ಕಾಲ ತೀರ್ಮಾನ  ಸಾರಾಂಶ

ಮೇಲೆ ತಿಳಿಸಿದ ಎಲ್ಲಾ ಆಧಾರಗಳು, ಸಂಗತಿಗಳು, ಅನುಮಾನ ಮುಂತಾದ ವಿಷಯಗಳಿಂದ ನಂಬಿನಾರಾಯಣ ದೇವಾಲಯದ ಬೆಳವಣಿಗೆಯ ವಿವಿಧ ಘಟ್ಟಗಳನ್ನು ಹೀಗೆ ಸಂಗ್ರಹಿಸಬಹುದು. ನಂಬಿನಾರಾಯಣನ ಮೂಲಗುಡಿ ವಿಷ್ಣುವರ್ಧನನ ಕಾಲದ ಪ್ರತಿಷ್ಠಾಪನೆ. ಇದು ಹೊಯ್ಸಳ ಶಿಲ್ಪಿಗಳಿಂದ ಹೊಯ್ಸಳ-ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಯಿತು. ಮೂಲತಃ ಗರ್ಭಗೃಹ, ಶುಕನಾಸ ಮತ್ತು ನವರಂಗಗಳನ್ನು ಇದು ಹೊಂದಿತ್ತು. ಅನತಿ ಕಾಲದಲ್ಲಿಯೆ ತಮಿಳು ಶ್ರೀವೈಷ್ಣವ ಪಂಥೀಯರಿಂದ ಮೂಲಗುಡಿಯ ಬಲ ಹಿಂಭಾಗದಲ್ಲಿ ಶ್ರೀಲಕ್ಷ್ಮಿ ದೇವಿಯ ದೇವಾಲಯವು, ಚೋಳ-ದ್ರಾವಿಡ ಶೈಲಿಯಲ್ಲಿ, ತಮಿಳು ಶಿಲ್ಪಿಗಳಿಂದ ನಿರ್ಮಾಣಗೊಂಡಿತು. ಈ ಗುಡಿಗೆ ವಿಷ್ಣುವರ್ಧನನ ಪ್ರಧಾನಿ ಸುರಿಗೆಯ ನಾಗಯ್ಯನು ತಮ್ಮ ಸ್ವಾಮಿಯ ಅಣತಿಯ ಮೇರೆಗೆ, ಗುಡಿಯ ಮುಂಭಾಗದಲ್ಲಿ ಮಂಟಪ (ಓಲಗಶಾಲೆ) ಒಂದನ್ನು ನಿರ್ಮಿಸಿದನು. ತದನಂತರ ಕ್ರಿ.ಶ. ೧೧೭೪ರ ವೇಳೆಗೆ, ಇಮ್ಮಡಿ ವೀರಬಲ್ಲಾಳನ ಕಾಲದಲ್ಲಿ. ನಂಬಿನಾರಾಯಣನ ಗುಡಿಗೆ, ಮಹಾಮಂಟಪ (ವೀರಬಲ್ಲಾಳನ್ ಮಂಡಪ), ಆವೃತಮಂಟಪ, ಪ್ರಾಕಾರ, ಮಾಲಿಕಾ ಮತ್ತು ಮುಖಮಂಟಪ ನಿರ್ಮಾಣವಾಯಿತು. ಈ ಎಲ್ಲಾ ಭಾಗಗಳು, ತಮಿಳು ಶಿಲ್ಪಿಗಳಿಂದ, ಚೋಳ-ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡವು. ಅದೇ ಕಾಲದಲ್ಲಿ ನಂಬಿನಾರಾಯಣ ಗುಡಿಗೆ ಇಟ್ಟಿಗೆ ಗಾರೆಯ ವಿಮಾನ ಪ್ರಾಸಾದವು ನಿರ್ಮಾಣವಾಗಿರಬೇಕು. ಇದಾದನಂತರ ೧೩ನೆಯ ಶತಮಾನದ ಅಂತ್ಯದ ವೇಳೆಗೆ ಲಕ್ಷ್ಮಿದೇವಾಲಯವನ್ನು ಆವರಿಸಿದಂತೆ, ಹೊರ ಪ್ರಾಕಾರ, ದ್ವಾರಮಂಟಪ, ದ್ವಾರ ಮುಖಮಂಡಪ, ಯಾಗಶಾಲೆ ಅಥವಾ ವಾಹನಮಂಟಪಗಳು ನಿರ್ಮಾಣವಾದವು. ತದನಂತರ ಮೈಸೂರು ಒಡೆಯರ (ಕ್ರಿ.ಶ. ೧೭೨೨) ಕಾಲದಲ್ಲಿ ಹೊರ ಆವರಣದೊಳಗಣ ಪಾತಾಳಾಂಕಣ, ಧ್ವಜ (ಗರುಡ) ಸ್ತಂಭ, ಕಲ್ಯಾಣಿ ಮುಂತಾದವು ನಿರ್ಮಾಣವಾದವು.

ಯೋಗಾನರಸಿಂಹ ದೇವಾಲಯ

ನಂಬಿನಾರಾಯಣನ ಗುಡಿಗೆ ವಾಯವ್ಯಕ್ಕೆ ಸುಮಾರು ಒಂದು ಫರ್ಲಾಂಗ್ ದೂರದಲ್ಲಿ ಇರುವ ಬೆಟ್ಟದ ಸಾಲಿನ ಸ್ವಲ್ಪ ಎತ್ತರವಾದ ಪಾದಪ್ರದೇಶದಲ್ಲಿ ಈ ದೇವಾಲಯವು ನಿರ್ಮಿತವಾಗಿದೆ(ನೋಡಿ: ಚಿತ್ರ‑೧೫). ದೇವಾಲಯದ ಪ್ರವೇಶ ದ್ವಾರದ ಬಲಭಾಗದ ಗೋಡೆಯ ಮೇಲಿನ ಕ್ರಿ.ಶ. ೧೧೫೨ ಶಾಸನದಿಂದ

[2] ಈ ದೇವಾಲಯವು ಯಾದವನಾರಾಯಣ ಚತುರ್ವೇದಿಮಂಗಲದಲ್ಲಿ ಚೊಕ್ಕಾಂಡೈ ಪೆರ್ಗಡೆ ಎಂಬುವನಿಂದ ನಿರ್ಮಿತವಾಯಿತೆಂದು ತಿಳಿದು ಬರುತ್ತದೆ. ಶಾಸನಗಳು ಈ ದೇವಾಲಯವನ್ನು ‘ಗುಡ್ಡದ ಮೇಲಿನ ಸಿಂಗಪ್ಪೆರುಮಾಳ್’ ದೇವಾಲಯವೆಂದು ಹೆಸರಿಸಿದೆ.

ದೇವಾಲಯವು ತಳವಿನ್ಯಾಸದಲ್ಲಿ ಗರ್ಭಗೃಹ(೮’x೮’), ಶುಕನಾಸ ಅಥವಾ ಅರ್ಧಮಂಟಪ (೧೫’x೧೪’) ಮತ್ತು ನವರಂಗ/ಗೂಢಮಂಟಪ(೨೯’x೩೮’)ಗಳನ್ನು ಹೊಂದಿದೆ(ಅಂದಾಜಿನ ಅಳತೆಗಳು). ನವರಂಗದ ಮುಂಭಾಗದಲ್ಲಿ ನಾಲ್ಕು ಕಂಬಗಳ ಮುಖಮಂಟಪವಿದೆ. ನವರಂಗದಲ್ಲಿ ನಾಲ್ಕು ಕಂಬಗಳ ನಾಲ್ಕು ಸಾಲುಗಳಿದ್ದು, ಒಟ್ಟು ಹದಿನಾರು ಕಂಬಗಳಿವೆ. ಈ ಕಂಬಗಳು ಹಜಾರವನ್ನು ಉದ್ದವಾದ ಐದು ಅಂಕಣಗಳನ್ನಾಗಿ ವಿಭಜಿಸಿವೆ. ಇವುಗಳಲ್ಲಿ ಇಕ್ಕೆಲದ ಕೊನೆಯ ಅಂಕಣವನ್ನು ಮತ್ತು ಕೊನೆಯ ಕಂಬದ ಸಾಲನ್ನು ಗುಡಿಯ ಇಕ್ಕೆಲಗಳಲ್ಲಿ ಮುಂದುವರಿಸಿ, ಹಿಂಭಾಗದಲ್ಲಿ ಕೂಡಿಸಿ, ಗಡಿಯ ಸುತ್ತಲೂ ಒಂದಂಕಣ ಆಳದ ಪ್ರದಕ್ಷಿಣ ಕೈಸಾಲೆಯನ್ನು ನಿರ್ಮಿಸಿದ್ದಾರೆ(ನೋಡಿ: ಚಿತ್ರ‑೧೬). ನವರಂಗದ ಸುತ್ತಲಿನ ಗೋಡೆ, ಕೈಸಾಲೆಯ ಹಿಂಬದಿಯ ಗೋಡೆಯಾಗಿ ಮುಂದುವರೆದು ಗುಡಿಯನ್ನು ಸುತ್ತಲೂ ಆವರಿಸಿದೆ(೭೦’x೨೯’). ನವರಂಗದ ಮೇಲ್ಛಾವಣಿ, ಪ್ರದಕ್ಷಿಣ ಕೈಸಾಲೆಯ ಛಾವಣಿಯಾಗಿ ಮುಂದುವರಿದಿದೆ. ಗುಡಿಯ ಭಿತ್ತಿಯ ಕಪೋತ ಮತ್ತು ಪ್ರದಕ್ಷಿಣ ಕೈಸಾಲೆಯ ಕಪೋತ ಒಂದೇ ಮಟ್ಟದಲ್ಲಿದ್ದು, ಅವುಗಳ ನಡುವಿನ ಅಂತರ ಬಹಳ ಕಡಿಮೆಯಿದೆ. ಇದರಿಂದಾಗಿ ಗುಡಿಗೆ ಒಂದು ರೀತಿಯ ರಕ್ಷಣೆ ದೊರಕುವುದಾದರೂ, ಗಾಳಿ ಬೆಳಕಿನ ದೃಷ್ಟಿಯಿಂದ ಇದು ಅಷ್ಟು ಉಚಿತವಾದ ವಿನ್ಯಾಸವಲ್ಲ. ಆದರೆ ಈ ರೀತಿಯ ರಚನೆ ಆ ಕಾಲದ ಬಹಳಷ್ಟು ಚೋಳ ನಿರ್ಮಿತ ದೇಗುಲಗಳಲ್ಲಿ ಕಂಡುಬಂದಿದ್ದು, ಈ ರೀತಿಯ ವಿನ್ಯಾಸ ಆ ಕಾಲಕ್ಕೆ ಹಾಗೂ ಅಭಿರುಚಿಗೆ ತಕ್ಕುದಾಗಿತ್ತೆಂಬುದರಲ್ಲಿ ಸಂದೇಹವಿಲ್ಲ.

ಈ ಸಂಬಂಧದಲ್ಲಿ ಚೋಳ ದೇವಾಲಯಗಳ ವಾಸ್ತು ರಚನೆಯ ಕೆಲವು ವಿಶೇಷ ವಿವರಗಳನ್ನು ಹೇಳುವುದು ಸೂಕ್ತ. ಚೋಳ ದೇವಾಲಯಗಳು, ಕೆಲವೊಂದನ್ನು ಬಿಟ್ಟು, ಸಾಧಾರಣವಾಗಿ ನಿರಂಧರ ದೇವಾಲಯಗಳು. ಹೀಗಾಗಿ ಚೋಳ ಶಿಲ್ಪಿಗಳು, ಪ್ರದಕ್ಷಿಣಪಥವಾಗಿ ಗುಡಿಯಸುತ್ತಲೂ ಪ್ರಾಕಾರವನ್ನು ನಿರ್ಮಿಸುವಾಗ ಸಾಕಷ್ಟು ವಿಸ್ತಾರವಾಗಿ ಅಂಗಳವನ್ನು ಉಳಿಸಿ, ಪ್ರದಕ್ಷಿಣೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು (ನಂಬಿನಾರಾಯಣ ಗುಡಿ ಮತ್ತು ಕೃಷ್ಣ ದೇವಾಲಯ, ತೊಣ್ಣೂರು). ಸ್ಥಳಾವಕಾಶ ಕಡಿಮೆಯಿದ್ದರೆ, ಮಾಲಿಕಾ ಅಥವಾ ಪ್ರಾಕಾರಮಂಟಪವನ್ನು ಗುಡಿಗೆ ತೀರ ಸಮೀಪ ನಿರ್ಮಿಸಿ, ಗಾಳಿ ಬೆಳಕಿಗಾಗಿ ಸ್ವಲ್ಪಮಾತ್ರ ಅಂತರವನ್ನು ಉಳಿಸಿ ನಿರ್ಮಿಸುತ್ತಿದ್ದರು. ಈ ರೀತಿಯ ನಿರ್ಮಾಣಗಳು ಆಗ್ನೇಯ ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ.

ನವರಂಗದ ನಿರ್ಮಾಣವೂ ಸಹ ಚೋಳ ದೇವಾಲಯಗಳಲ್ಲಿ ಬೇರೆ ರೀತಿಯಾಗಿ ಇರುತ್ತದೆ. ಮೂಲ ದೇಗುಲವೆಂದರೆ ಗರ್ಭಗೃಹ, ಅಂತರಾಳ (ಐಚ್ಛಿಕ) ಅಥವಾ ಅರ್ಧಮಂಟಪ ಇವಿಷ್ಟೆ. ಪ್ರದಕ್ಷಿಣಪಥ ಸಾಮಾನ್ಯವಾಗಿ ಹೊರಾವರಣವೇ ಆಗಿರುತ್ತದೆ. ಅರ್ಧಮಂಟಪ ವೆನ್ನುವುದು ಗರ್ಭಗೃಹದಷ್ಟೇ ಅಥವಾ ಸ್ವಲ್ಪ ಕಡಿಮೆ ಅಗಲವಾಗಿ ಮತ್ತು ಇನ್ನೂ ಹೆಚ್ಚು ಉದ್ದವಾಗಿ ಇರುವ ಸಣ್ಣ ಹಜಾರ. ಇದರಲ್ಲಿ ಕಂಬಗಳಿರುವುದಿಲ್ಲ. ಮುಂಭಾಗದಲ್ಲಿ ದ್ವಾರವಿರುತ್ತದೆ. ಇದೇ ದೇಗುಲದ ಹಜಾರವೂ ಸಹ. ಅರ್ಧಮಂಟಪಕ್ಕಾಗಲಿ, ಅಥವಾ ಅಂತರಾಳವಿದ್ದರೆ ಅದಕ್ಕಾಗಲಿ ಜಾಲಂಧ್ರಗಳಿರುವುದಿಲ್ಲ. ಇವು ತೀರಾ ಕಿರಿದಾದ ಹಜಾರಗಳಾಗಿರುವುದರಿಂದ ಇವುಗಳಿಗೆ ಮುಖ್ಯದ್ವಾರದಿಂದಲೆ ಗಾಳಿ ಬೆಳಕುಗಳ ಪ್ರವೇಶ.

ಅರ್ಧಮಂಟಪದ ಮುಂಭಾಗದಲ್ಲಿ, ಅದಕ್ಕೆ ಹೊಂದಿಕೊಂಡಂತೆ ಅಥವಾ ಸ್ವಲ್ಪ ಅಂತರದಲ್ಲಿ, ದೇವಾಲಯದ ಅಕ್ಷರೇಖೆಗೆ ಅಡ್ಡಲಾಗಿ, ವಿಶಾಲವಾದ, ಕಂಬಗಳನ್ನು ಹೊಂದಿರುವ ಒಂದು ಮಂಟಪವನ್ನು ಕಟ್ಟುತ್ತಾರೆ. ಇದಕ್ಕೆ ಗೂಢಮಂಟಪವೆನ್ನುತ್ತಾರೆ. ಕಾರಣ, ಇದು ಸುತ್ತಲೂ ಗೋಡೆಯಿಂದ ಆವೃತವಾಗಿರುತ್ತದೆ. ಇದರ ಮುಂದಿನ ಗೋಡೆಯಲ್ಲಿ ದೇವಾಲಯದ ಪ್ರವೇಶದ್ವಾರ ಹಾಗೂ ಮುಖಮಂಟಪವಿರುತ್ತದೆ. ಪಾರ್ಶ್ವದ ಗೋಡೆಗಳು ದೇವಾಲಯದ ಇಕ್ಕೆಲಗಳಲ್ಲಿ ಮುಂದುವರೆದು ಗುಡಿಯ ಹಿಂಭಾಗದಲ್ಲಿ ಕೂಡಿಕೊಳ್ಳುತ್ತವೆ, ಹಾಗೆಯೇ ಗುಡಿಗೆ ಆಯತಾಕಾರದ ಪ್ರಾಕಾರವನ್ನು ಒದಗಿಸುತ್ತದೆ. ಪ್ರಾಕಾರಗೋಡೆಯ ಒಳಮುಖದಲ್ಲಿ  ಅದಕ್ಕೆ ಸೇರಿಕೊಂಡಂತೆ ಮುಂದೆ ಕಂಬಗಳ ಸಾಲಿರುವ ಕೈಸಾಲೆಯಿರುತ್ತದೆ. ಇದನ್ನು ಮಾಲಿಕಾ ಅಥವಾ ಆವೃತಮಂಟಪವೆನ್ನುತ್ತಾರೆ. ಈ ಕೈಸಾಲೆಯು ಒಂದಂಕಣ ಅಥವಾ ಎರಡಂಕಣ ಆಳದ ಕೈಸಾಲೆಯಾಗಿರಬಹುದು. ಈ ಕೈಸಾಲೆ ಗೂಢಮಂಟಪದ ಹೊರಸುತ್ತಿನ ಅಂಕಣದ ಮುಂದುವರಿಕೆಯೆ ಆಗಿರುತ್ತದೆ. ಪ್ರದಕ್ಷಿಣ ಕೈಸಾಲೆ ಗುಡಿಗೆ ತೀರಾ ಸಮೀಪವಾಗಿ ನಿರ್ಮಿತವಾಗಿದ್ದರೆ, ಗೂಢಮಂಟಪ ಮತ್ತು ಪ್ರದಕ್ಷಿಣ ಕೈಸಾಲೆಯು ಒಂದೇ ವಾಸ್ತು ನಿರ್ಮಾಣವಾಗಿ ಕೂಡಿಕೊಂಡಿರುತ್ತವೆ. ಇವುಗಳ ನೆಲಮಟ್ಟವೂ ಒಂದೇ ಆಗಿದ್ದು, ಗೂಢಮಂಟಪದ ನೆಲದ ಮುಂದುವರಿದ ಭಾಗವೇ ಆಗಿರುತ್ತದೆ. ಇದರ ಛಾವಣಿಯೂ ಸಹ ಗುಡಿಯ ಛಾವಣಿಗೆ ಅತಿ ಸಮೀಪವಾಗಿರುವುದರಿಂದ ಬಿಸಿಲು ಮಳೆಯಿಂದ ರಕ್ಷಣೆ ಇರುತ್ತದೆ. ಆದರೆ ಯಾವುದೇ ಕಾರಣಕ್ಕೂ ಪ್ರದಕ್ಷಿಣ ಕೈಸಾಲೆಯ ಅಧಿಷ್ಠಾನ ಮತ್ತು ಮೂಲಗುಡಿಯ ಅಧಿಷ್ಠಾನ ಕೂಡಿಕೊಂಡಿರುವುದಿಲ್ಲ. ಅವೆರಡು ಎಷ್ಟೇ ಸಮೀಪವಿದ್ದರೂ, ಎರಡಕ್ಕೂ ಪ್ರತ್ಯೇಕವಾದ ಅಧಿಷ್ಠಾನಗಳನ್ನೇ ಕಟ್ಟಿರುತ್ತಾರೆ.

ಒಂದು ಪಕ್ಷ ಗುಡಿಯ ಸುತ್ತಲೂ ಅಂಗಳವನ್ನು ಉಳಿಸಿ ಪ್ರಾಕಾರ ಮತ್ತು ಅದರ ಒಳ ಕೈಸಾಲೆ ಮಂಟಪವನ್ನು ನಿರ್ಮಿಸಿದ್ದರೆ, ಗೂಢಮಂಟಪದ ಒಳ ಕೈಸಾಲೆ ಹಾಗೂ ಅಂಗಳವನ್ನು ಬೇರ್ಪಡಿಸುವ ಗೋಡೆಯನ್ನು ನಿರ್ಮಿಸಿ, ಗೂಢಮಂಟಪದಿಂದ ಅಂಗಳಕ್ಕೆ, ಪ್ರವೇಶದ್ವಾರವನ್ನು ಗುಡಿಯ ಇಕ್ಕೆಲಗಳಲ್ಲೂ ನಿರ್ಮಿಸಿರುತ್ತಾರೆ(ನಂಬಿನಾರಾಯಣ ಗುಡಿ). ಅಂತಹ ಸಂದರ್ಭಗಳಲ್ಲಿ, ಗೂಢಮಂಟಪವು ಸಂಪೂರ್ಣವಾಗಿ ಮುಚ್ಚಿದ ನವರಂಗ/ಹಜಾರವೆನಿಸುತ್ತದೆ. ದೇವಾಲಯದ ಅಕ್ಷರೇಖೆಯ ಮೇಲೆ ಮುಖ್ಯದ್ವಾರ ಹಾಗೂ ಗುಡಿಯ ಇಕ್ಕೆಲಗಳ ಅಂಗಳಕ್ಕೆ ಪ್ರವೇಶದ್ವಾರಗಳಿರುತ್ತವೆ. ಈ ಲಕ್ಷಣದ ವಾಸ್ತು ರೂಪಗಳು ಚೋಳಾಕ್ರಮಿತ ಅಥವಾ ಚೋಳಶೈಲಿ ಪ್ರಭಾವಿತ ಕರ್ನಾಟಕದ ಪ್ರದೇಶಗಳಲ್ಲಿ ವಿಫುಲ ಸಂಖ್ಯೆಯಲ್ಲಿ ದೊರೆತಿವೆ.

ಕರ್ನಾಟಕದಲ್ಲಿನ ಚೋಳದೇವಾಲಯಗಳ ಕೆಲವು ವಿಶೇಷ ಲಕ್ಷಣಗಳ ಪರಿಚಯದ ನಂತರ ಮತ್ತೆ ಯೋಗಾನರಸಿಂಹ ದೇಗುಲದ ವಿವರಣೆಗೆ ಬರೋಣ. ಪ್ರಸ್ತುತ ದೇವಾಲಯದ ಗರ್ಭಗೃಹ ಚತುರಶ್ರಾಕಾರದ ಕೊಠಡಿ. ಮಧ್ಯಭಾಗದಲ್ಲಿ ಎತ್ತರವಾದ ಪೀಠದಮೇಲೆ ಯೋಗಾನರಸಿಂಹನ ಆಸೀನಮೂರ್ತಿ ಪ್ರತಿಷ್ಠಿಸಲಾಗಿದೆ. ವಿಗ್ರಹದ ಎತ್ತರ ಸುಮಾರು ನಾಲ್ಕು ಅಡಿಗಳು. ಇದು ರಾಮಾನುಜಾಚಾರ್ಯರ ಪ್ರತಿಷ್ಠೆ ಎಂದು ಪ್ರತೀತಿ. ಇದ್ದರೂ ಇರಬಹುದು. ಏಕೆಂದರೆ  ಈ ದೇವಾಲಯದ ಅತ್ಯಂತ ಪ್ರಾಚೀನ ಶಾಸನ ಕ್ರಿ.ಶ. ೧೧೫೨ರದು. ಇದು ದೇವಾಲಯದ ಮಹಾದ್ವಾರದ ಪಕ್ಕದಲ್ಲಿ, ಗೂಢಮಂಟಪದ ಹೊರಗೋಡೆಯ ಮೇಲಿದೆ. ಶಾಸನದ ಪ್ರಕಾರ ಚೊಕ್ಕಾಂಡೈ ಪೆರ್ಗಡೆ ನಿರ್ಮಿಸಿದ್ದ ಈ ನರಸಿಂಹ ದೇಗುಲಕ್ಕೆ  ಕ್ರಿ.ಶ. ೧೧೫೨ರಲ್ಲಿ ದಾನ ನೀಡಲಾಯಿತೆಂದು ತಿಳಿದು ಬರುತ್ತದೆ. ಆದ್ದರಿಂದ ಕ್ರಿ.ಶ. ೧೧೫೨ಕ್ಕೆ ಮುಂಚೆ ರಾಮಾನುಜ ಪ್ರತಿಷ್ಠೆಯೆನಿಸಿದ ಈ ಗುಡಿ ಇಲ್ಲಿದ್ದಿರಬೇಕು. ಅಲ್ಲದೇ ಈ ಗುಡಿಯಲ್ಲೇ ಇರುವ ಮತ್ತೊಂದು ಪ್ರಬಲ ಆಧಾರವೆಂದರೆ ಗೂಢಮಂಟಪದ ಈಶಾನ್ಯ ಮೂಲೆಯಲ್ಲಿನ ಒಂದು ಕೊಠಡಿಯಲ್ಲಿನ ಒಂದು ಕೋಷ್ಟದಲ್ಲಿ ರಾಮಾನುಜಾಚಾರ್ಯರ ಆಸೀನ ಮೂರ್ತಿಯಿದೆ(ನೋಡಿ: ಚಿತ್ರ‑೧೭). ಇದು ಗಾರೆಗಚ್ಚಿನ ಶಿಲ್ಪ. ರಾಮಾನುಜರು ಏಳು ಹೆಡೆಗಳ ವಾಸುಕಿಯ ಅಡಿಯಲ್ಲಿ ವ್ಯಾಖ್ಯಾನ ಮುದ್ರೆಯಲ್ಲಿ, ಪದ್ಮಾಸನಾಸೀನರಾಗಿ ಕುಳಿತಿರುವಂತೆ ಚಿತ್ರಿಸಲಾಗಿದೆ. ಏನೇ ಆಗಲಿ ನರಸಿಂಹನ ಮೂರ್ತಿ ಮಾತ್ರ ಮೂಲ ಚೋಳ ಶಿಲ್ಪವಾಗಿದೆ. ಯೋಗಾನರಸಿಂಹನು ಚತುರ್ಬಾಹುವಾಗಿದ್ದಾನೆ. ಮೇಲಿನ ಬಲಗೈ ಚಕ್ರವನ್ನು ಮತ್ತು ಎಡಗೈ ಶಂಖವನ್ನು ಹಿಡಿದಿದೆ. ಈ ಲಾಂಛನಗಳು ಬಹಳ ಪ್ರಧಾನವಾಗಿ ಕಾಣುವಂತೆ ಚಿತ್ರಿಸಲಾಗಿದೆ. ಎರಡೂ ಕೈಗಳು ನೇರವಾಗಿ, ಯೋಗಪಟ್ಟದಿಂದ ಬಂಧಿಸಿರುವ ಎತ್ತಿದ ಮಂಡಿಗಳ ಆಸರೆಯ ಮೇಲೆ ಇವೆ. ಶಿಲ್ಪಕ್ಕೆ ಎತ್ತರವಾದ ಹಾಗೂ ಚೂಪಾದ ಕಿರೀಟವಿದೆ. ಕರಂಡ ಮುಕುಟ ವಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಅದೇ ರೀತಿಯಿದೆ. ಶಂಖ ಚಕ್ರಗಳನ್ನೂ, ಮೂರ್ತಿಯ ಕಿವಿಗಳ ಭಾಗವನ್ನೂ ಕೂಡಿಸುವಂತೆ, ಬಾಗಿದ  ‘ಪ್ರಭಾವಳಿ’ಯಾಕಾರದ ಆಧಾರ ಪಟ್ಟಿಯನ್ನು ಕಡೆಯಲಾಗಿದೆ. ಶಿಲ್ಪದ ಕಂಡರಣೆಯಲ್ಲಿ ಚೋಳ ಶಿಲ್ಪ ಲಕ್ಷಣಗಳು ಪ್ರಧಾನವಾಗಿದ್ದರೂ ಅಲಂಕರಣೆಯ ದೃಷ್ಟಿಯಿಂದ ನೋಡಿದಾಗ, ಅಲಂಕರಣೆಯು ಸ್ವಲ್ಪ ಹೆಚ್ಚೆನಿಸುವುದು. ಕಿರೀಟದ, ಲಾಂಛನಗಳ, ಆಭರಣಗಳ, ಯೋಗಪಟ್ಟಿಯ ಕೆತ್ತನೆಯಲ್ಲಿ ಸೂಕ್ಷ್ಮತೆಯಿದೆ ಹಾಗೂ ವಿವರಗಳು ವಿಫುಲವಾಗಿವೆ. ಮುಖ ಸಿಂಹದ್ದಾದರೂ ಭಯಂಕರವೆನಿಸುವುದಿಲ್ಲ. ಈ ಲಕ್ಷಣಗಳು ಹೊಯ್ಸಳ ಶಿಲ್ಪ ಶೈಲಿಯ ಲಕ್ಷಣಗಳನ್ನು ನೆನಪಿಸುತ್ತವೆ.

ಗರ್ಭಗೃಹ ಮತ್ತು ಅರ್ಧಮಂಟಪದ ಒಳಭಾಗದಲ್ಲಿ ಯಾವುದೇ ವಾಸ್ತು ವಿಶೇಷತೆಯಿಲ್ಲ. ಅರ್ಧಮಂಟಪದ ಬಾಗಿಲುವಾಡ ಸಾಧಾರಣ ರೀತಿಯ ಮಿತಾಲಂಕರಣದ ಕೃತಿ. ಗೂಢಮಂಟಪ ಸ್ವಲ್ಪ ತಗ್ಗಾದ ಹಜಾರ. ಇಲ್ಲಿನ ಕಂಬಗಳ ದಿಂಡಿನ ಎತ್ತರ ಸುಮಾರು ಆರು ಅಡಿಗಳು. ಪ್ರದಕ್ಷಿಣ ಕೈಸಾಲೆಯವೂ ಸೇರಿದಂತೆ ಇಲ್ಲಿ ಒಟ್ಟು ಇಪ್ಪತ್ತಾರು ಕಂಬಗಳಿವೆ. ಎಲ್ಲವೂ ಒಂದೇ ರೀತಿಯ ರಚನೆಯನ್ನು ಹೊಂದಿವೆ. ಯಾವುದಕ್ಕೂ ಪೀಠವಿಲ್ಲ. ದಿಂಡನ್ನು ನೇರವಾಗಿ ನೆಲದ ಚಪ್ಪಡಿಗಳ ಮೇಲೆ ಕೂರಿಸಲಾಗಿದೆ. ಚೌಕಟ್ಟಾದ ಬುಡ, ಮೇಲೆ ಅತಿ ಸ್ವಲ್ಪ ಮಾತ್ರ ಅಷ್ಟಮುಖ, ನಂತರ ಪೂರ್ತಿಯಾಗಿ ಉರುಳೆ ದಿಂಡು. ಈ ರೀತಿ ದಿಂಡನ್ನುಳ್ಳ ಕಂಬಗಳನ್ನು ವಾಸ್ತು ಗ್ರಂಥಗಳಲ್ಲಿ ನಿರವಯವ ‘ಶುಂಡುಪಾದ’[3] ಸ್ತಂಭಗಳೆಂದು ಕರೆದಿದ್ದಾರೆ. ನೇರವಾಗಿ ದುಂಡಾಗಿ ಈ ಕಂಬದ ದಿಂಡು ಇರುವುದರಿಂದ ಇದಕ್ಕೆ ಈ ಹೆಸರು. ದಿಂಡಿನ ಮೇಲೆ ಚೋಳ ರೀತಿಯ ಆಧಾರ ಪೋತಿಕೆಗಳನ್ನು ಕಾಣಬಹುದು. ಪೋತಿಕೆಯ ಎರಡೂ ಚಾಚುಗಳ ಕೆಳಭಾಗ ಓರೆಯಾಗಿ ಕತ್ತರಿಸಿ, ಮಧ್ಯದಲ್ಲಿ ಚೌಕ-ಗುಬುಟನ್ನು ಉಳಿಸಲಾಗಿದೆ. ಸ್ವಲ್ಪ ಅಲಂಕರಣೆಗಾಗಿ ಸಣ್ಣ ಪುಟ್ಟ ಪಟ್ಟಿಗಳನ್ನು ಕೊರೆಯಲಾಗಿದೆ. ಪೋತಿಕೆಗಳ ಮೇಲೆ ತೊಲೆ (ಉತ್ತರಾ) ಮತ್ತು ಅದರ ಮೇಲೆ ಛಾವಣಿ (ವಿತಾನ) ಇದೆ. ಛಾವಣಿ ಸಮತಟ್ಟದ್ದಾಗಿದೆ. ತೊಲೆಯ ಇಕ್ಕೆಲಗಳಲ್ಲಿ ಸಣ್ಣಸಣ್ಣ ವಾಜನಗಳ (ಪಟ್ಟಿಗಳ) ಅಲಂಕರಣವಿದೆ.

ಏರುವಿನ್ಯಾಸದಲ್ಲಿ ಮೂಲ ಗುಡಿಯನ್ನು ಪಾದಬಂಧ ಅಧಿಷ್ಠಾನದ ಮೇಲೆ ನಿರ್ಮಿಸಿದ್ದಾರೆ(ನೋಡಿ: ಚಿತ್ರ‑೧೮). ಅಧಿಷ್ಠಾನದಲ್ಲಿ ಉಪಾನ, ಜಗತಿ, ತ್ರಿಪಟ್ಟಕುಮುದ, ಗಳ, ಮಹಾಪಟ್ಟಿ(ಪಟ್ಟಿಕಾ), ಗಳ ಮತ್ತು ಪ್ರತಿಗಳಿವೆ. ಅಧಿಷ್ಠಾನದಲ್ಲಿ ಮಹಾಪಟ್ಟಿಯ ಮೇಲೆ ಮತ್ತು ಕೆಳಗೆ ಒಂದೊಂದು ಗಳವನ್ನು ನೀಡುವ ಸಂಪ್ರದಾಯ, ಚೋಳ ವಾಸ್ತುವಿನಲ್ಲಿ ೧೨ನೆಯ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಗುವ ಒಂದು ಲಕ್ಷಣ. ಈ ರೀತಿಯ ಗಳದ್ವಯ ನಂಬಿನಾರಾಯಣನ ಗುಡಿಯ ಪಾರ್ಶ್ವದ ಶ್ರೀಲಕ್ಷ್ಮಿದೇವಿಯ ಗುಡಿಯಲ್ಲಿ ಕಾಣಬರದಿರುವುದು ಗಮನಾರ್ಹ.

ಗೂಢಮಂಟಪದ ಏರು ವಿನ್ಯಾಸ ತಿಳಿಯುವುದಕ್ಕೆ ಸಾಧ್ಯವಿಲ್ಲ. ಕಾರಣ ಇದು ಸುತ್ತಲೂ ಪ್ರಾಕಾರದ ಗೋಡೆಯಿಂದ ಆವೃತವಾಗಿದೆ. ಪ್ರದಕ್ಷಿಣ ಕೈಸಾಲೆಯನ್ನು ಮಾತ್ರ ಸಾಧಾರಣ ಮಂಚಬಂಧ ಉಪಪೀಠದ ಮೇಲೆ ನಿರ್ಮಿಸಿದ್ದಾರೆ. ಇದೂ ಅರ್ಧಂಬರ್ಧ ಮುಚ್ಚಿ ಹೋಗಿದೆ. ಈ ಕೈಸಾಲೆಯ ಕಪೋತ ಅತೀ ಸಾಧಾರಣವಾದ ಮುಂಚಾಚಿತ ಚಪ್ಪಡಿ ಅಷ್ಟೆ.

ಅಧಿಷ್ಠಾನದ ಕೆತ್ತನೆಯಲ್ಲಿ ಸ್ಪಷ್ಟತೆ ಮತ್ತು ನಿಖರತೆ ಎದ್ದು ಕಾಣುತ್ತದೆ. ಅಚ್ಚುಕಟ್ಟಾಗಿ ನಿರ್ಮಿತವಾಗಿರುವ ಗುಡಿಯ ಭಿತ್ತಿಯ ಹೊರ ಅಂಚು ನೇರವಾಗಿದ್ದು, ಗರ್ಭಗೃಹ ಮತ್ತು ಅರ್ಧಮಂಟಪ ಕೂಡುವ ಜಾಗದಲ್ಲಿ ಸ್ವಲ್ಪ ಭಾಗ ಮಾತ್ರ ಹಿನ್‌ಸರಿದಿದೆ. ಭಿತ್ತಿಯ ಅಲಂಕರಣೆಯಲ್ಲಿ ನಿರ್ದಿಷ್ಟ ಅಂತರಗಳಲ್ಲಿ ಭಿತ್ತಿಪಾದಗಳಿವೆ. ಭಿತ್ತಿಪಾದಗಳು ಚೋಳ ಸಂಪ್ರದಾಯದ್ದಾಗಿದೆ. ಚೌಕಟ್ಟಾದ (ಬ್ರಹ್ಮಕಾಂತ) ದಿಂಡು, ಮೇಲೆ ‘ದಾನಿ’, ಕುಂಭ, ಮಂಡಿ, ಫಲಕ ಮತ್ತು ಪೋತಿಕಾ ಇವಿಷ್ಟೂ ಇವೆ. ದಿಂಡಿನ ಮೇಲಿನ ‘ದಾನಿ’ಯ ಅಲಂಕರಣ ಈ ಮೊದಲು ನಂಬಿನಾರಾಯಣನ ಗುಡಿಯ ವಿವರಣೆಯಲ್ಲಿ ಉಲ್ಲೇಖಿಸಿದಂತೆ ಚೋಳ ವಾಸ್ತು ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ.

ಗರ್ಭಗೃಹದ ಭಿತ್ತಿಯ ಮೂರು ಹೊರಮುಖಗಳ ಮಧ್ಯದಲ್ಲಿ ಮತ್ತು ಅರ್ಧಮಂಟಪದ ಎರಡೂ ಪಾರ್ಶ್ವ ಭಿತ್ತಿಗಳ ಮಧ್ಯದಲ್ಲಿ ಒಂದೊಂದು ಕೋಷ್ಟಗಳಿವೆ. ಕೋಷ್ಟಗಳು ಖಾಲಿಯಿದ್ದರೂ, ಅವುಗಳ ವಾಸ್ತು ಚೌಕಟ್ಟಿನ ಅಲಂಕರಣೆ ಗಮನಾರ್ಹವಾದದ್ದು(ನೋಡಿ: ಚಿತ್ರ‑೧೯). ಪ್ರತಿಯೊಂದು ಕೋಷ್ಟದ ಇಕ್ಕೆಲಗಳಲ್ಲಿ ಚೋಳ ರೀತಿಯ ಸೀಳು ಕಂಬಗಳು ಅವುಗಳ ಮೇಲೆ ಉತ್ತರಾ, ಕಪೋತ, ವಾಜನ, ಕೂಟ ಶಿಖರ ಮತ್ತು ಸ್ತೂಪಿಗಳಿವೆ. ಇವಿಷ್ಟನ್ನೂ ಬಹಳ ಅಚ್ಚುಕಟ್ಟಾಗಿ, ಪ್ರಮಾಣಬದ್ಧವಾಗಿ, ನಿಖರವಾಗಿ ಕೆತ್ತನೆ ಮಾಡಿದ್ದಾರೆ. ಕಪೋತಗಳಿಗೆ  ನಾಸಿಗಳಿದ್ದರೂ ಅವುಗಳಿಗೆ ಹೆಚ್ಚಿನ ಅಲಂಕರಣವಿಲ್ಲ. ಕೋಷ್ಠಗಳು ಆಳವಾಗಿವೆ ಮತ್ತು ಅವುಗಳ ನೆಲ ಭಾಗದಲ್ಲಿ ಸಣ್ಣದಾದ ಉಬ್ಬು ಪೀಠಗಳಿವೆ. ಇವು, ಈ ಕೋಷ್ಟಗಳಲ್ಲಿ ಮೂಲತಃ ಶಿಲ್ಪಗಳು ಇದ್ದುವೆಂದು ಸೂಚಿಸುತ್ತವೆ. ಆದರೆ ಅವುಗಳಾವುವು ಈಗ ಕಾಣಬರುವುದಿಲ್ಲ.

ಕೋಷ್ಟಾಲಂಕರಣದ ಜೊತೆಗೆ, ಭಿತ್ತಿಯಲ್ಲಿ ಸ್ತಂಭಪಂಜರಾಲಂಕರಣವೂ ಇರುವುದು ಇಲ್ಲಿಯ ವೈಶಿಷ್ಟ್ಯ(ನೋಡಿ: ಚಿತ್ರ‑೨೦). ಭಿತ್ತಿಯ ಹೊರ ಮಾನಸೂತ್ರದಲ್ಲಿ, ಗರ್ಭಗೃಹ ಮತ್ತು ಅರ್ಧಮಂಟಪದ ನಡುವೆ ಸ್ವಲ್ಪ ಭಾಗಕ್ಕೆ ಹಿನ್‌ಸರಿತವಿದೆ ಎಂಬುದನ್ನು ಆಗಲೇ ಪ್ರಸ್ತಾಪಿಸಿದೆ. ಈ ಭಾಗದಲ್ಲಿ ಒಂದೊಂದು ಸ್ತಂಭಪಂಜರಾಲಂಕರಣವಿದೆ. ಸ್ತಂಭಪಂಜರ, ಒಂದು ರೀತಿಯ ವಾಸ್ತ್ವಾಧಾರಿತ ಅಲಂಕರಣ. ಭಿತ್ತಿಯ ಅಲಂಕರಣೆಯಲ್ಲಿ ಇದರ ಉಪಯೋಗ ವಿಶೇಷವಾಗಿ ಕಾಣಬರುತ್ತದೆ. ಈ ಅಲಂಕರಣೆಯಲ್ಲಿ ಒಂದು ಭಿತ್ತಿಪಾದ, ಅದರ ಮೇಲೆ ಕುಂಭ, ಮಂಡಿ, ಫಲಕವಿರುತ್ತದೆ. ಫಲಕದ ಮೇಲೆ, ಆಳವಾದ ಗ್ರೀವದಿಂದ ಬೇರ್ಪಟ್ಟು ಕಪೋತ, ಮತ್ತು ಅದರ ಮೇಲೆ ಸೂಕ್ತ ರೀತಿಯ ಷಡ್ವರ್ಗ ಸಹಿತವಾದ (ಅಧಿಷ್ಠಾನ, ಭಿತ್ತಿ, ಪ್ರಸ್ತರ, ಗ್ರೀವ, ಶಿಖರ ಮತ್ತು ಸ್ತೂಪಿ) ಚಿಕಣಿ ವಾಸ್ತು ಮಾದರಿ ಇರುತ್ತದೆ. ಈ ಮಾದರಿಯ ಅಲಂಕರಣವನ್ನು ವಿಶೇಷವಾಗಿ ಕಲ್ಯಾಣ ಚಾಳುಕ್ಯ ಮತ್ತು ಹೊಯ್ಸಳ ಶಿಲ್ಪಿಗಳು ಬಳಸುತ್ತಿದ್ದರು. ಇದಕ್ಕೆ ಸಮಾನಾಂತರವಾಗಿ ಚೋಳ ಶಿಲ್ಪಿಗಳು ಇದೇ ರೀತಿಯ ಆದರೆ ಸ್ವಲ್ಪ ವಿಭಿನ್ನವಾದ ಅಲಂಕರಣ ಮಾದರಿಯನ್ನು ಬಳಸಿದರು. ಅದೇ ಕುಂಭಪಂಜರ. ಕುಂಭಪಂಜರದಲ್ಲಿ ಕಾಣಬರುವ ಅವಯವಗಳೆಂದರೆ ಪೀಠ, ಪೀಠದ ಮೇಲೆ ಬೃಹತ್ತಾದ, ಸಾಲಂಕೃತ ಕುಂಭ, ಕುಂಭದ ಬಾಯಿಂದ ಮೇಲೇರುವ ಸ್ತಂಭ ಮತ್ತು ಬಾಯಿಂದ ಹೊರಬಂದು ಕುಂಭದ  ಪಾರ್ಶ್ವಗಳಲ್ಲಿ ಹರಡಿರುವ ಲತಾಲಂಕರಣ, ಸ್ತಂಭದ ಮೇಲ್ತುದಿಯಲ್ಲಿ ಕುಂಭ, ಮಂಡಿ, ಫಲಕ, ಕಪೋತ ಮತ್ತು ಅದರ ಮೇಲೆ ಷಡ್ವರ್ಗ ಸಹಿತವಾದ ಶಾಲ, ಕೂಟ ಅಥವಾ ಪಂಜರ ಚಿಕಣಿ ವಾಸ್ತು ಮಾದರಿ. ಇದು ಚೋಳ ಮಾದರಿಯ ಕುಂಭಪಂಜರಾಲಂಕರಣ. ಪ್ರಾರಂಭಿಕ ಕಾಲದ ಚೋಳ ದೇವಾಲಯಗಳಲ್ಲಿ ಇವು ಕಾಣಬರುವುದಿಲ್ಲ. ಕ್ರಿ.ಶ. ೧೨ನೆಯ ಶತಮಾನದ ಚೋಳ ನಿರ್ಮಾಣಗಳಲ್ಲಿ ಇವು ಪ್ರಾರಂಭವಾಗಿ ನಂತರ ಪ್ರವರ್ಧಮಾನವಾದ, ಆಕರ್ಷಕ ವಾಸ್ತು ಅಲಂಕರಣವಾಗಿ ಕಾಣಬರುತ್ತವೆ. ಇದಕ್ಕೆ ಸಮಾನವಾಗಿ ಕರ್ನಾಟಕದಲ್ಲಿ ಕಲ್ಯಾಣ ಚಾಳುಕ್ಯ, ಹೊಯ್ಸಳ ವಾಸ್ತು ಕೃತಿಗಳಲ್ಲಿ ಸ್ತಂಭಪಂಜರಾಲಂಕರಣ ಕಾಣಬರುತ್ತದೆ. ಹೊಯ್ಸಳ ಶಿಲ್ಪಿಗಳು ಕುಂಭಪಂಜರಾಲಂಕರಣವನ್ನು ಬಳಸಲಿಲ್ಲ, ಚೋಳ ಶಿಲ್ಪಿಗಳು ಸ್ತಂಭಪಂಜರಾಲಂಕರಣ ವನ್ನು ಬಳಸಲಿಲ್ಲ. ಇದು ಗಮನಿಸಬೇಕಾದ ಅಂಶ. ಈ ಅಲಂಕರಣ ಮಾದರಿಯನ್ನು ಯಾರು ಯಾರಿಂದ ಕಲಿತರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಇವೆರಡೂ ಒಂದೇ ಸೈದ್ಧಾಂತಿಕ ಮೂಲತತ್ವವೊಂದರ ಸಾಂಕೇತಿಕ ದೃಶ್ಯ ನಿರೂಪಣೆ ಎಂಬುದಂತೂ ಸತ್ಯ.

ಕುಂಭ-ಸ್ತಂಭ ಪಂಜರಗಳ ನಡುವಣ ವ್ಯತ್ಯಾಸ ಕೇವಲ ಕುಂಭದ ಉಪಸ್ಥಿತಿ- ಅನುಪಸ್ಥಿತಿ ಮಾತ್ರ. ಉಳಿದಂತೆ ಇವೆರಡೂ, ಅಲ್ಪ-ಸ್ವಲ್ಪ ವ್ಯತ್ಯಾಸಗಳನ್ನು ಬಿಟ್ಟರೆ, ಅಂದಿನ ಶಿಲ್ಪಿಗಳು ದೃಢವಾಗಿ ನಂಬಿದ್ದ ಮೂಲ ಮೌಲ್ಯವೊಂದರ ಸಾಂಕೇತಿಕ ನಿರೂಪಣೆ. ಬಾಣಭಟ್ಟನ ಹರ್ಷಚರಿತೆ ಕೃತಿಯಲ್ಲಿ ಮೊದಲಿಗೆ ಕಾಣಿಸಿ, ನಂತರದ ಕಲ್ಯಾಣ ಚಾಳುಕ್ಯ ಮತ್ತು ಹೊಯ್ಸಳ ಶಾಸನಗಳಲ್ಲಿ ವಿಪರೀತವಾಗಿ ಕಾಣಬರುವ ಪ್ರಾರ್ಥನಾ ಶ್ಲೋಕ ಇಲ್ಲಿ ನಿರೂಪಣಾರ್ಹ.

ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ |
ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ ||

ನಮಸ್ತಾಮ್ರ ಜಟಾಜಾಳ ಬಾಳ ಚಂದ್ರಾರ್ಧಧಾರಿಣೇ |
ಬ್ರಹ್ಮಾಂಡ ಮಂಡಪಾರಂಭ ಪೂರ್ಣಕುಂಭಾಯ ಶಂಭವೇ[4] ||

ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ |
ಸಂಕಲ್ಪ ಸಂಫಲ ಬ್ರಹ್ಮಸ್ತಂಭಾರಂಭಾಯ ಶಂಭವೇ[5] ||

ನಮಸ್ತಾಮ್ರ ಜಟಾಜಾಳ ಬಾಳ ಪಲ್ಲವಶಾಲಿನೇ |
ತ್ರೈಲೋಕ್ಯ ನಗರಾರಂಭ ಪೂರ್ಣಕುಂಭಾಯ ಶಂಭವೇ[6] ||

ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ |
ಬ್ರಹ್ಮಾಂಡ ಮಂಡಪಾರಂಭ ಪೂರ್ಣಕುಂಭಾಯ ಶಂಭವೇ ||

ಈ ಎಲ್ಲ ಶ್ಲೋಕಗಳ ಮೊದಲ ಪಾದದ ಅರ್ಥ ಒಂದೇ ಆದರೂ, ಎರಡನೆಯ ಪಾದದ ವಿವಿಧ ಪಾಠಗಳ ಅರ್ಥ ಇಲ್ಲಿ ಗಮನಾರ್ಹ. “ಮೂರುಲೋಕಗಳೆಂಬ ನಗರಗಳಿಗೆ ಮೂಲಸ್ತಂಭದಂತಿರುವ ಶಿವನಿಗೆ ನಮಸ್ಕಾರ” “ಬ್ರಹ್ಮಾಂಡವೆಂಬ ಮಂಟಪದ ಆರಂಭಕ್ಕೆ ಪೂರ್ಣಕುಂಭವಾಗಿರುವ ಶಿವನಿಗೆ ನಮಸ್ಕಾರ” ಇತ್ಯಾದಿ, ಇತ್ಯಾದಿ. ಶಿವನೇ ಎಲ್ಲಾ ವಾಸ್ತು ರೂಪಗಳ ಹಿಂದೆ ಅಡಗಿರುವ ಶಕ್ತಿ. ಶಿವನೇ ಎಲ್ಲಾ ವಾಸ್ತು ರೂಪಗಳಿಗೂ ಆಧಾರ, ಎಂಬುದೇ ಈ ನಂಬಿಕೆ. ಈ ಪ್ರಾರ್ಥನೆಯ ಅರ್ಥವನ್ನು ಕಣ್ಣಿಗೆ ಕಟ್ಟುವಂತೆ ದೃಶ್ಯ ಮಾಧ್ಯಮದ ಮೂಲಕ ಶಿಲ್ಪಿಗಳು ಕುಂಭ-ಸ್ತಂಭ ಪಂಜರಗಳ ಸಂಕೇತಾರ್ಥದಲ್ಲಿ ದೇವಾಲಯಗಳ ಭಿತ್ತಿಗಳ ಮೇಲೆ ಕಂಡರಿಸಿದ್ದಾರೆ. ಈ ವಾಸ್ತು ಅಲಂಕರಣೆಯಲ್ಲಿ ಕುಂಭ, ಬ್ರಹ್ಮಾಂಡವನ್ನು ಸೂಚಿಸುತ್ತದೆ. ಅದರ ಬಾಯಿಂದ ಹೊರಬಂದು ಸುತ್ತಲೂ ಹರಡಿರುವ ಸಸ್ಯರಾಶಿ ಬ್ರಹ್ಮಾಂಡದ ಒಳಗಿರುವ ಜೀವರಾಶಿಯನ್ನು ನಿರೂಪಿಸುತ್ತದೆ. ಕುಂಭದ ಬಾಯಿಂದ ನೇರವಾಗಿ ಮೇಲೇರುವ ಸ್ತಂಭವೇ ಶಂಭು. ಇದೇ ರೀತಿಯ ಸ್ತಂಭದಿಂದಲೇ ಶಿವನ ಲಿಂಗೋದ್ಭವ ಮೂರ್ತಿಯ ದರ್ಶನ. ಸ್ತಂಭವೇ ಎಲ್ಲಾ ವಾಸ್ತುರೂಪಗಳಿಗೂ ಮೂಲಭೂತ ಆಧಾರ. ಸ್ತಂಭವಿಲ್ಲದ ವಾಸ್ತು ನಿರ್ಮಾಣವಿಲ್ಲ. ಸ್ತಂಭದ ಮೇಲ್ತುದಿಯಲ್ಲಿರುವ ಮಂಟಪ ಮೂರು ಲೋಕದಲ್ಲಿರುವ ವಾಸ್ತು ನಿರ್ಮಾಣಗಳನ್ನೂ ಅಥವಾ ಮೂರು ಲೋಕಗಳನ್ನು ಪ್ರತಿನಿಧಿಸುತ್ತದೆ. ಇದೇ ವಾಸ್ತುವಿನ ಸಂಕೇತವೂ ಕೂಡ. ಸ್ವಾರಸ್ಯವೆಂದರೆ ಈಗಲೂ ಕೂಡ ಸಾಂಪ್ರದಾಯಿಕ ವಾಸ್ತುಶಿಲ್ಪಿಗಳು ತಮ್ಮ ನಿರ್ಮಾಣ ಕೆಲಸವನ್ನು ಪ್ರಾರಂಭಿಸುವ ಮುನ್ನ ಈ ಶ್ಲೋಕದ ಮೂಲಕ ಶಿವನ ಪ್ರಾರ್ಥನೆ ಮಾಡಿ, ಕೆಲಸ ಪ್ರಾರಂಭಿಸುತ್ತಾರೆ.

ಈ ವಾಸ್ತು ಸಂಕೇತದ ನಿರೂಪಣೆಯಲ್ಲಿ ಒಂದೊಂದು ಪ್ರಾಂತ್ಯದ ಶಿಲ್ಪಿಗಳು ಒಂದೊಂದು ಅಂಶಗಳಿಗೆ ಹೆಚ್ಚಿನ ಒಲವನ್ನು ತೋರಿದರು. ಚೋಳ ಶಿಲ್ಪಿಗಳು ಕುಂಭಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಅದನ್ನು ವೈವಿಧ್ಯಮಯ ರೀತಿಯಲ್ಲಿ ಕಂಡರಿಸಿದರು. ಸ್ತಂಭದ ಮೇಲೆ ಕೇವಲ ಶಾಲ, ಕೂಟ ಮತ್ತು ಅಪರೂವಾಗಿ ಪಂಜರ ರೀತಿಯ ಮಂಡಪವನ್ನು ಕಂಡರಿಸಿದರು. ಕಲ್ಯಾಣ ಚಾಳುಕ್ಯ, ಹೊಯ್ಸಳ ಶಿಲ್ಪಿಗಳು ಕುಂಭಾಲಂಕರಣವನ್ನು ಸಂಪೂರ್ಣವಾಗಿ ಬಿಟ್ಟು, ಸ್ತಂಭದ ಮೇಲಿನ ವಾಸ್ತುವಿನ್ಯಾಸಗಳಿಗೆ ಗಮನ ನೀಡಿದರು. ಕುಂಭದ ಬದಲಿಗೆ ಸ್ತಂಭಗಳಿಗೆ ಅಲಂಕೃತ ಪೀಠಗಳನ್ನು ನೀಡಿದರು. ಸ್ತಂಭದ ಮೇಲೆ ‘ಘಂಟಾ’ ಮಾದರಿಯ ವಿನ್ಯಾಸ, ಕುಂಭ, ಮಂಡಿ, ಫಲಕ ಇವುಗಳು ಹೊಯ್ಸಳ ಸ್ತಂಭಪಂಜರದ ಕಂಬದ ವಿನ್ಯಾಸ. ಕಂಬದ ಮೇಲೆ ಕಪೋತವಿರುವುದಿಲ್ಲ, ಬದಲಿಗೆ ನೇರವಾಗಿ ವೈವಿಧ್ಯಮಯವಾದ, ಮಿತಿಯಿಲ್ಲದ ಅಲಂಕರಣವುಳ್ಳ, ಚೂಪಾಗಿ ಎತ್ತರವಾದ ಪ್ರಾಸಾದ ಮಾದರಿಯ ಶಿಖರಗಳ ನಿರೂಪಣೆ ಹೊಯ್ಸಳ ಶಿಲ್ಪಿಗಳ ಆಯ್ಕೆಯಾದವು. ಚಿಕಣಿ ಶಿಖರಗಳ ಸುತ್ತಲೂ ಸುರುಳಿ ಸುರುಳಿಯಾಗಿ ಮೇಲೇರುವ ಪ್ರಭಾವಳಿ, ಪ್ರಭಾವಳಿಯ ಮೇಲ್ತುದಿಯಲ್ಲಿ ಕೀರ್ತಿಮುಖದ ಕೆತ್ತನೆಗಳೂ ಸ್ತಂಭಪಂಜರಕ್ಕೆ ಪೂರಕವಾಗಿ ನಿರೂಪಿತಗೊಂಡವು. ಜೊತೆಗೆ ಹೊಯ್ಸಳ ಶಿಲ್ಪಿಗಳು ಸ್ತಂಭದ ಮುಂಭಾಗದಲ್ಲಿ ಉಬ್ಬು ಶಿಲ್ಪಗಳನ್ನೂ ಕೆತ್ತನೆ ಮಾಡಿದರು. ಹೀಗೆ ಮಹತ್ವವಾದ ಸೈದ್ಧಾಂತಿಕ ಮೌಲ್ಯಗಳನ್ನುಳ್ಳ ಈ ಕುಂಭ-ಸ್ತಂಭ ಪಂಜರಗಳು ಕ್ರಿ.ಶ. ೧೨ನೆಯ ಶತಮಾನದಿಂದ ಕನ್ನಡ, ತಮಿಳುನಾಡಿನ ದೇವಾಲಯಗಳಲ್ಲಿ ಪ್ರಧಾನವಾದ ಅಲಂಕರಣ ವಿನ್ಯಾಸವಾಗಿ ಕಂಗೊಳಿಸುತ್ತಿವೆ.

ಕುಂಭ-ಸ್ತಂಭ ಪಂಜರಗಳ ಮೂಲತತ್ವ ನಿರೂಪಣೆಯ ಬಗ್ಗೆ ವಿವರವಾದ ವಿಶ್ಲೇಷಣೆಯನ್ನು ಮಾಡಿದ ನಂತರ ಪ್ರಸ್ತುತ ನರಸಿಂಹ ದೇವಾಲಯದ ಸ್ತಂಭಪಂಜರಾ ಲಂಕರಣದ ವಿವರಣೆಗೆ ಬರೋಣ. ಚೋಳ ಶಿಲ್ಪಿಗಳಿಂದ ನಿರ್ಮಿತವಾದ ಈ ದೇವಾಲಯದಲ್ಲಿ ಸ್ತಂಭಪಂಜರದ ಅಲಂಕರಣೆ ಕಾಣಬರುವುದು ವಿಚಿತ್ರವಾದರೂ ಸತ್ಯ. ನಿಜವಾಗಿ ಈ ಸ್ಥಳದಲ್ಲಿ ಸ್ತಂಭಪಂಜರದ ಬದಲು ಕುಂಭಪಂಜರವಿರಬೇಕು. ಆದರೆ ಕಾರಣಾಂತರಗಳಿಂದ ಸ್ತಂಭಪಂಜರವಿದ್ದು, ಹೊಯ್ಸಳ ಅಲಂಕರಣ ವಿಧಾನವನ್ನು ಚೋಳ ಶಿಲ್ಪಿಗಳು ಅನುಸರಿಸಿದ್ದಾರೆ. ಕಾರಣ ನಿರ್ದಿಷ್ಟವಾಗಿ ತಿಳಿಯಲಾಗದಿದ್ದರೂ, ಈ ಅಂಶವನ್ನು ಚೋಳ ವಾಸ್ತು ಅಲಂಕರಣ ವಿನ್ಯಾಸದ ಮೇಲೆ ಹೊಯ್ಸಳ ವಾಸ್ತು ವಿನ್ಯಾಸದ ಪ್ರಭಾವವೆಂದೇ ತಿಳಿಯುವುದು ಸೂಕ್ತ. ಎರಡು ವಿಭಿನ್ನ ಶೈಲಿಗಳು ಸಂಧಿಸಿದಾಗ ಇಂತಹ ಪರಸ್ಪರ ಪ್ರಭಾವಗಳು ಸಂಭವಿಸುವುದು ಸಾಮಾನ್ಯ ಸಂಗತಿಯೇ ಸರಿ.

ಹೊಯ್ಸಳ ವಾಸ್ತ್ವಲಂಕರಣಾ ವಿನ್ಯಾಸದ ಪ್ರಭಾವ ಇಲ್ಲಿಯ ದೇವಾಲಯದ ಸ್ತಂಭಪಂಜರದ ವಿನ್ಯಾಸದ ಮೇಲೆ ಆಗಿದ್ದರೂ, ಅದು ಸಂಪೂರ್ಣ ಪ್ರಮಾಣದ್ದೇನಲ್ಲ. ಸ್ತಂಭದ ಮೇಲಿನ ವಾಸ್ತು ವಿನ್ಯಾಸದಲ್ಲಿ ಹೊಯ್ಸಳರು ವೈವಿಧ್ಯಮಯ ಶಿಖರಗಳ ಚಿಕಣಿ ಮಾದರಿಗಳನ್ನು ನಿರೂಪಿಸುತ್ತಿದ್ದರೆಂದು ಆಗಲೇ ಹೇಳಿದೆ. ಆದರೆ ಪ್ರಸ್ತುತ ದೇವಾಲಯದ ಸ್ತಂಭಪಂಜರದ ವಾಸ್ತು ಮಾದರಿ ಚೋಳ ರೀತಿಯದ್ದಾಗಿದೆ. ಸ್ತಂಭದ ಮೇಲ್ಭಾಗದಲ್ಲಿ ಚೋಳ ರೀತಿಯಲ್ಲೇ ‘ದಾನಿ’ಯ ವಿನ್ಯಾಸವಿದೆ. ಸ್ತಂಭದ ತುದಿಯಲ್ಲಿ ಕೇವಲ ಕೂಟ ಮಾದರಿಯ ಚಿಕಣಿ ಶಿಖರಗಳನ್ನು ಮಾತ್ರ ನಿರೂಪಿಸಿದ್ದಾರೆ. ಇವು ಚೋಳ ಶೈಲಿಯ ಕುಂಭಪಂಜರಗಳ ಮೇಲ್ತುದಿಯ ಚಿಕಣಿ ಶಿಖರಗಳನ್ನು ನೆನಪಿಗೆ ತರುತ್ತವೆ. ಇಲ್ಲಿ ಚೋಳ-ದ್ರಾವಿಡ ರೀತಿಯಲ್ಲಿ ಕಪೋತ, ನಾಸಿಯುಗ್ಮಗಳು, ಕೂಟ ಶಿಖರ  ಮತ್ತು ತುದಿಯಲ್ಲಿ ಸ್ತೂಪಿಯ ಬದಲಿಗೆ ಕೀರ್ತಿಮುಖದ ನಿರೂಪಣೆಯಿದೆ. ಶಿಖರದ ಮೇಲೆ ಸ್ತೂಪಿಯ ಕೆತ್ತನೆ ಸಾಮಾನ್ಯವೇ ಹೊರತು ಕೀರ್ತಿಮುಖವಲ್ಲ. ಕೀರ್ತಿಮುಖವು ಹೊಯ್ಸಳ ಸ್ತಂಭಪಂಜರದ ಪ್ರಭಾವಳಿಯ ತುದಿಯಲ್ಲಿ ಕಾಣುವ ವಿನ್ಯಾಸ. ಆದ್ದರಿಂದ ಪ್ರಸ್ತುತ ಕೀರ್ತಿಮುಖದ ವಿನ್ಯಾಸವೂ ಹೊಯ್ಸಳ ಪ್ರಭಾವದಿಂದಾಗಿದೆ ಎಂದು ಹೇಳಬಹುದು.

ಇದೇ ರೀತಿಯಲ್ಲಿ ಕೂಟ ಶಿಖರದ ಮುಖಭಾಗದಲ್ಲಿ ನಾಸಿಯು ಕಂಡರಣೆ ಇರಬೇಕು. ಆದರೆ ನಾಸಿಯ ಬದಲು ಪದ್ಮದ ಕೆತ್ತನೆ ಇದೆ. ಕಾರಣ ಕೂಟ ಶಿಖರ ಚಿಕಣಿ ಗಾತ್ರದ್ದು. ಅದಕ್ಕೆ ನಾಸಿಯನ್ನು ಕೆತ್ತಿದ್ದಾರೆ. ಮುಂಭಾಗದಿಂದ ಅದು ಕೂಟ ಶಿಖರವೋ ಎನ್ನುವ ಅನುಮಾನ ಬರಬಹುದು. ಅದಕ್ಕಾಗಿ ಈ ಪದ್ಮದ ಅಲಂಕರಣ. ಮುಂದೆ ನೋಡುವ ಶ್ರೀಕೃಷ್ಣ ದೇವಾಲಯದ ಸ್ತಂಭಪಂಜರದ ಮೇಲಿನ ಚಿಕಣಿ ಶಿಖರವನ್ನು ಪಂಜರ ಶಿಖರವೆಂದು ತೋರಿಸುವುದಕ್ಕೆ ಸ್ಪಷ್ಟವಾಗಿ ದೊಡ್ಡದಾದ ನಾಸಿಯನ್ನೇ ಕೆತ್ತಿದ್ದಾರೆ. ಅದೇ ದೇವಾಲಯದ ಕೋಷ್ಟಗಳ ಮೇಲಿನ ಕೂಟ ಶಿಖರಕ್ಕೆ ಸ್ಪಷ್ಟವಾಗಿ ನಾಸಿಗಳನ್ನೇ ಕೆತ್ತಿದ್ದಾರೆ. ಇದಕ್ಕೆ ಅಲ್ಲಿ ಸ್ಥಳಾಭಾವವಿಲ್ಲದಿರುವುದೇ ಕಾರಣ. ಹೀಗೆ ಸಣ್ಣ-ಸಣ್ಣ ಅಲಂಕರಣಾ ವಿನ್ಯಾಸಗಳನ್ನು ಮಾಡುವಾಗ, ನೋಡುಗರಿಗೆ ಯಾವುದೇ ರೀತಿಯ ವೈಚಾರಿಕ ಗೊಂದಲ ಉಂಟಾಗಬಾರದೆಂಬ ದೃಷ್ಟಿಯಿಂದ, ಶಿಲ್ಪಿಗಳು ಈ ರೀತಿಯ ಕೆಲವು ವಿನ್ಯಾಸ ವಿಧಾನಗಳನ್ನು ಬಳಸುತ್ತಿದ್ದರೆಂದು ತಿಳಿಯಬಹುದು.

ಗುಡಿಯ ಭಿತ್ತಿಯ ಮೇಲಿನ ಉತ್ತರಾ, ವಲಭಿಗಳು ನಿರಲಂಕೃತವಾಗಿವೆ. ಶಾಸ್ತ್ರ ರೀತಿಯಂತೆ, ಭಿತ್ತಿಯ ಮಾನಸೂತ್ರದಿಂದ ಸ್ವಲ್ಪ ಮುಂದಕ್ಕೆ ಹಂತಹಂತವಾಗಿ ಚಾಚಿದೆ. ಮೇಲಿನ ಕಪೋತ ಸಾಧಾರಣವಾದುದು. ಮೇಲೆ ಇಳಿಜಾರಾಗಿದ್ದು. ಕೆಳಭಾಗ ಟೊಳ್ಳಾಗಿದೆ. ವಿಚಿತ್ರವೆಂದರೆ ಕಪೋತದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ನಾಸಿಗಳ ಅನುಪಸ್ಥಿತಿ. ಕಪೋತದ ಮೇಲಿನ ವಾಜನ, ನಂತರದ ದುರಸ್ತಿ ಕಾರ್ಯಗಳಿಂದಾಗಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಗರ್ಭಗೃಹದ ಮೇಲೆ ಮಾತ್ರ ಕೈಪಿಡಿ (ಹಾರ) ಇದೆ. ಗರ್ಭಗೃಹಕ್ಕೆ ದ್ವಿತಲ ವಿಮಾನವಿದೆ(ನೋಡಿ: ಚಿತ್ರ‑೨೧). ಅನರ್ಪಿತ ರೀತಿಯ ವಿಮಾನ ಸಂಪೂರ್ಣ ಇತ್ತೀಚಿನದು. ಈ ವಿಮಾನವು ಸ್ವಸ್ತಿಕ ರೀತಿಯ ವಿಮಾನವನ್ನು ಹೋಲುತ್ತದೆ. ಇದರ ಶಿಖರ ವೃತ್ತವಾಗಿರುವುದರಿಂದ ಸ್ವಸ್ತಿಕವೆಂದು ಹೇಳಲಾಗುವುದಿಲ್ಲ. ಇಟ್ಟಿಗೆ ಗಾರೆಯಿಂದ ನಿರ್ಮಾಣವಾದುದು. ಎರಡನೆಯ ತಲಕ್ಕೆ ಹಾರವಿಲ್ಲ. ಬದಲಾಗಿ ತಲದ ನಾಲ್ಕೂ ಮೂಲೆಗಳಲ್ಲಿ ಒಂದೊಂದು ಕರ್ಣಕೂಟಗಳಿವೆ. ಅವುಗಳ ಮುಂದೆ ಮೂಲೆ ಭಾಗದಲ್ಲಿ ಕುಳಿತಿರುವ ಸಿಂಹಗಳಿವೆ. ವೃತ್ತಾಕಾರದ ಗ್ರೀವದ ಮೇಲೆ, ಅದೇ ಆಕಾರದ ಶಿಖರವಿದೆ. ಶಿಖರದ ಮತ್ತು ಗ್ರೀವದ ನಾಲ್ಕೂ ಮುಖಗಳಲ್ಲಿ ಗ್ರೀವಕೋಷ್ಟ ಮತ್ತು ಮಹಾನಾಸಿಗಳಿವೆ. ಪ್ರತಿ ಗ್ರೀವದಲ್ಲಿ ವಿಷ್ಣುವಿನ ರೂಪಗಳ ಒಂದೊಂದು ಆಸೀನ ಮೂರ್ತಿಗಳಿವೆ. ಪೂರ್ವದಲ್ಲಿ ಲಕ್ಷ್ಮೀನರಸಿಂಹ, ದಕ್ಷಿಣದಲ್ಲಿ ಹಯಗ್ರೀವ, ಪಶ್ಚಿಮದಲ್ಲಿ ಮಹಾವಿಷ್ಣು ಮತ್ತು ಉತ್ತರದಲ್ಲಿ ಯೋಗಾನರಸಿಂಹನ ಮೂರ್ತಿಗಳಿವೆ.

ದೇವಾಲಯದ ಪ್ರಾಕಾರದ/ಗೂಢಮಂಟಪದ ದ್ವಾರದ ಮುಂಭಾಗದಲ್ಲಿ ನಾಲ್ಕು ಕಂಬಗಳನ್ನು ಆದರಿಸಿದ ಚತುರಶ್ರಾಕಾರದ ಮುಖಮಂಟಪವಿದೆ(ನೋಡಿ: ಚಿತ್ರ‑೧೫). ಈ ಮಂಟಪದ ನಾಲ್ಕು ಕಂಬಗಳು ಗೂಢಮಂಟಪದ ಕಂಬಗಳ ಮಾದರಿಯಲ್ಲೇ ಇವೆ. ಮುಖಮಂಟಪಕ್ಕೆ ಇಳಿಜಾರಿನ, ಎರಡು ಬಾಗನ್ನುಳ್ಳ ಕಪೋತವಿದೆ. ಈ ಕಪೋತವನ್ನು ಇಡೀ ಪ್ರಾಕಾರದ ಹೊರಮುಖದ ಸುತ್ತಲೂ ನೀಡಲಾಗಿದೆ. ಪ್ರಾಕಾರದ ಮೇಲಿನ ಕೈಪಿಡಿ ನಿರಲಂಕೃತ ಹಾಗೂ ಸಂಪೂರ್ಣ ದುರಸ್ತಿಯಾದದ್ದು.

ಯೋಗಾನರಸಿಂಹ ದೇವಾಲಯದಲ್ಲಿ ಒಟ್ಟು ನಾಲ್ಕು ದಾನಶಾಸನಗಳಿವೆ. ಇವುಗಳಲ್ಲಿ ಮೊದಲನೆಯದು ತಮಿಳು ಭಾಷೆಯ ಶಾಸನ. ಈ ಶಾಸನ, ಮೇಲೆ ತಿಳಿಸಿದಂತೆ, ದೇವಾಲಯದ ಪ್ರಾಕಾರ ಗೋಡೆಯ ಹೊರಮುಖದಲ್ಲಿ, ಮಹಾದ್ವಾರದ ಬಲಗಡೆಯಿದೆ. ಇದರ ನಿರ್ದಿಷ್ಟ ಕಾಲ ಕ್ರಿ.ಶ. ೨೨ನೆಯ ಜನವರಿ, ೧೧೫೨. ಶಾಸನದ ಪಾಠದಿಂದ, ಈ ದೇವಾಲಯವು ಯಾದವನಾರಾಯಣ ಚತುರ್ವೇದಿಮಂಗಲದಲ್ಲಿ ಸಿಂಗಪ್ಪೆರುಮಾಳ್ ದೇವಾಲಯವೆಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. ಈ ದೇವಾಲಯದೊಳಗೆ ಮತ್ತಿಯಾಂಬಾಕ್ಕಂನ ಆಂಡಾಳ್ ಎಂಬುವಳು ಬೆಣ್ಣೆಕೃಷ್ಣ (ವೆಣ್ಣೈಕುಟ್ಟಿಪಿಳ್ಳೈ)ನನ್ನು ಪ್ರತಿಷ್ಠಾಪಿಸಿ, ಆ ದೇವರ ಸೇವೆಗೆ ಆರು ಹಣವನ್ನು ದಾನವಾಗಿ ನೀಡಿದಳು. ಆ ಹಣದಿಂದ ಬರುವ ಬಡ್ಡಿಯಲ್ಲಿ ದೇವರಿಗೆ ಶ್ರೀಜಯಂತಿ ಮತ್ತು ಇತರ ಪೂಜಾವಿಧಿಗಳನ್ನು ನೆರವೇರಿಸಬೇಕೆಂದು ಹೇಳಿದೆ. ಅಲ್ಲಿಯ ಮತ್ತೊಂದು ಶಾಸನದಿಂದ[1] ಈ ಆಂಡಾಳ್ ಎಂಬುವಳು ಮತ್ತಿಯಾಂಬಾಕ್ಕಂನ ಇಳೈಯಾಭೀರನ್ ಭಟ್ಟನ್ ಎಂಬುವನ ಪತ್ನಿ. ಆದರೆ ಆಂಡಾಳ್ ಸ್ಥಾಪಿಸಿದ ಬೆಣ್ಣೆಕೃಷ್ಣನ ವಿಗ್ರಹ ಈಗ ನಾಮಾವಶೇಷವಾಗಿದೆ.


[1] ಅದೇ, ಪಾಂ. ೯೯

[2] ಅದೇ, ಪಾಂ. ೧೧೯

[3] ಕಾಶ್ಯಪಶಿಲ್ಪ, ಪಟಲ-೮, ಶ್ಲೋಕ-೨೧

[4] ಎ.ಕ. ಸಂ.೮ (ರೈಸ್ ಸಂಪುಟ) ಶಿ ಪು. ೧೩೭

[5] ಎ.ಕ.ಸಂ.೮ (ರೈಸ್ ಸಂಪುಟ) ಶಿ ಪು. ೯೨

[6] ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಷನ್ಸ್, ಸಂ.೯, ಭಾಗ-೧, ೧೬೫