ವ|| ಒದೆವುದುಂ ದುರ್ಯೋಧನಂಗಾದವಸ್ಥೆಯಂ ನೋಡಲಾಱದೆಯುಂ ತನ್ನ ತಮ್ಮನ ಮನಮಂ ನೋಡಿಸಲಾಱದೆಯುಂ ಬಲದೇವಂ ಭಗ್ನಮನೋರಥನಾಗಿ ದ್ವಾರಾವತಿಗೆ ಪೋದನನ್ನೆಗಂ ವೇಣೀಸಂಹಾರೋರುಭಂಗ ಮಕುಟಭಂಗಂಗಳೆಂಬ ತನ್ನ ಮಹಾ ಪ್ರತಿಜ್ಞೆಯಂ ನೆಱಪಿದ ಭೀಮಸೇನನಳವನಳವಲ್ಲದೆ ಪೊಗೞ್ದು ಚಕ್ರಿ ಕಾಲ ಕುಶಲನಪ್ಪುದಱನಶ್ವತ್ಥಾಮನಿನಪ್ಪನಾಗತ ಬಾಧಾವಿಘಾತಮಂ ಮಾಡಲೆಂದಯ್ವರುಮಂ ನೀಲಗಿರಿಗೊಡಗೊಂಡು ಪೋಗುತ್ತುಮಲ್ಲಿರ್ದ ಬೀಡುಮನಾ ಬೀಡಿಂಗೆ ಕಾಪಾಗಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯುತ್ತಮೌಜಸರುಮಂ ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರುಮಂ ಪೇೞ್ದು ಹಸ್ತಿನಪುರಕ್ಕೆ ಕಳಿಪಿದನ್ನೆಗಮಿತ್ತ ಕೃಪ ಕೃತವರ್ಮ ಸಮೇತನಶ್ವತ್ಥಾಮಂ ದುಯೋರ್ಧನನಿರ್ದೆಡೆಯಱಯದೆ ಗಾಂಗೇಯರಿಂದಮಿರ್ದೆಡೆಯನಱದು ಕೊಳಕ್ಕೆವಂದಲ್ಲಿಯುಂ ಕಾಣದೆ ಕೊಳುಗುಳದೊಳಱಸುತ್ತುಂ ಬರ್ಪಂ ತೊಟ್ಟನೆ ಕಟ್ಟಿದಿರೊಳ್-

ಚಂ|| ಪಿಡಿದೆಡಗೆಯ್ಯ ಚಾಮರದ ದಕ್ಷಿಣಹಸ್ತದ ಪದ್ಮದೊಳ್ಪೊಡಂ
ಬಡೆ ನಸು ಮಾಸಿ ಪಾಡಱದ ರೂಪಿನೊಳುಣ್ಮವ ಗಾಡಿ ನಾಡೆ ಕ|
ಣ್ಗೆಡ ತೊಡಂಕಿ ಪೀದ ಕುರುಳ್ಗಳೆ ಚಿತ್ತದೊಳಾದ ಬೇಸಱಂ
ನುಡಿವವೊಲಾಗೆ ಬರ್ಪ ಕಮಳಾಯತನೇತ್ರೆಯನಿಂದು ವಕ್ತ್ರೆಯಂ|| ೯೯

ವ|| ಕಂಡು ನೀನಾರ್ಗೇನೆಂಬೆಯೆಲ್ಲಿಗೆ ಪೋದಪೆಯೆನೆ-

ಮ|| ಪೆಸರೊಳ್ ಲಕ್ಷ್ಮಿಯೆನಿನ್ನೆಗಂ ನೆಲಸಿ ತಾಂ ದುರ್ಯೋಧನೋರಸ್ಥಳಾ
ವಸಥಂ ದ್ರೋಣ ನದೀಜ ಕರ್ಣ ಭುಜವೀರ್ಯಾವೇಷ್ಟಿತಂ ಮಾಡೆ ಸಂ|
ತಸದಿರ್ದೆಂ ಬಿಸುಟಾ ಧರಾಪತಿಯಂ ನಾರಾಯಣಾದೇಶಮೊ
ಡ್ಡಿಸೆ ಪಾಂಡುಪ್ರಿಯಪುತ್ರರೊಳ್ ನೆರೆಯಲೆಂದಿಂತೀಗಳಾಂ ಪೋದಪೆಂ|| ೧೦೦

ವ|| ಎಂಬುದುಮಶ್ವತ್ಥಾಮನಿಂತೆಂದಂ-

ತಡೆದನು. ೯೮. ‘ಇದರಿಂದಲ್ಲವೇ ಇವನಿಗೆ ಪಟ್ಟಾಭಿಷೇಕವು ಪೂರ್ಣವಾಗುವುದು. ನವಿಲುಗರಿಯ ಕೊಡೆಯು ಎಲ್ಲ ಕಡೆಯೂ ಪ್ರಸರಿಸಿ ಇದಕ್ಕಲ್ಲವೇ ತಂಪಾದ ನೆರಳನ್ನುಂಟು ಮಾಡುವುದು. ಇದು ಎಂದೂ ಯಾರಿಗೂ ಹೆಚ್ಚಾದ ಗರ್ವದಿಂದ ಬಾಗುವುದಿಲ್ಲವಲ್ಲವೇ’ ಎನ್ನುತ್ತ ಮಾಣಿಕ್ಯರತ್ನಗಳು ಚೆಲ್ಲುತ್ತಿರಲು ಭೀಮಸೇನನು ಹತ್ತಿರಬಂದು ಕೋಪದಿಂದ ದುಯೋಧನನ ಕಿರೀಟವನ್ನು ಬಲವಾಗಿ ಒದೆದನು. ವ|| ಬಲರಾಮನು ದುರ್ಯೋಧನನಿಗಾದ ಅವಸ್ಥೆಯನ್ನು ನೋಡಲಾರದೆಯೂ ತನ್ನ ತಮ್ಮನಾದ ಕೃಷ್ಣನ ಮನಸ್ಸನ್ನು ನೋಯಿಸಲಾರದೆಯೂ ಭಗ್ನಮನೋರಥನಾಗಿ ದ್ವಾರಾವತಿಗೆ ಹೋದನು. ಅಷ್ಟರಲ್ಲಿ ವೇಣೀಸಂಹಾರ (ಮುಡಿಯನ್ನು ಕಟ್ಟುವುದು) ಊರುಭಂಗ (ತೊಡೆಯನ್ನು ಮುರಿಯುವುದು) ಮಕುಟಭಂಗ (ಕಿರೀಟವನ್ನು ಒಡೆಯುವುದು) ಎಂಬ ತನ್ನ ಮಹಾಪ್ರತಿಜ್ಞೆಗಳನ್ನು ಪೂರ್ಣಮಾಡಿದ ಭೀಮಸೇನನ ಶಕ್ತಿಯನ್ನು ಅಳತೆಮೀರಿ ಕೃಷ್ಣನು ಹೊಗಳಿದನು. ಕಾಲಕುಶಲನಾದುದರಿಂದ ಅಶ್ವತ್ಥಾಮನಿಂದ ಮುಂದೆ ಬರುವ ವಿಪತ್ತಿಗೆ ಪರಿಹಾರಮಾಡುವುದಕ್ಕೆಂದು ಅಯ್ದು ಜನ ಪಾಂಡವರನ್ನು ನೀಲಗಿರಿಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋದನು. ಆ ಬೀಡಿಗೆ ರಕ್ಷಕರಾಗಿ ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜಸರನ್ನೂ ಶ್ರುತಸೋಮಕರೇ ಮುಖ್ಯರಾದ ಪಂಚಪಾಂಡವರನ್ನೂ ಗೊತ್ತು ಮಾಡಿ (ಇರಹೇಳಿ) ಪಾಂಡವರನ್ನು ಹಸ್ತಿನಾಪಟ್ಟಣಕ್ಕೆ ಕಳುಹಿಸಿದನು. ಅಷ್ಟರಲ್ಲಿ ಈ ಕಡೆ ಕೃಪಕೃತವರ್ಮರೊಡಗೂಡಿದ ಅಶ್ವತ್ಥಾಮನು ದುರ್ಯೋಧನನಿದ್ದ ಸ್ಥಳವನ್ನು ತಿಳಿಯದೆ ಭೀಷ್ಮರಿಂದ ದುರ್ಯೋಧನನಿದ್ದ ಸ್ಥಳವನ್ನು ತಿಳಿದು ಕೊಳಕ್ಕೆ ಬಂದು ಅಲ್ಲಿಯೂ ಕಾಣದೆ ಯುದ್ಧಭೂಮಿಯಲ್ಲಿ ಹುಡುಕುತ್ತ ಬರುತ್ತಿದ್ದವನು ಥಟಕ್ಕನೆ ಎದುರುಗಡೆಯಲ್ಲಿ ೯೯. ಎಡಗೈಯಲ್ಲಿ ಚಾಮರವೂ ಬಲಗೈಯಲ್ಲಿ ಕಮಲದ ಹೂವೂ ಮನೋಹರವಾಗಿರಲು ಸ್ವಲ್ಪ ತೇಜೋಹೀನವಾಗಿ ಸ್ವಭಾವಸ್ಥಿತಿ ಕೆಟ್ಟು ಆಕಾರವನ್ನು ಹೊರಹೊಮ್ಮುತ್ತಿರುವ ಸೌಂದರ್ಯವು ವಿಷೇಷವಾಗಿ ಕಣ್ಣನ್ನು ಆಕರ್ಷಿಸಲು ಸಿಕ್ಕಾಗಿ ಕೆದರಿರುವ ಕುರುಳುಗಳು ಮನಸ್ಸಿನ ಬೇಸರನ್ನು ನುಡಿಯುವ ಹಾಗಿರಲು (ಎದುರಿಗೆ) ಬರುತ್ತಿದ್ದ ಕಮಳದಂತೆ ವಿಸ್ತಾರವಾದ ಕಣ್ಣುಳ್ಳ ಚಂದ್ರಮುಖಿಯನ್ನು ನೋಡಿದನು. ವ|| ನೀನಾರು? ನಿನ್ನ ಹೆಸರೇನು? ಎಲ್ಲಿಗೆ ಹೋಗುತ್ತಿದ್ದೀಯೆ ಎನ್ನಲು ೧೦೦. ನನ್ನ ಹೆಸರು ಲಕ್ಷ್ಮಿಯೆಂದು. ದ್ರೋಣ ಭೀಷ್ಮ ಕರ್ಣರ ಬಾಹುಬಲದಿಂದ ರಕ್ಷಿತನಾದ ದುರ್ಯೋಧನನ ಎದೆಯು ಮನೆಯಾಗಿರಲು ಇಲ್ಲಿಯವರೆಗೆ ಅಲ್ಲಿ ಸಂತೋಷದಿಂದಿದ್ದೆನು. ಕೃಷ್ಣನು ಅಪ್ಪಣೆಯ ಪ್ರಕಾರ ಆ ರಾಜನನ್ನು ಬಿಸುಟು ಪಾಂಡುಪ್ರಿಯಪುತ್ರರಲಿ

ಮ|| ಕುರುವಂಶಾಂಬರಭಾನುವಂ ಬಿಸುಡಿಸಲ್ಕಾನುಳ್ಳಿನಂ ತೀರದಾ
ನಿರೆ ನಾರಾಯಣನೆಂಬನುಂ ಪ್ರಭುವೆ ಪೇೞ್ ನೀನೀ ಮರುಳ್ಮಾತನಂ|
ಬುರುಹಾಕ್ಷ್ಮೀ ಬಿಸುಡಂಜದಿರ್ ನಡೆ ಕುರುಕ್ಷ್ಮಾಪಾಳನಿರ್ದಲ್ಲಿಗೆಂ
ದರವಿಂದಾಲಯೆಯಂ ಮಗುೞದನದೇನಾ ದ್ರೌಣಿ ಶೌರ್ಯರ್ಥಿಯೋ|| ೧೦೨

ಮ|| ಅಂತು ವಿಕಸಿತಕಮಳದಳನಯನೆಯಂ ಕಮಳೆಯನಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬಘಟಚೇಟಿಕೆಯಂ ತರ್ಪಂತೆ ತಂದು ವೃಕೋದರ ಗದಾಸಂಚೂರ್ಣಿತೋರು ಯುಗಳನುಂ ಭೀಮಸೇನಚರಣಪ್ರಹರಣಗಳಿತಶೋಣಿತಾರ್ದ್ರಮೌಳಿಯುಮಾಗಿ ಕೋಟಲೆಗೊಳ್ವ ಕೌರವೇಶ್ವರನನೆಯ್ದೆ ಪೋಗಿ ಹಸ್ತಪ್ರಹಸ್ತಮಂಡಲಾಗ್ರನುಂ ಶೋಕವ್ಯಗ್ರನುಮಾಗಿ-

ಚಂ|| ನೆಗೞ್ದ ನೆಗೞ್ತೆಗಾವೆಡೆಯೊಳಂ ಪೞೆಯಿಲ್ಲದೆ ಪೂಣ್ದು ಸಂದ ವೈ
ರಿಗಳನೆ ಕೊಂದು ವಾರಿಪರೀತಮಹೀತಳಮಂ ನಿಮಿರ್ಚಿ ಜೆ|
ಟ್ಟಿಗರನಯೋನಿಸಂಭವರನಾಳ್ದರಿವರ್ಗದೊಳಾಂತು ಕಾದೆಯುಂ
ಬಗೆ ದೊರೆಕೊಂಡುದಿಲ್ಲಿದು ವಿಧಾತ್ರನ ದೋಷಮೊ ನಿನ್ನ ದೋಷಮೋ|| ೧೦೩

ಕಂ|| ಆದೊಡಮೆನ್ನಂ ಬಂಚಿಸಿ
ಪೋದುದಳ್ ನಿನಗೆ ಪಗವರಿಂದಿನಿತೆಡಱi|
ಯ್ತಾದಿತ್ಯತೇಜ ಬೆಸಸಿದಿ
ರಾದ ಪೃಥಾಸುತರನುೞಯಲೀಯದೆ ಕೊಲ್ವೆಂ|| ೧೦೪

ವ|| ಎಂಬುದುಂ ಫಣಿಕೇತನಂ ನೆತ್ತಿಯಿಂದೊದುಗುವ ನೆತ್ತರ ಧಾರೆಯಿಂ ಮೆತ್ತಿದ ಕಣ್ಗಳನೊತ್ತಂಬದಿಂ ತೆದಶ್ವತ್ಥಾಮನ ಮೊಗಮಂ ನೋಡಿ-

ಚಂ|| ಎನಗಿನಿತೊಂದವಸ್ಥೆ ವಿಯೋಗದಿನಾದುದಿದರ್ಕೆ ನೀನೞ
ಲ್ದಿನಿತು ಮನಕ್ಷತಂಬಡದಿರಾಗದು ಪಾಂಡವರಂ ಗೆಲಲ್ ಪುರಾ|
ತನಪುರುಷಂ ಮುರಾರಿ ಕೆಲದೊಳ್ ನಿಲೆ ನೀಂ ಕೊಲಲಾರ್ಪೊಡಾಗದೆಂ
ಬೆನೆ ತಱದೊಟ್ಟ ವೈರಿಗಳನೆನ್ನಸುವುಳ್ಳಿನಮೆಯ್ದೆವಾ ಗಡಾ|| ೧೦೫

ವ|| ಎಂಬುದುಂ ಪಾಂಡವರನಿಕ್ಕಿದೊಸಗೆವಾತನೀಗಳೆ ಕೇಳಿಸುವೆನೆಂದು ಸರೋಜ ನಿಳಯೆಯನೆನ್ನ ಬರ್ಪನ್ನಮರಸನನಗಲದೆ ವಿಕಸಿತಶತಪತ್ರಾತಪತ್ರದ ತಣ್ಣೆೞಲುಮಂ ಕುಂದಲೀಯದಿರೆಂದು ನಿಯಮಿಸಿ ರುದ್ರಾವತಾರಂ ಕೃಪ ಕೃತವರ್ಮ ಸಮೇತನರಸನಂ ಬೀೞ್ಕೊಂಡು ಪೋದನಾಗಳ್-

ಸೇರಬೇಕೆಂದು ಈಗ ನಾನು ಹೋಗುತ್ತಿದ್ದೇನೆ. ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೧೦೧. ಹೊಸದಾಗಿ ಅರಳಿರುವ ಕಮಲದಳಗಳ ಮೇಲೆ ಓಡಾಡುವವಳು ಸಮುದ್ರವನ್ನು ಕಡೆಯಲು ಹುಟ್ಟಿದವಳೆ, ವಿಷ್ಣುವಿನ ಹೆಂಡತಿಯೇ, ಮಿಂಚಿನಂತಿರುವ ಹರಿತವಾದ ಕತ್ತಿಗಳ ಮೇಲೆ ಸಂಚರಿಸುತ್ತೀಯೆ; ಶತ್ರುರಾಜಸೇನಾಸಮುದ್ರವನ್ನು ತಡೆಯಲು ಹುಟ್ಟಿದ ಈ ನಿನಗೆ ನನ್ನನ್ನು ಪ್ರತಿಭಟಿಸಲು ಸಾಧ್ಯವೇ, ೧೦೨. ಕುರುವಂಶವೆಂಬ ಆಕಾಶಕ್ಕೆ ಸೂರ್ಯನಾದ ದುಯೋರ್ಧನನನ್ನು ನಾನಿರುವಾಗ ನೀನು ಬಿಸಾಡಲು ಸಾಧ್ಯವಿಲ್ಲ; ನಾನಿರುವಾಗ ನಾರಾಯಣನೆಂಬುವನು ನಿನಗೆ ಯಜಮಾನನೇ ಹೇಳು, ಹೇ ಕಮಲಮುಖಿ ಈ ಹುಚ್ಚುಮಾತನ್ನು ಬಿಸಾಡು; ಹೆದರಬೇಡ; ನಡೆ, ಕೌರವಚಕ್ರವರ್ತಿಯಿರುವ ಸ್ಥಳಕ್ಕೆ ಎಂದು ಲಕ್ಷ್ಮಿಯನ್ನು ಹಿಂತಿರುಗಿಸಿದನು. ಅಶ್ವತ್ಥಾಮನ ಅಹಂಕಾರವೆಷ್ಟು? ವ|| ಅರಳಿದ ಕಮಲದಳದಂತೆ ಕಣ್ಣುಳ್ಳ ಲಕ್ಷ್ಮಿಯನ್ನು ಅಶ್ವತ್ಥಾಮನು ಮುಂದಿಟ್ಟುಕೊಂಡು ಕೌರವಕುಟುಂಬ ಘಟಚೇಟಿಕೆಯನ್ನು ಕರೆದುತರುವಂತೆ ತಂದನು. ಭೀಮನ ಗದೆಯಿಂದ ಪುಡಿಮಾಡಲ್ಪಟ್ಟ ಎರಡು ತೊಡೆಯುಳ್ಳವನೂ ಭೀಮಸೇನನ ಪಾದಗಳ ಒದೆತದಿಂದ ಸುರಿದ ರಕ್ತದಿಂದ ಒದ್ದೆಯಾಗಿರುವ ತಲೆಯುಳ್ಳವನೂ ಆಗಿ ವ್ಯಥೆಪಡುತ್ತಿರುವ ದುರ್ಯೋಧನನ ಹತ್ತಿರಕ್ಕೆ ಬಂದು ನೋಡಿದನು. ಕೈಯಿಂದ ಕತ್ತಿಯು ಕಳಚಿಕೊಂಡಿತು, ದುಖದಿಂದ ವಿಶೇಷಖಿನ್ನನಾದನು. ೧೦೩. ದುರ್ಯೋಧನ ಮಾಡಿದ ಕಾರ್ಯದಲ್ಲಿ ಎಲ್ಲಿಯೂ ನಿಂದೆಯಿಲ್ಲದೆ ನಿರ್ವಹಿಸಿ, ಪ್ರಸಿದ್ಧರಾದ ಶತ್ರುಗಳನ್ನು ಕೊಂದು, ಸಮುದ್ರದಿಂದ ಸುತ್ತುವರಿಯಲ್ಪಟ್ಟು ಭೂಮಿಯನ್ನು ವಿಸ್ತರಿಸಿ, ಶೂರರಾದ ಅಯೋನಿಜರಾದವರಿಗೆ ಸ್ವಾಮಿ (ಒಡೆಯ)ಯಾಗಿದ್ದು, ಶತ್ರುವರ್ಗವನ್ನು ಎದುರಿಸಿ ಯುದ್ಧಮಾಡಿದರೂ ನಿನಗೆ ಇಷ್ಟಾರ್ಥವು ಲಭಿಸಲಿಲ್ಲವಲ್ಲಾ. ಇದು ವಿಯ ದೋಷವೋ ನಿನ್ನ ದೋಷವೋ? ೧೦೪. ನನ್ನನ್ನು ವಂಚಿಸಿ ಹೋದುದರಿಂದ ನಿನಗೆ ಶತ್ರುಗಳಿಂದ ಇಷ್ಟು ಅವಮಾನವಾಯಿತು. ಸೂರ್ಯತೇಜಸ್ಸುಳ್ಳವನೇ ಆಜ್ಞೆಮಾಡು, ಪ್ರತಿಭಟಿಸಿದ ಪಾಂಡವರನ್ನು ಉಳಿಯುವುದಕ್ಕೆ ಅವಕಾಶವಿಲ್ಲದಂತೆ ಕೊಲುತ್ತೇನೆ ಎಂದನು. ವ|| ಸರ್ಪಧ್ವಜನಾದ ದುರ್ಯೋಧನನು ತಲೆಯಿಂದ ಜಿನುಗಿ ಹರಿಯುತ್ತಿರುವ ರಕ್ತಪ್ರವಾಹದಿಂದ ಅಂಟಿಕೊಂಡಿದ್ದ ಕಣ್ಣುಗಳನ್ನು ಬಲಾತ್ಕಾರದಿಂದ ತೆರೆದು ಅಶ್ವತ್ಥಾಮನ ಮುಖವನ್ನು ನೋಡಿ ಹೇಳಿದನು. ೧೦೫. ನನಗೆ ಇಷ್ಟೊಂದು ಕಷ್ಟದ ಸ್ಥಿತಿ ವಿಯ ಕಟ್ಟಳೆಯಿಂದ ಆಯಿತು. ಇದಕ್ಕೆ ನೀನು ದುಖಪಟ್ಟು ಮನಸ್ಸಿನಲ್ಲಿ ನೋಯಬೇಡ. ಆದಿಪುರುಷನಾದ ಕೃಷ್ಣನು ಅವರ ಪಕ್ಕದಲ್ಲಿರುವಾಗ ನೀನು ಪಾಂಡವರನ್ನು ಗೆಲ್ಲಲಾಗುವುದಿಲ್ಲ.

ಚಂ|| ಮಗನೞಲೊಳ್ ಕರಂ ಮಱುಗುತಿರ್ಪಿನಮೆನ್ನ ತನೂಜನಾಳ್ವ ಸಾ
ಮಿಗಮೞವಾಗೆ ಶೋಕರಸಮಿರ್ಮಡಿಸಿತ್ತು ಜಳಪ್ರವೇಶಮಿ|
ಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನನಾಥನಾಗಿ ತೊ
ಟ್ಟಗೆ ಮುೞುಪಂತೆವೋಲ್ ಮುೞುಗಿದಂ ಕಡುಕೆಯ್ದಪರಾಂಬುರಾಶಿಯೊಳ್ || ೧೦೬

ವ|| ಆ ಪ್ರಸ್ತಾವದೊಳಶ್ವತ್ಥಾಮಂ ಕೃಪ ಕೃತವರ್ಮರುಂಬೆರಸು ಹಸ್ತಿನಪುರದೊಳ್ ಪಾಂಡವರಿರ್ದರೆಗೆತ್ತುಮಲ್ಲಿಗೆ ನಿಟ್ಟಾಲಿಯಾಗಿ ದಾೞಯನಿಟ್ಟು ಮುಟ್ಟೆವಂದು ಬಾಯ್ಮಾಡಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜಸರಂ ಕೊಂದು ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರಂ ಪಾಂಡವರೆಗೆತ್ತು ಕೊಂದು ತದುತ್ತಮಾಂಗಂಗಳಂ ಕೊಂಡು ತೞತೞನೆ ನೇಸಱ್ಮೂಡುವಾಗಳೆಯ್ದೆ ವಂದು ದುರ್ಯೋಧನನಂ ಕಂಡು ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳನೆಂದು ಮುಂದಿಕ್ಕಿದಾಗಳ್ ದುರ್ಯೋಧನಂ ನೋಡಿ-

ಕಂ|| ಬಾಲಕಮಳಂಗಳಂ ಕಮ
ಳಾಲಯದಿಂ ತಿಱದು ತರ್ಪ್ಪವೋಲ್ ತಂದೈ ನೀಂ|
ಬಾಲಕರ ತಲೆಗಳಕ್ಕಟ
ಬಾಲಕವಧದೋಷಮೆಂತು ನೀಂ ನೀಗಿದಪಯ್|| ೧೦೭

ವ|| ಎಂಬುದುಮಶ್ವತ್ಧಾಮನಂತೆಂಬುದೇನೆನೆ ದುರ್ಯೋಧನನೆಂದಂ ಪಾಂಡವರ ತಲೆಗಳಲ್ಲಮಿವು ಪಾಂಡವರ ಸೂನುಗಳಪ್ಪ ಪಂಚಪಾಂಡವರ ತಲೆಗಳೆಂಬುದುಮಿದರ್ಕೆ ಕರ್ತವ್ಯಮಾವುದೆಂದೊಡೆ ಹಿಮವತ್ಪರ್ವತದೊಳ್ ತಪಶ್ಚರಣಪರಾಯಣರಾಗಿ ಮೆನಗಮಂತ್ಯಕಾಲಮೆಂದು ದುರ್ಯೋಧನಂ ಪ್ರಾಣಪರಿತ್ಯಾಗಂಗೆಯ್ದನಾಗಳಶ್ವತ್ಥಾಮನುಂ ಕೃಪನುಂ ಸಿಗ್ಗಾಗಿ ಹಿಮವತ್ಪರ್ವತಕ್ಕೆ ನಡೆಗೊಂಡರಿತ್ತ ಕೃತವರ್ಮನುಂ ದ್ವಾರಾವತಿಗೆ ಪೋದನಾಗಳ್-

ಪಿರಿಯಕ್ಕರ|| ಬಿಳಿಯ ತಾವರೆಯೆಸೞೊಳ್ ಮಾಡಿದ ಬೆಳ್ಗೊಡೆ ರಯ್ಯಮಾಗೆಡದ ಕೆಯ್ಯೊಳ್
ಪೊಳೆವ ಚೆಂಬೊನ್ನ ಕಾವಿನ ಚಾಮರಮಮರ್ದಿರೆ ಭೇರಿ ಸಿಂಹಾಸನಮುಂ
ಬೞಯೊಳ್ ಜವಂ ಮಿಳಿರೆ ರಾಜ್ಯಚಿಹ್ನಂಗಳ್ವೆರಸಿಂತು ನಡೆತಂದು ರಾಜ್ಯಲಕ್ಷ್ಮಿ
ಬಳೆದ ಸಂತೋಷದಂತಮನೆಯ್ದೆ ಪತ್ತಿದಳ್ ಸಹಜಮನೋಜನಂ ನಾಡೋಜನಂ|| ೧೦೮

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನಗಂಭೀರವಚನರಚನ

ಚತುರ ಕವಿತಾಗುಣಾರ್ಣವವಿರಚಿತಮಪ ವಿಕ್ರಮಾರ್ಜುನವಿಜಯದೊಳ್ ತ್ರಯೋದಶಾಶ್ವಾಸಂ

ಹಾಗೆ ನೀನು ಅವರನ್ನು ಕೊಲ್ಲಲು ಸಮರ್ಥನಾದರೆ ನಾನು ಬೇಡವೆನ್ನುತ್ತೇನೆಯೇ? ನನ್ನ ಪ್ರಾಣಗಳಿರುವಾಗಲೇ ಶತ್ರುಗಳನ್ನು ತರಿದು ರಾಶಿಹಾಕಿ ಬರುತ್ತಿಯಾ? ಏನು. ವ|| ಎನ್ನಲು ‘ಪಾಂಡವರನ್ನು ಇಕ್ಕಿ ಕೊಂದ ಶುಭವಾರ್ತೆಯನ್ನು ಈಗಲೇ ಕೇಳಿಸುತ್ತೇನೆ’ ಎಂದು ಕಮಲಾಸನೆಯಾದ ಲಕ್ಷ್ಮಿಯನ್ನು ನಾನು ಬರುವವರೆಗೂ ರಾಜನನ್ನು ಅಗಲದೆ ಅರಳಿದ ಕಮಲದ ಕೊಡೆಯ ತಂಪಾದ ನೆರಳನ್ನು ಕಡಿಮೆಮಾಡಬೇಡವೆಂದು ಕಟ್ಟಳೆಯಿಟ್ಟು ರುದ್ರಾವತಾರನಾದ ಅಶ್ವತ್ಥಾಮನು ಕೃಪಕೃತವರ್ಮರೊಡನೆ ರಾಜನನ್ನು ಬೀಳ್ಕೊಂಡು ಹೋದನು- ಆಗ ೧೦೬. ನಾನು ನನ್ನ ಮಗನ ಮರಣದುಖದಿಂದಲೇ ವಿಶೇಷ ದುಖಪಡುತ್ತಿರಲು ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸವಿಮ್ಮಡಿಯಾಗಿದೆ. ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು ಎಂದು ನಿಶ್ಚಯಿಸಿ ಸೂರ್ಯನು ಅನಾಥನಾಗಿ (ದಿಕ್ಕಿಲ್ಲದವನಾಗಿ) ತೊಟ್ಟನೆ ಮುಳುಗುವ ಹಾಗೆ ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು. (ಸೂರ್ಯಾಸ್ತಮಾನವಾಯಿತು) ವ|| ಆ ಸಮಯದಲ್ಲಿ ಅಶ್ವತ್ಥಾಮನು ಕೃಪಕೃತವರ್ಮರೊಡಗೂಡಿ ಹಸ್ತಿನಾಪಟ್ಟಣದಲ್ಲಿ ಪಾಂಡವರಿರುವರೆಂದು ಭ್ರಾಂತಿಸಿ ಅಲ್ಲಿಗೆ ಎಚ್ಚರದಿಂದ ದಾಳಿಯಿಟ್ಟು (ಮುತ್ತಿಗೆ ಹಾಕಿ) ಸಮೀಪಕ್ಕೆ ಬಂದು ಕೂಗಿ ದೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜಸರನ್ನು ಕೊಂದು ಶ್ರುತಸೋಮಕರೇ ಮೊದಲಾದ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿಕೊಂಡು ಅವರ ತಲೆಗಳನ್ನು ತೆಗೆದುಕೊಂಡು ಪ್ರಕಾಶಮಾನವಾಗಿ ಸೂರ್ಯನು ಹುಟ್ಟುವ ಹೊತ್ತಿಗೆ ಸರಿಯಾಗಿ ಸಮೀಪಕ್ಕೆ ಬಂದು, ದುರ್ಯೋಧನನನ್ನು ಕುರಿತು ತೆಗೆದುಕೊ ನಿನಗೆ ಪ್ರಿಯರಾದ ಪಾಂಡವರ ತಲೆಗಳನ್ನು ಎಂದು ಮುಂದಿಟ್ಟನು. ಅದನ್ನು ದುರ್ಯೋಧನನು ನೋಡಿ ೧೦೭. ಸರೋವರದಿಂದ ಎಳೆಯ ಕಮಲಗಳನ್ನು ಕಿತ್ತು ತರುವ ಹಾಗೆ ಅಯ್ಯೋ! ನೀನು ಬಾಲಕರ ತಲೆಗಳನ್ನು ತಂದಿರುವೆ, ಬಾಲವಧಾದೋಷವನ್ನು ನೀನು ಹೇಗೆ ಕಳೆಯುತ್ತೀಯೇ? ಎಂದನು.

ವ|| ಅಶ್ವತ್ಥಾಮನು ಹಾಗೆಂದರೇನು? ಎನ್ನಲು ದುಯೋರ್ಧನನು ಹೀಗೆ ಹೇಳಿದನು. ‘ಇವು ಪಾಂಡವರ ತಲೆಗಳಲ್ಲ. ಪಾಂಡವರ ಮಕ್ಕಳಾದ ಪಂಚಪಾಂಡವರ ತಲೆಗಳು ಎನ್ನಲು ಇದರ ಪರಿಹಾರಕ್ಕೆ ಮಾಡಬೇಕಾದ ಕರ್ತವ್ಯವೇನು ಎಂದನು ಅಶ್ವತ್ಥಾಮ; ಹಿಮವತ್ಪರ್ವತದಲ್ಲಿ ತಪಸ್ಸುಮಾಡುವುದರಲ್ಲಿ ಆಸಕ್ತರಾಗಿ’, ನನಗೂ ಅಂತ್ಯಕಾಲವು ಬಂದಿದೆ’ ಎಂದು ದುರ್ಯೋಧನನು ಪ್ರಾಣವನ್ನು ನೀಗಿದನು. ಆಗ ಅಶ್ವತ್ಥಾಮನೂ ಕೃಪನೂ ಅವಮಾನಿತರಾಗಿ ಹಿಮವತ್ಪರ್ವತಕ್ಕೆ ನಡೆದರು. ಈ ಕಡೆ ಕೃತವರ್ಮನೂ ದ್ವಾರಾವತಿಗೆ ಹೋದನು. ೧೦೮. ಬಿಳಿಯ ತಾವರೆಯ ದಳದಲ್ಲಿ ಮಾಡಿದ ಬಿಳಿಯ ಕೊಡೆಯು ಬಲದ ಕಯ್ಯಲ್ಲಿ ರಮ್ಯವಾಗಿರಲು ಹೊಳೆದ ಹೊಂಬಣ್ಣದ ಚಿನ್ನದ ಕಾವುಳ್ಳ ಚಾಮರವು ಎಡಗಯ್ಯಲ್ಲಿ ಸೇರಿಕೊಂಡಿರಲು, ಭೇರಿ ಸಿಂಹಾಸನಾದಿಗಳು ಪಕ್ಕದಲ್ಲಿ ವೇಗವಾಗಿ ಚಲಿಸುತ್ತಿರಲು ರಾಜ್ಯಚಿಹ್ನೆಗಳೊಡಗೂಡಿ ಅಬಿವೃದ್ಧಿಯಾಗುತ್ತಿದ್ದ ಸಂತೋಷವು ಸಂಪೂರ್ಣವಾಗಲು ರಾಜ್ಯಲಕ್ಷ್ಮಿಯು ಸಹಜಮನೋಜನೂ ನಾಡೋಜನೂ ಆದ ಅರ್ಜುನನನ್ನು ಸೇರಿದಳು. ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹದಿಮೂರನೆಯ ಆಶ್ವಾಸ.