ಶ್ರೀಕೃಷ್ಣನ ಪಾತ್ರ ಕುಮಾರವ್ಯಾಸನ ಭಾರತದಲ್ಲಿ ಅತ್ಯಂತ ಪ್ರಧಾನವೂ ವಿಶಿಷ್ಟವೂ ಸರ್ವ ಪ್ರೇರಕವೂ ಚೋದಕವೂ ಆದುದು. ಕವಿಯ ದೃಷ್ಟಿಯಲ್ಲಿ ಆತ ಯಾವುದೋ ಒಂದು ಪಾತ್ರವಲ್ಲ; ನಾಯಕ ಪಾತ್ರವಷ್ಟೆ ಅಲ್ಲ. ಆದರೆ ಪಾತ್ರಧಾರಿಯಾದ ಸೂತ್ರಧಾರಿ. ಹಾಗೆ ಅಲ್ಲದೆ ಅವನು ನಾಯಕಮಾತ್ರನಾಗಿದ್ದರೆ ಕಾವ್ಯದ ಉಳಿದ ಪಾತ್ರಗಳಂತೆ, ಸಾಮಾನ್ಯವಾಗಿ ಉಳಿದ ಕಾವ್ಯಗಳ ನಾಯಕರಂತೆ, ಅವನೂ ಒಂದಿನಿತಾದರೂ ತೊಳಲಾಟಕ್ಕೆ ಒಳಗಾಗುತ್ತಿದ್ದ. ಆದರೆ ಕುಮಾರವ್ಯಾಸನ ಕೃಷ್ಣ ಅವನ ಕಾವ್ಯಚೋದಕ ಶಕ್ತಿಯಾಗಿರುವಂತೆಯೇ, ಶ್ರವಣ ಸುಧಾ ವಿನೂತನ ಕಥನ ಕಾರಣನಾಗಿರುವಂತೆಯೆ, ಆ ಅವನ ಭಾರತದ ಪ್ರೇರಕ, ಕಾರಕಶಕ್ತಿಯೂ ಆಗಿದ್ದಾನೆ. ಎಲ್ಲೆಲ್ಲಿ ಏನೇನು ಆಗಬೇಕಾದರೂ ಅವನ ಕೈವಾಡವಿಲ್ಲದೆ ನಡೆಯುವುದೆ ಇಲ್ಲ. ಹೀಗೆ ಅವನೇ ಎಲ್ಲವನ್ನೂ ಚೋದಿಸಿ ದಿಗ್ದರ್ಶಿಸಿದರೂ ತಾನು ಮಾತ್ರ ಎಲ್ಲೂ ಅತಿ ಎನ್ನುವಂತೆ, ವಿಪರೀತ (ಅಚ್ಞಿಟ್ಟಞZ) ಎನ್ನುವಂತೆ ವರ್ತಿಸುವುದಿಲ್ಲ. ತನ್ನ ಅತಿಮಾನವತೆಯನ್ನು ಮನುಷ್ಯ ಕಟ್ಟಳೆಗೆ ಅಗೌರವವಾಗದಂತೆ ಪ್ರಕಾಶನಗೊಳಿಸುತ್ತಾನೆ. ‘ನರ ನಾಟಕವ ತಾನೇ ನಟಿಸಿ ತೋರಿದನು’ ಎಂದು ಕವಿ ಹೇಳುತ್ತಾನೆ. ಕುಂತಿ ಬಂದರೆ ಕುಳಿತಿದ್ದವನು ಜಗ್ಗನೆದ್ದು ನಮಸ್ಕರಿಸುತ್ತಾನೆ. ಪಾಂಡವರು ತನ್ನ ಪರಮಭಕ್ತರಾಗಿದ್ದರೂ ‘ಆಳೊಡೆಯನೆಂದೆಂಬ ಭೇದವ ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ -’

ತನ್ನ ಭಕ್ತರಿಗಾಗಿ ಶ್ರೀಕೃಷ್ಣ ಕರಗುತ್ತಿದ್ದನಂತೆ; ತನ್ನ ತಂದೆ ತಾಯಿ, ಮನೆಮಠ, ಮಡದಿ ಮಕ್ಕಳನ್ನೂ ಗಮನಿಸುತ್ತಲಿರಲಿಲ್ಲವಂತೆ! ‘ಒಲಿದವರನುಜ್ಜೀವಿಸುವ ಬಗೆ ಬಲುಹು ಮುರ ಮಥನಂಗೆ ಮುನಿದೊಡೆ ಹಣೆಯಬರಹವ ತೊಡೆವನಲ್ಲದೆ ಬಳಿಕ ಸೈರಿಸನು’ ಎಂದೂ, ‘ಕೈತವದ ಶಿಕ್ಷಾಗುರು’, ‘ಸೆಣಸು ಸೇರದ ದೇವ’ಎಂದೂ ಶ್ರೀಕೃಷ್ಣನನ್ನು ಅರಿತ ನಾವು ಅವನ ಮಹಾಕರುಣೆಯ ವಿಶ್ವಾಲಿಂಗನವನ್ನು ಮರೆಯುತ್ತೇವೆ. ಆದರೆ ಅವನ ಆ ಸ್ವರೂಪವನ್ನು ಕಂಡ ಅವನ ತಂದೆ ವಸುದೇವ, ಪಾಂಡವರಿಗೆ ಅದನ್ನು ಹೇಳುತ್ತಾನೆ ಕೇಳಿ:

‘ಲೋಗರೇ ನೀವೆಮಗೆ, ನಿವಗರಗಾಗಿ ಕರಗುವುದು ನಿಲಲಿ, ತನ
ಗಾಗದವರಿಗೆ ತನ್ನ ತೆರುವನು, ಕೊಲುವ ಹಗೆಗೊಲಿವ;
ಲೋಗರೆನ್ನವರೆಂದು ಲೋಗರಿಗಾಗಿ ಬದುಕುವೆನೆಂಬ ಬಲುಗೈ
ಬಾಗಿ ಕೃಷ್ಣನನೇನ ಹೇಳುವರೆನೆಂದನರಸಂಗೆ

ನಾವೆಲ್ಲ ತಿಳಿದಿರುವ ಶ್ರೀಕೃಷ್ಣನಿಗೂ ತಂದೆಯ ವಾತ್ಸಲ್ಯ ಕಂಡ ಕುಮಾರ ಭಗವಂತನಿಗೂ ಎಷ್ಟು ವ್ಯತ್ಯಾಸವಿದೆ! ಕುಮಾರವ್ಯಾಸ ಬಹುಮಟ್ಟಿಗೆ ಕಂಡರಿಸಿರುವ ಚಿತ್ರ ಇದೇ ಆಗಿದೆ. ಕರ್ಣನಿಗೂ ತನ್ನ ನಿಜಪದವನ್ನಿತ್ತ ಭಗವಂತ, ಕೌರವನಿಗೂ ಒಮ್ಮೊಮ್ಮೆ ತನ್ನನ್ನು ತೋರಿ ಮೆರೆದ ಮಹಿಮ ಇವನಲ್ಲದೆ ಮತ್ತೆಂತವನು.

ಇಷ್ಟೆಲ್ಲ ಮಹಿಮಾವಂತ ಹೇಗೆ ಮುಗ್ಧನಾಗಿ ವರ್ತಿಸುತ್ತಾನೆ! ಮೇಲೆ ಹೇಳಿದ ತಂದೆಯ ಮಾತನ್ನು ಕೇಳಿದೊಡನೆ ಅವನು ತೋರಿದ ನಾಚಿಕೆ ಬಹು ಮನೋಜ್ಞವಾದುದು.

‘ಬೊಪ್ಪನವರೇಯೆಮದೂರದೆಯಿಪ್ಪವರು,ತಾನಲ್ಲ,ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ

ತಂದೆಯ ವಾತ್ಸಲ್ಯಕ್ಕೆ ಧರ್ಮರಾಜನೊಡನೆ ಅವನಾಡಿದ ಮಾತಿದು. ಹಾಗೆಯೇ ಮುಂದೆ ಭೀಷ್ಮನ ಮೇಲೆ ಚಕ್ರಧಾರಿಯಾಗಿ ಪ್ರಲಯೋಲ್ಕೆಯಂತೆ ಎರಗುತ್ತಿರುವಾಗ ತನ್ನ ಮಹಾ ಪ್ರಮಾದವನ್ನು ಆ ಭೀಷ್ಮಭಕ್ತಿ ಎಚ್ಚರಿಸಲು ನಾಚಿ ಹಿಂಬರುತ್ತಾನೆ. ‘ನಚ್ಚಿನಾಳಿನ ಬಿನ್ನಹಕೆ ಮನದೊಳು ನಾಚಿ ಚಕ್ರವ ಮುಚ್ಚಿದನು’ ಎಂದು ಕವಿ ಬಹು ಮನೋಜ್ಞವಾಗಿ ಹೇಳುತ್ತಾನೆ. ಹೀಗೆ ದೇವದೇವನಾದರೂ ಶ್ರೀಕೃಷ್ಣ ಶ್ರೇಷ್ಠ ಮಾನವ ಭಾವಗಳನ್ನು ಪ್ರದರ್ಶಿಸುವುದನ್ನು ಕಾಣುತ್ತೇವೆ.

ಮುಂದೆ ಸೈಂಧವ ವಧೆಯ ಹಿಂದಿನ ದಿನ, ಪಾಶುಪತಾಸ್ತ್ರವನ್ನು ಪಾರ್ಥನಿಗೆ ಹಸ್ತಗತವಾಗಿಸಲು ತಾನೆ ಅವನನ್ನು ಕೈಲಾಸಕ್ಕೆ, ಅವನ ಧ್ಯಾನಸ್ಥಿತಿಯಲ್ಲಿ, ಕರೆದುಕೊಂಡು ಹೋಗಿ ಶಿವನಿಂದ ಆ ಮಂತ್ರವನ್ನು ಪಡೆಸಿಕೊಡುತ್ತಾನೆ. ತಾನೇ ಏಕೆ ಆ ಶಕ್ತಿಯನ್ನು ಕೊಡಬಾರದಾಗಿತ್ತು? ಆಯಾ ಶಕ್ತಿಗಳು ಆಯಾ ಪಾತ್ರಗಳಲ್ಲೆ ಹರಿದುಬರಬೇಕೆಂಬುದನ್ನು ಉಲ್ಲಂಘಿಸದೆ ನಡೆಯುತ್ತಾನೆ, ಶ್ರೀಕೃಷ್ಣ. ಹೀಗೆ ಕುಮಾರವ್ಯಾಸ ಕಂಡ ಕೃಷ್ಣ ಭಾರತದ ಸೂತ್ರಧಾರನಾಗಿದ್ದರೂ ಪಾತ್ರಧಾರಿಯಾದ ಸೂತ್ರಧಾರನಾಗಿದ್ದಾನೆ.

ಅರ್ಜುನ ಶ್ರೀಕೃಷ್ಣನ ಪರಮಮಿತ್ರ, ಭಕ್ತ; ಗುರುದ್ರೋಣರ ಪ್ರೇಮದ ಶಿಷ್ಯ; ದಶನಾಮವಂತನಾಗಿ ಪ್ರಸಿದ್ಧನಾದ ಇವನು ಶಿವನನ್ನು ಭಯಭರಿತ ವೀರಭಕ್ತಿಯಿಂದ ಗೆದ್ದು ಸಿದ್ಧನಾಗಿದ್ದರೂ ಅಣ್ಣನ ಆಜ್ಞೆಯನ್ನು ಮೀರುತ್ತಿರಲಿಲ್ಲ. ‘ತಮ್ಮಣ್ಣನಾಜ್ಞಾಭ್ರಮಿತನಾಗಿಹನು’ ಎಂದು ದ್ರೌಪದಿ ಹಂಗಿಸುವಷ್ಟು ಅಣ್ಣನ ಭಕ್ತ. ತನ್ನ ಪ್ರಿಯತಮನಾದ ಏಕೈಕ ಪುತ್ರನ ಮರಣದಲ್ಲಿ ಅಣ್ಣನ ಮೇಲೆ ಕೋಪಿಸಿಕೊಳ್ಳಲು ಕಾರಣವಿದ್ದರೂ ಅವನಾಡುವ ವಿಸ್ಮಯಕಾರಿಯಾದ ಸಂಯಮದ ಮಾತುಗಳನ್ನು ನೋಡಬಹುದು. ಆದರೂ ತನ್ನನ್ನೇನಾದರೂ ಅಲ್ಲಗಳೆದರೆ ಮಾತ್ರ ಯಾರನ್ನೂ ಲಕ್ಷಿಸುತ್ತಿರಲಿಲ್ಲ. ಅಂತಹ ಅಣ್ಣನ ಮೇಲೆ ಕತ್ತಿಯನ್ನು ಹಿರಿದುಕೊಂಡು ಹೋಗುತ್ತಾನೆ. ಈ ಪ್ರಸಂಗವಂತೂ ಮಾನವ ಹೃದಯದ ಮಹಾಭಯಂಕರ ಸ್ವಭಾವದ ಸತ್ಯ ಚಿತ್ರಣವಾಗಿದೆ. (ಕಾರಣಾಂತರದಿಂದ ಈ ಅಂಶವನ್ನು ಪಂಪಕವಿ ಬಿಟ್ಟುಬಿಟ್ಟಿದ್ದಾನೆ) ಹಾಗೆಯೇ ಭೀಮನಮೇಲೂ, ಅಷ್ಟೇ ಏಕೆ, ಭಗವಾನ್ ಶ್ರೀಕೃಷ್ಣನ ಮೇಲೂ, ಕೋಪವಲ್ಲ, ಅಸಮಾಧಾನ ಅವನಿಗುಂಟಾಗುತ್ತಿತ್ತು. ಆದರೆ ಕುಮಾರವ್ಯಾಸನ ಅರ್ಜುನನ ವೈಶಿಷ್ಟ್ಯವು ಕಾಣುವುದು ಪ್ರಧಾನವಾಗಿ ಊರ್ವಶಿಯ ಪ್ರಸಂಗದಲ್ಲಿ, ಕರ್ಣಾವಸಾನ ಪ್ರಸಂಗದಲ್ಲಿ, ಹಾಗೂ ಕಿರಾತಾರ್ಜುನೀಯ ಪ್ರಸಂಗದಲ್ಲಿ. ಕಿರಾತವೇಷದ ಶಿವನೊಡನೆ ಸೆಣಸುವಾಗ ಅವನು ತೋರಿದ ಮಾನುಷ ಅತಿಮಾನುಷ ಶಕ್ತಿ; ಶಿವನೆಂದು ತಿಳಿದಾಗ ಅವನು ತೋರಿದ ಪರಮಪಶ್ಚಾತ್ತಾಪಜನ್ಯವಾದ, ಹೃದಯಸ್ಪರ್ಶಿಯಾದ ಶರಣಾಗತಭಕ್ತಿ; ಊರ್ವಶಿಯ ಸುಮನೋಹರ ಭಯಂಕರ ಪ್ರಣಯಾಭಿಲಾಷೆಯನ್ನು ಗೆಲ್ಲುವಲ್ಲಿ ತೋರಿದ ಮಹಾದ್ಭುತ ಜಿತೇಂದ್ರಿಯರಕ್ತಿ; ತನ್ನ ಆಬಾಲಶತ್ರು ಕರ್ಣನನ್ನು ಭೇದಿಸುವಲ್ಲಿ ತಾನು ಪಟ್ಟ ಮಾನುಷಾತೀತವಾದ ಆದರೂ ಸಹಜವಾದ ದುರ್ಭರ ಯಾತನೆ, ಇವನ್ನು ನೋಡಿದರೆ ಸಾಕು, ಕುಮಾರವ್ಯಾಸನ ಅರ್ಜುನನ ವೈಶಿಷ್ಟ್ಯ ತಿಳಿದೀತು. ಇಂತಹವನಿಗೂ, ಸದಾ ಶ್ರೀಕೃಷ್ಣ ಸನ್ನಿಧಾನದಲ್ಲೇ ಇರುತ್ತಿದ್ದ ಇಂತಹ ಪುಣ್ಯಾತ್ಮನಿಗೂ, ಆಗಾಗ್ಗೆ ಗ್ಲಾನಿಯುಂಟಾಗುತ್ತಿತ್ತು! ಯುದ್ಧಕ್ಕೆ ಪ್ರಾರಂಭದ ಗೀತೋಪದೇಶದ ಸನ್ನಿವೇಶದಲ್ಲಿ ಮಾತ್ರವೇ ಅಲ್ಲ, ಭಗದತ್ತ ವಧಾಪ್ರಸಂಗದಲ್ಲಿ ತನಗೆ ನೆರವು ನೀಡಿದ ಶ್ರೀಕೃಷ್ಣನ ಮೇಲೆ ಅಸಮಾಧಾನ ಪಡುವ ಮುಹೂರ್ತದಲ್ಲಿ; ಕರ್ಣನ ಪರಾಕ್ರಮವನ್ನು ಅವನು ಹೊಗಳಿದಾಗ ಅದನ್ನು ಸಹಿಸದ ಘಳಿಗೆಯಲ್ಲಿ ; ನೊಂದ ಧರ‍್ಮಜನಾಡಿದ ಮಾತಿಗಾಗಿ ಅವನನ್ನೇ ಕೊಲ್ಲುತ್ತೇನೆಂದು ಹೊರಟ ಅಹಂಕೋಪಾಂಧನಾದ ಸಮಯದಲ್ಲಿ, ಅರ್ಜುನ ಮಾನವದೌರ್ಬಲ್ಯದ ಭಯಂಕರತೆಯನ್ನು ಅತ್ಯಂತಸಹಜವಾಗಿ ಪ್ರದರ್ಶಿಸಿದ್ದಾನೆ. ಭಗವಂತ ಸಾನ್ನಿಧ್ಯದಲ್ಲಿದ್ದವನಿಗೂ ಇದು ಬಿಡಲಿಲ್ಲವಲ್ಲ ಎಂಬುದನ್ನು ಬಹು ಮಾರ್ಮಿಕವಾಗಿ ಅರ್ಜುನನ ಚಿತ್ರದಲ್ಲಿ ನಾರಣಪ್ಪ ಕಾಣಿಸಿದ್ದಾನೆ.

ನಾರಣಪ್ಪನ ಭೀಮ ಅತಿ ವಿಶಿಷ್ಟನಾದ ವ್ಯಕ್ತಿ. ಶಿಶುವಾಗಿದ್ದಾಗ ತಾಯತೊಡೆಯಿಂದ ಕೆಳಗೆ ಬಿದ್ದುದರಿಂದ ಆ ಅಡಿಗಲ್ಲೆ ಚೂರ್ಣವಾಯಿತಂತೆ! (ಈ ಪ್ರಸಂಗ ವ್ಯಾಸರಲ್ಲೂ ಬಂದಿದೆ.) ಇಂತಹ ಶಕ್ತ ಚಿಕ್ಕಂದಿನಲ್ಲಿ ಮಾಡಿದ ತುಂಟಾಟಕ್ಕೆ ಲೆಕ್ಕವಿಲ್ಲ. ಮರವೇರಿ ಆಡುತ್ತಿದ್ದ ನೂರು ಜನ ಕೌರವರನ್ನೂ ಆ ಮರದ ಬುಡವಲುಗಿಸಿ ಹಣ್ಣುಗಳಂತೆ ಕೆಳಕ್ಕೆ ಉದುರಿಸುತ್ತಾನೆ. ಅಷ್ಟೇ ಅಲ್ಲ, ಉಳಿದವರು ಭೀಷ್ಮಾದಿಗಳಲ್ಲಿಗೆ ದೂರು ಕೊಂಡೊಯ್ದರೆ, ತನ್ನ ಮೈಯನ್ನು ತಾನೆ ಮುಳ್ಳಿನಿಂದ ಪರಚಿಕೊಂಡು ಮೊದಲು ತಾನೆ ದೂರು ಹೇಳುವಂತಹ ತುಂಟ. ಇಂತಹ ಅದಮ್ಯಶಕ್ತಿಯುಳ್ಳವನು ಮುಂದೆ ಕೌರವರ ವೈರಕ್ಕೆ ನಿತ್ಯವೂ ತುತ್ತಾಗಬಂದಾಗ ತೋರಿದ ಶಕ್ತಿ, ಸಾಮರ್ಥ್ಯ,ಅದಕ್ಕಿಂತ ಹೆಚ್ಚಾಗಿ ಅವನು ವ್ಯಕ್ತಪಡಿಸಿದ ಮಹಾಸಂಯಮ ಅದ್ಭುತವಾದುದು. ಇಷ್ಟೆಲ್ಲಾ ಶಕ್ತನಾಗಿದ್ದರೂ, ಅಧರ್ಮವನ್ನು ಕಂಡು ಸಿಡಿದೇಳುವಂತಾಗುತ್ತಿದ್ದರೂ, ಅಣ್ಣನಾಜ್ಞೆಯನ್ನು ಮಾತ್ರ ಮೀರುತ್ತಿರಲಿಲ್ಲ. ಒಮ್ಮೊಮ್ಮೆ ಮೇರೆದಪ್ಪುತ್ತಿದ್ದ – ಮಳೆಗಾಲದ ಮಹಾನದಿಯಂತೆ. ಆದರದು ಅವಿನಯದಿಂದಲ್ಲ, ಅಧರ‍್ಮದ ಅತಿರೇಕಕ್ಕೆ ಅವನ ಅದಮ್ಯ ಶಕ್ತಿ ಸಹಿಸಲಾರದೆ ರೋಸಿಹೋಗುತ್ತಿದ್ದುದರಿಂದ. ಕೀಚಕನ ಸನ್ನಿವೇಶದಲ್ಲಿ ಮೊದಮೊದಲು ಅಣ್ಣನಾಜ್ಞೆಗೆ ಒಳಗಾಗಿ ದ್ರೌಪದಿಗೆ ಕರಗದಿದ್ದ ಅವನ ಧರ್ಮನಿಷ್ಠುರ ಹೃದಯ, ಕಟ್ಟಕಡೆಯಲ್ಲಿ ಅವಳ ಕಟ್ಟೊಡೆದ ದುಃಖ ಪ್ರವಾಹದಲ್ಲಿ ಕೊಚ್ಚಿಹೋಗುತ್ತದೆ. ಆಗ ಕೋಪಿಸಿಕೊಂಡ ಭೀಮ ಬಾಯ್ದೆರೆದ ಅಗ್ನಿಪರ್ವತವಾಗುತ್ತಾನೆ. ‘ಭೀಮ ಕಷ್ಟವನೆಸಗಿದನು ಹಾ! ಎಂದರಾದೊಡೆ ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ’ . . . . . . ‘ಹಗೆಗಳನು ಹಿಂಡಿದನು ಮನದೊಳಗೆ’ ‘ನಮ್ಮಣ್ಣನಾಜ್ಞೆಯ ಗೆರೆಯ ದಾಂಟಿದೆನು’. ಹಾಗೆಯೇ ದುಶ್ಶಾಸನನ ರಕ್ತವನ್ನು ಕುಡಿದು ಕೇಕೆಹಾಕುವ ಭೈರವಲೀಲೆಯಲ್ಲಿ ತೊಡಗಿದ್ದಾಗ ಒಮ್ಮೆ ಅಣ್ಣನನ್ನು, ಅರ್ಜುನನ್ನು ಅಷ್ಟೇ ಅಲ್ಲ ಶ್ರೀಕೃಷ್ಣನನ್ನೂ ಹಂಗಿಸುತ್ತಾನೆ.

ಇಂತಹ ಭೀಮ ಉದ್ದುರುಟನೆನ್ನುವುದು ಸುಲಭ. ಆದರದು ತಪ್ಪು. ತನ್ನ ಮಹಿಮೆಯನ್ನು ತೋರಿದ ಆಂಜನೇಯನ ಮುಂದೆ ಮಾನವಸ್ವಭಾವದ ಅಲ್ಪಬುದ್ಧಿಯನ್ನು ನಿವೇದಿಸಿಕೊಳ್ಳುತ್ತಾ ವಿನಯದಿಂದ ನಿಂತುಕೊಂಡಿರುವ ಮಹಾಪ್ರಾಜ್ಞಭೀಮನನ್ನು ಕಂಡಾಗ, ಅವನಾಡಿದ ಮಾತನ್ನು ಕೇಳಿದಾಗ ಯಾರಿಗಾದರೂ ಗೌರವ ಪ್ರೀತಿ ಬಾರದಿರದು.

‘ನೋಡಿದನು, ನಡುಗಿದನು, ಕಂಗಳ ಕೋಡಿಯಲಿ ನೀರೊರೆಯೆ ಹರುಷದ
ರೂಢಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ
ಬಾಡು ಮೋರೆಯನೆತ್ತಿ ಕೈಗಳ ನೀಡಿ ಕಂಗಳ ಮುಚ್ಚಿ ಮರಳಿದು
ನೋಡಿ ಶಿವಶಿವಾ ಎನುತ ಬೆಚ್ಚಿದನಡಿಗಡಿಗೆ!’

‘ಸಾಕು ಸಾಕಂಜಿದೆನು; ಮನುಜರು ಕಾಕು ಬಲರು, ನಿಜಸ್ವಭಾವವ
ನೇಕೆ ಬಿಡುವೆವು, ತಿಳಿದು ತಿಳಿಯೆವು, ಕಂಡೊಡಂಜುವೆವು!
ಸಾಕು ಪೂರ್ವದ ರೂಪಿನಲೆ ನಿರ್ವ್ಯಾಕುಲನ ಮಾಡೆನಲು ಪವನಜ
ನಾ ಕಪೀಶ್ವರ ನಗುತ ಮುನ್ನಿನ ರೂಪ ಕೈಕೊಂಡ

ಅರಗಿನರಮನೆಯ ಉರಿಯಿಂದ ತಪ್ಪಿಸಿಕೊಂಡು ತನ್ನವರನ್ನು ಕಾಡಿಗೆ ಎತ್ತಿಕೊಂಡೊಯ್ದು ಮಲಗಿಸಿ ನಿದ್ರಾಭಂಗವಾಗದಂತೆ ಅವರ ಕಾಲೊತ್ತುತ್ತ ಅವರ ಸ್ಥಿತಿಯನ್ನು ನೆನೆದುಕೊಂಡು ಬಿಕ್ಕಿ ಬಿಕ್ಕಿ ಅಳುವ ಭೀಮನನ್ನು ಅಲ್ಲಿ ಕಾಣಬೇಕು, ಯಾರಿಗಾದರೂ ಎದೆ ಹಿಂಡುತ್ತದೆ.

‘ಔಕುವುದು ಬಲುನಿದ್ರೆ, ನಿದ್ರೆಯ ನೂಕುವನು, ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ,
ಸೋಕುವುದು ಮೈಮರವೆ, ಮರವೆಯನೋಕರಿಸುವುದು ಚಿತ್ತವೃತ್ತಿ, ನಿ
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ’,

‘ಅನಿಬರಿರವನು ನೋಡಿ ಪೂರ್ವವ
ನೆನೆದು ಬಿರಿದಳುತ ಘನ ಕಾ
ನನದ ಮಧ್ಯದಲೀತನಿದ್ದನು ಹಿರಿದು ಚಿಂತಿಸುತ ’

ಹಾಭಾರತದಲ್ಲಿ ಅಳದವರೇ ಇಲ್ಲವೆನ್ನಬಹುದು – ಶ್ರೀಕೃಷ್ಣ, ಅಭಿಮನ್ಯು ಹೊರತಾಗಿ! ಆದರೆ ಉಳಿದವರು ಅಳುವುದರಿಂದ ಆಗುವ ಪರಿಣಾಮಕ್ಕೂ ಭೀಮ ತನ್ನವರಿಗಾದ ಅಪದೆಸೆಯನ್ನು ಕಂಡು ಕಾಡಿನಲ್ಲಿ ಒಬ್ಬನೆ ಅಳುವುದಕ್ಕೂ ವ್ಯತ್ಯಾಸವಿದೆ. ಕುಮಾರವ್ಯಾಸನ ಭೀಮ ಇಂತಹವನು – ಸುಮವಜ್ರಸಮ!

ಮಹಾಭಾರತದಲ್ಲೆಲ್ಲಾ ಅತಿಯಾಗಿ ನೊಂದವಳೆಂದರೆ ದ್ರೌಪದಿ ಎಂದೇ ಹೇಳಬೇಕು. ತನ್ನ ಸ್ಥಿತಿಯನ್ನು ಆಕೆಯೇ ಹೇಳುತ್ತಾಳೆ:

‘ಜನನವೇ ಪಾಂಚಾಲ ರಾಯನ ಮನೆ, ಮನೋವಲ್ಲಭರದಾರನೆ
ಮನುಜಗಿನುಜರು ಗಣ್ಯವೇ? ಗೀರ್ವಾಣರಿಂ ಮಿಗಿಲು,
ಎನಗೆ ಬಂದೆಡರೀ ವಿರಾಟನ ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ

ಪಾಪ ! ಕಾಲನೊತ್ತುವ ಕೆಲಸದುತ್ಸಾಹ! ಇಂತಹವಳನ್ನು ಕೇಳಬಲ್ಲವನು ಒಬ್ಬ ಭೀಮ. ಆದರೆ ಅವನ ಶಕ್ತಿಗೂ ಮಿತಿಯುಂಟು. ಅವಳ ದುಃಖಾಗ್ನಿಯನ್ನು ಆರಿಸಲು ಶ್ರೀಕೃಷ್ಣ ಕರುಣಾಮೃತವವರ್ಷಕ್ಕೆ ಮಾತ್ರ ಸಾಧ್ಯ. ಶ್ರೀಕೃಷ್ಣ ಅವಳಿಗಾಗಿ ಆಕೆಯ ಪತಿಗಳು ಹಿಂಜರಿದರೆ ತಾನು ‘ರಿಪುಗಳ ಸೀಳಿ ಕರುಳ ಮುಡಿಸದಿಹೆನೆ ನಿನ್ನ ಕಬರಿಯಲಿ?’ ಎಂದು ಶಪಥಮಾಡುತ್ತಾನೆ. ಅದಕ್ಕೆ ತಾಯಿತಂದೆಯರ ಮೇಲಾಣೆಯಿಡಲೂ ಹಿಂಜರಿಯ. ಮಹಾಭಾರತದ ಉಳಿದ ಪಾತ್ರಗಳಿಗೆ ದೊರೆತ ಕೃಷ್ಣ ಕರುಣೆ ಒಂದಾದರೆ ಕೃಷ್ಣೆ ಪಡೆದ ಕರುಣೆಯೇ ಒಂದು.

ಕೃಷ್ಣನೇ ಹೇಳುತ್ತಾನೆ ತನ್ನ ಹೃದಯ ಅವಳಿಗಾಗಿ ಹೇಗೆ ಕರಗಿ ಕೋಡಿ ಹರಿದಿದೆ ಎಂಬುದನ್ನು:

‘ಕಮಲಮುಖಿ ಸುಲಿವಡೆದು ಲಕ್ಷ್ಮೀರಮಣ ಲಕ್ಷ್ಮೀ
ರಮಣಯೆಂದೊರಲಿದೊಡೆ ಸಂಜಯ ನೊಂದೆ ನಾನೆಂದ

‘ಕಾವುದೈ ಗೋವಿಂದ ಸಲಹೈ ದೇವಕೀಸುತ ಗಂಡರೈವರ
ಭಾವ ಬೆಟ್ಟಿತು, ನೀನಲೈ ದೇಸಿಗರ ದೈವವಲೈ,
ದೇವ ಕೆಟ್ಟೆನು ಕೆಟ್ಟೆನೈ ಕರುಣಾವಲಂಬನದಿಂದ ತಡೆಯೈ
ಜೀವನವನೆಂದೊರಲಿದಳು, ಹಂಗಿಗನು ತಾನೆಂದ’

ತನ್ನ ಗಂಡಂದಿರನ್ನು ಅವಹೇಳನ ಮಾಡುವುದನ್ನು ನೋಡಿದಾಗ ಈಕೆಯ ಪಾತ್ರೌನ್ನತ್ಯದಲ್ಲಿ ನಮಗೆ ಶಂಕೆ ಬರುವುದು ಸುಲಭ. ಆದರೆ ಅದರಲ್ಲಿ ಎಷ್ಟು ಸಹಜತೆ, ಅನಿವಾರ್ಯತೆ, ದುರ್ದಮ್ಯತೆ ಇದೆ ಎಂಬುದನ್ನು ಕವಿ ಬಲ್ಲ; ಕೃಷ್ಣ ಬಲ್ಲ.

ಮಹಾಭಾರತದಲ್ಲೆಲ್ಲಾ ಅಗ್ನಿಕನ್ಯೆಯಾಗಿ ಜಾಜ್ವಲ್ಯಮಾನವಾಗಿ ಥಳಥಳಿಸುವ ಈಕೆ ಎಷ್ಟು ಸೌಮ್ಯವಾಗಿ ಮುಗ್ಧವಾಗಿ ತೋರುತ್ತಾಳೆ, ಆ ತನ್ನ ಸ್ವಯಂವರ ಮಂಟಪದಲ್ಲಿ! ಕೃಷ್ಣನನ್ನು ಅಣ್ಣ ದೃಷ್ಟದ್ಯುಮ್ನ ಪರಿಚಯಮಾಡಿಕೊಟ್ಟಾಗ ಮೊಟ್ಟಮೊದಲು ಅವನಲ್ಲಿ ಆಕೆ ಕಂಡು ತೋರಿದ ಭಾವವೇ ಭಾವ!

‘ಎನಲು ಭಕುತಿಯ ಭಾವರಸದಲಿ ನೆನೆದು ಹೊಂಪುಳಿಯೋಗಿ ರೋಮಾಂ
ಚನದ ಮೈಯುಬ್ಬಿನಲಿ ತನು ಪುಳಕಾಂಬು ಪೂರದಲಿ,
ಮನದೊಳಗೆ ವಂದಿಸಿದಳೆನಗೀತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ!’

ಭಾರತಾಂತ್ಯದಲ್ಲಿ, ತನ್ನೈವರು ಮಕ್ಕಳನ್ನು ಕಳೆದುಕೊಂಡು ವಿಹ್ವಲಳಾಗಿದ್ದ ಈಕೆ, ತನ್ನ ಕುಮಾರನನ್ನು ಕೊಂದ ಅಶ್ವತ್ಥಾಮನನ್ನು ಕೊಲ್ಲಲೆಂದು ಮುನ್ನುಗ್ಗುವ ಅರ್ಜುನ ಭೀಮರನ್ನು ತಡೆಯುವಾಗ ಆಡುವ ಮಾತನ್ನು ನೋಡಿ:

‘ಬಂದಳಾ ದ್ರೌಪದಿಯಹಹ ಗುರುನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ
ಕೊಂದುಕೂಗದೆ ಕೃಪೆಯನಬಲಾ ವೃಂದ ಸಮಸುಖ ದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ!’

ಭೀಮಾರ್ಜುನರು ತಪ್ಪಿ ನಡೆಯುವಾಗಲು ಇವಳು ತನ್ನೆಲ್ಲ ಮಕ್ಕಳನ್ನು ಕಳೆದುಕೊಂಡೂ ತೋರಿದ ಸಂಯಮ ಎಂಥ ಘನವಾದುದು!

ಧರ್ಮರಾಜ ಭಾರತದ ನಾಯಕನಾಗಿದ್ದರೂ ಶ್ರೀಕೃಷ್ಣನ ಅತಿಮಾನುಷ ಶಕ್ತಿಯಲ್ಲಿ ತನ್ನ ನಾಯಕತ್ವವನ್ನು ನಿವೇದಿಸಿಕೊಂಡಿರುವಂತೆ ಕಾಣುತ್ತಾನೆ. ‘ಧರ್ಮಕ್ಷಮೆಯ ಗರ ಹೊಡೆದಿಹುದು’ ಎಂದು ದ್ರೌಪದಿ ಕೋಪಿಸುವಷ್ಟು ಮಟ್ಟಿಗೆ ಅವನು ಧರ್ಮಪ್ರಜ್ಞವಂತ. ಭೀಮನ ಪ್ರಾಕೃತಿಕ ಶಕ್ತಿಯನ್ನಾಗಲಿ, ಅರ್ಜುನನ ಲೋಕೈಕ ವೀರವನ್ನಾಗಲಿ ಬಹಳ ಮಟ್ಟಿಗೆ ಪ್ರದರ್ಶಿಸದಿರುವುದರಿಂದ ಇವನು ಒಮ್ಮೊಮ್ಮೆ ಸಪ್ಪೆಯಾಗಿ ತೋರಿದರೂ ತೋರಬಹುದು.

ಭೀಷ್ಮ ದ್ರೋಣರು ಮಹಾಭಾರತದ ವೃದ್ಧರು: ಜ್ಞನದಿಂದ , ವಯಸ್ಸಿನಿಂದ. ಇಂತಹವರು ಏನು ಕರ್ಮದಿಂದಲೋ ಏನೊ ತಮಗಿಂತಲೂ ಬಹು ಕಿರಿಯರಾದ ಮಕ್ಕಳ ಮಧ್ಯದಲ್ಲಿ ಸಿಲುಕಿಕೊಂಡು ಬದುಕಬೇಕಾಗುತ್ತದೆ. ಅವರು ತಮ್ಮ ಸಮೃದ್ಧ ವೃದ್ಧಜ್ಞನವು ನಿರ್ದೇಶಿಸಿದಂತೆ ನಡೆಯಬೇಕೆಂದರೆ ತಿಂದ ಉಪ್ಪಿಗೆ ತಪ್ಪಬಾರದೆಂಬ ಸಂಕಟ ಬರುತ್ತದೆ. ಹೀಗಾಗಿ ಮಹಾಪುರಾತನ ವಟವೃಕ್ಷಗಳಂತಿದ್ದ ಈ ಮಹಾ ಚೇತನಗಳು ಸಣ್ಣ ಸಣ್ಣವರ ಬಿದಿರುಗಿಚ್ಚಿಗೆ ಮೇಹುಗಾಡಾದ ಮಹಾದಾರುಣ ಸನ್ನಿವೇಶವನ್ನು ಮಹಾಭಾರತದಲ್ಲಿ ನೋಡುತ್ತೇವೆ. ಆತ್ಮಸಂಯಮಕ್ಕೆ ಹೆಸರುವಾಸಿಯಾದ ಭೀಷ್ಮರು ದ್ರೋಣರಿಗಿಂತ ಜ್ಞನ ವಯೋವೃದ್ಧರೆಂಬುದರಲ್ಲಿ ಸಂಶಯವಿಲ್ಲ. ಕುಮಾರವ್ಯಾಸನಲ್ಲಿ ಈ ಇಬ್ಬರೂ ಶ್ರೀಕೃಷ್ಣಭಕ್ತರಾಗಿದ್ದರೂ ಆ ಭಗವದ್ ಶಕ್ತಿಯನ್ನು ಪೂರ್ಣವಾಗಿ ಕಂಡುಂಡವರು ಭೀಷ್ಮರೆ. ಕೈದು ಹಿಡಿಯುವುದಿಲ್ಲವೆಂದ ಭಗವಂತನ ಕೈಯಲ್ಲಿ ಪ್ರಲಯ ಭಯಂಕರ ಚಕ್ರಧಾರಣಮಾಡಿಸಿ ಅವನನ್ನು ಆಡಿಸಿ ಏಳಿಸಿ ನೋಡುವ ಮಹಾಶಕ್ತರು ಅವರು. ಶ್ರೀ ಶಂಕರನ ಪ್ರಲಯ ಭಯಂಕರ ಫಾಲನೇತ್ರದೊಡನೆ ಭಕ್ತಿಯ ಚಕ್ಕಂದವಾಡಿ ಬದುಕಬಲ್ಲವರು! ಕವಿ ಕುಮಾರವ್ಯಾಸ ಹೇಳುತ್ತಾನೆ, ಅವರು ತಾಯಿ ಜಾಹ್ನವಿಯ ಮೊಲೆವಾಲನುಂಡವರು ಎಂದು! ಇಂತಹವರ ಪಾತ್ರ ಕುಮಾರವ್ಯಾಸನಲ್ಲಿ ಒಮ್ಮೊಮ್ಮೆ ತೋಲ ತಪ್ಪುವುದುಂಟು. ಅವನ್ನು ಶಕ್ತ್ಯಾಧಿಕ್ಯದ ಸಹಜ ದೋಷಗಳೆಂದು ಮರೆತರೆ ಉಳಿದಂತೆ ಇವರ ಪಾತ್ರ ಗಂಭೀರ ಭೀಷ್ಮವಾಗಿದೆ.

ಈ ಮಹಾನುಭಾವ ಶರಶಯ್ಯೆಗೇರಿದಾಗ ಮಹಾಕವಿ ಒಂದು ಮಾತನ್ನು ಹೇಳುತ್ತಾನೆ: ‘ಪಡುವಣ ಶೈಲ ವಿಪುಲಸ್ತಂಭ ದೀಪಿಕೆಯಂತೆ ರವಿ ಮೆರೆದ’ ಎಂದು. ಮಹಾಪುರುಷನ ಮರಣವನ್ನು ಆಚರಿಸಲು ಪ್ರಕೃತಿದೇವಿ ಪಶ್ಚಿಮಾಚಲ ವಿಪುಲಸ್ತಂಭದ ಮೇಲೆ ರವಿದೀಪಿಕೆಯನ್ನು ಹೊತ್ತಿಸಿಡುತ್ತಾಳೆ. ಧ್ಯಾನಗೋಚರವಾಗುವ ದಿವ್ಯತೆಯನ್ನು ಈ ಮಾತಿನಲ್ಲಿ ಕವಿ ಕಂಡಿದ್ದಾನೆ.

ದ್ರೋಣಾಚಾರ‍್ಯರು ಈ ಬೆಳಕಿನಲ್ಲಿ ಪ್ರಕಾಶಮಾನವಾಗಿ ಕಾಣದಿದ್ದರೂ ಮಹಾ ತೇಜಸ್ವಿಗಳೇ ಅಹುದು. ಕುಮಾರವ್ಯಾಸ ಈ ಮಹಾವ್ಯಕ್ತಿಯ ಅಂತ್ಯವನ್ನು ದರ್ಶನಧ್ವನಿ ದೀಪ್ತವಾಗುವಂತೆ ಚಿತ್ರಿಸಿದ್ದಾನೆ. ಪ್ರಲಯ ಭೈರವರಾಗಿ ಯುದ್ಧ ಮಾಡುತ್ತಿರುವಾಗ ಸಪ್ತರ್ಷಿಗಳು ಜ್ಞನಗೋಚರವಾಗಿ ಅವರನ್ನು ಎಚ್ಚರಿಸುವುದು, ಅವರು ಕಣ್ಮರೆಯಾದೊಡನೆಯೇ ಅವರು ಕಂಡ ಅರಿವು ಮರೆಯಾಗಿ ಮಾಯಾವರಣವಶಿಯಾಗಿ ಯುದ್ಧಭಯಂಕರರಾಗುವುದು, ಮತ್ತೆ ಅರಿವು, ಅನಂತರ ಪುತ್ರವ್ಯಾಮೋಹ, ಆಮೇಲೆ ವೈರಾಗ್ಯ, ನಿರ್ಯಾಣ- ಈ ಚಿತ್ರವಷ್ಟೇ ಸಾಕು, ಭಿನ್ನಭಿನ್ನಾವಸ್ಥೆಯಲ್ಲಿ ಮಾನವಚೇತನ ಹೇಗೆ ವರ್ತಿಸುತ್ತದೆ ಎಂಬುದನ್ನು ತಿಳಿಸಲು. ಅದರ ಜೊತೆಗೆ, ಭಗವದ್‌ಶಕ್ತಿ ತನ್ನ ಕೆಲಸವನ್ನು ಮಾಡಲು ಅನುಸಂಧಾನ ಮಾಡುವ ವಿಚಿತ್ರತಮ ರಹಸ್ಯ ಮಾರ್ಗವನ್ನಲ್ಲಿ ಕಾಣುತ್ತೇವೆ. ಭೀಷ್ಮರನ್ನು ಶ್ರೀಕೃಷ್ಣ ಒಂದು ಬಗೆಯಾಗಿ ಧರ್ಮವಾತ್ಸಲ್ಯದಿಂದ ಗೆದ್ದರೆ ಇವರನ್ನು ಬೇರೊಂದು ಬಗೆಯಿಂದ-ಅವರೊಳಗಿನ ಪರಮಧರ್ಮ ಪ್ರಜ್ಞೆಯ ಜಾಗೃತಿಯ ಮೂಲಕ ಗೆಲ್ಲುವುದನ್ನಿಲ್ಲಿ ಕಾಣುತ್ತೇವೆ.

ಪ್ರಸಿದ್ಧರಾದ ಖಳಚತುಷ್ಟಯದ ಪ್ರಧಾನರೆಂದರೆ ಕರ್ಣಕೌರವರು. ವ್ಯಾಸರು ಈ ವ್ಯಕ್ತಿಗಳನ್ನು ಅತಿ ದೂಷಿಸದೆ ಅತಿ ಪ್ರೀತಿಸದೆ ಚಿತ್ರಿಸಿಕೊಂಡು ಹೋಗಿದ್ದಾರೆ. ಮುಂದೆ ಬಂದ ಭಾಸ, ಪಂಪ ಹಾಗೂ ಆತನ ಪ್ರಭಾವದಲ್ಲಿ ಬೆಳದ ರನ್ನ ಇವರನ್ನು ಉದಾತ್ತೀಕರಿಸಿ ತೋರಿಸಿದ್ದಾರೆ. ಈ ಉದಾತ್ತೀಕರಣ ಮೂಲಾಂಶವನ್ನು ಮರೆಮಾಚುವಷ್ಟಾಗಬಾರದೆಂಬುದನ್ನು ಅವರೇನು ಮರೆತಿಲ್ಲ. ಕುಮಾರವ್ಯಾಸ ಕಥಾ ದೃಷ್ಟಿಯಿಂದ ವ್ಯಾಸರನ್ನು ಅನುಸರಿಸಿದ್ದರೂ ತನ್ನದೇ ಆದ ಭಾಗವತ ಪ್ರಜ್ಞೆಯ ದಿವ್ಯಪ್ರಭಾವದಿಂದ ಈ ವ್ಯಕ್ತಿಗಳನ್ನು ನೋಡಿರುವ ರೀತಿ ವಿಶಿಷ್ಟವಾಗಿದೆ. ‘ಸೆಣಸು ಸೇರದ ದೇವ’ನನ್ನು ಕೆಣಕಿ ಬದುಕುವ ಸಾಹಸ, ತನ್ನ ಅಹಂಕಾರಕ್ಕೆ ಬಗೆಬಗೆಯಾಗಿ ಧಕ್ಕೆ ತಂದ ಪಾಂಡವರಿಗೆ ಒಂದಂಗುಲ ನೆಲವನ್ನೂ ಕೊಡುವುದಿಲ್ಲವೆಂಬ – ತೊಡೆಯುಡಿದು ಬಿದ್ದಾಗಲೂ ತನ್ನ ಭೂಮಿಯನ್ನು ತನ್ನ ವೈರಿಗಳಿಗೆ ಬಿಡೆನೆಂಬ-ಚಲ ಸುಯೋಧನನದು. ಕುಮಾರವ್ಯಾಸನ ಕೌರವ ಒಮ್ಮೊಮ್ಮೆ ಅನನ್ಯ ಸಾಧಾರಣವಾಗಿಯೇ ಅಭಿನಯಿಸಿದ್ದಾನೆ. ಕರ್ಣನ ಪಾತ್ರದ ದುರಂತತೆ ಹುಟ್ಟಿನಲ್ಲೆ ಅಡಗಿರುವಂತೆ ಕೌರವರ ದುರಂತತೆ ಹುಟ್ಟಿನಲ್ಲೆ ಅಡಗಿದೆಯೆಂಬ ಅಂಶವನ್ನು ಬಹು ಮನೋಜ್ಞವಾಗಿ ಮಹಾಭಾರತವೇ ಧ್ವನಿಸಿದೆ. ತನ್ನ ಓರಗಿತ್ತಿಗೆ ಮಕ್ಕಳಾಗಿ ತನಗಿನ್ನೂ ಮಕ್ಕಳಾಗಲಿಲ್ಲವೆಂದು ತನ್ನ ಬಸಿರನ್ನು-ವ್ಯಾಸ ಮಂತ್ರೋದಕಪೂತವಾದ ಗರ್ಭವನ್ನು ಗಾಂಧಾರಿ ಹೊಸೆದುಕೊಳ್ಳುತ್ತಾಳೆ. ಮಾತ್ಸರ‍್ಯದಿಂದ, ಅಕಾಲದಲ್ಲಾದ ಗರ್ಭಸ್ರಾವದಿಂದ ಬಂದ ಮಕ್ಕಳು ಮತ್ತೆಂತಹವರಾಗುತ್ತಾರೆ, ಜ್ಞಾತಿ ಮತ್ಸರರಾಗದೆ? ಕನ್ಯತಾಮುಗ್ಧತೆಯಿಂದ ಅರಿಯದೆ ಕುಂತಿ ಮಾಡಿದ ತಪ್ಪಿಗಾಗಿ ಕರ್ಣನ ಬದುಕು ಉದಾರ ಧೀರ ರಮಣೀಯವಾದರೂ ದುಃಖಮಯವಾಯಿತು. ಆದರೆ ತಾಯಿಯ ಹೊಟ್ಟಯುರಿಯಿಂದ, ಗರ್ಭಪಾತದಿಂದ ಸಿದ್ಧಿಪೂರ್ವದಲ್ಲಿ ಭಗ್ನಸಿದ್ಧರಾಗಿ ಹುಟ್ಟಿದ ಕೌರವರು ಶಕ್ತರಾದರೂ ಪತಿತರಾದರು. ಮಹಾಭಾರತ ಈ ಮಹಾಪತನವನ್ನು ಚಿತ್ರಿಸಿದೆ.

ಕೌರವನಿಗೆ ಪಾಂಡವರಲ್ಲಿದ್ದ ಸಹಜ ವೈರಕ್ಕೆ ಪೋಷಕವಾಗುವಂತಹ ನಾಲ್ಕಾರು ಸನ್ನಿವೇಶಗಳನ್ನು ಕುಮಾರವ್ಯಾಸ ಬಹು ಸುಂದರವಾಗಿ ಚಿತ್ರಿಸಿದ್ದಾನೆ. ಚಿಕ್ಕಂದಿನಲ್ಲಿ ಭೀಮನ ಕೋಟಲೆಯಿಂದ ಹೊತ್ತಿಕೊಂಡ ಒಳಗಿದ್ದ ವೈರ, ದ್ರೌಪದೀ ಸ್ವಯಂವರದಲ್ಲಾದ ಪರಿಭವದಿಂದ, ರಾಜಸೂಯದಲ್ಲಾದ ನೂರಾರುಬಗೆಯ ಅಹಂಭಂಗ ಮಾನಭಂಗಗಳಿಂದ, ಚಿತ್ರಸೇನ ಪ್ರಸಂಗದಲ್ಲಾದ ಆತ್ಮಹತ್ಯಾಕಾರಿಯಾದ ಭಯಂಕರ ಅಪಮಾನದಿಂದ ದುರ್ದಮ್ಯವಾದ ವಂಶನಾಶಕ ಹಾಗೂ ಆತ್ಮನಾಶಕವಾದ ದಾವಾನಲನಾಗಿ ವೃದ್ಧಿಯಾಗುವುದನ್ನು ಕವಿ ಕುಮಾರವ್ಯಾಸ ಚಿತ್ರಿಸಿದ್ದಾನೆ. (ಇಲ್ಲಿ ಕೆಲವು ಕಡೆ ಕೌರವನಿಗಾಗಿ ಮರುಕ ಪಡುತ್ತೇವೆ.) ಇಂತಹ ವೈರಕ್ಕೆ ಸಹಜ ಚಲ ಪುಟವಿಡುತ್ತದೆ; ಕೃಷ್ಣ ಅದಕ್ಕೆ ಹದಗೊಡುತ್ತಾನೆ. ಇದಕ್ಕೆ ಶ್ರಿಕೃಷ್ಣ ರಾಯಭಾರ ಪ್ರಸಂಗವೆ ಸಾಕು ಸಾಕ್ಷಿ. ಕೌರವನಿಗೆ ಆಗೊಮ್ಮೆ ಕೃಷ್ಣನ ಚಾಲನಮಂತ್ರ ಕಂಡಿತು. ರಾಜಸಭೆಯಲ್ಲಿ ಎಲ್ಲರಿಗೂ ವಿಶ್ವರೂಪವನ್ನು ತೋರಿ ತನಗೆ ಮರೆಮಾಡಿದ – ಅವನೂ ಕಂಡಿದ್ದರೇನಾಗುತ್ತಿತ್ತೊ ಹೇಳುವರಾರು? – ಶ್ರೀಕೃಷ್ಣನ ಮಾಯಾಜಾಲವನ್ನರಿತು ಹೇಳುತ್ತಾನೆ ಕೌರವ:

‘ಎನ್ನ ಹೃದಯದೊಳಿರ್ದು ಮುರಿವನು ಗನ್ನದಲಿ ಸಂಧಿಯನು; ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ಹದನನಾಡಿಸುವ;
ಭಿನ್ನನಂತಿರೆ ತೋರಿ ಭಿನ್ನಾಭಿನ್ನನೆನಿಸಿಯೆ ಮೆರೆವ, ತಿಳಿಯಲ
ಭಿನ್ನನೀ ಮುರವೈರಿ, ನಾವಿನ್ನಂಜಲೇಕೆಂದ!

ಮತ್ತೆ ಕೇಳಿ:

ಮಣಿದು ಬದುಕುವನಲ್ಲ, ಹಗೆಯಲಿ ಸೆಣಸಿ ಬಿಡುವವನಲ್ಲ, ದಿಟ ಧಾ
ರುಣಿಯ ಸಿರಿಗೆಳೆಸುವನಲ್ಲಳುಕಿಲ್ಲ ಕಾಯದಲಿ!
ರಣಮಹೋತ್ಸವವೆನ್ನ ಮತ, ಕೈ ದಣಿಯೆ ಹೊಯ್ದಾಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ!’

ಇದಲ್ಲವೆ ರೀತಿ! ಕೃಷ್ಣಮಾಯೆಯನ್ನರಿತೂ ಅದನ್ನು ಎದುರಿಸುವ ಛಲ! ನಾಟಕದ ನಟನಾದವನು ತನ್ನ ಮುನ್ನಿನ ಸ್ವರೂಪವನ್ನೂ ತನ್ನ ಸೂತ್ರಧಾರಿಯನ್ನೂ ಮರೆತಂತೆ ಅಭಿನಯಿಸಬೇಕಾದರೂ ಒಮ್ಮೊಮ್ಮೆ ಅದು ಸ್ಮೃತಿಪಟಲದ ಮೇಲೆ ಹಾಯ್ದುಹೋಗುವುದುಂಟು. ತಲ್ಲೀನತೆಯಿಂದ ಅಪಾಯವಾದರೆ ಈ ಬಗೆಯ ಅತಿ ಎಚ್ಚರದಿಂದ ರಸಾಭಾಸವುಂಟಾಗಬಹುದು, ಇಲ್ಲ ರಸಭಂಗವಾದರೂ ಆಗಬಹುದು. ಇವೆರಡರ, ಅಂದರೆ ಎಚ್ಚರ ಮರವೆಗಳ, ಮಧ್ಯೆಯಿದ್ದು ರಸೋತ್ಕರ್ಷಮಾಡುವ ನಟನೆ ನಟ. ಕುಮಾರವ್ಯಾಸನ ಕೌರವ ಅಂತಹವನು. ಕೃಷ್ಣನೊಡನೆ ಸೆಣಸುತ್ತಾನೆ-ರಾಜ್ಯಕ್ಕಾಗಿಯಲ್ಲ, ಕೈವಲ್ಯಕ್ಕಾಗಿ. ಹಾಗೆ ಕೈದಣಿಯಹೊಯ್ದಾಡಿ ಸೆಣಸಾಡುವುದರಲ್ಲಿಯೆ ಮಹೋತ್ಸವವುಂಟಂತೆ. ಕೌರವ ಪಾಂಡವರನ್ನು ಕೆಣಕಿ ಚಲಗಾರ, ಅಭಿಮಾನಿ, ರಾಜ್ಯಕಾಮಿ ಎನಿಸಿಕೊಂಡಂತೆಯೆ ಕೃಷ್ಣನನ್ನು ಕೆಣಕಿ ಕೈವಲ್ಯ ಕಾಮಿಯೆನಿಸಿಕೊಳ್ಳುತ್ತಾನೆ. ಇಂತಹವನು ಮಡಿದಾಗ ಕವಿ ಹೇಳುತ್ತಾನೆ ‘ರುಧಿರದ ತಿಲಕನಾದನಲೈ ಧರಾಂಗನೆಗೆ ’, ಎಂದು. ಈ ಒಂದು ರೂಪಕ ಕೌರವನ ಪಾತ್ರವನ್ನೆ ತೆಕ್ಕನೆ ಮೇಲೊಯ್ಯುತ್ತದೆ.

ಈ ಕೌರವ ಕರ್ಣರ ಪ್ರೇಮ ಮಹಾಭಾರತವನ್ನೆಲ್ಲಾ ಬಿಗಿದಪ್ಪಿತಲ್ಲ! ಏನಾದರೂ ಆ ಬಿಗಿತಕ್ಕೆ ಧಕ್ಕೆ ಬಂದಿದ್ದರೇನಾಗುತ್ತಿತ್ತು? ಅರ್ಜುನ ಕೃಷ್ಣರ ಪ್ರೇಮ ಒಂದು ಕಡೆ, ಕೌರವ ಕರ್ಣರ ಪ್ರೇಮ ಮತ್ತೊಂದು ಕಡೆ. ಯಾವುದು ಹೆಚ್ಚು, ಯಾವುದು ಶ್ರೇಷ್ಠ, ಯಾರು ಹೇಳಬಲ್ಲರು? ಕರ್ಣನ ಜೀವಿತಕ್ಕೆ ಕೌರವ ದೊರೆತದ್ದು ಒಂದು ವಿಚಿತ್ರ ಯೋಗ. ಆದರೆ ಕೃಷ್ಣಾರ್ಜುನರ ಸ್ನೇಹಕ್ಕೆ ಅಘಟಿತವಾದುದೇನೂ ನಡೆಯಬೇಕಾಗಿರಲಿಲ್ಲ. ಹುಟ್ಟಿನಿಂದ ಸಂಬಂಧಿಗಳು; ಹುಟ್ಟಿಗಿಂತ ಹಿಂದೆ ಹೋದರೂ ನರನಾರಾಯಣರಾಗಿ ಸಂಬಂಧಿಗಳು. ಆದರೆ ಕ್ಷತ್ರಿಯ ತಿರಸ್ಕೃತನಾದ, ಗುರುತಿರಸ್ಕೃತನಾದ ಕರ್ಣನನ್ನು ಪ್ರೀತಿಸಲು ಕೌರವನಿಗೇನು ಪ್ರಬಲ ಕಾರಣವಿತ್ತು? ಪಾಂಡವರ ದ್ವೇಷ, ಗುರುಹಿರಿಯರ ತಿರಸ್ಕಾರಗಳಿಗೆ ಪಕ್ಕಾಗಿದ್ದ ಅವನಿಗೆ ಯಾರಾದರೊಬ್ಬರು ಸತ್ವಯುತರ ಗೆಳೆತನ ಬೇಕಿತ್ತು. ಕರ್ಣನಲ್ಲಿ ಆ ಗೆಳೆತನ ಸಿಕ್ಕಿತು. ಜೊತೆಗೆ ಸನ್ನಿವೇಶ ಬೇರೆ ಹಾಗೆಯೆ ಕೂಡಿಬಂತು. ಶಸ್ತ್ರಪ್ರದರ್ಶಕ್ಕೆ ಯೋಗ್ಯನಲ್ಲವೆಂದು ಗುರುವೆ ಮೊದಲಾದವರೆಲ್ಲ ಧಿಕ್ಕಾರಮಾಡಿದಾಗ, ಬಹಿರಂಗವಾಗಿ, ನಿಷ್ಕಾರಣವಾಗಿ ಅವಮಾನಿತನಾದ ರವಿಕುಮಾರನ ಭಾಗ್ಯಕ್ಕೆ ದೈವವಾಗಿ, ಮಾನವಾಗಿ, ರಕ್ಷೆಯಾಗಿ ಬರುತ್ತಾನೆ ಕೌರವ. ಅವನ ಆ ಪ್ರೀತಿಗೆ ಪಾಂಡವರ ದ್ವೇಷವೆಷ್ಟು ಕಾರಣ, ಕರ್ಣವಿಷಯವಾದ ನಿರ್ವ್ಯಾಜ ಪ್ರೀತಿಯೆಷ್ಟು ಕಾರಣ ಎಂದು ಯೋಚಿಸಿದರೆ ಆಶ್ಚರ‍್ಯವಾಗಬಹುದು. ದುರ‍್ಯೋಧನನ ಸ್ನೇಹ ಸ್ವಲ್ಪ ಸ್ವಾರ್ಥ ಕಲುಷಿತವಾದದ್ದು; ಕರ್ಣನದು ನಿರ್ಮಲವಾದದ್ದು, ಪ್ರಗಾಢವಾದದ್ದು, ಪ್ರಾಣಾರ್ಪಣೆಯನ್ನು ಮಾಡಿಸುವಷ್ಟು ಮಹಿಮೆಯುಳ್ಳದ್ದು. ಆ ಸ್ನೇಹ ಭಗವದ್‌ಭಕ್ತಿಗೆ ಸಮಾನವಾದದ್ದು. ತನ್ನ ಸ್ವಾಮಿ ಎಂತಾದರೂ ವರ್ತಿಸಲಿ, ಅವನು ತನ್ನ ಸ್ನೇಹಧರ್ಮವನ್ನು ಮರೆಯಲಿಲ್ಲ. ಅದೆಷ್ಟು ಬಗೆಯಾಗಿ, ತನ್ನ ಸ್ವಾಮಿಗಾಗಿ ಸ್ನೇಹಚೋದಿತನಾಗಿ ಮರುಗಿದನೊ. ಇದನ್ನು ಕುರಿತ ಅವನ ಹೃತ್‌ಸಂವಾದಗಳು ಕರುಣಾಪುರ್ಣ ಕಲಶಗಳು. ನಾರಣಪ್ಪನ ಪ್ರತಿಭೆಯ ಗಂಗೆ ಆ ಅಕ್ಷಯಕಲಶವನ್ನು ಸದಾ ತುಂಬುತ್ತಿರುತ್ತದೆ. ಕರ್ಣ ಮಡಿದರೂ ಆ ಕಲಶ ಉಕ್ಕುತ್ತಿರುತ್ತದೆ.

ಒಟ್ಟಿನಲ್ಲಿ ಕರ್ಣಸುಯೋಧನರ ಸ್ನೇಹಬಂಧನ ಮಹಾಭಾರತವೆಲ್ಲವನ್ನೂ ವ್ಯಾಪಿಸಿ ಆವರಿಸಿದೆ. ತಾನು ಪಾಂಡವನೆಂದು ತಿಳಿದ ಮೇಲೆ ಧರ್ಮಸಂಕಟಕ್ಕೆ ಒಳಗಾದ ಕರ್ಣ ಕೌರವನನ್ನು ಬಿಟ್ಟು ಅವರ ಪಕ್ಷಕ್ಕೆ ಸೇರುವುದಿರಲಿ, ತಾನು ಪಾಂಡವರ ಹಿರಿಯ ಎಂಬುದೆ ಯಾರಿಗೂ ತಿಳಿಯದ ಹಾಗೆ ವರ್ತಿಸುತ್ತಾನೆ- ಕೌರವಪ್ರೀತಿಗಾಗಿ. ಅವನು ಅಷ್ಟು ಮಾಡದಿದ್ದರೆ, ಇಲ್ಲವೆ ಪಾಂಡವರಿಗೆ ತನ್ನ ಜನ್ಮ ವೃತ್ತಾಂತ ತಿಳಿಯುವಂತೆ ಮಾಡಿದ್ದರೆ ಏನಾಗುತ್ತಿತ್ತೊ? ಯುದ್ಧ ನಿಲ್ಲುತ್ತಿತ್ತೊ? ಇರಬಹುದು. ಆದರೆ ತನ್ನ ಸ್ವಾಮಿ, ತನ್ನನ್ನು ಸಾಕಿದ ಪ್ರಿಯಮಿತ್ರ ಕೌರವಸ್ವಾಮಿ, ಚಲಕ್ಕಾಗಿ ಬದುಕಿ ಸೆಣಸಿದಲ್ಲದೆ ಮಣಿದು ಬದುಕುವುದಿಲ್ಲವೆಂದು ಪಣಗೊಂಡಿದ್ದ ಸುಯೋಧನ ಏನಾಗುತ್ತಿದ್ದ? ಹೇಳುವುದು ಕಷ್ಟ. ಎಂತಹ ಮಹಾನಿಷ್ಠುರತ್ಯಾಗ! ನಮಗೆ ತಿಳಿದಿರುವ ಕರ್ಣ ಬರಿಯ ದಾನವೀರ; ಆದರೆ ಈ ತ್ಯಾಗವೀರನನ್ನೂ ತಿಳಿಯಬೇಕು. ಅವನ ಮಹಾತ್ಯಾಗ ತನಗಾಗಿಯಲ್ಲದೆ ಕೌರವನಿಗಾಗಿ ಅಳುತ್ತದೆ; ‘ಬಾಳಲರಿಯದೆ ಕೆಟ್ಟನೋ ಕೌರವನು’ ಎಂದು ಅವನಿಗಾಗಿ ಮರುಗುತ್ತದೆ. ಕೌರವನೊಡನೆ ಸಂಧಾನದ ಮಾತನ್ನಾಡೆಂದು ಶ್ರೀಕೃಷ್ಣನೆ ಸೂಚಿಸಿದಾಗಲೂ ಸ್ನೇಹಬಂಧಿತನಾಗಿ, ವಿಧಿಬಂಧಿತನಾಗಿ ಕರ್ಣ ಸುಮ್ಮನಾಗುತ್ತಾನೆ.

ಕುಮಾರವ್ಯಾಸನ ಕರ್ಣನ ಜೀವನದಲ್ಲಿ ಶ್ರೀಕೃಷ್ಣ ಪರಿಣಾಮಕಾರಿಯಾದ ಶಕ್ತಿಯಾಗಿ ವರ್ತಿಸುತ್ತಾನೆ. ಶ್ರೀಕೃಷ್ಣ ಯಾರು ಏನು ಎಂಬುದನ್ನು ಕರ್ಣ ಚೆನ್ನಾಗಿ ಬಲ್ಲ. ಆದರೂ ಸ್ನೇಹಬಂಧಿತನಾಗಿ, ವಿಧಿಚಾಲಿತನಾಗಿ ಬಾಯಿಕಟ್ಟಿಕೊಂಡವನಂತೆ ಇರುತ್ತಾನೆ. ಕುಮಾರವ್ಯಾಸ ಕರ್ಣನ ಮೇಲಾದ ಶ್ರೀಕೃಷ್ಣನ ಪ್ರಭಾವವನ್ನು ಅದ್ಬುತವಾಗಿ ಚಿತ್ರಿಸಿದ್ದಾನೆ. ಆದಿಪರ್ವದಲ್ಲಿ ಶಸ್ತ್ರಪ್ರದರ್ಶನ ಸನ್ನಿವೇಶಧಲ್ಲಿ ಕರ್ಣನನ್ನು ಕಂಡ ಕುಂತಿಗೆ ತಾಯ್ತನದ ನೆನಪಾಗಿ ಅದನ್ನು ಹೇಳಬೇಕೆಂದಾಗ ವಿಷ್ಣುಮಾಯೆ ಹಾಗಾಗದಂತೆ ಮಾಡುತ್ತದಂತೆ. ‘ಎನ್ನ ಮಗನೆನೆ ಬಂದುದಿಲ್ಲದು, ತನ್ನ ವಶವೇ ವಿಷ್ಣುಮಾಯೆಯ ಬಿನ್ನಣವಲೇ; ಮಾತು ಬಿಗಿದುದು, ಮನವನೊಳಗಿಕ್ಕಿ ತನ್ನ ತಾನೇ ಮರುಗಿ ಮೂರ್ಛಾಪನ್ನೆಯಾದಳು ಕುಂತಿ’! (ವ್ಯಾಸರಲ್ಲಿ ಈ ಸನ್ನಿವೇಶ ಚಿತ್ರಣ ಬಂದರೂ ಅದರಲ್ಲಿ ಕೃಷ್ಣಮಾಯಾಕಲ್ಪನೆಯಿಲ್ಲ.) ಮುಂದೆಲ್ಲ ಹೀಗೆಯ ಕೃಷ್ಣಮಾಯೆ ಬೀಸಾಟವಾಡಿದೆ. ಕರ್ಣನ ಬದುಕು ಆ ಕೃಷ್ಣಮಾಯೆಗೆ ವಶವರ್ತಿಯಾಗಿಯೇ ಮುಂದುವರಿಯಿತು; ಅವನ ಜನ್ಮವೂ ಆ ಮಾಯೆಯ ಪ್ರಭಾವಕ್ಕೆ ಅಧೀನ. ಅದರ ಹೊಣೆಗಾರಿಕೆಗೆ ಕುಂತಿ ನಿಮಿತ್ತಮಾತ್ರ.