ವೀರವಲ್ಲಾಳನ್ ಮಂಟಪದ ನಿರ್ಮಾಣ ತೀರಾ ಸಾಧಾರಣ. ಇದರ ಅಧಿಷ್ಠಾನ ಚೋಳ- ದ್ರಾವಿಡ ರೀತಿಯದು. ಅಧಿಷ್ಠಾನದಲ್ಲೂ ಉಪಾನ, ಜಗತಿ, ತ್ರಿಪಟ್ಟಕುಮುದ, ಗಳ ಮತ್ತು ಮಹಾಪಟ್ಟಿ ಮಾತ್ರ ಇವೆ. ಇದೇ ರೀತಿಯ ಅಧಿಷ್ಠಾನ ಸುತ್ತಲಿನ ಆವೃತ ಕೈಸಾಲೆಗೂ ಇದೆ. ಮೂಲಗುಡಿಯ ಅಧಿಷ್ಠಾನ ಮತ್ತು ಆವೃತ ಕೈಸಾಲೆಯ ಅಧಿಷ್ಠಾನ ಎದುರು ಬದುರಾಗಿದ್ದು, ಇವೆರಡರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ (ನೋಡಿ: ಚಿತ್ರ‑೧೨, ೮).

ಮಹಾಮಂಟಪದ ಕಂಬಗಳೂ ಸಹ ತೀರಾ ಸಾಧಾರಣ (ನೋಡಿ: ಚಿತ್ರ‑೧೩). ಯಾವುದಕ್ಕೂ ಪೀಠವಿಲ್ಲ. ಬುಡದಲ್ಲಿ ಚೌಕಟ್ಟು ಮತ್ತು ಸ್ವಲ್ಪ ಅಷ್ಟಮುಖದ ದಿಂಡು, ನಂತರ ಸಂಪೂರ್ಣ ಉರುಳೆದಿಂಡು, ಮೇಲೆ ಅತೀ ಸಾಮಾನ್ಯ ಆಧಾರಪೋತಿಕಾ ಇವಿಷ್ಟೂ ಇವೆ. ಛಾವಣಿ ಸಹ ಅತೀ ಸರಳ, ಸಾಮಾನ್ಯ. ಆವರಣ ಕೈಸಾಲೆಯ ಕಂಬಗಳೂ ಸಹ ಅತೀ ಸಾಮಾನ್ಯವಾದದ್ದು. ಪೀಠರಹಿತ ಕಂಬ, ದಿಂಡುಗಳು ಬುಡದಲ್ಲಿ ಚೌಕವಾಗಿವೆ, ಮತ್ತು ಮೇಲೆ ಸಂಪೂರ್ಣ ಅಷ್ಟಮುಖದ್ದಾಗಿವೆ. ಮೇಲ್ತುದಿಯಲ್ಲಿ ಕೇವಲ ಆಧಾರಪೋತಿಕೆಗಳಿವೆ. ಉತ್ತರಮುಖದ ಆವರಣ ಕೈಸಾಲೆಯ ಕಂಬಗಳಿಗೆ, ಅಷ್ಟಮುಖದ ದಿಂಡಿನ ಬದಲಾಗಿ ಉರುಳೆದಿಂಡುಗಳನ್ನು ಕಡೆಯಲಾಗಿದೆ. ಮಹಾಮಂಟಪದಿಂದ ಅಂಗಳಕ್ಕೆ ಇಳಿಯಲು ದ್ವಾರಬಂಧ, ಸೋಪಾನ, ಹಸ್ತಿ-ಹಸ್ತಗಳು ಇವೆ. ಉಳಿದಂತೆ ಮಹಾಮಂಟಪದ ಈ ಮುಖ ಗೋಡೆಯಿಂದ ಮುಚ್ಚಿವೆ. ಮೂಲ ಗುಡಿಯ ಸುತ್ತಲಿನ ಅಂಗಳಕ್ಕೆ ಸುತ್ತಲೂ ಚಪ್ಪಡಿ ಹಾಸಿದೆ (ನೋಡಿ: ಚಿತ್ರ‑೮).

ಮಹಾಮಂಟಪಕ್ಕೆ ಪೂರ್ವದಿಕ್ಕಿನಲ್ಲಿ, ಗುಡಿಯ ಅಕ್ಷರೇಖೆಗೆ ಸಮನಾಗಿ ಒಂದು ಮುಖಮಂಡಪವೂ ನಿರ್ಮಿತವಾಗಿದೆ. ಇದರ ನಿರ್ಮಾಣವೂ ಸಹ ಮಹಾಮಂಡಪದ ಕಾಲದ್ದೇ ಆಗಿದೆ. ಎತ್ತರವಾದ ಸುಭದ್ರ ಉಪಪೀಠ ರೀತಿಯ ಅಧಿಷ್ಠಾನದ ಮೇಲೆ ಒಂದಂಕಣದ ಮುಖಮಂಟಪವಿದೆ. ಇದಕ್ಕೆ ಮೂರು ಕಡೆಗಳಿಂದ ತ್ರಿಖಂಡ ಸೋಪಾನಗಳೂ, ಹಸ್ತಿ-ಹಸ್ತಗಳೂ ಇವೆ. ಮುಖಮಂಟಪದ ನಾಲ್ಕು ಕಂಬಗಳು ಸ್ವಲ್ಪ ಉತ್ತಮ ರೀತಿಯ ಕೆತ್ತನೆಯನ್ನು ಹೊಂದಿವೆ(ನೋಡಿ: ಚಿತ್ರ‑೯). ಚೌಕಪೀಠ, ಚೌಕ ಮತ್ತು ಅಷ್ಟಮುಖದ ಬುಡ, ಉರುಳೆದಿಂಡು, ಚಕ್ರಾಕಾರದ ಕಿರಿದಾದ ಅಂಚುಗಳ ಕುಂಭ, ಮಂಡಿ, ಫಲಕ, ಆಧಾರ ಪೋತಿಕೆ ಇವಿಷ್ಟೂ ಈ ಕಂಬಗಳಿಗೆ ಇವೆ. ಇಂತಹ ಕಂಬಗಳನ್ನು ಸಾಮಾನ್ಯವಾಗಿ ಮುಡಿಗೊಂಡ ಚೋಳಪುರ ಮುಂತಾದ ಕಡೆಗಳಲ್ಲಿನ ಚೋಳ ನಿರ್ಮಿತ ದೇವಾಲಯಗಳಲ್ಲಿ ಕಾಣಬಹುದು. ಸಂಪೂರ್ಣವಾಗಿ ಚೋಳ-ದ್ರಾವಿಡ ವಾಸ್ತು ಮತ್ತು ಅಲಂಕಾರಿಕ  ಲಕ್ಷಣಗಳಿಂದ ಕೂಡಿರುವ ಹಾಗೂ ಹೊಯ್ಸಳ-ದ್ರಾವಿಡ ಶೈಲಿಯ ಲಕ್ಷಣಗಳಿಂದ ಹೊರತಾಗಿರುವ ಈ ವೀರವಲ್ಲಾಳನ್ ಮಹಾಮಂಟಪ ಮತ್ತು ಅದಕ್ಕೆ ಸೇರಿಕೊಂಡು ನಿರ್ಮಿತವಾದ ಪ್ರಾಕಾರಗೋಡೆ, ಆವೃತಮಂಡಪ, ಮುಖಮಂಟಪ ಎಲ್ಲವೂ ಒಂದೇ ಕಾಲದ್ದು ಮತ್ತು ಚೋಳ-ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿತವಾದದ್ದು. ಶೈಲಿ ತಮಿಳು ಅಥವಾ ಚೋಳ-ದ್ರಾವಿಡವಾಗಿರುವುದರಿಂದ ದೇವಾಲಯದ ಈ ಭಾಗ, ಮಹಾಮಂಟಪದ ಭಿತ್ತಿಯ ಹೊರಮುಖದಲ್ಲಿರುವ ಕ್ರಿ.ಶ. ೧೧೭೪ರ ಒಂದು ತಮಿಳು ಶಾಸನದ ಪ್ರಕಾರ ಕ್ರಿ.ಶ. ೧೧೭೪ಕ್ಕೆ ಸ್ವಲ್ಪ ಮುಂಚಿನದಾಗಿರಬಹುದು ಅಷ್ಟೆ.

‘ವೀರವಲ್ಲಾಳನ್ ಮಂಟಪ’ ನಿರ್ಮಾಣವಾದ ಕಾಲದಲ್ಲೇ ನಂಬಿನಾರಾಯಣನ ಮೂಲಗುಡಿಯ ಗರ್ಭಗೃಹದ ಮೇಲಿನ ಪ್ರಾಸಾದ ನಿರ್ಮಾಣವಾಗಿರಬೇಕು. ಈಗಿರುವ ವಿಮಾನ ಪ್ರಾಸಾದವಂತೂ ಹೊಯ್ಸಳ ನಿರ್ಮಿತಿಯಲ್ಲ. ಏಕೆಂದರೆ ಇದು ಇಟ್ಟಿಗೆ ಗಾರೆಯದು (ನೋಡಿ: ಚಿತ್ರ‑೧೧). ಹೊಯ್ಸಳ ಸಂಪ್ರದಾಯದಲ್ಲಿ ದ್ರಾವಿಡ ಶೈಲಿಯ ಇಟ್ಟಿಗೆ ಗಾರೆಯ ವಿಮಾನವನ್ನು ನಿರ್ಮಿಸಿರುವ ನಿದರ್ಶನವಿಲ್ಲ. ಆದರೆ ಚೋಳ ಶಿಲ್ಪಿಗಳು ಮಾತ್ರ ಇಟ್ಟಿಗೆ ಗಾರೆಯಲ್ಲಿ ಅನೇಕ ದೇವಾಲಯಗಳಿಗೆ ದ್ರಾವಿಡ ವಿಮಾನಗಳನ್ನೂ ನಿರ್ಮಿಸಿದ್ದಾರೆ. ನಂಬಿನಾರಾಯಣ ಗುಡಿಗೆ ಇಟ್ಟಿಗೆ ಗಾರೆಯ ವಿಮಾನ ಪ್ರಾಸಾದವಿರುವುದರಿಂದ ಅದು ತಮಿಳು ಶಿಲ್ಪಿಗಳ ನಿರ್ಮಾಣವೆಂದು ಹೇಳಬಹುದು. ಈ ಊಹೆಗೆ ಮತ್ತೊಂದು ಆಧಾರವೆಂದರೆ ಈ ವಿಮಾನ ಪ್ರಾಸಾದಕ್ಕೆ ಮುಂಭಾಗದಲ್ಲಿ ಶುಕನಾಸ ಇಲ್ಲ. ಶುಕನಾಸವಿಲ್ಲದೆ ವಿಮಾನ ಪ್ರಾಸಾದ ಕಟ್ಟುವುದು ತಮಿಳು ಸಂಪ್ರದಾಯ. ಕರ್ನಾಟಕ ಸಂಪ್ರದಾಯದಲ್ಲಿ, ಅದರಲ್ಲೂ ಹೊಯ್ಸಳ ಸಂಪ್ರದಾಯದಲ್ಲಿ ಇದುವರೆಗೆ ನಿರ್ಮಾಣವಾಗಿರುವ (ಅಂದರೆ ಉಳಿದು ಬಂದಿರುವ) ಎಲ್ಲಾ ವಿಮಾನ ಪ್ರಾಸಾದಗಳಿಗೆ ಮುಂಭಾಗದಲ್ಲಿ ಶುಕನಾಸವಿದೆ. ತಲಕಾಡಿನ ಕೀರ್ತಿನಾರಾಯಣ ಗುಡಿಯ ವಿಮಾನ ಪ್ರಾಸಾದ ಇಟ್ಟಿಗೆ ಗಾರೆಯದು. ಅದರಲ್ಲೂ ಶುಕನಾಸ ಇಲ್ಲ. ಅಂದರೆ, ಅದೂ ಸಹ ಹೊಯ್ಸಳ-ದ್ರಾವಿಡ ಶೈಲಿಯಲ್ಲಿ ಹೊಯ್ಸಳ ಶಿಲ್ಪಿಗಳು ದೇವಾಲಯ ನಿರ್ಮಿಸಿದ ನಂತರ, ಇಟ್ಟಿಗೆ ಗಾರೆಯ ವಿಮಾನ ಪ್ರಾಸಾದ ನಿರ್ಮಾಣವಾಗಿರಬೇಕು. ವಿಮಾನ ಪ್ರಾಸಾದವಿಲ್ಲದೆ ನಿರ್ಮಾಣವಾಗಿದ್ದ, ನಂಬಿನಾರಾಯಣ ಗುಡಿಗೆ, ಚೋಳ-ದ್ರಾವಿಡ ರೀತಿಯಲ್ಲಿ, ಇಟ್ಟಿಗೆ ಗಾರೆಯಲ್ಲಿ, ಶುಕನಾಸರಹಿತ ವಿಮಾನಪ್ರಾಸಾದ, ತಮಿಳು ಶಿಲ್ಪಿಗಳಿಂದ ನಿರ್ಮಾಣವಾಯಿತೆಂದು ಹೇಳಬಹುದು. ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲವೇ ತೊಣ್ಣೂರಿನ ಇತಿಹಾಸದಲ್ಲಿ ಶ್ರೀ ವೈಷ್ಣವ ಧರ್ಮದ ಅತ್ಯಂತ ಪ್ರಬುದ್ಧಕಾಲ. ತದನಂತರ ಇಷ್ಟು ಸುಭಿಕ್ಷೆ ತೊಣ್ಣೂರಿನಲ್ಲಿರಲಿಲ್ಲ. ಆದ್ದರಿಂದ ‘ವೀರವಲ್ಲಾಳನ್ ಮಂಟಪ’ದ ಕಾಲದಲ್ಲೇ ಈ ದೇವಾಲಯದ ವಿಮಾನ ಪ್ರಾಸಾದ ನಿರ್ಮಾಣವಾಗಿರಬೇಕು ಮತ್ತು ತದನಂತರ ಅದು ಕಾಲಕಾಲಕ್ಕೆ ದುರಸ್ತಿಯೂ ಆಗಿರಬೇಕು. ವಿಮಾನದ ಈಗಿನ ರೂಪ ಇತ್ತೀಚಿನದು.

ನಂಬಿನಾರಾಯಣ ದೇವಾಲಯದ ಆವರಣದಲ್ಲಿರುವ ಮತ್ತೊಂದು ಮಹತ್ವವಾದ ವಾಸ್ತು ಕೃತಿಯೆಂದರೆ ಗುಡಿಯ ಎರಡನೆಯ ಆವರಣದಲ್ಲಿ, ಬಲಭಾಗದಲ್ಲಿ, ಸ್ವಲ್ಪ ಹಿಂದಕ್ಕೆ, ನಿರ್ಮಿತವಾಗಿರುವ ಶ್ರೀಲಕ್ಷ್ಮಿದೇವಿಯ ದೇವಾಲಯ. ವಾಸ್ತು ಸಂಪ್ರದಾಯದ ಪ್ರಕಾರ ಅಮ್ಮನವರ ಗುಡಿಯನ್ನು ಒಂದನೆಯ, ಎರಡನೆಯ ಹಾಗೂ ಮೂರನೆಯ ಆವರಣದಲ್ಲಿ ನಿರ್ಮಿಸಬಹುದಾಗಿದೆ. ಹೀಗಾಗಿ ಶ್ರೀಲಕ್ಷ್ಮಿದೇವಿಯ ಗುಡಿ ಮೂಲದೇವಾಲಯದ ಎರಡನೆಯ ಆವರಣದಲ್ಲಿ ಇಲ್ಲಿ ನಿರ್ಮಿತವಾಗಿದೆ. ಶ್ರೀಲಕ್ಷ್ಮಿದೇವಿಯ ಗುಡಿಯ ವಾಸ್ತು ಲಕ್ಷಣಗಳಿಗೆ ಬರುವುದಾದರೆ, ಈ ದೇವಾಲಯ ಸಂಪೂರ್ಣ ಚೋಳ-ದ್ರಾವಿಡ ಸಂಪ್ರದಾಯದಲ್ಲಿ ನಿರ್ಮಿತವಾದ ಕಟ್ಟಡ. ಇದರ ವಾಸ್ತು ಲಕ್ಷಣದಲ್ಲಿ ಅಲಂಕರಣೆಯಲ್ಲಿ ಹೊಯ್ಸಳ ವಾಸ್ತುಶಿಲ್ಪ ಸಂಪ್ರದಾಯದ ಯಾವುದೇ ಕುರುಹುಗಳಿಲ್ಲ.

ಶ್ರೀಲಕ್ಷ್ಮಿದೇವಿಯ ಗುಡಿಯನ್ನು ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಿಸಿದ್ದಾರೆ (ನೋಡಿ: ಚಿತ್ರ‑೧೦). ಅಧಿಷ್ಠಾನಕ್ಕೆ ಪ್ರಾಯಶಃ ಉಪಪೀಠವಿದ್ದಿರಬೇಕು. ಈಗ ಅದು ಸಂಪೂರ್ಣ ಮುಚ್ಚಿಕೊಂಡಿದೆ. ಪಾದಬಂಧ ರೀತಿಯ ಅಧಿಷ್ಠಾನದಲ್ಲಿ ಉಪಾನ, ಜಗತಿ, ತ್ರಿಪಟ್ಟಕುಮುದ, ಗಳ ಮತ್ತು ಮಹಾಪಟ್ಟಿ ಇದೆ. ಅಧಿಷ್ಠಾನದ ದಿಂಡುಗಳ ನಿರೂಪಣೆಯಲ್ಲಿ ಸಂಪೂರ್ಣ ಚೋಳ-ದ್ರಾವಿಡ ಶೈಲಿಯ ಸಂಪ್ರದಾಯ ಸ್ಪಷ್ಟವಿದೆ. ಭಿತ್ತಿಯ ಅಲಂಕರಣೆಯಲ್ಲಿ ಭಿತ್ತಿಪಾದಗಳು, ಕೋಷ್ಟಗಳು ಕಾಣಬರುತ್ತವೆ. ಭಿತ್ತಿಪಾದಗಳ  ಮೇಲ್ದಿಂಡಿನ ಭಾಗದಲ್ಲಿ, ದಾನಿ/ಹೂಜಿ ಆಕಾರದ ಕೆತ್ತನೆ ಸ್ಪಷ್ಟವಾಗಿದೆ. ಹೊಯ್ಸಳ ರೀತಿಯ ಘಂಟಾಕಾರದ ಅಲಂಕರಣೆ ನಂಬಿನಾರಾಯಣನ ಗುಡಿಯಲ್ಲಿದ್ದರೂ ಇಲ್ಲಿ ಅದು ಅದೃಶ್ಯ. ಅದೇ ರೀತಿ ಭಿತ್ತಿಕೋಷ್ಟದ ಅಲಂಕರಣೆ ಸಹ ಚೋಳ-ದ್ರಾವಿಡ ರೀತಿಯದು. ಮುಂದಿನ ಎರಡು ಸ್ತಂಭಿಕೆಗಳು ಸೀಳುಸ್ತಂಭಿಕೆಗಳು. ಮೂಲಗುಡಿಯ ಹೊಯ್ಸಳರ ಪೂರ್ಣ ಸ್ತಂಭಿಕೆಗಳಂತಿಲ್ಲ. ಮೇಲೆ ಕೇವಲ ಸಾಧಾರಣ ಮಕರ ತೋರಣವಿದೆ. ಕಪೋತದ ನಿರ್ಮಾಣ ಒರಟಾಗಿರುವುದರಿಂದ ಅದು ವಿಮರ್ಶೆಗೆ ಯೋಗ್ಯವಾಗಿಲ್ಲ. ಕಪೋತದ ಮೇಲೆ ವಾಜನವಿದ್ದು, ಅದರ ಮುಖದಲ್ಲಿ ಚೋಳ-ದ್ರಾವಿಡ ಶೈಲಿಯ ವ್ಯಾಳಮಾಲೆಯಿದೆ.

ಈ ದೇವಾಲಯದ ತಳವಿನ್ಯಾಸ ಬಹಳ ಸರಳ ಸಾಧಾರಣ. ಚಿಕ್ಕದಾದ, ಚೌಕಟ್ಟಾದ ಗರ್ಭಗೃಹ ಮತ್ತು ಅದರ ಮುಂದೆ ಸಣ್ಣ ಶುಕನಾಸ, ಅರ್ಧಮಂಟಪ, ಗೂಢಮಂಟಪವಿದೆ. ಈ ವಿನ್ಯಾಸ ಚೋಳ ವಾಸ್ತುಶೈಲಿಯಲ್ಲಿ ಸಾಮಾನ್ಯವಾಗಿ ಕಾಣಬರುವ ಲಕ್ಷಣ. ಅದರಂತೆಯೇ ಗುಡಿಯನ್ನು ನಿರ್ಮಿಸಿದ್ದಾರೆ. ಗುಡಿಯ ಮೇಲೆ ಏಕತಲದ, ಇತ್ತೀಚಿನಲ್ಲಿ ದುರಸ್ತಿಗೊಂಡ ಶ್ರೀಕರ ವಿಮಾನವಿದೆ. ಗುಡಿಗೆ ಉತ್ತರದಲ್ಲಿ ಸುಂದರವಾದ ಮಕರ ಪ್ರನಾಳವಿದೆ.

ಶ್ರೀಲಕ್ಷ್ಮಿದೇವಿಯ ಗುಡಿಗೆ ಮುಂಭಾಗದಲ್ಲಿ ವಿಶಾಲವಾದ ತೆರೆದ ಮಂಟಪವಿದೆ. ಅಲ್ಲಿಯ ಕಂಬವೊಂದರ ಮೇಲಿನ ಶಾಸನದಿಂದ, ಹೊಯ್ಸಳ ವಿಷ್ಣುವರ್ಧನನ ಪ್ರಧಾನಿ ಸುರಿಗೆಯ ನಾಗಯ್ಯನು ತನ್ನ ಸ್ವಾಮಿಯ ಇಚ್ಛೆಯ ಮೇರೆಗೆ ಈ ಓಲಗಶಾಲೆಯನ್ನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಶಾಸನದಲ್ಲಿ ಕಾಲವನ್ನು ಹೇಳಿಲ್ಲ. ವಿಷ್ಣುವರ್ಧನನ ಕಾಲದ ಶಾಸನವೆಂದು ಹೇಳಬಹುದು.

ಈ ಓಲಗಶಾಲೆಯನ್ನು ಎತ್ತರವಾದ ಸುಭದ್ರ ಉಪಪೀಠದ ಮೇಲೆ ನಿರ್ಮಿಸಿದ್ದಾರೆ. ಇದೇ ಉಪಪೀಠವನ್ನು ಶ್ರೀಲಕ್ಷ್ಮಿ ಗುಡಿಯ ಸುತ್ತಲೂ ವಿಸ್ತರಿಸಿರುವುದರಿಂದ, ಶ್ರೀಲಕ್ಷ್ಮಿ ಗುಡಿಗೆ ಮೂಲತಃ ಇದ್ದ ಉಪಪೀಠ ಈಗ ಮರೆಯಾಗಿದೆ ಹಾಗೂ ಗುಡಿಗೆ ಸುತ್ತಲೂ ಎತ್ತರವಾದ ಜಗತಿ ಏರ್ಪಟ್ಟಿದೆ. ಉಪಪೀಠದಲ್ಲಿನ ಪ್ರಧಾನ ಅಂಗಗಳು ಉಪಾನ, ಜಗತಿ, ಎತ್ತರವಾದ ಗಳ ಮತ್ತು ಮಹಾಪಟ್ಟಿ. ಇದರಲ್ಲಿ ಯಾವುದೇ ಕೆತ್ತನೆಯ ವೈಶಿಷ್ಟ್ಯವಿಲ್ಲ. ಕೆತ್ತನೆ ಸಾಧಾರಣ. ಮಂಡಪದ ಕಂಬಗಳೂ ಸಹ ಸಾಧಾರಣವಾದದ್ದು, ಯಾವುದಕ್ಕೂ ಪೀಠವಿಲ್ಲ. ಚೌಕಟ್ಟಾದ ಮತ್ತು ಮೇಲೆ ಸಂಪೂರ್ಣ ಅಷ್ಟಮುಖಿ ದಿಂಡುಗಳ ಮೇಲೆ ಆಧಾರ ಪೋತಿಕೆಗಳು ಇವೆ. ಈ ಆಧಾರ ಪೋತಿಕೆಗಳು ಹೊಯ್ಸಳ ಶೈಲಿಗೆ ವಿಶಿಷ್ಟವಾದ, ಚೋಳ ಶೈಲಿಯಲ್ಲಿ ಕಾಣಬರದ ಲಕ್ಷಣವನ್ನು ಹೊಂದಿವೆ. ಅದೇ ಪೋತಿಕೆಗಳ ಮುಷ್ಟಿಬಂಧ ಅಲಂಕರಣ. ಆಧಾರಪೋತಿಕೆಗಳ ಎರಡೂ ಚಾಚುತುದಿಗಳ ಮೇಲ್ಭಾಗವನ್ನು ಅಡ್ಡಡ್ಡಲಾಗಿ ಸುರುಳಿಯ ರೂಪದಲ್ಲಿ ಕಂಡರಿಸಿರುತ್ತಾರೆ. ನೋಡುವುದಕ್ಕೆ ಮುಂಬಾಗಿದ ಮುಷ್ಟಿಯ ರೂಪದಲ್ಲಿ ಇದು ಕಾಣುತ್ತದೆ. ಹೊಯ್ಸಳ ಶೈಲಿಯ ಎಲ್ಲಾ ದೇವಾಲಯಗಳಲ್ಲಿ ಇದು ಸಾಮಾನ್ಯವಾಗಿ ಕಾಣವ ಬೋದಿಗೆಯ ಅಲಂಕರಣ. ಆದರೆ ಚೋಳ ಶೈಲಿ ನಿರ್ಮಿತ ಯಾವುದೇ ದೇವಾಲಯದಲ್ಲಿ ಇದು ಕಾಣಬರುವುದಿಲ್ಲ. ಈ ಒಂದು ಅಲಂಕಾರ ಪೋತಿಕೆಯಿಂದ ತಿಳಿದು ಬರುವ ಅಂಶವೆಂದರೆ, ಮೂಲ ಶ್ರೀಲಕ್ಷ್ಮಿ ದೇವಾಲಯ ಚೋಳ-ದ್ರಾವಿಡ ಶೈಲಿಯಲ್ಲಿ ತಮಿಳು ಶಿಲ್ಪಿಗಳಿಂದ ನಿರ್ಮಿತವಾದ ದೇವಾಲಯವಾಗಿತ್ತು. ಆ ದೇವಾಲಯಕ್ಕೆ ಹೊಯ್ಸಳ ವಿಷ್ಣವರ್ಧನನು, ತನ್ನ ಪ್ರಧಾನಿಯ ಮೂಲಕ ಹೊಯ್ಸಳ ಶಿಲ್ಪಿಗಳ ಕೈಯಿಂದ ಓಲಗಶಾಲೆಯನ್ನು ನಿರ್ಮಿಸಿದನು. ಇದರಿಂದಾಗಿ ಈ ಮಂಟಪದ ಅಲಂಕರಣೆಯಲ್ಲಿ ಹೊಯ್ಸಳ ಲಕ್ಷಣವಿದೆ. ಶ್ರೀಲಕ್ಷ್ಮಿ ಗುಡಿಯ ನಿರ್ಮಾಣದಲ್ಲಿ ಚೋಳ-ದ್ರಾವಿಡ ವಾಸ್ತು ಲಕ್ಷಣವಿದೆ.

ನಂಬಿನಾರಾಯಣ ದೇವಾಲಯದ ಇತರ ವಾಸ್ತು ಭಾಗಗಳು ಅಂದರೆ ಹೊರಪ್ರಾಕಾರದ ಒಳಗಿರುವ ಪಾತಾಳಾಂಕಣ, ಯಾಗಶಾಲೆ, ದ್ವಾರಮಂಟಪ, ಹೊರಪ್ರಾಕಾರದ ಗೋಡೆ ಮತ್ತು ಹೊರಪ್ರಾಕಾರದ ಮುಖಮಂಟಪ. ವಾಸ್ತು ಪ್ರಕಾರದಿಂದಾಗಲಿ, ವಾಸ್ತು ಮತ್ತು ಶಿಲ್ಪ ಲಕ್ಷಣಗಳಿಂದಾಗಲಿ ಅಥವಾ ಕಾಲ ನಿಷ್ಕರ್ಷೆ ದೃಷ್ಟಿಯಿಂದಾಗಲಿ ಈ ಭಾಗಗಳು ಮಹತ್ವವಾದುದಲ್ಲ. ಅವುಗಳ ವಿವರಣೆ ಈಗಾಗಲೇ ಹೇಳಿರುವುದರಿಂದ ನಂಬಿನಾರಾಯಣ ಗುಡಿಯ ಸ್ಥಾಪನಾಕಾಲ, ಬೆಳವಣಿಗೆ ಇವೆರಡರ ಬಗ್ಗೆ ಗಮನ ಹರಿಸೋಣ.

ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಯಕಾಲ ಕ್ರಿ.ಶ. ೧೧೧೪ರಿಂದ ೧೧೪೨ರವರೆಗೆ. ಈ ಕಾಲದಲ್ಲಿ ಯಾವಾಗ ಈ ಓಲಗಶಾಲೆಯ ನಿರ್ಮಾಣವಾಯಿತೆಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಚೋಳರನ್ನು ಗೆದ್ದು, ಆ ವಿಜಯದ ಸಂಕೇತವಾಗಿ ನಂಬಿನಾರಾಯಣನನ್ನು ಪ್ರತಿಷ್ಠಾಪಿಸಿದನೆಂದು (ಕ್ರಿ.ಶ. ೧೧೧೭) ಆಗಲೇ ಹೇಳಿದ್ದೇವೆ. ನಂಬಿನಾರಾಯಣ ದೇವಾಲಯ ಪೂರ್ಣಗೊಂಡನಂತರ, ಆ ದೇವಾಲಯದ ಪಕ್ಕದಲ್ಲಿ ಶ್ರೀಲಕ್ಷ್ಮಿ ಅಮ್ಮನವರ ಗುಡಿ ನಿರ್ಮಾಣವಾಗಿರಬೇಕೆಂದು ಸಹ ಆಗಲೇ ಹೇಳಿದೆ.

ಶ್ರೀಲಕ್ಷ್ಮಿ ದೇವಾಲಯಕ್ಕೆ ಪ್ರಧಾನಿ ಸುರಿಗೆಯ ನಾಗಯ್ಯನು ವಿಷ್ಣುವರ್ಧನನ ಅಣತಿಯ ಮೇರೆಗೆ ಓಲಗಶಾಲೆಯನ್ನು ನಿರ್ಮಿಸಿದ. ಶಾಸನದಲ್ಲಿ ಕಾಲವನ್ನು ತಿಳಿಸಿಲ್ಲ. ಆದರೂ ಸಹ ಪರೋಕ್ಷ  ಆಧಾರಗಳಿಂದ ಈ ಶಾಸನದ ಕಾಲವನ್ನು ತಿಳಿಯಲು ಸಾಧ್ಯವಿದೆ. ಈ ಶಾಸನ ಬರೆಸಿದ ಸುರಿಗೆಯ  ನಾಗಯ್ಯನು ವಿಷ್ಣುವರ್ಧನನ ಪ್ರಧಾನಿಯಾಗಿದ್ದ. ಈತನ ಮತ್ತೊಂದು ಶಾಸನ ತೊಣ್ಣೂರಿನಲ್ಲೇ ದೊರೆತಿದೆ. ಆ ಶಾಸನದಲ್ಲಿ ಈತನು ಕ್ರಿ.ಶ. ೧೧೭೫ರಲ್ಲಿ ವಿಷ್ಣುವರ್ಧನನ ಮೊಮ್ಮಗ ಇಮ್ಮಡಿ ಬಲ್ಲಾಳನ ಪ್ರಧಾನಿಯಾಗಿದ್ದನೆಂದು ಹೇಳಿದೆ. ಈ ಇಮ್ಮಡಿ ಬಲ್ಲಾಳನ ಕಾಲ ಕ್ರಿ.ಶ. ೧೧೭೫-೧೨೨೦, ಸುರಿಗೆಯ ನಾಗಯ್ಯನು, ತಾತ ಮತ್ತು ಮೊಮ್ಮಗ ಇಬ್ಬರ ಕೈಕೆಳಗೂ  ಪ್ರಧಾನಿಯಾಗಿದ್ದನೆಂದು ತಿಳಿದು ಬರುವುದರಿಂದ, ಈತನು ವಿಷ್ಣುವರ್ಧನನ ಕೊನೆಯ ಕಾಲದಿಂದ ಅಂದರೆ ಕ್ರಿ.ಶ.ಸು. ೧೧೪೦ರಿಂದ ಇಮ್ಮಡಿ ಬಲ್ಲಾಳನ ಆಳ್ವಿಕೆಯ ಪ್ರಾರಂಭ ಕಾಲದವರೆಗೂ ಅಂದರೆ ಕ್ರಿ.ಶ. ೧೧೭೫ರವರೆಗೂ ಹೊಯ್ಸಳ  ರಾಜವಂಶದ ಪ್ರಧಾನಿ ಮಂತ್ರಿಯಾಗಿದ್ದನೆಂದು ತಿಳಿಯಬಹುದು. ವಿಷ್ಣುವರ್ಧನನ ಕಾಲದಲ್ಲಿ ಕಿರಿವಯಸ್ಸಿನವನಾಗಿದ್ದು, ಇಮ್ಮಡಿ ಬಲ್ಲಾಳನ ಕಾಲದಲ್ಲಿ ಅತ್ಯಂತ ಹಿರಿಯ ಪ್ರಧಾನಿ ಯಾಗಿದ್ದನೆಂದು ಊಹಿಸಬಹುದು. ಇದಕ್ಕೆ ಪುರಾವೆಯಾಗಿ ಕ್ರಿ.ಶ. ೧೧೭೫ರ ಶಾಸನದಲ್ಲಿ, ಈತನಿಗೆ ತೊಣ್ಣೂರಿನ ಮುಂಚಿನ ಶಾಸನದಲ್ಲಿ ಹೇಳಿರುವ ಬಿರುದುಗಳ ಜೊತೆಗೆ, ಸರ್ವಾಧಿಕಾರಿ ಎಂಬ ಹೊಸ ಬಿರುದು ಸಹ ಸೇರಿದೆ. ಇದರಿಂದಾಗಿ ಇತನು ಅತ್ಯಂತ ಹಿರಿಯ ವಯಸ್ಸಿನ ಪ್ರಧಾನಿಗಳಲ್ಲಿ ಒಬ್ಬನಾಗಿದ್ದನೆಂದೂ ಊಹಿಸಬಹುದು. ಈ ಅಂಶಗಳಿಂದಾಗಿ ತೊಣ್ಣೂರಿ ನಲ್ಲಿರುವ ಶ್ರೀಲಕ್ಷ್ಮಿ ಗುಡಿಯ ಓಲಗಶಾಲೆಯನ್ನು ಸುರಿಗೆಯ ನಾಗಯ್ಯನು ವಿಷ್ಣುವರ್ಧನನ ಆದೇಶದಂತೆ ಕ್ರಿ.ಶ.ಸು. ೧೧೪೦ರಲ್ಲಿ ನಿರ್ಮಿಸಿದನೆಂದೂ ಹೇಳಬಹುದು. ಆ ವೇಳೆಗಾಗಲೇ ರಾಮಾನುಜರು ತೊಣ್ಣೂರಿನಿಂದ ತಮಿಳುನಾಡಿಗೆ ಹಿಂದಿರುಗಿ ಸುಮಾರು ೫೦ ವರ್ಷಗಳು ಸಂದಿದ್ದವು. ರಾಮಾನುಜರ ಪ್ರಭಾವದಿಂದಾಗಿ, ತೊಣ್ಣೂರು ತಮಿಳರ ಬೀಡಾಗಿತ್ತು. ಶ್ರೀವೈಷ್ಣವ ಪಂಥದ ನಂಬಿಕೆಯ ಪ್ರಕಾರ ಅಲ್ಲಿ ಶ್ರೀಲಕ್ಷ್ಮಿ ಅಮ್ಮನವರ ಗುಡಿ ನಿರ್ಮಾಣವಾಯಿತು. ಅದರ ಮುಂದೆ ಓಲಗಶಾಲೆಯನ್ನು ವಿಷ್ಣುವರ್ಧನನು ಕ್ರಿ.ಶ. ಸು. ೧೧೪೦ರಲ್ಲಿ ಪ್ರಧಾನಿಯ ಮುಖಾಂತರ ನಿರ್ಮಿಸಿಕೊಟ್ಟನು ಎಂದು ಶಾಸನದ ಆಧಾರದ ಮೇಲೆ ಅರ್ಥೈಸಬಹುದು.

ಕಾಲ

ನಂಬಿನಾರಾಯಣನ ದೇವಾಲಯವನ್ನು ಕುರಿತು ಸ್ಥಳೀಯ ನಂಬಿಕೆಗಳು, ಶಾಸನಾಧಾರ ಗಳು, ವಾಸ್ತು ಲಕ್ಷಣಗಳು ಇತ್ಯಾದಿಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಿದಾಗ ಈ ದೇವಾಲಯ ನಿರ್ಮಾಣ ಕಾಲದ ಬಗ್ಗೆ ಸಾಕಷ್ಟು ಜಿಜ್ಞಾಸೆಗಳು ಉದ್ಭವವಾಗುವುದು ಸಹಜ. ನಂಬಿನಾರಾಯಣ ದೇವಾಲಯದ ಸ್ಥಾಪನಾ ಕಾಲದ ಬಗ್ಗೆ ಶಾಸನಗಳು ಹೆಚ್ಚಿನ ಬೆಳಕನ್ನು ಚೆಲ್ಲುವುದಿಲ್ಲ. ಬದಲಾಗಿ ವಾದ-ವಿವಾದಗಳಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಈ ದೇವಾಲಯದಲ್ಲಿ ದೊರೆಯುವ ಅತ್ಯಂತ ಪ್ರಾಚೀನ ಶಾಸನವೆಂದರೆ, ಕಾಲ ತಿಳಿಸದ ಹೊಯ್ಸಳ ವಿಷ್ಣುವರ್ಧನನ ಅಮಾತ್ಯನ ಶಾಸನ. ಇದು ದೇವಾಲಯದ ಹೊರಪ್ರಾಂಗಣದ ಶ್ರೀಲಕ್ಷ್ಮಿ ದೇವಾಲಯದ ಮುಂದಿನ ಮಂಟಪದ (ಓಲಗಶಾಲೆಯ) ಕಂಬವೊಂದರ ಮೇಲಿದೆ. ಈ ಶಾಸನದಿಂದ ವಿಷ್ಣುವರ್ಧನನ ಇಚ್ಛೆಯ ಮೇರೆಗೆ ಈ ಓಲಗಶಾಲೆ(ಮಂಟಪ)ಯನ್ನು ಪ್ರಧಾನಿ ಸುರಿಗೆಯ ನಾಗಯ್ಯನು ನಿರ್ಮಿಸಿದನೆಂದು ತಿಳಿದು ಬರುತ್ತದೆ. ಮೂಲ ನಂಬಿನಾರಾಯಣನ ದೇವಾಲಯಕ್ಕೆ ಸಂಬಂಧಿಸಿದ ಯಾವ ಶಾಸನವೂ ವಿಷ್ಣುವರ್ಧನನ ಕಾಲಕ್ಕೆ ಸೇರಿದುದಲ್ಲ. ಮೂಲ ದೇವಾಲಯಕ್ಕೆ ಸೇರುವ ಅತ್ಯಂತ ಪ್ರಾಚೀನ ಶಾಸನ ಕ್ರಿ.ಶ. ಜೂನ್ ೧೦, ೧೧೭೩ಕ್ಕೆ ಸೇರಿದ್ದು, ಇದು ದೇವಾಲಯದ ಅಧಿಷ್ಠಾನದ ಮೇಲಿದೆ. ದೇವಾಲಯಕ್ಕೆ ನೀಡಿದ ಕೆಲವು ದಾನದ ವಿವರಗಳನ್ನು ತಿಳಿಸುತ್ತದೆ. ಎರಡನೆಯ ಶಾಸನ ಕ್ರಿ.ಶ. ೧೧೭೪ರದ್ದು. ಹೊಯ್ಸಳ ಇಮ್ಮಡಿ ಬಲ್ಲಾಳನ ರಾಜ್ಯಭಾರವನ್ನು ಹೇಳುತ್ತದೆ ಮತ್ತು ಕೆಲವು ದಾನಗಳನ್ನು ಉಲ್ಲೇಖಿಸುತ್ತದೆ. ಮೂರನೆಯದು ಕ್ರಿ.ಶ. ೧೧೭೫ರ ಶಾಸನ, ಹೊಯ್ಸಳ ಬಲ್ಲಾಳನ ಕಾಲದ ಕೆಲವು ದಾನಗಳನ್ನು ಹೇಳುತ್ತದೆ. ನಾಲ್ಕನೆಯದು ಕ್ರಿ.ಶ. ೧೧೯೬ರ ಶಾಸನ ಯಾವ ದೊರೆಯನ್ನೂ ಹೆಸರಿಸದೆ ಕೆಲವು ಭೂಮಿ ಕ್ರಯವನ್ನು ಹೇಳುತ್ತದೆ. ಐದನೆಯದು ಕ್ರಿ.ಶ. ೧೨೧೪ರ ಶಾಸನ, ಭೂದಾನಕ್ಕೆ ಸಂಬಂಧಿಸಿದ್ದು. ಇಲ್ಲಿಯದೇ ಮತ್ತೊಂದು ಶಾಸನ ಮಹಾಮಂಡಪದ ಗೋಡೆಯ ಮೇಲಿದೆ. ೧೩ನೆಯ ಶತಮಾನದ ತಮಿಳು ಗ್ರಂಥ ಲಿಪಿಯಲ್ಲಿದೆ. ಭಾಷೆಯೂ ತಮಿಳು, ಈ ದೇವಾಲಯದ ‘ವೀರವಲ್ಲಾಳನ್ ಮಂಟಪ’ಕ್ಕೆ ನೀಡಿದ ಸುವರ್ಣದಾನವನ್ನು ಹೇಳುತ್ತದೆ. ಇವಾವುದರಿಂದಲೂ ನಂಬಿನಾರಾಯಣ ದೇವಾಲಯದ ಪ್ರತಿಷ್ಠಾಪನಾ ಕಾಲ ತಿಳಿಯುವುದಿಲ್ಲ. ಮೇಲಿನ ಶಾಸನ ಪಟ್ಟಿಯ ಕೊನೆಯ ಶಾಸನವು ವೀರವಲ್ಲಾಳನ್ ಮಂಡಪಕ್ಕೆ ನೀಡಿದ ದಾನವನ್ನು ಹೇಳುವುದರಿಂದ ನಾವು ಶಾಸನದ ಹೇಳಿಕೆಯನ್ನೂ, ಹಾಗೂ ದೇವಾಲಯದ ರಚನಾವಿಕಾಸವನ್ನು ಹೀಗೆ ಅರ್ಥೈಸಬಹುದು. ಅದೇನೆಂದರೆ, ಮೂಲತಃ ನಂಬಿನಾರಾಯಣ ಗುಡಿ ಮತ್ತು ಅದರ ಬಲಹಿಂಭಾಗದಲ್ಲಿ ಶ್ರೀಲಕ್ಷ್ಮಿದೇವಿಯ ಗುಡಿ ಮತ್ತು ಅದರ ಮುಂದಿನ ಓಲಗಶಾಲೆ (ಮಂಟಪ) ಇತ್ತು. ನಂಬಿನಾರಾಯಣ ಗುಡಿಗೆ ಸೇರಿದಂತೆ ನವರಂಗದ ಮುಂಭಾಗದಲ್ಲಿ, ಮಹಾಮಂಟಪ (ವೀರವಲ್ಲಾಳನ್ ಮಂಟಪ) ಮತ್ತು ಅದರ ಭಾಗವಾದ ಮುಖಮಂಟಪ, ಒಳಪ್ರಾಕಾರ (ಮಾಲಿಕಾ) ನಿರ್ಮಾಣವಾಯಿತು. ಅದು, ಆಳುವ ಸ್ವಾಮಿ ಇಮ್ಮಡಿ ವೀರಬಲ್ಲಾಳನ (ವೀರವಲ್ಲಾಳನ್) ಹೆಸರಿನಲ್ಲಿ ಸ್ಥಳೀಯರಿಂದಲೇ ನಿರ್ಮಾಣವಾಯಿತು. ಅದರ ನಿರ್ಮಾಣಕ್ಕೆ ಅನೇಕರು ದಾನಗಳನ್ನು ನೀಡಿದರು. ಅದರಲ್ಲಿ ಒಂದು ದಾನವನ್ನು ಸೂಚಿಸುವ ಶಾಸನ ಇದಾಗಿರಬೇಕು. ತದನಂತರ ವಿಜಯನಗರ ಕಾಲದಲ್ಲಿ ದೇವಾಲಯದ ಹೊರಪ್ರಾಕಾರ ಯಾಗಶಾಲೆ, ಪಾತಾಳಾಂಕಣ, ಗೋಪುರದ್ವಾರ, ಮುಖಮಂಡಪ, ಗರುಡಗಂಭ ಇತ್ಯಾದಿ ನಿರ್ಮಾಣಗೊಂಡಿತು. ಪಾತಳಾಂಕಣ ಪ್ರಾಯಶಃ ಇಮ್ಮಡಿ ಕೃಷ್ಣರಾಜ ಒಡೆಯರ ಕಾಲದ್ದಿರಬಹುದು (೧೭೨೨).

ಊಹೆ ಏನೋ ಸರಿಯಾಗಿರಬಹುದು, ಆದರೆ ಈ ರೀತಿಯ ಬೆಳವಣಿಗೆಗೆ ದೇವಾಲಯದಲ್ಲಿ ಪುರಾವೆಗಳು ಇವೆಯೇ ಎಂಬುದನ್ನು ಈಗ ಪರಿಶೀಲಿಸೋಣ. ಹೊಯ್ಸಳ ಇಮ್ಮಡಿ ಬಳ್ಲಾಳನ ಕಾಲಕ್ಕೆ ಮುಂಚೆ ನಂಬಿನಾರಾಯಣನ ಗುಡಿ ಇತ್ತು ಎನ್ನುವುದಕ್ಕೆ ಸ್ಥಳಪುರಾಣವೇ ಆಧಾರ. ಹೊಯ್ಸಳ ವಿಷ್ಣುವರ್ಧನನು (ಕ್ರಿ.ಶ. ೧೧೧೪-೪೨) ತಲಕಾಡು, ನೊಳಂಬವಾಡಿ ಪ್ರಾಂತ್ಯಗಳನ್ನು ಚೋಳರಿಂದ ಗೆದ್ದು, ತನ್ನ ವಿಜಯದ ಸಂಕೇತವಾಗಿ ಬೇಲೂರಿನಲ್ಲಿ ವಿಜಯನಾರಾಯಣ, ತೊಣ್ಣೂರಿನಲ್ಲಿ ನಂಬಿನಾರಾಯಣ ಹಾಗೂ ತಲಕಾಡಿನಲ್ಲಿ ಕೀರ್ತಿನಾರಾಯಣನ ದೇವಾಲಯಗಳನ್ನು ನಿರ್ಮಿಸಿದನೆಂದು ಪ್ರತೀತಿ. ತೊಣ್ಣೂರಿನಲ್ಲಿ ವಿಷ್ಣುವರ್ಧನನ ಕಾಲದಲ್ಲಿ ವಾಸ್ತು ನಿರ್ಮಾಣಗಳು ನಡೆದವು ಎಂಬುದಕ್ಕೆ, ವಿಷ್ಣುವರ್ಧನನ ಅಮಾತ್ಯ ಸುರಿಗೆಯ ನಾಗಯ್ಯನು ಅಲ್ಲಿಯ ಶ್ರೀಲಕ್ಷ್ಮಿ ದೇವಾಲಯದ ಮುಂದೆ ಇರುವ ಓಲಗ ಶಾಲೆಯನ್ನು ತನ್ನ ಸ್ವಾಮಿಯ ಇಚ್ಛೆಯ ಮೇರೆಗೆ ನಿರ್ಮಿಸಿದನೆಂಬುದಕ್ಕೆ, ಅಲ್ಲಿಯೇ ಶಾಸನಾಧಾರವಿದೆ. ಜೊತೆಗೆ ಕೆಲವು ವಾಸ್ತು ಲಕ್ಷಣಗಳು, ಈ ಮಂಟಪ ಹೊಯ್ಸಳ ಸೃಷ್ಠಿ ಎಂಬುದನ್ನು ರುಜುವಾತುಪಡಿಸುತ್ತವೆ. ಕೇವಲ ಶ್ರೀಲಕ್ಷ್ಮಿ ದೇವಾಲಯ ಮಾತ್ರ ನಂಬಿನಾರಾಯಣನ ದೇವಾಲಯದ ಬಲಪಾರ್ಶ್ವದಲ್ಲಿ ಕಟ್ಟಲಾಗಿತ್ತು. ಅಲ್ಲಿ ನಂಬಿ ನಾರಾಯಣಗುಡಿ ಇರಲಿಲ್ಲ. ಅದು ತದನಂತರ ಕಟ್ಟಲ್ಪಟ್ಟಿತು ಎಂಬ ತೀರ್ಮಾನ ಕೇವಲ ಹಾಸ್ಯಾಸ್ಪದವಾಗುತ್ತದೆ ಮಾತ್ರ.

ನಂಬಿನಾರಾಯಣನ ಗುಡಿ ಇದ್ದು, ಅದರ ಪಾರ್ಶ್ವದಲ್ಲಿ ಶ್ರೀಲಕ್ಷ್ಮಿದೇವಿಯ ಗುಡಿ ನಿರ್ಮಾಣವಾಯಿತು ಎಂದು ಊಹಿಸುವುದು ಎಂದೆಂದಿಗೂ ತಾರ್ಕಿಕ ಹಾಗೂ ಸತ್ಯಕ್ಕೆ ಹತ್ತಿರವಾದ ತೀರ್ಮಾನ. ಹಾಗಾದರೆ ನಂಬಿನಾರಾಯಣನ ಗುಡಿ ಯಾವಾಗ ನಿರ್ಮಾಣ ವಾಯಿತು ಎಂಬುದು ಉದ್ಭವವಾಗುವ ಸಹಜ ಪ್ರಶ್ನೆ. ಇದನ್ನು ತಿಳಿಯಲು ಹಲವಾರು ವಾಸ್ತು ಆಧಾರಿತ ಮತ್ತುಐತಿಹಾಸಿಕ ಸತ್ಯಗಳ ವಿವರಣೆ ಅಗತ್ಯ. ಈಗಾಗಲೇ ನಂಬಿನಾರಾಯಣನ ಮೂಲಗುಡಿಯ ಹಲವಾರು ವಾಸ್ತು ಲಕ್ಷಣಗಳನ್ನೂ ಗಮನಿಸಿ, ಅವುಗಳು ದ್ರಾವಿಡ ಶೈಲಿಯವಾದರೂ ಹೊಯ್ಸಳ-ದ್ರಾವಿಡ ಸಂಪ್ರದಾಯಕ್ಕೆ ಸೇರಿದವು ಹಾಗೂ ಚೋಳ-ದ್ರಾವಿಡ ಸಂಪ್ರದಾಯಗಳಿಂದ ವಿಭಿನ್ನವಾದವು ಎಂಬ ಅಂಶವನ್ನು ಸಾಕ್ಷಾಧಾರವಾಗಿ ತಿಳಿಸಿದ್ದೇವೆ. ಜೊತೆಗೇ ತೊಣ್ಣೂರು ಹೊಯ್ಸಳ ಸಾಮಾಜ್ರದ ಒಂದು ಉಪರಾಜಧಾನಿಯಾಗಿತ್ತೆಂಬ ಪ್ರತೀತಿಯೂ ಇದೆ. ಜೊತೆಗೆ ಇಲ್ಲಿ ರಾಮಾನುಜರು ಸ್ವಲ್ಪ ಕಾಲ ನೆಲೆಸಿದ್ದರು ಎಂಬ ನಂಬಿಕೆಯೂ ಇದೆ. ತನ್ನ ಗುರುಗಳಾದ ರಾಮಾನುಜರು ನೆಲೆಸಿದ್ದ ಈ ಸಣ್ಣ ಊರಿನಲ್ಲಿ ವಿಷ್ಣುವರ್ಧನನು, ಅವರ ನೆನಪಿಗಾಗಿ ನಂಬಿನಾರಾಯಣ ಗುಡಿಯನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರಬೇಕು. ಇಲ್ಲವಾದರೆ ಬೇರೆ ದೊಡ್ಡ ದೊಡ್ಡ ಊರುಗಳನ್ನು ಬಿಟ್ಟು ಇಷ್ಟು ಸಣ್ಣ ಊರಿನಲ್ಲಿ ಸಾಕಷ್ಟು ವಿಸ್ತಾರವಾದ ನಾರಾಯಣನ ಗುಡಿಯನ್ನು ನಿರ್ಮಿಸುವ ಉದ್ದೇಶವಾದರೂ ಏನಿದ್ದೀತು. ಅದಕ್ಕಾಗಿಯೇ ವಿಶೇಷವಾಗಿ ಆ ಊರಿನಲ್ಲಿ ಹೊಯ್ಸಳ ವಿಷ್ಣುವಧನನು ತನ್ನ ವಿಜಯೋತ್ಸವದ ಆಚರಣೆಗಾಗಿ ನಂಬಿನಾರಾಯಣ ದೇಗುಲವನ್ನು ನಿರ್ಮಿಸಿರಬೇಕು. ಬೇಲೂರು ಮತ್ತು ತಲಕಾಡಿನ ದೇವಾಲಯಗಳ ನಿರ್ಮಾಣ ಕಾಲ ಕ್ರಿ.ಶ. ೧೧೧೭ ಎಂದು ಖಚಿತವಾಗಿದೆ. ಇದರಿಂದಾಗಿ ತೊಣ್ಣೂರಿನ ನಂಬಿನಾರಾಯಣ ದೇವಾಲಯದ ನಿರ್ಮಾಣವೂ ಅದೇ ಕಾಲದಲ್ಲಿ ಆಗಿರಬೇಕೆಂದು ಊಹಿಸಬಹುದು. ಆದ್ದರಿಂದ ಪರಂಪರಾನುಗತವಾಗಿ ಬಂದಿರುವ ಐತಿಹ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ತೀರ್ಮಾನಗಳಿಗೆ ಬರಬಹುದು.

ರಾಮಾನುಜರ ನೆನಪಿನಲ್ಲಿ ತೊಣ್ಣೂರಿನಲ್ಲಿ ಆಗಲೇ ನಿರ್ಮಾಣವಾಗಿದ್ದ, ವಿಷ್ಣುವರ್ಧನ ನಿರ್ಮಿತ ನಂಬಿನಾರಾಯಣನ ದೇವಾಲಯದ ಬಲಪಾರ್ಶ್ವದಲ್ಲಿ, ಶ್ರೀಲಕ್ಷ್ಮಿದೇವಿಯ ಗುಡಿ ನಿರ್ಮಾಣವಾಗಲು ಅಲ್ಲಿ ನೆಲೆಸಿದ್ದ ತಮಿಳು ಶ್ರೀವೈಷ್ಣವರೇ ಕಾರಣವೆಂದು ಹೇಳಬಹುದು. ಶ್ರೀಲಕ್ಷ್ಮಿದೇವಿಯ ಗುಡಿಯ ವಾಸ್ತು ಲಕ್ಷಣಗಳನ್ನು ನಾವು ಆಗಲೇ ಗಮನಿಸಿದ್ದೇವೆ. ಆ ಲಕ್ಷಣಗಳು ನಂಬಿನಾರಾಯಣನ ಗುಡಿಯ ಲಕ್ಷಣಗಳಿಗಿಂತ ಸಂಪೂರ್ಣ ವಿಭಿನ್ನ. ನಂಬಿನಾರಾಯಣನ ಗುಡಿ ಹೊಯ್ಸಳ-ದ್ರಾವಿಡ ಲಕ್ಷಣಗಳನ್ನು ಹೊಂದಿದೆ. ಈ ಲಕ್ಷ್ಮಿ ಗುಡಿಯು, ನಂಬಿನಾರಾಯಣನ ಗುಡಿಯ ಉಪಗುಡಿಯಾಗಿ ನಿರ್ಮಿತವಾಗಿದೆ ಎಂಬುದಕ್ಕೆ ಇರುವ ಮತ್ತೊಂದು ಸೂಚನೆ ಎಂದರೆ ಶ್ರೀಲಕ್ಷ್ಮಿ ಗುಡಿಗೆ ಇರುವ ಎತ್ತರವಾದ ಉಪಪೀಠ ಸಹಿತ ಅಧಿಷ್ಠಾನ. ಅತೀ ಚಿಕ್ಕದಾದ ಈ ಗುಡಿಗೆ ಐದಡಿ ಎತ್ತರದ ಅಧಿಷ್ಠಾನ ಅನವಶ್ಯಕ, ಆದರೂ ಇದಕ್ಕೆ ಉಪಪೀಠ ಮತ್ತು ಅಧಿಷ್ಠಾನವಿದೆ. ಅಂದರೆ ಯಾವುದೋ ನಿರ್ದಿಷ್ಠ ಕಾರಣಗಳಿಂದಾಗಿ, ಈ ಸಣ್ಣಗುಡಿಗೆ ಎತ್ತರವಾದ ಅಧಿಷ್ಠಾನವನ್ನು ನಿರ್ಮಿಸಿದ್ದಾರೆ ಎಂಬುದು ಖಚಿತ. ಅಮ್ಮನವರ ಗುಡಿಗೆ ಎತ್ತರವಾದ ವೇದಿಕೆ ಶಾಸ್ತ್ರಸಮ್ಮತವಲ್ಲದ್ದು. ಅಮ್ಮನವರ ಗುಡಿ ಯಾವಾಗಲೂ ಮೂಲಪುರುಷ ದೇವತೆಯ ಗುಡಿಯ ಪಾರ್ಶ್ವದಲ್ಲಿ, ಸ್ವಲ್ಪ ಕೆಳಮಟ್ಟದಲ್ಲಿ ಇರಬೇಕಾದದ್ದು ಶಾಸ್ತ್ರ ನಿಯಮ, ಆದರೆ ಇಲ್ಲಿ ಅದು ಹೀಗಿಲ್ಲ. ಕಾರಣಗಳು ಈ ರೀತಿ ಇರಬಹುದು. ಮೊದಲನೆಯದಾಗಿ ಇದು ರಾಮಾನುಜಾಚಾರ್ಯರ ಶ್ರೀವೈಷ್ಣವ ಪಂಥದ ನಂಬಿಕೆಗಳಿಗೆ ಅನುಗುಣವಾಗಿ ನಿರ್ಮಾಣವಾದ ಗುಡಿ. ಕರ್ನಾಟಕ ವೈಷ್ಣವ ಸಂಪ್ರದಾಯದಲ್ಲಿ, ರಾಮಾನುಜರ ಪೂರ್ವಕಾಲದಲ್ಲಿ, ಅಮ್ಮನವರಿಗಾಗಿ ಪ್ರತ್ಯೇಕ ಗುಡಿಗಳನ್ನು ನಿರ್ಮಿಸುವ ಸಂಪ್ರದಾಯವಿರಲಿಲ್ಲ. ಬಾದಾಮಿ ಚಾಳುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ ಮತ್ತು ಹೊಯ್ಸಳರ ಯಾವುದೇ ದೇವಾಲಯಗಳಲ್ಲಿ, ಆಯಾ ಕಾಲಗಳಲ್ಲಿ, ಅಮ್ಮನವರಿಗಾಗಿ ನಿರ್ಮಾಣವಾದ ಪ್ರತ್ಯೇಕ ಗುಡಿಗಳಿಲ್ಲ. ಉದಾಹರಣೆಗೆ, ನಂಬಿನಾರಾಯಣನ ಗುಡಿಯ ಜೊತೆಯಲ್ಲಿಯೇ ನಿರ್ಮಾಣವಾದ ಬೇಲೂರಿನ ವಿಜಯನಾರಾಯಣ, ತಲಕಾಡಿನ ಕೀರ್ತಿನಾರಾಯಣ ಗುಡಿಗಳಿಗೆ, ಮೂಲದಲ್ಲಿ ಅಮ್ಮನವರ ಗುಡಿಗಳಿರಲಿಲ್ಲ. ಈಗಿರುವುದೆಲ್ಲವೂ ನಂತರದ ಸೇರ್ಪಡೆಗಳೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಈ ಸಂಪ್ರದಾಯದಿಂದಾಗಿ ಹೊಯ್ಸಳ ಶಿಲ್ಪಿಗಳು ಕರ್ನಾಟಕ ಸಂಪ್ರದಾಯದಂತೆ ಹೊಯ್ಸಳ-ದ್ರಾವಿಡ ಶೈಲಿಯಲ್ಲಿ ಮೂಲ ನಂಬಿನಾರಾಯಣ ಗುಡಿಯನ್ನು ಮಾತ್ರ ನಿರ್ಮಿಸಿ ಪೂರೈಸಿದರು. ಶ್ರೀಲಕ್ಷ್ಮಿ ಗುಡಿಯನ್ನು ಪ್ರತ್ಯೇಕವಾಗಿಕಟ್ಟುವ ಗೋಜಿಗೆ ಹೋಗಲಿಲ್ಲ.

ರಾಮಾನುಜರು ಸ್ಥಾಪಿಸಿದ ಶ್ರೀವೈಷ್ಣವ ಧರ್ಮದಲ್ಲಿ, ವಿಷ್ಣುಪತ್ನಿ ಲಕ್ಷ್ಮಿಗೂ ಸಮಾನ ಸ್ಥಾನ. ಅದರಿಂದಾಗಿ ಅವರ ಧರ್ಮಕ್ಕೆ ಶ್ರೀವೈಷ್ಣವ (ಶ್ರೀ+ವಿಷ್ಣು) ಧರ್ಮವೆಂದು ಹೆಸರಿಸಲಾಗಿದೆ. ಶ್ರೀಲಕ್ಷ್ಮಿಯಿಲ್ಲದೆ ವಿಷ್ಣು ಅರ್ಧ ಮತ್ತು ಅಪೂರ್ಣ. ಸಕಲ ಇಷ್ಟಾರ್ಥಸಿದ್ದಿಗೆ ಶ್ರಿಲಕ್ಷ್ಮಿ ಸಮೇತನಾದ ವಿಷ್ಣುವಿನ ಆರಾಧನೆ ಅನಿವಾರ್ಯ. ಈ ಕಾರಣಕ್ಕಾಗಿ ನಂಬಿನಾರಾಯಣ ಗುಡಿಯ ಬಲ ಹಿಂಭಾಗದಲ್ಲಿ, ಶ್ರೀಲಕ್ಷ್ಮಿದೇವಿಯ ಒಂದು ಸಣ್ಣ ಗುಡಿ ನಿರ್ಮಾಣವಾಯಿತು. ಶ್ರೀವೈಷ್ಣವ ಪಂಥದಲ್ಲಿ ಶ್ರೀಲಕ್ಷ್ಮಿಗೆ ವಿಷ್ಣುಸಮಾನ ಸ್ಥಾನವನ್ನು ನಿರೂಪಿಸಲು, ನಂಬಿನಾರಾಯಣ ಮೂಲ ಗುಡಿಗೆ ಸಮಾನ ಎತ್ತರದಲ್ಲಿ, ಈ ಗುಡಿಯನ್ನು ನಿರ್ಮಿಸಿದರು. ಆ ಕಾಲಕ್ಕೆ ಮೂಲ ನಾರಾಯಣಗುಡಿ ನಿರ್ಮಾಣ ಪೂರ್ತಿಗೊಂಡು ಹೊಯ್ಸಳ ಶಿಲ್ಪಿಗಳು ಆ ಸ್ಥಳದಿಂದ ನಿರ್ಗಮಿಸಿದ್ದುದರಿಂದ ಸ್ಥಳೀಯ ತಮಿಳು ಭಕ್ತರು, ತಮಿಳು ಶಿಲ್ಪಿಗಳಿಂದ ತಮ್ಮ ಸಂಪ್ರದಾಯಕ್ಕನುಗುಣವಾಗಿ ಶ್ರೀಲಕ್ಷ್ಮಿ ದೇವಾಲಯವನ್ನು ನಿರ್ಮಿಸಿಕೊಂಡರು. ಇದರಿಂದಾಗಿ ಈ ದೇವಾಲಯದ ಸಕಲ ವಾಸ್ತು ಲಕ್ಷಣಗಳು ಚೋಳ-ದ್ರಾವಿಡ ಶೈಲಿಯಲ್ಲಿವೆ. ಶ್ರೀಲಕ್ಷ್ಮಿ ದೇವಾಲಯ ನಿರ್ಮಾಣವಾದ ನಂತರ, ಆ ದೇವಾಲಯಕ್ಕೆ ವಿಷ್ಣುವರ್ಧನನ ಆದೇಶದ ಮೇರೆಗೆ, ಪ್ರಧಾನಿ ಸುರಿಗೆಯ ನಾಗಯ್ಯನು ಓಲಗಶಾಲೆಯನ್ನು, ಎತ್ತರವಾದ ನೇದಿಯ ಮೇಲೆ, ಲಕ್ಷ್ಮಿ ದೇವಾಲಯಕ್ಕೆ ಹೊಂದಿಕೊಂಡಂತೆ ನಿರ್ಮಿಸಿದನು. ಮೇಲಿನ ತೀರ್ಮಾನ ನಿಜವಾದಲ್ಲಿ ಕರ್ನಾಟಕದ ಮೊಟ್ಟ ಮೊದಲ ಶ್ರೀಲಕ್ಷ್ಮಿ ಅಮ್ಮನವರ ಗುಡಿ ಇದೆನಿಸುತ್ತದೆ.

ಈ ಸಮರ್ಥನೆಗೆ ಆಧಾರವೆಂದರೆ ಓಲಗಶಾಲೆಯ ಕಂಬಗಳ ಮೇಲಿನ ಆಧಾರ ಪೋತಿಕೆಗಳು. ಇವು ಮುಷ್ಠಿ ಬಂಧ ರೀತಿಯ ಅಲಂಕರಣವನ್ನು ಹೊಂದಿದ್ದು, ಹೊಯ್ಸಳ ವಾಸ್ತುಶೈಲಿಯ ಅನುಸರಣೆಯನ್ನು ನಿರೂಪಿಸುತ್ತವೆ.

ರಾಮಾನುಜಾಚಾರ್ಯರು ತಮಿಳುನಾಡಿನಿಂದ ಹೊಯ್ಸಳ ರಾಜ್ಯಕ್ಕೆ ಬಂದು ಅನೇಕ ವರ್ಷಗಳ ಕಾಲ ತೊಣ್ಣೂರಿನ ಬಳಿಯಲ್ಲಿಯೇ ಇರುವ ಮೇಲುಕೋಟೆಯಲ್ಲಿ ನೆಲೆಸಿದರು ಎಂಬ ವಿಷಯ ಐತಿಹಾಸಿಕ ಸತ್ಯ. ಹೀಗೆ ಬಂದ ರಾಮಾನುಜಾಚಾರ್ಯರ ಜೊತೆಗೆ ಅವರ ಅನುಯಾಯಿಗಳು ಅನೇಕ ಸಂಖ್ಯೆಯಲ್ಲಿ ತಂಡೋಪತಂಡವಾಗಿ ಬಂದು ತೊಣ್ಣೂರಿನಲ್ಲಿ ನೆಲೆಸಿದರು ಎಂಬುದು ಸಂಪ್ರದಾಯವಾದರೂ ಸತ್ಯ. ಇದರಿಂದಾಗಿಯೇ ಈಗಿನ ತೊಣ್ಣೂರು (ತೊಂಡನೂರು ಅಂದರೆ, ಭಕ್ತರ ಊರು) ಎಂಬ ಹೆಸರು ಆ ಸ್ಥಳಕ್ಕೆ ಅನ್ವಯವಾಯಿತು. ತಮಿಳುನಾಡಿನಿಂದ ವಲಸೆ ಬಂದ ಶ್ರೀವೈಷ್ಣವ ಪಂಥೀಯರು ತಾವು ನಿರ್ಮಿಸಿದ ದೇವಾಲಯಗಳಿಗೆ ತಮಿಳು ಶಿಲ್ಪಿಗಳನ್ನೇ ಬಳಸಿಕೊಂಡರು. ತಮಿಳುನಾಡಿನಿಂದ ಈ ಕಾಲದಲ್ಲಿ ಅನೇಕ ಶಿಲ್ಪಿಗಳು ಕನ್ನಡನಾಡಿಗೆ ವಲಸೆ ಬಂದರಲ್ಲದೆ, ಈ ಮುಂಚೆ ಒಂದು ಶತಮಾನ ಕಾಲ ಚೋಳರ ಆಳ್ವಿಕೆಯಲ್ಲಿದ್ದ ಆಗ್ನೇಯ ಕರ್ನಾಟಕದ ವಿವಿಧ ಸ್ಥಳಗಳಲ್ಲಿ, ತಜ್ಞರಾದ ಅನೇಕ ತಮಿಳು ಶಿಲ್ಪಿಗಳು, ತಮಿಳು ಸಂಪ್ರದಾಯದ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದುದಲ್ಲದೆ ಇಲ್ಲಿಯೇ ನೆಲೆಸಿದ್ದರು ಕೂಡ. ಇವರೆಲ್ಲರ ಸಹಯೋಗದಿಂದ ರಾಮಾನುಜರ ಅನುಯಾಯಿಗಳು ತೊಣ್ಣೂರಿನಲ್ಲಿ ದೇವಾಲಯ ಕಾರ್ಯಗಳನ್ನು ಕೈಗೊಂಡು, ನಂಬಿನಾರಾಯಣ ಗುಡಿಯ ವಿಸ್ತರಣೆ (ಕ್ರಿ.ಶ. ೧೧೭೪), ಯೋಗಾನರಸಿಂಹ ದೇವಾಲಯ (ಕ್ರಿ.ಶ. ೧೧೫೨) ಮತ್ತು ಕೃಷ್ಣದೇವಾಲಯ (೧೧೫೭) ಮುಂತಾದ ದೇವಾಲಯಗಳ ನಿರ್ಮಾಣ ಮಾಡಿದರು.

ಇಡೀ ತೊಣ್ಣೂರು ನಗರ ತಮಿಳುಮಯವಾದುದರಿಂದ ಇಲ್ಲಿ ಹೊಯ್ಸಳ ಶಿಲ್ಪಿಗಳಿಗೆ ಕೆಲಸವಿಲ್ಲದಾಯಿತು. ಹೀಗಾಗಿ ಅವರು ಕ್ರಮೇಣ ತೊಣ್ಣೂರನ್ನು ತ್ಯಜಿಸಿ ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿರಬೇಕು. ಏಕೆಂದರೆ ತೊಣ್ಣೂರಿನ ಇನ್ಯಾವುದೇ ದೇವಾಲಯಗಳಲ್ಲಿ ಹೊಯ್ಸಳ ಸಂಪ್ರದಾಯದ ಯಾವುದೇ ರೀತಿಯ ವಾಸ್ತು ಅಥವಾ ಶಿಲ್ಪ ಲಕ್ಷಣಗಳು ಪ್ರತಿಬಿಂಬಿತವಾಗಿಲ್ಲ.

ನಂಬಿನಾರಾಯಣನ ಮೂಲಗುಡಿಗೆ ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ (ಕ್ರಿ.ಶ.೧೧೭೪) ಮಹಾಮಂಡಪ(ವೀರವಲ್ಲಾಳನ್ ಮಂಟಪ), ಅದಕ್ಕೆ ಮುಖಮಂಟಪ, ಮತ್ತು ಗುಡಿಯನ್ನು ಸುತ್ತವರೆದಂತೆ ಪ್ರಾಕಾರದ ಗೋಡೆ, ಆವೃತಮಂಟಪ ಅಥವ ಆವರಣ ಕೈಸಾಲೆ, ಹಾಗೂ ವಿಮಾನ ಪ್ರಾಸಾದಗಳು ನಿರ್ಮಾಣಗೊಂಡವು. ಈ ಎಲ್ಲಾ ವಾಸ್ತು ಭಾಗಗಳೂ ಚೋಳ-ದ್ರಾವಿಡ ಶೈಲಿಯ ನಿರ್ಮಾಣಗಳೆಂದೂ, ಅವುಗಳ ವಾಸ್ತು ಲಕ್ಷಣಗಳ ಆಧಾರದ ಮೇಲೆ ವಿವರಿಸಲಾಗಿದೆ. ಹೀಗಾಗಿ ಅವುಗಳು ನಿರ್ಮಾಣದಲ್ಲಿ ಸಂಪೂರ್ಣ ತಮಿಳು ಶಿಲ್ಪಿಗಳ ಕೈಕೆಲಸವೇ ಎಂದು ಹೇಳಬಹುದು. ತಮಿಳು ಭಾಷೆಯ ಶಾಸನಗಳು, ತಮಿಳು ಧಾರ್ಮಿಕ ಸಂಪ್ರದಾಯಗಳು, ತಮಿಳು ಜನರ ಹೆಸರುಗಳು ಎಲ್ಲವೂ ಇಲ್ಲಿಯ ಶಾಸನಗಳಲ್ಲಿ ವಿಪುಲವಾಗಿ ಕಂಡುಬರುತ್ತವೆ. ಇದರಿಂದಾಗಿ ತೊಣ್ಣೂರಿನ ನಂಬಿನಾರಾಯಣ ದೇವಾಲಯ, ಆ ಕಾಲಕ್ಕೆ ತಮಿಳರ ಅದರಲ್ಲೂ ತಮಿಳು ಶ್ರೀವೈಷ್ಣವರ ಪ್ರಬಲ ನೆಲೆಯಾಗಿತ್ತು. ಬಲ್ಲಾಳನ ಕಾಲದ ವಾಸ್ತು ನಿರ್ಮಾಣಗಳು ಗಾತ್ರದಲ್ಲಿ ಆಗಾಧವಾಗಿದ್ದರೂ, ಗುಣಮಟ್ಟದಲ್ಲಿ ತೀರಾ ಸಾಮಾನ್ಯವಾಗಿವೆ. ವಾಸ್ತು ಶೈಲಿ ಚೋಳ-ದ್ರಾವಿಡ ವಾಸ್ತು ಸಂಪ್ರದಾಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ. ಆದರೆ ಕೆಲಸದಲ್ಲಿ ನಾಜೂಕು, ಅಂದಚೆಂದಗಳಿಲ್ಲ. ಇದರಿಂದಾಗಿ ನೇರ ರಾಜಪೋಷಣೆ, ಮಹಾಮಂಟಪ ಮತ್ತು ಒಳಪ್ರಾಕಾರದ ನಿರ್ಮಾಣದಲ್ಲಿ ಇತ್ತೇ ಎಂಬುದು ಸಂದೇಹ. ‘ವೀರವಲ್ಲಾಳನ್’ ಮಂಟಪಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಸುವರ್ಣದಾನ ನೀಡಿದ ಶಾಸನೋಕ್ತ ವಿಷಯ ಈ ಸಂಗತಿಗೆ ಪುಷ್ಟಿ ನೀಡುತ್ತದೆ.

ನಂಬಿನಾರಾಯಣನ ಗುಡಿಯ ಹೊರಪ್ರಾಕಾರ ಕ್ರಿ.ಶ. ೧೩ನೆಯ ಶತಮಾನದ ರಚನೆ ಎನ್ನುವುದಕ್ಕೆ ಕಾರಣಗಳಿವೆ. ಏಕೆಂದರೆ ಹೊರಪ್ರಾಕಾರದ ಒಳಗಣ ವಾಹನಮಂಟಪದ ತಳಪಾದಿ ಕಲ್ಲಿನ ಮೇಲೆ, ಹೊಯ್ಸಳ ವೀರ ನರಸಿಂಹನ (ಕ್ರಿ.ಶ. ೧೨೫೩-೯೨) ಶಾಸನವೂ

[1] ಮತ್ತು ೧೪ನೆಯ ಶತಮಾನದ ಲಿಪಿಯ ಮತ್ತೊಂದು ಶಾಸನವೂ[2] ಇದೆ. ಇದರಿಂದಾಗಿ ಹೊಯ್ಸಳ ಆಳ್ವಿಕೆಯ ಕೊನೆಯ ಭಾಗದಲ್ಲಿ, ಅಂದರೆ ಕ್ರಿ.ಶ. ೧೩ನೆಯ ಶತಮಾನದ ಅಂತ್ಯದ ವೇಳೆಗೆ ಅಲ್ಲಿಯ ವಾಹನಮಂಡಪ/ಯಾಗಶಾಲೆ ಸಿದ್ಧವಾಗಿತ್ತು ಎಂದು ಹೇಳಬಹುದು. ಇದೇ ದೇವಾಲಯದ ಮುಖಮಂಟಪದ ಕಂಬದ ಮೇಲಿನ ಕ್ರಿ.ಶ. ೧೨೮೬ರ ಶಾಸನದಿಂದ[3] ಈ ವಿಚಾರ ಖಚಿತವಾಗುತ್ತದೆ. ಪ್ರಾಕಾರವಿಲ್ಲದೆ ವಾಹನ / ಯಾಗಮಂಟಪವನ್ನು ದೇವಾಲಯದ ಹೊರಭಾಗದಲ್ಲಿ ನಿರ್ಮಿಸುವುದು ಸಂಪ್ರದಾಯ ಅಲ್ಲವೆಂಬ ಮತ್ತೊಂದು ವಿಚಾರವೂ ಇಲ್ಲಿ ಗಮನಾರ್ಹ.

ಪಾತಾಳಾಂಕಣವನ್ನು ನಿರ್ಮಿಸುವ ಸಂಪ್ರದಾಯ ವಿಜಯನಗರೋತ್ತರ ಕಾಲದ ಒಂದು ಪದ್ಧತಿ. ಅದರಂತೆಯೇ ಮೈಸೂರು ಒಡೆಯರ ಕಾಲದಲ್ಲಿ ಪಾತಾಳಾಂಕಣ ನಿರ್ಮಾಣ ವಾಗಿರಬೇಕು. ಅದೇ ಕಾಲದಲ್ಲೆ ಪ್ರಾಯಶಃ ಧ್ವಜಸ್ತಂಭ (ಗರುಡಗಂಬ) ಮತ್ತು ಅದರ ಮುಂದಿನ ಸಣ್ಣ ಕಲ್ಯಾಣಿಯೂ ನಿರ್ಮಾಣವಾಗಿರಬೇಕು.

ವಿಜಯನಗರೋತ್ತರ ಕಾಲದಲ್ಲಿ ಆಡಳಿತ ನಿರ್ವಹಿಸಿದ ಮೈಸೂರು ಒಡೆಯರ ಇಮ್ಮಡಿ ಕೃಷ್ಣರಾಜ ಒಡೆಯರ ತಾಮ್ರಶಾಸನವೊಂದು ತೊಣ್ಣೂರಿನಲ್ಲಿ ದೊರೆತಿದೆ. ಕ್ರಿ.ಶ. ೧೭೨೨ಕ್ಕೆ ಸೇರುವ ಈ ಶಾಸನ ಹದಿನೈದು ತಾಮ್ರಪತ್ರಗಳನ್ನುಳ್ಳ ಅಗಾಧವಾದ ತಾಮ್ರಶಾಸನ[1]. ಆ ಕಾಲದಲ್ಲಿ ಬಹಳ ಕ್ಷೀಣ ಸ್ಥಿತಿಗೆ ಇಳಿದಿದ್ದ ತೊಣ್ಣೂರಿನ ಧಾರ್ಮಿಕ ವಾತಾವರಣವನ್ನು ಪುನರುತ್ಥಾನ ಮಾಡಲು, ಆಳುವ ಅರಸು ಇಮ್ಮಡಿ ಕೃಷ್ಣರಾಜ ಒಡೆಯರವರು ೧೧೨ ವೃತ್ತಿಗಳನ್ನು ರಚಿಸಿ, ಅವುಗಳನ್ನು ದೇಶದ ವಿವಿಧ ಭಾಗಗಳಿಂದ ಆಮಂತ್ರಿಸಿ ಕರೆತಂದ ಮೂರೂ ಪಂಥದ ಬ್ರಾಹ್ಮಣರಿಗೆ ನೀಡಿ, ಅವರುಗಳು ತೊಣ್ಣೂರಿನಲ್ಲೇ ನೆಲೆಸುವಂತೆ ಮಾಡಿ, ಅಲ್ಲಿಯ ಲಕ್ಷ್ಮಿನಾರಾಯಣ, ವಸಂತಗೋಪಾಲ (ಕೃಷ್ಣ) ದೇವಾಲಯಗಳಲ್ಲಿ ಪೂಜೆ ಪುನಸ್ಕಾರ, ರಥೋತ್ಸವಾದಿ ಕೈಂಕರ್ಯಗಳು ಮತ್ತೆ ನಡೆಯುವಂತೆ ಮಾಡಿದರು. ಪ್ರಾಯಶಃ ಆ ಕಾಲದಲ್ಲೇ ನಂಬಿನಾರಾಯಣ ಗುಡಿಯ ಪಾತಾಳಾಂಕಣವೂ ನಿರ್ಮಾಣವಾಗಿರಬಹುದಾದ ಸಾಧ್ಯತೆ ಇದೆ.


[1] ಅದೇ, ಪಾಂ. ೫೬

[2] ಅದೇ, ಪಾಂ. ೫೭

[3] ಅದೇ, ಪಾಂ. ೬೮