ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ಅಥವಾ ತೊಣ್ಣೂರು ಚರಿತ್ರೆಯಲ್ಲಿ ತೊಂಡನೂರು ಎಂದು ಗುರುತಿಸಿಕೊಂಡಿದೆ. ಇದು ಹೊಯ್ಸಳರ ಉಪರಾಜಧಾನಿಗಳಲ್ಲಿ ಒಂದೆಂದು ಪ್ರತೀತಿ. ಶ್ರೀವೈಷ್ಣವ ಪಂಥದ ರಾಮಾನುಜಾಚಾರ್ಯರು ಇಲ್ಲಿ ಬಹುಕಾಲ ತಂಗಿದ್ದು, ನಂತರ ಮೇಲ್ಕೋಟೆಗೆ ತೆರಳಿದರು. ಅವರು ತೊಣ್ಣೂರಿನಲ್ಲಿ ಬೃಹತ್ ಪ್ರಮಾಣದ ಶ್ರೀವೈಷ್ಣವ ಪಂಥದ ದೇವಾಲಯಗಳ ನಿರ್ಮಾಣಕ್ಕೆ ಕಾರಣರಾದರು. ಇವರ ಪ್ರಭಾವಕ್ಕೊಳಗಾದ ಹೊಯ್ಸಳ ದೊರೆ ವಿಷ್ಣುವರ್ಧನನು, ಇಲ್ಲಿ ಲಕ್ಷ್ಮೀನಾರಾಯಣ ದೇವಾಲಯವನ್ನು ನಿರ್ಮಿಸಿದನು. ಇದು ವಿಷ್ಣುವರ್ಧನನು ನಿರ್ಮಿಸಿದ ಪಂಚನಾರಾಯಣ ದೇವಾಲಯಗಳಲ್ಲಿ ಒಂದಾಗಿತ್ತು. ಶಾಸನಗಳಲ್ಲಿ ತೊಂಡನೂರು, ಯಾದವನಾರಾಯಣ ಚತುರ್ವೇದಿ ಮಂಗಲ ಎಂದು ಉಲ್ಲೇಖಗೊಂಡಿದೆ.

[1] ಹೀಗಾಗಿ ತೊಣ್ಣೂರು ಕರ್ನಾಟಕದ ಶ್ರೀವೈಷ್ಣವ ಕೇಂದ್ರಗಳಿಗೆ ಮಾತೃಸ್ಥಾನದಲ್ಲಿದೆ. ಇಲ್ಲಿನ ಇತರ ದೇವಾಲಯಗಳಲ್ಲಿ ಗೋಪಾಲಕೃಷ್ಣ, ಯೋಗಾನರಸಿಂಹ, ಕೈಲಾಸೇಶ್ವರ, ವೆಂಕಟರಮಣ (ಬೆಟ್ಟದ ಮೇಲೆ) ಮತ್ತು ಗ್ರಾಮದೇವತೆಗಳ ದೇವಾಲಯಗಳು ಪ್ರಮುಖವಾಗಿವೆ. ಹೊಯ್ಸಳರ ಮೂರನೆಯ ಬಲ್ಲಾಳನು ಮಧುರೆಯ ಮೇಲೆ ದಂಡೆತ್ತಿ ಹೋಗುವ ಮುನ್ನ ಹಾಗೂ ಕ್ರಿ.ಶ.೧೩೨೬ರಲ್ಲಿ ದೆಹಲಿ ದಾಳಿಯಿಂದ ದ್ವಾರಸಮುದ್ರವು ಹಾಳಾದನಂತರ ತೊಣ್ಣೂರಿನಲ್ಲಿ ತಂಗಿದ್ದನೆಂದು ಚರಿತ್ರೆಯಿಂದ ತಿಳಿದುಬರುತ್ತದೆ.[2] ಹೀಗೆ ತೊಣ್ಣೂರು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಮುಖ ಕೇಂದ್ರವಾಗಿದ್ದು, ಹೊಯ್ಸಳರ ನಂತರ ಇಳಿಮುಖಗೊಂಡಿತು. ತೊಣ್ಣೂರು ತನ್ನ ವಿಶಾಲವಾದ ಕೆರೆಯಿಂದಾಗಿ ಇಂದು ಸಹ ತನ್ನ ಪ್ರಾಶಸ್ತ್ಯವನ್ನು ಉಳಿಸಿಕೊಂಡಿದೆ. ಕೆರೆಗೆ ಲಕ್ಷ್ಮೀಸಾಗರ, ತಿರುಮಲಸಾಗರ ಎಂಬ ಹೆಸರುಗಳಿವೆ. ಹೈದರಾಬಾದಿನ ನಿಜಾಮನು ಈ ತಿಳಿ ನೀರಿನ ಕೆರೆಯನ್ನು ಕಂಡು ಹರ್ಷಿತನಾಗಿ ಮೋತಿ ತಲಾಬ್ (ಮುತ್ತಿನ ಸರೋವರ) ಎಂದು ಕರೆದಿದ್ದಾನೆ.

ಈ ಊರಿನ ಶಾಸನಗಳು ಎಫಿಗ್ರಾಫಿಯಾ ಕರ್ನಾಟಕ, ಸಂಪುಟ ೬ರಲ್ಲಿ ಪ್ರಕಟಗೊಂಡಿವೆ. ಲಕ್ಷ್ಮಿನಾರಾಯಣ ದೇವಾಲಯದ ಶಾಸನವೊಂದು, ತೊಂಡನೂರು ಅಗ್ರಹಾರದ ಗಡಿಯಲ್ಲಿದ್ದ ನಖರೇಶ್ವರ ದೇವಾಲಯವನ್ನು ಉಲ್ಲೇಖಿಸುತ್ತದೆ.[3] ಇಲ್ಲಿನ ಕೈಲಾಸೇಶ್ವರ ದೇವಾಲಯವನ್ನು ಹೊರತುಪಡಿಸಿ, ಮತ್ತೊಂದು ಶಿವಾಲಯವಿತ್ತೆಂಬ ಸಂಗತಿ ಈವರೆವಿಗೂ ತಿಳಿದಿರಲಿಲ್ಲ. ಈ ಮೇಲಿನ ಶಾಸನದಿಂದಾಗಿ ತೊಣ್ಣೂರಿನಲ್ಲಿ ಮತ್ತೊಂದು ಶಿವಾಲಯ ಇತ್ತೆಂಬ ಸಂಗತಿ ಸ್ಪಷ್ಟವಾಗುವುದು. ದೇವಾಲಯದ ಸ್ಥಾನಪತಿಯಾಗಿದ್ದ ತಪೋಧನ ಅಮೃತರಾಶಿಗೆ, ನಂದಾದೀವಿಗೆಗಾಗಿ ಮಗ್ಗದೆರೆಯನ್ನು ದತ್ತಿ ನೀಡಲಾಗಿದೆ.[4] ಇದೇ ಶಾಸನದಲ್ಲಿ ದಣ್ಣನಾಯಕ ಅಚ್ಯುತಮಯ್ಯ ಮತ್ತು ವೀರಯ್ಯಗಳು ಯದುಗಿರಿ ಕೋಟೆಯ ರಕ್ಷಪಾಲಕರಾಗಿದ್ದಾಗ, ಕ್ರಮವಾಗಿ ಅವರ ಮಕ್ಕಳಾದ ನೀಲಯ್ಯ ಮತ್ತು ಚಾಮಯ್ಯಗಳು ತಮ್ಮ ಕೋಟೆಯ ಹೋಲಗಾವು ವೃತ್ತಿಯನ್ನು ಆಳುತ್ತಿದ್ದು, ತೊಂಡನೂರು ಅಗ್ರಹಾರದ ಗಡಿಯಲ್ಲಿದ್ದ ನಖರೇಶ್ವರ ದೇವರಿಗೆ ಭೂದಾನ ಮಾಡಿದರೆಂದಿದೆ.[5] ಹೀಗೆ ದಾನದತ್ತಿಗಳನ್ನು ಪಡೆದ ನಗರೇಶ್ವರ ದೇವಾಲಯವು ಹೊಯ್ಸಳರ ಅವನತಿಯೊಂದಿಗೆ ಕಣ್ಮರೆಯಾದದ್ದು ಗಮನಾರ್ಹ.

ಹೊಯ್ಸಳರ ಅವನತಿಯ ನಂತರ ತೊಣ್ಣೂರಿಗೆ ಶಾಹ ಸಾಲಾರ್ ಮಸೂದ್ ಘಾಜಿ ಎಂದ ಸೂಫಿ ಆಗಮಿಸಿದನು. ಇವನು ಇಂದ್ರಜಾಲದಲ್ಲಿ ಪ್ರವೀಣನಾಗಿದ್ದನೆಂದು ಸ್ಥಳೀಯ ಐತಿಹ್ಯವಿದೆ. ಈತನ ದರ್ಗ ಊರಿನ ನೈರುತ್ಯ ಭಾಗದಲ್ಲಿದೆ. ಅಲ್ಲಿರುವ ಶಾಸನ ಹಿಜಿರಿ ೭೬೦. ಅಂದರೆ ಕ್ರಿ.ಶ. ೧೩೫೮ರ ಕಾಲಕ್ಕೆ ಸೇರುತ್ತದೆ.[6] ಅಸಂಖ್ಯಾತ ಭಕ್ತರನ್ನು ಆಕರ್ಷಿಸುವ ದರ್ಗವು ಎತ್ತರದ ಪ್ರದೇಶದಲ್ಲಿದೆ. ಪೂರ್ವಾಭಿಮುಖವಾಗಿರುವ ದರ್ಗಕ್ಕೆ ಉತ್ತರ ಭಾಗದಲ್ಲಿ ಪ್ರವೇಶದ್ವಾರ ಮಂಟಪವಿದೆ. ಇದರ ಹೊರಭಾಗದಲ್ಲಿ ಮೂರು ಮಹಾಸತಿಕಲ್ಲುಗಳು ನಿಂತಿದ್ದವು. ಆದರೆ ಈಗ ಒಂದು ಮಾತ್ರ ಉಳಿದಿದೆ. ದರ್ಗದ ಹಿಂಬದಿಯಲ್ಲಿ ಕೆರೆಯುಂಟು. ಇಲ್ಲಿ ಗಮನ ಸೆಳೆದದ್ದು, ದ್ವಾರಮಂಟಪದಿಂದ ಕೂಡಿದ ಪ್ರಾಕಾರ ಸಾಲುಮಂಟಪ ಮತ್ತು ಹೊರಗಿರುವ ಮಾಸ್ತಿಕಲ್ಲುಗಳು. ಈ ಆವರಣದ ಮಧ್ಯದ ಸ್ಥಳ ಸಮತಟ್ಟಾಗಿದ್ದು, ಕಟ್ಟಡವೊಂದು ಅಲ್ಲಿದ್ದ ಸೂಚನೆಗಳು ದೊರೆಯುತ್ತವೆ. ಅಂದರೆ ಇಲ್ಲಿ ಪ್ರಾಚೀನ ದೇವಾಲಯವಿತ್ತೆಂಬ ಸಂಗತಿ ಧೃಡಪಡುತ್ತದೆ. ಇಲ್ಲಿದ್ದ ನಂದಿಶಿಲ್ಪವನ್ನು, ಸೂಫಿ ಸಂತನು ತನ್ನ ಎಡಗಾಲ ಹೆಬ್ಬೆರಳಿನಿಂದ ಸ್ಪರ್ಶಮಾಡಿದಾಗ ಅದು ಆಗ್ನೇಯಕ್ಕೆ ಎರಡು ಫರ್ಲಾಂಗ್ ದೂರದ ಹೊಲದಲ್ಲಿ ಹೋಗಿ ಬಿದ್ದಿತೆಂದು ಸ್ಥಳೀಯ ಐತಿಹ್ಯವಿದೆ.[7] ಈ ಹೊಲ ಪ್ರಸ್ತುತ ಪಟೇಲ್ ತಿಮ್ಮೇಗೌಡರ ಹೊಲವಾಗಿದ್ದು, ಈ ನಂದಿಶಿಲ್ಪಕ್ಕೆ ಪುಟ್ಟಗುಡಿಯೊಂದನ್ನು ನಿರ್ಮಿಸಿದ್ದಾರೆ. ಎರಡನೆಯದಾಗಿ ಪ್ರವೇಶದ್ವಾರದ ಹೊರಗಿರುವ ಮಹಾಸತಿ ಕಲ್ಲುಗಳು. ಸಾಮಾನ್ಯವಾಗಿ ದೇವಾಲಯಗಳ ಮುಂಭಾಗದಲ್ಲಿ ವೀರಗಲ್ಲು ಮತ್ತು ಮಹಾಸತಿಕಲ್ಲುಗಳನ್ನು ನೆಡುವುದು ಪ್ರಾಚೀನ ಕರ್ನಾಟಕ ಪರಂಪರೆಯಲ್ಲಿ ನಡೆದು ಬಂದ ಪದ್ಧತಿ. ಅದೇ ರೀತಿ ಇಲ್ಲಿರುವ ಮಹಾಸತಿಕಲ್ಲುಗಳು ದೇವಾಲಯದ ಅಸ್ತಿತ್ವವನ್ನು ಸ್ಪಷ್ಟಪಡಿಸುತ್ತವೆ. ಇನ್ನು ಮೂರನೆಯದಾಗಿ ಈ ಮೊದಲೇ ತಿಳಿಸಿದಂತೆ ಇದೇ ಊರಿನ ಲಕ್ಷ್ಮಿನಾರಾಯಣ ದೇವಾಲಯದ ಶಾಸನವು ತೊಂಡನೂರು ಅಗ್ರಹಾರದ ಗಡಿಯಲ್ಲಿನ ನಖರೇಶ್ವರ ದೇವಾಲಯವನ್ನು ಉಲ್ಲೇಖಿಸುತ್ತದೆ. ಪ್ರಸ್ತುತ ದರ್ಗದ ಉತ್ತರ ಭಾಗದಲ್ಲಿರುವ ಪ್ರವೇಶದ್ವಾರ ಮತ್ತು ಮಂಟಪಸಾಲು ಊರಿನ ನೈರುತ್ಯ ಭಾಗದಲ್ಲಿ ದಾರಿಯಲ್ಲಿವೆ. ಹೀಗೆ ಸ್ಥಳೀಯ ಐತಿಹ್ಯ, ಶಾಸನಾಧಾರ ಮತ್ತು ಲಭ್ಯವಿರುವ ವಾಸ್ತು ಮತ್ತು ಶಿಲ್ಪಾವಶೇಷಗಳಿಂದ ಇಲ್ಲಿ ಶಿವಾಲಯವಿತ್ತೆಂಬುದು ಸ್ಪಷ್ಟವಾಗುವುದಲ್ಲದೆ, ಅದು ನಖರೇಶ್ವರ ಗುಡಿ ಎಂಬುದು ವಿಧಿತವಾಗುವುದು. ಪ್ರವೇಶದ್ವಾರಮಂಟಪ ಮತ್ತು ಮಂಟಪಸಾಲು ಸರಳ ವಾಸ್ತು ರಚನೆಗಳಾಗಿದ್ದು, ನಖರೇಶ್ವರ ದೇವಾಲಯಕ್ಕೆ ಸಂಬಂಧಿಸಿದ ವಾಸ್ತು ಅವಶೇಷಗಳಾಗಿವೆ.

ಈ ದೇವಾಲಯವಿದ್ದ ಹಿಂಬದಿಯ ಎತ್ತರದ ಪ್ರದೇಶದಲ್ಲಿ ಸಾಲರ್ ಮಸೂದ್ ಘಾಜಿ ಸೂಫಿ ಸಂತನ ದರ್ಗವನ್ನು ನಿರ್ಮಿಸಲಾಗಿದೆ. ಅಂದರೆ ಈಗಿನ ದರ್ಗದ ಉತ್ತರಕ್ಕಿರುವ ಆವರಣದಲ್ಲಿ ನಖರೇಶ್ವರ ದೇವಾಲಯವಿತ್ತೆಂದು ಹೇಳಬಹುದು. ಹೊಯ್ಸಳರ ಅವನತಿಯ ನಂತರ ತೊಣ್ಣೂರು ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಹಿನ್ನೆಡೆಗೆ ಒಳಗಾಯಿತು. ಅಲ್ಲಿದ್ದ ವರ್ತಕ ಸಮುದಾಯಗಳು ಬೇರೆಡೆಗೆ ವಲಸೆ ಹೋದವು. ಪರಿಣಾಮವಾಗಿ ನಖರೇಶ್ವರ ದೇವಾಲಯ ಹಾಳುಬಿದ್ದಿತು. ಇಂತಹ ದೇವಾಲಯದ ಹಿಂಬದಿಯಲ್ಲಿ ಸೂಫಿ ಸಂತನ ದರ್ಗ ನಿರ್ಮಾಣಗೊಂಡಿತು. ಕಾಲಾಂತರದಲ್ಲಿ ನಖರೇಶ್ವರ ದೇವಾಲಯದ ಆವರಣವು ದರ್ಗ ವ್ಯಾಪ್ತಿಗೆ ಸೇರ್ಪಡೆಗೊಂಡಿತು. ಈಗ ಉಳಿದಿರುವ ಪ್ರಾಕಾರ ಸಾಲುಮಂಟಪದಿಂದ ಕೂಡಿದ ಮಹಾದ್ವಾರಮಂಟಪವು ನಖರೇಶ್ವರ ದೇವಾಲಯಕ್ಕೆ ಸಂಬಂಧಿಸಿದೆ. ಈ ವಾಸ್ತು ಸ್ವರೂಪವನ್ನು ಗಮನಿಸಿದರೆ ನಖರೇಶ್ವರ ದೇವಾಲಯವು ಸರಳ ರಚನೆಯ ದೇವಾಲಯವಾಗಿತ್ತೆಂದು ಗ್ರಹಿಸಬಹುದು(ಇತ್ತೀಚೆಗೆ ನವೀಕರಣಗೊಂಡಿದೆ).

ನಖರೇಶ್ವರ ದೇವಾಲಯದ ಅಸ್ತಿತ್ವ ಮತ್ತು ಅವನತಿಗಳಿಂದಾಗಿ ಕೆಲವು ಸಾಮಾನ್ಯ ಗ್ರಹಿಕೆಗಳನ್ನು ಹೊಂದಬಹುದಾಗಿದೆ. ಆರಂಭದಲ್ಲಿ ಗ್ರಾಮವಾಗಿದ್ದ ತೊಂಡನೂರು, ಅಗ್ರಹಾರವಾಗಿ ನಂತರ ಪಟ್ಟಣವಾಗಿ ಬೆಳವಣಿಗೆಯಾಗಿತ್ತು. ಆದರೂ ತೊಂಡನೂರು ಅಗ್ರಹಾರವು ಪಟ್ಟಣದಿಂದ ಪ್ರತ್ಯೇಕವಾಗಿತ್ತು. ತೊಂಡನೂರು ಪಟ್ಟಣ ಈಗಿರುವ ಊರಿನ ದಕ್ಷಿಣಕ್ಕೆ ನೆಲೆಗೊಂಡಿತ್ತು. ಹಳೆ ಊರು ಮತ್ತು ಈಗಿನ ಊರಿನ ನಡುವೆ ಹಾರುವರ ಕಟ್ಟೆ ಎಂಬ ಸಣ್ಣಕೆರೆ ಇತ್ತು. ಈ ಕೆರೆಯನ್ನು ಮುಚ್ಚಿ ಈಗ ಆಸ್ಪತ್ರೆ ನಿರ್ಮಿಸಿದ್ದಾರೆ. ಮೇಲೆ ಪ್ರಸ್ತಾಪಿಸಿದ ದರ್ಗದ ಹಿಂದಿರುವ ಕೆರೆಯ ನೀರು, ಪೂರ್ವಕ್ಕೆ ಹರಿದು ಕೆಳಗಿನ ಹಾರುವರ ಕಟ್ಟೆಯನ್ನು ಸೇರುತ್ತಿತ್ತು. ಈಗಿನ ತೊಣ್ಣೂರು, ದೇವಾಲಯಗಳನ್ನೊಳಗೊಂಡ ತೊಂಡನೂರು ಅಗ್ರಹಾರವಾಗಿದ್ದರೆ, ಹಾರುವರ ಕಟ್ಟೆಯ ದಕ್ಷಿಣ ಮತ್ತು ನೈರುತ್ಯ ಪ್ರದೇಶದಲ್ಲಿ ಪ್ರಾಚೀನ ತೊಂಡನೂರು ಊರಿತ್ತು. ಇದರಿಂದ ಹೊಯ್ಸಳರ ಕಾಲದ ತೊಂಡನೂರಲ್ಲಿ ಅಗ್ರಹಾರ ಮತ್ತು ಊರು ಪ್ರತ್ಯೇಕವಾಗಿದ್ದವು ಎಂದು ಗ್ರಹಿಸಬಹುದಾಗಿದೆ.

ನಖರೇಶ್ವರ ದೇವಾಲಯದಿಂದಾಗಿ, ತೊಂಡನೂರು ಪಟ್ಟಣದಲ್ಲಿ ವರ್ತಕ ಸಮುದಾಯ ದವರು ತಮ್ಮದೇ ದೇವಾಲಯವನ್ನು ಹೊಂದುವಷ್ಟರಮಟ್ಟಿಗೆ ಸಂಖ್ಯಾಬಲದಲ್ಲಿದ್ದರೆಂದು ತಿಳಿಯಬಹುದು. ಹೊಯ್ಸಳರ ಅವನತಿಯ ನಂತರ ಇಲ್ಲಿನ ವರ್ತಕ ಸಮುದಾಯದವರು ಸಹ ಬೇರೆಡೆಗೆ ವಲಸೆ ಹೋಗಲಾಗಿ ಮೇಲೆ ತಿಳಿಸಿದ ದೇವಾಲಯ ಹಾಳುಬಿದ್ದಂತೆ ಕಾಣುತ್ತದೆ. ನಖರೇಶ್ವರ ದೇವಾಲಯದ ತಪೋಧನ ಅಮೃತರಾಶಿಯ ಉಲ್ಲೇಖದಿಂದಾಗಿ, ದೇವಾಲಯವು ಸ್ಥಳೀಯ ಪರಂಪರೆಯದು ಎಂದು ಗ್ರಹಿಸಬಹುದು. ಏಕೆಂದರೆ ಇದೇ ಊರಿನಲ್ಲಿರುವ ಕೈಲಾಸೇಶ್ವರ ದೇವಾಲಯದ ಸ್ಥಾನಪತಿಗಳು ತಮಿಳು ಮೂಲದವರಾಗಿದ್ದರು. ಆ ದೇವಾಲಯದಲ್ಲಿರುವ ಶಾಸನಗಳೆಲ್ಲ ತಮಿಳಿನಲ್ಲಿವೆ. ಹೀಗೆ ತೊಣ್ಣೂರಿನ ಶ್ರೀವೈಷ್ಣವ ದೇವಾಲಯಗಳು ಮತ್ತು ಕೈಲಾಸೇಶ್ವರ ದೇವಾಲಯ ತಮಿಳು ಸಂಸ್ಕೃತಿಯ ಕೇಂದ್ರಗಳಾಗಿದ್ದವು. ಒಂದು ರೀತಿಯಲ್ಲಿ ತಮಿಳು ವಸಾಹತುವಿನಂತಿದ್ದ ತೊಂಡನೂರು ಅಗ್ರಹಾರದ ಜನರು, ಸ್ಥಳೀಯ ಮೂಲದ ನಖರೇಶ್ವರ ದೇವಾಲಯದ ಬಗೆಗೆ ಆಸಕ್ತಿಯನ್ನು ವಹಿಸಿದಂತೆ ಕಂಡುಬರುವುದಿಲ್ಲ. ಹೀಗಾಗಿ ನಖರೇಶ್ವರ ದೇವಾಲಯದ ಹಿಂಬದಿಯಲ್ಲಿ ಸೂಫಿ ಸಂತನ ದರ್ಗ ನಿರ್ಮಾಣಗೊಂಡಿತು. ಮೇಲಾಗಿ ಶ್ರೀವೈಷ್ಣವರೇ ಅಧಿಕವಾಗಿದ್ದ ಈ ಊರಿನಲ್ಲಿ, ಶೈವ ದೇವಾಲಯವೊಂದರ ಸಂರಕ್ಷಣೆ ಅವರಿಗೆ ಮುಖ್ಯವಾಗಿರಲಿಲ್ಲ. ತೊಂಡನೂರು ಮುಖ್ಯವಾಗಿ ಶ್ರೀವೈಷ್ಣವ ಪಂಥದ ಕೇಂದ್ರವಾಗಿತ್ತು.

ಇನ್ನು ತೊಣ್ಣೂರಿನಲ್ಲಿ ಸದ್ಯ ಉಳಿದು ಬಂದಿರುವ ಏಕೈಕ ಶಿವಾಲಯವೆಂದರೆ ಕೈಲಾಸೇಶ್ವರ, ದೇವಾಲಯವು ಭಗ್ನ ಸ್ಥಿತಿಯಲ್ಲಿದೆ. ಇಲ್ಲಿರುವ ತಮಿಳು ಗ್ರಂಥಲಿಪಿ ಶಾಸನಗಳು ಈ ದೇವಾಲಯದ ಬಗೆಗೆ ಮಾಹಿತಿ ನೀಡುತ್ತವೆ. ಅಂದರೆ ಅಲ್ಲಿನ ಸ್ಥಾನಿಕರ ಮತ್ತು ನಿರ್ವಹಣೆ ಕುರಿತು. ಈ ದೇವಾಲಯದ ಆವರಣದ ವಾಯವ್ಯ ಮೂಲೆಯಲ್ಲಿ ಸಂಪೂರ್ಣವಾಗಿ ಭಗ್ನಗೊಂಡಿರುವ ದೇವಿಯ ಗುಡಿಯುಂಟು. ಅಲ್ಲಿ ಈಗ ದೇವಿಯ ಪ್ರತಿಮೆ ಇಲ್ಲ. ಸ್ಥಳೀಯರು ತಿಳಿಸುವಂತೆ, ಶ್ರೀರಂಗಪಟ್ಟಣದ ಗಂಗಾಧರೇಶ್ವರ ದೇವಾಲಯದಲ್ಲಿರುವ ಪಾರ್ವತಿ ಶಿಲ್ಪವು ಇಲ್ಲಿಯದೆಂದು, ಬಹುದಿನಗಳ ಹಿಂದೆಯೇ ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡು ಹೋದರೆಂದು ತಿಳಿಸುತ್ತಾರೆ. ಹಾಗಾಗಿ ಕೈಲಾಸೇಶ್ವರ ದೇವಾಲಯದ ದೇವಿಶಿಲ್ಪವು ತೊಣ್ಣೂರಿನಿಂದ  ಕಣ್ಮರೆಯಾಗಿರುವುದು ಸುಸ್ಪಷ್ಟ.

ಊರಿನ ದರ್ಗದ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಮೂರು ಮಹಾಸತಿಕಲ್ಲುಗಳು ನೆಟ್ಟಿದ್ದವು. ಅವುಗಳಲ್ಲಿ ಈಗ ಒಂದು ಮಾತ್ರ ಉಳಿದಿದ್ದು, ಉಳಿದೆರಡು ಮಹಾ ಸತಿಕಲ್ಲುಗಳು ಇತ್ತೀಚೆಗೆ ಆವರಣ ನಿರ್ಮಿಸುವ ಭರಾಟೆಯಲ್ಲಿ ಕಣ್ಮರೆಯಾಗಿವೆ. ಇದಲ್ಲದೆ ತೊಣ್ಣೂರಿನ ಕೆರೆ ಏರಿಯ ಮೇಲೆ ಹೊಯ್ಸಳೇಶ್ವರ ದೇವಾಲಯವಿತ್ತೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹಿಂದೊಮ್ಮೆ ಕೆರೆ ಏರಿ ಒಡೆದಾಗ ಬಹುಶಃ ಈ ದೇವಾಲಯ ಹಾಳಾಗಿರಬಹುದೇ? ಹೀಗೆ ತೊಣ್ಣೂರಿನಲ್ಲಿ ಬಹುತೇಕ ಶಿಲ್ಪಾವಶೇಷಗಳು ಬೇರೆ ಬೇರೆ ಕಾರಣಗಳಿಂದ ಕಣ್ಮರೆಯಾಗಿವೆ. ಅದರಲ್ಲೂ ವೀರಗಲ್ಲುಗಳು ಹೊಲಗಳ ನಡುವೆ ಹಾಳಾಗಿ ಬಿದ್ದಿವೆ. ಇವುಗಳ ಸೂಕ್ತ ಸಂರಕ್ಷಣೆ ಯಾಗಬೇಕಿದೆ.

ಮುಖ್ಯವಾಗಿ ತೊಣ್ಣೂರಿನ ಪಶ್ಚಿಮಕ್ಕೆ ಬೆಟ್ಟಸಾಲಿನಲ್ಲಿನ ಹೊಲಗಳನ್ನು ಕೋಟಯ್ಯನ ಹೊಲ(ಕೋಟೆ ಹೊಲ)ಗಳೆಂದು ಕರೆಯಲಾಗುತ್ತದೆ. ಬಹುಶಃ ಇಲ್ಲಿ ಹೊಯ್ಸಳರ ಕಾಲಕ್ಕೆ ಕೋಟೆ ಇದ್ದು, ಅದು ನಂತರದ ಕಾಲದಲ್ಲಿ ಹಾಳಾಗಿರುವ ಸಾಧ್ಯತೆಯನ್ನು ಅಲ್ಲಗಳೆಯು ವಂತಿಲ್ಲ. ಈ ಹೊಲಗಳ ಮಣ್ಣು ಫಲವತ್ತಾಗಿದ್ದು, ಒಳ್ಳೆಯ ಬೆಳೆ ಬರುತ್ತದೆ. ಬೆಟ್ಟಸಾಲಿನಲ್ಲಿರುವ ಈ ಹೊಲಗಳಿಗೆ ಅಲ್ಪಸ್ವಲ್ಪ ಮಳೆಯಾದರೂ ಬೀಳುತ್ತದೆ. ಹೀಗೆ ಮಳೆಬಿದ್ದಾಗ ಇಲ್ಲಿ ಚಿನ್ನದ ನಾಣ್ಯಗಳು (ಬೇಳೆ) ಸಿಕ್ಕುತ್ತವೆ ಎನ್ನುತ್ತಾರೆ ಗ್ರಾಮಸ್ಥರು.

ಇನ್ನು ಈಗಿರುವ ಊರು ಮೊದಲಿಗೆ ಅಗ್ರಹಾರವಾಗಿತ್ತು. ಹಾಗಾದರೆ ಇತರ ಜನಸಾಮಾನ್ಯರು ನೆಲಸಿದ್ದ ನೆಲೆ ಯಾವುದು ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರವಾಗಿ ಆ ನೆಲೆ, ಊರಿನ ದಕ್ಷಿಣಕ್ಕೆ ಅಂದರೆ ಈಗ ಮುಚ್ಚಿರುವ ಹಾರುವರ ಕಟ್ಟೆಯ ದಕ್ಷಿಣ ಮತ್ತು ನೈರುತ್ಯಕ್ಕೆ ಇತ್ತೆಂಬುದು ಗಮನಾರ್ಹ. ಹಳೆಯ ಊರಿನ ಅವಶೇಷಗಳಾಗಿ ಊರ ಮುಂದೆ ನೆಡುತ್ತಿದ್ದ ಬಲಿದಾನ, ವೀರಗಲ್ಲು ಮತ್ತು ಮಹಾಸತಿಕಲ್ಲುಗಳು ಪಾಂಡವಪುರಕ್ಕೆ ಸಾಗುವ ರಸ್ತೆಯ ಬಲಬದಿಯಲ್ಲಿ ಪೂರ್ವಾಭಿಮುಖವಾಗಿ ಇಂದಿಗೂ ನಿಂತಿವೆ. ಈ ರಸ್ತೆಯಲ್ಲಿ ಮೊದಲಿಗೆ ಕಲ್ಲುಗಳ ಹಾಸಿತ್ತು. ಜನರು ಇದನ್ನು ಮೆಟ್ಟಾರೆ ಎನ್ನುತ್ತಿದ್ದರು(ಮೆಟ್ಟಾರೆ ಎಂದರೆ ಕಲ್ಲನ್ನು ಮೆಟ್ಟಿ ನಡೆಯುವುದೆಂದರ್ಥ). ಪ್ರಾಚೀನ ಪಟ್ಟಣಗಳ ಮುಖ್ಯ ರಸ್ತೆಯಲ್ಲಿ ಕಲ್ಲುಚಪ್ಪಡಿಗಳನ್ನು ಹಾಸುತ್ತಿದ್ದರು. ಇಂತಹ ರಸ್ತೆಗಳನ್ನು ಈಗಲೂ ಉಚ್ಚಂಗಿದುರ್ಗ, ಹಂಪೆ ಇತರೆಡೆಗಳಲ್ಲಿ ಕಾಣಬಹುದು.

ವಿವಿಧ ಉದ್ದಗಲಗಳ ಕಲ್ಲಿನ ಹಲಗೆಗಳನ್ನು ನೆಲಕ್ಕೆ ಹಾಸಲಾಗುತ್ತಿತ್ತು. ಇತ್ತೀಚಿನ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಗಳ ಪ್ರಕ್ರಿಯೆಯಿಂದಾಗಿ ಈ ಪ್ರಾಚೀನ ರಸ್ತೆಗಳು ಕಣ್ಮರೆಯಾಗುತ್ತಿವೆ. ಇದೇ ರೀತಿ ತೊಣ್ಣೂರಿನ ಮೆಟ್ಟಾರೆ ಎಂಬ ಕಲ್ಲುಹಾಸಿನ ಪ್ರಾಚೀನ ರಸ್ತೆ ಈಗ ಕಣ್ಮರೆಯಾಗಿದೆ. ಊರಲ್ಲಿ ಚಿನಕುರಳಿಗೆ ಸಾಗುವ ರಸ್ತೆಯ ಎಡಬದಿಯ ಹೊಲದಲ್ಲಿ ಬಸದಿ ಎಂದು ಗುರುತಿಸುವ ಹಾಳು ಬಿದ್ದ ಗುಡಿಯಿದ್ದು ಗಿಡಗಂಟಿಗಳಿಂದ ಆವೃತ್ತವಾಗಿದೆ (ನೋಡಿ: ಚಿತ್ರ‑೫೪) ಇಲ್ಲಿ ಯಾವುದೇ ಶಿಲ್ಪಾವಶೇಷಗಳು ಕಂಡುಬರುವುದಿಲ್ಲ. ಗಿಡ್ಡನೆಯ ಈ ಗುಡಿಯನ್ನು ಒರಟಾದ ಕಲ್ಲುಚಪ್ಪಡಿಗಳಿಂದ ನಿರ್ಮಿಸಿದ್ದಂತೆ ಕಂಡುಬರುತ್ತದೆ. ಸದ್ಯ ಈ ಹೊಲ ವಕ್ಫ್ ಮಂಡಳಿಗೆ ಸೇರಿದೆ. ಇದರ ಪಕ್ಕದಲ್ಲೇ ಬಸದಿ ಕೊಳವಿತ್ತೆಂದು, ಅದನ್ನು ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮುಚ್ಚಿರುವುದಾಗಿ ಗ್ರಾಮಸ್ಥರು ತಿಳಿಸುತ್ತಾರೆ. ಇಲ್ಲಿನ ನಂಬಿನಾರಾಯಣ ದೇವಾಲಯದ ಸಭಾಮಂಟಪದಲ್ಲಿ ಸಿಂಹಲಾಂಛನವಿರುವ ಪಾಣಿಪೀಠವಿದೆ(ನೋಡಿ: ಚಿತ್ರ‑೫೫). ಇದು ವಾಸ್ತವವಾಗಿ ಜೈನಬಸದಿಗೆ ಸಂಬಂಧಿಸಿದ್ದಾಗಿದೆ. ಈ ಊರಿನಲ್ಲಿದ್ದ ಜೈನಬಸದಿ ಬಹುಶಃ ಹಾಳಾದ ನಂತರ ಅದನ್ನು ತಂದು ಇಲ್ಲಿಟ್ಟಿರಬಹುದು. ಈ ಪಾಣಿಪೀಠದ ಮೇಲೆ ಶ್ರೀವೈಷ್ಣವ ಲಾಂಛನದ ಫಲಕವನ್ನಿಟ್ಟಿರುವುದು ಗಮನಾರ್ಹ. ಇದು ಜೈನಧರ್ಮದ ಮೇಲಿನ ಗೆಲುವು ಎಂಬಂತಿದೆ. ಅಂದರೆ ತೊಣ್ಣೂರಿನಲ್ಲಿ ರಾಮಾನುಜಾಚಾರ್ಯರು ಜೈನರನ್ನು ವಾದದಲ್ಲಿ ಸೋಲಿಸಿ ಶ್ರೀವೈಷ್ಣವ ಧರ್ಮವನ್ನು ನೆಲೆಗೊಳಿಸಿದರೆಂಬ ಕಥೆ ಇದೆ. ಹಾಗಾಗಿ ಈ ಫಲಕವು ಮೇಲಿನ ಕಥೆಯನ್ನು ಸಮರ್ಥಿಸುವಂತಿದೆ. ಹೀಗೆ ತೊಣ್ಣೂರಿನ ಬಹುತೇಕ ಪುರಾತತ್ವ ಸ್ಮಾರಕಗಳು ಕಣ್ಮರೆಯಾಗಿದ್ದರೂ ಅವುಗಳ ಅಸ್ತಿತ್ವದ ಬಗೆಗೆ ಸೂಚನೆ ನೀಡುವ ಅವಶೇಷಗಳನ್ನು ಗುರುತಿಸಬಹುದಾಗಿದೆ.


[1] ಎಫಿಗ್ರಾಫಿಯಾ ಕರ್ನಾಟಕ, ಸಂಪುಟ‑೬, ತೊಣ್ಣೂರಿನ ಶಾಸನಗಳು

[2] ಹಯವದನರಾವ್ ಸಿ., ಮೈಸೂರು ಗ್ಯಾಸೆಟಿಯರ್, ಸಂಪುಟ ೫, ಪುಟ ೮೬೧

[3] ಎಫಿಗ್ರಾಫಿಯಾ ಕರ್ನಾಟಕ, ಸಂಪುಟ‑೬, ಪಾಂಡವಪುರ ೭೪

೧೯. ತೊಂಡನೂರಗ್ರಹಾರದ ಆ ಗಡಿ

೨೦. ಯ ನಖರೇಶ್ವರ ದೇವರ

[4] ಅದೇ.

[5] ಅದೇ.

[6] ಹಯವದನರಾವ್ ಸಿ., ಪೂರ್ವೋಕ್ತ

[7] ರಹಮತ್ ತರೀಕೆರೆ, ೧೯೯೮: ‘ಕರ್ನಾಟಕ ಸೂಫಿಗಳು’, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪುಟ ೧೨೪(ಈ ಪುಸ್ತಕದಲ್ಲಿ, ಊರೊಳಗಿದ್ದ ನಂದಿಬಸವ ಎಂದು ದಾಖಲಿಸಲಾಗಿದೆ.)