ಭಟ್ಕಳದ ಕಟಗಾರ್‌ನ  ಗೋವಿಂದ ಗೊಂಡ ಅಡಿಕೆ ತೋಟಕ್ಕೆ ತೋಯ್‌ಹಾಳೆ ಮುಖೇನ ನೀರು ಹಾಯಿಸುತ್ತಾರೆ. ತೋಟದ  ಪಕ್ಕದ ಹೊಳೆಗೆ ಬೇಸಿಗೆ ಆರಂಭದಲ್ಲಿ ಒಡ್ಡು ಹಾಕಿ ಕಾಲುವೆಗಳಲ್ಲಿ ನೀರು ನಿಲ್ಲಿಸುವದುಅಡಿಕೆ/ಬಗಿನೆ ಮರದ  ಹಾಳೆಯಿಂದ ನೀರು ಮೊಗೆದು ಮರದ ಬುಡಕ್ಕೆ ಸುರಿಯುವದು ನೀರಾವರಿ ಕ್ರಮ. ವಾರಕ್ಕೆ ಒಮ್ಮೆ  ಮಾತ್ರ ನೀರು ನೀಡುತ್ತಾರೆ. ತೋಟ ಹಸಿರಾಗಿಡುವ ಈ ನೀರಾವರಿ ವಿಧಾನದಲ್ಲಿ  ರಟ್ಟೆಬಲ ಆಧಾರ, ನೀರವರಿಗೆ ವಿದ್ಯುತ್ ಪಂಪ್‌ಗೆ  ಬದಲಾಗದೇ ಒಂದೂವರೆ ಎಕರೆ ತೋಟ  ಸ್ವಂತ ಶ್ರಮದಲ್ಲಿ ಈಗಲೂ ಬೆಳೆಸುತ್ತಿದ್ದಾರೆ!.

ಕರಾವಳಿಯಲ್ಲಿ  ಪ್ರತಿ ವರ್ಷ ನವೆಂಬರ್‌ದಲ್ಲಿ ಹಳ್ಳಗಳಿಗೆ ಮಣ್ಣಿನ ಒಡ್ಡು ಹಾಕಿ ನೀರು ನಿಲ್ಲಿಸುವ ವಿಧಾನ ತುಂಬ ಹಳೆಯದು. ಕಳೆದ  ೭೦ರ ದಶಕದ ಪೂರ್ವದಲ್ಲಿ ಬಹುತೇಕ ಪ್ರದೇಶಗಳಲ್ಲಿ  ಈ ವ್ಯವಸ್ಥೆ ಚಾಲ್ತಿಯಲ್ಲಿತ್ತು. ನಂತರದಲ್ಲಿ ವಿದ್ಯುತ್ ಸಂಪರ್ಕ ದೊರೆತು ನೀರಾವರಿ ಪಂಪ್‌ಗಳು ಬಂದವು, ಈಗ ತೋಯ್‌ಹಾಳೆ ನೀರಾವರಿ ಕೈತಪ್ಪಿದೆ. ತೋಟದ ಕಾಲುವೆಯಲ್ಲಿ ನೀರು ನಿಲ್ಲಿಸುವ ಅನುಕೂಲಕ್ಕೆ ಹಳ್ಳಕ್ಕೆ ಒಡ್ಡು ಹಾಕುವ ವಿಧಾನ ಆಗ ಅನಿವಾರ್ಯವಾಗಿತ್ತು. ಬೇಸಿಗೆಯಲ್ಲಿ ನೀರಿನ ಬಳಕೆ ಜಾಸ್ತಿಯಿರುವ ಕೃಷಿ ಭೂಮಿ ಸುತ್ತಲಿನ ಪ್ರದೇಶದಲ್ಲಿ  ಅಂತರ್ಜಲ ಸಂರಕ್ಷಣೆಗೆ ಇದು ಉಪಯುಕ್ತವಾಗಿತ್ತು. ನೀರಾವರಿ ತಂತ್ರಜ್ಞಾನ ಸುಧಾರಣೆ ಬಳಿಕ  ಪರಂಪರೆಯ ಪದ್ದತಿಗಳು ನಿಧಾನಕ್ಕೆ ಕಣ್ಮರೆಯಾದವು .

ಕರಾವಳಿಯ ಭಟ್ಕಳ ನಗರಕ್ಕೆ  ಕಡುವಿನ ಕಟ್ಟ  ಎಂಬ ಪ್ರದೇಶದಿಂದ ಕುಡಿಯುವ ನೀರು ಒಯ್ಯಲಾಗುತ್ತದೆ. ಇಲ್ಲಿ ವೆಂಕಟಾಪುರ ನದಿಗೆ ಅಡ್ಡಲಾಗಿ ಸಿಮೆಂಟಿನ ದೊಡ್ಡ ಒಡ್ಡು ಹಾಕಲಾಗಿದೆ. ಕಡುವಿನಕಟ್ಟು ಹೆಸರಿನ ಮೂಲ “ಕಡೆಗಿನ ಕಟ್ಟು” ವೆಂಕಟಾಪುರ ನದಿಗೆ ರೈತರು ನಿರ್ಮಿಸುತ್ತಿದ್ದ ಕಡೆಯ ಕಟ್ಟಿನ ಬಳಿಕ ನೀರು ಸಮುದ್ರ ಸೇರುತ್ತಿತ್ತು. ಶಿವಮೊಗ್ಗದ ಕೋಗಾರ್ ಘಟ್ಟದ ಭೀಮೇಶ್ವರದಲ್ಲಿ ಈ ನದಿ ಜನಿಸುತ್ತದೆ. ಕಾಡೇ ನದಿಗಳ ತಾಯಿ ಎಂಬಂತೆ ನಿತ್ಯಹರಿದ್ವರ್ಣ ಕಾಡಿನ ಮಡಿಲಲ್ಲಿ ಜನಿಸುವ ಇದು ಕರಾವಳಿ ಮುಖವಾಗಿ ಹರಿಯುವಾಗ  ನದಿದಂಡೆಯಲ್ಲಿ  ಕೃಷಿ ಬೆಳೆದಿದೆ. ಕಣಿವೆ ಪ್ರದೇಶದ ಜೀವನಾಡಿಯಾಗಿದೆ. ಇಲ್ಲಿ ಅಡಿಕೆ, ಭತ್ತ ಬೆಳೆಯುವವರು ಬೇಸಿಗೆಯಲ್ಲಿ ಇದರ ಉಪಹಳ್ಳಗಳಿಗೆ ನಿರ್ಮಿಸುವ ಒಡ್ಡುಗಳು ಇಂದಿಗೂ ಗಮನಾರ್ಹ. ೫೦ ವರ್ಷಗಳ ಹಿಂದೆ ಭಟ್ಕಳದ ಬ್ಯಾಟ್‌ಕೂರ್‌ನಿಂದ ಮುಂದೆ ಕಟಗಾರ್, ಹಲ್ಲಂದಿ, ಕಬ್ರೆ, ಕೆಳಗಿನಕೇರಿ ಪ್ರದೇಶಗಳಲ್ಲಿ ಮಾತ್ರ ಒಡ್ಡುಗಳಿದ್ದವು. ಕಣಿವೆಯಲ್ಲಿ  ಕೃಷಿ ಭೂಮಿ ಕಡಿಮೆ, ಈಗ ಕೃಷಿಯೋಗ್ಯ ಭೂಮಿ ಸಾಗುವಳಿಯಾಗಿದೆ, ಅರಣ್ಯ ಭೂಮಿ  ಅತಿಕ್ರಮಣವಾಗಿದೆ. ನೀರಾವರಿ ವ್ಯವಸ್ಥೆಗೆ ಜನ ವಿದ್ಯುತ್ ಪಂಪ್ ಬಳಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಕೆಲವೆಡೆ ಹೊಳೆಗೆ ಒಡ್ಡು ಹಾಕುವ ಹಳೆಯ ವಿದ್ಯೆ ಪ್ರಯತ್ನಪೂರ್ವಕವಾಗಿ ಉಳಿಸಿಕೊಂಡಿದ್ದಾರೆ. ಕಿಬ್ಬೋಡಿ, ಹೆಗಡೆಗದ್ದೆ, ಹೊಳೆಬಾಗಿಲು, ಚಪ್ಪಂಡಿ, ಕೊನಕಾರ್, ಹಲ್ಲಂದಿ ಹೀಗೆ ಕಡುವಿನಕಟ್ಟದ ತನಕ  ೩೫ಕ್ಕೂ ಹೆಚ್ಚು ರೈತರ ಒಡ್ಡುಗಳಿವೆ.

ರೈತ ಒಡ್ಡುಗಳು ನಿರ್ಮಾಣವಾದ ಪ್ರದೇಶಗಳ ಕೆರೆ, ಬಾವಿಗಳಲ್ಲಿ  ಸಮೃದ್ಧ ನೀರಿರುವದನ್ನು  ಕಾಟಿಕಲ್ಲು ರಾಜೂ ನಾಯ್ಕ್ ಸ್ಪಷ್ಟವಾಗಿ ಗುರುತಿಸುತ್ತಾರೆ. ಹೊಳೆಯ ನೀರು ನಿಲ್ಲಿಸುವ ಹಿರಿಯಜ್ಜನ ವಿದ್ಯೆ ಹೇಗೆ ಪ್ರಯೋಜನ ಎಂಬುದು ಎಳೆಯ ತಲೆಮಾರಿಗೂ ತಿಳಿದಿದೆ. ಜಲಸಂರಕ್ಷಣೆಯ ಜನಸಹಬಾಗಿತ್ವ ಸಮುದಾಯ ಸಂಸ್ಕೃತಿಯಲ್ಲಿ ಸಾಧ್ಯವಾಗಿದೆ. ಸರಕಾರ ಸಿಮೆಂಟ್ ಒಡ್ಡು ನಿರ್ಮಾಣವಾದ ಪ್ರದೇಶದಲ್ಲಿಯೂ ಜನ ಹೆಚ್ಚು ಮುತುವರ್ಜಿಯಿಂದ ಅದರ ನಿರ್ವಹಣೆ ಮಾಡುತ್ತಾರೆ. ನೀರಿನ ಮಹತ್ವ, ನೀರುಳಿಸುವ ಮುಖೇನ ಕೃಷಿ ಗೆಲ್ಲುವ ವಿದ್ಯೆ  ಅರ್ಥವಾದರೆ ನಿರ್ವಹಣೆ ಹೇಗೆ ನಡೆಯುತ್ತದೆಂಬುದಕ್ಕೆ ಹಳ್ಳಿಗಳು ಒಳ್ಳೆಯ ಉದಾಹರಣೆಯಾಗಿವೆ. ಕಡಿದಾದ ಕಣಿವೆಯಲ್ಲಿ ಹಳ್ಳದ ನೀರು ನಿಲ್ಲಿಸಲು ಗಮನ ನೀಡದೇ  ತೆರೆದಬಾವಿ, ಕೊಳವೆಬಾವಿಯಲ್ಲಿ ನೀರು ಹುಡುಕುವದು ಸುಲಭದ ಕೆಲಸವಲ್ಲ, ದುಬಾರಿ ದಾರಿಯಲ್ಲಿ ಗೆಲುವು ಜೂಜಿನ ಹಾಗೇ! ಆದರೆ ನೆಲದ ಒಡ್ಡುಗಳು ನಿಶ್ಚಿತ ಯಶಸ್ಸು  ನೀಡುವಂತವು.

ನಮ್ಮ ಕರಾವಳಿಯಲ್ಲಿ ಹೇರಳ ಮಳೆ ಸುರಿಯುತ್ತದೆ, ಘಟ್ಟದ ಸೀಮೆಯ ನದಿ ಹಳ್ಳಗಳು ಹರಿದಿವೆ. ಮಳೆಗಾಲದಲ್ಲಿ  ಪ್ರವಾಹ, ಬೇಸಿಗೆಯಲ್ಲಿ  ತೀವ್ರ ನೀರಿನ ಕೊರತೆ! ಸರಕಾರ ಕಿಂಡಿತಡೆ ಆಣೆಕಟ್ಟು, ಕೊಳವೆಬಾವಿ ನಿರ್ಮಾಣಕ್ಕಾಗಿ  ಅಪಾರ ಹಣ ಖರ್ಚುಮಾಡುತ್ತಿದೆ. ಪಲಿತಾಂಶ ನಿರೀಕ್ಷಿಸಿದಷ್ಟು ಸಾಧ್ಯವಾಗಿಲ್ಲ. ಬಹುತೇಕ ರಚನೆಗಳು ನಿರ್ವಹಣೆ, ನಿರ್ಮಾಣ ಸಮಸ್ಯೆಯಿಂದ ಮೂಲೆಗುಂಪಾಗಿವೆ. ಹೊಳೆ ಹಳ್ಳಗಳಲ್ಲಿ ಸರಕಾರೀ ಕಾಂಕ್ರೀಟ್ ಸ್ಮಾರಕಗಳಂತೆ ನಿರುಪಯುಕ್ತ ರಚನೆಗಳು ನಿಂತಿವೆ. ಸ್ವತಃ ಜನ ಆಸಕ್ತಿಯಿಂದ  ನಿರ್ಮಾಣದಲ್ಲಿ ಭಾಗವಹಿಸಿದ  ಜಾಗಗಳಲ್ಲಿ ಕೆಲವೇ ಕೆಲವು ಬಳಕೆಯಲ್ಲಿವೆ.

ನವೆಂಬರ್ ತಿಂಗಳಲ್ಲಿ ನೀರಿನ ಎಚ್ಚರ ಕರಾವಳಿಯ ಶೇಕಡಾ ೫೦ರಷ್ಟು ನೀರಿನ ಸಮಸ್ಯೆ ಬಗೆಹರಿಸುತ್ತದೆ  ಎಂಬ ಸತ್ಯ  ಗಮನಿಸಬೇಕು. ಪುತ್ತೂರಿನಿಂದ ಕಾರವಾರದ ಉದ್ದಕ್ಕೂ  ನದಿ ಕಣಿವೆ ಸಂಚರಿಸಿದರೆ ಬೇಸಿಗೆಯಲ್ಲಿ ಒಡ್ಡು ನಿರ್ಮಿಸಿದಲ್ಲಿ ಕೃಷಿ ಗೆಲವು ಕಾಣುತ್ತದೆ. ಮಳೆಗಾಲದ ಭತ್ತ ಕಟಾವಾಗಿ ಬೇಸಿಗೆ ಬೆಳೆ ಬೆಳೆಯುವ ಆಸಕ್ತಿ  ರೈತರಲ್ಲಿ ಇದ್ದಾಗ ಹೊಳೆಗೆ ಒಡ್ಡು ಹಾಕುವ ಕೆಲಸ ಉಳಿಯುತ್ತದೆ. ಕೃಷಿ ಲಾಭದಾಯಕವಾದರೆ ಆಸಕ್ತಿ  ಇನ್ನೂ  ಹೆಚ್ಚುತ್ತದೆ. ಒಮ್ಮೆ ಆಹಾರ ಬೆಳೆ ಬದಲಾಗಿ ತೋಟಗಾರಿಕೆ ಕ್ಷೇತ್ರ ವಿಸ್ತರಣೆಯಾದರೆ ಮುಂದಿನ ಸಮಸ್ಯೆ ಇನ್ನೂ ವಿಚಿತ್ರ. ಆಗ ನೀರಿನ ಬಳಕೆ ಹೆಚ್ಚುತ್ತದೆ. ಒಂದು ಅಡಿಕೆ ಮರಕ್ಕೆ ೧೮ ಲೀಟರ್, ತೆಂಗಿನ ಮರಕ್ಕೆ ೪೦ ಲೀಟರ್ ನಿತ್ಯ ನೀರು ನೀಡಬೇಕು. ಸುಲಭ ನಿರ್ವಹಣೆ ಹಿನ್ನೆಲೆಯಲ್ಲಿ ಕೆರೆ, ಬಾವಿ ತೆಗೆದು ಪಂಪ್ ಜೋಡಿಸಿ ಹೊಸ ನೀರಾವರಿ ವಿಧಾನ ಅಳವಡಿಕೆಯಾಗುತ್ತದೆ. ಹೊಳೆಗೆ ಕಟ್ಟುಹಾಕುವ ಸಮುದಾಯದ ಕೆಲಸ ಹಿಂದಕ್ಕೆ ಸರಿಯುತ್ತದೆ. ನಂತರದಲ್ಲಿ ಅಂತರ್ಜಲ ಸೋಲು, ಕೃಷಿ ನಷ್ಟ  ದಕ್ಕುತ್ತದೆ!. 

ಕಟಗಾರ್‌ನ ಗೋವಿಂದ ಗೊಂಡರಂತವರ ತೋಯ್‌ಹಾಳೆ ಪ್ರೀತಿಯವರು, ಬೇಸಿಗೆಯಲ್ಲಿ  ಮಣ್ಣಿನ ಒಡ್ಡು ಹಾಕಿ ನೀರುಳಿಸುವ ತಂತ್ರ ಅನುಸರಿಸಿದವರ ಪರಂಪರೆಯ ಯುಕ್ತಿ  ಉಳಿದಲ್ಲಿ  ಮಾತ್ರ  ಕರಾವಳಿ ಕೃಷಿ ಭವಿಷ್ಯ  ಆಶಾದಾಯಕವಗಿದೆ. ಸದ್ಯ ಇದೊಂದೇ  ನೀರ ನೆಮ್ಮದಿಯ ಸುಸ್ಥಿರ ವಿಕೇಂದ್ರೀಕೃತ  ದಾರಿಯಾಗಿದೆ.