ಕಾಡಿಗೂ ಹತ್ತಿರದ ನಮ್ಮ ಕೃಷಿ ಭೂಮಿಗೂ  ಜೀವದಾರಿ (Physical Corridar) ಇದೆ. ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಸೇರಿದಂತೆ ಕಾಡಿನ ಪಕ್ಕ ಕೃಷಿಯಿರುವ ಎಲ್ಲೆಡೆ ಇದನ್ನು ಗುರುತಿಸಬಹುದು. ಹಗಲು ರಾತ್ರಿ ಇಲ್ಲಿ ಸಂಚರಿಸುವ ಹಾವು, ಕಪ್ಪೆ, ಪಕ್ಷಿ, ಪ್ರಾಣಿ, ಜೇನುಗಳಿವೆ.  ಪರಾಗಸ್ಪರ್ಶ, ಫಲವತ್ತಾದ ಹಿಕ್ಕೆ ವಿಸರ್ಜನೆ,  ಬೀಜ ಬಿತ್ತನೆ ಕಾರ್ಯಕ್ಕೆ ಜೀವ ಲೋಕದ ನೆರವಿದೆ. ನಮ್ಮ ನೆಲದ ಕಾಡಿನ (Indigenous forests)  ಆವಾಸಿಗಳಾದ ಇವು ಇಡೀ ಪರಿಸರದ ಅಮೂಲ್ಯ ಅವಿ ಭಾಜ್ಯ ಅಂಶಗಳು. ನಮ್ಮ ತೋಟದ ಮಾದರಿ ಸ್ಥಳೀಯ ಕಾಡಿಗೂ ಸಾಮ್ಯತೆಯ ಸಂಬಂಧವಿರುವದರಿಂದ ವನ್ಯ ಒಡನಾಟ ಸಾಧ್ಯವಾಗಿದೆ.  

ಮಲೆನಾಡಿನಲ್ಲಿ ಸಾಂಪ್ರದಾಯಿಕ ಅಡಿಕೆ ತೋಟಗಳು ಕಣಿವೆಯಲ್ಲಿವೆ. ಇಲ್ಲಿ ತೋಟದಲ್ಲಿನ ಸಸ್ಯಗಳ  ಪಟ್ಟಿ ಮಾಡಿದರೆ ಕೃಷಿ ವೈವಿಧ್ಯತೆ ಬೆರಗು ಮೂಡಿಸುವಂತಿದೆ.

ಬೆಳೆ ವಿಶೇಷ ಗಮನಿಸಿದರೆ ಕೃಷಿ ಅಡವಿ ಜ್ಞಾನದ ಮೂಲವಾಗಿರುವದು ಸ್ಪಷ್ಟವಾಗುತ್ತದೆ. ಕಾಡಿನ ಎತ್ತರದ ಮರ, ಬಳ್ಳಿ, ಪೊದೆಗಳ ಸ್ವರೂಪವನ್ನು ಬೆಳೆ ರೂಪದಲ್ಲಿಯೂ ಕಾಣಬಹುದು. ಅಡಿಕೆ, ಬಾಳೆ, ಕಾಳುಮೆಣಸು, ಏಲಕ್ಕಿ, ಅರಿಶಿನ, ಜಾಯಿಕಾಯಿ, ಅಮಟೆ, ಬೇರು ಹಲಸು, ಹಲಸು, ಲಿಂಬೆ, ಸೂಜಿ ಮೆಣಸು, ಸುವರ್ಣಗಡ್ಡೆ, ಮರ ಗೆಣಸು, ಲವಂಗಗಳನ್ನು ಇಲ್ಲಿನ ತೋಟಗಳಲ್ಲಿ ಕಾಣಬಹುದು. ಮಳೆಗಾಲದಲ್ಲಿ ಸವತೆ, ಗೆಣಸಿನ ಬಳ್ಳಿಗಳನ್ನು ತೋಟದ ನೆಲಕ್ಕೆ ಹಬ್ಬಿಸುವ ವಿಧಾನವಿದೆ. ಇವು ಮುಚ್ಚಿಗೆ ಬೆಳೆಯಾಗಿ ಕಾರ್ಯನಿರ್ವ”ಸುತ್ತವೆ. ತೆಂಗಿನ ತೋಟದಲ್ಲಿ ಕಾಫಿ, ಅನಾನಸ್, ಕಾಳುಮೆಣಸು ಕಾಣಬಹುದು.  ಅಬ್ಬರದ ಮಳೆ ಸುರಿಯುತ್ತದೆ. ಬಹು ಅಂತಸ್ಸಿನಲ್ಲಿ ಸಸ್ಯದಟ್ಟನೆ ಇದ್ದಾಗ ಭೂಸವಕಳಿ ತಡೆಯುವದು ಸುಲಭವಾಗುತ್ತದೆ. ಕೃಷಿ ಮಣ್ಣಿನ ಸಂರಕ್ಷಣೆಗೆ ಅಡವಿ ಸಸ್ಯಗಳ ಸ್ವರೂಪ ಗಮನಿಸಿಯೇ ಬೆಳೆ ಮಾದರಿ ರೂಪುಗೊಂಡಿದೆ.

ನಮ್ಮ ಕೃಷಿ ಬೆಳೆಯಲ್ಲಿ ಹಾನಿಕಾರಕ ಕೀಟ ನಿಯಂತ್ರಣಕ್ಕೆ ಪಕ್ಷಿಗಳ ಕೊಡುಗೆ ದೊಡ್ಡದು. ಪಶ್ಚಿಮ ಘಟ್ಟದ ಮೈನಾ ಹಕ್ಕಿಗಳು ಸಂತಾನಾಭಿವೃದ್ಧಿ ಹಾಗೂ ಮರಿಗಳ ಪಾಲನೆ ಕಾಲಕ್ಕೆ  ದಿನವೊಂದಕ್ಕೆ ೨೦೦-೮೦೦ ಕೀಟ ತಿನ್ನುತ್ತವೆ! ಕೊಲರ್ಯಾಡೋ  ಎಂಬ ಒಂದು ಜೊತೆ  ದುಂಬಿ ವರ್ಷಕ್ಕೆ ಆರು ಕೋಟಿ ಮರಿ ಉತ್ಪಾದಿಸುತ್ತದೆ. ವರ್ಷದಲ್ಲಿ ತನ್ನ ಸಂಕುಲದ ೧೩ ತಲೆಮಾರು ಬೆಳೆಸುತ್ತದೆ. ಕೆಲವೇ ಕೆಲವು ಗಂಟೆಗಳಲ್ಲಿ ನೂರಾರು ಎಕರೆ ಬೆಳೆಯನ್ನು ತಿನ್ನಬಹುದಾದ ಮಿಡತೆಗಳ ಬಗೆಗೆ ಕೇಳಿರಬಹುದು. ಇಂದು ಇಡೀ ಪಕ್ಷಿ ಸಂಕುಲಗಳಲ್ಲಿ ಶೇಕಡಾ ೮೫ರಷ್ಟು ಕೀಟ ಭಕ್ಷಕಗಳಾಗಿ ಕೀಟ ನಿಯಂತ್ರಣದಲ್ಲಿ ಮಹತ್ವದ ಪಾತ್ರವಹಿಸಿವೆ.  ಕಾಡುಕೋಳಿ ಗೆದ್ದಲು ನಿಯಂತ್ರಣ ಮಾಡುತ್ತದೆ. ನೊಣ ಹಿಡುಕ, ಬುಶ್‌ಚಾಟ್, ಚಂದ್ರ ಮುಕುಟ, ಕಾಜಾಣ, ಕಳಿಂಗ, ಮರಕುಟಿಗ ಹೀಗೆ ನಿತ್ಯ ನಾವು ನೋಡುವ ಪಕ್ಷಿಗಳು ಕೀಟ ನಿಯಂತ್ರಣದಲ್ಲಿ ತೊಡಗಿವೆ. ಒಂದು ಗುಬ್ಬಚ್ಚಿ  ದಿನಕ್ಕೆ ೨೨೦-೨೬೦ ಬಾರಿ ತನ್ನ ಗೂಡಿಂದ ಹೊರಗಡೆ ಹಾರುತ್ತದೆ, ಮರಳಿ ಬರುವಾಗ ತನ್ನ ಮರಿಗೆಂದು  ತರುವ ಆಹಾರಗಳಲ್ಲಿ ಕಂಬಳಿ ಹುಳುಗಳೂ ಇರುತ್ತವೆ! ನಮಗಿಂತ ೨೦ ಪಟ್ಟು ಸೂಕ್ಷ್ಮವಾಗಿ ಪರಿಸರವನ್ನು ನೋಡುವ ಶಕ್ತಿ ಪುಟ್ಟ ಪಕ್ಷಿಗಳಿಗಿದೆ. ಹೀಗಾಗಿ ನಮ್ಮ ಹೊಲದ ಮೂಲೆಯಲ್ಲಿ ಕೀಟಗಳ ಸಂಖ್ಯೆಯನ್ನು ದೂರದಿಂದಲೇ ಗುರುತಿಸಿ ತಮ್ಮ ಆಹಾರ ಸಂಪಾದಿಸುತ್ತವೆ. ನಮ್ಮ ಕೃಷಿ ಬೆಳೆ ನಮಗೆ ಉಳಿಸುತ್ತವೆ.

ಪಕ್ಷಿಗಳ ಮಲ ಒಳ್ಳೆಯ ಗೊಬ್ಬರ. ಇದರಲ್ಲಿ ಯೂರಿಯಾ, ರಂಜಕ ಅಧಿಕ ಪ್ರಮಾಣದಲ್ಲಿವೆ. ಮೀನು ತಿನ್ನುವ ಮಿಂಚುಳ್ಳಿ, ಬೆಳ್ಳಕ್ಕಿ, ಕೊಕ್ಕರೆ, ಹೆಜ್ಜಾರ್ಲೆಗಳ  ಹಿಕ್ಕೆಯಂತೂ ಅಧಿಕ ಫಲವತ್ತಾದ ಗೊಬ್ಬರ. ಮಾಂಸಾಹಾರಿ ಪಕ್ಷಿಗಳು ಇಲಿಗಳ ನಿಯಂತ್ರಣಕ್ಕೆ  ಸಹಾಯಕವಾಗಿವೆ. ಒಂದು ಜೊತೆ ಇಲಿಗಳು ವರ್ಷದಲ್ಲಿ ೮೮೦ ಇಲಿಗಳಾಗಿ ಬೆಳೆಯಬಲ್ಲ ತಾಕತ್ತು ಪಡೆದಿವೆ. ಗೂಬೆ, ಕೇರೆ ಹಾವು, ಬೆಕ್ಕುಗಳು ಇವನ್ನು ನಿಯಂತ್ರಿಸುವ ಕೆಲಸ ಮಾಡುತ್ತಿವೆ. ಅಡಿಕೆ ತೋಟದ ಪಕ್ಕ ಒಂದಿಷ್ಟು ಮರ ಉಳಿಸುವ ಕಾರಣಕ್ಕೆ ನಮಗೂ ಅನುಕೂಲವಾಗಿದೆ, ವನ್ಯಲೋಕಕ್ಕೂ ನೆರವಾಗಿದೆ.

ನಮ್ಮ ಭೂಮಿಯಲ್ಲಿ ನಿಂತು ಸುತ್ತಲಿನ ಕಾಡು ನೋಡಬೇಕು. ಅಲ್ಲಿರುವ ನೈಸರ್ಗಿಕ ಮರ, ಗಿಡ, ಬಳ್ಳಿ, ಪೊದೆ, ಹುಲ್ಲುಗಳು ನೆಲದ ಪಾಠ ಹೇಳುತ್ತವೆ. ಸದಾ ಪೈಪೋಟಿಯ ನಿಸರ್ಗ ರಂಗದಲ್ಲಿ ಒಂದಿಷ್ಟು ಹೆಮ್ಮರ, ಒಂದಿಷ್ಟು ಕೆಳ ಹಂತದ ಸಸಿಗಳು, ಇನ್ನೊಂದಿಷ್ಟು ಬಳ್ಳಿಗಳು ಬೆಳೆಯುವದನ್ನು ಗಮನಿಸಬಹುದು. ಮಾನವ ಹಸ್ತಕ್ಷೇಪ ಕಡಿಮೆ ಇರುವ ನೆಲೆಯಲ್ಲಿ ಕಾಡು ಎಲ್ಲ ಹಂತದ ಸಸ್ಯಗಳಿಂದ ಸಮೃದ್ಧವಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಮಣ್ಣಿನ ಫಲವತ್ತತೆ  ಹೆಚ್ಚುತ್ತ  ಅಂತರ್ಜಲ ಸುಧಾರಣೆಯಾಗುತ್ತದೆ. ಕೃಷಿ ವಿಸ್ತರಣೆಯ ಉತ್ಸಾಹದಲ್ಲಿ ತೋಟದಂಚಿನ ಹಸುರು ನಾಶ ಮಾಡಿದರೆ ಗುಡ್ಡ ಕಡಿದು ಮೈಮೇಲೆ ಎಳೆದುಕೊಂಡಂತಾಗುತ್ತದೆ. ಕೃಷಿ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

ರಾಜ್ಯ ಅರಣ್ಯ ಇಲಾಖೆ ದಶಕದ ಹಿಂದೆ ಕೃಷಿ ಅರಣ್ಯ ಪದ್ಧತಿ ಕುರಿತು  ಒಂದು ಸಮೀಕ್ಷೆ  ನಡೆಸಿತ್ತು. ೧೯ ಜಿಲ್ಲೆಗಳ ಆಯ್ದ ೨೫ ತಾಲೂಕಿನ ೫೩ ಹಳ್ಳಿಯ ೨೬೫೦ ಕುಟುಂಬಗಳಲ್ಲಿ  ಮರ ಆಧಾರಿತ ಕೃಷಿ ಕುರಿತು ವಿವರ ಸಂಗ್ರಹಿಸಿತು. ರೈತರು ಹೊಲಗಳಲ್ಲಿ ಹಿಂದಿನಿಂದ ಯಾವ ಜಾತಿ ಮರಗಳನ್ನು ಬೆಳೆಯುತ್ತಿದ್ದಾರೆ? ಈಗ ಯಾವ ಜಾತಿ ಮರ ಬೆಳೆಸಲು ಇಚ್ಚಿಸಿದ್ದಾರೆ? ರೈತರು ಕೃಷಿ ಅರಣ್ಯ ಪದ್ದತಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಇರುವ ತೊಡಕುಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಯಿತು. ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಡೆದ ಈ ಅಧ್ಯಯನ ನಮ್ಮ  ಕೃಷಿ ಅರಣ್ಯದ  ಕತೆ ಹೇಳುತ್ತವೆ. ಸಾಕಷ್ಟು ಭೂಮಿ ಇಲ್ಲ, ಆದಾಯ ದೊರಕಲು ಹೆಚ್ಚು ವರ್ಷ ಕಾಯಬೇಕು, ಅಕ್ಕಪಕ್ಕದ ರೈತರಿಂದ ತೊಂದರೆ, ಕಳ್ಳತನದ ಭಯ, ನೀರಿನ ಸಮಸ್ಯೆ, ಮುಖ್ಯ ಫೈರಿನ ಇಳುವರಿ ಕಡಿಮೆಯಾಗುತ್ತದೆ, ಮರ ಬೆಳೆಸುವ ಕುರಿತು ತಿಳುವಳಿಕೆ ಇಲ್ಲ ಹೀಗೆ ಕಾರಣಗಳು ದೊರೆತವು. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ದೊಡ್ಡ ಸಮಸ್ಯೆಯಾಗಿರುವದು ಇನ್ನೊಂದು ಪ್ರಮುಖ ಸಮಸ್ಯೆ. ಈಗಿರುವ ಮರಗಳ ಮಾಹಿತಿ ಗಮನಿಸಿದಾಗ ಸ್ವಾರಸ್ಯಕರ ಸಂಗತಿ ಹೊರಬಿತ್ತು.  ಬೇವು  ಒಟ್ಟೂ ಕೃಷಿ ಅರಣ್ಯದ  ಶೇಕಡಾ ೧೬ ಭಾಗದಲ್ಲಿತ್ತು. ಅದರಂತೆ ತೆಂಗು ಶೇ. ೧೫, ಮಾವು ಶೇ. ೧೧, ಹುಣಸೆ ಶೇ. ೧೦, ಕರಿಜಾಲಿ ಶೇ. ೪.೫, ಹಲಸಿನ ಮರಗಳಿಗೆ ಶೇಕಡಾ ೪ ಪ್ರದೇಶಗಳಲ್ಲಿ ನೆಲೆ ನೀಡಲಾಗಿತ್ತು. ಮಲೆನಾಡಿನಲ್ಲಿ ತೆಂಗು, ಮಾವು, ಅಡಿಕೆ, ಹಲಸು, ತೇಗ, ಗೋಡಂಬಿ ಬೆಳೆಯುತ್ತಿದ್ದರು. ಮೈಸೂರು ಸೀಮೆಗಳಲ್ಲಿ ತೆಂಗು, ಮಾವು, ನೀಲಗಿರಿ, ಹೊಂಗೆ, ಆಲದ ಮರ ಬೆಳೆಸುತ್ತಾರೆ.  ಉತ್ತರ ಕರ್ನಾಟಕ ಪ್ರದೇಶದಲ್ಲಿ ಬೇವು, ಮಾವು, ಕರಿಜಾಲಿ, ನೀಲಗಿರಿ, ಬಳ್ಳಾರಿ ಜಾಲಿ, ಬಿದಿರು ಆಸಕ್ತಿ ಕಂಡುಬಂದಿತು.

ರೈತರು ಇತ್ತೀಚಿನ ವರ್ಷಗಳಲ್ಲಿ ಮೇವು, ಗೊಬ್ಬರ ನೀಡುವ ಮರಗಳಿಗಿಂತ ವಾಣಿಜ್ಯ ದೃಷ್ಟಿಯಿಂದ ಮಹತ್ವವಾದ ತೇಗ, ನೀಲಗಿರಿ, ಅಕೇಸಿಯಾ, ಸರ್ವೆ, ಸಿಲ್ವರ್‌ಓಕ್‌ದಂತಹ ಮರ ಬೆಳೆಸಲು ಇಷ್ಟಪಡುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯ ಜೀವ ಪರಿಸರಕ್ಕೆ ಸಂಬಂಧವಿರುವ ನೆಲದ ಸಸ್ಯ ಪೋಷಣೆಗೆ ನಾವು  ಲಕ್ಷ್ಯವಹಿಸಬೇಕು.