ಮ|| ಸ್ರ|| ನೆಱನೀತಂಗೂರುಯುಗ್ಮಂ ನೆಱನನಱಯದಾನಿನ್ನೆಗಂ ಮಾಣ್ದೆನಿಂ ಪೋ
ತೆಱಪಂ ಪಾರ್ದಿರ್ಪೆನೆಂದೊಯ್ಯನೆ ಗದೆಯನಣಂ ಪಾಡುಗೆಯ್ದಿರ್ದು ಭೋರೆಂ|
ದೆಱಪುಗ್ರಾರಾತಿಯೂರುದ್ವಯಮನಿಡೆ ಗದಾಘಾತದಿಂದೂರುಯುಗ್ಮಂ
ಮುಱದೆತ್ತಂ ನುಚ್ಚುನೂಱುಗಿರೆ ಕೆಡೆದನಿಳಾಭಾಗದೊಳ್ ಧಾರ್ತರಾಷ್ಟ್ರಂ|| ೯೬

ಚಂ|| ನುಡಿದುದನೆಯ್ದೆ ತುತ್ತ ತುದಿಯೆಯ್ದುವಿನಂ ನುಡಿದಂ ವಲಂ ಚಲಂ
ಬಿಡಿದುದನೆಯ್ದೆ ಮುಂ ಪಿಡಿದುದಂ ಪಿಡಿದಂ ಸಲೆ ಪುಣ್ದ ಪೂಣ್ಕೆ ಪೂಣ್ಕೆ ನೇ|
ರ್ಪಡೆ ನಡೆವನ್ನೆಗಂ ನಡೆದನಳ್ಕದೆ ಬಳ್ಕದೆ ತನ್ನೊಡಲ್ ಪಡೆ
ಲ್ವಡುವಿನಮಣ್ಮುಗುಂದನೆ ದಲೇನಭಿಮಾನಧನಂ ಸುಯೋಧನಂ|| ೯೭

ವ|| ಅಂತು ಸತ್ತುಂ ನೆಲನಂ ಪತ್ತುವಿಡೆನೆಂಬಂತೆ ನೆಲನಂ ಪತ್ತಿ ಮೂರ್ಛಾಗತನಾಗಿರ್ದ ಕುರುಕುಳಚೂಡಾಮಣಿಯನೇನುಂ ಮಾಣದೆ ಕಿವಿರವೈರಿ ಮುಟ್ಟೆವಂದಾಗಳೇಕಾದಶಾ ಕ್ಷೋಹಿಣೀಪತಿಯಪ್ಪ ರಾಜಾರಾಜನಂ ಪರಾಭವಂಬಡಿಸದಿರೆಂದು ಬಲದೇವಂ ಬಾರಿಸೆವಾರಿಸೆ-

ಘಟ್ಟಿಸಲು ಹುಟ್ಟಿದ ಉಲ್ಕೆಗಳ ಸಮೂಹವು ವಿಸ್ತರಿಸಿ ಆಕಾಶವನ್ನು ವ್ಯಾಪಿಸಿ ದೇವತೆಗಳ ಕಣ್ಣಲ್ಲಿ ತುಂಬಿ ತೊಳಗಲು ಅವರಿಗೆ ಅವು ಪ್ರಳಯಕಾಲದ ಉಲ್ಕಾಪಾತದ ಸಂದೇಹವನ್ನುಂಟುಮಾಡಿದವು. ಅವರ ಕ್ರಮ ಕ್ರಮವಾದ ತುಳಿತದಿಂದ ಬೆಟ್ಟಗಳು ಸಡಿಲವಾಗಿ ಕಳಚಿ ಬಿದ್ದವು. ಭೂಭಾಗವು ಅಳ್ಳಾಡಿದುವು. ಭೀಮ, ದುರ್ಯೋಧನರ ಗದಾಯುದ್ಧವು ಮಹಾಭಯಂಕರವಾಯಿತು. ವ|| ಇಬ್ಬರೂ ಒಬ್ಬೊಬ್ಬರಲ್ಲಿ ವೀರ್ಯವನ್ನು ಕೌಶಲವನ್ನೂ ಪ್ರದರ್ಶಿಸಿ ಕಾದಲು ದುರ್ಯೋಧನನು ವಿದ್ಯಾಧರಕರಣದಲ್ಲಿ (ಮೇಲಕ್ಕೆ ಹಾರುವ ಒಂದು ವರಸೆ ಅಥವಾ ಪಟ್ಟು) ವಿಶೇಷ ಪರಿಚಿತನಾದುದರಿಂದ ಆಕಾಶಕ್ಕೆ ನೆಗೆದು -೯೫. ಸಿಡಿಲು ಬೀಳುವಂತೆ ಭೋರೆಂದು ತಕ್ಷಣವೇ ಎರಗಿ ಮಹಾಭಯಂಕರವಾದ ದಪ್ಪನಾದ ಪರಿಘದಂತಿರುವ ಗದೆಯಿಂದ ಘರ್ಜನೆಮಾಡಿ ಇದ್ದ ಸ್ಥಳದಿಂದ ಕದಲುವಂತೆ ಹೊಡೆಯಲು ಭೂಮಿ ನಡುಗಿತು, ಭೀಮನು ನೀಲಪರ್ವತದಂತೆ ಕೆಳಗೆ ಬಿದ್ದನು; ವ|| ಹಾಗೆ ದುರ್ಯೋಧನನ ಗದೆಯ ಹೊಡೆತದಿಂದ ಮೂರ್ಛಿತನಾಗಿರಲು ದುರ್ಯೋಧನನು ‘ಬಿದ್ದವನನ್ನು ಹೊಡೆಯುವುದಿಲ್ಲ’ ಎಂದು ವಾಯುಮಾರ್ಗದಲ್ಲಿ ಸ್ವಲ್ಪದೂರದಲ್ಲಿಯೇ ಗದೆಯನ್ನು ಬೀಸಿದನು. ಭೀಮನು ಆ ಗದೆಯ ಗಾಳಿಯಿಂದ ಮೂರ್ಛೆಯಿಂದೆಚ್ಚತ್ತು ಭೂಮಿಯಮೇಲೆ ಬಿದ್ದಿದ್ದ ತನ್ನ ಗದೆಯನ್ನು ಭೂಜಾದಂಡದಲ್ಲಿ ಅಳವಡಿಸಿಕೊಂಡನು. ಭೀಮನನ್ನು ಕೃಷ್ಣನು ಹೊಗಳುವ ನೆಪದಿಂದ ನಮ್ಮಪ್ಪನಿಗೆ ಜಯವಾಗುತ್ತದೆ ಎಂದು ತೊಡೆಯನ್ನು ತಟ್ಟಿ ಆರ್ಭಟಿಸಿದನು, ಭೀಮನು ಅದೇ (ಆ ತೊಡೆಯೇ) ದುಯೋಧನನ ಮರ್ಮಸ್ಥಳವೆಂದು ತಿಳಿದನು. ೯೬. ಈ ಎರಡು ತೊಡೆಗಳು ಈತನಿಗೆ ಮರ್ಮಸ್ಥಾನ. ಮರ್ಮವನ್ನು ತಿಳಿಯದೆ ನಾನು ಇಲ್ಲಿಯವರೆಗೆ ತಪ್ಪಿದೆನು. ಇನ್ನು ಬಿಡು, ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ-ಎಂದು ನಿಧಾನವಾಗಿ ಹಗೆಯನ್ನು ಹೊಂಚುಹಾಕುತ್ತಿದ್ದು (ಗದೆಯನ್ನು ಸ್ವಲ್ಪ ಸರಿಮಾಡಿಕೊಂಡು) ಭೋರೆಂದು ಮೇಲೆ ಬೀಳುವ ಶತ್ರುವಿನ ಎರಡು ತೊಡೆಗಳನ್ನು ಹೊಡೆಯಲು ಗದೆಯ ಪೆಟ್ಟಿನಿಂದ ಆ ಎರಡು ತೊಡೆಗಳೂ ಮುರಿದು ಎಲ್ಲ ಕಡೆಯಲ್ಲಿಯೂ ಪುಡಿಪುಡಿಯಾಗಿರಲು ದುರ್ಯೋಧನನು ನೆಲದ ಮೇಲೆ ಬಿದ್ದನು. ೯೭. ಆಡಿದ ಮಾತನ್ನು ತುತ್ತತುದಿ ಮುಟ್ಟುವವರೆಗೂ ಆಡಿದನು. ಮೊದಲು ಹಿಡಿದ ಹಟವನ್ನು ಕೊನೆಯವರೆಗೂ ಸಾಸಿದನು. ಮಾಡಿದ ಪ್ರತಿಜ್ಞೆಯ ನೇರವಾಗಿ ನಡೆಯುವವರೆಗೂ ನಡೆದು ಹೆದರದೆ ಅಳ್ಳಾಡದೆ ತನ್ನ ಶರೀರವು ಕೆಳಗೆ ಬೀಳುವವರೆಗೂ ತನ್ನ ಪರಾಕ್ರಮವನ್ನು ಕಡಿಮೆಮಾಡಿಕೊಳ್ಳಲಿಲ್ಲವಲ್ಲಾ, ದುರ್ಯೋಧನನು ಎಷ್ಟು ಆತ್ಮಗೌರವನ್ನುಳ್ಳವನು! ವ|| ಹಾಗೆ ಸತ್ತೂ ನೆಲವನ್ನು(ಅಂಟಿಕೊಂಡಿರುವುದನ್ನು) ಬಿಡುವುದಿಲ್ಲ ಎನ್ನುವ ಹಾಗೆ ನೆಲವನ್ನು ತಬ್ಬಿಕೊಂಡು ಮೂರ್ಛಾಗತನಾಗಿದ್ದ ಕುರುಕುಲಚೂಡಾಮಣಿಯಾದ ದುಯೋರ್ಧನನನ್ನು ಭೀಮನು ಸ್ವಲ್ಪವೂ ಬಿಡದೆ ಸಮೀಪಕ್ಕೆ ಬಂದಾಗ ಬಲರಾಮನು, ಹನ್ನೊಂದಕ್ಷೋಹಿಣೀ ಪತಿಯಾದ ಚಕ್ರವರ್ತಿಯನ್ನು ಅವಮಾನಪಡಿಸಬೇಡವೆಂದು

ಮ|| ಸ್ರ|| ಇದಱಳೊ ಮೂರ್ಧಾಭಿಷೇಕಂ ತನಗೆ ಗಡ ಸಮಂತಾಯ್ತು ಪಿಂಛಾತಪತ್ರಂ
ಪುದಿದೆತ್ತಂ ತಣ್ಣೆೞಲ್ಮಾಡುವುದು ಗಡಮಿದೆಂತೆಂದುಮಾರ್ಗಪ್ಟೊಡಂ ಪ|
ರ್ವಿದ ಗರ್ವೋದ್ರೋಕದಿಂ ಬಾಗದು ಗಡಮೆನುತುಂ ಮಾಣಿಕಂ ಸೂಸೆ ಬಲ್ಪಿಂ
ದೊದೆದಂ ಸಾರ್ತಂದು ದುರ್ಯೋಧನನ ಮಕುಟಮಂ ಕೋಪದಿಂ ಭೀಮಸೇನಂ|| ೯೮