ಕೆರೆತೊಣ್ಣೂರು ತೊಣ್ಣೂರು, ತೊಂಡನೂರು ಮತ್ತು ಯಾದವ ನಾರಾಯಣ ಚತುರ್ವೇದಿಮಂಗಲವೆಂಬ ಹೆಸರಿನಿಂದ ಕರೆಯಲ್ಪಡುವ ಈ ಗ್ರಾಮ ಕರ್ನಾಟಕದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಕೆರೆತೊಣ್ಣೂರು ಐತಿಹಾಸಿಕವಾಗಿ ಪ್ರಾಯಶಃ ಹೊಯ್ಸಳರಿಗಿಂತಲೂ ಮೊದಲೇ ಚಟುವಟಿಕೆಗಳ ಕೇಂದ್ರವಾಗಿತ್ತು. ಗಂಗ‑ಚೋಳ ಸಾಂಸ್ಕೃತಿಕ ಪ್ರಭಾವಕ್ಕೆ ನಿದರ್ಶನ ಒದಗಿಸುವ ಆ ಕಾಲದ ಹಲವಾರು ಶಾಸನೋಕ್ತ ದಾಖಲೆಗಳು ಈ ಭಾಗದಲ್ಲಿ ದೊರೆಯುತ್ತವೆ. ಹೀಗಾಗಿ ನಾವು ಈ ಪ್ರದೇಶದ ಐತಿಹಾಸಿಕ ಕಾಲಘಟ್ಟವನ್ನು ಗಂಗ-ಚೋಳ ಕಾಲದಿಂದಲೇ ನಿರ್ಧರಿಸಬೇಕಾಗುತ್ತದೆ. ಆದರೆ, ಸಾಂಸ್ಕೃತಿಕವಾಗಿ ಈ ಪ್ರದೇಶ ಹೆಚ್ಚು ಪ್ರವರ್ಧಮಾನಕ್ಕೆ ಬಂದದ್ದು, ಹೊಯ್ಸಳರ ಕಾಲದಲ್ಲಿಯೇ ಎಂದು ಹೇಳಬೇಕಾಗುತ್ತದೆ. ಈ ಕಾಲದಲ್ಲಿ ಕೆರೆತೊಣ್ಣೂರು ಪ್ರಮುಖ ಶ್ರೀವೈಷ್ಣವ ಕೇಂದ್ರವಾಯಿತು.

ಕೆರೆತೊಣ್ಣೂರು ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದುತ್ತಿದ್ದಂತೆ, ಇಲ್ಲಿ ಹಲವಾರು ದೇವಾಲಯಗಳು ಕೂಡಾ ರಚನೆಯಾಗಿರುವುದು ಕಂಡು ಬರುತ್ತದೆ. ಇಲ್ಲಿ ಮುಖ್ಯವಾಗಿ ಶೈವ ಮತ್ತು ವೈಷ್ಣವ ಪಂಥಗಳಿಗೆ ಸೇರಿದ ದೇವಾಲಯಗಳು ಕಂಡು ಬರುತ್ತವೆ. ಈ ದೇವಾಲಯಗಳ ಕುರಿತಾಗಿ ಈಗಾಗಲೇ ಹಲವು ಅಧ್ಯಯನಗಳು ಆಗಿದ್ದು, ಅವುಗಳ ವಾಸ್ತು ವಿಶೇಷತೆಯನ್ನು ಹಾಗೂ ನಿರ್ಮಾಣದ ಕಾಲಗಳ ಬಗ್ಗೆ ವಿದ್ವಾಂಸರು ಬೆಳಕು ಚೆಲ್ಲಿದ್ದಾರೆ.

[1]

ಕೆರೆತೊಣ್ಣೂರಿನ ದೇವಾಲಯಗಳು ಸರಳವಾದ ಹೆಚ್ಚು ಶಿಲ್ಪಾಲಂಕಾರಗಳಿಲ್ಲದ ದೇವಾಲಯಗಳಾಗಿವೆ. ಇಲ್ಲಿನ ಪ್ರಮುಖ ದೇವಾಲಯಗಳೆಂದರೆ, ಕೈಲಾಸೇಶ್ವರ, ನಂಬಿ ನಾರಾಯಣ, ಕೃಷ್ಣ (ಪಾರ್ಥಸಾರಥಿ) ಹಾಗೂ ನರಸಿಂಹ ದೇವಾಲಯಗಳು. ಈ ಎಲ್ಲಾ ದೇವಾಲಯಗಳೂ ಗ್ರಾನೈಟ್ ಶಿಲೆಯಲ್ಲಿಯೇ ರಚನೆಯಾಗಿದ್ದು, ದ್ರಾವಿಡ ವಿಮಾನಗಳನ್ನು ಮತ್ತು ವಿನ್ಯಾಸಗಳನ್ನು ಹೊಂದಿವೆ. ಪ್ರಸ್ತುತ ಲೇಖನದ ಉದ್ದೇಶವು ಈ ದೇವಾಲಯಗಳಲ್ಲಿ ಕಂಡುಬರುವ ಶಿಲ್ಪಗಳನ್ನು ಕುರಿತಾಗಿದೆ. ಶಿಲ್ಪಗಳು ಈ ದೇವಾಲಯಗಳಲ್ಲಿ ರಚನೆಗೊಂಡ ರೀತಿ, ಅವುಗಳ ಸ್ಥಳ ನಿರ್ದೇಶನ, ಶೈಲಿ, ವಿನ್ಯಾಸ ಹಾಗೂ ರಚನಾ ತಾಂತ್ರಿಕತೆಗಳನ್ನು ಇಲ್ಲಿ ಸ್ಥೂಲವಾಗಿ ಗಮನಿಸಬಹುದಾಗಿದೆ.

ಶಿಲ್ಪಗಳು ದೇವಾಲಯಗಳ ಧಾರ್ಮಿಕ ಅವಶ್ಯಕತೆಗಳ ಹಾಗೂ ಅಲಂಕಾರಿಕ ಭಾಗವಾಗಿ ಬೆಳವಣಿಗೆ ಹೊಂದಿವೆ. ಮುಖ್ಯವಾಗಿ ಅರ್ಚಮೂರ್ತಿಗಳಾಗಿ, ದ್ವಾರಪಾಲಕರಾಗಿ, ಗರ್ಭಗೃಹ ಹಾಗೂ ಬಾಗಿಲವಾಡಗಳ ಪಾರ್ಶ್ವಗಳಲ್ಲಿ ಕಂಡುಬರುತ್ತವೆ. ವಿಶೇಷವೆಂದರೆ, ದೇವಾಲಯಗಳ ಗರ್ಭಗೃಹಗಳ ಹೊರಭಿತ್ತಿಯ ಮೇಲೆ ಯಾವುದೇ ಶಿಲ್ಪಗಳು ಕಂಡುಬರುವುದಿಲ್ಲ. ಆದರೆ, ದೇವಾಲಯದ ಶಿಖರದಲ್ಲಿ ಹಲವು ಗಾರೆಶಿಲ್ಪಗಳು ರಚನೆಗೊಂಡಿವೆ. ಅದೇ ರೀತಿ, ದೇವಾಲಯದ ನವರಂಗದಲ್ಲಿ ಶ್ರೀವೈಷ್ಣವ ಯತಿಗಳ ಮತ್ತು ಆಳ್ವಾರರುಗಳ ಶಿಲ್ಪಾಕೃತಿಗಳು ಕಂಡುಬರುತ್ತವೆ. ದೇವಾಲಯಗಳನ್ನು ಒಟ್ಟಾರೆಯಾಗಿ ನೋಡಿದಾಗ ಇಲ್ಲಿ ಶಿಲ್ಪಕಲೆಗೆ ಅಷ್ಟಾಗಿ ಪ್ರಾಮುಖ್ಯತೆ ದೊರೆತಿಲ್ಲವೆಂದೇ ಹೇಳಬಹುದು.

ಶಿಲ್ಪಗಳನ್ನು ಕೆರೆತೊಣ್ಣೂರಿನ ದೇವಾಲಯಗಳಿಗೆ ಸೀಮಿತವಾದಂತೆ ನಾವು ಎರಡು ಗುಂಪುಗಳಾಗಿ ವಿಂಗಡಿಸಬಹುದು.

ಮೊದಲನೆಯದು ಹೊಯ್ಸಳರ ಕಾಲಕ್ಕೆ ಸೇರಿಸಬಹುದಾದ ಶಿಲ್ಪಗಳಾದರೆ, ಎರಡನೆಯದು ನಂತರದ ಕಾಲದಲ್ಲಿ ರಚಿಸಿರಬಹುದಾದ ಶಿಲ್ಪಗಳು. ಇವುಗಳಲ್ಲಿ ಶಿಲೆ ಮತ್ತು ಗಾರೆ ಶಿಲ್ಪಗಳೆಂದು ಕೂಡಾ ನಾವು ವಿಭಾಗಿಸಬಹುದು.

ಪ್ರಸ್ತುತ ದೇವಾಲಯಗಳಲ್ಲಿನ ಶಿಲ್ಪಗಳನ್ನು ವಿವರವಾಗಿ ಚರ್ಚಿಸುವ ಮೊದಲು ಅವುಗಳ ಕಾಲದ ಬಗ್ಗೆ ಒಂದು ಚಿತ್ರಣ ಅವಶ್ಯವಿದೆ. ಶಿಲ್ಪಗಳು ಸಾಮಾನ್ಯವಾಗಿ ದೇವಾಲಯದ ನಿರ್ಮಾಣ ಕಾಲವನ್ನೇ ಅವಲಂಬಿಸಿ ರಚನೆಯಾಗಿರುತ್ತವೆ. ದೇವಾಲಯವು ಹಲವಾರು ಹಂತಗಳಲ್ಲಿ ನಿರ್ಮಾಣವಾಗಿದ್ದರೆ, ಶಿಲ್ಪಗಳ ಕಾಲವೂ ಬದಲಾಗುತ್ತದೆ. ಉದಾಹರಣೆಗೆ, ಇಲ್ಲಿನ ನಂಬಿನಾರಾಯಣ ದೇವಾಲಯವು ಮೂಲತಃ ಹೊಯ್ಸಳ ಕಾಲದ ನಿರ್ಮಿತಿಯಾಗಿದೆ. ಆದರೆ, ಹೊಯ್ಸಳೋತ್ತರ ಕಾಲದಲ್ಲಿ ಕೂಡಾ ಅದಕ್ಕೆ ಮಂಟಪಗಳು, ಪಟಾಲಂಕಾರಗಳು, ಹೀಗೆ ಹೊಸ ಹೊಸ ಭಾಗಗಳನ್ನು ಅಭಿವೃದ್ದಿಪಡಿಸಲಾಗಿದೆ.  ಹೀಗಾಗಿ ಈ ಭಾಗದಲ್ಲಿನ ಶಿಲ್ಪಗಳು ಅದರ ನಿರ್ಮಾಣದ ಕಾಲಕ್ಕೆ ಹೋಗುತ್ತವೆ. ಕೆರೆತೊಣ್ಣೂರಿನ ದೇವಾಲಯಗಳ ಕಾಲದ ಬಗ್ಗೆ ನಿಖರತೆ ಇಲ್ಲ. ಇಲ್ಲಿನ ಹೊಯ್ಸಳ ಕಾಲದ ಶಾಸನಗಳಲ್ಲಿ ಎಲ್ಲಿಯೂ ದೇವಾಲಯಗಳ ನಿರ್ಮಾಣದ ಬಗ್ಗೆ ವಿವರ ದೊರೆಯುವುದಿಲ್ಲ. ಬದಲಾಗಿ ದಾನದತ್ತಿಗಳನ್ನು ನೀಡಿದ ವಿವರ ದೊರೆಯುತ್ತವೆ.[2]

ಶೈಲಿಯ ದೃಷ್ಟಿಯಿಂದ ಗಮನಿಸಿದಾಗ ಕೈಲಾಸೇಶ್ವರ ದೇವಾಲಯವೇ ಇಲ್ಲಿನ ಪ್ರಸ್ತುತ ದೇವಾಲಯಗಳಲ್ಲಿ ಪ್ರಾಚೀನವಾದುದು ಎಂದು ಹೇಳಬಹುದು. ಇದರ ಕಾಲವು ಪ್ರಾಯಶಃ ೧೧‑೧೨ನೇ ಶತಮಾನಕ್ಕೆ ಹೋಗುತ್ತದೆ.[3] ಆದರೆ, ಈ ದೇವಾಲಯದಲ್ಲಿ ನಮ್ಮ ಅಧ್ಯಯನಕ್ಕೆ ಉಪಯುಕ್ತವಾದ ಶಿಲ್ಪಗಳು ಇಲ್ಲವೆಂದೇ ಹೇಳಬಹುದು. ದೇವಾಲಯದ ಗರ್ಭಗೃಹದಲ್ಲಿರುವ ಶಿವಲಿಂಗ ಮತ್ತು ನವರಂಗದಲ್ಲಿನ ನಂದಿಯ ಶಿಲ್ಪಾಕೃತಿಗಳನ್ನು ಮಾತ್ರ ಇಲ್ಲಿ ಉದಾಹರಿಸಬಹುದು (ನೋಡಿ: ಚಿತ್ರ‑೪೬, ೪೭). ನಂದಿಯನ್ನು ಸಾಕಷ್ಟು ನೈಜವಾಗಿ ಕೆತ್ತಲು ಪ್ರಯತ್ನಿಸಲಾಗಿದೆ. ಆದರೆ, ಅದರ ನಿರೂಪಣೆ ಹೊಯ್ಸಳ ಶಿಲ್ಪಗಳ ಸಮಾನಕ್ಕೆ ಬರುವುದಿಲ್ಲ. ಆದುದರಿಂದಲೇ ಈ ದೇವಾಲಯ ಹೊಯ್ಸಳ ಪೂರ್ವಕಾಲಕ್ಕೆ ಸೇರುತ್ತದೆ. ಇದೇ ದೇವಾಲಯದ ಹೊರ ಹಿಂಭಾಗದಲ್ಲಿರುವ ಚಂಡಿಕೇಶ್ವರನ ಶಿಲ್ಪದ ಕೆತ್ತನೆ ಸಂಪೂರ್ಣವಾಗಿಲ್ಲ(ನೋಡಿ: ಚಿತ್ರ‑೨೬). ಪ್ರಾಯಶಃ ಈ ಶಿಲ್ಪವು ನಂತರದ ಸೇರ್ಪಡೆ ಆದಂತೆ ತೋರುತ್ತದೆ. ಕೈಲಾಸೇಶ್ವರ ದೇವಾಲಯಕ್ಕೆ ಹೊರಗೆ ಒಂದು ಉಪ ದೇವಾಲಯವೂ ಇದ್ದು, ಬಹುಶಃ ಅಮ್ಮನವರ ದೇವಾಲಯದಂತೆ ತೋರುತ್ತದೆ.

ಕೈಲಾಸೇಶ್ವರ ದೇವಾಲಯಕ್ಕೆ ಇರುವ ಶಾಸನಗಳನ್ನು ಗಮನಿಸಿದರೆ, ಇಲ್ಲಿ ಸ್ಥಾನಪತಿಯು ಇದ್ದುದರ ಕುರಿತಂತೆಯೂ ದಾಖಲೆಗಳು ದೊರೆಯುತ್ತವೆ.  ಇದು ತಮಿಳು ಶೈವ ಸಂಪ್ರದಾಯದ ದೇವಾಲಯವಾಗಿದ್ದಿರಬಹುದೆಂದು ತೋರುತ್ತದೆ.[4] ಸ್ಥಾನಪತಿಯನ್ನು ನಿಯಮಿಸುವುದು ಅದರಲ್ಲಿಯೂ ವಿಶೇಷವಾಗಿ ಶೈವ ದೇವಾಲಯಗಳಲ್ಲಿ ಮಧ್ಯಕಾಲೀನ ಯುಗದಲ್ಲಿ ಕಂಡುಬರುತ್ತದೆ. ಇದರಿಂದ ದೇವಾಲಯದ ಕಾಲವನ್ನು ನಿಖರವಾಗಿ ೧೧ನೆಯ ಶತಮಾನಕ್ಕೆ ಸೇರಿಸಲು ಸಾಧ್ಯವಾಗುತ್ತದೆ. ಮೇಲೆ ಹೇಳಿದಂತೆ, ಪ್ರಸ್ತುತ ಕೈಲಾಸೇಶ್ವರ ದೇವಾಲಯವು ಶಿಲ್ಪ ಪ್ರಧಾನವಾದುದಲ್ಲ. ಆದರೂ, ಕೆರೆತೊಣ್ಣೂರಿನ ವಾಸ್ತುಶಿಲ್ಪದ ಬೆಳವಣಿಗೆಯಲ್ಲಿ ಸದ್ಯಕ್ಕೆ ಈ ದೇವಾಲಯವೇ ಅತ್ಯಂತ ಪ್ರಾಚೀನವೆಂದು ಹೇಳಬಹುದು. ಹೀಗಾಗಿ ಇಲ್ಲಿನ ಮೂರ್ತಿ ಶಿಲ್ಪಕಲೆಯ ಆರಂಭವೂ ಈ ದೇವಾಲಯದಿಂದಲೇ ಪ್ರಾರಂಭವಾಯಿತೆಂದು ಹೇಳಬಹುದಾಗಿದೆ.

ನಂಬಿನಾರಾಯಣ ಅಥವಾ ನಾರಾಯಣ ದೇವಾಲಯವು ಕಾಲಘಟ್ಟದಲ್ಲಿ ಕೈಲಾಸೇಶ್ವರ ದೇವಾಲಯದ ನಂತರದ ದೇವಾಲಯವಾಗಿದೆ. ಈ ದೇವಾಲಯವು ಕೂಡ ಹಲವಾರು ಕಾಲಘಟ್ಟಗಳಲ್ಲಿ ಪ್ರಗತಿ ಹೊಂದಿದೆ. ಮೂಲತಃ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಹೊಂದಿದ್ದು, ವಿಜಯನಗರ ಹಾಗೂ ಮೈಸೂರು ಒಡೆಯರ ಕಾಲದಲ್ಲಿಯೂ ಇಲ್ಲಿ ವಾಸ್ತು ಚಟುವಟಿಕೆಗಳು ನಡೆದಿವೆ. ಹೊಯ್ಸಳ ವಿಷ್ಣುವರ್ಧನನು ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಿದರೂ, ಆ ಕಾಲದ ಯಾವುದೇ ಶಾಸನೋಕ್ತ ದಾಖಲೆಗಳು ಈ ದೇವಾಲಯದ ನಿರ್ಮಾಣ ಕುರಿತಂತೆ ದೊರೆಯುವುದಿಲ್ಲ. ನಂತರದ ಕಾಲದ ದಾನ ಶಾಸನಗಳು ಈ ದೇವಾಲಯದಲ್ಲಿ ದೊರೆಯುತ್ತವೆ. ಒಟ್ಟಾರೆಯಾಗಿ ಪ್ರಸ್ತುತ ದೇವಾಲಯ, ಪಾರ್ಥಸಾರಥಿ (ಕೃಷ್ಣ) ಹಾಗೂ ನರಸಿಂಹ ದೇವಾಲಯಗಳು ಹೊಯ್ಸಳ ಕಾಲದಲ್ಲಿ ನಿರ್ಮಾಣವಾಗಿವೆ.

ಈ ದೇವಾಲಯಗಳಲ್ಲಿ ಕಂಡುಬರುವ ಶಿಲ್ಪಗಳು ಸರಳವಾದ ಕೆತ್ತನೆಯನ್ನು ಹೊಂದಿವೆ. ಅಲ್ಲದೆ ಹಲವು ಕಾಲಘಟ್ಟಗಳಿಗೆ ಸೇರಿವೆ. ಸಾಮಾನ್ಯವಾಗಿ ಶಿಲ್ಪಗಳು, ಈ ಮೊದಲು ಹೇಳಿದಂತೆ, ಗರ್ಭಗೃಹದಲ್ಲಿ ಮೂಲಬೇರದ ರೂಪದಲ್ಲಿ, ದ್ವಾರಪಾಲಕರು, ಶ್ರೀವೈಷ್ಣವ ಯತಿಗಳ, ಆಳ್ವಾರ್‌ಗಳ ರೂಪದಲ್ಲಿ ಕಂಡುಬರುತ್ತವೆ. ಅಲ್ಲದೇ ವಿಮಾನದ ಅಲಂಕಾರದಲ್ಲಿ ಗಾರೆ ಶಿಲ್ಪಗಳಲ್ಲಿ ದೇವದೇವತೆಯರ ಆಕೃತಿಗಳು ರಚನೆಗೊಂಡಿವೆ.

ನಂಬಿನಾರಾಯಣ ದೇವಾಲಯದ ಗರ್ಭಗೃಹದಲ್ಲಿರುವ ಶಿಲ್ಪವು ಸ್ಥಾನಕಭಂಗಿಯಲ್ಲಿನ ವಿಷ್ಣುವಿನ ಶಿಲ್ಪವಾಗಿದೆ. ಬಳಪದ ಕಲ್ಲಿನಲ್ಲಿ ಕೆತ್ತಿದ ಕೃಷ್ಣವರ್ಣದ ಮೂರ್ತಿ ಇದಾಗಿದೆ. ಕೆತ್ತನೆಯಲ್ಲಿ ನೈಜತೆ ಸ್ಪಷ್ಟವಾಗಿ ಕಂಡುಬರುತ್ತದೆ. ಶಂಖ, ಚಕ್ರ, ಗದೆಗಳು ಅಲಂಕೃತವಾಗಿ ಹಾಗೂ ಸೂಕ್ಷ್ಮವಾಗಿ ಕೆತ್ತನೆಗೊಂಡಿದೆ. ಬಲಗೈ ಅಭಯ ಮುದ್ರೆಯಲ್ಲಿದೆ. ಎತ್ತರದ ಗರುಡ ಪೀಠದ ಮೇಲೆ ನಿಂತಿರುವ ಈ ವಿಗ್ರಹವನ್ನು ಚತುರ್ವಿಂಶತಿ ವಿಷ್ಣುವಿನ ಮೂರ್ತಿಗಳ ಆಯುಧ ಲಕ್ಷಣದಿಂದ ಗಮನಿಸಿದರೆ, ನಾರಾಯಣನ ಶಿಲ್ಪವಾಗದೆ, ಶ್ರೀಧರನ ಶಿಲ್ಪವಾಗುತ್ತದೆ. ಅಂದರೆ ನಂಬಿನಾರಾಯಣ ಗರ್ಭಗೃಹದ ಮೂಲಬೇರವು ಶ್ರೀಧರನ ಶಿಲ್ಪವೆಂದಂತಾಯಿತು. ಪ್ರಸ್ತುತ ಶಿಲ್ಪವನ್ನು ಶೈಲಿಯ ದೃಷ್ಟಿಯಿಂದ ಗಮನಿಸಿದಾಗ, ೧೨ನೇ ಶತಮಾನದ ಹೊಯ್ಸಳ ಶಿಲ್ಪಗಳ ಲಕ್ಷಣಗಳನ್ನು ಹೊಂದಿರುವುದು ಕಂಡುಬರುತ್ತದೆ. ಈ ಶಿಲ್ಪವನ್ನು ಮೇಲುಕೋಟೆ, ನುಗ್ಗೆಹಳ್ಳಿ ಅಥವಾ ಹೊಸಹೊಳಲಿನ ದೇವಾಲಯಗಳಲ್ಲಿನ ವಿಷ್ಣುವಿನ (ಕೇಶವ) ಶಿಲ್ಪಗಳಿಗೆ ಹೋಲಿಸಬಹುದಾಗಿದೆ. ಒಟ್ಟಾರೆಯಾಗಿ, ಗರ್ಭಗೃಹದಲ್ಲಿನ ಪ್ರಸ್ತುತ ಶಿಲ್ಪವು ಅರ್ಚಮೂರ್ತಿಯಾಗಿರುವುದರಿಂದ, ಪ್ರತಿಮಾ ಲಕ್ಷಣಗಳಿಗನುಗುಣವಾಗಿ ತಾಲ ‑ಮಾನದಿಂದ ರಚಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಈ ದೇವಾಲಯದ ಉತ್ಸವಮೂರ್ತಿಗಳಲ್ಲಿ ನಾರಾಯಣ, ಶ್ರೀದೇವಿ, ಭೂದೇವಿ, ರಾಮಾನುಜಾಚಾರ್ಯರು ಮತ್ತು ಆಳ್ವಾರರುಗಳ ಲೋಹ ಪ್ರತಿಮೆಗಳಿವೆ. ಇವು ಸಹ ಶೈಲಿ ಮತ್ತು ಲಕ್ಷಣದ ದೃಷ್ಟಿಯಿಂದ ಅಧ್ಯಯನಕ್ಕೆ ಯೋಗ್ಯವಾಗಿವೆ.

ನಂಬಿನಾರಾಯಣ ದೇವಾಲಯದ ಹೊರಗಣ ಸಭಾಮಂಟಪದಲ್ಲಿ ಎರಡು ಆಳೆತ್ತರದ ದ್ವಾರಪಾಲಕರ ಶಿಲ್ಪಗಳಿವೆ. ಕೊಂಚ ಕುಳ್ಳ ಮತ್ತು ದಪ್ಪ ಎನಿಸುವ ಮೈಮಾಟ ಹೊಂದಿರುವ  ಈ ಆಕೃತಿಗಳು ಶಂಖ, ಚಕ್ರ ಹಾಗೂ ಗದೆಯೊಂದಿಗೆ ನಿಂತಿದ್ದಾರೆ. ಇವರನ್ನು ಜಯ ‑ವಿಜಯ ಅಥವಾ ಚಂಡ ‑ಪ್ರಚಂಡ ಎಂತಲೂ ಗುರುತಿಸಬಹುದಾಗಿದೆ. ಸಾಮಾನ್ಯ ವೈಷ್ಣವ ದ್ವಾರಪಾಲಕರ ಲಕ್ಷಣಗಳನ್ನು ಹೊಂದಿರುವ ಇವುಗಳಲ್ಲಿ ಅಗಲವಾದ ಕಣ್ಣುಗಳು, ದಪ್ಪ ಮೂಗು, ತುಟಿ, ಮುಖ, ಉದ್ದನೆಯ ಕಿವಿ ಹಾಗೂ ದಷ್ಟಪುಷ್ಟ ದೇಹ ಗಮನ ಸೆಳೆಯುತ್ತದೆ. ಈ ಎರಡೂ ಶಿಲ್ಪಗಳನ್ನು ದೇವಾಲಯದ ಮೂಲ ವಿಗ್ರಹದ ಜೊತೆಯಲ್ಲಿಯೇ ರಚಿಸಿರಬಹುದಾದರೂ, ಶೈಲಿಯಲ್ಲಿ ಗಂಗ-ಚೋಳ ಶಿಲ್ಪಗಳನ್ನು ಜ್ಞಾಪಕಕ್ಕೆ ತರುತ್ತವೆ.

ಈ ದೇವಾಲಯದ ಸಭಾಮಂಟಪದಲ್ಲಿ ಕಂಡುಬರುವ ಆಚಾರ್ಯರ ಹಾಗೂ ಆಳ್ವಾರರ ಮೂರ್ತಿಗಳು ಗಮನ ಸೆಳೆಯುತ್ತವೆ.[5] ಕುಳಿತ ಭಂಗಿಯಲ್ಲಿಯ ವಿಶ್ವಕ್ಸೇನ, ಗದೆ, ಶಂಖ, ಚಕ್ರಗಳನ್ನು ಹಿಡಿದಿದ್ದಾನೆ. ಕುರತ್ತಾಳ್ವಾರ್, ರಾಮಾನುಜಾಚಾರ್ಯರು, ವೇದಾಂತ ದೇಶಿಕರು(ನೋಡಿ: ಚಿತ್ರ‑೪೮), ಪಿಳ್ಳೈ ಲೋಕಾಚಾರ್ಯರು, ನಮ್ಮಾಳ್ವಾರ್ ಮತ್ತು ಮಣವಾಳ ಮಹಾಮುನಿಗಳು, ಆಸನ ಭಂಗಿಯಲ್ಲಿದ್ದು, ಬಹುತೇಕ ಒಂದೇ ತೆರನಾದ ದೇಹ ಲಕ್ಷಣಗಳನ್ನು ಹೊಂದಿವೆ. ಇದೇ ಸಾಲಿನಲ್ಲಿ ಕೊನೆಗೆ ಬರುವ ತಿರುಮಂಗೈ ಆಳ್ವಾರ್, ಖಡ್ಗ ಹಾಗೂ ಡಾಲನ್ನು (ಖೇಟಕ) ಹಿಡಿದು ಯುದ್ಧ ಸನ್ನದ್ಧನಾದಂತೆ ನಿಂತಿದ್ದಾನೆ(ನೋಡಿ: ಚಿತ್ರ‑೪೯). ಈ ಎಲ್ಲಾ ಶಿಲ್ಪಾಕೃತಿಗಳು ಸರಳವಾದ, ಹೆಚ್ಚು ಅಲಂಕೃತವಲ್ಲದ ಕೆತ್ತನೆಗಳನ್ನು ಹೊಂದಿವೆ. ವಿಶೇಷವೆಂದರೆ ಇಲ್ಲಿ ಶ್ರೀವೈಷ್ಣವ ಪಂಚರಾತ್ರಾಗಮದ ಪ್ರಕಾರವಾಗಿಯೇ ಈ ಆಚಾರ್ಯರ ಮತ್ತು ಆಳ್ವಾರರ ಶಿಲ್ಪಾಕೃತಿಗಳನ್ನು ಸ್ಥಾಪಿಸಲಾಗಿದೆ. ಇನ್ನು ಈ ಶಿಲ್ಪಗಳ ಶೈಲಿಯು, ಮೇಲೆ ಹೇಳಿದಂತೆ ಸರಳವಾದ ಆಕರ್ಷಕ ಶೈಲಿಯಾಗಿದೆ. ಅಂದರೆ, ಈ ಶಿಲ್ಪಗಳು ದ್ವಾರಪಾಲಕರ ಶಿಲ್ಪಶೈಲಿಗೆ ಹತ್ತಿರವಾಗುತ್ತವೆ.

 ದೇವಾಲಯದ ಶಿಖರ ಮತ್ತು ಸಭಾಮಂಟಪದಲ್ಲಿ ಬೆಳಕಿಂಡಿಯ ಪಾರ್ಶ್ವದ ಗೋಡೆಯ ಮೇಲೆ ಗಾರೆಯಿಂದ ಮಾಡಿದ ಉಬ್ಬುಶಿಲ್ಪಗಳು ಕಂಡುಬರುತ್ತವೆ. ನಂಬಿನಾರಾಯಣ ದೇವಾಲಯದ ಶಿಖರವು ಇಟ್ಟಿಗೆ ಗಾರೆಯಿಂದ ರಚನೆಯಾಗಿದೆ. ಇಟ್ಟಿಗೆ, ಗಾರೆ ಶಿಖರವು ಗಂಗ-ಚೋಳ ವಾಸ್ತು ಸಂಪ್ರದಾಯದ ಜನಪ್ರಿಯ ಉದಾಹರಣೆಯಾಗಿದೆ. ಶಿಖರದಲ್ಲಿ ಭದ್ರ, ಶಾಲ, ಪಂಜರ ಮತ್ತು ಕರ್ಣಗಳು ಕಂಡುಬರುತ್ತವೆ. ಸುಖಾಸನದಲ್ಲಿ ಕುಳಿತ ನರಸಿಂಹ, ಭದ್ರದಲ್ಲಿ ತಿರುಮಂಗೈ ಆಳ್ವಾರಗಳು ದಕ್ಷಿಣ ಭಾಗದ ಶಿಖರದಲ್ಲಿ ಕಂಡುಬರುತ್ತಾರೆ. ಉತ್ತರ ಭಾಗದಲ್ಲಿ, ವರಾಹ, ಪರವಾಸುದೇವ ಶಿಲ್ಪಗಳಿದ್ದರೆ, ಪಶ್ಚಿಮದಲ್ಲಿ ಹಯಗ್ರೀವ ಮತ್ತು ರಾಮಾನುಜಾಚಾರ್ಯರ ಆಕೃತಿಗಳಿವೆ. ಈ ಆಕೃತಿಗಳು ಮೂಲದಲ್ಲಿ ಅಂದರೆ, ಶಿಖರ ನಿರ್ಮಾಣದ ನಂತರದಲ್ಲಿ ರಚನೆಗೊಂಡು, ನಂತರದ ಕಾಲದಲ್ಲಿ ಅಲ್ಪಸ್ವಲ್ಪ ಮಾರ್ಪಾಡು ಹೊಂದಿರುವ ಸಾಧ್ಯತೆ ಇದೆ. ಇವುಗಳ ಪ್ರಮಾಣಬದ್ಧ ಅಳತೆ, ನೈಜತೆಯನ್ನು ಗಮನಿಸಿದರೆ ಹಾಗೂ ಇವುಗಳ ರಚನೆಯಲ್ಲಿ ಕಂಡುಬರುವ ವಾಸ್ತವಿಕತೆಯು, ಅವುಗಳ ಅಲಂಕಾರ ಸ್ಪಷ್ಟವಾಗಿ, ನುರಿತ ಕಲಾವಿದನಿಂದಲೇ ರಚನೆಯಾಗಿರುವುದನ್ನು ಊಹಿಸಬಹುದು. ಹೊಯ್ಸಳ ಶಿಲ್ಪಗಳಲ್ಲಿನ ನೈಜತೆಯು ಈ ಗಾರೆ ಶಿಲ್ಪಾಕೃತಿಗಳಲ್ಲಿ ಕಂಡುಬರುತ್ತದೆ. ಪ್ರಾಯಶಃ ಶಿಲಾಮೂರ್ತಿಗಳಲ್ಲಿ ಬಿಂಬಿಸಲಾಗದ ನೈಜತೆಯನ್ನು ಕಲಾವಿದ ಈ ಗಾರೆ ಶಿಲ್ಪಗಳಲ್ಲಿ ಬಿಂಬಿಸಲು ಯತ್ನಿಸಿರುವುದು ಸ್ಪಷ್ಟವಾಗಿದೆ.

ಇದೇ ದೇವಾಲಯದ, ಸಭಾಮಂಟಪದ ಬೆಳಕಿಂಡಿಯಲ್ಲಿನ ಪಾರ್ಶ್ವದ ಒಳ ಗೋಡೆಗಳಲ್ಲಿ ಕೆಲವು ಗಾರೆ ಉಬ್ಬುಶಿಲ್ಪಗಳಿವೆ(ನೋಡಿ: ಚಿತ್ರ‑೫೦). ಗಾರೆಶಿಲ್ಪಗಳು ಸ್ಥಾನಕ ಶಿಲ್ಪಗಳಾಗಿವೆ. ಶೈಲಿಯಲ್ಲಿ ವಿಜಯನಗರ ಗಾರೆಶಿಲ್ಪಗಳ ಅನುಕರಣೆ ಇವುಗಳಲ್ಲಿ ಕಂಡುಬರುತ್ತದೆ.[6] ನಾರಾಯಣ, ವರಾಹ, ವೇಣುಗೋಪಾಲ, ರಾಮಾನುಜಾಚಾರ್ಯ, ಪಿಳ್ಳೈ ಲೋಕಾಚಾರ್ಯ ಇತ್ಯಾದಿ ಉಬ್ಬು ಶಿಲ್ಪಾಕೃತಿಗಳು ಇಲ್ಲಿ ಕಂಡುಬರುತ್ತವೆ. ನೀಳವಾದ ದೇಹದ ಸಂರಚನೆ, ಕುಸುರಿನ ಅಲಂಕಾರಿಕ ಆಯುಧಗಳು, ಆಭರಣಗಳು, ಆಕೃತಿಗಳ ಉನ್ನತಿಯನ್ನು ಹೆಚ್ಚಿಸುತ್ತವೆ. ಈ ಗಾರೆ ಆಕೃತಿಗಳೊಂದಿಗೆ ಶ್ರೀವೈಷ್ಣವ ಯತಿಗಳ ಮತ್ತು ಆಳ್ವಾರರುಗಳ ಆಕೃತಿಗಳು ಇರುವುದು ಶ್ರೀವೈಷ್ಣವ ನಂಬಿಕೆಗಳ ಗಟ್ಟಿಯಾದ ಪ್ರಚಾರವನ್ನು ಸೂಚಿಸುತ್ತದೆ. ಗಾರೆ ಶಿಲ್ಪಗಳು ಶಿಲಾ ಶಿಲ್ಪಗಳಿಗೆ ಪರ್ಯಾಯವಾಗಿ ಹಿತಮಿತವಾಗಿ ಸೊಗಸಾಗಿ ಇಲ್ಲಿ ರಚನೆಗೊಂಡಿವೆ.

ದೇವಾಲಯದ ಹೊರಭಾಗದ ಭವ್ಯ ಧ್ವಜಸ್ತಂಭವು ಸ್ಪಷ್ಟವಾಗಿ ವಿಜಯನಗರ ಕಾಲದ ನಿರ್ಮಿತಿಯೆಂದು ಹೇಳಬಹುದು. ಈ ಧ್ವಜಸ್ತಂಭದ ಪೀಠದ ನಾಲ್ಕು ಪಾರ್ಶ್ವಗಳಲ್ಲಿ ಹಂಸ, ನರಸಿಂಹ (ಪ್ರಾಣಿ ರೂಪದಲ್ಲಿ) ಹನುಮಂತ ಹಾಗೂ ಗರುಡನ ಆಕೃತಿಗಳು ಬಹು ಸೊಗಸಾಗಿ ರಚನೆಗೊಂಡಿವೆ(ನೋಡಿ: ಚಿತ್ರ‑೫೧). ‘ಈಶ್ವರ ಸಂಹಿತೆಯ’ ಪ್ರಕಾರ, ಧ್ವಜಸ್ತಂಭವು ಶ್ರೀ ವೈಷ್ಣವ ಪದ್ಧತಿಯಲ್ಲಿ ಈ ಮೇಲಿನ ಆಕೃತಿಗಳನ್ನು ಹೊಂದಿರುವುದು ಮುಖ್ಯವಾಗಿದೆ. ಅದೇ ಪ್ರಕಾರ ಇಲ್ಲಿ ಅವು ಕಂಡುಬರುತ್ತವೆ. ಈ ಆಕೃತಿಗಳ ಕೆತ್ತನೆಯಲ್ಲಿ ಸಾಕಷ್ಟು ನೈಜತೆಯು  ಕಂಡುಬರುತ್ತದೆ. ಹನುಮಂತ, ಗರುಡರ ಆಕೃತಿಗಳಲ್ಲಿನ ಮುಂಚಾಲನಾ ಭಂಗಿ, ವೇಗದ ಸಂಕೇತವಾಗಿದೆ. ಹನುಮಂತ ಮತ್ತು ಗರುಡರು ವೈಷ್ಣವ ಧಾರ್ಮಿಕ ಸಂಕೇತಗಳಾಗಿಯೂ ಇಲ್ಲಿ ರಚನೆಗೊಂಡಿದ್ದಾರೆ.  ಪ್ರಾಯಶಃ ಈ ನಂಬಿಕೆಯಿಂದಲೇ ದೇವರ ಪೂಜಾ ಗಂಟೆಯ ಮೇಲಿನ ಹಿಡಿಕೆಯಲ್ಲಿ ಹನುಮಂತ ಮತ್ತು ಗರುಡರ ಸ್ಥಾನಕ ಆಕೃತಿಗಳು ರಚನೆಗೊಳ್ಳಲು ಕಾರಣವಾದವು ಎಂದು ಹೇಳಬಹುದು. ಸಾಮಾನ್ಯವಾಗಿ ಶ್ರೀವೈಷ್ಣವ ಪಂಥದ ದೇವಾಲಯಗಳಲ್ಲಿ ಗರುಡ-ಹನುಮಂತರ ಶಿಲಾವಿಗ್ರಹಗಳು ಇದ್ದೇ ಇರುತ್ತವೆ. ಇಲ್ಲಿ ಧ್ವಜಸ್ತಂಭದ ಪೀಠದ ಮೇಲೆ ಕೆತ್ತಲಾಗಿದೆ.

ಒಟ್ಟಾರೆಯಾಗಿ ನಂಬಿನಾರಾಯಣ ದೇವಾಲಯದ ಶಿಲ್ಪಗಳು ಹಲವು ಘಟ್ಟಗಳಲ್ಲಿ ರಚನೆಗೊಂಡಿರುವುದು ಮೇಲಿನ ಚರ್ಚೆಯಿಂದ ರುಜುವಾತಾಗುತ್ತದೆ.

ಕೆರೆತೊಣ್ಣೂರಿನ ಪಾರ್ಥಸಾರಥಿ ಅಥವಾ ಕೃಷ್ಣ ದೇವಾಲಯದಲ್ಲಿನ ಶಿಲ್ಪಗಳ ಸಂಖ್ಯೆ ತೀರ ಕಡಿಮೆ. ಆದರೆ, ಗರ್ಭಗೃಹದಲ್ಲಿನ ಆಸನ ಭಂಗಿಯ ಕೃಷ್ಣ, ಶ್ರೀದೇವಿ ಮತ್ತು ಭೂದೇವಿಯರ ಶಿಲ್ಪಗಳು (ರುಕ್ಮಿಣಿ‑ಸತ್ಯಭಾಮಾ) ಶೈಲಿಯ ದೃಷ್ಟಿಯಿಂದ ಗಮನ ಸೆಳೆಯುತ್ತವೆ(ನೋಡಿ: ಚಿತ್ರ‑೩೨).

ಸುಮಾರು ಆಳೆತ್ತರದ ಅಳತೆಯ ಈ ಶಿಲ್ಪಗಳು ಅತ್ಯಂತ ವೈಶಿಷ್ಟ್ಯಪೂರ್ಣವಾಗಿವೆ. ಮೂರೂ ಶಿಲ್ಪಗಳು ಪೀಠದ ಮೇಲೆ ಸುಖಾಸನದಲ್ಲಿ ಕುಳಿತಿವೆ. ಮಧ್ಯದಲ್ಲಿ ಪಾರ್ಥಸಾರಥಿಯು ಚತುರ್ಭುಜ ಹಸ್ತನಾಗಿದ್ದು, ಚತುರ್ವಿಂಶತಿ ಮೂರ್ತಿಯ ಲಕ್ಷಣಗಳಲ್ಲಿನ ಕೃಷ್ಣನಂತೆ, ಗದೆ, ಪದ್ಮ ಶಂಖ ಚಕ್ರಗಳನ್ನು ಹಿಡಿದಿದ್ದಾನೆ. ಬಲ ಪಾರ್ಶ್ವದಲ್ಲಿ ಶ್ರೀದೇವಿಯು ಹಾಗೂ ಎಡಪಾರ್ಶ್ವದಲ್ಲಿ ಭೂದೇವಿಯ ಶಿಲ್ಪಗಳಿವೆ. ಇಲ್ಲಿನ ಈ ಶಿಲ್ಪಗಳಲ್ಲಿನ ವೈಶಿಷ್ಟ್ಯತೆ ಎಂದರೆ, ಶೈಲಿಯ ದೃಷ್ಟಿಯಿಂದ ಪಾರ್ಥಸಾರಥಿ ಮತ್ತು ಶ್ರೀದೇವಿಯ ಶಿಲ್ಪಗಳು ಒಂದು ಗುಂಪಿಗೆ ಸೇರಿದ್ದರೆ, ಅಂದರೆ ಹೊಯ್ಸಳ ಶಿಲ್ಪ ಶೈಲಿಯಲ್ಲಿದ್ದರೆ, ಭೂದೇವಿಯ ಶಿಲ್ಪವು ಗಂಗ-ಚೋಳ ಶಿಲ್ಪ ಶೈಲಿಯನ್ನು ಹೊಂದಿದೆ.[7] ಅಲ್ಲದೇ ಈ ಶಿಲ್ಪದ ಆಕಾರವೂ ಕೊಂಚ ಚಿಕ್ಕದಾಗಿದೆ. ಇದರಿಂದ, ಹಲವು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ಈ ಶಿಲ್ಪ ಮಾತ್ರ ಬೇರೆ ಶೈಲಿಯಲ್ಲಿ ಇದೆ. ಅಲ್ಲದೇ, ಈ ಶಿಲ್ಪವನ್ನು ಕೆತ್ತಲು ಉಪಯೋಗಿಸಿದ ಶಿಲೆಯು ಗಟ್ಟಿ ಕಣಶಿಲೆಯಾಗಿದೆ. ಉದ್ದೇಶಪೂರ್ವಕವಾಗಿ ಈ ಶಿಲ್ಪದ ಕೆತ್ತನೆಗೆ ಕಣಶಿಲೆಯನ್ನು ತೆಗೆದುಕೊಳ್ಳಲಾಯಿತೇ ಹೇಗೆ? ಅಥವಾ ಈ ಶಿಲ್ಪವೂ ಕೊಂಚ ಹಳೆಯ ಕಾಲದಿದ್ದು, ನಂತರದಲ್ಲಿ ಇವುಗಳೊಂದಿಗೆ ಸೇರಿಸಿ ಪ್ರತಿಷ್ಠಾಪಿಸಿರಬಹುದೇ ಎಂಬೆಲ್ಲ ಜಿಜ್ಞಾಸೆಗಳು ಬರುತ್ತವೆ. ಈ ದೇವಾಲಯದ ಉತ್ಸವಮೂರ್ತಿಗಳಾದ ಗೋಪಾಲಕೃಷ್ಣ ಮತ್ತು ಶ್ರೀದೇವಿ ಲೋಹಪ್ರತಿಮೆಗಳು ಶೈಲಿ ಮತ್ತು ಲಕ್ಷಣದಲ್ಲಿ ಒಂದೇ ಕಾಲದ ರಚನೆಯಂತೆ ಕಂಡುಬರುತ್ತದೆ. ಆದರೆ ಭೂದೇವಿಯ ಲೋಹಪ್ರತಿಮೆಯು ಶೈಲಿ ಮತ್ತು ಲಕ್ಷಣದಲ್ಲಿ ಬೇರೆ ರಚನೆಯಂತೆ ಕಂಡುಬರುತ್ತದೆ. ಹಾಗಾಗಿ ಇಲ್ಲಿರುವ ಲೋಹಶಿಲ್ಪಗಳು ಸಹ ಅಧ್ಯಯನ ಮಹತ್ವವನ್ನು ಪಡೆದಿವೆ(ನೋಡಿ: ಚಿತ್ರ‑೫೨). ಎಡಗಾಲನ್ನು ಮುಂದಿಟ್ಟು ತ್ರಿಭಂಗಿಯಲ್ಲಿರುವ ಗೋಪಾಲಕೃಷ್ಣ ಪ್ರತಿಮೆ ಇಲ್ಲಿನ ವಿಶೇಷವೆಂದು ಭಾವಿಸಲಾಗಿದೆ.

ಕೆರೆತೊಣ್ಣೂರಿನ ದೇವಾಲಯ ಶೈಲಿಯನ್ನು ನೋಡಿದರೆ, ಚೋಳ ವಾಸ್ತುಕಲೆಯ ಸೊಗಡನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ. ತಮಿಳುನಾಡಿನಿಂದ ಕಲಾವಿದರು ಬಂದು ಇಲ್ಲಿ ಕೆಲಸ ಮಾಡಿದುದಕ್ಕೆ ದಾಖಲೆಗಳಿವೆ.[8] ಹಾಗೆಂದ ಮಾತ್ರಕ್ಕೆ, ಸಂಪೂರ್ಣ ತಮಿಳು ಕಲಾವಿದರೇ ಇಲ್ಲಿ ಕೆಲಸ ಮಾಡಿದರು ಎಂದರ್ಥವಲ್ಲ. ಸ್ಥಳೀಯ ಕಲಾವಿದರ ಜೊತೆಯಲ್ಲಿ ತಮಿಳು ಕಲಾವಿದರು ಕೆಲಸ ಮಾಡಿದ್ದು, ಮೂರ್ತಿಗಳ ಕೆತ್ತನೆಯಲ್ಲಿ ಕೆಲಸ ಹಂಚಿಕೊಂಡು ಕೆತ್ತನೆ ಮಾಡಿರಬಹುದಾಗಿದೆ. ಹಾಗಾಗಿದ್ದಲ್ಲಿ ಮಾತ್ರ ಪ್ರಸ್ತುತ ದೇವಿಯ ಶಿಲ್ಪವು, ಇನ್ನುಳಿದ ಶಿಲ್ಪಗಳಿಗೆ ಸಮಕಾಲೀನವಾಗಿಯೇ ಚೋಳ ಕಲಾವಿದನೊಬ್ಬನಿಂದ ರಚನೆಗೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಇದರಿಂದ ಹೊಯ್ಸಳ ಶೈಲಿಯಲ್ಲಿ ಪಳಗಿದ ಕಲಾವಿದರು ಪಾರ್ಥಸಾರಥಿ ಮತ್ತು ಶ್ರೀದೇವಿಯ ಶಿಲ್ಪಗಳನ್ನು ಕೆತ್ತಿದ್ದು, ಭೂದೇವಿಯ ಶಿಲ್ಪವನ್ನು ಚೋಳ ಶೈಲಿಯಲ್ಲಿ ಪಳಗಿದ ಕಲಾವಿದನು ಕೆತ್ತಿರಬಹುದೆಂಬ ನಿರ್ಣಯಕ್ಕೆ ಬರಬಹುದಾಗಿದೆ. ಒಟ್ಟಾರೆಯಾಗಿ ಇವು ತೀರ ಅಪರೂಪದ ಶಿಲ್ಪಗಳಾಗಿವೆ. ಶೈಲಿಯ ಸ್ಪಷ್ಟವಾದ ವ್ಯತ್ಯಾಸವನ್ನು, ಶಿಲ್ಪಗಳ ಕೆತ್ತನೆಯ ತಾಂತ್ರಿಕತೆ, ದೇಹದ ಮೈಮಾಟ, ಆಭರಣಗಳ ಅಲಂಕರಣದ ಕೆತ್ತನೆಯಲ್ಲಿಯೂ ಗಮನಿಸಿ ಗುರುತಿಸಬಹುದು.

ಈ ದೇವಾಲಯವು ಕೂಡ ನಂತರದ ಅಂದರೆ ಹೊಯ್ಸಳೋತ್ತರ ಕಾಲದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ದೇವಾಲಯದ ಪ್ರಾಕಾರ, ಪಟಾಲಂಕಾರ, ಯಜ್ಞಶಾಲೆಗಳು, ಮಹಾದ್ವಾರಗಳು, ವಿಜಯನಗರ ಮತ್ತು ನಂತರದ ಕಾಲದವು ಎಂದು ಹೇಳಬಹುದು. ಮಹಾದ್ವಾರದಲ್ಲಿ ಕಂಡುಬರುವ, ದ್ವಾರಪಾಲಕರು ಮತ್ತು ನದಿದೇವತೆಗಳು ಸ್ಪಷ್ಟವಾಗಿ ವಿಜಯನಗರೋತ್ತರ ಶಿಲ್ಪಶೈಲಿಯನ್ನು  ಹೊಂದಿದ್ದಾರೆ. ಅಂದರೆ, ಮೈಸೂರು ಒಡೆಯರ ಕಾಲದಲ್ಲಿ ಈ ಭಾಗವು ನಿರ್ಮಾಣವಾದಂತೆ ತೋರುತ್ತದೆ. ಈ ಶಿಲ್ಪಗಳು, ವಿಜಯನಗರ ಶಿಲ್ಪಶೈಲಿಯ ಅನುಕರಣೆಯನ್ನು ಹೊಂದಿವೆ. ಹೀಗಾಗಿ, ಅವುಗಳಲ್ಲಿ ವಿಜಯನಗರ ಶೈಲಿಯ ಮೈವಳಿಕೆ, ಸೊಗಡು ಮತ್ತು ನೈಜತೆ ಕಂಡುಬರುವುದಿಲ್ಲ. ಇದೇ ದ್ವಾರದ ಒಳಭಾಗದಲ್ಲಿ ಎರಡು ಪಾರ್ಶ್ವಗಳಲ್ಲಿ ಹನುಮಂತ ಮತ್ತು ಗರುಡರ ಸ್ಥಾನಕ ಭಂಗಿಯ ಶಿಲ್ಪಗಳಿವೆ. ಈ ಮೇಲೆ ಚರ್ಚಿಸಿದಂತೆ ಪುನಃ ಇಲ್ಲಿ ವಿಭಿನ್ನವಾಗಿ ಪ್ರಸ್ತುತ ಶಿಲ್ಪಗಳನ್ನು ತೋರಿಸಲಾಗಿದೆ. ಆದರೆ, ಶ್ರೀವೈಷ್ಣವ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಇವುಗಳು ರಚನೆಯಾಗಿವೆ. ಈ ಎರಡೂ ಶಿಲ್ಪಗಳು ಭಕ್ತ ವಿಗ್ರಹದಂತೆ ಅಂಜಲಿ ಮುದ್ರೆಯಲ್ಲಿ ನಿಂತಿರುವುದು ವಿಶಿಷ್ಟವಾಗಿದೆ. ಇವುಗಳಿಗೆ ಸಮಾನವಾಗಿ ಶ್ರೀರಂಗಪಟ್ಟಣದ ರಂಗನಾಥದೇವಾಲಯದ ಹೊರಗಿರುವ ರಥಮಂಟಪದ ಎರಡೂ ಪಾರ್ಶ್ವದಲ್ಲಿ ತದ್ರೂಪಾದ ಆಕೃತಿಗಳಿವೆ. ರಥಮಂಟಪವು ಒಡೆಯರ ಕಾಲದ ನಿರ್ಮಿತಿಯಾಗಿದೆ. ಆದುದರಿಂದ, ಪ್ರಸ್ತುತ ಆಕೃತಿಗಳೂ ಹಾಗೆಯೇ ಇರುವುದನ್ನು ಗಮನಿಸಿ ಪಾರ್ಥಸಾರಥಿ ದೇವಾಲಯದ ಮಹಾದ್ವಾರವು ಒಡೆಯರ ಕಾಲದ ನಿರ್ಮಿತಿಯೆಂದು ನಿರ್ಧರಿಸಬಹುದು.

ನಂಬಿನಾರಾಯಣ ದೇವಾಲಯದಂತೆ, ಪಾರ್ಥಸಾರಥಿ (ಕೃಷ್ಣ) ದೇವಾಲಯವು ಕೂಡಾ ದ್ರಾವಿಡ ವಿಮಾನ ಶಿಖರವನ್ನು ಹೊಂದಿದ್ದು, ಗಾರೆ ಇಟ್ಟಿಗೆಗಳಿಂದ ನಿರ್ಮಾಣವಾಗಿದೆ. ಇಲ್ಲಿಯೂ ಕೆಲವು ಆಕೃತಿಗಳಿದ್ದು, ಬಹುತೇಕ ಹಾಳಾಗಿರುವುದರಿಂದ ಅವುಗಳ ಗುರುತಿಸುವಿಕೆ ಸಮಂಜಸವಾಗಿ ಆಗುವುದಿಲ್ಲ.

ನರಸಿಂಹ ದೇವಾಲಯದ ನಿರ್ಮಾಣವೂ ಹೊಯ್ಸಳ ಕಾಲದಲ್ಲೇ ಆಗಿದೆ. ಗರ್ಭಗೃಹದ ಅರ್ಚಮೂರ್ತಿ ನರಸಿಂಹ ಮಾತ್ರ ಮೂಲಶಿಲ್ಪವಾಗಿದೆ(ನೋಡಿ: ಚಿತ್ರ‑೫೩). ಆಸನ ಭಂಗಿಯ ಈ ಶಿಲ್ಪವು ಹೊಯ್ಸಳ ಕಲಾವಿದರಿಂದಲೇ ರಚನೆಗೊಂಡಿದೆ. ಶಿಲ್ಪದಲ್ಲಿನ ಕೆತ್ತನೆ, ಆಭರಣಗಳು, ಮುಖದ ರಚನೆ, ಪ್ರಭಾವಳಿಗಳು ಹಾಗೂ ಪೀಠದ ಕೆತ್ತನೆಯ ಆಧಾರದಿಂದ ಹಾಗೆಂದು ಹೇಳಬಹುದು. ಈ ಶಿಲ್ಪವು ಕೂಡಾ, ಶೈಲಿಯ ದೃಷ್ಟಿಯಿಂದ ಹೊಯ್ಸಳರ ಕಾಲಕ್ಕೆ ಸರಿ ಹೊಂದುತ್ತದೆ. ಇದರ ಶೈಲಿಯ ಆಧಾರದಿಂದ ಸುಮಾರು ಕ್ರಿ.ಶ. ೧೨೫೦ರ ಸುಮಾರಿಗೆ ಈ ಶಿಲ್ಪವನ್ನು ನಿರ್ಧರಿಸಬಹುದು. ಇದೇ ದೇವಾಲಯದ ರಾಮಾನುಜ ಮಂಟಪದಲ್ಲಿರುವ ರಾಮಾನುಜರ ಗಾರೆ ಆಕೃತಿ, ಭಕ್ತರನ್ನು ಆಕರ್ಷಿಸುತ್ತದೆ. ಗಾರೆಯಲ್ಲಿ ರಚಿಸಿರುವ ಆಕರ್ಷಕ ಕೋಷ್ಟಾಲಯದಲ್ಲಿ ರಾಮಾನುಜರ ಮೂರ್ತಿ ಸ್ಥಾಪಿಸಲಾಗಿದೆ. ಸರ್ಪದ ತೆರೆದ ಹೆಡೆಗಳ ಕೆಳಗೆ ಕುಳಿತ ಯತಿಗಳು, ಶಿಲ್ಪಶೈಲಿಯ ದೃಷ್ಟಿಯಿಂದ ಅಷ್ಟು ನೈಜವಾಗಿಲ್ಲದಿದ್ದರೂ, ಆಕರ್ಷಕ ಮೈಮಾಟ ಗಮನ ಸೆಳೆಯುತ್ತದೆ. ಈ ಶಿಲ್ಪವು, ಬಹುಶಃ ಹೊಯ್ಸಳೋತ್ತರ ಕಾಲದಲ್ಲಿ ರಚನೆಯಾದಂತೆ ತೋರುತ್ತದೆ.

ಕೆರೆತೊಣ್ಣೂರಿನ ಈ ದೇವಾಲಯಗಳಲ್ಲಿನ ಶಿಲ್ಪಗಳಲ್ಲಿ ಒಂದು ತೆರನಾದ ಸಂಕುಚಿತವಾದ ಬೆಳವಣಿಗೆ ಕಂಡುಬರುತ್ತದೆ. ಇದಕ್ಕೆ ಕಾರಣಗಳು ಇದ್ದಿರಬಹುದು. ಇದೇ ಪರಿಸರದ ಕಿಕ್ಕೇರಿಯ ಬ್ರಹ್ಮೇಶ್ವರ, ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯಗಳು ಶಿಲ್ಪಕಲಾ ವೈಭವದಿಂದ ರಾರಾಜಿಸಿದರೆ, ಇಲ್ಲಿ ಶಿಲ್ಪಕಲೆಗೆ ಹೆಚ್ಚಿನ ಪ್ರೋದೊರೆಯದೇ, ಧಾರ್ಮಿಕ ಅವಶ್ಯಕತೆಗೆ ಪೂರಕವಾದ ಆಕೃತಿಗಳ ರಚನೆಗೆ ಮಾತ್ರ ಒತ್ತುಕೊಟ್ಟಂತೆ ತೋರುತ್ತದೆ. ಹೀಗಾಗಿ, ಹೆಚ್ಚಿನ ಅಲಂಕಾರಿಕ ರಚನೆಗಳಿಗೆ ಹೋಗದೆ ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಅವಶ್ಯಕವಾದ ಶಿಲ್ಪಗಳ ಕೆತ್ತನೆಯಾಗಿದೆ ಎಂದು ಹೇಳಬಹುದು.

ಈ ಗ್ರಾಮದಲ್ಲಿ ಹಲವಾರು ವೀರಗಲ್ಲು ಮತ್ತು ಸತಿಕಲ್ಲು ಶಿಲ್ಪಗಳೂ ದೊರೆತಿವೆ. ಅವುಗಳೆಲ್ಲವೂ ಸ್ಥಳೀಯ ಶಿಲೆಯಾದ ಗ್ರಾನೈಟ್‌ನಲ್ಲಿಯೇ ರಚನೆಗೊಂಡಿವೆ. ಅವುಗಳಲ್ಲಿ ಕಂಡು ಬರುವ ಆಕೃತಿಗಳು ಹೆಚ್ಚಾಗಿ ಜಾನಪದೀಯ ಅಂಶಗಳಿಂದ ಕೂಡಿವೆ. ಅಂದರೆ, ಸ್ಥಳೀಯ ಕಲಾವಿದರೆ ಅಥವಾ ಅಷ್ಟು ಪಕ್ವವಲ್ಲದ ಕಲಾವಿದನು ಈ ಸ್ಮಾರಕ ಶಿಲೆಗಳನ್ನು ಕೆತ್ತಿದಂತೆ ತೋರುತ್ತದೆ. ಈ ಶಿಲ್ಪಗಳು ಕೂಡಾ ತೊಣ್ಣೂರಿನ ಶಿಲ್ಪಕಲೆಯ ಭಾಗವಾಗಿವೆ.[9]

ಹೊಯ್ಸಳ ಶಿಲ್ಪಶೈಲಿಯ ಮುಖ್ಯವಾಹಿನಿಯಲ್ಲಿ ಕೆರೆತೊಣ್ಣೂರಿನ ಶಿಲ್ಪಗಳು ಸುಪ್ತವಾದ ಶೈಲಿಗೆ ಸೇರಿಬಿಡುತ್ತವೆ. ಇಲ್ಲಿನ ಶಿಲ್ಪಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿದಾಗ ಅವುಗಳ ಪ್ರಾಮುಖ್ಯತೆ ತಿಳಿಯುತ್ತದೆ. ಕೆರೆತೊಣ್ಣೂರು ಅಥವಾ ಯಾದವ ಚತುರ್ವೇದಿ ಮಂಗಲದಲ್ಲಿ ದೊರೆತ ಶಾಸನಗಳನ್ನು ಗಮನಿಸಿದರೆ, ಬಹುಶಃ ಆ ಕಾಲದ ಬಹು ಚಟುವಟಿಕೆಯ ಧಾರ್ಮಿಕ ಕೇಂದ್ರವಾಗಿದ್ದು, ಶೈವ, ಶ್ರೀವೈಷ್ಣವ, ದೇವಾಲಯಗಳು ಮತ್ತು ಜೈನ ಬಸದಿಗಳು ಇಲ್ಲಿ ಸಾಕಷ್ಟು ಉನ್ನತ ಹಂತದಲ್ಲಿದ್ದವು. ಕಾಲಕ್ರಮೇಣ ಜೈನ ಬಸದಿಗಳು ಅವನತಿ ಹೊಂದಿ, ಕೇವಲ ಇಂದು ಜನಪ್ರಿಯ ದೇವಾಲಯಗಳು ಮಾತ್ರ ಉಳಿದಿವೆ. ಒಟ್ಟಾರೆಯಾಗಿ ಕೆರೆತೊಣ್ಣೂರಿನ ಶಿಲ್ಪಗಳು ಹೊಯ್ಸಳ ಶಿಲ್ಪಕಲೆಯ ಮುಖ್ಯವಾಹಿನಿಯ ಭಾಗವಾಗಿ, ತಮ್ಮದೇ ಆದಂತಹ ಶೈಲಿಯೊಂದರ ಬೆಳವಣಿಗೆಗೆ ಕಾರಣವಾಗುತ್ತವೆ. ಪ್ರಾಯಶಃ ಅವುಗಳ ವಿಭಿನ್ನತೆಯೇ ಅವುಗಳ ಪ್ರಾಮುಖ್ಯತೆಯನ್ನು ಹೆಚ್ಚಿಸಿರುವುದು.


[1] ಡಾ.ಎಂ.ಎಸ್. ಕೃಷ್ಣಮೂರ್ತಿಯವರು ಈ ದೇವಾಲಯಗಳ ಕುರಿತು ಅಧ್ಯಯನ ಕೈಗೊಂಡಿದ್ದಾರೆ. ನೋಡಿ; Temple Architecture at Tonnuru-Some Observations. “Gauravam” Dr. B.K.Gururaja Rao Felicitation Volume. Edit K.V.Ramesh. Harman Publishing House, New Delhi, 1996, pp 253 ff.

[2] ಎಪಿಗ್ರಾಫಿಯಾ ಕರ್ನಾಟಕ VI, ತೊಣ್ಣೂರಿನ ಶಾಸನಗಳನ್ನು ನೋಡಿ. ಯಾವುದೇ ಶಾಸನಗಳು ದೇವಾಲಯದ ನಿರ್ಮಾಣದ ಉಲ್ಲೇಖ ನೀಡುವುದಿಲ್ಲ. ಬದಲಾಗಿ ಹೇರಳವಾದ ದಾನದತ್ತಿಗಳನ್ನು ನೀಡಿದ ಉಲ್ಲೇಖಗಳಿವೆ.

[3] ಅದೇ, ಪಾಂ. ೧೦೦‑೧೧೫, ಕೈಲಾಸೇಶ್ವರ ದೇವಾಲಯವು ಸ್ಥಾನಪತಿಗಳನ್ನು ಹೊಂದಿತ್ತು. ಈ ದೇವಾಲಯದ ರಚನೆಗೆ ತಮಿಳುನಾಡಿನಿಂದ ಶಿಲ್ಪಿಗಳು ಬಂದರೆಂದು ದಾಖಲೆಗಳು ಹೇಳುತ್ತವೆ.

[4] ಅದೇ,

[5] ಆಳ್ವಾರ್‌ಗಳ ಶಿಲ್ಪಗಳನ್ನು ಗುರುತಿಸುವಲ್ಲಿ ಸಹಾಯ ಮಾಡಿದ ಸ್ನೇಹಿತ ಶ್ರೀಶೆಲ್ವಪಿಳ್ಳೆ ಅಯ್ಯಂಗಾರ್, ಆಗಮಪ್ರವೀಣ ಇವರಿಗೆ ಧನ್ಯವಾದಗಳು.

[6] ಕುಲಕರ್ಣಿ. ಆರ್.ಎಚ್. ೨೦೦೦, ವಿಜಯನಗರ ಕಾಲದಲ್ಲಿ ಗಾರೆಕಲೆ ಒಂದು ಅವಲೋಕನ. “ವಿಜಯನಗರ ಅಧ್ಯಯನ” ಸಂ. ೫, ಸಂಪಾದಕರು ಎಂ.ವಿ. ಕೃಷ್ಣಪ್ಪ, ಇತರರು, ಮೈಸೂರು.

[7] ಗಂಗ‑ಚೋಳ ಕಾಲದ ದೇವಾಲಯಗಳ ಯಾವುದೇ ಸ್ತ್ರೀ ದೇವತೆಯನ್ನು ಗಮನಿಸಿ ಈ ನಿರ್ಧಾರಕ್ಕೆ ಬರಬಹುದು ಅಥವಾ ಚೋಳ ಪ್ರಭಾವದಿಂದ ರಚನೆಯಾದ ಶಿಲ್ಪಗಳನ್ನು ಗಮನಿಸಬಹುದು. ಉದಾಹರಣೆಗೆ ಬೇಗೂರು(ಬೆಂಗಳೂರು), ಅಗರ (ಚಾಮರಾಜನಗರ) ಹಾಗು ತಲಕಾಡು(ಮೈಸೂರು)ಗಳಲ್ಲಿನ ಕೆಲವು ಶಿಲ್ಪಗಳನ್ನು ಸ್ಮರಿಸಬಹುದು.

[8] ಕೃಷ್ಣಮೂರ್ತಿ. ಎಂ.ಎಸ್.ಪೂರ್ವೋಕ್ತ

[9] ಸ್ಮಾರಕ ಶಿಲೆಗಳನ್ನು ಕುರಿತಂತೆ ಹೆಚ್ಚಿನ ಮಾಹಿತಿಗೆ ಇದೇ ಸಂಪುಟದಲ್ಲಿ ಡಾ.ಎಂ.ಪಿ. ಮಹದೇವಯ್ಯನವರ ಲೇಖನವನ್ನು ನೋಡಿರಿ.