ಸುಮಾರು ನೂರೈವತ್ತು ವರ್ಷಗಳ ಹಿಂದಿನ ಮಾತು.  ಈಗಿನ ತಮಿಳುನಾಡಿನಲ್ಲಿ ತಂಜಾವೂರು ಎನ್ನುವ ಪಟ್ಟಣವಿದೆಯಲ್ಲ, ಅದು ಮೊದಲಿಗೆ ಸಂಸ್ಥಾನವಾಗಿದ್ದಿತು.  ಇಂಗ್ಲೀಷರ ಆಡಳಿತ ಅಲ್ಲಿ ಬರುವ ಮುಂಚೆ ಮರಾಠಿ ರಾಜರು ಆಳುತ್ತಿದ್ದರು. ಇವರಲ್ಲಿ ಒಬ್ಬ ಶರಭೋಜಿ ಮಹಾರಾಜ.  ತುಂಬ ಓದಿದವನು,ವಿದ್ಯೆಯಲ್ಲಿ ಆಸಕ್ತ.  ಸಾಹಿತ್ಯ, ಸಂಗೀತ, ಚಿತ್ರಕಲೆ ಎಂದರೆ ತುಂಬ ಇಷ್ಟ ಅವನಿಗೆ.  ದೇಶದಲ್ಲಿ ಹೆಸರುವಾಸಿಯದ ವಿದ್ವಾಂಸರೆಲ್ಲ ತನ್ನ ಆಸ್ಥಾನದಲ್ಲಿರಬೇಕು ಎನ್ನುವ ಹಂಬಲ ಅವನದು.  ಎಲ್ಲೆಲ್ಲಿಂದಲೋ ಅವರನ್ನು ಕರೆಸಿಕೊಂಡು ಅವರಿಗೆ ಬೇಕಾದಷ್ಟು ಹಣ ಕೊಟ್ಟು, ಸನ್ಮಾನ ಮಾಡಿ ತನ್ನ ರಾಜ್ಯದಲ್ಲಿಯೇ ಇರಿಸಿಕೊಳ್ಳುತ್ತಿದ್ದ,

ಹೀಗಿರುವಾಗ ತನ್ನರಾಜ್ಯದಲ್ಲಿಯೇ ತಿರುವಯ್ಯಾರು ಎಂಬ ಹಳ್ಳಿಯಲ್ಲಿ ತುಂಬ ದೊಡ್ಡ ಸಂಗೀತ ವಿದ್ವಾಂಸರಿದ್ದಾರೆಂದು ತಿಳಿದುಬಂದಿತು. ವೀಣೆ ನುಡಿಸುವುದರಲ್ಲಿ ಗಟ್ಟಿಗರು, ಬಾಯಿ ಹಾಡಿಕೆಯಲ್ಲಿಯೂ ಅಷ್ಟೇ ಶಾಸ್ತ್ರವೂ ಚೆನ್ನಾಗಿ ತಿಳಿದಿದೆ.  ಅಷ್ಟು ಮಾತ್ರವಲ್ಲ, ತಾವೇ ಹಾಡುಗಳನ್ನುರಚಿಸಿ ಹೇಳಿಕೊಡುತ್ತಾರೆ; ಅವರ ಹಾಡುಗಳೆಂದರೆ ಬಲು ಸೊಗಸಿನವು, ಮುತ್ತಿನಂಥ ಮಾತು, ಆಳವಾದ ಅರ್ಥ. ಮೇಲಾಗಿ ದೈವಭಕ್ತರು. ಹೀಗೆಲ್ಲ ಅವರ ವಿಚಾರವಾಗಿ ಕೇಳಿದ ದೊರೆ ಅವರನ್ನು ತನ್ನಬಳಿ ಕರೆಸಿಕೊಳ್ಳಲು ನಿಶ್ಚಯಿಸಿದ.

ತನ್ನ ಹತ್ತಿರದ ಸಿಬ್ಬಂದಿಯಿಂದ ಬುದ್ಧಿವಂತನಾದ ಒಬ್ಬ ಅಧಿಕಾರಿಯನ್ನು ತಿರುವಯ್ಯಾರಿ ಕಳುಹಿಸಿದ, ಶರಭೋಜಿ ಮಹಾರಾಜ. ಈ ಅಧಿಕಾರಿ ಅರಮನೆಯಿಂದ ಹಣ, ಜರತಾರಿ ಶಾಲು, ಫಲತಾಂಬೂಲು ಎಲ್ಲವನ್ನು ಚಿನ್ನದ ಹರಿವಾಣದಲ್ಲಿ ಇರಿಸಿಕೊಂಡು ಹಳ್ಳಿಗೆ ಬಂದು ಆ ಸಂಗೀತ ವಿದ್ವಾಂಸರ ಮನೆಯ ಮುಂದೆ ನಿಂತ. ಒಳಗೆ ವಿದ್ವಾಂಸರು ಹತ್ತಾರು ಮಂದಿ ಶಿಷ್ಯರಿಗೆ ಪಾಠ ಹೇಳಿಕೊಡುತ್ತಿದ್ದರು.  ಪಾಠ ಮುಗಿಯುವವರೆಗೂ ಕಾದಿದ್ದು ದೊರೆಯ ಅಧಿಕಾರಿ ಅನಂತರ ಒಳಗೆ ಹೋಗಿ ವಿದ್ವಾಂಸರಿಗೆ ನಮಸ್ಕಾರ ಮಾಡಿ, ಅರಮನೆಯ ಉಡುಗೊರೆಗಳನ್ನು ಅವರ ಮುಂದಿಟ್ಟು, “ಸ್ವಾಮಿ, ತಂಜಾವೂರು ಮಹಾರಾಜರು ತಮ್ಮನ್ನು ಆಸ್ಥಾನಕ್ಕೆ ಬರಮಾಡಿಕೊಳ್ಳಲು ಬಯಸಿದ್ದಾರೆ. ದಯಮಾಡಬೇಕು,  ಪ್ರಯಾಣಕ್ಕೆ ಮೇನೆ ಸಿದ್ಧವಾಗಿದೆ” ಎಂದು ಅರಿಕೆ ಮಾಡಿಕೊಂಡ. ಅದಕ್ಕೆ ವಿದ್ವಾಂಸರು “ಅಯ್ಯಾ, ಅರಮನೆಯ ಉಡುಗೊರೆಗಳು ನನಗೆ ಬೇಕಾಗಿಲ್ಲ. ಈ ಹಳ್ಳಿಯನ್ನು ಬಿಟ್ಟು ಬೇರೆಲ್ಲಿಗೂ ನಾನು ಬರುವವನಲ್ಲ” ಎಂದು ಬಿಟ್ಟರು.

ಅಧಿಕಾರಿಗೆ ಅಶ್ಚರ್ಯವಾಯಿತು: ಹೀಗೆ ಯಾರು ಅದುವರೆಗೂ ಹೇಳಿದುದಿಲ್ಲ, ದೊರೆಯ ಕರೆಯನ್ನು ತಳ್ಳಿ ಹಾಕಿದವರಿಗೆ,ಉಡುಗೊರೆಯನ್ನು ನಿರಾಕರಿಸಿದವರಿಲ್ಲ! ಅಧಿಕಾರಿ ಮತ್ತೆ ಹೇಳೀದ- “ಸ್ವಾಮಿ, ಅರಸರ ಅಶ್ರಯವಾದರೆ ಅಪಾರವಾದ ನಿಧಿಯಿದ್ದಂತೆ; ಸಂಪತ್ತು, ಸೌಕರ್ಯಗಳೆಲ್ಲವೂ ಸಿಗುತ್ತವೆ.” ಇದನ್ನು ಕೇಳಿ ವಿದ್ವಾಂಸರು ನಕ್ಕು ಆಗಲೇ ಒಂದು ಹಾಡನ್ನು ರಚಿಸಿ ಹಾಡಿದರು.  “ನಿಧಿಯಿದ್ದರೆ ಸುಖವೇ, ರಾಮನ ಸನ್ನಿಧಿ ಸೇವೆ ಸುಖವೇ? ತಿಳಿದು ಹೇಳಿ !” ಎಂದು ಈ ಹಾಡಿನ ತಾತ್ಪರ್ಯ. ಅರಸರ ಆಶ್ರಯ ಬಯಸಿದರೆ ಅವರನ್ನು ಹೊಗಳಬೇಕು. ಅವರ ಸೇವೆ ಮಾಡಬೇಕು. ನಿಮ್ಮ ದೊರೆಯಿಂದ ನನಗೆ ಆಗಬೇಕಾದುದು ಏನೂ ಇಲ್ಲ” ಎಂದು ಹೇಳಿ ಅಧಿಕಾರಿಯನ್ನು ಹಿಂದಕ್ಕೆ ಕಳುಹಿಸಿಬಿಟ್ಟರು.

ಹೀಗೆಯೇ ಹಲವಾರು ರಾಜ-ಮಹಾರಾಜರು ಇವರನ್ನು ತಂತಮ್ಮ ಆಸ್ಥಾನಗಳಿಗೆ ಕರೆಯಿಸಿಕೊಳ್ಳುವ ಪ್ರಯತ್ನ ಮಾಡಿದರು: ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು,  ಅಷ್ಟೆ. ಮೈಸೂರು ಮಹಾರಾಜರೂ, ತಿರುವಾಂಕೂರಿನ ಸ್ವಾತಿತುರುನಾಳ್ ಮಹಾರಾಜರೂ ಹೀಗೆ ನಿರಾಶರಾದವರಲ್ಲಿ ಸೇರಿದ್ದರು.  ಆ ವಿದ್ವಾಂಸರು ಶ್ರೀಮಂತರೇನಲ್ಲ, ಬಡವರೇ, ದಿನವೂ ಮನೆ ಮನೆಗೆ ಹೋಗಿ ಉಪಾದಾನ ಬೇಡಿ, ಅಕ್ಕಿಯನ್ನು ತಂದು ಮನೆಯಲ್ಲಿ ಅಡುಗೆ ಮಾಡಿ ಊಟಮಾಡಬೇಕು. ಇದಕ್ಕೆ ಊಂಛವೃತ್ತಿ ಎನ್ನುತ್ತಾರೆ. ಬೇರೆ ಯಾವ ವೃತ್ತಿಯಾಗಲೀ ಉತ್ಪತ್ತಿಯಾಗಲೀ ಇರಲಿಲ್ಲ. ಆದರೂ ಅವರಿವರನ್ನು ಅಶ್ರಯಿಸಿ, ಅನುಸರಿಸಿ ಅನುಕೂಲ ಪಡೆಯಬೇಕೆಂಬ ಇಷ್ಟ ಅವರಿಗಿರಲಿಲ್ಲ.

ಮತ್ತೊಮ್ಮೆ ತಿರುವಾಂಕೂರಿನ ದೊರೆ ಇವರನ್ನು ಕರೆಯಿಸಿಕೊಳ್ಳಬೇಕೆಂದು ಪ್ರಯತ್ನಪಟ್ಟು, ಅವರು ಬಾರದಿರಲು ತಾನೇ ಅವರನ್ನು ಕಾಣಲೆಂದು ಅವರಿದ್ದ ಹಳ್ಳಿಗೆ ಹೋದ. ಆಗ ವಿದ್ವಾಂಸರು ಎಂದಿನಂತೆ ತಂಬೂರಿ ಮೀಟುತ್ತ ದೇವರ ನಾಮಗಳನ್ನು ಹಾಡಿಕೊಂಡು ಉಪಾದಾನಕ್ಕೆ ಹೋಗುತ್ತಿದ್ದರು. ಅವರು ಮನೆಯ ಮುಂದೆ ನಿಂತಾಗ ಮನೆಯವರು ಹೊರಗೆ ಬಂದು ಒಂದು ಹಿಡಿ ಅಕ್ಕಿಯನ್ನು ಅವರ ಜೋಳಿಗೆಗೆ ಹಾಕುತ್ತಿದ್ದರು; ವಿದ್ವಾಂಸರು ಮುಂದಿನ ಮನೆಗೆ ಹೋಗುತ್ತಿದ್ದರು.  ದೊರೆ ಇದನ್ನು ನೋಡಿದ, ಅವರ ದಿವ್ಯವಾದ ಗಾಯನವನ್ನು ಕೇಳಿದ, ಅವರಲ್ಲಿ ಶ್ರದ್ದೆ ಮೂಡಿತು. ಅವರ ಬಡತನವನ್ನು ಹರಿಸಬೇಕೆಂದು, ತುಂಬ ಬೆಲೆಬಾಳುವ ಚಿನ್ನದ ನಾಣ್ಯವೊಂದನ್ನು ತನ್ನ ಸೇವಕನಿಗೆ ಕೊಟ್ಟು ಅದನ್ನು ವಿದ್ವಾಂಸರ ಜೋಳಿಗೆಯೊಳಗೆ ಹಾಕುವಂತೆ ಕಳುಹಿಸಿದ. ಸೇವಕ ಹಾಗೆಯೇ ಮಾಡಿದ.

ವಿದ್ವಾಂಸರು ಅದನ್ನು ನೋಡಿ, ಅದೇನೆಂದು ಅವನನ್ನು ಕೇಳಿದರು. “ಇದು ಮಹಾರಾಜರು ತಮಗೆ ಕೊಟ್ಟಿರುವ ಸನ್ಮಾನ” ಎಂದು ಆತ ಹೇಳಲು, ವಿದ್ವಾಂಸರು  ಅಯ್ಯೋ ಅರಸನ ಸ್ವತ್ತು ಇದರಲ್ಲಿ ಸೇರಿ, ಉಪಾದಾನದ ಅಕ್ಕಿಯೆಲ್ಲವೂ ಕೆಟ್ಟಿತ್ತು. ನನಗೆ ಇದರ ಗೊಡವೆ ಬೇಡ!” ಎಂದು ತಮ್ಮ ಜೋಳಿಗೆಯಲ್ಲಿದ್ದ ಅಕ್ಕಿಯೆಲ್ಲವನ್ನೂ,ಚಿನ್ನದ ನಾಣ್ಯದೊಂದಿಗೆ , ಬೀದಿಯ ಬದಿಯಲ್ಲಿ ಸುರಿದು, ಮನೆಗೆ ಹೊರಟು ಹೋದರು. ಆದಿನ ಅವರು ಉಪವಾಸವೇ !

ದೊರೆ ಇದನ್ನು ಕೇಳಿ, ತನ್ನ ತಪ್ಪಿಗೆ ಮರುಗಿ ಅವರ ಮನ್ನಣೆಯನ್ನು ಪಡೆದು ಹಿಂದಿರುಗಿದ. ಮುಂದೆ ಅವರನ್ನು ತಂತಮ್ಮ ಆಸ್ಥಾನಗಳಿಗೆ ಕರೆಯಿಸಿಕೊಳ್ಳುವ ಸಾಹಸವನ್ನು ಯಾವ ಅರಸರೂ ಮಾಡಲಿಲ್ಲ; ಅವರಿಗೆ ಹಣವನ್ನು ಹೊರಿಸಿಕೊಡುತ್ತೇನೆಂಬ ಹೆಮ್ಮೆ ಯಾವ ಶ್ರೀಮಂತನಿಗೂ ಬರಲಿಲ್ಲ. ಕಡೆಯವರೆಗೂ ಅವರು ಬಡವರಾಗಿಯೇ ಉಳಿದರು.  ಆದರೆ ನಾಡಿಗೆ ನಾಡೇ ಅವರನ್ನು ಕೊಂಡಾಡಿತ್ತು; ಅವರು ಮರೆಯಾಗಿ ನೂರು ವರ್ಷಗಳಿಗಿಂತ ಹೆಚ್ಚಾದರೂ ನಾವು ಅವರನ್ನು ಮರೆಯಲಾರೇವು. ಅಷ್ಟು ಅವರ ಪ್ರತಿಭೆ, ಅವರ ಪ್ರಭಾವ, ಅವರು ಮನುಷ್ಯರೇ ಆದರೂ ಆವೆಲ್ಲ ಅವರನ್ನುದೇವರಂತೆ ಬಗೆದು ಆರಾಧಿಸುತ್ತೇವೆ. ಅವರು ಯಾರು ಗೊತ್ತೇ? ತ್ಯಾಗರಾಜರು ಅಥವಾ ತ್ಯಾಗರಾಜ ಸ್ವಾಮಿಗಳು.

ಹಿರಿಯರೊಂದಿಗೆ ನೀವು ಯಾವಾಗಲಾದರೂ ಸಂಗೀತ ಸಭೆಗಳಿಗೆ ಹೋಗಿದ್ದೀರಲ್ಲವೆ ? ಅಲ್ಲಿ ನೀವು ಕೇಳುವ ಹಾಡುಗಳಲ್ಲಿ “ತ್ಯಾಗರಾಜ ಕೀರ್ತನೆ”ಗಳೇ ಹೆಚ್ಚಲ್ಲವೇ? ಸಂಗೀತ ಶಾಲೆಗಳಲ್ಲಿ ತ್ಯಾಗರಾಜರ ಚಿತ್ರವನ್ನಿರಿಸಿ ಅದನ್ನು ಪೂಜೆ ಮಾಡುವುದನ್ನು ನೀವು ನೋಡಿರಬಹುದು. ನಗರದ ಹಲವೆಡೆ ಆಗಾಗ “ತ್ಯಾಗರಾಜೋತ್ಸವ ಗಳೂ ನಡೆಯುತ್ತವೆ,  ನೀವು ಗಮಿಸಿದ್ದೀರಿ. ಈ ತ್ಯಾಗರಾಜರು ಯಾರು ? ನಮ್ಮ ಜನ ಇವರನ್ನು ಇಷ್ಟೊಂದು ಮರ್ಯಾದೆಯಿಂದ ಏಕೆ ಕಂಡುಕೊಳ್ಳುತ್ತಾರೆ ?

ನಮ್ಮದೇಶದ ಸಂತರಲ್ಲಿ ತ್ಯಾಗರಾಜರು ಒಬ್ಬರು.  ಸಂತರೆಂದರೆ ಭಕ್ತಿಯಿಂದ, ಎಡೆಬಿಡದೆ ದೇವರನ್ನು ಬಯಸಿ, ತಮ್ಮ ಬಾಳನ್ನೆಲ್ಲ ದೇವರಿಗೆ ಮುಡಿಪಾಗಿರಿಸಿ, ಆ ಭಾವನೆಯಲ್ಲಿಯೇ ಬದುಕುವವರು. ತ್ಯಾಗರಾಜರು ಹೀಗೆ ಬದುಕಿದವರು.  ಭಗವಂತನ ಸ್ಮರಣೆಯಲ್ಲೆ ಬದುಕಿದ ಸಂತರು ಮಾತ್ರವಲ್ಲದೇ ತ್ಯಾಗರಾಜರು ಕವಿಗಳೂ ಆಗಿದ್ದರು: ಅವರ ಕವಿತೆಗಳನ್ನು ರಾಗಗಳಲ್ಲಿ ತಾಳದೊಂದಿಗೆ ಹಾಡುವುದನ್ನೂ ಅವರೇ ತಮ್ಮ ಶಿಷ್ಯರಿಗೆ ಕಲಿಸಿಕೊಟ್ಟರು. ಅವರ ಶಿಷ್ಯ ಪರಂಪರೆ ನಮ್ಮ ಕಾಲದವರೆಗೂ ಉಳಿದುಬಂದಿದೆ.

ತ್ಯಾಗರಾಜರು ಇದ್ದಕಾಲ ತುಂಬ ಹಿಂದೇನಲ್ಲ. ಅವರು ತೀರಿಕೊಂಡು ಈಗ್ಗೆ ನೂರು ಇಪ್ಪತ್ತೈದು ವರ್ಷಗಳಾದುವಷ್ಟೆ. ಆದರೆ ಸಾವಿರಾರು ವರ್ಷಗಳ ಹಿಂದಿನ ಋಷಿಗಳಂತೆ ಅವರ ವಿಚಾರವಾಗಿ ನಮ್ಮ ಕಲ್ಪನೆಯಿದೆ. ದೇವಲೋಕದ ಋಷಿ ನಾರದರ ಹೆಸರು ಕೇಳಿದ್ದೀರಷ್ಟೆ. ತ್ಯಗರಾಜರು ನಾರದರ ಅವತಾರವೆಂದೇ ಅವರ ಶಿಷ್ಯ ಪರಂಪರೆಯ ನಂಬಿಕೆ.  ರಾಮಾಯಣವನ್ನು ರಚಿಸಿದ ವಾಲ್ಮಿಕಿ ಋಷಿಗಳೇ ತ್ಯಾಗರಾಜರಾಗಿ ಅವತರಿಸಿದರೆಂದೂ ಹೇಳುತ್ತಾರೆ. ಜನ ಹೀಗೆ ನಂಬಬೇಕಾದರೆ ತ್ಯಾಗರಾಜರು ಎಷ್ಟು ದೊಡ್ಡ ಮನುಷ್ಯರಾಗಿರಬೇಕು, ಎಂಥ ಮಹಾತ್ಮರಾಗಿರಬೇಕು , ಊಹಿಸಿಕೊಳ್ಳಿ.

ನಮ್ಮ ಕಡೆ ಬಳಕೆಯಲ್ಲಿರುವ ಸಂಗಿತಕ್ಕೆ “ಕರ್ನಾಟಕ ಸಂಗೀತ” ಅಥವಾ “ದಕ್ಷಿಣಾಧಿ ಸಂಗೀತ” ಎಂದು ಹೆಸರು.  ಇದು ತುಂಬ ಹಳೆಯ ಪದ್ಧತಿಯ ಸಂಗೀತ. ಈ ಸಂಗೀತವನ್ನು ಜನರಿಗೆ ಹಿಡಿಸುವಂತೆ ಮಾಡಿದವರು ಪುರಂದರದಾಸರು. ತ್ಯಾಗರಾಜರಿಗೆ ಸುಮಾರು ಇನ್ನೂರು ವರ್ಷ ಹಿಂದೆ ಇದ್ದವರು.  ಅವರ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಅವರು ರಚಿಸಿರುವ ಲಕ್ಷ ಗಟ್ಟಲೆ ಹಾಡುಗಳಲ್ಲಿ ಸಾವಿರಾರು ಇಂದಿಗೂ ಬಳಕೆಯಲ್ಲಿವೆ. ಈಗಲೂ ಸಂಗೀತ ಕಲಿಯುವವರು “ಲಂಬೋದರ ಲಕುಮಿಕರ”, “ಕೆರೆಯ ನೀರನು ಕೆರೆಗೆ ಚೆಲ್ಲಿ” ಮೊದಲಾದ ಗೀತೆಗಳಿಂದ ಆರಂಭಿಸುತ್ತಾರಲ್ವೇ? ಇವನ್ನೆಲ್ಲ ಪುರಂದರದಾಸರೇ ರಚಿಸಿದ್ದು.ನಮ್ಮ ಸಂಗೀತಕ್ಕೆ ಅವರನ್ನು “ಪಿತಾಮಹ” ಎಂದರೆ “ತಾತ” ಎಂದು ಕರೆಯುತ್ತೇವೆ. ಅವರ ನಂತರ  ಸಂಗೀತದಲ್ಲಿ ಅಷ್ಟೆ ಹೆಸರುವಾಸಿಯಾದವರು ತ್ಯಾಗರಾಜರು. ಅವರೂ ಪುರಂದರದಾಸರ ಪರಂಪರೆಗೆ ಸೇರಿದವರು. ಪುರಂದರದಾಸರು ತಮ್ಮ ಹಾಡುಗಳನ್ನೆಲ್ಲ ಕನ್ನಡದಲ್ಲಿ ಮಾಡಿದ್ದಾರೆ: ತ್ಯಾಗರಾಜರ ಹಾಡುಗಳು ಬಹುಮಟ್ಟಿಗೆ ತೆಲುಗು ಭಾಷೆಯಲ್ಲಿವೆ, ಕೆಲವು ಸಂಸ್ಕೃತದಲ್ಲಿವೆ.

ತ್ಯಾಗರಾಜರಿದ್ದ ಕಾಲದಲ್ಲಿಯೇ,ಅದೇ ಪ್ರಾಂತ್ಯದಲ್ಲಿ ಇನ್ನಿಬ್ಬರಿದ್ದರು.   ತ್ಯಾಗರಾಜರಂತೆ ಇವರೂ ಸಂತರು, ಕವಿಗಳು, ಸಂಗೀತ ಪದ್ಧತಿಯನ್ನುಬೆಳೆಸಿದವರು,ನೂರಾರು ಕೀರ್ತನೆಗಳನ್ನುರಚಿಸಿದವರು.ಒಬ್ಬರು ಶ್ಯಾಮಶಾಸ್ತ್ರಿಗಳು, ಇನ್ನೊಬ್ಬರು ಮುತ್ತುಸ್ವಾಮಿ ದೀಕ್ಷಿತರು.  ನಮ್ಮ ಸಂಗೀತಕ್ಕೆ ಈ ಮೂವರು ಮೂರು ಕಣ್ಣುಗಳ ಹಾಗೆ, ಮೂವರು ದೇವತೆಗಳ ಹಾಗೆ. ಅದಕ್ಕಾಗಿಯೇ ಇವರನ್ನು “ಕರ್ನಾಟಕ ಸಂಗೀತದ ತ್ರಿ ಮೂರ್ತಿಗಳು” ಎಂದು ಕರೆಯುತ್ತಾರೆ.

ತ್ಯಾಗರಾಜರ ಹಿರಿಯರು:

ತ್ಯಾಗರಾಜರ ಹಿರಿಯರು ಆಂಧ್ರಪ್ರದೇಶದಲ್ಲಿ ಕರ್ನೂಲು ಜಿಲ್ಲೆಗೆ ಸೇರಿದ ಕಾಕರ್ಲ ಎಂಬ ಹಳ್ಳೀಯವರು.ತ್ಯಾಗರಾಜರ ಮುತ್ತಾತ ಪಂಚನದಬ್ರಹ್ಮ ಎನ್ನುವವರು ಈ ಹಳ್ಳಿಯನ್ನು ಬಿಟ್ಟು ೧೬೦೦ ಸುಮಾರಿಗೆ ತಂಜಾವೂರಿನ ಬಳಿಯಿರುವ ತಿರುವಾರೂರು ಎಂಬ ಹಳ್ಳಿಗೆ ಬಮದು ಅಲ್ಲಿ ನೆಲೆಸಿದರು.  ಅವರ ಮಗ, ಎಂದರೆ ತ್ಯಾಗರಾಜರ ತಾತ, ಗಿರಿರಾಜ ಬ್ರಹ್ಮ, ದೊಡ್ಡ ಪಂಡೀತರು,ಕವಿಗಳು, ತಂಜಾವೂರು ದೊರೆ ಅವರನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದ್ದ. ಇಂಥವರ ಮಗ ರಾಮಬ್ರಹ್ಮ ತಾವೂ ಪಂಡಿತರೆಂದು ಪ್ರಖ್ಯಾತರಾದುದು ಏನಾಶ್ಚರ್ಯ ?

ರಾಮ ಬ್ರಹ್ಮ ಪಂಡಿತರು ಮಾತ್ರವಲ್ಲ, ರಾಮಭಕ್ತರು. ಮನೆಯಲ್ಲಿ “ರಾಮಪಂಚಾಯತನ” (ಎಂದರೆ ರಾಮನ ಐವರು ಪರಿವಾರ- ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತ ಮತ್ತು ಸೀತೆ ಇವರು) ವನ್ನು ದಿನವೂ ಭಕ್ತಿಯಿಂದ ಪೂಜೆ ಮಾಡುವವರು: ರಾಮನವಮಿಯ ಸಂದರ್ಭದಲ್ಲಿ ಸಡಗರದಿಂದ ಉತ್ಸವ ಮಾಡುವರು. ತಂಜಾವೂರು ದೊರೆ ತುಲಜಾಜಿ ಮಹಾರಾಜ ಇವರನ್ನು ತನ್ನ ಅರಮನೆಗೆ ಕರೆಸಿಕೊಂಡು ಅವರಿಂದ ರಾಮಾಯಣವನ್ನು ಒದಿಸುತಿತದ್ದ.  ರಾಮ ಬ್ರಹ್ಮನ ಹೆಂಡತಿ ಸೀತಮ್ಮ: ಆಕೆಯೂ ಗಂಡನಂತೆಯೇ ಸಾಧು, ಭಕ್ತೆ.

ಇವರಿಗೆ ಮೂವರು ಮಕ್ಕಳು-ಪಂಚನದ ಬ್ರಹ್ಮ (ಅಥವಾ ಜಪ್ಯೇಶ), ಪಂಚಾಪಕೇಶಬ್ರಹ್ಮ ಮತ್ತು ತ್ಯಾಗಬ್ರಹ್ಮ ಎಂದು. ಮೊದಲು ಇಬ್ಬರು ಮಕ್ಕಳು ತುಂಬಾ ದುಷ್ಟರಾಗಿ ಬೆಳೆದರು; ಹಳ್ಳೀಯಲ್ಲೆಲ್ಲ ಪಟಿಂಗರೆಂದು ಹೆಸರಾದರು. ತಂದೆತಾಯಿಯವರಿಗೆ ತುಂಬ ದುಃಖವಾಯಿತು. ಏನು ಮಾಡಬೇಕೆಂದು ತೋಚದ ಊರಿನ ದೇವರಾದ ತ್ಯಾಜರಾಜಸ್ವಾಮಿಯಲ್ಲಿ ಮೊರೆಯಿಟ್ಟರು.  ಅನಂತರ ಹುಟ್ಟಿದ ಮಗುವಿಗೆ ಊರಿನ ದೇವರ ಹೆಸರನ್ನೆ ಇಟ್ಟರು. ಮನೆತನದ ಹೆಸರಿನಲ್ಲಿ ಕಡೆಗೆ “ಬ್ರಹ್ಮ” ಎಂದು ಬರುವುದು ವಾಡಿಕೆ: ಹೀಗೆ ಮಗುವಿಗೆ “ತ್ಯಾಗಬ್ರಹ್ಮ” ಎಂದು ಹೆಸರಾಯಿತು. ತ್ಯಾಗಯ್ಯ ಎಂದೂ ಕರೆಯುತ್ತಿದ್ದರು. ದೇವರ ಹೆಸರಿನಿಂದ ತ್ಯಾಗರಾಜರೆಂದೇ ಪ್ರಸಿದ್ಧರಾದರು. ಅವರು ಹುಟ್ಟಿ ಬೆಳೆದ ಊರಾದ ತಿರುವಾರೂರಿನಲ್ಲಿ ಈಗಲೂ ತ್ಯಾಗರಾಜ ಸ್ವಾಮಿಯ ದೊಡ್ಡ ಗುಡಿಯಿದೆ; ಈಶ್ವರನ ಗುಡಿ ಅದು ದೊಡ್ಡದು.

ತನ್ನ ಇಬ್ಬರು ಅಣ್ಣಂದಿರಂತೆ ಅಲ್ಲದೆ, ತ್ಯಾಗರಾಜ ಎಳೆತದಿಂದಲೂ ಒಳ್ಳೆಯವನಾಗಿಯೇ ಬೆಳೆದ.  ದೊಡ್ಡವರನ್ನು ಕಂಡರೆ ಮರ್ಯಾದೆ, ದೇವರಲ್ಲಿ ಭಕ್ತಿ, ಬಡಬಗ್ಗರಲ್ಲಿ, ದಯೆ,ಜನರಲ್ಲಿ ವಿನಯ, ವಿದ್ಯಾಬ್ಯಾಸದಲ್ಲಿ ಆಸಕ್ತಿ ಎಲ್ಲವೂ ಇವನಲ್ಲಿ ಇದ್ದಿತು. ತಂದೆ ತಾಯಿಯರಿಗೂ ನೆಂಟರಿಷ್ಟರಿಗು ತುಂಬಾ ಸಂತೋಷವಾಯಿತು; ಊರವರಿಗೆಲ್ಲ ತ್ಯಾಗರಾಜನೆಂದರೆ ತುಂಬ ಪ್ರೀತಿ. ಆದರೆ ರಾಮಬ್ರಹ್ಮರಿಗೆ ತನ್ನ ಇಬ್ಬರು ಹಿರಿಯ ಮಕ್ಕಳಿಂದ ತೊಂದರೆಯಾಗಿ, ಊರಿನಲ್ಲಿರುವುದೇ ಕಷ್ಟವೆನಿಸಿತು ; ಎಳೆಯ ಹುಡುಗ ತ್ಯಾಗರಾಜನಿಗೆ ವಿದ್ಯಾಭ್ಯಾಸಕ್ಕೂ ತೊಂದರೆಯಾಯಿತು. ಹೀಗಾಗಿ ರಾಮಬ್ರಹ್ಮ ತನ್ನ ಹೆಂಡತಿ ಮತ್ತು ಮೂರನೆಯ ಮಗ ತ್ಯಾಗರಾಜ ಇವರೊಂದಿಗೆ ತಿರುವಾರೂರನ್ನು ಬಿಟ್ಟು ಹತ್ತಿರದಲ್ಲಿಯೇ ಇದ್ದ ತಿರುವಯ್ಯಾರೆಂಬ ಇನ್ನೊಂದು ಹಳ್ಳಿಗೆ ಬಂದರು.

ಈ ಹಳ್ಳಿಗೆ ಪಂಚನದ ಕ್ಷೇತ್ರವೆಂದು ಹೆಸರು. ಇದರ ಸಮೀಪದಲ್ಲಿಯೇ ಐದು ನದಿಗಳು ಹರಿಯುತ್ತವೆ.  -ಕಾವೇರಿ, ಕೋಲರೂನ್, ಕೋದಮಾರೂತಿ, ಪೆನ್ನಾರ ಮತ್ತು ವೆಟ್ಟಾರ್. ಆದುದರಿಂದ  ಇದು ಪವಿತ್ರವಾದ ಸ್ಥಳವೆಂದು ನಂಬಿಕೆ. ರಾಮಬ್ರಹ್ಮ ಸಂಸಾರದೊಂದಿಗೆ ಇಲ್ಲಿಗೆ ಬಂದ ಮೇಲೆ ತಂಜಾವೂರು ದೊರೆ ಇವರಿಗೆಂದು ಊರಿನ ತಿರುಮಂಜನ ಬೀದಿಯಲ್ಲಿ ಮನೆಯೊಂದನ್ನು ದಾನವಾಗಿ ಕೊಟ್ಟನು.  ಊರಿನಲ್ಲಿ ಒಂದು ಸಂಸ್ಕೃತ ಪಾಠಶಾಲೆಯೂ ಇದ್ದಿತ್ತು. ಹುಡುಗ ತ್ಯಾಗಯ್ಯನನ್ನು ಈ ಶಾಲೆಗೆ ಸೇರಿಸಿದರು: ಅಲ್ಲಿ ಅವರು ತೆಲುಗು, ಸಂಸ್ಕೃತ ಎರಡೂ ಭಾಷೆಗಳನ್ನು ಚೆನ್ನಾಗಿ ಕಲಿತನು. ತೆಲುಗು ಮನೆಮಾತು : ಸಂಸ್ಕೃತವಂತೂ ಪಂಡಿತರಿಗೆ ಬೇಕಾದ ಭಾಷೆಯೇ.

ವಿದ್ಯಾಭ್ಯಾಸ :

ಶಾಲೆಗೆ ಸೇರಿದ ನಂತರ ಹುಡುಗನಿಗೆ ಮುಂಜಿಯಾಗಿ  ಊರಿನ ಹಿರಿಯರು ವೇದವನ್ನು ಕಲಿಸತೊಡಗಿದರು.  ಮಂತ್ರ ಶಾಸ್ತ್ರದಲ್ಲಿ ಅವನಿಗೆ ತುಂಗ ಆಸಕ್ತಿ ಬೆಳೆಯಿತು.  ಈ ಆಸಕ್ತಿ ಕಡೆಯವರೆಗೂ ಉಳಿಯಿತು.  ತಂದೆ ರಾಮಭಕ್ತರಾಗಿದ್ದುದರಿಂದ, ಮಗನಿಗೆ ರಾಮನಾಮವನ್ನು ಉಪದೇಶಿಸಿದರು. ಹೀಗೆ ತಂದೆಯ ರಾಮಭಕ್ತಿ ಮಗನಿಗೂ ಬಂದಿತು.  ತ್ಯಾಗಯ್ಯ ಹುಡುಗನಾಗಿದ್ದಾನಗಲೇ ತಿರುವಯ್ಯಾರಿಗೆ ಸಂನ್ಯಾಸಿಯೊಬ್ಬರು ಬಂದರು. ರಾಮಕೃಷ್ಣಾನಂದ ಸ್ವಾಮಿಗಳೆಂದು ಅವರ ಹೆಸರು. ಇವರಿಂದ ತ್ಯಾಗಯ್ಯನಿಗೆ ರಾಮ ಷಡಕ್ಷರಿ ಮಂತ್ರ ಎಂಬ ಮಂತ್ರದ ಉಪದೇಶವಾಯಿತು. ಇದು ಹುಡುಗನ ಹೃದಯದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿತು.

ತಂದೆ ದಿನವೂ ಬೆಳಗ್ಗೆ ಮನೆಯ ಪೂಜೆಯ ಕೋಣೆಯಲ್ಲಿ ಕುಳಿತು ರಾಮನನ್ನು ಭಕ್ತಿಯಿಂದ  ಪೂಜೆ ಮಾಡುತ್ತಿದ್ದರು. ಸಂಪ್ರದಾಯದ ಪೂಜೆಯೆಲ್ಲ ಮುಗಿದ ಮೇಲೆ ತಾಯಿ ಜಯದೇವನ ಅಷ್ಟಪದಿ, ಪುರಂದರದಾಸರ ಕನ್ನಡ ದೇವರ ನಾಮಗಳು, ಭದ್ರಾಚಲ ರಾಮದಾಸರ ತೆಲುಗು ಕೀರ್ತನೆಗಳು, ತಾಳಪಾಕಂ ಅಣ್ಣಮಾಚಾರ್ಯರ ತೆಲುವು ಪದಗಳು ಇವನ್ನೆಲ್ಲ ದೇವರ ಮುಂದೆ ಹಾಡುತಿದ್ದರು.  ಪೂಜೆಯಾಗುವಾಗಲೂ, ಈ ಹಾಡುಗಳನ್ನು ಹಾಡುವಾಗಲೂ ಹುಡುಗ ತ್ಯಾಗಯ್ಯ ಅಲ್ಲಿಯೇ ಇರುತ್ತಿದ್ದ.  ಆಸಕ್ತಿಯಿಂದಲೂ ಭಕ್ತಿಯಿಂದಲೂ ಪೂಜೆಯ ವಿವರಗಳನ್ನು ಗಮನಿಸುತ್ತಿದ್ದು, ಹಾಡುಗಳನ್ನು ಕೇಳುತ್ತಿದ್ದ.  ಕೇಳಿ ಕೇಳಿ ಈ ಹಾಡುಗಳು ಅವನಿಗೂ ಬಾಯಿಪಾಠವಾದುವು. ಅಷ್ಟೇ ಅಲ್ಲ,ಹಾಡೆಂದರೆ ಅವನಲ್ಲಿ ಅಭಿರುಚಿಯೂ ಉತ್ಸಾಹವೂ ಬೆಳೆದುವು.

ಒಂದು ದಿನ ಪೂಜೆಯೆಲ್ಲ ಮುಗಿದು ತಾಯಿಯ ಹಾಡುಗಳು ಆದ ಮೇಲೆ ತ್ಯಾಗಯ್ಯ ತಾನೇ ಒಂದು “ದಿವ್ಯನಾಮ” ಕೀರ್ತನೆಯನ್ನು ಆಗಲೇ ಸಿದ್ಧಪಡಿಸಿ ಹಾಡಿ ಬಿಟ್ಟ. ದೇಶೀಯತೋಡಿ ಎನ್ನುವ ರಾಗದಲ್ಲಿ “ನಮೋ ನಮೊ ರಾಘವಾಯ” ಎಂದು ಮೊದಲಾಗುವ ಹಾಡು ಅದು. ಅದನ್ನು ಕೇಳಿ ತಂದೆ ತಾಯಿ ಇಬ್ಬರಿಗೂ ಆಶ್ಚರ್ಯವಾಯಿತು.  ಸಂತೋಷವೂ ಆಯಿತು. ಮಗ ಇಷ್ಟು ಬುದ್ಧಿವಂತನೆಂದು ಅವರು ತಿಳಿದಿರಲಿಲ್ಲ. ತಂದೆ ಆ ಹಾಡನ್ನು ಬರೆದುಕೊಂಡು, ಊರಿನ ಪಂಡಿತರಿಗ ತೋರಿಸಿದರು: ಪಂಡಿತರೆಲ್ಲರೂ ಹಾಡು ಸೊಗಸಾಗಿದೆಯೆಂದು ಬಾಯಿತುಂಬ ಹೊಗಳಿದರು.  ಹುಡುಗನಿಗೆ ಸಂಗೀತದಲ್ಲಿ ಪ್ರತಿಭೆಯಿದೆಯೆಂದು ಗಮನಿಸಿ, ಅವನಿಗೆ ಸಂಗೀತ ವಿದ್ಯಾಭ್ಯಾಸ ಮಾಡಿಸುವಂತೆ ತಂದೆಗೆ ಸೂಚಿಸಿದರು.

ಅದೇ ಊರಿನಲ್ಲಿ ಶೋಂಠಿ ವೆಂಕಟರಮಣ್ಣಯ್ಯನೆನ್ನುವ ಸಂಗೀತ ವಿಧ್ವಾಂಸರೊಬ್ಬರಿದ್ದರು. ತಂಜಾವೂರು  ದೊರೆಯ ಆಸ್ಥಾನ ವಿದ್ವಾಂಸರು ಅವರು. ಅವರ ಪ್ರತಿಭೆ ಎಷ್ಟಿತ್ತು ಗೊತ್ತೇ ? ದೊರೆ ತನ್ನ ಸಿಂಹಾಸನದಲ್ಲಿ ಅರ್ಧ ಭಾಗವನ್ನು ಅವರಿಗೆ ಕೊಟ್ಟು, ತನ್ನೊಂದಿಗೆ ಅವರನ್ನು ಕೂಡಿಸಿಕೊಂಡು, ತುಂಬಿದ ಸಭೆಯಲ್ಲಿ ಮರ್ಯಾದೆ ಮಾಡಿದ್ದ! ಅವರು ವೀಣೆಯನ್ನು ಅದ್ಭುತವಾಗಿ ನುಡಿಸುತ್ತಿದ್ದರು.  ಇವರು ತ್ಯಾಗಯ್ಯನ ಮನೆಯ ಹತ್ತಿರವೇ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ರಾಮಬ್ರಹ್ಮ ಮಗ ತ್ಯಾಗಯ್ಯನನ್ನು ಇವರ ಬಳಿ ಕರೆದುಕೊಂಡು  ಹೋಗಿ  ಇವನಿಗೆ ಸಂಗೀತ ಹೇಳೀಕೊಡಿರೆಂದು ಕೇಳಲು ವೆಂಕಟರಮಣಯ್ಯ ಹುಡುಗನನ್ನು ಪರೀಕ್ಷೆ ಮಾಡಿ ಅವನ ಬುದ್ಧಿಶಕ್ತಿಯನ್ನು ಕಂಡು ಸಂತೋಷಪಟ್ಟು “ಅಗತ್ಯವಾಗಿ ಹೇಳೀಕೊಡುತ್ತೇನೆ” ಎಂದು ಒಪ್ಪಿದರು.

ತ್ಯಾಗಯ್ಯನ ತಾಯಿ ಸೀತಮ್ಮನಷ್ಟೆ: ಆಕೆಯ ತಂದೆ ಸಂಗೀತ ವಿದ್ವಾಂಸರಾಗಿದ್ದರು; ವೀಣೇ ಕಾಳ ಹಸ್ತಯ್ಯ ಎಂದು ಅವರ ಹೆಸರು.  ಅವರ ಮನೆಯಲ್ಲಿ ಹಲವಾರು ಸಂಗೀತ ಪುಸ್ತಕಗಳಿದ್ದವು. ಅವನ್ನೆಲ್ಲ ಹುಡುಗ ತ್ಯಾಗಯ್ಯ ತಿರುವಿ ಹಾಕಿದ್ದ. ಅವನ್ನೆಲ್ಲ ಓದಿ, ವೆಂಕಟರಮಣಯ್ಯನ ಬಳಿ ಅಭ್ಯಾಸ ಮಾಡಿ, ಸಂಗೀತದ ವಿಚಾರವಾಗಿ ಹುಡುಗನಿಗೆ ಕೆಲವು ಸಂಶಯಗಳು ತಲೆದೋರಿದುವು. ಹಳ್ಳಿಯಲ್ಲಿ ಅವನ್ನು ಪರಿಹರಿಸುವವರು ಯಾರು ? ಆದರೆ ತ್ಯಾಗರಾಜ ಅದೃಷ್ಟವಂತ ಊರಿಗೆ ಬಂದು ಹುಡುಗನಿಗೆ ರಾಮ ತಾರಕ ಮಂತ್ರವನ್ನು ಉಪದೇಶ ಮಾಡಿದ್ದ ರಾಮಕೃಷ್ಣಾನಂದ ಸ್ವಾಮಿಗಳು ಮತ್ತೆ ಅಲ್ಲಿಗೆ ಬಂದು “ನಾರದೋ ಪಾಸ್ತಿ ಮಂತ್ರ” ಎನ್ನುವ ಇನ್ನೊಂದು ಮಂತ್ರವನ್ನು ಹೇಳಿಕೊಟ್ಟರು. ಅಷ್ಟು ಮಾತ್ರವಲ್ಲ, ಸ್ವರಾರ್ಣವ ಎನ್ನುವ ಸಂಗೀತ ಪುಸ್ತಕವೊಂದನ್ನು ಕೊಟ್ಟರು.  ತ್ಯಾಗಯ್ಯನ ಸಂಶಯಗಳಿಗೆಲ್ಲ ಈ ಪುಸ್ತಕದಲ್ಲಿ ಸಮಾಧಾನಗಳಿದ್ದುವು. ಇದು ಆಶ್ಚರ್ಯವಲ್ಲವೇ ?  ಈ ಸ್ವಾಮಿಗಳು ನಾರದರ ಅವತಾರವೇ ಎಂದು ತ್ಯಾಗಯ್ಯನಿಗೆ ಖಚಿತವಾಯಿತು.  ಆಗ “ಶ್ರೀ ನಾರದನಾದ ಸರಸೀರುಹ ಭೃಂಗ ಶುಭಾಂಗ ಶ್ರೀ ತ್ಯಾಗರಾಜನುತ ಶ್ರೀಕರ ಮಾಂಪಾಲಯ” ಎನ್ನುವ ಹಾಡನ್ನುರಚಿಸಿದ. ಇದು ಕಾನಡಾ ರಾಗದಲ್ಲಿದೆ.

ಹೀಗೆ ತ್ಯಾಗಯ್ಯ ಹುಡುಗನಾಗಿದ್ದಾಗಲೇ ದೇವರಲ್ಲಿ ಭಕ್ತಿ, ಸಂಗೀತದಲ್ಲಿ ಆಸಕ್ತಿ ಎರಡು ಬೆಳೆದು ಬಂದವು. ಶಾಲೆಯಲ್ಲಿ ಸಾಹಿತ್ಯ, ಜ್ಯೋತಿಷ್ಯ ಎರಡೂ ಶಾಸ್ತ್ರಗಳನ್ನು ಚೆನ್ನಾಗಿ ಕಲಿತನು. ಪುರಾಣ, ಗಣಿತ, ಇತಿಹಾಸಗಳಲ್ಲಿ ಕೂಡ ಪಾರಂಗತನಾದ. ವಿದ್ಯಾಭ್ಯಾಸ ಮುಗಿಯುವ ವೇಳೆಗೆ ತ್ಯಾಗಯ್ಯನಿಗೆ ಹದಿನೆಂಟು ವರ್ಷ ವಯಸ್ಸು.  ಆ ಕಾಲದಲ್ಲಿ ಮದುವೆಗೆ ಸರಿಯಾದ ವಯಸ್ಸು ಅದು. ಅವರ ಮೊದಲನೆಯ ಅಣ್ಣ ಜಪ್ಯೇಶನಿಗೆ ಆಗಲೇ ಮದುವೆಯಾಗಿದ್ದಿತು : ಎರಡನೆಯ ಅಣ್ಣ ಪಂಚಾಪಕೇಸ ಆ ವೇಳೆಗಾಗಲೇ ತೀರಿಕೊಂಡಿದ್ದ.  ತ್ಯಾಗಯ್ಯನೇ ಮದುವೆಗಿದ್ದವನು :ಓದು ಮುಗಿದಿದ್ದಿತ್ತು.

ಸಂಸಾರ ಭಾರ :

ವಿದ್ಯಾಭ್ಯಾಸ ಮುಗಿದ ನಂತರ ಮದುವೆ ಮಾಡಿಕೊಂಡು ಸಂಸಾರವನ್ನು ನಡೆಸಬೇಕಾಯಿತು. ತಂದೆಯು ಮಗನಿಗೆ ಪಾರ್ವತಿಯೆನ್ನುವ ಹುಡುಗಿಯನ್ನುತಂದು ಮದುವೆ ಮಾಡಿದರು. ಇದಾದ  ಎರಡು ವರ್ಷಗಳಲ್ಲಿಯೇ ತಂದೆ ರಾಮಬ್ರಹ್ಮ ತೀರಿಕೊಂಡರು. ಈಗ ಸಂಸಾರವನ್ನು ನೋಡಿಕೊಳ್ಳುವ ಭಾರ ತ್ಯಾಗಯ್ಯನ ಮೇಲೆ ಬಿದ್ದಿತು. ದೊಡ್ಡ ಅಣ್ಣ ಜಪ್ಯೇಶ ತಂದೆಯಿಂದ ಬೇರೆಯಾಗಿ ಬೇರೆ ಕಡೆ ವಾಸಿಸುತ್ತಿದ್ದ.  ತಾಯಿ, ತ್ಯಾಗಯ್ಯ, ಹೆಂಡತಿ ಮೂವರು ಒಂದು ಮನೆಯಲ್ಲಿದ್ದರು. ಮೂರು ನಾಲ್ಕು ವರ್ಷಗಳಲ್ಲಿ ತ್ಯಾಗಯ್ಯನಿಗೆ ಇನ್ನೊಂದು ಗಂಡಾಂತರ ಕಾದಿತ್ತು.  ಹೆಂಡತಿ ಪಾರ್ವತಮ್ಮ ಹಾಸಿಗೆ ಹಿಡಿದು ಮಲಗಿದಳು: ತುಂಬ ಕಾಯಿಲೆಯಾಗಿ ಉಳಿಯುವ ಆಸೆಯಿರಲಿಲ್ಲ. ಆದರೂ

 

ಜಗದೀಶಚಂದ್ರ ಬೋಸ್

ತ್ಯಾಗಯ್ಯ ಎಷ್ಟು ಶ್ರಮವನ್ನೂ ಲೆಕ್ಕಿಸದೇ, ಹೆಂಡತಿಯನ್ನು ಎಡೆಬಿಡದೆ ನೋಡಿಕೊಂಡ; ಸಾಧ್ಯವಿದ್ದ ಮದ್ದನ್ನೆಲ್ಲ ಮಾಡಿಸಿದ. ಇಷ್ಟಾದರೂ ಹೆಂಡತಿ ಉಳಿಯಲಿಲ್ಲ. ತೀರಿಕೊಂಡಳು. ಮದುವೆಯಾಗಿ ಐದು ವರ್ಷಗಳಾಗಿತ್ತು ಅಷ್ಟೆ. ಸತ್ತವರಿಗೆ ಮಾಡಬೇಕಾದುದನ್ನೆಲ್ಲ ಮಾಡಿ ದುಃಖ ಸ್ವಲ್ಪ ಆರಿದ ಮೇಲೆ ತಾಯಿ ತ್ಯಗಯ್ಯನನ್ನು ಮತ್ತೆ ಮದುವೆಯಾಗೆಂದು ಬಲಾತ್ಕರಿಸಿದಳು. ತ್ಯಾಗಯ್ಯನಿಗೆ ಇಷ್ಟವಿರದಿದ್ದರೂ, ತಾಯಿಯ ಮಾತಿಗೆ ಎದುರು ಹೇಳಲಾರದೆ  ಎರಡನೆಯ ಮದುವೆಗೆ ಒಪ್ಪಿದ.  ಮೊದಲನೆಯ ಹೆಂಡತಿ ಪಾರ್ವತಮ್ಮನ ತಂಗಿಯನ್ನೆ ಕೊಟ್ಟು ಮದುವೆಯಾಯಿತು: ಆ ಹುಡುಗಿಯ ಹೆಸರು ಕಮಲಮ್ಮ.

ದೂರ ಇದ್ದ ಅಣ್ಣ ಜಪ್ಯೇಶ  ತಂದೆ ತೀರಿಕೊಂಡ ಮೇಲೆ ತಂದೆಯ ಆಸ್ತಿಯಲ್ಲಿ ತನಗೆ ಹಕ್ಕು ಇದ್ದುದನ್ನು ಪಡೆದುಕೊಳ್ಳಲು ಬಂದೆ. ಮನೆಯನ್ನು ಎರಡು ಭಾಗಗಳಾಗಿ ವಿಂಗಡಿಸಿ ಒಂದು ಭಾಗದಲ್ಲಿ ಅಣ್ಣ ಜಪ್ಪೇಶನೂ ಇನ್ನೊಂದರಲ್ಲಿ ತಮ್ಮ ತ್ಯಾಗಯ್ಯನೂ ವಾಸ ಮಾಡತೊಡಗಿದರು. ತಂದೆಯ ಪೂಜೆಯ ಕೋಣೆ, ಅವರು ಪೂಜೆ ಮಾಡುತ್ತಿದ್ದ ರಾಮಪಂಚಾಯತನ ವಿಗ್ರಹಗಳು ತ್ಯಾಗಯ್ಯನ ಪಾಲಿಗೆ ಬಂದವು. ಆಸ್ತಿಯ ಹಂಚಿಕೆಯಲ್ಲಿ ಜಪ್ಯೇಶನಿಗೇ ಅನುಕೂಲವಾಯಿತು.  ಎಷ್ಟಾದರೂ ತ್ಯಾಗಯ್ಯನಿಗೆ ವ್ಯವಹಾರ ಅಷ್ಟು ತಿಳಿಯದು.

ಹೆಚ್ಚು ಹಣವನ್ನು ಸಂಪಾದಿಸುವ ಗೋಜಿಗೆ ಹೋಗದೆ ತ್ಯಾಗಯ್ಯ ಬಡವನಾಗಿಯೇ ಉಳಿದ. ಮುಂಜಾನೆ ಎದ್ದು ದೇವರ ಊಜೆ ಮಾಡುವುದು, ಆಮೇಲೆ ಪೋತನ ಕವಿಯ ಭಾಗವತ, ವಾಲ್ಮೀಕಿಯ ರಾಮಾಯಣ, ಪುರಂದರದಾಸರ ಕೀರ್ತನೆಗಳನ್ನು ಓದಿಕೊಳ್ಳುವುದು, ನಡುಹಗಲಿನ ವೇಳೆಗೆ ದೇವರ ನಾಮಗಳನ್ನು ಹಾಡುತ್ತ ದಾಸರಂತೆ ಬೀದಿಗಳಲ್ಲಿ ಹೋಗುವುದು, ಮನೆಗಳ್ಲಿ ಉಪಾದಾನದಿಂದ ಪಡೆದುಕೊಂಡ ಅಕ್ಕಿ ಬೇಳೆ ಮೊದಲಾದವುಗಳಿಂದ ತಮ್ಮ ಮನೆಯಲ್ಲಿ ಅಡುಗೆಯಾಗಿ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಊಟ ಮುಗಿಸುವುದು,  ಇದಾದ ಮೇಲೆ ಬಂದ ಶಿಷ್ಯರಿಗೆಲ್ಲ ಸಂಗೀತ ಪಾಠ ಹೇಳಿ ಸಂಜೆ ಕವಿದಾಗ ಊರಿನ ಬಳಿಯಿರುವ ಕಾವೇರಿ ನದಿಯ ದಡಕ್ಕೆ ಹೋಗಿ ಅಲ್ಲಿ ಸಂಧ್ಯಾವಂದನೆ, ಜಪಗಳನ್ನು ಮುಗಿಸಿ ಮನೆಗೆ ಹಿಂದಿರುಗುವುದು, ರಾತ್ರಿ ಬಂದ ಶಿಷ್ಯರಿಗೆ ಮತ್ತೇ ಸಂಗೀತ ಹೇಳಿ ಕೊಡುವುದು- ಇದು ತ್ಯಾಗಯ್ಯನ ದಿನಚರಿ.

ಇತರರಂತೆ ತ್ಯಾಗಯ್ಯ, ಯಾವ ಕಚೇರಿಯಲ್ಲಿಯೂ ಕೆಲಸ ಮಾಡಲಿಲ್ಲ. ಯಾವ ಶ್ರೀಮಂತನಲ್ಲಿಯೂ  ಊಳಿಗ ಮಾಡಲಿಲ್ಲ. ಹೇಗಾದರೂ ಆಗಲಿ, ಹಣ ದೊರೆತರೆ ಸಾಕು ಎನ್ನುವವನಲ್ಲ ತ್ಯಾಗಯ್ಯ. ಅವರಿವರನ್ನು ಆಶ್ರಯಿಸಿ , ಟೊಂಕ ಬಗ್ಗಿಸಿ ನಮಸ್ಕಾರ ಮಾಡಿ ಅವರು ಕೊಟ್ಟದ್ದನ್ನು ಕೈವೊಡ್ಡಿ ತರುವುದು ಅವನಿಗೆ ಒಗ್ಗುವ ಕೆಲಸವಲ್ಲ, ದೇವರಿಗೆ ಮಾತ್ರ ಅವನು ನಮಸ್ಕಾರ ಮಾಡುತ್ತಿದ್ದುದು: ದೇವರು ಕೊಡಬೇಕು, ತಾನು ತೆಗೆದುಕೊಳ್ಳಬೇಕು. ಮನುಷ್ಯ ಎಷ್ಟೇ ಶ್ರೀಮಂತ ನಾಗಲಿ, ಬಲಶಾಲಿಯಾಗಿರಲಿ, ಅಧಿಕಾರಿ ಯಾಗಿರಲಿ ಅವನಿಗೆ ತ್ಯಾಗಯ್ಯ ನಮಸ್ಕಾರ ಮಾಡುತ್ತಿರಲಿಲ್ಲ. ಅವನ ಮುಂದೆ ಕೈವೊಡ್ಡುತ್ತಿರಿಲ್ಲ. ಅಂಗಲಾಚುತ್ತಿರಲಿಲ್ಲ.ಇದಕ್ಕೆ ಸ್ವತಂತ್ರ ಪ್ರವೃತ್ತಿ ಎನ್ನುತ್ತಾರೆ.  ದೇವರ ಹೆಸರು ಹೇಳಿಕೊಂಡು ನಾಲ್ಕು ಮನೆಗಳ ಎದುರು ಹೋದರೆ  ಮನೆಯವರು ತಾವಾಗಿ ಏನನ್ನೂ ಕೊಡುತ್ತಾರೋ ಅಷ್ಟನ್ನೇ ತೆಗೆದುಕೊಂಡು ಬಂದು ಅದರಲ್ಲಿಯೇ ಬದುಕನ್ನು ನಡೆಸುತ್ತಿದ್ದ.  ಯಾರನ್ನೂ ಕೊಡಿರೆಂದೂ ಪೀಡಿಸುತ್ತಿರಲಿಲ್ಲ. ಬೇಡಿಕೊಳ್ಳುತ್ತಿರಲಿಲ್ಲ: ಕೊಟ್ಟವರೂ ಒಂದೇ, ಕೊಡದಿದ್ದರೂ ಒಂದೇ ಅವನ ದೃಷ್ಟಿಯಲ್ಲಿ. ತನಗೆ ಕೊಟ್ಟುದಕ್ಕೆ ಬದಲಾಗಿ  ಊರಿನವರಿಗೆಲ್ಲ ಸಂಗೀತದ ರಸದೂಟವನ್ನು ಉಣಿಸುತ್ತಿದ್ದ.  ತಂಬೂರಿ ಮೀಟುತ್ತ ತನ್ನ ಮಧುರವಾದ ಧ್ವನಿಯಲ್ಲಿ ದೇವರ ವಿಚಾರವಾಗಿ ಹಾಡುಗಳನ್ನು ಹಾಡುತ್ತ ತ್ಯಾಗಯ್ಯ ಬೀದಿಯಲ್ಲಿ ಹೋಗುತ್ತಿದ್ದರೆ ಜನ ತಾವಾಗಿ ಮುಂದೆ ಬಂದು ತಮ್ಮ ಕೈಲಾದುದನ್ನು ಕೊಟ್ಟು ಸಂತೋಷಪಡುತ್ತಿದ್ದರು.  ಹೀಗೆ ಯಾರ ಹಂಗು ಇಲ್ಲದೆ, ಯಾರೊಬ್ಬರನ್ನೂ ಆಶ್ರಯಿಸದೆ ದೇವರ ಹೆಸರಿನಲ್ಲಿ ಬದುಕುವುದಕ್ಕೆ ” ಊಂಛವೃತ್ತ” ಎಂದು ಹೆಸರು. ಹಿಂದೆ ಪುರಂದರ ದಾಸರೂ ಇತೆ ಹರಿದಾಸರೂ ಹಿಗೆಯೇ ಬದುಕು ನಡೆಸುತ್ತಿದ್ದರು.

ತ್ಯಾಗಯ್ಯನ ಬಳಿ ಸಂಗೀತವನ್ನು ಕಲಿಯಲು ನೂರಾರು ಹುಡುಗರು ಬರುತ್ತಿದ್ದರು: ಕೆಲವರು ತ್ಯಾಗಯ್ಯನ ಮನೆಯಲ್ಲಿಯೇ ಇರುತ್ತಿದ್ದರು. ಇವರು ಯಾರಿಂದಲೂ ತ್ಯಾಗಯ್ಯ ಒಂದು ಬಿಡಿಗಾಸನ್ನೂ ತೆಗೆದುಕೊಳ್ಳುತ್ತಿರಲಿಲ್ಲ,. ವಿದ್ಯೆಯನ್ನು ಮಾರುವುದು ಹಿಂದಿನ ಕಾಲದ ಪದ್ಧತಿಯಲ್ಲ. ಬಂದ ವಿದ್ಯಾರ್ಥಿಗಳಿಗೆ ಆಸಕ್ತಿಯಿಂದ , ಸ್ವಲ್ಪವೂ ಬೇಸರಪಡದೆ, ಏನನ್ನೂ ಮರೆಮಾಚದೆ, ಹಿರ್ವಂಚನೆಯಾಗಿ ಪಾಟ ಹೇಳುವುದು ತ್ಯಾಗಯ್ಯ ಪದ್ಧತಿ.  ಹುಡುಗರು ಪಾಠವಿಲ್ಲದ ವೇಳೆಯಲ್ಲಿ ಮನೆಗೆಲಸವನ್ನು ಅಷ್ಟಿಷ್ಟು ನೋಡಿಕೊಳ್ಳುತ್ತಿದ್ದರು, ಕೈಲಾದ ಸಹಾಯ ಮಾಡುತ್ತಿದ್ದರು. ಪಾಠಕ್ಕೆಂದು ತ್ಯಾಗಯ್ಯ ಯಾರ ಮನೆಗೂ ಹೋಗುತ್ತಿರಲಿಲ್ಲ;  ಕಲಿಯುವವರೆಲ್ಲ ಅವನ ಮನೆಗೇ ಬರುತ್ತಿದ್ದರು. ಇದು ಗುರುಕುಲದ ಪದ್ಧತಿ.

ಎಂದರೆ ತ್ಯಾಗಯ್ಯನು ತನ್ನ ಸಂಸಾರವನ್ನು ಮಾತ್ರ ವಲ್ಲದೆ, ತನ್ನಲ್ಲಿ ಪಾಠಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳನ್ನೆಲ್ಲ ಸಾಗಾಬೇಕಾದಿತ್ತು.  ಇದು ದೊಡ್ಡ ಭಾರವಲ್ಲವೆ? ಅದೂ, ತ್ಯಾಗಯ್ಯನೇನು ಶ್ರೀಮಂತನಲ್ಲದಿರುವಾಗ ಕಷ್ಟವೇ. ಆದರೂ ಧೈರ್ಯದಿಂದ, ದೇವರ ಮೇಲೆ ಭಾರ ಹಾಕಿ, ತ್ಯಾಗಯ್ಯನು ಇದನ್ನು  ನಿರ್ವಹಿಸಿದನು. ಬಡವನಾದರೂ ನೆಮ್ಮದಿಯಿಂದ ನಗುನಗುತ್ತ ಬದುಕುತ್ತಿದ್ದ ತ್ಯಾಗಯ್ಯನನ್ನು ಕಂಡರೆ ಊರವರಿಗೆಲ್ಲ ಮರ್ಯಾದೆ,ಗುರುಭಕ್ತಿ. ಏಕೆ ಗೊತ್ತೆ? ತ್ಯಾಗಯ್ಯ ಮುಖ್ಯವಾಗಿ ರಾಮಭಕ್ತ.

ರಾಮಭಕ್ತಿ :

ತ್ಯಾಗಯ್ಯನನ್ನು ಶಿಷ್ಯರೂ ಊರವರುತ್ಯಾಗರಾಜ ಸ್ವಾಮಿಗಳೆಂದೇ ಕರೆಯತೊಡಗಿದರು.ಗೃಹಸ್ಥರಾಗಿದ್ದರೂ ಅವರ್‌ಲ್ಲಿವಿರಕ್ತಿ ಎದ್ದು ಕಾಣುತ್ತಿತ್ತು.  ಅವರ ಜೀವನಕ್ಕೆ ರಾಮನೇ ಆಧಾರ. ಗುರುಗಳಾದ ರಾಮಕೃಷ್ಣಾನಂದ ಸ್ವಾಮಿಗಳು ಉಪದೇಶ ಮಾಡಿದ ರಾಮತಾರಕ ಮಂತ್ರವನ್ನು ತೊಂಬತ್ತಾರು ಕೋಟಿ ಸಾರಿ ಜಪಿಸಬೇಕೆಂದೂ ಹಾಗೆ ಜಪಿಸಿದರೆ ಮಂತ್ರ ಸಿದ್ಧಿಯಾಗುವುದೆಂದು ಹೇಳಿದ್ದರು. ಪ್ರತಿದಿನವೂ ತ್ಯಾಗರಾಜರು ಮುಂಜಾನೆಯೇ ಎದ್ದು, ತಮ್ಮ ಕೆಲಸಗಳನ್ನು ತೀರಿಸಿಕೊಂಡು ಸ್ನಾನ ಮತ್ತು ಸಂಧ್ಯಾವಂದನೆಗಳನ್ನು ಮುಗಿಸಿ,. ಹಳ್ಳಿಯ ಗುಡಿಯಾದ ಪಂಚನದೀಶ್ವರಾಲಯಕ್ಕೆ ಹೋಗಿ ಅಲ್ಲಿ  ಕುಳಿತು ಒಂದು ಲಕ್ಷ  ಇಪ್ಪತ್ತೈದು ಸಾವಿರ ಬಾರಿ ರಾಮತಾರಕ ಮಂತ್ರವನ್ನು ಜಪಿಸುತ್ತಿದ್ದರು.  ಇದನ್ನು ಒಂದು ವ್ರತದಂತೆ, ದೀಕ್ಷೆಯಂತೆ ಕೈಗೊಂಡು ಮೂವತ್ತೆಂಟು ವರ್ಷಗಳಲ್ಲಿ ತೊಂಬತ್ತಾರು ಕೋಟಿ ಬಾರಿ ಜಪವನ್ನು ಪೂರೈಸಿದರು !

ಮಂತ್ರ ಸಿದ್ಧಿಯಾಗಿ ಶ್ರೀರಾಮನು ಲಕ್ಷ್ಮಣನೊಂದಿಗೆ ಕಣ್ಣೇದುರು ಕಾಣೀಸಿಕೊಂಡನಂತೆ ! ಆನಂದ ತುಂಬಿ ಬಂದು ತ್ಯಾಗರಾಜರು “ಏಲ ನೀ ದಯ ರಾಮ” (ನಿನ್ನ ದಯೆ ಏತಕೆ ಬಾರದು) ಎನ್ನುವ ಕೀರ್ತನೆಯನ್ನು ಆ ಸಮಯದಲ್ಲಿ ಹಾಡಿದರು : ತಾನೇತಾನಾಗಿ ಹೊರ ಹೊಮ್ಮಿದ ಈ ಹಾಡು ಆಠಾಣಾಗಾರದಲ್ಲಿದೆ. ವಿಶ್ವಾ ಮಿತ್ರನೊಂದಿಗೆ ಯಾಗ ಸಂರಕ್ಷಣೆಗೆಂದು ಹೊರಟಿದ್ದ ರಾಮ ಲಕ್ಷ್ಮಣರನ್ನು ಕಂಡು ಅವರು ಮೈಮರೆತು ಮಧ್ಯ ಮಾಯಾವತಿ ರಾಗದಲ್ಲಿ “ಅಲಕಲಲ್ಲಾಡಗಗನಿ, ಆ ರಾಣ್ಮುನಿ ಎಟು ಪೋಂಗೆನೋ” (ರಾಮನ ಮುಂಗುರುಳು ಅಲ್ಲಾಡಲು, ಅದನ್ನು ವಿಶ್ವಾಮಿತ್ರ ಎಷ್ಟು ಹಿಗ್ಗಿದನೋ) ಎಂದು ಬಣ್ಣಿಸಿದರು. ಹೀಗೆ ದೇವರು ಕಣ್ಣೆದುರು ಬಂದು ನಿಂತಂತಾಗುವ ಅನುಭವವನ್ನು “ಸಾಕ್ಷಾತ್ಕಾರ” ಎನ್ನುತ್ತಾರೆ. ಸಾಕ್ಷಾತ್ಕಾರವಾದ ಮೇಲೆ ತ್ಯಾಗರಾಜರು ದೇವತಾ ಮನುಷ್ಯರಂತೆ ಮೆರೆದರು. ರಾಮಭಕ್ತಿ ಸಾಮ್ರಾಜ್ಯದಲ್ಲಿ ಮುಳುಗಿ ಹೋದರು.

ದೇವರೆ ಒಬ್ಬನೆ ;ಯಾವ ಹೆಸರಿನಿಂದ ಕರೆದರೂ ಒಂದೇ.ವೇದಾಂತವನ್ನು ಚೆನ್ನಾಗಿ ತಿಳಿದಿದ್ದ ತ್ಯಾಗರಾಜರಿಗೆ ಇದು ಗೊತ್ತಿತ್ತು. ಆದರೂ ದೇವರನ್ನು ರಾಮನೇಂದೇ ಕರೆದು ರಾಮಾಯಣದಲ್ಲಿ ಎದ್ದು ಕಾಣೂವ ಗುಣಗಳನ್ನು ಮನಸ್ಸಿನಲ್ಲಿ ಮೂಢಿಸಿಕೊಳ್ಳುವದೆಂದರೆ ಅವರಿಗೆ ಪ್ರೀತಿ. “ಉಂಡೇರಿ ರಾಮುಡು ಒಕಡು ” (ಇರುವ ದೇವರು ರಾ ಒಬ್ಬನೇ) ಎಂದು ಅವರು ತಮ್ಮಲ್ಲಿ ನಿಶ್ಚಯಿಸಿಕೊಂಡರು. ರಾಮನೇ ಅವರಿಗೆ ಎಲ್ಲವೂ- ತಂದೆ,ತಾಯಿ, ಗುರು, ದೈವ,ನಿಧಿ ಎಲ್ಲವೂ. ಅವರ ಬಾಳಿನಲ್ಲಿ ರಾಮನೇ ಮುಖ್ಯ ವಸ್ತು. ಮುಖ್ಯರಸ.

ರಾಮನನ್ನು ಕುರಿತು ತ್ಯಾಗರಾಜರು ಸಾವಿರಾರು ಕೀರ್ತನೆಗಳನ್ನು ರಚಿಸಿದರು. ವಾಲ್ಮೀಕಿಯ ರಾಮಾಯಣದಲ್ಲಿ 24,000 ಶ್ಲೋಕಗಳಿವೆ: ಹಾಗೆಯೇ ತ್ಯಾಗರಾಜರು 24,000 ಕೀರ್ತನೆಗಳನ್ನು ರಚಿಸಿದರೆಂದು ನಂಬಿಕೆಯಿದೆ. ಇಷ್ಟೂ  ಇಂದಿಗೆ ಉಳಿದಿಲ್ಲವೆನ್ನುವುದು ನಿಜ. ಉಳಿದಿರುವ ಕೀರ್ತನೆಗಳಲ್ಲಿ ರಾಮನ ಗುಣವನ್ನು, ಹಿರಿಮೆಯನ್ನು ,ಶೀಲವನ್ನು , ಬಲವನ್ನು ಹೊಗಳುವವೇ ಹೆಚ್ಚು.  ದಿನವೂ ಸಂಜೆ ಕಾವೇರಿ ನದಿಗೆ ಸಂಧ್ಯಾವಂದನೆ ಮಾಡಲು ಹೋಗುತ್ತಿದ್ದರಷ್ಟೆ : ಸಂಧ್ಯಾವಂದನೆ ಮುಗಿದ ಮೇಲೆ ನದಿಯ ದಡದ ಮೇಲೆ ಕುಳಿತುತಾವು ರಾಮನ ಮೇಲೆ ರಚಿಸಿದ ಕಿರ್ತನೆಗಳನ್ನು ಹಾಡಿಕೊಳ್ಳುತ್ತಿದ್ದರು.  ಒಳ್ಳೆಯ ಶಾರೀರ, ಸೊಗಸಾದ ಮನೋಧರ್ಮ, ಆಳವಾದ ಸಂಗಿತಜ್ಞಾನ- ಮೂರೂ ಸೇರಿದರೆ ಮತ್ತೇನು? ತ್ಯಾಗರಜರು ಹಾಡುವಾಗ ಊರವರೆಲ್ಲ ನೆರೆದಿರುತ್ತಿದ್ದರು, ಸಂದರ್ಭದ ಸೊಗಸನ್ನು ಸವಿಯುತ್ತಿದ್ದರು.  ಎಷ್ಟೋ ಮಂದಿ ತಾವು ಬದುಕಿದುದು ಸಾರ್ಥಕವಾಯಿತೆಂದು ಸಂತೋಷಪಟ್ಟು ಕೊಳ್ಳುವರು: ತ್ಯಾಗರಾಜರು ದೇವರಂಥ ಮನುಷ್ಯರೆಂದು ಗೌರವಿಸುವರು.

ಯಶಸ್ಸು, ಯಾತ್ರೆ :

ತ್ಯಾಗರಾಜರು ದೊಡ್ಡ ಕವಿಗಳೆಂದೂ, ಸಂತರೆಂದೂ ಸಂಗೀತಗಾರರೆಂದು ದಕ್ಷಿಣ ದೇಶದಲ್ಲೆಲ್ಲ ಯಶಸ್ಸು ಹರಡಿತು., ಅಕ್ಕಪಕ್ಕದ ರಾಜ ಮಹಾರಾಜರೂ ಶ್ರೀಮಂತ ರಸಿಕರೂ ತ್ಯಾಗರಾಜರನ್ನು ತಮ್ಮ ಆಸ್ತಾನಕ್ಕೆ, ಅರಮನೆಗೆ ಕರೆಸಿಕೊಂಡು ಮರ್ಯಾದೆ ಮಾಡಬೇಕೆಂದು ಬಯಸಿದರು. ಆದರೆ ತ್ಯಾಗರಾಜರು ಎಲ್ಲಿಯೂ ಹೋಗಲಿಲ್ಲ.ಮನುಷ್ಯರನ್ನು  ಆಶ್ರಯಿಸುವುದು  ಅವರಿಗೆ ಇಷ್ಟವಿರಲಿಲ್ಲ.  ತಂಜಾವೂರಿನ ಶರಭೋಜಿ ಮಹಾರಾಜ ಅವರನ್ನು ತನ್ನ ಆಸ್ಥಾನದಲ್ಲಿ ಇರಿಸಿಕೊಳ್ಳಬೇಕೆಂದು ಇನ್ನಿಲ್ಲದಂತೆ ಪ್ರಯತ್ನಪಟ್ಟುದನ್ನು ಹಿಂದೆಯೇ ಹೇಳಿದೆ.  ಅವರಿಗೆ ಕನಕಾಭಿಷೇಕ ಮಾಡಬೇಕೆಂದೂ ಅವನ ಇಷ್ಟ.   ಆದರೆ ತ್ಯಾಗರಾಜರು ಬರಲೊಲ್ಲೆನೆಂದು ನಿರಾಕರಿಸಿಬಿಟ್ಟರು.

ಅವರು ರಾಜನ ಕೊರಿಕೆಗೆ ಒಪ್ಪಿದರೆ ಅವರಿಗೆ ಬೇಕಾದಷ್ಟು  ಐಶ್ವರ್ಯ ಬರುತ್ತಿತ್ತು. ತ್ಯಾಗರಾಜರು ಬಡತನದಲ್ಲಿಯೇ ಇದ್ದರು. ಇಂಥವರೂ ಉಂಟೆ ? ಅವರ ಮನೆಯ ಒಂದು ಭಾಗದಲ್ಲೇ ಅವರ ಅಣ್ಣ ಜಪ್ಯೇಶ ಇದ್ದನಷ್ಟೆ.  ಅವನು ಯಾವುದೋ ಸಣ್ಣ ಕೆಲಸ ಹಿಡಿದು, ಸಾಕಷ್ಟು ಸಂಬಳ ಬರದೆ ಬಡತನದಲ್ಲಿಯೇ ಇದ್ದ. ರಾಜನಿಂದ ತ್ಯಾಗರಾಜರಿಗೆ ಸಂಬಳ ಬಂದಿದ್ದರೆ ಅದರಲ್ಲಿ ಕೊಂಚ ಭಾಗ ತನಗೂ ಬರುತ್ತಿತ್ತು; ರಾಜನು ಕೊಡುತ್ತೇನೆಂದರೂ ತಮ್ಮ ಒಪ್ಪಲಿಲ್ಲವೆಂದು ಅವರ ಮೇಲೆ ಸಿಟ್ಟು ಬಂದಿತು ಜಪ್ಯೇಶನಿಗೆ.

ದಾಸಯ್ಯನಂತರ ತ್ಯಾಗರಾಜರು ತಂಬೂರಿ ಹಿಡಿದು ಹಾಡುತ್ತ, ಗೊಡ್ಡವೇದಾಂತಿಯಂತೆ ಎಲ್ಲವನ್ನೂ ಬಿಟ್ಟಿರುವುದು ಜಪ್ಯೇಶನಿಗೆ ಹಿಡಿಸಲಿಲ್ಲ. ಅವರ ಭಕ್ತಿ, ವಿರಕ್ತಿಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ. ರಾಮನ ಪೂಜೆಯ ಹುಚ್ಚು ತಮ್ಮನಿಗೆ ಹಿಡಿದಿರುವುದೇ ಈ ವಿರಕ್ತಿಗೆ ಕಾರಣವೆಂದು ಬಗೆದು ಒಂದು ದಿ ತ್ಯಾಗರಾಜರು ಮನೆಯಲ್ಲ ಇಲ್ಲದಿರುವಾಗ ಪೂಜೆಯ ಕೋಣೆಯಲ್ಲಿದ್ದ ರಾಮ ಪಂಚಾಯತನ ವಿಗ್ರಹಗಳನ್ನು ಎತ್ತಿಕೊಂಡು ಹೋಗಿ ಕಾವೇರಿನದಿಯಲ್ಲಿ ಬಿಸಾಡಿಬಿಟ್ಟ. ಮನೆಗೆ ಬಂದು ತ್ಯಾಗರಾಜರು ನೋಡುತ್ತಾರೆ, ತಮ್ಮ ಪೂಜೆಯ ವಿಗ್ರಹಗಳೇ ಇಲ್ಲ ! ಅವರ ಮನಸ್ಸಿಗೆ ತುಂಬಾ ದುಗುಡವಾಗಿ ವಿಗ್ರಹಗಳನ್ನು ಎಲ್ಲೆಲ್ಲೂ ಹುಡುಕಾಡಿದರು; ಎಲ್ಲಿಯೂ ಸಿಗದೆ ಒದ್ದಾಡಿ,ಮೂರು ದಿನ ಆಹಾರ ಬಿಟ್ಟು ತಡಕಾಡಿದರು. ಕಡೆಗೆ ಕಾವೇರಿ ನದಿಯ ದಡಕ್ಕೆ ಬಂದು ” ನನ್ನ ರಾಮನನನ್ನು ಎಲ್ಲಿ ಹುಡುಕಲಿ ? ಎಂದು ದುಃಖವನ್ನು ತೋಡಿ ಕೊಂಡರು. ಒಡನೆಯೇ ರಾಮ ಪಂಚಾಯತನ ವಿಗ್ರಹಗಳು ತಾವಾಗಿ ನೀರಿನ ಮೇಲೆ ಬಂದು ಕಾಣಿಸಿಕೊಂಡವಂತೆ.

ತ್ಯಾಗರಾಜರಿಗೆ ಸಂತೋಷ ಉಕ್ಕಿ ಬಂದು “ಕನುಕೊಂಟಿನಿ ಶ್ರೀರಾಮುನಿ ನೇಡು ” (ಇವತ್ತು ರಾಮನನ್ನು ಕಂಡೆ ) ಎಂದು ಬಿಲಹರಿ ರಾಗದಲ್ಲಿ ಹಾಡಿದರು.  ವಿಗ್ರಹಗಳನ್ನ ಕೈಗೆತ್ತಿಕೊಂಡು “ರಾ ರಾಮಮಾಯಿಂಟಿದಾಕ” (ಬಾ, ರಾಮ, ಮನೆಗೆ) ಎಂದು ಭಕ್ತಿಯಿಂದ ಉತ್ಸಾಹದಿಂದ ಹಾಡುತ್ತ, ತಮ್ಮ ಮನೆಗೆ ಬಿಜಯ ಮಾಡಿಸಿದರು. ತಮ್ಮನ್ನು ಇಷ್ಟು ಕಷ್ಟಕ್ಕೆ ಗುರಿಮಾಡಿದನೆಂದು ಅಣ್ಣನ ಮೇಲೆ ಅವರು ಸಿಟ್ಟಾಗಲಿಲ್ಲ. ಅವನು ಇವರ ವಿಚಾರದಲ್ಲಿ ಕೆಟ್ಟವನಾಗಿದ್ದರೂ, ಅವರು ಅವನನ್ನು  ಪ್ರೀತಿಯಿಂದಲೇ ಕಂಡರು. ಒಮ್ಮೆ ಜಪ್ಯೇಶನಿಗೆ ತುಂಬಾ ಕಾಯಲೆಯಾಗಿ ಬದುಕುವುದೇ ಕಷ್ಟವೆನಿಸಿತು.ಆಗ ತ್ಯಾಗರಾಜರು ರಾಮನಿಗೆ ಹೊರಕೆ ಹೊತ್ತು ಅಣ್ಣನನ್ನು ಬದುಕಿಸಿದರು. ಇದಾದ ಮೇಲೆ ಅವನಿಗೂ ಅವರ ವಿಚಾರದಲ್ಲಿ ಗೌರವ ಭಾವನೆ ಮೂಡಿತು : ಅವನೂ ರಾಮಭಕ್ತನಾದ.

ತ್ಯಾಗರಜರು ಬಹುಮಟ್ಟಿಗೆ ತಿರುವಯ್ಯಾರಿನಲ್ಲೇ ಇದ್ದು ಬಿಟ್ಟರು.  ಕಾಂಚೀ ಕಾಮಕೋಟೆ ಪೀಠದ  ಉಪನಿಷದ್ ಬ್ರಹ್ಮ ಸ್ವಾಮಿಗಳೆಂಬುವರು ತ್ಯಾಗರಾಜರನ್ನು ನೋಡಬೇಕೆಂದು ಹಂಬಲಿಸುತ್ತಿದ್ದರು. ಆದರೆ ತೀರ ಮುದುಕರಾಗಿ  ಓಡಾಡಲು ಅಶಕ್ತರಾಗಿದ್ದರು. ಇದನ್ನು ತಿಳಿದು ತ್ಯಾಗರಾಜರು ತಾವೇ ಅವರನ್ನು ನೋಡಲು ತಿರುವಯ್ಯಾರಿನಿಂದ ತಮ್ಮ ಶಿಷ್ಯರೊಡಗೂಡಿ ಹೊರಟರು.  ಚನ್ನೈ ಬಳಿ ತಿರುವತ್ತಿಯೂರು, ನಾಗಲಾಪೂರ, ತಿರುಪತಿ, ಪುತ್ತೂರು ಇವನ್ನು ನೋಡಿಕೊಂಡು ಕಾಂಚೀಪುರಕ್ಕೆ ಬಂದರು. ಅಲ್ಲಿ ಸ್ವಾಮಿಗಳ ಜೊತೆಗೆ ಕೆಲವು ದಿನಗಳಿದ್ದು, ಅನಂತರ ತಿರುವಯ್ಯಾರಿಗೆ ಹಿಂದಿರುಗುವ ದಾರಿಯಲ್ಲಿ ವಾಲಾಜಾ ಪೇಟೆ, ಶ್ರೀರಂಗ, ನಾಗಪಟ್ಟಣ, ಲಾಲ್ ಗುಡಿ, ಶೋಲಿಂಗ ಪುರ ಈ ಊರುಗಳನ್ನು ನೋಡಿದರು. ಇಷ್ಟೇ ಅವರು ಮಾಡಿದ ಯಾತ್ರೆ.

ಯಾತ್ರೆಯಲ್ಲಿ ವಿಶೇಷ :

ಅವರ ಯಾತ್ರೆಯ ಸಂದರ್ಭದಲ್ಲಿ ಕೆಲವಾರು ಸ್ವಾರಸ್ಯಗಳು ನಡೆದುವು ಎಂದು ಹೇಳುತ್ತಾರೆ.  ಚನ್ನೈನ ಹತ್ತಿರ ಇರುವ ತಿರುವತ್ತಿಯೂರು ಅವರ ಶಿಷ್ಯ ವೀಣಾ ಕುಪ್ಪಯ್ಯರ್ ಎನ್ನುವವರು ಇದ್ದ ಊರು. ಅವರು ತ್ಯಾಗರಜರನ್ನು ತಮ್ಮೂರಿಗೆ ಕರೆದುಕೊಂಡು ಹೋಗಬೇಕೆಂದು ಬಯಸಿದರು.  ಆಗಲೆಂದು ತ್ಯಾಗರಜರು ತಿರುವತ್ತಿಯೂರಿಗೆ ಬಂದು ಕೆಲವು  ದಿನಗಳನ್ನು ಕುಪ್ಪಯ್ಯರ್ ಮನೆಯಲ್ಲಿ ಕಳೆದು, ಮುಂದೆ ಇನ್ನೊಬ್ಬ ಶಿಷ್ಯರ ಊರಾದ ಕೋವೂರಿಗೆ ಬಂದರು.  ಅಲ್ಲಿ ಸುಂದರೇಶ ಮೊದಲಿಯಾರ್ ಎನ್ನುವ ಶ್ರೀಮಂತ ರೊಬ್ಬರು ತ್ಯಾಗರಾಜರ ಹಿರಿಮೆಯನ್ನು ಅರಿತುಕೊಂಡಿದ್ದು, ಅವರನ್ನು ತುಂಬ ಆದರದಿಂದ ಸತ್ಕರಿಸಿದರು. ತ್ಯಾಗರಾಜರು ರಾಮನವಮಿಯ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ರಾಮೋತ್ಸವನ್ನು ನಡೆಸುತ್ತಿದ್ದುದನ್ನು ಅವರು ಕಂಡಿದ್ದರು : ಆಗ ನೂರಾರು ಮಂದಿ ಭಕ್ತರು ಬಂದು ನೆರೆಯುತ್ತಿದ್ದರು. ಎಲ್ಲರನ್ನೂ ಸತ್ಕರಿಸುವ ಹೊಣೆ ತ್ಯಾಗರಾಜರದ್ದೆ ಆಗಿದ್ದಿತ್ತು.  ತಾವು ಬಡವರಾದರೂ ಹೇಗೋ ಇದನ್ನು ತಾವೇ ನಿರ್ವಹಿಸುತ್ತಿದ್ದರು. ಯಾವ ರಾಜನಿಂದಲಾಗಲೀ ಹಣವಂತನಿಂದಾಗಲೀ ನೆರವನ್ನು ಪಡೆಯುತ್ತಿರಲಿಲ್ಲ. ಸುಂದರೇಶ ಮೊದಲಿಯಾರ್‌ರಿಗೆ ಇದು ತಿಳಿದಿದ್ದಿತ್ತು. ತಾವು ತ್ಯಾಗರಾಜರಿಗೆ ಹಣವನ್ನು ಕೊಟ್ಟರೆ ಅವರು ಸಿಟ್ಟಾಗುವರೆಂದು ಅವರಿಗೆ ಗೊತ್ತಿತ್ತು. ಆದರೂ ಅವರ ಮನೆಯಲ್ಲಿ ಪ್ರತಿವರ್ಷವೂ ನಡೆಯುವ ರಾಮೋತ್ಸವಕ್ಕೆ ತಮ್ಮ ಕಾಣಿಕೆಯನ್ನು ಕೊಡಬೇಕೆಂದು ಮನಸ್ಸು ಮಾಡಿ ತ್ಯಾಗರಾಜರಿಗೆ ತಿಳಿಯದಂತೆ ಅವರ ಶಿಷ್ಯರ ಕೈಯಲ್ಲಿ ಒಂದು ಸಾವಿರ ಬೆಳ್ಳಿ ರೂಪಾಯಿಗಳನ್ನು ಕೊಟ್ಟರು.

ಶಿಷ್ಯರು ಈ ಹಣವನ್ನು ಜೋಪಾನವಾಗಿಟ್ಟುಕೊಂಡಿದ್ದು, ತ್ಯಾಗರಾಜರು ಕೋವೂರಿನಿಂದ ಹೊರಡುವಾಗ ಅವರು ಪ್ರಯಾಣ ಮಾಡುತ್ತಿದ್ದ ಮೇನೆಯೊಳಗೆ ಅವರಿಗೆ ತಿಳಿಯದಂತೆ ಬಚ್ಚಿಟ್ಟರು.  ಆ ಕಾಲದಲ್ಲಿ ಊರಿಂದೂರಿಗೆ ನಡೆದೇ ಹೋಗಬೇಕಾಗಿತ್ತು :  ತ್ಯಾಗರಾಜರಿಗೆ ವಯಸ್ಸಾಗಿದ್ದುದರಿಂದ ಅವರನ್ನು ಮೇನೆಯಲ್ಲಿ  ಕೂರಿಸಿ ಶಿಷ್ಯರು ಹೊತ್ತುಕೊಂಡು ಹೋಗುತ್ತಿದ್ದರು. ಕೋವೂರಿನಿಂದ ಹೊರಟ ಪರಿವಾರ ನಾಗಲಾಪೂರವನ್ನು ಮುಟ್ಟುವ ಮೊದಲು ಕಾಡು ದಾರಿಯಲ್ಲಿ ಒಂದು ರಾತ್ರಿ ಕಳ್ಳರು ಮೇಲೆ ಬಿದ್ದರು.  ಇವರ ಬಳಿ ಹಣ ಇರುವುದು ಅವರಿಗೆ ಹೇಗೋ ತಿಳಿದುಬಿಟ್ಟಿದ್ದಿತು.  ತ್ಯಾಗರಾಜರ  ಮುಂದೆ ಹೋಗುತ್ತಿದ್ದ ಶಿಷ್ಯರ‍್ನು ಕಳ್ಳರು ತಡೆದು, ಕೋವೂರಿನಲ್ಲಿ ಪಡೆದ ಒಂದು ಸಾವಿರ ರೂಪಾಯಿ ಹಣವನ್ನು ತೆರುವಂತೆಯೂ ಇಲ್ಲವಾದರೆ ಪರಿವಾರದಲ್ಲಿ ಒಬ್ಬರೂ ಉಳಿಯುವುದಿಲ್ಲವೆಂದೂ ಬೆದರಿಸಿದರು.

ಶಿಷ್ಯರು ಏನು ಮಾಡಬೇಕು? ಹಣವಿದ್ದ ಸುದ್ಧಿ ಗುರುಗಳಿಗೇ ತಿಳಿದರಲಿಲ್ಲ ! ಹಣ ಅವರು ಕುಳಿತಿದ್ದ ಮೇನೆಯಲ್ಲೇ ಇದೆ.ಮುಂದೆ  ನಡೆಯುತ್ತಿದ್ದ ಗದ್ದಲವನ್ನು ಕೇಳಿ ತ್ಯಾಗರಾಜರು ಶಿಷ್ಯರನ್ನು ಕರೆದು ಅದೇನೆಂದು ವಿಚಾರಿಸಿದರು. ವಿಧಿಯಿಲ್ಲದೆ ಶಿಷ್ಯರು ಕೋವೂರಿನಲ್ಲಿ ಸುಂದರೇಶ ಮೊದಲಿಯಾರ್ ರಾಮೋತ್ಸವದ ವೆಚ್ಚಕ್ಕೆಂದು ಒಂದುಸಾವಿರ ರೂಪಾಯಿ ಹಣವನ್ನು ಕೊಟ್ಟರೆಂದು ಗುರುಗಳಿಗೆ ತಿಳಿಸಬೇಕಾಯಿತು.  ಒಡನೆಯೇ ಗುರುಗಳು “ಆಯ್ಯೋ ,ಆ ಹಣ ನಮಗೆ ಬೇಡ: ಕಳ್ಳರಿಗೆ ಬೇಕು, ಕೊಟ್ಟು ಬಿಡಿ!” ಎಂದರು. ಆದರೆ ಶಿಷ್ಯರು ಒಳ್ಳೆಯ ಕೆಲಸಕ್ಕೆಂದು ಮೊದಲಿಯಾರ್ ಕೊಟ್ಟಿದುದನ್ನು ಕಳ್ಳರಿಗೆ ಕೊಟ್ಟು ಬಿಡಲು ಒಪ್ಪಲಿಲ್ಲ.  ತ್ಯಾಗಜರು ಕೊಡುವಂತೆ ತಿಳಿಸಿದಾಗ ತಂಜಾವೂರುರಮರಾವ ಎನ್ನುವ ಶಿಷ್ಯ “ಸ್ವಾಮಿ, ಸುಮ್ಮನಿರಿ.ಅದು ನಿಮ್ಮ ಹಣವಲ್ಲ. ಶ್ರೀರಾಮನಿಗೆಂದು ಕೊಟ್ಟದ್ದು” ಎಂದ. ಅದಕ್ಕೆ ತ್ಯಾಗರಾಜರು, “ಓಹೋ, ಹಾಗೋ ? ಹಾಗಿದ್ದರೆ ರಾಮನೇ ಅದನ್ನು ಕಾಪಾಡಿಕೊಳ್ಳಲಿ. ನಮಗೇಕೆ ಅದರ ಗೊಡವೆ ?” ಎಂದು ಸುಮ್ಮನಾಗಿ ಬಿಟ್ಟರು.

ಇದ್ದಕ್ಕಿದ್ದಂತೆ ಕಳ್ಳರು ಓಡಿ ಹೋದರು. ಶಿಷ್ಯರಿಗೆ ಅಶ್ಚರ್ಯವಾಯಿತು. ಇದೇಕೆಂದು ಅವರಿಗೆ ಅರ್ಥವಾಗಲಿಲ್ಲ. ಪ್ರಯಾಣವನ್ನು ಮುಂದುವರೆಸಿದರು ; ರಾತ್ರಿ ಕಳೆದು ಬೆಳಕೂ ಹರಿಯಿತು. ಬೆಳಗಾದೊಡನೆ ಕಳ್ಳರು ಮತ್ತೇ ಕಾಣಿಸಿಕೊಂಡರು. ತ್ಯಾಗರಾಜರ ಬಳಿ ಬಂದು , ನಮಸ್ಕಾರ ಮಾಡಿ, “ಸ್ವಾಮಿ ತಾವು ಮಹಾನುಭಾವರು. ರಾತ್ರಿ ತಮ್ಮಬೆಂಗಾವಲಿಗೆಂದು ಬಿಲ್ಲು ಬಾಣಗಳನ್ನು ಹಿಡಿದು ತಮ್ಮೊಡನೆ ಬರುತ್ತಿದ್ದ ಇಬ್ಬರು ಹುಡುಗರೆಲ್ಲಿ ? ಮಹಾಶೂರರು ಅವರು. ಅವರನ್ನು ಕಂಡೊಡನೆ ನಮಗ ದಿಗಿಲಾಗಿ ಓಡಿ ಬಿಟ್ಟೇವು.  ಆದರೆ ಅವರನ್ನು ಮತ್ತೇ ಮತ್ತೇ ನೋಡಬೇಕೆಂಬ ಆಸೆ ನಮಗುಂಟಾಗಿದೆ. ಎಂಥಾ ತರುಣರನ್ನು ನೇಮಿಸಿಕೊಂಡಿದ್ದಿರಿ! ದಯಮಾಡಿ ಅವರನ್ನು ತೋರಿಸಿ,ಒಂದು ಬಾರಿ ಅವರನ್ನು ಕಣ್ಣು ತುಂಬ ನೋಡಿ ಹೋಗುತ್ತೇವೆ” ಎಂದು ಕೇಳಿಕೊಂಡರು.

ಶಿಷ್ಯರಿಗೆಲ್ಲ ಅಶ್ಚರ್ಯವಾಯಿತು, ಕಕ್ಕಾಬಿಕ್ಕಿಯಾದರು. ತಮ್ಮನ್ನು ಕಾಪಾಡಿದ  ಈ ಕಾವಲುಗಾರರು ಯಾರು ? ಬಿಲ್ಲು-ಬಾಣ ಹಿಡಿದ ಈ ಇಬ್ಬರು ಈ ವೀರ ತರುಣರು ಯಾರು ? ತಾವು ನೊಡಲಿಲ್ಲವಲ್ಲ ? ತಮ್ಮೊಂದಿಗೆ ಅವರು ಬರುತ್ತಿದ್ದ ಅರಿವೇ ತಮಗಿರಲಿಲ್ಲವಲ್ಲ ? ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಆದರೆ ತ್ಯಾಗರಾಜರಿಗೆ ಅರ್ಥವಾಗಿಬಿಟ್ಟಿತ್ತು. ಅವರು ಕಳ್ಳರನ್ನು ಕುರಿತು, “ಅಪ್ಪಾ ನೀವೇ ಪುಣ್ಯಶಾಲಿಗಳು ! ಶ್ರೀರಾಮ- ಲಕ್ಷ್ಮಣರನ್ನು ಕಣ್ಣಾರೆ ಕಂಡೀರಿ. ನಮ್ಮಲ್ಲಿ ಯಾರಿಗೂ ಆ ಪುಣ್ಯ ಇಲ್ಲದೇಹೋಯಿತು !  ನಿಮ್ಮ ಭಾಗ್ಯವೇ ಭಾಗ್ಯ” ಎಂದು ಹೇಳೀ ಕೊಂಡಾಡಿದರು.

ತಿರುಪತಿಯಲ್ಲಿ ಇನ್ನೊಂದು ಅಶ್ಚರ್ಯಕರ ಸಂಗತಿ ನಡೆಯಿತೆಂದು ಹೇಳುತ್ತಾರೆ.  ನಾಗಲಾಪೂರದಿಂದ ತಿರುಪತಿಗೆ ಹೋಗಿ, ಬೆಟ್ಟವನ್ನೇರಿ ವೆಂಕಟೇಶ ದೇವರ ಗುಡಿಗೆ ಬಂದರು. ಅಷ್ಟೂ ಹೊತ್ತಿಗೆ ದರ್ಶನದ ವೇಳೆ ಮುಗಿದಿದ್ದು, ದೇವರ ಮುಂದೆ ತೆರೆಯನ್ನು ಅಡ್ಡಮಾಡಿ ಕಟ್ಟಿದ್ದರು.ಇಷ್ಟು ದೂರ ಬಂದು ದೇವರನ್ನು ಕಾಣಲಾಗದಲ್ಲಾ ಎಂದು ತ್ಯಾಗರಾಜರು ಮರುಗಿದರು. ಅಲ್ಲೇ ನಿಂತು “ತೆರೆ ತೆಗೆಯಬಾರದೇ, ತಿರುಪತಿ ವೆಂಕಟರಮಣ ” (ತೆರ ತಿಯಗರಾದಾ) ಎಂದೂ ಹಾಡಿದರು. ಒಡನೆಯೇ ಅರ್ಚಕರೂ ಎಲ್ಲರೂ ನೋಡುತ್ತಿದ್ದಂತೆಯೆ ತೆರೆ ತನ್ನಷ್ಟಕ್ಕೆ ತಾನೆ ಪಕ್ಕಕ್ಕೆ ಸರಿದುಕೊಂಡುಬಿಟ್ಟಿತು. ತ್ಯಾಗರಾಜರಿಗೆ ದೇವರ ದರ್ಶನವಾಯಿತು.  “ವೆಂಕಟೇಶ, ನಿನ್ನನ್ನು ನೋಡಲು ಹತ್ತು ಸಾವಿರ ಕಣ್ಣುಗಳು ಬೇಕು!” ಎಂದು ಅವರು ಹಾಡಿ, ತಮ್ಮ ಕೃತಜ್ಞತೆಯನ್ನು ಸೂಚಿಸಿದರು.

ದೇವರು ದಿಟವಾಗಿ ನಮ್ಮೊಳಗೇ ಇದ್ದಾನೆ: ಆದರೆ ನಾವು ಅವನನ್ನು ನೋಡಲಾಗದಂತೆ ನಮ್ಮ ಹೃದಯದಲ್ಲಿ ತೆರೆ ಅಡ್ಡವಾಗಿದೆ.   ಈ ತೆರೆ ಯಾವುದು ಗೊತ್ತೆ ? ನಾನು ಎನ್ನುವ ಹೆಮ್ಮೆ, ಇನ್ನೊಬ್ಬರು ಚೆನ್ನಾಗಿದ್ದರೆ ಕರುಬುವುದು, ಅತಿಯಾದ ಆಸೆ, ಯಾರಿಗು ಏನನ್ನೂ ಕೊಡದಿರುವ ಜುಗ್ಗುತನ, ತಿಳುವಳಿಕೆಯಿಲ್ಲದಿರುವುದು ಇವೆಲ್ಲ ತೆರೆಗಳೇ. ಈ ತೆರೆಗಳನ್ನು ತೆಗೆದರೆ ದೇವರನ್ನು ನಮ್ಮೊಳಗೇ ನಾವು ನೋಡಬಹುದು. ಇದು ಮೇಲೆ ಹೇಳೀದ “ತೆರೆ ತೆಗೆಯಬಾರದೇ?” ಎನ್ನುವ ಹಾಡಿನ ಒಳಗುಟ್ಟು.

ಕಡೆಯ ದಿನಗಳು :

ತ್ಯಾಗರಾಜರಿಗೆ ಒಬ್ಬಳೆ ಮಗಳು, ಸೀತಾಲಕ್ಷ್ಮೀಯೆಂದು ಆಕೆಯ ಹೆಸರು. ಹತ್ತಿರದ ಹಳ್ಳಿಯಾದ ಅಮ್ಮಾಳ ಅಗ್ರಹಾರದಲ್ಲಿರುತ್ತಿದ್ದಕುಪ್ಪುಸ್ವಾಮಿ ಅಯ್ಯರ ಎಂಬುವ ವರನಿಗೆ ಕೊಟ್ಟು ಆಕೆಯ ಮದುವೆಯಾಯಿತು. (ಈಕೆಗೆಗೆ ತ್ಯಾಗರಾಜನೆಂಬ ಹೆಸರಿನ ಮಗನೊಬ್ಬನಿದ್ದು ಅಲ್ಲಿಗೆ ಸಂತಾನ ನಿಂತಿತ್ತು. ಅಣ್ನ ಜಪ್ಯೇಶನ ಸಂತತಿಯವರು ಇಂದಿಗೂ ಇದ್ದಾರೆ: ತ್ಯಾಗರಾಜರ ಸಮಾಧಿಯಲ್ಲಿ ಪೂಜೆ ಮಾಡುವವರು ಇವರೇ). ಇಕೆಯ ಮದುವೆಯಾದ ಮೇಲೆ ತ್ಯಾರಾಜರಿಗೆ ಸಂಸಾರದ ಭಾರವೇನು ಇರಲಿಲ್ಲ. ನೆಮ್ಮದಿಯಿಂದ ಬಾಳನ್ನು ನಡೆಸಿದರು. ಆದರೆ ತಾವು ಮುದುಕರಾಗಿದ್ದಾಗ ಹೆಂಡತಿ ಕಮಲಮ್ಮ ತೀರಿಕೊಂಡುದು ಇವರಿಗೆ ಸಹಿಸಲಾರದ ದುಃಖವಾಯಿತು.

ಹೆಂಡತಿ ತೀರಿಕೊಂಡ ಮೇಲೆ ತ್ಯಾಗರಾಜರು ವಿರಕ್ತಿ ಇನ್ನಷ್ಟು ಬಲವಾಯಿತು.  ಪ್ರಪಂಚದಲ್ಲಿ ಅವರಿಗೆ ಯಾವ ಆಸಕ್ತಿಯು ಉಳಿಯಲಿಲ್ಲ. ಸನ್ಯಾಸಿಯಂತೆಯೇ ವಿರಕ್ತರಾಗಿ ಒಂಟಿಯಾಗಿ ಇರಲಾರಂಭಿಸಿದು. ಹಗಲು ರಾತ್ರಿ ರಾಮಭಜನೆಯೇ.  ಹೀಗೆ ಎರಡು ವರ್ಷಗಳು ಕಳೆದ ಮೇಲೆ, ೧೮೪೭ಕ್ಕೆ ಸರಿಯಾದ ಪರಾಭವ ಸಂವ್ಸರದ ಪುಷ್ಯ ಶುದ್ಧ ಎಕಾದಶಿ ರಾತ್ರಿ ಭಜನೆಯಾದ ನಂತರ ಅವರು ತಮ್ಮಶಿಷ್ಯರಿಗೆಲ್ಲ ಅದೇ ತಿಂಗಳು ಹುಳ ಪಂಚಮಿಯ ದಿನ (ಜನೆವರಿ ಆರನೆಯ ದಿನ) ಬರುವಂತೆ ಹೇಳಿ ಕಳುಹಿಸಿದರು. ಶಿಷ್ಯರೂ ಊರಿನ ಜನರೂ ಕುತುಹಲದಿಂದ ಅಂದು ತ್ಯಾಗಾಜರ ಮನೆಗೆ ಬಂದು ಅಲ್ಲಿ ನೆರೆದರು. ಮುಂಜಾನೆ ತ್ಯಾಗರಾಜರು ಎದ್ದು ಸ್ನಾನ, ಸಂಧ್ಯಾವಂದನೆ, ಜಪ ಮೊದಲಾದ ಕೆಲಸಗಳನ್ನೆಲ್ಲ ಮುಗಿಸಿ ಅಪರ್ತ ಸಂನ್ಯಾಸವನ್ನು ಸ್ವೀಕರಿಸಿದರು. ಸಾಯುವ ಮೊದಲು ಸಂನ್ಯಾಸಿಯಾಗಿದ್ದರೆ ಪುನರ್ಜನ್ಮವಿಲ್ಲ ಎಂದು ನಂಬಿಕೆಯಿದೆ: ಆದುದರಿಂದ  ಸಾಯುವ ಸಮಯದಲ್ಲಿ ಸಂನ್ಯಾಸಿಯಾಗುವುದು “ಆಪ್ ಸಂನ್ಯಾಸ” ಎನಿಸಿಕೊಳ್ಳುತ್ತದೆ.

ಶಿಷ್ಯರೆಲ್ಲರೂ ಹತ್ತಿರ ನೆರೆದಿದ್ದಾಗ , ತ್ಯಾಗರಜರು ಹೀಗೆ ಸಂನ್ಯಾಸಿಗಳಾಗಿ ರಾಮನನ್ನು ಕಡೆಯ ಸಾರಿ ಪೂಜೆ ಮಾಡಿ, ಎಲ್ಲರಿಗೂ ರಾಮಭಜನೆ ಮಾಡುವಂತೆ ಹೇಳಿ ಅವರೆಲ್ಲ ಭಜನೆ ಮಾಡುತ್ತಿದ್ದಾಗ ತಾವು ರಾಮತಾರಕ ಮಂತ್ರವನ್ನು ಉಚ್ಚರಿಸಿ ಪ್ರಾಣ ಬಟ್ಟರು. ಆಗ ಅವರಿಗೆ ಎಂಬತ್ತೆಂಟು  ವರ್ಷ ವಯಸ್ಸು.  ಪ್ರಾಣ ಹೋಗುವಾಗ ತಲೆಯೊಡೆದು, ಅಲ್ಲಿಂದ ಬೆಳಕೊಂದು ಹೊರಗೆ ಬಂದು ಅವರು ಪೂಜೆ ಮಾಡುತ್ತಿದ್ದ ರಾಮನ ವಿಗ್ರಹದಲ್ಲಿ ಸೇರಿಕೊಂಡಿತಂತ ! ಹಗಲು ಹನ್ನೆರಡು ಗಂಟೆ ಸಮಯ.

ತಿರುವಯ್ಯಾರು ಸಮಾಧಿ :

ಗೃಹಸ್ಥರು ಸತ್ತರೆ ಸುಟ್ಟು ಬೂದಿ ಮಾಡುತ್ತಾರೆ. ಸಂನ್ಯಾಸಿಗಳು ಸತ್ತರೆ ಅವರ ಕಳೇಬರದ ಮೇಲೆ ಬೃಂದಾವನ್ನುಕಟ್ಟುತ್ತಾರೆ. ಇದಕ್ಕೆ ಸಮಾಧಿಯೆಂದು ಹೆಸರು. ತ್ಯಾಗರಾಜರು ಸಾಯುವ ಮೊದಲು ಸನ್ಯಾಸಿಗಳಾದುದರಿಂದ, ಅವರ ದೇಹವನ್ನು ಕಾವೇರಿ ನದಿಯ ದಡಕ್ಕೆ ತಂದು ಅಲ್ಲಿ ಸಮಾಧಿಯೊಂದನ್ನು ಕಟ್ಟಿಸಿದರು.  ಊರ ಜನರು ಶಿಷ್ಯರೂ ಸೇರಿ ಭಕ್ತಿಯಿಂದ ಇಲ್ಲಿ ಅವರ ಆರಾಧನೆಯನ್ನು ಮಾಡಿದರು. ಪ್ರತಿ ವರ್ಷವೂ ಅವರ ಪುಣ್ಯದಿನದಂದ (ತೀರಿಕೊಂಡ ದಿನಕ್ಕೆ ಪುಣ್ಯ ದಿನ ಎಂದು ಹೆಸರು) ಅವರ ಸಮಾಧಿಯ ಬಳೀ ಶಿಷ್ಯರೆಲ್ಲ ಸೇರಿ ಆರಾಧನೆಯನ್ನು ಮಾಡುವ ಪದ್ಧತಿಯೂ ಬಂದಿತು.

ಏನೋ ಕಾರಣದಿಂದ ಈ ಪದ್ಧತಿ ತಪ್ಪಿ ಹೋಗಿ ಅರವತ್ತು ವರ್ಷಗಳ ತರುವಾಯ ಮತ್ತೇ ಆರಂಭವಾಯಿತು, ಇಂದಿಗೂ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷವೂ ಜನೆವರಿ ತಿಂಗಳಲ್ಲಿ ತಿರುವಯ್ಯಾರಿನಲ್ಲಿ ನಡೆಯುವ ತ್ಯಾಗರಾಜ ಆರಾಧನೆ ನಿಜವಾಗಿಯೂ ಸಂಗೀತ ಸಮಾರಾಧನೆ; ದೇಶದ ಎಲ್ಲ ಸಂಗೀತ ವಿದ್ವಾಂಸರೂ ಈ ಸಂದರ್ಭದಲ್ಲಿ ಇಲ್ಲಿ ಸೇರುತ್ತಾ, ಉತ್ಸವವನ್ನು ವಿಜೃಂಭಣೆಯಿಂದ ನಡೆಸುತ್ತಾರೆ.

ತಿರುವಯ್ಯಾರಿನಲ್ಲಿರುವ ತ್ಯಾಗರಾಜ ಸಮಾಧಿ ಸುಂದರವಾದ ಕಟ್ಟಡ. ಇದನ್ನು ಕಟ್ಟಿಸಿದ ಪುಣ್ಯ ಯಾರದ್ದು ಗೊತ್ತೇ ? ಕನ್ನಡ ನಾಡಿನ ಹೆಣ್ಣು ಮಗಳೊಬ್ಬಳದ್ದು. ಬೆಂಗಳೂರು ನಾಗರತ್ನಮ್ಮ ಎಂದು ಆಕೆಯ ಹೆಸರು.  ಆಕೆ ಬೆಂಗಳೂರಿನಲ್ಲಿ ಹುಟ್ಟಿ ಸಂಗೀತದಲ್ಲಿ ಹೆಸರುವಾಸಿಯಾದರು. ಅವರ ಗುರು ಮುನಿಸ್ವಾಮಪ್ಪ ಎಂಬುವರು; ಇವರು ಸಂಗೀತ ಕಲಿತಿದ್ದು ವಾಲಾಜಪೇಟೆ ಕೃಷ್ಣಸ್ವಾಮಿ ಭಾಗವತರ ಬಳಿ : ಈ ಭಾಗವತರ ತಂದೆ ವಾಲಾಜಾಪೇಟೆ ವೆಂಕಟರಮಣ  ಕೃಷ್ಣಸ್ವಾಮಿ ಭಾಗವತರ ಬಳಿ: ಈ ಭಾಗವತರ ತಂದೆ ವಾಲಾಜಾಪೇಟೆ ವೆಂಕಟರಮಣ ಭಾಗವತರೂ ಸಂಗೀತ ಕಲಿತದ್ದು ತ್ಯಾಗರಾಜರಲ್ಲಿಯೇ.ಹೀಗೆ ನಾಗರತ್ನಮ್ಮ ತ್ಯಾಗರಾಜರ ನೇರ ಪರಂಪರೆಗೆ ಸೇರಿದವರು. ಸಮಾಧಿಯ ಕಟ್ಟಡ ಶುರುವಾದದ್ದು ೧೯೨೭ರ ಸುಮಾರಿಗೆ, ಕಟ್ಟಡ ಮುಗಿದು ಅಲ್ಲಿ ಉತ್ಸವ ಜರುಗಲು ಆರಂಭವಾದುದು ೧೯೪೦ರಲ್ಲಿ.

ಈಗ ತಿರುವಯಾರು ದಕ್ಷಿಣ ದೇಶದಲ್ಲೆಲ್ಲ ಪ್ರಸಿದ್ಧ ಪುಣ್ಯ ಕ್ಷೇತ್ರಾಗಿದೆ : ತ್ಯಗರಾಜ ಸ್ವಾಮಿಗಳ ಪ್ರಭಾವ ದೇಶದ ಮೇಲೆಲ್ಲ ಹರಡಿದೆ.

“ತ್ಯಾಗರಾಜ ಗುರಂ ವಂದೇ ಸಂಗೀತಾಬ್ಧಿ ಕಲಾನಿಧಿಂ”.