ಕರ್ಣಾವಸಾನದ ಪ್ರಸಂಗದಲ್ಲಿ ಅರ್ಜುನನಿಗಾದ ಅದಮ್ಯವಾದ ಕರ್ಣವ್ಯಾಮೋಹವನ್ನು ನಿವಾರಿಸಲು ಶ್ರೀಕೃಷ್ಣ ಮಾಡಿದ ಸಾಹಸ, ಬೀಸಿದ ಮಾಯೆ ಎಂತಹದು!

ಬೀಸಿದನು ನಿಜಮಾಯೆಯನು ಡೊಳ್ಳಾಸದಲಿ, ಹರಹಿದನು ತಮವನು,
ರೋಷವನು ಬಿತ್ತಿದನು ಮನದಲಿ, ನರನ ಕಲಿಮಾಡಿ!
ಐಸೆ ಬಳಿಕೇನೆನ್ನಖಿಳ ಗುಣದೋಷ ನಿನ್ನದು, ಪುಣ್ಯದ ಪಾಪದ
ವಾಸಿ ನಮಗೇಕೆನುತ ಕೊಂಡನು ಧನುವನಾ ಪಾರ್ಥ.

ವಿರಥನಾದ ಕರ್ಣ ಇನ್ನೂ ಅಹತನಾಗಿಯೆ ಉಳಿಯುತ್ತಾನೆ. ಅರ್ಜುನನ ಮಾರಣಾಸ್ತ್ರವು ತನ್ನ ಎದೆಯನ್ನು ಭೇದಿಸಿದ್ದರೂ ಅಮೃತನಾಗಿಯೆ ಉಳಿದಿದ್ದ ಕರ್ಣನ ಬಳಿಗೆ ಬ್ರಾಹ್ಮಣವೇಷಧಾರಿಯಾಗಿ ಕೃಷ್ಣ ಬಂದು ಅವನ ಪ್ರಾಣವಾಯುವಾಗಿದ್ದ ಕರ್ಣಕುಂಡಲವನ್ನು ಅವನೆದೆಯೊಳಗಿನ ಅಮೃತೋದಕವನ್ನೂ ಪಡೆದುಕೊಳ್ಳುತ್ತಾನೆ. ಹಾಗೆ ಕೃಷ್ಣ ತನ್ನ ಪರಮಪದವನ್ನು ಕರ್ಣನಿಗೆ ನೀಡುತ್ತಾನೆ. ಪತಿತನೆನಿಸಿಕೊಂಡವನನ್ನೂ ಭಗವಂತ ಅರೆದುನೋಡಿ ಒರೆದುನೋಡಿ, ಲೋಕಕ್ಕೆ ಅಂತಹವನ ಮಹತ್ವವನ್ನು ತೋರಿಸಿ ಕೈ ಹಿಡಿದು ಎತ್ತಿಕೊಳ್ಳುವ ದರ್ಶನವನ್ನಿಲ್ಲಿ ಕವಿ ಅದ್ಭುತವಾಗಿ ಕಂಡರಿಸಿದ್ದಾನೆ.

ಪರಮ ಕರುಣಾಸಿಂಧು ಕರ್ಣಂಗಿರದೆ ನಿಜಮೂರ್ತಿಯನು ತೋರಿದ
ನುರುತರಪ್ರೇಮದಲಿ ಮುಕುತಿಯ ಪದವ ನೇಮಿಸಿದ;
ನರನನೆಚ್ಚರಿಸಿದನು, ಕರುಣೆಗೆ ಕರುಣದನುಸಂಧಾನ ಮಾಣದು,
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದುದಮರಗಣ!

ಇದೆ ಕೃಷ್ಣನು ಕರ್ಣನಿಗೆ ಬಯಸಿದ ಅಭ್ಯುದಯ, ಸುಖ. ಕೃಷ್ಣನ ಕರುಣೆಯ ಹಸುಳೆಗಳಾದ ಪಾಂಡವರಿಗೂ ಸುಲಭವಾಗಿ ದೊರೆಯದ ಪರಮಪದ ಅವರಿಗಿಂತ ಮುಂಚೆಯೆ ಕರ್ಣನಿಗೆ ದೊರೆಯಿತು… ಕರ್ಣನ ಪಾತ್ರದಲ್ಲಿ ಕುಮಾರವ್ಯಾಸ ಅಧ್ಯಾತ್ಮದ ಹೊನ್ನಿನೆಳೆಯನ್ನು ಕಂಡು ಅವನ ಸೌಂದರ‍್ಯವನ್ನು ಮತ್ತಷ್ಟು ಉಜ್ವಲಗೊಳಿಸಿದ್ದಾನೆ. ಭಾಸ -ಪಂಪರು ಕಂಡರಿಸಿದ ವಿಗ್ರಹಕ್ಕೆ ಕುಮಾರವ್ಯಾಸ ಆಧ್ಯಾತ್ಮದ ವಜ್ರಕಿರೀಟವನ್ನು ತೊಡಿಸಿದ್ದಾನೆ. ಆದ್ದರಿಂದ ಕರ್ಣನ ಮೂರ್ತಿ ನಮ್ಮ ಜನತೆಯ ಮನೋಮಂದಿರದಲ್ಲಿ ಕುಂದದ ಪ್ರಭೆಯಿಂದ ಚೇತನವಾಗಿದೆ. ಅವನ ಸ್ನೇಹ ಜನದ ಮನವನ್ನು ಅತ್ಯುನ್ನತಿಯ ನೆಲೆಗೆ ಕೊಂಡೊಯ್ಯುವ ವಿಮಾನವಾಗಿದೆ!

ಮಹಾಭಾರತ ಸಹಸ್ರಾರು ವಯೋಧರ್ಮ ಮನೋಧರ್ಮವುಳ್ಳ ವ್ಯಕ್ತಿಗಳ ಸಂಗ್ರಾಮ ಭೂಮಿ.ಶ್ರೀಕೃಷ್ಣ., ಭೀಷ್ಮರಿಂದ ಅಭಿಮನ್ಯು, ಉತ್ತರನ ತನಕ ಭಿನ್ನ ಭಿನ್ನ ವಯಸ್ಸಿನ ಮನಸ್ಸಿನ ವ್ಯಕ್ತಿಗಳನ್ನಲ್ಲಿ ಕಾಣುತ್ತೇವೆ. ಮಹಾಭಾರತದಲ್ಲಿ ಮಕ್ಕಳಾಗಿ ಬರುವ ಈ ಉತ್ತರ ಅಭಿಮನ್ಯು ಕುಮಾರರಂತೂ ವಿಭಿನ್ನ ಸಂಸ್ಕಾರ ಪರಿಪಾಕವುಳ್ಳ ಚಿರಸ್ಮರಣೀಯ ವ್ಯಕ್ತಿಗಳಾಗಿದ್ದಾರೆ. ಈ ಚಿರಸ್ಮರಣೀಯರನ್ನು ಕಡೆದಿಟ್ಟು ಸ್ಫುಟಗೊಳಿಸಿದ ಬಹುಮಟ್ಟಿನ ಕೀರ್ತಿ ನಾರಣಪ್ಪನದೆ ಎಂದು ಧೈರ‍್ಯವಾಗಿ ಹೇಳಬಹುದು.

ಉತ್ತರ ಕುಮಾರ, ಅಭಿಮನ್ಯು ಕುಮಾರ! ಎಂಥ ಜೋಡಿ, ಎಂಥ ಸಾದೃಶ್ಯ, ಎಂಥ ವೈದೃಶ್ಯ! ಇಬ್ಬರೂ ಬಹುಶಃ ಒಂದೇ ವಯಸ್ಸಿನವರು; ಅದಿರಲಿ, ಭಾವ ಭಾವಮೈದುನರು! ಪಾಂಡವವಂಶದ ಕುಡಿ ದಾಂಗುಡಿಯಿಟ್ಟದ್ದು ಉತ್ತರನ ತಂಗಿ ಉತ್ತರೆಯಿಂದ. ಇಂತಹ ಓರಗೆಯ ಬಂಧುಗಳಲ್ಲಿ ಎಂಥ ವೈಲಕ್ಷಣ್ಯ!ಉತ್ತರ ಎಂಬ ಹೆಸರು ಗಾದೆಯಾಗಿ ಬಿಟ್ಟಿದೆ. ಅವನು ವಾಕ್‌ಶೂರರ ಅಧಿನಾಯಕನಾಗಿದ್ದಾನೆ. ಅವನ ಹೆಸರಿರುವುದು ನಮ್ಮಲ್ಲಿ ಎಷ್ಟೋ ಜನರಿಗೆ ಸಮಾಧಾನ, ಧೈರ‍್ಯ! ಈ ವ್ಯಕ್ತಿ ಮಹಾಭಾರತದ ಪೂರ್ವೋತ್ತರ ಪರ್ವಗಳ ಮೌನ ಗಭೀರ ಸಾಗರಗಳಿಗೆ ಹಾಸ್ಯದ ಸೇತುವಾಗಿದ್ದಾನೆ. ಹೆಂಗಳೆಯರ ಮುಂದೆ ವೀರಾಲಾಪ ಮಾಡಿ ವಾಕ್‌ಶರಧಾರೆಯನ್ನು ಹರಿಸಿದ ವೀರ, ಯುದ್ಧ ಭೂಮಿಯಲ್ಲಿ ರಥದಿಂದ ಧುಮ್ಮಿಕ್ಕಿ ಓಡುವುದಾಗಲಿ, ಕಣ್ಣೆವೆ ಸೀದು ಹೋಯಿತೆಂದು ಕೈಗಳಲ್ಲಿ ಮುಖ ಮುಚ್ಚಿಕೊಳ್ಳುವುದಾಗಲಿ ಯಾರನ್ನು ತಾನೆ ನಗಿಸದು? ಆದರೆ ಈ ನಗೆಗೇಡಿ ಉತ್ತರನು ಕುಮಾರವ್ಯಾಸ ಚಿತ್ರಿಸಿರುವ ಉತ್ತರನ ಪೂರ್ವಾವಸ್ಥೆ ಮಾತ್ರ. ಅವನನ್ನು ಧನಂಜಯನು ಕಲಿಮಾಡಿದ ಬಗೆಯನ್ನೂ ಅನಂತರ ಅವನು ನಡೆದುಕೊಂಡ ಅಪೂರ್ವ ವಿಧಾನವನ್ನೂ ನೋಡಿದರೆ ಕವಿ ಕಂಡ ಉತ್ತರನ ಉತ್ತರ ಜೀವನವೂ ವೇದ್ಯವಾದೀತು. ಹಾಸ್ಯ ಮತ್ತು ಗಭೀರತೆಯನ್ನು, ಹೇಡಿತನ ಕಲಿಗೊಳ್ಳುವುದನ್ನು ಕವಿ ಅವನ ಜೀವನದಲ್ಲಿ ಚಿತ್ರಿಸಿದ್ದಾನೆ.

ಅಭಿಮನ್ಯುವಾದರೊ ನಿಜಕ್ಕೂ ಸಿಂಹದ ಮರಿಯೆ. ಹುಟ್ಟಿನಿಂದಲೆಂತೊ ಗುಣದಿಂದಲೂ ಹಾಗೆಯೆ ಮಹಾವೀರ. ತನ್ನ ವಯಸ್ಸಿಗೆ ಮಹಾದ್ಭುತವನ್ನೆ ಸಾಧಿಸಿದನೆನ್ನಬೇಕು.ಅವನಾಡಿದ ಮಕ್ಕಳಾಟ ಕುರುರಾಯರಿಗೆ ಮಾರಿಯಾಟ ಮೃತ್ಯುವಾಟ ಆಯಿತು. ಯುದ್ಧಕ್ಕೆ ಮೊದಲು ಅವನ ವೀರೋತ್ಸಾಹದ ಮಾತನ್ನು ಕೇಳಿ ಧರ್ಮರಾಜನೆ ಅಂಜಿದುದುಂಟು: ‘ಶರನಿಧಿಯ ವಡಬಾನಳನ ದಳ್ಳುರಿಯ ವರ್ಮವ ತಿವಿವ ತುಂಬಿಗೆ ಮರುಳುದಲೆಯುಂಟಾದಡದು ಭವ ಭವದ ಪುಣ್ಯವಲಾ’! ಎಂದು. ಆದರೆ ಅದಕ್ಕೆ ಅಭಿಮನ್ಯುವಿನ ಮಾತನ್ನು ಕೇಳಿ : ‘ಬಿಡು, ಮರೀಚಿಯ ತೊರೆಗೆ ಹರಿಗೋಲಿಡುವರುಂಟೆ? ಗಾಳಿ ಬೆಮರುವುದುಂಟೆ’? ಹಾಗೆಯೆ ಅಭಿಮನ್ಯುವಿನ ಸಾರಥಿಯೆ ಅವನ ಸಾಮರ್ಥ್ಯಕ್ಕೆ ಶಂಕಿಸುತ್ತಾನೆ. ಅದಕ್ಕವನ ಮಾತಿಷ್ಟೆ. : ‘ಮರುಳು ಸಾರಥಿ, ನಮ್ಮ ನಾವ್ ಪರಿಕರಿಸಿಕೊಳಲಾಗದು, ಕಣಾ! ನೀನರಿಯೆ ನಮ್ಮಂತರವ, ನಾವಿನ್ನಾಡಿ ಫಲವೇನು? ಬವರವಾದರೆ ಹರನನೊಸಲಿಗೆ ಬೆವರ ತಹೆ. . . ಸಾಕಿನ್ನರ್ಜುನನು ಮಾಧವನು ಮುನಿದಡೆ ಗೆಲುವೆನು’. ಉತ್ತರಕುಮಾರನಿಗೂ ಇವನಿಗೂ ಏನಂತರ! ಅರ್ಜುನನ್ನು ಸಾರಥಿಯಾಗಿ ಪಡೆದು ಹೊರಡುವ ಮುಂಚೆ ಅವನು ಆಡುವ ಮಾತೇನು: ‘ಅರಿಯೆನೇ ಗಾಂಗೇಯನನು, ತಾನರಿಯದವನೇ ದ್ರೋಣ, ಕುಲದಲಿ ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ? ಬರಿಯ ಬಯಲಾಡಂಬರದಿ ತುರುವ ಹಿಡಿದೊಡೆ ತನ್ನ ಹೆಂಡಿರ ಸೆರೆಯ ತಾರದೆ ಮಾಣೆ.’ ಯುದ್ಧವೇನಾದರೂ ಆದರೆ ಪ್ರಲಯಹರನ, ಫಾಲಾಕ್ಷನ, ನೊಸಲಿಗೆ ಬೆವರನ್ನು ತರುತ್ತೇನೆ ಎನ್ನುತ್ತಾನೆ ಅಭಿಮನ್ಯು. ಆದರೆ ಉತ್ತರ ಕುಮಾರ ಶತ್ರುಗಳ ಹೆಂಡಿರ ಸೆರೆ ತರುತ್ತೇನೆಂದೆನ್ನುತ್ತಾನೆ! ಎಂಥ ಅಂತರ!

ಅನ್ಯರಿಗೆ ಅಭೇದ್ಯವಾಗಿದ್ದ ಪದ್ಮವ್ಯೂಹವನ್ನು ಏಕೈಕನಾಗಿ ಭೇದಿಸಿ ಒಳಹೊಕ್ಕ ಈ ಸಿಡಿಲ ಮರಿ ಬಂದ ಬಂದ ವೀರರನ್ನೆಲ್ಲ ಉತ್ತರಿಸುತ್ತಾನೆ. ‘ನೀನು ಮಗು, ನಿಮ್ಮಯ್ಯ, ಭೀಮರನ್ನು ಕಳಿಸು ’ಎಂದು ಅಹಂಕಾರದಿಂದ ನುಡಿದವರಿಗೆ ‘ಮಗುವು ತಾನಹೆ, ತನ್ನ ಬಾಣಕೆ ಮಗುವು ತನ ಬೇರಿಲ್ಲ ನೋಡು!’ . . . . ‘ಕೊಚ್ಚೆ ನೀರೊಳಗಾಳುತೇಳುತ ಜಲಧಿ ಕಾಲ್ವೊಳೆಯೆಂಬ ಭಂಡರ ಮುಳಿದು ಮಾಡುವುದೇನು, ಮೊದಲಲಿ ನಮ್ಮ ನೀ ಗೆಲಿದು ಬಳಿಕ ಭೀಮಾರ್ಜುನರ ಬಯಸುವುದು’ ಎಂದು ಹೇಳುವ ಅಭಿಮನ್ಯುವಿನ ವಾಕ್‌ಕಷಾಘಾತದಲ್ಲಿ ತಂದೆಗೆ ಗೌರವ ತೋರಿಸುವ ಹಾಗೂ ತನ್ನ ಗುರುತ್ವವನ್ನು ತೋರಿಸುವ ಧೀರ ವಿನಯಧೋರಣೆಯನ್ನು ಕಾಣುತ್ತೇವೆ. ಕೈಗೆ ಸಿಕ್ಕಿದ ದುಶ್ಶಾಸನನ್ನು ಸೀಳಿ ಅವನ ತಿಳಿರಕ್ತದಲ್ಲಿ ತನ್ನ ತಾಯ ತುರುವನ್ನು ನಾದಿಸುತ್ತೇನೆಂದು ಕೈದುಡುಕಿದ ಅಭಿಮನ್ಯು ತಟಕ್ಕನೆ ತನ್ನ ದೊಡ್ಡಪ್ಪನ ಶಪಥವನ್ನು ನೆನೆದು ತನ್ನ ಸಾಹಸಕ್ಕೆ ಹಿಂಜರಿದು ನಿಲ್ಲುತ್ತಾನೆ. ‘ಇವನ ಕೊಂದರೆ ತಂದೆ ಮಿಗೆ ಮೆಚ್ಚುನೊ, ಮುನಿವನೊ? ತನ್ನ ನುಡಿ ಸಂಭವಿಸದೆಂಬನೊ? ಭೀಮಸೇನನ ಭಾಷೆಗಂಜುವೆನು! ಇವನ ತಾನೇ ಕೊಲಲಿ, ನಮಗಿನ್ನಿವನ ತೊಡಕೇ ಬೇಡ, ಕದನದೊಳಿವನ ಭಂಗಿಸಿಬಿಡುವೆನೆಂದನು ಮನದೊಳಗೆ. ’

ಯಾರೊಬ್ಬರೂ ಗೆಲ್ಲಲಾಗದೆ ಷಡ್ರಥರು ಅವನನ್ನು ಸುತ್ತುಗಟ್ಟಿ ಎದುರಿಸಿ ಛಿನ್ನಾಭಿನ್ನವಾಗುತ್ತಾರೆ. ಕೊನೆಗೆ ದ್ರೋಣರು ಕರ್ಣನನ್ನು ಒಡಂಬಡಿಸಿ ಅಭಿಮನ್ಯುವಿನ ಚಾಪವನ್ನು ಹಿಂದಿನಿಂದ ಹೋಗಿ ಭೇದಿಸುವಂತೆ ಮಾಡುತ್ತಾರೆ. ಅದನ್ನು ಕಂಡು ಈ ಸಿಂಹ ಕುಮಾರ ಮುಗುಳು ನಗೆ ನಕ್ಕು ಆಡು ಮಾತನ್ನು ಕೇಳಿ: ‘ಬೆರಗಡರಿ ಮುಖದಿರುಹಿ, ಹಿಂದಣಿನಿರಿದ ಕರ್ಣನ ನೋಡಿ ಮುಖದಲಿ ಕಿರುನಗೆಯ ಕೇವಣಿಸಿ ನುಡಿದನು ಬೆರಳನೊಲೆದೊಲೆದು . . . ಆವ ಶರಸಂಧಾನ ಲಾಘವದಾವ ಪರಿ, ಮಝ! ಪೂತು ಪಾಯಿಕು ದೇವ ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ! ಈ ವಿವೇಕವಿದಾರ ಸೇರುವೆ? ಯಾವಗಹುದಿದು ಹಿಂದೆ ಬಂದೆ ಸುವೀ ವಿಗಡತನ? ನಿನಗೆ ಮೆರೆವುದು ಕರ್ಣ!’ ಧನುರ‍್ಭಂಗವಾದ ಮೇಲೆ ಕತ್ತಿ ಹಿರಿದು ಮತ್ತೂ ಭಯಂಕರನಾಗಿ ಯುದ್ಧ ಮಾಡುತ್ತ ಕತ್ತಿಯನ್ನೂ ಕೈಗಳನ್ನೂ ಕಳೆದುಕೊಂಡು, ರಥ ಚಕ್ರಗಳನ್ನೆ ತಿರ್ರನೆ ತಿರುಗಿಸಿ ಚಕ್ರಾಯುಧನಂತೆ ಯುದ್ಧಮಾಡಿ ಕೊನೆಗೆ ರಥ ಚಕ್ರವೂ ಇಲ್ಲದೆ ಇದ್ದಾಗ ತನ್ನ ಮೇಲ್ವಾದು ಬಂದ ದುಶ್ಶಾಸನ ಕುಮಾರನನ್ನು ಕೊಂದು ತಾನೂ ಮಡಿಯುತ್ತಾನೆ. ಕವಿಯ ಗಂಟಲು ಕಟ್ಟುತ್ತದೆ. ಒಂದೇ ಮಾತನಾಡುತ್ತಾನೆ : ‘ಕಾಡು ಕಿಚ್ಚೆದ್ದಡವಿಯನು ಕುಡಿ ನಾಲಗೆಯೊಳಳವಡಿಸಿ ದಳ್ಳುರಿಜ್ವಾಲೆ ತಗ್ಗಿದವೋಲು, ಗಗನದ ಮುಗಿಲಮೋಹರವ ಧಾಳಿಯಲಿಯರೆಯಟ್ಟಿ ಸುಂಟರುಗಾಳಿಯುರವಣೆ ನಿಂದವೊಲು ಸುರಪಾಲತನಯನ ತನಯನಸ್ತಮಿಸಿದನು ರಣದೊಳಗೆ!’

ವೀರದ ಮಹಾಪೂರವಾಗಿ ಬಂದ ಈ ಕುಮಾರ ಕರುಣೆಯ ಮಹಾಸಾಗರವನ್ನೆ ಉಕ್ಕಿಸಿ ಹೋಗುತ್ತಾನೆ. ಮುಂದೆ, ಪಾಂಡವರ ಶೋಕದಲ್ಲಿ, ಅದರಲ್ಲೂ ಸುಭದ್ರೆ ಅರ್ಜುನರ ದುರ್ಭರ ದುಃಖದಲ್ಲಿ ಈ ಕರುಣೆಯ ಕಡಲು ಕೊಬ್ಬಿ ಮೇರೆವರಿಯುತ್ತದೆ. ತನ್ನ ಮಗನನ್ನು ಮಕ್ಕಳ ಸಮೂಹದಲ್ಲಿ ಅರಸಿ ಕಾಣದ ಅರ್ಜುನನ್ನು ಕಂಡಾಗ ಹೇಳಲಾಗದ ವೇದನೆಯುಂಟಾಗುತ್ತದೆ.

ಕುಮಾರವ್ಯಾಸನ ದರ್ಶನದ ವಿಚಾರವಾಗಿ ಹೇಳದಿದ್ದರೆ ನಮ್ಮ ಮಾತು ಪೂರ್ಣವಾಗುವುದಿಲ್ಲ. ಮೊದಲೆ ಹೇಳಿದಂತೆ ಆತನದು ಭಗವದ್ದೃಷ್ಟಿಯಾದುದರಿಂದ ಅವನ ದರ್ಶನದಲ್ಲಿ ವಿಶ್ವರೂಪದರ್ಶನದ ಕಟಾಕ್ಷವಿದೆ. ಕವಿವಿರಾಟ್ ಕುಮಾರವ್ಯಾಸನ ಮಹಿಮೆಗೆ ಕಾರಣ : ಅವನ ನಡುಗನ್ನಡದ ಭಾಮಿನೀಗಣದ ತರಂಗಶೈಲಿಯ ಸುಲಭಸರಳತೆ ಮಾತ್ರವಲ್ಲ; ಪ್ರವಾಹ ಪೂರ್ಣವಾದ ಪರ್ವತ ಭಾಗೀರಥಿಯ ಅದಮ್ಯವೇಗದ ಭೀಮಗಮನ ವಿನ್ಯಾಸದಿಂದ ಮುನ್ನುಗ್ಗುವ ಆತನ ಪ್ರತಿಭೆಯೊಂದೇ ಅಲ್ಲ ; ಹೆಮ್ಮೋಡದಂತೆ ದಿಗಂತದಿಂದ ಅನಿರೀಕ್ಷಿತವಾಗಿ ಮೇಲ್ವಾಯುವ ಅವನ ಕಲ್ಪನಾಶಕ್ತಿ, ಕಾರ‍್ಗಾಳಿಯಂತೆ ಬೀಸಿ ಬಡಿಯುವ ಅವನ ಭಾವಾವೇಗ, ಮಿಂಚಿನ ಬಳ್ಳಿಯಂತೆ ಅಲ್ಲಲ್ಲಿ ತಳತಳಿಸುವ ಆತನ ರೂಪಕಾದಿಗಳ ರುದ್ರರಮ್ಯತೆ, ಸಿಡಿಲು ಗುಡುಗಿನ ಡಮರು ಡಿಂಡಿಮಗಳನ್ನೆ ಹಿಡಿದು ಬಡಿದು ಕುಣಿವ ನಾದತಾಂಡವನಂತಹ ಆತನ ರುದ್ರನೃತ್ಯಶೈಲಿ-ಇವು ಮಾತ್ರವೆ ಕಾರಣವಲ್ಲ, ಗದುಗಿನ ಭಾರತದ ಜನಪ್ರಿಯತೆಗೆ. ಕವಿವಿರಾಟ್ ಕುಮಾರವ್ಯಾಸನ ಕಾವ್ಯಲಕ್ಷ್ಮಿಗೆ ಆಕೆಯ ನಾಡಿಯ ನಿತ್ಯಸ್ಪಂದನಗಳೇನೋ ನಿಜ, ಮೇಲೆ ಹೇಳಿದ ಗುಣಗಳೆಲ್ಲ. ಏತೆಗೆ ಬಹು ಮುಖ್ಯವಾಗಿ, ಅವನ ಮಹಿಮೆಗೆ ಕಾರಣ- ಆತನ ಧರ್ಮದೃಷ್ಟಿ; ಆತನ ಭಗವದ್ ಭಕ್ತಿ, ಆತನ ಋಷಿದರ್ಶನ.

ಶೈಲಿಯ ನುಣ್ಪು, ಧ್ವನಿಸೂಕ್ಷ್ಮತೆ, ವ್ಯವಹಾರ ಭೂಮಿಕೆಯಲ್ಲಿ ನಡೆಯುವ ನಾಗರಿಕ ವ್ಯಾಪಾರ ನಿರೂಪಣೆಯಲ್ಲಿ ಮೈದೋರುವ ನಯರುಚಿಯ ಸಂಸ್ಕೃತಿ, ಪ್ರಕೃತಿ ಪ್ರಪಂಚದ ವಿವರಪರಿಜ್ಞನ, ಪ್ರಕೃತಿಸೌಂದರ‍್ಯದಲ್ಲಿ ಗಾಢಮೋಹ, ಅದರ ಬಣ್ಣನೆಯಲ್ಲಿ ಅನುರಕ್ತಿ, ಅದರ ಶತಸಹಸ್ರಮುಖವಾದ ವೈವಿಧ್ಯದ ಒಂದೊಂದು ವಿವರದಲ್ಲಿಯೂ ಅಕ್ಕರೆಯಿಂದುಣ್ಮುವ ಆಸಕ್ತಿ- ಇತ್ಯಾದಿ ಕಲಾದೃಷ್ಟಿಯಿಂದ ಪಂಪನಿಗೆ ದ್ವಿತೀಯನೂ ಆಗದಿದ್ದರೂ ಭಾವತೀಕ್ಷ್ಣತೆಯಲ್ಲಿ, ರಸಾವೇಶಧಲ್ಲಿ, ಪ್ರತಿಭಾಪ್ರವಾಹದ ದುರ್ದಮ್ಯ ವೇಗದಲ್ಲಿ, ಸಂಸ್ಕೃತಿಗೆ ತುಸು ದೂರವಾದರೂ ಪ್ರಕೃತಿಸಹಜವಾದ ಪಾರ್ವತಾರಣ್ಯಕ ರುಂದ್ರ ರೂಕ್ಷತಾ ಶಕ್ತಿಯಲ್ಲಿ, ಸರ್ವವನ್ನೂ, ಸರ್ವರನ್ನೂ, ಸರ್ವಕಾಲದಲ್ಲಿಯೂ ಸರ್ವಭಾವದಲ್ಲಿಯೂ ಭಗವದ್‌ಭಕ್ತಿಯ ಶ್ರೀಮಂತಕಾಂತಿಯ ಕಣ್ಣಿನಿಂದಲೆ ಕಾಣುವ ವಿರಾಡ್‌ದರ್ಶನದಲ್ಲಿ , ಲೌಕಿಕ ಆಗಮಿಕ ಐಹಿಕ ಆಮುಷ್ಮಿಕ ಎಂದು ಕವಲೊಡೆಯದೆ ಹಂಚದೆ ಅವಿಭಕ್ತವಾಗಿ ಆಕಾಶೋನ್ನತವಾಗಿ ಬ್ರಾಹ್ಮಭೂಮವಾಗಿ ಪರಮಪುರುಷಾರ್ಥ ಸಂಸ್ಪರ್ಶಿಯಾಗಿ, ಬದುಕಿಗೆ ಬೆಳಕಿತ್ತು ಬಾಳನ್ನು ಹುರಿದುಂಬಿಸುವ ಆತ್ಮಶ್ರೀಯ ದಿವ್ಯಾಗ್ನಿಯಲ್ಲಿ ಆದಿಕವಿ ಪಂಪನಿಗೂ ಅದ್ವಿತೀಯನಾಗಿ ಆತನನ್ನೂ ದ್ವಿತೀಯನನ್ನಾಗಿ ಮಾಡುವ ಯೋಗಿ ಕವಿ ಪೂಜ್ಯ ನಾರಣಪ್ಪ.

ಕುಮಾರವ್ಯಾಸ ಕಂಡ ಕೃಷ್ಣ ಅವನ ಆ ದರ್ಶನದ ಪ್ರತಿಮೆಯಾಗಿ ಮೂಡಿದ್ದಾನೆ. ಆತ ನರನಾಟಕದ ಸೂತ್ರಧಾರಿ; ಮಾನುಷಪಾತ್ರಗಳೆಲ್ಲವೂ ನಟವರ್ಗಮಾತ್ರ, ಹಾಹೆಮಾತ್ರ; ಆದರೂ ಆ ಸೂತ್ರಧಾರಿಯೆ ನರನಾಟಕವ ತಾನೇ ನಟಿಸಿ ತೋರುತ್ತಿದ್ದ; ಸೂತ್ರಧಾರಿ ಪಾತ್ರಧಾರಿಯಾದರೆ ಹೇಗೆ ವರ್ತಿಸಬೇಕೋ ಹಾಗೆ ವರ್ತಿಸುತ್ತಿದ್ದ-ಹೀಗೆಂದು ಹಿಂದೆಯೇ ಹೇಳಿದೆವು. ಖಳಪಾತ್ರಗಳೆಂದು ಭಾವಿತವಾಗಿರುವ ಕೌರವ ಕರ್ಣರು ತಮ್ಮ ಪಾತ್ರಾಭಿನಯದಲ್ಲೆ ಮೈಮರೆತಿದ್ದರೂ ತಾವು ಪಾತ್ರಮಾತ್ರರು ಎಂಬುದನ್ನು ಕಂಡಿದ್ದರು. ಕೌರವನಲ್ಲೂ ಈ ಭಾವ ಮೂಡಿದ ಪ್ರಸಂಗವನ್ನು-ಆವಿಶ್ವರೂಪದರ್ಶನ ಪ್ರಸಂಗವನ್ನು-ನೆನೆದುಕೊಂಡರೆ ಸಾಕು. ಕೃಷ್ಣನನ್ನು ಕಟ್ಟಲೆಂದು ಪ್ರಯತ್ನಿಸಿದ ಕೌರವ, ತನ್ನೊಳಗು ಹೊರಗುಗಳನ್ನು ಭಿನ್ನವಾಗಿ ಆಡಿಸುತ್ತಿರುವ ಆ ಸೂತ್ರಧಾರಿಯ ಕೈಚಳಕವನ್ನು ಅರಿತುಕೊಳ್ಳುತ್ತಾನೆ. ಕವಿ ದಿವ್ಯವಾಗಿ ಹೇಳಿದ್ದಾನೆ ಅದನ್ನು. ಇದಕ್ಕಿಂತ ಬೇಕೆ ಕುಮಾರವ್ಯಾಸನ ದಿವ್ಯದರ್ಶನಕ್ಕೆ ದೃಷ್ಟಾಂತ. ನಟನು ತನ್ನ ನಿಜತ್ವವನ್ನೂ ತನ್ನನ್ನು ಚಾಲಿಸುವ ಸೂತ್ರಧಾರನನ್ನೂ ಅರಿತುಕೊಂಡೂ ಕೂಡ ತನ್ನ ಪಾತ್ರದ ಅಭಿನಯದಲ್ಲಿ ರಸಾಭಾಸವಾಗದಂತೆ ತಾದಾತ್ಮ್ಯದಿಂದ ಅಭಿನಯಿಸುವ ಈ ಅನ್ಯಾದೃಶ ರೀತಿಯನ್ನು ನೋಡಿ ಮೂಕರಾಗುತ್ತೇವೆ.

ಇಲ್ಲಿ ಕುಮಾರವ್ಯಾಸ ಭಗವದ್‌ಪಾರಮ್ಯವನ್ನು ಹೇಳುವ ಭರದಲ್ಲಿ ಔಚಿತ್ಯವನ್ನು ಭಂಗಗೊಳಿಸಿಲ್ಲ. ಭಗವದ್ದೃಷ್ಟಿಯೆ ಪರಮವಾದರೂ ಅದು ಮಾನುಷದೃಷ್ಟಿಯನ್ನು ಎಷ್ಟರಮಟ್ಟಿಗೆ ಆಕ್ರಮಿಸಿಕೊಂಡರೆ ಸುಂದರ ಎಂಬುದನ್ನು ಕುಮಾರವ್ಯಾಸ ಬಲ್ಲ. ಮಾನುಷಶಕ್ತಿ ದೈವಶಕ್ತಿಯ ಮುಂದೆ ನಿಲ್ಲಬಾರದು ನಿಲ್ಲಲಾರದು, ಎಂಬುದನ್ನು ಕಂಡಂತೆಯೆ ಅದೇ ಮಾನುಷಶಕ್ತಿ ದೈವ ಶಕ್ತಿಯನ್ನು ಭಕ್ತಿಯಿಂದ ಗೆಲ್ಲಬಲ್ಲದು ಎಂಬ ದರ್ಶನವನ್ನೂ ಅವನು ಕಂಡಿದ್ದ. ಭಕ್ತಿಯ ವಿವಧಾವಸ್ಥೆಯನ್ನು ವಿವಿಧಪ್ರಕಾರಗಳನ್ನು ಕುಮಾರವ್ಯಾಸ ಚಿತ್ರಿಸಬಲ್ಲ. ಆದರೂ ಅವನು ಕ್ಲೈಬ್ಯಜನ್ಯವಾದ ಭಕ್ತಿಯನ್ನು ಪ್ರತಿಪಾದಿಸಹೋಗಿಲ್ಲ. ಕುಮಾರವ್ಯಾಸನ ಭಕ್ತಿ ದೈನ್ಯ ಭಕ್ತಿಯಲ್ಲ, ಕ್ಲೆಚಿಭಕ್ತಿಯಲ್ಲ; ವೀರಭಕ್ತಿ. ಇದನ್ನು ಭೀಷ್ಮಪರ್ವದಲ್ಲಿ, ಕೃಷ್ಣನು ಚಕ್ರವನ್ನು ಕೈಯಲ್ಲಿ ಹಿಡಿದ ಸನ್ನಿನವೇಶದಲ್ಲಿ ಕಾಣಬಹುದು. ಭಗವಂತನೂ ದಾರಿತಪ್ಪಬಲ್ಲ. ಅಂತಹ ವೇಳೆ ಭಕ್ತ ತಿದ್ದಬಲ್ಲ-ಶಕ್ತನಾಗಿದ್ದರೆ! ಭೀಷ್ಮ ಅಂತಹ ಭಕ್ತ. ಕುಮಾರವ್ಯಾಸನದು ಭೀಷ್ಮ ಭಕ್ತಿ:

ಹೋದುದಪಮೃತ್ಯು, ಲೋಕಕೆ
ತೀದುದಿಲ್ಲಾಯುಷ್ಯ, ಮಹದಪ
ವಾದ ದೇವಂಗಾಗಿ ತಪ್ಪಿತು, ಮುಚ್ಚುಮರೆಯೇಕೆ?
ಕಾದುಕೊಂಡನು ಭೀಷ್ಮನೀ ಕಮ
ಲೋದರನ ಕೆರಳಿಚಿಯು ಭಕುತಿಯ
ಲಾದರಿಸಿದನು ಪುಣ್ಯವೆಂದನು ಕಮಲಭವ ನಗುತ

ಹೀಗೆ ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಸರ್ವವನ್ನೂ ಭಗವದ್ದರ್ಶನದ ಸೂರ‍್ಯತೇಜಸ್ಸಿನಿಂದಲೆ ಕಂಡಿದ್ದಾನೆ. ಮಹಾಭಾರತದಲ್ಲಿ ಇರುವ ಮಾನವಜೀವನದ ಜಟಿಲಕಥೆಯನ್ನು ಕಲಾಮಯವಾಗಿ ಚಿತ್ರಿಸುತ್ತಲೆ ಅದಕ್ಕೆ ಪ್ರೇರಕ-ತಾರಕವಾಗಿರುವ ಭಗವತ್‌ಶಕ್ತಿಯ ಲೀಲೆಯನ್ನೂ ಮಹಿಮೆಯನ್ನೂ ಬಾಯ್ತುಂಬ ಬಣ್ಣಿಸಬೇಕೆಂಬುದರಲ್ಲಿ ಆ ಸಮನ್ವಯವಿದೆ, ಕುಮಾರವ್ಯಾಸನ ವಿಶಿಷ್ಟವಾದ ಸಮ್ಯಕ್ ದರ್ಶನವಿದೆ.

ಮಹಾಕವಿಯನ್ನು ಅನುಕರಣಮಾಡುವುದಕ್ಕೆ ಎಲ್ಲರೂ ಬಯಸುತ್ತಾರೆ. ಆದರೆ ಮಹಾಕವಿ ಅನುಕರಣೆಗೆ ಸಿಕ್ಕುವುದಿಲ್ಲ. ಅನುಕರಣಶೀಲ ಅವನನ್ನು ದಕ್ಕಿಸಿಕೊಳ್ಳಲೂ ಆರ. ಆ ದೃಷ್ಟಿಯಿಂದ ನೋಡುವುದಾದರೆ ಮಹಾಕವಿ ಪಥ ದೀರ್ಘವಾಗಿರುತ್ತದೆಂದು ಹೇಳುವುದು ಕಷ್ಟ. ಪಂಪ ಚಂಪೂಯುಗದ ನಾಯಕನಾದ. ಅವನನ್ನು ಅನುಕರಿಸಿದವರೆಷ್ಟು ಕವಿಗಳೊ. ಚಂಪೂಕಾವ್ಯಪಥ ಕೊರಕಲು ಬೀಳುವಷ್ಟು ಆ ದಾರಿಯಲ್ಲಿ ಸಾಗಾಟ ನಡೆಯಿತು. ಆ ಕೊರಕಲುದಾರಿಯನ್ನು ಬಿಟ್ಟು ಹರಿಹರ ರಾಘವಾಂಕ ಕುಮಾರವ್ಯಾಸರು ಹೊರಟರು. ಆ ರಾಜಮಾರ್ಗ ಮೋಹಕವಾಗಿ ಕಂಡಂತೆ, ಸುಭದ್ರವಾಗಿ ಕಂಡಂತೆ, ಮುಂದೆ ಬಂದ ಕವಿಗಳಿಗೆ ಈ ಜನತಾಮಾರ್ಗ ತೊರಲಿಲ್ಲವೇನೊ. ಅಂತೂ ಈ ಕಾವ್ಯಪಥದಲ್ಲಿ ಚಂಪೂಮಾರ್ಗದಲ್ಲಾದಷ್ಟು ಗೊಂದಲವಾಗಿರಲಾರದು. ಕುಮಾರವ್ಯಾಸನನ್ನು ಅನುಕರಿಸಿದವರಿಗೆ ಲೆಕ್ಕವಿಲ್ಲ; ಆದರೆ ಅವನನ್ನು ಅನುಸರಿಸಿದವರು ಮಾತ್ರ ವಿರಲ. ಕುಮಾರವಾಲ್ಮೀಕಿ, ವಿಠಲನಾಥ, ಲಕ್ಷ್ಮೀಶ, ಕನಕದಾಸರು, ಭಾಸ್ಕರ ಅಷ್ಟೆ ಏಕೆ ಚಂಪೂಮಾರ್ಗದ ಷಡಕ್ಷರಿ ಎಲ್ಲರೂ ಅವನ ಪ್ರಭಾವಕ್ಕೆ ಒಳಗಾಗಿದ್ದಾರೆ. ಅವನನ್ನು ಅರಗಿಸಿಕೊಳ್ಳುವುದಕ್ಕೆ ಎಷ್ಟು ಕಷ್ಟ ಎನ್ನುವುದಕ್ಕೆ ಒಂದೇ ನಿದರ್ಶನವನ್ನು ಕೊಡಬಹುದು. ಕುಮಾರ ವ್ಯಾಸನ ಕಿರಾತಾರ್ಜುನೀಯ ಪ್ರಸಂಗದ ಕಥಾಭಾಗವನ್ನು ಪಂಕ್ತಿ ಪಂಕ್ತಿಯಾಗಿ ಷಡಕ್ಷರಿ ಅನುವಾದ ಮಾಡಿದ್ದಾನೆ. ಆದರೆ ಎಷ್ಟರಮಟ್ಟಿಗೆ ಅನುರಣನ ಮಾಡಲಾಗಿದೆ ನೋಡಿ:

ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ? ಹಾಲಾಲಹಲವ ನೊಣ
ನೆಂಜಲಿಸುವುದೆ?ವಡಬಶಿಖಿ ನೆನೆಯುವುದೆ ತುಷಾರದಲಿ?
ಕಂಜನಾಳದಿ ಕಟ್ಟುವಡೆವುದೆ
ಕುಂಜರನು? ನರಶರದ ಜೋಡಿನ
ಜುಂಜುವೊಳೆಯಲಿ ಜಾಹ್ನವೀಧರ ಜಾರುವನೆ? ಯೆಂದ!

ಇದು ಕುಮಾರವ್ಯಾಸ ಪದ್ಯ. ಅದರ ಅನುವಾದವಿಲ್ಲಿದೆ:

ಮಂಜಿನ ಪುಂಜಮೊತ್ತರಿಸಿ ಮುತ್ತಿ ಮುಸುಂಕೆ ಭಯಾರ್ತಿಗೊಳ್ವನೇ
ಕಂಜಸಖಂ? ಪತಂಗತತಿ ಪಾಯ್ದೊಡೆ ಬೆರ್ಚುಗುಮೇ ದವಾಗ್ನಿವಾ
ತಂ? ಜವದಿಂ ಪಳಂಚೆ ಗಿರಿ ಕಂಪನವಾಂಪುದೆ? ಪಾಂಡುಪುತ್ರನಾ
ತಂ ಜಡಿದೊತ್ತೆ ಜಾಱ ಪೆಱಸಾರ್ವನೆ ಧೀರ ಧನಂಜಯಾಂಬಕಂ?

ಇದಕ್ಕಿಂತ ಬೇಕೆ ಬೇರೆಯ ನಿದರ್ಶನ, ಕುಮಾರವ್ಯಾಸ ಅನುವಾದಕ್ಕೆ ಸಿಕ್ಕನು ಎಂಬುದಕ್ಕೆ?

ಗ್ರಂಥಸಂಪಾದನ-ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಈ ಸಂಪುಟವನ್ನು ಸಂಪಾದಿಸಿದ್ದೇವೆ. ಅಂದರೆ ಸಂಶೋಧನೆಗೆ ಗಮನ ಇತ್ತಿಲ್ಲವೆಂದಲ್ಲ. ಎಲ್ಲೆಲ್ಲಿ ಸಾಧ್ಯವೊ, ಎಲ್ಲೆಲ್ಲಿ ಅನಿವಾರ‍್ಯವೊ ಅಲ್ಲಿ ನಾವು ನಾಲ್ಕಾರು ಓಲೆಯ ಪ್ರತಿಗಳನ್ನು ನೋಡಿದ್ದೇವೆ. ಆಗ ಮುಖ್ಯವಾಗಿ ನಾವಿಟ್ಟುಕೊಂಡಿರುವ ಪ್ರತಿಗಳು ಇವು.

೧. ಕ ೨೦೫ನೆಯ ಪ್ರತಿ; ಇದು ತಕ್ಕಮಟ್ಟಿಗೆ ಶುದ್ಧ, ವಿಶ್ವಾಸಾರ್ಹ.

೨. ಎ ೫೭ನೆಯ ಕಲ್ಲಚ್ಚಿನ ಪ್ರತಿ ; ಇದು ೧೮೫೧ರಲ್ಲಿ ಮಂಗಳೂರಿನಲ್ಲಿ ಮುದ್ರಿತವಾದದ್ದು. ಇದು ಕ ಪ್ರತಿಯನ್ನೆ ಬಹುಮಟ್ಟಿಗೆ ಅನುಸರಿಸಿದೆ. ಇದರಲ್ಲಿ ಮೊದಲ ನಾಲ್ಕು ಪರ್ವಗಳು ಮಾತ್ರ ಇವೆ.

೩. ಶ್ರೀ ಟಿ. ಎನ್.ಕೃಷ್ಣಯ್ಯ ಶೆಟ್ಟರ ಮುದ್ರಿತ ಪ್ರತಿ : ಸು.೧೯೨೫. ಇದರಲ್ಲಿ ೧೮ ಪರ್ವಗಳು (ತಿಮ್ಮಣ್ಣನ ಉತ್ತರ ಭಾರತವೂ ಸೇರಿ) ಇವೆ. ಈ ಮುದ್ರಣಕ್ಕೆ ಮಂಗಳೂರಿನ ಪ್ರತಿಯನ್ನೆ ಅನುಸರಿಸಿರುವಂತೆ ಕಾಣುತ್ತದೆ. ಆದರೂ ಅದರಲ್ಲಿಲ್ಲದ ಕೆಲವು ಸಂಧಿಗಳು (ಉದಾ: ವಿರಾಟಪರ್ವದಲ್ಲಿ ಬರುವ ಜಟ್ಟಿಗಳ ಕಾಳಗದ ಪ್ರಸಂಗವನ್ನು ವರ್ಣಿಸುವ ಒಂದು ಸಂಧಿ) ಹೇಗೊ ಯಾರ ಕೈಯಿಂದಲೊ ಸೇರಿಕೊಂಡಿವೆ.

೪. ಓರಿಯಂಟಲ್ ಲೈಬ್ರರಿಯ ಹಿಂದಿನ ಪ್ರಕಟಣೆಗಳಲ್ಲಿ ಮೊದಲ ನಾಲ್ಕು ಪರ್ವಗಳು ಏತಕ್ಕೂ ಪ್ರಯೋಜನವಾಗಲಿಲ್ಲ. ಬಹಳ ತಪ್ಪು ದಾರಿ ಹಿಡಿದವೆ. ಯುದ್ಧ ಪಂಚಕವನ್ನು ಮಾನ್ಯ ಶ್ರೀ ಬಿ. ಎಂ. ಶ್ರೀಕಂಠಯ್ಯನವರ ಪ್ರಧಾನ ಸಂಪಾದಕತ್ವದ ನೇತೃತ್ವದಲ್ಲಿ ಶ್ರೀ ಡಿ.ಎಲ್. ನರಸಿಂಹಾಚಾರ‍್ಯರು (ಭೀಷ್ಮಪರ್ವವನ್ನು) ಶ್ರೀ ಎನ್. ಅನಂತರಂಗಾಚಾರ‍್ಯರು ಉಳಿದ ಪರ್ವಗಳನ್ನು ಸೊಗಸಾಗಿ ಸಂಪಾದಿಸಿದ್ದಾರೆ. ಅವರು ಅಂದು ತಮಗೆ ಸಿಕ್ಕಿದ ಎಲ್ಲ ಸಾಮಗ್ರಿಗಳನ್ನೂ ನೋಡಿ, ತೂಗಿ, ಶ್ರೇಷ್ಠವಾಗಿ ಗ್ರಂಥ ಸಂಪಾದನೆ ಮಾಡಿದ್ದಾರೆ. ಉದ್ಯೋಗ ಪರ್ವವನ್ನು ಓರಿಯಂಟಲ್ ಲೈಬ್ರರಿಯ ಶ್ರೀ ಕೃಷ್ಣ ಜೋಯಿಸರು ಸಂಪಾದಿಸಿದ್ದಾರೆ. ಇವರೂ ಹತ್ತಾರು ಓಲೆಯ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು, ಪಾಂಡಿತ್ಯ ಪೂರ್ಣವಾದ ರೀತಿಯಲ್ಲಿ ಸಂಪಾದಿಸಿದ್ದಾರೆ. ನಾವು ಮೊದಲ ನಾಲ್ಕು ಪರ್ವಗಳಿಗೆ ಮೊದಲ ಮೂರು ಪ್ರತಿಗಳನ್ನು ಆಶ್ರಯಿಸಿದ್ದೇವೆ. ಕಲ್ಲಚ್ಚಿನ ಪ್ರತಿ ತಕ್ಕಮಟ್ಟಿಗೆ ಶುದ್ಧವಾಗಿದ್ದರೂ ಅದರಲ್ಲಾಗಲಿ, ಮೊದಲ ಓರಿಯಂಟಲ್ ಲೈಬ್ರರಿಯ ಪ್ರತಿಗಳಲ್ಲಾಗಲಿ, ಇತರ ಸಂಗ್ರಹಗಳಲ್ಲಾಗಲಿ ಇರದ ಸುಂದರವಾದ ಪಾಠಾಂತರವನ್ನು ಕ ೨೦೭ನೆಯ ಪ್ರತಿಯಲ್ಲಿ ಕಂಡಿದ್ದೇವೆ. ಇಲ್ಲಿ ಅದಕ್ಕೆ ಒಂದೆ ನಿದರ್ಶನವನ್ನು ನೀಡಬಹುದು. ಆದಿಪರ್ವದಲ್ಲಿ ಈ ಪ್ರಸಂಗ ಬರುತ್ತದೆ. ಭೀಮ ದುರ‍್ಯೋಧನರ ವೈರವನ್ನು ಕಂಡು ಮಮ್ಮಲಮರುಗಿದ ಭೀಷ್ಮರು ಹೀಗೆನ್ನುತ್ತಾರೆ:

‘ಮಂಗಳದ ಬೆಳದಿಂಗಳಿನ ಮಳೆ ಸುರಿದುದೆ ಮಹಾದೇವಾ’ ಎಂದು ಈ ಮಾತೇನೊ ಸೊಗಸಾಗಿರುವಂತೆ ಕಂಡರೂ ಅರ್ಥವಾಗಲಿಲ್ಲ. ಸಂಗ್ರಹವೊಂದರಲ್ಲಿ ಹೀಗಿತ್ತು:

‘ಮಂಗಳದ ಬೆಳುದಿಂಗಳಿಗೆ ಮಳೆಸುರಿದಂತೆ ಹಾಯೆಂದು’ ಎಂದು. ಇಲ್ಲಿ ಅರ್ಥಸ್ಪಷ್ಟತೆ ದೊರೆಯಿತೆ ವಿನಾ ಮೂಲದ ಕವಿಯ ರೂಪಕದ ಸೌಂದರ‍್ಯ ಕಂಡಂತಾಗಲಿಲ್ಲ. ಆಗ ಆ ಓಲೆಯ ಪ್ರತಿಯಲ್ಲಿ ಕಂಡಿತು ಈ ಸುಂದರವಾದ ಪಾಠಾಂತರ:

ಮಂಗಳದ ಬೆಳದಿಂಗಳಿನ ಮಳೆ ಸುರಿದುದೆ ಮಹಾದೇವಾ! ಎಂದು. ಮಂಗಳದ ಬೆಳೆಗೆ ಇಂಗಳದ (ಕಾದ ಕೆಂಡದ) ಮಳೆ ಸುರಿಯಿತಲ್ಲಾ ಎನ್ನುವ ಸುಂದರವಾದ ರೂಪಕ ಕಂಡಿತು. ಹೀಗೆ ಕಾಣಬೇಕಾದ ಕುಮಾರವ್ಯಾಸನ ನೈಜಪ್ರತಿಭೆ ಇನ್ನೂ ಉಳಿದುಕೊಂಡಿದೆ. ಮಿತಕಾಲದಲ್ಲಿ ನಮ್ಮ ಶಕ್ತಿಗೆ ಸಾಧ್ಯವಾದಷ್ಟನ್ನು ನಾವಿಲ್ಲಿ ಸಾಧಿಸಿದ್ದೇವೆ. ಈ ಹಾದಿಯಲ್ಲಿ ಆಗಬೇಕಾದ ಸಾಧನೆ ಅಗಾಧವಾಗಿದೆ.

ಉದ್ಯೋಗಪರ್ವಕ್ಕೆ ಪ್ರಚಲಿತ ಮುದ್ರಿತ ಪ್ರತಿಯನ್ನೂ ಓರಿಯಂಟಲ್ ಲೈಬ್ರರಿಯ ಸಂಶೋಧಿತ ಪ್ರತಿಯನ್ನೂ ಆಧಾರವಾಗಿಟ್ಟುಕೊಂಡಿದ್ದೇವೆ. ಆ ಗ್ರಂಥ ಸಂಪಾದನಕ್ಕೆ ಅವರು ಪ್ರಚಲಿತವಾದ ಪ್ರತಿಯನ್ನು ಬಿಟ್ಟುಬಿಟ್ಟಿರುವುದರಿಂದ ಹೀಗೆ ಮಾಡಬೇಕಾಯಿತು. ಉಳಿದ ಐದು ಪರ್ವಗಳಿಗಾಗಿ ಮೇಲೆ ಹೇಳಿದ ಓರಿಯಂಟಲ್ ಲೈಬ್ರರಿಯ ವಿಶುದ್ಧವಾದ ಪ್ರತಿಗಳನ್ನೆ ಆಶ್ರಯಿಸಿದ್ದೇವೆ. ಇಲ್ಲಿಯೂ ಪ್ರಚಲಿತವಾದ ಪ್ರತಿಯನ್ನು ಸಂಪಾದಕರು ಕೈ ಬಿಟ್ಟಿರುವುದರಿಂದ ನಾವು ಅದನ್ನೂ ಗಮನದಲ್ಲಿಟ್ಟುಕೊಂಡಿದ್ದೇವೆ. ಪ್ರಚಲಿತಪ್ರತಿಯನ್ನು ಸಂಪೂರ್ಣವಾಗಿ ತ್ಯಜಿಸುವಂತಿಲ್ಲವೆಂಬುದಕ್ಕೆ ಒಂದೇ ನಿದರ್ಶನವನ್ನು ಕೊಡುತ್ತೇವೆ.

ಆ ಮಹಾಸ್ತ್ರದ ಹಾನಿ ರೋಷದ
ತಾಮಸಾಗ್ನಿಯ ನೋಡಿ ಬಿಡಲು
ದ್ದಾಮನರ್ಜುನ ಕೊಂಡನಗ್ಗದ ಜಾತಮನ್ಯುವನು

(ಓ.ಲೈ.ಪ್ರ.) ಕರ್ಣಪರ್ವ ಸಂಧಿ ೨೩, ಪದ್ಯ ೪೭,

ಇದಕ್ಕೆ ಪಾಠಾಂತರ:-ನೊದೆದು (ಚ) ಲುರಿದು (ತ.ದ.ಪ)

ಪ್ರಚಲಿತ ಪ್ರತಿಯಲ್ಲಿ ಹೀಗಿದೆ :

. . . . ರೋಷದ
ತಾಮಸಾಗ್ನಿಯ ನೂದಿ ಬಿಡಲು
ದ್ದಾಮ . . . . . .

ಇದನ್ನೆ ನಾವು ಸ್ವೀಕರಿಸಿಕೊಂಡಿದ್ದೇವೆ. ಇಂತಹವು ಹತ್ತಾರು ಸನ್ನಿವೇಶಗಳು ಬಂದಿವೆ.

ಒಟ್ಟಿನಲ್ಲಿ ನಾವು ಸಿದ್ಧಗೊಳಿಸಿರುವುದು ಜನಪ್ರಿಯ ಪ್ರತಿ ಮಾತ್ರ. ಸಂಶೋಧಿತ ವಿಶುದ್ಧ ಪ್ರತಿ ಬರದತನಕ ಕುಮಾರವ್ಯಾಸನ ಪ್ರತಿಭೆಯ ನಿಜಸ್ವರೂಪದ ಸಂಪೂರ್ಣದರ್ಶನವಾಗುವುದಿಲ್ಲ. ಹಾಗೆ ಮಾಡಲು ಅತ್ಯಂತ ಪ್ರಾಚೀನವಾದ ಹಾಗೂ ಗದುಗಿನ ಸುತ್ತಮುತ್ತಣ ಪ್ರದೇಶದಲ್ಲಿ ದೊರೆಯಬಹುದಾದ ಪ್ರತಿಗಳನ್ನೆಲ್ಲಾ ಸಂಗ್ರಹಿಸಬೇಕು, ೧೪-೧೫ನೆ ಶತಮಾನದ ಶಾಸನಗಳನ್ನೆಲ್ಲಾ ಸಂಗ್ರಹಿಸಿ ಅಭ್ಯಸಿಸಬೇಕು. ಇದು ಒಂದೆರಡು ದಶಕದ ನಾಲ್ಕಾರು ವಿದ್ವಾಂಸರ ಕೆಲಸ.

“ಕೊನೆಯದಾಗಿ , ಈ ಪ್ರಕಾಶನ ಕುಮಾರವ್ಯಾಸನನ್ನು ಮನೆಮನೆಗೂ ಕೊಂಡೊಯ್ಯುವ ಪ್ರಯತ್ನಮಾಡಿದೆ. ಮತ್ತೆ ಆ ದಿನ, ಕಾವ್ಯರಸಾಸ್ವಾದನದಿಂದ ಭವದ ಭಾರವನ್ನು ಹಗುರ ಮಾಡಿಕೊಳ್ಳುವ ಆ ದಿನ, ಬೇಗ ಬರುವಂತಾದರೆ ನಾವೆಲ್ಲ ಧನ್ಯರು. ನಮ್ಮ ಪುಣ್ಯಕ್ಕೆ ನಮಗೊಂದು ವಿಶೇಷ ಸೌಕರ‍್ಯವಿದೆ. ಅಕ್ಷರ ಪರಿಚಯವಿಲ್ಲದವರೂ ಪುಸ್ತಕ ಕ್ರಯ ಕೊಡಲಾರದವರೂ ಗಮಕಿಗಳ ಅನುಗ್ರಹದಿಂದ ನಾರಣಪ್ಪನ ರಸಾವೇಶದ ರುಚಿಯನ್ನು ಮನದಣಿಯ ಸವಿಯಬಹುದು. ಗದುಗಿನ ಭಾರತವನ್ನು ಕುರಿತು ಮಾತನಾಡುವಾಗ ಅದರ ಅಮೃತಸುಖದ ವಿತರಣೆಗೆ ದಿನ ದಿನವೂ ದುಡಿಯುತ್ತಿರುವ ಗಮಕಿಗಳನ್ನು ನೆನೆಯದಿರುವುದು ಸಾಧ್ಯವಿಲ್ಲ. ನಾರಣಪ್ಪನ ಕಾವ್ಯದ ಬದುಕಿಗೆ ಗಮಕ ಕಲೆ ಶ್ವಾಸೋಚ್ಛ್ವಾಸದಂತೆ ಅತ್ಯಾವಶ್ಯಕ. ಓದಿ ಅಥವಾ ಓದಿಸಿ ಕೇಳಿದಲ್ಲದೆ ಕುಮಾರವ್ಯಾಸನ ವಾಣಿಯ ಮಹತ್ತು ಅರಿವಾಗುವುದಿಲ್ಲ. ಕವಿ ಪ್ರತಿಭೆಯ ಸೂಕ್ಷ್ಮ ಸೌಂದರ‍್ಯಗಳನ್ನು ಅರಿಯಲು ವಿಮರ್ಶಕರಾಗಿ ಅಥವಾ ವಿಮರ್ಶಕರಿಂದ ಗಮಕಿಗಳರಿತು, ಗಮಕಿಗಳಿಂದ ವಿಮರ್ಶಕರನುಭವಿಸಿ, ಒಬ್ಬರಿಗೊಬ್ಬರು ನೆರವಾಗಿ ಎರಡೂ ಕಲೆಗಳ ಉಪಾಸಕರು ಅನ್ಯೋನ್ಯತೆಯಿಂದ ಕುಮಾರವ್ಯಾಸನ ಸೇವೆಗೆ ಹೊರಟರೆ ಎಂತಹ ಆಶೀರ್ವಾದವಾದೀತು! ಜನಜೀವನಕ್ಕೆ ಅಂತಹ ಪುಣ್ಯಕಾಲ ಈಗಾಗಲೆ ಸ್ವಲ್ಪ ಮಟ್ಟಿಗೆ ಪ್ರಾರಂಭವಾಗಿದೆ. ಇಂದಿನ ಈ ಪ್ರಕಾಶನವೇ ಮಹೋತ್ಸವವಾಗಿ ಅದಕ್ಕೊಂದು ಸಾಕ್ಷಿಯಾಗಿದೆ.”

“ನಮ್ಮ ಕನ್ನಡನಾಡಿಗೆ ದೇವರು ಸಹ್ಯಾದ್ರಿಯನ್ನು ದಯಪಾಲಿಸಿದ್ದಾನೆ. ತುಂಗಾ ಕಾವೇರಿಯರನ್ನು ದಯಪಾಲಿಸಿದ್ದಾನೆ. ಪಶ್ಚಿಮ ಸಮುದ್ರದ ಸಂಗಸಾನ್ನಿಧ್ಯಗಳನ್ನು ಕೃಪೆ ಮಾಡಿದ್ದಾನೆ. ಜೊತೆಗೆ, ಅವೆಲ್ಲಕ್ಕೂ ಹೆಗಲೆಣೆಯಾಗಿ ನಿಂತರೂ ನಮಗೆ ಒಡನಾಡಿಗಳಾಗಿರುವಂತೆ ಪಂಪ ನಾರಣಪ್ಪರನ್ನೂ ಅನುಗ್ರಹಿಸಿದ್ದಾನೆ. ಅವರ ಬೆಲೆಯರಿತು ಬಾಳು ಅರಳಲಿ, ಆ ವಿಶ್ವಕವಿಗಳಿಬ್ಬರನ್ನೂ ನಮ್ಮವರೆಂದು ಹೇಳಿಕೊಳ್ಳುವ ನಮ್ಮ ಹೆಮ್ಮೆಯ ನೆತ್ತಿ ಮುಗಿಲಿಗೆ ತಾಗುತ್ತಿರಲಿ!”

ಇದು ಸಮಷ್ಟಿರೂಪದ ಒಂದು ಸಹೃದಯ ವಿಮರ್ಶೆ ; ಕನ್ನಡ ನಾಡಿನ ಹಿರಿಯ ಲೇಖಕ ವಿಮರ್ಶಕರ ಬರವಣಿಗೆಗಳಿಂದ ಆಯ್ದು ಕೋದ ತೋರಣನಾಂದಿಯಾಗಿದೆ ಇದು. ಈ ನಾಂದಿಯ ತೋರಣವನ್ನು ಕಟ್ಟುವುದರಲ್ಲಿ ಅಧ್ಯಾಪಕ ತರುಣ ಮಿತ್ರರು ನನಗೆ ನೆರವಾಗಿರುವುದನ್ನು ನೆನೆಯುತ್ತೇನೆ.