಯ ಮೇಗಣ ಹೊಯ್ಸಳೇಶ್ವರ ದೇವರ ಸೇವೆಗೆಂದು ಕೆರೆಯೊಳಗಣ ಸಣಂಬ ಗ್ರಾಮವನ್ನು ತಳ್ಳಿಯದ ಮಲ್ಲಿಜೀಯಂಗೆ ಅರಸನು ದತ್ತಿಬಿಟ್ಟಿರುತ್ತಾರೆ. ಇಂದು ಸಣಬ ಗ್ರಾಮದಲ್ಲಿರುವ ಈಶ್ವರ ಗುಡಿಯೇ ಶಾಸನೋಕ್ತ ಗುಡಿಯೆಂದು ಅನುಮಾನ ಮೂಡುತ್ತದೆ.

ಈ ಮೇಲಿನ ಚರ್ಚೆಯಿಂದ ತೊಣ್ಣೂರು ಶ್ರೀವೈಷ್ಣವ ಅಗ್ರಹಾರವಾಗಿ ಹೊಯ್ಸಳರ ಆಳ್ವಿಕೆಯಲ್ಲಿ ವಿಷ್ಣುವರ್ಧನನಿಂದ ಇಮ್ಮುಡಿ ನರಸಿಂಹನವರೆವಿಗೂ ನಿರಂತರ ರಾಜಮನ್ನಣೆ ಯನ್ನೂ, ಜನರ ಪ್ರೀತಿಯನ್ನೂ ಗಳಿಸಿದ್ದ ಅಂಶ ಸ್ಪಷ್ಟವಾಗುತ್ತದೆ. ಆದರೆ ಮುಮ್ಮಡಿ ಬಲ್ಲಾಳನ (ಕ್ರಿ.ಶ. ೧೨೯೨‑೧೩೪೨) ಆಳ್ವಿಕೆಯಲ್ಲಿ ಇದು ಸ್ವಲ್ಪ ಹಿನ್ನಡೆಯನ್ನು ಕಂಡಂತೆ ತೋರುತ್ತಿದ್ದು, ಅವನ ನೇರ ಆಳ್ವಿಕೆಗೆ ಸೇರಿದ ಶಾಸನಗಳಾವುದೂ ತೊಣ್ಣೂರಿನಲ್ಲಿ ಈವರೆಗೆ ಪತ್ತೆಯಾಗಿಲ್ಲವಾದರೂ, ಆ ಅವಧಿಗೆ ಸೇರಿದ ತೇದಿರಹಿತ ಶಾಸನಗಳು ದೊರೆಯುವ ಸಾಧ್ಯತೆಗಳಿವೆ. ಆದರೆ ಲಿಪಿ ವಿನ್ಯಾಸವನ್ನಾಧರಿಸಿ ಶಾಸನಗಳ ಕಾಲವನ್ನು ನಿರ್ಧರಿಸುವುದರಿಂದ ಕೆಲವೊಮ್ಮೆ ನಿಖರತೆಯಲ್ಲಿ ಲೋಪವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಈವರೆಗೆ ಓದಲ್ಪಟ್ಟಿರುವ ಶಾಸನ ಪಾಠವನ್ನು ಪುನರ್ ಪರಿಶೀಲಿಸುವುದರ ಜೊತೆಗೆ ತಮಿಳು ಶಾಸನಗಳನ್ನು ಸ್ಥಳದಲ್ಲೇ (insitu) ಪುನರ್‌ಪರೀಕ್ಷಿಸುವ ಅಗತ್ಯವಿದ್ದು, ಅದರಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿಖರವಾಗಿ ಪಡೆಯಬಹುದಾಗಿದೆ. ಮಿಗಿಲಾಗಿ ಶಿಥಿಲಾವಸ್ಥೆಯಲ್ಲಿದ್ದ ಇಲ್ಲಿಯ ದೇವಾಲಯಗಳನ್ನು ಸಂರಕ್ಷಣೆ ಮಾಡುವ ಸಂದರ್ಭದಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗಿರುವ ಅಂಶವನ್ನೂ ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ.

ತನ್ನ ಆಡಳಿತದಲ್ಲಿ ಹೆಚ್ಚಿನ ಭಾಗವನ್ನು ನೆರೆಹೊರೆಯ ಅರಸರೊಂದಿಗೆ ಕದನದಲ್ಲೇ ನಿರ್ವಹಿಸಬೇಕಾಗಿ ಬಂದ ಮುಮ್ಮಡಿ ಬಲ್ಲಾಳನು, ಉತ್ತರದ ಮುಸ್ಲಿಂ ದಾಳಿಯನ್ನು ಎದುರಿಸಬೇಕಾಯಿತು. ಅವರೊಂದಿಗೆ ಹೋರಾಡುತ್ತಾ ಅವಸಾನ ಹೊಂದುವ ಪೂರ್ವದಲ್ಲಿ ಮುಮ್ಮಡಿ ಬಲ್ಲಾಳನು ತೊಣ್ಣೂರನ್ನು ಕ್ರಿ.ಶ.೧೩೨೬ರ ನಂತರ ತನ್ನ ಉಪರಾಜಧಾನಿಯನ್ನಾಗಿ ಮಾಡಿಕೊಂಡಿದ್ದು, ಇಲ್ಲಿಂದಲೇ ರಾಜ್ಯಭಾರ ನಡೆಸಿದನೆಂಬ ಅಭಿಪ್ರಾಯವಿದೆಯಾದರೂ[60] ಅದನ್ನು ಸೂಚಿಸುವ ಒಂದೇ ಒಂದು ಶಾಸನವೂ ತೊಣ್ಣೂರು ಸೇರಿದಂತೆ ಎಲ್ಲಿಂದಲೂ ವರದಿಯಾಗಿಲ್ಲ. ಬದಲಿಗೆ ಕ್ರಿ.ಶ.೧೩೨೬ರ ನಂತರದ ಶಾಸನಗಳಲ್ಲೂ ದೋರಸಮುದ್ರವೇ ಮುಮ್ಮಡಿ ಬಲ್ಲಾಳನ ರಾಜಧಾನಿಯಾಗಿದ್ದುದ್ದಕ್ಕೆ ಅನೇಕ ಶಾಸನಾಧಾರಗಳಿವೆ.[61] ಮಿಗಿಲಾಗಿ ಅವನು ಕ್ರಿ.ಶ.೧೩೪೩ರವರೆಗೂ ಇದ್ದುದಕ್ಕೆ ಶಾಸನಾಧಾರಗಳಿವೆ. ಆದರೆ ಮುಸ್ಲಿಂ ದಾಳಿಯನ್ನು ನಿರ್ವಹಿಸಿದ ದೆಹಲಿಯ ಮುಸ್ಲಿಂ ದಂಡನಾಯಕ ಸಯ್ಯದ್‌ಸಾಲಾರ್ ಮಸೂದ್ ಆನಂತರವೂ ತೊಣ್ಣೂರಿನಲ್ಲೇ ಉಳಿದು ಕ್ರಿ.ಶ.೧೩೫೮ರಲ್ಲಿ ನಿಧನಹೊಂದಿದ್ದು, ಅವನ ಗೋರಿಯನ್ನು ದರ್ಗವನ್ನಾಗಿಸಿ ದೈನಂದಿನ ಪೂಜೆ, ವಾರ್ಷಿಕ ಉರುಸನ್ನು ನಡೆಸಲು ಮುಂದಾದ ಹೈದರನ ಕಾಲಕ್ಕೆ ಸೇರಿದ ಕ್ರಿ.ಶ.೧೭೫೯ ಹಾಗೂ ಕ್ರಿ.ಶ.೧೭೯೯ರ ಮೂರು ಶಾಸನಗಳು[62] ಚಟ್ಟಂಗೆರೆ ಯನ್ನು ಸರ್ವಮಾನ್ಯವಾಗಿ ತೊಣ್ಣೂರಿನ ದರ್ಗಕ್ಕೆ ದತ್ತಿ ಬಿಟ್ಟಿದ್ದನ್ನು ದಾಖಲಿಸಿವೆ. ಹೀಗೆ ತೊಣ್ಣೂರು ಹೊಯ್ಸಳರ ಆಳ್ವಿಕೆಯಲ್ಲಿ ಏಳುಬೀಳುಗಳನ್ನು ಕಂಡಿತು.

ತೊಣ್ಣೂರಿನಲ್ಲಿ ಶಾಸನಗಳು, ವೀರಗಲ್ಲುಗಳು, ಆತ್ಮಾಹುತಿ ಶಿಲ್ಪಗಳು, ಮೂರ್ತಿ ಶಿಲ್ಪಗಳು ಸಾಕಷ್ಟು ಸಂಖ್ಯೆಯಲ್ಲಿ ದೊರತಿವೆ. ಹೊಲ‑ಗದ್ದೆ ಬಯಲಿನಲ್ಲಿ ವೀರಗಲ್ಲುಗಳು ಮೌನವಾಗಿ ನಿಂತಿದ್ದು, ಊರ ಪ್ರವೇಶದಲ್ಲೇ ಸುಮಾರು ೧೪ನೆಯ ಶತಮಾನಕ್ಕೆ ಸೇರಿದ ಆತ್ಮಾಹುತಿ ಸ್ಮಾರಕಶಿಲ್ಪಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಹೊಯ್ಸಳರ ಆಳ್ವಿಕೆಯ ಅವಧಿಯಲ್ಲಿ ತೊಣ್ಣೂರು, ಬಹಳ ವಿಶಾಲವಾದ ಗ್ರಾಮವಾಗಿದ್ದು, ಇಂದಿನ ಸುಂಕಾ ತೊಣ್ಣೂರು, ಹಳೆಬೀಡು, ದೇವರಾಜಪಟ್ಟಣ(ಬೇಚಿರಾಕ್), ಪಟ್ಟಣಗೆರೆ ಗ್ರಾಮಗಳೂ ಅದರ ಭಾಗವಾಗಿದ್ದವು. ಸುಂಕಾತೊಣ್ಣೂರಿನ ಒಂದನೆಯ ನರಸಿಂಹನ ಶಾಸನದಲ್ಲಿ[63] ತೊಂಡನೂರು ಎಂದೂ, ಹಾಗೂ ಹಳೆಬೀಡಿನ ಇಮ್ಮಡಿಬಲ್ಲಾಳನ ಕಾಲದ ಇನ್ನೊಂದು ಶಾಸನದಲ್ಲಿ[64] ಬನದ ತೊಂಡನೂರು ಎಂದೇ ಅವುಗಳನ್ನು ಹೆಸರಿಸಲಾಗಿದ್ದು, ಕ್ರಿ.ಶ. ೧೨೭೩ರ ಪಟ್ಟಸೋಮನಹಳ್ಳಿಯ ಶಾಸನದಲ್ಲಿ[65] ತೊಂಡನೂರು ಅಗ್ರಹಾರದ ಎಡೆಯಲ್ಲಿರುವ ಗಡಿಗ್ರಾಮವಾಗಿ ಇದು ದಾಖಲಿಸಲ್ಪಟ್ಟಿದೆ. ಆನಂತರದಲ್ಲಿ ಸುಂಕಾತೊಂಡನೂರು ಹಾಗೂ ಹಳೇಬೀಡುಗಳು ಸುಮಾರು ೧೪‑೧೫ನೆಯ ಶತಮಾನದಲ್ಲಿ ಸ್ವತಂತ್ರ ಗ್ರಾಮಗಳಾಗಿ ರೂಪು ಗೊಂಡಿರುವಂತೆ ತೋರುತ್ತದೆ. ಇದನ್ನು ಈ ಭಾಗದಲ್ಲಿ ಪ್ರಚಲಿತವಿರುವ ‘ಕರಿಬಂಟನಕಾಳಗ’ ಜನಪದ ಕಾವ್ಯವೂ ಪುಷ್ಟೀಕರಿಸುತ್ತಿದ್ದು, ಪುಂಡರೀಕಾಕ್ಷಿಯ ತಾಯಿ ರಾಕ್ಷಸಮ್ಮನನ್ನು ‘ತೊಂಡನೂರ ನೀಲಿ’ ಎಂದೇ ದಾಖಲಿಸಲಾಗಿದ್ದು, ಆ ಘಟನೆ ಜರುಗಿದಾಗ ತೊಂಡನೂರು‑ ಸುಂಕಾತೊಂಡನೂರುಗಳು ಇನ್ನೂ ಒಂದೇ ಆಗಿದ್ದವೆಂದು ತರ್ಕಿಸಬಹುದಾಗಿದೆ.

ಹೊಯ್ಸಳರ ನಂತರ ಅಧಿಕಾರಕ್ಕೆ ಬಂದ ವಿಜಯನಗರದ ಅರಸರ ಆಳ್ವಿಕೆಯ ವೇಳೆಗೆ ತೊಣ್ಣೂರು ಧಾರ್ಮಿಕವಾಗಿ ಹಿನ್ನಡೆ ಕಂಡು ಮೇಲುಕೋಟೆ ಹೆಚ್ಚು ಖ್ಯಾತಿ ಪಡೆಯಿತು. ನಾಗಮಂಗಲದ ಸಿಂಗಣವೊಡೆಯನ ಸೀತಾಪುರದ ಕ್ರಿ.ಶ.೧೪೬೭ರ ಶಾಸನ[66] ಕಾವೇರಿ ನದಿಗೆ ಕಟ್ಟಿದ ಕಟ್ಟೆ ಬಗ್ಗೆ ಹೇಳುತ್ತಾ ತೊಂಡನೂರವರಿಗೂ ಅದರಿಂದ ಲಭ್ಯವಾಗಿದ್ದನ್ನು ದಾಖಲಿಸಿದೆ. ಇದಕ್ಕೆ ಪೂರಕವಾಗಿ ವಿಜಯನಗರದ ಅರಸರ ಕಾಲಕ್ಕೆ ಸೇರಿದ ಏಕೈಕ ಶಾಸನವೂ ತೊಣ್ಣೂರಿನಲ್ಲಿ ಈವರೆಗೆ ದೊರೆತಿಲ್ಲದಿರುವುದು ಇದಕ್ಕೆ ನಿದರ್ಶನವಾಗಿದೆ. ನಾಗಮಂಗಲದ ಪಾಳೆಯಗಾರರೂ ಸೇರಿದಂತೆ ವಿಜಯನಗರದರಸರ ಕಾಲದಲ್ಲಿ ಮೇಲುಕೋಟೆಗೆ ಸಮೃದ್ಧ ರಾಜಾಶ್ರಯ ಲಭಿಸಿದಂತೆ ತೋರುತ್ತದೆ.[67] ನೆರೆಯ ಮೇಲುಕೋಟೆಯ ಕ್ರಿ.ಶ.೧೫೨೮ರ ಶಾಸನದ[68] ವೇಳೆಗೆ ತೊಂಡನೂರು ಗ್ರಾಮವು, ಮೇಲುಕೋಟೆಯ ದೇವಾಲಯಕ್ಕೆ ಸೇರಿದ ದತ್ತಿ ಭೂಮಿಗಳಿದ್ದ ಒಂದು ಸಾಧಾರಣ ಗ್ರಾಮವಾಗಿತ್ತೆಂದು ಊಹಿಸಬಹುದಾಗಿದೆ. ಮೇಲುಕೋಟೆಯ ನಾಮದಕಟ್ಟೆ ಗರುಡ ದೇವಸ್ಥಾನದ ಎದುರಿನ ಯತಿರಾಜಸ್ವಾಮಿ ವೃಂದಾವನ ಮಂಟಪದ ಮೇಲಿರುವ ಸುಮಾರು ಕ್ರಿ.ಶ.೧೮‑೧೯ನೆಯ ಶತಮಾನದ ಶಾಸನದಿಂದ,[69] ಯತಿರಾಜಮಠದ ವೃಂದಾವನಸ್ಥ ಯದುಗಿರಿ ಸಂಪತ್ಕುಮಾರ ಸ್ವಾಮಿಗಳು, ಪೂರ್ವಾಶ್ರಮದಲ್ಲಿ ಪ್ರತಿವಾದಿ ಭಯಂಕರರಾದ ತೊಂಡನೂರ ಶಿಂಗಾರಯ್ಯಂಗಾರ್ ಸ್ವಾಮಿಗಳಾಗಿದ್ದ ಅಂಶ ಗೊತ್ತಾಗುತ್ತದೆ.

ವಿಜಯನಗರದರಸರ ನಂತರ ಈ ಭಾಗದಲ್ಲಿ ತಲೆ ಎತ್ತಿದ್ದ ಮೈಸೂರು ಅರಸರ ಆಳ್ವಿಕೆಯಲ್ಲಿ ತೊಂಡನೂರು ಮತ್ತೆ ಅಗ್ರಹಾರವಾಗಿ ಪುನರ್ ಜೀರ್ಣೋದ್ಧಾರ ಹೊಂದುವ ಮೂಲಕ ಶ್ರೀ ವೈಷ್ಣವ ಅಗ್ರಹಾರವಾಗಿ ಮಹತ್ವಪಡೆದ ಅಂಶ ಇಮ್ಮಡಿ ಕೃಷ್ಣರಾಜ ಒಡೆಯರ ಕ್ರಿ.ಶ. ೧೭೨೨ರ ತೊಣ್ಣೂರು ತಾಮ್ರಶಾಸನದಿಂದ[70] ವೇದ್ಯವಾಗುತ್ತದೆ. ಈ ಶಾಸನದಲ್ಲಿ ಶ್ರೀವೈಷ್ಣವರ ವಾಸಕ್ಕೆ ಇದು ಯೋಗ್ಯವಾದ ಸ್ಥಳವೆಂದು ಹೇಳಲಾಗಿದ್ದು, ತೊಣ್ಣೂರು, ಹಿಂದೆ ಪ್ರಮುಖ ಅಗ್ರಹಾರವಾಗಿ ರೂಪುಗೊಂಡು ಹೊಯ್ಸಳ ವಿಷ್ಣುವರ್ಧನನ ಪಾಲನೆಗೂ, ಶ್ರೀವೈಷ್ಣವ ಯತಿ ರಾಮಾನುಜರ ಪಾದಸ್ಪರ್ಶಕ್ಕೂ ಒಳಪಟ್ಟು ಪಾವನವಾಯಿತೆಂದು ಹೇಳಲಾಗಿದ್ದು, ಯಾದವಗಿರಿಯಿಂದ ಅರ್ಧಯೋಜನಾ ದಕ್ಷಿಣಕ್ಕೆ ಇದ್ದ ತೊಂಡನೂರಿನ ರಾಮಾನುಜ ತೀರ್ಥತಟಾಕದ ಪೂರ್ವಕ್ಕೆ ಹಾಗೂ ನಾರಾಯಣಗುಡಿಯಿಂದ ಮತ್ತೂ ಪೂರ್ವಕ್ಕೆ ಇರುವ ಯಾದವನಾರಾಯಣ ವಸಂತಗೋಪಾಲದೇವರ ಭವನಕ್ಕೆ ಹಾಗೂ ಅಲ್ಲಿನ ಅಗ್ರಹಾರದ ೧೧೨ ಬ್ರಾಹ್ಮಣರ ಜೀವಿತಕ್ಕೆಂದು ‘ಯಾದವಪುರಿ ಅಗ್ರಹಾರ ಹೋಬಳಿ’ಯಲ್ಲಿದ್ದ ಯಾದವಪುರಿ (ತೊಂಡನೂರು) ಹಾಗೂ ಅತ್ತಿಕುಪ್ಪೆ ಗ್ರಾಮಗಳನ್ನು ಸರ್ವನಮಸ್ಯವಾಗಿ ದತ್ತಿ ಬಿಟ್ಟ ಅಂಶ ಉಲ್ಲೇಖಾರ್ಹವಾಗಿದೆ. ಅಲ್ಲದೆ ‘ಯಾದವಪುರಿ ಅಗ್ರಹಾರ ಹೋಬಳಿ’ಯಲ್ಲಿದ್ದ ಗ್ರಾಮಗಳ ಎಲ್ಲೆಯನ್ನು ವಿವರಣೆಯೊಂದಿಗೆ ನೀಡುತ್ತದೆ. ಈ ಶಾಸನದಲ್ಲಿ ಅನೇಕ ಜನಪದೀಯ ಅಂಶಗಳಿದ್ದು ಕುತೂಹಲವನ್ನುಂಟು ಮಾಡುತ್ತವೆ.

ತೊಣ್ಣೂರಿನಲ್ಲಿ ದರ್ಗಕ್ಕೆ ಕ್ರಿ.ಶ. ೧೭೫೯ ಹಾಗೂ ಕ್ರಿ.ಶ. ೧೭೯೯ರಲ್ಲಿ ಹೈದರನಿಂದ ದತ್ತಿ ನೀಡಲ್ಪಟ್ಟಿದೆ. ಸಂತನು ಹೈದರ್‌ನ ಕನಸಿನಲ್ಲಿ ಕಾಣಿಸಿಕೊಂಡು, ಹಿಂದೂ-ಮುಸ್ಲಿಂ ಐಕ್ಯತೆಯ ಮಂತ್ರವನ್ನು ಪಠಿಸಿ, ತನ್ನ ಗೋರಿ ತೊಣ್ಣೂರಿನಲ್ಲಿ ಇದೆಯೆಂದು ಹೇಳಿದ ಪರಿಣಾಮವಾಗಿ, ಈ ದರ್ಗ ಹೈದರ್ ಕಾಲದಲ್ಲಿ ಮಹತ್ವ ಪಡೆದು ಅದರ ನಿರ್ವಹಣೆಗೆ ಚಟ್ಟಂಗೆರೆ ಗ್ರಾಮವನ್ನು ಸರ್ವಮಾನ್ಯವಾಗಿ ದತ್ತಿನೀಡಿದ ಅಂಶವನ್ನು ನಾವು ಈಗಾಗಲೇ ನೋಡಿದ್ದೆವೆ. ಈ ದರ್ಗಕ್ಕೆ ಹಿಂದೂ ಮುಸ್ಲಿಂರೆನ್ನದೆ ಎಲ್ಲರೂ ನಡೆದುಕೊಳ್ಳುತ್ತಾರೆ. ದತ್ತಿ ನೀಡಲ್ಪಟ್ಟಿರುವ ಚಟ್ಟಂಗೆರೆ, ನೆರೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿರುವ ಗ್ರಾಮವಾಗಿದೆ. ಈ ದರ್ಗವಿರುವ ಸ್ಥಳದಲ್ಲಿ ಉತ್ಖನನ ನಡೆಸಿದರೆ ನಗರೇಶ್ವರ ದೇವಾಲಯವೂ ಸೇರಿದಂತೆ, ಹಿಂದೆ ಅಲ್ಲಿದ್ದಿರಬಹುದಾದ ಜೈನ ಬಸದಿಯ ಅವಶೇಷಗಳು ಲಭಿಸುವ ಸಾಧ್ಯತೆಗಳಿವೆ.

ತೊಣ್ಣೂರಿನ ಕೆರೆಗೆ ಪ್ರಾಚೀನ ಇತಿಹಾಸವಿದ್ದು. ಇತಿಹಾಸ ಪೂರ್ವಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಹೊಯ್ಸಳರ ಕಾಲದಲ್ಲಿ ವಿಸ್ತೃತಗೊಂಡು ವಿಜಯನಗರ, ಮೈಸೂರು ಅರಸರ ಕಾಲದಲ್ಲಿ ಸಾಕಷ್ಟು ಸುಧಾರಿಸಲ್ಪಟ್ಟಿತ್ತು. ‘\ರುಮಲಸಾಗರ’ ಎಂಬ ಹೆಸರನ್ನು ಹೊಂದಿದ್ದ ಇದರ ನೀರು, ಪಾಚಿರಹಿತವಾಗಿದ್ದು, ಅದನ್ನು ಕಂಡು ಉಲ್ಲಾಸಿತಗೊಂಡ ಹೈದರಬಾದಿನ ನಾಸಿರ್ ಜಂಗನು ಕ್ರಿ.ಶ. ೧೭೬೬ರಲ್ಲಿ ಮೋತಿತಲಾಬ್ (ಮುತ್ತಿನಕೆರೆ) ಎಂದು ನಾಮಕರಣ ಮಾಡಿದನು. ಆಂಗ್ಲೊ-ಮೈಸೂರು ಯುದ್ಧ ಸಂದರ್ಭದಲ್ಲಿ ಶತ್ರುಗಳಿಗೆ ಉಪಯೋಗ ವಾಗದಿರಲೆಂಬ ಉದ್ದೇಶದಿಂದ ಟಿಪ್ಪು ಅದರ ಒಡ್ಡನ್ನು ಒಡೆಸಿ ಕೆರೆಯನ್ನು ಬರಿದಾಗಿಸಿದ್ದನೆಂದು ಹೇಳಲಾಗುತ್ತದೆ. ಮುಂದೆ ಇದನ್ನು ಮೈಸೂರು ಅರಸರು ಪುನರ್ ಜೀರ್ಣೋದ್ಧಾರ ಮಾಡಿಸಿದರೆಂದು ತಿಳಿದುಬರುತ್ತದೆ. ಇಂದು ಈ ಕೆರೆ ತೊಣ್ಣೂರಿನ ವಿಶೇಷ ಆಕರ್ಷಣೆಯಾಗಿದೆ. ಇತ್ತೀಚಿನ ಹೇಮಾವತಿ ನದಿಯ ಕಾಲುವೆಯ ನೀರನ್ನು ತೊಣ್ಣೂರಿನ ಕೆರೆಗೆ ಹರಿಸುವ ಮೂಲಕ ಲೋಕೋಪಯೋಗಿ ಇಲಾಖೆಯು ನೀರಾವರಿ ಸೌಕರ್ಯವನ್ನು ದ್ವಿಗುಣಗೊಳಿಸಿದೆ.

ಟಿಪ್ಪುಸುಲ್ತಾನನ ಪತನಾನಂತರ (ಕ್ರಿ.ಶ.೧೭೯೯) ಮದ್ರಾಸ್ ಪ್ರೆಸಿಡೆನ್ಸಿಯ ಕೋರಿಕೆಯಂತೆ ಟಿಪ್ಪುವಿನ ರಾಜ್ಯದಲ್ಲಿ ಸರ್ವೇಕ್ಷಣ ಪ್ರವಾಸವನ್ನು ಕೈಗೊಂಡಿದ್ದ ಫ್ರಾನ್ಸಿಸ್ ಬುಕಾನನ್[71] ಕ್ರಿ.ಶ. ೧೮೦೦ರ ಆಗಸ್ಟ್ ೩೧ರಂದು ಮೇಲುಕೋಟೆಯಿಂದ ತೊಣ್ಣೂರು ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ತೆರಳಿದ ಸಂದರ್ಭದಲ್ಲಿ ತೊಣ್ಣೂರು ಕೆರೆ, ಅಲ್ಲಿಯ ಲಕ್ಷ್ಮೀನಾರಾಯಣ ಗುಡಿಯನ್ನು ಟಿಪ್ಪುವಿನ ಅಧಿಕಾರಿಯು ಅಷ್ರಫ್ ಕಛೇರಿಯನ್ನಾಗಿ ಮಾಡಿಕೊಂಡಿದ್ದ ಅಂಶವನ್ನು ದಾಖಲಿಸಿದ್ದಾನೆ. ಮಿಗಿಲಾಗಿ ರಾಮಾನುಜಾಚಾರ್ಯರು. ತೊಣ್ಣೂರಿಗೆ ಕ್ರಿ.ಶ. ೧೦೯೮ರಲ್ಲಿ ಭೇಟಿಕೊಟ್ಟಿದ್ದರೆಂದೂ ದಾಖಲಿಸಿದ್ದಾನೆ. ಮುಂದೆ ಕ್ರಿ.ಶ. ೧೮೦೧ರ ಜೂನ್ ೨ರಂದು,[72] ಕಣ್ಣು ಬೇನೆಯಿಂದ ನರಳುತ್ತಿದ್ದ ಬುಕಾನನ್ ಶ್ರವಣ ಬೆಳಗೊಳದಿಂದ ಶ್ರೀರಂಗಪಟ್ಟಣಕ್ಕೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ತೊಣ್ಣೂರಿನಲ್ಲಿ ತಂಗಬೇಕಾಗಿ ಬಂದಿದ್ದೊಂದು ಆಕಸ್ಮಿಕವಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಂತೆ ಶ್ರೀರಂಗಪಟ್ಟಣಕ್ಕೆ ಹಿಂದಿರುಗಿದನು. ಮುಂದೆ ಕಮೀಷನರ್‌ಗಳ ಆಳ್ವಿಕೆಯಲ್ಲೂ (ಕ್ರಿ.ಶ. ೧೮೩೧‑೮೧) ತೊಣ್ಣೂರು ಒಂದು ತಾಲೂಕು ಕೇಂದ್ರವಾಗಿದ್ದು, ಆಡಳಿತ ಕಛೇರಿಯು ತೊಣ್ಣೂರಿನ ದೇವಾಲಯ ವೊಂದರಲ್ಲಿತ್ತೆಂದು ತಿಳಿದುಬರುತ್ತದೆ. ಅನಂತರ ಅದನ್ನು ಶುಚಿಪಡಿಸಲಾಯಿತಂತೆ.

ಇಲ್ಲಿಯ ಲಕ್ಷ್ಮೀನಾರಾಯಣನ ತಿರುನಾಳಿಗೆಂದು ದೇವರಾಜಪಟ್ಟಣವನ್ನು ಉಂಬಳಿ ಬಿಟ್ಟ ಅಂಶವನ್ನು ಸುಮಾರು ೧೯ನೇ ಶತಮಾನದ ಶಾಸನ[73] ತಿಳಿಸುತ್ತಿದ್ದು ಶಾಸನೋಕ್ತ ದೇವರಾಜಪಟ್ಟಣವಿಂದು ತೊಣ್ಣೂರು ಗ್ರಾಮದ ಗಡಿಯಂಚಲ್ಲಿ ಪಾಳುಬಿದ್ದಿದೆ. ಇದು ತೊಣ್ಣೂರಿಗೆ ಸಂಬಂಧಿಸಿದ ಕೊನೆಯ ಶಾಸನವಾಗಿದೆ.

ನಾಡಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೆರೆಯ ಮೇಲುಕೋಟೆಯ ಬಿ.ವಿ. ಸಂಪತ್ಕು ಮಾರಚಾರ್ಯ, ಅರೆಯರ್ ಶ್ರೀನಿವಾಸಯ್ಯಂಗಾರ್, ರಾಮಾನುಜ ಅಯ್ಯಂಗಾರ್, ಹಾಗೂ ಕೆ. ಶ್ರೀನಿವಾಸಯ್ಯಂಗಾರ್, ಲಕ್ಷ್ಮೀಸಾಗರದ ಚಲುವೇಗೌಡ, ಪಟೇಲ್ ಚಿಕ್ಕಪುಟ್ಟೇಗೌಡ ಮುಂತಾದವರು ೧೯೩೦ರಿಂದ ಭಾಗವಹಿಸಿದ್ದು, ಅದರ ಪ್ರಭಾವಕ್ಕೆ ತೊಣ್ಣೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಒಳಗಾಗಿದ್ದವು.[74] ಅದರಂತೆ, ಈ ಗ್ರಾಮದ್ದೂ ಅಲ್ಪಸ್ವಲ್ಪ ಪಾತ್ರವಿದ್ದಂತೆ ತೋರುತ್ತದೆ. ಸ್ವಾತಂತ್ರ್ಯೋತ್ತರದಲ್ಲಿ ತೊಣ್ಣೂರು ಪ್ರಮುಖ ಪ್ರವಾಸಿಕೇಂದ್ರವಾಗಿ ಖ್ಯಾತಿ ಪಡೆದು ಇಂದು ಕೆರೆತೊಣ್ಣೂರೆಂದೇ ಚಿರಪರಿಚಿತವಾಗಿದೆ. ಪ್ರಾಚೀನ ದೇವಾಲಯಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಪುರಾತತ್ವ ಇಲಾಖೆಯು ಘೋಷಿಸಿದ್ದು, ಅವುಗಳ ಸುರಕ್ಷತೆಗೆ ಗಮನ ನೀಡುತ್ತಿದೆ. ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯನವರು ನೆರೆಯ ಇಂಗಲಗುಪ್ಪೆ ಯವರಾಗಿದ್ದು, ಅವರ ಸಮಾಧಿ ಇಲ್ಲಿದೆ. ಇಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿದೆ.

ತೊಣ್ಣೂರಿನ ದೇವಾಲಯಗಳು ನಿರಾಡಂಬರವಾಗಿದ್ದರೂ ಆಕರ್ಷಕವಾಗಿದ್ದು, ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಆದರೆ ಅವುಗಳನ್ನು ತನ್ನ ಒಡಲಲ್ಲಿ ಹೊಂದಿರುವ ತೊಣ್ಣೂರು ಗ್ರಾಮ ಪ್ರವಾಸಿತಾಣವಾಗಿದ್ದರೂ, ಕುಗ್ರಾಮವಾಗೇ ಮುಂದುವರಿದಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಕೆರೆತೊಣ್ಣೂರನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಸ್ಥಳೀಕರೂ ಅದಕ್ಕೆ ಸ್ಪಂದಿಸಬೇಕಿದೆ.


[1] ಶಿವತಾರಕ್ ಕೆ. ೨೦೦೧: ಕರ್ನಾಟಕದ ಪುರಾತತ್ವ ನೆಲೆಗಳು, ಕ.ವಿ.ವಿ ಹಂಪೆ

[2] John.F.Kittel: Kannada‑English Dictionary, p.751-52

[3] E.C.VI. ಪಾಂ.೧೧೦, ಪುಟ ೨೦೭‑೦೮

[4] ಅದೇ ಪಾಂ.೯, ಪುಟ ೧೦೯

[5] ಅದೇ, ಪಾಂ. ೩೮, ಪುಟ ೧೨೯

[6] ಕರ್ನಾಟಕ ಗ್ರಾಮಸೂಚಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

[7] ಇದೇ ಸಂಪುಟದಲ್ಲಿರುವ ಡಾ.ಮಹಾದೇವಯ್ಯ, ಅವರ ಲೇಖನ ನೋಡಿ (ವಿವರಗಳಿಗೆ)

[8] ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ (ಪರಿಷ್ಕೃತ ಕನ್ನಡ ಆವೃತ್ತಿ), ಬೆಂಗಳೂರು ‑೨೦೦೩ ಮತ್ತು Melukote through the Ages ಕೃತಿ ನೋಡಿ.

[9] E.C.VI. ಪಾಂ. ೫೨, ಪು ೧೩೫;

[10] ಅದೇ, ಪಾಂ. ೨೫೩, ಪು.೩೨೪;

[11] ಅದೇ, ಪಾಂ. ೧೬. ಪುಟ ೧೧೩.

[12] B.L.Rice: Mysore Gazetteer. Vol Ii, 1897. Mondya District Gazetter. ಸೇರಿದಂತೆ (ಕನ್ನಡ ಮತ್ತು ಆಂಗ್ಲ ಆವೃತ್ತಿ) ಅನೇಕ ಕೃತಿಗಳಲ್ಲಿ ಈ ಅಭಿಪ್ರಾಯವಿದೆ. ಅಲ್ಲದೆ ನೋಡಿ ಟಿ.ವಿ.ವೆಂಕಟರಾಮಯ್ಯ ಸಂ: ಶ್ರೀವೈಷ್ಣವಕ್ಷೇತ್ರ ತೊಣ್ಣೂರು, ಬೆಂಗಳೂರು ೨೦೦೩, ಮುತ್ತಿನಕೆರೆ: ಸ್ಮರಣ ಸಂಚಿಕೆ.

[13] ಮಂಡ್ಯ ಜೀಲ್ಲಾ ಗ್ಯಾಸೆಟಿಯರ್ (ಕನ್ನಡ ಆವೃತ್ತಿ), ಕೆರೆತೊಣ್ಣೂರು ನೋಡಿ

[14] E.C. V ಮೈ ೧೩೫, ಪುಟ ೨೭೫ ‑೭೬

[15] ಅದೇ, VI ಪಾಂ.೧೧, ಪುಟ ೧೧೦ ‑೧೧

[16] ಅದೇ, ಪಾಂ.೨೨೫, ಪುಟ ೩೦೬

[17] ಅದೇ, ಪಾಂ.೯೩, ಪುಟ ೧೫೯

[18] ಅದೇ, ಪಾಂ.೫೫, ಪುಟ ೧೩೬ ‑೩೭

[19] ಅದೇ, V ತಿ.ನ.೧೯೭ (ತಲಕಾಡು), ಪುಟ ೫೭೦, ಹೊಯ್ಸಳ ವಿಷ್ಣುವರ್ಧನನ ಶಾಸನ! ಎಂಬೆರುಮಾನ್ ಉಲ್ಲೇಖವಿದೆ.

[20] E.C. V ತಿ.ನ.೧೫೧, ಪುಟ ೫೫೭‑೫೯

[21] E.C. VI ಪಾಂ. ೭೩, ಪುಟ ೧೪೮

[22] ಆದರೆ ಚೋಳರ ಆಡಳಿತಾವಧಿಯಲ್ಲಿ ಅನೇಕ ಶ್ರೀವೈಷ್ಣವ ದೇವಾಲಯಗಳು ನಿರ್ಮಾಣಗೊಂಡುದಕ್ಕೆ ದಾಖಲೆಗಳಿವೆ. ಕರ್ನಾಟಕದಲ್ಲಿ ಮಾರೇಹಳ್ಳಿ (ಮಳವಳ್ಳಿ ತಾ.) ಬೆಳಗೊಳ (ಶ್ರೀರಂಗಪಟ್ಟಣ ತಾ.) ಮಳೂರು, ಮಳೂರುಪಟ್ಟಣ (ಚೆನ್ನಪಟ್ಟಣ ತಾ.) ಮುಂತಾದೆಡೆ ಶ್ರೀ ವೈಷ್ಣವ ಗುಡಿಗಳಿರುವುದು ಗಮನಾರ್ಹವಾಗಿದೆ.

[23] ರಾಮಾನುಜರು ನಾಗಮಂಗಲ, ಬಿಂಡಿಗನವಿಲೆ, ಬೆಳ್ಳೂರು, ಪಡುವಲಪಟ್ಟಣ ಮುಂತಾದೆಡೆಗಳಿಗೂ ಭೇಟಿ ನೀಡಿದ್ದರೆಂಬ ಐತಿಹ್ಯ, ಸ್ಥಳೀಯವಾಗಿ ರೂಢಿಯಲ್ಲಿದೆಯಾದರೂ ಅದಕ್ಕೆ ಪೂರಕ ಆಧಾರಗಳಿಲ್ಲ. ಪಡುವಲಪಟ್ಟಣದಲ್ಲಿ ರಾಮಾನುಜರು ತಪಸ್ಸು ಮಾಡಿದ ಸ್ಥಳವನ್ನು ಸೂಚಿಸುವ ಶಾಸನೊಲ್ಲೇಖವನ್ನು ಮುಂದಿಡಲಾಗುತ್ತದೆ. ಆದರೆ ಅದು ೧೯ನೆಯ ಶತಮಾನಕ್ಕೆ ಸೇರಿದ್ದು, ೧೨ನೇಯ ಶತಮಾನದಲ್ಲಿದ್ದ ರಾಮಾನುಜರಿಗೂ ಅದಕ್ಕೂ ಸಂಬಂಧವಿಲ್ಲ(E.C. VII ನಾಗ ೧೮, ೧೯, ಪು.೧೫).

[24] E.C. VI ಶ್ರೀ ೭೦, ಪುಟ ೪೦೧ ‑೦೨

[25] E.C. VI, ಪುಟ XIII

[26] E.C. V ತಿ.ನ. ೧೫೧, ಪುಟ ೫೫೭ (೧೧೧೭) ವಿಷ್ಣುವರ್ಧನ ಬಿಟ್ಟಿಗ ಎಂಬ ಉಲ್ಲೇಖವಿದೆ. E.C. VII ನಾಗ ೯೧, ಪುಟ ೩೬, ಹೊಯ್ಸಳ ಬಿಟ್ಟಿದೇವ ಎಂದೇ ಕರೆಯಲಾಗಿದೆ.

[27] ಕ್ಷೇತ್ರಕಾರ್ಯದಲ್ಲಿ ಗಮನಿಸಿದ ಅಂಶ. Mandya District Gazetteer.

[28] E/C/ VI ಪಾಂ. ೫೬, ಪುಟ ೧೩೭

[29] ಅದೇ, ಪಾಂ. ೧೫, ಪುಟ ೧೧೩

[30] ಅದೇ, ಪಾಂ. ೧೧೯, ಪುಟ ೨೧೩

[31] ಅದೇ, ಪಾಂ. ೨೫೪, ಪುಟ ೩೨೪, ಪಾಂ, ೯೮, ಪುಟ ೧೪೩

[32] ಅದೇ, ಪಾಂ. ೧೧೯, ಪುಟ ೨೧೩

[33] ಅದೇ, ಕೃ.ಪೆ.೪೨, ಪುಟ ೩೨

[34] ಪಾಂ. ೯೬, ಪುಟ ೧೬೦

[35] ಅದೇ, ಪಾಂ. ೮೮, ಪುಟ ೧೫೬

[36] ಅದೇ

[37] ಅದೇ, ಪಾಂ. ೮೨, ಪು. ೧೫೩, ಪಾಂ. ೮೬, ಪುಟ ೧೫೫

[38] ಅದೇ, ಪಾಂ. ೭೫, ಪುಟ ೧೪೯

[39] ತೈಲೂರು ವೆಂಕಟಕೃಷ್ಣ (೨೦೦೨) ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಮಂಡ್ಯ ಪುಟ ೧೧೫, ಯುಗಾದಿ ಹಬ್ಬದಲ್ಲಿ ಇದನ್ನು ಪೂಜಿಸಿ ಹೊನ್ನಾರು ಹೂಡುತ್ತಾರೆ.

[40] ಎಂ.ಎಸ್.ಕೃಷ್ಣಮೂರ್ತಿಯವರ ವಿಚಾರಗೋಷ್ಠಿಯ ಭಾಷಣದ ಸಾರ

[41] E.C. VI ಪಾಂ. ೧೦೦‑೦೧, ಪುಟ ೨೦೩

[42] ಅದೇ, ಪಾಂ. ೧೦೫, ಪುಟ ೨೦೫

[43] ಅದೇ, ಪಾಂ. ೧೧೦, ಪುಟ ೨೦೭ ‑೦೮

[44] ಅದೇ, ಪಾಂ. ೧೧೪ ‑೧೧೬, ಪುಟ ೨೧೦ ‑೧೧

[45] ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ (ಕನ್ನಡ ಆವೃತ್ತಿ) ನೋಡಿ: ಕೆ.ಅನಂತರಾಮು, ಸಕ್ಕರೆ ಸೀಮೆ

[46] E.C. VI ಪಾಂ. ೬೦, ಪುಟ ೧೩೮

[47] ಅದೇ, ಪಾಂ. ೬೩, ಪುಟ ೧೩೯ ೪೦

[48] ಅದೇ, ಪಾಂ. ೬೪, ಪುಟ ೧೪೦

[49] ಅದೇ, ಪಾಂ.೬೬, ಪುಟ ೧೪೧ ‑೦೨

[50] ಅದೇ, ಪಾಂ. ೭೨, ಪುಟ ೧೪೭

[51] ಅದೇ, ಪಾಂ. ೭೪, ಪುಟ ೧೪೮

[52] ಅದೇ, ಪಾಂ. ೩೮, ಪುಟ ೧೫೧

[53] ಅದೇ, ಪಾಂ. ೭೧, ಪುಟ ೧೪೬

[54] ಅದೇ, ಪಾಂ. ೭೯, ಪುಟ ೧೫೧

[55] ಅದೇ, ಪಾಂ. ೬೯, ಪುಟ ೧೪೪

[56] E.C. VI ಪಾಂ. ೮೧, ಪುಟ ೧೫೨ ‑೫೩

[57] ಅದೇ, ಪಾಂ. ೧೨೧, ಪುಟ ೨೧೪

[58] ಅದೇ, ಪಾಂ. ೬೮, ಪುಟ ೧೪೩

[59] ಅದೇ, ಪಾಂ. ೧೨೨, ಪುಟ ೨೧೫ ೧೬

[60] Mandya District Gazetter, Bangalore

[61] E.C. V ತಿ.ನ. ೨೬೬ (ಮೂಗೂರು ‑೧೩೩೬), ಪುಟ ೬೪೭

[62] E.C. VI ಕೃಪೇ. ೧೦೨ ‑೧೦೪, ಪುಟ ೯೨‑೯೪

[63] ಅದೇ, ಪಾಂ. ೨೩೬ ಹಾಗೂ ೨೪೦, ಪುಟ ೩೧೫ ‑೧೮೦

[64] ಅದೇ, ಪಾಂ. ೨೩೧, ಪುಟ ೩೧೨

[65] ಅದೇ, ಪಾಂ. ೨೫೮, ಪುಟ ೩೨೬

[66] ಅದೇ, ಪಾಂ. ೧೯, ಪುಟ ೧೧೫ ‑೧೨೦

[67] ಅದೇ, ಪಾಂ. ೧೭೯, ಪುಟ ೨೫೪‑೫೬ (ಮೇಲುಕೋಟೆ ‑೧೪೫೮); ಪಾಂ. ‑೧೪೪, ಪುಟ ೨೩೫

[68] ಅದೇ, ಪಾಂ. ೧೩೪, ಪುಟ ೨೨೮

[69] ಅದೇ. ಪಾಂ. ೧೮೪, ಪುಟ ೨೫೮

[70] ಅದೇ, ಪಾಂ.೯೯, ಪುಟ ೧೬೧ ೮೦

[71] ಫ್ರಾನ್ಸಿಸ್ ಬುಕಾನನ್ ಎ: A Journery from Malabar through the countries Mysore, canara and Malabar, I and III

[72] ಅದೇ

[73] E.C. VI ಪಾಂ. ೫೩, ಪುಟ ೧೩೬

[74] ಡಾ.ಸೂರ್ಯನಾಥ ಕಾಮತ್ ಸ್ವಾತಂತ್ರ್ಯ ಸಂಗ್ರಾಮ ಸ್ಮೃತಿಗಳು, ಬೆಂಗಳೂರು, ಸಂಪುಟ ೨ ನೋಡಿ.