ಕೈಲಾಸೇಶ್ವರ ದೇವಾಲಯ

ತೊಣ್ಣೂರಿನ ಈಶಾನ್ಯ ಮೂಲೆಯಲ್ಲಿ ಗದ್ದೆಗಳ ನಡುವೆ ಇರುವ ಈಶ್ವರ ದೇವಾಲಯ, ಯಾದವನಾರಾಯಣ ಚತುರ್ವೇದಿಮಂಗಲದ ಕೈಲಾಸೇಶ್ವರ ದೇವಾಲಯವೆಂದು  ಶಾಸನಗಳಲ್ಲಿ ಪ್ರಸಿದ್ದಿ(ನೋಡಿ: ಚಿತ್ರ‑೨೨). ಈ ದೇವಾಲಯದ ವಿವಿಧ ವಾಸ್ತು ಭಾಗಗಳ ಮೇಲೆ ಒಟ್ಟು ಹದಿನೇಳು ಶಾಸನಗಳು ಕಂಡುಬಂದಿವೆ. ಅವುಗಳಲ್ಲಿ ತಮಿಳು ಶಾಸನಗಳೇ ಪ್ರಧಾನ. ಕನ್ನಡ ಅಪರೂಪವಾಗಿ ಅಲ್ಲಲ್ಲಿ ಕಾಣಬರುತ್ತದೆ. ಇವೆಲ್ಲವೂ ಹೆಚ್ಚಾಗಿ ದಾನ ಶಾಸನಗಳು. ಕೆಲವೊಂದು ಮಾತ್ರ ವಾಸ್ತುಭಾಗಗಳನ್ನು ನಿರ್ಮಾಣ ಮಾಡಿದುದರ ಬಗ್ಗೆ ಉಲ್ಲೇಖ ನೀಡುತ್ತವೆ. ಆದರೆ ಯಾವ ಶಾಸನದಿಂದಲೂ ಈ ದೇವಾಲಯದ ನಿರ್ದಿಷ್ಟ ನಿರ್ಮಾಣ ಕಾಲ ತಿಳಿಯಲು ಬರುವುದಿಲ್ಲ. ಹನ್ನೆರಡನೆಯ ಶತಮಾನದ ಒಂದು ಶಾಸನದಿಂದ ಈ ಗುಡಿಯಲ್ಲಿ ಕೈಲಾಸೇಶ್ವರ (ಲಿಂಗ) ಪ್ರತಿಷ್ಠಾಪಿತವಾಯಿತೆಂದು ತಿಳಿದುಬರುತ್ತದೆ.

ದೇವಾಲಯ ಪೂರ್ವಾಭಿಮುಖವಾಗಿ ನಿರ್ಮಿತವಾಗಿದೆ. ದೇವಾಲಯವನ್ನು ವಿಶಾಲವಾದ (೧೮೦’x೮೦’) (ಈಗ ಪಾಳುಬಿದ್ದಿರುವ) ಪ್ರಾಕಾರದ ಮಧ್ಯೆ ನಿರ್ಮಿಸಲಾಗಿದೆ. ದೇವಾಲಯದ ತಲವಿನ್ಯಾಸದಲ್ಲಿ ಗರ್ಭಗೃಹ(೧೦’x೧೦’), ಅರ್ಧಮಂಟಪ(೧೦’x೧೦’), ಗೂಢಮಂಟಪ (೬೦’x೨೪’)ಗಳು (ಅಂದಾಜಿನ ಅಳತೆಗಳು) ಒಂದೇ ಅಕ್ಷದಲ್ಲಿವೆ. ನವರಂಗದಲ್ಲಿ ಪೂರ್ವ-ಪಶ್ಚಿಮಾಭಿಮುಖವಾಗಿ ಐದೈದು ಕಂಬಗಳಿರುವ ಎರಡು ಕಂಬದ ಸಾಲುಗಳಿವೆ. ನವರಂಗಕ್ಕೆ ಪೂರ್ವ ಮತ್ತು ದಕ್ಷಿಣಗಳಲ್ಲಿ, ಒಂದು ಅಂಕಣದ ಒಂದೊಂದು ಮುಖಮಂಟಪಗಳಿವೆ. ಪೂರ್ವದ ಮುಖಮಂಟಪಕ್ಕೆ ದಕ್ಷಿಣದಲ್ಲಿ ಸೋಪಾನ, ದಕ್ಷಿಣದ ಮುಖಮಂಟಪಕ್ಕೆ ಪೂರ್ವ ದಿಕ್ಕಿನಲ್ಲಿ ಸೋಪಾನವನ್ನು ನೀಡಲಾಗಿದೆ. ಮೂಲ ಗುಡಿಗೆ ವಾಯವ್ಯದಲ್ಲಿ, ಗುಡಿಯಿಂದ ಸ್ವಲ್ಪ ಹಿಂದಕ್ಕೆ, ಅಮ್ಮನವರ ಗುಡಿ ನಿರ್ಮಿತವಾಗಿದೆ. ಈ ಗುಡಿಗೂ ಸಹ ತಲವಿನ್ಯಾಸದಲ್ಲಿ ಗರ್ಭಗೃಹ, ಅರ್ಧಮಂಟಪ, ನಾಲ್ಕು ಕಂಬಗಳ ನವರಂಗವಿದೆ. ಮೂಲಗುಡಿಯ ಎಡ ಪಾರ್ಶ್ವದಲ್ಲಿ ಸಣ್ಣದಾದ ಒಂದಂಕಣದ ಚಂಡಿಕೇಶ್ವರನ ಗುಡಿ ಇದೆ.

ದೇವಾಲಯ ಈಗ ಬಹಳ ದುಃಸ್ಥಿತಿಯಲ್ಲಿದೆ. ಮೂಲ ದೇಗುಲದ ನವರಂಗದ ಗೋಡೆಗಳು ಕುಸಿಯುತ್ತಿವೆ. ಅಮ್ಮನವರ ಗುಡಿ ಸಂಪೂರ್ಣ ಹಾಳಾಗಿದೆ. ಚಂಡಿಕೇಶ್ವರ ಗುಡಿಯು ಸಂಪೂರ್ಣ ಕುಸಿದಿದೆ. ಪ್ರಾಕಾರದ ಅವಶೇಷಗಳು ಅಲ್ಲಲ್ಲಿ ಕಾಣಬರುತ್ತವೆ.

ಮೂಲಗುಡಿಯ ಗರ್ಭಗೃಹದಲ್ಲಿ ಕೈಲಾಸೇಶ್ವರ ಲಿಂಗ ಪ್ರತಿಷ್ಠಿತವಾಗಿದೆ. ಗರ್ಭಗುಡಿ ಯಲ್ಲಾಗಲಿ, ಅರ್ಧಮಂಟಪದಲ್ಲಾಗಲಿ ಯಾವುದೇ ವಾಸ್ತು ವೈಶಿಷ್ಟ್ಯವಿಲ್ಲ. ನವರಂಗದ ಕಂಬದ ಸಾಲುಗಳು ಸಾಧಾರಣ ರೀತಿಯ ಕಂಬಗಳನ್ನೊಳಗೊಂಡಿವೆ. ಪೂರ್ವದ್ವಾರದ ಕಡೆಯ ಮೊದಲು ನಾಲ್ಕು ಕಂಬಗಳು, ಚೌಕಟ್ಟಾದ ಬುಡ, ಅಷ್ಟ ಮತ್ತು ಷೋಡಶ ಮುಖವುಳ್ಳ ದಿಂಡು, ಚೋಳ ರೀತಿಯ ಆಧಾರಪೋತಿಕೆಗಳನ್ನು ಹೊಂದಿವೆ(ನೋಡಿ: ಚಿತ್ರ‑೨೩). ಇವುಗಳಲ್ಲಿ ಮೊದಲೆರಡವುಗಳಿಗೆ, ಚೌಕ ಬುಡದಮೇಲೆ, ನಾಲ್ಕೂ ಮೂಲೆಗಳಲ್ಲಿ ಕಮಲದಳದ ಉಬ್ಬು ಕೆತ್ತನೆ ಇದೆ. ಉಳಿದ ಆರು ಕಂಬಗಳು  ಚೌಕ, ಅಷ್ಟ ಮತ್ತು ಉರುಳೆ ದಿಂಡುಗಳನ್ನೂ, ಆಧಾರ ಪೋತಿಕೆಗಳನ್ನೂ ಹೊಂದಿವೆ. ನವರಂಗದ ಕಂಬವೊಂದರ ಮೇಲಿನ ತಮಿಳು ಶಾಸನವು

[2] ಆ ಕಂಬವನ್ನು “ಪರದೇಸಿ ಮಲಯಾಳನ್ ಮಲಯಂ ಚೇಚಿ ಮನವಾಳನ್” ಎಂಬುವನು ಕೆತ್ತನೆ ಮಾಡಿದನೆಂದು ಹೇಳುತ್ತದೆ. ಛಾವಣಿ ಮಾತ್ರ ನಿರಲಂಕೃತ ಸಮತಟ್ಟಾದ ಕೃತಿ. ಮಧ್ಯದ ಅಂಕಣದ, ಮಧ್ಯಭಾಗದಲ್ಲಿ ಮಾತ್ರ ಪದ್ಮದ ಒಂದು ಉಬ್ಬು ಕೆತ್ತನೆ ಇದೆ. ಬಾಗಿಲು ವಾಡಗಳೆಲ್ಲವು ಅತೀ ಸಾಧಾರಣವಾದುವು.

ಮುಖಮಂಟಪಗಳು ಸಹ ಸಾಧಾರಣ ನಿರ್ಮಾಣಗಳು. ಅವುಗಳ ಕಂಬಗಳೂ ಸಹ ಸರಳ. ಮುಂದಿನ ಎರಡು ಕಂಬಗಳು ಮಾತ್ರ ಚೌಕಟ್ಟಾದ ಬುಡ, ಅಷ್ಟಮುಖದ ದಿಂಡನ್ನು ಹೊಂದಿವೆ. ಮೇಲೆ ಆಧಾರ ಪೋತಿಕೆಗಳಿವೆ. ಹಿಂದಿನೆರಡು ಕಂಬಗಳು ಹೆಸರಿಗೆ ಮಾತ್ರ ಕಂಬಗಳಾಗಿವೆ.

ದೇವಾಲಯಕ್ಕೆ ಪಾದಬಂಧ ಅಧಿಷ್ಠಾನವಿದೆ. ಉಪಾನ ಮತ್ತು ಜಗತಿ ಮಣ್ಣಿನಲ್ಲಿ ಹೂತು ಹೋಗಿವೆ. ತ್ರಿಪಟ್ಟಕುಮುದ, ಗಳ, ಪಟ್ಟಿಕೆ, ಗಳ ಮತ್ತು ಪ್ರತಿಗಳು ಕಾಣಸಿಗುತ್ತವೆ. ಮುಖಮಂಟಪಗಳನ್ನು ಸುಭದ್ರ ಉಪಪೀಠದ ಮೇಲೆ ನಿರ್ಮಿಸಲಾಗಿದೆ. ಮುಖಮಂಟಪಗಳ ಸೋಪಾನಗಳಿಗೆ ಸಾಧಾರಣ ಹಸ್ತಿ-ಹಸ್ತಗಳ ಜೋಡಣೆ ಇವೆ. ಭಿತ್ತಿ ಭಾಗ ನಿರಲಂಕೃತ. ಅಲ್ಲಲ್ಲಿ ವಿರಳವಾಗಿ ಕಾಣಬರುವ ಭಿತ್ತಿಪಾದದ ಅಪೂರ್ಣ ಕೆತ್ತನೆಗಳು, ಈ ಮುಂಚೆ ದೇವಾಲಯ ಪುನರ್ನಿರ್ಮಾಣವಾದುದನ್ನು ಸೂಚಿಸುತ್ತವೆ.

ಭಿತ್ತಿಪಾದಗಳ ಮೇಲ್ತುದಿಯಲ್ಲಿ ಯಾವುದೇ ರೀತಿಯ ಅಲಂಕರಣ ಕೆತ್ತನೆಗಳಿಲ್ಲ. ಅವುಗಳು ಕೇವಲ ಪೋತಿಕೆಗಳನ್ನು ಮಾತ್ರ ಹೊಂದಿವೆ. ಉತ್ತರಾ, ವಲಭಿ, ಕಪೋತ ಎಲ್ಲವೂ ಅತಿ ಸಾಧಾರಣವಾದುದು. ದೇವಾಲಯಕ್ಕೆ ಇಟ್ಟಿಗೆ ಗಾರೆಯ ಕೈಪಿಡಿ (ಹಾರ) ಇದ್ದುದಕ್ಕೆ ಅಲ್ಲಲ್ಲಿ ಸೂಕ್ಷ್ಮ ಸಾಕ್ಷಿಗಳಿವೆ.

ದೇವಾಲಯದ ಪೂರ್ವದ ಮುಖಮಂಟಪ ಮತ್ತು ನವರಂಗದಲ್ಲಿ ಒಂದೊಂದು ನಂದಿ ವಿಗ್ರಹಗಳಿವೆ. ಎರಡೂ ಶಿಲ್ಪಗಳು ಸುಮಾರು ಎರಡು ಅಡಿ ಎತ್ತರದವು. ಹೊಯ್ಸಳ ಶಿಲ್ಪ ಕಲೆಯ ಲಕ್ಷಣಗಳನ್ನುಳ್ಳ ಬಳಪದ ಕಲ್ಲಿನ ಶಿಲ್ಪಗಳಿವು. ಸುಂದರ-ಸೂಕ್ಷ್ಮ ಕೆತ್ತನೆಗಳಿಂದ, ಅಭರಣಾಲಂಕಾರಗಳಿಂದ ಶೋಭಿತವಾಗಿವೆ. ನವರಂಗದಲ್ಲಿರುವ ನಂದಿ ವಿಗ್ರಹದ ಪೀಠದ ಮೇಲೆ ‘ಲಕ್ಷ್ಮೀನಾಥಾ’ ಎಂದು ಬರೆದಿದೆ[3].

ದೇವಾಲಯ ವಿಪರೀತ ಭಗ್ನವಾಗಿದೆಯೆಂದು ಆಗಲೇ ಹೇಳಿದೆ. ಹೀಗಾಗಿ ಈ ಭಗ್ನಾವಶೇಷಗಳಿಂದ ದೇವಾಲಯ ನಿರ್ಮಾಣ ತಂತ್ರಗಳ ಅನೇಕ ಮಾಹಿತಿಗಳನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ನವರಂಗದ ಆಗ್ನೇಯ ಮೂಲೆಯ ಭಿತ್ತಿಯ ಹೊರಮುಖ ಕುಸಿದಿದ್ದು ಒಳಮುಖ ಮಾತ್ರ ಉಳಿದಿದೆ. ದೇವಾಲಯ ಭಿತ್ತಿಯ ನಿರ್ಮಾಣದಲ್ಲಿ ಅನುಸರಿಸುತ್ತಿದ್ದ ಎರಡು ಪದರಗಳ ಗೋಡೆಯ ಖಂಡಭಾಗವನ್ನು ಈ ಭಗ್ನಾವಶೇಷದಲ್ಲಿ ನೋಡಬಹು ದಾಗಿದೆ(ನೋಡಿ: ಚಿತ್ರ‑೨೨). ಗರ್ಭಗೃಹದ ವಾಯವ್ಯ ಮೂಲೆಯ ಭಾಗ ಇನ್ನೂ ಸುರಕ್ಷಿತವಾಗಿದೆ. ಇದರ ಭಿತ್ತಿಯ ರಚನೆಯಲ್ಲಿ ಸ್ವಸ್ತಿಕ ವಿಧಾನದ ಕಲ್ಲಿನ ಜೋಡಣೆಯ ರೀತಿಯು ಸ್ಪಷ್ಟವಾಗಿದೆ(ನೋಡಿ: ಚಿತ್ರ‑೨೪) ಸಾಧಾರಣವಾಗಿ ಈ ರೀತಿಯ ರಚನೆ ಗುಡಿಯ ಒಳ ಮುಖದ ಗೋಡೆಯಲ್ಲಿದ್ದು, ಅದು ಸಂಪೂರ್ಣ ಹೊರಪದರದಿಂದ ಮುಚ್ಚಿರುತ್ತದೆ. ಆದರೆ ಈ ಭಿತ್ತಿಯಲ್ಲಿ ಹೊರಪದರದಲ್ಲೂ ಸ್ವಸ್ತಿಕ ರೀತಿಯ ಜೋಡಣೆಯನ್ನು ಬಳಸಿರುವುದು ಒಂದು ವಿಶೇಷ. ಅಮ್ಮನವರ ಗುಡಿಯ ನಿರ್ಮಾಣ ತೀರಾ ಸಾಧಾರಣವಾದದ್ದು. ಹಣದ ಕೊರತೆಯಿಂದಾಗಿ, ಬಳಸಿರುವ ಸಾಮಗ್ರಿಯಲ್ಲಿ ಮಿತವ್ಯಯ ಮಾಡಲಾಗಿದೆ. ಇಲ್ಲಿಯ ಭಿತ್ತಿ ಎರಡು ಪದರದ ಗೋಡೆಯಲ್ಲ. ಕೇವಲ ಒಂದೇ ಪದರದ ಗೋಡೆ(ನೋಡಿ: ಚಿತ್ರ‑೨೫). ಭದ್ರಕ ಕಂಬಗಳ ಮೇಲೆ ತೊಲೆ ಛಾವಣಿಗಳನ್ನು ಕೂಡಿಸಿದ್ದಾರೆ. ಭದ್ರಕ ಕಂಬಗಳ ಅಂತರವನ್ನು, ಒಂದು ಪದರದ ಕಲ್ಲಿನ ಹಲಗೆಗಳಿಂದ ಮುಚ್ಚಿದ್ದಾರೆ. ಈ ಹಲಗೆಗಳು ಪಕ್ಕಕ್ಕೆ ವಾಲದಿರ ಲೆಂದು, ಭದ್ರಕ ಕಂಬಗಳ ಪಾರ್ಶ್ವಗಳಲ್ಲಿ ಗಾಡಿ ಕೊರೆದು ಹಲಗೆಗಳನ್ನು ಕೂರಿಸಿದ್ದಾರೆ.

ಸಾಮಾನ್ಯವಾಗಿ ದೇವಾಲಯಗಳಲ್ಲಿ ಛಾವಣಿಯ ಭಾರವನ್ನು ಹೊರಲು ಭದ್ರಕ ಸ್ತಂಭಗಳನ್ನು ನಿಲ್ಲಿಸಿ ಗೋಡೆಯನ್ನು ಕಟ್ಟುತ್ತಾರೆ. ಭದ್ರತೆಗಾಗಿ ಇರುವ ಸ್ತಂಭಗಳನ್ನು ಭದ್ರಕ ಕಂಬಗಳೆಂದು ಕರೆಯುವುದು ಈ ಕಾರಣಕ್ಕಾಗಿಯೆ. ಈ ಭದ್ರಕ ಕಂಬಗಳು ಯಾವಾಗಲೂ ಒಂದೇ ಕಲ್ಲಿನಿಂದ ಕೊರೆದು ಮಾಡಿದ ದಿಂಡನ್ನು ಹೊಂದಿರುತ್ತವೆ. ಆದರೆ ವಿಶೇಷವೆಂದರೆ, ಈ ಗುಡಿಯ ಭದ್ರಕ ಕಂಬಗಳಲ್ಲಿ ಒಂದು ಕಂಬ ಮಾತ್ರ ಎರಡು ತುಂಡುಗಲ್ಲುಗಳನ್ನು ಒಂದರ ಮೇಲೊಂದರಂತೆ ಕೂಡಿಸಿ ಮಾಡಿರುವ ಭದ್ರಕಸ್ತಂಭ. ಈ ಗುಡಿಯ ನಿರ್ಮಾಣದಲ್ಲಿ ಹಣದ ಕೊರತೆಯಿಂದಾಗಿ ನಿರ್ಮಾಣ ಸಾಮಗ್ರಿಯಲ್ಲಿ ಮಿತವ್ಯಯ ಮಾಡಿದ್ದಾರೆಂದು ಹೇಳಿದೆ. ಆದರೆ ಈ ಶಿಲ್ಪಿ ಮಿತವ್ಯಯದ ಪರಮಾವಧಿಗೆ ಹೋಗಿ ಗುಣಮಟ್ಟದಲ್ಲೂ ಇಳಿಕೆಯನ್ನು ಮಾಡಿದ್ದಾನೆ. ಈ ಹುಳುಕುಗಳು ಸಾಧಾರಣವಾಗಿ ಕಣ್ಣಿಗೆ  ಕಾಣುವುದಿಲ್ಲ. ಏಕೆಂದರೆ ಇಂತಹ ನಿರ್ಮಾಣಗಳನ್ನು ಸಂಪೂರ್ಣವಾಗಿ ಗಾರೆಯಿಂದ ಗಿಲಾವ್ ಮಾಡಿರುತ್ತಾರೆ. ಆದರೆ ಗಾರೆಯ ಗಿಲಾವ್ ಸಂಪೂರ್ಣ ಅಳಿದು ಹೋಗಿರುವುದರಿಂದ, ಇಂತಹ ಅಪರೂಪದ ಕಳಪೆ ತಂತ್ರ ಬಯಲಾಗಿದೆ. ಈ ರೀತಿಯ ನಿರ್ಮಾಣ ಶಾಸ್ತ್ರಸಮ್ಮತವಲ್ಲ. ಆದ್ದರಿಂದ ಇವುಗಳನ್ನು ನಿರ್ಮಾಣ ವಿಧಾನದ ಅಡ್ಡ ಹಾದಿಗಳೆಂದು ಪರಿಗಣಿಸಬಹುದು.

ಮೂಲಗುಡಿಯ ವಾಯವ್ಯದಲ್ಲಿ ಚಂಡಿಕೇಶ್ವರನ ಗುಡಿಯಿದೆ. ಅದು ಈಗ ಸಂಪೂರ್ಣ ಕುಸಿದಿದೆ. ಚಂಡಿಕೇಶ್ವರನ ವಿಗ್ರಹ ಮಾತ್ರ ಭಗ್ನಾವಶೇಷಗಳ ಮಧ್ಯೆ ನಿಂತಿದೆ(ನೋಡಿ: ಚಿತ್ರ‑೨೬). ಕೆತ್ತನೆ ಒರಟಾಗಿ ಸರಳವಾಗಿದೆ. ಸಾಮಾನ್ಯವಾಗಿ ಚಂಡಿಕೇಶ್ವರನನ್ನು ಕುಳಿತಿರುವಂತೆ ಚಿತ್ರಿಸಿರುತ್ತಾರೆ. ವಿಶೇಷತೆಯೆಂದರೆ ಈ ಶಿಲ್ಪ ಅಂಜಲಿಬದ್ಧನಾಗಿ ನಿಂತಿರುವ ಚಂಡಿಕೇಶ್ವರನದು.

ದೇವಾಲಯದ ಕಾಲವನ್ನು ನಿಷ್ಕರ್ಷೆ ಮಾಡುವುದಕ್ಕೆ ಯಾವುದೇ ನಿಖರ ಆಧಾರಗಳಿಲ್ಲ. ಇಲ್ಲಿಯ ಶಾಸನಗಳೆಲ್ಲವೂ ಕ್ರಿ.ಶ. ೧೨ನೆಯ ಶತಮಾನ ಮತ್ತು ನಂತರದ ಕಾಲದ್ದಾಗಿವೆ. ಈ ದೇವಾಲಯದ ನಿರ್ಮಾಣದಲ್ಲಿ ಮಲಯಾಳದ ಶಿಲ್ಪಿಯೊಬ್ಬನು ಕೆಲಸ ಮಾಡಿದನೆಂದು, ಇಲ್ಲಿಯ ನವರಂಗದ ಕಂಬದ ಮೇಲಿನ ಶಾಸನದಿಂದ ತಿಳಿದುಬರುತ್ತದೆ. ತಮಿಳುನಾಡಿನಿಂದ ಶ್ರೀವೈಷ್ಣವ ಧರ್ಮೀಯರು ತೊಣ್ಣೂರಿಗೆ ಬಂದು ನೆಲೆಸಿ ಅಲ್ಲಿ ದೇವಾಲಯಗಳನ್ನು ನಿರ್ಮಿಸಿದ ಕಾಲ ಕ್ರಿ.ಶ. ೧೨ನೆಯ ಶತಮಾನದ ಮಧ್ಯ ಭಾಗವೆಂದು ಆಗಲೇ ಹೇಳಿದೆ. ಈ ಹೇಳಿಕೆಗೆ ಇಲ್ಲಿಯದೇ ಆದ ನಂಬಿನಾರಾಯಣ, ನರಸಿಂಹ ಮತ್ತು ಶ್ರೀಕಷ್ಣ ದೇವಾಲಯಗಳ ನಿದರ್ಶನಗಳಿವೆ. ಅವರೊಂದಿಗೆ ತಮಿಳು ವಾಸ್ತು ಸಂಪ್ರದಾಯದಲ್ಲಿ ನಿಪುಣರಾದ ಶಿಲ್ಪಿಗಳು ಆಗಮಿಸಿದ್ದರು ಎಂಬುದೂ ಸಹ ಸಾಬೀತಾಗಿದೆ. ಕೇವಲ ತಮಿಳು ಸಂಪ್ರದಾಯದ ವಾತಾವರಣದಲ್ಲಿ ಕನ್ನಡ ವಾಸ್ತು ಸಂಪ್ರದಾಯದ ಹೊಯ್ಸಳ ಶಿಲ್ಪಿಗಳಿಗೆ ಯಾವುದೇ ಪ್ರೋಹೀಗಾಗಿ ಅವರು ತೊಣ್ಣೂರಿನಲ್ಲಿ ನೆಲಸಿದ್ದುದು ಅನುಮಾನಾಸ್ಪದವೇ. ಅಂತಹ ಪರಸ್ಥಿತಿಯಲ್ಲಿ ಕನ್ನಡಿಗ ಶೈವರ ಉಪಯೋಗಕ್ಕಾಗಿ ಈ ಕೈಲಾಸೇಶ್ವರ ದೇವಾಲಯ ಸ್ಥಳೀಯವಾಗಿ ನೆಲೆಸಿದ್ದ, ತಮಿಳು ಶಿಲ್ಪಿಗಳಿಂದ ನಿರ್ಮಾಣವಾಗಿರಬಹುದೆಂದು ಹೇಳಬಹುದು. ತೊಣ್ಣೂರಿನಲ್ಲಿ ಶ್ರೀವೈಷ್ಣವ ಧರ್ಮದ ಪ್ರಾಬಲ್ಯವಿತ್ತೆಂದು ಅಲ್ಲಿಯ ವೈಷ್ಣವ ದೇವಾಲಯಗಳ ಉಪಸ್ಥಿತಿಯಿಂದಲೂ, ತಮಿಳು ಶಾಸನಗಳಿಂದಲೂ ಸ್ಪಷ್ಟವಾಗುತ್ತದೆ. ಅಂದರೆ ತೊಣ್ಣೂರಿನಲ್ಲಿ ಶೈವಧರ್ಮದ ಪ್ರಾಬಲ್ಯ ಕುಗ್ಗಿತ್ತು. ಅದಕ್ಕೆ ರಾಜರ, ಶ್ರೀಮಂತ ಜನರ ಪ್ರೋಶೈವ ಜನಸಂಖ್ಯೆಯು ಕಡಿಮೆಯಿತ್ತು ಎಂಬುದು ಸ್ಪಷ್ಟ. ಈ ಎಲ್ಲಾ ಅಂಶಗಳು ಕೈಲಾಸೇಶ್ವರ ದೇವಾಲಯದ ಸರಳತೆ, ನಿರ್ಮಾಣ ವಸ್ತುಸಾಮಾಗ್ರಿ ಮಿತವ್ಯಯ, ನಿರಲಂಕರಣ ಇತ್ಯಾದಿಗಳಿಂದ ವೇದ್ಯವಾಗುತ್ತದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ದೇವಾಲಯದ ನಿರ್ಮಾಣ ಕಾಲ ಕ್ರಿ.ಶ. ೧೨ನೆಯ ಶತಮಾನದ ಮಧ್ಯಭಾಗವಿರಬಹುದೆಂದು ಹೇಳಬಹುದು. ಈ ದೇವಾಲಯದ ದಕ್ಷಿಣ ಭಾಗಕ್ಕೆ ಗದ್ದೆಗಳ ನಡುವೆ ಇಟ್ಟಿಗೆ-ಗಾರೆ ನಿರ್ಮಿತ ಭಗ್ನ ಗುಡಿಯೊಂದಿದ್ದು, ಗರ್ಭಗೃಹ ಮತ್ತು ಅಂತರಾಳವನ್ನು ಹೊಂದಿದೆ(ನೋಡಿ: ಚಿತ್ರ‑೨೭). ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದೆ. ದೇವಾಲಯವು ಸುಮಾರು ೧೮ನೆಯ ಶತಮಾನದ ರಚನೆಯಂತೆ ಕಂಡುಬರುತ್ತದೆ. ಬಹುಶಃ ತೆರೆದ ಸ್ಥಿತಿಯಲ್ಲಿದ್ದ ಲಿಂಗಕ್ಕೆ ಈ ಕಟ್ಟಡ ನಿರ್ಮಿಸಿರಬೇಕು.

ಕೃಷ್ಣ ದೇವಾಲಯ

ನಂಬಿನಾರಾಯಣ ದೇವಾಲಯದ ಪೂರ್ವಕ್ಕೆ, ಸುಮಾರು ೨೦೦ ಮೀಟರ್ ದೂರದಲ್ಲಿ ನಿರ್ಮಿತವಾಗಿದೆ ಕೃಷ್ಣ ದೇವಾಲಯ(ನೋಡಿ: ಚಿತ್ರ‑೨೮). ಪೂರ್ವಾಭಿಮುಖವಾದ ಈ ದೇವಾಲಯದ ನಿರ್ಮಾಣ ಕಾಲ ಮತ್ತು ಅದಕ್ಕೆ ನೀಡಿರುವ ಅನೇಕ ದಾನಗಳನ್ನು ಸೂಚಿಸುವ ಶಾಸನಗಳಿವೆ. ಶಾಸನಗಳಲ್ಲಿ ಇಲ್ಲಿಯ ಕೃಷ್ಣ ಸ್ವಾಮಿಯನ್ನು ವೀಟ್ರಿರುಂದಪ್ಪೆರುಮಾಳ್[4], ವಿಟ್ಟಿರುಂದಪ್ಪೆರುಮಾಳ್[5] ಹಾಗೂ ತಿಲ್ಲೈಕೂತ್ತ ವಿಣ್ಣಗರ್[6] ಇತ್ಯಾದಿ ಹೆಸರುಗಳಿಂದ ಕರೆಯಲಾಗಿದೆ. ವಿಟ್ಟಿರುಂದಪ್ಪೆರುಮಾಳ್ (ತಮಿಳು) ಎಂದರೆ ಕುಳಿತಿರುವ ದೇವರು ಎಂದರ್ಥ. ಕೃಷ್ಣನು (ವಿಷ್ಣು) ತನ್ನ ಇಬ್ಬರು ಪತ್ನಿಯರಾದ ಶ್ರೀ ಮತ್ತು ಭೂ ಇವರೊಡನೆ ಗುಡಿಯ ಗರ್ಭಗೃಹದಲ್ಲಿ ಆಸೀನನಾಗಿ ಪ್ರತಿಷ್ಠಾಪಿತನಾಗಿದ್ದಾನೆ. ದೇವಾಲಯದ ಅಧಿಷ್ಠಾನದ ಮೇಲಿನ ಒಂದು ತಮಿಳು ಶಾಸನದಲ್ಲಿ (ಕ್ರಿ.ಶ. ೧೧೫೭ ಸೆಪ್ಟೆಂಬರ್ ೨೭ನೆಯ ತಾರೀಖು), ಕಾರೈಕುಡಿಯ ಉಲಗಾಮುಂಡನ್ ಎಂಬುವನ ಮಗನಾದ ಕೂತ್ತಾಂಡಿ ದಂಡನಾಯಕನು ಈ ದೇವಾಲಯವನ್ನು  ನಿರ್ಮಿಸಿ ದೇವರುಗಳನ್ನು ಪ್ರತಿಷ್ಠಾಪಿಸಿದನೆಂದು ಹೇಳಿದೆ[7]. ಮತ್ತೊಂದು ಶಾಸನದಲ್ಲಿ ಈತನು ತಿಲ್ಲೈಕೂತ್ತನೆಂದು ಪ್ರಸಿದ್ಧನೆಂದೂ ಹೇಳಿದೆ, ಹಾಗೂ ಕೃಷ್ಣನ ಪ್ರತಿಷ್ಠಾಪನೆಯ ಕಾಲದಲ್ಲಿ, ಲಕ್ಷ್ಮಿ, ಭೂದೇವಿಯರನ್ನೂ ಪ್ರತಿಷ್ಠಾಪಿಸಲಾಯಿತೆಂದು ಹೇಳಿದೆ. ಈ ಎಲ್ಲಾ ವಿಗ್ರಹಗಳು ಮೂಲಸ್ಥಿತಿಯಲ್ಲಿ ಗರ್ಭಗೃಹದಲ್ಲಿ ಈಗಲೂ ಇವೆ.

ತಳವಿನ್ಯಾಸದಲ್ಲಿ ದೇವಾಲಯವು, ಗರ್ಭಗೃಹ, ಶುಕನಾಸಿ, ಗೂಢಮಂಟಪ/ನವರಂಗ, ಗುಡಿಯ ಸುತ್ತಲಿನ ಅಂಗಳ, ಅದರ ಸುತ್ತಲೂ ಕೈಸಾಲೆ(ಮಾಲಿಕಾ), ಗೂಢಮಂಟಪದ ಮುಂಭಾಗದಲ್ಲಿ (ಪೂರ್ವಕ್ಕೆ) ವಿಶಾಲವಾದ ಮಹಾಮಂಟಪ ಮತ್ತು ಮುಖಮಂಟಪ, ಗೂಢಮಂಟಪಕ್ಕೆ ಉತ್ತರದಲ್ಲಿ ಮತ್ತೊಂದು ದ್ವಾರ ಮತ್ತು ಮುಖಮಂಟಪ ಇವಿಷ್ಟನ್ನು ಹೊಂದಿದೆ. ಇವೆಲ್ಲದರ ಸುತ್ತಲೂ ಮತ್ತೊಂದು ಪ್ರಾಕಾರವಿದೆ. ಈ ಹೊರಪ್ರಾಕಾರಕ್ಕೆ ಪೂರ್ವದಿಕ್ಕಿನಲ್ಲಿ ಮಹಾದ್ವಾರ, ದ್ವಾರಮಂಟಪ, ಮಹಾದ್ವಾರದಿಂದ ಒಳಕ್ಕೆ ಪ್ರವೇಶಿಸಿದರೆ ಸ್ವಲ್ಪ ಎಡಕ್ಕೆ ಬಲಿಪೀಠ, ಎಡ ಮೂಲೆಗೆ ಒಂದು ಸಣ್ಣ ಕೊಠಡಿ, ಬಲ ಮೂಲೆಗೆ ಕಲ್ಯಾಣಮಂಟಪಗಳಿವೆ. ಪ್ರಾಕಾರದ ವಾಯವ್ಯ ಮೂಲೆಯಲ್ಲಿ ಅಮ್ಮನವರ ಗುಡಿಯಿದೆ. ಈ ಗುಡಿಯ ಮುಂದೆ ಪ್ರಾಕಾರದ ಉದ್ದಕ್ಕೂ ಹಾಗೂ ಪ್ರಾಕಾರಕ್ಕೆ ಕೂಡಿಕೊಂಡಂತೆ, ಮೂರಂಕಣ ಆಳದ ಮಾಲಿಕೆಯಿದೆ. ಈ ಮಾಲಿಕೆ ಮುಂದುವರೆದು ಕಲ್ಯಾಣ ಮಂಟಪವನ್ನು ಕೂಡಿಕೊಂಡಿದೆ. ಉಳಿದಂತೆ ವಿಶಾಲ ಪ್ರಾಂಗಣ ಒಳಪ್ರಾಕಾರದ ಸುತ್ತಲೂ ಇದೆ.

ಮೂಲಗುಡಿಯ ಹೊರ ಉದ್ದ  ೩೦ ಅಡಿ, ಅಗಲ ೧೬ ಅಡಿಗಳು. ಒಳಪ್ರಾಕಾರದ ಒಳಮುಖದ ಅಗಲ ೪೬ ಅಡಿ, ಉದ್ದ ೫೪ ಅಡಿ. ಗೂಢಮಂಟಪದ ಅಗಲ ೪೬ ಅಡಿ, ಉದ್ದ ೫೪ ಅಡಿ. ಒಳಪ್ರಾಕಾರದ ಒಳ ಉದ್ದ ೧೧೦ ಅಡಿಗಳು, ಅಗಲ ೪೬ ಅಡಿಗಳು. ಹೊರಪ್ರಾಕಾರದ ಒಳ ಉದ್ದ ೧೮೬ ಅಡಿಗಳು, ಮತ್ತು ಅಗಲ ೧೩೬ ಅಡಿಗಳು(ಇವೆಲ್ಲ ಅಂದಾಜಿನ ಅಳತೆಗಳು). ಮೂಲದೇವಾಲಯ ಈಗಿರುವ ರೂಪಕ್ಕಿಂತ ಸ್ವಲ್ಪ ವಿಭಿನ್ನವಾಗಿತ್ತು. ಕಳೆದ ಶತಮಾನದಲ್ಲಿ ನಡೆದ ಹಲವಾರು ದುರಸ್ತಿ ಕಾಮಗಾರಿಗಳಿಂದಾಗಿ, ದೇವಾಲಯ ಈಗಿನ ಸ್ಥಿತಿಯಲ್ಲಿದೆ. ಅಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿ ನೋಡಿದರೆ, ಹಾಗೂ ಈ ಮುಂಚೆ ದೇವಾಲಯವನ್ನು ಕಂಡಿದ್ದ ಅರ್ಚಕರ ಹೇಳಿಕೆಯ ಮೇರೆಗೆ, ಮೂಲ ದೇವಾಲಯದ ರೂಪವನ್ನು ಈ ರೀತಿ ವಿವರಿಸಬಹುದು. ದೇವಾಲಯ ಮೂಲರೂಪದಲ್ಲಿ ಗರ್ಭಗೃಹ, ಶುಕನಾಸಿ/ಅರ್ಧಮಂಟಪ ಸೇರಿಕೊಂಡು ಒಂದು ಭಾಗವಾಗಿತ್ತು. ಅದರ ಅಕ್ಷದಲ್ಲಿ, ಸುಮಾರು ಒಂದಂಕಣ ಜಾಗಬಿಟ್ಟು, ದೇವಾಲಯದ ಅಧಿಷ್ಠಾನದ ಮಟ್ಟದಷ್ಟೇ ಎತ್ತರದ ಅಧಿಷ್ಠಾನವುಳ್ಳ, ಪ್ರತ್ಯೇಕ ಚತುರಶ್ರಾಕಾರದ (೨೦’x೨೦’) ಮಹಾಮಂಟಪ ನಿರ್ಮಾಣವಾಗಿತ್ತು. ಈ ಮಹಾಮಂಟಪವು, ಸಾಲಿಗೆ ನಾಲ್ಕರಂತೆ ೧೬ ಕಂಬಗಳನ್ನು ನಾಲ್ಕು ಸಾಲಿನಲ್ಲಿ ಹೊಂದಿತ್ತು. ಈ ಕಂಬಗಳ ಆಧಾರದ ಮೇಲೆ ಮಹಾಮಂಟಪಕ್ಕೆ ಪ್ರತ್ಯೇಕ ಮೇಲ್ಛಾವಣಿಯಿತ್ತು. ಕೈಸಾಲೆ ಪೂರ್ವಮುಖದಲ್ಲಿ ಮಾತ್ರ ಎರಡಂಕಣ ಆಳವಿದ್ದು, ಉಳಿದಂತೆ ಒಂದಂಕಣ ಆಳದ್ದಾಗಿತ್ತು. ಈ ಕೈಸಾಲೆಗೆ ಹೊಂದಿಕೊಂಡಂತೆ ಅದರ ಹಿಂಭಾಗದಲ್ಲಿ ಪ್ರಾಕಾರಗೋಡೆಯಿತ್ತು. ಪ್ರಾಕಾರಕ್ಕೆ ಪೂರ್ವದಲ್ಲಿ ಮತ್ತು ಉತ್ತರದಲ್ಲಿ ಒಂದೊಂದು ದ್ವಾರವಿತ್ತು. ಪೂರ್ವದ್ವಾರದ ಮುಂದೆ ಒಂದು ವಿಶಾಲ ಮಹಾಮಂಟಪ ಮತ್ತು ಮುಖಮಂಟಪವಿತ್ತು. ಮುಖಮಂಟಪಕ್ಕೆ ತ್ರಿಖಂಡ ಸೋಪಾನವಿತ್ತು. ಉತ್ತರದ ದ್ವಾರಕ್ಕೂ ಸಹ ಅದೇ ರೀತಿ ಒಂದಂಕಣದ ಮುಖಮಂಟಪ ವಿತ್ತು. ಇವೆಲ್ಲವೂ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಈಗಲೂ ಅಂತೆಯೇ ಉಳಿದಿವೆ. ಆಗಿರುವ ಬದಲಾವಣೆಗಳನ್ನು ಮಾತ್ರ ಈಗ ಗಮನಿಸೋಣ.

ಮೂಲದೇಗುಲದ ತಳವಿನ್ಯಾಸ, ನರಸಿಂಹ ದೇವಾಲಯದ ಒಂದು ವಿಸ್ತೃತ ರೂಪವೇ ಆಗಿತ್ತೆಂದು ಹೇಳಬಹುದು. ಗುಡಿ ಮತ್ತು ಅದರ ಮುಂದಿನ ಮಂಟಪದ ಸುತ್ತಲೂ ಅಂಗಳ ಹರಡಿದ್ದುದರಿಂದ ಗಾಳಿಬೆಳಕುಗಳ ವ್ಯವಸ್ಥೆ ಚೆನ್ನಾಗಿತ್ತು. ಒಳಭಾಗ ವಿಶಾಲವಾಗಿತ್ತು. ಈಗ ಗೂಢಮಂಟಪವಾಗಿರುವ ಭಾಗ ಸುತ್ತಲೂ ತೆರೆದಿದ್ದು, ಮಹಾಮಂಟಪವಾಗಿತ್ತು.

ಕಳೆದ ಶತಮಾನದ ದುರಸ್ತಿ ಕಾರ್ಯದಲ್ಲಿ ಮಹಾಮಂಟಪದ ಸುತ್ತಲೂ ಇದ್ದ ಅಂಗಳದ ನೆಲಮಟ್ಟವನ್ನು ಏರಿಸಿ, ಮೂಲಗುಡಿಯ ಮುಂಭಾಗ, ಮಹಾಮಂಟಪದ ನೆಲ ಮತ್ತು ಅದರ ಸುತ್ತಲಿನ ಮಾಲಿಕೆಯ ನೆಲವನ್ನು ಒಂದೇ ಮಟ್ಟಕ್ಕೆ ಏರಿಸಿದರು. ಅದೇ ರೀತಿ ಮಹಾಮಂಟಪದ ಸುತ್ತಲಿನ ಅಂಗಳವನ್ನು ಛಾವಣಿಯಿಂದ ಮುಚ್ಚಿ, ಮಹಾಮಂಟಪ, ಅಂಗಳ ಮತ್ತು ಅದಕ್ಕೆ ಹೊಂದಿಕೊಂಡಿದ್ದ ಮಾಲಿಕೆ ಎಲ್ಲವನ್ನೂ ಕೂಡಿಸಿ ಒಂದು ಗೂಢಮಂಟಪವನ್ನಾಗಿ ಪರಿವರ್ತಿಸಿದರು. ಗುಡಿಯ ಸುತ್ತಲಿನ ಪ್ರದಕ್ಷಿಣಾವರಣವನ್ನು ಹಾಗೆಯೇ ಉಳಿಸಿ ಅಲ್ಲಿಗೆ ಇಳಿಯಲು ಸೋಪಾನ ಸೌಕರ್ಯ ಕಲ್ಪಿಸಿದರು. ಈ ರೀತಿ ದುರಸ್ತಿಕಾರ್ಯದಿಂದಾಗಿ ಗುಡಿಗೆ ಮಹಾಮಂಟಪದ ಬದಲಿಗೆ ವಿಶಾಲವಾದ ಗೂಢಮಂಟಪ ದೊರೆಯಿತು. ಆದರೆ ಇದಕ್ಕೆ ಗಾಳಿ ಬೆಳಕಿನ ಕೊರತೆ ಉಂಟಾಗಿದೆ.


[1] ಎ.ಕ. ಸಂ.೬ ಪಾಂ. ೧೨೦

[2] ಅದೇ, ಪಾಂ. ೧೧೬

[3] ಅದೇ, ಪಾಂ. ೧೧೭

[4] ಅದೇ, ಪಾಂ. ೭೫

[5] ಅದೇ, ಪಾಂ. ೮೮

[6] ಅದೇ, ಪಾಂ. ೮೬

[7] ಅದೇ, ಪಾಂ. ೮೬