ಮೂಲಗುಡಿಯನ್ನು ಗ್ರಾನೈಟ್ ಶಿಲೆಯಲ್ಲಿ, ಪಾದಬಂಧ ಅಧಿಷ್ಠಾನದ ಮೇಲೆ ನಿರ್ಮಿಸಿದ್ದಾರೆ(ನೋಡಿ: ಚಿತ್ರ‑೨೯). ಉಪಾನ, ಜಗತಿ, ತ್ರಿಪಟ್ಟಕುಮುದ, ಗಳ, ಪಟ್ಟಿಕ, ಗಳ ಮತ್ತು ಪ್ರತಿ ಇವಿಷ್ಟೂ ದಿಂಡುಗಳು ಅಧಿಷ್ಠಾನದಲ್ಲಿವೆ. ಉಪಾನ ಹೆಚ್ಚು ಪ್ರಧಾನವಾಗಿ ಮುಂಚಾಚಿದೆ. ಅಲ್ಲದೆ ಉಪಾನದ ಮೇಲ್ಭಾಗದಲ್ಲಿ ಅಧೋಪದ್ಮ ರೀತಿಯ ಇಳಿಜಾರನ್ನು, ಸಣ್ಣಸಣ್ಣ ಪಟ್ಟಿಗಳನ್ನು ಕಡೆದು ಆಕರ್ಷಕವಾಗಿ ಮಾಡಿದ್ದಾರೆ. ಇದೇ ರೀತಿ ತ್ರಿಪಟ್ಟಕುಮುದ, ಮಹಾಪಟ್ಟಿ ಮತ್ತು ಪ್ರತಿಗಳಲ್ಲಿ ಸಣ್ಣಸಣ್ಣ ಕಂಪಗಳನ್ನು ಮೇಲೆ ಕೆಳಗೆ ಕೆತ್ತನೆ ಮಾಡಿದ್ದಾರೆ. ಗಳಗಳಲ್ಲಿ, ಗಳಪಾದಗಳ ನಿರೂಪಣೆಯಿದೆ.

ಭಿತ್ತಿಯ ನಿರೂಪಣೆಯಲ್ಲಿ ಭಿತ್ತಿಪಾದಗಳು, ಕೋಷ್ಟಗಳು ಮತ್ತು ಸ್ತಂಭಪಂಜರಗಳಿವೆ (ನೋಡಿ: ಚಿತ್ರ‑೩೦). ಅಧಿಷ್ಠಾನ ಮತ್ತು ಭಿತ್ತಿಯ ಎಲ್ಲಾ ಅಲಂಕರಣಗಳೂ, ನರಸಿಂಹಸ್ವಾಮಿ ದೇವಾಲಯದ ತದ್ರೂಪವಾಗಿದ್ದು, ಈ ಎರಡೂ ದೇಗುಲಗಳನ್ನು, ಒಂದಾದ ಮೇಲೊಂದರಂತೆ, ಒಂದೇ ಶಿಲ್ಪಿಗಳ ಪಂಗಡವು ನಿರ್ಮಿಸಿದಂತೆ ತೋರುತ್ತದೆ. ಆದರೆ ಅಲಂಕರಣೆಯಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸ-ವಿಶೇಷಗಳನ್ನು ಈ ದೇವಾಲಯದಲ್ಲಿ ಮಾಡಲಾಗಿದೆ. ನರಸಿಂಹಸ್ವಾಮಿ ದೇವಾಲಯದಲ್ಲಿ ಸ್ತಂಭಪಂಜರದ ಮೇಲ್ತುದಿಯಲ್ಲಿ ಕೂಟಶಿಖರವನ್ನು ಕಂಡರಿಸಲಾಗಿದೆ. ಪ್ರಸ್ತುತ ದೇಗುಲದಲ್ಲಿ ಕೂಟಶಿಖರಕ್ಕೆ ಬದಲಾಗಿ ಪಂಜರ ಶಿಖರವನ್ನು ಕೊರೆಯಲಾಗಿದೆ. ಪಂಜರ ಶಿಖರದ ಕುದುರೆಲಾಳಾಕಾರದ ಮುಖಭಾಗ ಮತ್ತು ಅದೇ ಆಕಾರದ ಗಾಢ, ಗಾಢದ ಸುತ್ತಲೂ ಪದ್ಮದಳ ಪಟ್ಟಿಯನ್ನು ಕೊರೆಯಲಾಗಿದೆ. ಗಾಢ ಮಾತ್ರ ಸಂಪೂರ್ಣ ಖಾಲಿ ಇದೆ. ಪಾರ್ಶ್ವ ಗೋಡೆಗಳ ಎರಡೂ ಹಿಂಬಣೆಗಳಲ್ಲಿ ಒಂದೇ ರೀತಿಯ ಸ್ತಂಭಪಂಜರಗಳಿವೆ. ಕೋಷ್ಟಗಳ ಮೇಲಿನ ಶಿಖರಗಳಲ್ಲೂ ಇಲ್ಲಿ ವ್ಯತ್ಯಾಸ ಮಾಡಲಾಗಿದೆ. ನರಸಿಂಹಸ್ವಾಮಿ ದೇಗುಲದಲ್ಲಿ ಕೂಟ ಶಿಖರಗಳ ಕಂಡರಣೆಯಿದೆ, ಆದರೆ, ಅದೇ ಇಲ್ಲಿ ಶಾಲಶಿಖರ ಮಾದರಿಯಲ್ಲಿ ರೂಪಿತವಾಗಿದೆ.

ದೇವಾಲಯದ ಭಿತ್ತಿ ಕೋಷ್ಟಗಳಲ್ಲಿ ಸಣ್ಣ-ಸಣ್ಣ ಪೀಠಗಳ ಕೆತ್ತನೆಗಳಿದ್ದರೂ ಅಲ್ಲಿ ಈಗ ಯಾವುದೇ ಶಿಲ್ಪಗಳು ಉಳಿದಿಲ್ಲ. ಭಿತ್ತಿಪಾದದ ಅಲಂಕರಣೆಯಲ್ಲಿ ಹೆಚ್ಚಿನ ವಿವರಗಳು ಕಾಣಬರುತ್ತವೆ. ಭಿತ್ತಿಪಾದದ ಮೇಲಿನ ‘ದಾನಿಯ’ ಮೇಲ್ಮೈಯಲ್ಲಿ ಪತ್ರಾಲಂಕರಣವಿದೆ. ದಾನಿಯ ಕೆಳಭಾಗದಲ್ಲಿ, ದಿಂಡಿನ ಮೇಲೆ ಮುಕ್ತಾಗ್ರಾಸಗಳ ಕೆತ್ತನೆಯ ಪ್ರಯತ್ನಗಳಾಗಿವೆ. ಕೆಲವೆಡೆ ಕೆತ್ತನೆಯು ಅಪೂರ್ಣವಾಗಿಯೇ ಇದೆ. ಉತ್ತರಾ, ವಲಭಿಗಳೂ ಸಾಧಾರಣ ಹಾಗೂ ನಿರಲಂಕೃತ. ಕಪೋತದ ಕೆತ್ತನೆ ಸ್ಪಷ್ಟ ಮತ್ತು ಸಂಪೂರ್ಣವಾಗಿದೆ. ಮೇಲೆ ಇಳಿಜಾರಿನ, ಕಾಲುವೃತ್ತಾಕಾರದ ಕಪೋತ ಇದ್ದು, ಕೆಳಭಾಗ ಟೊಳ್ಳಾಗಿದೆ. ಮುಂಭಾಗದಲ್ಲಿ ಸಾಲಾಗಿ ನೇತ್ರನಾಸಿಗಳು (ಅವಳಿ) ಇವೆ. ನಾಸಿಗಳಲ್ಲಿನ ಗಾಢಗಳು ಕೆಲವು ವೃತ್ತಾಕಾರದ್ದು, ಕೆಲವು ಲಾಳಾಕಾರದ್ದು, ಆದರೆ ಎಲ್ಲವೂ ಖಾಲಿ. ನಾಸಿಗಳ ಮೇಲೆ ಉದ್ದ ಕತ್ತಿನ ಖಾಲಿ ಶೀರ್ಷಿಕೆ ಇದೆ. ಇದರಲ್ಲಿ ಕೀರ್ತಿಮುಖಗಳಿಲ್ಲ. ಕೆತ್ತನೆಯೂ ಒರಟು.

ಕಪೋತದ ಮೇಲಿನ ವಾಜನ ಇಲ್ಲಿ ಗಮನಿಸಬೇಕಾದ ಅಂಶ. ನಂಬಿನಾರಾಯಣ ಗುಡಿಯ ವಾಜನವನ್ನು ವಿವರಿಸುವಾಗ ಹೊಯ್ಸಳ-ದ್ರಾವಿಡ ಶೈಲಿಯ ವಾಜನ ಮತ್ತು ಚೋಳ-ದ್ರಾವಿಡ ಶೈಲಿಯ ವಾಜನಗಳ ಅಲಂಕರಣ ವಿಧಾನ ವ್ಯತ್ಯಾಸಗಳನ್ನು ಗಮನಿಸಿದ್ದೇವೆ. ಪ್ರಸ್ತುತ ಕೃಷ್ಣ ದೇವಾಲಯದ ವಾಜನವು ಚೋಳ-ದ್ರಾವಿಡ ರೀತಿಯದ್ದಾಗಿರುವುದು ಇಲ್ಲಿಯ ವಿಶೇಷ. ವಾಜನದ ಹೊರಮುಖದಲ್ಲಿ ವ್ಯಾಳಮಾಲೆಯ ಅಲಂಕರಣವನ್ನು ಈ ದೇವಾಲಯದಲ್ಲಿ ಕಾಣಬಹುದು.

ಗರ್ಭಗೃಹದ ಮೇಲೆ ನೇರವಾಗಿ ಅಷ್ಟಮುಖದ ಗ್ರೀವ ಮತ್ತು ಶಿಖರಗಳಿವೆ(ನೋಡಿ: ಚಿತ್ರ‑೩೧).ಇಟ್ಟಿಗೆ ಗಾರೆಯಲ್ಲಿ ಮಾಡಿರುವ ಈ ಗ್ರೀವ ಮತ್ತು ಶಿಖರಗಳು ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ದುರಸ್ತಿಯಾಗಿದೆ. ಈ ಭಾಗದಲ್ಲಿ ನಾಲ್ಕು ಗ್ರೀವಕೋಷ್ಟಗಳೂ ಹಾಗೂ ಮಹಾನಾಸಿಗಳು ಮತ್ತು ನಾಲ್ಕು ಕ್ಷುದ್ರನಾಸಿಗಳು ಇವೆ. ಯಾವುದೇ ಗ್ರೀವ ದೇವತೆಯ ಶಿಲ್ಪವಿಲ್ಲ. ಈ ಶಿಖರವು ಸ್ವಸ್ತಿಬಂಧ  ರೀತಿಯದು.

ಗರ್ಭಗೃಹದ ಒಳಗಡೆಯಿರುವ ಮೂರ್ತಿಗಳು ಮೂಲ ಪ್ರತಿಷ್ಠಾಪನೆಗಳೇ ಆಗಿವೆ. ಮಧ್ಯದಲ್ಲಿ ಕೃಷ್ಣ, ಬಲಪಾರ್ಶ್ವದಲ್ಲಿ ಶ್ರೀಲಕ್ಷ್ಮೀ ಹಾಗೂ ಎಡಪಾರ್ಶ್ವದಲ್ಲಿ ಭೂದೇವಿಯರ ಪ್ರತಿಮೆಗಳು ಪ್ರತ್ಯೇಕ ಶಿಲೆಗಳಲ್ಲಿ ರೂಪುಗೊಂಡಿವೆ(ನೋಡಿ: ಚಿತ್ರ‑೩೨). ಎಲ್ಲಾ ಮೂರ್ತಿಗಳೂ, ಸುಖಾಸನದಲ್ಲಿ ಪ್ರಕಟಗೊಂಡಿವೆ. ಇದಕ್ಕಾಗಿಯೇ ಈ ದೇವರುಗಳನ್ನು ವಿಟ್ಟಿರುಂದಪ್ಪೆರುಮಾಳ್ ಎಂದು ಕರೆದಿರುವುದು. ಕೃಷ್ಣನಿಗೆ ನಾಲ್ಕು ಭುಜಗಳು. ಮೇಲಿನ ಬಲಗೈಯಲ್ಲಿ ಚಕ್ರವಿದ್ದು, ಎಡಗೈಯಲ್ಲಿ ಶಂಖವಿದೆ. ಕೆಳಗಿನ ಬಲಗೈ ಅಭಯ ಮುದ್ರೆಯಲ್ಲಿದ್ದರೆ, ಎಡಗೈ ಮಂಡಿಯ ಮೇಲಿದೆ. ಶ್ರೀದೇವಿಯ ಎಡಗೈ ಪದ್ಮವನ್ನು ಹಿಡಿದು ಅಭಯಮುದ್ರೆಯಲ್ಲಿದ್ದು, ಬಲಗೈ ವರದಮುದ್ರೆಯಲ್ಲಿದೆ. ಇದರಂತೆಯೇ ಭೂದೇವಿಯ ಬಲಗೈ ಪದ್ಮವನ್ನು ಹಿಡಿದು ಅಭಯಮುದ್ರೆಯಲ್ಲಿದ್ದು, ಎಡಗೈ ವರದಮುದ್ರೆಯಲ್ಲಿದೆ. ಶಿಲ್ಪಗಳು ಸಾಧಾರಣ ಅಲಂಕರಣವನ್ನೊಳಗೊಂಡಿವೆ. ಚೋಳ ಕೃತಿಗಳಾದರೂ ಕೃಷ್ಣ ಮತ್ತು ಭೂ ಸ್ಥೂಲಕಾಯದ ಶಿಲ್ಪಗಳು. ಶ್ರೀದೇವಿಯ ಶಿಲ್ಪಕ್ಕೆ ಹೆಚ್ಚಿನ ಆಕರ್ಷಣೆಯಿದೆ. ಶ್ರೀದೇವಿಯನ್ನು ಭೂದೇವಿಗಿಂತ ಹೆಚ್ಚು ಆಕರ್ಷಕವನ್ನಾಗಿ ಕಂಡರಿಸುವುದು ಶಿಲ್ಪಿಗಳ ವಾಡಿಕೆ ಇದ್ದಿರಬೇಕು. ಏಕೆಂದರೆ ಶ್ರೀಲಕ್ಷ್ಮೀ ಸೌಂದರ್ಯಕ್ಕೆ ಹೆಸರುವಾಸಿ. ಇದರಿಂದಾಗಿ ಇವೆರಡು ಶಿಲ್ಪಗಳು ಒಂದೆಡೆ ಮೂಡಿಬಂದಾಗ ಶ್ರೀಯನ್ನು ಭೂಗಿಂತ ಹೆಚ್ಚು ಸುಂದರವಾಗಿ ಕಡೆದಿರುವುದು ಇನ್ನೂ ಕೆಲೆವೆಡೆ ಕಂಡುಬಂದಿದೆ (ಉದಾ. ಮೈಸೂರಿನ ಬಳಿಯ ಬೆಳಗೊಳದ ಶ್ರೀನಿವಾಸ ಕ್ಷೇತ್ರ). ಮುಖಲಕ್ಷಣದಲ್ಲಿ ಕೃಷ್ಣ ಮತ್ತು ಭೂದೇವಿ ಒಂದು ರೀತಿಯ ಶಿಲ್ಪಗಳು. ಇಬ್ಬರಿಗೂ ಸ್ಥೂಲ ಕಾಯ, ಬೊಜ್ಜು ಮುಖ. ಲಕ್ಷ್ಮಿಯ ಮುಖಚರ್ಯೆ ಬೇರೆ ರೀತಿಯದೇ ಆಗಿದೆ. ಇದಕ್ಕೆ ಮಾಟವಾದ ಮುದ್ದಾದ ಆಕರ್ಷಕ ಮುಖಲಕ್ಷಣವಿದೆ. ಕಿರೀಟ ಕೂಡ ಈ ಶಿಲ್ಪಕ್ಕೆ ಕರಂಡ ಮುಕುಟ. ಭೂದೇವಿಗೆ ಕೃಷ್ಣನ ಕಿರೀಟದ ಮಾದರಿಯಲ್ಲಿ ಕೊಳಗ ರೀತಿಯ ಕಿರೀಟವಿದೆ.

ಗರ್ಭಗೃಹದ ದ್ವಾರಬಂಧ ಸರಳವಾದ ಕೆತ್ತನೆಗಳನ್ನೊಳಗೊಂಡಿದೆ. ಕೋಷ್ಟ ರೀತಿಯ ಕೆತ್ತನೆ ಇರುವ ಈ ದ್ವಾರಕ್ಕೆ, ಇಕ್ಕೆಲಗಳಲ್ಲಿ ಒಂದೊಂದು ಸೀಳುಗಂಬಗಳಿದ್ದು, ಅವುಗಳ ಮೇಲುಗಡೆ ಉತ್ತರಾ, ವಲಭಿ ಕಪೋತಗಳನ್ನು ಹೊತ್ತುಕೊಂಡಂತಿವೆ. ಅರ್ಧಮಂಟಪದ ನಿರೂಪಣೆಯಲ್ಲಿ ಯಾವುದೇ ವಿಶೇಷತೆಯಿಲ್ಲ. ಆ ಕಾಲದ ಎಲ್ಲಾ ಚೋಳ ದೇಗುಲಗಳಂತೆ ಇದರ ವಿನ್ಯಾಸವೂ ಇದೆ ಅಷ್ಟೆ. ಈ ದೇವಾಲಯದ ತಳವಿನ್ಯಾಸಕ್ಕೂ ನರಸಿಂಹಸ್ವಾಮಿಯ ದೇವಾಲಯಕ್ಕೂ ಯಾವುದೇ ವ್ಯತ್ಯಾಸವಿಲ್ಲ, ವಿಸ್ತೀರ್ಣವೊಂದನ್ನು ಬಿಟ್ಟರೆ ಈ ಗುಡಿಗೂ ಸಹ ಜಾಲಕಗಳನ್ನು ಕೂಡಿಸಿಲ್ಲ.

ಗೂಢಮಂಟಪದ/ನವರಂಗದ ಒಳ ವಿನ್ಯಾಸವು ತೀರ ಸಾಧಾರಣವಾಗಿದ್ದು, ಅತಿ ಸರಳತೆ ಮತ್ತು ಸಂಯಮಗಳ ಪ್ರದರ್ಶನ ಇಲ್ಲಿದೆ. ಇಲ್ಲಿಯ ಎಲ್ಲ ಕಂಬಗಳು ಅತಿ ಸಾಧಾರಣ, ಯಾವುದಕ್ಕೂ ಪೀಠವಿಲ್ಲ. ಎಲ್ಲ ಕಂಬಗಳೂ ಒಂದೇ ರೀತಿಯಾಗಿ, ಚೌಕಟ್ಟು ಬುಡವೂ ಇಲ್ಲದೆ, ಮೇಲಿನಿಂದ ಕೆಳಗಿನವರೆಗೆ ಉರುಳೆಯಾಕಾರದ ನಿರಲಂಕೃತ ದಿಂಡು, ಮೇಲೆ ಚೋಳ ವಿನ್ಯಾಸದ ಸಾಧಾರಣ ಆಧಾರ ಪೋತಿಕೆಗಳನ್ನು ಹೊಂದಿವೆ(ನೋಡಿ: ಚಿತ್ರ‑೩೩). ಛಾವಣಿಯೂ ಸಹ ನಿರಲಂಕೃತ. ಪ್ರದಕ್ಷಿಣಾವರಣದ ಸುತ್ತಲಿನ ಕೈಸಾಲೆಯೂ ಸಹ ಇದೇ ರೀತಿಯ ಸಾಧಾರಣ ನಿರ್ಮಾಣ(ನೋಡಿ: ಚಿತ್ರ‑೩೪). ಇಲ್ಲಿಯ ಕಂಬಗಳು ಚೌಕಟ್ಟಾದ ಬುಡದಮೇಲೆ ಎಂಟು,  ಹದಿನಾರು ಮುಖಗಳ ದಿಂಡನ್ನು ಹೊಂದಿವೆ. ಮೇಲೆ ಚೋಳ ವಿನ್ಯಾಸದ ಸಾಧಾರಣ ಪೋತಿಕೆಗಳು. ಛಾವಣಿ ಸಾಧಾರಣ. ಪ್ರದಕ್ಷಿಣ ಕೈಸಾಲೆಯನ್ನು ಸುಭದ್ರ ರೀತಿಯ ಉಪಪೀಠದಮೇಲೆ ನಿರ್ಮಿಸಿದ್ದಾರೆ. ಕೈಸಾಲೆಯ ಕಪೋತ ಸಾಧಾರಣವಾದುದ್ದಾದರೂ ಎರಡು ಬಾಗಿನ ಸ್ವಲ್ಪ ವಿಶಾಲ ಕಪೋತ. ಈ ರೀತಿಯ ಕಪೋತ ನಂತರದ ವಿಜಯನಗರಕಾಲದಲ್ಲಿ ಹೆಚ್ಚು ಆಕರ್ಷಕವಾಗಿ ಮೂಡಿಬರುತ್ತವೆ. ಕೈಸಾಲೆಯ ಹಿಂಭಾಗದ ಗೋಡೆಯಲ್ಲಿ ಸಾಲಾಗಿ ಭದ್ರಕ ಕಂಬಗಳಿವೆ. ಮೇಲಿನಿಂದ ಕೆಳಗಿನವರೆಗೂ ಚೌಕಟ್ಟಾದ ದಿಂಡನ್ನು ಇವು ಹೊಂದಿವೆ. ಮೇಲೆ ಪೋತಿಕೆಯಿದೆ. ಈ ಭದ್ರಕ ಕಂಬಗಳ ವಿಶೇಷತೆಯೆಂದರೆ ಇವು ಭಿತ್ತಿಪಾದಗಳಂತೆ ಗೋಡೆಯಲ್ಲಿ ಕೊರೆದ ಭದ್ರಕ ಕಂಬಗಳು. ಸಾಮಾನ್ಯವಾಗಿ ಭದ್ರಕ ಕಂಬಗಳನ್ನು  ಪ್ರತ್ಯೇಕ ಕಂಬಗಳನ್ನಾಗಿ ನಿಲ್ಲಿಸಿರುತ್ತಾರೆ. ಆದರೆ ಇವುಗಳೆಲ್ಲವೂ ಭಿತ್ತಿಪಾದಗಳಂತೆ ಕೇವಲ ಅಲಂಕರಣಕ್ಕಾಗಿ ಮೂಡಿಬಂದಿರುವುದು ಇಲ್ಲಿಯ ವಿಶೇಷ. ಇದಕ್ಕೆ ಕಾರಣವಿಷ್ಟೆ. ಈ ಭದ್ರಕ ಕಂಬಗಳು, ಸುತ್ತಲಿನ ಎತ್ತರದ ಪ್ರಾಕಾರಗೋಡೆಯ ಭಾಗಗಳಾಗಿರುವುದರಿಂದ, ಈ ರೀತಿಯ ತೋರಿಕೆಯ, ಭಿತ್ತಿಪಾದಗಳಂತಹ ಭದ್ರಕ ಕಂಬಗಳಿವು. ನಿಜವಾದ ಏಕಶಿಲಾ ಭದ್ರಕ ಸ್ತಂಭಗಳನ್ನು ಹಿಂಭಾಗದಲ್ಲಿ ಪರದೆ ಗೋಡೆ ನಿರ್ಮಿಸಬೇಕಾದ ಸಂದರ್ಭಗಳಲ್ಲಿ ಮಾತ್ರ ನಿಲ್ಲಿಸುತ್ತಾರೆ. ಆದರೆ ಹಿಂಭಾಗದ ಗೋಡೆ ಇಲ್ಲಿ ಪರದೆ ಗೋಡೆಯಲ್ಲ ಪ್ರಾಕಾರಗೋಡೆ ಮಾತ್ರ. ಆದ್ದರಿಂದ ಭದ್ರಕ ಸ್ತಂಭ ರೀತಿಯ ಭಿತ್ತಿಪಾದಗಳಿವು. ಬಹು ಶಿಲೆಗಳಿಂದ ಮಾಡಿದಂತವು. ಗೂಢಮಂಟಪದ ಮುಂದಿನ ಮಹಾಮಂಟಪ, ಪೂರ್ವದ ಮುಖಮಂಟಪ, ಉತ್ತರದ ಮುಖಮಂಟಪ, ಅಮ್ಮನವರ ಗುಡಿಯ ಮುಂದಿನ ಮಂಟಪ, ಈಶಾನ್ಯದ ಮೂಲೆ ಕಲ್ಯಾಣ ಮಂಟಪ, ಇವೆಲ್ಲದರ ಕಂಬಗಳು ಏಕ ರೀತಿಯಾದವು. ಗೂಢಮಂಟಪದ ಕಂಬಗಳನ್ನೇ ಅವೂ ಸಹ ಹೋಲುತ್ತವೆ.

ದೇವಾಲಯದ ಮುಂಭಾಗದಲ್ಲಿ, ಮುಖಮಂಟಪದ ಮುಂದೆ, ಆಕರ್ಷಕವಾದ ಬಲಿಪೀಠವೊಂದಿದೆ(ನೋಡಿ: ಚಿತ್ರ‑೩೫). ವೇದಿಭದ್ರ ಉಪಪೀಠದ ಮೇಲೆ, ಎತ್ತರವಾಗಿ ನಿರ್ಮಾಣವಾಗಿರುವ ಈ ಬಲಿಪೀಠ ನೋಡುವುದಕ್ಕೆ ಅಂದವಾಗಿದೆ. ವೇದಿಭದ್ರ ಉಪಪೀಠ, ಮೇಲೆ ಎತ್ತರವಾದ ಅಧೋಪದ್ಮದ ಮೇಲೆ ಊರ್ಧ್ವಪದ್ಮವಿದೆ. ಈಶಾನ್ಯದ ಕಲ್ಯಾಣ ಮಂಟಪವು ನೋಡುವುದಕ್ಕೆ ವಿಶಾಲವಾಗಿದೆಯೇ ಹೊರತು ಸೌಂದರ್ಯದ ದೃಷ್ಟಿಯಿಂದ ಕಳಪೆ. ಹಜಾರದ ಹಿಂಭಾಗದಲ್ಲಿ ಎತ್ತರವಾದ ವೇದಿಕೆಯನ್ನು ಇದು ಹೊಂದಿದೆ. ಇಲ್ಲಿಯ ಎಲ್ಲಾ ಹದಿನೆಂಟು ಕಂಬಗಳೂ ಸರಳ ಸಾಧಾರಣ. ಆದರೆ ಎತ್ತರವಾಗಿವೆ ಮತ್ತು ಎಲ್ಲವೂ  ಚೌಕ-ಅಷ್ಟಮುಖದ ದಿಂಡನ್ನು ಹೊಂದಿವೆ.

ದೇವಾಲಯದ ಹೊರಪ್ರಾಕಾರದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ವಿಶೇಷತೆಯೇನೂ ಇಲ್ಲ. ವಾಯವ್ಯ ಮೂಲೆಯಲ್ಲಿ ಅಮ್ಮನವರ ಗುಡಿಯಿದೆ(ನೋಡಿ: ಚಿತ್ರ‑೩೬).ಇದು ಸಾಧಾರಣ ನಿರ್ಮಾಣ. ಗರ್ಭಗೃಹ ಮತ್ತು ಮುಂದೆ ತೆರೆದ ಮಂಟಪ ಇದೆ. ಗರ್ಭಗೃಹ ಮತ್ತು ಮಂಟಪಗಳನ್ನು ವೇದಿಭದ್ರ ಉಪಪೀಠದ ಮೇಲೆ ನಿರ್ಮಿಸಿದ್ದಾರೆ. ಗರ್ಭಗೃಹದ ಮೇಲೆ ಇತ್ತೀಚಿನ ದುರಸ್ತಿಯಾದ ಸ್ವಸ್ತಿಕ ಶಿಖರವನ್ನು ಹೋಲುವ ದ್ವಿತಲ ಪ್ರಾಸಾದವಿದೆ. ಮಂಟಪದ ಮುಂದೆ ಉತ್ತರ ಪ್ರಾಕಾರದ ಉದ್ದಕ್ಕೂ ಒಳಮುಖಕ್ಕೆ ಹೊಂದಿಕೊಂಡಂತೆ ಮೂರಂಕಣ ಆಳದ ಕೈಸಾಲೆಯಿದ್ದು, ಇದು ಈಶಾನ್ಯ ಮೂಲೆಯ ಕಲ್ಯಾಣ ಮಂಟಪದವರೆಗೂ ವಿಸ್ತರಿಸಿದೆ(ನೋಡಿ: ಚಿತ್ರ‑೩೭). ಇದರಲ್ಲಿ ಮೊದಲರ್ಧ ಸಾಧಾರಣ ವೇದಿಯ ಮೇಲೆ ನಿರ್ಮಿತವಾಗಿದೆ. ಉಳಿದ ಅರ್ಧ ವೇದಿಭದ್ರ ಉಪಪೀಠದ ಮೇಲೆ ನಿರ್ಮಿತವಾಗಿದೆ. ಕಂಬಗಳು  ಸಾಧಾರಣ ಚೌಕ, ಅಷ್ಟಮುಖ ಬುಡದ ಉರುಳೆದಿಂಡಿನ ಉಪಪೀಠದ ಕಂಬಗಳು. ಗೂಢಮಂಟಪದ ಪೂರ್ವದಿಕ್ಕಿನಲ್ಲಿ ಒಳಪ್ರಾಕಾರದ ಹೊರಮುಖಕ್ಕೆ ಹೊಂದಿಕೊಂಡಂತೆ ಮಹಾಮಂಟಪವು ನಿರ್ಮಾಣವಾಗಿದೆ(ನೋಡಿ: ಚಿತ್ರ‑೩೮). ಈ ಮಹಾಮಂಟಪಕ್ಕೂ ಪೂರ್ವ ದಿಕ್ಕಿನಲ್ಲಿ ಮುಖಮಂಟಪ ರೀತಿ ಮುಂಚಾಚಿದೆ. ನಾಲ್ಕು ಕಂಬಗಳಿರುವ ಈ ಮುಂಚಾಚಿಗೆ, ತ್ರಿಖಂಡ ಸೋಪಾನ, ಇಕ್ಕೆಲಗಳಲ್ಲಿ ಹಸ್ತಿ-ಹಸ್ತಗಳಿವೆ. ಗೂಢಮಂಟಪದ ಉತ್ತರ ದ್ವಾರಕ್ಕೂ ಒಂದು ಮುಖಮಂಟಪವಿದ್ದು, ಅದರ ನಿರ್ಮಾಣ ಎಲ್ಲದರಂತೆಯೆ ಇದೆ. ಆದರೆ ಅಚ್ಚುಕಟ್ಟಾಗಿದೆ, ಬೇರೆ ವಿಶೇಷತೆಯೇನೂ ಇಲ್ಲ.

ದೇವಾಲಯದ ಮಹಾದ್ವಾರ, ಆಗಲೇ ಹೇಳಿದಂತೆ, ಅಕ್ಷರೇಖೆಯ ಸ್ವಲ್ಪ ಉತ್ತರಕ್ಕಿದೆ. ಯಾವುದೇ ವೈಶಿಷ್ಟ್ಯವಿಲ್ಲದ ಸಾಧಾರಣ ರೀತಿಯ ನಿರ್ಮಾಣವಿದು(ನೋಡಿ: ಚಿತ್ರ‑೨೮). ಪ್ರಾಕಾರದ ಗೋಡೆಯ ನೇರದಿಂದ ಸ್ವಲ್ಪ ಮುಂದೆ ಚಾಚಿದೆ ಮಹಾದ್ವಾರ. ಪ್ರವೇಶದ್ವಾರ ಸ್ವಲ್ಪ ಆಕರ್ಷಕ ನಿರ್ಮಾಣ. ಪಾದಬಂಧ ಅಧಿಷ್ಠಾನದ ಮೇಲೆ ನಿರ್ಮಿತವಾಗಿದೆ. ದ್ವಾರಮಂಟಪ ಭಿತ್ತಿಯಲ್ಲಿ ಭಿತ್ತಿಪಾದಗಳ ಅಲಂಕರಣವಿದೆ. ಚೋಳ ವಿನ್ಯಾಸದ ‘ದಾನಿ’, ಕುಂಭ, ಮಂಡಿ, ಫಲಕ, ಇವಿಷ್ಟೂ ಭಾಗಗಳ ಅಲಂಕರಣ ಸ್ಪಷ್ಟವಾಗಿದೆ. ಮೇಲೆ ಕಪೋತವಿದೆ. ಕೈಪಿಡಿ ಇತ್ತೀಚಿನ ಇಟ್ಟಿಗೆ ಗಾರೆ ನಿರ್ಮಾಣ, ಮೇಲೆ ಗೋಪುರವಿಲ್ಲ. ಪ್ರವೇಶದ್ವಾರದ ದ್ವಾರಬಂಧದ ಪೇದ್ಯಗಳಲ್ಲಿ ವೈಷ್ಣವ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಮೇಲೆ ನೀಳ್ಗಂಬಗಳು ಮತ್ತು ಉತ್ತರಾ ಇದೆ. ಮೇಲೆ ಕಪೋತವಿದೆ. ಕಮಲ ಪಟ್ಟಿಯ ಸಾಧಾರಣ ಅಲಂಕರಣದ ದ್ವಾರಬಂಧವಿದು. ಲಲಾಟಬಿಂಬವಾಗಿ ಪದ್ಮದ ಕೆತ್ತನೆಯಿದೆ. ದ್ವಾರಬಂಧದ ನಿಲುವುಗಳ ಒಳಮುಖದಲ್ಲಿ ಸಾಲಭಂಜಿಕೆಯರ ಉಬ್ಬುಗೆತ್ತನೆಗಳಿವೆ. ಶಾಸ್ತ್ರೋಕ್ತವಾದ ಎಲ್ಲಾ ವಿವರ, ವಿನ್ಯಾಸಗಳಿದ್ದರೂ ದ್ವಾರಬಂಧ ಮಾತ್ರ ಸಾಧಾರಣವಾದದ್ದು.

ದೇವಾಲಯದ ಅಕ್ಷರೇಖೆಗೆ ಸಮಾನವಾಗಿ, ಮಹಾದ್ವಾರದ ಬಲಪಾರ್ಶ್ವದಲ್ಲಿ, ಪ್ರಾಕಾರದ ಗೋಡೆಯಲ್ಲಿ ಜಾಲಂಧ್ರವನ್ನು ಕೂಡಿಸಲಾಗಿದೆ. ಇದರ ಮೂಲಕ ನೇರವಾಗಿ ಗರ್ಭಗೃಹದಲ್ಲಿ ಪ್ರತಿಷ್ಠಾಪಿತವಾಗಿರುವ ಮೂರ್ತಿಗಳನ್ನು ನೋಡಬಹುದಾಗಿದೆ. ಈ ರೀತಿಯ ಜಾಲಂಧ್ರವನ್ನು ಕೂಡಿಸುವುದಕ್ಕೆ ಕಾರಣವಿಷ್ಟೆ. ದೇವಾಲಯದ ಒಳಕ್ಕೆ ಪ್ರವೇಶ ನಿಷಿದ್ಧರಾದವರಿಗೆ ಮೂರ್ತಿಯ ದರ್ಶನ ಮಾಡಲನುವು ಮಾಡಿಕೊಡುವುದೇ ಇದರ ಉದ್ದೇಶ.

ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ, ಅಕ್ಷರೇಖೆಗೆ ಸ್ವಲ್ಪ ಬಲಕ್ಕೆ ಒಂದು ಸಣ್ಣದಾದ ವಸಂತಮಂಟಪವಿದೆ(ನೋಡಿ: ಚಿತ್ರ‑೩೯). ಈ ಮಂಟಪ, ಪ್ರಾಕಾರದ ಪ್ರವೇಶದ ಪಾರ್ಶ್ವದ ಜಾಲಂಧ್ರ ಮತ್ತು ಗರ್ಭಗುಡಿ ಒಂದೇ ಅಕ್ಷರೇಖೆಯಲ್ಲಿದ್ದು, ವಸಂತಮಂಟಪದಲ್ಲಿ ನಡೆಯುವ ಕಾರ್ಯಕ್ರಮಗಳು, ನೇರವಾಗಿ, ಗರ್ಭಗುಡಿಯಲ್ಲಿರುವ ಮೂರ್ತಿಗೆ, ಜಾಲಂಧ್ರದ ಮೂಲಕ ಕಾಣಲೆಂದು ಈ ರೀತಿ ಮಾಡಿರಬಹುದು. ನಾಲ್ಕು ಕಂಬಗಳ ಒಂದಂಕಣದ ಈ ವಸಂತಮಂಟಪದ ಅಧಿಷ್ಠಾನ, ಈಗ ಸಂಪೂರ್ಣ ಮುಚ್ಚಿಹೋಗಿದೆ. ಕಂಬಗಳು ಚೌಕ, ಅಷ್ಟ, ಉರಳೆಯಾಕಾರದ ದಿಂಡನ್ನು ಹೊಂದಿವೆ. ಮೇಲ್ಛಾವಣಿ ಸಾಧಾರಣ. ಕೈಪಿಡಿ ಇಲ್ಲ.

ಗುಡಿಯ ಮಹಾದ್ವಾರದ ಮುಂಭಾಗದಲ್ಲಿ, ಬಲತುದಿಯಲ್ಲಿ ಪ್ರಾಕಾರದ ದಕ್ಷಿಣ ಗೋಡೆಯ ಅಕ್ಷಕ್ಕೆ ಸಮಾನಾಂತರವಾಗಿ ಸ್ವಲ್ಪ ಬಲಭಾಗಕ್ಕೆ, ಒಂದು ತೋರಣವಿದೆ(ನೋಡಿ: ಚಿತ್ರ‑೪೦). ಸುಮಾರು ೧೫-೨೦ ಅಡಿ ಎತ್ತರವಿರುವ ಈ ತೋರಣವು ಹೊಸ್ತಿಲಿನ ಮಟ್ಟಕ್ಕೆ ಹೂತುಹೋಗಿದೆ. ತೋರಣದಲ್ಲಿ ಹೊಸ್ತಿಲು, ನಿಲುವುಗಳು, ಮೇಲೆ ತೊಲೆ ಇದೆ. ಗ್ರಾನೈಟ್ ಶಿಲೆಯ ಈ ತೋರಣಕ್ಕೆ ‘ವೀರವಲ್ಲಾಳನ್ ತಿರುಗೋಪುರಂ’ ಎಂಬ ಹೆಸರನ್ನು ದ್ವಾರಬಂಧದ ಅಡ್ಡತೊಲೆಯ ಶಾಸನವೊಂದು ತಿಳಿಸುತ್ತದೆ.

[1] ಈ ತೋರಣ, ಗುಡಿಯ ಮುಂದಿನ ಈಗಿರುವ ಮಹಾದ್ವಾರದ ಮುಂದಿನ ಪ್ರಾಕಾರಕ್ಕೆ ಕಟ್ಟಿದ್ದ ತೋರಣವೆನಿಸುತ್ತದೆ. ಈಗ ಈ ಮೂರನೆಯ ಪ್ರಾಕಾರ ನಾಮಾವಶೇಷವಾಗಿದೆ. ಪ್ರಾಕಾರ ಇದ್ದುದಕ್ಕೆ ಸೂಚನೆಗಳೆಂದರೆ ಈ ತೋರಣಗಂಬಗಳ ಒಳ ಮತ್ತು ಮುನ್ಮುಖಗಳು ಮಾತ್ರ ಕೆತ್ತನೆಯನ್ನು ಹೊಂದಿದ್ದು, ಉಳಿದ ಮುಖಗಳು ಒರಟಾಗಿ ಪೂರ್ಣಗೊಂಡಿವೆ. ಇದರಿಂದಾಗಿ ಈ ಮುಖಗಳು ಪ್ರಾಕಾರದ ಗೋಡೆಯೊಳಕ್ಕೆ ಸೇರಿಕೊಂಡಿದ್ದವೆಂಬ ಅಂಶ ಸ್ಪಷ್ಟವಾಗುತ್ತದೆ. ಏನೇ ಆಗಲಿ ಈ ತೋರಣದಲ್ಲಿ ಸುಂದರ ವಾಸ್ತು ಮತ್ತು ಇತರ ವಿನ್ಯಾಸಗಳ ಅಲಂಕರಣೆ ಇದೆಯೇ ಹೊರತು ಯಾವುದೇ ಶಿಲ್ಪ, ಸಸ್ಯ, ಪ್ರಾಣಿಗಳ ಕೆತ್ತನೆಗಳಿಲ್ಲ.

ಉತ್ಸವಮಂಟಪಗಳು ಸಾಮಾನ್ಯವಾಗಿ ವಿಜಯನಗರಕಾಲದ ಒಂದು ನಿರ್ಮಾಣ ಸಂಪ್ರದಾಯ. ಉತ್ಸವ ಮೂರ್ತಿಗಳನ್ನು ಉತ್ಸವ ಸಮಯದಲ್ಲಿ ಊರ ಪರಿಸರದಲ್ಲಿ ಕೊಂಡೊಯ್ಯುವಾಗ ದರ್ಶನ, ಪೂಜೆ, ವಿಶ್ರಾಂತಿಗೆಂದು ಊರಿನ ವಿವಿಧೆಡೆಗಳಲ್ಲಿ, ಕೆರೆ, ಪುಷ್ಕರಣಿ, ನದೀತೀರ ಮುಂತಾದ ಪ್ರದೇಶಗಳಲ್ಲಿ ಉತ್ಸವ ಮಂಟಪಗಳನ್ನು ನಿರ್ಮಿಸುವುದು ವಾಡಿಕೆ(ನೋಡಿ: ಚಿತ್ರ‑೪೧). ಉತ್ಸವ ಮಂಟಪವು ಸಾಧಾರಣವಾಗಿ ಒಂದಂಕಣದ ಸಣ್ಣ ಮಂಟಪ, ಉಪಪೀಠದ ಮೇಲೆ ಇದರ ನಿರ್ಮಾಣ. ಭದ್ರತೆ, ರಕ್ಷಣೆಗಾಗಿ ಇದನ್ನು ಮುಂದೆ ಮಾತ್ರ ತೆರೆದಿರುವಂತೆ ಕಟ್ಟುವುದು ಸಂಪ್ರದಾಯ. ಮುಂಭಾಗದಲ್ಲಿ ಛಾವಣಿ ಇನ್ನೊಂದು ಅಂಕಣದಷ್ಟು ಮುಂದುವರೆದು ಎರಡು ಕಂಬಗಳ ಆಸರೆಯ ಮೇಲೆ ನಿಂತಿರುತ್ತದೆ. ಮುಂದಿನ ಈ ಅಂಕಣಕ್ಕೆ ಅಧಿಷ್ಠಾನ/ಪೀಠ ಇರುವುದಿಲ್ಲ. ಇದರಿಂದಾಗಿ ಎತ್ತರವಾದ ಪೀಠದ ಮೇಲೆ ದೇವರನ್ನು ಕೂಡಿಸಿದಂತೆ ಇರುತ್ತದೆ. ಮಂಟಪದ ಮೇಲೆ ಹಾರದ ನಿರ್ಮಾಣ, ವಿಮಾನದ ನಿರ್ಮಾಣ ಐಚ್ಛಿಕ.

ಇಂತಹ ಎರಡು ಉತ್ಸವ ಮಂಟಪಗಳು ನಂಬಿನಾರಾಯಣನ ಗುಡಿಯ ಮುಂಭಾಗದಲ್ಲಿ, ಕೃಷ್ಣ ದೇವಾಲಯದ ಹಿಂಭಾಗದ ಮೈದಾನದಲ್ಲಿ, ರಸ್ತೆಗೆ ಹೊಂದಿಕೊಂಡಂತೆ ನಿರ್ಮಿತವಾಗಿವೆ. ಗುಡಿಗೆ ಅನತಿ ದೂರದಲ್ಲಿ ಇರುವ ಈ ಮಂಟಪಗಳು ಎದುರು ಬದುರಾಗಿ ನಿರ್ಮಿತವಾಗಿವೆ(ನೋಡಿ: ಚಿತ್ರ‑೪೨, ೪೩). ಇವುಗಳ ನಿರ್ಮಾಣ ಅತಿ ಸರಳವಾಗಿದೆ. ಇದೇ ರೀತಿಯ ಉತ್ಸವ ಮಂಟಪವೊಂದು ಕೆರೆಗೆ ಹೋಗುವ ದಾರಿಯಲ್ಲಿ ಹಿಪ್ಪೆ ಮರದ ತೋಪಿನಲ್ಲಿದೆ(ಮೊರಾರ್ಜಿ ವಸತಿ ಶಾಲೆಯ ಆವರಣ). ಉತ್ಸವ ಮೂರ್ತಿಯನ್ನು ಕೆರೆಗೆ ತೀರ್ಥಸ್ನಾನಕ್ಕಾಗಿ ಕೊಂಡೊಯ್ಯುವ ಸಂದರ್ಭದಲ್ಲಿ ವಿಶ್ರಾಂತಿಗಾಗಿ ಈ ಮಂಟಪದಲ್ಲಿ ದೇವರನ್ನು ಕೂರಿಸುತ್ತಿದ್ದಿರಬಹುದು(ನೋಡಿ: ಚಿತ್ರ‑೪೪). ಈ ಪ್ರದೇಶ ದೇವಾಲಯಕ್ಕೆ ಸೇರಿತ್ತು.

ಕೃಷ್ಣ ದೇವಾಲಯದ ಸಂಪೂರ್ಣ ವಿವರಣೆಯನ್ನು ತಿಳಿದ ನಂತರ ಈ ದೇವಾಲಯದ ನಿರ್ಮಾಣ ಕಾಲದ ಬಗ್ಗೆ ಕೆಲವು ವಿಚಾರಗಳನ್ನು ಇಲ್ಲಿ ವಿಮರ್ಶಿಸುವುದು ಸೂಕ್ತ. ನಿಸ್ಸಂದೇಹವಾಗಿ ಈ ದೇವಾಲಯದಲ್ಲಿ ಕ್ರಿ.ಶ. ೧೧೫೭ ಸೆಪ್ಟೆಂಬರ್ ೨೭ನೇ ತಾರೀಖಿನಂದು ದೇವರ ಪ್ರತಿಷ್ಠಾಪನೆಯಾಯಿತೆಂದು ಶಾಸನ ತಿಳಿಸುತ್ತದೆ. ಹೀಗಾಗಿ ಮೂಲ ದೇವಾಲಯವೇನೊ ಆ ವರ್ಷದಲ್ಲೇ ನಿರ್ಮಾಣವಾಯಿತೆಂದು ತೀರ್ಮಾನಿಸಬಹುದು. ಆದರೆ ಈ ದೇವಾಲಯದ ಇತರೆ ಎಲ್ಲಾ ಭಾಗಗಳು ಈ ಕಾಲದಲ್ಲೇ ಪೂರ್ಣವಾಗಿತ್ತೆ, ನಂತರದಲ್ಲಿ ಈ ದೇವಾಲಯಕ್ಕೆ ಸೇರ್ಪಡೆಗಳು ಆದುವೆ ಎಂಬ ವಿಷಯ ತೀರ್ಮಾನ ವಾಗಬೇಕಾಗಿದೆ.

ದೇವಾಲಯಕ್ಕೆ ಒಂದರ ಒಳಗೊಂದು ಎರಡು ಪ್ರಾಕಾರಗಳು, ಅಂಗಳಗಳಿವೆ. ಒಳಪ್ರಾಕಾರ, ಮೂಲಗುಡಿ ಇವಿಷ್ಟೂ ಒಂದು ಭಾಗ. ಹೊರಪ್ರಾಕಾರ, ದ್ವಾರಮಂಟಪ, ಮಹಾಮಂಟಪ, ಕಲ್ಯಾಣ ಮಂಟಪ. ಅಮ್ಮನವರ ಗುಡಿ, ಮತ್ತು ಅದರ ಮುಂದಿನ ಮಂಟಪಗಳು ಇವೆಲ್ಲವೂ ಇನ್ನೊಂದು ಭಾಗ. ಗುಡಿಯ ಹೊರಪ್ರಾಕಾರದ ಹೊರಗಿನ ‘ವೀರವಲ್ಲಾಳನ್ ತಿರುಗೋಪುರ’, ವಸಂತ ಮಂಟಪ ಮತ್ತೊಂದು ಭಾಗ. ಹೀಗೆ ಮೂರು ವಿಭಿನ್ನ ವಾಸ್ತು ಸಂಕೀರ್ಣಗಳಿವೆ. ಇವುಗಳಲ್ಲಿ ಮೂಲಗುಡಿ, ಸುತ್ತಲಿನ ಮಾಲಿಕಾ, ಮುಂದಿನ ಗೂಢಮಂಟಪ ಮತ್ತು ಒಳಪ್ರಾಕಾರದ ಗೋಡೆ ಇವೆಲ್ಲವೂ ಮೂಲ ಚೋಳ ಶೈಲಿಯಲ್ಲಿದ್ದು, ಮೂಲ ಪ್ರತಿಷ್ಠಾಪನೆಯ ಸಮಯದಲ್ಲಿ (ಕ್ರಿ.ಶ. ೧೧೫೭) ಇವೆಲ್ಲವೂ ಇದ್ದುವೆಂದು ಸ್ಪಷ್ಟವಾಗುತ್ತದೆ.

ಪ್ರಾಯಶಃ ನಂತರದಲ್ಲಿ ಗುಡಿಗೆ ಹೊರಪ್ರಾಕಾರ ನಿರ್ಮಿತವಾಗಿರಬಹುದು. ಅಂದರೆ ಯಾವಾಗ ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ಖಚಿತ ಉತ್ತರ ನೀಡಲು ಯಾವ ಶಾಸನಾಧಾರಗಳೂ ಇಲ್ಲ. ಆದರೆ ಇದರ ಕಾಲದ ಬಗ್ಗೆ ಒಂದು ಊಹಾಧಾರಿತ ಕಾಲವನ್ನು ನೀಡಬಹುದು. ಅದೇನೆಂದರೆ, ಹೊರಪ್ರಾಕಾರದ ಹೊರಗಿನ ‘ವೀರವಲ್ಲಾಳನ್ ತಿರುಗೋಪುರ’. ಈ ಗೋಪುರದ ಹೆಸರಿನ ಬಗ್ಗೆ ಶಾಸನೋಲ್ಲೇಖವಿದೆಯೆ ಹೊರತು, ಕಾಲದ ಬಗ್ಗೆ ಇಲ್ಲ. ವೀರವಲ್ಲಾಳನ್ ಎಂಬುವನು ಹೊಯ್ಸಳ ವಂಶದ ವೀರಬಲ್ಲಾಳನೆ ಎಂಬುದಂತೂ ಖಚಿತ. ಈತನು ಎರಡನೆಯ ವೀರಬಲ್ಲಾಳ ಎಂಬುದನ್ನೂ ಸಮರ್ಥಿಸಬಹುದು. ಈತನ ಕಾಲ ಕ್ರಿ.ಶ. ೧೧೭೩-೧೨೨೦. ಈತನ ಕಾಲ ಹೊಯ್ಸಳ ರಾಜ್ಯಭಾರದ ಸುವರ್ಣಯುಗ. ಈತನ ಆಳ್ವಿಕೆಯಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಅತ್ಯಧಿಕ ಸಂಖ್ಯೆಯಲ್ಲಿ ದೇವಾಲಯ ನಿರ್ಮಾಣ ಕಾರ್ಯಗಳಾದವು. ‘ವೀರವಲ್ಲಾಳನ್ ಮಂಟಪ’ವೆಂದು ಹೆಸರಿರುವ ಮಹಾಮಂಟಪವೊಂದು ನಂಬಿನಾರಾಯಣನ ಗುಡಿಗೆ ಈತನ ಕಾಲದಲ್ಲಿ ಸೇರ್ಪಡೆಯಾಯಿತೆಂದು ಆಗಲೇ ತಿಳಿಸಿದೆ. ಇಮ್ಮಡಿ ಬಲ್ಲಾಳನ ಕಾಲದ ಶಾಸನಗಳು ತೊಣ್ಣೂರಿನ ವೈಷ್ಣವ ದೇವಾಲಯಗಳಲ್ಲಿ ದೊರೆತಿವೆ. ‘ವೀರವಲ್ಲಾಳನ್’ ಎಂಬುವನು ಹೊಯ್ಸಳ ಮೂರನೆಯ ಬಲ್ಲಾಳನಾಗಲು ಸಾಧ್ಯವಿಲ್ಲ. ಏಕೆಂದರೆ ಈತನ ಕಾಲದಲ್ಲಿ ಹೊಯ್ಸಳ ರಾಜ್ಯಭಾರದ ಅವನತಿ ಪ್ರಾರಂಭವಾಗಿತ್ತು. ದೇವಾಲಯ ನಿರ್ಮಾಣಗಳಿಗೆ ಪ್ರೋಕಡಿಮೆಯಾಗಿತ್ತು ಹಾಗು ಈತನ ಶಾಸನಗಳಾವುವೂ ತೊಣ್ಣೂರಿನಲ್ಲಿ ದೊರೆತಿಲ್ಲ. ಇದರಿಂದಾಗಿ ‘ವೀರವಲ್ಲಾಳನ್’ ಎಂಬುವನನ್ನು ಹೊಯ್ಸಳ ಇಮ್ಮಡಿ ಬಲ್ಲಾಳನೊಂದಿಗೆ ಸಮೀಕರಿಸುವುದು ಸೂಕ್ತ.

ಕೃಷ್ಣ ದೇವಾಲಯದ ಮುಂದಿನ ‘ವೀರವಲ್ಲಾಳನ್ ತಿರುಗೋಪುರ’ವಿರುವ ಜಾಗ, ಅದರ ಎತ್ತರ, ಆಕಾರ ಎಲ್ಲವನ್ನೂ ಈಗಾಗಲೇ ತಿಳಿಸಿದೆ. ಇವುಗಳ ಆಧಾರದಿಂದ ಈ ದೇವಾಲಯಕ್ಕೆ ಮೂರನೆಯ ಆವರಣ/ಪ್ರಾಕಾರವಿದ್ದಿರಬಹುದೆಂದು ಊಹಿಸಬಹುದಾಗಿದೆ. ಇದು ನಿಜವಾದ ಪಕ್ಷದಲ್ಲಿ, ಈ ಗುಡಿಯ ಎರಡನೆಯ ಆವರಣ, ದ್ವಾರಮಂಟಪ, ಅಮ್ಮನವರ ಗುಡಿ ಇತ್ಯಾದಿಗಳೆಲ್ಲವೂ ಇಮ್ಮಡಿ ಬಲ್ಲಾಳನ ಕಾಲದ ಹೊತ್ತಿಗಾಗಲೇ ಸಂಪೂರ್ಣವಾಗಿರಬೇಕು. ಮೂಲಗುಡಿ ಮತ್ತು ಒಳಪ್ರಾಕಾರವನ್ನು ಕಟ್ಟಿ ಪೂರೈಸಿದ ಕೆಲವೇ ವರ್ಷಗಳಲ್ಲಿ ಎರಡನೆಯ ಆವರಣ ಮತ್ತು ‘ವೀರವಲ್ಲಾಳನ್ ತಿರುಗೋಪುರ’ ಇವೆಲ್ಲವನ್ನೂ ಇಮ್ಮಡಿ ಬಲ್ಲಾಳನ ಕಾಲದಲ್ಲಿ, ನಿರ್ಮಿಸಿರಬೇಕು.

ಹೊಯ್ಸಳ ಕಾಲದಲ್ಲಿ ಪ್ರತ್ಯೇಕ ಕಲ್ಯಾಣ ಮಂಟಪಗಳನ್ನು, ವಸಂತ ಮಂಟಪಗಳನ್ನು ಮತ್ತು ಉತ್ಸವ ಮಂಟಪಗಳನ್ನೂ ನಿರ್ಮಿಸುವ ಸಂಪ್ರದಾಯವಿದ್ದಂತೆ ಕಂಡುಬಂದಿಲ್ಲ. ಕೃಷ್ಣ ದೇವಾಲಯಕ್ಕೆ ಸೇರಿರುವ ಈ ಎಲ್ಲಾ ಮಂಟಪಗಳೂ ಪ್ರಾಯಶಃ ವಿಜಯನಗರ ಕಾಲದಲ್ಲಿ ಈ ದೇವಾಲಯದ ನಿಗದಿತ ಸ್ಥಳಗಳಲ್ಲಿ ಸೇರ್ಪಡೆಯಾಗಿದೆಯೆನ್ನಬಹುದು.

ಊರಿನ ವಾಯವ್ಯಕ್ಕಿರುವ ಬೆಟ್ಟದ(ಸ್ಥಳಪುರಾಣದಲ್ಲಿ ಪದ್ಮಗಿರಿ ಎಂದಿದೆ)ಮೇಲೆ ಶ್ರೀನಿವಾಸನ ದೇವಾಲಯವಿದೆ. ಈ ದೇವರನ್ನು ಹುತ್ತಿತಿಮ್ಮಪ್ಪ ಎಂದು ಸ್ಥಳಿಯರು ಕರೆಯುತ್ತಾರೆ. ದೇವಾಲಯವು ವಿಜಯನಗರೋತ್ತರ ಕಾಲದ ರಚನೆ. ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿವೆ. ಇಲ್ಲಿನ ಮೂಲವಿಗ್ರಹವನ್ನು ಬಹಳ ಹಿಂದೆ ಅರ್ಚಕ ಮನೆತನದ ಮಾನಸಿಕ ರೋಗಿಯೊಬ್ಬನು ಕುರೂಪಗೊಳಿಸಿದನೆಂದು, ಆ ಮೂರ್ತಿಯನ್ನು ತೆಗೆದು ಮತ್ತೊಂದು ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತೆಂದು ಸ್ಥಳಿಯರು ತಿಳಿಸುತ್ತಾರೆ. ಶ್ರೀವೈಷ್ಣವ ಪಂಥಕ್ಕೆ ಸೇರಿದ ಶಾತಾದ ವೈಷ್ಣವರು (ವಷ್ಟುಂಬರು) ಪೂಜೆ ಮಾಡುತ್ತಾರೆ. ಮೂಲತಃ ಕೃಷಿಕರಾಗಿರುವ ಇವರು ಸಂತೆಗಳಲ್ಲಿ ನಾಮ ಮತ್ತಿತರ ಪೂಜಾಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಈ ದೇವರ ಜಾತ್ರೆ ಶ್ರಾವಣಮಾಸದ ಕೊನೆ ಶನಿವಾರದಂದು ಜರುಗುತ್ತದೆ.  ಈ ದೇವರಿಗೆ ನಡೆದುಕೊಳ್ಳುವ ಸಾಕಷ್ಟು ಒಕ್ಕಲುಗಳಿದ್ದು ದೂರದಿಂದ ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಮುಡಿ, ಹರಿಕೆಗಳನ್ನು ಒಪ್ಪಿಸುತ್ತಾರೆ.

ದರ್ಗ

ತೊಣ್ಣೂರಿನ ನೈರುತ್ಯ ದಿಕ್ಕಿನಲ್ಲಿ ಊರಿಗೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ನಗರೇಶ್ವರ ದೇವಾಲಯವಿತ್ತೆಂದು ಪ್ರತೀತಿಯಿದೆ. ಈ ಸ್ಥಳದಲ್ಲಿ ಈಗ ಸೈಯದ್ ಸಾಲಾರ್ ಮಸೂದ್ ಘಾಜಿಯ ದರ್ಗವಿದೆ(ನೋಡಿ: ಚಿತ್ರ‑೪೫). ಈತ ಸೂಫಿ ಸಂತನಾಗಿದ್ದ. ಸುಮಾರು ಕ್ರಿ.ಶ.೧೪ನೆ ಶತಮಾನದ ಮಧ್ಯದಲ್ಲೆ ತೊಣ್ಣೂರಿಗೆ ಬಂದು ನೆಲೆಸಿದನು. ಮೂಲತಃ ಸೈನಿಕನಾಗಿದ್ದ ಈತ ತನ್ನ ಪತ್ನಿಯೊಂದಿಗೆ ಇಲ್ಲಿ ಸಮಾಧಿಗೊಂಡಿದ್ದಾನೆ. ಅಂದರೆ ಗಂಡ-ಹೆಂಡತಿ ಒಂದೇ ಸಮಾಧಿಯಾಗಿರುವುದು ಇಲ್ಲಿನ ವಿಶೇಷ.[2] ದರ್ಗದ ಪರಿಸರದಲ್ಲಿ ಹಿಂದೂ ದೇವಾಲಯದ ವಾಸ್ತು ಭಾಗಗಳು, ಕೆಲವು ಸಂರಕ್ಷಿತ ಹಾಗೂ ಕೆಲವು ಪಾಳುಬಿದ್ದ ಸ್ಥಿತಿಯಲ್ಲಿ ಇವೆ. ಜೀರ್ಣಾವಸ್ಥೆಯಲ್ಲಿದ್ದ ಒಂದು ದೇವಾಲಯವನ್ನು ದುರಸ್ತಿ ಮಾಡಿ ದರ್ಗವನ್ನು ನಿರ್ಮಿಸಿದಂತೆ ತೋರುತ್ತದೆ. ದರ್ಗದ ಮಧ್ಯದ ಅಂಕಣದ ಛಾವಣಿಯನ್ನು ಗುಮ್ಮಟದಂತೆ ನಿರ್ಮಿಸಿರುವುದನ್ನು ಬಿಟ್ಟರೆ, ಉಳಿದಂತೆ ಕಟ್ಟಡ ಹಿಂದೂ ಸಂಪ್ರದಾಯದ ಮಂಟಪ ರೀತಿಯ ನಿರ್ಮಾಣ. ಇದರ ವಾಸ್ತುವಿನಲ್ಲೂ ಏನೂ ವೈಶಿಷ್ಟ್ಯವಾಗಲಿ ಅಲಂಕರಣವಾಗಲಿ ವಾಸ್ತು ವಿನ್ಯಾಸಗಳಾಗಲಿ ಇಲ್ಲ.

ಉಪಸಂಹಾರ

ತೊಣ್ಣೂರಿನ ನಾಲ್ಕು ದೇವಾಲಯಗಳ ಈ ಸುದೀರ್ಘ ಅಧ್ಯಯನ, ಈ ಊರಿನ ದೇವಾಲಯ ವಾಸ್ತು ವಿನ್ಯಾಸ ಮಹತ್ವದ ಅಂಶಗಳನ್ನು ಸ್ಪಷ್ಟಪಡಿಸಿದೆ. ಕ್ರಿ.ಶ. ಹನ್ನೊಂದನೆಯ ಶತಮಾನದ ಕೊನೆಯವರೆಗೂ ಮಹತ್ವವನ್ನು ಕಾಣದ ಈ ಸ್ಥಳ ಇದ್ದಕ್ಕಿದ್ದಂತೆ ಧಾರ್ಮಿಕವಾಗಿ ಮಹತ್ವವನ್ನು ಪಡೆಯುತ್ತದೆ. ಇದಕ್ಕೆ ಕಾರಣ ರಾಮಾನುಜಾಚಾರ್ಯರ ಆಗಮನ ಮತ್ತು ಅವರು ಇಲ್ಲಿ ಅಲ್ಪಾವಧಿಯ ಕಾಲ ವಾಸಮಾಡಿದುದೇ ಆಗಿದೆ. ಈ ಸ್ಥಳ, ಆ ಕಾಲಕ್ಕಾಗಲೇ ಒಂದು ಸಮೃದ್ಧವಾದ ವಾಸದ ನೆಲೆಯಾಗಿತ್ತು. ಇಲ್ಲಿಯ ಕೆರೆಯಿಂದಾಗಿ, ಕುಡಿಯಲು ಮತ್ತು ವ್ಯವಸಾಯಕ್ಕೆ ನೀರಿತ್ತು. ಜನರು ಸುಖಶಾಂತಿಯಿಂದ ನೆಲೆಸಿದ್ದರು. ರಾಮಾನುಜಾಚಾರ್ಯರಿಗೆ ಇದು ಒಂದು ಯೋಗ್ಯ ನೆಲೆಯೆನಿಸಿತು. ತಮಿಳುನಾಡಿಗೂ, ಹೊಯ್ಸಳ ರಾಜಧಾನಿಗೂ ಮಾರ್ಗ ಮಧ್ಯದಲ್ಲಿತ್ತು ತೊಣ್ಣೂರು. ಬೇರೆ ಯಾವುದೇ ಧರ್ಮದ ಪ್ರಾಬಲ್ಯ ಇಲ್ಲಿರಲಿಲ್ಲ. ಬಳಿಯಲ್ಲಿಯೆ ಇರುವ ಮೇಲುಕೋಟೆಯಲ್ಲಿ ರಾಮಾನುಜರು ಸುಮಾರು ಹನ್ನೆರಡು ವರ್ಷಕಾಲ ನೆಲೆಸಿದ್ದರೆಂದು ಸಂಪ್ರದಾಯವಿದೆ. ಇದು ಸತ್ಯವೂ ಇರಬಹುದು. ಏಕೆಂದರೆ ರಾಮಾನುಜರು ಯತಿಗಳು. ಆಧ್ಯಾತ್ಮ ಮಾರ್ಗವನ್ನು ಅನುಸರಿಸಿದ ಯತಿಗಳಿಗೆ, ಅವರ ಧರ್ಮ ಚಿಂತನೆ, ತಪಸ್ಸು ಇವೆಲ್ಲವುಗಳಿಗೆ ಅನುವಾದ ಸ್ಥಳವೆಂದರೆ ಜನನಿಬಿಡತೆಯಿಂದ ದೂರವಾದ ಪ್ರದೇಶ. ತೊಣ್ಣೂರಿಗೆ ಬಂದ ರಾಮಾನುಜರಿಗೆ ಹತ್ತಿರದಲ್ಲೇ ಇದ್ದ ಮೇಲುಕೋಟೆ ಅವರ ತಪೋಮಾರ್ಗ ಸಾಧನೆಗೆ ಬಹಳ ಪ್ರಶಸ್ತವಾದ ಸ್ಥಳವೆನಿಸಿದ್ದುದರಲ್ಲಿ ಆಶ್ಚರ್ಯವೇನಿಲ್ಲ.

ಮೇಲುಕೋಟೆಯು ಹೊಯ್ಸಳರ ಕಾಲದಲ್ಲಿ ಒಂದು ಗಿರಿದುರ್ಗವಾಗಿತ್ತು. ಅಲ್ಲಿ ಕೋಟೆಯೂ ಇತ್ತು.[3] ಆದರೆ ಅಲ್ಲಿ ಯಾವುದೇ ಮುಖ್ಯ ಊರು, ಜನವಸತಿ ಇದ್ದಂತೆ ತೋರುವುದಿಲ್ಲ. ಮೇಲುಕೋಟೆಯ ಅತ್ಯಂತ ಪ್ರಾಚೀನ ಶಾಸನ ಇಮ್ಮಡಿ ಬಲ್ಲಾಳನ ಕಾಲದ್ದು(ಕ್ರಿ.ಶ.೧೧೮೯). ಅದಕ್ಕಿಂತ ಮುಂಚಿನ ಶಾಸನ ಯಾವುದೂ ಅಲ್ಲಿಲ್ಲ. ಮೇಲುಕೋಟೆ ಪ್ರವರ್ಧಮಾನವಾಗಿ ಬೆಳದದ್ದು ವಿಜಯನಗರ ಕಾಲದಿಂದ. ತೊಣ್ಣೂರಿಗೆ ಬಂದ ರಾಮಾನುಜರು, ಆ ಊರು ಒಂದು ಜನನಿಬಿಡ ಪ್ರದೇಶವಾಗಿದ್ದುದರಿಂದ, ಅನತಿ ದೂರದಲ್ಲಿರುವ ಮೇಲುಕೋಟೆಯನ್ನು ತಮ್ಮ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡರು. ಗಿರಿಶೃಂಗವೂ ಇದ್ದುದರಿಂದ ತಮ್ಮ ಇಷ್ಟದೇವನಾದ ನರಸಿಂಹನ ಸ್ಥಾಪನೆಗೆ ಹಾಗೂ ತಮ್ಮ ತಪೋಕಾರ್ಯಗಳಿಗೆ, ಬಹಳ ಪ್ರಶಸ್ತವಾದ ಪ್ರದೇಶವೆನಿಸಿತು. ತಮ್ಮನ್ನು ಅನುಸರಿಸಿ ಬಂದ ಭಕ್ತ ಸಮುದಾಯವನ್ನು, ಸಕಲ ಸೌಕರ್ಯಗಳನ್ನು ಹೊಂದಿದ್ದ ತೊಣ್ಣೂರಿನಲ್ಲಿ ನೆಲೆಸುವಂತೆ ಮಾಡಿ, ತಾವು ಮಾತ್ರ ತಮ್ಮ ಸಮೀಪವರ್ತಿಗಳೊಂದಿಗೆ, ಮೇಲುಕೋಟೆಯಲ್ಲಿ ಅನೇಕ ವರ್ಷಕಾಲ ನೆಮ್ಮದಿಯಿಂದ ಜೀವಿಸಿದರು. ಇದರಿಂದಾಗಿ ಮೇಲುಕೋಟೆಯಲ್ಲಿ ರಾಮಾನುಜ ಮಠ ಸ್ಥಾಪನೆಯಾಯಿತು. ರಾಮಾನುಜರ ಭಕ್ತರ ‘ಕೂಟ’ ಮಾತ್ರ ತೊಣ್ಣೂರಿನಲ್ಲಿ ನೆಲೆಸಿ, ರಾಮಾನುಜರಿಗೆ ಬೆಂಬಲಿಗರಾಗಿದ್ದರು. ತದನಂತರ ತಂಡೋಪತಂಡವಾಗಿ ಬಂದ ರಾಮಾನುಜರ ಭಕ್ತರೂ ಸಹ ತೊಣ್ಣೂರಿಗೆ ಬಂದು ಅಲ್ಲಿಯೆ ನೆಲೆಸಿ, ದೇವಾಲಯಗಳನ್ನು ನಿರ್ಮಿಸಿದರು. ಇದರಿಂದಾಗಿ ತೊಣ್ಣೂರು ‘ಭಕ್ತ’ರ ಅಂದರೆ ‘ತೊಂಡರ’ ಊರಾಯಿತು(ನಂತರ ತೊಣ್ಣೂರಾಯಿತು). ರಾಮಾನುಜರು ನೆಲೆಸಿದ್ದ ಮೇಲುಕೋಟೆ ಶ್ರೀವೈಷ್ಣವ ಕ್ಷೇತ್ರವಾಗಿ ಪ್ರಸಿದ್ದಿ ಹೊಂದಿತು. ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಮೇಲುಕೋಟೆ ಹೆಚ್ಚೆಂದರೆ ಒಂದು ಕುಗ್ರಾಮವಾಗಿದ್ದಿರಬಹುದು. ಒಂದು ಪಕ್ಷ ಅದು ಜನನಿಬಿಡ ಪಟ್ಟಣವಾಗಿದ್ದರೆ, ವಿಷ್ಣುವರ್ಧನನು ನಿರ್ಮಿಸಿದನೆಂದು ಹೇಳಲಾದ ನಂಬಿನಾರಾಯಣ ದೇವಾಲಯವು, ರಾಮಾನುಜರ ನೆಲೆಯಾಗಿದ್ದ ಮೇಲುಕೋಟೆಯಲ್ಲೆ ನಿರ್ಮಾಣವಾಗಬೇಕಿತ್ತು. ಆದರೆ ಅದು ಅಲ್ಲಿ ನಿರ್ಮಿತವಾಗಲಿಲ್ಲ. ಬದಲಿಗೆ ಭಕ್ತರ ಸಮುದಾಯ (ತೊಂಡರ್) ನೆಲೆಸಿದ್ದ ತೊಣ್ಣೂರಿನಲ್ಲಿ, ಭಕ್ತರ ಉಪಯೋಗಕ್ಕಾಗಿ ನಿರ್ಮಾಣವಾಯಿತು.

ವಿಜಯನಗರದ ಬುಕ್ಕರಾಯನ ಕಾಲದಲ್ಲಿ ಮೇಲುಕೋಟೆಯ ಏಳಿಗೆ ಪ್ರಾರಂಭ ವಾಯಿತು.[4] ಕ್ರಿ.ಶ.೧೫-೧೬ನೆಯ ಶತಮಾನಗಳಿಗೆ ಸೇರುವ ಅನೇಕ ಶಾಸನಗಳು ಈ ಸ್ಥಳದಲ್ಲಿವೆ. ದೇವಾಲಯ, ದಾನ ದತ್ತಿ, ಕೆರೆ, ಕುಂಟೆ, ಇತ್ಯಾದಿಗಳನ್ನು ಕುರಿತಾದ ಶಾಸನಗಳು ಅನೇಕ ಸಂಖ್ಯೆಯಲ್ಲಿ ಇಲ್ಲಿ ದೊರೆಯುತ್ತವೆ. ವಿಜಯನಗರ ಕಾಲದಲ್ಲಿ ಉನ್ನತಿಗೆ ಬಂದ ಮೇಲುಕೋಟೆ ಅದರ ಪ್ರಾಮುಖ್ಯತೆಯನ್ನು ಶಾಶ್ವತವಾಗಿ ಉಳಿಸಿಕೊಂಡಿತು.

ವಿಜಯನಗರ ಕಾಲದಲ್ಲಿ ತೊಣ್ಣೂರಿನಲ್ಲಿ ಅತೀ ಕಡಿಮೆ ವಾಸ್ತು ನಿರ್ಮಾಣಗಳಾದವು. ವಿಜಯನಗರ ಕಾಲದ ಶಾಸನಗಳು ಸಹ ತೊಣ್ಣೂರಿನಲ್ಲಿ ಕೆಲವೇ ಮಾತ್ರವಿದೆ. ಅಂದರೆ ವಿಜಯನಗರ ಕಾಲದಲ್ಲಿ ಮೇಲುಕೋಟೆಯ ಪ್ರಾಶಸ್ತ್ಯ ಹೆಚ್ಚಾಗಿ, ತೊಣ್ಣೂರು ತನ್ನ ಮಹತ್ವವನ್ನು ಕಳೆದುಕೊಂಡಿತೆಂದು ವೇದ್ಯವಾಗುತ್ತದೆ. ಹದಿನೇಳನೆಯ ಶತಮಾನದ ವೇಳೆಗೆ ತೊಣ್ಣೂರು ಸಂಪೂರ್ಣವಾಗಿ ತನ್ನ ಧಾರ್ಮಿಕ ಅಸ್ತಿತ್ವವನ್ನು ಕಳೆದುಕೊಂಡಿತು ಕೂಡ. ಇದರಿಂದಾಗಿ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರು, ತೊಣ್ಣೂರಿನ ಹಿಂದಿನ ಪ್ರತಿಷ್ಠೆಯನ್ನು ಪುನಃ ಸ್ಥಾಪಿಸಲು ಕ್ರಿ.ಶ. ೧೭೨೨ರಲ್ಲಿ ಅನೇಕ ಬ್ರಾಹ್ಮಣ ಕುಟುಂಬಗಳನ್ನು ದೇಶದ ವಿವಿಧೆಡೆಗಳಿಂದ ತೊಣ್ಣೂರಿಗೆ ಬಂದು ನೆಲೆಸುವಂತೆ ಮಾಡಿ ೧೨೨ ವೃತ್ತಿಗಳ ಸುದೀರ್ಘ ದಾನವನ್ನು ಮಾಡಿದರು. ಆದರೆ, ಅದೂ ಸಹ ಕೇವಲ ಅಲ್ಪಾಯುಷ್ಯದ್ದಾಯಿತು.

ತೊಣ್ಣೂರಿನ ವಾಸ್ತು ವೈಶಿಷ್ಟ್ಯತೆಯನ್ನು ಕುರಿತು ಒಂದೆರಡು ಅನಿಸಿಕೆಗಳನ್ನು ಇಲ್ಲಿ ಹೇಳುವುದು ಸೂಕ್ತ. ತೊಣ್ಣೂರಿನ ದೇವಾಲಯಗಳು ಬೃಹತ್ ವಾಸ್ತು ಕೃತಿಗಳಾದರೂ ಸರಳ ಸಾಧಾರಣವಾದ ನಿರ್ಮಾಣಗಳು. ಆ ಕಾಲದಲ್ಲಿನ ಚೋಳ-ದ್ರಾವಿಡ ಸಂಪ್ರದಾಯದಂತೆ ಕೇವಲ ಸರಳವಾದ ಭಿತ್ತಿ ಅಲಂಕರಣವನ್ನು, ಇನ್ನುಳಿದಂತೆ ಅತೀ ಸಾಧಾರಣ ಕಂಬಗಳನ್ನು ಹೊಂದಿವೆ. ದೇವಾಲಯದ ಎಲ್ಲಾ ಭಾಗಗಳೂ, ಕೇವಲ ಔಪಯೋಗಿಕವಾಗಿ ರಚಿತವಾಗಿವೆಯೇ ಹೊರತು ಸೌಂದರ್ಯ ಪ್ರಜ್ಞೆ ಎಲ್ಲಿಯೂ ಕಂಡುಬರುವುದಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾದದ್ದೆಂದು ಹೇಳಲಾದ ಇಲ್ಲಿಯ ನಂಬಿನಾರಾಯಣನ ಮೂಲಗುಡಿ ಇದ್ದುದರಲ್ಲಿ ಸ್ವಲ್ಪ ಸೌಂದರ್ಯ ಪ್ರಜ್ಞೆಯಿಂದ ಕೂಡಿದೆ. ವಿಷ್ಣುವರ್ಧನನು ಚೋಳರ ಮೇಲಿನ ವಿಜಯದ ಕುರುಹಾಗಿ ಕಟ್ಟಿಸಿದ ಮೂರು ನಾರಾಯಣನ ಗುಡಿಗಳಲ್ಲಿ ಒಂದು ತೊಣ್ಣೂರಿನ ನಂಬಿನಾರಾಯಣ ಗುಡಿಯೆಂದು ಪರಿಗಣಿಸಲಾಗಿದೆ. ಉಳಿದೆರಡು ಗುಡಿಗಳು ಬೇಲೂರಿನ ವಿಜಯನಾರಾಯಣ ಮತ್ತು ತಲಕಾಡಿನ ಕೀರ್ತಿನಾರಾಯಣ. ಬೇಲೂರಿನ ವಿಜಯನಾರಾಯಣ ಅದರ ಚೆಲುವಲ್ಲಿ ಅದ್ವಿತೀಯ ವಾದದ್ದು. ಏಕೆಂದರೆ ಅದು ಪುರಾಣ ಪ್ರಸಿದ್ಧವೂ, ಹೊಯ್ಸಳ ರಾಜಧಾನಿಗೆ ಸಮೀಪವಾಗಿದ್ದ ಹಾಗೂ ಜನನಿಬಿಡವಾಗಿದ್ದ ಬೇಲೂರಿನಲ್ಲಿ ನಿರ್ಮಿತವಾದ ದೇವಾಲಯ. ತಲಕಾಡಿನ ಕೀರ್ತಿನಾರಾಯಣ ದೇವಾಲಯವೂ ಸಹ ಗಾತ್ರದಲ್ಲಿ, ವಿಸ್ತೀರ್ಣದಲ್ಲಿ, ಕೆತ್ತನೆಯ ಗುಣಮಟ್ಟದಲ್ಲಿ ಸಾಕಷ್ಟು ಸುಂದರ ದೇವಾಲಯ. ಕಾರಣ ಈ ಸ್ಥಳ ಚೋಳರಿಂದ ಗೆದ್ದಂತಹ ಪ್ರದೇಶ. ಅಲ್ಲಿ ತನ್ನ ಆಧಿಪತ್ಯ ಸ್ಥಾಪನೆಯ ಸಂಕೇತವಾಗಿ, ಜೊತೆಗೆ ತಲಕಾಡು ನೂರಾರು ವರ್ಷಗಳಿಂದ ಪ್ರವರ್ಧಮಾನವಾಗಿ ಬೆಳೆದು, ಜನಜನಿತವಾಗಿದ್ದ ಪಟ್ಟಣವಾಗಿದ್ದುದರಿಂದ ಇಲ್ಲಿ ನಿರ್ಮಿತವಾದ ದೇವಾಲಯವನ್ನೂ ಸಹ ಸೌಂದರ್ಯದಲ್ಲಿ ಬೇಲೂರಿನ ದೇವಾಲಯಕ್ಕೆ ಸಮವೆನಿಸದಿದ್ದರೂ ಗುಣ, ಗಾತ್ರದಲ್ಲಿ ಚಕ್ರವರ್ತಿ ನಿರ್ಮಿತ ದೇಗುಲಕ್ಕೆ ತಕ್ಕುದಾದಂತೆ ನಿರ್ಮಿಸಿದನು. ಆದರೆ ತೊಣ್ಣೂರಿನ ನಂಬಿನಾರಾಯಣ ಮಾತ್ರ ನಿರ್ಮಾಣದ ಗಾತ್ರ, ವಿಸ್ತೀರ್ಣ ಹಾಗು ಗುಣಮಟ್ಟದಲ್ಲಿ ಹೊಯ್ಸಳ ಚಕ್ರವರ್ತಿಯ ಮಟ್ಟಕ್ಕೆ, ಸಾಮರ್ಥ್ಯಕ್ಕೆ ಸರಿಯೆನಿಸುವ ವಾಸ್ತು ಕೃತಿ ಖಂಡಿತಾ ಅಲ್ಲ. ಇದಕ್ಕೆ ಕಾರಣ ಸ್ಪಷ್ಟವಲ್ಲದಿದ್ದರೂ ಊಹಾತೀತವಾದದ್ದೇನಲ್ಲ.

ವಿಷ್ಣುವರ್ಧನನು ಈ ಮೂರನೆಯ ಸ್ಥಳ ತೊಣ್ಣೂರನ್ನೇ ಏಕೆ ದೇವಾಲಯ ನಿರ್ಮಾಣಕ್ಕೆ ಆಯ್ಕೆಮಾಡಿಕೊಂಡ? ಆತನಿಗೆ ಆ ಕಾಲದಲ್ಲಿ ಬೇರೆ ಪ್ರಸಿದ್ಧ ಪಟ್ಟಣಗಳಿರಲಿಲ್ಲವೆ? ಏಕೆ ಹಳೇಬೀಡೆ (ದ್ವಾರಸಮುದ್ರ) ಇರಲಿಲ್ಲವೆ? ಈ ಎಲ್ಲ ಪ್ರಶ್ನೆಗಳು ಏಳುವುದು ಸಹಜ! ವಿಷ್ಣುವರ್ಧನನು ರಾಮಾನುಜರ ಭಕ್ತಾಗ್ರೇಸರರಲ್ಲೊಬ್ಬನಾಗಿದ್ದನೆಂಬುದು ಪಾರಂಪರಿಕ ಸತ್ಯ. ರಾಮಾನುಜರ ಮೇಲಿನ ಭಕ್ತಿಯ ಪ್ರತೀಕವಾಗಿ, ಅವರು ಸ್ವಲ್ಪ ಕಾಲ ನೆಲೆಸಿದ್ದ ಸ್ಥಳವಾದ ತೊಣ್ಣೂರನ್ನು, ನಾರಾಯಣ ದೇವಾಲಯ ನಿರ್ಮಾಣಕ್ಕಾಗಿ ಆತ ಆಯ್ಕೆ ಮಾಡಿಕೊಂಡಿರುವುದು ಸಹಜ. ಆ ಕಾಲದಲ್ಲಿ ರಾಮಾನುಜರು ಇರಲಿಲ್ಲ. ಅವರು ದೀರ್ಘಕಾಲ ಜೀವಿಸಿದ್ದ ಮೇಲುಕೋಟೆ, ದೇವಾಲಯ ನಿರ್ಮಾಣಕ್ಕೆ ಸೂಕ್ತವಾಗಿರಲಿಲ್ಲ. ಏಕೆಂದರೆ ಅದು ಜನವಸತಿ ಯಿಲ್ಲದ ಕುಗ್ರಾಮವಾಗಿತ್ತು. ಬದಲಿಗೆ ತೊಣ್ಣೂರು ರಾಮಾನುಜರ ಶಿಷ್ಯರ ಬೀಡಾಗಿತ್ತು. ರಾಮಾನುಜರು ನೆಲೆಸಿದ್ದ (ಅಲ್ಪಕಾಲ) ತೊಣ್ಣೂರನ್ನು, ಅದು ಸಣ್ಣ ಊರಾದರೂ, ರಾಮಾನುಜರು ಅಲ್ಲಿರದಿದ್ದರೂ, ಅವರ ಶಿಷ್ಯರ ಅನುಕೂಲಕ್ಕಾಗಿ ಆಯ್ಕೆ ಮಾಡಿಕೊಂಡು, ಆ ಊರಿನ ಪ್ರಾಮುಖ್ಯತೆ, ಜನನಿಬಿಡತೆ ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಾಧಾರಣವಾದ ನಂಬಿನಾರಾಯಣ ದೇವಾಲಯವನ್ನು ನಿರ್ಮಾಣ ಮಾಡಿದ. ಅಲ್ಲಿಯ ಭಕ್ತರೆಲ್ಲರೂ ಹೆಚ್ಚಿನ ಪಾಲು ತಮಿಳರೇ ಆಗಿದ್ದುದರಿಂದ ಅವರ ಅಭಿರುಚಿಗೆ ಅನುಗುಣವಾಗಿ ದ್ರಾವಿಡ ಶೈಲಿಯಲ್ಲಿ, ಗ್ರಾನೈಟ್ ಶಿಲೆಯಲ್ಲಿ ದೇವಾಲಯ ನಿರ್ಮಾಣವಾಯಿತು.

ತೊಣ್ಣೂರಿನ ದೇವಾಲಯಗಳೆಲ್ಲವೂ, ನಂಬಿನಾರಾಯಣನ ಮೂಲಗುಡಿಯನ್ನು ಬಿಟ್ಟು, ಚೋಳ-ದ್ರಾವಿಡ ಸಂಪ್ರದಾಯದ್ದು. ಕರ್ನಾಟಕದಲ್ಲಿ ಆ ಕಾಲದಲ್ಲಿ ಕಟ್ಟಿದ ಚೋಳ- ದ್ರಾವಿಡ ಸಂಪ್ರದಾಯದ ದೇವಾಲಯಗಳೆಲ್ಲವೂ ಅವುಗಳ ಸರಳತೆಗೆ ಹೆಸರುವಾಸಿಯಾಗಿವೆ. ಚೋಳನಾಡಿನ ಕೇಂದ್ರಭಾಗದಲ್ಲೂ ಸಹ ಕೆಲವೊಂದು ದೇಗುಲಗಳನ್ನು ಬಿಟ್ಟರೆ, ಉಳಿದೆಲ್ಲಾ ದೇವಾಲಯಗಳು, ಸರಳ ವಾಸ್ತು ಲಕ್ಷಣಗಳನ್ನು ಉಳ್ಳಂಥವೇ ಆಗಿವೆ. ಹೀಗಾಗಿ ತೊಣ್ಣೂರಿನ ದೇವಾಲಯಗಳೂ ಸಹ ಚೋಳ ವಾಸ್ತುವಿನ ಸರಳ ಸೌಂದರ್ಯವನ್ನೆ ಹೊಂದಿವೆ ಎನ್ನಬಹುದು. ಚೋಳ ಶಿಲ್ಪಿಗಳು ಇಂತಹ ಸರಳ ವಾಸ್ತುನಿರ್ಮಾಣಗಳನ್ನು ಮಾಡಿ, ಅಲ್ಲಲ್ಲಿ ಕೋಷ್ಟಗಳಲ್ಲಿ ದೈವಶಿಲ್ಪಗಳನ್ನು ಕೂಡಿಸುವ ಸಂಪ್ರದಾಯವನ್ನು ಹೊಂದಿದ್ದರು. ಅದರಂತೆ ತೊಣ್ಣೂರಿನ ದೇವಾಲಯಗಳ ದೇವಕೋಷ್ಟಗಳಲ್ಲೂ ಸಹ ದೈವೀ ಶಿಲ್ಪಗಳನ್ನು ಪ್ರತಿಷ್ಠಾಪಿಸಿರಬಹುದು. ಬಹುತೇಕ ಎಲ್ಲಾ ಕಡೆಗಳಲ್ಲೂ ಆಗಿರುವಂತೆ, ತೊಣ್ಣೂರಿನಲ್ಲೂ ಸಹ ಅವುಗಳು ಈಗ ಕಣ್ಮರೆಯಾಗಿವೆ.

ಒಟ್ಟಿನಲ್ಲಿ ಹೇಳುವುದಾದರೆ, ತೊಣ್ಣೂರಿನ ದೇವಾಲಯಗಳು, ಕ್ರಿ.ಶ. ೧೨ನೆಯ ಶತಮಾನದ ಚೋಳ-ದ್ರಾವಿಡ ವಾಸ್ತು ಮಾದರಿಗಳಿಗೆ ಉತ್ತಮ ಉದಾಹರಣೆಗಳಾಗಿವೆ. ಹೊಯ್ಸಳ ರಾಜ್ಯದ ಕೇಂದ್ರ ಭಾಗದಲ್ಲಿ, ಹೊಯ್ಸಳ ರಾಜರ ಪೋಷಣೆಯಲ್ಲಿ, ಹೊಯ್ಸಳ ಶೈಲಿಯನ್ನು ನಿರಾಕರಿಸಿ, ಚೋಳ ದ್ರಾವಿಡ ಶೈಲಿಯನ್ನು ತಮ್ಮ ತಾಯ್ನಾಡಿನಿಂದ ಆಮದು ಮಾಡಿಕೊಂಡು, ಚೋಳ-ದ್ರಾವಿಡ ಶೈಲಿಯಲ್ಲಿ ದೇವಾಲಯವನ್ನು ತಮಿಳರು ಯಶಸ್ವಿಯಾಗಿ ನಿರ್ಮಿಸಿದರು. ಇದು ಕನ್ನಡಿಗರ ಉದಾರತೆಯ ಹಾಗೂ ತಮಿಳರ ಉನ್ಮತ್ತಾಭಿಮಾನದ ಉತ್ತಮ ಉದಾಹರಣೆ ಎಂದರೆ ಉತ್ಪ್ರೇಕ್ಷೆಯಲ್ಲ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1] ಅದೇ, ಪಾಂ. ೭೮

[2] ಈ ಸೂಫಿ ಸಂತ ವರನಂದಿಯ ಅಣ್ಣನೆಂದು ತಿಳಿದುಬರುತ್ತದೆ. ವರನಂದಿ ದಿಲ್ಲಿಯ ಬಾದಶಹನ ಮಗಳಾಗಿದ್ದು, ಮೇಲ್ಕೋಟೆಯ ಚೆಲುವ ನಾರಾಯಣನ ಮೂರ್ತಿ ಕಂಡು ಮೋಹಗೊಂಡ ವಳು. ಈಗಲೂ ಮೇಲ್ಕೋಟೆಯಲ್ಲಿ ಬೀಬಿ ನಾಚ್ಚಿಯಾರ್ ಅಥವ ವರನಂದಿಯನ್ನು ಪೂಜಿಸ ಲಾಗುತ್ತಿದೆ(‘ಭಕ್ತಪುರೀ ತೊಂಡನೂರಿನ ಮಹಾತ್ಮೆ’- ಡಾ. ಎಸ್. ವೇಣುಗೋಪಾಲಾಚಾರ್ಯ ಎಂ.ಎ., ಪಿಎಚ್.ಡಿ., ೧೭೪೧, ಡಿ ಜೈನರ ಕಾಲೋನಿ, ಅಶೋಕ ನಗರ, ಮಂಡ್ಯ, ೧೯೯೫).

[3] ಅದೇ, ಪಾಂ. ೭೪

[4] ಅದೇ, ಪಾಂ. ೧೬೪