ಹೊಯ್ಸಳರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ತೊಣ್ಣೂರು, ಶ್ರೀ ರಾಮಾನುಜಾ ಚಾರ್ಯರು ಮತ್ತು ಅವರ ಅನುಯಾಯಿಗಳಿಂದಾಗಿ, ತನ್ನ ಹೆಸರನ್ನೂ ಹಾಗೂ ಈಗಿನ ಖ್ಯಾತಿಯನ್ನೂ ಪಡೆದಿದೆ. ಶ್ರೀರಾಮಾನುಜರು ಹೊಯ್ಸಳ ವಿಷ್ಣುವರ್ಧನನನ್ನು ಈ ಊರಿನಲ್ಲೇ ಮೊಟ್ಟಮೊದಲ ಬಾರಿಗೆ ಭೇಟಿಯಾದರೆಂದು ಪ್ರತೀತಿ. ಆ ಹೊತ್ತಿಗಾಗಲೇ ತೊಣ್ಣೂರು ಒಂದು ಸಣ್ಣ ಊರಾಗಿ ಬೆಳೆದಿತ್ತು. ಯಾದವಸಮುದ್ರವೆಂದೂ, ತದನಂತರ ಮೋತಿ ತಲಾಬ್ ಎಂದೂ ಪ್ರಖ್ಯಾತವಾದ ಕೆರೆಯ ಒಂದು ಮೂಲ ರೂಪ ಆಗಲೇ ಇಲ್ಲಿ ಇತ್ತು. ಶ್ರೀರಾಮಾನುಜಾಚಾರ್ಯರು ಮತ್ತು ಅವರ ಅನುಯಾಯಿಗಳು ಈ ಊರಿಗೆ ಬಂದು ನೆಲೆಸಿದ ನಂತರ ಈ ಸ್ಥಳ ಹೆಚ್ಚು ಪ್ರಸಿದ್ದಿಯಾಯಿತು. ತೊಣ್ಣೂರು ಒಂದು ಚತುರ್ವೇದಿಮಂಗಲವಾಗಿ ಬೆಳೆಯಿತು. ಶಾಸನಗಳಲ್ಲಿ ಕಂಡು ಬರುವ ತೊಣ್ಣೂರಿನ ಇತರೆ ಹೆಸರುಗಳೆಂದರೆ ತೊಂಡನೂರು

[1], ತೊಂಡನೂರು ಅಗ್ರಹಾರ[2], ಯಾದವಗಿರಿ[3], ಯಾದವಪುರ[4] ಮತ್ತು ಯಾದವ ನಾರಾಯಣ ಚತುರ್ವೇದಿಮಂಗಲ[5]. ತೊಣ್ಣೂರು ಹೊಯ್ಸಳ ಒಂದು ಪ್ರಾಂತೀಯ ರಾಜಧಾನಿಯಾಗಿತ್ತೆಂದೂ, ವಿಷ್ಣುವರ್ಧನನು ಯುವರಾಜನಾಗಿದ್ದಾಗ ತೊಣ್ಣೂರಿನಿಂದ ರಾಜ್ಯವಾಳುತ್ತಿದ್ದನೆಂದೂ ಹೇಳಲಾಗಿದೆ.

ತೊಣ್ಣೂರು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲೇ ಅಪ್ರತಿಮವೆನಿಸಿದಂತಹ ಒಂದು ನೆಲೆ. ಕನ್ನಡ ನಾಡಿನಲ್ಲಿ, ಕನ್ನಡ ರಾಜವಂಶದ ನೆರಳಿನಲ್ಲಿ, ಸಂಪೂರ್ಣ ತಮಿಳು ಸಂಸ್ಕೃತಿಯ ನೆಲೆಯಾಗಿದ್ದ ತೊಣ್ಣೂರಿನಲ್ಲಿ ತಮಿಳು  ಸಮುದಾಯವೊಂದು ಶಾಂತಿಯಿಂದ ಸಹಬಾಳ್ವೆ ನಡೆಸಿದ ಸಂಗತಿ ನಿಜಕ್ಕೂ ಪ್ರಶಂಸನೀಯ. ಕನ್ನಡ ನಾಡಿನಲ್ಲಿ ಹೊಯ್ಸಳ ರಾಜ್ಯದ ಕೇಂದ್ರ ಭಾಗದಲ್ಲಿ, ತಮಿಳು ಸಂಸ್ಕೃತಿಯನ್ನೂ, ತಮಿಳು ಭಾಷೆಯನ್ನೂ, ತಮಿಳು ವಾಸ್ತು ಶೈಲಿ ಯನ್ನೂ, ತಮಿಳು ಶಿಲ್ಪಿಗಳಿಂದ ಕಟ್ಟಿದ ದೇವಾಲಯಗಳನ್ನೂ, ತಮಿಳುನಾಡಿನ ಪೋಷಕರನ್ನೂ, ತಮಿಳು ಪೂಜಾವಿಧಾನ ಆಚರಣೆಗಳನ್ನೂ, ತಮಿಳು ಹೆಸರನ್ನೂ ಹೊಂದಿದ್ದಂತಹ ಏಕೈಕ ತಮಿಳು ನೆಲೆ ಇದಾಗಿತ್ತು. ಇಂತಹ ಒಂದು ತಮಿಳುಮಯವಾದ ನೆಲೆ ಕರ್ನಾಟಕದಲ್ಲಿ ಹೊಯ್ಸಳ ರಾಜ್ಯದ ಕೇಂದ್ರಭಾಗದಲ್ಲಿ ಎರಡು ಶತಮಾನಗಳ ಕಾಲ ನೆಮ್ಮದಿಯಿಂದ ಇತ್ತೆಂಬ ವಿಚಾರ ನಿಜಕ್ಕೂ ಹೆಮ್ಮೆಪಡುವಂಥದ್ದು. ಹಾಗೂ ಅನುಕರಣೀಯವಾದದ್ದು. ಇಂತಹ ಸಂಗತಿ ಇಡೀ ದಕ್ಷಿಣ ಭಾರತದ ಇತಿಹಾಸದಲ್ಲಿ ಎಲ್ಲೂ ಕಂಡು ಕೇಳಬರದಿರುವುದು, ಕನ್ನಡಿಗರ ಔದಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ತೊಣ್ಣೂರಿನಲ್ಲಿ ಒಟ್ಟು ನಾಲ್ಕು ಪ್ರಮುಖ ದೇವಾಲಯಗಳಿವೆ. ಅವುಗಳಲ್ಲಿ ಮೂರು ವೈಷ್ಣವ ಪಂಥದ್ದು, ಉಳಿದ ಒಂದು ಮಾತ್ರ ಶೈವ ಪಂಥದ್ದಾಗಿದೆ. ವೈಷ್ಣವ ಪಂಥದ ದೇವಾಲಯಗಳೆಂದರೆ ನಂಬಿನಾರಾಯಣ, ಯೋಗಾನರಸಿಂಹ ಮತ್ತು ಕೃಷ್ಣ ದೇವಾಲಯಗಳು. ಏಕಮಾತ್ರವಾದ ಶೈವ ದೇವಾಲಯವೆಂದರೆ, ಅತ್ಯಂತ ದುಃಸ್ಥಿತಿಯಲ್ಲಿರುವ ಕೈಲಾಸೇಶ್ವರ ದೇವಾಲಯ. ಈ ಎಲ್ಲಾ ದೇವಾಲಯಗಳನ್ನು ಕಂದು ಅಥವಾ ಬೂದು ಬಣ್ಣದ ಗ್ರಾನೈಟ್ ಶಿಲೆಯಿಂದ ನಿರ್ಮಿಸಿದ್ದಾರೆ. ಕೇವಲ ನಂಬಿನಾರಾಯಣನ ದೇವಾಲಯದಲ್ಲಿ, ನವರಂಗದ ನಾಲ್ಕು ಕಂಬಗಳನ್ನು ಮಾತ್ರ ಬಳಪದ ಕಲ್ಲಿನಲ್ಲಿ, ಚರಕಿಯಂತ್ರದಲ್ಲಿ ತಯಾರಿಸಿ ಕೂಡಿಸಿದ್ದಾರೆ.

ನಂಬಿನಾರಾಯಣ/ಲಕ್ಷ್ಮಿನಾರಾಯಣ ದೇವಾಲಯ

ಪೂರ್ವಾಭಿಮುಖವಾಗಿ ನಿರ್ಮಾಣವಾದ ಈ ದೇವಾಲಯವನ್ನು ಶಾಸನಗಳು ಲಕ್ಷ್ಮಿನಾರಾಯಣ ದೇವಾಲಯವೆಂದು ಹೆಸರಿಸುತ್ತವೆ (ನೋಡಿ : ಚಿತ್ರ‑೬). ಆದರೆ ಸ್ಥಳೀಯ ಸಂಪ್ರದಾಯದಲ್ಲಿ ಈ ದೇವಾಲಯ ನಂಬಿನಾರಾಯಣ ದೇವಾಲಯವೆಂದೇ ಪ್ರಸಿದ್ದಿ. ದೇವಾಲಯದಲ್ಲಿ ಅನೇಕ ಶಾಸನಗಳು ದೊರೆತಿವೆ. ಅವುಗಳು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿವೆ. ಕಾಲವನ್ನು ಹೊಂದಿರುವ ಇಲ್ಲಿಯ ಅತ್ಯಂತ ಪ್ರಾಚೀನ ಶಾಸನವು ಕ್ರಿ.ಶ. ೧೧೭೩ರ ಜೂನ್ ತಿಂಗಳ ೧೦ನೆಯ ತಾರೀಖಿನದು[6]. ಇದಲ್ಲದೆ ಕ್ರಿ.ಶ.೧೧೭೪[7], ೧೧೭೫[8], ೧೧೯೬[9] ಮತ್ತು ೧೨೧೪[10]ರ ಕಾಲವನ್ನು ಹೊಂದಿರುವ ಶಾಸನಗಳೂ, ಕಾಲವನ್ನು ತಿಳಿಸದಿರುವ ಶಾಸನಗಳೂ ಅನೇಕ ಸಂಖ್ಯೆಯಲ್ಲಿವೆ.

ತಳವಿನ್ಯಾಸದಲ್ಲಿ ದೇವಾಲಯವು ಗರ್ಭಗೃಹ (೧೦x೧೦ ಅಡಿ), ಅದೇ ಅಳತೆಯ ಶುಕನಾಸಿ ಮತ್ತು ನಾಲ್ಕು ಕಂಬಗಳುಳ್ಳ ನವರಂಗಗಳನ್ನು (೨೫x೨೫ ಅಡಿ) ಹೊಂದಿದೆ (ಎಲ್ಲಾ ಅಳತೆಗಳು ಅಂದಾಜಿನಲ್ಲಿವೆ). ಇವೆಲ್ಲವನ್ನೂ ದೇವಾಲಯದ ಮೂಲ ಅಕ್ಷರೇಖೆಯ ಮೇಲೆ ನಿರ್ಮಿಸಿದ್ದಾರೆ. ನವರಂಗದಲ್ಲಿ ಹೊಯ್ಸಳ ಶೈಲಿಯ ಬಳಪದಕಲ್ಲಿನ ನಾಲ್ಕು ಕಂಬಗಳಿವೆ (ನೋಡಿ : ಚಿತ್ರ‑೭). ನವರಂಗಕ್ಕೆ ಪೂರ್ವ ಮುಖದಲ್ಲಿ ದ್ವಾರವಿದೆ. ಇವಿಷ್ಟು ಅಂಗಗಳನ್ನು ಈ ಅಧ್ಯಯನದಲ್ಲಿ ಮೂಲಗುಡಿ ಎಂದು ಕರೆಯಲಾಗಿದೆ.

ನವರಂಗದ ಪೂರ್ವಮುಖಕ್ಕೆ ಹೊಂದಿಕೊಂಡಂತೆ, ಅಕ್ಷರೇಖೆಗೆ ಲಂಬವಾಗಿ ಒಂದು ವಿಶಾಲವಾದ, ಆಯತಾಕಾರದ, ಅನೇಕ ಕಂಬಗಳನ್ನುಳ್ಳ ಸುತ್ತಲೂ ಗೋಡೆಯಿಂದ ಮುಚ್ಚಿದ ಮಹಾಮಂಟಪ ನಿರ್ಮಾಣವಾಗಿದೆ. ವಿಶಾಲವಾದ (೮೦x೫೦ ಅಡಿ) ಈ ಮಹಾಮಂಟಪದಲ್ಲಿ ೫೬ ಕಂಬಗಳು ಇದ್ದು, ಈಶಾನ್ಯದ ಮೂಲೆಯಲ್ಲಿ ಮಹಡಿಯ ಮೇಲಕ್ಕೆ ಏರಲು ಸೋಪಾನವಿದೆ. ಹಜಾರದ ಪೂರ್ವಮುಖದಲ್ಲಿ ಅಕ್ಷರೇಖೆಗೆ ಹೊಂದಿಕೊಂಡಂತೆ ಒಂದು ದ್ವಾರವಿದೆ. ಈ ಮಹಾಮಂಟಪದ ಪಶ್ಚಿಮ ಮುಖದ ಎರಡೂ ಪಾರ್ಶ್ಚಗಳಲ್ಲಿ ಒಂದೊಂದು ದ್ವಾರಗಳಿವೆ. ಈ ದ್ವಾರಗಳ ಮುಖಾಂತರ, ಗುಡಿಯ ಸುತ್ತಲಿನ ಅಂಗಳಕ್ಕೆ ಪ್ರವೇಶವಿದೆ. ಅಂಗಳದ ಸುತ್ತಲೂ ಕೈಸಾಲೆ ಮಂಟಪವಿದೆ, ಮಹಾಮಂಟಪದ ಪೂರ್ವ ಹಾಗು ಉತ್ತರ  – ದಕ್ಷಿಣ ಭಾಗಗಳು ಗೋಡೆಗಳಿಂದ ಮುಚ್ಚಿವೆ. ಇಲ್ಲಿ ಯಾವುದೇ ಜಾಲಂಧ್ರಗಳಿಲ್ಲ. ಉತ್ತರ -ದಕ್ಷಿಣ ಗೋಡೆಗಳನ್ನು ಪಶ್ಚಿಮಕ್ಕೆ ಮುಂದುವರೆಸಿ ಆಯತಾಕಾರದ ಪ್ರಾಕಾರವನ್ನು ನಿರ್ಮಿಸಿದ್ದಾರೆ. ಪ್ರಾಕಾರ ಗೋಡೆಯ ಒಳಮುಖಕ್ಕೆ ವರಾಂಡ ಅಥವ ಆವೃತಮಂಟಪ ಅಥವ ಮಾಲಿಕಾ ರೀತಿಯ ಕೈಸಾಲೆ ನಿರ್ಮಿಸಿದ್ದಾರೆ (ನೋಡಿ : ಚಿತ್ರ‑೮). ಕೈಸಾಲೆಯ ಮುಮ್ಮುಖದಲ್ಲಿ ಸಾಲಾಗಿ  ಕಂಭಗಳನ್ನು ನಿಲ್ಲಿಸಲಾಗಿದೆ.

ಮಹಾಮಂಟಪದ ಪೂರ್ವಭಿತ್ತಿಯ ಮಧ್ಯದಲ್ಲಿ ಒಂದು ದ್ವಾರವಿದೆ. ಈ ದ್ವಾರದ ಮುಂದೆ ನಾಲ್ಕು ಕಂಬಗಳ ಒಂದು ಮುಖಮಂಟಪವಿದೆ. ಎತ್ತರವಾದ ವೇದಿಯ ಮೇಲೆ ನಿರ್ಮಿತವಾದ ಈ ಮುಖಮಂಟಪಕ್ಕೆ ತ್ರಿಖಂಡ ಸೋಪಾನ ಮತ್ತು ಹಸ್ತಿ-ಹಸ್ತ ಕಟಾಂಜನವಿದೆ (ನೋಡಿ: ಚಿತ್ರ‑೯). ಮುಖಮಂಟಪವನ್ನು ಒಳಗೊಂಡಂತೆ ಈ ದೇವಾಲಯದ ಮುಂಭಾಗದಲ್ಲಿ ವಿಶಾಲವಾದ (೪೦x೯೦ ಅಡಿ), ೫೫ ಕಂಬಗಳನ್ನು ಹೊಂದಿರುವ ಪಾತಾಳಾಂಕಣವಿದೆ. ಪಾತಾಳಾಂಕಣಕ್ಕೆ ಹೊಂದಿಕೊಂಡಂತೆ, ಅದರ ಉತ್ತರದಿಕ್ಕಿನಲ್ಲಿ ಎತ್ತರವಾದ ವೇದಿಯ ಮೇಲೆ, ವಾಹನಮಂಟಪ/ಯಾಗಶಾಲೆ (೩೦x೪೦ ಅಡಿ) ಇದೆ. ಯಾಗಶಾಲೆಯ ವೇದಿಗೆ, ಅದರ ಆಗ್ನೇಯಕ್ಕೆ ಸೋಪಾನವನ್ನು ಕಲ್ಪಿಸಿದ್ದಾರೆ. ಪಾತಾಳಾಂಕಣ, ಯಾಗಶಾಲೆ, ಮೂಲಗುಡಿ ಮತ್ತು ಅದರ ಪ್ರಾಕಾರ ಇವುಗಳೆಲ್ಲವನ್ನೂ ಆವರಿಸಿದಂತೆ ದೇವಾಲಯದ ಹೊರ ಪ್ರಾಕಾರವನ್ನು (೨೧೫x೧೪೫ ಅಡಿ) ಕಟ್ಟಿದ್ದಾರೆ. ಹೊರಪ್ರಾಕಾರದ ನೈರುತ್ಯ ಮೂಲೆಯಲ್ಲಿ ಶ್ರೀಲಕ್ಷ್ಮಿದೇವಿಯ ಪ್ರತ್ಯೇಕ ಗುಡಿಯಿದೆ (ನೋಡಿ: ಚಿತ್ರ‑೧೦). ಹಾಗು ಹೊರಪ್ರಾಕಾರಕ್ಕೆ ಪೂರ್ವದಿಕ್ಕಿನಲ್ಲಿ, ಅಕ್ಷರೇಖೆಗೆ ಸೇರಿದಂತೆ ಮಹಾದ್ವಾರ ಮತ್ತು ಅದರ ಮುಂದಿನ ಮುಖಮಂಟಪ, ಸಣ್ಣ ಮೆಟ್ಟಿಲು ಕೊಳ, ಗರುಡಗಂಬ ಇವೆಲ್ಲವೂ ಇವೆ. ಹೊರಪ್ರಾಕಾರದ ಒಳ ಅಗಲ ಸುಮಾರು ೩೫ ಅಡಿಗಳು.

ದೇವಾಲಯದ ವಿವರಗಳಿಗೆ ಬರುವುದಾದರೆ, ಒಳಪ್ರಾಕಾರದ ಮಧ್ಯಭಾಗದಲ್ಲಿ ಮೂಲಗುಡಿ ಇದೆ (ನೋಡಿ: ಚಿತ್ರ‑೧೧). ಗುಡಿಯ ಗರ್ಭಗೃಹ ಚತುರಸ್ರಾಕಾರವಾಗಿದೆ. ಮಧ್ಯಭಾಗದಲ್ಲಿ ಎತ್ತರವಾದ ಗರುಡ ಪೀಠದ ಮೇಲೆ ಆರು ಅಡಿ ಎತ್ತರದ ನಂಬಿನಾರಾಯಣ ಶಿಲ್ಪವಿದೆ. ಹೊಯ್ಸಳ ಶೈಲಿಯ ಈ ಶಿಲ್ಪವು ಚತುರ್ಬಾಹುಗಳನ್ನು ಹೊಂದಿದೆ. ನಾರಾಯಣನ ಬಲ ಹಿಂಗೈಯಲ್ಲಿ ಪದ್ಮ, ಎಡ ಹಿಂಗೈಯಲ್ಲಿ ಗದೆ, ಬಲ ಮುಂಗೈನಲ್ಲಿ ಶಂಖ ಮತ್ತು ಎಡ ಮುಂಗೈನಲ್ಲಿ ಚಕ್ರಗಳಿವೆ. ಬಳ್ಳಿ ಸುರುಳಿಗಳ ವಿಶಾಲ ಪ್ರಭಾವಳಿ ಶಿಲ್ಪಕ್ಕೆ ಇದೆ. ಹೊಯ್ಸಳ ಶೈಲಿಯ ಈ ಶಿಲ್ಪವು ಸೂಕ್ಷ್ಮ ಅಲಂಕಾರಿಕ ಕೆತ್ತನೆಗಳಿಂದ ಭವ್ಯವಾಗಿ ಕಂಗೊಳಿಸುತ್ತಿದೆ. ಗರ್ಭಗೃಹಕ್ಕೆ ಉತ್ತರಾಭಿಮುಖವಾಗಿ ಪ್ರನಾಳವಿದೆ. ಗರ್ಭಗೃಹದ ಮೇಲ್ಛಾವಣಿ ನಾಭಿಚ್ಛಂದ ರೀತಿಯದು. ಮಧ್ಯದ ಅಂಕಣದಲ್ಲಿ ಪದ್ಮದ ಕೆತ್ತನೆಯಿದೆ. ಒಳಗೋಡೆಯಲ್ಲಿ ಸುತ್ತಲೂ ಕಲ್ಲಿನ ಬಡುಗಳಿವೆ.

ಗರ್ಭಗೃಹದ ದ್ವಾರಬಂಧ ಸಾಕಷ್ಟು ಆಕರ್ಷಕವಾಗಿದೆ. ಇದರಲ್ಲಿ ದಳಪದ್ಮ, ಬಳ್ಳಿಸುರುಳಿ ಇತ್ಯಾದಿಗಳ ನಾಲ್ಕು ಶಾಖೆಗಳು, ಸ್ತಂಭಿಕೆಗಳು, ಕಪೋತ, ಲಲಾಟಬಿಂಬವಾಗಿ ಗಜಲಕ್ಷ್ಮಿ ಮುಂತಾದ ಕೆತ್ತನೆಗಳಿವೆ. ಶುಕನಾಸಿಯ ಮೇಲ್ಛಾವಣಿ ನಾಭಿಚ್ಛಂದ ರೀತಿಯದು. ಮೂರು ಹಂತದ ಛಾವಣಿಯ ಹಲಗೆಗಳ ತ್ರಿಕೋನಗಳಲ್ಲಿ, ಕೀರ್ತಿಮುಖದ ಕೆತ್ತನೆಗಳಿವೆ ಮತ್ತು ಮಧ್ಯಭಾಗದಲ್ಲಿ ಪದ್ಮದ ಕೆತ್ತನೆಯಿದೆ. ಗರ್ಭಗೃಹ ಮತ್ತು ಶುಕನಾಸದ ಭದ್ರಕಸ್ತಂಭಗಳು ಹೊಯ್ಸಳ ಶೈಲಿಯ ಚೌಕ ಕಂಬಗಳು.

ನವರಂಗ (೨೫x೨೫ ಅಡಿ), ವಿಶಾಲವಾದ ಹಜಾರ. ಮಧ್ಯಭಾಗದಲ್ಲಿ ಹೊಯ್ಸಳ ಶೈಲಿಯ, ಉರುಳೆದಿಂಡಿನ ನಾಲ್ಕು ಕಂಬಗಳಿವೆ (ನೋಡಿ: ಚಿತ್ರ‑೭). ಪ್ರತಿಯೊಂದು ಕಂಬವೂ ಸು. ೧೦ ಅಡಿ ಎತ್ತರವುಳ್ಳದ್ದು. ಒಂದು ಪೀಠ, ದಿಂಡು, ಕುಂಭ, ತಡಿ, ಹಲಗೆ ಮತ್ತು ಚಾಚುಪೀಠಗಳಿವೆ. ಪೀಠಗಳ ಕೆತ್ತನೆ ಅಪೂರ್ಣ, ದಿಂಡಿನ ಬುಡಭಾಗ ಚೌಕಟ್ಟಾಗಿದೆ. ಉರುಳೆ ದಿಂಡಿನ ಮಧ್ಯದಲ್ಲಿ ಘಂಟಾಕಾರದ ಕೆತ್ತನೆ ಇದೆ. ಉಳಿದಂತೆ ಸೂಕ್ಷ್ಮ ಗಾಡಿ, ದಿಂಡು, ಪಟ್ಟಿಗಳ ಅಲಂಕರಣೆಯಿದ್ದು, ಹೊಯ್ಸಳ ಶೈಲಿಯ ಸುಂದರ ಸೂಕ್ಷ್ಮ ಕೆತ್ತನೆಯುಳ್ಳ, ಚರಕಿಯಂತ್ರದ ಮೇಲೆ ತಯಾರಿಸಿದ, ಬಳಪದ ಕಲ್ಲಿನ ಕಂಬಗಳು ಇವೆ. ಮಣಿಹಾರಗಳೂ ಕೀರ್ತಿಮುಖಗಳ ಕೆತ್ತನೆಗಳೂ ಅಲ್ಲಲ್ಲಿ ಕಾಣಬರುತ್ತವೆ. ದಿಂಡಿನ ಮೇಲಿನ ಕುಂಭ, ಚಕ್ರಾಕಾರದ್ದು, ಹೊಯ್ಸಳ ಶೈಲಿಯ ಸುಂದರ, ಸೂಕ್ಷ್ಮಕೆತ್ತನೆಗಳುಳ್ಳ ಬೋದಿಗೆಗಳಿವು. ಮೇಲಿನ ಫಲಕದ ಅಂಚಿನಲ್ಲಿ ಅಲಂಕರಣಗಳು ಕಾಣಬರುತ್ತವೆ. ಪೋತಿಕೆಗಳು ಸಹ ಮೇಲ್ಭಾಗದಲ್ಲಿ ಸೂಕ್ಷ್ಮ ಕೆತ್ತನೆಯ ಪಟ್ಟಿಗಳನ್ನು ಹೊಂದಿವೆ.

ನವರಂಗದ ನಾಲ್ಕು ಕಂಬಗಳಿಂದಾಗಿ, ಮೇಲ್ಭಾವಣಿ ಒಂಬತ್ತು ಅಂಕಣದ್ದಾಗಿದೆ. ಮಧ್ಯದ ತೊಲೆಗಳ ಕೆಳಮುಖದಲ್ಲಿ ಕಮಲ ಪುಷ್ಪದ ಕೆತ್ತನೆಯಿದೆ. ಉಳಿದಂತೆ ಎಲ್ಲಾ ತೊಲೆಗಳ ಪಾರ್ಶ್ವಮುಖಗಳಲ್ಲಿ ಸಾಲು ಮಣಿಹಾರಗಳ ಕೆತ್ತನೆ ಇದೆ. ಮಧ್ಯದ ಅಂಕಣಕ್ಕೆ ನಾಭಿಚ್ಛಂದ ರೀತಿಯ ಛಾವಣಿ ಇದೆ. ಮೂರು ಹಂತದ ಈ ಛಾವಣಿಯ ತ್ರಿಕೋಣ ಚಪ್ಪಡಿಗಳು ಕೀರ್ತಿಮುಖ ಮತ್ತು ವಲ್ಲಿಗಳ ಕೆತ್ತನೆಯನ್ನು ಹೊಂದಿವೆ. ಮಧ್ಯದ, ಮೇಲಿನ ಮುಚ್ಚು ಚಪ್ಪಡಿಯಲ್ಲಿ ವೃತ್ತಕಮಲವಿದೆ. ಉಳಿದ ಎರಡೂ ಅಂಕಣಗಳ ಮೇಲ್ಛಾವಣಿ ಮಟ್ಟಸವಾಗಿದೆ. ಅವುಗಳೆಲ್ಲವನ್ನೂ ಅಡ್ಡಪಟ್ಟಿಗಳಿಂದ ಹದಿನೈದು ಕಟ್ಟುಗಳನ್ನಾಗಿ ಮಾಡಿ ಮಧ್ಯದ ಕಟ್ಟಿನಲ್ಲಿ ವಾಹನಾರೂಢರಾದ, ಆಯಾ ದಿಕ್ಕಿನ ದಿಕ್ಪಾಲಕರನ್ನೂ, ಉಳಿದ ಕಟ್ಟುಗಳಲ್ಲಿ ಕಮಲ ಪುಷ್ಪಗಳನ್ನೂ ಬಿಡಿಸಿದ್ದಾರೆ. ಸುತ್ತಲಿನ ಗೋಡೆಯ ಭದ್ರಕ ಸ್ತಂಭಗಳು ಹೊಯ್ಸಳ ರೀತಿಯದ್ದಾಗಿವೆ.

ದೇವಾಲಯವು ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಿತವಾಗಿದೆ. ಅಧಿಷ್ಠಾನದಲ್ಲಿ ಉಪಾನ, ಜಗತಿ, ತ್ರಿಪಟ್ಟ ಕುಮುದ, ಗಳ ಮತ್ತು ದಂತಪಂಕ್ತಿಯ ಕಪೋತಗಳಿವೆ. ಎಲ್ಲಾ ಪಟ್ಟಿಗಳನ್ನೂ ಸ್ಪಷ್ಟವಾಗಿ, ನಿಖರವಾಗಿ ಕೆತ್ತಿದ್ದಾರೆ. ಕುಮುದ ಹೊಯ್ಸಳ ರೀತಿಯದು. ತ್ರಿಪಟ್ಟವಾಗಿ, ಚೂಪಾಗಿ ಇದೆ. ಮುಖಭಾಗ ಮಾತ್ರ ಸಣ್ಣದಾದ ಪಟ್ಟಿಯನ್ನು ಹೊಂದಿದೆ. ಕಪೋತವು ದ್ರಾವಿಡ ರೀತಿಯದಲ್ಲ. ಇದು ಹೊಯ್ಸಳ-ದ್ರಾವಿಡ ರೀತಿಯದು. ಅಂದರೆ ಹೊಯ್ಸಳರು ಬದಲಾಯಿಸಿಕೊಂಡತಹ ರೂಪದ್ದು, ಅಂದರೆ ಶೈಲೀಕೃತವಾದದ್ದು. ಇದರಲ್ಲಿ ಮೇಲ್ಭಾಗ ದುಂಡಾಗಿ ಇಳಿಜಾರಾಗಿರುವುದರ ಬದಲು ಚಪ್ಪಟೆ ಇಳಿಜಾರಾಗಿರುತ್ತದೆ. ಸಿಂಹಮುಖದ ಕೂಡುಗಳ ಬದಲಿಗೆ ಚೌಕಟ್ಟಾದ ದಂತಾಕಾರವಿರುತ್ತದೆ. ದಂತಗಳ ಮುಖದಲ್ಲಿ ವ್ಯಾಳ/ಸಿಂಹ ಮುಖಗಳಿರಬಹುದು, ಇಲ್ಲದಿರಬಹುದು.

ಭಿತ್ತಿಯ ಭಾಗ, ಸುಂದರ ಸ್ಪಷ್ಟ ಅಲಂಕರಣೆಗಳಿದ್ದರೂ ಸರಳವಾಗಿದೆ. ಸಮಾನ ಅಂತರಗಳಲ್ಲಿ ಭಿತ್ತಿಪಾದಗಳಿವೆ. ಭಿತ್ತಿಪಾದಗಳ ನಿಳವಾದ, ಎತ್ತರವಾದ ದಿಂಡು, ಮೇಲ್ತುದಿ ಯಲ್ಲಿ ಘಂಟಾಕಾರದ ಅಲಂಕರಣೆ, ಮೇಲೆ ಕುಂಭ, ಮಂಡಿ, ಫಲಕ, ಪೋತಿಕೆ ಇವೆಲ್ಲವನ್ನೂ ಹೊಂದಿವೆ. ಗರ್ಭಗೃಹದ ಭಿತ್ತಿಯ ಮೂರೂ ಮುಖಗಳು ಮತ್ತು ನವರಂಗದ ಪಾರ್ಶ್ವ ಭಿತ್ತಿಯ ಎರಡೂ ಮುಖಗಳಲ್ಲಿ ಒಂದೊಂದು ದೇವಕೋಷ್ಟಾಲಂಕರಣ ವಿದೆ. ಇವೆಲ್ಲವೂ ಏಕರೀತಿಯವಾಗಿವೆ. ಪ್ರತಿಯೊಂದು ದೇವಕೋಷ್ಠಕ್ಕೂ ಹೊಯ್ಸಳ ರೀತಿಯ ವಾಸ್ತು ತೋರಣಗಳಿವೆ (ನೋಡಿ: ಚಿತ್ರ‑೧೨). ಪ್ರತಿಯೊಂದು ಕೋಷ್ಟಕ್ಕೂ ಅಧಿಷ್ಠಾನ, ಇಕ್ಕೆಲಗಳಲ್ಲಿ ಸಂಪೂರ್ಣವಾಗಿ ಕಂಡರಿಸಿದ ಸ್ಥಂಭಿಕೆಗಳು, ಮೇಲೆ ಪ್ರಸ್ತರ(ಕಪೋತ, ಹಾರ), ಇನ್ನೊಂದು ತಲ ಅಥವಾ ವೇದಿ, ಗ್ರೀವ, ಶಿಖರ, ಸ್ತೂಪಿ ಎಲ್ಲವನ್ನೂ ಹೊಂದಿರುವ ಷಡ್ವರ್ಗ ಮಾದರಿಯ ದೇಗುಲದ ಸಂಕ್ಷಿಪ್ತ ರೂಪವನ್ನು ಅಲಂಕಾರಿಕವಾಗಿ ಕಂಡರಿಸಿದ್ದಾರೆ. ಭಿತ್ತಿಯ ಮೇಲಿನ ಕಪೋತ ಹೊಯ್ಸಳ ಸಂಪ್ರದಾಯದ್ದು. ಸ್ವಲ್ಪ ಅಗಲವಾಗಿ ಎರಡು ಬಾಗುಳ್ಳ ಈ ಕಪೋತಕ್ಕೆ ಕೂಡುಗಳ ಅಲಂಕರಣವಿಲ್ಲ. ಕಪೋತದ ಮೇಲೆ ಆಳವಾದ ಗ್ರೀವವಿದೆ. ಅದರ ಮೇಲೆ ಮತ್ತೊಂದು ಕಪೋತ ನಿರ್ಮಿತವಾಗಿದೆ. ಈ ಮೇಲಿನ ಕಪೋತ ದ್ರಾವಿಡ ಶೈಲಿಯ ಕಪೋತಕ್ಕೆ ಹೆಚ್ಚು ಸನಿಹವಾಗಿದೆ. ಆಕಾರದಲ್ಲಿ ಇದರ ತಳ ಚಪ್ಪಟೆ, ಮೇಲ್ಭಾಗ ದುಂಡು ಇಳಿಜಾರು. ಅಲ್ಲಲ್ಲಿ ಕೂಡುಗಳ ಬದಲು ದಂತ ರೀತಿಯ ಗುಬುಟುಗಳಿವೆ.

ಗರ್ಭಗೃಹದ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ದ್ವಿತಲ ಸ್ವಸ್ತಿಕ ವಿಮಾನವಿದೆ(ನೋಡಿ: ಚಿತ್ರ‑೧೧). ಇಟ್ಟಿಗೆ ಗಾರೆಯಲ್ಲಿ ನಿರ್ಮಿತವಾದ ಈ ವಿಮಾನ ಅನರ್ಪಿತ ರೀತಿಯದ್ದು. ಈ ವಿಮಾನಕ್ಕೆ ಶುಕನಾಸವಿಲ್ಲ. ಇತ್ತೀಚೆಗೆ ಇದನ್ನು ಸಂಪೂರ್ಣವಾಗಿ ದುರಸ್ತಿ ಮಾಡಿದ್ದಾರೆ.

ಇದುವರೆಗೆ ನಂಬಿನಾರಾಯಣನ ಗುಡಿಯ ಮೂಲ ಭಾಗದ ವರ್ಣನೆಯನ್ನು ತಿಳಿದಿದ್ದಾಯಿತು. ಇವೆಲ್ಲವೂ ಹೊಯ್ಸಳ ಕಾಲದ ಹೊಯ್ಸಳ ವಾಸ್ತು ಸಂಪ್ರದಾಯದ ರಚನೆ. ಇನ್ನು ಮುಂದೆ ಈ ಗುಡಿಯ ಇತರೆ ಭಾಗದ ವಿವರಗಳನ್ನು ನೋಡೋಣ. ಇವುಗಳು ತಮಿಳು ಸಂಪ್ರದಾಯದಲ್ಲಿ ಚೋಳ-ದ್ರಾವಿಡ ರೀತಿಯಲ್ಲಿ ನಿರ್ಮಾಣವಾದ ಭಾಗಗಳು. ನವರಂಗದ ಮುಂಭಾಗದಲ್ಲಿ ನಿರ್ಮಾಣವಾದ ಮಹಾಮಂಟಪ ಮೂಲಗುಡಿಗೆ ಆದ ಸೇರ್ಪಡೆ. ಇದರ ಕಾಲ ಕ್ರಿ.ಶ. ೧೧೭೪ ಮತ್ತು ಅದಕ್ಕೂ ಮುಂಚೆ. ಈ ಮಹಾಮಂಟಪದ ಶಾಸನೋಕ್ತವಾದ ಹೆಸರು ‘ವೀರವಲ್ಲಾಳನ್ ಮಂಟಪ[11]. ಇದೂ ಸಹ ಮೂಲ ಗುಡಿಯ ಅಧಿಷ್ಠಾನದ ಎತ್ತರಕ್ಕಿಂತ ಸ್ವಲ್ಪ ಕಡಿಮೆ ಎತ್ತರದ ಅಧಿಷ್ಠಾನದ ಮೇಲೆ ನಿರ್ಮಿತವಾಗಿದೆ (೪೫x೯೦ ಅಡಿ). ಇದರ ಅಧಿಷ್ಠಾನದಲ್ಲಿ ಉಪಾನ, ಜಗತಿ, ವೃತ್ತಕುಮುದ, ಗಳ ಮತ್ತು ಮಹಾಪಟ್ಟಿಗಳನ್ನು ಕಾಣಬಹುದು. ಇಲ್ಲಿಯ ಕಂಬಗಳೆಲ್ಲವೂ ತೀರಾ ಸಾಧಾರಣ ರೀತಿಯವು. ಇವುಗಳು ನೋಟದಲ್ಲಿ ಚೋಳ ಶೈಲಿಯ ಸಾಧಾರಣ ಕಂಬಗಳನ್ನು ಹೋಲುತ್ತವೆ(ನೋಡಿ: ಚಿತ್ರ‑೧೩). ಬುಡಭಾಗ ಚೌಕ, ಮೇಲೆ ಸ್ವಲ್ಪ ಭಾಗ ಅಷ್ಟಮುಖ, ಉಳಿದಂತೆ ಸಂಪೂರ್ಣ ಉರುಳೆ ದಿಂಡು, ತುದಿಯಲ್ಲಿ ಆಧಾರ ಪೋತಿಕೆಗಳನ್ನು ಮಾತ್ರ ಈ ಕಂಬಗಳು ಹೊಂದಿವೆ. ಮಹಾಮಂಟಪದ ಇಕ್ಕೆಲದ ಗೋಡೆಗಳನ್ನು ಮೂಲ ಗುಡಿಯ ಸುತ್ತಲೂ ಮುಂದುವರೆಸಿ ದೇವಾಲಯಕ್ಕೆ ಪ್ರಾಕಾರವನ್ನು ನಿರ್ಮಿಸಲಾಗಿದೆ. ಪ್ರಾಕಾರ ಗೋಡೆಯ ಒಳಮುಖದಲ್ಲಿ ಒಂದು ಅಂಕಣ ಆಳದ ಕಂಬದ ಸಾಲಿನ ಕೈಸಾಲೆ ಇದೆ. ಕೈಸಾಲೆಗೂ ಸಾಕಷ್ಟು ಎತ್ತರವಾದ ಅಧಿಷ್ಠಾನವಿದೆ. ಅಧಿಷ್ಠಾನದಲ್ಲಿ ಉಪಾನ, ಜಗತಿ, ವೃತ್ತಕುಮುದ, ಗಳ ಮತ್ತು ಮಹಾಪಟ್ಟಿ ಇದ್ದು ಈ ಅಲಂಕರಣ ಮಹಾಮಂಟಪದ ಅಧಿಷ್ಠಾನದ ಅಲಂಕರಣೆಗೆ ಸಮನಾಗಿದೆ. ಇಲ್ಲಿಯ ಕಂಬಗಳು ಚೌಕಟ್ಟಾದ ಬುಡಭಾಗ, ಅಷ್ಟ ಮುಖದ ಅಥವಾ ಉರುಳೆ ದಿಂಡು, ಮೇಲೆ ಆಧಾರಪೋತಿಕೆ ಇವುಗಳನ್ನು ಮಾತ್ರ ಹೊಂದಿದೆ (ನೋಡಿ: ಚಿತ್ರ‑೮). ಮೂಲಗುಡಿಗೆ ಒಳ ಪ್ರದಕ್ಷಿಣಾಪಥ ಇಲ್ಲದಿರುವುದರಿಂದ ಈ ತೆರದ ಅಂಗಳವು ಹೊರ ಪ್ರದಕ್ಷಿಣಾಪಥವಾಗಿ ಏರ್ಪಟ್ಟಿದೆ.

ಮಹಾಮಂಟಪದ ಹಾಗೂ ಮೂಲಗುಡಿಯ ಸುತ್ತಲಿನ ಕೈಸಾಲೆ ಮಂಟಪದ ನಿರ್ಮಾಣದಲ್ಲಿ ತೀರಾ ಸಾಧಾರಣ ವಾಸ್ತುಲಕ್ಷಣಗಳು ಕಾಣಬರುತ್ತವೆ. ಮೂಲಗುಡಿಯ ಕೆತ್ತನೆಯ ಕೆಲಸದ ಸೂಕ್ಷ್ಮತೆ, ಸೌಂದರ್ಯ, ಅಂದ-ಚೆಂದಗಳು, ಈ ಮಹಾಮಂಟಪದ ನಿರ್ಮಾಣದಲ್ಲಿ ಕಾಣಬರುವುದಿಲ್ಲ. ಈ ಹೇಳಿಕೆಗೆ ಸ್ವಲ್ಪ ಮಟ್ಟಿನ ಅಪವಾದವೆಂಬಂತೆ ಮಹಾಮಂಟಪದ ಮುಂದಿನ ಮುಖಮಂಟಪವನ್ನು ನಿರ್ಮಿಸಿದ್ದಾರೆ.

ಮಹಾಮಂಟಪವನ್ನು, ಮೂಲದೇಗುಲದ ಅಕ್ಷರೇಖೆಗೆ ಲಂಬವಾಗಿ ನಿರ್ಮಿಸಿದ್ದಾರೆ. ಹತ್ತು ಕಂಬಗಳುಳ್ಳ ಐದು ಸಾಲುಗಳನ್ನು ದಕ್ಷಿಣೋತ್ತರವಾಗಿ ನಿಲ್ಲಿಸಿದ್ದಾರೆ. ಮಧ್ಯದ ಅಂಕಣದ ಮೇಲ್ಛಾವಣಿಯ ಕೆಲವು ಚಪ್ಪಡಿಗಳನ್ನು ತೆಗೆದು, ಬೆಳಕಿಗಾಗಿ ಗವಾಕ್ಷವನ್ನು ಕಟ್ಟಿದ್ದಾರೆ. ಇದು ಇತ್ತೀಚಿನ ಕೆಲಸ. ಗವಾಕ್ಷದ ಗೋಡೆಗಳಲ್ಲಿ ಗಾರೆಗಚ್ಚಿನ ಕೆಲವು ಅಲಂಕರಣೆಗಳು ಇವೆ. ಮಹಾಮಂಟಪದ ಎರಡೂ ತುದಿಗಳಲ್ಲಿ ವಿಶ್ವಕ್ಸೇನ, ರಾಮಾನುಜ ಮತ್ತಿತರ ಅಳ್ವಾರುಗಳ ಶಿಲಾ ಶಿಲ್ಪಗಳಿವೆ. ನವರಂಗ ದ್ವಾರದ ಇಕ್ಕೆಲಗಳ ಗೂಡುಗಳಲ್ಲಿ ಎತ್ತರವಾದ ದ್ವಾರಪಾಲಕರ ಶಿಲ್ಪಗಳಿವೆ. ಆದರೆ ಇವುಗಳು ರೂಪಿನಲ್ಲಿ ತೀರಾ ಸಾಧಾರಣವಾದದ್ದು. ದ್ವಾರಪಾಲಕನ ಶಿಲ್ಪದ ಎಡಬದಿಯಲ್ಲಿ ಚಪ್ಪಡಿಯ ಮೇಲೆ ರೂಪಿಸಿ ಬಿಡಿಸಿದಂಥ ತ್ರಿಪುಂಡ್ರ, ಶಂಖ, ಚಕ್ರಗಳ ಉಬ್ಬುಗೆತ್ತನೆಗಳಿವೆ. ಶ್ರೀವೈಷ್ಣವ ಧರ್ಮದ ಸಂಕೇತವಾದ ಈ ಚಿಹ್ನೆಗಳ ಕಂಡರಣೆಯಲ್ಲಿ ಕುತೂಹಲಕರವಾದದ್ದು, ಪೀಠದ ಮೇಲೆ ಸ್ಥಾಪಿಸಿದಂತೆ ಕೆತ್ತಿರುವ ಈ ಚಿಹ್ನೆಗಳಿಗೆ ಬಿಲ್ಲಿನಾಕಾರದ ಪ್ರಭಾವಳಿ ಇದೆ. ಕೆಳಗೆ  ಸಿಂಹಪೀಠವಿದೆ. ಈ ಶಿಲ್ಪ ಇತ್ತೀಚಿನ ಶತಮಾನಗಳದ್ದಿರಬಹುದು.

ಮಹಾಮಂಟಪದ ಪೂರ್ವಮುಖದ ಮಧ್ಯದಲ್ಲಿ ಇರುವ ದ್ವಾರದ ಮುಂದೆ ಒಂದಂಕಣದ ಮುಖಮಂಟಪವಿದೆ(ನೋಡಿ: ಚಿತ್ರ‑೯). ಎತ್ತರವಾದ ಸುಭದ್ರ ರೀತಿಯ ಉಪಪೀಠದ ಮೇಲೆ ನಿರ್ಮಿತವಾಗಿರುವ ಈ ಮುಖ ಮಂಟಪಕ್ಕೆ ತ್ರಿಖಂಡ ಸೋಪಾನವಿದೆ. ಪ್ರತಿ ಸೋಪಾನಕ್ಕೂ ಇಕ್ಕೆಲಗಳಲ್ಲಿ ಹಸ್ತಿ-ಹಸ್ತಗಳಿವೆ. ಇಲ್ಲಿಯ ನಾಲ್ಕು ಕಂಬಗಳು, ಶುದ್ಧ ಚೋಳ ಶೈಲಿಯ ಕಂಬಗಳ ಒಂದು ಪ್ರಭೇದ. ಇವುಗಳಲ್ಲಿ ಚೌಕಾಕಾರದ ಪೀಠ, ಅಷ್ಟಮುಖ ಮತ್ತು ಉರುಳೆಯಾಕಾರದ  ದಿಂಡು ಇದೆ. ದಿಂಡಿನ ಮೇಲ್ತುದಿ, ಭುಜಭಾಗದಂತೆ ಒಳಕ್ಕೆ ಬಾಗಿದೆ. ಮೇಲೆ, ಗ್ರೀವದಿಂದ ಪ್ರತ್ಯೇಕವಾದ ಕುಂಭ, ಮಂಡಿ-ಫಲಕಗಳು ಇವೆ. ಸಾಧಾರಣವಾದ ಪೋತಿಕೆಗಳು ಮೇಲೆ ಇವೆ. ಮುಖಮಂಟಪದ ಈ ಲಕ್ಷಣಗಳು ಚೋಳ ಸಂಪ್ರದಾಯದ ಸಾಧಾರಣ ಮುಖಮಂಟಪಗಳಲ್ಲಿ ಕಾಣಸಿಗುತ್ತವೆ. ಇದರಿಂದಾಗಿ ಚೋಳ ಶಿಲ್ಪಿಗಳು ಇದರ ನಿರ್ಮಾಣ ಮಾಡಿದ್ದಾರೆಂಬ ವಿಷಯ ಖಚಿತವಾಗುತ್ತದೆ. ಮುಖಮಂಟಪದ ದ್ವಾರಬಂಧ ತೀರಾ ಸಾಧಾರಣವಾದದ್ದು. ‘ವೀರವಲ್ಲಾಳನ್ ಮಂಟಪ’ ಎಂಬ ಚಕ್ರವರ್ತಿ ನಾಮಾಂಕಿತವನ್ನು ಹೊಂದಿದ್ದರೂ, ಈ ಮಂಟಪದ ವಾಸ್ತು ಗುಣಮಟ್ಟದಲ್ಲಿ ತೀರಾ ಕಳಪೆ ಲಕ್ಷಣಗಳನ್ನು ಪ್ರದರ್ಶಿಸುತ್ತದೆ.

ಮುಖಮಂಟಪವನ್ನು ಆವರಿಸಿಕೊಂಡಂತೆ ಮಹಾಮಂಟಪದಷ್ಟೇ ವಿಸ್ತಾರವಾದ ಪಾತಾಳಾಂಕಣ ನಿರ್ಮಿತವಾಗಿದೆ. ಐದು ಉದ್ದಸಾಲು, ಹಾಗೂ ಹನ್ನೊಂದು ಅಡ್ಡಸಾಲಿನ ಕಂಬಗಳನ್ನುಳ್ಳ ಈ ಪಾತಾಳಾಂಕಣದಲ್ಲಿ ಒಟ್ಟು ೫೫ ಕಂಬಗಳಿವೆ. ಇದರ ವಿಸ್ತೀರ್ಣ ೪೦x೯೦ ಅಡಿಗಳು. ಕಂಬಗಳು ಸಾಧಾರಣ ರೀತಿಯವು. ಚೌಕ-ಅಷ್ಟಮುಖದ ದಿಂಡುಗಳು, ಆಧಾರ ಪೋತಿಕೆಗಳು ಇವುಗಳಲ್ಲಿವೆ. ಪಾತಾಳಾಂಕಣದ ಉತ್ತರ ತುದಿಯಲ್ಲಿ, ಸುಭದ್ರ ಉಪಪೀಠದ ಮೇಲೆ ಯಾಗಶಾಲೆಯನ್ನು (೩೦x೪೦ ಅಡಿ) ನಿರ್ಮಿಸಿದ್ದಾರೆ. ಈ ಯಾಗಶಾಲೆಗೆ ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ಮುಚ್ಚುಗೋಡೆಯಿದೆ. ದಕ್ಷಿಣಭಾಗ ಪಾತಾಳಾಂಕಣಕ್ಕೆ ತೆರೆದಿದೆ. ಉತ್ತರ ಭಾಗ ಪ್ರಾಕಾರದ ಅಂಗಳಕ್ಕೆ ತೆರೆದಿದೆ. ಯಜ್ಞಮಂಟಪದಲ್ಲಿ ಐದು ಕಂಭಗಳ ನಾಲ್ಕು ಸಾಲುಗಳು ದಕ್ಷಿಣೋತ್ತರವಾಗಿವೆ. ಸಾಧಾರಣ ರೀತಿಯ ಈ ಕಂಬಗಳು ಚೌಕ-ಅಷ್ಟ-ಉರುಳೆ ರೀತಿಯ ದಿಂಡುಗಳನ್ನು ಹೊಂದಿವೆ, ಇವು ಎಲ್ಲಿಂದಲೋ ಆರಿಸಿತಂದ ಕಂಬಗಳಾಗಿವೆ. ಮೇಲೆ ಕೇವಲ ಆಧಾರಪೋತಿಕೆಗಳಿವೆ. ಈ ಯಾಗ ಮಂಟಪಕ್ಕೆ ಆಗ್ನೇಯದಿಂದ ಸೋಪಾನವಿದೆ.

ಹೊರಪ್ರಾಕಾರದ ನೈರುತ್ಯ ಮೂಲೆಯಲ್ಲಿ, ಮೂಲ ದೇಗುಲದಿಂದ ಸ್ವಲ್ಪ ಹಿಂದಕ್ಕೆ (ಸುಮಾರು ೫೦ ಅಡಿ) ದೂರದಲ್ಲಿ ಶ್ರೀಲಕ್ಷ್ಮಿ ದೇವಿಯ ದೇವಾಲಯವಿದೆ(ನೋಡಿ: ಚಿತ್ರ‑೧೦). ಎತ್ತರವಾದ ಸುಭದ್ರ ಉಪಪೀಠ ಮಾದರಿಯ ವೇದಿಯ ಮೇಲೆ ನಿರ್ಮಿತವಾದ, ಈ ಸುಂದರ, ಸಣ್ಣ (೨೦x೧೦ ಅಡಿ) ದೇವಾಲಯಕ್ಕೆ ಉಪಾನ, ಜಗತಿ, ತ್ರಿಪಟ್ಟ ಕುಮುದ, ಗಳ ಮತ್ತು ಪಟ್ಟಿಕೆಗಳುಳ್ಳ ಪಾದಬಂಧ ಅಧಿಷ್ಠಾನವಿದೆ. ಮೂಲಗುಡಿಯಲ್ಲಿ ಗರ್ಭಗೃಹ ಮತ್ತು ಅರ್ಧಮಂಟಪ ಮಾತ್ರವಿದೆ. ಭಿತ್ತಿಯ ಅಲಂಕರಣೆಯಲ್ಲಿ  ಭಿತ್ತಿಪಾದಗಳು, ಅವುಗಳ ಮೇಲ್ತುದಿಯಲ್ಲಿ ಜಾಡಿಯ ರೀತಿಯ ಕೆತ್ತನೆ, ಕುಂಭ, ಮಂಡಿ -ಫಲಕಗಳು, ಮೇಲೆ ಉತ್ತರಾ, ಕಪೋತ ಇವೆಲ್ಲವೂ ಇದೆ. ಗರ್ಭಗೃಹದ ಮೂರೂ ಮುಖಗಳಲ್ಲಿ ಮತ್ತು ಅರ್ಧಮಂಟಪದ ಪಾರ್ಶ್ವಗೋಡೆಯ ಹೊರಮುಖಗಳಲ್ಲಿ ಕೋಷ್ಟತೋರಣಗಳಿವೆ. ಈ ಕೋಷ್ಟಗಳಿಗೆ ಇಕ್ಕೆಲಗಳಲ್ಲಿ ಸೀಳುಗಂಬಗಳು, ಮೇಲೆ ಪ್ರಸ್ತರ, ಕೀರ್ತಿಮುಖದ ಅಲಂಕರಣವಿದೆ. ಗರ್ಭಗೃಹಕ್ಕೆ ಏಕತಲವಿಮಾನವಿದೆ. ಅದು ಇಟ್ಟಿಗೆ ಗಾರೆಯದು. ಇತ್ತೀಚೆಗೆ ಅದನ್ನು ಸಂಪೂರ್ಣವಾಗಿ ನವೀಕರಿಸಿದ್ದಾರೆ.

ಶ್ರೀಲಕ್ಷ್ಮಿ ದೇವಾಲಯದ ಇವಿಷ್ಟು ಭಾಗ ದೇವಾಲಯ ನಿಮಾಣದಲ್ಲಿನ ಮೊದಲ ಘಟ್ಟ. ಈ ಭಾಗಕ್ಕೆ, ಅದರ ಮುಂಭಾಗದಲ್ಲಿ, ಅಂದರೆ ಪೂರ್ವಕ್ಕೆ, ಉದ್ದವಾದ ಒಂದು ಮಂಟಪವನ್ನು ನಿರ್ಮಿಸಿದ್ದಾರೆ (ನೋಡಿ: ಚಿತ್ರ‑೧೪). ಸುಭದ್ರ ಉಪಪೀಠದ ಮಾದರಿಯ ವೇದಿಯನ್ನು ಈ ಮಂಟಪಕ್ಕೂ ನಿರ್ಮಿಸಿದ್ದಾರೆ. ಇದರ ಅಗಲ ಶ್ರೀಲಕ್ಷ್ಮಿ ದೇವಾಲಯದ ಉಪಪೀಠದ ಸಮವಾಗಿದೆ. ಆದರೆ ಅವೆರಡನ್ನೂ ಕೂಡಿಸಿ ಕಟ್ಟಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪೂರ್ವ-ಪಶ್ಚಿಮವಾಗಿ ಒಂಬತ್ತು ಕಂಬಗಳನ್ನು ದಕ್ಷಿಣೋತ್ತರವಾಗಿ ನಾಲ್ಕು ಕಂಬಗಳನ್ನು ಹೊಂದಿರುವ ಈ ಮಂಟಪ (೬೦x೨೪ ಅಡಿ) ಸಾಕಷ್ಟು ವಿಸ್ತಾರವಾಗಿದೆ. ಇದಕ್ಕೆ ಪೂರ್ವದಿಕ್ಕಿನಲ್ಲಿ ಒಂದಂಕಣದ ಒಂದು ಮುಖಮಂಟಪವೂ, ಸೋಪಾನವೂ ಇದೆ. ಮಂಟಪದ ಕಂಬವೊಂದರ ಮೇಲಿರುವ ಕನ್ನಡ ಶಾಸನದಿಂದ[12], ಈ ಮಂಟಪಕ್ಕೆ ‘ಓಲಗ ಶಾಲೆ’ ಎಂದು ಹೆಸರಿತ್ತೆಂದೂ ಇದನ್ನು ಹೊಯ್ಸಳ ವಿಷ್ಣುವರ್ಧನನ ಪ್ರಧಾನಿ ಸುರಿಗೆಯ ನಾಗಯ್ಯನು, ವಿಷ್ಣುವರ್ಧನನ ಇಚ್ಛೆಯ ಮೇರೆಗೆ ನಿರ್ಮಿಸಿದನೆಂದೂ ತಿಳಿದುಬರುತ್ತದೆ.

ಮಂಟಪದ ನಿರ್ಮಾಣ ಸಾಧಾರಣವಾಗಿದೆ. ಕಂಬಗಳೆಲ್ಲವೂ ಏಕರೀತಿಯ ಸರಳ ಕಂಬಗಳು, ಯಾವುದಕ್ಕೂ ಪೀಠವಿಲ್ಲ. ಚೌಕಟ್ಟಾದ ಬುಡ, ಅಷ್ಟ ಮುಖದ ದಿಂಡು, ಅಧಾರ ಪೋತಿಕೆ ಮತ್ತು ಉತ್ತರಾ ಇವಿಷ್ಟು ಈ ಕಂಬದ ಸಾಲಿನ ಲಕ್ಷಣಗಳು. ಆದರೆ ಈ ಲಕ್ಷಣಗಳಲ್ಲಿ ಒಂದು ಅಂಶ ಮಾತ್ರ ಇಲ್ಲಿ ಗಮನಿಸಿಬೇಕಾದದ್ದು, ಪ್ರತಿಯೊಂದು ಆಧಾರ ಪೋತಿಕೆಗಳೂ ಅವುಗಳ ಎರಡೂ ತುದಿಗಳಲ್ಲಿ ಸುರುಳಿಯ ರೀತಿಯ ಅಲಂಕರಣವಿದ್ದು, ಇವುಗಳು ಹೊಯ್ಸಳ ಶೈಲಿಯ ಸುಂದರ ಮುಷ್ಟಿಬಂಧ ರೀತಿಯ ಪೋತಿಕೆಗಳ ಸಾಧಾರಣ ರೂಪಗಳೆಂದು ತಿಳಿಯಪಡಿಸುತ್ತವೆ.

ದೇವಾಲಯದ ಮುಂದಿನ ಪಾತಾಳಾಂಕಣ, ಈಶಾನ್ಯ ಮೂಲೆಯ ಯಾಗಶಾಲೆ, ಹಾಗೂ ಗುಡಿಯ ನೈರುತ್ಯದ ಮೂಲೆಯ ಶ್ರೀಲಕ್ಷ್ಮಿ ದೇವಾಲಯ ಅವರಿಸಿಕೊಂಡಂತೆ, ಈ ದೇವಾಲಯಕ್ಕೆ ವಿಶಾಲವಾದ ಪ್ರಾಕಾರವನ್ನು ನಿರ್ಮಿಸಿದ್ದಾರೆ. ಎತ್ತರವಾದ ಈ ಗೋಡೆ, ಕೆಲಕಡೆಗಳಲ್ಲಿ, ಯಾಗಶಾಲೆಗೆ ಹಾಗೂ ಶ್ರೀಲಕ್ಷ್ಮಿ ದೇವಾಲಯದ ಮಂಟಪಕ್ಕೆ ಹೊಂದಿಕೊಂಡಿದೆ. ಪ್ರಾಕಾರದ ಗೋಡೆಗೆ ಪೂರ್ವದಲ್ಲಿ ಮಹಾದ್ವಾರವಿದೆ. ಈ ದ್ವಾರಕ್ಕೆ ದ್ವಾರಮಂಟಪ ಮತ್ತು ಮುಂದೆ ಮುಖಮಂಟಪಗಳಿವೆ. ಪ್ರಾಕಾರದ ಪಶ್ಚಿಮ-ಮಧ್ಯ ಭಾಗದಲ್ಲೂ ಒಂದು ಸಣ್ಣ ದ್ವಾರವಿದೆ. ಪ್ರಾಕಾರದ ಗೋಡೆಯ ಮೇಲ್ತುದಿಯಲ್ಲಿ ಸಾಲಾಗಿ ದುಂಡಾದ ತೆನೆಗಳ ಅಲಂಕರಣವಿದೆ.

ಪ್ರಾಕಾರದ ದ್ವಾರಮಂಟಪದ ಒಳ ಇಕ್ಕೆಲಗಳಲ್ಲಿ, ಎತ್ತರವಾದ ವೇದಿಯ ಮೇಲೆ ಸಣ್ಣದಾದ ಮಂಟಪವಿದೆ. ಸಾಧಾರಣ ನಿರ್ಮಾಣದ ಕಟ್ಟಡವಿದು. ಮೇಲೆ ದ್ವಾರಗೋಪುರವಿಲ್ಲ. ದ್ವಾರದ ಮುಖಮಂಟಪ ದಕ್ಷಿಣೋತ್ತರವಾಗಿ ಆರು ಕಂಬಗಳನ್ನುಳ್ಳ, ಎರಡಂಕಣ ಆಳವಾದ ಮಂಟಪ. ಇಲ್ಲಿಯ ಕಂಬಗಳು ಸಾಧಾರಣ ಚೌಕ ಪೀಠದ ಮೇಲೆ ಎತ್ತರವಾದ ಚೌಕ-ಅಷ್ಟಮುಖದ ದಿಂಡನ್ನು ಹೊಂದಿವೆ. ಮೇಲೆ ಕೇವಲ ಆಧಾರ ಪೋತಿಕೆಗಳಿವೆ. ಎತ್ತರವಾದ ಪಾದಬಂಧ ಅಧಿಷ್ಠಾನದಲ್ಲಿ ಉಪಾನ, ಜಗತಿ, ತ್ರಿಪಟ್ಟ ಕುಮುದ, ಗಳ ಮಹಾಪಟ್ಟಿ, ಗಳ ಮತ್ತು ಪ್ರತಿಗಳು ಇವೆ. ಮುಂಭಾಗದಲ್ಲಿ ಹಸ್ತಿ-ಹಸ್ತಾಲಂಕೃತ ಸೋಪಾನವಿದೆ.

ದೇವಾಲಯದ ಮುಂಭಾಗದಲ್ಲಿ ಅನತಿ ದೂರದಲ್ಲಿ, ಅಕ್ಷರೇಖೆಗೆ ಹೊಂದಿಕೊಂಡು, ಒಂದು ಪುಟಾಣಿ ಪುಷ್ಕರಣಿ ಇದೆ. ಸುಮಾರು ೬-೮ ಅಡಿ ಆಳದ ಈ ಚೌಕಟ್ಟಾದ ಪುಷ್ಕರಣೆಗೆ ಪೂರ್ವ-ಪಶ್ಚಿಮಗಳಿಂದ ಸೋಪಾನಗಳಿವೆ. ಪುಷ್ಕರಣೆಯ ಮುಂದೆ, ಅದೇ ನೇರದಲ್ಲಿ ಸುಮಾರು ೩೫-೪೦ ಅಡಿ ಎತ್ತರವಿರುವ ಧ್ವಜಸ್ತಂಭವಿದೆ. ಸುಭದ್ರ ಉಪಪೀಠದ ಮಧ್ಯೆ ಸ್ಥಾಪಿತವಾದ ಈ ಸ್ತಂಭ, ಬುಡದಲ್ಲಿ ಚೌಕವಾಗಿದ್ದು, ಮೇಲೆ ಅಷ್ಟ-ಷೋಡಶ ಮುಖದ್ದಾಗಿದೆ. ತುದಿಯಲ್ಲಿ ಕುಂಭ, ಮಂಡಿ, ಫಲಕದ ಅಲಂಕರಣವಿದೆ. ಚತುರ್ಮುಖ ಬುಡದ ವಿವಿಧ ದಿಕ್ಕುಗಳಲ್ಲಿ, ಕ್ರಮವಾಗಿ ಗರುಡ, ಆಂಜನೇಯ, ಸಿಂಹ ಮತ್ತು ಹಂಸ ಇವುಗಳ ಉಬ್ಬುಗೆತ್ತನೆಗಳಿವೆ.

ದೂರದಿಂದಲೇ ಕಾಣುವ ಈ ದೇವಾಲಯ ಸಾಕಷ್ಟು ಎತ್ತರವಾದ ದಿಣ್ಣೆಯ ಮೇಲಿದೆ. ಮುಂಭಾಗ ವಿಶಾಲವಾಗಿ ಇಳಿಜಾರಾಗಿದ್ದು, ವಸತಿ ರೀತಿಯಲ್ಲಿದ್ದು ಸಂಶೋಧನಾ ಉತ್ಖನನಕ್ಕೆ ಯೋಗ್ಯವಾದ ಸ್ಥಳವಾಗಿದೆ.


[1] ಎಪಿಗ್ರಾಫಿಯಾ ಕರ್ನಾಟಕ, ಸಂ ೬, ಪಾಂಡವಪುರ, ೫೬

[2] ಅದೇ, ಪಾಂ. ೭೪

[3] ಅದೇ.

[4] ಅದೇ, ಪಾಂ. ೬೭

[5] ಅದೇ, ಪಾಂ. ೯೯

[6] ಅದೇ, ಪಾಂ. ೭೨

[7] ಅದೇ, ಪಾಂ. ೬೦

[8] ಅದೇ, ಪಾಂ. ೬೪

[9] ಅದೇ, ಪಾಂ. ೭೧

[10] ಅದೇ, ಪಾಂ. ೬೯

[11] ಅದೇ, ಪಾಂ. ೬೬

[12] ಅದೇ, ಪಾಂ. ೭೩