ವಿಶ್ಲೇಷಣೆ

ಇದುವರೆಗೂ ನಂಬಿನಾರಾಯಣ ದೇವಾಲಯದ ವಿವಿಧ ವಾಸ್ತು ಭಾಗಗಳನ್ನೂ, ವಾಸ್ತು ಅಲಂಕರಣಗಳನ್ನೂ ಸ್ಥೂಲವಾಗಿ ವರ್ಣಿಸಿದ್ದಾಯಿತು. ಈ ವರ್ಣನೆಯಿಂದ ಸ್ಪಷ್ಟವಾಗಿ ಮೂಡಿಬರುವ ಅಭಿಪ್ರಾಯವೆಂದರೆ ಈ ದೇವಾಲಯ ದ್ರಾವಿಡ ವಾಸ್ತುಶೈಲಿಗೆ ಸೇರಿದುದಾದರೂ ಇದರ ವಿವಿಧ ಭಾಗಗಳ ರಚನೆಯಲ್ಲಿ, ಅಲಂಕರಣೆಯಲ್ಲಿ ವಿವಿಧ ವಾಸ್ತು ಸಂಪ್ರದಾಯದ ಅಂದರೆ ಚೋಳ ಸಂಪ್ರದಾಯದ, ಹೊಯ್ಸಳ ಸಂಪ್ರದಾಯದ ಶಿಲ್ಪಿಗಳ ಕೈವಾಡವಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ವಿವಿಧ ಸಂಪ್ರದಾಯಗಳ ರೀತ್ಯಾ ಮಾಡಿದ ವಿವಿಧ ಕೆತ್ತನೆ, ಅಲಂಕರಣಗಳ ಕೂಲಂಕಷ ಅಧ್ಯಯನ, ದೇವಸ್ಥಾನದ ವಿವಿಧ ಭಾಗಗಳ ನಿರ್ಮಾಣ ಕಾರ್ಯ-ಕಾಲವನ್ನು ನಿರ್ಧರಿಸಲು ಸಹಕಾರಿಯಾಗುತ್ತದೆ. ಇದರಿಂದಾಗಿ ಈ ವಿಷಯದ ಬಗ್ಗೆ ಸ್ವಲ್ಪ ಗಮನ ಹರಿಸೋಣ.

ತೊಣ್ಣೂರಿನ ಇತಿಹಾಸವನ್ನು ಅಧ್ಯಯನ ಮಾಡಿದರೆ ಅದರ ಇತಿಹಾಸ ಪ್ರಾರಂಭ ವಾಗುವುದೇ ಹೊಯ್ಸಳರ ಕಾಲದಿಂದ. ತೊಣ್ಣೂರಿನ ಸ್ಥಳ ಸಂಪ್ರದಾಯದ ಪ್ರಕಾರ ಹೊಯ್ಸಳ ವಿಷ್ಣುವರ್ಧನನು ಚೋಳರನ್ನು ಕನ್ನಡನಾಡಿನಿಂದ ಹೊರಗೋಡಿಸಿ ತಲಕಾಡುಗೊಂಡ, ಗಂಗವಾಡಿಗೊಂಡ ಇತ್ಯಾದಿ ಬಿರುದುಗಳನ್ನು ಧರಿಸಿದನು. ಚೋಳರ ಮೇಲಿನ ಈ ವಿಜಯದ ನೆನಪಿನಲ್ಲಿ, ಬೇಲೂರಿನಲ್ಲಿ ವಿಜಯನಾರಾಯಣ ದೇವಾಲಯವನ್ನು, ತೊಣ್ಣೂರಿನಲ್ಲಿ ನಂಬಿನಾರಾಯಣ ದೇವಾಲಯವನ್ನು ಮತ್ತು ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ನಿರ್ಮಿಸಿದನು. ಈ ನಂಬಿಕೆಯಿಂದಾಗಿ ತೊಣ್ಣೂರು ಹೊಯ್ಸಳ ವಿಷ್ಟುವರ್ಧನನ ಕಾಲಕ್ಕಾಗಲೇ ಒಂದು ಬೆಳೆದ ಊರಾಗಿತ್ತು. ನಂಬಿನಾರಾಯಣನ ಮೂಲಗುಡಿಯಷ್ಟು ದೊಡ್ಡದಾದ ಗುಡಿಯನ್ನು ಹೊಂದಲು ಯೋಗ್ಯವಾದ ಊರಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ನಂಬಿನಾರಾಯಣನ ಗುಡಿಯಿಂದಾಗಿ ಈ ಊರು ಶ್ರೀರಾಮಾನುಜರ ಶಿಷ್ಯರಿಗೆ ಒಂದು ಸಂಮೃದ್ಧ ನೆಲೆಯನ್ನು ಒದಗಿಸಿತು. ರಾಮಾನುಜರ ಶಿಷ್ಯರು ಇಲ್ಲಿಗೆ ಬಂದು ಅನೇಕ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದರಿಂದ ಈ ಊರು ತೊಂಡನೂರು (ವಿಷ್ಣು ಭಕ್ತರ ಊರು), ನಂತರ ತೊಣ್ಣೂರಾಯಿತು ಎಂಬುದನ್ನು ಸ್ಥಳನಾಮದ ವಿಶ್ಲೇಷಣೆಯಿಂದ ತಿಳಿಯಬಹುದಾಗಿದೆ.

ಮೇಲೆ ಹೇಳಿದ ಐತಿಹಾಸಿಕ ಸತ್ಯಗಳ ಜೊತೆಗೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಕೆಲವು ಸತ್ಯಗಳ ಅರಿವು ಹೊಂದುವುದು ಇಲ್ಲಿ ಅತ್ಯವಶ್ಯಕ. ದಕ್ಷಿಣ ಭಾರತದಲ್ಲಿನ ವಾಸ್ತು ಸಂಪ್ರದಾಯ ದ್ರಾವಿಡ ಶೈಲಿಯದು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ವಿಶಾಲವಾದ ಭಾರತದ ಈ ಭಾಗದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿವೆ. ಈ ಎಲ್ಲರೂ ದ್ರಾವಿಡರೇ ಆದರೂ ಇವರಿವರ ಸಂಪ್ರದಾಯಗಳಲ್ಲಿ, ಸಾಂಸ್ಕೃತಿಕ ಆಚರಣೆಗಳಲ್ಲಿ ಬೇಕಾದಷ್ಟು ವ್ಯತ್ಯಾಸಗಳಿವೆ. ಅದೇ ರೀತಿ ವಾಸ್ತುಶೈಲಿ ಎಲ್ಲರಿಗೂ ದ್ರಾವಿಡ ಶೈಲಿಯೇ ಆದರೂ ಇದರ ಅನುಸರಣೆಯಲ್ಲಿ, ಅಲಂಕರಣೆಯಲ್ಲಿ, ಪ್ರಾಂತೀಯವಾಗಿ, ಬಹಳಷ್ಟು ವ್ಯತ್ಯಾಸಗಳು ಕಾಣಬರುತ್ತವೆ. ಅದರಲ್ಲೂ ಕರ್ನಾಟಕ ಮತ್ತು ತಮಿಳು ರಾಜ್ಯಗಳ ದೇವಾಲಯ ವಾಸ್ತು ನಿರ್ಮಣದಲ್ಲಿ ಈ ಪ್ರಭೇದಗಳನ್ನು, ವ್ಯತ್ಯಾಸಗಳನ್ನು ಬಹಳ ಸ್ಪಷ್ಟವಾಗಿ ಕಾಲಕಾಲಕ್ಕೆ ಕಾಣಬಹುದು. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಳುಕ್ಯರು ಹೊಯ್ಸಳರು ಹೀಗೆ ಕ್ರಮವಾಗಿ ಪೋಷಿಸಿಕೊಂಡು ಬಂದ ದ್ರಾವಿಡ ವಾಸ್ತುಶೈಲಿಯು ತನ್ನದೇ ಆದ ಕೆಲವು ಪ್ರಾಂತೀಯ ಲಕ್ಷಣಗಳನ್ನು, ಸ್ಥಳೀಯ ಅಭಿರುಚಿಗಳನ್ನು ಹೊಂದಿರುತ್ತದೆ. ಅದೇ ರೀತಿಯಲ್ಲಿ ಪಲ್ಲವರು, ಚೋಳರು, ಪಾಂಡ್ಯರು ಇತ್ಯಾದಿ ರಾಜವಂಶಗಳು ಪೋಷಿಸಿಕೊಂಡು ಬಂದ ದ್ರಾವಿಡ ವಾಸ್ತುವೂ ಸಹ ತನ್ನದೇ ಆದ ಕೆಲವು ಪ್ರಾಂತೀಯ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಯಾವುದೇ ಒಂದು ದೇವಾಲಯ ಇಂತಹುದೇ ಪ್ರಾಂತ್ಯದ, ರಾಜ್ಯದ ಅಥವಾ ಸಂಸ್ಕೃತಿಯ ಶಿಲ್ಪಿಗಳ ರಚನೆ ಎಂದು ನಿರ್ಣಯಿಸಬಹುದಾಗಿದೆ. ಅಂತಹ ನಿರ್ಣಾಯಕ ಲಕ್ಷಣಗಳು ಯಾವುವು ಎಂಬುದನ್ನು ಇಲ್ಲಿ ಈಗ ವಿವರಿಸಲಾಗಿದೆ

[1].

ಕ್ರಿ.ಶ. ಹನ್ನೊಂದನೆಯ ಶತಮಾನ ಪೂರ್ತಿ ದಕ್ಷಿಣ ಕರ್ನಾಟಕದ ಪೂರ್ವಾರ್ಧ ಭಾಗ ಚೋಳರ ಆಕ್ರಮಣದಿಂದಾಗಿ ತಮಿಳು ಸಂಸ್ಕೃತಿಯ, ಸಂಪ್ರದಾಯದ ಪ್ರಭಾವಕ್ಕೆ ಒಳಗಾಗಿತ್ತು. ಇಲ್ಲಿ ತಮಿಳು ಶಾಸನಗಳು ಬರೆಯಲ್ಪಟ್ಟವು. ಚೋಳ ವಾಸ್ತು ಸಂಪ್ರದಾಯದಲ್ಲಿ ದೇವಾಲಯಗಳು ನಿರ್ಮಿತವಾದವು. ಆ ಕಾಲಕ್ಕಾಗಲೇ ಪ್ರವರ್ಧಮಾನವಾಗಿ ಬೆಳೆದಿದ್ದ ದ್ರಾವಿಡ ವಾಸ್ತುಶೈಲಿಯನ್ನು ಚೋಳ ಶಿಲ್ಪಿಗಳು ತಮ್ಮ ಅಭಿರುಚಿಗೆ, ಅವಶ್ಯಕತೆಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿ ರೂಢಿಸಿಕೊಂಡಿದ್ದರು. ಆದ್ದರಿಂದ ಈ ದೇವಾಲಯಗಳು ಚೋಳ-ದ್ರಾವಿಡ ಶೈಲಿಯ ಲಕ್ಷಣಗಳನ್ನು ಮೈಗೂಡಿಸಿಕೊಂಡು ನಿಂತಿವೆ. ಅದೇ ರೀತಿಯಲ್ಲಿ ಹನ್ನೆರಡನೆಯ ಶತಮಾನದಲ್ಲಿ, ದಕ್ಷಿಣ ಕರ್ನಾಟಕದಲ್ಲಿ, ಹೊಯ್ಸಳರ ಪೋಷಣೆಯಲ್ಲಿ ಹೊಯ್ಸಳ-ದ್ರಾವಿಡ ಶೈಲಿಯಲ್ಲಿ ದೇವಾಲಯ ವಾಸ್ತು ಪರಂಪರೆ ಬೆಳೆದಿತ್ತು. ಈ ದೇವಾಲಯಗಳೂ ಸಹ ತಮ್ಮದೇ ಆದ ಹೊಯ್ಸಳ ಶೈಲಿಯ ವಾಸ್ತು ಲಕ್ಷಣಗಳನ್ನು ಮೈಗೂಡಿಸಿಕೊಂಡು ನಿಂತಿವೆ. ಹೀಗೆ ವಿವಿಧ ವಾಸ್ತು ಸಂಪ್ರದಾಯಗಳಲ್ಲಿ ಪಳಗಿದ ಶಿಲ್ಪಿಗಳು, ತಾವು ಎಲ್ಲೇ ಹೋದರೂ, ಆ ವಾಸ್ತು ಪರಂಪರೆಗಳಲ್ಲೇ ದೇವಾಲಯಗಳನ್ನು ನಿರ್ಮಾಣ ಮಾಡುತ್ತಿದ್ದರು, ಒಂದು ಪಕ್ಷ ಒಂದೇ ಸ್ಥಳದಲ್ಲಿ, ಈ ವಿಭಿನ್ನ ವಾಸ್ತು ಪರಂಪರೆಗಳ ಶಿಲ್ಪಿಗಳು ತಮ್ಮ ಕೆಲಸವನ್ನು ನಿರ್ವಹಿಸಿದರೂ ಸಹ ಅವರುಗಳು ಅವರದೇ ಆದ ಪರಂಪರೆಯನ್ನು ಮುಂದುವರೆಸುತ್ತಿದ್ದರೇ ವಿನಃ, ಆ ಭೌಗೋಳಿಕ ಪರಿಸರಕ್ಕೆ ಮುಂಚಿನಿಂದಲೂ ಹೊಂದಿದ್ದ ವಾಸ್ತು ಸಂಪ್ರದಾಯವನ್ನು ಅನುಸರಿಸಿ, ವಾಸ್ತು ನಿರ್ಮಾಣಗಳನ್ನು ಕೈಗೊಳ್ಳುತ್ತಿರಲಿಲ್ಲ. ಈ ಅಂಶ, ಕನ್ನಡ ನಾಡಿನಲ್ಲಿ ವಾಸ್ತು ಅಭ್ಯಾಸ ನಡೆಸಿದ ತಮಿಳು ಶಿಲ್ಪಿಗಳಿಗೆ ಹೆಚ್ಚಾಗಿ ಅನ್ವಯಿಸುತ್ತದೆ ಎನ್ನಬಹುದು. ಶಿಲ್ಪಿಗಳಂತೆಯೇ ದೇವಾಲಯ ನಿರ್ಮಾತೃಗಳೂ ಸಹ ಈ ನಿಬಂಧನೆಗೆ ಅಪವಾದವಾಗಿರಲಿಲ್ಲ. ಅವರೂ ಸಹ ತಮ್ಮ ತಾಯ್ನಾಡಿನ ಸಂಸ್ಕೃತಿ, ಸಂಪ್ರದಾಯದ ಆಚರಣೆಗಳಿಗೆ ಹೆಚ್ಚು ಒಲವನ್ನು ನೀಡುತ್ತಿದ್ದರು. ಇದರಿಂದಾಗಿ ತೊಣ್ಣೂರಿನ ವಾಸ್ತುಶಿಲ್ಪದಲ್ಲಿ ಇಂತಹ ಎರಡು ವಿಭಿನ್ನ ಸಂಸ್ಕೃತಿಗಳ ಮಿಲನ ಮತ್ತು ಅದರ ಫಲಿತಾಂಶಗಳು ಸ್ಪಷ್ಟವಾಗಿ ನಿರೂಪಿತಗೊಂಡು, ಅವುಗಳು ವಿಶೇಷ ಅಧ್ಯಯನಕ್ಕೆ ಯೋಗ್ಯವಾಗಿದೆ.

ತೊಣ್ಣೂರಿನಲ್ಲಿ ದೇವಾಲಯ ವಾಸ್ತು ನಿರ್ಮಾಣಗಳು ಚುರುಕುಗೊಳ್ಳುವ ವೇಳೆಗೆ ಹೊಯ್ಸಳ-ದ್ರಾವಿಡ ಸಂಪ್ರದಾಯದಲ್ಲಿ ನುರಿತ ಶಿಲ್ಪಿಗಳು ಈ ಸ್ಥಳದಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದರು. ಜೊತೆಗೆ ದೇವಾಲಯ ನಿರ್ಮಾಣದಲ್ಲಿಯೂ ತೊಡಗಿದ್ದರು. ಆದರೆ ಸ್ವಲ್ಪಕಾಲದಲ್ಲಿಯೇ ಅಲ್ಲಿಯ ಸಾಂಸ್ಕೃತಿಕ ಪರಿಸರವೇ ಬದಲಾಯಿತು. ರಾಮಾನುಜಾ ಚಾರ್ಯರು ಇಲ್ಲಿ ಸ್ವಲ್ಪ ಕಾಲ ತಂಗಿದ್ದರೆಂಬ ಅಂಶದಿಂದಾಗಿ, ತೊಣ್ಣೂರಿನ ಪರಿಸರ ತಮಿಳು ಮಯವಾಯಿತು. ತಮಿಳುನಾಡಿನಿಂದ ಶ್ರೀರಾಮಾನುಜರ ಅನುಯಾಯಿಗಳು ಬಂದು ಇಲ್ಲಿ ನೆಲೆಸಿದರು. ಅವರ ಅಭೀಷ್ಟೆಯಂತೆ ತಮಿಳು ಸಂಪ್ರದಾಯ ಅಂದರೆ ಚೋಳ-ದ್ರಾವಿಡ ಸಂಪ್ರದಾಯದಲ್ಲಿ ದೇವಾಲಯಗಳು ನಿರ್ಮಾಣಗೊಂಡವು. ಅದೇ ಅಲ್ಲಿ ಜನಪ್ರಿಯವೂ ಆಯಿತು.

ಚೋಳ-ದ್ರಾವಿಡ ಮತ್ತು ಹೊಯ್ಸಳ-ದ್ರಾವಿಡ ಶೈಲಿಯ ಕೆಲವು ವಿಶೇಷ ವಾಸ್ತು ಲಕ್ಷಣಗಳು, ಅಲಂಕರಣೆಯ ವ್ಯತ್ಯಾಸಗಳು, ತಳವಿನ್ಯಾಸದ ಪ್ರಭೇದಗಳು, ಸ್ತಂಭಗಳ ವಿನ್ಯಾಸ, ನಿರ್ಮಾಣ ಮಾಧ್ಯಮ, ಇವುಗಳೆಲ್ಲದರ ಒಂದು ಕೂಲಂಕಷ ಅಧ್ಯಯನ ಮಾಡಿ, ಈ ಕೆಳಗಿನ ಪಟ್ಟಿಯನ್ನು ತಯಾರಿಸಲಾಗಿದೆ. ಈ ಪಟ್ಟಿಯಲ್ಲಿ ಎರಡೂ ಶೀರ್ಷಿಕೆಯಡಿ ನೀಡಿರುವ ಲಕ್ಷಣಗಳು, ಆಗ್ನೇಯ ಕರ್ನಾಟಕದ ಕ್ರಿ.ಶ.  ೧೦೦೦-೧೨೦೦ ಮಧ್ಯದ ಕಾಲದ ದೇವಾಲಯಗಳಿಗೆ ಅನ್ವಯವಾಗುವಂತಹುದು.

ದ್ರಾವಿಡ ದೇವಾಲಯದ ಸ್ಥೂಲ ಲಕ್ಷಣಗಳು

(ಕ್ರಿ.ಶ. ೧೧-೧೨ ನೆಯ ಶತಮಾನದ ಆಗ್ನೇಯ ಕರ್ನಾಟಕದಲ್ಲಿ)

ಚೋಳ-ದ್ರಾವಿಡ ಶೈಲಿ         ಹೊಯ್ಸಳ-ದ್ರಾವಿಡ ಶೈಲಿ

ಅಧಿಷ್ಠಾನದ ದಿಂಡುಗಳು (ಕೆಳಗಿನಿಂದ ಮೇಲಕ್ಕೆ)

ಉಪಾನ ಉಪಾನ
ಜಗತಿ ಜಗತಿ
ಕುಮುದ ಕುಮುದ (ಶೈಲೀಕೃತ)
ಗಳ ಗಳ
ಮಹಾಪಟ್ಟಿ ಕಪೋತ (ಶೈಲೀಕೃತ)
ಗಳ ಗಳ
ಪ್ರತಿ ಪ್ರತಿ (ಐಚ್ಛಿಕ)

ಭಿತ್ತಿಪಾದದ ಅಲಂಕರಣ

ದಿಂಡು ದಿಂಡು
ಜಾಡಿ/ದಾನಿ ಘಂಟೆಯಾಕಾರದ
ಆಕಾರದ ಮೇಲ್ದಿಂಡು ಮೇಲ್ದಿಂಡು
ಕುಂಭ  ಕುಂಭ
ಮಂಡಿ ಮಂಡಿ
ಫಲಕ ಫಲಕ
ಆಧಾರಪೋತಿಕೆ ಆಧಾರಪೋತಿಕೆ

ಪ್ರಸ್ತರ

ಉತ್ತರಾ ಉತ್ತರಾ
ವಲಭಿ ವಲಭಿ
ಕಾಲುವೃತ್ತಾಕಾರದ ಕಪೋತ ಇಳಿಜಾರು/ಎರಡು ಬಾಗಿನ
ಮತ್ತು ಕೂಡುಗಳು ಕಪೋತ/ದಂತಪಂಕ್ತಿ/ಶೈಲೀಕೃತ ಕೂಡು
ವಾಜನ-ಪಟ್ಟಿಕೆಯ ರೀತಿ ಮುಖ ವಾಜನ-ಇಳಿಜಾರುಮೇಲ್ಮೈ
ವ್ಯಾಳಮಾಲೆಯ ಅಲಂಕರಣ ದಂತಪಂಕ್ತಿ
ಶಾಲ, ಕೂಟ, ಪಂಜರಗಳ ಶಾಲ, ಕೂಟ, ಪಂಜರಗಳ
ಹಾರ ಐಚ್ಛಿಕ ಹಾರ ಐಚ್ಛಿಕ

ತೋರಣ/ಕೋಷ್ಟಾಲಂಕರಣ

ಅಧಿಷ್ಠಾನವಿಲ್ಲ ಅಧಿಷ್ಠಾನ ಐಚ್ಛಿಕ
ಸ್ತಂಭಿಕೆಗಳಿಗೆ ಪೀಠವಿಲ್ಲ ಸ್ತಂಭಿಕೆಗಳಿಗೆ ಪೀಠ ಸಾಮಾನ್ಯ
ಸೀಳು ಸ್ತಂಭಿಕೆಗಳು ಪೂರ್ಣಸ್ತಂಭಿಕೆಗಳು
ದಾನಿ/ಜಾಡಿಯಾಕಾರದ ಮೇಲ್ದಿಂಡು ಘಂಟಾಕಾರದ ಮೇಲ್ದಿಂಡು
ಪ್ರಸ್ತರ ಪ್ರಸ್ತರ
ಗ್ರೀವ-ಏಕತಲ ಶಿಖರ ಗ್ರೀವ-ಬಹುತಲ ಶಿಖರ
ಶಾಲ, ಕೂಟ, ಪಂಜರ ಮಾದರಿಯದು ವೈವಿಧ್ಯಮಯ ಶಿಖರಗಳು

ವಿಮಾನ

ದ್ರಾವಿಡ ದ್ರಾವಿಡ ಅಥವಾ ಕದಂಬ ನಾಗರ
ಶುಕನಾಸವಿರುವುದಿಲ್ಲ ಶುಕನಾಸವಿರುತ್ತದೆ
ಚೌಕ ಅಥವಾ ವೃತ್ತ ಚೌಕ ತಲವಿನ್ಯಾಸ ಮಾತ್ರ
ತಲವಿನ್ಯಾಸ

ಒಳ ಅಲಂಕರಣ ಕಂಬಗಳು

ಗ್ರಾನೈಟ್  (ಮಾಧ್ಯಮ) ಬಳಪದ ಕಲ್ಲು (ಮಾಧ್ಯಮ)
೧. ಚೌಕ, ಅಷ್ಟಾಶ್ರ, ಉರುಳೆ ದಿಂಡು       ದಾನಿಯಾಕಾರದ ಮೇಲ್ದಿಂಡು, ಕುಂಭ, ಮಂಡಿ, ಫಲಕ (ನಿರಲಂಕೃತ) ೧. ಚೌಕ, ಉರುಳೆಯಾಕಾರದ ದಿಂಡು, ಘಂಟಾಕಾರದ  ಮೇಲ್ದಿಂಡು ಮತ್ತು ಉರುಳೆ ದಿಂಡು, ಶೈಲೀಕೃತ ಕುಂಭ, ಮಂಡಿ, ಫಲಕ(ಸಾಲಂಕೃತ)
೨. ಚೌಕ, ಅಷ್ಟಾಶ್ರ, ಉರುಳೆ/ಬಹುಮುಖ ದಿಂಡು. ಕುಂಭ, ಮಂಡಿ, ಫಲಕ (ಐಚ್ಛಿಕ) ಪೋತಿಕೆ-ಕೆಳಮೂಲೆ ಇಳಿಜಾರಾಗಿ              ಕತ್ತರಿಸಿ, ಮಧ್ಯ ಚೌಕ ಗುಬುಟು                 (ಆಧಾರ ಪೋತಿಕಾ) ೨. ದಿಂಡು ಮಾತ್ರ ಬಹುಮುಖ. ನಕ್ಷತ್ರ, ಇತ್ಯಾದಿ ಉಳಿದವು ಮೇಲಿನಂತೆ ಪೋತಿಕೆ-ಕೆಳಮೂಲೆ ನಿಮ್ನವಾಗಿ ಕತ್ತರಿಸಿ, ಮಧ್ಯದ ಗುಬುಟಿನ ಬದಲು ಕಮಲದಳದಾಕಾರದ ಒಂದು ಎಲೆ. ತುದಿ ಮುಷ್ಟಿಬಂಧ ರೀತಿಯದು. ಅಂದರೆ ಉರುಳೆಯಾಕಾರದಲ್ಲಿ ಕೆಳಕ್ಕೆ ಬಾಗಿರುತ್ತದೆ.

ಛಾವಣಿ

ಸಾಧಾರಣ ಅಥವಾ ನಾಭಿಚ್ಛಂದ ಅಲಂಕೃತ, ನಾಭಿಚ್ಛಂದ/ಮಟ್ಟಸ ಅಷ್ಟದಿಕ್ಪಾಲಕರು/ಕಮಲದ ಕಟ್ಟುಗಳು ಭುವನೇಶ್ವರಿ, ಇತ್ಯಾದಿ.

ದ್ವಾರಬಂಧ

ನಿರಲಂಕೃತ, ಸಾಧಾರಣ ಸಾಲಂಕೃತ-ಉತ್ತಮಕೆತ್ತನೆ, ಶಾಖೆಗಳಿಂದ ಕೂಡಿದ್ದು

ತಳವಿನ್ಯಾಸ

ಗರ್ಭಗೃಹ ಗರ್ಭಗೃಹ
ಅಂತರಾಳ ಮತ್ತು / ಅಥವಾ                     ಅರ್ಧಮಂಟಪ ಶುಕನಾಸಿ
ಗೂಢಮಂಟಪ ನವರಂಗ/ಗೂಢಮಂಟಪ
ಮುಖಮಂಟಪ ಮುಖಮಂಟಪ
ಮಹಾಮಂಟಪ ಮಹಾಮಂಟಪ
(ತೆರೆದ ಅಥವಾ ಆವೃತ್ತ)  (ತೆರೆದ)
ನಿರಂಧರ ನಿರಂಧರ
ಮಹಾಮಂಟಪ/ಗೂಢಮಂಟಪದ ಪ್ರತ್ಯೇಕ ಮಾಲಿಕಾ, ವಿಶಾಲ ಆವರಣ
ಮುಂದುವರಿಕೆಯಾದ ಮಾಲಿಕಾ                   ಆವೃತಮಂಟಪ / ಪ್ರಾಕಾರ, ಕೈಸಾಲೆ, ಪ್ರಾಕಾರ, ಮುಖಮಂಟಪ
ಮುಖಮಂಟಪ ದ್ವಾರಮಂಟಪ

ಸಾಮಾನ್ಯ ಅಲಂಕರಣ

ಸರಳತೆಗೆ ಹೆಚ್ಚು  ಪ್ರಾಧಾನ್ಯ ಸಾಮಾನ್ಯ/ಅಲಂಕೃತ/ಅತ್ಯಲಂಕೃತ  ಸುಂದರ ಸೂಕ್ಷ್ಮ ಕೆತ್ತನೆಗೆ ಹೆಚ್ಚು ಮಹತ್ವ
ಅಲಂಕರಣೆ  ಕಡಿಮೆ                              ಕುಂಭಪಂಜರದ ಅಲಂಕರಣ-                      ಪೀಠ, ಕುಂಭ, ಸ್ತಂಭ, ಪ್ರಸ್ತರ,                   ಸ್ತಂಭ, ಪ್ರಸ್ತರ, ವೈವಿಧ್ಯಮಯ ಶಾಲ/ಕೂಟ/ಪಂಜರ ಮಾದರಿಯ              ಶಿಖರ, ಸ್ತೂಪಿ ಅಲಂಕರಣೆ ಹೆಚ್ಚು ಸ್ತಂಭಪಂಜರದ ಅಲಂಕರಣ-ಶಿಖರಗಳ ಕೆತ್ತನೆ, ಮೇಲ್ಭಾಗದಲ್ಲಿ ಕಮಾನಿನ ಪ್ರಭಾವಳಿ, ಕೀರ್ತಿಮುಖ

ನಿರ್ಮಾಣ ಮಾಧ್ಯಮ

ಗ್ರಾನೈಟ್                                     ಗ್ರಾನೈಟ್  ಮತ್ತು/ಅಥವಾ ಬಳಪದ ಕಲ್ಲು

ಮೇಲೆ ನಮೂದಿಸಿದ ಚೋಳ-ದ್ರಾವಿಡ ಮತ್ತು ಹೊಯ್ಸಳ-ದ್ರಾವಿಡ ಶೈಲಿಯ ಲಕ್ಷಣಗಳ ವಿಭಜನಾಪಟ್ಟಿ ಬಹಳ ಸ್ಥೂಲವಾದದ್ದು. ಇವುಗಳಲ್ಲಿ ಕೆಲವಕ್ಕೆ ಅಪವಾದವೆಂಬ ಉದಾಹರಣೆಗಳು ಸೂಕ್ಷ್ಮವಾಗಿ ಹುಡುಕಿದಾಗ ಸಿಕ್ಕಬಹುದು. ಆದರೂ ಅವುಗಳು ನಿಸ್ಸಂದೇಹವಾದುದೆಂದು ಹೇಳುವುದೂ ಕಷ್ಟ. ಬಹಳಷ್ಟು ಉದಾಹರಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ತಃಖ್ತೆ ತಯಾರಿಸಲಾಗಿದೆ. ತಳವಿನ್ಯಾಸಕ್ಕೆ, ಅಧಿಷ್ಠಾನಕ್ಕೆ, ಭಿತ್ತಿಪಾದಗಳ ಅಲಂಕರಣಕ್ಕೆ, ಕಪೋತದ ಅಲಂಕರಣ ಕೆತ್ತನೆಗೆ, ಶುಕನಾಸ ನಿರ್ಮಾಣಕ್ಕೆ, ಒಳಾಲಂಕರಣಕ್ಕೆ ಸಂಬಂಧಿಸಿದ ಹಲವಾರು ಲಕ್ಷಣಗಳು, ಚೋಳ-ದ್ರಾವಿಡವಾಗಲಿ, ಹೊಯ್ಸಳ-ದ್ರಾವಿಡವಾಗಲಿ, ಆಯಾಯಾ ಶೈಲಿಗೆ ಸೀಮಿತ. ಇವುಗಳಲ್ಲದೆ ಇನ್ನೂ ಅನೇಕ ಸೂಕ್ಷ್ಮ ಶೈಲಿ ಬದಲಾವಣೆಗಳನ್ನು ಹೆಚ್ಚಿನ ಅಧ್ಯಯನ ಮಾಡಿ ಸೇರಿಸುವುದಕ್ಕೂ ಅವಕಾಶವಿಲ್ಲದಿಲ್ಲ. ಈ ರೀತಿಯ ಶೈಲಿ ವ್ಯತ್ಯಾಸಗಳ ಅಧ್ಯಯನ ಮಾಡುವುದಕ್ಕೆ ಸಾಕಷ್ಟು ದೇವಾಲಯಗಳು ಚಾಮರಾಜನಗರ, ಕೊಳ್ಳೇಗಾಲ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ದೊರೆಯುತ್ತವೆ. ಈ ಪ್ರಾಂತ್ಯ ಚೋಳರಿಂದ ಆಳಲ್ಪಟ್ಟು ನಂತರ ಹೊಯ್ಸಳರ ಆಳ್ವಿಕೆಗೆ ಬಂದದ್ದರಿಂದ ಈ ಪ್ರಾಂತ್ಯದಲ್ಲಿ ಚೋಳ-ದ್ರಾವಿಡ ಮತ್ತು ಹೊಯ್ಸಳ-ದ್ರಾವಿಡ  ಶೈಲಿಗಳೆರಡರ ಬಳಕೆಯನ್ನು ಒಂದಾದ ಮೇಲೊಂದರಂತೆ ಅಥವಾ ಕೆಲವೆಡೆ ಸಮಕಾಲೀನವಾಗಿಯೂ ಕಾಣಬಹುದಾಗಿದೆ. ಆದ್ದರಿಂದ ಈ ಮೇಲೆ ಹೇಳಿದ ನಾಲ್ಕು ಜಿಲ್ಲೆಗಳ ದೇವಾಲಯಗಳನ್ನು ಗಮನದಲ್ಲಿಟ್ಟುಕೊಂಡು ಈ ಲಕ್ಷಣ ವಿಭಜನಾ ಪಟ್ಟಿಯನ್ನು ತಯಾರಿಸಲಾಗಿದೆ. ಅಲಂಕರಣ ವಿಧಾನದಲ್ಲಿ ಹೊಯ್ಸಳ ಶಿಲ್ಪಿಗಳು, ಚೋಳ ಶಿಲ್ಪಿಗಳು ಮಾಡಿರುವ ಬದಲಾವಣೆಗಳು ಕೇವಲ ಅವರವರ ಅಭಿರುಚಿಗಳಿಂದ ಉಂಟಾದದ್ದೇ ವಿನಃ  ಯಾವುದೇ ವಾಸ್ತು  ವೈಜ್ಞಾನಿಕ ಕಾರಣಗಳಿಂದಲ್ಲ. ಮೂಲ ಶೈಲಿ ದ್ರಾವಿಡವೇ ಆದರೂ, ಅವರವರ ಅಭಿರುಚಿಗೆ ತಕ್ಕಂತೆ ಅವರವರುಗಳು ಶೈಲಿಯ ನಿರೂಪಣೆಯಲ್ಲಿ, ವಿನ್ಯಾಸದಲ್ಲಿ, ಅಲಂಕರಣೆಯಲ್ಲಿ ಬದಲಾವಣೆ ಮಾಡಿದ್ದಾರೆ ಅಷ್ಟೆ.

ಮೇಲಿನ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ಈಗ ತೊಣ್ಣೂರಿನ ನಂಬಿನಾರಾಯಣ ಗುಡಿಯ ವಿವಿಧ ಭಾಗಗಳ ವಾಸ್ತು ವಿವರಣೆ, ಅಲಂಕರಣೆಗೆ ಬರೋಣ. ಮೂಲಗುಡಿ ಹೊಯ್ಸಳ ಕಾಲದ್ದೆಂದು ಆಗಲೇ ಹೇಳಿದ್ದೇವೆ. ಇದರ ವಾಸ್ತು ಲಕ್ಷಣಗಳಿಗೆ ಬರುವುದಾದರೆ, ಅಧಿಷ್ಠಾನದಲ್ಲಿನ ಪಟ್ಟಿಕೆಗಳು ಕ್ರಮವಾಗಿ ಉಪಾನ, ಜಗತಿ, ಚೂಪಾದ ತ್ರಿಪಟ್ಟಕುಮುದ (ಚೂಪಾದ ಕುಮುದವಲ್ಲ), ಗಳ ಮತ್ತು ಕಪೋತ. ಚೋಳ-ದ್ರಾವಿಡ ಲಕ್ಷಣವಾದ ಮಹಾಪಟ್ಟಿ ಇಲ್ಲಿಲ್ಲ. ಭಿತ್ತಿಯ ಅಲಂಕರಣದಲ್ಲಿ ಭಿತ್ತಿಪಾದಗಳ ಮೇಲ್-ದಿಂಡಿನಲ್ಲಿ ಘಂಟಾಕಾರದ ಕೆತ್ತನೆಗಳಿವೆ. ಚೋಳ-ದ್ರಾವಿಡ ದಾನಿ/ಜಾಡಿಯಾಕಾರದ ಕೆತ್ತನೆಯಿಲ್ಲ. ಭಿತ್ತಿಯಲ್ಲಿನ ದೇವಕೋಷ್ಟಗಳ ಇಕ್ಕೆಲಗಳ ಕಂಬಗಳು ಪೂರ್ಣಾಕೃತಿಯ ಕಂಬಗಳು. ಚೋಳ-ದ್ರಾವಿಡ ರೀತಿಯ ನೇರಸೀಳಿದ ಸೀಳು ಕಂಬಗಳಲ್ಲ. ಪ್ರಸ್ತರದ ಮೇಲಿನ ಶಿಖರ, ಚೂಪಾದ ದ್ವಿತಲ ರೀತಿಯದು(ನೋಡಿ: ಚಿತ್ರ‑೧೧). ಚೋಳ-ದ್ರಾವಿಡ ಶೈಲಿಯ ಏಕತಲ, ಕೂಟ, ಪಂಜರ ರೀತಿಯ ವಿಮಾನವಲ್ಲ. ಭಿತ್ತಿತ ಮೇಲಿನ ಕಪೋತ, ಎರಡು ಬಾಗುಳ್ಳ ಹೊಯ್ಸಳ ರೀತಿಯ ಕಪೋತ, ಚೋಳ ರೀತಿಯದಲ್ಲ. ಕಪೋತದ ಮೇಲೆ ಮತ್ತೊಂದು ಕಪೋತವಿದೆ. ಮುಖಭಾಗದಲ್ಲಿ ಹೊಯ್ಸಳ ರೀತಿಯ ದಂತ ಪಂಕ್ತಿಯ ಅಲಂಕರಣವಿದೆ.  ಚೋಳ ರೀತಿಯ ವ್ಯಾಳಮಾಲೆಯಿಲ್ಲ.

ಈ ರೀತಿಯ ಎರಡನೆಯ ಕಪೋತ ಹೊಯ್ಸಳ ನಿರ್ಮಿತ ಎಲ್ಲಾ ದೇವಾಲಯಗಳಲ್ಲಿ ಕಾಣಬರುವುದು ಸರ್ವೇ ಸಾಮಾನ್ಯ. ನಿಜವಾಗಿ ಇದು ಕಪೋತವಲ್ಲ. ಕಪೋತದಂತೆ ಕಾಣುವ ಒಂದು ವಾಸ್ತು ಅಂಗ. ಇದರ ಕೆಳಭಾಗ ಮಟ್ಟಸವಾಗಿರುತ್ತದೆ. ಮೇಲ್ಭಾಗ ಇಳಿಜಾರಾಗಿರು ತ್ತದೆ. ನಿರ್ದಿಷ್ಟ ಅಂತರಗಳಲ್ಲಿ ಸಾಲಾಗಿ ದಂತ ರೀತಿಯ ಗುಬುಟುಗಳಿರುತ್ತವೆ. ಗುಬುಟಿನ ಮುಖಭಾಗ ಚೌಕಟ್ಟಾಗಿರುತ್ತದೆ ಮತ್ತು ಚಪ್ಪಟೆಯಾಗಿರುತ್ತದೆ. ಸೂಕ್ಷ್ಮ ಗೆರೆಗಳ ಕೀರ್ತಿಮುಖ/ಕೂಡುಗಳು ಮುಖಭಾಗದಲ್ಲಿರಬಹುದು. ಇದು ಒಂದು ರೀತಿ ದ್ರಾವಿಡ ಶೈಲಿಯ ಶೈಲೀಕೃತ ಕಪೋತವೆನ್ನಬಹುದು. ಇದಕ್ಕೆ ಚೋಳ-ದ್ರಾವಿಡ ಶೈಲಿಯಲ್ಲಿ ಸಮಾನವಾದ ಭಾಗವೆಂದರೆ ವಾಜನ. ವಾಜನ ಒಂದು ದಪ್ಪ ಚಪ್ಪಡಿ, ಕಪೋತದ ಮೇಲಿರುತ್ತದೆ. ಇದರ ಮುಖಭಾಗದಲ್ಲಿ ಸಾಲಾಗಿ ಅಲಂಕಾರವಾಗಿ ವ್ಯಾಳಮಾಲೆ ಇರುತ್ತದೆ. ಈ ಚಪ್ಪಡಿ ಪ್ರಚ್ಛಾದನ ಚಪ್ಪಡಿ. ಅಂದರೆ ಗೋಡೆಯ ಮೇಲ್ಭಾಗದಲ್ಲಿ, ಅಂದರೆ ಪ್ರಸ್ತರ ಭಾಗದಲ್ಲಿ ಒಳಗಡೆ, ಕಾಣದಂತಿರುವ ಛಾವಣಿಯ ಚಪ್ಪಡಿಗಳ ಅಸಮವಾದ ಮುಖಭಾಗವನ್ನು ಮುಟ್ಟಿ, ಆ ಸ್ಥಳ ಸಮವಾಗಿ ಕಾಣುವಂತೆ ಮಾಡುವ ಉದ್ದೇಶದಿಂದ ಕೂರಿಸಲಾದ ಪ್ರಚ್ಛಾದನ ಆಸ್ಯವೆಂಬ ಚಪ್ಪಡಿ (ಪ್ರಚ್ಛಾದನ-ಮುಚ್ಚಳಿಕೆ+ಆಸ್ಯ-ಮುಖ). ಚೋಳ-ದ್ರಾವಿಡ ಸಂಪ್ರದಾಯದಲ್ಲಿ ಇದನ್ನು ವ್ಯಾಳಮಾಲೆಯಿಂದ ಅಲಂಕರಿಸಿರುತ್ತಾರೆ. ಹೊಯ್ಸಳ-ದ್ರಾವಿಡ ಸಂಪ್ರದಾಯದಲ್ಲಿ ಈ ಭಾಗವನ್ನು ಶೈಲೀಕೃತ ಕಪೋತ ರೀತಿಯಲ್ಲಿ ಕಂಡರಿಸಿ ಕಟ್ಟಿರುತ್ತಾರೆ. ಇಲ್ಲಿಯವರೆಗೆ ದೇವಾಲಯ ನಿರ್ಮಾಣದ ಏರುವಿನ್ಯಾಸದ ಒಂದು ಘಟ್ಟ ಪೂರ್ತಿಯಾಗುತ್ತದೆ. ಪ್ರಚ್ಛಾದನ ಆಸ್ಯ ಚಪ್ಪಡಿಯನ್ನು ದೇವಾಲಯದ ಎಲ್ಲಾ ಭಾಗಗಳಲ್ಲೂ ಕೂಡಿಸಿ, ನಂತರ ಮಟ್ಟವಾದ ಅದರ ನೆತ್ತಿಯ ಮೇಲೆ ಅವಶ್ಯಕತೆಗನುಗುಣವಾಗಿ, ವಿಮಾನ ಪ್ರಾಸಾದವನ್ನಾಗಲಿ, ಕೈಪಿಡಿಗೋಡೆಯನ್ನಾಗಲಿ (ಹಾರ) ನಿರ್ಮಿಸುತ್ತಾರೆ. ಇವಿಷ್ಟೂ ಲಕ್ಷಣಗಳನ್ನು ಸಮನಾಗಿ ಗರ್ಭಗೃಹ, ಶುಕನಾಸ ಮತ್ತು ನವರಂಗ ಇವಿಷ್ಟು ಭಾಗಗಳ ಹೊರಭಿತ್ತಿಯಲ್ಲಿ ಮಾತ್ರ ಕಾಣಬಹುದಾಗಿದೆ.

ಒಳಾಲಂಕರಣಕ್ಕೆ ಬರುವುದಾದರೆ ನಂಬಿನಾರಾಯಣನ ಗುಡಿಯ ಒಳಭಾಗವು ಸಂಪೂರ್ಣ ಹೊಯ್ಸಳ ಸಂಪ್ರದಾಯದಲ್ಲೇ ಅಲಂಕರಣಗೊಂಡಿದೆ. ನಂಬಿನಾರಾಯಣನ ಮೂಲ ವಿಗ್ರಹ ಹೊಯ್ಸಳ ಶಿಲ್ಪಶೈಲಿಯ ಒಂದು ಅತ್ಯುತ್ತಮ ಉದಾಹರಣೆ. ಗರ್ಭಗೃಹ ಮತ್ತು ಶುಕನಾಸದ ದ್ವಾರಬಂಧಗಳು ಹೊಯ್ಸಳ ರೀತಿಯ ದ್ವಾರಬಂಧಗಳ ಅಲಂಕರಣವನ್ನು ಹೊಂದಿದೆ. ನವರಂಗದ ನಾಲ್ಕು ಕಂಬಗಳಂತೂ ಬಳಪದ ಕಲ್ಲಿನಲ್ಲಿ, ಚರಕಿಯಂತ್ರದಲ್ಲಿ ತಯಾರಿಸಿದ ಕಂಬಗಳು ಆಗಿವೆ. ಕಂಬಗಳ ಪೀಠ, ಬುಡಭಾಗ, ಉರುಳೆದಿಂಡು, ಘಂಟಾರೂಪದ ಮಧ್ಯದ ದಿಂಡು, ಚಕ್ರಾಕಾರವಾದ ಕುಂಭ, ಮಂಡಿ-ಪಲಗೈ ಎಲ್ಲವೂ ಹೊಯ್ಸಳ ಕೆತ್ತನೆಯ ತದ್ರೂಪ. ಛಾವಣಿಯ ಸಾಲಾಂಕೃತ ತೊಲೆಗಳು, ಮಧ್ಯದ ನಾಭಿಚ್ಛಂದ ವಿತಾನ, ಸುತ್ತಲಿನ ಕಟ್ಟುಗಳುಳ್ಳ ಛಾವಣಿ, ಕಟ್ಟುಗಳಲ್ಲಿನ ಅಷ್ಟದಿಕ್ಪಾಲಕರ ಮತ್ತು ಪದ್ಮಗಳ ಉಬ್ಬುಗೆತ್ತನೆ, ಎಲ್ಲವೂ ಹೊಯ್ಸಳ ಶೈಲಿಯಲ್ಲಿದೆ. ನವರಂಗದ ಗೋಡೆಯ ಭದ್ರಕ ಕಂಬಗಳೂ ಸಹ ಹೊಯ್ಸಳ ಶೈಲಿಯದು. ಹೀಗೆ ಗುಡಿಯ ಒಳಭಾಗದ ಎಲ್ಲಾ ವಾಸ್ತು ಅಂಗಗಳು ಸಾಲಂಕೃತ ಹೊಯ್ಸಳ ದೇವಾಲಯಗಳ ಒಳರೂಪವನ್ನು ಪ್ರತಿಬಿಂಬಿಸುತ್ತವೆ. ಇದರಿಂದಾಗಿ  ನಂಬಿನಾರಾಯಣನ ಗುಡಿಯ ಮೂಲಭಾಗ ಅಂದರೆ  ಗರ್ಭಗೃಹ, ಶುಕನಾಸ ಮತ್ತು ನವರಂಗಗಳು ಹೊಯ್ಸಳ ಶಿಲ್ಪಿಗಳಿಂದ ರಚಿತವಾದ ಭಾಗ ಎಂಬುದು ಸ್ಪಷ್ಟವಾಗುತ್ತದೆ. ನವರಂಗದ ನಾಲ್ಕು ಕಂಬಗಳಲ್ಲಿ ಮಾತ್ರ ಹೊಯ್ಸಳ ಶೈಲಿಯ ಸುಂದರ ಸೂಕ್ಷ್ಮ ಕುಸುರಿ ಅಲಂಕರಣ, ಹೊಳಪು ಕಾಣಬರುತ್ತದೆ. ಉಳಿದಂತೆ ಸಂಪೂರ್ಣವಾಗಿ ದೇವಾಲಯ ಗ್ರಾನೈಟ್ ಕಲ್ಲಿನದು. ಈ ಕಠಿಣ ಶಿಲೆಯಲ್ಲಿ ಸೂಕ್ಷ್ಮವಾದ  ಕುಸುರಿ ಕೆತ್ತನೆಗಳು ಅಸಾಧ್ಯ, ಆದುದರಿಂದ ದೇವಾಲಯದ ವಾಸ್ತು ಅಲಂಕರಣವನ್ನು ಹೊಯ್ಸಳ-ದ್ರಾವಿಡ ಶೈಲಿಯಲ್ಲಿ ನಿರ್ಮಿಸಿ ಮುಖ್ಯವಾದ ಕಡೆಗಳಲೆಲ್ಲಾ, ಶಿಲ್ಪಿಗಳು ತಮ್ಮ ಹೊಯ್ಸಳ ಛಾಪನ್ನು ಮೂಡಿಸಿದ್ದಾರೆ.

ನವರಂಗದ ಮುಂಭಾಗದ ಮಹಾಮಂಟಪಕ್ಕೆ ವೀರವಲ್ಲಾಳನ್ ಮಂಡಪ ಎಂದು ಶಾಸನ ಹೆಸರಿಸುತ್ತದೆ. ಹೆಸರೇ ಹೇಳುವಂತೆ ಈ ಮಂಟಪದ ನಿರ್ಮಾಣ ಕಾಲಕ್ಕೆ ತಮಿಳರ ಪ್ರಭಾವ ತೊಣ್ಣೂರಿನಲ್ಲಿ ಸ್ಪಷ್ಟವಾಗಿ ಬೇರೂರಿತ್ತು. ಈ ಮಂಟಪದ ಕಾಲ ಕ್ರಿ.ಶ. ೧೧೭೪ ಅಥವಾ ಅದಕ್ಕೂ ಸ್ವಲ್ಪ ಮುಂಚೆ, ಆ ಹೊತ್ತಿಗಾಗಲೇ ರಾಮಾನುಜರ ಅನುಯಾಯಿಗಳು ತೊಣ್ಣೂರನ್ನು ಒಂದು ಪ್ರಸಿದ್ಧ ಶ್ರೀವೈಷ್ಣವ ಪಂಥದ ಕೇಂದ್ರವನ್ನಾಗಿ ಮಾಡಿಕೊಂಡು ಅಲ್ಲಿ ನೆಲೆಸಿದ್ದರು. ಅಲ್ಲಿಯೇ  ಇದ್ದ ನಂಬಿನಾರಾಯಣ ದೇವಾಲಯ ಶ್ರೀವೈಷ್ಣವ ಧರ್ಮದ ಆ ಕಾಲದ ಒಂದು ಮುಖ್ಯ ನೆಲೆಯಾಗಿತ್ತು. ತೊಣ್ಣೂರಿನ ಶ್ರೀವೈಷ್ಣವರ ಪೋಷಣೆಯಿಂದಾಗಿ ಆ ದೇವಾಲಯ ತನ್ನ ವಿಸ್ತೀರ್ಣದಲ್ಲಿ ಬೆಳೆಯುತ್ತಾ ಬಂದಿತು.

ನಂಬಿನಾರಾಯಣನ ಮೂಲ ದೇವಾಲಯ ಹೊಯ್ಸಳ ಶಿಲ್ಪಗಳ ವಾಸ್ತುಕೃತಿ ಎಂದು ಆಗಲೇ ಹೇಳಿದ್ದೇವೆ. ಈ ದೇವಾಲಯದ ಮೂಲ ಸ್ವರೂಪ ಚೋಳ ವಾಸ್ತು ಕೃತಿಗಳಿಂದ ಸಂಪೂರ್ಣ ವಿಭಿನ್ನವಾಗಿತ್ತು. ತಮಿಳು ಜನಾಂಗವು ಆ ದೇವಾಲಯವನ್ನು ತಮ್ಮ ಹಿಡಿತಕ್ಕೆ ಸೇರಿಸಿಕೊಂಡ ಮೇಲೆ ಅವರು ಈ ದೇವಾಲಯದ  ಸ್ವರೂಪವನ್ನು ತಮ್ಮ ಅಭಿರುಚಿಗೆ ತಕ್ಕಂತೆ ರೂಪಿಸಿಕೊಂಡರು. ಮೂಲ ಗುಡಿಯ ತಳವಿನ್ಯಾಸದಲ್ಲಿ ಯಾವುದೇ ವಾಸ್ತುರೂಪದ ಬದಲಾವಣೆ ಮಾಡಲು ಅವಕಾಶವಿರಲಿಲ್ಲ ಹಾಗೂ ಅವೆಲ್ಲವೂ ತಮಿಳು ಪೂಜಾವಿಧಾನಕ್ಕೆ ಬೇಕಾದ ವಾಸ್ತು ಭಾಗಗಳೇ ಆಗಿದ್ದವು. ಇದರಿಂದಾಗಿ ನವರಂಗದ ಮುಂಭಾಗದಲ್ಲಿ ಮತ್ತೊಂದು ದೊಡ್ಡ ಹಜಾರವನ್ನು ಅವರು ನಿರ್ಮಿಸಿದರು. ಕರ್ನಾಟಕದ ಬಹುತೇಕ ಚೋಳನಿರ್ಮಿತ ದೇವಾಲಯಗಳಲ್ಲಿ ಈ ರೀತಿಯ ಗೂಢಮಂಟಪ ಅಥವಾ ಮಹಾಮಂಟಪ ಗಳ ನಿರ್ಮಾಣವಾಗಿದೆ.

ಈ ಮಹಾಮಂಟಪ ಅದರ ನಿರ್ಮಾಣ ರೀತಿಯಲ್ಲಿ ತನ್ನದೇ ಆದ ವಿಶಿಷ್ಟ ರೂಪವನ್ನು ಹೊಂದಿರುತ್ತದೆ. ದೇವಾಲಯದ ಗೂಢಮಂಟಪಕ್ಕೆ ಮುಂಭಾಗದಲ್ಲಿ ಗುಡಿಯ ಮೂಲ ಅಕ್ಷರೇಖೆಗೆ ಲಂಬವಾಗಿ ಈ ಹಜಾರವನ್ನು ನಿರ್ಮಿಸುತ್ತಿದ್ದರು. ಈ ಹಜಾರದಲ್ಲಿ ಅನೇಕ ಕಂಬಗಳು ಇರುತ್ತವೆ. ಈ ಮಂಟಪ ಸಂಪೂರ್ಣ ಗೂಢಮಂಟಪವೂ ಅಲ್ಲ, ತೆರೆದ ಮಂಟಪವೂ ಅಲ್ಲ. ಇದರ ಮುಂಭಾಗ ಮತ್ತು ಪಾರ್ಶ್ವಗಳಲ್ಲಿ ಮಾತ್ರ ಗೋಡೆಗಳು ಛಾವಣಿಯವರೆಗೆ ಇರುತ್ತದೆ. ಪ್ರಾಕಾರ ರೀತಿಯ ಈ ಗೋಡೆಗಳಿಗೆ ಹೊರಮುಖದಲ್ಲಿ ಯಾವ ಅಲಂಕಾರಿಕ ಕೆತ್ತನೆಗಳೂ ಇರುವುದಿಲ್ಲ. ಪಾರ್ಶ್ವಗೋಡೆಗಳನ್ನು ಗುಡಿಯ ಸುತ್ತ ಮುಂದುವರೆಸಿ, ಆಯತಾಕಾರದ  ಪ್ರಾಕಾರವನ್ನಾಗಿ ಪರಿವರ್ತಿಸಿರುತ್ತಾರೆ. ಈ ಪ್ರಾಕಾರದ ಒಳಮುಖಕ್ಕೆ ಕಂಬದ ಸಾಲಿನ ಕೈಸಾಲೆಯನ್ನು (ಮಾಲಿಕಾ) ನಿರ್ಮಿಸುತ್ತಾರೆ. ಈ ಕೈಸಾಲೆಯ ಒಳಮುಖ ಬಹುತೇಕ ಕಡೆಗಳಲ್ಲಿ ಮೂಲ ಗುಡಿಗೆ ಎಷ್ಟು ಸಮೀಪವಾಗಿರುತ್ತದೆ ಎಂದರೆ, ಇವೆರಡರ ಕಪೋತಗಳ ನಡುವೆ ಕೇವಲ ಅರ್ಧ ಅಡಿಯಿಂದ ಒಂದು ಅಡಿಯಷ್ಟು ಮಾತ್ರ ಅಂತರವಿರುತ್ತದೆ. ಹೀಗಾಗಿ ಈ ಕೈಸಾಲೆ ಒಳ ಪ್ರದಕ್ಷಿಣ ಪಥದ ರೀತಿಯಲ್ಲೂ ಇರುತ್ತದೆ ಮತ್ತು ಮಹಾಮಂಟಪ/ಗೂಢಮಂಟಪದ ಮುಂದುವರಿದ ಭಾಗವೂ ಆಗಿರುತ್ತದೆ. ಹಾಗು ಸುರಕ್ಷಿತವಾದ ಒಳ ಆವರಣವಾಗುತ್ತದೆ. ಮೂಲಗುಡಿಗೆ ಸುತ್ತಲೂ ಹೆಚ್ಚಿನ ಸ್ಥಳಾವಕಾಶವಿದ್ದರೆ, ಸುತ್ತಲಿನ ಆವರಣ ಗೋಡೆಯನ್ನು ಗುಡಿಯಿಂದ ದೂರ ನಿರ್ಮಿಸಿ, ಗುಡಿಯಸುತ್ತಲೂ ಒಂದು ವಿಶಾಲವಾದ ಅಂಗಳವನ್ನು ಉಳಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಭದ್ರತೆಗಾಗಿ ಮಹಾಮಂಟಪದ, ಗುಡಿಯ ಮುಖದ ಕಡೆಯ ಪಾರ್ಶ್ವದಲ್ಲಿ ಗೋಡೆಯನ್ನು ನಿರ್ಮಿಸಿ, ಪ್ರವೇಶದ್ವಾರವನ್ನು ಕಲ್ಪಿಸಿರುತ್ತಾರೆ. ಮೂಲಗುಡಿಯನ್ನು ಸಂಪೂರ್ಣವಾಗಿ ಕೂಡಿಕೊಂಡಂತೆ ಇರುವ ಮುಚ್ಚಿದ ಆವರಣ ಕೈಸಾಲೆಯನ್ನು ತೊಣ್ಣೂರಿನಲ್ಲೇ, ತಮಿಳು ಶಿಲ್ಪಿ ನಿರ್ಮಿತ ಯೋಗಾನರಸಿಂಹ ದೇವಾಲಯದ ಸುತ್ತಲೂ, ತೆರೆದ ಅಂಗಳವಿರುವ ಉದಾಹರಣೆಯನ್ನು ಅಲ್ಲಿಯೇ ಇರುವ ಶ್ರೀಕೃಷ್ಣನ ದೇವಾಲಯದಲ್ಲೂ ಕಾಣಬಹುದಾಗಿದೆ. ನಂಬಿನಾರಾಯಣ ಗುಡಿಗೆ ಸುತ್ತಲೂ ಸ್ಥಳಾವಕಾಶವಿದ್ದುದರಿಂದ ತೆರೆದ ಅಂಗಳದ ರೀತಿಯ ಆವರಣ ಕೈಸಾಲೆಯನ್ನು ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಮಹಾಮಂಡಪವನ್ನು (ವೀರವಲ್ಲಾಳನ್ ಮಂಡಪ) ನಿರ್ಮಿಸಿದ್ದಾರೆ.


[1] ಅಂತಹ ನಿರ್ಣಾಯಕ ಲಕ್ಷಣಗಳನ್ನು ಈ ವಿವರಣೆಯಲ್ಲಿ ಪ್ರಕಾರ, ಪರಂಪರೆ, ಶೈಲಿ, ರೀತಿ, ಸಂಪ್ರದಾಯ ಇತ್ಯಾದಿಯಾಗಿ ವಿವಿಧ ರೀತಿಯಲ್ಲಿ ಸಂಬೋಧಿಸಲಾಗಿದೆ. ರಾಜ್ಯ, ಭಾಷೆ, ರಾಜವಂಶ ಆಧಾರಿತ ಪೂರ್ವನಾಮಗಳನ್ನು ಸಹ ಸೇರಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಸಂಪ್ರದಾಯ, ತಮಿಳು ಸಂಪ್ರದಾಯ, ಹೊಯ್ಸಳ ಶೈಲಿ, ಹೊಯ್ಸಳ-ದ್ರಾವಿಡ ಶೈಲಿ, ಚೋಳ-ದ್ರಾವಿಡ ಶೈಲಿ, ಚೋಳ ಶೈಲಿ, ತಮಿಳು ಶೈಲಿ ಇತ್ಯಾದಿ. ಈ ಹೆಸರುಗಳ ಬಳಕೆ ಕೇವಲ ವಿವರಣಾನುಕೂಲಕ್ಕಾಗಿಯೆ ಹೊರತು ಇವುಗಳ ಬಳಕೆಯ ಬಗೆಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ತೊಣ್ಣೂರಿನ ದೇವಾಲಯಗಳನ್ನು, ಅವುಗಳ ಲಕ್ಷಣಗಳನ್ನೂ ಹಾಗೂ ಕಾಲವನ್ನೂ ತಿಳಿಯಬೇಕಾಗಿರುವುದರಿಂದ ಈ ಕಾಲಕ್ಕೆ, ಪ್ರಾಂತ್ಯಕ್ಕೆ ಅನ್ವಯಿಸುವಂತಹ ನಿರ್ಣಾಯಕ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ.