ತ್ಯಾಗೀಶಾನಂದರುರಾಮಕೃಷ್ಣ ಮಹಾಸಂಘದ ಹಿರಿಯ ಸಂನ್ಯಾಸಿಗಳು. ತಮಗಾಗಿ ಏನನ್ನೂ ಬಯಸದೆ ಇತರರಿಗಾಗಿ ಬದುಕಿದರು. ಹರಿಜನರು, ವಿದ್ಯಾರ್ಥಿಗಳು, ಮತ್ತು ದುಃಖಿತರ ಸೇವೆಯಲ್ಲಿ ಜೀವನವನ್ನು ಸವೆಸಿದರು.

 ತ್ಯಾಗೀಶಾನಂದರು

 

ಮೂವತ್ತಾರು ವರ್ಷಗಳ ಹಿಂದೆ ಒಂದು ಸಂಜೆ ಬೆಂಗಳೂರಿನ ಬಸವನಗುಡಿಯ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣಾಶ್ರಮಕ್ಕೆ ಹೋದೆ. ಆಗ ಅದು ನಿಜವಾದ ಆಶ್ರಮದಂತೆ ಕಾಣುತ್ತಿತ್ತು. ನಾವು ಕಾವ್ಯಗಳಲ್ಲಿ, ಪುರಾಣಗಳಲ್ಲಿ ಋಷಿಗಳ ಆಶ್ರಮಗಳ ವರ್ಣನೆಗಳನ್ನು ಓದಿದ್ದೇವೆ. ಹಿಂದೆ ಋಷಿಗಳು ಕಾಡಿನಲ್ಲಿ ಕುಟೀರಗಳನ್ನು ಕಟ್ಟಿಕೊಂಡು ಅಲ್ಲಿದ್ದು ತಪಸ್ಸು ಮಾಡುತ್ತಿದ್ದರಂತೆ. ಅವನ್ನು ಆಶ್ರಮ ಎಂದು ಕರೆಯುತ್ತಿದ್ದರು. ಇದೂ ಕೂಡ ಅಂತಹ ಆಶ್ರಮದಂತೆ ಕಾಣುತ್ತಿತ್ತು. ಎಲ್ಲ ಕಡೆಯೂ ದೊಡ್ಡ ದೊಡ್ಡ ಮರಗಳು. ನಡುವೆ ಒಂದೇ ಒಂದು ಕಟ್ಟಡ. ಹಿಂದೆ ಬಂಡೆಗಳ ಸಾಲು. ಆ ಬಂಡೆಗಳಲ್ಲಿ ಒಂದಕ್ಕೆ ತುಂಬ ಪವಿತ್ರವಾದ ಆವರಣ ಉಂಟು. ಶ್ರೀ ರಾಮಕೃಷ್ಣ ಪರಮಹಂಸರ ಪತ್ನಿಯಾದ ಶ್ರೀಮಾತೆ ಶಾರದಾ ದೇವಿಯವರು ಬೆಂಗಳೂರಿಗೆ ಬಂದಿದ್ದರು. ಒಂದು ಸಂಜೆ ಆಶ್ರಮದ ಬಂಡೆಯ ಮೇಲೆ ಕುಳಿತು ಸೂರ್ಯನು ಮುಳುಗುವುದನ್ನು ನೋಡಿ ಅವರು ತುಂಬ ಆನಂದಪಟ್ಟಿದ್ದರಂತೆ.

ನಾನು ಆಶ್ರಮದ ಆವರಣಕ್ಕೆ ಕಾಲಿಟ್ಟಾಗ ಸಂಜೆಯ ಪ್ರಾರ್ಥನೆಯ ಗೀತೆ ಅಲೆಯಲೆಯಾಗಿ ಕೇಳಿಬರುತ್ತಿತ್ತು.

‘ಖಂಡನ ಭವ ಬಂಧನ ಜಗ ವಂದನ ವಂದಿತೊಮಾಯ…..’

ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣರನ್ನು ಕುರಿತು ರಚಿಸಿದ ಸ್ತೋತ್ರಗೀತೆ ಅದು. ಆರೇಳು ಜನ ಭಕ್ತರೂ ಸಾಧುಗಳೂ ಒಟ್ಟಾಗಿ ಕುಳಿತು ಹಾರ್ಮೋನಿಯಂ, ತಬಲಾಗಳನ್ನು ನುಡಿಸುತ್ತಾ ಹಾಡುತ್ತಿದ್ದರು. ಎದುರಿಗೆ ಪೂಜೆಯ ಕೋಣೆ. ಅಲ್ಲಿ ಎತ್ತರವಾದ ಆಸನ. ಅದರ ಮೇಲೆ ಶ್ರೀರಾಮಕೃಷ್ಣ ಪರಮಹಂಸರ ಚಿತ್ರವನ್ನು ಇಟ್ಟಿದ್ದರು. ಬಣ್ಣ ಬಣ್ಣದ ಹೂವುಗಳನ್ನು ಮನಸ್ಸಿಗೆ ಸಂತೋಷ ಉಂಟಾಗುವ ರೀತಿಯಲ್ಲಿ ಜೋಡಿಸಿದ್ದರು. ಒಂದು ಕಡೆ ಊದುಬತ್ತಿಯ ಸುವಾಸನೆ. ಈ ಸುಗಂಧಗಳೂ ಸೊಗಸಾದ ಸಂಗೀತವೂ ಸೇರಿ ಇದು ಯಾವುದೋ ದಿವ್ಯಲೋಕ ಎನ್ನುವ ಭಾವನೆ ಮನಸ್ಸಿಗೆ ತರುತ್ತಿತ್ತು.

ಪ್ರಾರ್ಥನೆ ಮುಗಿಯಿತು. ಇತರರೊಡನೆ ನಾನೂ ಹೊರಕ್ಕೆ ಬಂದೆ. ಅವರೆಲ್ಲ ವರಾಂಡದಲ್ಲಿ ಯಾವ ಕಡೆಗೆ ಹೋದರೋ ಅಲ್ಲಿಗೆ ನಾನೂ ಹೋದೆ. ಆಗ ನಾನು ನಿರೀಕ್ಷಿಸದೆ ಇದ್ದ ಒಂದು ದೃಶ್ಯ ಕಣ್ಣಿಗೆ ಬಿತ್ತು. ನನ್ನ ಮನಸ್ಸು ತಟಕ್ಕನೆ ಶತಮಾನಗಳ ಕಾಲ ಹಿಂದಕ್ಕೆ ಹೋಗುವಂತೆ ಮಾಡಿತು.

ವರಾಂಡದ ಒಂದು ತುದಿಯಲ್ಲಿ ನಿಜವಾಗಿಯೂ ಋಷಿಯಂತೆ ತೋರುತ್ತಿದ್ದವರೊಬ್ಬರು ಕುಳಿತಿದ್ದಾರೆ. ಎತ್ತರದ ವ್ಯಕ್ತಿ. ಪದ್ಮಾಸನ ಹಾಕಿ ಕಣ್ಣುಮುಚ್ಚಿ ಕುಳಿತಿದ್ದಾರೆ. ಅವರ ಕೈಗಳು ತೊಡೆಯ ಮೇಲೆ. ತಲೆ, ಗಡ್ಡ, ಮೀಸೆಗಳ ಕೂದಲು ಹಾಲು ಬಿಳುಪು. ಮುಖದಲ್ಲಿ ಪೊದೆ ಪೊದೆಯಾಗಿ ಬೆಳೆದ ಗಡ್ಡದ ನಡುವೆ ಕಾಣುತ್ತಿದ್ದ ಚರ್ಮ, ನೀಳವಾದ ಕೈಗಳ ಚರ್ಮ ಅಚ್ಚ ಚಿನ್ನದ ಬಣ್ಣ. ಉಟ್ಟ ಪಂಚೆ ತೊಟ್ಟ ಅರೆತೋಳಿನ ಅಂಗಿ, ಕೊರಳಿಗೆ ಸುತ್ತಿದ್ದ ವಸ್ತ್ರ ಎಲ್ಲವೂ ಕಾವೀ ಬಣ್ಣದವು. ಅವರು ಕಣ್ಣು ಮುಚ್ಚಿ ಧ್ಯಾನಾಸಕ್ತರಾಗಿದ್ದರು. ಅದುವರೆಗೆ ಭಜನೆ ಮಾಡುತ್ತಿದ್ದ ವರು ಒಬ್ಬೊಬ್ಬರಾಗಿ ಅವರಿಗೆ ದೀರ್ಘ ದಂಡ ನಮಸ್ಕಾರ ಮಾಡಿದರು. ಉಳಿದವರಂತೆ ನಾನೂ ಮಾಡಿದೆ. ಆದರೆ ಧ್ಯಾನದಲ್ಲಿ ಕುಳಿತಿದ್ದ ವ್ಯಕ್ತಿಗೆ ಇದು ಯಾವುದೂ ತಿಳಿಯಲಿಲ್ಲ. ಅವರು ಕಣ್ಣನ್ನೂ ತೆರೆಯಲಿಲ್ಲ; ಆಶೀರ್ವಾದ ವನ್ನೂ ಮಾಡಲಿಲ್ಲ. ತಮ್ಮ ಪಾಡಿಗೆ ತಾವು ಕಣ್ಣು ಮುಚ್ಚಿ ಧ್ಯಾನದಲ್ಲಿ ಮುಳುಗಿ ಹೋಗಿದ್ದರು.

ಹೊರಕ್ಕೆ ಬಂದ ಮೇಲೆ ಒಬ್ಬರನ್ನು ಕೇಳಿದೆ: ‘ಅಲ್ಲಿ ತಪಸ್ಸು ಮಾಡುತ್ತಿದ್ದಾರಲ್ಲ ಅವರು ಯಾರು?’ ಅವರು ಹೇಳಿದರು : ‘ಅವರೇ ಸ್ವಾಮಿ ತ್ಯಾಗೀಶಾನಂದರು.’

ಸೇವೆಗಾಗಿ ಜನ್ಮತಾಳಿದ ಸಂಸ್ಥೆ

ಸ್ವಾಮಿ ತ್ಯಾಗೀಶಾನಂದರು ಶ್ರೀರಾಮಕೃಷ್ಣ ಮಹಾ ಸಂಘಕ್ಕೆ ಸೇರಿದ ಸಂನ್ಯಾಸಿಗಳು. ಅದು ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ್ದು. ಭಾರತದ ಜನ ಬಡತನ, ಅಜ್ಞಾನ, ರೋಗಗಳಿಂದ ನರಳುತ್ತಿದ್ದಾರೆ ಎಂದು ವಿವೇಕಾನಂದರು ಕಂಡುಕೊಂಡರು. ಅಂದು ಭಾರತವನ್ನು ಬ್ರಿಟಿಷರು ಆಳುತ್ತಿದ್ದರು. ನಮ್ಮ ದೇಶದ ಜನರ ದುಃಖ, ಕಷ್ಟಗಳನ್ನು ಕಟ್ಟಿಕೊಂಡು ಬ್ರಿಟಿಷರಿಗೆ ಆಗಬೇಕಾಗಿದ್ದೇನು? ಹಾಗಾದರೆ ಈ ದೇಶದ ಜನರಿಗೆ ಸೇವೆ ಸಲ್ಲಿಸುವವರು ಯಾರು? ಸಂಸಾರಿಗಳಿಗೋ ಅವರದ್ದೇ ಆದ ನೂರೆಂಟು ತಾಪತ್ರಯ, ಇನ್ನು ಸೇವೆಗೆ ಹೊತ್ತೆಲ್ಲಿ? ವಿವೇಕಾನಂದರು ಯೋಚಿಸಿದರು. ಸಂನ್ಯಾಸಿಗಳದ್ದೇ ಒಂದು ಸಂಘ ಸ್ಥಾಪಿಸೋಣ. ಅವರು ತಪಸ್ಸನ್ನು ಮಾಡಲಿ, ಜೊತೆಗೆ ಜನತೆಗೆ ಸೇವೆಯನ್ನೂ ಸಲ್ಲಿಸಲಿ. ಹೀಗೆ ಸ್ಥಾಪಿತವಾದದ್ದು ರಾಮಕೃಷ್ಣ ಮಹಾಸಂಘ.

ಸಂಘಕ್ಕೆ ಪರಮಹಂಸರ ನೇರ ಶಿಷ್ಯರು, ಸಂನ್ಯಾಸಿ ಶಿಷ್ಯರು ಸೇರಿಕೊಂಡರು. ಇತರ ನೂರಾರು ಜನ ಮನೆ ಮಠ ಬಿಟ್ಟು ದೇವರಿಗಾಗಿ, ಜನರ ಸೇವೆಗಾಗಿ ಈ ಸಂಘ ಸೇರಿದರು. ತುಂಬ ಓದಿದವರು, ದೊಡ್ಡ ದೊಡ್ಡ ಪದವಿ ಗಳನ್ನು ಪಡೆದವರು, ಒಳ್ಳೊಳ್ಳೆಯ ಉದ್ಯೋಗದಲ್ಲಿದ್ದವರು ಸಂನ್ಯಾಸಿಗಳಾದರು. ವಿವೇಕಾನಂದರು ಮೊದಲು ಕಲ್ಕತ್ತೆಯ ಬಳಿ ಸ್ಥಾಪಿಸಿದ ಬೇಲೂರು ಮಠ. ಅನಂತರ ಭಾರತದ ಒಳಗೂ ಹೊರಗೂ ಅನೇಕ ಶಾಖೆಗಳನ್ನು ಬೆಳೆಸಿಕೊಂಡಿತು. ಆಸ್ಪತ್ರೆ, ಶಾಲೆ, ಹಾಸ್ಟೆಲುಗಳನ್ನು ತೆರೆದರು. ಸಂಘದ ಸಂನ್ಯಾಸಿಗಳು ವೈದ್ಯರಾಗಿ,ಸೇವಕರಾಗಿ, ಉಪಾಧ್ಯಾಯರಾಗಿ, ವಾರ್ಡನ್‌ಗಳಾಗಿ ದುಡಿದರು; ಜೊತೆಜೊತೆಗೇ ತಾವೂ ತುಂಬಾ ಓದಿಕೊಂಡರು. ಪರಮಹಂಸರ, ಸ್ವಾಮಿ ವಿವೇಕಾನಂದರ ಉಪದೇಶಗಳನ್ನು ದೇಶಭಾಷೆಗಳಿಗೆ ಅನುವಾದ ಮಾಡಿದರು. ಉಪನಿಷತ್ತುಗಳು, ಗೀತೆ ಹಾಗೂ ಇತರ ಬೆಲೆಬಾಳುವ ಕೃತಿಗಳನ್ನು ಸಂಸ್ಕೃತದಿಂದ ಇಂಗ್ಲಿಷ್, ಕನ್ನಡ, ಹಿಂದಿ ಮುಂತಾದ ಭಾಷೆಗಳಿಗೆ ಅನುವಾದ ಮಾಡಿದರು. ಎಲ್ಲವನ್ನೂ ಮುದ್ದಾಗಿ ಮುದ್ರಿಸಿ ಸುಲಭ ಬೆಲೆಗೆ ಜನತೆಗೆ ದೊರಕುವಂತೆ ಮಾಡಿದರು. ಇವು ರಾಮಕೃಷ್ಣ ಮಹಾ ಸಂಘದ ಅನೇಕ ಚಟುವಟಿಕೆಗಳಲ್ಲಿ ಕೆಲವು.

ಸೇವೆಯ ಹಂಬಲ

ಸ್ವಾಮಿ ತ್ಯಾಗೀಶಾನಂದರು ಚಿಕ್ಕವರಾಗಿದ್ದಾಗಲೇ ವಿವೇಕಾನಂದರ ಭಾಷಣಗಳನ್ನು ಓದಿದ್ದರು. ಸಂನ್ಯಾಸಿ ಆಗುವುದಕ್ಕೆ ಮುಂಚೆ ತ್ಯಾಗೀಶಾನಂದರ ಹೆಸರು ವಿ.ಕೆ.ಕೃಷ್ಣಮೆನನ್. ವಿವೇಕಾನಂದರ ಭಾಷಣಗಳು ಮಿಂಚಿನ ಮಾಲೆ. ಯಾರ ಮೈಯಲ್ಲೂ ದೇಶಭಕ್ತಿಯ ಆವೇಶ ಉಕ್ಕಿ ಹರಿಯುವಂತೆ ಮಾಡುವ ಶಕ್ತಿ ಅವಕ್ಕೆ ಉಂಟು. ಆ ಭಾಷಣಗಳನ್ನು ಓದಿದ ತರುಣ ಕೃಷ್ಣನ ಮನಸ್ಸು ತ್ಯಾಗದ ಕಡೆಗೆ, ವೈರಾಗ್ಯದ ಕಡೆಗೆ, ಸೇವೆಯ ಕಡೆಗೆ ಹರಿಯಿತು. ಅವನ ಮನಸ್ಸಿನ ತುಂಬ ವಿವೇಕಾನಂದರ ಮೂರ್ತಿ, ಅವನ ಕಿವಿಯ ತುಂಬ ವಿವೇಕಾನಂದರ ವಾಣಿ, ತನ್ನ ದೇಶದ ಜನಕ್ಕೆ ಸೇವೆ ಮಾಡಬೇಕು ಎಂಬ ಆಸೆ ಹಗಲಿರುಳೂ ಕಾಡತೊಡಗಿತು.

ಪ್ರಾರಂಭದ ವರ್ಷಗಳು

ಕೃಷ್ಣಮೆನನ್ ಹುಟ್ಟಿದ್ದು ಕೇರಳದ ತಿರುಚ್ಚೂರು ಎಂಬಲ್ಲಿ. ಆಗ ತುಂಬಾ ಪ್ರಖ್ಯಾತವಾಗಿದ್ದ ವಟ್ಟಕ ಕುರುಪತ್ ಮನೆತನಕ್ಕೆ ಸೇರಿದವರು ಅವರು. ಅವರ ಹೈಸ್ಕೂಲ್ ವಿದ್ಯಾಭ್ಯಾಸ ನಡೆದದ್ದು ತಿರುಚ್ಚೂರಿನಲ್ಲಿಯೇ. ಅನಂತರ ಎರ್ನಾಕುಲಂನ ಮಹಾರಾಜಾ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಪರೀಕ್ಷೆಯನ್ನು ಪಾಸು ಮಾಡಿದರು. ಅಂದಿಗೆ ಆ ಕಾಲೇಜು ಮದರಾಸು ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು. ಕೃಷ್ಣಮೆನನ್ ಸಂಸ್ಕೃತದಲ್ಲಿ ಇಡೀ ವಿಶ್ವವಿದ್ಯಾನಿಲಯಕ್ಕೆ ಮೊದಲನೆಯವರಾಗಿ ತೇರ್ಗಡೆಹೊಂದಿ ಚಿನ್ನದ ಪದಕ ಗಳಿಸಿದರು. ಮುಂದೆ ಮದರಾಸಿಗೆ ಹೋಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿದರು. ಅಲ್ಲಿ ಬಿ.ಎ.ಆನರ್ಸ್ ಪದವಿ ಪಡೆದರು. ಅನಂತರ ನ್ಯಾಯಶಾಸ್ತ್ರದಲ್ಲಿ(ಲಾ) ಪದವಿಯನ್ನು ಪಡೆದರು. ಎಲ್ಲ ಪರೀಕ್ಷೆಗಳಲ್ಲೂ ಮೊದಲನೆಯ ಸ್ಥಾನ ಕೃಷ್ಣರದೇ. ಆದ್ದರಿಂದ ಚಿನ್ನದ ಪದಕಗಳೂ ಅವರದೇ.

ಮದರಾಸಿನಲ್ಲಿ ವಿದ್ಯಾಭ್ಯಾಸ ಪಡೆದದ್ದು ಒಂದು ಪುಣ್ಯವಾದರೆ ಅದಕ್ಕಿಂತ ದೊಡ್ಡ ಪುಣ್ಯ ಕೃಷ್ಣನ ಪಾಲಿಗೆ ಅಲ್ಲಿ ಕಾದಿತ್ತು. ಅವನ ಬದುಕನ್ನು ಬೇರೆಯ ದಿಕ್ಕಿಗೆ ತಿರುಗಿಸಿದ ಘಟನೆ ನಡೆದದ್ದು ಅಲ್ಲೇ, ಆಗಲೇ.

ಸ್ವಾಮಿ ರಾಮಕೃಷ್ಣಾನಂದರು

ತರುಣ ಕೃಷ್ಣನಿಗೆ ಮದರಾಸಿನ ಮೈಲಾಪುರದಲ್ಲಿ ರಾಮಕೃಷ್ಣಾಶ್ರಮ ಇದ್ದ ವಿಷಯ ತಿಳಿಯಿತು. ಆಗ ಅಲ್ಲಿಗೆ ಮುಖ್ಯಸ್ಥರು ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ರಾಮಕೃಷ್ಣಾನಂದರು. ಅವರು ತ್ಯಾಗ ವೈರಾಗ್ಯಗಳ ಮೂರ್ತಿ. ಕೃಷ್ಣಮೆನನ್ ಮಠಕ್ಕೆ ಹೋಗಿ ಮುಖ್ಯಸ್ಥರನ್ನು ಕಂಡು ತಮ್ಮ ಪರಿಚಯ ಹೇಳಿಕೊಂಡರು. ಕಾಲೇಜಿನ ಓದಿನ ನಡುವೆ ಆಗಾಗ ಬಿಡುವು ಮಾಡಿಕೊಂಡು ಮಠಕ್ಕೆ ಹೋಗಿ ಬರುತ್ತಿದ್ದರು. ರಾಮಕೃಷ್ಣಾನಂದರಂತಹ ಅಪೂರ್ವ ವಾದ ವ್ಯಕ್ತಿಯ ಸನ್ನಿಧಿ, ಕೃಷ್ಣನ ವೈರಾಗ್ಯ, ಸೇವಾ ಮನೋಭಾವಗಳಿಗೆ ಒಂದು ಸ್ಪಷ್ಟವಾದ ರೂಪವನ್ನು ಕೊಡಲು ಕಾರಣವಾಯಿತು. ಸ್ವಾಮಿಗಳಿಗೂ ಕೃಷ್ಣನ ವಿಷಯದಲ್ಲಿ ತುಂಬ ವಾತ್ಸಲ್ಯ ಹುಟ್ಟಿತು.

ಅಷ್ಟರಲ್ಲಿ ಮಹತ್ತಾದ ಒಂದು ಘಟನೆ ನಡೆಯಿತು.

ಸ್ವಾಮಿ ಬ್ರಹ್ಮಾನಂದರು

ಒಮ್ಮೆ ಪರಮಹಂಸರ ಮತ್ತೊಬ್ಬ ಶಿಷ್ಯರಾದ ಸ್ವಾಮಿ ಬ್ರಹ್ಮಾನಂದರು ಸ್ವಲ್ಪಕಾಲ ತಂಗುವುದಕ್ಕೆ ಎಂದು ಮದರಾಸಿಗೆ ಬಂದರು. ಬ್ರಹ್ಮಾನಂದರು ತಪಸ್ಸಿನಲ್ಲಿ, ವೈರಾಗ್ಯದಲ್ಲಿ, ಭಗವಂತನ ಅನುಭವದಲ್ಲಿ ಅವರ ಜೊತೆಯವರೆಲ್ಲರಿಗಿಂತ ದೊಡ್ಡವರು. ಸಂನ್ಯಾಸಿಗಳ ನಡುವೆ ಅವರು ಚಕ್ರವರ್ತಿ ಎಂದು ಸ್ವಾಮಿ ವಿವೇಕಾನಂದರೇ ಹೇಳುತ್ತಿದ್ದರು. ಈ ಕಾರಣಕ್ಕಾಗಿ ಅವರನ್ನು ಎಲ್ಲರೂ ‘ರಾಜಾ ಮಹಾರಾಜ್’ ಎಂದು ಕರೆಯುತ್ತಿದ್ದರು. ಅವರು ಯಾವುದೋ ಸಂಸ್ಥಾನದ ದೊಡ್ಡ ಮಹಾರಾಜರಂತೆ ಕಾಣುತ್ತಿದ್ದರು ಎಂದು ಅವರನ್ನು ನೋಡಿದವರೆಲ್ಲ ಹೇಳುತ್ತಿದ್ದರು. ಅವರ ಮನಸ್ಸು ಸದಾ ಭಗವಂತನಲ್ಲಿ ಲೀನವಾಗಿರುತ್ತಿತ್ತಂತೆ. ಅವರನ್ನು ಬಲ್ಲವರು ಹೇಳುತ್ತಿದ್ದರು: “ಸ್ವಾಮಿ ಬ್ರಹ್ಮಾನಂದರು ಸದಾ ದಿವ್ಯಭಾವದಲ್ಲಿ ಇರುತ್ತಿದ್ದರು. ಅವರ ಮನಸ್ಸು ವ್ಯವಹಾರ ಜಗತ್ತಿಗೆ ಇಳಿಯುತ್ತಿದ್ದುದೇ ಅಪರೂಪ. ಅಷ್ಟಲ್ಲದೆ ಶ್ರೀರಾಮಕೃಷ್ಣ ಪರಮಹಂಸರು ಬ್ರಹ್ಮಾನಂದರನ್ನು ತಮ್ಮ ಆಧ್ಯಾತ್ಮಿಕ ಪುತ್ರ ಎಂದು ಆದರಿಸುತ್ತಿದ್ದರೆ?’

ಮಂತ್ರದೀಕ್ಷೆಗಾಗಿ

ಅಂತಹ ಸ್ವಾಮಿ ಬ್ರಹ್ಮಾನಂದರಿಂದ ಮಂತ್ರದೀಕ್ಷೆ ಪಡೆಯಬೇಕು ಎಂಬ ಆಸೆ ತರುಣ ಕೃಷ್ಣನ ಮನಸ್ಸನ್ನು ತುಂಬಿತು. ಆದರೆ ಆ ಆಸೆ ನೆರವೇರುವುದು ಹೇಗೆ? ಬ್ರಹ್ಮಾನಂದರಾದರೋ ಯಾರಿಗೂ ಉಪದೇಶ ಕೊಡಲು ಸಾಮಾನ್ಯವಾಗಿ ಒಪ್ಪುತ್ತಿರಲಿಲ್ಲ. ಕೃಷ್ಣಮೆನನ್ ಸ್ವಾಮಿ ಬ್ರಹ್ಮಾನಂದರ ದರ್ಶನ ಪಡೆದು ದೀರ್ಘದಂಡ ನಮಸ್ಕಾರ ಮಾಡಿದರು. ಮಂತ್ರದೀಕ್ಷೆ ಬೇಡಿದರು. ಬ್ರಹ್ಮಾನಂದರು ‘ವಿಚಾರ ಮಾಡೋಣ’ ಎಂದುಬಿಟ್ಟರು. ತರುಣ ಹಿಡಿದ ಪಟ್ಟು ಬಿಡಲಿಲ್ಲ. ಅನೇಕ ಸಲ ಮಠಕ್ಕೆ ಯಾತ್ರೆ ಮಾಡಿದ. ಆ ಕಾಲಕ್ಕೆ ಮೈಲಾಪುರ ಊರ ಮಧ್ಯದಿಂದ ದೂರ ಇತ್ತು. ಸುತ್ತ ಮರಗಿಡಗಳು ಬೆಳೆದು ಮಠ ಕಾಡಿನ ಮಧ್ಯೆ ಇದೆ ಎನ್ನುವಂತೆ ತೋರುತ್ತಿತ್ತು. ರಾತ್ರಿ ಹೊತ್ತು ಅಲ್ಲಿಗೆ ಹೋಗಲು ಭಯವೂ ಆಗುತ್ತಿತ್ತು. ಆದರೂ ಕೃಷ್ಣ ಹೆದರಲಿಲ್ಲ.

ಹಗಲು ಎನ್ನದೆ ರಾತ್ರಿ ಎನ್ನದೆ ಕೃಷ್ಣನ ಮೈಲಾಪುರ ಯಾತ್ರೆ ನಡೆದೇ ನಡೆಯಿತು. ಆತ ಮೈಲಿ ಮೈಲಿ ನಡೆದುಹೋಗಿ ಬ್ರಹ್ಮಾನಂದರ ದರ್ಶನ ಪಡೆಯುತ್ತಿದ್ದ, ದೀಕ್ಷೆಗಾಗಿ ಬೇಡುತ್ತಿದ್ದ. ಸ್ವಾಮಿ ರಾಮಕೃಷ್ಣಾನಂದರು ತರುಣನ ಪರವಾಗಿ ಶಿಫಾರಸು ಮಾಡಿದರು. ಬ್ರಹ್ಮಾನಂದರ ಮನಸ್ಸು ಸ್ವಲ್ಪ ಮೃದು ಆಯಿತು. ಕೃಷ್ಣನ ಭಾಗ್ಯದ ಬಾಗಿಲು ತೆರೆಯುವ ಗಳಿಗೆ ಹತ್ತಿರವಾಯಿತು.

ಹೀಗೆ ಹೇಳಿದ ಮಾತ್ರಕ್ಕೆ ಬ್ರಹ್ಮಾನಂದರು ಕೃಷ್ಣನಿಗೆ ಮಂತ್ರದೀಕ್ಷೆ ಕೊಟ್ಟರು ಎಂದು ಅರ್ಥವಲ್ಲ. ‘ಇಂಥ ದಿನ ಇಷ್ಟು ಗಂಟೆಗೆ ಬಾ’ ಎಂದರು ಬ್ರಹ್ಮಾನಂದರು. ಹೋದರೆ ಮತ್ತೊಂದು ದಿನ ಬಾ ಎಂದುಬಿಟ್ಟರು. ತರುಣ ತುಂಬಾ ಆಸೆಯಿಂದ, ಉತ್ಸುಕತೆಯಿಂದ ಆ ದಿನ ಹೋದರೆ ಇನ್ನೊಂದು ದಿನ ಬಾ ಎಂದುಬಿಟ್ಟರು. ತರುಣನಿಗೆ ಆಗುತ್ತಿದ್ದ ನಿರಾಶೆ, ನೋವುಗಳು ಅಷ್ಟಿಷ್ಟಲ್ಲ. ಆದರೆ ಏನೂ ಮಾಡುವಂತಿಲ್ಲ. ದೊಡ್ಡದು ದೊರೆಯಬೇಕಾದರೆ ಅದಕ್ಕಾಗಿ ತುಂಬ ಕಷ್ಟಪಡಬೇಕು. ಕೃಷ್ಣ ಅದನ್ನು ಬಲ್ಲ. ಕಾಲೇಜಿನ ಓದಿನ ನಡುವೆ ಬಿಡುವು ಮಾಡಿಕೊಂಡು ಮೈಲಿಗಟ್ಟಲೆ ನಡೆದು ಹೋಗಬೇಕು. ಬ್ರಹ್ಮಾನಂದರ ಸಮಯ ನೋಡಿ ಅವರ ದರ್ಶನ ಪಡೆಯಬೇಕು. ಇಷ್ಟೆಲ್ಲ ಆದರೂ ತಮ್ಮ ಆರಾಧ್ಯಮೂರ್ತಿ ಮಾತು ಕೊಟ್ಟಂತೆ ಕರುಣೆ ತೋರಿಸುತ್ತಿಲ್ಲ. ಆಗ ಬ್ರಹ್ಮಾನಂದರ ಹತ್ತಿರ ಇದ್ದು ಅವರಿಗೆ ಸೇವೆ ಸಲ್ಲಿಸುತ್ತಿದ್ದವರಲ್ಲಿ ಒಬ್ಬರು ಹೇಳಿದರು : ‘ನಿರಾಶನಾಗಬೇಡ. ಪೂಜ್ಯ ಬ್ರಹ್ಮಾನಂದರ ರೀತಿಯೇ ಹೀಗೆ. ಸಾಧಕನಾದವನ ಆಸೆ, ನಿಷ್ಠೆ ಎಷ್ಟು ತೀವ್ರ ಎಂಬುದನ್ನು ಮತ್ತೆ ಮತ್ತೆ ಅವರು ಪರೀಕ್ಷಿಸುತ್ತಾರೆ. ಅವರ ಮನಸ್ಸಿಗೆ ಒಪ್ಪಿಗೆಯಾದ ಮೇಲೆ ಖಂಡಿತವಾಗಿಯೂ ಕೃಪೆ ತೋರಿಸುತ್ತಾರೆ. ಅವರು ಹೇಳಿದಾಗಲೆಲ್ಲ ಬರುತ್ತಲೇ ಇರು.’

ತರುಣ ಮೆನನ್ ದೃಢ ನಿರ್ಧಾರ ಕೈಗೊಂಡಿದ್ದ: ‘ಇವರೇ ನನ್ನ ಶ್ರೀ ಗುರು. ಇವರಿಂದ ಮಂತ್ರದೀಕ್ಷೆ ಪಡೆದೇ ತೀರುತ್ತೇನೆ.’ ಅಂದು ಬ್ರಹ್ಮಾನಂದರು ದರ್ಶನ ನೀಡಿದರು. ‘ಇಂಥ ದಿನ ರಾತ್ರಿ ಹನ್ನೆರಡಕ್ಕೆ ಬಾ. ನಿನಗೆ ಭಗವಂತನ ಅನುಗ್ರಹ ದೊರೆತರೂ ದೊರೆಯಬಹುದು.’ ತರುಣನಿಗೆ ದಿಗ್ಭ್ರಮೆಯಾಯಿತು. ರಾತ್ರಿ ಹನ್ನೆರಡಕ್ಕೆ ಇಂಥ ನಿರ್ಜನ ಪ್ರದೇಶಕ್ಕೆ ಬರುವುದು ಹೇಗೆ? ಆದರೂ ಧೈರ್ಯಮಾಡಿ ಆಗಲಿ ಎಂದುಬಿಟ್ಟ. ಆಮೇಲೆ ಶ್ರೀರಾಮಕೃಷ್ಣಾನಂದರ ಮುಂದೆ ತನ್ನ ಕಷ್ಟ ಹೇಳಿಕೊಂಡ. ಅವರು ‘ಹಿಂದಿನ ಸಂಜೆಯೇ ಬಂದು ಇಲ್ಲೇ ಇದ್ದುಬಿಡು. ಹನ್ನೆರಡು ಗಂಟೆಗೆ ಅವರ ಸನ್ನಿಧಿಗೆ ಹೋಗು’ ಎಂದರು. ಕೃಷ್ಣನಿಗೆ ಸಂತೋಷವಾಯಿತು.

ಕಡೆಗೂ ಮಂತ್ರದೀಕ್ಷೆ ದೊರಕಿತು

ನಿಶ್ಚಿತ ದಿನ ಬಂತು. ಸಂಜೆ ಕೃಷ್ಣ ಮೈಲಾಪುರಕ್ಕೆ ನಡೆದು ಹೋದ. ಮಠದಲ್ಲಿ ಕುಳಿತು ರಾತ್ರಿ ಹನ್ನೆರಡು ಆಗುವುದನ್ನೇ ಮನಸ್ಸೆಲ್ಲ ಕಣ್ಣಾಗಿ ನೋಡುತ್ತಾ ಕುಳಿತ. ತನ್ನ ಪೂಜ್ಯ ಗುರುವಿನಿಂದ ಕರೆ ಬರುತ್ತದೆ, ತನಗೆ ಮಂತ್ರೋಪದೇಶ ದೊರಕುತ್ತದೆ ಎನ್ನುವ ಉತ್ಸಾಹದಲ್ಲಿ ಸ್ವಲ್ಪವೂ ನಿದ್ರೆ ಬರಲಿಲ್ಲ. ಹೇಗೋ ಅರ್ಧರಾತ್ರಿಯವರೆಗೆ ಕಾಲವನ್ನು ನೂಕಿದ್ದಾಯಿತು. ಹನ್ನೆರಡು ಗಂಟೆಯೂ ಆಯಿತು. ಗುರುವಿನ ಕೊಠಡಿಯ ಬಾಗಿಲು ಮಾತ್ರ ತೆರೆಯಲಿಲ್ಲ. ಒಂದು ಗಂಟೆಯಾಯಿತು. ಎರಡು, ಮೂರು, ನಾಲ್ಕು, ಐದು, ಉಹೂಂ. ಬಹುಶಃ ಭಗವಂತನ ನೆನಪಿನಲ್ಲಿ ಲೀನವಾಗಿದ್ದ ಬ್ರಹ್ಮಾನಂದರಿಗೆ ಹೊರ ಜಗತ್ತಿನ ಪರಿವೆಯೇ ಇರಲಿಲ್ಲವೇನೋ! ಆದರೆ ಕೃಷ್ಣನಿಗೆ ಮಾತ್ರ ಒಂದೊಂದು ಗಂಟೆಯ ಬಡಿತವೂ ತನ್ನ ಆಸೆಯ ಮಂದಿರವನ್ನು ಕುಟ್ಟಿ ಕೆಡಹುವ ಹಾರೆ ಗುದ್ದಲಿಗಳ ಹೊಡೆತವಾಯಿತು. ಇನ್ನು ತನಗೆ ಗುರುವಿನಿಂದ ಉಪದೇಶ ದೊರೆಯುವುದಿಲ್ಲ ಎಂಬ ಭಾವನೆ ಬಂತು. ಸೂರ್ಯೋದಯವೂ ಆಯಿತು. ಕೃಷ್ಣ ಮಿಂದು ಕುಳಿತ ಗುರುವಿನ ಕೊಠಡಿಯ ಬಾಗಿಲು ತೆರೆಯಿತು. ಹಾಗೆಯೇ ಕೃಷ್ಣನ ಅದೃಷ್ಟದ ಬಾಗಿಲೂ ಕೂಡ. ಕರೆ ಬಂತು. ಕೃಷ್ಣ ಒಳಕ್ಕೆ ಹೋದ. ಗುರು ಪ್ರೀತಿಯಿಂದ ಮಾತನಾಡಿಸಿದರು. ಮಂತ್ರದೀಕ್ಷೆಯನ್ನೂ ನೀಡಿದರು. ಕೃಷ್ಣ ‘ಧನ್ಯನಾದೆ’ಎಂದು ಪ್ರಣಾಮ ಮಾಡಿ ಹಿಂದಿರುಗಿದ.

ವಕೀಲಿವೃತ್ತಿ ಬೇಡ

ಕೃಷ್ಣನ ಓದು ಮುಂದುವರಿಯಿತು. ಒಳಗಿನ ಆಧ್ಯಾತ್ಮ, ತ್ಯಾಗ, ವೈರಾಗ್ಯ ತರುಣನ ಓದಿಗೆ ಅಡ್ಡಿ ತರಲಿಲ್ಲ. ಅಸಾಧಾರಣ ಪ್ರತಿಭಾಶಾಲಿಯಾದ ಕೃಷ್ಣನಿಗೆ ಉಳಿದ ಪರೀಕ್ಷೆಗಳಲ್ಲಿ ಹೇಗೋ ಹಾಗೆ ಲಾ ಪರೀಕ್ಷೆಯಲ್ಲೂ ಮೊದಲ ಸ್ಥಾನದಲ್ಲಿ ತೇರ್ಗಡೆ ಹೊಂದಲು ಏನೂ ತೊಂದರೆ ಆಗಲಿಲ್ಲ. ಲಾ ಡಿಗ್ರಿ ಪಡೆದು ಕೃಷ್ಣ ಕೇರಳಕ್ಕೆ ಹಿಂದಿರುಗಿದ.

ಕೃಷ್ಣನ ಸೋದರಮಾವ ವಿ.ಕೆ.ಕೊಚ್ಚುನ್ನಿ ಮೆನನ್‌ಗೆ ಈ ಸೋದರಳಿಯ ಅಚ್ಚುಮೆಚ್ಚು. ಅವರು ಆಗಷ್ಟೇ ನ್ಯಾಯಾಧೀಶ ಪದವಿಯಿಂದ ನಿವೃತ್ತರಾಗಿದ್ದರು. ವಕೀಲರಾಗಿ ಆಫೀಸು ತೆರೆದು ಒಳ್ಳೆಯ ಹೆಸರು ಪಡೆದಿದ್ದರು. ಸಂಪಾದನೆಯೂ ಚೆನ್ನಾಗಿತ್ತು. ಸೋದರಳಿಯನೂ ತಮ್ಮಂತೆ ವಕೀಲನಾಗಿ ಒಳ್ಳೆಯ ಹೆಸರು ಗಳಿಸಬೇಕು ಎಂಬುದು ಅವರ ಆಸೆ. ಅಲ್ಲದೆ, ಹಾಗೆ ಮಾಡಿದರೆ ಅವನು ತುಂಬ ಹಣವಂತನೂ ಆಗುತ್ತಾನೆ ಎಂಬುದು ಅವರ ನಿರೀಕ್ಷೆ. ಆದರೆ ಅಳಿಯನಾದರೋ ಅಂಥ ಆಸೆ, ನಿರೀಕ್ಷೆ ಇಲ್ಲದವನು.  ಅವನ ಸ್ವಭಾವವೂ ಆ ವೃತ್ತಿಗೆ ಹೊಂದಿಕೊಳ್ಳುವಂಥದಲ್ಲ. ಆದರೂ ಮಾವನಿಗೆ ಅಸಮಾಧಾನಬೇಡ ಎಂದು ಕೃಷ್ಣ ವಕೀಲಿ ಪ್ರಾರಂಭಿಸಿದ. ಅವನಿಗೆ ಅದು ಒಗ್ಗಲಿಲ್ಲ. ಒಂದು ಮೊಕದ್ದಮೆಯಲ್ಲಿ ಸುಳ್ಳು ಹೇಳಬೇಕಾಗಿ ಬಂತು. ಆಗ ‘ಛೇ, ಸತ್ಯನಿಷ್ಠೆ ನನ್ನ ವ್ರತ. ಹೀಗಿದ್ದೂ ಸುಳ್ಳು ಹೇಳಲೇ’? ಎಂದವನೆ ವಕೀಲಿಯನ್ನೇ ಬಿಟ್ಟುಬಿಟ್ಟ.

ಅಧ್ಯಾಪಕರು

ಮುಂದೇನು ಮಾಡಬೇಕು? ಸೇವೆ ಮಾಡಬೇಕು ಎನ್ನುವವರಿಗೆ ಹಲವು ದಾರಿಗಳು ಉಂಟು. ೧೯೨೨ರ ಸುಮಾರು. ತಿರುಚ್ಚೂರಿನ ‘ವಿವೇಕೋದಯಮ್’ ಸಮಾಜವು ಒಂದು ಹೈಸ್ಕೂಲನ್ನು ಸ್ಥಾಪಿಸಿತ್ತು. ಅದಕ್ಕೆ ದಕ್ಷರಾದ ಮುಖ್ಯೋಪಾಧ್ಯಾಯರು ಬೇಕಾಗಿತ್ತು. ‘ಬರುತ್ತೀರಾ?’ ಎಂದು ಕೃಷ್ಣಮೆನನ್ ಅವರನ್ನು ಕೇಳಿದ್ದೇ ತಡ ಇವರು ಆಗಲಿ ಎಂದರು. ಉಪಾಧ್ಯಾಯ ವೃತ್ತಿ ಅವರಿಗೆ ತುಂಬ ಪ್ರಿಯವಾಯಿತು. ಅನಂತರ ಅವರು ಅಧ್ಯಾಪಕರ ವೃತ್ತಿಯಲ್ಲಿ ಶಿಕ್ಷಣವನ್ನೂ ಪಡೆದುಕೊಂಡರು.

ಸಂನ್ಯಾಸ ಜೀವನ ಪ್ರಾರಂಭವಾಯಿತು

ಕೃಷ್ಣನ್ ಅವರ ಸೇವೆಯ ಕ್ಷೇತ್ರ ವಿಸ್ತಾರವಾಗು ವುದಕ್ಕೆ ಕೂಡಲೇ ಒಂದು ಅವಕಾಶವೂ ದೊರಕಿತು. ೧೯೨೪ರಲ್ಲಿ ಕೇರಳ ಪ್ರವಾಹದ ಹಾವಳಿಗೆ ಸಿಕ್ಕಿ ತತ್ತರಿಸಿತು. ಕೃಷ್ಣಮೆನನ್ ತಮ್ಮ ಉಪಾಧ್ಯಾಯ ಮಿತ್ರರೊಂದಿಗೆ ಪರಿಹಾರ ಕಾರ್ಯದಲ್ಲಿ ತೊಡಗಿದರು. ಮನೆ ಮಠಗಳನ್ನು ಕಳೆದುಕೊಂಡವರ ಗೋಳು ಹೇಳತೀರದು. ಜೊತೆಗೆ ಆ ಜನಗಳಿಗೆ ತಿನ್ನುವುದಕ್ಕೆ ಕೂಡ ಏನೂ ಇಲ್ಲ. ಅಲ್ಲಿ ಇಲ್ಲಿ ಹಣ ಬೇಡಿ ತಂದು ಕೃಷ್ಣ ಮೆನನ್ ಪರಿಹಾರ ಕಾರ್ಯವನ್ನು ಮುಂದುವರಿಸಿದರು. ರಾಮಕೃಷ್ಣ ಮಹಾ ಸಂಘವು ಈ ಕಾರ್ಯಕ್ಕೆ ನೆರವು ನೀಡಲು ಮುಂದಾಯಿತು. ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಬಡಬಗ್ಗರಿಗೆ ಊಟ ವಸತಿಗಳನ್ನು ಕಲ್ಪಿಸಿತು. ಆ  ಕಾಲಕ್ಕೆ ಇದು ಬಹು ದೊಡ್ಡ ಮೊತ್ತ. ಈ ಪರಿಹಾರ ಕಾರ್ಯದೊಂದಿಗೇ ತಿರುಚ್ಚೂರಿಗೆ ರಾಮಕೃಷ್ಣ ಸಂಘದ ಪ್ರವೇಶವೂ ಆಯಿತು ಎನ್ನಬೇಕು. ಕೃಷ್ಣಮೆನನ್ ಉಪಾಧ್ಯಾಯರಾಗಿದ್ದ ಶಾಲೆಯ ಆವರಣದಲ್ಲಿ ಒಂದು ಸಣ್ಣ ಹುಲ್ಲು ಛಾವಣಿಯ ಕಟ್ಟಡದಲ್ಲಿ ಆಶ್ರಮ ಪ್ರಾರಂಭವಾಯಿತು. ಅದುವರೆಗೂ ಮನೆಯಲ್ಲಿದ್ದು ಕೊಂಡು ಶಾಲೆಗೆ ಬರುತ್ತಿದ್ದ ಮುಖ್ಯೋಪಾಧ್ಯಾಯ ಕೃಷ್ಣಮೆನನ್ ಈಗ ಆಶ್ರಮದಲ್ಲೇ ವಾಸಿಸತೊಡಗಿದರು. ಅವರು ಕ್ರಮವಾಗಿ ಸಂನ್ಯಾಸವನ್ನು ಇನ್ನೂ ಸ್ವೀಕರಿಸಿರಲಿಲ್ಲ, ನಿಜ. ಆದರೆ ಕಟ್ಟುನಿಟ್ಟಿನ ಸರಳ ಸಂನ್ಯಾಸ ಜೀವನವನ್ನು ಅವರು ನಡೆಸುತ್ತಿದ್ದರು. ಶ್ರೀರಾಮಕೃಷ್ಣ-ವಿವೇಕಾನಂದರ ವಚನಗಳನ್ನು ಅಧ್ಯಯನ ಮಾಡುತ್ತಿದ್ದರು. ಜೊತೆಗೆ ಮಹಾತ್ಮಗಾಂಧಿಯವರಲ್ಲಿ ಅವರ ಭಕ್ತಿ ಶ್ರದ್ಧೆಗಳು ಅಪಾರ. ಗಾಂಧಿಯವರ ಉಪದೇಶದಂತೆ ಬ್ರಹ್ಮಚರ್ಯವ್ರತಪಾಲನೆ ಅವರ ಜೀವನದ ವ್ರತವಾಯಿತು. ಜೊತೆಗೆ ಖಾದಿಯನ್ನು ತೊಡುವ ವ್ರತವನ್ನು ಸ್ವೀಕರಿಸಿ ಅದನ್ನೂ ಕಟ್ಟುನಿಟ್ಟಾಗಿ ಪಾಲಿಸಿದರು.

ಮೆನನ್ ಅವರ ಶಾಲೆ ಬೇರೆ ಶಾಲೆಗಳಿಗಿಂತ ಅನೇಕ ರೀತಿಗಳಲ್ಲಿ ಎದ್ದುತೋರುವಂತಾಯಿತು. ಧಾರ್ಮಿಕ ಪ್ರವಚನಗಳು ಪದೇ ಪದೇ ನಡೆಯಲಾರಂಭಿಸಿದವು. ಅಲ್ಲದೆ ಅನೇಕ ರಾಷ್ಟ್ರನಾಯಕರ ವಾಣಿ ಅಲ್ಲಿ ಮೊಳಗತೊಡಗಿತು. ಸ್ವಯಂ ಮಹಾತ್ಮಗಾಂಧಿಯವರೇ ಶಾಲೆಗೆ ಭೇಟಿಕೊಟ್ಟು ಅದನ್ನು ಹರಸಿದರು. ಅದು ಕೃಷ್ಣಮೆನನ್ ಅವರಿಗೂ ಅವರ ಸಹೋದ್ಯೋಗಿಗಳಿಗೂ ಹೆಚ್ಚಿನ ಸೇವೆಗೆ ಸ್ಫೂರ್ತಿಯನ್ನು ನೀಡಿತು.

ಹರಿಜನರಿಗಾಗಿ

ಮುಂದಿನ ಒಂದೆರಡು ವರ್ಷಗಳಲ್ಲಿ ಕೃಷ್ಣಮೆನನ್ ಅವರ ಸೇವೆಯ ಕ್ಷೇತ್ರ ಇನ್ನೂ ವಿಸ್ತಾರವಾಯಿತು. ಹರಿಜನರು ವಿದ್ಯಾವಂತರಾಗಬೇಕು, ಅವರಿಗೆ ಹೆಚ್ಚಿನ ಗಮನ ಕೊಡುವುದು ಅಗತ್ಯ ಎಂದು ಮೆನನ್ ಅವರಿಗೆ ತೋರಿತು. ಅವರು ಹರಿಜನರಿಗಾಗಿ ೧೯೨೭ರಲ್ಲಿ ಒಂದು ಸಂಸ್ಥೆಯನ್ನು ಪ್ರಾರಂಭಿಸಿದರು. ಅದು ತಿರುಚ್ಚೂರಿನ ಸಮೀಪದ ವಿಲಂಗಣ ಎಂಬಲ್ಲಿನ ದಕ್ಷಿಣದ ಪುರನಾಟ್ಟುಕರ ಎಂಬ ಹಳ್ಳಿಯಲ್ಲಿ. ಹರಿಜನ ಬಾಲಕರಿಗೊಂದು ಬಾಲಕಿಯರಿಗೊಂದು ಹೀಗೆ ಎರಡು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ಬಟ್ಟೆ ಬರೆಗಳನ್ನೂ ಕಾಳು ಕಡ್ಡಿಗಳನ್ನೂ ಸಂಪಾದಿಸಲು ತೊಡಗಿದರು. ಅವನ್ನು ಹೊರಿಸಿಕೊಂಡು ಹೋಗಲು ಕೂಲಿಗಳಿಗೆ ಕೊಡುವುದಕ್ಕೆ ದುಡ್ಡು ಕೂಡ ಅವರ ಬಳಿ ಇರಲಿಲ್ಲ. ಕೃಷ್ಣಮೆನನ್ ಅವರೇ ಅವನ್ನೆಲ್ಲ ಒಂದು ಕೈಗಾಡಿಯಲ್ಲಿ ಹಾಕಿ ನೂಕಿಕೊಂಡು ಹೋಗುತ್ತಿದ್ದರು. ಬಿಸಿಲೆನ್ನದೆ, ಮಳೆಯೆನ್ನದೆ ಮೆನನ್ ಈ ಕಷ್ಟಕರವಾದ ಕಾರ್ಯದಲ್ಲಿ ತೊಡಗಿಯೇ ಇರುತ್ತಿದ್ದರು. ತಮ್ಮ ತಲೆಯನ್ನು ಬಿಸಿಲಿನಿಂದಾಗಲಿ, ಮಳೆಯಿಂದಾಗಲಿ ರಕ್ಷಿಸಿಕೊಳ್ಳುವುದಕ್ಕೆ ಒಂದು ಕೊಡೆ ಕೂಡ ಅವರ ಹತ್ತಿರ ಇರಲಿಲ್ಲ. ಬಿಳಿ ಬಟ್ಟೆ ಧರಿಸಿದ ಈ ತ್ಯಾಗಪುರುಷನ ನಿಷ್ಠೆಯ ಜೀವನ ಅನೇಕರನ್ನು ಆಕರ್ಷಿಸಿತು. ಇವರ ಮುಂದಾಳು ತನದಲ್ಲಿ ಕೆಲಸ ಮಾಡಲು ಅನೇಕರು ತಾವಾಗಿ ಮುಂದೆ ಬಂದರು.

ಸ್ವಯಂ ಪರೀಕ್ಷೆ

ಹೊರಗಿನವರು ಮೆನನ್ ಅವರ ಸೇವೆಯನ್ನು ಮೆಚ್ಚಿ ಆಕರ್ಷಿತರಾದರೂ ಸ್ವಂತ ಕುಟುಂಬವರ್ಗ ದವರಿಗೂ ಊರಿನವರಿಗೂ ಇವರು ಹರಿಜನರೊಡನೆ ಇದ್ದು ಕೆಲಸ ಮಾಡುವುದು ಹಿಡಿಸಲಿಲ್ಲ. ಹರಿಜನರ ಸೇವೆ ಮಾಡಬೇಕಾದರೆ ಊರ ಹೊರಗೆ ಇದ್ದು ಮಾಡಲಿ ಎಂದು ಒತ್ತಾಯ ಹೇರಲು ಪ್ರಾರಂಭಿಸಿದರು. ಆದರೆ ಮೆನನ್ ಅವರ ಕಿವಿಯಲ್ಲಿ ಸದಾ ಮೊಳಗುತ್ತಿದ್ದುದು ಸ್ವಾಮಿ ವಿವೇಕಾನಂದರ ವಾಣಿ: ‘ಪ್ರತಿಯೊಂದು ಜೀವವೂ ಸಾಕ್ಷಾತ್ ಶಿವನೇ.’ ಹೀಗಿರುವಾಗ ಜೀವಿಗಳನ್ನು ಇವರು ಉತ್ತಮ ವರ್ಣದವರು, ಇವರು ಅಲ್ಲ ಎಂದು ಪ್ರತ್ಯೇಕವಾಗಿ ನೋಡುವುದು ಅವರಿಗೆ ಸಾಧ್ಯವೇ ಇರಲಿಲ್ಲ. ಈ ಮಧ್ಯೆ ತಮ್ಮ ಮನಸ್ಸು ಎಲ್ಲ ಜೀವಿಗಳನ್ನೂ ಶಿವನೆಂದೇ ಕಾಣುವ ಪಕ್ವ ಸ್ಥಿತಿಯನ್ನು ತಮ್ಮ ಮನಸ್ಸು ಮುಟ್ಟಿದೆಯೇ ಎಂಬ ಸಂದೇಹ ಮೆನನ್ ಅವರ ಮನಸ್ಸಿನಲ್ಲಿ ಮೂಡಿತು. ಅವರಿಗೆ ತಮ್ಮನ್ನು ತೀವ್ರವಾದ ಪರೀಕ್ಷೆಗೆ ಗುರಿಪಡಿಸಿ ಕೊಳ್ಳಬೇಕು ಎನ್ನಿಸಿತು.

ಮಾರನೆಯ ದಿನ ಬೆಳಿಗ್ಗೆ ಮೆನನ್ ಅವರು ಈ ರೀತಿ ಸಂಕಲ್ಪ ಮಾಡಿದರು. ‘ಈ ದಿನ ನನ್ನ ಕಣ್ಣಿಗೆ ಮೊದಲು ಬೀಳುವ ಭಿಕ್ಷುಕನನ್ನು ಕರೆದುಕೊಂಡು ಬಂದು ಅವನನ್ನು ನಾರಾಯಣನೆಂದೇ ಪೂಜಿಸುತ್ತೇನೆ.’ ವಿವೇಕಾನಂದರು ತನ್ನ ಸಂನ್ಯಾಸಿ ಸೋದರರಿಗೆ ಕೊಟ್ಟಿದ್ದ ದೀಕ್ಷೆ ಇದು: ‘ದರಿದ್ರ ದೇವೋಭವ’ ದರಿದ್ರರೇ ನಿಮ್ಮ ದೇವತೆಯಾಗಲಿ. ಮೆನನ್ ಈ ಉಪದೇಶ ವಾಕ್ಯಕ್ಕೆ ಅನುಸಾರವಾಗಿ ದರಿದ್ರ ನಾರಾಯಣನ ಸೇವೆಗೆಂದು ಹೊರಟಿದ್ದರು.

ಮೆನನ್ ಒಂದು ಮೈಲಿ ನಡೆದು ಹೋಗುವಷ್ಟರಲ್ಲಿ, ದೂರದಲ್ಲಿ ಒಬ್ಬ ಭಿಕ್ಷುಕ ಇವರ ಕಡೆಗೇ ನಡೆದು ಬರುತ್ತಿರುವುದು ಕಂಡಿತು. ಹತ್ತಿರ ಬಂದಾಗ ನೋಡುತ್ತಾರೆ ಅವನು ಬರಿಯ ಭಿಕ್ಷುಕ ಮಾತ್ರ ಅಲ್ಲ, ಕುಷ್ಠರೋಗಿ ಕೂಡ.  ಮೆನನ್ನರ ಮನಸ್ಸು ಒಂದೇ ಒಂದು ಕ್ಷಣ ಅಧೀರವಾಯಿತು. ಆದರೆ ಮರುಕ್ಷಣವೇ ವಜ್ರದಂತೆ ಕಠಿಣವೂ ಆಯಿತು. ತಮ್ಮ ಸಂಕಲ್ಪದಿಂದ ದೂರ ಸರಿಯುವುದು ತಪ್ಪು ಎನ್ನಿಸಿತು. ಹಾದಿಯಲ್ಲಿಯೇ ಕುಷ್ಠರೋಗಿ ಭಿಕ್ಷುಕನಿಗೆ ದೀರ್ಘದಂಡ ಪ್ರಣಾಮ ಮಾಡಿದರು. ಮಾತುಗಳನ್ನು ಕಳೆದುಕೊಂಡು ಮೂಕನಂತಿದ್ದ ಅವನನ್ನು ವಿದ್ಯಾರ್ಥಿ ನಿಲಯಕ್ಕೆ ಕರೆದುಕೊಂಡು ಹೋದರು. ಸಾಂಗೋಪಾಂಗವಾಗಿ ಅವನಿಗೆ ಪೂಜೆ ಸಲ್ಲಿಸಿದರು. ಅವನ ಕಾಲುಗಳನ್ನು ತೊಳೆದು ಆ ನೀರನ್ನು ಭಗವಂತನ ಚರಣಾಮೃತ ಎಂದು ಕುಡಿದರು. ಅವರ ಸಹೋದ್ಯೋಗಿಗಳು, ಬಾಲಕರು ಅದನ್ನು ನೋಡಿ ದಿಗ್ಭ್ರಾಂತರಾದರು. ಮೆನನ್ ಸತ್ಯ ಸಂಕಲ್ಪನು ಎಂಬುದು ಸ್ಥಾಪಿತವಾಯಿತು. ಅದಕ್ಕಿಂತ ಹೆಚ್ಚಾಗಿ ಜನರಿಗೆ ಸೇವೆ ಮಾಡುವ ಸಾಮರ್ಥ್ಯ ತಮಗಿದೆ ಎಂದು ಮೆನನ್ ಅವರಿಗೆ ವಿಶ್ವಾಸಮೂಡಿತು.

ಕೃಷ್ಣಮೆನನ್ ತ್ಯಾಗೀಶಾನಂದರಾದರು

ಕೃಷ್ಣಮೆನನ್ ಅವರ ತ್ಯಾಗವೈರಾಗ್ಯಗಳು ತೀವ್ರ ವಾಗುತ್ತಾ ಹೋದವು. ಅವರಿಗೆ ಸಂನ್ಯಾಸಾಶ್ರಮ ಸ್ವೀಕರಿಸುವ ಅಪೇಕ್ಷೆ ಬಲವಾಯಿತು. ರಾಮಕೃಷ್ಣ ಮಹಾಸಂಘದ ಹಿರಿಯ ಸಂನ್ಯಾಸಿಗಳು ಇವರ ಗುಣಗಳನ್ನು ಮೆಚ್ಚಿದ್ದರು. ಸಂಘಕ್ಕೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದ ಕೂಡಲೇ ಸಂಘವು ಇವರನ್ನು ಸ್ವೀಕರಿಸಿತು. ಮೊದಲು ಅಖಂಡ ಚೈತನ್ಯ ಎಂದೂ, ಅನಂತರ ಸ್ವಾಮಿ ತ್ಯಾಗೀಶಾನಂದ ಎಂದೂ ಅವರಿಗೆ ಹೊಸ ಹೆಸರುಗಳು ದೊರೆತವು. ತ್ಯಾಗೀಶಾನಂದ ಎನ್ನುವುದಂತೂ ಅವರಿಗೆ ಅನ್ವರ್ಥ ನಾಮವಾಯಿತು.

ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಮೇಲೆ ತ್ಯಾಗೀಶಾನಂದರು ಮುಖ್ಯೋಪಾಧ್ಯಾಯರ ಪದವಿಗೆ ರಾಜೀನಾಮೆ ಕೊಟ್ಟರು. ಅವರ ಸೇವೆಯೆಲ್ಲ ವಿಲಂಗಣದ ರಾಮಕೃಷ್ಣಾಶ್ರಮಕ್ಕೆ ಮೀಸಲಾಯಿತು. ಸ್ವಾಮಿ ತ್ಯಾಗೀಶಾನಂದರೇ ವಿಲಂಗಣದ ರಾಮಕೃಷ್ಣಾಶ್ರಮದ ಮೊದಲನೆಯ ಅಧ್ಯಕ್ಷರೂ ಆದರು.

ಹೊತ್ತು ಹೊತ್ತಿಗೆ ಊಟವಿಲ್ಲ, ತಿಂಡಿಯಿಲ್ಲ, ನಿದ್ರೆಯಿಲ್ಲ. ಹಗಲೂ ರಾತ್ರಿ ದುಡಿತ. ಜೊತೆಗೆ ತಾವು ಯಾವ ಆದರ್ಶಕ್ಕಾಗಿ ಸಂನ್ಯಾಸವನ್ನು ಸ್ವೀಕರಿಸಿದ್ದರೋ ಆ ಆಧ್ಯಾತ್ಮಿಕ ದಾಹ. ಅದನ್ನು ತಣಿಸುವುದಕ್ಕಾಗಿ ಉಗ್ರ ತಪಸ್ಸು, ಗಂಟೆಗಟ್ಟಲೆ ಧ್ಯಾನ ಇವು ದೃಢಕಾಯರಾದ ಸ್ವಾಮೀಜಿಯವರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮವನ್ನು ಉಂಟುಮಾಡಿದವು. ಅವರಿಗೆ ತಡೆದುಕೊಳ್ಳಲಾರದಷ್ಟು ಬೆನ್ನುನೋವು ಬರುವುದಕ್ಕೆ ಪ್ರಾರಂಭವಾಯಿತು. ಅದು ಬೆನ್ನುಮೂಳೆಯ ಕ್ಷಯ. ಆದರೆ ಆಗ ಅವರಿಗೆ ಅದು ಗೊತ್ತಾಗಲಿಲ್ಲ. ಅವರ ದೇಹ ಆಯಾಸಗೊಂಡಿದೆ, ಅದಕ್ಕೆ ವಿಶ್ರಾಂತಿ ಬೇಕು ಎಂದು ಮಾತ್ರವೇ ಅವರು ಭಾವಿಸಿದರು. ಇತರರೂ ಹಾಗೆಯೇ ಭಾವಿಸಿದರು. ರಾಮಕೃಷ್ಣ ಸಂಘದ ಹಿರಿಯರು ಇವರ ಆರೋಗ್ಯ ಉತ್ತಮಗೊಳ್ಳಲಿ ಎಂದು ಇವರನ್ನು ಬೆಂಗಳೂರು ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿ ನೇಮಿಸಿ ಕಳುಹಿಸಿದರು.

ವಿದ್ಯಾರ್ಥಿಗಳಿಗಾಗಿ

ಬೆಂಗಳೂರಿನಲ್ಲೂ ಸ್ವಾಮೀಜಿಯವರ ಸೇವಾ ಕಾರ್ಯ ಎಂದಿನಂತೆ ಮುಂದುವರಿಯಿತು. ಆದರೆ ಇಲ್ಲಿ ಅದು ಬೇರೆಯ ಸ್ವರೂಪವನ್ನು ತಾಳಿತು. ಭರತಖಂಡದ ಅಗತ್ಯ ವಿದ್ಯಾಭ್ಯಾಸ ಎಂದು ಸ್ವಾಮಿ ವಿವೇಕಾನಂದರು ಅನೇಕ ಸಲ ಒತ್ತಿ ಒತ್ತಿ ಹೇಳಿದ್ದರು. ಜನರಿಗೆ ಸರಿಯಾದ ರೀತಿಯಲ್ಲಿ ತಿಳಿವಳಿಕೆ ನೀಡಿದರೆ ಅದು ಈ ದೇಶದ ಎಷ್ಟೋ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬುದು ಸ್ವಾಮೀಜಿ ಯವರ ಖಚಿತ ಅಭಿಪ್ರಾಯವಾಗಿತ್ತು. ಸ್ವಾಮಿ ತ್ಯಾಗೀಶಾನಂದರು ಆ ದಿಕ್ಕಿನಲ್ಲಿ ಕೆಲಸಮಾಡಲು ತೊಡಗಿದರು.

ಬೇರೆ ಬೇರೆ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿ ಗಳಿಗೆ ಒಂದು ಸರಿಯಾದ ವಸತಿಗೃಹದ ಆವಶ್ಯಕತೆ ಇತ್ತು. ಸ್ವಾಮೀಜಿ ಸಣ್ಣ ಪ್ರಮಾಣದಲ್ಲಿ ಅಂಥದೊಂದು ವಸತಿಗೃಹವನ್ನು ಪ್ರಾರಂಭಿಸಿದರು. ಕೆಲವೇ ಕೆಲವು ತರುಣರನ್ನು ಅದಕ್ಕೆ ಸೇರಿಸಿಕೊಂಡರು. ಅವರಿಗೆ ಕಟ್ಟುನಿಟ್ಟಿನ ಜೀವನ ಕ್ರಮವನ್ನು ಕಲಿಸಿದರು. ಅನೇಕ ಸಲ ಸ್ವಾಮಿ ತ್ಯಾಗೀಶಾನಂದರೇ ಅವರಿಗೆ ಅಡುಗೆಯನ್ನು ಮಾಡಿ ಬಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರವಾದಾಗ  ಅವರ ಓದಿಗೆ ತೊಂದರೆ ಆಗುತ್ತದೆ ಎಂದು ಸ್ವಾಮೀಜಿ ಯವರೇ ದೊಡ್ಡ ದೊಡ್ಡ ಪಾತ್ರೆಗಳನ್ನು ತಿಕ್ಕುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಸ್ವಾಮೀಜಿ ವಿದ್ಯಾರ್ಥಿಗಳಿಗೆ ಶಿಸ್ತಿನ ಜೀವನ ಹೇಳಿಕೊಡಲು ತಾವೇ ಅತ್ಯಂತ ಶಿಸ್ತಿನ ಜೀವನವನ್ನು ನಡೆಸುತ್ತಿದ್ದರು. ಆದರೆ ಪ್ರೀತಿಗೆ ಎಳ್ಳಷ್ಟೂ ಕೊರತೆ ಇರಲಿಲ್ಲ. “ಮನೆಯಲ್ಲಿ ತಂದೆತಾಯಿಗಳು ತಮ್ಮನ್ನು ನೋಡಿ ಕೊಳ್ಳುವುದಕ್ಕಿಂತ ಚೆನ್ನಾಗಿ ತ್ಯಾಗೀಶಾನಂದರು ನಮ್ಮನ್ನು ನೋಡಿಕೊಳ್ಳುತ್ತಿದ್ದರು ಎಂದು ಆಗ ವಿದ್ಯಾರ್ಥಿ ಗಳಾಗಿದ್ದವರು ಈಗಲೂ ಹೇಳುತ್ತಾರೆ. ಅಂದಿನ ಅನೇಕ ವಿದ್ಯಾರ್ಥಿಗಳು ಇಂದು ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಗಳಾಗಿದ್ದಾರೆ. ಅನೇಕರು ಸರ್ಕಾರದ ಉನ್ನತ ಪದವಿಗಳನ್ನು ಅಲಂಕರಿಸಿದ್ದಾರೆ. ಈ ಎಲ್ಲರ ಬದುಕಿನ ಮೇಲೆ ಸ್ವಾಮಿ ತ್ಯಾಗೀಶಾನಂದರ ಪ್ರಭಾವ ಇರುವುದು ಎದ್ದುಕಾಣತ್ತದೆ.

ಪ್ರವಚನಗಳು

ಸ್ವಾಮೀಜಿ ಭಾರತೀಯ ತತ್ವಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯವನ್ನು ಗಳಿಸಿದ್ದರು. ಅದರ ಪ್ರಯೋಜನ ಸಾರ್ವಜನಿಕರಿಗೆ ದೊರೆಯಲಿ ಎಂದು ಪ್ರವಚನಗಳನ್ನು ನಡೆಸುತ್ತಿದ್ದರು. ಅವು ನಡೆಯುತ್ತಿದ್ದುದು ಭಾನುವಾರ ಗಳಂದು. ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭವಾದ ಪ್ರವಚನ ಮಧ್ಯಾಹ್ನ ಒಂದು ಗಂಟೆಯವರೆಗೆ ಎಡೆಬಿಡದೆ ನಡೆಯುತ್ತಿತ್ತು. ಸ್ವಾಮೀಜಿಗೆ ಯಾವ ಟಿಪ್ಪಣಿಗಳ ಅಗತ್ಯವೂ ಇರಲಿಲ್ಲ. ವೇದಾಂತದ ಯಾವುದಾದರೂ ಒಂದು ವಿಷಯವನ್ನು ಆರಿಸಿಕೊಂಡು ಸ್ವಾರಸ್ಯವಾಗಿ ಮಾತ ನಾಡುತ್ತಿದ್ದರು. ಅವರದು ಅಗಾಧ ವಿದ್ವತ್ತು, ಆದರೆ ಭಾಷಣದಲ್ಲಿ ವಿದ್ವತ್ತು ಕೇಳುವವರಿಗೆ ಅಡ್ಡಿಯಾಗುತ್ತಿರಲಿಲ್ಲ. ವೇದ, ಉಪನಿಷತ್ತುಗಳು, ಗೀತೆ, ಭಾಗವತ ಇವು ಅವರಿಗೆ ಬಾಯಿಪಾಠವಾಗಿತ್ತು. ಅವುಗಳಿಂದ ಧಾರಾಳವಾಗಿ ಮಂತ್ರಗಳನ್ನೂ, ಶ್ಲೋಕಗಳನ್ನೂ ಉದ್ಧರಿಸುತ್ತಿದ್ದರು. ಅವುಗಳಿಗೆ ಸರಳವಾದ ರೀತಿಯಲ್ಲಿ ಅರ್ಥವನ್ನು ಹೇಳುತ್ತಿದ್ದರು. ಸುಂದರವಾದ ಉದಾಹರಣೆಗಳನ್ನು ಕೊಟ್ಟು ಅವುಗಳನ್ನು ವಿವರಿಸುತ್ತಿದ್ದರು. ಕೇಳುವವರಿಗೆ ಸ್ವಲ್ಪವೂ ಬೇಸರವಾಗದಂತೆ ಗಹನವಾದ ವಿಷಯಗಳನ್ನು ಸರಳವಾಗಿ ವಿವರಿಸುವ ಅಸಾಧಾರಣ ಶಕ್ತಿ ಅವರಿಗಿತ್ತು.

ಸ್ವಾಮೀಜಿಗೆ ಕನ್ನಡಬಾರದು. ಆದರೆ, ಅವರ ಕನ್ನಡದ ಅಭಿಮಾನ, ಪ್ರೀತಿ ತುಂಬ ಆಳವಾದದ್ದು. ಅದಕ್ಕೆ ಕಾರಣ ವಿದ್ಯಾಭ್ಯಾಸ ದೇಶಭಾಷೆಗಳಲ್ಲೇ ನಡೆಯಬೇಕು ಎಂಬ ಶಿಕ್ಷಣತಜ್ಞರ ನಿಲುವನ್ನು ಅವರು ಮನಸಾರೆ ಒಪ್ಪಿದ್ದು. ಒಮ್ಮೆ ಒಂದು ಸ್ವಾರಸ್ಯವಾದ ಘಟನೆ ನಡೆಯಿತು. ಬೆಂಗಳೂರಿನ ಸಂಸ್ಕೃತ ಕಾಲೇಜಿನಲ್ಲಿ ಒಂದು ಸಮಾರಂಭ. ಅದಕ್ಕೆ ಅಧ್ಯಕ್ಷರು ಸ್ವಾಮಿ ತ್ಯಾಗೀಶಾನಂದರು. ಮುಖ್ಯ ಉಪನ್ಯಾಸಕಾರರು ಕನ್ನಡದ ಆಚಾರ್ಯ ಪುರುಷ ಬಿ.ಎಂ.ಶ್ರೀಕಂಠಯ್ಯನವರು. ಶ್ರೀಯವರು ಎಂದೇ ಪ್ರಸಿದ್ಧಿ ಪಡೆದಿದ್ದ ಶ್ರೀಕಂಠಯ್ಯನವರು ತಮ್ಮ ಭಾಷಣವನ್ನು ಇಂಗ್ಲಿಷ್‌ನಲ್ಲೇ ಪ್ರಾರಂಭಿಸಿದರು. ಆದರೆ ಅಧ್ಯಕ್ಷರಾದ ಸ್ವಾಮೀಜಿ ಎದ್ದುನಿಂತು ‘ತಾವು ಕನ್ನಡದಲ್ಲೇ ಮಾತನಾಡಬೇಕು’ ಎಂದರು. ಶ್ರೀಯವರು ‘ಇಲ್ಲ, ನಾನು ಇಂಗ್ಲಿಷ್‌ನಲ್ಲೇ ಮಾತನಾಡುತ್ತೇನೆ’ ಎಂದರು. ಸ್ವಾಮೀಜಿ ‘ಏಕೆ?’ ಎಂದು ಕೇಳಿದರು. ಶ್ರೀಯವರು ‘ತಮಗೆ ಕನ್ನಡ ಬರುವುದಿಲ್ಲ; ಆದ್ದರಿಂದ ಇಂಗ್ಲಿಷ್‌ನಲ್ಲೇ ಮಾತ ನಾಡುತ್ತೇನೆ’ ಎಂದರು. ಸ್ವಾಮೀಜಿ ನಗುತ್ತ ‘ಅಧ್ಯಕ್ಷನಾಗಿ ನಾನು ತಮಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಅನುಮತಿ ಕೊಡುವುದಿಲ್ಲ. ಸಭಿಕರಿಗೆ ಗೊತ್ತಾಗುವಂತೆ ತಾವು ಕನ್ನಡದಲ್ಲೇ ಮಾತನಾಡಬೇಕು’ ಎಂದರು. ಶ್ರೀಯವರು ಸಂತೋಷದಿಂದ ಅವರ ಅಪ್ಪಣೆಯನ್ನು ಪರಿಪಾಲಿಸಿದರು.

ತ್ಯಾಗೀಶಾನಂದರು ರಾಮಕೃಷ್ಣ ಸಂಘಕ್ಕೆ ಸೇರಿದ ಸ್ವಾಮಿಗಳಾದ್ದರಿಂದ ಅದ್ವೈತ ಪಂಥಕ್ಕೆ ಸೇರಿದವರಾದರು. ಆದರೆ ಅವರಿಗೆ ದ್ವೈತದಲ್ಲಿ ತುಂಬ ಆಸಕ್ತಿ. ದ್ವೈತ ಸಿದ್ಧಾಂತಕ್ಕೆ ಸಂಬಂಧಿಸಿದ್ದ ಎಲ್ಲ ಪ್ರಧಾನ ಗ್ರಂಥಗಳನ್ನೂ ಅವರು ಮೂಲದಲ್ಲೇ ಆಳವಾಗಿ ಅಭ್ಯಾಸ ಮಾಡಿದ್ದರು. ಅನೇಕ ದ್ವೈತ ಪಂಡಿತರು ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಲು ತ್ಯಾಗೀಶಾನಂದರ ಬಳಿಗೆ ಬರುತ್ತಿದ್ದರು. ಅವರ ದ್ವೈತ ಸಿದ್ಧಾಂತ ಪ್ರೇಮವನ್ನೂ ನಿರಹಂಕಾರವನ್ನೂ ತೋರಿಸುವಂಥ ಒಂದು ಪ್ರಸಂಗ ನಡೆಯಿತು.

ಆ ಕಾಲಕ್ಕೆ ಮಠದ ಹತ್ತಿರ ಒಬ್ಬರು ಪ್ರಖ್ಯಾತ ದ್ವೈತ ವಿದ್ವಾಂಸರು ವಾಸಿಸುತ್ತಿದ್ದರು. ಹತ್ತಾರು ಜನ ಶಿಷ್ಯರು ಅವರ ಬಳಿ ಪಾಠಕ್ಕೆ ಬರುತ್ತಿದ್ದರು. ಆ ಪಂಡಿತರ ಬಗ್ಗೆ ತ್ಯಾಗೀಶಾನಂದರಿಗೆ ತುಂಬ ಗೌರವ. ತಾವೂ ಅವರಲ್ಲಿ ಪಾಠಕ್ಕೆ ಹೋಗಬೇಕು ಎಂಬ ಆಸೆ ಅವರಿಗೆ ಸಹಜವಾಗಿಯೇ ಹುಟ್ಟಿತು. ‘ನಾನೂ ತಮ್ಮಲ್ಲಿ ಪಾಠಕ್ಕೆ ಬರಬಹುದೇ?’ ಎಂದು ಸ್ವಾಮೀಜಿ ಪಂಡಿತರಿಗೆ ಹೇಳಿ ಕಳುಹಿಸಿದರು. ಆದರೆ ಆ ಪಂಡಿತರು ‘ಸ್ವಾಮೀಜಿ ಅದ್ವೈತಿಗಳು. ಅವರಿಗೆ ನಾನು ದ್ವೈತವನ್ನು ಹೇಳಿ ಕೊಡುವುದಿಲ್ಲ’ ಎಂದುಬಿಟ್ಟರು. ಸ್ವಾಮೀಜಿಗೆ ಇದರಿಂದ ಬೇಸರವಾಗಲಿಲ್ಲ. ಆ ಪಂಡಿತರು ಬೀದಿಯಲ್ಲಿ ಹೋಗುವುದು ಕಣ್ಣಿಗೆ ಬಿದ್ದರೆ ಸ್ವಾಮೀಜಿ ಸುತ್ತ ಇದ್ದವರನ್ನು ಕರೆದು ಅವರನ್ನು ತೋರಿಸಿ ಅವರ ವಿದ್ವತ್ತನ್ನು ಹೊಗಳುತ್ತಿದ್ದರು.

ಕೃತಿಗಳು

ಸ್ವಾಮಿ ತ್ಯಾಗೀಶಾನಂದರ ಪ್ರವಚನಗಳೆಲ್ಲ ಪುಸ್ತಕ ರೂಪಕ್ಕೆ ಬಂದಿದ್ದರೆ ಅಚ್ಚಿನಲ್ಲಿ ಸಾವಿರಾರು ಪುಟಗಳಷ್ಟು ವಿದ್ವತ್ಪೂರ್ಣವಾದ ವಾಖ್ಯಾನಗಳು ಜನರಿಗೆ ದೊರೆ ಯುತ್ತಿತ್ತು. ಸ್ವಾಮೀಜಿ ಹೆಚ್ಚಾಗಿ ಬರೆಯಲಿಲ್ಲ. ಎರಡು ಬರವಣಿಗೆಗಳು ಅವರ ವಿದ್ವತ್ತಿಗೂ ಸರಳವಾದ ನಿರೂಪಣಾ ಶೈಲಿಗೂ ಸಾಕ್ಷಿಯಾಗಿ ಉಳಿದಿವೆ. ಒಂದು ಭಾಗವತವನ್ನು ಕುರಿತ ಅವರ ಲೇಖನ ‘ಯುಗಯಾತ್ರೀ ಭಾರತೀಯ ಸಂಸ್ಕೃತಿ’ ಎಂಬ ಸಂಪುಟಕ್ಕಾಗಿ ಸ್ವಾಮೀಜಿ ವರ್ಷಗಟ್ಟಲೆ ಶ್ರಮಿಸಿ ಆ ಲೇಖನವನ್ನು ರಚಿಸಿದರು.

ಇನ್ನೊಂದು ‘ನಾರದ ಭಕ್ತಿ ಸೂತ್ರಗಳು’ ಎಂಬ ಅವರ ಪುಸ್ತಕ. ಇವೆರಡೂ ಇಂಗ್ಲಿಷ್‌ನಲ್ಲಿ ಬರೆದ ಬರಹಗಳೇ. ಭರತಖಂಡದಲ್ಲಿ ಭಕ್ತಿಯನ್ನು ಕುರಿತ ಪ್ರಮಾಣಗ್ರಂಥಗಳು ಎರಡು: ಮೊದಲನೆಯದು ನಾರದ ಭಕ್ತಸೂತ್ರ; ಇನ್ನೊಂದು ಶಾಂಡಿಲ್ಯ ಭಕ್ತಿಸೂತ್ರ. ಅವುಗಳಲ್ಲಿ ಮೊದಲನೆಯದಾದ ನಾರದ ಭಕ್ತಿಸೂತ್ರಗಳನ್ನು ಕುರಿತು ಸ್ವಾಮೀಜಿ ವಿಸ್ತಾರವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ. ಸುಮಾರು ಅರ್ಧಶತಮಾನದ ಹಿಂದೆ ಸ್ವಾಮೀಜಿ ಬರೆದ ಈ ಗ್ರಂಥ ಇಂದಿಗೂ ಆಚಾರ್ಯಕೃತಿಯಾಗಿ ಉಳಿದಿದೆ.

ಪ್ರಭಾವ

ಸ್ವಾಮಿ ತ್ಯಾಗೀಶಾನಂದರು ಉಜ್ವಲವಾದ ವೈರಾಗ್ಯಮೂರ್ತಿಯಾಗಿದ್ದರು. ಅವರ ಬಳಿಗೆ ಬಂದವರಿಗೆ ವೈರಾಗ್ಯದ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ವಿದ್ಯಾರ್ಥಿಗಳಾಗಿ ಅವರ ಬಳಿಗೆ ಬರುತ್ತಿದ್ದ ಅನೇಕರು ವಿಶ್ವವಿದ್ಯಾನಿಲಯದ ದೊಡ್ಡ ದೊಡ್ಡ ಪದವಿಗಳನ್ನು ಪಡೆದರು. ಪ್ರಥಮ ಸ್ಥಾನದಲ್ಲಿ ನಿಂತು ಪ್ರತಿಭಾಶಾಲಿಗಳು ಎನ್ನಿಸಿಕೊಂಡರು. ಅಂಥವರಲ್ಲಿ ಬಹುಪಾಲು ಜನ ತೀವ್ರವಾದ ವೈರಾಗ್ಯ ಭಾವನೆಯಿಂದ ಸಂನ್ಯಾಸವನ್ನು ಸ್ವೀಕರಿಸಿದರು. ಅವರಲ್ಲಿ ಬಹುಮಂದಿ ರಾಮಕೃಷ್ಣ ಮಹಾಸಂಘದ ದೇಶವಿದೇಶಗಳ ಶಾಖೆಗಳ ಮುಖ್ಯಸ್ಥರಾಗಿಯೂ ಕಾರ್ಯಕರ್ತರಾಗಿಯೂ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ತಾವು ಸಂನ್ಯಾಸ ಜೀವನವನ್ನು ಸ್ವೀಕರಿಸಿದ್ದಕ್ಕೆ ಮುಖ್ಯಕಾರಣ ಸ್ವಾಮಿ ತ್ಯಾಗೀಶಾನಂದರೇ ಎನ್ನುತ್ತಾರೆ.

ತಪ್ಪನ್ನು ತಿದ್ದಿಕೊಳ್ಳುವ ನೈತಿಕ ಧೈರ್ಯ

ಸ್ವಾಮೀಜಿಯ ಮುಖವನ್ನು ನೋಡಿದವರಿಗೆ ಅವರು ಅಂತರಂಗದ ಯಾವುದೋ ಒಂದು ಆನಂದವನ್ನು ಸದಾ ಅನುಭವಿಸುತ್ತಿರುವಂತೆ ತೋರುತ್ತಿತ್ತು. ಅವರು ಅದರ ಬಗ್ಗೆ ಏನು ಮಾಡಿದರೂ ಮಾತನಾಡುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಅದು ಹೊರಚೆಲ್ಲುವ ಅವಕಾಶ ಬಂದಿತು. ಅದು ನಡೆದದ್ದು ಹೀಗೆ: ಒಂದು ದಿನ ಬೆಳಿಗ್ಗೆ ಸ್ವಾಮೀಜಿ ಎಂದಿನಂತೆ ಆಶ್ರಮದ ಕಲ್ಲುಕಟ್ಟಡದಲ್ಲಿ ಶತಪಥ ಸುತ್ತುತ್ತಿದ್ದರು. ಪ್ರತಿದಿನವೂ ಗಂಟೆಗಟ್ಟಲೆ ಹಾಗೆ ಕಟ್ಟಡದ ಒಳಗೇ ಓಡಾಡುವುದು ಅವರ ಪದ್ಧತಿಯಾಗಿತ್ತು. ಆಶ್ರಮ ವಾಸಿಗಳಿಗೆ  ಪಾಠ ಹೇಳುವಾಗಲೂ ಹಾಗೇ ಮಾಡುತ್ತಿದ್ದರು.

ಒಂದು ದಿನ ಶ್ರೀ ರಮಣ ಮಹರ್ಷಿಗಳ ಆಶ್ರಮದಿಂದ ಬಂದಿದ್ದ ಭಕ್ತರೊಬ್ಬರು ಅಲ್ಲಿನ ಪ್ರಸಾದವನ್ನು ಆಶ್ರಮವಾಸಿಗಳಿಗೆಲ್ಲ ಕೊಟ್ಟರು. ಸ್ವಾಮಿ ತ್ಯಾಗೀಶಾನಂದರ ಮುಂದೆ ಪ್ರಸಾದವನ್ನು ಹಿಡಿದಾಗ ನನಗೆ ಬೇಕಿಲ್ಲ ಎಂದು ಬಿಟ್ಟರು. ಪ್ರಸಾದ ತಂದವರಿಗೂ ಇತರ ಆಶ್ರಮ ವಾಸಿಗಳಿಗೂ ಮನಸ್ಸಿಗೆ ಕಿರಿಕಿರಿಯಾಯಿತು. ಆದರೆ ಯಾರೂ ಏನೂ ಹೇಳಲಿಲ್ಲ. ಉಳಿದವರೆಲ್ಲ ಹೋದ ಮೇಲೆ ಬ್ರಹ್ಮಚಾರಿಯೊಬ್ಬರು ಸ್ವಾಮೀಜಿಯನ್ನು ನೇರವಾಗಿ ಕೇಳಿದರು: ‘ಸ್ವಾಮೀಜಿ, ನೀವು ಮಾಡಿದ್ದು ಸರಿಯೇ? ಬೇರೊಂದು ಆಶ್ರಮಕ್ಕೆ ಅಗೌರವ ತೋರಿಸಿ ದಂತಾಗಲಿಲ್ಲವೆ?’

ಸ್ವಾಮೀಜಿ ಸ್ವಲ್ಪ ಹೊತ್ತು ಸುಮ್ಮನಿದ್ದರು. ನಂತರ ‘ಪ್ರಸಾದ ಎಂದರೆ ಎಲ್ಲ ದುಃಖವನ್ನೂ ಹೋಗ ಲಾಡಿಸುವಂಥದು’ ಎಂಬ ಗೀತಾವಾಕ್ಯವನ್ನು ಅವರು ಎತ್ತಿ ಹೇಳಿದರು. ಮತ್ತೆ ‘ನೋಡಿ, ನನಗೆ ಯಾವ ದುಃಖವೂ ಇಲ್ಲ, ನನ್ನ ಮನಸ್ಸು ಸದಾ ಪೂರ್ಣವಾದ ಶಾಂತಿಯನ್ನು ಅನುಭವಿಸುತ್ತಿದೆ’ ಎಂದರು.

ಮತ್ತೂ ಸ್ವಲ್ಪಹೊತ್ತು ಸುಮ್ಮನಿದ್ದು ಸ್ವಾಮೀಜಿ ಹೇಳಿದರು: ‘ಆದರೆ ಈಗ ನಾನು ಮಾಡಿದ್ದು ತಪ್ಪು. ನೀವೆಲ್ಲರೂ ಪ್ರಸಾದವನ್ನು ತೆಗೆದುಕೊಂಡಿದ್ದೀರಿ. ನಾನು ನಿಮ್ಮ ಎದುರಿನಲ್ಲಿ ಅದನ್ನು ತೆಗೆದುಕೊಳ್ಳದೆ ಹೋದದ್ದು ಪ್ರಸಾದಕ್ಕೂ ರಮಣಮಹರ್ಷಿಗಳಿಗೂ ಅಗೌರವವನ್ನು ತೋರಿಸಿದಂತಾಯ್ತು. ಪ್ರಸಾದ ತಂದವರಿಗೂ ನನ್ನಿಂದ ಬೇಸರವಾಯಿತು. ಇದು ನಿಜವಾಗಿಯೂ ನನ್ನಿಂದ ಆದ ಅಪಚಾರ’.

ಅದೃಷ್ಟಕ್ಕೆ ಪ್ರಸಾದ ತಂದವರು ಹೊರಗೇ ಕುಳಿತ್ತಿದ್ದರು. ಸ್ವಾಮೀಜಿ ಅವರನ್ನೂ ಉಳಿದ ಆಶ್ರಮವಾಸಿಗಳನ್ನೂ ಬರಮಾಡಿಕೊಂಡು ಪ್ರಸಾದವನ್ನು ಸ್ವೀಕರಿಸಿದರು. ತಮ್ಮ ತಪ್ಪನ್ನು ಕೂಡಲೇ ತಿದ್ದಿಕೊಳ್ಳುವ ಅವರ ಈ ಸ್ವಭಾವ ಅವರ ಜೊತೆಯಲ್ಲಿದ್ದವರಿಗೆ ಎಷ್ಟೋ ಪಾಠವನ್ನು ಕಲಿಸುವ ಶಕ್ತಿಯಾಗಿತ್ತು.

ರಮಣಮಹರ್ಷಿಗಳಲ್ಲಿ ಸ್ವಾಮೀಜಿಗೆ ಅಪಾರ ವಾದ ಭಕ್ತಿ. ತಿರುವಣ್ಣಾಮಲೆಗೆ ಹೋಗಿ ರಮಣ ಮಹರ್ಷಿಗಳನ್ನು ಕಂಡು ಅವರೊಡನೆ ಕೆಲವು ಕಾಲ ಇದ್ದರು. ಮಹರ್ಷಿಗಳ ಮುಖದಲ್ಲಿದ್ದ ಶಾಂತಿಯನ್ನೂ, ಅದಕ್ಕೆ ಮೂಲವಾದ ಆನಂದಾನುಭವವನ್ನೂ, ಎಷ್ಟು ವರ್ಣಿಸಿದರೂ ಸ್ವಾಮೀಜಿಗೆ ತೃಪ್ತಿಯಿಲ್ಲ. ‘ಅವರೀಗ ನಿಜವಾದ ಜೀವನ್ಮುಕ್ತರು, ನಿಜವಾದ ಬ್ರಹ್ಮಜ್ಞಾನಿ’ ಎಂದು ಎಷ್ಟೋಸಲ ಸ್ವಾಮೀಜಿ ಹೇಳುತ್ತಿದ್ದರು.

ಸ್ವಾಮೀಜಿ ಹೊರಗೆ ತುಂಬ ಗಂಭೀರವಾಗಿ ಕಂಡರೂ ಆತ್ಮೀಯರ ಬಳಿ ಹಾಸ್ಯದ ಚಟಾಕಿಗಳನ್ನು ಹಾರಿಸಿ ತಾವೂ ಜೋರಾಗಿ ನಕ್ಕು ಇತರರನ್ನೂ ನಗಿಸುತ್ತಿದ್ದರು. ಪ್ರತಿರಾತ್ರಿಯೂ ತರಗತಿ ಮುಗಿದ ಮೇಲೆ ತಲೆಯನ್ನು ಆದಷ್ಟೂ ಕೆಳಕ್ಕೆ ಬಗ್ಗಿಸಿ ‘ಗುಡ್‌ನೈಟ್’ ಎಂದು ಹೇಳುತ್ತಿದ್ದರು. ಪ್ರತಿದಿನವೂ ಬೇಸರವಿಲ್ಲದೆ ಅದಕ್ಕೆ ವಿವರಣೆಯನ್ನ್ನೂ ನೀಡುತ್ತಿದ್ದರು. ಅವರು ಚಿಕ್ಕವರಾಗಿದ್ದಾಗ ಮೂಕಿ ಸಿನಿಮಾ ಚಾಲ್ತಿಗೆ ಬಂತಂತೆ. ಅದರಲ್ಲಿ ಕೊನೆಯಲ್ಲಿ ಬಕ್ಕತಲೆಯ ವ್ಯಕ್ತಿಯೊಬ್ಬ ಸೊಂಟದವರೆಗೂ ಬಾಗಿ ಪ್ರೇಕ್ಷಕರಿಗೆ ನಮಸ್ಕರಿಸುತ್ತಿದ್ದನಂತೆ. ಅವನ ಬಕ್ಕತಲೆಯ ಮೇಲೆ ‘ಗುಡ್‌ನೈಟ್’ ಎಂಬ ಅಕ್ಷರಗಳು ಇರುತ್ತಿದ್ದವಂತೆ.

ಅನಾರೋಗ್ಯ

ಸ್ವಾಮಿ ತ್ಯಾಗೀಶಾನಂದರು ತಮ್ಮ ಸೇವಾ ಕಾರ್ಯವನ್ನು ಬಹಳ ಕಾಲ ನಡೆಸುವುದು ಸಾಧ್ಯವಾಗಲಿಲ್ಲ. ತಾರುಣ್ಯದ ದಿನಗಳಲ್ಲಿ ಅವರು ದೇಹಶ್ರಮವನ್ನು ಸ್ವಲ್ಪವೂ ಲೆಕ್ಕಿಸದೆ ದುಡಿದಿದ್ದರು. ಅವರಿಗೆ ಸರಿಯಾದ ಆಹಾರ ಇರಲಿಲ್ಲ. ಬಿಸಿಲು, ಮಳೆ, ಗಾಳಿ ಎನ್ನದೆ ಸುತ್ತಿದ್ದರು. ಹೀಗಾಗಿ ಅವರ ದೇಹ ಬಳಲಿ ಬೆಂಡಾಗಿತ್ತು. ನೋಡುವುದಕ್ಕೆ ಗಟ್ಟಿಮುಟ್ಟಾಗಿ, ತುಂಬ ಆಕರ್ಷಕವಾಗಿ ಕಂಡರೂ ಅವರು ನೋವನ್ನು ಅನುಭವಿಸುತ್ತಿದ್ದರು. ಬಹಳ ಕಾಲ ಅವರು ತಮಗೆ ಹೊಟ್ಟೆನೋವು ಬರುತ್ತಿದೆ ಎಂದೇ ನಂಬಿದ್ದರು. ವೈದ್ಯರೂ ಸಹ ಹಾಗೆಯೇ ತಿಳಿದಿದ್ದರು. ಅವರು ಯಾತನೆಯನ್ನು ಅನುಭವಿಸುವುದನ್ನು ನೋಡಿ ಸಹಿಸಲಾರದೆ ಒಮ್ಮೆ ಅವರಿಗೆ ಹೀಗೆ ಹೇಳಿದೆವು: ‘ಇಲ್ಲಿ ಆಸ್ಪತ್ರೆಗೆ ಸೇರಿಸೋಣ. ತಜ್ಞರಾದ ವೈದ್ಯರು ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಾರೆ.’ ಸ್ವಾಮೀಜಿ ಆ ನೋವಿನಲ್ಲೂ ನಗುತ್ತಾ ಹೇಳಿದರು: ‘ಬೇಡ, ಹಿಂದೆ ನಾನು ಸೇರಿಕೊಂಡು ಅನುಭವಿಸಿದ್ದೇನೆ. ಎಲ್ಲ ವೈದ್ಯರೂ ನನ್ನ ಹೊಟ್ಟೆಯನ್ನು ಅದುಮುತ್ತಾರೆ. ಅಷ್ಟೇ ಅಲ್ಲ. ಅವರ ವೈದ್ಯ ವಿದ್ಯಾರ್ಥಿಗಳನ್ನೂ ಕರೆದುಕೊಂಡು ಬಂದು ಅವರ ಕೈಯಲ್ಲೂ ನನ್ನ ಹೊಟ್ಟೆಯನ್ನು ಅದುಮಿಸುತ್ತಾರೆ. ನನ್ನ ನೋವು ಜಾಸ್ತಿಯಾಗಿದ್ದೇ ಅದರಿಂದ’.

‘ಮುಂದಿನ ಸರದಿ – ನನ್ನದೇ’

೧೯೫೦ರ ಮೇ ಎಂದು ತೋರುತ್ತದೆ. ಸ್ವಾಮಿ ತ್ಯಾಗೀಶಾನಂದಜೀ ಅವರ ಹೆಸರಿಗೆ ಒಂದು ತಂತಿ ಬಂತು. ತೆರೆದು ನೋಡಿದರೆ ಮೃತ್ಯುವಿನ ಮಾತು. ರಾಮಕೃಷ್ಣ ಮಹಾಸಂಘದ ಮಹಾಧ್ಯಕ್ಷರಾಗಿದ್ದ ಶ್ರೀ ಸ್ವಾಮಿ ವಿರಜಾನಂದರು ಮಹಾ ಸಮಾಧಿ ಪಡೆದಿದ್ದರು. ಎರಡು ನಿಮಿಷ ಮೌನವಾಗಿದ್ದು ಸ್ವಾಮೀಜಿ ಹೇಳಿದರು : ‘ಮುಂದಿನ ಸರದಿ ನನ್ನದೇ’.

೧೯೫೦ರ ಕೊನೆಗೆ ಅವರಿಗೆ ಹೊಟ್ಟೆಯ ನೋವು ಹೆಚ್ಚಾಯಿತು. ಅವರಿಗೆ ಏನು ತೋರಿತೋ, ತಾವು ಒಮ್ಮೆ ದಕ್ಷಿಣದೇಶದ ಯಾತ್ರೆಯನ್ನು ಮುಗಿಸಬೇಕು ಎಂದು ಹೇಳಿದರು. ಅವರ ಪರಮ ಮಿತ್ರರಾಗಿದ್ದ ಪ್ರಸಿದ್ಧ ವಕೀಲರೊಬ್ಬರು ಕೂಡಲೇ ಒಂದು ವಾಹನವನ್ನು ಗೊತ್ತು ಮಾಡಿ ಯಾತ್ರೆಯನ್ನು ಏರ್ಪಡಿಸಿದರು. ಸುಮಾರು ಎರಡು ವಾರಗಳ ಯಾತ್ರೆ ಚೆನ್ನಾಗಿಯೇ ನಡೆಯಿತು.

ಕಡೆಯ ದಿನಗಳು

ದಕ್ಷಿಣದ ಯಾತ್ರೆಯಿಂದ ಹಿಂದಕ್ಕೆ ಬಂದಮೇಲೆ ಸ್ವಾಮೀಜಿಯವರ ಆರೋಗ್ಯ ಮತ್ತಷ್ಟು ಕೆಟ್ಟಿತು. ಕೋಲಾರದ ಚಿನ್ನದಗಣಿಯ ಸುಪ್ರಸಿದ್ಧವಾದ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು.  ಅಲ್ಲಿ ದಕ್ಷರಾದ ವೈದ್ಯರು ವಿವರವಾಗಿ ಪರೀಕ್ಷಿಸಿ ಸ್ವಾಮೀಜಿಗೆ ಬೆನ್ನುಮೂಳೆಯ ಕ್ಷಯ ಉಲ್ಬಣಿಸಿದೆ ಎಂದರು. ಅವರಿಗೆ ಹೊಟ್ಟೆ ನೋವು ಬರುತ್ತಿದ್ದುದು ಈ ಕಾರಣದಿಂದಲೇ ಎಂದರು. ಪ್ಲಾಸ್ಟರ್ ಆಪ್ ಪ್ಯಾರಿಸ್ಸಿನ ಎರಕದಲ್ಲಿ ಸ್ವಾಮೀಜಿಯವರನ್ನು ಮಲಗಿಸಿದರು. ಸ್ವಲ್ಪವೂ ಅಲ್ಲಾಡಲು ಬಿಡುತ್ತಿರಲಿಲ್ಲ. ಅವರನ್ನು ಆ ಸ್ಥಿತಿಯಲ್ಲಿ ನೋಡುವುದು ತುಂಬ ಯಾತನೆಯನ್ನು ಉಂಟು ಮಾಡುತ್ತಿತ್ತು. ಸ್ವಾಮೀಜಿ ಶಾಂತಚಿತ್ತರಾಗಿ ಯಾತನೆಯನ್ನೆಲ್ಲ ನುಂಗಿಕೊಂಡರು. ತಮಗಾಗುತ್ತಿರುವ ನೋವನ್ನು ಅವರು ಹೇಳುತ್ತಿದ್ದರೆ ಇನ್ನು ಯಾರದೋ ದೇಹಕ್ಕೆ ಆಗುತ್ತಿದ್ದ ಯಾತನೆಯನ್ನು ಅಲಿಪ್ತರಾಗಿ ವರ್ಣಿಸುತ್ತಿದ್ದಾರೆಯೋ ಎನ್ನಿಸುತ್ತಿತ್ತು.

ಕೆಲವು ವಾರಗಳು ಇದೇ ಸ್ಥಿತಿಯಲ್ಲಿ ಕಳೆಯಿತು. ಅವರ ಮಿತ್ರರೂ ಆಶ್ರಮದ ಕಿರಿಯರೂ ಅವರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಆದರೆ ಅವರ ಶಕ್ತಿ ಕುಂದತೊಡಗಿತು. ಕೊನೆಯ ಗಳಿಗೆಯವರೆಗೂ ನಗುತ್ತಲೆ ಮಾತನಾಡುತ್ತಿದ್ದು ಅವರು ಕೊನೆಯ ಉಸಿರನ್ನು ಎಳೆದರು. ೧೯೫೧ರ ಆಗಸ್ಟ್ ೬ ರಂದು ಅವರು ಮಹಾ ಸಮಾಧಿಯನ್ನು ಪಡೆದರು.

ಸ್ವಾಮೀ ತ್ಯಾಗೀಶಾನಂದರ ಶಿಲಾಪ್ರತಿಮೆಯನ್ನು ಯಾರೂ ನಿರ್ಮಿಸಿಲ್ಲ. ಭರತಖಂಡದ, ಅಷ್ಟೇಕೆ, ಕರ್ನಾಟಕದ ಇತಿಹಾಸದ ಪುಟಗಳಲ್ಲೂ ಅವರ ಹೆಸರು ಉಲ್ಲೇಖವಾಗುವುದಿಲ್ಲ. ಆದರೆ ನೀರವವಾಗಿ ಮಾನವತೆಗೆ ಸೇವೆ ಸಲ್ಲಿಸಿದ ಮಹಾಚೇತನಗಳ ಅಮರ ಪಂಕ್ತಿಯಲ್ಲಿ ಅವರು ಎಂದೆಂದೂ ಬೆಳಗುತ್ತಾರೆ.

‘ಶಾಂತಾ ಮಹಾಂತೋ …..’

ಸ್ವಾಮಿ ತ್ಯಾಗೀಶಾನಂದರಿಗೆ ತುಂಬ ಪ್ರಿಯವಾದ ಗ್ರಂಥಗಳಲ್ಲಿ ‘ವಿವೇಕ ಚೂಡಾಮಣಿ’ ಒಂದು. ಅದನ್ನು ರಚಿಸಿದವರು ಆಚಾರ್ಯ ಶಂಕರರು. ಸಾಯಲು ಕೆಲವೇ ತಿಂಗಳ ಹಿಂದೆ ತ್ಯಾಗೀಶಾನಂದರು ಶಿಷ್ಯರಿಗೆ ಅದನ್ನು ಪಾಠ ಹೇಳುತ್ತಿದ್ದರು. ಶ್ಲೋಕ ಇದು :

ಶಾಂತಾ ಮಹಾಂತೋ ನಿವಸಂತಿ ಸಂತಃ
ವಸಂತವತ್ ಲೋಕಹಿತಂ ಚರಂತಃ |
ತೀರ್ಣಾಃ ಸ್ವಯಂ ಭೀಮ ಭವಾರ್ಣವಾನ್ ಜನಾನ್
ಅಹೇತುನಾ ಅನ್ಯದಪಿ ತಾರಯಂತಃ ||

ಕೆಲವರು ಶಾಂತರೂ ಮಹಾಮಹಿಮರೂ ಇರುತ್ತಾರೆ. ಅವರು ಸಂತರು. ಅವರು ವಸಂತದಂತೆ ಲೋಕಹಿತಕ್ಕಾಗಿಯೇ ಚರಿಸುತ್ತಾರೆ. ಭಯಂಕರವಾದ ಈ ಸಂಸಾರ ಸಾಗರವನ್ನು ಅವರು ದಾಟಿಕೊಳ್ಳುತ್ತಾರೆ. ಮಾತ್ರವಲ್ಲ, ಏನೂ ಕಾರಣವಿಲ್ಲದೆಯೇ ಕೃಪೆ ತೋರಿಸಿ, ಇತರ ಜನರನ್ನೂ ಈ ಸಂಸಾರ ಸಾಗರದ ಆಚೆ ದಡವನ್ನು ಮುಟ್ಟಿಸುತ್ತಾರೆ.