ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
ಅಡಿಕೆ ಕದ್ದರೂ ಕಳ್ಳ; ಆನೆ ಕದ್ದರೂ ಕಳ್ಳ
ಅಕಾಲಿಕ ಮಳೆಯಿಂದ, ಮತಿಹೀನ ಮಕ್ಕಳಿಂದ ಸುಖವಿಲ್ಲ.
ಆದರೆ ಒಂದು ಮರ; ಹೋದರೆ ಒಂದು ಬೀಜ
ಆಡು ಮುಟ್ಟದ ಗಿಡವಿಲ್ಲ; ಗಾದೆ ಆಡದ ಜನರಿಲ್ಲ.
ಅಡಿಕೆಗೆ ಮಾಡಿದ ಸಾಲ; ಬಾಳೆ ಬೆಳೆದು ತೀರಿಸಿದ.
ಬಾಳೆ ಬೆಳೆದರೆ; ಬಾಳು ಬಂಗಾರ
ಊಟ ಹಾಕಿದ ಮನೆ ಹಾಳಾಗದು; ಗೊಬ್ಬರ ಹಾಕಿದ ತೋಟ ಹಾಳಾಗದು.
ಉತ್ತಮ ಬೀಜಕ್ಕೆ ಮೊಳಕೆ ನೋಡು; ಉತ್ತಮ ಬೆಳೆಗೆ ಕಳೆ ಕೀಳು.
ಉಳುಮೆ ಮಾಡದೆ ಯಾತ್ರೆ ಮಾಡಿದ; ಬೆಳೆ ಸಿಗದೆ (ಭಿಕ್ಷಾ) ಪಾತ್ರೆ ಹಿಡಿದ.
ಉಳುವವನೇ ಹೊಲದೊಡೆಯ.
ಉಳುವವನು ಪ್ರಪಂಚದ ಗಾಲಿಯ ಕೀಲು
ಅಗೆಯುವುದೊಂದೇ ಬೇಸಾಯವಲ್ಲ; ಉಪವಾಸವೊಂದೇ ಭಕ್ತಿಯಲ್ಲ.
ಮಣ್ಣೇ ಮರಕ್ಕೆ ಗುಣ ನೀಡುತ್ತದೆ.
ಎತ್ತನ್ನು ನಂಬಿ ಬಿತ್ತಬೇಡ; ಮಳೆ ನಂಬಿ ಬೆಳೆಯಬೇಡ.
ದೂರದ ತೋಟದ ಬೆಳೆ; ಕಂಡವರ ಪಾಲು, ಕಳ್ಳರ ಪಾಲು
ಬೆಂಕಿ ಬಿದ್ದರೆ ಒಣಗಿದ್ದರ ಜೊತೆ ಹಸಿಯೂ ಸುಟ್ಟುಹೋದೀತು.
ಎರಡು ಕಡೆ ತೋಟ ಬೇಡ; ಇಬ್ಬರು ಹೆಂಡಿರ ಸುಖ ಬೇಡ.
ಒಂದು ಅಗೆತ; ಹತ್ತು ಉಳುಮೆಗೆ ಸಮ.
ಒಂದು ಕುರುವಾಯಿಗೆ ನೂರು ತೆಂಗು ಬಲಿ.
ಸಿಡಿಲಿನಲ್ಲಿ ತೋಟಕ್ಕೆ ಅಡಿ ಇಡಬೇಡ.
ಒಣಭೂಮಿಗೆ ಹಟ್ಟಿಗೊಬ್ಬರ; ತೇವದ ಭೂಮಿಗೆ ಹಸುರೆಲೆ ಗೊಬ್ಬರ
ಒಣಭೂಮಿಗೆ ತೇವಾಂಶ ಬೇಕು; ಜವಳುಭೂಮಿಗೆ ಉಷ್ಣಾಂಶ ಬೇಕು.
ಕಳೆ ಬೆಳೆದಿದ್ದನ್ನು ನೋಡಿ ಫಸಲು ತಿಳಿ.
ಮಳೆ ಬಿದ್ದಷ್ಟೂ ಚೆನ್ನ; ಮಗ ಉಂಡಷ್ಟೂ ಚೆನ್ನ.
ಕಾಡೆಲ್ಲಾ ಹುಡುಕಿ ಸೌದೆ ಇಲ್ಲವೆಂದನಂತೆ.
ಬೆಳಗ್ಗೆ ಆನೆ ಕಟ್ಟಿದರೂ ಜಗ್ಗದು [ಒಣಬಾಳೆಪಟ್ಟಿ]; ಸಂಜೆ ಇರುವೆ ಕಟ್ಟಲೂಬಾರದು [ಒದ್ದೆ ಬಾಳೆಪಟ್ಟಿ]
ಕೃತ್ತಿಕೆ ಮಳೆಯು ಕಿರುಬನ ಹಿಡಿತದಂತೆ
ಕೃತಿಯಿಲ್ಲದ ಮಾತು ಕಳೆ ಬೆಳೆದ ತೋಟದಂತೆ
ಬೆಳೆ ಕೊಯ್ದರೆ ಉಂಟು; ಸಾಲ ಕೇಳಿದರೆ ಉಂಟು.
ಹುಲ್ಲೇ ಹಾಸಿಗೆ; ಬದುವೇ ದಿಂಬು.
ಗುಣ ಇಲ್ಲದ ಮನುಷ್ಯ ರುಚಿ ಇಲ್ಲದ ಹಣ್ಣಿನಂತೆ
ಸೋಣೆಯಲ್ಲಿ ಬಾಳೆ ಚೆನ್ನ; ಆಟಿಯಲ್ಲಿ ಅಡಿಕೆ ಚೆನ್ನ
ತೆಂಗು ತೇಲಿಸಿ ನೆಡು; ಅಡಿಕೆ ಆಳದಲ್ಲಿ ನೆಡು.
ಬಡವನೇ ಬಾಳೆ ನೆಡು; ಬಾಳೆಯನ್ನು ಆಳದಲ್ಲಿ ನೆಡು
ದೊಡ್ಡವರ ಬಹುಮಾನಕ್ಕಿಂತ ಭೂಮಿಯ ಕಾಣಿಕೆಯೇ ಮೇಲು.
ಬಡವನು ಉಳುಮೆಯಲ್ಲಿ, ಶ್ರೀಮಂತನು ಗೊಬ್ಬರದಲ್ಲಿ ನಂಬಿಕೆಯಿಡುತ್ತಾನೆ.
ಬಾವಿ ನೀರು ಶುದ್ಧವಾಗಿದ್ದರೆ ಬೆಳೆಯೆಲ್ಲಾ ಶುದ್ಧ.
ಬೆಳೆಯುವ ಗುಣ ಮೊಳಕೆಯಲ್ಲಿ ನೋಡು.
ಬಿತ್ತದೆ ಬೆಳೆಯಾಗದು. ಉಡದೇ ಕೊಳೆಯಾಗದು.
ಬಾವಿ ತೋಡಿದರೆ ನೀರು; ಪ್ರಯತ್ನಪಟ್ಟರೆ ಫಲ
ಬಿತ್ತನೆಯ ಕಾಲದಲ್ಲಿ ವಿರಾಮವಿಲ್ಲ; ಮರಣದ ನಂತರ ಭಯವಿಲ್ಲ.
ಬೀಜದಂತೆ ಬೆಳೆ; ನೆಲದಂತೆ ಗುಣ
ರೈತ ಬಡವನಾದರೆ, ಭೂಮಿ ಬಡವೆಯೇ?
ಮಳೆಯಿಲ್ಲದೆ ಬೆಳೆಯಿಲ್ಲ, ನೀರಿಲ್ಲದೆ ಹೊಳೆಯಿಲ್ಲ.
ಬೀಜದ ಆಯ್ಕೆ ಬಲ್ಲವನು, ಬೆಳೆಯ ಗುಣವನ್ನೂ ತಿಳಿದಿರುತ್ತಾನೆ.
ಬೀಜವಿದ್ದರೆ ಬೇಸಾಯ, ನೆಲವಿದ್ದರೆ ಬೆಳೆ.
ಮಳೆಯಿಲ್ಲದ ಬೆಳೆ, ತಾಯಿ ಇಲ್ಲದ ಮಗನಂತೆ.
ಮಳೆಗಾಲದ ಬಿಸಿಲನ್ನೂ, ತೋಟದ ಕಳೆಯನ್ನೂ ನಂಬಬೇಡ.
ಹುಣಸೆಮರ ಮುಪ್ಪಾದರೂ ಹುಳಿ ಮುಪ್ಪೇ?
ಮರಳುಮಣ್ಣಿಗೆ ಬಾಯಾರಿಕೆ ಹೆಚ್ಚು.
ಗೊರಚುಮಣ್ಣಿಗೆ ಹಸಿವೆ ಹೆಚ್ಚು.
ಮುಂಗಾರುಮಳೆಗೆ ನೆಲವೆಲ್ಲಾ ಸಾರ (ಜನಕ)
ಭೂಮಿತಾಯಿಗೆ ತಾರತಮ್ಯವಿಲ್ಲ.
ಮರಳು ಹಿಂಡಿದರೆ ಎಣ್ಣೆ ಬರುತ್ತದೆಯೇ?
ನೀರನ್ನೂ, ಕಳ್ಳರನ್ನೂ ಯಾವಾಗಲೂ ಸೆರೆಹಿಡಿದಿಟ್ಟಿರಬೇಕು.
ಅತ್ತೆ [ಅಕ್ಕನ]ಮಗಳನ್ನು, ಪಕ್ಕದೂರಿನ ಜಮೀನನ್ನು ಆರಿಸಿಕೊಳ್ಳಬಾರದು.
ಹದವಾದ ತೇವ ತಾಯಿಯಂತೆ ಸಲಹುತ್ತದೆ.
ಹಸಿವಿಲ್ಲದವನಿಗೆ ರಸಬಾಳೆ ಕೊಟ್ಟರೂ ಬೇಡ.
ಮಳೆ ಬಿದ್ದಮೇಲೆ ಮರದಡಿ ನಿಲ್ಲಬಾರದು.
ತೋಟ ನೋಡಿ ಸಂಬಂಧ ಮಾಡು.
ತಾನು ಉತ್ತಮ, ಮಗ ಮಧ್ಯಮ, ಆಳು ಮಾಡಿದ್ದು ಹಾಳು
ಹಾಕೋ ಗೊಬ್ಬರ, ಬೆಳೆ ನೋಡೋ ಅಬ್ಬರ
ಏರಿಯನ್ನು ಮಾಡಿದವನು ದೊರೆಯಾಗುವನು.
ತೋಟ ಮಾಡಿದವನು ಕೋಟಳೆಗೊಳ್ಳನು.
ಹಾಕದ ಕೈಯಿ, ಉಣ್ಣದ ಬಾಯಿ.
ಬಾಳೆ ಇದ್ದವನು ಭಾಗ್ಯವಂತ
ಬೆದೆ ಬಂದ ಕಾಲದಲ್ಲಿ ಬೇಲಿಯಲ್ಲಿ ಬೀಜ ಚೆಲ್ಲಿದರೂ ಸಾಕು.
ಗಂಡು ಹಡೆದವನು, ತೆಂಗು ಬಿತ್ತಿದವನು ದರಿದ್ರನಲ್ಲ.
ಹದ ತಪ್ಪಿದರೆ ಇನಿತು ತಪ್ಪುವವು.
ಬಡವನಿಗೆ ಬಾಳೆ, ಬಲವಂತನಿಗೆ ಕಬ್ಬು
ವೀಳ್ಯವಿಲ್ಲದ ಬಾಯಿ ಇಲಿ ಗುದ್ದಿನ ಹಾಗೆ.
ಬೇಲಿ ಇಲ್ಲದ ಬೆಳೆ, ಶೀಲವಿಲ್ಲದ ಹೆಣ್ಣಿನಂತೆ
ಉತ್ತರೆಯು ಸುರಿದರೆ ಹೆತ್ತವ್ವ ಪೊರೆದಂತೆ
ಬೇಲದಹಣ್ಣು ಬಾಯಿಗೆ ಹುಳಿ, ಹೊಟ್ಟೆಗೆ ತಂಪು
ಹೆಡ್ಡನ ಆರಂಭ ಗೊಬ್ಬರದಿಂದ
ತೆಂಗು ಬೆಳೆದವನ ಮನೆಯಲ್ಲಿ ತಂಗಾಳಿ ಬೀಸಿದಂತೆ
ಯಜಮಾನನ ಪಾದದ ಧೂಳಿ ಬಿದ್ದಂತೆ ಮಣ್ಣು ಸಾರ.
ಎಂದೂ ಇಲ್ಲದೋನು ಎಲೆತೋಟ ಮಾಡಿ ಒಂದೂ ಇಲ್ದಂಗೆ ಕೊಯ್ಕೊಂಡ.
ಏಳಲಾರದೋನಿಗೆ ಏಳೂರು ಆರಂಭ. ಮ್ಯಾಗೊಂದು ಎಲೆತೋಟ.
ಬಸುರಿದ್ದೋಳು ಹಡೀತಾಳೆ; ಮೊಸರಿದ್ದೋಳು ಕಡೀತಾಳೆ; ನಂಗೂ ನಿಂಗೂ ಏನ್ಬಿಡು ತುಸು ಎಲೆ ಅಡಿಕೆ ಕೊಡು.
ಹೋದರೊಂದು ಗೋಟಡಿಕೆ, ಆದರೊಂದು ಮರ
ಅಡಿಕೆ ಕತ್ತರೀಲಿ ಸಿಕ್ಕಾಕ್ಹೊಂಡಂಗಾತು
ನಾಗವಲ್ಲಿಗೆ ನಾಚಿಕೆ; ಚಿಗುರೆಲೆಗೆ ಬೇಡಿಕೆ
ಹಸಿದು ಹಲಸು ತಿನ್ನು; ಉಂಡು ಮಾವು ತಿನ್ನು.
ಅಡಿಕೆ ಅಟ್ಟಕ್ಕೇರಿಸ್ತು, ಬಿದಿರು ಚಟ್ಟಕ್ಕೇರಿಸ್ತು.
ಮಾವಿನಮರದ ಮೇಲೆ ಕಾಗೆ ಕುಂತು ಕರೆದ್ರೆ ಮರ ಹಾಳು, ಮನೆಗೆ ನೆಂಟರು.
ಹುಣಸೆಮರ ಇದ್ದಲ್ಲಿ ಜೇನುಹಿಂಡು
Leave A Comment